ನನ್ನ ಬಾಲ್ಯವನ್ನು ಕಾಡು ಪ್ರಧಾನವಾಗಿ ಆಕ್ರಮಿಸಿಕೊಂಡಿತ್ತು. ನಮ್ಮ ಮನೆಯಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿದ್ದ ಕಾಡು ದಿನೇ ದಿನೇ ಬೆಳೆಯುತ್ತಾ ಮನೆಯೊಳಕ್ಕೇ ನುಗ್ಗುವ ಗಳಿಗೆಗಾಗಿ ಹೊಂಚುತ್ತಿರುವಂತೆ ಕಾಣುತ್ತಿತ್ತು. ಅದು ಮತ್ತೂ ಮುನ್ನುಗ್ಗದಂತೆ ತಡೆಯಲು ಪ್ರತಿದಿನ ಬೆಳಗ್ಗೆ ಅಜ್ಜ ಕೈಯಲ್ಲಿ ಕುಡುಗೋಲು ಹಿಡಿದು ಹೊರಡುತ್ತಿದ್ದರು.

ಮೃಗಗಳನ್ನು ತನ್ನೊಳಗೆ ತುಂಬಿಕೊಂಡಿದ್ದ ಆ ಕಾಡೇ ಒಂದು ಮೃಗದಂತಿತ್ತು. ಸಂಜೆಯನ್ನು ಮುತ್ತುತ್ತಿದ್ದ ಜೋಯಿಸರ ಹಕ್ಕಿಯ ಎಡೆಬಿಡದ ಮೊರೆತ ಹೆದರಿಸುವ ಕಾಡಿನ ದನಿಯೊಂದರಂತೆ ನನಗೆ ಕೇಳಿಸುತ್ತಿತ್ತು. ‘ಆಗಲೇ ಸಂಜೆ ಆರಾಯಿತಲ್ಲ’ ಎಂದುಕೊಳ್ಳುತ್ತಾ, ಹಸುವೊಂದು ಇನ್ನೂ ಬರಲಿಲ್ಲವೆಂದು ಅಮ್ಮ ಚಿಂತೆಯಲ್ಲಿ ಮುಳುಗಿಬಿಡುತ್ತಿದ್ದರು.

ಆ ಕಾಲಕ್ಕೆ ನನ್ನನ್ನು ಮುತ್ತುತ್ತಿದ್ದ ಹಲವು ಬಗೆಯ ಸದ್ದುಗಳು, ಗಂಧವಾಸನೆಗಳು ನನಗೆ ಚೆನ್ನಾಗಿ ನೆನಪಿವೆ. ಅಮಲೇರಿಸುವ ಕೆಂಡಸಂಪಿಗೆಯ ವಾಸನೆ, ನಕ್ಷದಾಕಾರದ ರಂಜದ ಹೂವಿನ ತಾಜ ಸುಗಂಧ, ತೊಯ್ದ ಹುಲ್ಲಿನ ಮೇಲೆ ಬಿದ್ದ ಪಾರಿಜಾತದ ತೆಳು ಪರಿಮಳ, ಅದೇ ಆಗ ಕೊಯ್ದ ಹುಲ್ಲಿನ ವಾಸನೆ, ಉರಿವ ಕೊರಡು, ಸಗಣಿ ಹಾಗೂ ಹಣ್ಣಾಗತೊಡಗಿದ್ದ ಹಲಸಿನ ವಾಸನೆ, ಇವು ನನ್ನ ಮೂಗಿಗೆ ಚಿರಪರಿಚಿತವಾಗಿದ್ದ ಬೆಳಗಿನ ಗಂಧಗಳು, ನೋಡುನೋಡುತ್ತಿದ್ದಂತೆ ಬೆಳಗು ಮಧ್ಯಾಹ್ನವಾಗಿ ಬಿಡುತ್ತಿತ್ತು. ನೆತ್ತಿಯ ಮೇಲೇರಿದ ಸೂರ್ಯ ಪ್ರಖರವಾಗಿ ಬೆಳಗುತ್ತಾ ನಮ್ಮ ಕಾಲ ಕೆಳಗೆ ನೆರಳಿನ ಕೊಳವೊಂದನ್ನು ಸೃಷ್ಟಿಸುತ್ತಿದ್ದ. ದಾಳಿಂಬೆ ಮರದ ಮೇಲೆ ಕೂತ ಕಾಗೆಯ ಕೂಗು ಬಿಟ್ಟರೆ ಸಂಪೂರ್ಣ ನೀರವವಾಗಿರುತ್ತಿದ್ದ ಆ ಅವಧಿ ಶೂನ್ಯವೇಳೆಯಂತಿರುತ್ತಿತ್ತು. ಮಧ್ಯಾಹ್ನವಾದಂತೆ, ವ್ಯಾಕುಲದ ಇಷ್ಟಗಲ ಕಣ್ಣುಗಳ ಹಸುಗಳ ಕೊರಳ ಗಂಟೆಯ ಸದ್ದು ಸುತ್ತೆಲ್ಲ ತುಂಬಿಕೊಳ್ಳತೊಡಗುತ್ತಿತ್ತು. ಎಳೆಗರುಗಳು ಮಾತ್ರ ಜಿಗಿಯುತ್ತ, ಕುಣಿಯುತ್ತ, ವಿನಾಕಾರಣ ಉಲ್ಲಾಸದಿಂದಿರುತ್ತಿದ್ದವು.

ದಿನವಿಡೀ ಚಿಲಿಪಿಲಿಗುಡುತ್ತಲೇ ಇದ್ದ ಜೋಯಿಸರ ಹಕ್ಕಿಗಳ ಆಕಾಶದಲ್ಲಿ ಮಿನುಗುವ ತಾರೆಗಳ ಹಿಂಡಿನೊಂದಿಗೆ ರಾತ್ರಿ ಅಡಿಯಿಕ್ಕಿದ ತಕ್ಷಣ ನಾಟಕೀಯವಾಗಿ ಸ್ತಬ್ಧ ವಾಗಿಬಿಡುತ್ತಿದ್ದವು. ಚಿತ್ತಾರ ಕೆತ್ತಿದ ತಲೆಬಾಗಿಲಿಗೊರಗಿ ನಿಂತ ಅಮ್ಮ ಸದಾ ತರಳೆ ಮಾಡುವ ಹಸು ಗೌರಿಗಾಗಿ ಕಾತುರದಿಂದ ಕಾಯುತ್ತಿರುತ್ತಿದ್ದಳು. ಅಜ್ಜ ಜಗುಲಿಯ ಮೇಲೆ ಕೂತು ಲಾಟೀನಿನ ಬೆಳಕಲ್ಲಿ ಪಂಚಾಂಗ ಹರಡಿಕೊಂಡು ಚೀಲದಿಂದ ಕವಡೆ ತೆಗೆದುರುಳಿಸಿ ಈ ಹಸುವಿಗೇನಾಗಿರಬಹುದೆಂದು ಕಂಡುಹಿಡಿಯಲೆತ್ನಿಸುತ್ತಿದ್ದರು. ‘ಗೌರೀ ಇಲ್ಲೇ ಎಲ್ಲೋ ಪೂರ್ವದಿಕ್ಕಿನಲ್ಲಿ ಕ್ಷೇಮವಾಗಿದ್ದಾಳೆ’ ಎಂದು ಅಮ್ಮನಿಗೆ ಸಮಾಧಾನ ಹೇಳುತ್ತಾ, ‘ದೇವರ ಮನೆಯಲ್ಲಿ ದೀಪ ಹಚ್ಚಿಟ್ಟಿದೀಯ ತಾನೆ? ಎನ್ನುತ್ತಿದ್ದರು. ಅಜ್ಜನ ಪಕ್ಕದಲ್ಲೇ ಕೂತ ನಾನು ಋತುಗಳು, ಮಾಸಗಳು, ನಕ್ಷತ್ರಗಳು, ಸಂವತ್ಸರಗಳ ಹೆಸರುಗಳನ್ನು, ಮಗ್ಗಿಯನ್ನು, ಶ್ಲೋಕ, ಮಂತ್ರಗಳನ್ನು, ಅದರಲ್ಲೂ ದೆವ್ವ, ಗುಡುಗು ಹಾಗೂ ಹುಲಿಯಿಂದ ನನ್ನನ್ನು ಕಾಪಾಡಬಲ್ಲ ಶ್ಲೋಕಗಳನ್ನು ಜಪಿಸಲಾರಂಭಿಸುತ್ತಿದ್ದೆ. ನಡುನಡುವೆ ಅರ್ಜುನನಿಗಿದ್ದ ಹಲವು ಹೆಸರುಗಳನ್ನು ಒಂದೊಂದಾಗಿ ನಾನು ಪಠಿಸುತ್ತಿದ್ದುದು ನೆನಪಾಗುತ್ತದೆ: ಅರ್ಜುನ, ಫಲ್ಗುಣ, ಪಾರ್ಥ, ಕಿರೀಟಿ, ಶ್ವೇತವಾಹನ….

ದಟ್ಟ ಕಪ್ಪು ಕಾಡಿನ ನಡುವಿನಿಂದ ಸಣ್ಣಗಿನ, ಆದರೆ ಎದೆನಡುಗಿಸುವ ಸದ್ದೊಂದು ಕೇಳತೊಡಗುತ್ತಿತ್ತು. ಹಾಂ, ಎಲ್ಲೋ ದೂರದಲ್ಲಿ ನಮ್ಮತ್ತಲೇ ಧಾವಿಸುತ್ತಿರುವ ಹುಲಿಯ ಘರ್ಜನೆಯದು. ಘರ್ಜನೆ ಜೋರಾದಂತೆಲ್ಲ ಅದು ನಮ್ಮ ಹತ್ತಿರ ಹತ್ತಿರವೇ ಬರುತ್ತಿರುವಂತೆ ಭಾಸವಾಗತೊಡಗುತ್ತಿತ್ತು – ನಮ್ಮ ಸುತ್ತ ಸುತ್ತುವ ವೃತ್ತ ಕ್ರಮೇಣ ಹತ್ತಿರ ಹತ್ತಿರವಾಗುವ ಹಾಗೆ. ಹುಲಿರಾಯನ ಆಗಮನ ನಮ್ಮ ಅರಿವಿಗೆ ಬರುವ ಮೊದಲೇ ಹಸುಗಳಿಗೆ ಅರಿವಾಗಿ ಬಿಡುತ್ತಿತ್ತು. ಹಸುಗಳ ಕೊರಳ ಗಂಟೆಗಳ ಸದ್ದಿನಿಂದಲೇ ಅವು ಹೆದರಿ ಥರಗುಟ್ಟುವುದು ನಮಗೆ ಗೊತ್ತಾಗಿಬಿಡುತ್ತಿತ್ತು. ಥಟ್ಟನೆ ಕೊಟ್ಟಿಗೆಯ ಕದ ಮುಚ್ಚಿಬಿಡುತ್ತಿದ್ದ ಅಮ್ಮ ಕಳೆದ ಹೋದ ಹಸು ಜೋಪಾನವಾಗಿ ಮನೆಗೆ ಮರಳಲೆಂದು ರಾತ್ರಿಯಿಡೀ ಪ್ರಾರ್ಥಿಸುತ್ತಾ ಕೂತುಬಿಡುತ್ತಿದ್ದರು. ಅಮ್ಮನ ತೊಡೆಯ ಮೇಲೆ ಹಾಗೇ ಉರುಳಾಡುತ್ತಿರುತ್ತಿದ್ದ ನಾನು ಯಾವಾಗಲೋನಿದ್ದೆಗೆ ಜಾರಿಬಿಟ್ಟಿರುತ್ತಿದ್ದೆ. ಮಾರನೆಯ ಬೆಳಗ್ಗೆ ಮನೆಗೆ ಬಂದ ಒಕ್ಕಲು ಮಕ್ಕಳ ಬಾಯಲ್ಲೆಲ್ಲ ಹುಲಿಯ ಮಾತೇ. ಹಸು ಸುರಕ್ಷಿತವಾಗಿದೆಯೆಂದು ತಿಳಿದು ನಾವು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೆವು. ತನ್ನ ಹೊಲಕ್ಕೆ ನುಗ್ಗಿದ ಹಸುವನ್ನು ಒಕ್ಕಲುಮಗನೊಬ್ಬ ಕಟ್ಟಿ ಹಾಕಿರುತ್ತಿದ್ದ. ಅದೂ, ಪೂರ್ವದಿಕ್ಕಿಗಿರುವ ಜಾಗವೊಂದರಲ್ಲೇ.

