ಕನ್ನಡದ ಅಭಿಯಾನ ನಮ್ಮೆಲ್ಲರನ್ನೂ ಇಲ್ಲಿ ಒಟ್ಟಿಗೆ ತಂದಿದೆ. ರಾಜಕೀಯ, ಸಾಹಿತ್ಯ ಮುಂತಾದ ವಿಷಯಗಳಲ್ಲಿ ಮಾತ್ರವಲ್ಲದೆ ನಮ್ಮ ನಾಡು ನುಡಿಗಳ ಹಿತ ರಕ್ಷಣೆಗೆ ಏನನ್ನು ಮಾಡುವುದು ಈಗ ಅಗತ್ಯ ಎಂಬ ವಿಷಯದಲ್ಲೂ ಭಿನ್ನ ನಿಲುವುಗಳು ಇರಬಹುದಾದ ಜನ ಇಲ್ಲಿ ಸೇರಿದ್ದೇವೆ. ನಮ್ಮನ್ನು ಹೀಗೆ ಒಂದೇ ವೇದಿಕೆಯ ಮೇಲೆ ತಂದಿರುವ ಕನ್ನಡದ ಅಭಿಮಾನ ಶಿವಸೇನೆಯ ಮಾದರಿಯದಾಗಲಾರದು. ಯಾಕೆಂದರೆ ಈ ಅಭಿಮಾನದ ಹಿಂದಿರುವ ಆತಂಕ ಯಾವ ಬಗೆಯದು, ಅದರ ಭರವಸೆಯ ಸ್ವರೂಪವನೇನು ಎಂಬುದನ್ನು ಚಿಂತಿಸುವುದು, ವಿವರಿಸುವುದು ಆಗ ಅತ್ಯವಾಗುತ್ತಿರಲಿಲ್ಲ. ಅದಕ್ಕೆ ಅವಕಾಶವೂ ಇರುತ್ತಿರಲಿಲ್ಲ. ಶಿವಸೇನೆಯ ರೀತಿಯ ಉಗ್ರಗಾಮೀ ಚಳವಳಿಗಳು ಮಾತ್ರ ಯಶಸ್ವಿಯಾಗುತ್ತಿರುವಂತೆ ಕಾಣಲುತೊಡಗಿರುವ ಈ ನಮ್ಮ ದುಷ್ಟ ಕಾಲದಲ್ಲಿ, ಕ್ರೌರ್ಯ ಮತ್ತು ಅಸಹನೆಗಳಿಂದ ಬಲಾತ್ಕಾರವಾಗಿ ಬಯಸಿದ್ದನ್ನುಪಡೆಯುವ ಪ್ರಲೋಭನೆ ಬಿಟ್ಟು, ತತ್ಕಾಲದ ಗೆಲುವಿನಿಂದ ಮರುಳಾಗದೆ, ಶಾಶ್ವತವಾದ ಸತತವಾದ ನೆಲೆಯೊಂದನ್ನು ಕನ್ನಡದ ನಮ್ಮ ಜನಕ್ಕೆ ಭಾರತ ಸಂವಿಧಾನದ ಚೌಕಟ್ಟಿನಲ್ಲೇ, ಭಾರತದ ಭಾಷೆಗಳ ನಡುವೆ ವೈರ ಬೆಳೆಯದಂತೆ, ಯಾವ ಕಾರಣಕ್ಕಾಗಿ,ಯಾವ ಮಾರ್ಗದಲ್ಲಿ ನಾವು ಕಂಡುಕೊಳ್ಳಬಹುದೆಂಬುದನ್ನು ಚಿಂತಿಸಲು ನಾವಿಲ್ಲಿ ವಿಭಿನ್ನ ಮತೀಯರು ಸೇರಿರುವುದೇ ಕನ್ನಡ ಚಳವಳಿಯ ವಿಶೇಷವೆಂದು ನಾನು ಗ್ರಹಿಸುತ್ತೇನೆ.

ಸಮೂಹ ಸನ್ನಿಯಲ್ಲಿ ತಲೆಕೆಟ್ಟವನಂತೆ ಕಿರುಚುವವನಿಗೆ ವಿಚಾರದ ಅಗತ್ಯವಿಲ್ಲ; ಆದರೆ ನಮಗೆ ಇದೆ. ಶಿವಸೇನೆಯಂತಹ ಸಂಸ್ಥೆಗಳ ಹಿಂದೆ ಮಹಾರಾಷ್ಟ್ರದ ಅತ್ಯುತ್ತಮ ಲೇಖಕರು ಇಲ್ಲ;ಸ ತಮಿಳುನಾಡಿನ ದ್ರಾವಿಡತತ್ವ ತೀಟೆಯ ಮಾತುಗಾರಿಕೆಯಾಗಿ ಮಾತ್ರ ಬೆಳೆಯಿತು – ತಮಿಳಿನ ಸೂಕ್ಷ್ಮಜ್ಞ ಬರಹಗಾರರು ಅದರಿಂದ ಹೊರಗುಳಿದರು. ಪಂಜಾಬಿನ, ಕಾಶ್ಮೀರದ, ಅಸ್ಸಾಮಿನ ಉಗ್ರಗಾಮಿಗಳು, ಶ್ರೀಲಂಕೆಯ ತಮಿಳು ಹುಲಿ ಉಗ್ರಾಗಾಮಿಗಳು ವಿದೇಶಿ ಶಸ್ತ್ರಾಸ್ತ್ರಗಳಿಂದ, ಮಾರಕ ಡ್ರಗ್ಗಿನ ಕಪ್ಪು ಹಣದಿಂದ ಮಾನವೀಯತೆಗೇ ಕಂಟಕಪ್ರಾಯರಾಗಿ ಬೆಳೆಯುತ್ತಿದ್ದಾರೆ. ಇವರ ರೀತಿಯ ಯಶಸ್ಸು ಕನ್ನಡದ ಚಳವಳಿಗೆ ಬೇಕಿಲ್ಲ. ಆದರೆ ಯಾವ ಅನ್ಯಾಯವನ್ನಾದರೂ ಸಹಿಸಿಕೊಳ್ಳುವ ಜನ ಕನ್ನಡಿಗರು ಎಂಬ ಕ್ಲೈಬ್ಯ ನಮಗೆ ಅಂಟುವುದೂ ಬೇಕಿಲ್ಲ. ಆದ್ದರಿಂದಲೇ ನಾವು ತಾತ್ವಿಕ ತಳಹದಿಯೊಂದರ ಮೇಲೆ, ಅಸಹನೆಯ ಚೀರಾಟ ಮತ್ತು ಕ್ರೌರ್ಯವನ್ನು ನಮ್ಮ ಹೋರಾಟದ ಕ್ರಮ ಮಾಡಿಕೊಳ್ಳದಂತೆ ಸಾತ್ವಿಕ ಕೆಚ್ಚಿನ ಕನ್ನಡತನವನ್ನು ಈ ನೆಲದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ.

ಇಂಗ್ಲಿಷ್ ಕವಿ ವಿಮರ್ಶಕ ಆರ್ನಾಲ್ಡ್ ಹೇಳುತ್ತಾನೆ: ನಮ್ಮ ನಾಡು ದೊಡ್ಡದಾಗಿರುವುದು ಕಲ್ಲಿದ್ದಿನ ಉತ್ಪಾದನೆಯಿಂದಲ್ಲ; ಶೇಕ್ಸ್‌ಪಿಯರಿನಿಂದಾಗಿ ಎಂದು. ಆದರ್ಶವಾಗಿ ಈ ಮಾತು ನಿಜವಾದರೂ ಆರ್ನಾಲ್ಡ್‌ನ್ನು ಪಾಠ ಮಾಡುವಾಗೆಲ್ಲ ನಾನೊಂದು ಮಾತು ಹೇಳುವುದಿದೆ. “ಈ ವಾಕ್ಯವನ್ನು ಮೈಸೂರಿನಲ್ಲಿ ಈ ಕ್ಲಾಸಲ್ಲಿ ನಾನು ಓದುತ್ತಿರುವುದಕ್ಕೆ ಕಾರಣ ೧೯ನೇ ಶತಮಾನದ ಇಂಗ್ಲೆಂಡಿಗೆ ಕಲ್ಲಿದ್ದಿಲಿನ ಬಲವಿದ್ದುದರಿಂದ. ನಾನು ಯಾಕೆ ಇಷ್ಟೇ ಉದಾತ್ತ ಧೋರಣೆ ಪೋರ್ಚುಗೀಸಿನ ಒಂದು ವಾಕ್ಯವನ್ನೋ, ಫ್ರೆಂಚಿನ ಒಂದು ವಾಕ್ಯವನ್ನೋ, ಜರ್ಮನ್ ಭಾಷೆಯ ಒಂದು ವಾಕ್ಯವನ್ನೋ ಓದುವುದರ ಬದಲಾಗಿ ಇಂಗ್ಲಿಷಿನ ಒಂದು ವಾಕ್ಯ ಓದುತ್ತಿದ್ದೇನೆ ಎಂಬುದರ ಹಿಂದೆ ಇರುವ ಐತಿಹಾಸಿಕ ವಾಸ್ತವವನ್ನು ನಾವು ಅರಯಬೇಕು.

ಒಂದು ಭಾಷೆ ಶೇಕ್ಸ್‌ಪಿಯರನನ್ನು ಪಡೆದಿದ್ದರೆ ಸಾಲದು; ಅದರ ಹಿಂದೆ ಸಂಪನ್ಮೂಲಗಳೂ ಸಾಹಸೀ ಉದ್ಯಮಶೀಲರೂ ಇರಬೇಕು. ರಾಜಾರಾಮ ಮೋಹನರಾಯರು ಇಂಗ್ಲಿಷ್ ಭಾಷೆಬೇಕೆಂದು ಕೇಳಿದಾಗ ತಂತ್ರಜ್ಞಾನದ ವೈಜ್ಞಾನಿಕ ಧೋರಣೆಯ ಯೂರೋಪು ನಮಗೆ ಬೇಕೆಂದು ಕೇಳಿದ್ದು. ಈ ಆಯ್ಕೆಯ ಪರಿಣಾಮವಾಗಿ ಇಂಗ್ಲಿಷ್ ಆಳ್ವಿಕೆಯ ದುರಂತವನ್ನೂ, ಅದು ತಂದ ಭರವಸೆಯನ್ನೂ ತಬ್ಬಿಬ್ಬಾಗಿ ಅನುಭವಿಸಿದ ನಾವು ಕನ್ನಡದ ಅಭಿಮಾನವೆಂದೆ ಕೇವಲ ಸಾಂಸ್ಕೃತಿಕ ವಿಷಯವೆಂದು ತಿಳಿಯಲಾರೆವು.

ಹೀಗೆ ಸಾಂಸ್ಕೃತಿಕವಾಗಿ ಕನ್ನಡ ಬಗ್ಗೆ ನಾವು ತಾಳುವ ಅಭಿಮಾನಕ್ಕೂ, ಈ ಅಭಿಮಾನ ನೈಜವಾಗಲು ಕನ್ನಡ ಮಾತಾಡುವ ಕರ್ನಾಟಕದ ಜನ ನೆಮ್ಮದಿಯಲ್ಲಿ ಬದುಕಿ ಬೆಳೆಯಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆದಿರಬೇಕೆಂಬ ಕಾಳಜಿಗೂ ಅಭಿನ್ನವಾದ ಸಂಬಂಧವಿದೆ. ಪ್ರಪಂಚದ ಕೆಲವು ಒಳ್ಳೆಯ ಬರಹಗಾರರು ಕನ್ನಡಿಗರು; ಪ್ರಪಂಚದ ಕೆಲವು ಒಳ್ಳೆಯ ಸಂಗೀತಗಾರರು ಕನ್ನಡಗಿರು; ಪ್ರಪಂಚದ ಕೆಲವು ಮುಖ್ಯ ಧಾರ್ಮಿಕ ಪಂಥಗಳು ತಮ್ಮ ನೆಲೆ ಕಂಡದ್ದುಕರ್ನಾಟಕದಲ್ಲಿ – ಇತ್ಯಾದಿಯಾಗಿ ಹೆಮ್ಮೆ ಪಡುವಾಗ ಕನ್ನಡಿಗರ ಜಲ ನೆಲಗಳ ಪ್ರಶ್ನೆ, ಉದ್ಯೋಗಾವಕಾಶದ ಪ್ರಶ್ನೆ, ಈಗಾಗಲೇ ಸಮರ್ಥವಾಗಿ ಬೆಳೆದ ಭಾಷೆ ನಮ್ಮ ಜ್ಞಾನಾರ್ಜನೆಯ ಭಾಷೆಯೂ ಆಗಿಲ್ಲ, ನಮ್ಮ ಆಡಳಿತದ ಭಾಷೆಯೂ ಆಗಿಲ್ಲ ಎಂಬ ಆತಂಕ ನಮ್ಮನ್ನು ಬಾಧಿಸುತ್ತದೆ. ಹೀಗೊಂದು ಸಭೆ ಸೇರಿ ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ರಚಿಸುವುದೊ, ವೈಜ್ಞಾನಿಕವಾಗಿ ಸತ್ಯ ಅರಿಯುವುದೊ ಸಾಧ್ಯವಿಲ್ಲ; ಅದು ಏಕಾಂತದ ಏಕಾಗ್ರತೆಯಲ್ಲಿ ಸಾಧಿಸಬೇಕಾದ್ದು. ಆದರೆ ಹೀಗೆ ಒಟ್ಟಾಗದೆ ನಮ್ಮ ಅಸ್ತಿತ್ವಕ್ಕೇ ಮಾರಕವಾದ ಅಪಾಯಗಳನ್ನು ನಿವಾರಿಸಿಕೊಳ್ಳುವಂತಿಲ್ಲ. ಆದ್ದರಿಂದಲೇ ಕನ್ನಡದ ಬೆಳವಣಿಗೆಗೆ ಅಗತ್ಯವಾದ ಮೂರು ಸೂತ್ರಗಳು: ತಪಸ್ಸು, ಸಂಘಟನೆ ಮತ್ತು ಅಹಿಂಸಾತ್ಮಕ ಹೋರಾಟ – ಸಾತ್ವಿಕ ಕೆಚ್ಚಿನ ಹೋರಾಟ.

