ಗದ್ಯ ಪಾಠ ೪ – ಸಮುದ್ರಲಂಘನ

ಸೀತಾನ್ವೇಷಣೆಗೆಂದು ಹೊರಟ ಮಾರುತಿ ತನ್ನ ಪ್ರಯಾಣಕ್ಕೆ ದೇವಚಾರಣರಿಗೆ ದಾರಿಯಾದ ಆಕಾಶವೇ ಅತ್ಯುತ್ತಮವೆಂದು ಭಾವಿಸಿದನು. ಮಹೇಂದ್ರ ಪರ್ವತದ ಕಂದರದಲ್ಲಿ ತಲೆಯೆತ್ತಿ ನಿಂತಿದ್ದ ಆ ವಾನರ ವೀರನು ಮಲೆತು ನಿಂತಿರುವ ಮಹಾ ವೃಷಭದಂತೆ ಕಂಗೋಳಿಸುತ್ತಿದ್ದನು. ವೈಢೂರ್ಯ ವರ್ಣದಿಂದ ವಿರಾಜಿಸುತಿದ್ದ ಹಸುರು ಹುಲ್ಲಿನ ಮೇಲೆ ಒಂದು ಕ್ಷಣಕಾಲ ಶತಪಥ ತಿರುಗುತ್ತಿದ್ದು ಆನಂತರ ಕೋಡುಗಲ್ಲೊಂದನ್ನೇರಿ ನಿಂತುಕೊಂಡನು. ಮೂಹರ್ತ ಮಾತ್ರ ಕಣ್ಮುಚ್ಚಿ ಪಂಚ ಭೂತಗಳನ್ನು ಮನಸ್ಸಿನಲ್ಲಿ ಧ್ಯಾನಿಸಿದ ಮೇಲೆ ಆ ವೀರನು ಪರ್ವತದ ಸತ್ವವನ್ನು ಪರೀಕ್ಷಿಸುವುದಕ್ಕೋ ಎಂಬಂತೆ ಒಮ್ಮೆ ಕಾಲನ್ನು ನೆಲಕ್ಕೆ ಅಪ್ಪಳಿಸಿದನು. ಅದರಿಂದ ಪರ್ವತವೆಲ್ಲವೂ ಅಲುಗಿದಂತಾಯಿತು. ಸುತ್ತಲಿದ್ದ ವೃಕ್ಷಗಳಿಂದ ಹೂಗಳೆಲ್ಲವೂ ಉದುರಿದವು.

