ಒಂದು ಭಾಷೆಯನ್ನು ಇವತ್ತಿನ ಸಂದರ್ಭದಲ್ಲಿ ಪಠ್ಯದ ಮೂಲಕ ಕಲಿಯಬೇಕೆ? ಅಂತಹ ಒತ್ತಡ ಆ ಭಾಷೆಗಿದೆ ಎಂದರೆ ನಿಜಕ್ಕೂ ಚಿಂತಿಸುವ ವಿಚಾರವೆ ಸರಿ. ಈ ಪಠ್ಯವನ್ನು ಅನೌಪಚಾರಿಕ ಸಂದರ್ಭದಲ್ಲಿ ಬಳಕೆ ಮಾಡಬಹುದು. ಕಲಿಕಾರ್ಥಿಗಳ ತೆಂದೆತಾಯಿಗಳಿಗೆ ಕನ್ನಡ ಗೊತ್ತಿದ್ದರೆ ಅಂತಹ ಮಕ್ಕಳು ಈ ಪಠ್ಯವನ್ನು ಸುಲಭವಾಗಿ ಹೆಚ್ಚು ಪರಿಣಾಮಕಾರಿಯಾಗಿ ಕಲಿಯಬಹುದು.

ಔಪಚಾರಿಕ ಮತ್ತು ಅನೌಪಚಾರಿಕ ನೆಲೆಯಲ್ಲಿ ಇಂಗ್ಲಿಷ್‌ ಕಲಿಯುತ್ತಿರುವುದರಿಂದ ಅದೇ ವಿಧಾನದಲ್ಲಿ ಕನ್ನಡವನ್ನು ಕಲಿಯಬಹುದು. ಇಂಗ್ಲಿಷ್‌ ಮೂಲಕ ಕನ್ನಡವನ್ನು ಕಲಿಯುವಾಗ ಸಹಜವಾಗಿಯೇ ಇಂಗ್ಲಿಷ್‌ನಲ್ಲಿ ನೀವು ಹೆಚ್ಚು ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಸಾಮಾರ್ಥ್ಯವನ್ನು ಗಳಿಸುತ್ತೀರಿ. ಒಂದು ಭಾಷೆಯನ್ನು ಕಲಿಯುವಾಗ ಆ ಭಾಷೆಯ ಚೆಂದವನ್ನು ಅನುಭವಿಸಬೇಕು. ಹಾಗೆ ಅನುಭವಿಸುವುದಕ್ಕೆ ಕೆಲವು ಪದ್ಯ ಮತ್ತು ಗದ್ಯ ಪಾಠಗಳನ್ನು ನೀಡಲಾಗಿದೆ. ಅವುಗಳು ಮಕ್ಕಳ ಕೌಶಲಗಳನ್ನು ಅಭಿವೃದ್ಧಿಪಡಿಸುತ್ತದೆ. ಅಂತಹ ಪಾಠಗಳನ್ನು ಆಯ್ಕೆ ಮಾಡಲಾಗಿದೆ. ಪಠ್ಯವನ್ನು ಸಾಕಷ್ಟು ವೈವಿಧ್ಯತೆಯಿಂದ ಮೂಡಿ ಬರುವಂತೆ ನೋಡಿಕೊಂಡಿದೆ.

