ಗದ್ಯ ಪಾಠ ೮ – ದೇವಶರ್ಮನ ಕಥೆ

ಹಿಂದೆ ಉಜ್ಜಯನಿ ನಗರದಲ್ಲಿ ಆದಿತ್ಯಸೇನನೆಂಬ ರಾಜನಿದ್ದನು. ಅವನು ಒಬ್ಬ ಸಾಮಂತರಾಜನ ಮೇಲೆ ಒಮ್ಮೆ ದಂಡೆತ್ತಿ ಹೋಗಬೇಕಾಯಿತು. ತಾನು ತನ್ನ ಕುದುರೆಯ ಮೇಲೆ ಕುಳಿತು ಸೈನ್ಯದೊಡನೆ ಹೊರಟನು. ಸಮಪ್ರದೇಶ ಬಂದ ಮೇಲೆ ಕುದುರೆಯ ಪಕ್ಕೆಯನ್ನು ತಿವಿದನು. ಅದು ಜನರ ಕಣ್ಣಿಗೆ ಕಾಣದಷ್ಟು ವೇಗವಾಗಿ ಹೊರಟು ಹೋಯಿತು. ಸಾವಿರಾರು ಸವಾರರು ಹಿಂಬಾಲಿಸಿ ಹೋದರೂ ಅವನು ಸಿಕ್ಕಲಿಲ್ಲ. ಅದುದರಿಂದ ಅವನಿಗೆ ಏನೋ ಅಪಾಯ ಸಂಭವಿಸಿರಬಹುದೆಂದು ಹೆದರಿ, ಸೈನ್ಯವು ಮರಳಿ ಪಟ್ಟಣಕ್ಕೆ ಬಂದಿತು. ಮಂತ್ರಿಗಳು ಊರು ಬಾಗಿಲುಗಳನ್ನು ಭದ್ರಮಾಡಿಕೊಂಡರು. ಅತ್ತ ರಾಜನನ್ನು ಕುದುರೆಯು ಘೋರವಾದ ವಿಂದ್ಯಾಟವಿಗೆ ಕರೆದುಕೊಂಡು ಹೀಗಿ ನಿಂತಿತು. ಆಗ ಅವನಿಗೆ ಏನು ಮಾಡುವುದಕ್ಕೂ ತೋರದೆ, ಕೆಳಗಿಳಿದು ಕುದುರೆಗೆ ನಮಸ್ಕರಿಸಿ “ನೀನು ದೇವತಾ ಸ್ವರೂಪಿ, ನಿನ್ನಂಥವರು ಪ್ರಭುದ್ರೋಹ ಮಾಡುವುದಿಲ್ಲ. ಆದುದರಿಂದ ನಿನ್ನನ್ನು ಶರಣು ಹೋಗುತ್ತೇನೆ. ನನ್ನನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗು” ಎಂದು ಪ್ರಾರ್ಥಿಸಿದನು. ಆಮೇಲೆ ಆದರ ಮೇಲೆ ಕುಳಿತುಕೊಳ್ಳಲು ಅದು ಮಾರ್ಗಾಯಾಸವಾಗದಂಥ ದಾರಿಯಲ್ಲಿ ಹೋಗುತ್ತ ನೂರಾರು ಯೋಜನೆಗಳನ್ನು ದಾಟಿ ಸಂಜೆಯ ಹೊತ್ತಿಗೆ ಉಜ್ಜನಿಯ ಹತ್ತಿರಕ್ಕೆ ತಂದುಬಿಟ್ಟಿತು. ಸಂಜೆಯಾಯಿತೆಂದು ಊರ ಬಾಗಿಲುಗಳನ್ನು ಹಾಕಿಬಿಟ್ಟಿದ್ದರಿಂದ ಅವನು ಊರ ಹೊರಗೆ ಸ್ಮಶಾನದಲ್ಲಿ ಒಂದು ಮಠಕೆ ಹೋದನು. ಅವನು ಕಳ್ಳನೋ ಏನೋಎಂದು ಹೆದರಿ, ಅಲ್ಲಿದ್ದ ಕೆಲವರು ಬ್ರಾಹ್ಮಣರು ಅವನನ್ನು ಒಳಗೆ ಬಿಡದೆ ತಡೆದರು. ಆದರೆ ಅವರಲ್ಲಿ ದೇವಶರ್ಮನೆಂಬ ಸತ್ಯವಂತನೂ ಗುಣವಂತನೂ ಆದ ಬ್ರಾಹ್ಮಣನೊಬ್ಬನಿದ್ದನು. ಅವನು ಯಜ್ಞೇಶ್ವರನನ್ನು ಕುರಿತು ತಪಸ್ಸು ಮಾಡಿ ಅವನಿಂದ ಕತ್ತಿಯನ್ನು ಪಡೆದುಕೊಂಡಿದ್ದ ವೀರನು. ಅವನು ಭವ್ಯಾಕಾರನಾದ ರಾಜನನ್ನು ನೋಡಿ ಇವನಾರೋ ವೇಷಧಾರಿಯಾದಿ ದೇವತೆ ಇರಬೇಕೆಂದುಕೊಂಡನು, ಅವನನ್ನು ಒಳಗೆ ಕರೆತಂದು ಊಟ ಉಪಚಾರಾದಿಗಳಿಂದ ಸತ್ಕರಿಸಿ, ಹಾಸಿಗೆ ಹಾಸಿಕೊಟ್ಟು, ತಾನು ಕತ್ತಿ ಹಿಡಿದು ರಾತ್ರಿಯೆಲ್ಲಾ ಬಾಗಿಲಲ್ಲಿ ಕಾವಲಿದ್ದನು. ಬೆಳಿಗ್ಗೆ ಅವನ ಕುದುರೆಗೆ ತಡಿ ಹಾಕಿ ಸಿದ್ಧಪಡಿಸಿದನು. ರಾಜನು ಅವನ ನಿರೂಪ ತೆಗೆದುಕೊಂಡು ಉಜ್ಜಯಿನಿಯನ್ನು ಪ್ರವೇಶಿಸಿದನು. ಮಂತ್ರಿಗಳಿಗೂ, ರಾಣಿಗೂ ಅವನನ್ನು ಕಂಡು ಸಂತೋಷವಾಯಿತು. ಮರುದಿವಸ ಅವನು ಮಠಕ್ಕೆ ಹೇಳಿ ಕಳುಹಿಸಿ, ದೇವಶರ್ಮನನ್ನು ಕರೆಸಿ, ಎಲ್ಲರಿಗೂ ರಾತ್ರಿ ನಡೆದ ವೃತ್ತಾಂತವನ್ನು ತಿಳಿಸಿ ಅವನಿಗೆ ಒಂದು ಸಾವಿರ ಗ್ರಾಮಗಳನ್ನು ಉಂಬಳಿಕೊಟ್ಟನು, ಅಲ್ಲದೆ ಅವನಿಗೆ ಛತ್ರವಾಹನಾದಿಗಳನ್ನು ಕೊಟ್ಟು ಅವನನ್ನು ತನ್ನ ಪುರೋಹಿತನನ್ನಾಗಿ ಮಾಡಿಕೊಂಡನು. ಅವನು ಆ ಗ್ರಾಮಗಳನ್ನು ತನ್ನ ಮಠದ ಇತರ ಬ್ರಾಹ್ಮಣರಿಗೆ ಹಂಚಿಕೊಟ್ಟನು. ಆದರೆ ಅವರು ಧನಮದದಿಂದ ಉದ್ದತರಾಗಿ ಗ್ರಾಮಸ್ಥರಿಗೆ ಹಿಂಸೆ ಕೊಡುತ್ತ ಜಗಳಗಂಟರಾಗಿದ್ದರು.

