ಈಗ ನಾನು ಈ ವಿಷಯವನ್ನು ಕನ್ನಡ ಭಾಷೆಗೆ ಅನ್ವಯಿಸಿ ಒಂದೆರಡು ಮಾತು ಹೇಳುತ್ತೇನೆ. ಕನ್ನಡ ಭಾಷೆಯಲ್ಲಿ ಅಸಂಖ್ಯ ಸಾಧ್ಯತೆಗಳಿವೆ, ಅವುಗಳನ್ನು ಕಟ್ಟಿರುವುದು ನಮ್ಮ ಪೂರ್ವಿಕರೇ ಹೊರತು ಪಾಶ್ಚಿಮಾತ್ಯರಲ್ಲ. ನಾವು ನಮ್ಮ ಭಾಷೆಯಲ್ಲಿ ಕೆಲಸ ಮಾಡುವಾಗ, ನಮ್ಮ ನೆಲದ ಕ್ರಮದಲ್ಲಿ ಮಾತ್ರ ಮೇಲ ಹೇಳಿದಂಥ ಬದಲಾವಣೆಗಳನ್ನು ತರಲು ಸಾಧ್ಯ. ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರಂಥವರು ಮಾತ್ರ ಭಾಷೆಯನ್ನು ಬಿಟ್ಟು ಈ ಕೆಲಸ ಮಾಡಲು ಸಾಧ್ಯವಿರುವವರು. ಆದರೆ ಲೇಖಕರ ಮಟ್ಟಿಗೆ ಮಾತ್ರ ಅದುಸಾಧ್ಯವಿಲ್ಲ. ತೆಲುಗು, ತಮಿಳು, ಕನ್ನಡ ಇತ್ಯಾದಿ ಭಾಷೆಗಳಿಗೆ ಅವುಗಳದೇ ಆದ ಒಂದು ಪರಂಪರೆಯಿದೆ, ಆ ಪರಂಪರೆಯ ಅಧಿಕಾರವಿದೆ. ಲೇಖಕರು ಹೀಗೆ ಅವರವರ ಭಾಷೆಗೆ ಅವರವರು ಒಳಗಾಗಿರುವುದರಿಂದ, ಅವರಲ್ಲಿ ಈ ರಾವು ಬಿಡಿಸುವ ಕ್ರಿಯೆ, ಇಂಡಿಯಾದ ಮಟ್ಟಿಗೆ ಒಂದು ಹೊಸ ಸೃಜನಶೀಲತೆಯ ಕ್ರಿಯೆಯಾಗುತ್ತದೆ. ಕನ್ನಡ ಭಾಷೆಗೆ ಅದು ಹೇಗೆ ಸಾಧ್ಯ ಎನ್ನುವುದಕ್ಕೆ ಉದಾಹರಣೆಯಾಗಿ ನಾನು ಮೂರು ವಾಕ್ಯಗಳನ್ನು ಇಲ್ಲಿ ಬಳಸಿಕೊಳ್ಳುತ್ತೇನೆ. ಈ ಮೂರು ವಾಕ್ಯಗಳಲ್ಲಿ ನಾನು ನನ್ನ ಎಲ್ಲ ಗೊಂದಲಗಳನ್ನು, ಪ್ರಶ್ನೆಗಳನ್ನು ವ್ಯಕ್ತಪಡಿಸಲು ಸಾಧ್ಯ.