ಈ ನಮ್ಮ ಯುಗದಲ್ಲಿ ಭಾರತದ ಹಲವು ಭಾಷೆಗಳನ್ನಾಡುವ ಜನ ತಮ್ಮ ಭಾಷೆಗಳ ಆಧಾರದ ಮೇಲೆ ತಾವೊಂದು ಸಾವಯವ ಸಂಬಂಧ ಪಡೆದ ಸಮುದಾಯವೆಂದು ತಿಳಿಯುತ್ತಲೇ ತಾವು ಭಾರತೀಯರೂ ಹೌದು ಎಂದು ತಿಳಿಯುವುದರ ಹಿಂದೆ ಯಾವ ವಿರೋಧವೂಇಲ್ಲ ಎನ್ನುವಾಗ ನಾವು ಕಿಂಚಿತ್ತೂ ಅಂಜಬೇಕಿಲ್ಲ. ಮಹಾತ್ಮ ಗಾಂಧಿಯವರು ಈ ಬಗ್ಗೆ ಅತ್ಯಂತ ಸ್ಪಷ್ಟ ನಿಲುವು ತಾಳಿದವರಾದ್ದರಿಂದ ಭಾಷಾವಾರು ಪ್ರಾಂತಗಳ ರಚನೆ ಸ್ವತಂತ್ರ ಭಾರತದ ಅಗತ್ಯಗಳಲ್ಲಿ ಒಂದೆಂದು ತಿಳಿದಿದ್ದರು. ಪ್ರತೀ ಭಾರತೀಯನಿಗೂ ತಾನು ಯಾರೆಂಬ ಕಲ್ಪನೆಯಲ್ಲಿರುವ ಬಹುತ್ವ ಅವಿಚ್ಛಿನ್ನವಾದ ಒಂದು ಸರಪಳಿಯಿದ್ದಂತೆ. ಯುರೋಪಿನಲ್ಲಿ ನನ್ನನ್ನು ನೀನುಯಾರೆಂದು ಕೇಳಿದರೆ ‘ನಾನು ಭಾರತೀಯ’ ಎನ್ನುತ್ತಾನೆ. ದೆಹಲಿಯಲ್ಲಿ ಇದೇ ಮಾತು ಕೇಳಿದರೆ ‘ನಾನು ಕನ್ನಡಿಗ’ ಎನ್ನುತ್ತೇನೆ. ಬೆಂಗಳೂರಲ್ಲಿ ಕೇಳಿದರೆ ‘ಮಲೆನಾಡಿನವವನು’ ಎನ್ನುತ್ತೇನೆ. ಸ್ವಂತ ಊರಿನಲ್ಲೇ ಈ ಪ್ರಶ್ನೆ ಯಾರಾದರೂ ಕೇಳಿದಲ್ಲಿ, ನಮ್ಮ ನಮ್ಮ ಜಾತಿ, ನಮ್ಮ ಒಳ ಪಂಗಡ, ನಮ್ಮಮನೆತನ ಇತ್ಯಾದಿಗಳು ತನ್ನತನದ ಕುರುಹಾಗುತ್ತ ಹೋಗುತ್ತವೆ. ಪ್ರತಿ ಭಾರತೀಯನಿಗೂ, ಹೀಗೆ ಹಲವು ಕೊಂಡಿಗಳ ಸರಪಳಿಯಾದ ವಾಸ್ತವದಲ್ಲಿ ನೈಜವಾಗಿರುವ ತನ್ನತನದ ಬಹುರೂಪಿಯಾದ ಅನುಭವ ಆರೋಗ್ಯ ಸ್ಥಿತಿಯಲ್ಲಿದ್ದಾಗ ಯಾವ ಮಾರಕ ವಿರೋಧದಲ್ಲೂ ಒಂದನ್ನೊಂದು ಎದುರಿಸುವುದಿಲ್ಲ. ಅದನ್ನು ಸಹಿಷ್ಣು ಭಾರತದಲ್ಲೂ ಹೆಚ್ಚು ಸುಲಭವಾಗಿ ಸಾಧ್ಯ ಮಾಡಿದ ಸಂಸ್ಕೃತಿಯೆಂದರೆ ಕನ್ನಡನಾಡಿನದು. ಆದ್ದರಿಂದಲೇ ಕನ್ನಡಕ್ಕೆ ಮಹತ್ವವನ್ನು ತಂದವರಲ್ಲಿ ಮರಾಠಿ ಕನ್ನಡಿಗರು, ತಮಿಳು ಕನ್ನಡಿಗರು, ಕೊಂಕಣಿ ಕನ್ನಡಿಗರು, ತುಳು ಕನ್ನಡಿಗರು, ತೆಲುಗು ಕನ್ನಡಿಗರು, ಕೊಡವ ಕನ್ನಡಿಗರು ಉರ್ದು ಕನ್ನಡಿಗರು, ಮಲಯಾಳಿ ಕನ್ನಡಿಗರು – ಹೀಗೆ ಹಲವರಿದ್ದಾರೆ. ಕನ್ನಡ ನಾಡಿನ ಸಂಸ್ಕೃತಿ ಮತ್ತು ಜೀವನ ಕ್ರಮ ಇಂಗ್ಲಿಷ್ ಭಾಷೆಯ ಸಾಹಿತ್ಯಕ್ಕೂ ಬೆಲೆಯುಳ್ಳ ಕೃತಿಗಳನ್ನು ಸೇರಿಸಿವೆ. ರಾಜಾರಾಯರು ಮತ್ತು ನಾರಾಯಣ್ ಬರೆದದ್ದು ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರಗೊಂಡ ಕೃತಿಗಳೆಂದೂ ತಿಳಿಯಲು ಸಾಧ್ಯ. ಕರ್ನಾಟಕವೆಂದರೆ ಒಂದು ಸಂಕ್ಷಿಪ್ತ ಭಾರತ – ಇಷ್ಟು ವಿಶಿಷ್ಟವಾದ ಸಂಗಮ ಬೇರೆ ರಾಜ್ಯಗಳಲ್ಲಿ ಕಾಣುವುದು ಅಪರೂಪ.

ಯಾವ ಭಾರತೀಯನೂ ‘ಕೇವಲ’ ಭಾರತೀಯನಾಗಲಾರ. ಎಲ್ಲಿಯೂ ಸಲ್ಲದ್ದರಿಂದ, ಎಲ್ಲಿಯಾದರೂ ತೇಲಬಲ್ಲ ತೋರಿಕೆಯ ಭಾರತೀಯ ಇಲ್ಲವೆಂದಲ್ಲ. ಆದರೆ ಈ ಆಕಾಶರಾಯನಿಗೆ ನೆಲೆಯಿಲ್ಲ. ಆಳವಿಲ್ಲ. ನಾವೆಲ್ಲರೂ ಕನ್ನಡಿಗರಾಗಿದ್ದೇ, ಬಂಗಾಳಿಯಾಗಿದ್ದೇ, ತಮಿಳಿನವರಾಗಿದ್ದೇ ಭಾರತೀಯರಾಗಬೇಕು. ನಾವು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆಯಲೇಬೇಕಾಗಿ ಮಾಡಿರುವ ಈ ನಮ್ಮ ವೈವಿಧ್ಯದ ವಾಸ್ತವ ಒಂದು ವರವೆಂದೇ ತಿಳಿಯಬೇಕು. “ಅನೇಕತೆಯಲ್ಲಿ ಏಕತೆ” ನಮ್ಮ ರಾಷ್ಟ್ರದ ವೈಶಿಷ್ಟ್ಯ ಎನ್ನುವಾಗ ಈ ಸತ್ಯವನ್ನು ನಾವು ಮನಗಂಡಿರಬೇಕು; ಇದು ನಮಗೆ ಸಂತೋಷದ ಸಂಗತಿಯಾಗಿರಬೇಕು. ನಮಗೆ ಹೋಲಿಸಿದರೆ ಚೀನೀಯರು, ಅಮೆರಿಕನ್ನರು ಬಡವರು. ಎಲ್ಲರಿಗೂ ಇಂಗ್ಲಿಷ್ ಗೊತ್ತಿದ್ದೂ ಎಷ್ಟು ಕಷ್ಟಪಟ್ಟು ವೆಲ್ಯ್‌ಜನ ಬ್ರಿಟನ್‌ನಲ್ಲಿ ತಮ್ಮವೆಲ್ಯ್‌ಭಾಷೆಯನ್ನು ಉಳಿಸಿಕೊಂಡಿದ್ದಾರೆ, ನೋಡಿ. ಆದರೆ ನಮಗಿದು ತಾಯಿ ಭಾರತ ಕೊಟ್ಟಿರುವ ಸಹಜವಾದ ವರ. ಆ ವರನ್ನೇ ಶಾಪ ಮಾಡಿಕೊಳ್ಳುವಂತೆ ನಾವು ಇಂಗ್ಲಿಷಿನಲ್ಲಿ ನಡೆಸುವ ಆಡಳಿತ, ವಿದ್ಯಾಭ್ಯಾಸಗಳು ನಮ್ಮ ಮೂರ್ಖತನದ ಲಕ್ಷಣಗಳೆಂದೇ ತಿಳಿಯಬೇಕು. ಭಾರತೀಯ ಭಾಷೆಗಳನ್ನೆಲ್ಲ ಬದಿಗೊತ್ತಿ, ಕ್ಷೀಣಗೊಳಿಸಿ, ಊಟದ ಹೊತ್ತಿನ ಆಪ್ತತೆಗಾಗಿ ಮಾತ್ರ ಬಳಸುವ ಉಪಭಾಷೆಗಳನ್ನಾಗಿ ಮಾಡಿ, ಟೆಲಿವಿಷನ್‌ನಂತಹ ಮಾಧ್ಯಮಗಳ ಮೂಲಕ ನಮ್ಮನ್ನೆಲ್ಲ ಒಂದೇ ರುಚಿಯ, ಒಂದೇ ಭಾಷೆಯ, ಒಂದೇ ವಿಚಾರದ ಗ್ರಾಹಕರನ್ನಾಗಿ ಪರಿವರ್ತಿಸಿ ಭಾರತದಲ್ಲಿ ಏಕಾಧಿಪತ್ಯ ಸ್ಥಾಪಿಸುವ ಉದ್ದೇಶದ ಕೆಲವರ ಸಂಚಿಗೆ ನಾವು ಬಲಿಯಾಗಬಾರದೆಂದರೆ, ಪ್ರಜತಂತ್ರ ಗಟ್ಟಿಯಾಗಬೇಕೆಂದರೆ, ನಮ್ಮೆಲ್ಲರಿಗೂ ನಮ್ಮ ಭಾಷೆಗಳ ಅಭಿಮಾನವು ದೇಹವನ್ನು ದೃಢವಾಗಿರುವ ಬೆನ್ನಿನ ಮೂಳೆಯಂತಾಗಬೇಕು, ಮರದ ಬೇರಿನಂತಾಗಬೇಕು. ತಲೆ ಎತ್ತಿ ನಮಗೆ ಅನ್ಯವಾದದ್ದನ್ನು ನೋಡಿ ಹಿಗ್ಗಲು, ಆಕಾಶದಲ್ಲಿ ಗಾಳಿಗೊಡ್ಡಿ ತೂಗಲು ನೆಲೆಸಿದಲ್ಲೇ ವಿಸ್ತಾರವಾಗುವ ಬದುಕಿನ ದಿವ್ಯವನ್ನು ಎದುರಿಸಲು – ಈ ಸ್ಥಿತಿ – ಈ ಎಚ್ಚರದ ಅಭಿಮಾನದ ಸ್ಥಿತಿ – ಪಪ್ರಂಚದ ಪ್ರಜೆಯಾಗಲು ಆಶಿಸುವ, ಭಾರತೀಯ ಪರಂಪರೆಯಲ್ಲಿ ಅತ್ಯುತ್ತಮವಾದ್ದಕ್ಕೆ ಸ್ಪಂದಿಸುವ ಪ್ರತಿ ಕನ್ನಡಿಗನಿಗೂ ಅಗತ್ಯ.

ಕನ್ನಡ ಭಾಷೆಯ ಸ್ಥಿತಿ ಕೂಡ ಹಾಗಿದೆ. ಸುಸಂಸ್ಕೃತರಾದ ನಮ್ಮ ಅನಕ್ಷರಸ್ಥರು ನಮ್ಮ ಪೌರಾಣಿಕ ಪ್ರಜಞೆಯನ್ನು ಕಿವಿಯಿಂದ ಕಿವಿಗೆ ದಾಟುವಂತೆ ಈ ಭಾಷೆಯಲ್ಲಿ ಉಳಿಸಿದ್ದಾರೆ. ಪಂಪನಿಂದ ಕುಮಾರವ್ಯಾಸನ ತನಕದ ಲೇಖಕರು ಸಂಸ್ಕೃತದಲ್ಲಿನ ಜೀವಾಳವನ್ನು ದೇಶೀಯ ಅಧಿಕೃತ ಧಾಟಿಯಲ್ಲಿ ಕನ್ನಡಿಸಿದ್ದಾರೆ. ವಚನಕಾರರು ಉಪನಿಷತ್ತಿನ ಋಷಿಗಳಂತೆ ಚಿಂತಿಸಿದ್ದಾರೆ. ನಮ್ಮ ಆಧುನಿಕರು ಐರೋಪ್ಯ ಸಂಸ್ಕೃತಿಯ ಜೀವಾಳವನ್ನು ತಮ್ಮ ತಮ್ಮ ವಿಶಿಷ್ಟ ಅನುಭವದ ಮೂಸೆಯಲ್ಲಿ ಎರಕಹೊಯ್ದು ಕನ್ನಡಕ್ಕೆ ತಂದಿದ್ದಾರೆ. ಕನ್ನಡ ಒಂದು ಜಿರ್ಣಾಗ್ನಿಯಂತೆ ಎಲ್ಲ ಭಾಷೆಗಳಿಂದಲೂ ತನ್ನ ಹವಿಸ್ಸನ್ನು ಪಡೆದಿದೆ; ತನ್ನತನ ಕಳೆದುಕೊಳ್ಳದಂತೆ ಪ್ರತಿಭಾಶಾಲಿಗಳಲ್ಲಿ ಮನಸ್ಸಿನ ವಿಸ್ತಾರವನ್ನು ಸಾಧಿಸಿಕೊಂಡಿದೆ.