ಒಕ್ಕಲು ಮಕ್ಕಳ ಬಾಯಲ್ಲಿ ಹಲವು ಹುಲಿಕತೆಗಳಿದ್ದವು: ಹುಲಿಯ ಜೊತೆ ಬರಿಗೈಲಿ ಕಾದಾಡಿದ ಕಲಿಗಳಿದ್ದರು; ಗಾಯವೇನೂ ಆಗದಿದ್ದರೆ ಹುಲಿಗಳು ನಿರುಪದ್ರವಿಗಳಂತೆ; ಗಾಯವಾದರೆ, ಅವು ತಮ್ಮ ಮೈಯಿಂದಲೇ ಮಾಂಸ ಕಿತ್ತು ಗಾಯದ ಮೇಲೆಲ್ಲ ಅಂಟಿಸಿಕೊಳ್ಳುತ್ತವಂತೆ. ಪರಿಣಾಮ, ಹುಲಿಯ ಮೈತುಂಬ ಹುಣ್ಣುಗಳಂತೆ. ಇವೆಲ್ಲ ಕತೆಗಳನ್ನು ನಾನು ಕೇಳಿದ್ದು ಅವರ ಬಾಯಿಂದಲೇ. ‘ಹುಲಿಹುಣ್ಣು’ ಎನ್ನುವುದು ಎಂದೂ ಋಣಮುಕ್ತನಾಗದ ಸಾಲಗಾರನನ್ನು ಅಥವಾ ಸದಾ ವ್ಯಥೆಯಿಂದ ಕೊರಗುವವನ್ನು ಬಣ್ಣಿಸುವ ರೂಪಕವಾದದ್ದು ಹೀಗೆ.

ಹುಲಿಯ ಜೊತೆ ಹಾಗೂ ಬಿಳಿಯರ ಜೊತೆ ಟಿಪ್ಪು ಕಾದಿದ್ದನ್ನೂ ‘ಹೊಯ್ಸಳ’ ಎಂಬ ಪದ ಹುಟ್ಟಿದ ಬಗೆಯನ್ನೂ ನಾನು ಮೊದಲ ಬಾರಿಗೆ ಕೇಳಿದ್ದು ನಮ್ಮೂರ ಹುಲಿಪುರಾಣಗಳಲ್ಲೇ. ಆಶ್ರಮದಲ್ಲಿ ತನ್ನ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಛಂಗನೆ ಜಿಗಿದು ಬಂದ ಹುಲಿಯನ್ನು ಕಂಡ ಗುರು ಸಳನೆಂಬ ಬಾಲಕನಿಗೆ ‘ಹೊಯ್’ ಎಂದ. ಚೂರಿ ಹಿಡಿದು ಕಾದಾಡಿ ಹುಲಿಯನ್ನು ಕೊಂದ ಸಳ ಮುಂದೆ ಹೊಯ್ಸಳ ಸಾಮ್ರಾಜ್ಯವನ್ನೇ ಕಟ್ಟಿದ.

ಜೊತೆಗೇ, ಅಮ್ಮ ಹೇಳುತ್ತಿದ್ದ ಕಣ್ಣೀರಿನ ಕತೆಗಳೂ ಇದ್ದವು. ಅದರಲ್ಲೊಂದು ಕತೆ ಇದು: ಮಗುವೊಂದು ಇಡೀ ರೊಟ್ಟಿ ತನಗೇ ಬೇಕೆಂದು ಆಳಲಾರಂಭಿಸಿತ್ತು. ಅರ್ಧರೊಟ್ಟಿ ನಿನಗೆ ಸಾಕೆಂದು ತಾಯಿಯ ತಾಕೀತು. ಮಗುವಿನ ರಚ್ಚೆ ಹೆಚ್ಚಾದಾಗ ರೋಸಿ ಹೋದ ಮಗುವನ್ನೆತ್ತಿ ಹೊರಗೆ ಕತ್ತಲಲ್ಲಿ ಕೂರಿಸಿ ಕದ ಮುಚ್ಚಿಕೊಂಡು ಇನ್ನಷ್ಟು ರೊಟ್ಟಿ ತಟ್ಟಲು ಹೋದಳು. ಇತ್ತ, ಸದ್ದಿಲ್ಲದೆ ಕಳ್ಳಹೆಜ್ಜೆ ಇಡುತ್ತಾ ಬಂದ ಹುಲಿರಾಯ ಮಗುವಿನೆದುರು ನಿಂತ. ಅದು ಹುಲಿಯೆಂಬುದು ಮಗುವಿಗೇನು ಗೊತ್ತು! ಆದರೆ ಉರಿಯುತ್ತಾ ಘಳಗುಟ್ಟವ ಕಣ್ಣು, ಅತ್ತಿತ್ತ ಅಲ್ಲಾಡುವ ಬಾಲ ಕಂಡು ಮಗುವಿಗೆ ದಿಗಿಲು. ಕದ ಬಡಿಯುತ್ತಾ, ‘ಅರ್ಧರೊಟ್ಟಿ ಸಾಕಮ್ಮ! ಬಾಗಿಲು ತೆಗೆಯಮ್ಮಾ! ಕಣ್ಣು ಪಿಲಿ ಪಿಲೀ, ಬಾಲ ಪಟಪಟಾ; ಕಣ್ಣು ಪಿಲಿಪಿಲೀ, ಬಾಲ ಪಟಪಟಾ’ ಎನ್ನುತ್ತಾ ಮಗು ಗಟ್ಟಿಯಾಗಿ ಅಳಲಾರಂಭಿಸಿತು. ಹಟಮಾರಿ ಮಗುವಿಗೆ ಸರಿಯಾಗಿ ಪಾಠ ಕಲಿಸುತ್ತೇನೆಂದು ತಾಯಿ ತೆಗೆಯದೆ ರೊಟ್ಟಿ ಸುಡುತ್ತಾ ಹೋದಳು. ಕಡೆಗೆ ಕದ ತೆರೆದ ತಾಯಿ ಕೂಗಿದರೆ ಯಾರೂ ಓಕೊಳ್ಳಲೇ ಇಲ್ಲ. ಇಂಥ ಎದೆ ನಡುಗಿಸುವ ಕತೆಯನ್ನು ಅಮ್ಮ ನನಗೆ ಯಾಕೆ ಹೇಳಿದ್ದರೋ ಗೊತ್ತಿಲ್ಲ.

ಪ್ರತಿಯೊಂದು ಕನ್ನಡ ಮಗವೂ ಪ್ರಾಥಮಿಕ  ಶಾಲೆಯಲ್ಲೇ ಕಲಿಯುವ ಗೋವಿನ ಹಾಡಿನ ಕತೆಯನ್ನು ನಾನು ಆಗಲೇ ಕೇಳಿದ್ದೆ. ‘ಕರ್ನಾಟಕ’ ಎಂಬ ಪದ ಮೊದಲ ಸಲ ನನ್ನ ಕಿವಿಗೆ ಬಿದ್ದದ್ದು ಈ ಗೋವಿನ ಹಾಡಿನ ಮೂಲಕವೇ. ಸಂಸ್ಕೃತದ ಕತೆಯನ್ನು ಕನ್ನಡದಲ್ಲಿ ಹೇಳಿರುವ ಜಾನಪದ ಕವಿಯ ಈ ‘ಗೋವಿನ ಹಾಡು’ ನಾನು ಓದಿರುವ ಕವಿತೆಗಳಲ್ಲೆಲ್ಲ ಅತ್ಯಂತ ಸರಳವಾದ ಭಾಷೆಯುಳ್ಳ ಕವಿತೆಯೆಂದು ನನ್ನ ನಂಬಿಕೆ. ತನ್ನ ಅತ್ಯಂತ ಸೃಜನಶೀಲ ಕ್ಷಣಗಳಲ್ಲಿ ವರ್ಡ್ಸ್‌ವರ್ತ್‌‌ನಂಥವನು ಮಾತ್ರ ಇಷ್ಟು ಮುಗ್ಧವಾದ ಹಾಗೂ ಆಳವಾದ ಕವಿತೆಯನ್ನು ಬರೆಯಬಲ್ಲ. ಧರಣಿಮಂಡಲ ಮಧ್ಯದಲ್ಲಿರುವ ಕರ್ಣಾಟಕ ದೇಶಕ್ಕೆ, ಅಲ್ಲಿಂದ ಕಾಳಿಂಗನೆಂಬ ಗೊಲ್ಲನ ಲೋಕಕ್ಕೆ ಕವಿತೆ ಸಲೀಸಾಗಿ ಜಿಗಿಯುತ್ತದೆ. ಕನ್ನಡಿಗರಿಗೆಲ್ಲ ಚಿರಪರಿಚಿತವಾದ  ಪುಣ್ಯಕೋಟಿಯ ಕತೆಯನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ಸತ್ಯವಾಕ್ಯಕೆ ತಪ್ಪಿ ನಡೆಯದೆ ಮರಳಿಬಂದ ಪುಣ್ಯಕೋಟಿಯನ್ನು ಕಂಡು ಅರ್ಬುತನೆಂಬ ಹುಲಿ ಕರಗಿಹೋಗುತ್ತದೆ. ಆದರೆ ಮಾಂಸ ತಿನ್ನುವುದು ಹುಲಿಯ ಧರ್ಮ. ಹೃದಯ ಪರಿವರ್ತನೆಯಿಂದ ಅದು ಸಸ್ಯಾಹಾರಿಯಾಗಲಾರದು. ಹೀಗಾಗಿ ಸಾವೊಂದೇ ಅದರ ಕಣ್ಣೆದುರಿಗಿರುವ ದಾರಿ. ಮೂಲ ಸಂಸ್ಕೃತ ಕತೆಯಲ್ಲಿ ಹುಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತದೆ. ಆದೆ ಕನ್ನಡ ಕವಿ ಇದನ್ನು ಮತ್ತಷ್ಟು ಭಿನ್ನವಾಗಿ, ಪರಿಣಾಮಕಾರಿಯಾಗಿ ತೋರಿಸುತ್ತಾನೆ. ಹೃದಯ ಪರಿವರ್ತನೆಯಾದ ಹುಲಿಗೆ ಇರುವ ಮಾರ್ಗ ಸಾವೊಂದೇ. ಆದ್ದರಿಂದಲೇ ಅದು ‘ತನ್ನ ಪ್ರಾಣವ ಬಿಟ್ಟಿತು.’

ಯಾರೂ ನಂಬಲಾಗದ ಈ ಕತೆಯನ್ನು ಎಂಥ ನಂಬಿಕೆಯಲ್ಲಿ ಕವಿ ಹೇಳುತ್ತಾನೆಂದರೆ, ಬಿಟ್ಟಬಾಯಿ ಬಿಟ್ಟಂತೆ ಆಲಿಸುವ ಕೇಳುಗ ತನಗರಿವಿಲ್ಲದೆಯೇ ಇದನ್ನು ನಂಬಿಬಿಟ್ಟಿರುತ್ತಾನೆ. ಅಜ್ಞಾತ ಕವಿಯ ಈ ಸರಳ ಸಾಲುಗಳು ಅಸಾಧ್ಯವಾದದ್ದೊಂದನ್ನು ಸಾಧ್ಯವಾಗಿಸಿಬಿಡುತ್ತವೆ: ನಾವು ನಂಬಿಕೆಯ ಸ್ಥಿತಿಗೆ ಜಾರಿಬಿಡುತ್ತೇವೆ. ಈ ಪದ್ಯವನ್ನು ಓದಿ ಹೇಳುವಾಗ ಅಪ್ಪನ ಕಣ್ಣು ತುಂಬಿ ಬಂದಿರುತ್ತಿದ್ದದ್ದು ನನಗೆ ಚೆನ್ನಾಗಿ ನೆನಪಿದೆ. ಅಪ್ಪ ಅತ್ತಿದ್ದನ್ನು ನಾನು ಕಂಡಿರುವುದು ಆ ಸಂದರ್ಭದಲ್ಲಿ ಮಾತ್ರ.

