ಜಮ್ಮುವಿನಲ್ಲಿ ಈ ವರ್ಷದ ಡೋಗ್ರಿ ಸಾಹಿತ್ಯ ಸಮ್ಮೇಳನ ನಡೆದಾಗ, ಉದ್ಘಾಟಿಸುವ ಸಂದರ್ಭದಲ್ಲಿ ಡಾ.ಕರಣ್ ಸಿಂಹರು, ಡೋಗ್ರಿ ಭಾಷೆಯು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮನ್ನಣೆ ಪಡೆಯದೇ ಹೋದಲ್ಲಿ, ತಾವು ಸತ್ಯಾಗ್ರಹ ಹೂಡುವುದಾಗಿ ಹೇಳಿದರು. ಆಗ ನಾನು ಆಡಿದ ಮಾತು, ಅಲ್ಲಿ ನೆರೆದಿದ್ದ ಎಲ್ಲರಿಗೂ ಒಪ್ಪಿಗೆ ಆಯಿತೆಂದು ಅನ್ನಿಸಿದ್ದರಿಂದ, ಇಲ್ಲಿಯೂ ತುಳುವಿನ ಬಗ್ಗೆ ಅಂಥ ಬೇಡಿಕೆ ಎದ್ದಿರುವುದರಿಂದ, ಮತ್ತೆ ನೆನೆಯುತ್ತಿದ್ದೇನೆ.

ಹಲವು ಭಾಷೆಗಳು ಎಂಟನೆ ಪರಿಚ್ಛೇದದಲ್ಲಿ ಸೇರಲು ಮಾಡುತ್ತಿರುವ ಹೋರಾಟವನ್ನು ಕಂಡಾಗ ನನಗೆ, ನಮ್ಮ ಇಂದಿನ ಸಂದರ್ಭದಲ್ಲಿ ಅರ್ಥಹೀನವೆನ್ನಿಸುತ್ತದೆ. ಭಾರತೀಯರು ಮಾತನಾಡುವ, ಸಾಂಸ್ಕೃತಿಕವಾಗಿ ಒಡನಾಡುವ, ಎಲ್ಲ ಭಾಷೆಗಳೂ ಭಾರತೀಯ ಭಾಷೆಗಳು, ಪರಿಭಾಷೆಯಲ್ಲಿ ಉಪಯೋಗಿಸುವ ‘ಡಯಲೆಕ್ಟ್’ ಎನ್ನುವ ಶಬ್ದಕ್ಕೆ ವಿಶೇಷವಾದ ಅರ್ಥವಿಲ್ಲ ಇವತ್ತು ಡಯಲೆಕ್ಟ್ ಆದದ್ದು ನಾಳೆ ‘ಲ್ಯಾಂಗ್ವೇಜ್’ ಆಗಿಬಿಡಬಹುದು. ಒಂದು ಡಯಲೆಕ್ಟಿನ್ ಹಿಂದೆ ಒಂದು ಸೈನ್ಯ ಮತ್ತು ಒಬ್ಬ ಮಹಾಕವಿ ಇದ್ದ ಪಕ್ಷದಲ್ಲಿ ಅದು ಒಂದು ಲ್ಯಾಂಗ್ವೇಜ್ ಆಗಿಬಿಡುತ್ತದೆ. ಈ ಎರಡು ಅಗತ್ಯಗಳಲ್ಲಿ ಮಹಾಕವಿ ಒಬ್ಬನಿದ್ದರೆ ಸಾಲದು, ಯಜಮಾನಿಕೆಯ ಪ್ರಭುತ್ವ ಬೇಕೇಬೇಕು. ಆದರೆ, ವಿಪರ್ಯಾಸವೆಂದರೆ, ಪ್ರಭುತ್ವದ ಶಕ್ತಿ ಮಾತ್ರ ಇದ್ದರೂ ಸಾಕಾದೀತು; ಇಲ್ಲದ ಮಹಾಕವಿಯನ್ನು ಸೃಷ್ಟಿಸಿಕೊಳ್ಳುವ ರಾಜಕೀಯ ನಡೆದೀತು.

ಶೇಕ್ಸ್‌ಪಿಯರ್ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಕಾಲದಲ್ಲಿ ಇಂಗ್ಲಿಷ್ ಭಾಷೆ, ತುಳುವಿಗಿಂತಾಗಲೀ ಡೋಗ್ರಿಗಿಂತಾಗಲಿ ತನ್ನಲ್ಲೇ ಹೆಚ್ಚು ಪ್ರಭುತ್ವದ ಶಕ್ತಿಯನ್ನು ಆಗಾಗಲೇ ಗಳಿಸಿಕೊಂಡಿದ್ದ ಭಾಷೆಯಾಗಿರಲಿಲ್ಲ. ತನ್ನ ಕಾಲದ ಒತ್ತಡವನ್ನೂ ಮಹತ್ವವನ್ನೂ ಬಳಸಿಕೊಂಡು ಶೇಕ್ಸ್‌ಪಿಯರ ತಾನು ಬೆಳೆಯುತ್ತ, ಇಂಗ್ಲಿಷನ್ನೂ ಬೆಳೆಸಿದ್ದ. ಅಂದರೆ ಬೆಳೆಯಬಲ್ಲ ಅಂತಸ್ಸತ್ವನ್ನುಪಡೆದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಶೇಕ್ಸ್‌ಪಿಯರನ್ನೂ ಬೆಳೆಸಿತು.