ಜೀವನದ ರಕ್ಷಣೆಗೆ ಸ್ವಪ್ರೇಮ ಅಗತ್ಯ. ಆದರೆ ವಿಪರ್ಯಾಸವೆಂದರೆ ಈ ಪ್ರಪಂಚದಲ್ಲಿ ಇರುವುದು ತಾನೊಬ್ಬನೇ ಎಂದು ತಿಳಿದ ಜೀವಿಗೆ ರಕ್ಷಣೆಯೂ ಇಲ್ಲ, ಪೋಷಣೆಯೂ ಇಲ್ಲ. ಆದ್ದರಿಂದಲೇ ನಾವು ಕುಟುಂಬ, ಜಾತಿ, ಧರ್ಮ, ಕಸುಬು – ಹೀಗೆ ಹಲವು ಮಟ್ಟದ ಸಮುದಾಯಗಳಲ್ಲಿ ನಮಗೆ ಅನ್ಯವಾದ್ದನ್ನು ಒಳಗೊಂಡು ವಿಸ್ತಾರವಾಗಲು ಹವಣಿಸುತ್ತೇವೆ. ಈ ಎಲ್ಲ ಸಮುದಾಯಗಳಿಗಿಂತಲೂ ನಮ್ಮ ಕಾಲಕ್ಕೆ ನಮಗೆ ಅನ್ಯವಾದ್ದನ್ನು ಕಲ್ಪನೆಯ ವಿಲಾಸದಲ್ಲಿ, ವೈಚಾರಿಕ ಸಂಘರ್ಷದಲ್ಲಿ, ವೈಯಕ್ತಿಕವಾದ ಜರೂರಿನಲ್ಲಿ ಒಳಗೊಳ್ಳಬೇಕಾದ ಸ್ಥಿತಿಯನ್ನು ಸದಾ ಒಡ್ಡುವಂಥದೆಂದರೆ, ಭಾಷೆ. ಜಾತಿ, ಮತ, ಧರ್ಮಗಳು ರಚಿಸುವ ಸಮುದಾಯ ತನಗಿಂತ ಅನ್ಯವಾದ್ದಕ್ಕೆ ಕುರುಡಾಗಿರುವುದೇ ಹೆಚ್ಚು. ವೈದಿಕ, ಕ್ರೈಸ್ತ, ಬೌದ್ಧ, ಜೈನ, ಮುಸ್ಲಿಂ – ತನಗೆ ಅನ್ಯವಾದ್ದನ್ನು ಸ್ವೀಕರಿಸಿದ ಸಂದರ್ಭಗಳು ಅಪರೂಪ. ಆದರೆ ನನ್ನ ಭಾಷೆಯಲ್ಲಿನ ಸಾಹಿತ್ಯವನ್ನು ನಾನು ಓದುವಾಗ ಪರಕಾಯ ಪ್ರವೇಶ ಮಾಡುವ ಕಲ್ಪನಾ ಶಕ್ತಿ ತನ್ನಿಂದ ತಾನೇ ಅನಿವಾರ್ಯವಾಗಿ ಹುಟ್ಟಿಕೊಳ್ಳುತ್ತದೆ. ನಮಗೆಹೊರಗಿನದೆಲ್ಲ ನಮ್ಮ ಒಳಗಿನದಾಗುತ್ತದೆ. ಅಷ್ಟೇ ಅಲ್ಲ – ನಮ್ಮ ನಾಡಿನ ಪಿತೃ ಪಿತಾಮಹರೂ ನಮ್ಮ ಜೊತೆ ಮಾತಾಡುತ್ತಾರೆ. ಪಂಪ, ಕುಮಾರವ್ಯಾಸ, ವಚನಕಾರರು, ಯಾಕೆ ಕಾಳಿದಾಸ, ಶೇಕ್ಸ್‌ಪಿಯರ್, ಟಾಲ್‌ಸ್ಟಾಯರೂ ಕನ್ನಡದಲ್ಲಿ ಒಳಗೊಳ್ಳುವ ಆಹ್ವಾನದಲ್ಲಿ ನಮಗೆ ಎದುರಾಗುತ್ತಾರೆ. ಒಂದು ಭಾಷೆಯಲ್ಲಿ ನೆಲೆಯೂರಿದವನಿಗೆ ಮಾತ್ರ ತನ್ನ ವ್ಯಕ್ತಿತ್ವ ವಿಸ್ತಾರವಾಗುವಂತೆ, ಈ ವಿಸ್ತಾರ ಅಧಿಕೃತವಾಗುವಂತೆ ಸಿಗುವ ಆಹ್ವಾನ ಇದು.

ಸಾಹಿತ್ಯ ಅನುಭವದಲ್ಲಿ ನಾವು ಅನ್ಯವನ್ನು ಒಳಗೊಳ್ಳುತ್ತ ವಿಸ್ತಾರವಾಗುವುದು ಮಾತ್ರವಲ್ಲ. ಒಬ್ಬ ವಿಜ್ಞಾನಿ ಅಥವಾ ತಂತ್ರಜ್ಞ ತನ್ನ ಕಾಲದ ತನ್ನ ಜನರ ಅಗತ್ಯಗಳ ಸವಾಲಿಗೆ ಉತ್ತರ ಹುಡುಕುವ ಪ್ರೇರಣೆ ಪಡೆಯುವುದೂ ಆ ಭಾಷೆಯನ್ನಾಡುವ ಜನರಲ್ಲಿ ಒಬ್ಬನಾಗಿರುವುದರಿಂದ. ಮಾನವೀಯ ಶಾಸ್ತ್ರಗಳಲ್ಲಂತೂ ತನ್ನ ನಾಡಿನ ನಾಡಿನ ಭಾಷೆಯ ಸೂಕ್ಷ್ಮ ತಿಳಿಯದೇ ಹೊಸದಾಗಿ ಯಾರೂ ಚಿಂತಿಸಲಾರರು. ಭಾರತದ ಎಷ್ಟೋ ವಿಜ್ಞಾನಿಗಳ, ಮಾನವಶಾಸ್ತ್ರಜ್ಞರ ಸಂಶೋಧನೆ ಅಪ್ರಸ್ತುತವೊ ಅಥವಾ ಅಲ್ಪ ವಿಷಯದ್ದೊ ಆಗಲು ಒಂದು ಕಾರಣವಾದರೂ ಖಂಡಿತವಾಗಿ ಅವರಲ್ಲಿ ಹಲವರಿಗೆ ಭಾರತದ ಯಾವುದಾದರೊಂದು ಭಾಷೆಯಲ್ಲಿ, ಆ ಮೂಲಕ ಜನಜೀವನದ ಆಶೋತ್ತರಗಳಲ್ಲಿ, ನೆಲೆಯಿಲ್ಲದಿರುವುದೇ ಎಂದು ಅನ್ನಬಹುದು. ಭಾಷಾದರಿದ್ರರು ಎಂದೂ ಆಳವಾಗಿ ಪ್ರಸ್ತುತವೆನ್ನುವಂತೆ ಅಮೂರ್ತ ಚಿಂತನೆಯನ್ನು ದಕ್ಕಿಸಿಕೊಳ್ಳಲಾರರು. ಗಣಿತಶಾಸ್ತ್ರ ಮಾತ್ರ ಇದಕ್ಕೆ ವಿನಾಯಿತಿಯೇನೋ – ನನಗೆ ತಿಳಿಯದು. ನಮ್ಮ ಕಾಲದ ಮಹಾನ್ ವ್ಯಕ್ತಿಗಳಾದ ಇಬ್ಬರು – ಮಹಾತ್ಮಗಾಂಧಿ ಮತ್ತು ಐನ್‌ಸ್ಟೇನ್ – ತಮ್ಮ ವಿಶಿಷ್ಟ ಸಂಸ್ಕೃತಿಗಳಲ್ಲಿ ಬೇರೂರಿದ್ದವರು ಮಾತ್ರವಲ್ಲ – ಆ ಮೂಲಗಳಿಂದಲೇ ಜಗದ್‌ವ್ಯಾಪಿಯಾಗುವ ಒತ್ತಡಗಳಿಗೆ ಒಳಗಾಗಿ, ಚಿಂತಿಸಿ ಕ್ರಿಯಾಶೀಲರಾದವರು.

* * *

ಕನ್ನಡತನದ ಸಾತ್ವಿಕ ಕೆಚ್ಚಿನಿಂದ ಕ್ರಿಯಾಶೀಲನಾಗುವವನು ಈ ಕಾಲದ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ, ಎಂಥ ನಿಲುವು ತಾಳಿ ಹೋರಾಡುತ್ತಾನೆ ಎಂಬುದನ್ನು ನೋಡೋಣ. ಸ್ಥೂಲವಾಗಿ ಕೆಲವು ಪ್ರಶ್ನೆಗಳಿಗೆ ನಮ್ಮ ಉತ್ತರಗಳನ್ನು ಹೀಗೆ ಸ್ಪಷ್ಟಪಡಿಸಿಕೊಳ್ಳಬಹುದೆಂದು ಈ ಸಭೆಯಲ್ಲಿ ವಿನಂತಿಸಿಕೊಳ್ಳುತ್ತೇನೆ.

ಮೊದಲನೆಯ ನಮ್ಮ ಉಳಿವಿನ, ಬೆಳವಣಿಗೆಯ ಸೂತ್ರ: ವಿಕೇಂದ್ರಿಕರಣ. ದೂರದರ್ಶನದಲ್ಲಿ ಬೆಂಗಳೂರಿನ ಕಾರ್ಯಕ್ರಮ ಕೊನೆಯಾಗುತ್ತಿದ್ದಂತೆ ಇನ್ನು ಮುಂದೆ ರಾಷ್ಟ್ರೀಯ ಕಾರ್ಯಕ್ರಮ ಎಂದು ಹೇಳಲಾಗುತ್ತದೆ. ಬೆಂಗಳೂರಲ್ಲಿ ನಡೆಯುವುದೇನು ರಾಷ್ಟ್ರದ ಕೆಲಸವಲ್ಲವೆ? ಗೋವಿನ ಹಾಡಿನ ಕವಿಗೆ ಕರ್ನಾಟಕ ದೇಶವಿರುವುದು ‘ಧರಣಿ ಮಂಡಲ ಮಧ್ಯದೊಳಗೆ’. ಯಾವುದೇ ಹಳ್ಳಿಯ ಬಾವಿಯಿಂದ ಎತ್ತಿದ ನೀರನ್ನು ತಲೆಯ ಮೇಲೆ ಹೊಯಿದುಕೊಳ್ಳುವಾಗ ನಮ್ಮ ಪ್ರಾರ್ಥನೆ: ‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿ ಕುರು’. ಭಾರತದ ಎಲ್ಲ ಪವಿತ್ರ ಜಲಗಳೇ ಈ ಬಿಂದಿಗೆಯಲ್ಲಿ ನೀವು ಬಂದೊದಗಿ ಎಂದು ಹೇಳುತ್ತೇವೆ. ಭಾರತದ ಕೇಂದ್ರ ದೆಹಲಿ ಮಾತ್ರವಲ್ಲ, ಪ್ರತಿ ಊರು ಭಾರತದ ಕೇಂದ್ರವೇ. ಹಾಗೆ ತಿಳಿಯದಿದ್ದಲ್ಲಿ,  ತಿಳಿದು ವಿಕೇಂದ್ರೀಕರಿಸದಿದ್ದಲ್ಲಿ ನಾವು ‘ಬಾಲ್ಕನೈಸ್’ ಆಗುತ್ತೇವೆ, ಛಪ್ಪನ್ನೈವತ್ತಾರು ದೇಶಗಳಾಗಿ ಒಡೆದು ಹೋಗುತ್ತವೆ. If you do not decentralise, you will balkanise – ಇದು ನಮ್ಮ ಎಚ್ಚರಿಕೆಯ ಮಂತ್ರವಾಗಬೇಕು. ವಿಕೇಂದ್ರಿಕರಣ, ಇಲ್ಲವೇ ಛಿದ್ರೀಕರಣ – ಇದನ್ನು ಅರಿಯದ ಪ್ರಭುತ್ವ ಮೂರ್ಖತನದ್ದು. ಪಂಜಾಬ್, ಕಾಶ್ಮೀರ, ಅಸ್ಸಾಂ – ಈಗಾಗಲೇ ನಮ್ಮನ್ನು ಎಚ್ಚರಿಸಿವೆ. ಒಮ್ಮೆ ಛಿದ್ರವಾದರೆ ನಮ್ಮ ಭದ್ರತೆಗೆ ಮಾತ್ರ ನಷ್ಟವಲ್ಲ – ಭಾರತ ಮತ್ತೆ ಹಿಂದೆ ಸರಿದೀತು. ಆಧುನಿಕ ಯಂತ್ರ ಯುಗದಲ್ಲು ಛಿದ್ರವಾಗುವುದಕ್ಕೂ, ಗ್ರಾಮೀಣ ಉತ್ಪಾದನಾ ಯುಗದಲ್ಲಿ ಹಲವು ರಾಜ್ಯಗಳಾಗಿ ಕಾದಾಡುತ್ತಾ ಬದುಕಿದ್ದಕ್ಕೂ ನಡುವೆ ವ್ಯತ್ಯಾಸವಿದೆ. ಈ ಕಾಲದಲ್ಲಿ ರಾಜಕೀಯ ಮನೆ ಮನೆಯನ್ನು ಪ್ರವೇಶಿಸುತ್ತದೆ. ನಮ್ಮ ಇಡೀ ಸಂಸ್ಕೃತಿಯನ್ನು ಬದಲಾಯಿಸುತ್ತದೆ. ವಿಶ್ವ ಭಾವನೆಯತ್ತ ದೊಡ್ಡ ಪ್ರಮಾಣದ ಪ್ರಯೋಗ ಮಾಡಬಲ್ಲ – ಅನೇಕತೆಯಲ್ಲಿ ಏಕತೆ ಪಡೆದು ಪುಟ್ಟ ವಿಶ್ವೇ ಆಗಿರುವ ನಮ್ಮ ಭಾರತ, ಎಲ್ಲ ಧರ್ಮಗಳ, ಎಲ್ಲ ಭಾಷೆಗಳ, ಎಲ್ಲ ಶತಮಾನಗಳ ಸಹಬಾಳ್ವೆಯ ಭಾರತ – ಭವಿಷ್ಯದ ಒಂದು ದೊಡ್ಡ ಸವಾಲನ್ನೇ ಕಳೆದುಕೊಂಡು ಕುಗ್ಗಿಬಿಡುತ್ತದೆ. ಆದ್ದರಿಂದ ಭಾರತವನ್ನು ನಿಜವಾಗಿ ಪ್ರೀತಿಸುವ ಮನಸ್ಸು ಇಲ್ಲಿನ ಸಹಬಾಳ್ವೆಗೆ, ಬಹುತ್ವದ ಶ್ರೀಮಂತಿಕೆಗೆ, ಪ್ರಜಾತಂತ್ರದಲ್ಲಿ ಮಾತ್ರ ಸಲ್ಲುವ ಅನೇಕತೆಗೆ ಅತಿ ಅಗತ್ಯವಾದ ಆರ್ಥಿಕ ನಿರ್ವಹಣೆಯ ವಿಕೇಂದ್ರಿಕರಣವನ್ನು ಜಾರಿಗೆ ತರಬೇಕು. ರಾಜ್ಯಗಳು ಕೇಂದ್ರದ ಕೈಗೊಂಬೆಗಳಾಗಬಾರದು. ನಮ್ಮ ಸಂವಿಧಾನದ ಮಾತುಕೇಂದ್ರವಲ್ಲ, ಒಕ್ಕೂಟ. ಭಾರತ ಹಲವು ರಾಜ್ಯಗಳ ಒಕ್ಕೂಟ, ಯೂನಿಯನ್.

