ಕನ್ನಡದಲ್ಲಿ ‘ಛಂದೋಂಬುಧಿ’, ‘ಕವಿಜಿಹ್ವಾಬಂಧನ’, ‘ಛಂದಸ್ಸಾರ’, ‘ನಂದಿಛಂದೋರ್ಣವ’ ಇವು ಪ್ರಾಚೀನ ಪದ್ಯಜಾತಿಗಳ ಲಕ್ಷಣನಿರೂಪಣೆಗಿರುವ ಗಣ್ಯಛಂದೋಗ್ರಂಥಗಳು. ಇವು ಪರಿಷ್ಕೃತಗೊಂಡು ಒಂದಕ್ಕಿಂತ ಹೆಚ್ಚು ಸಲ ಪ್ರಕವಾಗಿದ್ದರೂ, ಸವಿಮರ್ಶವಾಗಿ ಸಂಪಾದಿತವಾಗಿ, ಒಳ್ಳೆಯ ಪೀಠಿಕೆ ವ್ಯಾಖ್ಯಾನ ಅನುಬಂಧಗಳೊಂದಿಗೆ ಪ್ರಕಟವಾಗುವುದು ಇನ್ನೂ ಸಾಧ್ಯವಾಗಿಲ್ಲ.

‘ಛಂದೋಂಬುಧಿ’ಗೆ ಬಹುಸಂಖ್ಯೆಯ ಹಸ್ತಪ್ರತಿಗಳು ಲಭ್ಯವಿವೆ. ಇವುಗಳನ್ನು ಬಳಸಿದಾಗ ಮಾತ್ರವೇ ಪರಿಷ್ಕರಣತೃಪ್ತಿಕರವಾಗುವುದು ಸಾಧ್ಯ. ಈಗ ಹಾಗೆ ಆಗಿಲ್ಲ. ಪರಿಷ್ಕರಣದಿಂದ ಪರಿಷ್ಕರಣಕ್ಕೆ ಅಧಿಕವೂ ಗಮನಾರ್ಹವೂ ಆಗಿರುವ ಪಾಠಸಮಸ್ಯೆಗಳೂ ಇತರ ವಿಧದ ಕ್ಲೇಶಗಳೂ ಸಂಶಯಗಳೂ ಹೆಚ್ಚುತ್ತಹೋಗಿವೆ. ಇದು ಸೇರ್ಪಡಬೇಕಾಗಿದೆ.

‘ಕವಿಜಿಹ್ವಾಬಂಧನ’ಕ್ಕೆ ಇರುವ ವಿಸ್ತೃತ ಸಂಕ್ಷಿಪ್ತ ಎಂಬ ಎರಡು ಬಗೆಯ ಪಾಠ ಭೇದಗಳಿಂದ ಮೂಲಪಾಠದ ಗೊತ್ತು ಹತ್ತದಂತಾಗಿದೆ; ಹಾಗೆಯೇ ‘ನಂದಿಛಂದೋರ್ಣವ’ದಲ್ಲಿ ಸಹ. ಇಲ್ಲಿ ಕವಿಪಾಠವನ್ನು ಇನ್ನೂ ಗುರುತಿಸಬೇಕಾಗಿದೆ. ‘ಛಂದಸ್ಸಾರ’ದಲ್ಲಿ, ಲಕ್ಷಣ-ಲಕ್ಷ್ಯಸಮನ್ವಿತವಾದ ಪದ್ಯಗಳಲ್ಲಿ ಹಲವೆಡೆ ಪಾಠಶುದ್ಧಿ ಸಾಲದ ಕಾರಣ ಅಭಿಪ್ರಾಯವಿಶದತೆ ಸಾಧ್ಯವಾಗದೆ ಹೋಗಿದೆ.

ಪುನಃಸಂಪಾದನೆ ಒಂದು ಘಟ್ಟದ ಕೆಲಸವಾದರೆ, ಛಂದೋಗ್ರಂಥಗಳ ವಿಮರ್ಶೆ, ವ್ಯಾಖ್ಯಾನ ಮತ್ತು ತುಲನಾತ್ಮಕ ಅಧ್ಯಯನಗಳು ಇನ್ನೊಂದು ಘಟ್ಟದ ಕೆಲಸ. ‘ಛಂದೋಂಬುಧಿ’ಯ ವಸ್ತು ವಿಶ್ಲೇಷಣೆಯಲ್ಲಿ ಸಂಸ್ಕೃತ ಪ್ರಾಕೃತ ಮತ್ತು ಅಪಭ್ರಮಶ ಛಂದಸ್ಸುಗಳ ತುಲನೆ ಇನ್ನೂ ಗಾಢವಾಗಿ ನಡೆಯಬೇಕಾಗಿದೆ. ಗುಣಚಂದ್ರನ ‘ಛಂದಸ್ಸಾರ’ದ ಅನನ್ಯತೆ ತೋರುವುದು ಸಂಗೀತಶಾಸ್ತ್ರದ ಲಕ್ಷಣಾಂಶಗಳ ತುಲನೆ ವಿಶ್ಲೇಷಣೆಗಳು ನಡೆದಾಗಲೇ ಎನ್ನಬೇಕು. ಹೀಗೆಯೇ ‘ನಂದಿಛಂದೋರ್ಣವ’ದ ಅನನ್ಯತೆ ತೆಲುಗು ಛಂದಸ್ಸುಗಳ ತುಲನೆ ವಿಶ್ಲೇಷಣೆಗಳಲ್ಲಿ ಎನ್ನುವುದರಿಂದ ಅದು ಇನ್ನೂ ವ್ಯಾಪಕವಾಗಿ ನಡೆಯಬೇಕು.

ಕನ್ನಡ ಪದ್ಯಜಾತಿಗಳ ಪದಪಟ್ಟಿ ಕ್ರೋಡಿಕೃತವಾಗಿ ದೊರೆಯುವಂತಾಗಬೇಕು. ಅದು ಸಾಧ್ಯವಾಗುವುದು ಛಂದೋಗ್ರಂಥಗಳ ಸವಿಶರ್ಮ ಪರಿಷ್ಕರಣಗಳು ಸಿದ್ಧವಾದಾಗಲೇ. ವಾಸ್ತವವಾಗಿ ನೈಜ ಹಾಗೂ ಪ್ರಕ್ಷಿಪ್ತ ಪದ್ಯಗಳ ಗೊತ್ತು ಹತ್ತುವುದಕ್ಕೆ ಈಗಿರುವ ಪರಿಷ್ಕರಣಗಳನ್ನು ಧೈರ್ಯವಾಗಿ ಅವಲಂಬಿಸುವುದು ಕಷ್ಟ. ‘ಛಂದೋಂಬುಧಿ’ಯನ್ನು ಆಶ್ರಯಿಸಿ ಪದ್ಯಜಾತಿಗಳನ್ನು ಹಲವೆಡೆ ಬಳಸಿರುವ ಇಮ್ಮಡಿ ಮುರಿಗೆಯ ಸ್ವಾಮಿಯ ‘ಹಾಲಾಸ್ಯ ಪುರಾಣ’ವನ್ನು ‘ಛಂದೋಂಬುಧಿ’ಯ ಪ್ರಭಾವದ ಹಾಗೂ ಪ್ರಸಾರದ ದೃಷ್ಟಿಯಿಂದ ಅಭ್ಯಾಸಮಾಡಬಹುದಾಗಿದೆ.