ಕೆಲವು ಭಾಷೆಗಳಿಗೆ ಕಾಲಧರ್ಮದಿಂದಾಗಿ ಒದಗುವ ಯೋಗಾಯೋಗವೆಂದರೆ, ಸೂಕ್ಷ್ಮಾತಿ ಸೂಕ್ಷ್ಮವಾದ ಯಾವ ಭಾವನೆಯನ್ನಾಗಲೀ ಹೇಳಬಲ್ಲ ಶಕ್ತಿ. ಪಂಪನಲ್ಲೂ ವಚನಕಾರರಲ್ಲೂ ಕುಮಾರವ್ಯಾಸನಲ್ಲೂ ಈ ಶಕ್ತಿ ಪಡೆದಿದ್ದ ಕನ್ನಡದ ಜೊತೆ ಹೋಲಿಸಿದರೆ ಇಂಗ್ಲಿಷ್ ಭಾಷೆಯಲ್ಲಿ ಸುಮಾರು ಹದಿನಾರನೆ ಶತಮಾನದ ತನಕ ಮಹತ್ವದ್ದೇನ್ನುವ ಯಾವ ಕೃತಿಯೂ ಇರಲಿಲ್ಲ. ಈ ಇಂಗ್ಲಿಷ್ ಇಡೀ ಜಗತ್ತಿನ ಅನುಭವವನ್ನೇ ಒಳಗೊಂಡಿರುವ ಸಮೃದ್ಧ ಭಾಷೆಯಾಗಿ, ಆಗಂತುಕನಿಗೂ ಸುಲಭವಾಗಿ ಎಟುಕಿ ಒದಗುವ ಸಲಕರಣೆಯಾಗಿ ಬೆಳೆದುಬಿಟ್ಟದೆ. ಪ್ರಭುತ್ವದ ಸಾಮಾನ್ಯ ದೈನಿಕ ಅಗತ್ಯಗಳಿಗೂ ಮಕ್ಕಳು ತಮ್ಮ ಆವರಣದಿಂದ ಪ್ರತಿಕ್ಷಣ ಕಲಿಯುತ್ತಿರುವ ಪ್ರೈಮರಿ ಶಿಕ್ಷಣದ ಅಗತ್ಯಗಳಿಗೂ ಸಹಜವಾಗಿಯೇ ಬಳಸಬೇಕಾದ ಪರಿಸರದ ಭಾಷೆಯಾದ ಕನ್ನಡವನ್ನು ಬಳಸಲೇಬೇಕೆಂದು ಒತ್ತಾಯ ಪಡಿಸುವ ಹೋರಾಟ ಮಾಡಬೇಕಾಗಿದೆ. ಇದಕ್ಕಿಂತ ದೊಡ್ಡ ವಿಪರ್ಯಾಸ ಬೇರೆಯಿಲ್ಲ. ಚರಿತ್ರೆಯೆಂದರೆ ಕೆಲವೊಮ್ಮೆ ಇರುವ ಸ್ಪಷ್ಟ ಸತ್ಯವನ್ನೇ ನಿರ್ಲಕ್ಷ್ಯದಿಂದ ಕಾಣುವ ಅಟ್ಟಹಾಸವಾಗಿ ಬಿಡುವುದುಂಟು. ಆದರೆ ಸತ್ಯಕ್ಕಾಗಿ ಕಾಮಿಸುವಂತೆ ಚರಿತ್ರೆಯನ್ನು ಪ್ರೇರೇಪಿಸಬಲ್ಲ ಮನುಷ್ಯ ಈ ಅಟ್ಟಹಾಸದ ವಿರುದ್ಧ ಹೋರಾಡುತ್ತಾನೆ. ಗಾಂಧೀಜಿ ಮತ್ತು ಬಸವಣ್ಣರು ಹೀಗೆ ಚರಿತ್ರೆಯ ಪ್ರವಾಹಕ್ಕೆ ಎದುರಾಗಿ ಈಸಿ ಸತ್ಯಕಾಮಿಯಾದ ಚರಿತ್ರೆಗೆ ಕಾರಣರಾದವರು.