ಹೆಚ್ಚುಚ್ಚು ಬೇರೆ ಬೇರೆ ಮನೆ ಮಾತಿನವರು ಕನ್ನಡ ಕಲಿಯುವುದಕ್ಕಿಂತ ಕನ್ನಡ ಮನೆ ಮಾತುಳ್ಳವರು ಬೇರೆ ಬೇರೆ ಭಾಷೆಗಳನ್ನು ಕಲಿಯುವ ಒತ್ತಡವಿದೆ ಎಂಬ ಅಭಿಪ್ರಾಯಗಳು ಇವೆ. ಇಂತಹ ಅಭಿಪ್ರಾಯಗಳನ್ನು ಮುಂದು ಮಾಡಿ ಈ ಮಾದರಿ ಕಲಿಕೆ ಪಠ್ಯಗಳು ರಚಿತವಾಗಿವೆ. ಜಗತ್ತಿನ ಅಣ್ಣನೆಂದು ಕರೆಯುತ್ತಿರುವ ಅಮೇರಿಕ ದೇಶದ ಕಡೆ ಎಲ್ಲರ ಮುಖವಿದೆ. ಆದರೆ ಅಧ್ಯಕ್ಷರಾದ ಬರಾಕ್‌ ಒಬಾಮಾ ಅವರಿಗೆ ಬೊಂಗಳೂರು ಶಿಕ್ಷಣ ಮಾದರಿಯಂತೆ. ಈ ಅಭಿಪ್ರಾಯವನ್ನು ಗಮನಿಸಿದಾಗ ಕನ್ನಡಕ್ಕೊಂದು ಜಾಗತಿಕ ನೆಲೆಯಿದೆ. ಎಂದು ಅರ್ಥವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಸಾಂಪ್ರಾದಾಯಕ ಶಿಕ್ಷಣದಲ್ಲಿ ಬದಲಾವಣೆ ಆಗುತ್ತಿದೆ. ಕಾರಣ ಕಲಿಕಾರ್ಥಿ ಅನೇಕ ಕಾರಣಗಳಿಂದ ನಾನಾ ಒತ್ತಡಗಳಿಗೆ ಸಿಲುಕಿದ್ದಾನೆ. ಇರುವ ಸಮಯವೆಲ್ಲವನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡು ಸಾಂಪ್ರಾದಾಯಕ ಓದಿನ ಕಡೆಗೆ ಒಲವು ಕಡಿಮೆ ಮಾಡಿದ್ದಾನೆ. ತನ್ನ ಬಿಡುವಿನ ವೇಳೆಯಲ್ಲಿ ಸ್ವಭಾಷಾ ಕಲಿಕಾ ಪಠ್ಯಗಳಿಗೆ ಮೊರೆ ಹೋಗುತ್ತಿದ್ದಾನೆ. ಹಾಗಾಗಿ ಶಿಕ್ಷಣದಲ್ಲಿ ಸ್ವಭಾಷಾ ಕಲಿಕೆ ಮತ್ತು ಬೋಧನೆ ಮಹತ್ವ ಪಡೆಯುತ್ತಿದೆ. ಸಾಮಾನ್ಯವಾಗಿ ಇಂತಹ ಪಠ್ಯಗಳಿಗೆ ಬೋಧಕರ ಅವಶ್ಯಕತೆ ಇಲ್ಲವೆನಿಸುತ್ತದೆ. ಕಲಿಕೆ ಅನುಕೂಲವಾಗುವಂತೆ ಭಾಷೆಯನ್ನು ಸರಳೆತೆಯಿಂದ ಸಂಕೀರ್ಣತೆಯೆಡೆಗೆ ವಿಕಸನಗೊಳಿಸಿದೆ. ಈ ಪಠ್ಯದಲ್ಲಿ ಕಲಿಕಾರ್ಥಿಗಳೇ ತಮ್ಮ ಭಾಷಾ ಕಲಿಕೆಯ ಸಾಮರ್ಥ್ಯಗಳನ್ನು ಪುನರ್‌ ಪರಿಶೀಲನೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಎರಡನೆಯ ಭಾಷೆಯನ್ನು ಅವರವರ ಮನೆ ಮಾತಿನ ಮೂಲಕವೇ ಕಲಿಯುವುದು ಸಹಜ. ಪ್ರಸ್ತುತ ಪಠ್ಯವನ್ನು ಇಂಗ್ಲಿಷ್‌ ಜ್ಞಾನವುಳ್ಳ ಯಾವುದೇ ಮನೆಮಾತುಳ್ಳ ವ್ಯಕ್ತಿ ಕಲಿಯಬಹುದು.