ಸಂದಿಗಳಲ್ಲಿ ಹುದುಗಿದ್ದ ಹಾವುಗಳೆಲ್ಲವೂ ಹೊರಕ್ಕೆ ಬಂದವು. ದೂರದಲ್ಲಿ ನಿಂತಿದ್ದ ವಾನರರು ಈತನ ಸಾಮರ್ಥ್ಯವನ್ನು ಕಂಡು ಮನಸ್ಸಿನಲ್ಲಿಯೇ ನಲಿದರು. ಬೆಟ್ಟದ ನೆತ್ತಿಯೇರಿ ನಿಂತಿರುವ ಮತ್ತೊಂದು ಬೆಟ್ಟದಂತೆ ಬಹುದೂರದವರೆಗೂ ಆತನು ಕಾಣಬರುತ್ತಿದ್ದನು. ಆತನ ಆಕಾರವನ್ನೂ ನಿಲುವನ್ನೂ ಕಂಡು ಮಹೇಂದ್ರ ಪರ್ವತದಲ್ಲಿದ್ದ ಋಷಿಗಳು ಆತನು ತನ್ನ ಕಾರ್ಯದಲ್ಲಿ ವಿಜಯಿಯಾಗಲೆಂದು ಹರಿಸಿದರು. ಹನುಮಂತನು ಅಲ್ಲಿಂದ ಹಾರಲು ನಿಶ್ವಯಿಸಿ ಒಮ್ಮೆಲೆ ಮೈಯನ್ನು ಒದರಿದನು. ಕೂದಲುಗಳು ನಿಮಿರಿ ನೆಟ್ಟನೆ ನಿಂತವು. ಬಾಲವು ಮೇಲಕ್ಕೆದ್ದು ನಿಂತು ಅದರ ತುದಿ ಗೋಡೆಯಂತಾಯಿತು. ಸಮುದ್ರದ ಅಲೆಗಳಂತಿದ್ದ ಬಾಹುಗಳೆರಡೂ ಮೇಲಕ್ಕೂ ಕೆಳಕ್ಕೂ ತೂಗಾಡಿದವು. ಚಿಮ್ಮುವ ಮೊದಲು ಕಾಲುಗಳನ್ನು ಭೂಮಿಗೆ ಬಲವಾಗಿ ಊರಿದುದರಿಂದ ಅವು ಸಂಕುಚಿತವಾದವು. ಕಣ್ಣುಮುಚ್ಚಿ ತೆಗೆಯುವಷ್ಟರಲ್ಲಿ ಮಹಾ ಧನುಸ್ಸಿನಿಂದ ಹೊರಡುವ ದಿವ್ಯ ಮಾರ್ಗಣದಂತೆ ಹನುಮಂತನು ಆಕಾಶಕ್ಕೆ ನೆಗೆದನು. ಶ್ರೀರಾಮನು ರಾವಣನ ಮೇಲೆ ಪ್ರಯೋಗಿಸುವ ಮೊಟ್ಟಮೊದಲನೆಯ ಬಾಣವೇ ಹನುಮಂತನೆಂಬಂತೆ ಕಾಣಿಸಿತು. ಆತನು ಹಾರಿದ ವೇಗಕ್ಕೆ ಬಿರುಗಾಳಿಯೆದ್ದು ಸುತ್ತಲಿನ ಮರಗಳು ಮುರಿದು ಬಿದ್ದವು; ಹೂಗಳೂ, ಎಲೆಗಳೂ ಆ ವೇಗಕ್ಕೆ ಸಿಕ್ಕಿ ಆತನ ಹಿಂದೆಯೇ ಹಾರಿಹೋದವು. ಆತನನ್ನು ಸಾಗಕಳುಹುವುದಕ್ಕೋ ಎಂಬಂತೆ ಮೇಲೆದ್ದು ನಿಂತಿದ್ದ ಬಾಲವೇ ತನ್ನ ವಿಜಯಧ್ವಜದಂತೆ ಕಂಗೊಳಿಸುತ್ತಿರಲು, ಆತನು ದಕ್ಷಿಣ ದಿಕ್ಕನ್ನು ಕುರಿತು ಪ್ರಯಾಣ ಹೊರಟನು.

ಮೇಲೆ ವಿಸ್ತರವಾದ ನೀಲಗಗನ, ಕೆಳಗೆ ಅಪಾರವಾದ ಸಾಗರ. ಇವುಗಳ ನಡುವೆ ಅದ್ಭುತ ವೇಗದಿಂದ ಚಲಿಸುವ ವಾಯುಪುತ್ರನನ್ನು ನೋಡುವುದಕ್ಕಾಗಿ ದೇವಾನುದೇವತೆಗಳೆಲ್ಲರೂ ಅಂತರಿಕ್ಷದಲ್ಲಿ ನೆರೆದರು. ಜಲದೆವತೆಯರೆಲ್ಲರೂ ಸಮುದ್ರದ ಮೇಲೆ ನೆರೆದರು.