ಇಂಥ ಚಿಂತನೆಯಿಂದ ಪ್ರೇರಿತನಾದ ನಾನು ಜುಮ್ಮುವಿನಲ್ಲಿ ಹೀಗೆ ಹೇಳಿದೆ: ಸಂವಿಧಾನದ ಎಂಟನೇ ಪರಿಚ್ಛೇದವನ್ನೇ ಕಿತ್ತುಹಾಕಿ. ಶಕ್ತಿರಾಜಕಾರಣದ ಸ್ವಪ್ರತಿಷ್ಠೆಯ ಚೇಷ್ಟೆಗೆ ಈ ಪರಿಚ್ಛೇದ ಅವಕಾಶ ಮಾಡಿಕೊಡುತ್ತಿದೆ. ಭಾರತದ ಎಲ್ಲ ಭಾಷೆಗಳಿಗೂ ಬೆಳೆಯಲು ಮುಕ್ತ ಅವಕಾಶ ಇರತಕ್ಕದ್ದು. ಯಾಕೆಂದರೆ ಭಾರತ ವಿಶೇಷವಾದ ಒಂದು ಅರ್ಥದಲ್ಲಿ ರಾಷ್ಟ್ರವಾಗಿದೆ. ಇಂಥ ಒಂದು ರಾಷ್ಟ್ರ ಇಡೀ ಪಾಶ್ಚಾತ್ಯ ಜಗತ್ತಿನಲ್ಲಿ ಇನ್ನೊಂದಿಲ್ಲ. ಅಲ್ಲಿ ರಾಷ್ಟ್ರವೆಂದರೆ ಒಂದೇ ಭಾಷೆ ಇರಬೇಕು; ಒಂದೇ ‘ರಿಲಿಜನ್’ ಇರಬೇಕು; ಒಂದೇ ಬುಡಕಟ್ಟಿನ ಜನ ಅತ್ಯಧಿಕ ಸಂಖ್ಯೆಯಲ್ಲಿರಬೇಕು. ನಾವು ಭಾರತವನ್ನು ಪಾಶ್ಚಾತ್ಯ ಬಗೆಯ ಒಂದು ರಾಷ್ಟ್ರದಂತೆ ಮಾಡಬೇಕೆಂದು ಹೊರಟರೆ, ಆಗ ಭಾರತ ನುಚ್ಚುನೂರಾಗಿ ಒಡೆದುಕೊಳ್ಳುತ್ತದೆ. ಈ ನುಚ್ಚುನೂರುಗಳು ಕೂಡಾ ಪಾಶ್ಚಾತ್ಯ ಮಾದರಿಯ ರಾಷ್ಟ್ರಗಳು ಆಗುವುದಿಲ್ಲ. ಯುಗೋಸ್ಲಾವಿಯದಂತೆ ಅಂತಃಕಲಹದ ರುದ್ರಭೂಮಿಗಳಾಗಿ ಪರಿವರ್ತಿತವಾಗುತ್ತವೆ. ಯಾಕೆಂದರೆ ಪ್ರತಿ ಪ್ರದೇಶವೂ ಹಲವು ಭಾಷೆಗಳ ಕ್ಷೇತ್ರವಾಗಿರುತ್ತದೆ ಬಾರತದಲ್ಲಿ.

ಉದಾಹರಣೆಗೆ ಕರ್ನಾಟಕವನ್ನೇ ನೋಡಿ, ಇಂದೊಂದು ಮಿನಿ – ಭಾರತವಾಗಿ ನನಗೆ ಕಾಣುತ್ತದೆ. ಈ ಮಿನಿ – ಭಾರತವಾದ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಒಂದು ಮಿನಿ – ಕರ್ನಾಟಕವಾಗಿ ನನಗೆ ಕಾಣುತ್ತದೆ. ಇಲ್ಲಿಯ ಧಾರ್ಮಿಕ ಆಚರಣೆಗಳ ವೈವಿಧ್ಯವನ್ನು ಗಮನಿಸಿ: ಇಲ್ಲಿ ಭೂತಾರಾಧನೆಯಿದೆ, ಜೈನ ಧರ್ಮವಿದೆ, ಕ್ರೈಸ್ತ ಧರ್ಮವಿದೆ, ಇಸ್ಲಾಂ ಇದೆ. ದ್ವೈತ ಸಿದ್ಧಾಂತದ ಮೂಲ ಪುರುಷರು ಇಲ್ಲಿಯವರು. ಆದರೂ ಇಲ್ಲಿ ವೈಷ್ಣವರಲ್ಲದ ಸ್ಮಾರ್ತರಿದ್ದಾರೆ. ಹೀಗೆ ವಿವಿಧ ರೀತಿಯ ಉಪಾಸನೆಗಳೂ ಭಾಷೆಗಳೂ ಈ ಜಿಲ್ಲೆಯಲ್ಲಿ ತಮ್ಮ ಅನನ್ಯತೆಯನ್ನು ಉಳಿಸಿಕೊಂಡೇ ಅನೋನ್ಯವಾಗಿಯೂ ಇವೆ.