ಬಾಲ್ಯಕಾಲದ ಸರಳ ಹಾಗೂ ಎದೆತಟ್ಟುವ ಅನುಭವಗಳು ನಾನು ಬೆಳೆದಂತೆಲ್ಲ ಹೊಸ ಅರ್ಥಗಳನ್ನು ಹೊಳೆಯಿಸುತ್ತಾ ಬಂದಿವೆ: ಜಗ್ತು ಬದಲಾಗುವುದು ವ್ಯವಸ್ಥೆಯ ಪರಿವರ್ತನೆಯಿಂದ ಅಥವಾ ಜನರ ಹೃದಯ ಪರಿವರ್ತನೆಯಿಂದ. ಮಾರ್ಕ್ಸ್ ಅಥವಾ ಮನುವಿನಂಥವರು ವ್ಯವಸ್ಥೆಯನ್ನು ಕಟ್ಟುವ, ಬದಲಿಸುವ ವರ್ಗಕ್ಕೆ ಸೇರಿದವರು. ಗಾಂಧಿ, ಟಾಲ್‌ಸ್ಟಾಯ್ ಹಾಗೂ ಗೋವಿನ ಹಾಡಿನ ಕವಿಯಂಥವರು ಮೂಲತಃ ಹೃದಯ ಪರಿವರ್ತಕರು. ಸ್ವರ್ಗದ ಬಾಗಿಲು ತೆರೆಸಬೇಕೆನ್ನುವ ಮನುಷ್ಯನಿಗೆ ಅತಿಗೆ ತಲುಪುವ ಧೈರ್ಯವಿರಬೇಕು ಎಂದಿದ್ದ ಬ್ಲೇಕ್. ನಂಬಿಕೆಯ ದೃಷ್ಟಿಯಿಂದ ಗೋವಿನ ಹಾಡಿನ ಕವಿಗಿಂತ ಇನ್ನಾವ ಅತಿಯನ್ನು ತಾನೆ ನೀವು ತಲುಪಲು ಸಾಧ್ಯ?

* * *

ತನ್ನ ಅವಳಿಗಳನ್ನೆತ್ತಿಕೊಂಡ ಅಬ್ಬಕ್ಕ ನಮ್ಮ ಹಿತ್ತಲಿಗೆ ಬರುತ್ತಿದ್ದಳು. ದೂರದ ಯಾವುದೋ ಊರಿಂದ ಬಂದ ಆ ತುಳುವರ ಹೆಂಗಸು ತಮ್ಮೂರಲ್ಲಿ ನೂರಾರು ದೋಣಿಗಳು ಲೆಕ್ಕವಿಲ್ಲಷ್ಟು ತೆಂಗಿನ ಮರಗಳೂ ಇವೆಯೆಂದು ಹೇಳುತ್ತಿದ್ದಳು. ನನ್ನ ಪಾಲಿಗಂತೂ ಅವಳೊಂದುಸ ವಿಸ್ಮಯ. ಕೆಲವು ಸಲ ರಾತ್ರಿಯ ಹೊತ್ತ, ಕೈಯಲ್ಲಿ ಅಡಿಕೆ ಹೂವಿನ ಗೊಂಚಲು ಹಿಡಿದ ಅವಳ ಇಡೀ ಮೈ ಲಯಬದ್ಧವಾಗಿ ತೂಗುತ್ತಿರುತ್ತಿತ್ತು. ಹಣೆಯ ತುಂಬ ಕುಂಕುಮ ಬಳಿದುಕೊಂಡ ಅವಳ ಕಣ್ಣುಗಳು ವಿಚಿತ್ರವಾಗಿ ಹೊಳೆಯುತ್ತಿರುತ್ತಿದ್ದವು. ಆಗವಳು ಮೈದುಂಬಿದ ದೇವತೆ. ತನ್ನ ಭಕ್ತರ ಬೆನ್ನು ಹತ್ತಿದ ಭೂತ ಜಕ್ಕಣಿಗಳನ್ನು ಓಡಿಸಬಲ್ಲ, ಅವರ ಖಾಯಿಲೆಗಳನ್ನು ವಾಸಿಮಾಡಬಲ್ಲ ದೇವತೆ. ಆದರೆ, ಅಮ್ಮನನ್ನ ಕಾಣಲೆಂದು ಅವಳು ನಮ್ಮ ಹಿತ್ತಿಲಲ್ಲಿ ಬಂದು ನಿಂತಾಗ ಮಾತ್ರ ನಿತ್ಯದ ಗೋಳುಗಳನ್ನು ತೋಡಿಕೊಳ್ಳುವ ದೈನೇಸಿ ಹೆಂಗಸು.

ಹಿತ್ತಿಲಿನ ಜಗತ್ತೇ ಬೇರೆ. ನನ್ನ ಅಜ್ಜ ಅಥವಾ ಅಪ್ಪ ಪಾರುಪತ್ಯೆ ನಡೆಸುತ್ತಿರುತ್ತಿದ್ದ ಅಂಗಳದ ಜಗತ್ತೇ ಬೇರೆ. ಆದರೆ ಅವರಿಬ್ಬರೂ ಒಟ್ಟಿಗೇ ಕೂತು ಪಾರುಪತ್ಯೆ ನಡೆಸಿದವರಲ್ಲ. ಮನೆಯ ಮುಂದಿನ ಅಂಗಳದಲ್ಲಿ ಥರಹೇವಾರಿ ಜನರು ನೆರೆಯುತ್ತಿದ್ದರು. ಕೆಲವರ ತಲೆಯ ಮೇಲೊಂದು ಹ್ಯಾಟು ಅಥವಾ ಪೇಟವಿರುತ್ತಿತ್ತು. ಅಪರೂಪಕ್ಕೊಮ್ಮೆ ಟರ್ಕಿ ಅಥವಾ ಜರಿ ಟೋಪಿಗಳೂ ಕಾಣಿಸಿಕೊಳ್ಳುತ್ತಿದ್ದವು. ದೂರದ ಊರುಗಳಿಂದ ಬರುತ್ತಿದ್ದ ಅವರಲ್ಲಿ ಕೆಲವರು ಕಂದಾಯದ ಲೆಕ್ಕ ಪತ್ರ ನೋಡುವ ಸರ್ಕಾರಿ ಜನ, ಇನ್ನು ಕೆಲವರು ಸುಮ್ಮನೆ ಭೇಟಿಗೆಂದು ಬಂದ ಊರಿನಹಿರಿಯರು, ಮತ್ತೆ ಕೆಲವರು ಅಡಿಕೆಯನ್ನೋ, ಭತ್ತವನ್ನೋ ಕೊಳ್ಳಲು ಪಟ್ಟಣದಿಂದ ಬಂದ ಬ್ಯಾರಿಗಳು. ಈ ಬ್ಯಾರಿಗಳೆಂದರೆ ನನಗೆ ಏನೋ ಆಕರ್ಷಣೆ. ಅವರು ನನಗೆಂದು ಬತ್ತಾಸು, ಖರ್ಜೂರ, ದ್ರಾಕ್ಷಿಗಳನ್ನು ತರುತ್ತಿದ್ದರು. ಅವರ ಕಾಲದಲ್ಲಿ ಬಣ್ಣದ ಚಪ್ಪಲಿ; ಆ ಚರ್ಮದ ಚಪ್ಪಲಿಗಳ ತುದಿಗೊಂದು ಪುಟ್ಟ ಕುಚ್ಚು. ದೀಪಾವಳಿ ಕಳೆದ ಮೇಲೆ ನನಗೂ ಅಂಥದೊಂದು ಜೊತೆ ಚಪ್ಪಲಿ ತಂದುಕೊಡುತ್ತೇನೆಂದು ಬ್ಯಾರಿಯೊಬ್ಬ ಮಾತುಕೊಟ್ಟಿದ್ದ. ಘಟ್ಟದ ಕೆಳಗಿನ, ಕಣಿವೆಯಾಚಿಗಿನ ಊರುಗಳ ವಿಚಾರವನ್ನೋ, ದೂರದ ಪಟ್ಟಣಗಳ ಸಮಾಚಾರವನ್ನೋ ಬ್ಯಾರಿಗಳು ಮಾತಾಡುತ್ತಿರುತ್ತಿದ್ದರು. ಘಟ್ಟದಾಚೆಗೊಂದು ಅರಮನೆ, ಅರಮನೆಯಾಚೆಗೆ ರಾಘವೇಂದ್ರಸ್ವಾಮಿಗಳ ಬೃಂದಾವನ, ಅದರಿಂದ ಮತ್ತೂ ಆಚೆಗೆ ದಿಲ್ಲಿ. ಅಲ್ಲಿ ಬಿಳಿಯ ದೊರೆಗಳ ದರ್ಬಾರು ಎಂಬುದು ನನ್ನ ತಿಳುವಳಿಕೆ. ಅಲ್ಲಿಂದ ಇನ್ನಷ್ಟು ದೂರ ಹೋದರೆ ಹಿಮವಂತದಲ್ಲಿ ಶಿವನ ವಾಸ; ಆ ಶಿವನ ಜಟೆಯಿಂದ ಗಂಗೆ ಹುಟ್ಟಿ ಹರಿಯುತ್ತಾಳೆ ಎಂಬುದೂ ನನಗೆ ಗೊತ್ತಿತ್ತು. ನನ್ನ ತಾತ ಮುತ್ತಾತರಲ್ಲೊಬ್ಬ ಕಾಶಿಗೆ ಹೋಗಿ ಅಲ್ಲಿಯ ದೊಡ್ಡ ಪಂಡಿತರೊಬ್ಬರನ್ನು ವಾದದಲ್ಲಿ ಸೋಲಿಸಿ ಆನೆಯನ್ನೇ ಗೆದ್ದಿದ್ದ. ಜಪವನ್ನಾರಂಭಿಸುವ ಮುನ್ನ ಕಾಲದೇಶಗಳಲ್ಲಿ ನನ್ನನ್ನು ನಾನು ಕೇಂದ್ರೀಕರಿಸಿಕೊಳ್ಳುತ್ತಿದ್ದ ಕರ್ನಾಟಕವೇ ಭರತ ವರ್ಷದ ಕೇಂದ್ರವೆಂಬುದು ನನ್ನ ಯಾವತ್ತಿನ ನಂಬಿಕೆ. ನಾವೆಲ್ಲಿದ್ದರೆ ಅದೇ ಭಾರತ. ಈ ಭಾರತಕ್ಕೆ ಹಲವು ಕೇಂದ್ರಗಳು.

