ಕರ್ನಾಟಕ ಎನ್ನುವುದೊಂದು ಪರಿಕಲ್ಪನೆ. ಅದರ ಪದಶಃ ಅರ್ಥಕ್ಕಾಗಿ ತಲೆಕೆಡಿಸಿಕೊಳ್ಳುವವರು ಪಂಡಿತರು ಮಾತ್ರ. ಕರ್ನಾಟಕ ಎಂಬ ಪದಕ್ಕೆ ‘ಕಪ್ಪುಮಣ್ಣಿನ ಸುಂದರನಾಡು’ ಎಂಬ ಅಕ್ಷರಶಃ ಅರ್ಥವೂ ಇದೆ. ರಾಮಾಯಣದಲ್ಲಿ ಇದು ದಂಡಕಾರಣ್ಯ. ಆದರೆ, ಕರ್ನಾಟಕವೆಂಬ ಪದ ಮೊದಲು ಕಾಣಿಸಿಕೊಳ್ಳುವುದು ಮಹಾಭಾರತದಲ್ಲಿ ಎಂದು ಓದಿದ ನೆನಪು. ಕರ್ನಾಟಕವೊಂದು ಮಿನಿಭಾರತ. ಸುರಿವ ಮಂಜೊಂದನ್ನು ಬಿಟ್ಟರೆ ಭಾರತದ ಉಳಿದ ಭಾಗಗಳಲ್ಲಿ ಇರುವುದೆಲ್ಲವೂ ಕರ್ನಾಟಕದಲ್ಲಿದೆ. ಚೆಂದದ ಕರಾವಳಿ, ಕಪ್ಪು ಮಣ್ಣು, ಕೆಂಪುಮಣ್ಣು, ಪರ್ವತಗಳು, ಕಣಿವೆಗಳು, ಬಯಲುಗಳು ಎಲ್ಲವೂ ಇಲ್ಲಿವೆ. ಜೊತೆಗೇ, ಪುರಾತನ ದೇವಾಲಯಗಳು, ಚಾರಿತ್ರಿಕ ಮಸೀದಿಗಳು ಹಾಗೂ ಸುಂದರ ಚರ್ಚುಗಳಿವೆ. ಒಂದಾನೊಂದು ಕಾಲದಲ್ಲಿ ಬೌದ್ಧಧರ್ಮವೂ ಕರ್ನಾಟಕವನ್ನು ಪ್ರವೇಶಿಸಿದೆ. ಅಶೋಕನ ಶಿಲಾಶಾಸನಗಳೂ ಇಲ್ಲಿ ದೊರತಿವೆ. ವಿಶಿಷ್ಟಾದ್ವೈತ ತತ್ವವನ್ನು ಕೊಟ್ಟ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ನೆಲೆಸಿದ್ದರೆ, ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದ್ದರು. ಇವತ್ತಿಗೂ ಕರ್ನಾಟಕದ ಜನರನ್ನು ಪ್ರಭಾವಿಸಬಲ್ಲ ಶಕ್ತಿಯುಳ್ಳ ವೀರಶೈವಧರ್ಮ ಹುಟ್ಟಿದ್ದು ಇಲ್ಲಿ. ವೀರಶೈವ ಹಾಗೂ ಜೈನ ಧರ್ಮಗ್ರಂಥಗಳು ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿವೆಯೆಂಬ ಅಂಶ ಕೂಡ ಬಹುಮುಖ್ಯವಾದದ್ದು. ಕರ್ನಾಟಕದ ಮಾಧ್ವರಿಗೆ ದಾಸರ ಕನ್ನಡ ರಚನೆಗಳು ಸಂಸ್ಕೃತದ ಆಗಮ ಪೂಜಾ ಪದ್ಧತಿಗೆ ಪೂರಕವಾಗಿವೆ.

ಕನ್ನಡ ಭಾಷೆ ನಮ್ಮೆಲ್ಲರನ್ನು ಬೆಸೆಯುವ ಸಾಧನ. ಆದರೆ ಕನ್ನಡ ಭಾಷಿಕರಿಗೇ ವಿಶಿಷ್ಟವಾದ ಲಕ್ಷಣವೊಂದಿದೆ. ಆಹಾರ, ಉಡುಗೆ – ತೊಡುಗೆ, ಸಂಸ್ಕೃತಿಗಳ ದೃಷ್ಟಿಯಿಂದ ಗುಲ್ಬರ್ಗಾದವನೊಬ್ಬ ಹೈದರಾಬಾದಿಗೆ ಹೆಚ್ಚು ಹತ್ತಿರವೇ ಹೊರತು ಉಡುಪಿಯವನಿಗಲ್ಲ. ಉಡುಪಿಯವರಿಗೆ ಕೇರಳದವರ ಜೊತೆ ನಂಟು ಹೆಚ್ಚು. ಹೀಗೆ ಕನ್ನಡ ಬೆಳಗಾವಿಯಲ್ಲಿ ಮರಾಠಿಯಿಂದ, ಕೆ.ಜಿ.ಎಫ್.ನಲ್ಲಿ ತಮಿಳಿನಿಂದ, ಬಳ್ಳಾರಿಯಲ್ಲಿ ತೆಲುಗಿನಿಂದ ಪಡೆಯುತ್ತಾ ಬೆಳೆಯುತ್ತದೆ. ಹೀಗಾಗಿ ಕನ್ನಡಿಗರಲ್ಲಿ ಉರ್ದು ಕನ್ನಡಿಗರು, ತಮಿಳು ಕನ್ನಡಿಗರು, ತೆಲುಗು ಕನ್ನಡಿಗರು, ಮರಾಠಿ ಕನ್ನಡಿಗರು, ತುಳು ಕನ್ನಡಿಗರು, ಕೊಡವ ಕನ್ನಡಿಗರು ಹಾಗೂ ಕೊಂಕಣಿ ಕನ್ನಡಿಗರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ನಮ್ಮ ದೊಡ್ಡ ಲೇಖಕರಾದ ಬೇಂದ್ರ, ಮಾಸ್ತಿ, ಡಿ.ವಿ.ಜಿ, ಪು.ತಿ.ನ ರಂಥವರ ಸಂದರ್ಭದಲ್ಲಿ ಕಡೆಯಪಕ್ಷ ಅವರ ಬಾಲ್ಯದಲ್ಲಂತೂ ಕನ್ನಡ ಮನೆಮಾತಾಗಿರಲಿಲ್ಲ. ತಾನು ಬಾಲ್ಯದಲ್ಲಿ ಕನ್ನಡ, ಮರಾಠಿ – ಹೀಗೆ ಎರಡು ಭಾಷೆಗಳನ್ನಾಡುತ್ತಿದ್ದೆನೆಂಬುದೇ ನನಗೆ ಅರಿವಿರಲಿಲ್ಲ ಎಂದು ಬೇಂದ್ರೆ ಒಮ್ಮೆ ನನಗೆ ಹೇಳಿದ್ದರು. ತುಳುವರಿಗೂ, ಕೊಡವರಿಗೂ ಕರ್ನಾಟಕವೇ ಮನೆ.

ಆದ್ದರಿಂದಲೇ, ಭಿನ್ನ ಭಿನ್ನ ಹಿನ್ನೆಲೆಯ ಜನ ತಂತಮ್ಮ ಮನೆಮಾತುಗಳನ್ನೂ ಕನ್ನಡವನ್ನೂ ಬಳಸುವ ಕರ್ನಾಟಕ ಒಂದು ಮಿನಿಭಾರತ. ತಮಿಳು ಮಾತಾಡುವ ಶ್ರೀವೈಷ್ಣವರಾದ ಎ.ಕೆ. ರಾಮಾನುಜನ್ ತಾನು ಅಡುಗೆ ಮನೆಯಲ್ಲಿ ತಮಿಳನ್ನೂ, ಹಾದಿಬೀದಿಗಳಲ್ಲಿ ಕನ್ನಡವನ್ನೂ, ಮಹಡಿಯ ಮೇಲೆ ಇಂಗ್ಲಿಷನ್ನೂ ಮಾತಾಡುತ್ತೇನೆಂದು ಒಮ್ಮೆ ಹೇಳಿದ್ದರು. ಗಟ್ಟಿಯಾದ ಸ್ವಂತಿಕೆ ಹಾಗೂ ವಿಶಾಲವಾದ ವಿಶ್ವಾತ್ಮಕ ಪ್ರಜ್ಞೆಯ ಅಪರೂಪದ ಸಂಶ್ಲೇಷಣೆಯೊಂದು ಕರ್ನಾಟಕದಲ್ಲಿ ಕಾಣುತ್ತದೆ. ಅನೇಕ ಉಪಸಂಸ್ಕೃತಿಗಳು ಕರ್ನಾಟಕವೆಂಬ ರಚನೆಯೊಳಗೆ ಯಾವ ರಂಪವೂ ಘರ್ಷಣೆಯೂ ಇಲ್ಲದೆ ಬೆರೆತು ಹೋಗುವ ಕ್ರಮ ಅನನ್ಯವಾದದ್ದು.

ಕರ್ನಾಟಕವೆನ್ನುವುದು ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ, ಅದೊಂದು ಆಧ್ಯಾತ್ಮಿಕ ಕಲ್ಪನೆ ಕೂಡ ಎನ್ನುವುದಾದರೆ ಅಂಥ ಕಲ್ಪನೆಯೊಂದು ರೂಪುಗೊಳ್ಳಲು ಕಾರಣವಾಗುವ ಶಕ್ತಿಗಳು ಯಾವುವು? ಇಂತ ಜಟಿಲ ಪ್ರಶ್ನೆ ಥರಹೇವಾರಿ ಉತ್ತರಗಳು ಎದುರಾಗಬಹುದು. ಈ ಪ್ರಶ್ನೆಗೆ, ಲೇಖಕನಾಗಿ ವೈಯಕ್ತಿಕ ನೆಲೆಯ ಉತ್ತರವೊಂದನ್ನು ನಾನು ಹುಡುಕಲೆತ್ನಿಸಿದ್ದೇನೆ. ತಾರ್ಕಿಕತೆಯ ಬಲವಿಲ್ಲದವನೊಬ್ಬ ಮಾಡಬಲ್ಲ ಕೆಲಸವೆಂದರೆ ಇದೇ. ಆದ್ದರಿಂದ ಇನ್ನು ಮುಂದೆ, ಕೆಲವು ಡಯಲೆಕ್ಟಿಕಲ್ ಪರಿಕಲ್ಪನೆಗಳ ಜೋಡಿಗಳನ್ನಾಧಿರಿ ಚಣಕಾಲ ಕಲ್ಪನಾವಿಲಾಸವೊಂದರಲ್ಲಿ ಮುಳುಗುತ್ತೇನೆ. ಓದುಗರ ತಮ್ಮ ಅಪನಂಬಿಕೆಯನ್ನು ಕೊಂಚ ಬದಿಗಿಟ್ಟು ಮುಂದಿನದನ್ನು ಓದಿದರೆ ಒಳ್ಳೆಯದು.

ಕರ್ನಾಟಕದ ದಿನನಿತ್ಯದ ಆಹಾರದ ಎರಡು ಧಾನ್ಯಗಳಾದ ಅಕ್ಕಿ – ರಾಗಿಗಳ ಉದಾಹರಣೆಗಳೊಂದಿಗೆ ನನ್ನ ಈ ವಾದಲಹರಿಯನ್ನು ಆರಂಭಿಸುತ್ತೇನೆ. ರಾಗಿಯ ಬಣ್ಣ ಕಪ್ಪು. ಜೋಳದಂತೆ ರಾಗಿಯೂ ಗಟ್ಟಿ; ಮೈ ಮುರಿದು ದುಡಿಯುವ ರೈತರು ಹಾಗೂ ಕೂಲಿಗಳ ಆಹಾರ. ಬಿಳಿ ಬಣ್ಣದ ಅಕ್ಕಿ ಕೊಂಚ ಮೃದು. ಮಳೆ ತುಸು ಕಡಿಮೆಯಾದರೂ ಭತ್ತದ ಬೆಳೆ ಮುದುಡಿಹೋಗುತ್ತದೆ. ಅಕ್ಕಿ ನೋಡಲು ಚೆಂದ, ಬೆಲೆ ಹೆಚ್ಚು, ಬೇಯಿಸಿದಾಗ ಹೂವಿನಂತೆ ಮೃದು. ಒಂದಾನೊಂದು ಕಾಲಕ್ಕೆ ಇವೆರಡರ ನಡುವೆ ಹಣಾಹಣಿಯಾಯಿತಂತೆ. ಈ ಕುರಿತು ಕನಕದಾಸರು ಬರೆದ ಅಣಕು ಮಹಾಕಾವ್ಯದ ರಾಮಧಾನ್ಯಚರಿತೆ. ಈ ವಿಷಯಕ್ಕೆ ಮತ್ತೆ ಬರೋಣ.