ಕನ್ನಡ ಓದಿ – ಬರೆ ಪಠ್ಯದಲ್ಲಿ ಬಳಸಿಕೊಂಡಿರುವುದು ಬರೆಹದ ಕನ್ನಡವೇ ಹೊರತು ಪ್ರಾದೇಶಿಕ ಕನ್ನಡವನ್ನಲ್ಲ. ಪಠ್ಯ ಇಂಗ್ಲಿಷ್‌ ಜ್ಞಾನವುಳ್ಳ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಒಂದೇ ಪ್ರದೇಶದಿಂದ ವಲಸೆ ಹೋದವರಲ್ಲ. ವಿವಿಧ ಪ್ರಾದೇಶಿಕ ನೆಲೆಯವರು. ಅಂತಹವರಿಗೆ ಬೋಧನೆಯನ್ನು ಬರೆಹದ ಕನ್ನಡದಲ್ಲೇ ಮಾಡಬೇಕು. ಕರ್ನಾಟಕದ ಗಡಿ ಭಾಗಗಳಿಂದ ವಲಸೆ ಹೋದವರಿಗೆ ದ್ವಿಭಾಷಿಕ ಮತ್ತು ಬಹುಭಾಷಿಕ ರೂಪಗಳ ಸಮಸ್ಯೆ ಎದುರಾಗುತ್ತದೆ. ಈ ಉದ್ದೇಶದಿಂದ ಎಲ್ಲರಿಗೂ ಅರ್ಥವಾಗುವ ಎಲ್ಲರ ಕನ್ನಡದಲ್ಲಿ ಪಠ್ಯವನ್ನು ರೂಪಿಸಿದೆ. ಎರಡನೆಯ ಭಾಷೆ ಕಲಿಯುವವರಿಗೆ ಆಯಾ ಪ್ರದೇಶದ ದೈನಂದಿನ ಸಂಹವನದಲ್ಲಿ ಬಳಕೆಗೊಳ್ಳುವ ಪದಗಳ ಮೂಲಕ ಭಾಷೆ ಕಲಿಸುವುದು ಸೂಕ್ತ. ಅಂತಹ ವ್ಯವಸ್ಥೆ ಇಂಗ್ಲಿಷ್‌ ಬಲ್ಲ ವಿದೇಶಿ ಕನ್ನಡಿಗ ಮಕ್ಕಳಿಗೆ ಇಲ್ಲದೆ ಇರುವುದರಿಂದ ಭಾಷೆ ಕಲಿಯುವ ವಿದ್ಯಾರ್ಥಿಗಳ ಮನೆಮಾತು ಕನ್ನಡವಾದರೂ ಅವರಿಗೆ ಕನ್ನಡ ಭಾಷೆಯ ಓದು, ಬರೆಹದ ಪರಿಚಯವಿರುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಅವರ ಶಿಕ್ಷಣ ಮಾಧ್ಯಮ ಹಿಂದಿ ಅಥವಾ ಇಂಗ್ಲಿಷ್‌ ಆಗಿರುತ್ತದೆ. ಈಗಾಗಲೇ ಅಂತಹವರಿಗೆ ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯ ಲಿಪಿ ಗೊತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮನೆಮಾತಿನ ಲಿಪಿಯನ್ನು ಕಲಿಯುವುದು ಅಷ್ಟೇನೂ ಕಷ್ಟವೆನಿಸದು. ಕನ್ನಡ ಅವರಿಗೆ ಎರಡನೆಯ ನುಡಿ ಆದ್ದರಿಂದ ಮನೆ ಪರಿಸರದಲ್ಲಿ ಕನ್ನಡ ಭಾಷೆಯನ್ನು ಇದರ ಮೂಲಕ ಕಲಿಯಬಹುದು.