ಪ್ರಭುತ್ವ ದೆಹಲಿಯಿಂದ ಬೆಂಗಳೂರಿಗೆ ವರ್ಗಾವಣೆಯಾದರೆ ಮಾತ್ರ ಸಾಲದು. ಬೆಂಗಳೂರಿಂದ ಪ್ರತಿ ಜಿಲ್ಲೆಗೆ, ಜಿಲ್ಲೆಯಿಂದ ಪ್ರತಿ ಹಳ್ಳಿಗೆ ವರ್ಗಾವಣೆಯಾಗಬೇಕು. ಅಂದರೆ ಬೆಳಗಾವಿಯ ಹಿತರಕ್ಷಕರು ಬೆಳಗಾವಿಯವರೇ. ಹೀಗಾದಾಗ ನಮ್ಮ ಅನೇಕ ಗಡಿ ಸಮಸ್ಯೆಗಳು ಬಗೆಹರಿಯಬಲ್ಲವು. ಯಾಕೆಂದರೆ ಈ ಭಾರತದಲ್ಲಿ ಸರ್ಜನ್ ಥರ ಕೊಯ್ದು ರಾಜ್ಯಗಳನ್ನು ವಿಂಗಡಿಸುವುದು ಸಾಧ್ಯವೇ ಇಲ್ಲ. ವಿಕೇಂದ್ರೀಕರಣ ಒಂದೇ ಇದಕ್ಕೆ ಪರಿಹಾರ. ನೀರಿನಂತೆ ಜನರೂ ಇಲ್ಲಿ ಹರಿದಾಡಿ ಬದುಕುತ್ತಾರೆ. ಆದ್ದರಿಂದಲೇ ಕಾವೇರಿ ಜಲ ವಿವಾದದಂಥ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಸಿಗದು. ಕೊಡುಕೊಳ್ಳುವ ವಿವೇಕದಲ್ಲಿ ಇದು ಬಗೆಹರಿಯಬೇಕು. ರಾಜಕೀಯದ ಸ್ವಾರ್ಥದಲ್ಲಿ ಇದು ಬಗೆಹರಿಯಲಾರದು. ಅನ್ನ ನೀರಿನ ಪ್ರರ್ಶನೆ ಯಾರ ಪ್ರತಿಷ್ಠೆಯದೂ ಅಲ್ಲ. ಜಾಣನ್ನೂ, ವಿವೇಕಿಯೂ, ಮುತ್ಸದ್ದಿಯೂ, ಇತರರಿಗೂ ಸರಿ ಕಾಣುವಂತೆ ವರ್ತಿಸುವವನೂ ಇದನ್ನು ಬಗೆಹರಿಸಬೇಕು. ಆಸನಕಂಪದಿಂದ ದಿಕ್ಕೆಟ್ಟ ಮುಖ್ಯಮಂತ್ರಿಗಳು ನಮ್ಮ ಹಿತಕ್ಕೂ ಮಾರಕರಾಗಬಲ್ಲರು. ಕನ್ನಡ ಹಿತರಕ್ಷಕ ನಾಯಕ ಎಲ್ಲ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ತುಂಬುವುದಿಲ್ಲ. ಇಂಥ ಕನ್ನಡದ ನಾಯಕನಿಗೆ ಆತ್ಮರಕ್ಷಣೆ, ಪರಹಿತ ಚಿಂತನೆ ಬೇರೆ ಬೇರೆಯಲ್ಲದ ಒಂದುಹೃದಯವಂತ ನೆಲೆಯೂ ಇದೆ. ಆ ನೆಲೆ ಕಂಡುಕೊಳ್ಳದ ಹೊರತು ನಾವು ನೆರೆ ರಾಜ್ಯಗಳ ಜೊತೆ ನಾಗರಿಕವಾದ ಸಂಬಂಧ ಸೃಷ್ಟಿಸಿಕೊಳ್ಳಲಾರೆವು. ವಿಕೇಂದ್ರೀಕೃತವೂ, ಹಲವು ಪಕ್ಷಗಳ ಒಕ್ಕೂಟದ್ದೂ ಆಗಲಿರುವ ಮುಂದಿನ ಭಾರತದಲ್ಲಿ ಈ ಗುಣಗಳು ಮುಖ್ಯವಾಗುತ್ತವೆ. ಭಾರತದ ಅದನ್ನು ಕಲಿಯದಿದ್ದಲ್ಲಿ ನಾವು ಏಕಾಧಿಪತ್ಯದಲ್ಲಿ ಸೊಕ್ಕಿನ ಸೋವಿಯಟ್ ಯೂನಿಯನ್ನಂತೆ ಛಿದ್ರವಾಗುವುದು ಖಂಡಿತ.

ಎರಡನೆಯ ನಮ್ಮ ಸೂತ್ರ: ಯಾವ ರಾಜ್ಯದಲ್ಲಿ ನಾವು ನೆಲೆಸಿ ವ್ಯವಹಾರ ಮಾಡುತ್ತೇವೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು, ಮಕ್ಕಳಿಗೆ ಕಲಿಸಬೇಕು. ಹಾಗೆಯೇ ಕನ್ನಡನಾಡಿಗೆ ವಲಸೆ ಬಂದ ತಮಿಳಿನವನು ಕನ್ನಡ ಕಲಿಯಬೇಕು. ತಾನು ಬಾಳುವ ಕರ್ನಾಟಕದ ಪರಿಸರ ತನ್ನ ಹಿತದ ಸಾಧನೆಗೆ ಅಗತ್ಯವೆಂದು ತಿಳಿಯಬೇಕು. ಕವಿಯೊಬ್ಬರು ಬರೆದಿದ್ದಾರೆ; ನಾನು ಅಡಿಗೆ ಮನೆಯಲ್ಲಿ ತಮಿಳನ್ನೂ, ಬೀದಿಯಲ್ಲಿ ಕನ್ನಡವನ್ನೂ, ಮಹಡಿ ಮೇಲೆ ಇಂಗ್ಲಿಷನ್ನೂ ಮಾತಾಡಿ ಬೆಳೆದವನು ಎಂದು. ಈಗ ಇವರು ಬರೆಯುತ್ತಿರುವುದು ಕನ್ನಡ ಮತ್ತು ಇಂಗ್ಲಿಷಿನಲ್ಲಿ. ಭಾಷಾಂತರ ಮಾಡುವುದು ಕನ್ನಡದಿಂದ ಮತ್ತು ತಮಿಳಿನಿಂದ ಇಂಗ್ಲಿಷಿಗೆ. ತಾಯಿ ಅಡುಗೆ ಮನೆಯಲ್ಲಿ ಗೆಳೆಯರು ಬೀದಿಯಲ್ಲಿ, ಪ್ರಾಪಂಚಿಕ ಯಶಸ್ಸನ್ನು ಆಶಿಸುವ ತಂದೆ ಮಹಡಿಯಲ್ಲಿ ಇದೊಂದು ರೂಪಕವಿದ್ದಂತಿದೆ, ಎಲ್ಲ ಭಾರತೀಯರಿಗೂ. ಬಹುಸಂಖ್ಯಾತ ಜನ ಇನ್ನೂ ತಮ್ಮ ತಮ್ಮ ಜಾತಿಯ ವ್ಯವಹಾರಗಳನ್ನು ಜೀವನದ ಆಪ್ತ ಕಾರ್ಯಗಳಲ್ಲಿ ಬಿಟ್ಟಿಲ್ಲವಲ್ಲ? ಆದ್ದರಿಂದ ತಮ್ಮ ಹೆಣ್ಣು ಮಕ್ಕಳು ಮದುವೆಯಾಗಲು ವಿಶಾಲ ಕ್ಷೇತ್ರ ಬೇಕೆಂದು ಕನ್ನಡನಾಡಿನ ತಮಿಳರು ಅಲ್ಪ ಸ್ವಲ್ಪ ತಮಿಳನ್ನು ಉಳಿಸಿಕೊಳ್ಳಬೇಕಾಗುತ್ತದೆ – ಹುಡುಗಿಯ ವರ ತಮಿಳುನಾಡಿನಲ್ಲೋ ದೆಹಲಯಲ್ಲೋ ಇರಬಹುದಾದ್ದರಿಂದ. ಮನೆಗೊಂದು ಭಾಷೆ ಹೀಗಾಗಿ ಉಳಿದಿರುತ್ತದೆ. ಕನ್ನಡನಾಡಿನಲ್ಲಿ ಮರಾಠಿ, ಉರ್ದು, ತೆಲುಗು, ಸಿಂಧಿ ಇತ್ಯಾದಿ ಮಾತಾಡುವ ಜನರಿಗೆ. ಹಾಗೆಯೇ ಹೊರಡನಾಡಿನಲ್ಲಿರುವ ಕನ್ನಡಿಗ ಕನ್ನಡ ಉಳಿಸಿಕೊಳ್ಳಬೇಕಾಗುತ್ತದೆ – ಕೇವಲ ಮದುವೆ, ಊಟ, ಉಪಚಾರಕ್ಕಾಗಿ ಮಾತ್ರವಲ್ಲ, ತನ್ನತನದ ಹಲವು ಕೊಂಡಿಗಳ ಸರಪಳಿಯಲ್ಲಿ ಒಂದು ಕೊಂಡಿಯನ್ನು ಉಳಿಸಿಕೊಳ್ಳಲೆಂದು.

ಈ ವಿಷಯದಲ್ಲಿ ಯಾರೂ ಅಸಹನೆ ತೋರಬಾರದು. ಆದರೆ ಬೆಂಗಳೂರಲ್ಲಿದ್ದು, ಬೀದಿಯ ವ್ಯವಹಾರದಲ್ಲೂ ಕನ್ನಡ ಬಾರದವರನ್ನು ಕಂಡಾಗ ನಮಗೆ ಪಶ್ಚಾತ್ತಾಪವಾಗುತ್ತದೆ. ತನ್ನಸದ್ಯದ ಪರಿಸರಕ್ಕೇ ಕುರುಡನೂ ಕಿವುಡನೂ ಆಗುವ ದುಸ್ಥಿತಿಗೆ ಯಾರೂ ಬರಬಾರದು. ಮಹಾತ್ಮಗಾಂಧಿ ವಿಶ್ವವಿದ್ಯಾಲಯ ಪ್ರಪ್ರಥಮವಾಗಿ ಇಡೀ ಕೊಟ್ಟಾಯಮ್‌ನ್ನು ಅಕ್ಷರಸ್ಥ ಮಾಡಿದ ಸಂದರ್ಭದಲ್ಲಿ ನಾನು ಹೇಳಿದೆ. ನೂರಕ್ಕೆ ನೂರು ಅಕ್ಷರಸ್ಥರಾದ ನಗರ ಇದೆಂದು ನಾನು ಹೇಳಬೇಕಾದ ಈ ಸಂದರ್ಭದಲ್ಲಿ ಒಬ್ಬನೇ ಒಬ್ಬ ಇದಕ್ಕೆ ವಿನಾಯಿತಿ – ಇಲ್ಲಿರುವ ಅನಕ್ಷರಸ್ಥ ನಾನೊಬ್ಬನೇ ಎಂದೆ. ನಿಜ – ತನ್ನ ಪ್ರದೇಶದ ಭಾಷೆಯನ್ನು ಓದಿ ತಿಳಿಯಲು ಬಾರದವನೂ ಅನಕ್ಷರಸ್ಥನೇ. ಆದ್ದರಿಂದ ಕರ್ನಾಟಕದಲ್ಲಿರುವ ತಮಿಳರು, ಉರ್ದುಜನ, ಸಿಂಧಿಗಳು – ಎಲ್ಲರೂ ಅಕ್ಷರಸ್ಥರಾಗುವಂತೆ ಒತ್ತಾಯಿಸುವುದು ನಮ್ಮ ಆದ್ಯ ಕರ್ತವ್ಯವೆನ್ನಬೇಕಾಗುತ್ತದೆ. ಯಾಕೆಂದರೆ ಕನ್ನಡ ಬಾರದವರೆಲ್ಲ ಕರ್ನಾಟಕದಲ್ಲಿ ಅನಕ್ಷರಸ್ಥರೇ. ಹಾಗೂ ಕನ್ನಡ ಸಂಸ್ಕೃತಿಗೆ ಈ ನೆಲದಲ್ಲಿದ್ದೂ ಸ್ಪಂದಿಸಲಾರದವರು ಕುರುಡರಾದ ಅಸಂಸ್ಕೃತರೇ.

ಈ ನೇತ್ಯಾತ್ಮಕ ಪ್ರತ್ಯೇಕತೆಗೆ ಈಚಿನ ಒಂದು ಉದಾಹರಣೆ: ತಿರುವಳ್ಳುವರ್ ಪ್ರತಿಮೆ ಬಗ್ಗೆ ಎದ್ದಿರುವ ವಿವಾದ. ತಮಿಳರಿಗೆ ತಿರುವಳ್ಳುವರ್ ತಮ್ಮ ಪ್ರತಿಷ್ಠೆಯ ಗುರುತಾಗಬಾರದು. ಪ್ರಪಂಚದ ಸಂಸ್ಕೃತಿಗೆ ತಿರುವಳ್ಳುವರ್ ತಮಿಳಿನ ಕೊಡುಗೆಯಾಗಿ ಅವರಿಗೆ ಕಂಡಿದ್ದರೆ, ತಮ್ಮ ಪ್ರತ್ಯೇಕ ಹಿತಾಸಕ್ತಿಯನ್ನು ಕನ್ನಡ ನೆಲದಲ್ಲಿ ಊರುವ ಸಂಕೇತವಾಗದಿದ್ದರೆ, ತಿರುವಳ್ಳುವರ್ ಪ್ರತಿಮೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರು ದಾನ ಮಾಡಬೇಕಿತ್ತು. ಕನ್ನಡ ಸಾಹಿತ್ಯದೊಳಗೆ ಯಾವತ್ತೂ ಕ್ರಿಯಾಶೀಲವಾಗಿ ಸ್ಪಂದಿಸುವ ವಿಶ್ವ ಭಾವನೆಗೆ ದ್ಯೋತಕವಾಗಿ ಕನ್ನಡ ಸಾಹಿತಿಗಳನ್ನು ನಾವು ಮರ್ಯಾದಿಸುವ ವಲಯದಲ್ಲಿ – ತಮಿಳರು ಅಧಿಕ ಸಂಖ್ಯೆಯಲ್ಲಿರುವ ಜಾಗದಲ್ಲಿ ಅಲ್ಲ – ತಿರುವಳ್ಳುವರ್ ಸ್ಥಾಪಿತವಾಗಬೇಕಿತ್ತು. ನಾವು ಕೊಡುಕೊಳ್ಳುವ ಸರಿಯಾದ ವಿಧಾನವೆಂದರೆ ಇದು. ಕೇವಲ ರಾಜಕೀಯವಾಗಿ ತಮಿಳರು ಯೋಚಿಸುವುದರಿಂದ ಒಬ್ಬ ಕನ್ನಡ ಹಿರಿಯ ಸಾಹಿತಿಯನ್ನು ಪ್ರತಿಮೆಯ ಅನಾವರಣಕ್ಕೆ ಕರೆಯಬೇಕೆಂದು ಕೂಡ ಅವರಿಗೆ ತೋಚದೆ ಹೋದದ್ದು ದುರದೃಷ್ಟಕರ.