‘ಮಾರ್ಗ’ ಮತ್ತು ‘ದೇಸಿ’ ಎಂಬ ಎರಡು ಪರಿಕಲ್ಪನೆಗಳಿವೆ. ‘ಮಾರ್ಗ’ ಎನ್ನುವುದು ಹೆದ್ದಾರಿ. ಅದು ಅಖಿಲ ಭಾರತ ವ್ಯಾಪ್ತಿಯ ಮಹಾ ಪರಂಪರೆ. ಅಧಿಕೃತವಾಗಿ ಸ್ಥಾಪಿತವಾಗಿರುವ ಅದಕ್ಕೆ ಎಲ್ಲೆಡೆ ಮನ್ನಣೆ. ಅದು ‘ಶಾಸ್ತ್ರ’ವೂ ಹೌದು. ಆದರೆ ‘ದೇಸಿ’ ಎನ್ನುವುದು ಸ್ಥಳೀಯವಾದ, ದೇಸಿಯಾದ ‘ಕಿರಿಯ’ ಪರಂಪರೆ. ಅದು ಪ್ರದೇಶದಿಂದ ಪ್ರದೇಶಕ್ಕೆ, ಹಳ್ಳಿಯಿಂದ ಹಳ್ಳಿಗೆ, ಜಾತಿಯಿಂದ ಜಾತಿಗೆ ಬದಲಾಗುವಂಥದ್ದು. ಆದರೆ ಮಾರ್ಗ – ದೇಸಿಗಳ ನಡುವೆ ಘರ್ಷಣೆಯಿರುವಂತೆ ಅವೆರಡರ ನಡುವೆ ಸೃಜಾನಾತ್ಮಕವಾದ ಸಂಬಂಧವೂ ಇದೆ. ತರ್ಕವನ್ನುಕೊಂಚ ಕೈಬಿಟ್ಟು ರೂಪಕಾತ್ಮಕ (Metaphorical) ದೃಷ್ಟಿಕೋನದಿಂದ ನೋಡಿದರೆ ಅಕ್ಕಿ – ರಾಗಿಯ ಜೋಡಿಗೂ ಮಾರ್ಗ – ದೇಸಿಯ ಜೋಡಿಗೂ ದೂರದ ನಂಟಿದೆ.

ಇವೆರಡಕ್ಕಿಂತ ಹೆಚ್ಚು ಮೆಟಫಿಸಿಕಲ್ ಆದ ‘ಸ್ಥಾವರ’ ಮತ್ತು ‘ಜಂಗಮ’ ಎಂಬ ಎಡು ಪರಿಕಲ್ಪನೆಗಳಿವೆ. ವೀರಶೈವ ಆಧ್ಯಾತ್ಮದ ಈ ಎರಡು ಮುಖ್ಯ ಪರಿಕಲ್ಪನೆಗಳನ್ನು ರಾಮಾನುಜನ್ ತಮ್ಮ ‘ಸ್ಟೀಕಿಂಗ್ ಆಫ್ ಶಿವ’ ಎಂಬ ವಚನಗಳ ಇಂಗ್ಲಿಷ್ ಅನುವಾದಗಳ ಸಂಗ್ರಹಕ್ಕೆ ಬರೆದ ಮುನ್ನುಡಿಯಲ್ಲಿ ಚರ್ಚಿಸುತ್ತಾರೆ:”… ಇಂಡೋ ಯುರೋಪಿಯನ್ ಬೇರುಳ್ಳ ಇಂಗ್ಲಿಷ್ ಶಬ್ದಗಳಾದ ‘Stand’ ‘State’ ‘estate’ ‘stature’ ‘static’ ‘status’ ಮುಂತಾದವುಗಳಂತೆ ‘ಸ್ಥಾವರ’ ಎಂಬ ಶಬ್ದವೂ ಇದೇ ಮೂಲದಿಂದ ಬಂದದ್ದು. ‘ಸ್ಥಾವರ’ ಎನ್ನುವುದು ನಿಂತಲ್ಲೇ ನಿಂತಿರುವುದು, ಅದೊಂದು ಆಸ್ತಿ, ನಿರ್ಜೀವ ವಸ್ತು. ಆದರೆ, ‘ಜಂಗಮ’ ಎನ್ನುವುದು ಚಲಿಸುವಂಥದ್ದು, ಮುನ್ನಡೆಸಬಹುದಾದದ್ದು, ಬರುವಂಥದ್ದು, ಹೋಗುವುದಂಥದ್ದು.” ಬಸವಣ್ಣನ ಸುಪ್ರಸಿದ್ಧ ವಚನ ‘ಉಳ್ಳವರು ಶಿವಾಲಯವ ಮಾಡುವರು’ ಈ ಸತ್ಯವನ್ನು ಆಕರ್ಷಕವಾಗಿ ಮಂಡಿಸುತ್ತದೆ. ಕಟ್ಟಿದ ಶಿವಾಲಯ ಉರುಳಿ ಹೋಗುತ್ತದೆ. ಮನುಷ್ಯ ತಾನೇ ಆಲಯವಾದರೆ ಅದು ಉಳಿಯುತ್ತದೆ. ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ದರ್ಶನ ಮೇಲುನೋಟಕ್ಕೆ ವಿರೋಧಾಭಾಸದಂತೆ ಕಾಣಿಸುತ್ತದೆ. ಸಾಯುವ ಮನುಷ್ಯ ಅಮರ, ಆದರೆ ಶಾಶ್ವತವೆಂಬಂತೆ ಕಾಣುವ ಕಲ್ಲು ಕಟ್ಟಡವೇ ನಶ್ವರವೆಂದು ಈ ವಿರೋಧಾಭಾಸ ಸೂಚಿಸುತ್ತದೆ. ಮಾನವ ದೇಹದ ಆಕೃತಿಯನ್ನೇ ದೇವಾಲಯದ ಆಕೃತಿಯೂ ಹೋಲುತ್ತದೆ: ಹಸ್ತಗಳೆಂಬ ಇಕ್ಕೆಲಗಳು, ಪಾದವೆಂಬ ಕಂಭ, ಶಿಖರವೆಂಬ ಗೋಪುರ, ಗರ್ಭಗೃಹವೆಂಬ ಗರ್ಭಗುಡಿ. ಮಾನವ ದೇಹದ ತದ್ರೂಪಾದ ಆಲಯದ ಅರ್ಥ ಕಾಲಾನುಕ್ರಮೇಣ ಅಳಿಯುತ್ತಾ ಬರುತ್ತದೆ. ದೇಹವೇ ದೇಗುಲವಾಗುವ ಮೂಲಕ ಮಾತ್ರ ಅದರ ಮೂಲಾರ್ಥವನ್ನು ಮರಳಿ ಗಳಿಸಬಹುದೆಂದು ಈ ವಚನ ಸೂಚಿಸುತ್ತದೆ.

ಕನಕದಾಸರ ಕಾವ್ಯದ ಭತ್ತ – ರಾಗಿಗಳ ಮುಖಾಮುಖಿಗೆ ಮರಳಿ ಬರೋಣ. ಭತ್ತಕ್ಕೆ ಮಹಾ ಸೊಕ್ಕು. ‘ಹೊಸಮನೆಯ ಪುಣ್ಯಾರ್ಚನೆಗೆ ಮಿಗಿಯೆಸೆವ, ಮದುಮಕ್ಕಳಿಗೆ ಸೇಸೆಗೆ, ವಸುಮತೀಶರ ಗರುಡಿಯಲ್ಲಿ ಶಸ್ತ್ರಾಸ್ತ್ರದರ್ಚನೆಗೆ ಎಸೆವ, ವಿಪ್ರರ ಫಾಲದಲ್ಲಿ ರಂಜಿಸುವ ಗಂಧಾಕ್ಷತೆಯಹೆನು’ ಎಂದು ಭತ್ತ ಕಡು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತದೆ. ಸಿಟ್ಟಾದ ರಾಗಿ ರಾಘವನ ಬಳಿ ಹೋಗಿ ದೂರುತ್ತದೆ. ಮಹರ್ಷಿಗಳ ಸಮ್ಮುಖದಲ್ಲಿ ರಾಘವ ಭತ್ತ ಹಾಗೂ ರಾಗಿಗಳೆರಡನ್ನೂ ಸೆರೆಮನೆಯಲ್ಲಿರಿಸುತ್ತಾನೆ. ಎರಡೂ ಕೆಲಕಾಲ ಸೆರೆವಾಸವನ್ನನುಭವಿಸುತ್ತವೆ. ಕೆಲಕಾಲಾನಂತರ ನೋಡಿದರೆ ರಾಗಿಯಿನ್ನೂ ‘ಕಾಂತಿಗೆಡದೆ’ ತಿನ್ನಲು ಲಾಯಕ್ಕಾಗೇ ಇದೆ. ಆದರೆ ಭತ್ತ ತನ್ನ ಸತ್ವವನ್ನೆಲ್ಲ ಕಳೆದುಕೊಂಡುಬಿಟ್ಟಿದೆ. (‘ವ್ರಿಹಿ ಕರಗಿ ಕಂದಿಹನು ಸೆರೆಯಲಿ’) ಆಗ ರಾಗಿಗೆ ರಾಘವ ತನ್ನ ಹೆಸರನ್ನಿಟ್ಟನೆಂದು ಕನಕದಾಸರು ಹೇಳುತ್ತಾರೆ. ಇದು ವ್ಯವಸ್ಥೆಯ ಸೋಲು; ದೇವಾನುದೇವತೆಗಳ ಅರ್ಚನೆಯಲ್ಲಿ ಮಂತ್ರಾಕ್ಷತೆಯಾದ, ಎಲ್ಲ ಕಾಲಕ್ಕೂ ಸಲ್ಲುವನೆಂದು ಮೆರೆದ ಅಕ್ಕಿಕಾಳಿನ ಸೋಲು. ಆದರೆ ಹಸಿದ ಜನ ಹಾಗೂ ತುಳಿಯಲ್ಪಟ್ಟ ಜನ, ಉಣ್ಣುವ ರಾಗಿಯ, ಜಂಗಮ, ದೇಸೀ ಧಾನ್ಯದ ಗೆಲುವು.

ಒಂದು ಸಾವಿರ ವರ್ಷಗಳ ಹಿಂದೆ ಪಂಪು ರೂಪಿಸಿದಂಥ ಕೃತಿರಚನೆ, ಶಿಲ್ಪ ಹಾಗೂ ಬಂಧವ ತತ್ವಗಳು ಇಂದಿಗೂ ನಮ್ಮ ಬರವಣಿಗೆಯ ಹಿನ್ನೆಲೆಯಲ್ಲಿವೆ. ಮಾರ್ಗ – ದೇಸಿಗಳ ಸಂಶ್ಲೇಷಣೆಯೊಂದನ್ನು ಕುರಿತು ಪಂಪ ಅಂದೇ ಹೇಳಿದ್ದ. ಕೃತಿರಚನೆ ಕುರಿತ ಕಟ್ಟುನಿಟ್ಟಾದ ನಿಯಮಗಳನ್ನು, ಅನೂಚಾನವಾಗಿ ಪಾಲಿಸಿಕೊಂಡು ಬಂದ ಸಂಸ್ಕೃತ ಸಾಹಿತ್ಯ, ‘ಮಾರ್ಗ’ಕ್ಕೆ ಸೇರಿದ್ದು. ಆದರೆ, ಅನಕ್ಷರಸ್ಥರಾದರೂ ಸುಸಂಸ್ಕೃತರಾದ ದೇಸೀಯರಿಂದ ಜೀವಂತವಾಗಿ, ಶಕ್ತವಾಗಿ ಉಳಿದ ಕನ್ನಡ, ‘ದೇಸಿ.’ ಒಂದಕ್ಕೆ ಲಿಖಿತ ಪರಂಪರೆಯಿದ್ದರೆ ಇನ್ನೊಂದು ಮೌಖಿಕ ಪರಂಪರೆಗೆ ಸೇರಿದ್ದು. ಒಂದು ಸ್ಥಾವ: ಇನ್ನೊಂದು ಜಂಗಮ. ಒಂದು ವಿಶ್ವಾತ್ಮಕವಾದದ್ದು; ಇನ್ನೊಂದು ಸ್ಥಳೀಯವಾದದ್ದು. ಆದರೆ ಅವೆರಡೂ ಬೆರೆಯಲೇಬೇಕಾಯಿತು. ಬೇಂದ್ರೆಯಲ್ಲಿ ಅವು ಬೆಸುಗೆಯರಿಯದ ಹಾಗೆ ಬೆರೆತು ಹೋಗಿವೆ. ಅಲ್ಲಿ ದೇಸಿಯದೇ ಮೇಲುಗೈ ಎಂಬ ಮಾತು ಬೇರೆ!

ಒಂದು ಕಾಲಕ್ಕೆ ಸಾಹಿತ್ಯಕೃತಿಯಲ್ಲಿ ಇರಬೇಕಾದ ಅಂಶಗಳನ್ನು ಕುರಿತ ನಿರೀಕ್ಷೆಗಳನ್ನು ರೂಪಿಸುತ್ತಿದ್ದದ್ದು ಸಂಸ್ಕೃತ. ಆದರೆ ಇವತ್ತು ಅವನ್ನು ರೂಪಿಸುತ್ತಿರುವುದು ಯುರೋಪಿಯನ್ ಸಾಹಿತ್ಯ. ಆದರೆ ನಮ್ಮ ಅತ್ಯಾಧುನಿಕರಾದ ಶಾಂತಿನಾಥ ದೇಸಾಯಿ ಅಥವಾ ಯಶವಂತ ಚಿತ್ತಾಲರಂಥ ಕಾದಂಬರಿಕಾರರಲ್ಲೂ ದೇಸೀ ಅಂಶಗಳೇ ಗೆದ್ದು ನಿಲ್ಲಬಲ್ಲವು! ಬೇಂದ್ರೆಯಂತೆ ಕಂಬಾರರಲ್ಲೂ ‘ದೇಸಿ’ಯದೇ ವಿಜೃಂಭಣೆ; ಆದರೆ, ಕಂಬಾರರ ‘ದೇಸಿ’ ಯುರೋಪಿಯನ್ ‘ಮಾರ್ಗ’ವನ್ನು ಎಷ್ಟು ಸಂಪೂರ್ಣವಾಗಿ ಜೀರ್ಣಿಸಿಕೊಂಡು ಬಿಟ್ಟಿದೆಯೆಂದರೆ, ಅಲ್ಲಿ ‘ಮಾರ್ಗ’ ದ ಗುರುತೂ ಕಾಣುವುದಿಲ್ಲ. ದೇವನೂರ ಮಹಾದೇವರ ಕತೆಗಳಲ್ಲಿ ಜಾನಪದೀಯ ಮತ್ತು ಪೌರಾಣಿಕ ಬಂಧ ಹಾಗೂ ಆಧುನಿಕ ಬೌದ್ಧಿಕ ಶಿಲ್ಪಗಳು ಬಹುಸೂಕ್ಷ್ಮವಾಗಿ ಬೆರೆತು ಹೋಗಿರುವ ರೀತಿ ನೋಡಿದರೆ ಅಲ್ಲೂ ‘ಮಾರ್ಗ’ ಅದೃಶ್ಯವೇ ಎನ್ನುವುದು ಹೊಳೆಯುತ್ತದೆ. ಮಹದೇವರ “ಒಡಲಾಳ” ಕತೆಯಲ್ಲಿ ಹಸಿದ ದಲಿತರು ಕತ್ತಲಲ್ಲಿ ಜಮೀನುದಾರರ ಹೊಲದಿಂದ ಕಡಲೆಕಾಯಿ ಕದ್ದು ತರುವ ಭಾಗವೊಂದಿದೆ. ಅವರು ಒಂದು ಸಮುದಾಯದಂತೆ ಬೆಂಕಿಯ ಸುತ್ತ ಕೂತು ಕಡಲೆಕಾಯಿ ತಿನ್ನುತ್ತಾ ಸಿಪ್ಪೆಯನ್ನು ಬೆಂಕಿಗೆ ಎಸೆಯುತ್ತಾರೆ. ಸಾಕವ್ವನ ನಾಯಕತ್ವದಲ್ಲಿ ಜರುಗುವ ಈ ಕ್ರಿಯೆ ಬರಬರುತ್ತಾ ಯಜ್ಞವೊಂದರ ಸಾಂಕೇತಿಕ ಕ್ರಿಯೆಯಂತೆ ಬೆಳೆಯತೊಡಗುತ್ತಾ, ಉಪನಿಷತ್ತಿನ ‘ಸಹಾಭುನಕ್ತು, ಸಹವೀರ್ಯ ಕರವಾವಹೈ’ ಎಂಬ ಸಾಲನ್ನು ನೆನಪಿಗೆ ತರುವಂತಿದೆ.

ಕವಿ, ಕತೆಗಾರ, ನಾಟಕಕಾರ ಎಲ್ಲವೂ ಆಗಿರುವ ಲಂಕೇಶರ ಆರಂಭದ ಘಟ್ಟದ ಜೀವತುಂಬಿ ಪುಟಿಯವ ಕತೆಗಳು ನಾಗರೀಕೃತ ಸೂಕ್ಷ್ಮ ಪ್ರಜ್ಞೆಯ ಫಲವೆಂಬಂತೆ ಕಾಣುತ್ತಿದ್ದವು. ಆದರೆ ಈಚೆಗೆ ಅವರು ಗ್ರಾಮ ಸಮಾಜದ ದಟ್ಟ ಅನುಭವದ ಜಗತ್ತಿಗೆ ಮರಳಿದ್ದಾರೆ. ಒಂದು ದೃಷ್ಟಿಯಿಂದ, ಅವರು ಸಕ್ರಿಯ ರಾಜಕೀಯ ಕಾರ್ಯಕರ್ತನಂತೆಯೂ ಗ್ರಾಮಜಗತ್ತಿಗೆ ಮರಳಿದ್ದಾರೆ. ಅವರ ಪ್ರತಿಭೆಯ ಮೂಸೆಯಲ್ಲಿ ಗ್ರಾಮ – ನಗರಗಳು ಪರಸ್ಪರ ಸಂಧಿಸುತ್ತಾ ಅತ್ಯಂತ ಒರಿಜಿನಲ್ ಆದ ಬರವಣಿಗೆಯೊಂದಕ್ಕೆ ಹುಟ್ಟು ನೀಡುತ್ತವೆ. ಜೀವಂತ ವರ್ತಮಾನವನ್ನು ನಿರ್ದಯವಾಗಿ ಗ್ರಹಿಸಬಲ್ಲ ಶಕ್ತಿಯುಳ್ಳ ಬರವಣಿಗೆಯಿದು. ಅವರ ‘ಅವ್ವ’ ಕವಿತೆಯಲ್ಲಿನ ಅವ್ವ ಫಲವತ್ತಾದ ಕಪ್ಪು ನೆಲ. ಒರಟು ಪ್ರೀತಿಯ, ತೀವ್ರ ಭಾವನೆಗಳ ಅವ್ವ ಹಸಿಹಸಿ ಬದುಕಿಗೆ ಬದ್ಧಳಾದ, ಗೊಣಗದೆ ಥಣ್ಣಗೆ ಸಾಯಬಲ್ಲ ಹೆಂಗಸು. ಅವಳು ಮಾಗಲು ಭಗವದ್ಗೀತೆಯೇನೂ ಬೇಕಾಗಲಿಲ್ಲ. ಲಂಕೇಶರಿಗಿಂತ ಭಿನ್ನವಾಗಿ ಬರೆಯುವ ಇನ್ನೊಬ್ಬ ಮುಖ್ಯ ಕತೆಗಾರರಾದ ಪೂರ್ಣಚಂದ್ರ ತೇಜಸ್ವಿ ಪಶ್ಚಿಮದ ವಿಚಾರವಾದ ಹಾಗೂ ವೈಜ್ಞಾನಿಕ ತತ್ವಗಳಿಂದ ಪ್ರೇರಣೆ ಪಡೆದು ಕರ್ನಾಟಕದ ಗ್ರಾಮೀಣ ಜಗತ್ತಿನ ಬಗೆಗೆ ಸಾಂಕೇತಿಕವಾಗಿ ಹಾಗೂ ಒಂದು ಬಗೆಯ ನಿಗೂಢ ದೃಷ್ಟಿಕೋನವನ್ನುಳಿಸಿಕೊಂಡು ಬರೆಯುತ್ತಾ ಬಂದಿದ್ದಾರೆ.

ಆಫ್ರಿಕಾ ಮತ್ತು ಲಂಡನ್‌ಗಳಲ್ಲಿ ಇದ್ದು ಬಂದಿರುವ ರಾಮಚಂದ್ರಶರ್ಮ, ಹಾಗೂ ಹೈದರಾಬಾದಿನಲ್ಲಿ ತಿರುಮಲೇಶ್ ತಮ್ಮ ಕವಿತೆಗಳ ಮೂಲಕ ಕನ್ನಡ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಮತ್ತಷ್ಟು ಹಿಗ್ಗಲಿಸಿದ್ದಾರೆ. ವೆಂಕಟೇಶ್‌ಮೂರ್ತಿಯವರ ಸಂವೇದನೆ ನಮ್ಮ ಪ್ರಾಚೀನ ಕವಿಗಳಾದ ಕುಮಾರವ್ಯಾಸ, ಕಾಳಿದಾಸರನ್ನೂ ನಮ್ಮ ಸಮಕಾಲೀನರನ್ನಾಗಿ ಕಾಣುವಂತೆ ಮಾಡಿಬಿಡಲ್ಲದು. ನಮ್ಮ ಕಾಲದ ಮುಖ್ಯ ಸಾಹಿತ್ಯ ವಿಮರ್ಶಕರಲ್ಲೊಬ್ಬರಾದ ಕೀರ್ತಿನಾಥ ಕುರ್ತಕೋಟಿ ತಾವು ಬೇಂದ್ರೆಯಿಂದ ಪಡೆದ ಒಳನೋಟವನ್ನಾಧರಿಸಿ ಇಡೀ ಕನ್ನಡ ಸಾಹಿತ್ಯವನ್ನು ಜೀವಂತ ಸಾತತ್ಯವುಳ್ಳ ಸಾಹಿತ್ಯವೆಂದು ವ್ಯಾಖ್ಯಾನಿಸಿದ್ದಾರೆ. ಚಂದ್ರಶೇಖರ ಪಾಟೀಲರಲ್ಲಿ ಭಾವಗೀತಾತ್ಮಕತೆ ಹಾಗೂ ಗೇಲಿಗುಣಗಳೆರಡೂ ಒಟ್ಟಿಗೇ ಇರಬಲ್ಲವು. ಹೀಗಾಗಿ ಪತ್ರಕರ್ತನ ಸದ್ಯದ ತುರ್ತಿನಿಂದ ಹಿಡಿದು ಆಳವಾದ ಧ್ಯಾನಶೀಲ ಗ್ರಹಿಕೆಯವರೆಗೂ ಅವರು ಸರಾಗವಾಗಿ ಚಲಿಸಬಲ್ಲರು. ಗೋಕಾಕ್, ಭೈರಪ್ಪ, ಶಂಕರ ಮೊಕಾಶಿ ಪುಣೆಕರ್‌ರಂಥ ಲೇಖಕರು ವೇದ ಹಾಗೂ ಪೌರಾಣಿಕ ಕಾಲದ ಮರುವ್ಯಾಖ್ಯಾನದ ಮೂಲಕ ಸಮಕಾಲೀನ ಸಂದರ್ಭದ ಅರ್ಥವನ್ನರಿಯುವ ಯತ್ನ ಮಾಡುತ್ತಾರೆ.

ಈ ಎಲ್ಲ ಲೇಖಕರ ಸಂದರ್ಭದಲ್ಲೂ ಶಿಲ್ಪವನ್ನು ರೂಪಿಸುವ ಸಣ್ಣ ಪ್ರೇರಣೆಯೊಂದು ‘ಮಾರ್ಗ’ದಿಂದಲೇ ಹುಟ್ಟಿದ್ದರೂ ಬಂಧ ಮಾತ್ರ ‘ದೇಸೀ’ಯೇ. ಆಧುನಿಕ ಭಾರತೀಯ ಕಾವ್ಯಕ್ಕೇ ಕೆಲವು ಶ್ರೇಷ್ಠ ಕವಿತೆಗಳನ್ನು ನೀಡಿರುವ ಅಡಿಗರ ಧ್ಯಾನಶೀಲ ಕವಿತೆಗಳಲ್ಲಿ ವೈದಿಕ ‘ಮಾರ್ಗ’ ಹಾಗೂ ‘ದೇಸಿ’ಯ ಮಣ್ಣಿನ ವಾಸನೆ ಮತ್ತು ಕರಾವಳಿಯ ಕಡಲುಗಳನ್ನು ಬೆಸೆಯಬಲ್ಲ ಮೂಲಭೂತ ಗುಣವೊಂದಿದೆ.

ತಮಿಳುನಾಡು ಅಥವಾ ಆಂಧ್ರಕ್ಕಿಂತ ಭಿನ್ನವಾದ ಕರ್ನಾಟಕದ ರಾಜಕಾರಣ ಇಂದಿಗೂ ಮುಖ್ಯವಾಹಿನಿಯ ರಾಜಕಾರಣ. ಈ ತನಕ ಕರ್ನಾಟಕವನ್ನಾಳಿರುವುವೆಲ್ಲಾ ಅಖಿಲ ಭಾರತ ಮಟ್ಟದ ಪಕ್ಷಗಳೇ. ರಾಜಕೀಯ ಪಂಡಿತರನ್ನೆಲ್ಲ ನಿಬ್ಬೆರಗಾಗಿಸಿದ ಮಹತ್ವದ ರಾಜಕೀಯ ಬೆಳವಣಿಗೆಯೊಂದು ಕರ್ನಾಟಕದಲ್ಲಿ ನಡೆದಿದ್ದನ್ನು ಇಲ್ಲಿ ದಾಖಲಿಸಬೇಕು. ಇಂದಿರಾಗಾಂಧಿಯ ಹತ್ಯೆಯ ನಂತರ ನಡೆದ ಲೋಕಸಭಾ ಚುನಾವಣೆಗಳಲ್ಲಿ ರಾಜೀವಗಾಂಧಿಯ ಕಾಂಗೈ ಪಕ್ಷವನ್ನು ಆರಿಸಿ ಕಳಿಸಿದ ಕರ್ನಾಟಕದ ಜನ ಮುಂದಿನ ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ರಾಮಕೃಷ್ಣ ಹೆಗಡೆಯವರ ಜನತಾಪಕ್ಷವನ್ನು ಆರಿಸಿದರು. ಮಾರ್ಗ – ದೇಸಿ ತತ್ವಗಳ ಸಂಗಮ ಕರ್ನಾಟಕದ ರಾಜಕೀಯದಲ್ಲೂ ಸಾಧ್ಯವಾಯಿತೆಂಬುದಕ್ಕೆ ಇದು ಕೂಡ ಉದಾಹರಣೆ.