ಒಂದು ದಿನ ಚಕ್ರಧರನೆಂಬ ಬ್ರಾಹ್ಮಣನು ಅವರನ್ನು ನೋಡಿ, ನಿಷ್ಠುರವಾಗಿ “ಅಯ್ಯೋ ನೀಚರಿರಾ! ತಿರುಕರಾಗಿದ್ದ ನಿಮಗೆ ಸಂಪತ್ತು ಬಂದದ್ದು ಈ ಗ್ರಾಮಗಳಿಗೆ ಮೃತ್ಯು ಬಂದಾಂತಾಯಿತು. ಇದೆಲ್ಲ ಬಹುನಾಯಕತ್ವದ ಫಲ. ಆದುದರಿಂದ ನಿಮ್ಮಲ್ಲಿ ಒಬ್ಬನನ್ನು ನಾಯಕನನ್ನಾಗಿ ಮಾಡಿಕೊಳ್ಳಿರಿ” ಎಂದನು. ಆಗ ಎಲ್ಲರೂ ” ನಾನು ನಾಯಕನಾಗುತ್ತೇನೆ, ನಾನು ನಾಯಕನಾಗುತ್ತೇನೆ” ಎಂದು ಮುಂದೆ ಬಂದರು. ಅವನು, “ನಿಮ್ಮಲ್ಲಿ ಹೀಗೆ ಸ್ಪರ್ಧೆ ಇರುವುದಾರೆ ಒಂದು ಕರಾರು ಮಾಡಿಕೊಳ್ಳಿರಿ. ಈ ಊರಿನ ಸ್ಮಶಾಸನದಲ್ಲಿ ಮೂರುಜನ ಕಳ್ಳರನ್ನು ಇಂದು ಶೂಲಕ್ಕೇರಿಸಿದ್ದಾರೆ. ಯಾರು ರಾತ್ರಿ ಹೋಗಿ ಅವರ ಮೂಗುಗಳನ್ನು ಕೊಯ್ದು ತರುತ್ತಾರೊ ಅವರೇ ನಿಮ್ಮ ನಾಯಕನಾಗಲಿ” ಎಂದನು. ಎಲ್ಲರೂ ಒಪ್ಪಿದರು. ಆದರೆ ಯಾರಿಗೂ ಧೈರ್ಯವಿರಲಿಲ್ಲ. ದೇವಶರ್ಮನೊಬ್ಬನು ಆಗಲೆಂದು ಕತ್ತಿ ಹಿಡಿದು ಹೋದನು.

