ಕನ್ನಡ ಸಾಹಿತ್ಯದಲ್ಲಿ ಟೀಕೆ ವ್ಯಾಖ್ಯಾನಗಳ ಗ್ರಂಥಸಮುದಾಯ ದೊಡ್ಡ ಪ್ರಮಾಣದಲ್ಲಿಯೇ ಕಂಡುಬರುತ್ತಿದ್ದು, ಜೈನಾಗಮಗ್ರಂಥಗಳ ಸಂಬಂಧದ ಈ ತೆರನ ಸಹಾಯಕ ಸಾಹಿತ್ಯ ವಿಶೇಷ್ರಯೋಜನಗಳಿಗಾಗಿ ಸಂಪಾದನೆಗೊಂಡು ಪ್ರಕಟವಾಗಬೇಕಾಗಿದೆ. ಕನ್ನಡ ಸಾಹಿತ್ಯದ ಆರಂಭವೇ ಈ ತೆರನ ಗ್ರಂಥರಚನೆಯಿಂದ ಎಂಬುದು ಈಗ ಸ್ಪಷ್ಟವಾಗಿರುವುದರಿಂದ, ಕನ್ನಡ ಸಾಹಿತ್ಯದ ಪ್ರಾಚೀನತೆಯನ್ನು ಇನ್ನಷ್ಟು ಶೋಧಿಸಲು ಇವುಗಳ ಅಧ್ಯಯನ ಸಹಕಾರಿಯಾಗಿದೆ.

ಮೊದಲು ಈ ಸಾಹಿತ್ಯದ ವಿವರಣಾತ್ಮಕಕೋಶವನ್ನು ಸಿದ್ಧಮಾಡಿಕೊಳ್ಳಬೇಕು. ಅನಂತರದಲ್ಲಿ, ಇದರಲ್ಲಿ ವಸ್ತುವಿನ ವೈವಿಧ್ಯಕ್ಕೆ ಅನುಗುಣವಾಗಿ ಗುಂಪುಗಳನ್ನಾಗಿ ಮಾಡಿಕೊಂಡು, ಆ ಗುಂಪಿನೊಳಗೆ ಸೇರುವ ಗ್ರಂಥಗಳನ್ನು ಸವಿಮರ್ಶವಾಗಿ ಸಂಪಾದಿಸಿ ಪ್ರಕಟಿಸಬೇಕು. ದೇಶದ, ವಿಶೇಷವಾಗಿ ಕರ್ನಾಟಕದ, ಬೇರೆ ಬೇರೆ ಗ್ರಂಥಭಂಡಾರಗಳಲ್ಲಿ ಹಸ್ತಪ್ರತಿಗಳ ಶೋಧ ನಡೆಯುವುದು ಮೊದಲ ಕೆಲಸ. ಆಗಮಗಳು, ಸಿದ್ಧಾಂತಗ್ರಂಥಗಳು, ತತ್ತ್ವಗ್ರಂಥಗಳು, ಆಚಾರಗ್ರಂಥಗಳು, ವ್ಯಕ್ತಿಚರಿತ್ರೆಗಳು, ನಿಘಂಟುಗಳು ಹೀಗೆ ವೈವಿಧ್ಯವಿರುವುದನ್ನು ಲಕ್ಷಿಸಿ ಆ ಕೆಲಸವನ್ನು ಮುನ್ನಡಬಹುದಾಗಿದೆ. ದಿವಾಕರಣಂದಿ ವಾದಿಕುಮುದಚಂದ್ರ ಶುಭಚಂದ್ರ ಮಾಘಣಂದಿ ಅಧ್ಯಾತ್ಮಿಬಾಲಚಂದ್ರ ಪದ್ಮಪ್ರಭ ಪದ್ಮನಂದಿ ಹೀಗೆ ಹಲವರಿದ್ದಾರೆ, ಈ ಸಾಹಿತ್ಯವನ್ನು ಸಮೃದ್ಧಿಗೊಳಿಸಿದವರಲ್ಲಿ.

ಜೈನ ಟೀಕೆ ವ್ಯಾಖ್ಯಾನಗಳು ಈವರೆಗೆ ಗ್ರಂಥಭಂಡಾರಗಳಲ್ಲಿ ಉಪಲಬ್ಧವಿದ್ದೂ ಹತ್ತರಲ್ಲಿ ಒಂದು ಪಾಲು ಕೂಡ ಸಂಪಾದಿತವಾಗಿ ಬೆಳಕು ಕಂಡಿಲ್ಲ. ಇವುಗಳ ಅಭ್ಯಾಸದಿಂದ ತಮ್ಮ ಸಂಶೋಧನಕಾರ್ಯಗಳಿಗೆ ಬಹುವಾಗಿ ಸಹಾಯವಾಗಿದೆಯೆಂದು ಆ.ನೇ. ಉಪಾಧ್ಯೆಯವರು ಆಗಿಂದಾಗ್ಗೆ ಹೇಳುತ್ತಿದ್ದರು; ಪ್ರಕಟನೆಯ ವಿಷಯದಲ್ಲಿಯೂ ಉತ್ಸುಕರಾಗಿದ್ದರು. ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥಾನ ಈ ದಿಕ್ಕಿನಲ್ಲಿ ಮುಂದುವರಿಯುವುದು ಅಪೇಕ್ಷಣೀಯವಾಗಿದೆ.

ಭಾರತೀಯ ಜೈನಸಾಹಿತ್ಯದ ತಿಳಿವಳಿಕೆಗೆ, ಕವಿಕಾವ್ಯವಿಚಾರದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಈ ಕನ್ನಡ ಟೀಕೆ ವ್ಯಾಖ್ಯಾನಗಳ ಪ್ರಕಟನೆ ತುಂಬ ತುರ್ತಾಗಿ ಆಗಬೇಕಾಗಿದೆ. ಪ್ರಾಕೃತದ ಅಧ್ಯಯನ ಕ್ಷೀಣೀಸುತ್ತಿರುವ ಈ ದಿನಗಳಲ್ಲಿ ಇವು ಪ್ರಾಕೃತ ಭಾಷೆಯನ್ನು ಕನ್ನಡ ಮಾಧ್ಯಮದ ಮೂಲಕ ರೂಢಿಸಿಕೊಳ್ಳುವುದಕ್ಕೆ ಸಹಕಾರಿಯಾಗಿ ಒದಗುತ್ತವೆ.