ಮುಂದಕ್ಕೆ ಪ್ರಯಾಣ ಹೊರಟ ಹನುಮಂತನು ಕ್ಷಣಮಾತ್ರದಲ್ಲಿ ಮೈನಾಕ ಪರ್ವತದಿಂದ ಕಣ್ಮರೆಯಾಗಿ ಹೊರಟು ಹೋದನು. ಕ್ಷಣಕ್ಷಣಕ್ಕೂ ಆತನ ವೇಗ ಹೆಚ್ಚುತ್ತಿತ್ತು. ಆಯಾಸವೆಂದರೆ ಏನೆಂಬುದೇ ಆತನಿಗೆ ಗೊತ್ತಿಲ್ಲವೆಂದು ತೋರುತ್ತದೆ. ಆಗೋ! ಮತ್ತೆ ಆದೇನು? ಸಮುದ್ರ ಮದ್ಯದಿಂದ ಘೋರವಾದ ರಾಕ್ಷಸಾಕಾರವೊಂದು ಮೇಲಕ್ಕೇಳುತ್ತಿದೆ! ಅಹುದು! ದೇವತೆಗಳು ಹನುಮಂತನ ಸತ್ವವನ್ನು ಪರೀಕ್ಷಿಸಬೇಕೆಂದು ಸುರಸೆಯೆಂಬ ಪನ್ನಗಮಾತೆಯನ್ನು ಆತನನ್ನು ತಡೆಯಲು ಕಳುಹಿಸಿದ್ದಾರೆ. ಅವಳು ವಿಕಾರ ರೂಪದಿಂದ ಮಾರುತಿಗೆ ಅಡ್ಡನಿಂತು ದೊಡ್ಡ ಕಮರಿಯಂತಿದ್ದ ತನ್ನ ಬಾಯನ್ನು ತೆರೆದು, ಅವನನ್ನು ನುಂಗುವವಳಂತೆ ಬರುತ್ತಿದ್ದಾಳೆ. ಅವಳು ಹನುಮಂತನನ್ನು ಕುರಿತು “ಎಲೈ ವಾನರನೇ, ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ತೋರಿಸಿದ್ದಾರೆ. ನಾನು ನಿನ್ನನ್ನು ಭಕ್ಷಿಸಬೇಕು. ನನ್ನ ಬಾಯನ್ನು ಪ್ರವೇಶಿಸು” ಎಂದಳು. ಹನುಮಂತನು ತನ್ನ ಕಾರ್ಯ ಗೌರವವನ್ನು ಆಕೆಗೆ ವಿವರಿಸಿ, ಹೇಳಿ, ತನ್ನ ಕಾರ್ಯಸಾಧನೆಯಾದ ಮೇಲೆ ಹಿಂದಿರುಗಿ ಬರುವಾಗ ಅವಳ ಇಷ್ಟದಂತೆ ನಡೆದುಕೊಳ್ಳುವುದಾಗಿ ತಿಳಿಸಿ, ತನ್ನನ್ನು ಸಧ್ಯಕ್ಕೆ ತೊಂದರೆಪಡಿಸಕೂಡದೆಂದು