ಇಲ್ಲಿರುವ ತಮಿಳರು ಕನ್ನಡಕ್ಕೆ ಸ್ಪಂದಿಸಿದಲ್ಲಿ ತಮಿಳು ಕೂಡ ಬೆಳೆದೀತು. ಬೇಂದ್ರೆ ಕುವೆಂಪು ಕಾರಂತ ಪು.ತಿ.ನ. ರಂಥವರಿಂದ, ಈಗಿನ ಲೇಖಕರಿಂದ, ದ್ರಾವಿಡ ಚಳವಳಿಯ ಬಾಯ್ಬಡಕತನದಿಂದ ಮರುಳಾದ ತಮಿಳುರು ಕಲಿಯುವುದು ಬಹಳ ಇದೆ. ಇಂಗ್ಲೆಂಡ್ ದೇಶ ಫ್ರಾನ್ಸ್‌ನಿಂದ ಸದಾ ಕಲಿಯುತ್ತಿಲ್ಲವೆ? ಹಾಗೆ.

ತಮಿಳರ ದಬ್ಬಾಳಿಕೆಯಿಂದ ಕನ್ನಡದವರು ತಮ್ಮ ಉದಾರತೆಯನ್ನು ಕಳೆದುಕೊಳ್ಳಬಾರದು. ಆದ್ದರಿಂದಲೇ ಕನ್ನಡಿಗನಾಗಿ ನಾನು ತಿರುವಳ್ಳುವರ್ ಪ್ರತಿಮೆ ಪರಮಾತಾಡಿದ್ದು. ಈಗ ಸಂಪೂರ್ಣವಾಗಿ ನನ್ನ ಮನಸ್ಸನ್ನು ಬಿಚ್ಚಲು ಅವಕಾಶವಾಗಿದೆ – ಅದರಿಂದ ನನಗೆ ಸಮಾಧಾನವಾಗಿದೆ.

ಈ ಜನರು ಫ್ರಾನ್ಸ್‌ನಲ್ಲೋ, ಡೆನ್ಮಾರ್ಕಲ್ಲೋ, ರಷ್ಯದಲ್ಲೋ ಇದ್ದಿದ್ದರೆ ಏನು ಮಾಡುತ್ತಿದ್ದರು? ಆ ಭಾಷೆಗಳನ್ನು ಕಲಿಯದೇ ಇರುವುದು ಸಾಧ್ಯವಿರುತ್ತಿತ್ತೆ? ಆದರೆ ಇಲ್ಲಿ ಯಾಕೆ ಸಾಧ್ಯ? ನಾವೇ ಇದಕ್ಕೆ ಕಾರಣ. ಯಾಕೆಂದರೆ ಕನ್ನಡದ ಜನ ಈ ದೇಶದ ನಿಜವಾದ ಯಜಮಾನ ಇಂಗ್ಲಿಷ್ ಎಂದು ತಿಳಿದಿರುವುದರಿಂದ, ನಮ್ಮಮಕ್ಕಳು ಆದಷ್ಟು ಕಡಿಮೆ ಕನ್ನಡವನ್ನೂ ಆದಷ್ಟು ಹೆಚ್ಚು ಇಂಗ್ಲಿಷನ್ನೂ ಮಾತಾಡುವ ಸಾಧ್ಯತೆಯೇ ಉತ್ತಮ ವಿದ್ಯಾಭ್ಯಾಸ ಎಂದು ತಿಳಿದಿರುವುದರಿಂದ. ಗೋಕಾಕ್ ವರದಿಯ ಭಾಷಾ ನೀತಿಗೆ ನಿಜವಾದ ವೈರವಿದ್ದದ್ದು, ತಮಿಳು, ಉರ್ದು ಭಾಷೆಗಳನ್ನು ಉಳಿಸಿಕೊಳ್ಳಬೇಕೆಂಬ ಛಲದಲ್ಲಿ ಅಲ್ಲ. ಪ್ರತ್ಯಕ್ಷ ಕಂಡದ್ದು ಹಾಗೆ; ಗುಪ್ತವಾಗಿ ಕೆಲಸ ಮಾಡಿದ್ದು ಇಂಗ್ಲಿಷಿಗೆ ಸಮಯ ಕಡಿಮೆಯಾಗುತ್ತದೆಂದು.

ಮೂರನೆಯ ಸೂತ್ರ: ಕರ್ನಾಟಕದಲ್ಲಿ ಎಲ್ಲ ಹಂತದಲ್ಲೂ ನಮ್ಮ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡವಾಗಬೇಕೆಂಬುದು. ಯಾವ ಪ್ರಜಾತಂತ್ರದಲ್ಲೂ ಅಲ್ಪಸಂಖ್ಯಾತರ ಭಾಷೆ ಕೇವಲ ವಿದ್ಯಾವಂತರ ಭಾಷೆ – ಆಡಳಿತ ಭಾಷೆಯಾಗಲಾರದು. ಪರನಾಡಿನ ಐ ಎ ಎಸ್‌ ಜನ ಇದಕ್ಕೆ ವಿರೋಧಿಗಳಾಗಿದ್ದರೆ ನಾವು ಐಎಎಸ್ಸೇ ನಮಗೆ ಬೇಡವೆನ್ನಲು ತಯಾರಿರಬೇಕು. ಕೇವಲ ಜಾಣತನ ಆಡಳಿತ ನಡೆಸಲು ಸಾಲದು. ಹಲವು ಭಾಷೆಗಳ ಅಗತ್ಯದ ಮಹಾನ್ ಜಾಣರು ಇರಬೇಕಾದ್ದು ವಿಜ್ಞಾನದಲ್ಲಿ, ಕಲೆಯಲ್ಲಿ, ತಂತ್ರಜ್ಞಾನದಲ್ಲಿ, ಮಾನವ ಶಾಸ್ತ್ರದಲ್ಲಿ. ಇವರಂಥದವರು ಅಧಿಕಾರದ ಆಸೆಯಿಂದ ಕಡತದಲ್ಲಿ ಕಣ್ಣು ನೆಟ್ಟವರಾದರೆ ಒಂದೋ ಮನೋರೋಗಿಗಳಾಗಿ ಬಳಲುತ್ತಾರೆ; ಅಥವಾ ತಮ್ಮಜಾಣತವನ್ನು ಜನರಿಗೆ ಕಂಟಕವಾಗುವಂತೆ ಬಳಸುವವರಾಗುತ್ತಾರೆ. ಆಡಳಿತಗಾರ ಹೃದಯವಂತನಾಗಿರಬೇಕು, ಜನರಿಗೆ ಸುಲಭಲಭ್ಯನಾಗಿರಬೇಕು, ಸರಳನೂ ದಕ್ಷನೂ ವಿವೇಕಿಯೂ ಆಗಿರಬೇಕು. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ದೆಹಲಿಯ ಜೊತೆ ವ್ಯವಹರಿಸುವ ಅಗತ್ಯವೂ ಕಮ್ಮಿಯಾಗುತ್ತ ಹೋಗುತ್ತದೆಯಾದ್ದರಿಂದ ಕನ್ನಡದಲ್ಲಿ ವ್ಯವಹರಿಸುವುದರಿಂದ ನಷ್ಟವೂ ಆಗುವುದಿಲ್ಲ. ಈ ಆಡಳಿತ ಭಾಷೆ ಸುಲಭವೂ ಸರಳವೂ ಆಗಿರಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪುತಿನ ಒಮ್ಮೆ ಹೇಳಿದ್ದರು: ಕನ್ನಡ ಅಪ್ಸರೆಯಿದ್ದಂತೆ, ಯಾವ ಭಾಷೆಯಿಂದ ಇವಳು ಪ್ರಭಾವಿತಳಾದರೂ ಕನ್ನೆಯಾಗಿ ಉಳಿದಿರುತ್ತಾಳೆ. ಉಗ್ರ ತಮಿಳರ ಮಡಿ ನಮಗಿಲ್ಲದಿರುವುದು ನಮ್ಮ ಪುಣ್ಯ.

ಅಂದರೆ, ಕರ್ನಾಟಕದಲ್ಲಿ ಆಡಳಿತಗಾರರಾಗಬೇಕಾದರೆ, ಉದ್ಯಮಶೀಲರಾಗಬೇಕಾದರೆ ಅವರೆಲ್ಲರೂ ಕನ್ನಡ ಕಲಿತಿರಬೇಕು. ಮೂರ್ಖನಲ್ಲದ ಪ್ರತಿ ಮನುಷ್ಯನೂ ತಾನು ಯಾರೊಡನೆ ಕೆಲಸ ಮಾಡಬೇಕೋ ಅವರ ಭಾಷೆಯನ್ನು ಕಲಿತಿರುತ್ತಾನೆ. ಕೆಲವು ವರ್ಷ ಮಾತ್ರ ಇಲ್ಲಿ ಬಂದಿರುವವರಿಗೆ ಕನ್ನಡ ಗೊತ್ತಿಲ್ಲದಿರುವುದು ತೊಡಕಾದರೆ, ಇಲ್ಲೇ ನೆಲೆಸುವವರಿಗೆ ಕನ್ನಡ ಗೊತ್ತಿಲ್ಲದಿರುವುದು ಕಂಟಕಪ್ರಾಯ. ಅಥವಾ ಈ ಜನ ಪರಿಸರಕ್ಕೆ ಸ್ಪಂದಿಸಲಾರದ ದಡ್ಡರು ಎನ್ನಬೇಕಾಗುತ್ತದೆ. ಅಥವಾ ನಾವು, ಕನ್ನಡದ ಜನ, ಇಂಗ್ಲಿಷ್ ಭಾಷೆಯ ದ್ವೀಪಗಳನ್ನು ಸೃಷ್ಟಿಸಿ, ಆ ದ್ವೀಪಗಳಲ್ಲಿ ನಮ್ಮ ವರ್ಗದ ಈ ಜನರನ್ನು ಸಹಪ್ರಜೆಗಳಾಗಿ ಮಾಡಿಕೊಂಡು, ಒಂದು ಕೃತಕ ವಲಯ ಸೃಷ್ಟಿಸಿಕೊಂಡಿರುವುದರಿಂದ ಕೆಲವು ಕಾಲ ಇದು ಸಹ್ಯವಾಗಿರುತ್ತದೆ. ಆದರೆ ಹೀಗೆ ಬದುಕುವವರು ಸಾಂಸ್ಕೃತಿಕವಾಗಿ ಸೊರಗುತ್ತಾ ಹೋಗುತ್ತಾರೆಂಬುದು ನಿಜ. ಅವರ ಹೆಂಡಂದಿರು ಮಾರ್ಕೆಟ್ಟುಗಳಿಗೆ ಹೋಗುವವರಾದರೆ, ಮಕ್ಕಳು ಬೀದಿಗಳಲ್ಲಿ ಆಡುವವರಾದರೆ ಮಾತ್ರ ಅವರ ಹವಾನಿಯಂತ್ರಿಕ ಮನೆಗಳಲ್ಲಿ ಒಂದಿಷ್ಟು ಪರಿಸರದ ಚೈತನ್ಯ ಇಣುಕಬಹುದು ಅಷ್ಟೆ.

ಕನ್ನಡ ಇಲ್ಲಿನ ಆಡಳಿತ ಭಾಷೆಯಾದಲ್ಲಿ, ವಿಕೇಂದ್ರೀಕರಣದಿಂದ ಅದು ಸುಸೂತ್ರವಾದಲ್ಲಿ ಇಲ್ಲಿ ಬದುಕುವ ಜನರೆಲ್ಲರೂ ತಮ್ಮ ಮಾತೃ ಭಾಷೆಗಳನ್ನು ಕೆಲವು ಆತ್ಮೀಯ ಅಗತ್ಯಗಳಿಗೆ ಉಳಿಸಿಕೊಂಡು ಕನ್ನಡ ಕಲಿತವರಾದಲ್ಲಿ, ನಮ್ಮ ನಾಲ್ಕನೆಯ ಸೂತ್ರ: ಕನ್ನಡವೇ ಜ್ಞಾನಾರ್ಜನೆಯ ಮಾಧ್ಯಮವಾಗುವುದು ಅತ್ಯಂತ ಸಹಜವಾದ ನಿರ್ಧಾರವಾಗಿರುತ್ತದೆ. ಕುವೆಂಪು ಮತ್ತು ಮಾಸ್ತಿಯವರು ಈ ವಿಷಯದ ಬಗ್ಗೆ ಎಷ್ಟು ವೈಜ್ಞಾನಿಕವಾಗಿ ಮಾತಾಡಿದ್ದಾರೆಂದರೆ, ನಾವು ಹೆಚ್ಚೇನೂ ಹೇಳಬೇಕಾಗಿಲ್ಲ. ಜೀವಿಸುವ ಭಾಷೆಯಲ್ಲಿ ಕಲಿಯದವನು ಕೇವಲ ಬಾಯಿಪಾಠದ ಗಿಣಿಯಾಗುತ್ತಾನೆ. ಸ್ವತಂತ್ರ ವಿಚಾರ ಅವನಿಗೆ ಸಾಧ್ಯವಿಲ್ಲ. ಯಾಕೆಂದರೆ ತನ್ನ ನೆಲದಲ್ಲಿ ನಿಂತು ಅವನು ಸಹಜವಾಗಿ ಯೋಚಿಸುವುದಿಲ್ಲ. ಅನುಕರಣೆ ಮಾತ್ರ ಅವನಿಗೆ ಸಾಧ್ಯ. ಯಾವ ಭಾರತೀಯ ಭಾಷೆಯನ್ನೂ ತಿಳಿಯದವನು ತಂತ್ರಜ್ಞಾನ ಆದರೆ, ಇಲ್ಲಿ ಅವನು ಸಮರ್ಥ ಉದ್ಯಮಶೀಲನಾಗಲಾರ. ಮಾನವಶಾಸ್ತ್ರಜ್ಞ ತನ್ನ ಸುತ್ತಲಿನ ಸತ್ಯವನ್ನು ಮುಟ್ಟಿ ಕಚ್ಚಿ ತಿಳಿಯಲಾರ; ತಿಳಿಯಲು ಯಾವುದು ಮುಖ್ಯ ಎಂಬ ಸಂವೇದನೆಯನ್ನೂ ಪಡೆದಿರಲಾರ. ಆದ್ದರಿಂದಲೇ ಕರ್ನಾಟಕದ ಅತ್ಯುತ್ತಮ ಚಿಂತಕರು ಸಹ – ಸಮಾಜಶಾಸ್ತ್ರ, ದರ್ಶನ, ತತ್ವಶಾಸ್ತ್ರ, ರಾಜಕೀಯಶಾಸ್ತ್ರ ಈ ವಿಷಯಗಳಲ್ಲೂ ಅವನ್ನು ಪಾಠ ಮಾಡುತ್ತಿರುವ ಪ್ರಾಧ್ಯಾಪಕರಲ್ಲ, ನಮ್ಮ ಕನ್ನಡ ಸಾಹಿತಿಗಳು. ಇದಕ್ಕೆ ವಿನಾಯಿತಿ ಇದ್ದರೆ, ಅವರು ಕನ್ನಡದಲ್ಲಿ ಬರೆಯುವ ಅಥವಾ ಕೊನೆಯ ಪಕ್ಷ ಕನ್ನಡ ತಿಳಿಯುವ ಶಕ್ತಿಯುಳ್ಳವರಾಗಿದ್ದಾಗ ಮಾತ್ರ.