ಒಂದು ಭಾಷೆಯನ್ನು ಕಲಿಸಲು ಮತ್ತು ಕಲಿಯಲು ದಿನ ಕೇಳುವ ಮತ್ತು ಬಳಸುವ ಚಿರಪರಿಚಿತ ಪದಗಳು ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಪಠ್ಯದಲ್ಲಿ ಬಳಕೆಯಾಗಿರುವ ಪದ ಸಂಪತ್ತು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದು. ಪಠ್ಯ ಯಾರಿಗೆ ಏಕೆ? ಹೇಗೆ? ಮತ್ತು ಎಷ್ಟು ಕಲಿಯಬೇಕು? ಎಂಬುದು ಮುಖ್ಯ ಅಂಶ. ಕನ್ನಡ ಓದಿ ಬರೆ ಎಂದು ಹೇಳುವುದು ಯಾರಿಗೆ ಎಂದರೆ ಇಂಗ್ಲಿಷ್‌ ಬಲ್ಲ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಇಂತಹ ಮಕ್ಕಳು ಕನ್ನಡ ಸಂಸ್ಕೃತಿಗೆ ಪರಕೀಯರಾಗುತ್ತಿರುವರು. ಈ ಎಲ್ಲ ಅಂಶಗಳನ್ನು ಗಮನಿಸಿ ಕನ್ನಡ ಭಾಷಾವೈಜ್ಞಾನಿಕ ನೆಲೆಯಿಂದ ವಿವಿಧ ಬೋಧನಾ ತಂತ್ರಗಳೊಂದಿಗೆ ಆ ಕೊರತೆಯನ್ನು ತುಂಬಿಕೊಡುವ ಪ್ರಯತ್ನ ಮಾಡಿದೆ. ಇದರ ಸಹಾಯದಿಂದ ಇಂಗ್ಲಿಷ್‌ ಬಲ್ಲ ವಿದೇಶಿ ಕನ್ನಡಿಗರ ಮಕ್ಕಳು ಮನೆ ಅವರಣದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಅಂದರೆ ಹತ್ತು ತಿಂಗಳು ಕನ್ನಡ ಭಾಷೆಯನ್ನು ಕಲಿಯಬಹುದು. ಕಲಿಕಾರ್ಥಿಗಳ ವಯಸ್ಸನ್ನು ೫ ರಿಂದ ೧೫ ವರ್ಷಕ್ಕೆ ನಿಗದಿಗೊಳಿಸಿದೆ. ಇದು ಕನ್ನಡ ಸ್ವಕಲಿಕಾ ಪಠ್ಯ. ಅನೌಪಚಾರಿಕ ವಲಯದಲ್ಲಿಯ ಕಲಿಕಾ ವಿಧಾನ.

ಕಲಿಕಾರ್ಥಿಗಳಿಗೆ ಸರಳ ರೀತಿಯಲ್ಲಿ ಕನ್ನಡ ಪದ ಸಂಪತ್ತನ್ನು ಪ್ರಧಾನವಾಗಿ ನಾಲ್ಕು ಪಾಠಗಳಲ್ಲಿ ಪರಿಚಯಿಸಿದೆ. ಮೊದಲನೆಯದು ಮೂಲಕ್ಷಾರ ಪಾಠ. ಇದರಲ್ಲಿ ಕಲಿಕಾರ್ಥಿಗಳ ಪರಿಸರ, ವಯೋಮಾನ ಮತ್ತು ಅವರ ಸಾಮರ್ಥ್ಯ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭಾಷಾವೈಜ್ಞಾನಿಕ ನೆಲೆಯಲ್ಲಿ ಅಕ್ಷರಗಳ ರೂಪಸಾಮ್ಯ ಕ್ರಮದಲ್ಲಿ ಎಂಟು ಗುಂಪು ಮಾಡಿಕೊಂಡಿದೆ. ಚಿತ್ರಗಳನ್ನು ರೂಪಸಾಮ್ಯ ಅಕ್ಷರಗಳೊಂದಿಗೆ ಜೋಡಿಸಿ ಅವುಗಳಿಂದ ಪದರಚನೆ, ಸರಳ ಚಿಕ್ಕ ವಾಕ್ಯಗಳನ್ನು