ಕೈ ಮುಗಿದು ವಿನಯದಿಂದ ಬೆಡಿಕೊಂಡನು. ಆದರೆ ಸುರಸೆ ಇದಕ್ಕೊಪ್ಪಲಿಲ್ಲ. ಆದುದರಿಂದ ಹನುಮಂತನು ಅವಳ ಬಾಯಿಗೆ ಅಳವಡದಷ್ಟು ಎತ್ತರವಾಗಿ ಬೆಳೆದು ನಿಂತನು. ಅದನ್ನು ಕಂಡು ಸುರಸೆ ತನ್ನ ಬಾಯನ್ನು ಹಿಗ್ಗಿಸಿದಳು. ಹನುಮಂತ ಹತ್ತುಯೋಜನ ಬೆಳೆದರೆ ಅವಳ ಬಾಯಿ ಇಪ್ಪತ್ತು ಯೋಜನದಷ್ಟು, ವಿಸ್ತಾರವಾಗುವುದು. ಆತನ ದೇಹ ಮೂವತ್ತು ಯೋಜನದಷ್ಟು ಬೆಳೆದರೆ ಅವಳ ಬಾಯಿ ನಲವತ್ತು ಯೋಜನದಷ್ಟು ಹಿಗ್ಗುವುದು. ಇವಳನ್ನು ನಿಗ್ರಹಿಸಲು ಪ್ರಯತ್ನಿಸಿದರೆ ತನ್ನ ಕಾರ್ಯ ವಿಳಂಬವಾಗುದೆಂದುಕೊಂಡು ಮಾರುತಿ ಪಕ್ಕನೆ ಅಂಗುಷ್ಠ ಪ್ರಮಾಣಕ್ಕೆ ತನ್ನ ದೇಹವನ್ನು ಕುಗ್ಗಿಸಿಕೊಂಡು ಅವಳು ತನ್ನ ದೇಹವನ್ನು ಕುಗ್ಗಿಸಿಕೊಳ್ಳುವುದರೊಳಗಾಗಿಯೇ ಅವಳ ಬಾಯಲ್ಲಿ ಹೊಕ್ಕು ಹೊರಕ್ಕೆ ಬಂದನು. ಅನಂತರ ಆತನು ಸುರಸೆಯನ್ನು ಕುರಿತು “ಎಲೌ, ರಾಕ್ಷಸಿಯೇ ನನ್ನ ಬಾಯನ್ನು ಪ್ರವೇಶಿಸು” ಎಂದು ನೀನು ಹೇಳಿದಂತೆ ಇದೋ ಪ್ರವೇಶಿಸಿ ಹೊರಕ್ಕೆ ಬಂದಿದ್ದೇನೆ. ಇನ್ನು ನನ್ನನ್ನು ಬಿಡು. ಸ್ವಾಮಿ ಕಾರ್ಯಕ್ಕೆ ವಿಳಂಬವಾಗುವುದು ಎಂದನು. ಆತನ ಧೈರ್ಯವನ್ನೂ ಜಾಣ್ಮೆಯನ್ನೂ ಕಂಡು ಸುರಸೆಗೆ ಆನಂದವಾಯಿತು. ಆತನನ್ನು ಬಾಯ್ತುಂಬ ಹರಸಿ ಬೀಳ್ಕೊಟ್ಟಳು.