ಅಷ್ಟು ಹೊತ್ತಿಗೆ ಕಳ್ಳರ ಹೆಣಗಳಲ್ಲಿ ಬೇತಾಳಗಳು ಸೇರಿಕೊಂಡು ಅವನನ್ನು ಗುದ್ದುವುದಕ್ಕೆ ಬಂದುವು. ಅವನು ಹೆದರದೆ ಅವರ ಮೂಗುಗಳನ್ನು ಕೊಯ್ದು ಬಟ್ಟೆಯ ಸೆರಗಿನಲ್ಲಿ ಕಟ್ಟಿಕೊಂಡು ಬಂದನು. ದಾರಿಯಲ್ಲಿ ಒಬ್ಬ ಪರಿವ್ರಾಜಕನು ಒಂದು ಹೆಣದ ಮೇಲೆ ಕುಳಿತು ಜಪ ಮಾಡುತ್ತಿದ್ದನು. ಅವನೇನು ಮಾಡುತ್ತಾನೆ ನೋಡೋಣವೆಂದು ದೇವಶರ್ಮನು ಕುತೂಹಲದಿಂದ ಅವನ ಹಿಂದೆ ಮರೆಯಾಗಿ ನಿಂತು ನೋಡುತ್ತಿದ್ದನು. ಒಂದು ಕ್ಷಣವಾದ ಮೇಲೆ ಹೆಣದ ಬಾಯಿಂದ ಭುಸ್ಸೆಂದು ಜ್ವಾಲೆಯುಂಟಾಯಿತು. ಅದರ ಹೊಕ್ಕಳಿಂದ ಸಾಸುವೆ ಕಾಳುಗಳು ಬಂದವು. ಆ ಸಾಸುವೆ ಕಾಳುಗಳನ್ನು ತೆಗೆದುಕೊಂಡು ಅವನು ಶವವನ್ನು ತಟ್ಟಲು, ಎದ್ದು ನಿಂತಿತು. ಆದರ ಮೇಲೆ ಹತ್ತಿಕೊಂಡು ಹೊರಟು ಅವನು ಸ್ವಲ್ಪ ದೂರದಲ್ಲಿರುವ ಕಾತ್ಯಾಯನಿಯ ದೇವಾಲಯಕ್ಕೆ ಹೋದನು. ದೇವಶರ್ಮನೂ ಅವನನ್ನು ಹಿಂಬಾಲಿಸಿ, ಮರೆಯಲ್ಲಿ ನಿಂತು ಗುಡಿಯಲ್ಲಿ ಏನು ನಡೆಯುವುದು ಎಂಬುದನ್ನು ನೋಡುತ್ತಿದ್ದನು. ಪರಿವ್ರಾಜಕನು ದೇವಿಯನ್ನು ಪೂಜಿಸಿ ವರ ಬೇಡಿದನು. ದೇವಿಯು “ಆದಿತ್ಯಸೇನ ರಾಜನ ಮಗಳನ್ನು ತಂದು ನನಗೆ ಬಲಿ ಕೊಟ್ಟರೆ, ನಿನ್ನ ಇಚ್ಛೆಯನ್ನು ನೆರವೇರಿಸುತ್ತೇನೆ” ಎಂದಳು. ಕೂಡಲೇ ಹೊರಹೊರಟು ಅವನು ಶವವನ್ನು ತಟ್ಟಿ ಎಬ್ಬಿಸಿ ಅದರ ಮೇಲೆ ಆ ಹುಡುಗಿಯನ್ನು ತರುವುದಕ್ಕೆಂದು ಆಕಾಶಮಾರ್ಗದಲ್ಲಿ ಹೊರಟನು. “ನಾನಿರುವಾಗ ರಾಜಪುತ್ರಿಯನ್ನು ಕೊಲ್ಲಿಸಲೇ? ಆ ನೀಚನು ಬರುವವರೆಗೆ ಇಲ್ಲಿಯೇ ಇರುತ್ತೇನೆ!” ಎಂದು ದೇವಶರ್ಮನು ಅಲಿಯೇ ಮರೆಸಿಕೊಂಡು ನಿಂತನು. ಪರಿವ್ರಾಜಕನು ಕಿಟಕಿಯ ಮೂಲಕ ಅಂತಃಪುರವನ್ನು ಹೊಕ್ಕು ಮಲಗಿದ್ದ ರಾಜಪುತ್ರಿಯನ್ನು ಹೊತ್ತುಕೊಂಡು ಬಂದಿಳಿದನು. ಅವಳು “ಅಪ್ಪಾ! ಅಮ್ಮಾ!” ಎಂದು ಆಳುತ್ತಿದ್ದಳು. ಬೇತಾಳವನ್ನು ಹೊರಗೆ ಬಿಟ್ಟು, ಅವಳನ್ನು ಗರ್ಭಗುಡಿಗೆ ಎಳೆದುಕೊಂಡು ಹೋಗಿ ಕೊಲ್ಲಬೇಕೆಂದಿರುವಷ್ಟರಲ್ಲಿ ದೇವಶರ್ಮನು ಒಳಕ್ಕೆ ನುಗ್ಗಿ ಪರಿವ್ರಾಜಕನ ಜುಟ್ಟು ಹಿಡಿದು, ಅವನ ತಲೆಯನ್ನು ಕಡಿದು ಹಾಕಿದನು. ಅನಂತರ ರಾಜಪುತ್ರಿಯನ್ನು ಸಮಾಧಾನಮಾಡಿ, ಅವಳನ್ನು ಮನೆಗೆ ತಲುಪಿಸುವುದು ಹೇಗೆ ಎಂದು ಯೋಚಿಸುತ್ತಿರಲು. “ಆಯ್ಯಾ ದೇವಶರ್ಮ, ನೀನು ಕೊಂದಪರಿವ್ರಾಜಕನಿಗೆ ಬೇತಾಳವೂ, ಸಾಸುವವೆಯೂ ಸಿದ್ಧಿಸಿದ್ಧುವು. ಅವನ ಸೆರಗಿನಲ್ಲಿರುವ ಸಾಸುವೆಯನ್ನು ತೆಗೆದುಕೋ: ಆದರ ಸಾಹಾಯದಿಂದ ಇಂದಿನ ರಾತ್ರಿ ನೀನು ಅಂತರಿಕ್ಷದಲ್ಲಿ ಹೋಗಬಹುದು” ಎಂದು ಆಕಾಶವಾಣಿ ಆಯಿತು.