ರಚಿಸಿದೆ. ಪದಗಳಿಗೆ ಇಂಗ್ಲಿಷ್‌ ಭಾಷಾಂತರ ನೀಡಿದೆ. ಪದಪುಂಜ ಹಾಗೂ ಸರಳ ವಾಕ್ಯಗಳಿಗೆ ಇಂಗ್ಲಿಷ್‌ ಭಾಷಾಂತಾರವನ್ನು ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ ಪದಗಳನ್ನು ನೀಡುವಾಗಲೇ ಇಂಗ್ಲಿಷ್‌ ಅರ್ಥಗಳನ್ನು ನೀಡಿರುವುದರಿಂದ ಕಲಿಕಾರ್ಥಿಗಳು ನೀಡಿರುವ ಪದಪುಂಜ ಹಾಗೂ ಸರಳ ವಾಕ್ಯಗಳಿಗಿಂತ ಹೆಚ್ಚು ಪದಗಳನ್ನು ಪಠ್ಯದ ಸಹಾಯದಿಂದ ರೂಪಿಸಬಹುದು. ಹಾಗಾಗಿ ಕಲಿಕಾರ್ಥಿಗಳ ಪರಿಶ್ರಮಕ್ಕೆ ಬಿಟ್ಟಿದೆ. ಪ್ರತಿಯೊಂದು ಪಾಠದ ಗುಂಪಿನಲ್ಲಿ ಬರುವ ಅಕ್ಷರಗಳ ವಿಶ್ಲೇಶಣೆಯನ್ನು ನಾಲ್ಕು ಹಂತಗಳಲ್ಲಿ ಪರಿಚಯಿಸಿದೆ. ಮೊದಲನೆ ಹಂತದಲ್ಲಿ ಅಕ್ಷರಗಳ ರೂಪಸಾಮ್ಯವನ್ನು ಆಧರಿಸಿ ಅಕ್ಷರಗಳ ಪಟ್ಟಿ ಕೊಟ್ಟಿದೆ. ಆ ಅಕ್ಷರಗಳನ್ನು ಚಿತ್ರಗಳ ಮೂಲಕ ಗುರುತಿಸುವಂತೆ ಸೂಚಿಸಿದೆ. ಎರಡನೆ ಹಂತದಲ್ಲಿ ಕಲಿತ ಅಕ್ಷರಗಳಿಂದಲೇ ಪದಗಳನ್ನು ಸೃಷ್ಟಿಸಿ ಪದಗಟ್ಟಿ ನೀಡಿದೆ. ಮೂರನೆಯ ಹಂತದಲ್ಲಿ ಕಲಿತ ಅಕ್ಷರಗಳನ್ನು ಬರೆಯುವಂತೆ ಸೂಚುಸಿದೆ. ನಾಲ್ಕನೆಯ ಹಂತದಲ್ಲಿ ಭಾಷಾವೈಜ್ಞಾನಿಕ ಹಿನ್ನೆಲೆಯಲ್ಲಿ ವಿವಿಧ ಮಾದರಿಯ ಅಭ್ಯಾಸ ಪ್ರತಿನಿಧೀಕರಿಸುವ ಚಿತ್ರಗಳ ಮಹಾಪ್ರಾಣಕ್ಷರಗಳು ಕ್ವಚಿತ್ತವಾಗಿ ಬಳಕೆಯಲ್ಲಿರುವುದರಿಂದ ಬಳಕೆಯಲ್ಲಿರುವ ಗುಣಿತಾಕ್ಷರಗಳಿಗೆ ಆದ್ಯತೆ ನೀಡಲಾಗಿದೆ. ಗುಣಿತಾಕ್ಷರ ಭಾಗದಲ್ಲಿ ವರ್ಣಮಾಲೆಯ ಎರಡು ಮತ್ತು ಮೂರನೆಯ ವರ್ಣಗಳನ್ನು ಮಾತ್ರ ವಿಶ್ಲೇಷಣೆ ಮಾಡಿದೆ. ಅಕ್ಷರಕ್ಕೆ ತಕ್ಕ ಚಿತ್ರಗಳ ಕೊರತೆಯಿಂದಾಗಿ ಅಕ್ಷರಗಳು ಮೊದಲು, ನಡುವೆ ಮತ್ತು ಕೊನೆ ಮೂರು ಪರಿಸರಗಳಲ್ಲಿ ಎಲ್ಲಿ ಬಂದರೂ ಸರಿಯೇ ಅಂತಹವುಗಳನ್ನು ದಾಖಲಿಸಿದೆ. ಒತ್ತಕ್ಷರ ಪಾಠಗಳನ್ನು ಮೂರು ಬಾಗಗಳಲ್ಲಿ ವಿಶ್ಲೇಷಣೆ ಮಾಡಿದೆ. ೧. ನೇರ ಮೂಲ ಅಕ್ಷರಗಳೇ ಒತ್ತಕ್ಷರಗಳು, ೨. ಮೂಲಾಕ್ಷರಗಳನ್ನು ಹೋಲುವ ಒತ್ತಕ್ಷರಗಳು. ೩. ಭಿನ್ನರೂಪದ ಒತ್ತಕ್ಷರಗಳು