ಇದಕ್ಕೂ ಮುನ್ನ, ದೆಹಲಿಯ ಗದ್ದುಗೆ ಮೇಲೆ ಕಣ್ಣಿಟ್ಟ ‘ದೇವರಾಜ ಅರಸು ಕರ್ನಾಟಕವನ್ನಾಳಿದ್ದು ಮಾತ್ರ ರಾಜ್ಯದ ಜಾತೀಯ ರಚನೆಯನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುವುದರ ಮೂಲಕ. ಹಿಂದೊಮ್ಮೆ ಕೇರಳದಲ್ಲಿ ನಡೆದ ವಿಚಾರ ಸಂಕಿರಣವೊಂಣದರಲ್ಲಿ ಮಾತಾಡುತ್ತಾ, ಕೇರಳದ ರಾಜಕಾರಣಿಗಳು ವಿಶ್ವಾತ್ಮಕ ‘ಮಾರ್ಗ’ದ ಭಾಷೆಯಾದ ‘ವರ್ಗ’ವನ್ನು ಕುರಿತು ಮಾತಾಡುತ್ತಿದ್ದರೂ, ‘ದೇಸೀ’ ವಾಸ್ತವದ ಜಾತ್ಯಾಧಾರಿತ ಪಕ್ಷಗಳನ್ನೇ ಅವರು ಕಟ್ಟಬೇಕಾಯಿತೆಂದು ನಾನು ಹೇಳಿದ್ದೆ. ಆದರೆ, ಜಾತಿಪದ್ಧತಿಯ ‘ದೇಸೀ’ ವಾಸ್ತವ ಕುರಿತು ಮಾತಾಡುತ್ತಿದ್ದ ಅರಸು ಹೆಚ್ಚೂ ಕಡಿಮೆ ಅದನ್ನು ‘ವರ್ಗ’ ರಾಜಕಾರಣವನ್ನಾಗಿಯೇ ಪರಿವರ್ತಿಸಿಬಿಟ್ಟದ್ದರು. ಇದು ಕರ್ನಾಟಕದ ‘ದೇಸೀ’ ಶೈಲಿ.

ಹೀಗೆ ಭತ್ತ – ರಾಗಿ ಹಾಗೂ ಮಾರ್ಗ – ದೇಸಿಗಳು ಕರ್ನಾಟಕದಲ್ಲಂತೂ ಜೊತೆ ಜೊತೆಗೇ ಬದುಕುತ್ತಾ ಬರಬೇಕಾಯಿತು. ಊಟ ಮಾಡುವ ಮುನ್ನ ಬಾಳೆಯಲೆಯ ಸುತ್ತ ಮಾಡುವ ‘ಪರಿಸಿಂಚನ’ ಹಾಗೂ ‘ಚಿತ್ರಾಹುತಿ’ಗಳು ‘ಮಾರ್ಗ’ ಪದ್ಧತಿಗೆ ಸೇರಿದವಾದರೆ ಅದರ ಮೇಲೆ ಬಡಿಸಲಾಗದ ಆಹಾರ, ಶುದ್ಧ ‘ದೇಸೀ’. ಅದು ಎಷ್ಟರಮಟ್ಟಿಗೆ ‘ದೇಸೀ’ಯೆಂದರೆ ಬ್ರಾಹ್ಮಣರ ಉಪ – ಜಾತಿಗಳ ಜೊತೆಗೆ ರುಚಿಯೂ ಭಿನ್ನವಾಗುತ್ತಾ ಹೋಗುತ್ತದೆ. ಇದೇ ರೀತಿ ಸ್ಥಾವರ – ಜಂಗಮಗಳೂ ಒಟ್ಟಿಗೇ ಬದುಕಬೇಕಾಯಿತು. ಹನ್ನೆರಡನೆಯ ಶತಮಾನದ ವಚನಯುಗದಲ್ಲಿ ಘಟ್ಟಿವಾಳಯ್ಯನೆಂಬ ಬಂಡಾಯಗಾರನಿದ್ದ ಸಾಲಿನಲ್ಲಿ ‘ಇಲ್ಲ, ಇಲ್ಲ’ ಎಂಬ ಶಬ್ದಗಳಿರುವುದು ಈ ದೃಷ್ಟಿಯಿಂದ ಅರ್ಥಪೂರ್ಣ. ಕೇವಲ ಹೊಟ್ಟೆ ತುಂಬಿಸುವುದನ್ನೇ ಕಾಯಕವನ್ನಾಗಿರಿಸಿಕೊಂಡಿರುವ ಜಂಗಮರನ್ನು, ಯಾವ ಕೆಲಸಕ್ಕೂ ಬಾರದ ಜಂಗಮರನ್ನು ಬೆಂಬಲಿಸುವ ಬಸವಣ್ಣ ಮತ್ತು ಅವನ ಅನುಯಾಯಿಗಳೂ ಕೂಡ ಭ್ರಷ್ಟ ವ್ಯವಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆಂದು ಅವನು ಕಿಡಿಕಾರುತ್ತಾನೆ. ಬಸವಣ್ಣನ ಚಳುವಳಿಯೇ ಇನ್ನೊಂದು ಸ್ಥಾವರ, ಅಂದರೆ, ಯಥಾಸ್ಥಿತಿಯಾಗಿ ಬಿಟ್ಟಿದೆಯೆಂಬುದು ಅವನ ಸಿಟ್ಟಿಗೆ ಕಾರಣ. ಆದರೆ ಯಾವ ಸಂಘಟನೆಯನ್ನೂ ಒಲ್ಲದ ಆಧ್ಯಾತ್ಮಿಕ ಏಕಾಂಗಿಯಾದ, ಅವಧೂತ ಅಲ್ಲಮಪ್ರಭು ಅವನೊಡನೆ ವಾದಿಸುತ್ತಾ ‘ಸಂಘವೇ ಇಲ್ಲದೆ (‘ಸಮಯ’) ನೀನು ಬದುಕುವುದು ಸಾಧ್ಯವೇ?’ ಎಂದು ಪ್ರಶ್ನಿಸುತ್ತಾನೆ. “ಬೌದ್ಧರ ‘ಸಂಘ’ದಂತೆ ಜಂಗಮರ ಸಂಘ ಕೂಡ ಒಂದು ಅಗತ್ಯ. ಅದರಲ್ಲಿ ದೌರ್ಬಲ್ಯಗಳಿರಬಹುದೆಂಬ ಮಾತು ಬೇರೆ,” ಎನ್ನುವ ಅಲ್ಲಮ ಹೆಚ್ಚೂ ಕಡಿಮೆ ಲೆನಿನ್ನನಂತೆಯೇ ಪಕ್ಷದ ಚಾರಿತ್ರಿಕ ಅಗತ್ಯ ಕುರಿತು ಮಾತಾಡುತ್ತಾನೆ. ಅಂದರೆ, ಸ್ಥಾವರದ ಸ್ಥಿರತೆಯನ್ನು ಜಂಗಮ ಗಳಿಸಿಕೊಳ್ಳಬೇಕಾಗಿರುವಂತೆ, ಜಂಗಮಕ್ಕಿರುವ ಚಲನಶೀಲ ಜೀವಂತಿಕೆಯನ್ನು ಸ್ಥಾವರ ತನ್ನದಾಗಿಸಿಕೊಳ್ಳಬೇಕಾಗುತ್ತದೆ. ವ್ಯವಸ್ಥೆ ಹಾಗೂ ಬಂಡಾಯಗಳ ನಡುವಣ ಸಂಬಂಧ ಕುರಿತಂತೆ ಹೊಸ ಜನಾಂಗದ ಕವಿ ಶಿವಪ್ರಕಾಶರ ಸುಂದರ ಪದ್ಯವೊಂದಿದೆ. ಬಿಜ್ಜಳನ ಅಧಿಕಾರ ಕೇಂದ್ರ ಹಾಗೂ ಬಸವಣ್ಣನ ‘ಮಹಾಮನೆ’ಗಳನ್ನು ಈ ಪದ್ಯ ಮುಖಾಮುಖಿಯಾಗಿಸುತ್ತದೆ. ಕಾಲಕ್ರಮೇಣ ಬಸವಣ್ಣನ ‘ಮಹಾಮನೆ’ಯೇ ಒಂದು ವ್ಯವಸ್ಥೆಯಾಗಿ ಬಿಡುವ ವ್ಯಂಗ್ಯವನ್ನು ಈ ಪದ್ಯ ಹಿಡಿದಿಡುತ್ತದೆ. ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಯೊಂದನ್ನು ಮಹಾಮನೆಯ ಕಸದ ತೊಟ್ಟಿಗಳಲ್ಲಿ ಬಿದ್ದ ಎಂಜಲೆಲೆಗಳನ್ನು ನೆಕ್ಕುವ ಮರುಳ ಶಂಕರದೇವನ ಚಿತ್ರ ಮಂಡಿಸುತ್ತದೆ. ಶಿವನ ಧ್ಯಾನದಲ್ಲಿ ಮುಳುಗಿ ಹೋಗಿ ತನ್ನ ಮನೆಯ ಹೊರಗಿರುವ ಜೀವಂತ ಶಿವನನ್ನೇ ಕಡೆಗಣಿಸಿರುವ ಬಸವಣ್ಣನನ್ನು ಅಲ್ಲಮ ಅಣಕಿಸುತ್ತಾನೆ. ‘ಸದಾ ನಿನ್ನ ಹಿತ್ತಿಲಲ್ಲೇ ಬದ್ದಿದ್ದರೂ ನಿನ್ನ ಕಣ್ಣಿಗೆ ಕಾಣದ ಮರುಳ ಶಂಕರದೇವ ಇವನು’ ಎಂದು ತಿವಿಯುತ್ತಾನೆ. ಅಲ್ಲಮನ ಮಾತಿಗೆ ನಾಚಿ ಕುಗ್ಗುವ ಬಸವಣ್ಣನಿಗೆ ತನ್ನ ತಪ್ಪಿನ ಅರಿವಾಗತೊಡಗುತ್ತದೆ.

ಭತ್ತ – ರಾಗಿ, ಮಾರ್ಗ – ದೇಸಿ, ಹಾಗೂ ಸ್ಥಾವರ – ಜಂಗಮಗಳು ಕರ್ನಾಟಕದ ನಿರಂತರ ವಿಕಾಸದ ದ್ವಂದ್ವ ಆದರ್ಶಗಳನ್ನು ಪ್ರತಿನಿಧಿಸುವ ತತ್ವಗಳಾಗಿಯೇ ಉಳಿದುಕೊಂಡು ಬಂದಿವೆಯೆಂಬುದಕ್ಕೆ ಸಂಗೀತ ಕ್ಷೇತ್ರದಲ್ಲೂ ಪುರಾವೆ ಇದೆ. ಕೇವಲ ಸಾಹಿತ್ಯ ಹಾಗೂ ರಾಜಕಾರಣಗಳಲ್ಲಿ ಮಾತ್ರವಲ್ಲ, ಸಂಗೀತದ ಸಂದರ್ಭದಲ್ಲೂ ಕರ್ನಾಟಕವೊಂದು ಮಿನಿಭಾರತವೇ. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತಗಳೆರಡಕ್ಕೂ ದೊಡ್ಡ ಕೊಡುಗೆ ನೀಡಿರುವ ನಮ್ಮ ಸಂಗೀತಗಾರರು ತಮ್ಮ ಕಲೆಯ ‘ಮಾರ್ಗ’ ಪರಂಪರೆ ಕನ್ನಡದ ‘ದೇಸೀ’ ರಚನೆಗಳೊಂದಿಗೆ ಬೆರೆಯುವಂತೆ ಮಾಡಿದ್ದಾರೆ. ಭೀಮಸೇನ ಜೋಷಿಯವರು ಹಾಡುವ ದಾಸವಾಣಿ ಅಥವಾ ಮಲ್ಲಿಕಾರ್ಜುನ ಮನ್ಸೂರರು ಹಾಡುವ ವಚನಗಳನ್ನು ಕೇಳಿದರೆ ಈ ಮಾತಿನ ಅರ್ಥ ಸ್ಪಷ್ಟವಾಗುತ್ತದೆ. ಮಧ್ಯಪ್ರದೇಶದಲ್ಲಿ ನೆಲೆಸಿ, ಜಾನಪದೀಯ ರಾಗಗಳನ್ನು ಹಿಂದೂಸ್ತಾನಿಯೊಂದಿಗೆ ಬೆಸೆಯುತ್ತಾ, ಹಿಂದೂಸ್ತಾನಿ ಸಂಗೀತವನ್ನೇ ಸ್ವಲ್ಪಮಟ್ಟಿಗೆ ರೂಪಾಂತರಿಸಿರುವ ಕುಮಾರಗಂಧರ್ವರ ಪ್ರಯೋಗಗಳು ಕೂಡ ಕರ್ನಾಟಕದ ಈ ಮೂಲರೂಪೀ ಸಂವೇದನೆಗೆ ತಕ್ಕಂತೆಯೇ ಇವೆ.