ಅದರಂತೆ ಅವನು ರಾಜಪುತ್ರಿಯೊಡನೆ ದೇವಸ್ಥಾನದಿಂದ ಆಕಾಶಮಾರ್ಗವಾಗಿ ಹೊರಟು ಅಂತಃಪುರದಲ್ಲಿ ಬಿಟ್ಟು, ಸಮಾಧಾನ ಹೇಳಿ “ನಾನು ಇನ್ನು ಹೊರಡುತ್ತೇನೆ; ನಾಳೆ ಬೆಳಿಗ್ಗೆ ಆಕಾಶ ಮಾರ್ಗದಲ್ಲಿ ಹೋಗುವುದಕ್ಕಾಗುವುದಿಲ್ಲ. ಎಂದನು. ಅವಳು ಹೆದರಿ, ನೀನು ಹೊರಟು ಹೋದರೆ, ಭಟಯಿಂದ ನನ್ನ ಪ್ರಾಣವೂ ಹೊರಟುಹೋಗುತ್ತದೆ!” ಎಂದಳು. ಅದನ್ನು ಕೇಳಿ ಅವನು “ಅದದ್ದಾಗಲಿ, ನಾನು ಈಗ ಹೋಗುವುದಿಲ್ಲ. ಇವಳು ಪ್ರಾಣಬಿಟ್ಟರೆ ನಾನು ರಾಜನಿಗೆ ಏನು ಉಪಚಾರ ಮಾಡಿದಂತಾಯಿತು?” ಎಂದುಕೊಂಡು ಅವಳ ಅಂತಃಪುರದಲ್ಲಿಯೇ ಇದ್ದು ಬಿಟ್ಟನು. ಅವನಿಗೆ ಆಯಾಸದಿಂದ ನಿದ್ರೆ ಬಂತು. ಅವಳಿಗೆ ಹೆದರಿಕೆಯಿಂದ ನಿದ್ರೆಯೇ ಬರಲಿಲ್ಲ. ಬೆಳಗಾದರೂ ಪಾಪ! ಒಂದು ಘಳಿಗೆ ವಿಶ್ರಮಿಸಿಕೊಳ್ಳಲಿ” ಎಂದು ಪ್ರೇಮದಿಂದ ಅವನನ್ನು ಎಬ್ಬಿಸಲಿಲ್ಲ. ಅಂತಃಪುರದ ಪರಿಚಾರಕರು ಅವನನ್ನು ನೋಡಿ ರಾಜನಿಗೆ ತಿಳಿಸಿದನು.