ಕನ್ನಡನಾಡಿನ ಬಹು ಪ್ರಸಿದ್ಧ ಲೇಖಕರಲ್ಲಿ ಹಲವರು ಮರಾಠಿ – ಕನ್ನಡಿಗರು, ಉರ್ದು – ಕನ್ನಡಿಗರು; ಕೊಂಕಣಿ – ಕನ್ನಡಿಗರು, ತುಳು – ಕನ್ನಡಿಗರು, ತಮಿಳು – ಕನ್ನಡಿಗರು, ತೆಲುಗು – ಕನ್ನಡಿಗರು. ನಮ್ಮ ಪರಿಸರದ ಜೈವಿಕ ವಲಯದ ಸರಪಳಿಯಲ್ಲಿ ಯಾವ ಒಂದು ಸಸ್ಯವಾಗಲೀ ಯಾವ ಒಂದು ಪ್ರಾಣಿಯಾಗಲೀ ನಾಶವಾದರೆ ಇಡೀ ವಲಯದ ಜೈವಿಕ ಶಕ್ತಿಗೆ ನಷ್ಟವಾಗುತ್ತದೆ. ಅಂತೆಯೇ ಈ ದಕ್ಷಿಣ ಕನ್ನಡ ಜಿಲ್ಲೆಯ ಬಹುಮತ – ಭಾಷೆಗಳ ವಲಯ ಒಂದು ಅದ್ಭುತವಾದ ಜೈವಿಕ ಪ್ರಯೋಗದ ಕ್ಷೇತ್ರವೆಂದು ನಾನು ಭಾವಿಸಿದ್ದೇನೆ. ಇಲ್ಲಿ ಯಾವುದರ ದಬ್ಬಾಳಿಕೆಯೂ ಸಲ್ಲದು; ಯಾರ ದಬ್ಬಾಳಿಕೆಯೂ ಬಹು ಕಾಲ ನಡೆಯದು.

ಈ ಸಹಯೋಗದಲ್ಲಿ ಅಂತರ್ಗತವಾದ ಇನ್ನೊಂದು ರಹಸ್ಯವಿದೆ. ಯಾವುದಕ್ಕಿಂತ ಯಾವುದು ಮೇಲು ಪ್ರಶ್ನೆ ಕೇಳಿದೊಡನೆಯೇ ನಾವು ಈ ಸಾಮರಸ್ಯವನ್ನು ಒಡೆದುಬಿಟುತ್ತೇವೆ. ನಿತ್ಯ ಜೀವನದ ಹಲವು ವ್ಯಾಪಾರಗಳಲ್ಲಿ ನಾವು ಮಾತನಾಡುವ ಪ್ರತಿಯೊಂದು ಭಾಷೆಯೂ ತನ್ನದೇ ಆದ ಕೆಲಸವನ್ನು ಮಾಡುತ್ತಿರುತ್ತದೆ. ಕವಿ ಬೇಂದ್ರೆಯವರು ನನ್ನೊಡನೆ ಮಾತನಾಡುತ್ತ ಒಮ್ಮೆ, ತನಗೆ ಬಹಳ ವರ್ಷಗಳ ತನಕ, ಎರಡು ಭಾಷೆಗಳಲ್ಲಿ ಮಾತನಾಡುತ್ತಿದ್ದೇನೆಂಬ ಪರಿವೆಯೇ ಇರಲಿಲ್ಲ ಎಂದಿದ್ದರು. ಹೀಗೆ ನನ್ನೊಡನೆ ಹೇಳುತ್ತಿದ್ದಂತೆಯೇ, ಅವರ ಬೆನ್ನಿನ ಹಿಂದೆ ಬಂದು ನಿಂತ ಸೊಸೆಯ ಜೊತೆ ಮರಾಠಿಯಲ್ಲಿ ಆಪ್ತವಾಗಿ ಮಾತನಾಡಿದ್ದರು. ಗೋವಾದಲ್ಲೊಮ್ಮೆ ಕೆಲವು ಸಾಹಿತಿಗಳು ತಮ್ಮ ಮಾತೃಭಾಷೆ ಮರಾಠಿ ಎಂದು ಇಂಗ್ಲಿಷಿನಲ್ಲಿ ನನ್ನ ಹತ್ತಿರ ವಾದಿಸಿ, ವಿಚಾರದ ಬಿಸಿ ತಣ್ಣಗಾದ ಮೇಲೆ ತಮ್ಮ ತಮ್ಮಲ್ಲೇ ಮಾತನಾಡತೊಡಗಿದರು. ಹೀಗೆ ಅವರು ಆಪ್ತವಾಗಿ ತಮ್ಮೊಳಗೆ ಮಾತನಾಡಿಕೊಂಡಿದ್ದ ಕೊಂಕಣಿಯಲ್ಲಾಗಿತ್ತು!