ಹೀಗೆ ಮಾತಾಡುವ ನಮ್ಮಂಥವರೇ ನಮ್ಮ ಮಕ್ಕಳನ್ನೇ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿಲ್ಲವೆಂಬ ಅಪವಾದವಿಎ. ಇದು ನಿಜವೇ. ನಾವು ಹಳ್ಳಿಗಳಲ್ಲಿದ್ದಾಗ, ಇರುವ ಒಂದೇ ಶಾಲೆ ಕನ್ನಡ ಮಾಧ್ಯಮದ್ದಾಗಿ ಬೇರೆ ದಿಕ್ಕಿಲ್ಲದೆ ಮಕ್ಕಳು ಕನ್ನಡದಲ್ಲಿ ಕಲಿಯುತ್ತವೆ – ಅಷ್ಟೆ ಹಳ್ಳಿಗಳಲ್ಲಿ ಶ್ರೀಮಂತರಾದವರು ತಮ್ಮ ಮಕ್ಕಳನ್ನು ಬೇರೆಡೆ ಇಟ್ಟು ಇಂಗ್ಲಿಷಿನಲ್ಲಿ ಕಲಿಸುತ್ತಾರೆ. ಇನ್ನು ಒಂದೆರಡು ದಶಕಗಳಲ್ಲಿ, ೨೧ನೇ ಶತಮಾನದಲ್ಲಿ ಕನ್ನಡದಲ್ಲಿ ಬರೆಯಬಲ್ಲವರೆಲ್ಲರೂ ಬಡಹಳ್ಳಿಗ ಕುಟುಂಬಗಳಿಂದ ಬಂದವರಾಗಿರುತ್ತಾರೆ. ನಮ್ಮ ಮಧ್ಯಮ ವರ್ಗದ ಸಿಟಿ ಜನರ ಕುಟುಂಬಗಳಿಂದಂತೂ ಅವರು ಬಂದಿರುವುದಿಲ್ಲ. ಯಾಕೆಂದರೆ ಕೊನೆ ಪಕ್ಷ ಹತ್ತನೇ ಇಯತ್ತೆಯ ತನಕವಾದರೂ, ತನ್ನ ಅರಿವಿನ ತೀಕ್ಷ್ಣ ಬೆಳವಣಿಗೆಯ ಹದಿನೈದು ಹದಿನಾರು ವರ್ಷಗಳ ತನಕವಾದರೂ, ಕನ್ನಡದಲ್ಲಿ ವಿಷಯ ಜ್ಞಾನ ಸಂಪಾದಿಸದವನು, ಕನ್ನಡದಲ್ಲಿ ಮಾತಾಡಬಲ್ಲವನಾದರೂ ತನ್ನ ಭಾಷೆಯಲ್ಲಿ ಕ್ರಮೇಣ ಮರೆತುಹೋಗುವ ಅಕ್ಷರ ತಿಳಿದ ಅನಕ್ಷರಸ್ಥನಾಗಿರುತ್ತಾನೆ. ಅಂಥವರು ಬೆಳೆಯುತ್ತಿದ್ದಂತೆ ಓದುವುದೆಲ್ಲ ಸಮೃದ್ಧವಾದ ಮನರಂಜನೆಯ, ಅದರಲ್ಲೂ ಆಧುನಿಕ ಮನರಂಜನೆ ಪಡೆದ ಇಂಗ್ಲಿಷ್ ಇಂಗ್ಲಿಷ್ ಪುಸ್ತಕಗಳನ್ನೇ. ನಮ್ಮ ಕಾರಂತ, ಕುವೆಂಪು, ಮಾಸ್ತಿ, ಬೇಂದ್ರೆ – ಯಾರನ್ನೂ ಇವರು ಓದಿರುವುದಿಲ್ಲ, ‘ಸುಧಾ’ ಮತ್ತು ‘ತರಂಗ’ಗಳನ್ನು ಓದ ಬಯಸುವವರೂ ಇವರಾಗಿರುವುದಿಲ್ಲ. ನಾವು ಉತ್ಪ್ರೇಕ್ಷೆ ಮಾಡುತ್ತಿರಬಹುದು. ಆದರೆ ಅಂಥ ಉತ್ಪ್ರೇಕ್ಷೆಯನ್ನು ಬಯಸುವ ಸಾಂಸ್ಕೃತಿಕ ಬಡತನದ ಅಪಾಯ ಈ ನಮ್ಮ ಸ್ಥಿತಿಯಲ್ಲಿದೆ.

ಸರ್ಕಾರ ನಡೆಸುವ ಯಾವ ಕನ್ನಡ ಮಾಧ್ಯಮ ಶಾಲೆಯೂ ಇಂಗ್ಲಿಷ್ ಮಾಧ್ಯಮ ಶಾಲೆಯಷ್ಟು ಚೆನ್ನಾಗಿರುವುದಿಲ್ಲವೆಂಬುದು ಇದಕ್ಕೆ ಮುಖ್ಯ ಕಾರಣ. ಮೈನಾರಿಟಿ ಜನ ತಮ್ಮ ಸ್ವಾತಂತ್ರ್ಯವನ್ನು ಇಂಗ್ಲಿಷ್ ಮಾಧ್ಯಮದ ವ್ಯಾಪಾರದ ಮೂಲಕ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬುದೂ ನಿಜವೇ. ಆದರೆ ನಾವು ಕನ್ನಡಿಗರೇ ಅದನ್ನು ಬಯಸದಿದ್ದಲ್ಲಿ, ಮತ್ತು ಈ ಬಯಕೆಯ ಹಿಂದೆ ಇರುವ ಒಂದು ಸಾರ್ವತ್ರಿಕ ಸತ್ಯವಾದ ಆಧುನಿಕ ಜಗತ್ ವ್ಯವಸ್ಥೆ (“Modern World System”) ಗೆ ನಾವೆಲ್ಲರೂ ಒಳಗಾಗಬೇಕೆಂಬ ತೃಷೆಯ ರೋಗಕ್ಕೆ ನಾವೆಲ್ಲರೂ ಬಲಿಗಳಾಗದಿದ್ದಲ್ಲಿ, ಈ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ.

ಆಧುನಿಕ ಜಗತ್ ವ್ಯವಸ್ಥೆಗೆ ಅನುಗುಣವಾಗಿ ಭಾರತ ರೂಪುಗೊಳ್ಳುವುದು – ಮಹಾತ್ಮ ಗಾಂಧಿ ಕನಸನ್ನು ತಿರಸ್ಕರಿಸಿ ಬೆಳೆಯುವುದು – ಕೇವಲ ನಮ್ಮ ಆದರ್ಶವಾದೀ ನಿಲುವಿನಿಂದ ಬದಲಾಗುವಂಥದಲ್ಲ. ಇದಕ್ಕೆ ಪರ್ಯಾಯವೆಂದು ಭ್ರಮಿಸುತ್ತಿದ್ದ ಮಾರ್ಕ್ಸ್‌ವಾದೀ ವ್ಯವಸ್ಥೆಗಳೂ ಜಗತ್ತಿನಲ್ಲೆಲ್ಲ ಮುರಿದು ಬೀಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಪ್ರಪಂಚದ ನಾಶದ ಸಾಧ್ಯತೆಯನ್ನು ಕಂದಕದ ಅಂಚಿಗೆ ಬರುವ ತನಕ ಈ ಆಕರ್ಷಕ ರೋಗದ ಅಪಾಯವನ್ನು ನಾವೆಲ್ಲರೂ, ನಮ್ಮ ಅಸ್ತಿತ್ವದಲ್ಲೇ ಅಧಿಕೃತವೆನ್ನುವಂತೆ ತಿಳಿಯಲಾರೆವೆಂದು ಕಾಣುತ್ತದೆ. ಎಲ್ಲರನ್ನೂ ಒಂದೇ ರೂಪಹೀನ ಎರಕದಲ್ಲಿ ಅದ್ದಿ ಕೇವಲ ಗ್ರಾಹಕರನ್ನಾಗಿ ಮಾಡಹೊರಟ ಈ ಆಧುನಿಕ ಜಗತ್‌ವ್ಯವಸ್ಥೆಯ ಹಸಿವಿಗೆ ರುಚಿಯ ಭೇದಗಳು, ಭಾಷೆ ಮತ್ತು ಸಂಸ್ಕೃತಿಯಿಂದ ಹುಟ್ಟುವ ವೈಶಿಷ್ಟ್ಯಗಳು ದೊಡ್ಡ ತೊಡುಕುಗಳು. ಇಂಗ್ಲಿಷ್ ಮೋಹದ ಹಿಂದಿರುವುದು ಕೆಲವು ಸಜ್ಜನರು ತಿಳಿದಂತೆ ಶೇಕ್ಸ್‌ಪಿಯರ್ ವರ್ಡ್ಸ್‌ವರ್ಥರ ಸಾಹಿತ್ಯವಲ್ಲ, ಸತ್ಯಾನ್ವೇಷಣೆಯ ತಪಸ್ಸಿನ ವಿಜ್ಞಾನವೂ ಅಲ್ಲ, ಅದು ನಿಸರ್ಗವನ್ನು ತಾಂತ್ರಿಕತೆಯ ಅಟ್ಟಹಾಸದಲ್ಲಿ ಮೆಟ್ಟಿ ನಿಲ್ಲುವ ಬಹೂತ್ಪನ್ನದ ಸ್ವರ್ಗದ ಲಾಲಸೆ. ಇವತ್ತಿನ ಜಗತ್ತಿನಲ್ಲಿ ಈ ಸಾಧ್ಯತೆ ಯಾರನ್ನು ತಾನೇ ಆಕರ್ಷಿಸುತ್ತಿಲ್ಲ? ಜೊತೆಗೇ ಪರಿಸರದ ಸಮತೋಲನ ನಾಶ ಕೂಡ ಬಾಧಿಸದೇ ಇರುವ ಸೂಕ್ಷ್ಮಜ್ಞರಿಗೂಕೊರತೆಯಿಲ್ಲ. ಈ ಸಂದಿಗ್ಥದಿಂದಾಗಿಯೇ, ನಮ್ಮ ತಪ್ಪಿಗೆ ಶಿಕಷೆ ಈಗ, ಇಲ್ಲೇ, ಸಿಗುವಂತೆ ಕಾಣುವುದರಿಂದಲೇ ಕೆಲವು ರಕ್ಷಣೋಪಾಯಗಳನ್ನಾದರು ನಿರಾಕರಿಸುವಂತಿಲ್ಲ. ಕನ್ನಡತನದ ಆಸೆ ಇಂಥ ಒಂದು ರಕ್ಷಣೋಪಾಯವೆನ್ನಬಹುದು.

ಪ್ರಳಯೋನ್ಮುಖವಾದ ನಮ್ಮ ಜಗತ್ತಿನಲ್ಲಿ ಮನುಷ್ಯನನ್ನು ಪಾಶ್ಚಿಮಾತ್ಯ ತಾಂತ್ರಿಕತೆ ಸ್ವಂತಿಕೆ ಇಲ್ಲದವನನ್ನಾಗಿಯೂ, ಆಕಾರ ಹೀನನನ್ನಾಗಿಯೂ, ಮನೆಯಿಲ್ಲದ ತಬ್ಬಲಿಯನ್ನಾಗಿಯೂ ಮಾಡುವತ್ತ ಕೊಂಡೊಯ್ಯುತ್ತಿದೆ ಎಂದುಹಲವು ಪಾಶ್ಚಿಮಾತ್ಯ ದ್ರಷ್ಟಾರರು ಭಯಪಡುತ್ತಾರೆ ಎಂಬುದು ಈ ರಕ್ಷಣೋಪಾಯಕ್ಕೆ ಸಮರ್ಥನೆ ನೀಡುತ್ತದೆ. ಹೆಗಲ್ ಮತ್ತು ಮಾರ್ಕ್ಸ್‌ರಿಗೆ ಇತಿಹಾಸ ಏರುತ್ತಿರುವ ಸಂಗತಿಯಾದರೆ, ಈ ಏರುವಿಕೆಗೆ ಮಾದರಿ ಯುರೋಪಾದರೆ, ಹೈಡೆಗರ್‌ರಂಥವರಿಗೆ ಈ ಏರುವಿಕೆಯೇ ಮಾನವನ್ನು ತಬ್ಬಲಿಯಾಗಿಸುತ್ತದೆ.