ಸುರಸೆಯಿಂದ ಬೀಳ್ಕೊಂಡ ಹನುಮಂತ ಮಳೆಗಾಲದ ಚಂದ್ರನಂತೆ ಮೇಘಗಳ ಮಧ್ಯದಲ್ಲಿ ಹಾರಿಹೋಗುತ್ತಾ ಸ್ವಲ್ಪ ದೂರವನ್ನು ಸವೆಸಿದ್ದನೋ ಇಲ್ಲವೋ ಅಷ್ಟರಲ್ಲಿ ಮತ್ತೊಂದು ವಿಘ್ನ ಪ್ರಾಪ್ತವಾಯಿತು. ಸಮುದ್ರ ಮಧ್ಯದಲ್ಲಿ ವಾಸಿಸುತ್ತಿದ್ದ ಸಿಂಹಿಕೆಯೆಂಬ ರಾಕ್ಷಸಿಯೊಬ್ಬಳು ಆತನನ್ನು ಕಂಡಳು. ಮೇಲೆ ಸಂಚರಿಸುವ ಪ್ರಾಣಿಗಳ ನೆರಳಿನಿಂದಲೇ ಅವುಗಳ ಚಲನೆಯನ್ನು ತಡೆದು ನಿಲ್ಲಿಸಿ, ಅವುಗಳನ್ನು ತನ್ನ ಹೊಟ್ಟಗೆ ಹಾಕಿಕೊಳ್ಳುವುದು ಆ ರಾಕ್ಷಸಿಯ ನಿತ್ಯಕ್ರಮ. ಇಂದು ದೊಡ್ಡ ಬೇಟೆಯೊಂದು ದೊರೆಯಿತೆಂದು ಅವಳಿಗೆ ಮಹದಾನಂದವಾಯಿತು. ಸಮುದ್ರದ ಮೇಲೆ ಬಿದ್ದಿದ್ದ ಹನುಮಂತನ ನೆರಳನ್ನು ಹಿಡಿದು ಅವನ ಆಕಾಶಗಮನವನ್ನು ತಡೆದು ನಿಲ್ಲಿಸಿದಳು. ಎದುರು ಗಾಳಿಯಿಂದ ತೊಂದರೆಗೊಳಗಾದ ಹಡಗಿನಂತೆ ತನ್ನ ಸ್ಥಿತಿ ಆಗಿರುವುದನ್ನು ಕಂಡು ಹನುಮಂತನು ಕೆಳಗೆ ನೋಡುತ್ತಾನೆ! ಭಯಂಕರ ರಾಕ್ಷಸಿ, ಕಮರಿಯಂತಿರುವ ತನ್ನ ಬಾಯನ್ನು ತೆರೆದುಕೊಂಡು ನೆರಳಿನ ಮೂಲಕ ತನ್ನನ್ನು ಕೆಳಗೆಯುತ್ತಿದ್ದಾಳೆ! ಸುಗ್ರೀವನು ಹಿಂದೆ ಹೇಳಿದ್ದ “ನೆರಳನ್ನು ಹಿಡಿದು ಭಕ್ಷಿಸುವ ಭೂತ” ಇವಳೇ ಇರಬೇಕೆಂದುಕೊಂಡು, ಆತನು ತನ್ನ ದೇಹವನ್ನು ಅದ್ಭುತಾಕಾರವಾಗಿ ಬೇಳೆದನು. ಆನಂತರ ದೇಹವನ್ನಡಗಿಸಿಕೊಂಡು ತಾನಾಗಿಯೇ ಅವಳ ಬಿಚ್ಚಿದ ಬಾಯಲ್ಲಿ ಪ್ರವೇಶಿಸಿದನು. ಹೊಟ್ಟೆಯಲ್ಲಿ ಹೊಕ್ಕ ಹನುಮಂತನು ಅವಳ ಉದರ ಸ್ಥಾನವನ್ನು ಹರಿದು ಕಲ್ಲಿಂದ ಪುಟವೆದ್ದ ಚೆಂಡಿನಂತೆ ಆಕಾಶಕ್ಕೆ ನೆಗೆದನು. ಆ ರಾಕ್ಷಸಿ ಘೋರವಾಗಿ ಚೀತ್ಕರಿಸುತ್ತ ಸತ್ತು ನೀರಿನಲ್ಲಿ ಬಿದ್ದಳು. ಇಷ್ಟಾದ ಮೇಲೆ ಮತ್ತಾವ ವಿಘ್ನವೂ ಇಲ್ಲದೆ ಅವನು ಗರುಡನಂತೆ ಸುಖವಾಗಿ ಹಾರುತ್ತ ಸಮುದ್ರದ ದಂಡೆಗೆ ಬಂದು ಸೇರಿದನು. ಅದರ ತೀರದಲ್ಲಿ ದೊಡ್ಡದೊಂದು ಆಡವಿಯಿತ್ತು. ಹನುಮಂತನು ನೆಲಕ್ಕಿಳಿಯುವ ಮುನ್ನ ತನ್ನ ದೇಹವನ್ನು ಅತ್ಯಂತ ಚಿಕ್ಕದಾಗಿ ಕುಗ್ಗಿಸಿಕೊಂಡು ಅಡವಿಯಲ್ಲಿ ಕೇತಕೀ ವನದಿಂದ ತುಂಬಿರುವ ಲಂಬಾಚಲವೆಂಬ ಪರ್ವತದ ಶಿಖರದ ಮೇಲೆ ಬಂದಿಳಿದನು. ಆ ಪರ್ವತದಿಂದಾಚೆ ಅತ್ಯಂತ ಎತ್ತರವಾದ ತ್ರಿಕೂಟ ಶಿಖರವೆಂಬ ಪರ್ವತವಿತ್ತು. ಅದರ ಮೇಲ್ಗಡೆಯಲ್ಲಿಯೇ ಕಾಣಿಸಿತು ಲಂಕಾಪಟ್ಟಣ.