ಮೊದಲನೇ ವಾಕ್ಯ – ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ ನಾವು ಈಗಷ್ಟೇ ತರತಮ ಮಾನವನಿಂದ ಸಮಾನ ಮಾನವನತ್ತ ನಡೆಯುವ ಪ್ರಕ್ರಿಯೆಯನ್ನು ನೋಡಿದೆವಲ್ಲ, ಆ ಪ್ರಯತ್ನವನ್ನು, ಈ ವಾಕ್ಯ ಸೂಚಿಸುವಂತೆ, ಹಿಂದಿನಿಂದಲೂ ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಅವಶ್ಯಕವಾದದ್ದು, ಅಪೇಕ್ಷಣೀಯವಾದದ್ದು ಎಂಬುದರ ಬಗ್ಗೆ ಹೇಗೋ ಮಾಡಿ ನಿಮಗೆ ‘ಹೌದು’ ಅನ್ನಿಸಬೇಕು – ಯಾಕೆಂದರೆ ಇಡೀ ವ್ಯವಸ್ಥೆ ‘ಇಲ್ಲ’ ಅನ್ನುತ್ತಿರುತ್ತದೆ; ಹೀಗೆ ‘ಹೌದು’ ಎಂದು ಒಪ್ಪಿಸುವಲ್ಲಿ ಈ ವಾಕ್ಯದ ಈ ಕ್ರಿಯೆ ಅದು ಭಾಷೆಯನ್ನು ಭಾಷೆಯ ಶಕ್ತಿಯನ್ನು ಬಳಸಿಕೊಳ್ಳುವ ಕ್ರಮದಲ್ಲಿಯೇ ಮೂಡಿ ಬಂದಿದೆ. ‘ಜಾತಿ’ಗೆ ‘ಜ್ಯೋತಿ’ ಅನ್ನುವುದು ಹೊಂದುವಂಥ ಶಬ್ದ; ಆದ್ದರಿಂದ ‘ಜಾತಿಹೀನನ ಮನೆಯ ಜ್ಯೋತಿ’… ‘ಜಾತಿ’ಯ ಜೊತೆಗೆ ‘ಜ್ಯೋತಿ’ ಎಂದು ಹೇಳುತ್ತಿರುವುದರಿಂದ ಅದರಿಂದ ಹುಟ್ಟುವ ಸುಖವನ್ನೇ ಕವಿ ಬಳಸಿಕೊಳ್ಳುತ್ತಿದ್ದಾನೆ ಎನಿಸುತ್ತದೆ. ಅಂಥ ಸುಖದಲ್ಲಿ ಕೇಳುಗರಾದ ನಮ್ಮ ಮನಸ್ಸು ಸ್ವಲ್ಪ ಉಬ್ಬಿದರೆ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು, ಅಲ್ಲಿ ಭಾಷೆಯಲ್ಲಿ ಪಡುವ ಆನಂದದಿಂದ ಇನ್ನೂ ವಿಸ್ತಾರವಾಗುತ್ತದೆ. ನಮಗಿರುವ ಸುಖದ ಶಕ್ತಿ ಹೀಗೆ ಹೆಚ್ಚಾದಾಗ ನಾವು ‘ಹೌದು’ ಅನ್ನುತ್ತೇವೆ. ಇಲ್ಲಿ ಕವಿಯ ಇಂಗಿತಾರ್ಥಕ್ಕೆ ‘ಹೌದು’ ಎಂದು ಒಪ್ಪಿಗೆ ಸೂಚಿಸುತ್ತೇವೆ. ಮತ್ತೆ, ‘ಜ್ಯೋತಿ’ ಅನ್ನುವುದು ಸಂಸ್ಕೃತ ಶಬ್ದ. ಸಂಸ್ಕೃತ ಶಬ್ದ ಕೊಂಚವೇ, ಎಲ್ಲಿಯೇ ಬಂದರೂ ಅದು ನಮ್ಮ ಪರಂಪರೆಯ ಕಾರಣದಿಂದಲೇ, ನಮ್ಮ ಮನಸ್ಸಿನಲ್ಲಿ ಅಮೂರ್ತತೆಯನ್ನು, ಒಂದು ರೀತಿಯ ಪಾವಿತ್ರ್ಯತೆಯ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಅದನ್ನೇ ಒಬ್ಬ ಹರಿಜನನ ಮನೆಯಲ್ಲಿರುವ ಚಿಮಣಿಬುಡ್ಡಿ ಎಂದಿದ್ದರೆ ಈ ಭಾವನೆ ಕಟ್ಟಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ‘ಬುಡ್ಡಿ’ ಒಂದು ಸಾಮಾನ್ಯ ವಸ್ತು ಎಂದೆನಿಸಿಬಿಡುತ್ತಿತ್ತು. ಆದರೆ ‘ಜ್ಯೋತಿ’ ಎಂದಾಗ ‘ಅವನ ಮನೆಯಲ್ಲಿ ಬೆಳಗುವಷ್ಟೇ ಪ್ರಭೆಯಿಂದ ನಮ್ಮಮನೆಯಲ್ಲೂ ಉರಿಯುತ್ತದೆ’ ಎಂದೆನಿಸುತ್ತದೆ. ‘ಜ್ಯೋತಿ’ ಎನ್ನುವುದರಿಂದ ವಾಕ್ಯಕ್ಕೆ ಇಂಥ ಶಕ್ತಿ ಸಿಗುತ್ತದೆ. ಇಲ್ಲಿ ಒಪ್ಪಿಸುವ ಕೆಲಸ ಮಾಡಲು ಕನ್ನಡದಲ್ಲಿ ನಾವು ಸಂಸ್ಕೃತದಿಂದ ಬಂದ ಪರಂಪರೆಯ ಅಧಿಕಾರವನ್ನು ಬಳಸಿಕೊಳ್ಳುತ್ತಿದ್ದೇವೆ. ತರತಮ ಮಾನವನಿಂದ ಸಮಾನ ಮಾನವನೆಡೆಗೆ ಎಂಬುದನ್ನು ತಿಳಿಹೇಳಿ ಮನಸ್ಸನ್ನು ಪರಿವರ್ತಿಸಲು ನಾವು ಇಲ್ಲಿ ‘ಜ್ಯೋತಿ’ ಎಂಬ ಶಬ್ದವನ್ನು ಉಪಯೋಗಿಸುತ್ತಿದ್ದೇವೆ. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ?’ – ಇದು ಕೇಳುವ ಕ್ರಮವೇ ಹೇಗಿದೆ ಅಂದರೆ, ಸಂಸ್ಕೃತದ ಬಳಕೆಯಿಂದ, ಅಲಿಟರೇಷನ್, ಅಸೋನನ್ಸ್‌ಗಳ ಬಳಕೆಯಿಂದ ಅದರ ಆಪ್ತತೆಯಿಂದ, ಕೇಳುಗರಿಗೆ ತಕ್ಷಣ ‘ಇಲ್ಲಪ್ಪ, ಇಲ್ಲ’ ಎನಿಸಿಬಿಡುತ್ತದೆ. ಇಲ್ಲಿ ಕವಿ ಒಂದು ಭಾಷೆಯ ಸಾಧ್ಯತೆಗಳಿಂದ ಓದುಗನ ಮನಸ್ಸಿನಲ್ಲಿ ಒಂದು ಪರಿಣಾಮವನ್ನುಂಟುಮಾಡಿ, ಆ ಪರಿಣಾಮದ ಮೂಲಕ ಅವನ ಮನಸ್ಸನ್ನು ಬದಲಾಯಿಸುವುದನ್ನು, ಅವರಿಬ್ಬರದೂ ಆದ ಭಾಷೆಯನ್ನು ಬಳಸುವ ಕ್ರಮದಲ್ಲೇ ಸಾಧಿಸಿ ಬಿಡುತ್ತಾನೆ. ಇನ್ನೊಂದು ಮಾತು, ಈ ರೀತಿಯ ಯಾವುದೇ ಸೊಗಸು, ಅಲಂಕಾರಗಳಿಲ್ಲದಿರುವ ಮಾತು: ‘ದಯೆಯಿಲ್ಲದ ಧರ್ಮವಾವುದಯ್ಯಾ?’ ಈ ಮಾತನ್ನು ಆಡುವುದಕ್ಕೆ ಸಾಧ್ಯವಾಗಬೇಕಾದರೆ ನೀವೂ ಕೂಡ ‘ಹೌದಪ್ಪ’ ಎಲ್ಲ ಧರ್ಮಗಳಲ್ಲೂ ದಯೆ ಇದ್ದೇ ಇದೆ’ ಎಂದು ತಿಳಿದುಕೊಂಡವರಾಗಿರಬೇಕು. ನಾವೆಲ್ಲ ಒಂದು ಕುಟುಂಬ ಎನ್ನುವ ಪ್ರಜ್ಞೆ ಇದ್ದಾಗ ಮಾತ್ರ ಇಂಥ ಮಾತನ್ನು ಆಡಲು ಸಾಧ್ಯ. ಒಂದು ಭಾಷೆಯಲ್ಲಿ ಒಂದು ದೊಡ್ಡ ಕೆಲಸವನ್ನು ಒಪ್ಪಂದದಿಂದ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಯಾಕೆಂದರೆ, ನನಗೆ, ನಿಮಗೆ ಇಬ್ಬರಿಗೂ ಧರ್ಮ ಎಂಬುದರ ಬಗ್ಗೆ ಒಂದು ಸಮಾನ ಕಲ್ಪನೆ ಇದ್ದು, ಧರ್ಮದ ಮೂಲದಲ್ಲಿ ದಯೆಯಿದೆ ಎಂಬ ಸಮಾನ ಅಭಿಪ್ರಾಯವಿದ್ದಾಗ, ಹಿಂದೂ ಧರ್ಮವಿರಲಿ, ಇಸ್ಲಾಂ ಇರಲಿ, ಕ್ರಿಶ್ಚಿಯಾನಿಟಿ ಇರಲಿ, ಯಾವುದೇ ಧರ್ಮವಿರಲಿ, ದಯೆಯಿಲ್ಲದ ಧರ್ಮಯಾವುದಯ್ಯಾ? – ಎಂದು ಹೇಳಲು ಬರುತ್ತದೆ. ಒಂದು ದೊಡ್ಡ ಸತ್ಯವನ್ನು ಹೇಳಲು ಇಂಥದೊಂದು ನೇರ, ಸರಳ ಮಾತು ಕೂಡ ಬೇಕಾಗುತ್ತದೆ. ಮನಃಪರಿವರ್ತನೆಯ, ಪ್ರಭೆಯನ್ನು ಕಳೆದು – ಕಟ್ಟುವ ಕೆಲಸ ಮಾಡುವಾಗ ಇಂಥ ಶಕ್ತಿಯೂ ಬೇಕಾಗುತ್ತದೆ.

ಮೂರನೆಯದು – ನಮ್ಮ ನವ್ಯದಲ್ಲೂ ಕಂಡಂಹ ಶಕ್ತಿ ಅದು – ಪುರಂದರದಾಸರು ಒಂದು ಮಾತು. ನಾನು ಇತ್ತೀಚೆಗೆ ರಷಿಯಾದಲ್ಲಿ ಒಂದು ಸೆಮಿನಾರ್‌ನಲ್ಲಿ ಭಾಗವಹಿಸಿದ್ದೆ. ಆ ಸೆಮಿನಾರ್‌ನಲ್ಲಿ ಅವರು ಇಟ್ಟುಕೊಂಡಿದ್ದ ವಿಷಯ ‘ಸಾಹಿತಿ ಮತ್ತು ಅಧಿಕಾರ – ಇವರಿಬ್ಬರ ನಡುವಣ ಸಂಬಂಧ ಹೇಗಿರಬೇಕು’ ಎಂದು. ಅಲ್ಲ ಮೊನ್ನೆಯವರೆಗೆ ಇದು ಎಂಥ ಕೆಟ್ಟ ಸಂಬಂಧವಾಗಿತ್ತೆಂದರೆ ಗೊರ್ಬಚೆವ್‌ ಒಂದು ಗ್ಲಾಸ್‌ನಾಸ್ಟ್ ಇತ್ಯಾದಿಯನ್ನೆಲ್ಲಾ ತಂದ ಮೇಲೆ ಸಾಹಿತಿಗಳೆಲ್ಲ ಒಂದು ಸಭೆ ಸೇರಿದರಂತೆ. ಸೇರಿ ಒಂದು ನಿರ್ಣಯ ಮಾಡಿದರಂತೆ, ‘ನಾವು ಇನ್ನು ಮೇಲೆ ಗ್ಲಾಸ್‌ನಾಸ್ಟ್ ಬಗ್ಗೆಯ ಬರೆಯೋಣ’ ಎಂದು. ನಿರ್ಣಯ ಮಾಡಿ ಸೀದಾ ಗೊರ್ಬಚೇವ್ ಹತ್ತಿರ ಹೋಗಿ – ಯಾಕೆಂದರೆ ಅವರಿಗೆ ಸರ್ಕಾರಿ ಭತ್ಯೆ ಇತ್ಯಾದಿ ಎಲ್ಲ ಸಿಗುತ್ತದೆ –  ‘ಸರ್, ನಾವು ಇನ್ನು ಮೇಲೆ ಗ್ಲಾಸ್‌ನಾಸ್ಟ್ ಬಗ್ಗೆಯೇ ಬರೆಯುತ್ತೇವೆ’ ಎಂದು ತಮ್ಮ ನಿರ್ಣಯ ತಿಳಿಸಿದರಂತೆ. ಅದಕ್ಕೆ ಗೊರ್ಬಚೆವ್ ಹೇಳಿದಂತೆ; ”Why don’t