ಇಂಥ ಒಂದು ಐತಿಹಾಸಿಕ ಸಂದರ್ಭದಲ್ಲಿ ಕನ್ನಡದಂತಹ ಭಾಷೆಗಳು ನಾವು ಅಡಗುವ ಜಾಗಗಳಾಗಬಹುದು. ಅಡಗಿದ್ದು ನೆನಪಿನ ಸಾತತ್ಯವನ್ನು ಸಾಧಿಸುವ ಸ್ವಂತಿಕೆಯ ಆಶ್ರಯಸ್ಥಾನಗಳಾಗಬಹುದು. ದುರಾಸೆಯಲ್ಲಿ ತಮ್ಮ ರೂಪವನ್ನು ಕಳೆದುಕೊಳ್ಳುವವರ ನಡುವೆ, ಮಾನವ ಧರ್ಮವನ್ನು ಸಾರಗ್ರಾಹಿಯಾಗಿ ಸ್ವೀಕರಿಸಿದ ಒಂದು ಸಂಸ್ಕೃತಿಯಾಗಿ ಕನ್ನಡ ಹಾಗೂ ಉಳಿದ ಭಾರತೀಯ ಭಾಷೆಗಳು ನಿಲ್ಲಬಹುದು. ಆದರೆ ಅದಕ್ಕಾಗಿ ನಾವು ಐತಿಹಾಸಿಕ ಪ್ರವಾಹದಲ್ಲಿ ಕೊಚ್ಚಿ ಹೋಗದಂಥ ಉಪಾಯಗಳನ್ನು ಹುಡುಕಬೇಕು. ವ್ಯವಹಾರಜ್ಞರೂ, ಚತುರರೂ ಆಗಿ ವರ್ತಿಸಬೇಕು. ಅದಕ್ಕೊಂದು ಉದಾಹರಣೆ ಬೋಧನೆ ಪ್ರೈಮರಿಯಿಂದ ಹಿಡಿದು ಸ್ನಾತಕೋತ್ತರರ ತನಕ ಕನ್ನಡದಲ್ಲೇ ಇರಲಿ ಎನ್ನುವಾಗ ಇಂಗ್ಲಿಷ್ ಭಾಷೆಯನ್ನು ಈಗ ಕಲಿಸುವುದಕ್ಕಿಂತ ಚೆನ್ನಾಗಿ ಕಲಿಸಬೇಕು ಎನ್ನಬೇಕು. ಇಂಗ್ಲಿಷ್ ತಿಳಿಯದ ಚೀನೀ ವಿದ್ಯಾರ್ಥಿಗಳು ಅಮೆರಿಕನ್ ಯೂನಿವರ್ಸಿಟಿಗಳಿಗೆ ಬಂದು ಅದೆಷ್ಟು ಬೇಗ ಇಂಗ್ಲಿಷ್ ಕಲಿತು ಎಲ್ಲರನ್ನೂ ಮೀರಿಸುತ್ತಾರಲ್ಲವೇ? ವಿಷಯಗಳನ್ನು ಆಳವಾಗಿ ತಿಳಿದವರು, ಆರು ತಿಂಗಳಲ್ಲಿ ಇನ್ನೊಂದು ಭಾಷೆ ಕಲಿತು ಅದರಲ್ಲೂ ವಿಷಯಗ್ರಹಣ ಮಾಡಬಲ್ಲರು. ಹೀಗೆ ವಾದಿಸುವಾಗ ನಾವು ನಮ್ಮ ಜಾತಿ ವರ್ಗ ಭೇದಗಳ ಸಮಾಜದಲ್ಲಿ ಪ್ರಜಾತಂತ್ರಕ್ಕೆ ಅಗತ್ಯವಾದ ಸಮಾನತೆಗಾಗಿ – ನಾವು ನಮಗೇ ಕೊಟ್ಟುಕೊಂಡಿರುವ ಸಂವಿಧಾನದ ಆಶಯದ ಸಫಲತೆಗಾಗಿ – ಎಲ್ಲ ಶಾಲೆಗಳೂ ಒಂದೇ ತರಹದವಾಗಿರಬೇಕು. ಅವುಗಳಲ್ಲಿ ಮೇಲು ಕೀಳಿರಕೂಡದು ಎಂಬ ಹಠದವರಾಗಿರಬೇಕು. ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಕೃತಕವಾದ ಅಸಮಾನತೆಯನ್ನು ಸೃಷ್ಟಿಸುವ ಶಾಲಾ ವ್ಯವಸ್ಥೆಯ ವಿರುದ್ಧ ಯಾರೂ ಚಕಾರವೆತ್ತುತ್ತಿಲ್ಲ. ಆದರೆ ಈ ಅಸಮಾನತೆಯನ್ನು ಪ್ರಯತ್ನ ಪೂರ್ವಕವಾಗಿ ಸೃಷ್ಟಿಸಿದ ನಂತರ ಮೀಸಲಾತಿಯ ಮುಖಾಂತರ ಅದನ್ನು ತಿದ್ದುಬಲ್ಲೆವೆಂದು ನಾವು ಭ್ರಮಿಸುತ್ತೇವೆ. ಇದು ಆತ್ಮವಂಚನೆ ಅಥವಾ ರಾಜಕಾರಣಿಗಳು ವೋಟ್ ಬ್ಯಾಂಕುಗಳನ್ನು ಸೃಷ್ಟಿಸಿಕೊಳ್ಳುವ ಉಪಾಯ. ಯಾವ ಮೈನಾರಿಟಿಗೂ ಮಕ್ಕಳಲ್ಲಿ ಕೃತಕವಾದ ಅಸಮಾನತೆ ಸೃಷ್ಟಿಸುವ ಅಧಿಕಾರವಿಲ್ಲ. ಅದು ಸಂವಿಧಾನದ ಆಶಯಕ್ಕೆ ವಿರೋಧವಾದ್ದು.

ಈಗಿಂದೀಗಲೇ ಇದು ಸಾಧ್ಯವಿಲ್ಲ ಎನ್ನಿ. ಹಾಗಾದರೆ ಇನ್ನೊಂದು ಸೂಚನೆಯಿದೆ. ಎಲ್ಲ ಶಾಲೆಗಳೂ ಉಭಯ ಮಾಧ್ಯಮ ಶಾಲೆಗಳಾಗಲಿ. ಹಲವು ತಾಯಿತಂದೆಯವರಿಗೆ ತಮ್ಮಮಕ್ಕಳು ಮೆಡಿಕಲ್‌ಗೊ, ಎಂಜಿನಿಯರಿಂಗಿಗೊ, ಐಐಟಿಗೊ ಹೋಗಬೇಕೆಂದೂ, ಆನಂತರ ಅಮೆರಿಕಾಕ್ಕೆ ಹೋಗಬೇಕೆಂದೂ ಆಸೆಯಿರುತ್ತದೆ. ಸೈನ್ಸ್‌ನಲ್ಲಿ ತಾನೇ ಈ ಬಯಕೆಗೆ ಅವಕಾಶವಿರುವುದು? ಹಾಗಿದ್ದರೆ ಅಗತ್ಯವಿದ್ದಲ್ಲಿ ಸೈನ್ಸನ್ನು ಇಂಗ್ಲಿಷಿನಲ್ಲಿ ಕಲಿಸಿ, ಉಳಿದೆಲ್ಲ ವಿಷಯಗಳನ್ನೂ, ಸ್ವಂತ ವಿಚಾರಕ್ಕೆ ಹೆಚ್ಚು ಆಸ್ಪದವಿರುವ ಮಾನವಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲವನ್ನೂ, ಕನ್ನಡದಲ್ಲಿ ಕಲಿಸಿ.

ವಿದ್ಯಾಭ್ಯಾಸದ ಕೊನೆಯ ಹಂತದವರೆಗೆ ಹೀಗೆ ಕಲಿಸುವುದಕ್ಕೆ ವಿರೋಧವಿದೆ ಎನ್ನಿ. ಹಾಗಿದ್ದಲ್ಲಿ ಹತ್ತನೇ ಇಯತ್ತೆ ತನಕವಾದರೂ, ಕನ್ನಡ ಮಾಧ್ಯಮವಾಗಬೇಕು; ಇಂಗ್ಲಿಷಿಗೆ ಒತ್ತಡವಿದ್ದಲ್ಲಿ ಉಭಯ ಮಾಧ್ಯಮ ಜಾರಿಗೆ ಬರಬೇಕು. ಇದಕ್ಕಿಂತ ನಾವು ಹಿಂದೆ ಸರಿಯಲೇ ಕೂಡದು.

ಎಲ್ಲ ವಿದ್ಯಾರ್ಥಿಗಳ ಮಾಧ್ಯಾಮ ಹೀಗೆ ದೇಶದ ಭಾಷೆಯಾದ ಕನ್ನಡವಾದಲ್ಲಿ, ಇಂಗ್ಲಿಷಿನ ಜೊತೆಯಲ್ಲೇ ಎಲ್ಲರೂ ತಮ್ಮ ಮನೆಗಳ ಸಂಸ್ಕೃತಿಗೆ ಅಗತ್ಯವಾದ ಯಾವ ಭಾಷೆಯನ್ನಾದರೂ ಕಲಿಯಲಿಕ್ಕೆ ಅವಕಾಶವಿದ್ದೇ ಇರುತ್ತದೆ. ಕೆಲವರು ಕನ್ನಡವನ್ನು ತಮ್ಮಕಲಿಕೆಯ ಭಾಷೆಯಾಗಿ ಆಯುವುದಿಲ್ಲ. ಎಂದಾಗಲೂ ನಾವು ವಿರೋಧಿಸಬೇಕಾಗಿಲ್ಲ. ಮಾಧ್ಯಮ ಕನ್ನಡಕವಾಗಿದ್ದ ಪಕ್ಷದಲ್ಲಿ ಯಾವ ಎರಡು ಭಾಷೆಗಳನ್ನಾದರೂ ಆಯುವ ಸ್ವಾತಂತ್ರ್ಯವನ್ನು ನಾವು ವಿದ್ಯಾರ್ಥಿಗಳಿಗೆ ಕೊಡಬಹುದು. ಯಾವ ಭಾಷೆಯನ್ನೇ ಆಗಲಿ, ಸಮರ್ಥವಾಗಿ ಓದಲು, ಬರೆಯಲು, ಮಾತಾಡಲು, ಅದರಲ್ಲಿ ಗ್ರಹಿಸಲು, ಕಲಿಸಬೇಕು.

ಆದರೆ ಮಾತ್ರ ವಿದ್ಯಾರ್ಥಿ ಯಾವ ಭಾಷೆಯನ್ನೇ ಆಯಲಿ, ಕನ್ನಡನಾಡಿನ ಎಲ್ಲ ವಿದ್ಯಾರ್ಥಿಗಳಿಗೂ ಈ ನಾಡಿನ ಸಾಹಿತ್ಯ ಸಂಸ್ಕೃತಿಯ ಪರಿಚಯವಾದರೂ ಇರಲೇಬೇಕು. ಇವತ್ತು ಶೇಕ್ಸ್‌ಪಿಯರಿನ ಯಾವೊಂದು ನಾಟಕದ ನೂರು ಪ್ರತಿಗಳು ಮಾರಾಟವಾದಲ್ಲಿ ಅವುಗಳಲ್ಲಿ ೯೯ ಖಂಡಿತವಾಗಿ ಪಠ್ಯವಾದ್ದರಿಂದ. ಇಂಗ್ಲೆಂಡ್ ಹೀಗೆ ತನ್ನ ಪೂರ್ವದ ಹಿರಿಯರ ನೆನಪನ್ನು ಒಂದು ಸಾಂಸ್ಕೃತಿಕ ಪಾಲಿಸಿಯಾಗಿ ಉಳಿಸಿಕೊಂಡು ಬಂದಿದೆ. ಪಾಶ್ಚಿಮಾತ್ಯರೆಲ್ಲರೂ ತಮ್ಮ ಪೂರ್ವಿಕರನ್ನು ಹೀಗೆ ಉಳಿಸಿಕೊಂಡೇ ಬಂದಿದ್ದಾರೆ – ಅಷ್ಟೇ ಅಲ್ಲ, ಅವರನ್ನು ಉಳಿಸಿಕೊಳ್ಳುವುದು ಭಾರತದ ಜವಾಬ್ದಾರಿ ಎಂದು ತಿಳಿಯುವಂತೆ ನಮ್ಮ ಮನಸ್ಸನ್ನೂ ತಿದ್ದಿದ್ದಾರೆ! ಶೇಕ್ಸ್‌ಪಿಯರ್ ಕಲಿಕೆ ತನ್ನ ದೇಶದಲ್ಲಿ ಸ್ವಲ್ಪ ಹಿಮ್ಮೆಟ್ಟಿತೆಂದು ಇಂಗ್ಲೆಂಡಿನ ರಾಜಕುಮಾರ ತನ್ನ ದೇಶದ ವಿದ್ಯಾಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಹೀಗೆ ಇಡೀ ಭಾರತಕ್ಕೂ ಮತ್ತು ಪ್ರತಿ ದೇಶೀಯ ಸಂಸ್ಕೃತಿಗೂ ಅನ್ವಯವಾಗುವಂತಹ ಒಂದು ಸ್ಥೂಲವಾದ ಸಾಂಸ್ಕೃತಿಕ ಪಾಲಿಸಿಯ ಅಗತ್ಯ ಇದೆ. ಅನೇಕತೆಯಲ್ಲಿ ಏಕತೆ ನೈಜವಾಗಿ, ನಮ್ಮ ಆಧುನಿಕ ಯುಗದಲ್ಲೂ, ಉಳಿಯುವುದು ಈ ಬಗೆಯ ಒಂದು ಪಾಲಿಸಿ ಇದ್ದಾಗ.

ಯಾಕೆಂದರೆ ನಮ್ಮ ಸಂಸ್ಕೃತಿಗಳನ್ನು ಈ ತನಕ ಉಳಿಸಿಕೊಂಡು ಬಂದಿರುವುದು, ವಿಪರ್ಯಾಸವೆಂದರೆ, ಅನಕ್ಷರತೆ ಮತ್ತು ಹಿಂದುಳಿದಿರುವಿಕೆ. ನಮ್ಮನ್ನು ಈ ತನಕ ಆಳಿವರಿಗೂ, ಕಾಣದಂತೆ ಆಳುತ್ತಿರುವವರಿಗೂ ಅನಕ್ಷರತೆ ಮತ್ತು ಬಡತನದಿಂದಾಗಿ ನಮ್ಮ ಜನ ಅಗಮ್ಯರಾಗಿಯೇ ಹೊರಗುಳಿದಿದ್ದಾರೆ. ಆದರೆ ಇದು ಅಸಹ್ಯವಾದ ಸ್ಥಿತಿಯೂ ಹೌದು. ಈ ಅಸಹ್ಯದಿಂದ ನಮ್ಮ ಜನ ಮೇಲೇಳುವಾಗ, ಸಾಕ್ಷರತೆಯಲ್ಲಿ ಸುಖ ಜೀವನದ ಭರವಸೆ ಕಾಣುವಾಗ, ಇಲ್ಲಿಯತನಕ ಅವರ ಕುಟುಂಬ ಪ್ರಜ್ಞೆಯನ್ನು ಉಳಿಸಿ, ಅವರ ನಿತ್ಯದ ಖುಷಿಗಳಿಗೆ ಕಾರಣವಾಗಿ, ಹಲವು ಅವಮಾನಗಳ ನಡುವೆಯೂ ಅವರ ಮಾನವತೆಯನ್ನು ಯಾವುದು ಕಾಯ್ದಿತೊ, ಅದು, ಸಾಕ್ಷರತೆ ಮತ್ತು ತಾಂತ್ರಿಕತೆ ಕೂಡಿ ತರುವ ಅನುಕರಣದ ಪ್ರಲೋಭನೆಯಲ್ಲಿ, ವಿಸ್ಮೃತಿಗೆ ಒಳಗಾಗದಂತೆ ಎಚ್ಚರವಹಿಸುವುದು ಅಗತ್ಯ.