ನನ್ನ ಬೌದ್ಧಿಕ ಹಾಗೂ ಆಂತರಿಕ ಚೇತನದ ಬೆಳವಣಿಗೆಗೆ ಪೂರಕವಾದ ಅನೇಕ ಅಂಶಗಳು ನಾನು ಸ್ಕೂಲಿಗೆ ಹೋಗುತ್ತಿದ್ದ ತೀರ್ಥಹಳ್ಳಿಯಲ್ಲೇ ದೊರಕಿದವೆಂದು ಕಾಣುತ್ತದೆ. ಹೆಡ್‌ಮಾಸ್ತರಂತೆಯೇ ಗುಡುಗುತ್ತಿದ್ದ ಕ್ರಿಶ್ಚಿಯನ್ ಜವಾನ ಆರೇಕ್ಯಂನನ್ನು (ಅವನ ನಿಜವಾದ ಹೆಸರು ಅರೇಕೊಪ್ಪ) ಕಂಡರೆ ನಮಗೆ ಹೆಡ್‌ಮಾಸ್ತರನ್ನು ಕಂಡಷ್ಟೇ ಭಯ. ನಾಗರಹಾವನ್ನು ಅನಾಮತ್ತಾಗಿ ಮೇಲೆತ್ತಿ ಹಿಡಿದುಕೊಂಡು ಬಿಡುತ್ತಿದ್ದ ಅರೇಕ್ಯಂ ಆ ಹಾವು ತನ್ನ ಮುಷ್ಠಿಯಲ್ಲಿ ಸಿಕ್ಕು ಒದ್ದಾಡುವುದನ್ನು ಕಂಡು ನಗುತ್ತಿರುತ್ತಿದ್ದ. ಅದೊಂದು ಜುಜುಬೀ ಹಗ್ಗವೆಂಬಂತೆ ಗರಗತ ತಿರುಗಿಸುತ್ತಾ ಈ ಭಯಾನಕ ಜಂತುವನ್ನೂ ಶಕ್ತಿಹೀನವಾಗಿಸಿಬಿಡುತ್ತಿದ್ದ. ಬಹಳ ಹಿಂದೆ ಆ ಸ್ಕೂಲಿನಲ್ಲೇ ಓದಿ ಹೋಗಿದ್ದ ತುಂಟ ಹುಡುಗನೊಬ್ಬನನ್ನು ಕುರಿತು ಆರೇಕ್ಯಂ ಸದಾ ನಮಗೆಲ್ಲ ಹೇಳುತ್ತಿರುತ್ತಿದ್ದ. ಏನು ಮಾಡಿದರೂ ಆ ಹುಡುಗನ್ನ ಬಗ್ಗಿಸಲಾಗುತ್ತಿರಲಿಲ್ಲವಂತೆ. ಕಾಡಲ್ಲಿ ಜೇನು ಹುಡುಕಿಕೊಂಡು ಹೋಗುತ್ತಿದ್ದ ಆ ಹುಡುಗ ಮುಂದೆ ದೊಡ್ಡ ಕವಿಯಾಗಿಬಿಟ್ಟನಂತೆ. ಅವನುಹೇಳುತ್ತಿದ್ದುದು ನಮ್ಮ ಕುವೆಂಪುವನ್ನು ಕುರಿತು; ಎಲ್ಲ ಪ್ರಭಾವಗಳಿಗೂ ಮುಕ್ತವಾಗಿ ತೆರೆದುಕೊಂಡಿದ್ದ ನನ್ನ ಬದುಕಿನ ಆ ಘಟ್ಟದಲ್ಲಿ ನನ್ನನ್ನು ಬಹುವಾಗಿ ಆಕ್ರಮಿಸಿಕೊಂಡಿದ್ದ ಮಹಾಕವಿಯನ್ನು ಕುರಿತು. ಮನೆಗೆ ಹೋಗುವ ದಾರಿಯಲ್ಲಿ ನಾವು ದಾಟಬೇಕಾಗಿದ್ದ ತುಂಗಾನದಿಯ ಬಂಡೆಗಳು ಕುವೆಂಪುವಿನ ಕಾನೂರು ಹೆಗ್ಗಡಿತಿಯ ಮೂಲಕ ನಿತ್ಯ ನೆನಪಿನಲ್ಲುಳಿಯುವಂತಾದವು. ವಾಸ್ತವದಲ್ಲಿ ನಾನು ಕಂಡದ್ದನ್ನೆ ಕಲ್ಪನೆಯಲ್ಲಿ ಮತ್ತೊಮ್ಮೆ, ಇನ್ನಷ್ಟು ಉತ್ಕಟವಾಗಿ, ಅನುಭವಿಸಿದೆ. ವಾಸ್ತವ ಅನುಭವವೊಂದಕ್ಕೆ ವಾಸ್ತವಾತೀತೆಯ ಪ್ರಭಾವಳಿ ದಕ್ಕಿದ್ದು ಹೀಗೆ.

ನನ್ನ ಬಾಲ್ಯ ಕಾಲದಲ್ಲಿ ಸಾಮಾಜಿಕ ಅನ್ಯಾಯ ಕುರಿತ ಪ್ರಜ್ಞೆ ಮೂಡಿದ್ದೂ, ನನ್ನ ಎಳೆಯ ಮನಸ್ಸಿನಲ್ಲಿ ಅಪಸ್ವರವೊಂದು ಮೂಡಲಾರಂಭಿಸಿದ್ದೂ ತೀರ್ಥಹಳ್ಳಿಯಲ್ಲೇ. ಕಾರಂತರ ಚೋಮನದುಡಿ ಓದಿದ ಮೇಲೆ, ನಮ್ಮ ಕೊಟ್ಟಿಗೆ ಬಳಿಯಲು ಬರುತ್ತಿದ್ದ ಹೊಲೆಯ ನನ್ನ ಪಾಲಿಗೆ ಕೇವಲ ಹೊಲೆಯನಾಗಿ ಉಳಿಯಲಿಲ್ಲ. ಅವನ ಅಂತರಂಗದಲ್ಲೇನು ನಡೆಯುತ್ತಿರಬಹುದೆಂದು ನಾನು ಯೋಚಿಸಲಾರಂಭಿಸುತ್ತಿದ್ದೆ. ನಮ್ಮ ಸುತ್ತಮುತ್ತ ಪ್ಲೇಗು ಮಾರಿ ಹರಡಿದಾಗ ಹಲವು ಅಸ್ಪೃಶ್ಯರು ತಾವು ಅಸ್ಪೃಶ್ಯರಾಗಿದ್ದರಿಂದಲೇ ಪ್ಲೇಗಿಗೆ ತುತ್ತಾದರು. ಕಾರಣ, ಯಾವ ಡಾಕ್ಟರು ಅವರಿಗೆ ಚುಚ್ಚುಮದ್ದು ನೀಡಲು ಸಿದ್ಧರಿರಲಿಲ್ಲ. ನಂತರ ಉಳಿದವರಿಗು ಪ್ಲೇಗು ಹಬ್ಬಿತು.

ಆ ಸರಿಸುಮಾರಲ್ಲೇ ನಮ್ಮ ತಂದೆ ಗಾಂಧೀಜಿಯ ‘ಹರಿಜನ್’ ಪತ್ರಿಕೆಯ ಇಂಗ್ಲಿಷ್ ಆವೃತ್ತಿಯನ್ನು ತರಿಸುತ್ತಿದ್ದರು. ಅವರು ಅವನ್ನು ಉಳಿದವರಿಗೂ ಅನುವಾದಿಸಿ ಹೇಳುತ್ತಿದ್ದರು. ಎರಡು ಜಗತ್ತುಗಳ: ನಡುವೆ, ಲೌಕಿಕ – ಪಾರಮಾರ್ಥಗಳ ನಡುವೆ ಬದುಕುತ್ತಿದ್ದ ಸಂಕೇತವಾಗಿಯೇನೋ ಎಂಬಂತೆ ಮುಂದಲೆಯಲ್ಲಿ ಪಶ್ಚಿಮದ ಕ್ರಾಪನ್ನೂ, ಪರಂಪರೆ ಕುರಿತ ಭಕ್ತಿಯ ಸಂಕೇತವೆಂಬಂತೆ ಹಿಂದಲೆಯಲ್ಲಿ ಜುಟ್ಟನ್ನೂ ಬಿಟ್ಟುಕೊಂಡಿರುತ್ತಿದ್ದ ಅಪ್ಪನಿಂದ ನಾನು ವಿಚಿತ್ರವಾದ ಪಾಠವೊಂದನ್ನು ಕಲಿತೆ. ಅಪ್ಪ ಆಗ ‘ಪುರುಷಸೂಕ್ತ’ಕ್ಕಿಂತ ಹೆಚ್ಚು ಶ್ರದ್ಧೆಯಿಂದ ಎಡ್ಮಂಡ್‌ಬರ್ಕಿನ ‘ದಿ ಇಂಪೀಚ್‌ಮೆಂಟ್ ಆಫ್ ವಾರನ್ ಹೇಸ್ಟಿಂಗ್ಸ್’ ಭಾಷಣವನ್ನು ನಾನು ಓದುವಂತೆ ಮಾಡಿದ್ದೇನೂ ಆಶ್ಚರ್ಯವಲ್ಲ. ಬರ್ಕಿನ ದೊಡ್ಡ ದೊಡ್ಡ ವಾಕ್ಯಗಳನ್ನು ನಾನು ಮಂತ್ರಗಳಂತೆ ಪಠಿಸುತ್ತಿದ್ದುದು ಆಗ ವಿಚಿತ್ರ ದೃಶ್ಯವಾಗಿದ್ದಿರಬೇಕು.

ನನ್ನ ಬೆಳವಣಿಗೆಗೆ ಕರ್ನಾಟಕ ನೀಡಿರಬಹುದಾದ ಕೊಡುಗೆಗಳು ಹಾಗೂ ಪ್ರೇರಣೆಗಳೆಲ್ಲ ಈ ಜಗತ್ತಿಗೆ ಒಂದೊಂದಾಗಿ ಹರಿದು ಬರತೊಡಗಿದವು. ವಯಸ್ಕ ಶಿಕ್ಷಣ ಸಂಸ್ಥೆಯ ಪ್ರಕಟಣೆಯಾದ ಪುಸ್ತಕ ಪ್ರಪಂಚದ ಮೂಲಕ ನಾನು ಪುಸ್ತಕಗಳ ಲೋಕ ಪ್ರವೇಶಿಸಿದೆ. ಜಗತ್ತಿನ ಪ್ರಖ್ಯಾತ ಪುಸ್ತಕಗಳನ್ನು ಪರಿಚಯಿಸುತ್ತಿದ್ದ ಪತ್ರಿಕೆ ಅದು. ಜೊತೆಗೆ ಕಾರಂತರ ಬಾಲಪ್ರಪಂಚವೂ ಇತ್ತು. ಆ ಕಾಲಕ್ಕೆ ವಿದ್ಯಾರ್ಥಿ ನಾಯಕರಾಗಿದ್ದ ಸೋಷಲಿಸ್ಟ್ ಶಾಂತವೇರಿ ಗೋಪಾಲಗೌಡರ ಪ್ರಭಾವವೂ ನನ್ನ ಮೇಲಾಯಿತು. ಆಮೇಲೆ ಗೋಪಾಲಗೌಡರು ಕರ್ನಾಟಕದ ಧೀಮಂತ ರಾಜಕೀಯ ನಾಯಕರಾಗಿ ಬೆಳೆದದ್ದು ಈಗ ಚರಿತ್ರೆಯ ಒಂದು ಭಾಗ.