you wait for a little while; let it first take place”  ಅದು ಅವರ ಸ್ಥಿತಿ. ನಾನು ಆ ಬರಹಗಾರರಿಗೆ ಹೇಳಿದೆ, ‘ಪುರಂದರದಾಸರ ಒಂದು ಸಾಲನ್ನು ಓದಿದ್ದರೆ ನೀವು ಈ ಸ್ಥಿತಿಗೆ ಬರುತ್ತಿರಲಿಲ್ಲ’ ಎಂದು. ನಾನು ಹೇಳಿದ ಪುರಂದರದಾಸರ ಆ ಮಾತು ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’ ಇದು ಭಾಷೆಯ ಎಂತಹ ವಿಚಿತ್ರವಾದ ಉಪಯೋಗ, ನೋಡಿ. ಪುರಂದರದಾಸರು ಬದುಕಿದ್ದು ಕೃಷ್ಣದೇವರಾಯನ ಕಾಲದಲ್ಲಿ, ಆಗ ಒಂದು ಬಹಳ ಒಳ್ಳೆಯ ಪ್ರಭುತ್ವವಿತ್ತು, ಸುವರ್ಣಯುಗವಾಗಿತ್ತು. ದೊಡ್ಡ ಚಕ್ರಾಧಿಪತ್ಯವಾಗಿತ್ತು ಎಂದೆಲ್ಲ ನಾವು ಕೇಳಿದ್ದೇವೆ, ಪುರಂದರದಾಸರು ಈ ಮಾತಿನಲ್ಲಿ ಎರಡನ್ನೂ ಹೇಳುತ್ತಿದ್ದಾರೆ. ಯಾವುದೇ ಪ್ರಭುತ್ವ ಉತ್ತಮವಾಗಿರಲು ಸಾಧ್ಯ ಎಂದು ತಿಳಿಯುವುದೇ ಲೊಳಲೊಟ್ಟೆ ಎಂದು ಹೇಳುತ್ತಿದ್ದಾರೆ. ಇಲ್ಲಿ ‘ಉತ್ತಮ’ ಸಂಸ್ಕೃತ ಶಬ್ದ, ‘ಪ್ರಭುತ್ವ’ ಸಂಸ್ಕೃತ ಶಬ್ದ, ‘ಲೊಳಲೊಟ್ಟೆ ವಿಚಿತ್ರವಾದ ಅರ್ಥ ಸ್ಫುರಿಸುತ್ತದೆ: ಯಾವುದೇ ಪ್ರಭುತ್ವ ಉತ್ತಮವಾಗಿರಲು ಸಾಧ್ಯ ಎನ್ನುವುದು ಲೊಳಲೊಟ್ಟೆ. ಇದೊಂದನ್ನು ತಿಳಿದಿದ್ದರೆ ಲೆನಿನ್‌ಕಾಲದ ಬರಹಗಾರರೆಲ್ಲ ಬಿಡುಗಡೆ ಪಡೆದು ಬಿಡುತ್ತಿದ್ದರ. ವ್ಯವಸ್ಥೆಯನ್ನು, ಪ್ರಭುತ್ವವನ್ನು ತಂದುಬಿಡುತ್ತಾನೆ ಎಂದು ನಂಬಿಕೊಂಡಿದ್ದವರಿಗೆ ಪುರಂದರದಾಸರ ಈ ಮಾತು ತಿಳಿಯಬೇಕಿತ್ತು. ಒಂದು, ಪ್ರಭುತ್ವ ಉತ್ತಮವಾಗಲಿಕ್ಕೆ ಸಾಧ್ಯವಿಲ್ಲ; ಇನ್ನೊಂದು, ಉತ್ತಮವಾಗಿದ್ದರೂ ಪ್ರಭುತ್ವ ಲೊಳಲೊಟ್ಟೆ, ನಿಜವಾಗಿಯೂ ಬಹಳ ದೊಡ್ಡ ಮಾತು ಇದು. ಇಡೀ ರಷಿಯಾವನ್ನು ವಿಮುಕ್ತಗೊಳಿಸಬಹುದಾದ ಮೂರು ಶಬ್ದಗಳು ಇವು. ಇಷ್ಟನ್ನು ತಿಳಿದುಕೊಂಡಿದ್ದರೆ ಕಮ್ಯುನಿಸ್ಟ್ ದೇಶಗಳ ಯಾವ ಬರಹಗಾರನೂ ಹೀಗೆ ಭ್ರಮೆಗೆ ಬಲಿಬಿದ್ದು ದುಃಖಕ್ಕೊಳಗಾಗುತ್ತಿರಲಿಲ್ಲ.