ನಮ್ಮ ಸಂಸ್ಕೃತಿಯಲ್ಲಿ ಏನೇನನ್ನು ಎಷ್ಟು ತೀವ್ರತೆಯಲ್ಲಿ, ಎಷ್ಟು ವ್ಯಾಪಕತೆಯಲ್ಲಿ ಉಳಿಸಿಕೊಳ್ಳಬೇಕೆಂಬ ವಾಗ್ವದವೇ ಎಲ್ಲ ಸಾಹಿತ್ಯ ವಿಮರ್ಶೆಯ ಜೀವಾಳ. ಅದು ಕನ್ನಡದಲ್ಲಿ ಈಗ ನಡೆಯುತ್ತಿದೆಯಾದ್ದರಿಂದ ನಾವು ಪೂರ್ಣ ಸಾಕ್ಷರತೆಯಲ್ಲಿ ಪಡೆಯಲು ಬಯಸುವ ಕಲ್ಪನೆಗೊಂದು ಸ್ಪಷ್ಟತೆಯೂ ದಿಕ್ಕೂ ಒದಗುತ್ತದೆ. ಜನರಂಜಕ ಮಂಕುಬೂದಿಯ ರಾಜಕೀಯಕ್ಕೂ, ನಮ್ಮ ಮಾಧ್ಯಮಗಳ ಅಲ್ಪ ಮನರಂಜನೆಗೂ ಅಕ್ಷರಸ್ಥರಾಗುವ ಜನ ಬಾಯಿಕಳಕೊಂಡ ಗ್ರಾಹಕರಾಗದಿರಲು ಈ ಚಳುವಳಿ ಅಗತ್ಯ. ಪ್ರತಕರ್ತರು, ನಾಟಕಕಾರರು, ಕವಿಗಳು, ಕಥೆಗಾರರು, ಹರಿಕಥೆಯವರು, ಸಿನಿಮಾ, ಯಕ್ಷಗಾನ, ಬಯಲಾಟ ಕಲಾವಿದರು ಈ ಬಗೆಯ ಸಾರವಾದ ಸಂಸ್ಕೃತಿಯ ಪ್ರಸಾರದಲ್ಲಿ ತೊಡಗಬೇಕು.

ಯಾಕೆಂದರೆ ದೂರದರ್ಶನದಂತಹ ಮಾಧ್ಯಮದ ಅಪಾಯ ಈಗಿಂದೀಗಲೆ ನಮಗೆ ಎದುರಾಗಿದೆ. ಹಿಂದಿಯಲ್ಲಿನ ಕಚಡಾ ಚಿತ್ರಗಳು ಕನ್ನಡದಲ್ಲಿ ಡಬ್ಬಾಗಿ ಬರಲಿವೆ. ರಾಜಕೀಯ ಬಲವಿರುವಂತೆ ಕಾಣುವ ಟಿಪ್ಪೂ ಚಿತ್ರ ಕನ್ನಡಕ್ಕೆ ಈಗಾಗಲೇ ಡಬ್ಬಾಗುತ್ತಿದೆ. ಇದನ್ನು ಸರ್ವಥಾ ನಾವು ಆಗದಂತೆ ತಡೆಯಬೇಕು. ಪರಭಾಷೆಯ ಚಿತ್ರ ಸಾಂಸ್ಕೃತಿಕವಾಗಿ ಕಲಾತ್ಮಕವಾಗಿ ಉತ್ತಮವಾದ್ದಲ್ಲಿ ಕನ್ನಡದ ಸಬ್‌ಟೈಟಲ್ ಪಡೆದು ಅವು ಪ್ರದರ್ಶಿತವಾಗಲಿ. ಹಾಗೆಯೇ ಕನ್ನಡಿಗರ ಕುವೆಂಪು, ಕಾರಂತ, ರಾವಬಹದ್ದೂರ್, ಮಾಸ್ತಿ ಇವರ ಘನವಾದ ಕೃತಿಗಳು ಕನ್ನಡದಲ್ಲಿ ಸೀರಿಯಲ್ಲಾಗಲಿ, ಈ ಸೀರಿಯಲ್ಲುಗಳು ಹಿಂದಿ, ತಮಿಳು, ಬಂಗಾಳಿ ಯಾವ ಜನಕ್ಕಾದರೂ ಅವರ ಭಾಷೆಗಳ ಸಬ್‌ಟೈಟಲ್ ಪಡೆದು ಪ್ರದರ್ಶಿತವಾಗಲಿ. ಇದೇ ಸರಿಯಾದ, ಅನೇಕತೆಯಲ್ಲಿ ಏಕತೆ ಸಾಧಿಸುವ ಸೂತ್ರ.

ಯಾಕೆಂದರೆ ಕೀಳು ಮಟ್ಟದ ಚಿತ್ರಗಳು ನಮ್ಮ ಭಾಷೆಗೆ ಡಬ್ಬೂ ಆದರೆ ಅವುಗಳು ಆಕ್ರಮಿಸುವುದು ಪೋಲಿಗಳಂತೆ ಹೊರ ಬೀದಿಗಳನ್ನಲ್ಲ, ನಮ್ಮ ನಮ್ಮ ಆಪ್ತ ಜೀವನದ ವಿಶ್ರಾಂತಿಯ ನಡುಮನೆಯನ್ನು, ಪರ ಭಾಷೆಯ ಅಜ್ಞಾನದಿಂದಲಾದರೂ ಕೀಳಿನ ಗೀಲನ್ನು ಬೆಳೆಸಿಕೊಳ್ಳದ ಸಾಮಾನ್ಯರ ಸಹಜವಾದ ಸ್ವರಕ್ಷಣಾ ಶಕ್ತಿಯನ್ನು ಹೀಗೆ, ಕಣ್ಣಿನ ಮೂಲಕವಲ್ಲ ಕಿವಿಗಳ ಮೂಲಕವೂ, ಹೊಕ್ಕು ಭೇದಿಸುವುದು ಅಕ್ಷಮ್ಯ ಅಪರಾಧ.

ಕನ್ನಡದ ಅಭಿಮಾನಿಗಳಾದ ನಾವೆಲ್ಲರೂ ನೆಲ ಜಲ ಉದ್ಯೋಗದ ಪ್ರಶ್ನೆಗಳನ್ನೆತ್ತಿ ಕೊಳ್ಳುತ್ತಿದ್ದಂತೆಯೇ, ಅದರ ಜೊತೆಯಲ್ಲೇ, ಇಡೀ ಕನ್ನಡನಾಡನ್ನ ಸುಸಂಸ್ಕೃತ ಅಕ್ಷರಸ್ಥರನ್ನಾಗಿ ಮಾಡುವ ಹಠದ ಸೈನ್ಯವಾಗಬೇಕು. ಕನ್ನಡ ಶಕ್ತಿ ಕೇಂದ್ರ ಹೀಗೆ ಅಕ್ಷರ ಸೈನ್ಯವೂ ಆಗಿ ಕೆಲಸ ಮಾಡಲಿ ಎಂದು ಕೋರುತ್ತೇನೆ. ಆಗ ಉಳಿದ ಎಲ್ಲ ಚಳುವಳಿಗೂ ಅರ್ಥ ಬರುತ್ತದೆ. ಇದೇ ಗಾಂಧಿ ನಮಗೆ ತೋರಿಸಿದ ಮಾದರಿ. ಬ್ರಿಟಿಷರನ್ನು ಓಡಿಸುವುದು ಅವರಿಗೆಷ್ಟು ಮುಖ್ಯವಾಗಿತ್ತೊ, ಹರಿಜನ, ಖಾದಿ ಅಂದೋಳನಗಳೂ ಅಷ್ಟೇ ಮುಖ್ಯವಾಯಿತು, ಅವರಿಗೆ. ಅಥವಾ ಹೀಗೂ ಹೇಳಬಹುದು: ಹರಿಜನರ ಪ್ರಶ್ನೆಯನ್ನೂ ಸ್ವದೇಶಿ ಪ್ರಶ್ನೆಯನ್ನೂ ಅವರು ಎತ್ತಿಕೊಳ್ಳದಿದ್ದಲ್ಲಿ ಸ್ವಾತಂತ್ರ್ಯದ ಹೋರಾಟ ಬಾಯಿಬಡುಕ ಪುಢಾರಿಗಳನ್ನೋ, ಅಥವಾ ಆತಂಕವಾದಿ ಹುಂಬರನ್ನೋ ಮಾತ್ರ ಸೃಷ್ಟಿಸುತ್ತಿತ್ತು. ಎಲ್ಲ ಭಾಷಾ ಚಳವಳಿಗಳಿಗೂ ಹೀಗಾಗುವ ಅಪಾಯವಿದೆಯೆಂಬುದನ್ನು ಎಲ್ಲೆಲ್ಲೂ ನಾವು ನೋಡುತ್ತಿರುವೆವಾದ್ದರಿಂದ ಕನ್ನಡ ಶಕ್ತಿ ಕೇಂದ್ರ ಅಕ್ಷರ ಪ್ರಸಾರದ ಒಂದು ಸ್ವಯಂ ಸೇವಕ ಪಡೆಯನ್ನು ಕಟ್ಟಬೇಕೆಂದು ನಾನು ಆಸೆಪಡುತ್ತಿದ್ದೇನೆ.

* * *

ನನ್ನ ಈ ಭಾಷಣದ ಒಟ್ಟು ಉದ್ದೇಶ ಈಗಾಗಲೇ ಸ್ಪಷ್ಟವಾಗಿರಬೇಕು. ನಮ್ಮ ನಿಜವಾದ ವೈರಿ ಯಾರೆಂದು ತಿಳಿಯದವನು ಒಂದೋ ನಿರರ್ಥಕ ಹೋರಾಟದಲ್ಲಿ ವಂಚಿತನಾಗುತ್ತಾನೆ, ಅಥವಾ ಬಾಯಿಬಡುಕ ಫುಡಾರಿತನದಲ್ಲ ಸಮೂಹ ಸನ್ನಿಗೆ ಆಗೀಗ ಕಾರಣನಾಗಿ ತನನ್ ಬೇಳೆ ಬೇಯುತ್ತಿದೆಯೆಂದು ಭ್ರಮಿಸುತ್ತಾನೆ. ಕರ್ನಾಟಕಕ್ಕೆ ವಲಸೆ ಬರುವ ಅನ್ಯಭಾಷೆಯೆ ಜನ ಯಾಕೆ ಕನ್ನಡ ಕಲಿಯುವುದಿಲ್ಲ, ಯಾಕೆ ನಮ್ಮ ಹಿತಕ್ಕೆ ಮಾರಕರೆಂದು ಕಾಣುತ್ತಾರೆ, ಹಾಗೆಯೇ ಇಲ್ಲಿಂದ ಹೊರ ನಾಡಿಗೆ ಹೋಗುವ ಕನ್ನಡಿಗರು ಅವರಿಗೆ ಹೇಗೆ ಕಾಣಲು ತೊಡಗಿದ್ದಾರೆ, ನಮ್ಮನಮ್ಮ ಬಡಿದಾಟದಲ್ಲಿ ಯಾವ ಭಾರತೀಯ ಮೌಲ್ಯಗಳು ನಷ್ಟವಾಗುತ್ತವೆ, ಹಾಗೆಯೇ ಮನಸ್ಸನ್ನು ಕುಗ್ಗಿಸಿಕೊಂಡ ಕನ್ನಡಿಗ ಯಾಕೆ ನಿಜವಾದ ಕನ್ನಡ ಸಂಸ್ಕೃತಿಯವನಾಗಿ ಉಳಿಯಲಾರ – ಇಂತಹ ವಿಷಯಗಳೆಲ್ಲ ನನ್ನನ್ನು ಬಾಧೀಸುವುದರಿಂದ, ನಿಮ್ಮಲ್ಲಿ ಹಲವರನ್ನೂ ಬಾಧಿಸುತ್ತವೆಯೆಂದು ನನಗೆ ಗೊತ್ತಿರುವುದರಿಂದ, ಇಷ್ಟು ಉದ್ದದ ತಾತ್ವಿಕ ಚಿಂತನೆಯಲ್ಲಿ ನಾನು ತೊಡಗಬೇಕಾಯಿತು. ತತ್ವ ಯಾವಾಗಲೂ ಸಂಕೀರ್ಣವಾಗಿರಬಲ್ಲುದು; ಕ್ರಿಯೆ ಮಾತ್ರ ನಿಶ್ಚಿತವೂ ಸರಳವೂ ದ್ವಂದ್ವಾತೀತವೂ ಆಗಿರಬೇಕಾಗುತ್ತದೆ. ಆದರೆ ಗಂಭೀರವಾದ ತಾತ್ವಿಕ ಚಿಂತನೆ ಹಿನ್ನಲೆಗಿದ್ದರೆ ಕ್ರಿಯೆ ಕೇವಲ ಚೀರಾಟವಾಗಿ, ಉದ್ವಿಗ್ನತೆಯ ಹಿಂಸೆಯಾಗಿ ಪರಿಣಮಿಸುವುದಿಲ್ಲ. ನಾವು ಯಾರ ವಿರುದ್ಧ ಹೋರಾಡುತ್ತೇವೋ ಅವರನ್ನು ನಾವಾಗ ದ್ವೇಷಿಸುವುದಿಲ್ಲ. ಅಲ್ಲದೆ ಅಂಥ ಕ್ರಿಯೆ ಸಾಧಿಸುವ ಯಶಸ್ಸಿಗೆ ಅರ್ಥವಿರುತ್ತದೆ; ಸೋತಾಗಲೂ ಭರವಸೆ ಉಳಿದೇ ಇರುತ್ತದೆ. ಬಿಎಂಶ್ರೀ, ಕುವೆಂಪು, ಮಾಸ್ತಿ, ಬೇಂದ್ರೆ ಆಲೂರು – ಇಂಥ ಋಷಿ ಸಮಾನ ದ್ರಷ್ಟಾರರನ್ನು ಬೆನ್ನಿಗಿಟ್ಟುಕೊಂಡ ಕನ್ನಡ ಚಳವಳಿ ಈ ನಮ್ಮ ವೈರಿ – ಪರೋಕ್ಷವಾದ್ದರಿಂದ ಅತ್ಯಂತ ಅಪಾಯದ ವೈರಿ – ಯಾರೆಂದು ತಿಳಿಯಲು ನಾನು ಪ್ರಯತ್ನಿಸಿದ್ದೇನೆ. ಈ ನನ್ನ ಮಾತುಗಳು ನಿಮ್ಮನ್ನಷ್ಟು ವಾಗ್ದಾದಕ್ಕೆ ಹಚ್ಚಿದರೂ ಸಾಕು – ನಾನು ಕೃತಾರ್ಥ.

—-
ಗ್ರಂಥ: ಬೆತ್ತಲೆ ಪೂಜೆ ಯಾಕೆ ಕೂಡದು? ಪುಟ; ೧೬

* * *