ಇದೇ ಪರಂಪರೆಯಲ್ಲಿ ನಮ್ಮ ಸರೋದ್‌ವಾದಕ ರಾಜೀವ ತಾರಾನಾಥರೂ ಇದ್ದಾರೆ. ಸಂಗೀತ ವಿಮರ್ಶಕರು ಗುರುತಿಸುವಂತೆ ರಾಜೀವರ ಸರೋದ್‌ವಾದನದಲ್ಲಿ ಅವರ ಗುರು ಅಲಿ ಅಕ್ಬರ್ ಖಾನ್‌ರ ತೀವ್ರತೆಯ ಛಾಯೆಯ ಜೊತೆ ಜೊತೆಗೆ ಕರ್ನಾಟಕ ಸಂಗೀತದ ಶಾಸ್ತ್ರೀಯ ಒಗರು ಕೂಡ ಕಾಣುತ್ತಿರುತ್ತದೆ. ಹೀಗಾಗಿ ಕನ್ನಡಿಗರ ‘ಮಾರ್ಗ’ ಪರಂಪರೆಯ ದೊರೆಸ್ವಾಮಿ ಅಯ್ಯಂಗಾರರ ಶುದ್ಧ ವೀಣಾವಾದನವನ್ನು ಆಳವಾಗಿ ಪ್ರೀತಿಸುವ ಕನ್ನಡಿಗರ ಕಿವಿಗಳಿಗೆ ರಾಜೀವರ ಸರೋದ್ ಹೊಸತೊಂದು ದನಿಯಾಗಿ ಕೇಳಿಸಲಾರಂಭಿಸುತ್ತದೆ. (ಹಾಗೆ ನೋಡಿದರೆ, ವೀಣೆ, ಮೈಸೂರು ಮಲ್ಲಿಗೆ ಹಾಗೂ ವಿಳೆಯದೆಲೆ, ಈ ಮೂರೂಹಳೆಯ ಮೈಸೂರು ಪ್ರಾಂತ್ಯದ ಜನರ ಆರೋಗ್ಯಕರ ಸೌಂದರ್ಯ ಪ್ರಜ್ಞೆಗೆ ಅತ್ಯಂತ ಪ್ರಿಯವಾದ ಅಂಶಗಳು.)ನಾನು ಈ ಹಿಂದೆ ಹೇಳಿದ ಬೆಸುಗೆಯ ಇನ್ನೊಂದು ವಿಶಿಷ್ಟ ಉದಾಹರಣೆಯೆಂದರೆ, ಇಸ್ಲಾಂ ಹಾಗೂ ವೀರಶೈವ ದರ್ಶನಗಳು ಬೆರೆಯುವ ಶಿಶುನಾಳ ಶರೀಫರ ಕಾವ್ಯ. ಇವತ್ತಿಗೂ ಕರ್ನಾಟಕದ ಜನಪ್ರಿಯ ಸಂಗೀತದ ಕೇಳುಗರಿಗೆ ಪ್ರಿಯವಾದ ಕವಿ ಎಂದರೆ ಶರೀಫ. ಶರೀಫರ ಅನುಭಾವೀ ಕವಿತೆಯೊಂದರಲ್ಲಿ ಗಿರಣಿಯೊಂದರ ಪ್ರತಿಮೆ ಪ್ರತ್ಯಕ್ಷವಾಗುತ್ತದೆ. ಆದರೆ, ಅದೊಂದು ನೇತ್ಯಾತ್ಮಕ ಅರ್ಥದ ಪ್ರತಿಮೆಯಾಗದೆ ಅವನು ಆರಾಧಿಸುವ ಭವ್ಯತೆಯ ಒಂದು ಭಾಗ್ಯವೇ ಆಗಿಬಿಡುತ್ತದೆ.

ಕನ್ನಡ ಪ್ರತಿಭೆ ‘ಮಾರ್ಗ’ ದಿಂದ ‘ದೇಸೀ’ಗೆ ಚಲಿಸುತ್ತಿರುತ್ತದೆ. ಯಕ್ಷಗಾನದಲ್ಲಿ ‘ದೇಸೀ’ಯೇ ‘ಮಾರ್ಗ’ವಾಗಿ ಬಿಡುತ್ತದೆ. ಹಾಗೆಯೇ ಬಿ.ವಿ. ಕಾರಂತರ ಕಲಾಪ್ರಯಾಣವನ್ನೇ ಗಮನಿಸಿ. ಅವರು ಬೆಳೆದದ್ದು ಗುಬ್ಬಿವೀರಣ್ಣನವರ ವೃತ್ತಿರಂಗಭೂಮಿಯಲ್ಲಿ. ಆದರೆ ತಮ್ಮ ಕಲೆಯನ್ನು ರೂಪಿಸಿಕೊಂಡದ್ದು ಮಾತ್ರ ಹಿಂದಿ ರಂಗಭೂಮಿ, ಯಕ್ಷಗಾನ, ಶಾಸ್ತ್ರೀಯ ಮತ್ತು ಜಾನಪದ ಸಂಗೀತ ಹಾಗೂ ಜಾನಪದ ನೃತ್ಯಗಳ ಮೂಲಕ. ಇವೆಲ್ಲದರ ಫಲವಾಗಿ ಅವರ ನಿರ್ದೇಶನದಲ್ಲಿ ಒಬ್ಬ ಶೇಕ್ಸ್ಪಿಯರ್ ಅಥವಾ ಬ್ರೆಕ್ಟ್ ಶುದ್ಧ ಕನ್ನಡ ಅನುಭವವೇ ಆಗಿಬಿಡಬಲ್ಲ.

ಮಲೆನಾಡಿನ ಪುಟ್ಟ ಹಳ್ಳಿಯೊಂದು ಹಲವು ಸಂಸ್ಕೃತಿಗಳು ಸಂಧಿಸುವ ಫಲವತ್ತಾದ ಸ್ಥಳವಾಗಿದೆ. ಹೆಗ್ಗೋಡಿನಂಥ ಹಳ್ಳಿಯೊಂದಕ್ಕೆ ಇಂಥ ಸಾಂಸ್ಕೃತಿಕ ಮಹತ್ವ ಪ್ರಾಪ್ತವಾದದ್ದು ಕೆ.ವಿ.ಸುಬ್ಬಣ್ಣನಿಂದಾಗಿ. ಒಂದು ರಂಗ ಚಳುವಳಿಯನ್ನೇ ಹುಟ್ಟುಹಾಕಿ ರಾಷ್ಟ್ರದ ಗಮನ ಸೆಳೆದಿರುವ ಈ ಪುಟ್ಟ ಹಳ್ಳಿಯಲ್ಲೊಂದು ಫಿಲ್ಮ್ ಸೊಸೈಟಿ ಇದೆ. ಸಂಜೆ ಅಲ್ಲಿ ಸೇರುವ ಹಳ್ಳಿಗರು ಸತ್ಯಜಿತ್‌ರಾಯ್, ಕುಸೊವ, ಹಾಗೂ ಬರ್ಗಮನ್‌ರಂಥ ನಿದೇರ್ಶಕರ ಸಿನಿಮಾಗಳನ್ನು ಚರ್ಚಿಸುತ್ತಾರೆ. ಪ್ರಸನ್ನರಂಥ ರಂಗನಿದೇರ್ಶಕ ತಮ್ಮ ವಿಶಿಷ್ಟವಾದ ಹಾಗೂ ಪ್ರಗತಿಪರವಾದ ಪ್ರತಿಭಾಶಕ್ತಿಯ ಮೂಲಕ ನಿಜವಾದ ಹೊಸತು ಹಾಗೂ ನಿಜವಾದ ಹಳೆಯದನ್ನು ಸಂಧಿಸುವಂತೆ ಮಾಡಿಬಿಡುತ್ತಾರೆ. ಅತ್ತ ಸಿನಿಮಾರಂಗದಲ್ಲಿ, ಗುಬ್ಬಿವೀರಣ್ಣ ಕಂಪನಿಯ ಶಿಶುವಾದ ರಾಜಕುಮಾರ್ ಪುರಾಣಗಳ ಲೋಕ ಹಾಗೂ ಆಧುನಿಕ ಮಧ್ಯಮವರ್ಗದ ಸಮಾಜಗಳೆರಡರ ನಡುವೆ ಸಲೀಸಾಗಿ ಚಲಿಸುತ್ತಿರುತ್ತಾರೆ.

ಕನ್ನಡ ರಂಗಭೂಮಿಯಂತೆ ಕನ್ನಡ ಸಿನಿಮಾ ಕೂಡ ರಾಷ್ಟ್ರವೇ ತನ್ನತ್ತ ನೋಡುವಂತೆ ಮಾಡಿದೆ. ಕನ್ನಡ ಸಿನಿಮಾದ ಯೂನಿವರ್ಸಲ್ ಗುಣವಿರುವುದೇ ಅದು ಮೂರ್ತ ಪ್ರಾದೇಶಿಕ ವಾಸ್ತವಕ್ಕೆ ಆಳವಾಗಿ ಬದ್ಧವಾಗಿರುವುದರಲ್ಲ. ಪಟ್ಟಾಭಿರಾಮರೆಡ್ಡಿಯವರ ಸಂಸ್ಕಾರದಿಂದ ಶುರುವಾದ ಕನ್ನಡ ಹಸೊ ಅಲೆಯ ಸಿನಿಮಾ, ಘಟಶ್ರಾದ್ಧ, ಹಾಗೂ ತಬರನಕತೆಗಳೆರಡಕ್ಕೂ ಸ್ವರ್ಣಕಮಲ ಪಡೆದ, ಇಂಡಿಯಾದ ಕಿರಿಯ ನಿರ್ದೇಶಕರಲ್ಲೊಬ್ಬರಾದ ಗಿರೀಶ್ ಕಾಸರವಳ್ಳಿಯವರಲ್ಲಿ ಮುಂದುವರೆದಿದೆ. ತಮಿಳು ಕನ್ನಡಿಗ ಎಂ.ಎಸ್.ಸತ್ಯು ಕನ್ನಡದಲ್ಲಿ ಬರದಂಥ ಸಿನಿಮಾಗಳನ್ನು ಮಾಡಿರುವುದರ ಜೊತೆಗೇ ಭಾರತ ವಿಭಜನೆಯ ಕಾಲದ ಹಿಂದೂ – ಮುಸ್ಲಿಮರ ಸಂಘರ್ಷವನ್ನು ತುಂಬ ಎದೆಗಾರಿಕೆಯಿಂದ ಶೋಧಿಸಿರುವ ಗರಂಹವಾದಲ್ಲಿ ಆಗ್ರಾದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಕನ್ನಡದ ಅನಂತನಾಗ್ ಹಿಂದಿ ಸಿನಿಮಾರಂಗದಲ್ಲೂ ಜನಪ್ರಿಯ ನಟನಾಗಿದ್ದರೆ, ಶಂಕರ್‌ನಾಗ್ ಹಿಂದಿ ಇಂಗ್ಲಿಷಿನಲ್ಲಿ ಚಿತ್ರಿಸಿದ ಮಾಲ್ಗುಡಿ ಡೇಸ್ ಅಂತರರಾಷ್ಟ್ರೀಯ ಗಮನವನ್ನೂ ಸೆಳೆದುಕೊಂಡಿದೆ.

ಕನ್ನಡ ಸಂವೇದನೆ ಇಂಗ್ಲಿಷಿನಲ್ಲೂ ಅಭಿವ್ಯಕ್ತಿಗೊಂಡಿದೆ. ಆರ್.ಕೆ. ನಾರಾಯಣರ ಮಾಲ್ಗುಡಿ, ರಾಜಾರಾಯರ ಕಾಂತಾಪುರ, ಎ.ಕೆ.ರಾಮಾನುಜನ್ನರ ಇಂಗ್ಲಿಷ್ ಕವಿತೆಗಳು ಹಾಗೂ ಅನುವಾದಗಳನ್ನು ಗಮನಿಸಿದರೆ ಮೂಲತಃ ಕನ್ನಡದವೇ ಆದ ಅನುಭವಗಳು ಹಾಗೂ ಸರಕುಗಳು ಇಂಗ್ಲಿಷ್ ಭಾಷೆಯೊಡನೆ ಸ್ನೇಹ ಬೆಳೆಸಿ ಪುನರ್ ಸೃಷ್ಟಿಗೊಂಡಿರುವ ಬಗೆಯಿದೆಂಬುದರ ಅರಿವಾಗುತ್ತದೆ. ಐರ್ಲೆಂಡಿನ ಐಡೆಂಟಿಟಿಗಾಗಿ ತೀವ್ರವಾಗಿ ಹಂಬಲಿಸುವ ಯೇಟ್ಸ್ ಯುರೋಪಿನ ಮುಖ್ಯವಾಹಿನಿಯ ಭಾಗವೂ ಆಗಿದ್ದಾನೆ. ನಮ್ಮ ಲೇಖಕರೂ ಹಾಗೆಯೇ. ಪಂಪನಿಂದ ಬೇಂದ್ರೆ, ಕುವೆಂಪು, ಕಾರಂತ ಹಾಗೂ ಈಚಿನ ಮುಖ್ಯ ಬರಹಗಾರರವರೆಗೂ ಯಾರೂ ಇದಕ್ಕೆ ಹೊರತಲ್ಲ.