ಪುರಂದರದಾಸರ ಮಾತನ್ನು ಯಾಕೆ ಹೇಳಿದೆನೆಂದರೆ, ಪ್ರಭೆಯನ್ನು ಕಳೆಯುವ – ಕಟ್ಟುವ ಸ್ವಮೂಲದ ಪ್ರಯತ್ನವನ್ನು ನಾವು ಲೇಖಕರಾಗಿ ಕೈಗೊಂಡಾಗ, ಇಂಥಸಾಧನಗಳನ್ನೆಲ್ಲ ಬಳಸುತ್ತಿರುತ್ತೇವೆ. ಸಿನೆಮಾ, ನಾಟಕ ಇತ್ಯಾದಿಗಳಲ್ಲೂ ಇವುಗಳನ್ನು ಬಳಸುತ್ತೇವೆ. ಹೀಗೆಯೇ ನೀವು ಒಂದು ಸಿನೆಮಾ ಮಾಡುವಾಗ, ಅದರಲ್ಲಿ ಒಬ್ಬ ಐರೋಪ್ಯನನ್ನು ತಂದು, ಅವನನ್ನು ಮಹಾದುಷ್ಟನನ್ನಾಗಿ ಚಿತ್ರಿಸಿ, ಐರೋಪ್ಯರ ವಿರುದ್ಧ ದ್ವೇಷ ಮೂಡಿಸುವುದು ಖಂಡಿತ ಸಲ್ಲ. ಯಾಕೆಂದರೆ ಅವರಲ್ಲೂ ಬಹಳ ಒಳ್ಳೆಯವರು, ತುಂಬ ಸಜ್ಜನರು ಇರುತ್ತಾರೆ. ಮಾರ್ಕ್ಸ್ ಬಹಳ ದೊಡ್ಡ ಮನುಷ್ಯ. ಫ್ರಾಯ್ಡ್ ಬಹಳ ದೊಡ್ಡ ಮನುಷ್ಯ, ಬಹಳ ದೊಡ್ಡವರು, ಋಷಿ ಸಮಾನರು ಅವರು. ಆದರೂ ಅವರು ಹೇಳಿದ್ದರಲ್ಲಿ ಎಷ್ಟೋ ತಪ್ಪುಗಳಿವೆ. ಇದನ್ನು ಹೇಗೆ ಬಗೆಹರಿಸಿಕೊಳ್ಳುವುದು? ಒಂದು ಕಾದಂಬರಿ ಬರೆದು, ಅದರಲ್ಲಿ ಅವರನ್ನು ದುಷ್ಟರಾಗಿಯೆ ಚಿತ್ರಿಸುವಿರಾ? ಇಲ್ಲ, ಸಾಧ್ಯವಿಲ್ಲ. ಯಾಕೆಂದರೆ ಕಾದಂಬರಿ ಓದುವವರಿಗೆಲ್ಲ ಅದೇ ರೀತಿಯ ದುಷ್ಟವಾದುದನ್ನೇ ಓದಿ ಓದಿ ಅಭ್ಯಾಸವಾಗಿರುತ್ತದೆ. ಹಾಗಾಗಿ ಅವರಿಗೆ ಹೊಸತೇನೂ, ಅರ್ಥಪೂರ್ಣವಾದದ್ದೇನೂ ನೀಡಲು ಸಾಧ್ಯವಾಗುವುದಿಲ್ಲ.