ಆಗ ನನ್ನ ಸುತ್ತಮುತ್ತ ಇದ್ದವೆಲ್ಲ ಪವಿತ್ರವಾದಂಥವುಗಳೇ. ಮರ, ಮರದಡಿಯ ಕಲ್ಲು, ಎಲ್ಲವೂ ಪವಿತ್ರವೇ. ದೂರ್ವಾಸರ ಕೋಪಶಮನ ಮಾಡಲೆಂದು ಭೀಮಸೇನ ಮೂರು ಕಾಲುವೆಗಳನ್ನಾಗಿಸಿದ ನದಿಯೂ ಪವಿತ್ರವೇ. ದ್ರೌಪದಿಯ ಸ್ನಾನಕ್ಕೆಂದು ನದಿಯಲ್ಲೊಂದು ಕಡೆ ಅವನು ಸೃಷ್ಟಿಸಿದ್ದ ಕೊಳವೂ ಅಷ್ಟೇ ಪವಿತ್ರ. ನದಿಯ ನಡುವೆಲ್ಲೋ ಮೆಳೆಗಳಿದ್ದ ನಡುಗಡ್ಡೆಯೂ ಪವಿತ್ರವೇ. ದೂರ್ವಾಸ ಪ್ರಾಯಶ್ಚಿತ್ತ ಮಾಡಿಕೊಂಡ ಆ ಜಾಗವೊಂದು ಪವಿತ್ರ ಸ್ಥಳವೆಂಬುದು ಕೇವಲ ಕತೆಯಾಗಿರಲಿಲ್ಲ: ಹುಣ್ಣಿಮೆಯಾದ ಹನ್ನೆರಡನೆಯ ದಿನ ಬೆಳಗಿನ ಜಾವ ಹಲವರಿಗೆ ದೂರ್ವಾಸರ ಶಂಖದ ದನಿಯೂ ಕೇಳಿಸುತ್ತಿತ್ತು. ಆದರೆ, ಇವೆಲ್ಲದರ ಜೊತೆಗೇ ಒಳಗೊಳಗೇ ಬೆಳೆಯತೊಡಗಿದ್ದ ಸಂದೇಹವೂ ನನ್ನನ್ನು ಆಕ್ರಮಿಸಿಕೊಳ್ಳತೊಡಗಿತ್ತು. ಹೀಗಾಗಿ, ನನ್ನನ್ನು ನಾನು ಅರಿಯಬೇಕಾದರೆ, ನಾನು ಬದುಕಿದ್ದ ಜಗತ್ತನ್ನು ನಿರ್ಪುರಾಣೀಕರಿಸಿಕೊಳ್ಳಲೇ ಬೇಕಾಗಿತ್ತು.

ಪುರಾಣವೆನ್ನುವುದು ಸರ್ವವ್ಯಾಪಿಯಾಗಿತ್ತು. ವಾಸ್ತವದೊಂದಿಗೆ ನಿರಂತರ ನಂಟನ್ನು ಉಳಿಸಿಕೊಳ್ಳುತ್ತಲೇ, ಅದರಿಂದ ಬಿಡಿಸಿಕೊಳ್ಳುತ್ತಲೂ, ಹೊಸ ರೂಪಗಳನ್ನು ಸೃಷ್ಟಿಸುತ್ತಲೂ ಇತ್ತು.

ಒಮ್ಮೊಮ್ಮೆ ರಾತ್ರಿಯ ಹೊತ್ತು ಚಂಡೆಯ ಲಯಬದ್ಧ ಬಡಿತ ಎಷ್ಟು ಕಾಡುವಂತಿರುತ್ತಿತ್ತೆಂದರೆ, ದೊಂದಿ ಹಿಡಿದು ಕಪ್ಪುಕಾಡಿನ ಸ್ತಬ್ಧತೆಯನ್ನು ಭಂಗಗೊಳಿಸುತ್ತಾ ನಾವು ಆ ಕತ್ತಲಲ್ಲೂ ನಿರಾಯಾಸವಾಗಿ ಯಕ್ಷಗಾನ ನಡೆಯುವಲ್ಲಿಗೆ ಹೋಗುತ್ತಿದ್ದೆವು. ಪ್ರತಿ ಸುಗ್ಗಿಯ ನಂತರ ಯಕ್ಷಗಾನ ಕಲಾವಿದರು ಕರಾವಳಿಯ ಕಡೆಯಿಂದ ಬರುತ್ತಿದ್ದರು. ರಾಮಾಯಣ, ಮಹಾಭಾರತದ ಕತೆಗಳಿಗೆ ಜೀವಕೊಟ್ಟು ಆ ರಾತ್ರಿಗಳನ್ನು ಸಮೃದ್ಧಗೊಳಿಸುತ್ತಿದ್ದರು. ಚಂಡೆಯ ಸದ್ದು ಕಣಿವೆಗಳನ್ನು ತುಂಬುತ್ತಿತ್ತು. ಬೆಟ್ಟಗಳಿಂದ ಮಾರ್ದನಿಸುತ್ತಿತ್ತು. ನಾವು ನೆಲೆ ಮೇಲೆ ವಿರಾಮವಾಗಿ ಕೂತು ಕಡಲೆಕಾಯಿ ಮೆಲ್ಲುತ್ತ ರಂಗದ ಮೇಲೆ ನಡೆಯುವ ಆಟ ನೋಡುತ್ತಾ, ಆ ನಾಟಕೀಯ ಸಂಭಾಷಣೆಗಳ ರುಚಿಯನ್ನು ಅನುಭವಿಸುತ್ತಿದ್ದೆವು. ಸುಸ್ತಾದಾಗ ಹಾಗೇ ನಿದ್ದೆ ಹೋಗುತ್ತಿದ್ದೆವು. ಆ ಅರೆನಿದ್ದೆ, ಅರೆ ಎಚ್ಚರದಲ್ಲೂ ಭಾಗವತರ ನಿರೂಪಣೆಯಲ್ಲಿ ಕತೆ ಬಿಚ್ಚಿಕೊಳ್ಳುವುದೂ ಚಂಡೆಯ ಸದ್ದಿನೊಡನೆ ಕುಣಿವ ಹೆಜ್ಜೆ ಬೆರೆಯುವುದೂ ರಾತ್ರಿಯ ನೀರವದಲ್ಲಿ ಸಂಭಾಷಣೆಗಳು ಮಾರ್ದನಿಸುವುದೂ ಕಿವಿಗೆ ಬೀಳುತ್ತಲೇ ಇರುತ್ತಿತ್ತು. ಇನ್ನೇನು ಬೆಳಗಾಯಿತೆನ್ನುವಷ್ಟರಲ್ಲಿ ನಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸುವಂತೆ ಎರಗುತ್ತಿದ್ದ ಭಯಂಕರ ಸದ್ದು ಹೊಸ ನಿರೀಕ್ಷೆ, ಕಾತುರಗಳನ್ನು ಹುಟ್ಟಿಸುತ್ತಿತ್ತು. ನಿದ್ದೆಗಣ್ಣಲ್ಲಿದ್ದ ಪ್ರೇಕ್ಷರ ನಡುವಿನಿಂಧ ನಾಟಕದ ಅತ್ಯಂತ ವರ್ಣರಂಜಿತ ವೇಷವೊಂದು ಅಬ್ಬರಿಸುತ್ತಾ ಓಡೋಡಿ ಬರುತ್ತಿದೆ. ಕಾಡಿನ ಯಾವ ಮೂಲೆಯಿಂದ ಈ ವೇಷ ಅವತರಿಸಿತೊ?

ಬರೀ ಪುರಾಣಕತೆಗಳನ್ನಷ್ಟೇ ಅಲ್ಲ, ಕೆಳಜಾತಿಯ ತುಳುವರ ತಂಡಗಳು ಆಡುತ್ತಿದ್ದ ‘ಕೋಲ’ವನ್ನೂ ನಾವು ನೋಡುತ್ತಿದ್ದೆವು. ತುಳುವರ ದೇಸೀ ದೇವತೆಗಳ ಕತೆಗಳನ್ನು ಹೇಳುವ ‘ಕೋಲ’ಗಳು ಧಾರ್ಮಿಕ ಆಚರಣೆಗಳಂತಿರುತ್ತಿದ್ದವು. ಈ ಆಟ ನಡೆಯುವಾಗ ನಟನನ್ನು ಪಂಜುರ್ಲಿಯೋ, ಕಲ್ಕುಡ್ಕವೋ ಮೈದುಂಬಿರುತ್ತಿದ್ದವು. ಇದನ್ನು ಕಂಡ ನನಗೆ ನಡುಕ ಹುಟ್ಟುತ್ತಿದ್ದರೂ ವಿಚಿತ್ರ ಸೆಳೆತವೂ ಇತ್ತು. ಮಂತ್ರೋಚ್ಚಾರಣೆಯ ಏಕತಾನದ ಲಯದಲ್ಲಿ ತುಳು ಪಾಡ್ಡನ ಆರಂಭವಾಗುತ್ತಿದ್ದಂತೆ ಕಣ್ಣುಕುಕ್ಕುವ ವಿಚಿತ್ರ ಬಣ್ಣಗಳನ್ನು ಹಚ್ಚಿಕೊಂಡ, ಅಷ್ಟೇ ರಂಗುರಂಗಾದ ವೇಷ ತೊಟ್ಟ ನಟ ಕುಣಿಯಲಾರಂಭಿಸುತ್ತಿದ್ದ. ಮನುಷ್ಯಮಾತ್ರರ ಕತೆಯಂತಿದ್ದರೂ ಪ್ರೇಕ್ಷಕರಲ್ಲಿ ಭಕ್ತಿಯನ್ನುಕ್ಕಿಸಬಲ್ಲ ದೇವತೆಯ ಪುರಾಣಕತೆ ಬಿಚ್ಚಿಕೊಳ್ಳುತ್ತಿತ್ತು. ಮೈದುಂಬಿದ ಉತ್ಕಟ ಕ್ಷಗಳಲ್ಲಿ ಆ ನಟ ಕೈಲಿದ್ದ ಉರಿವ ದೊಂದಿಯನ್ನೇ ಬಾಯಿಗಿಟ್ಟುಕೊಂಡು ಬಿಡುತ್ತಿದ್ದ ಅಥವಾ ನನ್ನ ಮೈಯನ್ನು ದೊಂದಿಯಿಂದ ತಿವಿದುಕೊಳ್ಳುತ್ತಿದ್ದ. ಆ ಕಪ್ಪು ದೇವತೆ ಅಲ್ಲಿ ನೆರದವರಲ್ಲೊಬ್ಬನನ್ನು ಆರಿಸಿಕೊಂಡು ಅವನೆದುರು ಬಂದು ನಿಲ್ಲುತ್ತಿತ್ತು. ಮಾಂತ್ರಿಕವಾಗಿ ನರ್ತಿಸುತ್ತಾ ಆ ವ್ಯಕ್ತಿಯನ್ನು ಸಮ್ಮೋಹನಗೊಳಿಸುವಂತೆ ದಿಟ್ಟಿಸಲಾರಂಭಿಸುತ್ತಿತ್ತು. ಕ್ರಮೇಣ ಆ ವ್ಯಕ್ತಿಯೂ ಮೈದುಂಬುತ್ತಿದ್ದ. ನಟನೊಬ್ಬನನ್ನು ಕಾಲಜ್ಞಾನಿಯನ್ನಾಗಿ, ಪ್ರವಾದಿಯನ್ನಾಗಿ ಮಾಡಿಬಿಡುತ್ತಿದ್ದ ಧಾರ್ಮಿಕ ಆಚರಣೆ ಅದು. ಒಂದು ಸಲವಂತೂ ಹಾಗೆ ಮೈದುಂಬಿದ ನಟನೊಬ್ಬ ನನ್ನನ್ನೇ ದುರುಗುಟ್‌ಇ ನೋಡಲಾರಂಭಿಸಿದಾಗ ನಾನು ಹೆದರಿ ಅಲ್ಲಿಂದ ಓಡಿಬಿಟ್ಟಿದ್ದೆ.

ನಾನು ಬದುಕುತ್ತಿದ್ದ ಆ ಪವಿತ್ರ ಜಗತ್ತನ್ನು ನಿರ್ಪುರಾಣೀಕರಿಸಲು (Demythification) ನನಗಿದ್ದ ಏಕೈಕ ಮಾರ್ಗ ಇದು: ಏನಾದರೂ ಅತ್ಯಂತ ನಾಟಕೀಯವಾದದ್ದನ್ನೋ ತೀರಾ ಅಸಹಜವಾದದ್ದನ್ನೋ ಮಾಡಿ, ಕಲ್ಲು ಎನ್ನುವುದು ಬರೀ ಕಲ್ಲು, ಮರ ಎಂದರೆ ಮರ ಎಂದು ನನ್ನನ್ನು ನಾನು ನಂಬಿಸಿಕೊಳ್ಳುವುದು. ಈ ಕಾರಣಕ್ಕಾಗಿ ಒಂದು ಪವಿತ್ರ ಮರದಡಿಯ ಕಲ್ಲನ್ನು ಆರಿಸಿಕೊಂಡೆ. ಅದು ಬಹಳ ಪ್ರಭಾವಶಾಲಿಯಾದ ಪಂಜುರ್ಲಿಯೆಂದು ಜನ ಹೇಳುತ್ತಿದ್ದರು. ಆ ಕಲ್ಲಿನ ಮೇಲೆ ಗುಟ್ಟಾಗಿ ಉಚ್ಚೆ ಹೊಯ್ದೆ. ಆಮೇಲೆ, ಏನು ಶಿಕ್ಷೆ ಕಾದಿದೆಯೋ ಎಂಬ ದಿಗಿಲಿನಲ್ಲೇ ಹಲವಾರು ದಿನಗಳನ್ನು ಕಳೆದೆ.