ಕುವೆಂಪು (ಜನಪ್ರೀಯ ರಾಮಯಾಣ)
ಕೃಪೆ: ೧೯೬೨ ಕನ್ನಡ ಏಳನೆಯ ಪುಸ್ತಕದಿಂದ ಆರಿಸಿದೆ

. ಕೊಟ್ಟಿರುವ ಪದಗಳನ್ನು ಓದಿ Readind practice

ಸೀತಾನ್ವೇಷಣೆ, ಸಾಗರ, ಪರ್ವತ, ರಾಕ್ಷಸ, ವಾನರರು, ಸಮುದ್ರ, ಋಷಿ, ಬೇಟೆ, ನೀಲಗಗನ, ಭೂತ, ಲಂಕಾಪಟ್ಟಣ, ಅಡವಿ

Drills

I Repetitions drills

Model ಅಧ್ಯಾಪಕ : ಕ್ಷಣ ಮಾತ್ರದಲ್ಲಿ ಮೈನಾಕ ಪರ್ವತದಿಂದ ಕಣ್ಮರೆಯಾಗಿ ಹೊರಟು ಹೋದನು.
ವಿದ್ಯಾರ್ಥಿ : ಕ್ಷಣ ಮಾತ್ರದಲ್ಲಿ ಮೈನಾಕ ಪರ್ವತದಿಂದ ಕಣ್ಮರೆಯಾಗಿ ಹೊರಟು ಹೋದನು.

ಅಧ್ಯಾಪಕ : ಕ್ಷಣಕ್ಷಣಕ್ಕೂ ಆತನ ವೇಗ ಹೆಚ್ಚುತ್ತಿತ್ತು
ವಿದ್ಯಾರ್ಥಿ :
ಅಧ್ಯಾಪಕ : ಎಲೆ ವಾನರೇ, ದೇವತೆಗಳು ನಿನ್ನನ್ನು ನನಗೆ ಆಹಾರವಾಗಿ ತೋರಿಸಿದ್ದಾರೆ.
ವಿದ್ಯಾರ್ಥಿ :
ಅಧ್ಯಾಪಕ : ನಾನು ನಿನ್ನನ್ನು ಭಕ್ಷಿಸಬೇಕು.
ವಿದ್ಯಾರ್ಥಿ :

II Substitution Drill – Single subtitution

Model : ಸುತ್ತಲಿದ್ದ ವೃಕ್ಷಗಳಿಂದ ಹೂಗಳೆಲ್ಲವು ಬಿದ್ದವು.
ಸುತ್ತಲಿದ್ದ ವೃಕ್ಷಗಳಿಂದ ಹೂಗಳೆಲ್ಲವು ಉದುರಿದವು.

೧. ಮೈಮೇಲಿದ್ದ ಕೂದಲುಗಳು ನಿಮಿರಿ ನೆಟ್ಟನೆ ಎದ್ದವು
……………………………….. (ನಿಂತವು)
೨. ಆತನು ದಕ್ಷಿಣ ದಿಕ್ಕನ್ನು ಕುರಿತು ಪ್ರಯಾಣ ಮಾಡಿದನು.
……………………………….. (ಹೊರಟನು)
೩. ಜಲದೇವತೆಯರೆಲ್ಲರೂ ಸಮುದ್ರ ಮೇಲೆ ಸೇರಿದರು.
……………………………….. (ನೆರೆದರು)

III Transformation drill

Model : ಎದುರು ಗಾಳಿಯಿಂದ ತೊಂದರೆಗೊಳಗಾದ ಹಡಗಿನಂತೆ ತನ್ನ ಸ್ಥಿತಿ ಆಗಿರುವುದನ್ನು ಕಂಡು ಹನುಮಂತನು ಕೆಳಗೆ ನೋಡುತ್ತಾನೆ. ಎದುರು ಗಾಳಿಯಿಂದ ತೊಂದರೆಗೊಳಗಾದ ಹಡಗಿನಂತೆ ತನ್ನ ಸ್ಥಿತಿ (ಎಲ್ಲಿ)