ಈ ಮಾತೃಭಾಷೆಯೆಂಬ ಪದವೇ ನಮ್ಮ ದೇಶಕ್ಕೆ ಸರಿಯಾದದ್ದಲ್ಲ. ಇದು ಇಂಗ್ಲಿಷಿನ Mother Tongure ಎಂಬ ಶಬ್ದದ ಅನುವಾದ. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಎ.ಕೆ. ರಾಮಾನುಜನ್  ಒಂದು ಪದ್ಯ ಬರೆದಿದ್ದಾರೆ. ಅದರಲ್ಲಿ ತಾನು ಬೀದಿಯಲ್ಲಿ ಸಿಗುವ ಸ್ನೇಹಿತರ ಜೊತೆ ಕನ್ನಡವನ್ನೂ ಅಡುಗೆ ಮನೆಯಲ್ಲಿ ತಾಯಿಯ ಜೊತೆ ತಮಿಳನ್ನೂ ಉಪ್ಪರಿಗೆಯ ಮೇಲೆ ಕೂತಿರುತ್ತಿದ್ದ ತನ್ನ ತಂದೆಯ ಜೊತೆ ಇಂಗ್ಲಿಷನ್ನೂ ಮಾತನಾಡಿ ಬೆಳೆದವನೆಂದು ಬರೆದುಕೊಂಡಿದ್ದರು. ಕೆಲವು ಶತಮಾನಗಳ ಹಿಂದಾಗಿದ್ದರೆ ಅವರು ತಂದೆಯ ಜೊತೆ ಸಂಸ್ಕೃತದಲ್ಲಿ ಮಾತನಾಡಬೇಕಾಗಿ ಬರುತ್ತಿತ್ತು. ಈ ಮೂರು ಭಾಷೆಯಲ್ಲೂ ಅತ್ಯುತ್ತಮವಾದ ಕೆಲಸವನ್ನು ಅವರು ಮಾಡಿದ್ದಾರೆ. ನಮ್ಮ ದೇಶದಲ್ಲಿ ಇದು ಸಾಮಾನ್ಯವಾದರೆ, ನಮ್ಮಲ್ಲಿ ಹಲವರು ಹೈಫನ್ ಮನುಷ್ಯರಾಗಿರುತ್ತೇವೆ. ಹೈಫನ್ ಮನುಷ್ಯರೆಂದರೆ ಭಾಷಾ ಸರಪಳಿಯ ಕೊಂಡಿಗಳಾದ ಮನುಷ್ಯರು. ರಾಮಾನುಜನ್ ತಮ್ಮನ್ನು ಹಾಗೆಯೇ ಕರೆದುಕೊಂಡಿದ್ದು.

ಯಾವ ಭಾಷೆಯೂ ಮೇಲಲ್ಲ; ಯಾವ ಭಾಷೆಯೂ ಕೀಳಲ್ಲ. ನಮ್ಮ ದೈನಿಕ ಜೀವನದಲ್ಲಿ ಒಂದೊಂದು ಭಾಷೆಯನ್ನು ಒಂದೊಂದು ಅಗತ್ಯಕ್ಕಾಗಿ ನಾವು ಬಳಸುತ್ತಾ ಬೆಳೆಯುತ್ತೇವೆ. ಇಂಥ ಒಂದು ವಿಚಿತ್ರ ಇಕಾಲಜಿಯಲ್ಲಿ ಈಗ ಕಾಣಿಸಿಕೊಂಡಿರುವ ಏಕೈಕ ಅಪಾಯವೆಂದರೆ ಇಂಗ್ಲಿಷ್ ಭಾಷೆ ಪಡೆದಿರುವ ಜಾಗತಿಕ ಪ್ರಭುತ್ವದ ಶಕ್ತಿ. ಈ ಪ್ರಭುತ್ವದಿಂದಾಗಿ ಅದು ಪಾರ್ಥೇನಿಯಂ ಇದ್ದಂತೆ, ಇನ್ನು ಯಾವುದನ್ನೂ ಅದು ಬೆಳೆಯಲು ಬಿಡುವುದಿಲ್ಲ. ಮುಂದೆಯೂ ಬಿಡುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಇಂಗ್ಲಿಷ್ ನಮ್ಮ ಭಾಷೆಗಳಿಗೆ ಪ್ರೇರಕ ಶಕ್ತಿಯಾಗಿದ್ದಂತೆ ಮುಂದೆ ಇರಲಾರದು ಎಂದು ನನಗೆ ಅನ್ನಿಸತೊಡಗಿದೆ. ತಮ್ಮ ಪ್ರೈಮರಿ ವಿದ್ಯಾಭ್ಯಾಸವನ್ನೇ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಮಕ್ಕಳು ಕನ್ನಡವನ್ನಾಗಲೀ ತುಳುವನ್ನಾಗಲೀ ಉಳಿಸಿಕೊಂಡಿರುವುದಿಲ್ಲ. ಪರಿಸರದ ಭಾಷೆ ಇಂಗ್ಲಿಷಲ್ಲವಾದ್ದರಿಂದ ಇಂಗ್ಲಿಷಿನ ಜೀವಾಳವೂ ಅವರಿಗೆ ತಿಳಿದಿರುವುದಿಲ್ಲ.