ಒಂದು ಉದಾಹರಣೆ ಕೊಡುತ್ತೇನೆ: ಹಿಂದೆ, ಕಥೆ ಹೇಳುವ ಕಾಲ ಇನ್ನೂ ಇದ್ದಾಗ, ನಮ್ಮೂರಿನಲ್ಲಿ ಒಬ್ಬರು ಬಲ್ಲಾಳರಿದ್ದರು. ಹಳ್ಳಿಗರಾದ ಅವರು ಒಮ್ಮೆ ಮೈಸೂರು ದಸರಾ ನೋಡಿಕೊಂಡು ಬಂದರು. ನಂತರ ನಮ್ಮೂರಿನಲ್ಲಿ ಪ್ರತಿದಿನ ಒಂದು ಹಬ್ಬ. ಯಾರ ಮನೆಯಲ್ಲಾದರೂ ಊಟಕ್ಕೆ ಜನರೆಲ್ಲ ಸೇರಿದರೆ ಸಾಕು, ಎಲ್ಲರ ಊಟ ಮುಗಿದ ನಂತರ ಆ ಬಲ್ಲಾಳರು ಕೂತು ದಸರಾದ ವರ್ಣನೆ ಶುರುಮಾಡುತ್ತಿದ್ದರು. ‘ಅಯ್ಯಾ’, ಎಂದವರು ಕಣ್ಮುಚ್ಚಿ ಹೇಳುತ್ತಾರೆ’ ಎಂದು ಕಾತರದಿಂದ ಕಾಯುತ್ತಿದ್ದೆವು. ಅವರು ಎಷ್ಟು ಸೊಗಸಾಗಿ ಈ ಕಥೆ ಹೇಳುತ್ತಿದ್ದರೆಂದರೆ ಸುತ್ತಲಿದ್ದವರೆಲ್ಲ ಮಂತ್ರಮುಗ್ಧರಾಗಿ ಕೇಳುತ್ತಿದ್ದರು. ಅವರು ಮಕ್ಕಳು, ದೊಡ್ಡವರು ಎಲ್ಲರಿಗೂ ಸೇರಿ ಕಥೆ ಹೇಳುತ್ತಿದ್ದರು. ಅಷ್ಟು ಅದ್ಭುತವಾಗಿ ಹೇಳಲು ಅವರಿಗೆ ಯಾಕೆ ಸಾಧ್ಯವಾಗಿತ್ತೆಂದರೆ ದಸರಾ ಅವರಿಗೊಂದು ಅನುಭವವಾಗಿತ್ತು. ಆ ಕಥೆ ಹೇಳುವಾಗಲೇ ಅವರು ಮೈಸೂರಿನ ಬೀದಿಗಳು ಯಾವ ರೀತಿ, ಅಲ್ಲಿ ಎಲ್ಲೆಲ್ಲಿ ಕಾಫಿ ಹೇಗೆ, ಎಷ್ಟು ಬೆಲೆ, ಈ ಎಲ್ಲ ವಿವರಗಳನ್ನೂ ನೀಡುತ್ತಿದ್ದರು. ಒಂದು ಬುಗುರಿಯ ವಿಷಯ ಹೇಳಿದರೆ ‘ಆತ ಮರವನ್ನು ಹೇಗೆ ಕಡಿದ, ಹೇಗೆ ಕೆತ್ತಿದ. ಹೇಗೆ ಬಗುರಿ ಮಾಡಿದ’ ಎನ್ನುವುನ್ನೆಲ್ಲ ವಿವರಿಸುತ್ತಿದ್ದರು. ಅವರು ಕ್ರಿಯೆಗಳನ್ನೆಲ್ಲ ಕಥೆಮಾಡಿ ಹೇಳುತ್ತಿದ್ದರು. ಹೀಗೆ ಕಥೆ ಹೇಳುವ ಕ್ರಿಯೆ ಸಾಯುತ್ತ ಹೋದಾಗಲೇ ಕಾದಂಬರಿ ಬಂದದ್ದು. ಕಥೆ ಹೇಳುವುದು ಎಂದರೆ ಇಡೀ ಸಮೂಹವನ್ನು