ಪ್ರತಿಯೊಂದು ಗುಂಪಿನ ಒತ್ತಕ್ಷರಗಳನ್ನು ನಾಲ್ಕು ಹಂತಗಳಲ್ಲಿ ಪರಿಚಯಿಸಿದೆ. ಕೆಲವು ಪದಗಳಿಗೆ ಚಿತ್ರದ ಕೊರತೆಯಿಂದ ದಾಖಲಿಸಿದ ಪದಸಹಿತ ಚಿತ್ರಗಳನ್ನು ಪುನಾ ದಾಖಲಿಸಿದೆ. ಮೂಲಾಕ್ಷರ, ಗುಣಿತಾಕ್ಷರ ಮತ್ತು ಒತ್ತಕ್ಷರಗಳನ್ನು ಪ್ರತಿನಿಧಿಸುವ ಚಿತ್ರಗಳು ಲಭ್ಯವಿಲ್ಲದಿದ್ದಲ್ಲಿ ಅಂತಹವನ್ನು ಕೈಬಿಟ್ಟಿದೆ. ಚಿತ್ರಗಳ ಮೂಲಕ ಪದ ಗುರುತಿಸಲು ಅನುವಾಗುವ ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದೆ. ಕರ್ನಾಟಕದಲ್ಲಿ ನೆಲೆಸಿರುವ ಇಂಗ್ಲಿಷ್‌ ಬಲ್ಲ ಕನ್ನಡೇತರ ಮಕ್ಕಳಿಗೂ ಕನ್ನಡ ಕಲಿಯಲು ಪಠ್ಯ ಸಹಾಯಕವಾಗುವುದು.

ನಾಲ್ಕನೆಯ ಪಾಠದಲ್ಲಿ ಗದ್ಯ, ಪದ್ಯ, ಸಂಭಾಷಣೆ ಮುಂತಾದ ವಿಷಯಗಳಿಗೆ ಅನುಸಾರ ಪಾಠಗಳನ್ನು ಅಳವಡಿಸಿದೆ. ಸರಳವಾದವುಗಳನ್ನೇ ಅಳವಡಿಸಿದೆ. ಭಾಷಾವೈಜ್ಞಾನಿಕ ನೆಲೆಯಲ್ಲಿ ವಿವಿಧ ಮಾದರಿ ಅಭ್ಯಾಸ ಚಟುವಟಿಕೆಗಳನ್ನು ನೀಡಿದೆ. ಈ ಪಠ್ಯಗಳು ನಾಡಿನ ಸಾಂಸ್ಕೃತಿಕ ವೈಶಿಷ್ಡ್ಯ, ಭಾಷಿಕ ಮೌಲ್ಯ ಹಾಗೂ ಜನಪದರ ನಂಬಿಕೆಗಳಿಗೆ ಪೂರಕವಾಗಿವೆ. ಹಾಗಾಗಿ ಮಕ್ಕಳಲ್ಲಿ ಕನ್ನಡ ನಾಡಿನ ಬಗೆಗೆ ಗೌರವ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಅಂಶಗಳ ಕಡೆಗೆ ಗಮನಹರಿಸಿದೆ. ಸೃಜನಶೀಲ ಮತ್ತು ಕ್ರಿಯಾತ್ಮಕ ಅಭ್ಯಾಸ ಚಟುವಟಿಕೆಗಳನ್ನು ನೀಡಿದೆ. ಒಟ್ಟಾರೆ ಕನ್ನಡೇತರರು ಕನ್ನಡವನ್ನು ಓದಿ ಬರೆಹ ಕಲಿಯಲು ಪರಿಣಾಮಕಾರಿ ಕನ್ನಡ ಸ್ವಭಾಷಾ ಕಲಿಕಾ ಪಠ್ಯ. ಈ ಅಂಶವನ್ನು ಮನಗಂಡು ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರು ಈ ಪಠ್ಯವನ್ನು ರಚಿಸಲು ಅನುಮತಿ ನೀಡಿದರು. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮಾನ್ಯ ಕಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟೆ ಅವರಿಗೂ ವಂದನೆಗಳು. ಅಧ್ಯಯನಾಂಗದ ನಿರ್ದೇಶಕರಾದ ಡಾ. ವೀರೇಶ ಬಡಿಗೇರ ಹಾಗೂ ಶೈಕ್ಷಣಿಕ ಉಪಕುಲಸಚಿವರಾದ ಡಾ. ಎಚ್. ಡಿ, ಪ್ರಶಾಂತ್‌ ಅವರಿಗೆ, ಕನ್ನಡ ಭಾಷಾಧ್ಯಯನ ವಿಭಾಗದ ಸಲಹಾ ಮಂಡಲಿ ಸದಸ್ಯರಾದ ಡಾ. ಸೋಮಶೇಖರ ಗೌಡ ಮತ್ತು ಡಾ. ವಿ. ಜಿ. ಪೂಜಾರ್‌ ಅವರಿಗೆ ವಂದನೆಗಳು. ಈ ಯೋಜನೆಯ ಸ್ವರೂಪವನ್ನು ಗಮನಿಸಿ ಅದಕ್ಕೊಂದು ತಲೆಬರಹ ನೀಡಿ ಸಲಹೆ ಸೂಚನೆ ನೀಡಿದ ಡಾ. ಕೆ. ವಿ. ನಾರಾಯಣ ಅವರಿಗೆ, ಈ ಸ್ವರೂಪದ ಕೆಲಸಗಳು ಸಾಕಷ್ಟು ಆಗಿದ್ದರೂ, ಅವುಗಳಿಗಿಂತ ವೈಧಾನಿಕತೆಯೊಂದನ್ನು ರೂಪಿಸಲು ಸಹಕಾರ ನೀಡಿದ ನನ್ನ ಪಿ.ಎಚ್‌. ಡಿ. ಮಾರ್ಗದರ್ಶಕರಾದ ಡಾ. ಸಿ. ಎಸ್‌. ರಾಮಚಂದ್ರ ಅವರಿಗೆ ಮತ್ತು ಶ್ರೀಮತಿ ಜಯಂತಿ ರಾಮಚಂದ್ರ ಅವರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಶೈಕ್ಷಣಿಕ ಕೆಲಸಗಳಲ್ಲಿ ಪರಸ್ಪರ ಸಹಕಾರ ನೀಡುತ್ತಿರುವ ಡಾ. ಡಿ. ಪಾಂಡುರಂಗ ಬಾಬು, ಡಾ. ಅಶೋಕ ಕುಮಾರ್‌ ಮತ್ತು ಡಾ. ಸಾಂಬಮೂರ್ತಿ ಅವರುಗಳಿಗೆ ವಂದನೆಗಳು. ಮುಖ್ಯವಾಗಿ ಪಠ್ಯದಲ್ಲಿ ಅಳವಡಿಸಿರುವ ಗದ್ಯ ಮತ್ತು ಪದ್ಯ ಪಾಠದ ಲೇಖಕರಿಗೆ ಮತ್ತು ಅವರ ಸಂಬಂಧಿಕರಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೇ ಕರ್ನಾಟಕ ಸರ್ಕಾರ ಪಠ್ಯಪುಸ್ತಕ ಇಲಾಖೆಗೂ ನನ್ನ ಕೃತಜ್ಞತೆಗಳು.

ಪ್ರಕಟಣೆಗೆ ಸಹಕರಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ್‌ ಕುಂಟಾರ್‌ ಅವರಿಗೆ, ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಈ ಪುಸ್ತಕಕ್ಕೆ ಚಿತ್ರ ಬರೆದು ಕೊಟ್ಟ ಶ್ರೀ ದೇವೆಂದ್ರ ಹುಡಾ ಮತ್ತು ರಾಜೀವ ಎಂ. ವೈ . ಅವರಿಗೆ, ಇಂತಹ ತಾಂತ್ರಿಕ ವಿಷಯವನ್ನು ಶ್ರಮಪಟ್ಟು ಪ್ರೀತಿಯಿಂದ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್‌ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಪಿ. ಮಹಾದೇವಯ್ಯ