ವಿವಿಧ ಅಗತ್ಯಗಳನ್ನು ವಿವಿಧ ಭಾಷೆಗಳು ಪೂರೈಸಬಹುದಾದ ಆರೋಗ್ಯವಾದ ಬಹುಭಾಷಾ ಇಕಾಲಜಿಯಲ್ಲಿ ಇಂಗ್ಲಿಷ್ ಕೂಡ ತುಂಬ ಉಪಯುಕ್ತವಾದ ಭಾಷೆಯೆನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅದರ ಉಪಯುಕ್ತತೆ ಹುಟ್ಟಿಕೊಂಡಿರುವುದೇ ಆದರೆ ಲೌಕಿಕವಾದ ಶಕ್ತಿಯಿಂದ. ಆದರೆ ನಮ್ಮ ಮೂರ್ಖತನದಿಂದಾಗಿ ಅದಕ್ಕ ಸಾಂಸ್ಕೃತಿಕವಾದ, ಅಲೌಕಿಕವೂ ಆದ ಶಕ್ತಿ ಕೂಡಾ ಇದ್ದಂತೆ ಭಾಸವಾಗತೊಡಗಿದೆ. ಆದರೆ ಲೌಕಿಕವಾಗಿ ಮಾತ್ರ ಇಂಗ್ಲಿಷ್ ಉಳಿಯುವಂತೆ ಮಾಡಲು ಇಲ್ಲಿ ಕನ್ನಡ ಮತ್ತು ತುಳು ಒಟ್ಟಾಗಿ ಇಂಗ್ಲಿಷನ್ನು ಪಳಗಿಸಿ ಉಳಿಸಿಕೊಳ್ಳಬೇಕು. ಆಗ ನಾವು ಭಾಷಾಶ್ರೀಮಂತರಾಗುತ್ತೇವೆ. ಅದಲ್ಲದೆ ‘ತುಳುವಾದ’ವನ್ನಾಗಲಿ, ‘ಸಂಸ್ಕೃತ’ವನ್ನಾಗಲಿ, ‘ಉರ್ದುವಾದ’ವನ್ನಾಗಲಿ, ನಮ್ಮ ರಾಜ್ಯದ ಭಾಷೆಯಾಗಲೇ ಬೇಕಾದ ಕನ್ನಡ ವಿರುದ್ಧ ಬಳಸುವುದು ಹೇಗಾದರೂ ಮಾಡಿ ನಮ್ಮ ಮಕ್ಕಳಿಗೆ ಇಂಗ್ಲಿಷನ್ನು ಮಾತ್ರ ಕಲಿಸುವ ಹುಸಿ ಭಾಷಾವಾದದ ಕುಟಿಲೋಪಾಯವಾಗುತ್ತದೆ. ಹಾಗೆ ನಮ್ಮಲ್ಲಿ ಆದದ್ದು ಇದೆ.

ಮುಂದಿನ ಜನಾಂಗ ತಮ್ಮ ಮನೆಮಾತು, ತಮ್ಮ ರಾಜ್ಯದ ಮಾತು, ತಮ್ಮ ರಾಷ್ಟ್ರದ ಮಾತು ಇವುಗಳ ಜೊತೆ ಇಂಗ್ಲಿಷನ್ನೂ ಉಳಿಸಿಕೊಳ್ಳುವುದು ಆದರ್ಶಪ್ರಾಯವಾದ್ದು. ಇದು ಕಠಿಣವಾದ ಆದರ್ಶ, ಸರ್ವಮಾನ್ಯವಾದದ್ದಲ್ಲ. ಆದ್ದರಿಂದ ತಮ್ಮ ಅಗತ್ಯಗಳು ಬೆಳೆಯುತ್ತಾ ಹೋದಂತೆ ಅನಿವಾರ್ಯವಾದ ತಮ್ಮ ಮನೆಯ ಮಾತು ಮತ್ತು ತಮ್ಮ ರಾಜ್ಯದ ಮಾತಿನ ಜೊತೆ ಬೇರೆ ಮಾತುಗಳನ್ನೂ ಕಲಿಯುತ್ತ ಹೋಗುವುದು ಆರೋಗ್ಯಕರವಾದ್ದು. ಮನೆಮಾತು ಮತ್ತು ಹೊರಗಿನ ಪರಿಸರದ ಮಾತುಗಳನ್ನಂತೂ ಎಂದಿಗೂ ಬಿಟ್ಟುಕೊಡಬಾರದು.