ಆ ನಂತರದ ದಿನಗಳಲ್ಲಿ ತುಂಗಾನದಿಯ ದಂಡೆಯಲ್ಲಿರುವ ಅಗ್ರಹಾರದಲ್ಲಿ (ಅಲ್ಲೊಂದು ಸುಪ್ರಸಿದ್ಧ ಮಠವೂ ಇತ್ತು) ಭಾರತವನ್ನು ರೂಪಿಸಿರುವ ಬೆಸುಗೆಯ ಸ್ವರೂಪವನ್ನು ಅರಿಯತೊಡಗಿದೆ. ಉಪನಿಷತ್ತಿನ ಸಾಲೊಂದನ್ನು ಕುರಿತಂತೆ ದ್ವೈತ ಹಾಗೂ ಅದ್ವೈತ ಪಂಥಕ್ಕೆ ಸೇರಿದ ಪಂಡಿತರ ಸುದೀರ್ಘ ವಾದವನ್ನು ಕೇಳಿಸಿಕೊಳ್ಳುತ್ತಿದ್ದೆ. ಸುದೀರ್ಘ ಹಬ್ಬದೂಟದ ಸಮಯದಲ್ಲಿ ನಡೆಯುತ್ತಿದ್ದ ಸುದೀರ್ಘ ಚರ್ಚೆಗಳವು. ಸಂಜೆಯ ಹೊತ್ತಿಗೆ ಆರ್ಯ ಸಮಾಜದವರೊಬ್ಬರು ಆಶ್ರಯಕ್ಕೆ ಬರುವರು. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆಯೇ ಹೊರತು, ನಮ್ಮ ಕಣ್ಣಿಗೆ ಕಾಣುವಂತೆ ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲವೆಂದು ವಾದಿಸಿ ಅಗ್ರಹಾರದಿಂದ ಪಂಡಿತರ ನಂಬಿಕೆಗಳನ್ನು ಬುಡಮೇಲು ಮಾಡುವರು. ಹಾಗೆ ನೋಡಿದರೆ ನಾನು ಗೆಲಿಲಿಯೋನ ಸಮಕಾಲೀನನೇ ಆಗಿದ್ದಿರಬೇಕು.

ಹೈಸ್ಕೂಲಿಗೆ ಹೋಗುವಾಗ ಮೈಲುಗಟ್ಟಲೆ ನಡೆಯಬೇಕಾಗುತ್ತಿತ್ತು. ನಮ್ಮ ಹೈಸ್ಕೂಲಿನ ವಿಜ್ಞಾನದ ಮೇಸ್ಟರು ‘ಭಗವದ್ಗೀತೆಯೆನ್ನುವುದು ಕೇವ ಕತೆ ಅಷ್ಟೆ, ಯಾರಾದರೂ ಯುದ್ಧ ಭೂಮಿಯಲ್ಲಿ ಹೀಗೆ ಬೋಧಿಸುತ್ತಾ ಕೂರುತ್ತಾರೆಯೇ?’ ಎಂದು ವಾದಿಸುತ್ತಿದ್ದರು. ನಾವು ಸ್ಕೂಲಿನಿಂದ ಅಗ್ರಹಾರಕ್ಕೆ ವಾಪಸ್ ಬರುವಾಗ, ನಮ್ಮ ಹೆಸರನ್ನು ‘ಸಿನ್ಹ’ ಎಂದು ಆಧುನೀಕರಿಕೊಂಡಿದ್ದ ಶ್ರೀನಿವಾಸ ಜೋಯಿಸರು ಒಮ್ಮೊಮ್ಮೆ ಸಿಗುತ್ತಿದ್ದರು. ಡಾಕ್ಟರ್ ಶಾಪಿನ ಬೆಂಚಿನ ಮೇಲೆ ಕೂತ ಅವರು ನಮ್ಮಂಥ ಶಾಲೆಯ ಹುಡುಗರಿಗೆ ಜಿ.ಬಿ.ಷಾ, ಬರ್ಟ್ರಂಡ್‌ರಸೆಲ್, ಇಂಗರ್‌ಸಾಲ್ ಮುಂತಾದವರನ್ನೆಲ್ಲ ಕುರಿತು ಹೇಳುತ್ತಿದ್ದರು.ಡೈನಮೊದಿಂದ ನಡೆಯುತ್ತಿದ್ದ ತಮ್ಮ ರೇಡಿಯೋದಲ್ಲಿ ಬಿ.ಬಿ.ಸಿ ಕೇಳಿ ಕೇಳಿ ಕಲಿತ ಒಂದೂ ತಪ್ಪಿಲ್ಲದ ಇಂಗ್ಲಿಷ್ ಮಾತಾಡುತ್ತಿದ್ದರು. ಆ ಕಾಲಕ್ಕೆ ಅದೊಂದೇ ಊರಲ್ಲಿ ರೇಡಿಯೋ. ನಮಗೆಲ್ಲ ಮೊದಲ ಬಾರಿಗೆ ನಮ್ಮ ರಾಷ್ಟ್ರದ ನಾಯಕರು ಹಾಗೂ ಜಗತ್ತಿನ ದೊಡ್ಡ ಲೇಖಕರನ್ನು ಕುರಿತು ಹೇಳಿದವರು. ಸಂಗೀತಗಾರ, ಸಂಸ್ಕೃತ ವಿದ್ವಾಂಸ ಎರಡೂ ಆಗಿದ್ದ ಯೋಗಾನರಸಿಂಹನ್ ಎಂಬ ನಮ್ಮ ಹೆಡ್‌ಮಾಸ್ತರು. ಗಾಂಧೀ ಹತ್ಯೆಯಾದ ಸುದ್ದಿ ಕೇಳಿ ಅವರು ಅತ್ತಿದ್ದು ನನಗೆ ನೆನಪಿದೆ. ನಮ್ಮಂಥ ಸಣ್ಣಪುಟ್ಟ ಹೈಸ್ಕೂಲು ಹುಡುಗರಿಗೆ ತಿಳಿಯುವುದೋ ಇಲ್ಲವೋ ಎಂದು ಅನುಮಾನಿಸದೆ ತಮ್ಮ ಮೃದು ಮಧುರ ದನಿಯಲ್ಲಿ ಶೇಕ್ಸ್‌ಪಿಯರ್‌ನ ಕೃತಿಗಳನ್ನು ವಿವರಿಸುತ್ತಿದ್ದರು. ನಾವಂತೂ ಅದನ್ನು ಕೇಳಿ ರೋಮಾಂಚಿತರಾಗುತ್ತಿದ್ದೆವು.

ಒಂದೇ ದಿನದ ಅವಧಿಯಲ್ಲಿ ನಾನು ಹಲವು ಶತಮಾನಗಳನ್ನು ಹಾದು ಬಂದಿದ್ದೆ. ಪಶ್ಚಿಮದ ಸರಳ ರೇಖಾತ್ಮಕ ಕಾಲ (Linear time) ಭಾರತದ ಜೊತೆ ಸಹಬಾಳ್ವೆ ನಡೆಸುತ್ತಿತ್ತು. ಪುರಾತನ, ಆದಿವಾಸಿ, ಮಧ್ಯಯುಗೀನ ಹಾಗೂ ಆಧುನಿಕ ಕಾಲಗಳು ಒಂದೇ ಪ್ರಜ್ಞೆಯಲ್ಲಿ  ಒಟ್ಟೊಟ್ಟಿಗೇ ಇರಲಾರಂಭಿಸಿದ್ದವು. ಯಾಕೆ – ಸುಮಾರು ೩ ದಶಕಗಳ ಹಿಂದೆ ಕೂಡ ಸಾವಿನ ದವಡೆಯಲ್ಲಿದ್ದ ನನ್ನ ತಂದೆ ತಮ್ಮ ಸ್ಥಿತಿಯನ್ನರಿಯಲು ಪ್ರತಿದಿನ ಕನ್ನಡದಲ್ಲಿದ್ದ ಪಂಚಾಂಗವನ್ನೂ, ಇಂಗ್ಲಿಷಿನಲ್ಲಿದ್ದ ಮಾನವನ ಕಾಯಿಲೆಗಳನ್ನು ಕುರಿತು ವೈದ್ಯಕೀಯ ಪುಸ್ತಕಗಳನ್ನೂ ಓದಿ ನೋಡುತ್ತಿದ್ದರು.

ಸಾಹಿತ್ಯದ ಲೋಕ ತನ್ನದೇ ಆದ ಪ್ರಭಾವಲಯವೊಂದನ್ನು ಸೃಷ್ಟಿಸುವುದರ ಜೊತೆಗೇ ಪಾರಂಪರಿಕ ಪ್ರಭಾವಲಯದ ಬಿಗಿಹಿಡಿತದಿಂದ ನಮ್ಮನ್ನು ಬಿಡಿಸುತ್ತಲೂ ಇರುತ್ತದೆ. ನನ್ನ ಹಾಗೂ ಕನ್ನಡದ ದೊಡ್ಡ ಲೇಖಕರು ವಹಿಸಿರುವ ಪಾತ್ರ ಇಂಥದ್ದು. ತಮ್ಮ ಅದ್ಭುತ ಕಾದಂಬರಿಗಳು ಹಾಗೂ ಪ್ರಬಂಧಗಳ ಮೂಲಕ ಕಾರಂತರು ಇಂಥ ಕೆಲಸ ಮಾಡಿದ್ದಾರೆ. ಸನಾತನಿಗಳು ಎಂದೂ ಅವರನ್ನು ಇಷ್ಟ ಪಟ್ಟವರಲ್ಲ. ಆದರೆ ಅಂಥವರೂ ಕಾರಂತರನ್ನು ಗೌರವಿಸುತ್ತಿದ್ದರು. ಜಾತಿ ಮೀರಿದ ಮದುವೆಯ ಮೂಲಕ ಸಾಂಪ್ರದಾಯಿಕ ನಿಯಮಗಳನ್ನು ಕಾರಂತರು ಧಿಕ್ಕರಿಸಿದ್ದರು. ಸಾಂಪ್ರಾದಾಯಿಕ ಧರ್ಮ ಕುರಿತು, ವಿಚಾರವಾದಿ ಧೋರಣೆ ಬೆಳೆಸಿಕೊಂಡಿದ್ದ ಕುವೆಂಪು ತಮ್ಮ ಸೌಂದರ್ಯ ಪ್ರಜ್ಞೆಯ ಮಟ್ಟಿಗಂತೂ ಆಳವಾದ ಆಧ್ಯಾತ್ಮಿಕರು. ಹಳ್ಳಿಯ ವಿದ್ಯಾವಂತ ಬ್ರಾಹ್ಮಣರು ಈ ಹೊಸ ಬರವಣಿಗೆಯನ್ನು ಏಕಕಾಲಕ್ಕೆ ಆದರದಿಂದಲೂ ಅನುಮಾನದಿಂದಲೂ ನೋಡುತ್ತಿದ್ದರು.