ನಮ್ಮ ವಿಮರ್ಶಕರ ಕಾಳಜಿಯೂ ಇದೇ. ಎ.ಆರ್.ಕೃಷ್ಣಶಾಸ್ತ್ರಿಗಳು ಬಂಕಿಮಚಂದ್ರರನ್ನು ಕುರಿತು ಹಾಗೂ ಸಂಸ್ಖೃತ ನಾಟಕಕಾರರನ್ನು ಕುರಿತು ತುಂಬ ಸೊಗಸಾಗಿ ಬರೆದಿದ್ದಾರೆ. ಎಂ.ಜಿ. ಕೃಷ್ಣಮೂರ್ತಿ, ಎಫ್.ಆರ್. ಲೀವಿಸ್ಸಿನ ಪ್ರಭಾವವನ್ನು ಅತ್ಯಂತ ಸೃಜನಶೀಲವಾಗಿ ಕನ್ನಡಕ್ಕೂ ತಂದರು. ಡಾ. ಆಮೂರರು ಕನ್ನಡ ವಿಮರ್ಶೆಗೆ ಸಾರವತ್ತಾದ ಅಕಡೆಮಿಕ್ ಶಿಸ್ತಿನ ಗುಣ ತಂದವರು. ಕೀರ್ತಿನಾಥ ಕುರ್ತುಕೋಟಿ ಪ್ರಾಯಶಃ ನಮ್ಮ ಕಾಲದಲ್ಲಿ ಭಾರತದ ದೊಡ್ಡ ಸಂಸ್ಕೃತ ಪಂಡಿತರ ಜೊತೆ, ಅವರಿಗಿಂತ ಭಿನ್ನವಾಗಿ ನಿಲ್ಲಬಲ್ಲರು. ಯಾಕೆಂದರೆ ಸಂಸ್ಕೃತದ ಕ್ಲಾಸಿಕಲ್ ಸಂವೇದನೆ ಕನ್ನಡದ ಜೊತೆ ಇವರಲ್ಲಿ ಕಸಿಗೊಂಡಿದೆ. ಜಿ.ಎಚ್. ನಾಯಕ, ಗಿರಡ್ಡಿ ಗೋವಿಂದರಾಜರಂಥವರು ಕನ್ನಡ ಪರಂಪರೆಯಲ್ಲ ಬೇರುಬಿಟ್ಟನವ್ಯರು. ಮಾಸ್ತಿಯಂಥವರು ವಾಲ್ಮೀಕಿ ಹಾಗೂ ಗಯಟೆ ಇಬ್ಬರನ್ನೂ ಕುರಿತು ಪ್ರೀತಿಯಿಂದ ಮಾತಾಡಬಲ್ಲವರಾಗಿದ್ದರು. ಯುರೋಪಿಯನ್ ಹಾಗೂ ಕನ್ನಡದ ತಾತ್ವಿಕ ದರ್ಶನಗಳ ಪರಸ್ಪರ ಕೊಡುಕೊಳ್ಳುವಿಕೆಯ ಫಲವಾದ ಹೊಸ ಜನಾಂಗದ ವಿಮರ್ಶಕರಾದ ಡಿ.ಆರ್.ನಾಗರಾಜ್, ಕೆ.ವಿ. ನಾರಾಯಣ, ರಾಜಶೇಖರ್, ಹಾಗೂ ಕಿ.ರಂ.ನಾಗರಾಜರಂಥವರು ತಮ್ಮದೇ ಆದ ಸ್ವತಂತ್ರ ಅಸ್ತಿತ್ವವೊಂದರ ಹುಡುಕಾಟದಲ್ಲಿರುವವರು. ನಮ್ಮ ಮೇಜರ್ ನಾಟಕಕಾರರಾದ ಶ್ರೀರಂಗರು ಸಂಸ್ಕೃತ ಪಂಡಿತರೂ, ಆಧುನಿಕ ವಿಚಾರವಾದಿಯೂ ಆಗಿದ್ದವರು. ಧಾರವಾಡದ ಪ್ರಶಾಂತಮಾಯೆ ಬೇಂದ್ರೆಯ ವಿಚಾರಾತೀತ ಅನುಭವವನ್ನೂ, ಶಂ. ಬಾ. ಜೋಶಿಯವರ ವೈಚಾರಿಕ ಪಾಂಡಿತ್ಯವನ್ನೂ ಪೋಷಿಸಿಕೊಂಡು ಬಂದಿತು.

ಪ್ರತಿ ಕನ್ನಡ ಲೇಖಕನಲ್ಲೂ ಹುದುಗಿರುವ ಜೀರ್ಣಾಗ್ನಿ ಹಲವು ಮೂಲಗಳಿಂದ ಅವನಿಗೆ ಒದಗುವ ಅನುಭವಗಳನ್ನು ಜೀರ್ಣಿಸಿ ರೂಪಾಂತರಿಸುತ್ತಿರುತ್ತದೆ. ಹಿಂದೆ, ಸಂಸ್ಕೃತದ ‘ಮಾರ್ಗ’ ಕನ್ನಡ ‘ದೇಸೀ’ ಮೌಖಿಕ ಪರಂಪರೆಯ ಜೊತೆಗೆ ಅನುಸಂಧಾನ ಮಾಡಿಕೊಳ್ಳಬೇಕಾಗಿತ್ತು. ಆದರೆ ಇಂದಿನ ಕನ್ನಡ ಲೇಖಕನ ‘ಅಗ್ನಿ’ ಇಂಗ್ಲಿಷ್‌, ಫ್ರೆಂಚ್ ಅಥವಾ ಸ್ಪ್ಯಾನಿಷ್‌ ಪರಂಪರೆಗಳ ಜೊತೆಜೊತೆಗೇ, ಇಂದಿಗೂ ಜೀವಂತವಾಗಿರುವ ಗ್ರಾಮೀಣ ಕರ್ನಾಟಕದ ಮೌಖಿಕ ಪರಂಪರೆಗಳನ್ನೂ, ಜೊತೆಗೆ ಸಂಸ್ಕೃತವನ್ನೂ ಜೀರ್ಣಿಸಿಕೊಳ್ಳಬೇಕಾಗಿದೆ. ಹನ್ನೆರಡನೆಯ ಶತಮಾನದ ಸಮಾಜೋಸಾಂಸ್ಕೃತಿಕ ಕ್ರಾಂತಿ ಬದುಕಿನ ಎಲ್ಲ ಮೂಲೆಗಳ ಲೇಖಕರನ್ನೂ ಕನ್ನಡಕ್ಕೆ ಕರೆತಂದಿತು. ಉದಾಹರಣೆಗೆ, ಆ ಕಾಲದ ವಚನಕಾರ್ತಿಯರಲ್ಲೊಬ್ಬಳಾದ ಸೂಳೆ ಸಂಕವ್ವೆ ಶಿವನನ್ನು ‘ನಿರ್ಲಜ್ಜೇಶ್ವರ’ ಎಂದು ಕರೆದದ್ದನ್ನು ಇಲ್ಲಿ ನೆನೆಯಬಹುದು. ಇಂದು, ಎಲ್ಲ ಹಿಂದುಳಿದ ಜಾತಿಗಳ ಲೇಖಕರೂ ಈವರೆಗೆ ಕನ್ನಡ ಸಾಹಿತ್ಯ ಹಿಂದೆಂದೂ ಕಾಣದ ಅನುಭವಗಳನ್ನು ಕುರಿತು ಬರೆಯುತ್ತಿದ್ದಾರೆ.

ಕನ್ನಡ ‘ದೇಸೀ’ ಮೌಖಿಕ ಜಾನಪದ ಸಾಹಿತ್ಯ, ಅಖಿಲ ಭಾರತೀಯವಾದ ‘ಮಾರ್ಗ’ ಸಾಹಿತ್ಯದ ಲೋಕದರ್ಶನಕ್ಕೆ ಪೂರಕವಾಗಿ ತನ್ನದೇ ಆದದ್ದೊಂದನ್ನು ಸೇರಿಸುತ್ತಲೇ ಬಂದಿದೆ. ರಾಮಾಯಣದ ಅಹಲ್ಯೆ ಇಂದ್ರನೊಡನೆ ಮಲಗುವುದು ಅವನು ದೇವರಾಜನೆಂಬ ಕುತೂಹಲದಿಂದಾಗಿ; ಕಟ್ಟುನಿಟ್ಟಾದ ನೇಮನಿಷ್ಠೆಗಳ ತನ್ನ ಋಷಿಪತಿಯನ್ನು ಕುರಿತಂತೆ ಅವಳೊಳಗಿನ ಹೆಣ್ಣಿನ ಅತೃಪ್ತಿಯಿಂದಾಗಿ. ಅದರ ಫಲವಾಗಿ ಶಾಪಕ್ಕೆ ತುತ್ತಾದ ಅವಳು ಕಲ್ಲಾಗುತ್ತಾಳೆ. ಆದರೆ ಅಹಲ್ಯೆಯ ಕತೆಗೆ ಪೂರಕವಾಗಿಯೇ ಇರುವಂತೆ ಕಾಣುವ ಕನ್ನಡ ಜಾನಪದ ಕತೆಯೊಂದರಲ್ಲಿ ಪಾಪಪ್ರಜ್ಞೆಯ ಮಡಿಭಾವನೆಯ ಸುಳಿವೇ ಇಲ್ಲ.

ಇದು ಕೂಡ ಗಂಡನಿಂದ ಉಪೇಕ್ಷೆಗೊಳಗಾದ ಹೆಣ್ಣಿನ ಕತೆಯೇ. ಹೆಂಡತಿಯನ್ನು ಮನೆಯಲ್ಲಿ ಕೂಡಿಹಾಕಿ ಪ್ರೇಯಸಿಯ ಜೊತೆ ರಾತ್ರಿ ಕಳೆಯಲು ಹೋಗುವ ಗಂಡ. ಅವನ ಮನೆಯ ಹಿತ್ತಿಲಲ್ಲೇ ಮನೆಮಾಡಿರುವ ಸರ್ಪಕ್ಕೆ ಅವನ ಹೆಂಡತಿಯನ್ನು ಕುರಿತು ಮೋಹ. ರಾತ್ರ ಆತ ಹೊರ ಹೊರಟ ಕೂಡಲೇ ಸರ್ಪ ಅವನ ವೇಷ ಧರಿಸಿ ಮನೆಯೊಳಗಡಿಯಿಡುತ್ತದೆ. ಒಂದು ದೃಷ್ಟಿಯಿಂದ ಈ ಹೆಂಗಸಿಗೆ ಗೊತ್ತಿದ್ದೂ ಗೊತ್ತಿಲ್ಲ. ತನ್ನ ಗಂಡ ಬೆಳಗಿನ ಹೊತ್ತು ವರ್ತಿಸುವ ಬಗೆಯೇ ಬೇರೆ, ರಾತ್ರಿಯ ಬಗೆಯೇ ಬೇರೆ ಎಂದು ಅವಳು ಬೆರಗಾಗುತ್ತಾಳೆ. ಕೆಲದಿನಗಳಲ್ಲೇ ಬಸಿರಾಗುತ್ತಾಳೆ.

ಸಿಟ್ಟಿಗೆದ್ದ ಗಂಡ ಊರ ಹಿರಿಯರನ್ನು ಕರೆಸಿ ತನ್ನ ಹೆಂಡತಿ ಪರಿಶುದ್ಧಳಾಗಿದ್ದರೆ ಸರ್ಪವನ್ನು ಕೈಯಲ್ಲಿ ಹಿಡಿದು ಪ್ರಮಾಣ ಮಾಡಲೆನ್ನುತ್ತಾನೆ. ಅವಳ ಪ್ರೇಮಿ ಸರ್ಪ ಒಲಿಯುತ್ತದೆ. ಊರ ಹಿರಿಯರು ಹಾಗೂ ತನ್ನ ಗಂಡ ನೋಡುನೋಡುತ್ತಿದ್ದಂತೆ ಅವಳು ಸರ್ಪವನ್ನು ಕೈಯಲ್ಲಿ ಹಿಡಿದು ನಿಲ್ಲುತ್ತಾಳೆ. ಈ ತನಕ ತನ್ನಜೀವನದಲ್ಲಿ ತಾನು ಹಿಡಿದಿರುವುದು ತನ್ನ ಗಂಡನ ಕೈಯನ್ನು ಹಾಗೂ ಈ ಹಾವನ್ನು ಮಾತ್ರ ಎಂದು ಘೋಷಿಸುತ್ತಾಳೆ. ಎಂಥ ಜಾಣತನದ, ಆದರೆ ಎಷ್ಟು ಸತ್ಯವಾದ ಮಾತು! ಗಂಡ ಸುಮ್ಮನಾಗಲೇಬೇಕಾಗುತ್ತದೆ. ಕಾಲಕ್ರಮೇಣ ಅವಳು ಗಂಡು ಮಗುವೊಂದನ್ನು ಹಡೆದು ಸಂತೋಷದಿಂದಿದ್ದಾಳೆ. ಒಮ್ಮೆ ಅವಳ ಗಂಡನ ಪ್ರೇಯಸಿ ಅವಳಲ್ಲಿಗೆ ಬಂದು ಒಂದು ದಿನದ ಮಟ್ಟಿಗೆ ಆ ಮಗುವನ್ನು ತಾನಿರಿಸಿಕೊಳ್ಳುವೆನೆಂದು ಅವಳನ್ನು ಕೇಳಿಕೊಳ್ಳುತ್ತಾಳೆ. ಗೆಲುವಿನ ಸಂಭ್ರಮದಲ್ಲಿರುವ ಈ ಹೆಣ್ಣು ತನ್ನ ಮಗುವಿಗೆ ಚಿನ್ನದಾಭರಣ ತೊಡಿಸಿ ಒಂದು ದಿನದ ಮಟ್ಟಿಗೆ ಮಾತ್ರ ನಿನ್ನಲ್ಲಿಗೆ ಕಳಿಸುವೆನೆನ್ನುತ್ತಾಳೆ. ಜೊತೆಗೆ, ಮಗುವನ್ನು ತನಗೆ ಹಿಂದಿರುಗಿಸುವಾಗ ಅದರ ತೂಕ ಒಂದು ತೊಲ ಕಡಿಮೆಯಾದರೂ ಆ ಉಪಪತ್ನಿ ತನ್ನ ದಾಸಿಯಾಗಬೇಕೆಂದು ಷರತ್ತನ್ನೂ ಒಡ್ಡುತ್ತಾಳೆ. ಮತ್ತೆ, ಪ್ರೇಮಿ ಸರ್ಪದ ಆಟದಿಂದಾಗಿ ಈ ಉಪತ್ನಿ ಈ ಹೆಣ್ಣಿನ ದಾಸಿಯಾಗಬೇಕಾಗುತ್ತದೆ.