ಸಾರಾಂಶದಲ್ಲಿ ಹೇಳುವುದಾದರೆ, ದಕ್ಷಿಣ ಕನ್ನಡ ಜಿಲ್ಲೆಯವರು  ಪರಂಪರಾನುಗತವಾದ ತಮ್ಮ ಜಾಣ್ಮೆಯಲ್ಲಿ ತುಳು ಬಿಡದಂತೆ ಕನ್ನಡದವರಾಗಿದ್ದು ಅಥವಾ ಕನ್ನಡ ಬಿಡದಂತೆ ತುಳುವರಾಗಿದ್ದು ಬೆಳೆಯಬೇಕು. ತಮ್ಮ ಬೆಳವಣಿಗೆಯ ದೃಷ್ಟಿಯಿಂದ ಇಂಗ್ಲಿ‌ಷನ್ನಾಗಲಿ ಹಿಂದಿಯನ್ನಾಗಲಿ ಕಲಿತವರಾಗಿ ಇಡೀ ಭಾರತದಲ್ಲಿ ಬದುಕಬಲ್ಲಂಥವರಾಗಬೇಕು. ತುಳು ಮತ್ತು ಕನ್ನಡವನ್ನು ಅವರು ಬಿಟ್ಟವರಾಗಿ ಉಳಿದ ಏನನ್ನೂ ಅವರು ಎಷ್ಟೇ ಬೆಳೆಸಿಕೊಳ್ಳಲಿ, ಸಾಂಸ್ಕೃತಿಕವಾಗಿ ಅವರು ಅನಾಥರಾಗುತ್ತಾರೆ. ಕನ್ನಡಕ್ಕೆ ಈಗಾಗಲೇ ರಾಜ್ಯದ ಶಕ್ತಿಯನ್ನು ಒದಗಿಸಿಕೊಳ್ಳುವ ಅವರು ಅನಾಥರಾಗುತ್ತಾರೆ. ಕನ್ನಡಕ್ಕೆ ಈಗಾಗಲೇ ರಾಜ್ಯದ ಶಕ್ತಿಯನ್ನು ಒದಗಿಸಿಕೊಳ್ಳುವ ಸತತ ಪ್ರಯತ್ನ ನಡೆದಿದೆ. ಈ ಪ್ರಯತ್ನದ ಹಿಂದೆ ತುಳುವರೂ ಕೊಂಕಣಿಯವರೂ ಮಾಸ್ತಿ, ಪುತಿನರಂಥ ತಮಿಳರೂ ಇದ್ದಾರೆ. ಈ ಪ್ರಯತ್ನದ ಜೊತೆ ಜೊತೆಯಲ್ಲೇ ತಾನು ಪೂರೈಸುತ್ತಿರುವ ಅಗತ್ಯಗಳನ್ನು ತುಳು ಇನ್ನು ಮುಂದೆಯೂ ಪೂರೈಸುತ್ತಾ, ಇಲ್ಲಿನ ಹಲವರಿಗೆ ಅವರು ಎಲ್ಲಿಯೇ ಇರಲಿ, ಆಪ್ತ ಭಾಷೆಯಾಗಿ ಉಳಿಯಬೇಕು. ಹೀಗೆ ಉಳಿಯಲೇಬೇಕಾದ ತುಳು ಬೇರೆ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಬಲ್ಲ ಶಕ್ತಿಯನ್ನು ಗಳಿಸಿಕೊಳ್ಳುತ್ತಾ, ಈ ಜಿಲ್ಲೆಯಲ್ಲಿ ಇನ್ನಷ್ಟು ಬೆಳೆಯಬೇಕೆಂಬ ಛಲ ನಿಜವಾಗಿ ತುಳುವರಲ್ಲಿದ್ದರೆ, ಹಾಗೆ ಬೆಳೆಯಲಿಕ್ಕೂ ಅವಕಾಶ ಇರಬೇಕು. ಇದು ಆರ್ಥಿಕ ಅನುಕೂಲದ ಪ್ರಶ್ನೆ ಮಾತ್ರವಲ್ಲ. ಭಾಷೆಯನ್ನು ಬಳಸುವ ವ್ಯಕ್ತಿಯ ಭಾವ ಜೀವನಕ್ಕೂ, ಚಿಂತನಶೀಲತೆಗೂ, ಅನುಭವ ದಟ್ಟತೆಗೂ ಸಂಬಂಧಪಟ್ಟ ಪ್ರಶ್ನೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿ, ನನ್ನ ಪ್ರಜಾಸತ್ತಾತ್ಮಕವಾದ ಮಿತಿಯಲ್ಲಿ ನಾನು ಈ ಆಶ್ವಾಸನೆಯನ್ನು ಕೊಡಬಲ್ಲವನಾಗಿದ್ದೇನೆ. ನಾವು ಅಕಾಡೆಮಿಯಲ್ಲಿ ಎಂಟನೆಯ ಪರಿಚ್ಛೇದವನ್ನು ಪರಿಗಣಿಸದೆಯೇ ಹಲವು ಭಾಷೆಗಳನ್ನು ನಮ್ಮ ಲಕ್ಷ್ಯದಲ್ಲಿ ಇಟ್ಟುಕೊಂಡಿದ್ದೇವೆ. ಎರಡು ದಿನಗಳ ಹಿಂದೆ ನಾನು ದಿಲ್ಲಿಯಲ್ಲಿ, ಅಕಾಡೆಮಿ ತನ್ನ ಒಳಕ್ಕೆ ತೆಗೆದುಕೊಳ್ಳಬೇಕಾದ ಉಳಿದ ಭಾಷೆಗಳು ಯಾವುವು ಎಂದು ನಿರ್ಧರಿಸಲು ಒಂದು ವಿಶೇಷ ತಜ್ಞರ ಸಮಿತಿಯನ್ನು ರಚಿಸಿದ್ದೇನೆ. ಈ ಸಮಿತಿಯ ಮುಂದೆ ತುಳುವಿನ ಪ್ರಶ್ನೆಯೂ ಬರಲಿದೆ. ಸಮರ್ಥ ಭಾಷಾ ಜ್ಞಾನಿಗಳಾದ ಡಾ. ವಿವೇಕ ರೈ ಅವರು ನಮ್ಮ ಅಕಾಡೆಮಿಯಲ್ಲಿ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸುವ ಗಣ್ಯರಲ್ಲಿ ಒಬ್ಬರು. ತುಳು ಭಾಷೆಯಲ್ಲಿ ಮಹತ್ವದ ಕೆಲಸವನ್ನು ಮಾಡುತ್ತಿರುವ ಇವರು ತುಳು ಅಕಾಡೆಮಿಯ ಅಧ್ಯಕ್ಷರೂ ಆಗಿದ್ದಾರೆ. ತುಳು ಭಾಷೆಯನ್ನು ಅಕಾಡೆಮಿ ತನ್ನ ಇನ್ನೊಂದು ಭಾಷೆಯೆಂದು ಪರಿಗಣಿಸಲು ಅಗತ್ಯವಾದ ಪುರಾವೆಗಳನ್ನು ಈ ಸಮಿತಿಯ ಮುಂದೆ ಇಡಲಿದ್ದಾರೆ. ಭಾರತೀಯರು ಮಾತನಾಡುವ ಎಲ್ಲಾ ಭಾಷೆಗಳನ್ನು ಗೌರವದಿಂದ ಕಾಣುವ ನಾನು ಯಾವ ನಿಲುವನ್ನು ತೆಗೆದುಕೊಳ್ಳುತ್ತೇನೆಂಬುದನ್ನು ಹೇಳುವುದರ ಅಗತ್ಯವಿಲ್ಲ. ನನ್ನ ಮೊದಲನೆಯ ಕರ್ತವ್ಯ ಇಂಥ ಸಮಿತಿಯಲ್ಲಿ, ಭಾರತೀಯ ಭಾಷೆಗಳ ನಡುವೆ ಅನಾರೋಗ್ಯಕರವಾದ ರಾಜಕೀಯ ಪೈಪೋಟಿಯನ್ನು ಉಂಟುಮಾಡದಂತೆ ನೋಡಿಕೊಳ್ಳುವುದು. ನಿಮ್ಮವರಲ್ಲಿ ಒಬ್ಬನಾಗಿ ಇಷ್ಟು ಆಶ್ವಾಸನೆಯನ್ನು ನಾನು ಸಂತೋಷದಿಂದ ಕೊಡುತ್ತೇನೆ.