ತೀರ್ಥಹಳ್ಳಿಯಲ್ಲಿ ನಾನು ಬೆಳೆದ ವಾತಾವರಣ ತೀರ ಸಾಹಿತ್ಯಕವಾದದ್ದೆಂದೇ ಹೇಳಬೇಕು. ಸೋಷಲಿಸ್ಟ್ ಗೋಪಾಲಗೌಡರು ಹೊಸ ಹೊಸ ತತ್ವಗಳನ್ನು ಕುರಿತು ಹೇಳುವುದರ ಜೊತೆಗೇ ಸಾಹಿತ್ಯದಿಂದ ತಂದ ಉದಾಹರಣೆಗಳನ್ನೂ ನಡುನಡುವೆ ಸೇರಿಸುತ್ತಿದ್ದರು. ನಾರಣಪ್ಪ, ಲಕ್ಷ್ಮೀಶ, ಬೇಂದ್ರೆ, ಕುವೆಂಪು, ಅಡಿಗರ ಕಾವ್ಯ ಅವರ ನಾಲಗೆಯ ತುದಿಯಲ್ಲಿತ್ತು. ಸಂಪ್ರದಾಯವಾದೀ ನಂಬಿಕೆಯ ಲೋಕದಿಂದ ನಾನು ಅವರ ಲೋಕದತ್ತ ಚಲಿಸಿದೆ.

ತೀರ್ಥಹಳ್ಳಿಯ ಜನ ಯಾವ ವಿದ್ಯಮಾನವನ್ನೂ ಸುಲಭವಾಗಿ ಮರೆತವರಲ್ಲ. ಅವರು ಅವನ್ನು ವರ್ಷಗಟ್ಟಲೆ ಮೆಲುಕು ಹಾಕುತ್ತಿರುತ್ತಿದ್ದರು. ಕನ್ನಡ ನವೋದಯ ಕಾಲದ ಬಹಳ ದೊಡ್ಡ ಮೇಷ್ಟ್ರಾಗಿದ್ದ ಪ್ರೊಫೆಸರ್ ಟಿ.ಎಸ್.ವೆಂಕಣ್ಣಯ್ಯನವರು ಶ್ರೀಕೃಷ್ಣನನ್ನು ಕುರಿತುಕೊಟ್ಟ ಉಪನ್ಯಾಸವೊಂದನ್ನು ಕುರಿತು ನನ್ನ ಅಪ್ಪ ತನ್ನ ಗೆಳೆಯರೊಡನೆ ವರ್ಷಗಟ್ಟಲೆ ಚರ್ಚಿಸಿದ್ದು ನನಗೆ ನೆನಪಿದೆ. ಸಾಹಿತ್ಯ, ರಾಜಕೀಯ ಹಾಗೂ ಹೊಸ ಚಿಂತನೆಗಳು ಅಲ್ಲಿ ಒಂದರೊಡನೊಂದು ಬೆರೆತು ಹೋಗಿದ್ದವು. ಸ್ವತಃ ಮಹಾತ್ಮಾ ಗಾಂಧಿಯೇ ತೀರ್ಥಹಳ್ಳಿಗೆ ಬಂದಿದ್ದನ್ನು ಕುರಿತು ಜನ ಮಾತಾಡಿಕೊಳ್ಳುತ್ತಿದ್ದುದನ್ನು ನಾನು ಬಾಲ್ಯದಿಂದಲೂ ಕೇಳಿಬಲ್ಲೆ.

ವಾಸ್ತವವನ್ನು ವ್ಯಾಖ್ಯಾನಿಸುವ ಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಬಗೆಯೊಂದಿದೆಯೆಂದು ನನ್ನ ನಂಬಿಕೆ. ಗೋವಿನ ಹಾಡಿನ ಕವಿ ಹೃದಯಪರಿವರ್ತಕ ಎಂಬುದನ್ನಾಗಲೇ ಹೇಳಿದ್ದೇನೆ. ಇನ್ನಷ್ಟು ಮುಂದುವರಿದು, ಬಹುತೇಕ ಕನ್ನಡ ಕವಿಗಳು ಅಲ್ಪತೃಪ್ತರಲ್ಲ; ಅವರು ಒಲಿಸಿಕೊಳ್ಳುವುದರಲ್ಲಿ ನಂಬಿಕೆಯುಳ್ಳವರು ಎಂದು ಹೇಳಬಲ್ಲೆ. ಜನಾಂಗ ಅಥವಾ ಜಾತಿಯ ಹೆಮ್ಮೆ ಕುರಿತಂತೆ ಶತಶತಮಾನಗಳಿಂದಲೂ ನಮ್ಮಕವಿಗಳು ತೋರುತ್ತ ಬಂದಿರುವ ಆರೋಗ್ಯಕರ ತಿರಸ್ಕಾರ ಅತ್ಯಂತ ಮಹತ್ವಪೂರ್ಣವಾದದ್ದು. ನಮ್ಮ ಆದಿಕವಿ ಪಂಪ ಸಾವಿರ ವರ್ಷಗಳಷ್ಟು ಹಿಂದೆಯೇ ‘ಮನುಷ್ಯ ಕುಲಂ ತಾನೊಂದೆ ವಲಂ’ ಎಂದು ಸಾರಿದ್ದ. ಪಂಪನ ಶ್ರೇಷ್ಠ ಭಾಗಗಳಲ್ಲಿ ಯುದ್ಧದಲ್ಲಿ ಭರತನನ್ನು ಸೋಲಿಸಿದ ಬಾಹುಬಲಿಯ ಹೃದಯಪರಿವರ್ತನೆ ಹಾಗೂ ಅವನ ರಾಜ್ಯ ತ್ಯಾಗ ಪ್ರಖ್ಯಾತವಾದದ್ದು. ಸರ್ವಸಂಗ ಪರಿತ್ಯಾಗಿಯಾಗಿಯೂ ಬಾಹುಬಲಿಗೆ ಕೈವಲ್ಯ ದಕ್ಕಲಾರದು. ಕಾರಣ, ತಾನು ನಿಂತ ತುಂಡು ನೆಲವೂ ತನ್ನ ಅಣ್ಣನಿಗೆ ಸೇರಿದ್ದೆಂಬ ಕೊರಗು ಅವನ ಅಂತಃಸಾಕ್ಷಿಯನ್ನು ಚುಚ್ಚುತ್ತಲೇ ಇದೆ. ಕಡೆಗೂ ಅವನಿಗೆ ಮುಕ್ತಿ ದೊರಕುವುದು ಅವನ ಪ್ರಜ್ಞೆಯಲ್ಲಿ – ಹೇಗೋ ಉಳಿದುಬಿಟ್ಟ ಈ ದೌರ್ಬಲ್ಯವನ್ನು ಗೆದ್ದಮೇಲೆಯೇ.

ಹನ್ನೆರಡನೆಯ ಶತಮಾನದ ನಮ್ಮ ವಚನಕಾರರು ಮಹಾಪರಂಪರೆ ಹಾಗೂ ಉಪಪರಂಪರೆಗಳೆರಡನ್ನೂ ಧಿಕ್ಕರಿಸಿದವರು. ರಾಜರನ್ನಾಗಲೀ, ಲೌಕಿಕಾಧೀಕಾರದ ಕೇಂದ್ರಗಳನ್ನಾಗಲಿ ಏನೂ ಗೌರವಿಸದ ಅವರು ಜಾತ್ಯಾತೀತ ಸಮಾಜದ ಕನಸು ಕಂಡವರು. ಹುಟ್ಟಿನಿಂದ ಬ್ರಾಹ್ಮಣನಾಗಿ ನಂತರ ವೀರಶೈವನಾದ ಬಸವಣ್ನ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದೂ ಅಖಿಲ ಭಾರತೀಯ (Pan Indian) ವ್ಯವಸ್ಥೆಯನ್ನು ಧಿಕ್ಕರಿಸಿದವನು. ಬ್ರಾಹ್ಮಣ ಹುಡುಗಿಯೊಬ್ಬಳು ಅಸ್ಪೃಶ್ಯನ್ನು ಮದುವೆಯಾಗಲು ನೆರವಾದವನು. ಇದಾದದ್ದೂ ಎಂಟುನೂರು ವರ್ಷಗಳ ಹಿಂದೆ. ಕರ್ನಾಟಕದ ಸೊಷಲಿಸ್ಟ್ ತರುಣರು ಇವತ್ತಿಗೂ ಬಸವಣ್ಣನಿಂದ ಸ್ಪೂರ್ತಿ ಪಡೆಯುತ್ತಾರೆ.

ಸಂತ ಕವಿಯಿತ್ರಿ ಅಕ್ಕ ಮಹಾದೇವಿ ಬೆತ್ತಲಾಗಿ ಓಡಾಡುತ್ತ ತನ್ನ ವಚನಗಳ ಮೂಲಕ ಶಿವನನ್ನು ಆರಾಧಿಸುತ್ತಿದ್ದವಳು. ಅನುಭವ ಮಂಟಪದಲ್ಲಿ ಅಲ್ಲಮ ಅಕ್ಕನನ್ನು, ‘ನೀನು ಬೆತ್ತಲೆಯಾಗಿ ತಿರುಗಲು ಕಾರಣವೇನು?’ ಎಂದು ಕೇಳುತ್ತಾನೆ. ‘ತಾನು ಹೆಣ್ಣೆಂಬ ಪ್ರಜ್ಞೆಯಿಂದಾಗಿ ಮುಕ್ತಳಾದವಳು; ಎಲ್ಲ ಲಜ್ಜೆಯನ್ನೂ ಮೀರಿದವಳು’ ಎಂದು ಅಕ್ಕಮಹಾದೇವಿ ಉತ್ತರಿಸುತ್ತಾಳೆ. ‘ಹಾಗಾದರೆ ನಿನ್ನ ಗುಪ್ತಾಂಗಗಳನ್ನು ಇಳಿಬಿದ್ದ ಮುಡಿಯಿಂದ ಮುಚ್ಚಿರುವುದೇಕೆ?’ ಎನ್ನುತ್ತಾನೆ ಗುರು ಅಲ್ಲಮ. ‘ಅನ್ಯರಿಗೆ ಮುಜುಗರವಾಗದಿರಲೆಂದು’, ಎನ್ನುತ್ತಾಳೆ ಅಕ್ಕ. ಅವಳ ಸಮಕಾಲೀನನಾದ ಬಸವಣ್ಣ ಅಸ್ಪೃಶ್ಯರು ಹಾಗೂ ಕೆಳಜಾತಿಗಳನ್ನು ವೀರಶೈವ ಧರ್ಮಕ್ಕೆ ತಂದ. ಆದರೆ ಭಾರತದ ಚರಿತ್ರೆಯುದ್ಧಕ್ಕೂ ಆಗಿರುವ ಹಾಗೆ ವೀರಶೈವರು ಕೂಡ ಹಿಂದೂಧರ್ಮದ ಒಂದು ಭಾಗವಾಗಿ, ಜಾತಿಯಾಗಿ, ಉಪಜಾತಿಗಳಾಗಿ ಹಂಚಿಹೋದರು.