ಈ ಜಾನಪದ ಕತೆಯ ಅಹಲ್ಯೆಗೆ ಇನ್ನೇನು ತಾನೆ ಬೇಕು? ತನ್ನ ಪಾಲಿಗೆ ಕಳೆದುಹೋಗಿದ್ದ ಗಂಡ ಮರಳಿ ಬಂದಿದ್ದಾನೆ. ಮನೆಯಲ್ಲಿ ಮುದ್ದಿನ ಮಗುವಿದೆ. ಒಮ್ಮೆ ತನ್ನ ಎದುರಾಳಿಯಾಗಿದ್ದವಳು ತನ್ನ ದಾಸಿಯಾಗಿದ್ದಾಳೆ.

ಇತ್ತ, ಒಂದು ರಾತ್ರಿ ಬಡಪಾಯಿ ಸರ್ಪ ಮತ್ತೆ ತನ್ನ ಪ್ರೇಯಸಿಯನ್ನರಸಿ ಬಂದಿದೆ. ಪ್ರೇಯಸಿ ತನ್ನ ಪತಿ ಹಾಗೂ ಮಗುವಿನೊಂದಿಗೆ ನೆಮ್ಮದಿಯ ನಿದ್ದೆಯಲ್ಲಿದ್ದಾಳೆ. ದಾಂಪತ್ಯದ ನೆಮ್ಮದಿ ಹಾಗೂ ಆನಂದದಲ್ಲಿ ಅವರು ಮುಳುಗಿ ಹೋಗಿರುವ ಪ್ರಶಾಂತ ದೃಶ್ಯವನ್ನು ಕಂಡ ಪ್ರೇಮಿಸರ್ಪ ಹತಾಶೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುತ್ತದೆ.

ಕೆಲವು ತಿಂಗಳ ಹಿಂದೆ, ಈ ಕತೆಯನ್ನಾಧರಿಸಿ ಗಿರೀಶ್ ಕಾರ್ನಾಡ್ ನಾಟಕವೊಂದನ್ನು ಬರೆದು ಚಿಕಾಗೋದಲ್ಲಿ ಆಡಿಸಿದರು. ಹಳೆಯ ಜಾನಪದಕತೆಯೊಂದನ್ನಾಧರಿಸಿದ ಈ ನಾಟಕ ಅತ್ಯಂತ ಆಧುನಿಕವಾದದ್ದು ಹಾಗೂ ಪ್ರಯೋಗಾತ್ಮ ಕವಾದದ್ದೆಂದು ಚಿಕಾಗೊ ವಿಶ್ವವಿದ್ಯಾಲಯದ ಧೀಮಂತ ಪ್ರೇಕ್ಷಕರು ಮೆಚ್ಚಿಕೊಂಡಿದ್ದನ್ನು ಕೇಳಿ ಸಹಜವಾಗಿಯೇ ನನಗೆ ಖುಷಿಯಾಯಿತು. ಹಾಗೆಯೇ ಒಮ್ಮೆ ಟಫ್ಟ್ ಹಾಗೂ ಬೋಸ್ಟನ್‌ನ ವಿದ್ಯಾರ್ಥಿಗಳಿಗೆ ನಾನು ಅಲ್ಲಮನ ಬೆಡಗಿನ ವಚನಗಳನ್ನು ಹೇಳಿಕೊಟ್ಟಾಗ, ಆ ಅಮೆರಿಕನ್ ವಿದ್ಯಾರ್ಥಿಗಳು ‘ಇದು ಫ್ರೆಂಚ್ ಸರ‍್ರಿಯಲಿಸಮ್ಮಿನಂತಿದೆ’ ಎಂದು ಚಕಿತರಾಗಿದ್ದರು!

ಕನ್ನಡ ಸಂಸ್ಕೃತಿಯ ಹಸಿವು ಆರೋಗ್ಯಪೂರ್ಣವಾದದ್ದು. ಇಲ್ಲಿ ಪ್ರತಿಜಾತಿಗೂ ತನ್ನದೇ ಆದ ಆದ್ಯತೆಗಳಿವೆ, ನಿಜ, ಆದರೆ, ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಅವು ಇತರ ಜಾತಿಗಳ ಅನುಭವವನ್ನ ಒಳಗೊಳ್ಳುತ್ತಿವೆ. ಹೀಗಾಗಿ ಕನ್ನಡ ಸಂಸ್ಕೃತಿ ರಾಗಿ, ಜೋಳ ಹಾಗೂ ಅಕ್ಕಿಯ ಜೊತೆಗೇ ಇತರ ಹಲವು ಬಗೆಯ ಆಹಾರವನ್ನೂ ಅರಗಿಸಿಕೊಳ್ಳಬಲ್ಲದು. ಬೆಂಗಳೂರಿನಲ್ಲಿ ನಿಮಗೆ ಹಲವು ಬಗೆಯ ಖಾದ್ಯಗಳು ಸಿಗುತ್ತವೆ. ಉಡುಪಿ, ಮದರಾಸಿ, ಪಂಜಾಬಿ, ಗುಜರಾತಿ, ಇಟ್ಯಾಲಿಯನ್ ಅಥವಾ ಚೈನೀಸ್ – ಹೀಗೆ ಎಲ್ಲ ಬಗೆಯ ಖಾದ್ಯಗಳೂ ಇಲ್ಲಿವೆ. ಮಿರ್ಜಾ ಇಸ್ಮಾಯಿಲ್‌ರಂಥ ಸೌಂದರ್ಯಪ್ರಜ್ಞೆಯುಳ್ಳ ಆಡಳಿತಗಾರರು ತಂದ ಪರದೇಶದ ಮರಗಳಂತೆ ತನ್ನದೇ ಆದ ಸಂಪಿಗೆ ಮರಗಳೂ ಬೆಂಗಳೂರಿಗೆ ಪ್ರಿಯ. ಬೆಂಗಳೂರು ಬಿಟ್ಟರೆ ಇಂಡಿಯಾದ ಯಾವ ನಗರದಲ್ಲೂ ಇಷ್ಟೊಂದು ಸಿನಿಮಾ ಮಂದಿರಗಳಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬಂಗಾಳಿ, ಫ್ರೆಂಚ್ – ಹೀಗೆ ಎಲ್ಲ ಬಗೆಯ ಸಿನಿಮಾಗಳಿಗೂ ಇಲ್ಲಿ ಸ್ಥಾನವಿದೆ. ಆದರೂ ಬೆಂಗಳೂರು ತೀರಾ ಕಾಸ್ಮೊಪಾಲಿಟನ್ ಆಗತೊಡಗಿ – ಈಗಾಗಲೇ ಅಂಥ ಅಪಾಯಗಳು ಕಾಣತೊಡಗಿವೆ – ತನ್ನನ್ನು ಕಟ್ಟಿದ ಕೆಂಪೇಗೌಡನ ನೆನಪಿನಿಂದ ದೂರದೂರವಾಗತೊಡಗಿತೆಂದರೆ ಅದು ತನ್ನ ನಿಜ ಅಸ್ತಿತ್ವವನ್ನು ಕಳೆದುಕೊಂಡಂತೆಯೇ. ಇಲ್ಲಿ ಮುದ್ದೆಯೂಟವೂ ಇಟ್ಯಾಲಿಯನ್ ಊಟವೂ ಜೊತೆ ಜೊತೆಗೇ ಉಳಿಯಬೇಕು.

* * *

ನನ್ನ ಅಜ್ಜನ ಕೈಲಿದ್ದ ಕುಡುಗೋಲಿನ ಜಾಗದಲ್ಲಿ ಈಗ ಬುಲ್‌ಡೋಜರ್ ಬಂದು ನಿಂತಿದೆ. ನಮ್ಮ ಪುಟ್ಟ ಮನೆಯೊಳಕ್ಕೆ ನುಗ್ಗಿಬಿಡುತ್ತೇನೆಂದು ಹೆದರಿಸುತ್ತಿದ್ದ ಬಾಲ್ಯದ ನಿಗೂಢ ಕಾಡು ಈಗ ಹಿಂದೆ ಹಿಂದೆ ಸರಿಯುತ್ತಿದೆ. ಹುಲಿಗಳು ಮೃಗಾಲಯದಲ್ಲಿ ಮಾತ್ರ ಕಾಣಸಿಗುತ್ತವೆ. ಗೋವಿನ ಹಾಡು ನಮಗೆಲ್ಲ ಕೇಳಿಸುತ್ತಿದ್ದ ಹಾಗೆಯೇ ಇಂದಿನ ಮಕ್ಕಳಿಗೂ ಕೇಳಿಸುತ್ತದೆಂಬ ಖಾತ್ರಿಯಿಲ್ಲ. ಹಾಗಾದರೆ ನಾಳಿನ ಕರ್ನಾಟಕ ಹೇಗಿರಬಲ್ಲದು?

ಉತ್ತರ ಕನ್ನಡದ ಕಾರವಾರದಿಂದ ಐವತ್ತು ಕಿಲೋಮೀಟರ್ ದೂರಕ್ಕೆ, ಪಶ್ಚಿಮಘಟ್ಟದ ಮೂಲೆಯೊಂದರ ಏಕಾಂತ ಸ್ಥಳದಲ್ಲಿರುವ ಕೈಗಾದಲ್ಲಿ ಅಣುಸ್ಥಾವರವೊಂದನ್ನು ಸರ್ಕಾರ ಕಟ್ಟುತ್ತಿದೆ. ಎಲ್ಲ ಪ್ರಜ್ಞಾವಂತ ಕನ್ನಡಿಗರೆದುರೂ ಕೈಗಾ ಒಂದು ಮುಖ್ಯ ಪ್ರಶ್ನೆಯಾಗಿ ನಿಂತಿದೆ. ಪರಿಸರ ವಿನಾಶಕ್ಕೆ ಕಾರಣವಾಗುವ ಈ ಅಣುಸ್ಥಾವರವನ್ನು ವಿರೋಧಿಸಿ ನಮ್ಮ ಹಿರಿಯ ಲೇಖಕರಾದ ಶಿವರಾಮ ಕಾರಂತರೂ, ಉಡುಪಿಯ ಪೇಜಾವರ ಸ್ವಾಮಿಗಳೂ ಒಟ್ಟಿಗೇ ಜೈಲು ಸೇರಿದ್ದರು. ಆದರೆ ಅಣುಶಕ್ತಿಯ ಸಮರ್ಥಕರಾದ ಟೆಕ್ಕೊಕ್ಯ್ರಾಟ್‌ಗಳು, ‘ಹೆಚ್ಚುತ್ತಿರುವ ವಿದ್ಯುತ್ತಿನ ಬೇಡಿಕೆಯನ್ನು ಇಂಥ ಅಣುಸ್ಥಾವರಗಳ ನೆರವಿಲ್ಲದೆ ಪೂರೈಸುವ ಬಗೆಯೇ ಇಲ್ಲ’ ಎಂದು ವಾದಿಸುತ್ತಾರೆ.

ಆದರೆ ಅಣುಸ್ಥಾವರಗಳನ್ನು ವಿರೋಧಿಸುವವರೇನೂ ಲಡ್ಡೈಟರಲ್ಲ (Luddites*) ವಿದ್ಯುತ್ತಿನ ಪರ್ಯಾಯ ಮೂಲಗಳನ್ನು ಹುಡುಕಬೇಕೆಂಬುದು ಅವರ ನಿಲುವು.