೧. ಹೊಟ್ಟೆಯಲ್ಲಿ ಹೊಕ್ಕ ಹನುಮಂತನು ಅವಳ ಉದರ ಸ್ಥಾನವನ್ನು ಹರಿದು ಕಲ್ಲಿಂದ ಪುಟಿದೆದ್ದ ಚೆಂಡಿನಂತೆ ಆಕಾಸಕ್ಕೆ ನೆಗೆದನು.
……………………………….. (ಎಲ್ಲಿಗೆ)
೨. ಆ ಪರ್ವತದಿಂದಾಚೆ ಅತ್ಯಂತ ಎತ್ತರವಾದ ತ್ರಿಕೂಟ ಶಿಖರವೆಂಬ ಪರ್ವತವಿತ್ತು.
……………………………….. (ಯಾವ)
೩. ದೇವಾನುದೇವತೆಗಳೆಲ್ಲರೂ ಅಂತರಿಕ್ಷದಲ್ಲಿ ನೆರೆದರು.
……………………………….. (ಎಲ್ಲಿ)

IV Response drill

೧. ಹೊಟ್ಟೆಯಲ್ಲಿ ಹೊಕ್ಕ ಹನುಮಂತನು ಅವಳ ಉದರ ಸ್ಥಾನವನ್ನು ಹರಿದು ಕಲ್ಲಿಂದ ಪುಟಿದೆದ್ದ ಚೆಂಡಿನಂತೆ ಎಲ್ಲಿಗೆ ನಡೆದನು?
………………………………..
೨. ಆ ಪರ್ವತದಿಂದಾಚೆ ಅತ್ಯಂತ ಎತ್ತರವಾದ ಯಾವ ಪರ್ವತವಿತ್ತು?
………………………………..
೩. ದೇವಾನು ದೇವತೆಗಳೆಲ್ಲರೂ ಎಲ್ಲಿ ನೆರೆದರು?
………………………………..
೪. ಅವನಿಗೆ ಆಯಾಸದಿಂದ ಏನು ಬಂತು?
………………………………..

EXERCISES

1.Fill in the following blanks using the English

Model ಪ್ರವೇ……ಸು  (Entry)        ಪ್ರವೇಶಿಸು
೧ ಶಿ……… ರ      (Monutain)     ……….
೨. ದೇ……. ತೆ     (god)   ……….
೩. …………ಹ     (body)……….
೪. ಸಾಗ……..      (ocean)           ……….
೫. ಪ್ರ………ಣ    (journey)        ……….

2. Choose the appropriate letter from the pairs given and fill up the blanks according to the model

Model : ಶತ……ಪ….         ಥ – ತ  ಶತಪಥ
೧. ದೇವ…..ರಣ   ಚಾ – ಚ  ……….
೨. ವಿ…………..   ನ್ನ – ಘ್ನ            ……….
೩ …….ಂದೇಹ  ಸ – ಶ    ……….
೪ …….ನ್ವೇಷಣ  ಆ – ಅ   ……….

3. Combine the following words according to the model

Model : ಮೇಲೆ + ಕಡೆ     ಮೇಲ್ಗಡೆ
೧. ಸ್ಥಾನ +ಅನ್ನು            ……………..
೨. ಮಹ + ಇಂದ್ರ……………..
೩. ಮಳೆ+ ಕಾಲ    ……………..
೪. ಬಾಯಿ + ತುಂಬ          ……………..
೫. ಲಂಬಾ + ಅಚಲ          ……………..

4. Spilt the folling sentences into two according to the model

Model : ಹೊಟ್ಟೆಯಲ್ಲಿ ದೊಡ್ಡ ಹನುಮಂತನ ಉದರ ಅವಳ ಉದರಥಾನವನ್ನು ಹರಿದು ಕಲ್ಲಿಂದ ಪುಟಿದೆದ್ದ ಚೆಂಡಿನಂತೆ ಆಕಾಶಕ್ಕೆ ನೆಗೆದನು.
ಹನುಮಂತನು ಹೊಟ್ಟೆಯಲ್ಲಿ ಹೊಕ್ಕನು. ನಂತರ ಅವಳ ಉದರಥಾನವನ್ನು ಹರಿದು ಕಲ್ಲಿಂದ ಪುಟಿದೆದ್ದ ಚೆಂಡಿನಂತೆ ಆಕಾಶಕ್ಕೆ ನೆಗೆದನು.