ನಮ್ಮ ಲೇಖಕರು ಒಲಿಸಿಕೊಳ್ಳುವುದರಲ್ಲಿ, ಹೃದಯಪರಿವರ್ತನೆಯಲ್ಲಿ ನಂಬಿಕೆಯುಳ್ಳವರು ಎಂಬ ಮಾತನ್ನು ಈಗಾಗಲೇ ಹೇಳಿದ್ದೇನೆ. ನಾಲ್ಕುನೂರು ವರ್ಷಗಳ ಹಿಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಪುರಂದರದಾಸರನ್ನೇ ನೋಡಿ. ಸಾಮಾನ್ಯವಾಗಿ ಎಲ್ಲ ದೈನಂದಿನ ವಿಷಯಗಳನ್ನೂ ಕುರಿತು ಕವಿಯೊಬ್ಬ ತಾನಿದ್ದ ಕಾಲದ ಸಾಮ್ರಾಜ್ಯಕ್ಕೆ ಮುಸ್ಲಿಮರಿಂದ ಬಂದಿರುವ ಅಪಾಯ ಕುರಿತು ಹಾಡಬೇಕಾದದ್ದು ಸಹಜವಾಗಿತ್ತು. ಅಚ್ಚರಿಯೆಂದರೆ, ದಾಸರು ಈ ಕುರಿತು ಹಾಡಲಿಲ್ಲ; ಬದಲಿಗೆ, ಭಕ್ತಿ ಪರಂಪರೆಯ ಸಮತಾವಾದೀ ಗುಣಕ್ಕನುಗುಣವಾಗಿ ಬಿಜಾಪುರದ ಸೂಫಿಸಂತರನ್ನು ಅವರು ತುಂಬು ಗೌರವದಿಂದ ಕಂಡರು. ವಿಜಯನಗರ ಸಾಮ್ರಾಜ್ಯದ ಮೇಲೆ ಮುಸ್ಲಿಮರ ಆಕ್ರಮನವನ್ನು ಕುರಿತು ಮತೀಯ ದೃಷ್ಟಿಕೋನದಿಂದ ಬರೆದವರು ಈ ಶತಮಾನದ ಆದಿಭಾಗದ ಆಧುನಿಕ ಲೇಖಕ ಗಳಗನಾಥರು. ಪುರಂದರದಾಸರ ಕಾಣ್ಕೆ ರಾಜ್ಯಪ್ರಭುತ್ವದ ಲೌಕಿಕ ಸಂಘರ್ಷಗಳನ್ನು ಮೀರಿದ್ದಾಗಿತ್ತು. ಈ ಕುರಿತು ಪುರಂದರದಾಸರ ಹಾಡಿನಲ್ಲಿ ಅರ್ಥಪೂರ್ಣ ಸಾಲೊಂದಿದೆ:

“ಉತ್ತಮ ಪ್ರಭುತ್ವ ಲೊಳಲೊಟ್ಟೆ”

ಇಲ್ಲಿನ ಮೊದಲ ಎರಡೂ ಪದಗಳು ಸಂಸ್ಕೃತ ಪದಗಳು. ‘ಪ್ರಭುತ್ವ’ ಎಂದರೆ State; ಅದು ಲೌಕಿಕಾಧಿಕಾರ. ಅದು ಉತ್ತಮವಾಗಿದ್ದಾಗಲೂ ಅದು ಲೊಳಲೊಟ್ಟೆಯೇ, ಟೊಳ್ಳೇ ಎಂಬುದು ಕವಿಯ ನಂಬಿಕೆ. ಕನ್ನಡದಲ್ಲಿ ‘ಲೊಳಲೊ‌ಟ್ಟೆ’ ಎಂಬ ಆಡುಮಾತಿನ ಸದ್ದೇ ತಿರಸ್ಕಾರ ಪೂರಿತವಾದ ಅರ್ಥ ಹೊರಡಿಸುತ್ತದೆ. ಪ್ರಭುತ್ವ ಉತ್ತಮವಾಗಿದ್ದರೂ ಅದಕ್ಕೆ ಯಾವುದೇ ನಿಜವಾದ ಅರ್ಥವಿಲ್ಲ ಎಂಬರ್ಥ ಈ ಸಾಲಿಗಿರುವಂತೆ, ರಾಜ್ಯಪ್ರಭುತ್ವವು ಉತ್ತಮವಾಗಿರಬಲ್ಲದೆಂದು ನಿರೀಕ್ಷಿಸುವುದೇ ಮೂರ್ಖತನ ಎಂಬ ಧ್ವನಿಯೂ ಇದೆ. ಇಲ್ಲ ಕಾಲಕ್ಕೂ, ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಮಾತಿದು. ಇದನ್ನು ಪುರಂದರದಾಸರು ಹೇಳಿದ್ದು ಬಲಾಢ್ಯ ವಿಜಯನಗರ ಸಾಮ್ರಾಜ್ಯದ ಸೊಕ್ಕಿನ ದಿನಗಳಲ್ಲಿ. ಹಾಗೆ ನೋಡಿದರೆ, ಭಕ್ತಿಕವಿಗಳಲ್ಲಿ ರಾಜ್ಯ ಪ್ರಭುತ್ವವನ್ನು ಆರಾಧಿಸಿದವರು ಯಾರೂ ಇಲ್ಲ.

ರಾಜ್ಯಪ್ರಭುತ್ವ ನಮ್ಮ ಕೈತಪ್ಪಿ ಹೋಯಿತೆಂಬ ಸಂಗತಿ ನಮ್ಮ ಬರಹಗಾರರಿಗೆ ಕಳವಳವನ್ನುಂಟು ಮಾಡದೇ ಇಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಜೊತೆಗಿನ ಐತಿಹಾಸಿಕ ಕದನದಲ್ಲಿ ಟಿಪ್ಪು ಸೋತ ನಂತರ ಕರ್ನಾಟಕವೆಂಬ ರಾಜ್ಯವೇ ಹರಿದುಹಂಚಿಹೋಯಿತು. ಉಳಿದದ್ದು, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಪುಟ್ಟ ಮೈಸೂರು ರಾಜ್ಯ ಮಾತ್ರ. ಕರ್ನಾಟಕದ ಉಳಿದ ಭಾಗಗಳು ಬ್ರಿಟಿಷ್ ಪ್ರೆಸಿಡೆನ್ಸಿ ಹಾಗೂ ಹೈದರಾಬಾದಿನ ನಿಜಾಮರ ನಡುವೆ ಹಂಚಿಹೋದವು. ೧೯೫೬ರ ತನಕ ಏಕೀಕೃತ ಕರ್ನಾಟಕ ಕನಸು ಕನಸಾಗಿಯೇ ಇತ್ತು. ಹೀಗಾಗಿ ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಕಾಲದ ವೈಭವವನ್ನೂ, ‘ಕಾವೇರಿಯಿಂದ ಗೋದಾವರಿವರೆಮಿರ್ಪ’ ಕರ್ನಾಟಕ ಭವ್ಯ ಇತಿಹಾಸವನ್ನು ಕುರಿತು ಕರ್ನಾಟಕದ ಹಂಬಲ ಸಂಕುಚಿತವಾದ ಪ್ರದೇಶಾಭಿಮಾನದ ಮಟ್ಟಕ್ಕೆ ಎಂದೂ ಇಳಿಯಲಿಲ್ಲ. ಕಾರಣ, ಕನ್ನಡದ ಬಹುತೇಕ ಸೂಕ್ಷ್ಮ ಲೇಖಕರು ಎಂದೂ ಕೇವಲ ಲೌಕಿಕಾಧಿಕಾರದ ಆರಾಧಕರಾಗಿದ್ದವರಲ್ಲ.

ಏಕೀಕೃತ ಕರ್ನಾಟಕಕ್ಕಾಗಿ ಹಂಬಲಿಸುತ್ತಿದ್ದವರನ್ನು ಹುರಿದುಂಬಿಸುವ ದನಿಯಾಗಿದ್ದ ಬೇಂದ್ರೆಯ ಪದ್ಯವೊಂದಿದೆ. ‘ಕನಸಿನೊಳಗೊಂದು ಕನಸು’ ಎಂಬ ಈ ಪದ್ಯ ಒಬ್ಬ ಹೆಣ್ಣು ಹಾಗೂ ಕವಿಯ ನಡುವಿನ ಸಂಭಾಷಣೆಯ ರೂಪದಲ್ಲಿದೆ. ಪದ್ಯದ ಆರಂಭದಲ್ಲಿ ಹೆಂಗಸೊಬ್ಬಳು ನಡುಬೀದಿಯಲ್ಲಿ ಅನಾಥಳಂತೆ ನಿಂತಿದ್ದಾಳೆ. ಕವಿ ಅವಳನ್ನು ಕೇಳುತ್ತಾನೆ: “ಯಾರು ನಿಂದವರಲ್ಲಿ ತಾಯಿ?” ಇದೊಂದು ಸಾಮಾನ್ಯವಾದ, ಸಹಾನುಭೂತಿಯ ಪ್ರಶ್ನೆ. ಹೆಂಗಸಿನ ಉತ್ತರ ಇದು: “ಯಾರು ಕೇಳುವವರೆನಗೆ, ಯಾಕೆ ತಂದೆ?” ಅವಳ ದುಃಖಕ್ಕೇನು ಕಾರಣ, ಅವಳ ಮನೆಯಲ್ಲಿದೆ, ಇವೆಲ್ಲವನ್ನೂ ಕೇಳು ತವಕ, ಕವಿಗೆ. ಅವಳನ್ನು ಕುರಿತ ಕವಿಯ ಕಾಳಜಿ ಹೆಚ್ಚಾದಂತೆಲ್ಲ ಅವಳ ಉತ್ತರವೂ ನಿಗೂಢವಾಗುತ್ತಾ ಹೋಗುತ್ತದೆ. ಕವಿಯ ಕಾಣ್ಕೆ ಬೆಳೆದಂತೆ ಅವಳೂ ಬೆಳೆಯತೊಡಗುತ್ತಾಳೆ. ಕೊನೆಗೆ ಅವಳು ಯಾವ ಹಂತ ತಲುಪುತ್ತಾಳೆಂದರೆ, ‘ಗಂಡುಸಾದರೆ ನಿನ್ನ ಬಲಿಕೊಡುವೆಯೇನು?’ ಎಂದು ಕವಿಗೇ ಸವಾಲೆಸೆಯುತ್ತಾಳೆ. ಈ ಹೆಣ್ಣು ಬೆಳೆಯುವ ಕ್ರಮವನ್ನು ಸಾಂಕೇತಿಕವಾಗಿ ನೋಡಿದರೆ ಅವಳು ಐರ್ಲೆಂಡ್, ದಕ್ಷಿಣ ಆಫ್ರಿಕಾ, ಪ್ಯಾಲೆಸ್ಟೀನ್ – ಹೀಗೆ ಅವಮಾನದಿಂದ ನೊಂದ ಯಾವ ದೇಶದ ಪ್ರತಿನಿಧಿಯಾದರೂ ಆಗಿಬಿಡಬಹುದು. ಸಂಕುಚಿತ ರಾಷ್ಟ್ರೀಯ ದೃಷ್ಟಿಕೋನವನ್ನು ಮೀರಿ ನಿಲ್ಲುವ ಕವಿತೆ ಇದು.

ಆಗಿನ ಮೈಸೂರು ಸರ್ಕಾರ, ಕರ್ನಾಟಕದ ಏಕೀಕರಣ ಕುರಿತು ಯಾವ ಸಾರ್ವಜನಿಕ ಹೇಳಿಕೆಯನ್ನೂ ನೀಡಬಾರದೆಂದು ಕುವೆಂಪು ಅವರಿಗೆ ಎಚ್ಚರಿಕೆ ನೀಡಿತ್ತು. ಆಗ ಸರಕಾರಕ್ಕೆ ಕುವೆಂಪು ಅವರು ತಿರುಗಿಸಿ ಕೊಟ್ಟ ಏಟು ಚಿರಸ್ಮರಣೀಯವಾದದ್ದು: “ಅಖಂಡ ಕರ್ನಾಟಕ ೧ ಅಲ್ತೊ ನಿಮ್ಮ ರಾಜಕೀಯ ಕಪಟನಾಟಕ – ” ‘ಕರ್ನಾಟಕವೆನ್ನುವುದು ಗೋಸುಂಬೆ ರಾಜಕೀಯ ಪಂದ್ಯದಾಟವಲ್ಲ. ಅದೊಂದು ಆಧ್ಯಾತ್ಮಿಕ ಸಾಮ್ರಾಜ್ಯ. ಅಲ್ಲಿ ನೃತಪತುಂಗನೇ ಚಕ್ರವರ್ತಿ, ಪಂಪನೇ ಪ್ರಧಾನಿ. ಆತನ ಮಂತ್ರಿಮಂಡಲದಲ್ಲಿ ರನ್ನ, ಜನ್ನ, ಹರಿಹರ, ನಾರಣಪ್ಪ, ಷಡಕ್ಷರಿ ಹಾಗೂ ಮುದ್ದಣರು ಮಂತ್ರಿಗಳು.’