ರಾಜನು ದೇವಶರ್ಮನನ್ನು ಕರೆಸಿ ವಿಚಾರ ಮಾಡಲು, ಅವನು ಆಮೂಲಾಗ್ರವಾಗಿ ತನ್ನ ಕಥೆಯನ್ನೆಲ್ಲ ಹೇಳಿ, ತನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಕಳ್ಳರ ಮೂಗುಗಳನ್ನೂ, ಪರಿವ್ರಾಜಕನ ಸಾಸುವೆ ಕಾಳುಗಳನ್ನು ತೋರಿಸಿದನು. ರಾಜನು ಮಠದ ಬ್ರಾಹ್ಮಣರನ್ನೂ, ಚಕ್ರಧರನನ್ನೂ ಕರೆಸಿ ಕೇಳಿ ಮೂಗು ಹರಿದ ಕಳ್ಳರ ರುಂಡಗಳನ್ನು, ಪರಿವ್ರಾಜಕನ ಮುಂಡವನ್ನೂ ನೋಡಿದ ಮೇಲೆ ಅವನಿಗೆ ನಂಬಿಕೆಯುಂಟಾಯಿತು. ಅನಂತರ ತನ್ನ ಮಗಳ ಪ್ರಾಣವನ್ನು ಉಳಿಸಿದ್ದಕ್ಕಾಗಿ ಸಂತೋಷಟ್ಟು ಅವಳನ್ನು ದೇವಶರ್ಮನಿಗೆ ಮದುವೆ ಮಾಡಿಕೊಟ್ಟನು.