ಕೊನೆಯದಾಗಿ ಸಾಹಿತ್ಯ ಮೌಲ್ಯಕ್ಕೆ ಸಂಬಂಧಪಟ್ಟಂತೆ ಬಹು ಮುಖ್ಯವಾದ ಒಂದು ಮಾತಿದೆ. ಹಿಂದಿನ ಸಾರಿ ಅಕಾಡೆಮಿಯಲ್ಲಿ ಡೋಗ್ರಿ ಭಾಷೆಯ ಕೃತಿಯೊಂದಕ್ಕೆ ಪರುಸ್ಕಾರ ಕೊಡಬೇಕೇ ಬೇಡವೇ ಎಂಬ ಪ್ರಶ್ನೆ ಬಂದಾಗ, ಡೋಗ್ರಿ ಸಮಿತಿ ಪುರಸ್ಕಾರಕ್ಕೆ ಯಾವ ಕೃತಿಯೂ ಯೋಗ್ಯವಲ್ಲವೆಂದು ಹೇಳಿತು. ಇದರಿಂದ ಡೋಗ್ರಿ ಜನಕ್ಕೆ ಬೇಸರವಾಯಿತು. ಆದರೆ ಉತ್ತಮವಲ್ಲದ ಕೃತಿಗೆ ಬಹುಮಾನ ಕೊಡುವುದಕ್ಕೆ ವಿಮರ್ಶಕರ ಒಪ್ಪಿಗೆಯಿರಲಿಲ್ಲ. ಈ ಬಗೆಯ ವಸ್ತುನಿಷ್ಠ ಸಾಹಿತ್ಯ ಪರಿಶೀಲನೆಯನ್ನು ಮಾಡುವ ಧೈರ್ಯವಿಲ್ಲದ ಜನ ಒಂದು ಭಾಷೆಯನ್ನು ಬೆಳೆಸಲಾರರು. ಸತತವಾದ ಅಂತರಂಗ ವೀಕ್ಷಣೆಯ ಸತ್ಯಕಾಮಿಗಳಾದ ಜನರನ್ನು ಪಡೆದ ಭಾಷೆ ಮಾತ್ರ ಬೆಳೆಯಬಲ್ಲದು. ತುಳು ಭಾಷೆಯ ಜನರು ತಮ್ಮ ಸಾಹಿತ್ಯದ ಕೃತಿಗಳನ್ನು ಅಳೆದು ನೋಡುವಾಗ ಈಬಗೆಯ ವಸ್ತುನಿಷ್ಠ ಸತ್ಯ ಶೋಧನೆಯ ನಿಷ್ಠುರತೆಯನ್ನು ಬೆಳೆಸಿಕೊಳ್ಳಬೇಕೆಂದು ಅಂಥ ಪರಿವೀಕ್ಷಣೆಯಲ್ಲೇ ಬದುಕುತ್ತಿರುವ ಒಬ್ಬ ಸಾಹಿತಿಯಾಗಿ ನಾನು ಪ್ರಾರ್ಥಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯವರು ಪರಂಪರಾನುಗತವಾದ ತಮ್ಮ ಜಾಣ್ಮೆಯಲ್ಲಿ ತುಳು ಬಿಡದಂತೆ ಕನ್ನಡದವರಾಗಿದ್ದು ಅಥವಾ ಕನ್ನಡ ಬಿಡದಂತೆ ತುಳುವರಾಗಿದ್ದು ಬೆಳೆಯಬೇಕು.

—-
ಗ್ರಂಥ: ಬೆತ್ತಲೆ ಪೂಜೆ ಯಾಕೆ ಕೂಡದು? ಪುಟ, ೧೭೨೨

* * *