ನನ್ನ ಬಾಲ್ಯದ ನೆನಪುಗಳಲ್ಲಿ ಸ್ಥಾಯಿಯಾಗಿರುವ ಪಾರಂಪರಿಕ ಗ್ರಾಮೀಣ ಕರ್ನಾಟಕದ ಸೊಗಸು ಕೆಲವೇ ವರ್ಷಗಳಲ್ಲಿ ಒಂದಾನೊಂದು ಕಾಳದ ಕತೆಯೊಂದರ ಭಾಗದಂತೆ ಕಾಣತೊಡಗಬಹುದು. ಆದರೆ ಕೇವಲ ನಾಸ್ಟಾಲ್ಜಿಯದಿಂದ ಏನೂ ಪ್ರಯೋಜನವಿಲ್ಲ. ಜೀವನಾಧಾರಕ್ಕಷ್ಟೆ ಸೀಮಿತವಾದ ಆರ್ಥಿಕ ಪದ್ಧತಿ (Subsistence economy) ಹುಟ್ಟುಹಾಕುವ ಹೊಟ್ಟೆಪಾಡಿನ ಸಮಸ್ಯೆಗಳನ್ನು ಕಡೆಗಣಿಸುವುದನ್ನು ಪ್ರತಿಗಾಮಿ ಎನ್ನುವವರು, ಇಂಥ ಆರ್ಥಿಕ ಪದ್ಧತಿಯುಲ್ಳ ಜಗತ್ತುಗಳ ಚೌಕಟ್ಟಿನೊಳಗೇ ಸಾವಯವ ಸಂಬಂಧವುಳ್ಳ ಸಮುದಾಯವೊಂದು ಇವತ್ತಿಗೂ ಕರ್ನಾಟಕದಲ್ಲಿ ಬದುಕಿ ಉಳಿದು ಬಂದಿದೆಯೆಂಬುದನ್ನು ಮರೆಯಬಾರದು. ಇಂಥ ಹಳ್ಳಿಯೊಂದರ ಸೂಕ್ಷ್ಮ ಚಿತ್ರಣ ಎಂ.ಎನ್. ಶ್ರೀನಿವಾಸರ ರಿಮೆಂಬರ್ಡ್ ವಿಲೇಜ್ ಪುಸ್ತಕದಲ್ಲಿದೆ. ಶ್ರೇಣೀಕರಣವುಳ್ಳ, ಫ್ಯೂಡಲ್ ಆದ, ಕೆಲವೊಮ್ಮೆ ಅಸೂಕ್ಷ್ಮವೂ ಆಗಿರುವ ಸಮುದಾಯದ ಒಂದು ಮುಖದ ಜೊತೆಗೇ ಅಂಥ ಸಮುದಾಯದ ಸದಸ್ಯರ ನಡುವೆ ಇರುವ ಪರಸ್ಪರ ಸಂಬಂಧವನ್ನೂ ಈ ಚಿತ್ರ ಎತ್ತಿ ತೋರಿಸುತ್ತದೆ. ಇಂಥ ಸಮುದಾಯಗಳ ಪರ ಅಥವಾ ವಿರೋಧೀ ಚರ್ಚೆಗಳನ್ನಾರಂಭಿಸಿದರೆ ಅದಕ್ಕೆ ಕೊನೆಯೇ ಇರಲಾರದು. ಕನ್ನಡದ ಬಹುತೇಕ ಮುಖ್ಯ ಲೇಖಕರು ಇಂತ ತಲ್ಲಣ ತುಂಬಿದ ಯುದ್ಧವನ್ನು ಚಿತ್ರಿಸಿದ್ದಾರೆ. ಅದು ಕೇವಲ ಹೊರಗಿನ ಸಮಾಜೋರಾಜಕೀಯ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧವಲ್ಲ, ಅದು ಪ್ರತಿ ಸೂಕ್ಷ್ಮಜ್ಞನ ಹೃದಯದ ಒಳಗೇ ನಡೆಯುತ್ತಿರುವ ಘರ್ಷಣೆಯೂ ಹೌದು.

ವಿಭಿನ್ನ ಮೌಲ್ಯಗಳ ನಡುವೆ ನಡೆಯುವ ಇಂಥ ಯುದ್ಧದ ಪ್ರತಿಮೆಗಳು ಕಾರಂತರ ಮರಳಿ ಮಣ್ಣಿಗೆಯಲ್ಲಿವೆ. ನಗರ ಹಾಗೂ ಅದರ ಆಧುನಿಕ ನಾಗರಿಕತೆಗೆ ಮರುಳಾದ ಲಚ್ಚ ನಾಶವಾಗುತ್ತಾನೆ. ಆದರೆ, ತಮ್ಮ ಮಗ ಪೌರೋಹಿತ್ಯದ ದಾಸ್ಯದಿಂದ ಬಿಡುಗಡೆ ಹೊಂದಬೇಕೆಂಬ ಸಂಪ್ರದಾಯಶರಣ ತಂದೆಯೊಬ್ಬನ ಆಸೆಯ ಫಲವೇ ಲಚ್ಚ ಎಂಬುದು ಇಲ್ಲಿನ ವ್ಯಂಗ್ಯ ವೆಂಬುದನ್ನು ಮರೆಯುವಂತಿಲ್ಲ.

ಚರಿತ್ರೆ ಸದಾ ನಮ್ಮನ್ನು ಎಚ್ಚರಿಸುತ್ತಿರುತ್ತದೆ, ನಿಜ. ಆದರೆ ಚರಿತ್ರೆಯಿಂದ ಪಾಠ ಕಲಿಯುವವರು ಯಾರು? ನಾವು ಹುಟ್ಟು ಹಾಕುವ ಚಳುವಳಿಗಳ ಉದ್ದೇಶಗಳೇನೇ ಇದ್ದರೂ, ಸಾಂಪ್ರದಾಯಿಕ ಸಮಾಜದ ಉಸಿರುಟ್ಟಿಸುವ ಸ್ಥಿತಿಯಿಂದ ನಮ್ಮನ್ನು ಪಾರುಮಾಡಬಲ್ಲ ಪ್ರತಿ ಚಳುವಳಿಯೂ ಉಪಭೋಗವಾದಿಯಾದ ಹಾಗೂ ವ್ಯಕ್ತಿವಾದಿಯಾದ ಹೊಟ್ಟೆಬಾಕ ಆಧುನಿಕ ನಾಗರಿಕತೆಯನ್ನು ಪೋಷಿಸುವುದರಲ್ಲಿ ಪರ್ಯವಸಾನವಾಗಿ ಬಿಡುವುದೂ ಸತ್ಯವಲ್ಲವೆ? ಕೈಗಾ ಎನ್ನುವುದು ಮುಂಬರಲಿರುವ ದಿನಗಳ ಸೂಚನೆಯಂತಿಲ್ಲವೆ? ಪ್ರಕೃತಿಯ ಅವಲಂಬನದಿಂದ, ಹಾಗೂ ಪ್ರಕೃತಿಯನ್ನೇ ಅವಲಂಬಿಸಿರುವ – ಜೀವನಾಧಾರಕ್ಕಷ್ಟೆ ಸೀಮಿತವಾದ – ಆರ್ಥಿಕ ಪದ್ಧತಿ ತಂದೊಡ್ಡುವ ಅಡೆತಡೆಗಳಿಂದ ಸ್ವತಂತ್ರವಾಗಬೇಕೆಂದು ನಾವೆಲ್ಲ ಹಂಬಲಿಸುತ್ತಿರುತ್ತೇವೆ. ಹೀಗಿರುವಾಗ ಅಣುಸ್ಥಾವರದ ಅಗತ್ಯವನ್ನು ನಾವು ಸುಲಭವಾಗಿ ತಳ್ಳಿಹಾಕಿ ಬಿಡಬಲ್ಲೆವೆ? ಆದರೆ, ಅಣುಸ್ಥಾವರ ವಿರೋಧಿಗಳು ಈ ಬಗೆಯ ವಾದಗಳನ್ನು ಒಪ್ಪಲಾರರು. ಭೌತಿಕ ಪ್ರಗತಿ ಹಾಗೂ ಸಮಗ್ರಲೋಕ ದರ್ಶನ (holistic world view) ಗಳ ನಡುವೆ ಘರ್ಷಣೆಯನ್ನು ಹುಟ್ಟುಹಾಕದಂಥ ಪರ್ಯಾಯ ತಂತ್ರಜ್ಞಾನವೊಂದನ್ನು ಶೋಧಿಸಬೇಕೆಂಬುದು ಅವರ ವಾದ.

ಆಧುನೀಕರಣದ ಆಕ್ರಮಣದೆದುರು ಕನ್ನಡ ಭಾಷೆಗೆ ಒದಗಲಿರುವ ಸ್ಥಿತಿಯ ಪ್ರಶ್ನೆಯೂ ನಮ್ಮೆದುರಿಗಿದೆ. “ಎಷ್ಟು ಜನರನ್ನು ಪ್ರೇಮಿಸಿದರೂ ಕಡೆಗೆ ಪರಿಶುದ್ಧವಾಗಿ, ತಾಜಾ ಆಗಿ ಉಳಿಯುವ ಅಪ್ಸರೆಯಂತೆ – ಕನ್ನಡ” ಎಂದು ಪು.ತಿ.ನ ಒಮ್ಮೆ ನನ್ನೊಡನೆ ಮಾತಾಡುತ್ತಾ ಹೇಳಿದ್ದರು. ನಿಜ, ಇಲ್ಲಿಯವರೆಗೂ ಕನ್ನಡಭಾಷೆ ಅಪ್ಸರೆಯಂತೆಯೇ ಉಳಿದುಕೊಂಡು ಬಂದಿದೆ. ಪರ್ಷಿಯನ್, ಉರ್ದು, ಇಂಗ್ಲಿಷ್ ಅಥವಾ ಸಂಸ್ಕೃತದ ಪ್ರಭಾವಗಳು ಕನ್ನಡವನ್ನು ಹಾಳುಗೆಡವದೆ, ಅದನ್ನು ಸಮೃದ್ಧಗೊಳಿಸಿವೆ. ಆದರೆ, ಅಪ್ಸರೆ ಸದಾಕಾಲ ತನ್ನ ಪಾವಿತ್ರ್ಯವನ್ನುಳಿಸಿಕೊಳ್ಳಬಲ್ಲಳೆ? ಪಶ್ಚಿಮದ ಆಧುನಿಕ ನಾಗರಿಕತೆಯ ಸಮ್ಮೋಹಿನಿಯೆದುರು ಅವಳು ಉಳಿಯಬಲ್ಲಳೇ? ಸಧ್ಯಕ್ಕೆ ಈ ಪ್ರಶ್ನೆಯೇ ಅಸಂಗತವಾಗಿ ಕಾಣಬಹುದು. ಆದರೆ, ಆಧುನೀಕರಣದ ಹುಚ್ಚು ಆವರಿಸಿರುವ ಕರ್ನಾಟಕ ಮುಂದೊಂದು ದಿನ ಈ ಸವಾಲನ್ನು ಎದುರಿಸಲೇಬೇಕಾಗುತ್ತದೆ.

ನಾವು ಮರಳಿ ಹಿಂದಕ್ಕೆ ಹೋಗಲಾರೆವು. ಆದರೆ ಸಂತೃಪ್ತ ಜೀವನದ ಬಯಕೆ ಹಾಗೂ ಅಗತ್ಯಗಳೆರಡೂ ದಿನೇ ದಿನೇ ಹೆಚ್ಚುತ್ತಿರುವಾಗ ಇದ್ದಲ್ಲೇ ಇರಲೂ ಆರೆವು. ಮನಸ್ಸನ್ನು ಕಲ್ಲುಮಾಡಿ ಮುಂದಕ್ಕೆ ನಡೆಯುವುದನ್ನು ಬಿಟ್ಟರೆ ಬೇರೆ ಮಾರ್ಗವೇ ನಮ್ಮೆದುರಿಗಿದ್ದಂತಿಲ್ಲ. ಹಳೆಯ ಮೈಸೂರು ಸಂಸ್ಥಾನದ ದಿವಾನರಾದ ಸರ್. ಎಂ.ವಿಶ್ವೇಶ್ವರಯ್ಯನವರಿಗಾಗಲೀ, ಸರ್ ಮಿರ್ಜಾ ಇಸ್ಮಾಯಿಲ್ಲರಿಗಾಗಲೀ ಆಧುನೀಕರಣದ ಸಮಗ್ರ ಪರಿಣಾಮಗಳ ಕಲ್ಪನೆಯಿರಲಿಲ್ಲ. ಇಂದು ನಾವು ನೋಡುತ್ತಿರುವ ತಂತ್ರಜ್ಞಾನ ಕ್ರಾಂತಿಯ ಅಗಾಧ ವ್ಯಾಪ್ತಿಯನ್ನು ಅವರು ನಿರೀಕ್ಷಿಸಿದವರಲ್ಲ. ಗಾಂಧಿಯ ನೆಚ್ಚಿನ ಶಿಷ್ಯರಾಗಿಯೂ ಆಧುನೀಕರಣವನ್ನು ಅಪ್ಪಿಕೊಂಡ ಜವಹರಲಾಲ್ ನೆಹರೂವಿಗೂ ಆ ಕಲ್ಪನೆಯಿರಲಿಲ್ಲ.

ಆದರೆ, ಇಂದು ಕರ್ನಾಟಕದಲ್ಲಿ ಅಕ್ಕಿ – ರಾಗಿಗಳ ನಡುವೆ, ಹಾಗೂ ಸ್ಥಾವರ – ಜಂಗಮಗಳ ನಡುವೆ ಹಿಂದೆಂದಿಗಿಂತಲೂ ಭೀಕರವಾದ ಕದನವೊಂದು ನಡೆಯಲಾರಂಭಿಸಿದೆ.

—-
ಗ್ರಂಥ: ಬೆತ್ತಲೆ ಪೂಜೆ ಯಾಕೆ ಕೂಡದು? ಪುಟ, ೬೮೯೫

* * *


* ಕೈಗಾರಿಕಾ ಕ್ರಾಂತಿ ಇಂಗ್ಲೆಂಡಿನಲ್ಲಿ ಪ್ರಾರಂಭವಾದಾಗ ನಿರುದ್ಯೋಗಿಗಳಾಗಿ ಹತಾಶರಾದ ಕುಶಲಕರ್ಮಿಗಳು ಯಂತ್ರಗಳನ್ನು ತಮ್ಮ ಶತ್ರುಗಳೆಂದು ಕಂಡು ಅವುಗಳನ್ನು ಒಡೆದುಹಾಕುವ ಚಳವಳಿ ಪ್ರಾರಂಭಿಸಿದರು. ಇವರನ್ನು ಲಡೈಟ್ಸ್‌ರಂದು ತಿರಸ್ಕಾರದಲ್ಲಿ ಕರೆಯುತ್ತಾರೆ