 – ಎ.ಆರ್.ಕೃಷ್ಣಶಾಸ್ತ್ರಿ
ಕೃಪೆ : ೧೯೬೨ರ ಕನ್ನಡ ಏಳನೆಯ ಪುಸ್ತಕದಿಂದ ಆರಿಸಿದೆ

. ಕೊಟ್ಟಿರುವ ಪದಗಳನ್ನು ಓದಿ Reading practice

ಯಜ್ಞೇಶ್ವರ, ತಪಸ್ಸು, ತಡಿ, ಮಠ, ತ್ರಿಭುವನ, ಧ್ಯಾನ, ನಿರೂಪ, ಭಕ್ತಿ, ಪರಿವ್ರಾಜಕ, ಮುಕ್ತಿ

Drills

I Repetitions drills

Model : ಅಧ್ಯಾಪಕ : ಮಂತ್ರಿಗಳು ಊರು ಬಾಗಿಲುಗಳನ್ನು ಭದ್ರಮಾಡಿಕೊಂಡರು
ವಿದ್ಯಾರ್ಥಿ : ಮಂತ್ರಿಗಳು ಊರು ಬಾಗಿಲುಗಳನ್ನು ಭದ್ರಮಾಡಿಕೊಂಡರು

ಅಧ್ಯಾಪಕ : ಯಾರು ರಾತ್ರಿ ಹೀಗಿ ಅವರ ಮೂಗುಗಳನ್ನು ಕೊಯ್ದು ತರುತ್ತಾರೋ ಅವರೇ ನಿಮ್ಮ ನಾಯಕನಾಗಲಿ ಎಂದನು.
ವಿದ್ಯಾರ್ಥಿ :
ಅಧ್ಯಾಪಕ : ಪರಿವ್ರಾಜಕನು ದೇವಿಯನ್ನು ಪೂಜಿಸಿ ವರ ಬೇಡಿದನು.
ವಿದ್ಯಾರ್ಥಿ :

II Substitution Drill – Single subtitution

Model : ಪರಿವ್ರಾಜಕನು ದೇವಿಯನ್ನು ಪೂಜಿಸಿ ವರ ನೀಡಿದನು.
ಪರಿವ್ರಾಜಕನು ದೇವಿಯನ್ನು ಪೂಜಿಸಿ ವರ ನೀಡಿದನು.

೧. ಪರಿವ್ರಾಜಕನು ಕಿಟಕಿಯ ಮೂಲಕ ಅಂತಃಪುರವನ್ನು ಹೊಕ್ಕು ಮಲಗಿದ್ದ ರಾಜಪುತ್ರಿಯನ್ನು ಹೊತ್ತುಕೊಂಡು ಬಂದನು.
…………………….. (ಬಂದಿಳಿದನು)
೨. ಮಂತ್ರಿಗಳು ಊರು ಬಾಗಿಲುಗಳನ್ನು ಮುಚ್ಚಿಕೊಂಡರು
…………………….. (ಭದ್ರಮಾಡಿಕೊಂಡರು)
೩. ಅವನು ಆ ಗ್ರಾಮಗಳನ್ನು ತನ್ನ ಮಠದ ಇತರ ಬ್ರಾಹ್ಮಣರಿಗೂ ವಿಭಾಗಿಸಿದನು.
…………………….. (ಹಂಚಿಕೊಟ್ಟನು)