೧. ಆ ರಾಕ್ಷಸಿ ಘೋರವಾಗಿ ಚೀತ್ಕರಿಸುತ್ತ ಸತ್ತು ನೀರಿನಲ್ಲಿ ಬಿದ್ದಳು.
೨. ದೂರದಲ್ಲಿ ನಿಂತಿದ್ದ ವಾನರರು ಈತನ ಸಾಮರ್ಥ್ಯವನ್ನು ಕಂಡು ಮನಸ್ಸಿನಲ್ಲಿಯೇ ನಲಿದರು.
೩. ಹನುಮಂತ ಹತ್ತು ಯೋಜನೆ ಬೆಳೆದರೆ ಅವಳ ಬಾಯಿ ಇಪ್ಪತ್ತು ಯೋಜನೆಯಷ್ಟು ವಿಸ್ತಾರವಾಗುವುದು.

5. Fill up the blanks using the words given below in the bracket

Model : ಸುತ್ತಲಿದ್ದ ವೃಕ್ಷಗಳಿಂದ ……… ಉದುರಿದವು (ಎಲೆಗಳು, ಹೂವುಗಳೆಲ್ಲವೂ, ಕೋಟೆಗಳೆಲ್ಲವೂ)
ಸುತ್ತಲಿದ್ದ ವೃಕ್ಷಗಳಿಂದ ಹೂಗಳೆಲ್ಲವೂ ಉದುರಿದವು.

೧. ಸಂದಿಗಳಲ್ಲಿ ಹುದುಗಿದ್ದ ………..ಹೊರಕ್ಕೆ ಬಂದವು. (ಇಲಿಗಳು, ಹಾವುಗಳೆಲ್ಲವೂ, ಪ್ರಾಣಿಗಳೆಲ್ಲವೂ)
೨. ಬಾಲವು ಮೇಲಕ್ಕೆದ್ದು ನಿಂತು ಅದರ ……… ಗೋಡೆಯಂತಾಯಿತು. (ತುದಿ, ಮೇಲೆ, ಬುಡ)
೩. ಶ್ರೀರಾಮನು ರಾವಣನ ಮೇಲೆ ಪ್ರಯೋಗಿಸುವ ಮೊಟ್ಟಮೊದಲನೆಯ ಬಾಣವೇ …….. ಎಂಬಂತೆ ಕಾಣಿಸಿತು. (ಹನುಮಂತನೆಂಬಂತೆ, ರಾಕ್ಷಸನೆಂಬಂತೆ, ದೇವತೆಯೆಂಬಂತೆ)

6. Make use of the follwing words in your own sentences

ಅನ್ವೇಷಣೆ, ಅಪ್ಪಳಿಸು, ನೆಗೆದನು, ಕುಗ್ಗಿಸು, ಬೀಳ್ಕೊಡು

7. write answers to the follwing question

೧. ಮಾರುತಿಯು ಮಹೇಂದ್ರ ಪರ್ವತದ ಸತ್ವವನ್ನು ಹೇಗೆ ಪರೀಕ್ಷಿಸಿದನು? ಆ ಪರೀಕ್ಷೆಯ ಪರಿಣಾಮವೇನಾಯ್ತು?
೨. ಮಹೇಂದ್ರ ಪರ್ವತದಲ್ಲಿದ್ದ ಹನುಮಂತನು ಹೇಗೆ ಕಂಡನು?
೩. ಸುರಸೆಯ ವಿಷಯವನ್ನು ತಿಳಿಸಿರಿ?
೪. ಸಿಂಹಿಕೆಯಾರು? ಆಕೆಯಿಂದ ಹನುಮಂತನು ಹೇಗೆ ಪಾರಾದನು?