III Transformation drill

Model : ಹಿಂದೆ ಉಜ್ಜಯನಿ ನಗರದಲ್ಲಿ ಆದಿತ್ಯಸೇನನೆಂಬ ರಾಜನಿದ್ದನು(ಯಾವ)
ಹಿಂದೆ ಉಜ್ಜಯಿನಿ ನಗರದಲ್ಲಿ ಯಾವ ರಾಜನಿದ್ದನು.

೧. ಇದೆಲ್ಲ ಬಹುನಾಯಕತ್ವದ ಫಲ
…………………….. (ಯಾವುದರ)
೨. ಈ ಊರಿನ ಸ್ಮಶಾನದಲ್ಲಿ ಮೂರು ಜನ ಕಳ್ಳರನ್ನು ಇಂದು ಶೂಲಕ್ಕೇರಿಸಿದೆ.
…………………….. (ಎಷ್ಟು ಜನರನ್ನು)
೩. ಅವನಿಗೆ ಆಯಾಸದಿಂದ ನಿದ್ರೆಬಂತು.
…………………….. (ಏನು)

IV Response drill

೧. ಹಿಂದೆ ಉಜ್ಜಯಿನಿ ನಗರದಲ್ಲಿ ಯಾವ ರಾಜನಿದ್ದನು?
……………………..
೨. ಇದೆಲ್ಲ ಯಾವುದರ ಫಲ?
……………………..
೩. ಈ ಊರಿನ ಸ್ಮಶಾಸನದಲ್ಲಿ ಎಷ್ಟು ಜನರನ್ನು ಇಂದು ಶೂಲಕ್ಕೇರಿಸಿದ್ದಾರೆ?
……………………..
೪. ಅವನಿಗೆ ಆಯಾಸದಿಂದ ಏನು ಬಂತು?

EXERCISES

1. Fill in the following blanks using the English

Model :

ಕಿ….ಕಿ (window) ಕಿಟಕಿ  
೧. ಅಯಾ……. (tiredness) ……….
೨. ಸಾ…….ವೆ (mustard) ……….
೩. …….ವ (dead body) ……….
೪. ಉಪಕಾ……. (help) ……….
೫. ಮ…….ವೆ (marrige) ……….

2. Choose the appropriate letter from the pairs given and fill up the blanks according to the model

Model :

ದೇವ…….ರ್ಮ – ಶ ದೇವಶರ್ಮ
೧. ವಿಂ……. ದ್ಯಾ – ಧ್ಯಾ ……….
೨. ಸ್ವ…….ಪಿ ರು – ರೂ ……….
೩. …….ಚ್ಛೆ ಈ – ಇ ……….
೪. ಆ…….ತ್ಯ ದಿ – ದಿ ……….
೫. …….ತ್ತಿ ಖ – ಕ ……….

3. Combine the following words according to the model

Model :

ಸಾವಿರ + ಆರು  ಸಾವಿರಾರು
೧. ವಿಂಧ್ಯ+ಆಟವಿಗೆ ……….
೨. ನೂರು+ಆರು ……….
೩. ಯಾಜ್ಞ+ಈಶ್ವರ ……….
೪. ವೃತ್ತ+ ಅಂತ ……….
೫. ನಂಬಿಕೆ+ ಉಂಟು ……….

4. Split the folling sentences into two according to the model

Model : ಸಾವಿರಾರು ಸವಾರರು ಹಿಂಬಾಲಿಸಿ ಹೋದರೂ ಅವನು ಸಿಕ್ಕಲಿಲ್ಲ.
ಸಾವಿರಾರು ಸವಾರರು ಹಿಂಬಾಲಿಸಿದರು. ಆದರೂ ಅವನು ಸಿಕ್ಕಲಿಲ್ಲ

೧. ಸಂಜೆಯಾಯಿತೆಂದು ಊರ ಬಾಗಿಲುಗಳನ್ನು ಹಾಕಿ ಬಿಟ್ಟಿದ್ದರಿಂದ ಅವನು ಊರ ಹೊರಗೆ ಸ್ಮಶಾನದಲ್ಲಿ ಒಂದು ಮಠಕ್ಕೆ ಹೋದನು.
೨. ಅವನು ಯಜ್ಞೇಶ್ವರನನ್ನು ಕುರಿತು ತಪಸ್ಸು ಮಾಡಿ ಅವನಿಂದ ಕತ್ತಿಯನ್ನು ಪಡೆದುಕೊಂಡಿದ್ದ ವೀರನು.
೩. ಅವನು ಹೆದರದೆ ಅವರ ಮೂಗುಗಳನ್ನು ಕೊಯ್ದು ಬಟ್ಟೆಯ ಸೆರಗಿನಲ್ಲಿ ಕಟ್ಟಿಕೊಂಡು ಬಂದನು.

5. Fill up the blanks using the words given below in the bracket

Model : ಮಂತ್ರಿಗಳಿಗೂ, ರಾಣಿಗೂ ಅವನನ್ನು ಕಂಡು……….ಆಯಿತು. (ದುಃಖ, ಕೋಪ, ಸಂತೋಷ)
ಮಂತ್ರಿಗಳಿಗೂ ರಾಣಿಗೂ ಅವನನ್ನು ಕಂಡು ಸಂತೋಷವಾಯಿತು.

೧. ಸಾಮಂತರಾಜನ ಮೇಲೆ ……. (ಆಕ್ರಮಣ ಮಾಡಿದನು, ದಂಡೆತ್ತಿಹೋದನು, ರೇಗಿ ಹೋದನು)
೨. ರಾಜನನ್ನು ನೋಡಿ ಇವನಾರೋ…….ದೇವತೆಯಿರ ಬೇಕೆಂದುಕೊಂಡನು. (ಕಪಟ, ವೇಷಧಾರಿಯಾದ, ಮೋಸದ)
೩. ಅಯ್ಯಾ, ದೇವಶರ್ಮ, ನೀನು ಕೊಂದ ಪರಿವ್ರಾಜಕನಿಗೆ ಬೇತಾಳವೂ, ಸಾಸುವೆಯೂ ………..(ಸಾಧಿಸಿದ್ದವು, ಸಿದ್ಧಿಸಿದ್ದುವು, ದೊರಕಿದ್ದವು)

6. Make use of the follwing words in your own sentences

ಪ್ರತಿಫಲ, ವೇಷಧಾರಿ, ಹಿಂಬಾಲಿಸು, ಉಪಕಾರ, ವಿಶ್ರಮಿಸು

7. write answers to the follwing question

೧. ಆದಿತ್ಯ ಸೇನನು ಎಲ್ಲಿಯ ರಾಜನು? ಆತನಿಗೆ ಯಾರೊಡನೆ ಎಲ್ಲಿ ಮದುವೆಯಾಯಿತು?
೨. ರಾಜನಿಗೆ ದೇವಶರ್ಮನ ಬೇಟಿ ಎಲ್ಲಿ ಆಯಿತು?
೩. ದೇವಶರ್ಮನು ರಾಜನು ಒಂದು ಸಾವಿರ ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟುದೇಕೆ? ಅದರ ಪರಿಣಾಮವೇನಾಯಿತು?
೪. ದೇವಶರ್ಮನು ರಾಜನ ಮಗಳ ಪ್ರಾಣವನ್ನು ಹೇಗೆ ಉಳಿಸಿದನು ಅದಕ್ಕಾಗಿ ಆತನು ಯಾವ ಪ್ರತಿಫಲವನ್ನು ಪಡೆದನು?