ಕೂರಿಸಿಕೊಂಡು ಕಥೆ ಹೇಳುವುದಾಗಿತ್ತು. ಆದರೆ ಕಾದಂಬರಿ ಒಬ್ಬನೇ ಕೂತು ಓದುವುದು. ಒಬ್ಬನೇ ಕೂತು ಓದುವುದು ಎಂಥಾ ಸ್ವಾತಂತ್ರ್ಯದ ವಿಷಯವೆಂದರೆ, ನಾನು ಬೇಡವಾದಾಗ ಕಾದಂಬರಿಯನ್ನು ಮುಚ್ಚಬಹುದು. ಇಷ್ಟವಾದಾಗ ಬಿಚ್ಚಬಹುದು. ನಾನು ಸಾಮಾಜಿಕವಾಗಿ ಕೇಳುವುದಕ್ಕೆ ನಾಚಿಕೊಳ್ಳುವಂಥ ವಿಷಯಗಳನ್ನು, ವರ್ಣನೆಗಳನ್ನು ಓದಬಹುದು. ಇಂಥದೆಲ್ಲ ಒಂದು ಇಡೀ ಸಮೂಹ ಒಪ್ಪಿಕೊಂಡ ಸಂಸ್ಕೃತಿಯಾಗಿದ್ದರೆ ಅವುಗಳನ್ನು ಯುಕ್ತವಾಗಿ ಹೇಳಿಬಿಡಬಹುದು. ನಮ್ಮ ಗ್ರಾಮೀಣ ಸಂಸ್ಕೃತಿಯಲ್ಲಿ ಇಂಥ ಅವಕಾಶಗಳಿರುವ ಕಲೆಗಳಿವೆ; ಸಂಸ್ಕೃತದಲ್ಲಿ ಇಲ್ಲ. ಆದರೆ ಕಾದಂಬರಿಯಲ್ಲಿ ಇವೆಲ್ಲವೂ ಸಾಧ್ಯ. ಕಾದಂಬರಿಯಲ್ಲಿ ಕಥೆ ಹೇಳುವುದಾದರೆ ವೃತ್ತಪತ್ರಿಕೆಯಲ್ಲಿ ಇವೆಲ್ಲವೂ ಸಾಧ್ಯ. ಕಾದಂಬರಿಯಲ್ಲಿ ಕಥೆ ಹೇಳುವುದಾದರೆ ವೃತ್ತಪತ್ರಿಕೆಯಲ್ಲಿ ಮಾಹಿತಿ ಕೇವಲ ಮಾಹಿತಿಯಾಗಿ ಬರಬೇಕಾಗುತ್ತದೆ. ಹಾಗಾಗಿ ಪತ್ರಕೆಯಲ್ಲಿ ವಿಷಯಗಳು ‘ಇಲ್ಲೊಂದು ಸಮಾರಂಭ, ಅಲ್ಲೊಂದು ಕೊಲೆ, ಒಂದೆಡೆ ಒಳ್ಳೆಯದು, ಮತ್ತೊಂದೆಡೆ ಕೆಟ್ಟದ್ದು, ವಿ.ಪಿ.ಸಿಂಗ್ ಹೀಗೆ ಹೇಳಿದರು, ಭಾರತ ಕ್ರಿಕೆಟ್ ತಂಡದವರು ಇಷ್ಟುರನ್ನು ಮಾಡಿದರು’ ಎಂದು ಎಲ್ಲ ಕಲಸು ಮೇಲೋಗರವಾಗಿ ಬರುತ್ತದೆ. ಇದು ಪ್ಯೂರ್ ಇನ್‌ಫರ್ಮೇಷನ್. ಇದು ಒಂದು ಅನುಭವಾಗಿ ಬರಲು ಸಾಧ್ಯವಿಲ್ಲ. ಆದರೆ ಅದೇ ಕಾದಂಬರಿಯಲ್ಲಿ ಅನುಭವವಾಗಿ ಬರಲು ಸಾಧ್ಯ. ಕಾದಂಬರಿ ನಮ್ಮನ್ನು ಹಗಲುಗನಸಿಗೆ ಹಚ್ಚಲು ಸಾಧ್ಯವಿರುವುದರಿಂದ, ಒಂದು ಜನಪ್ರಿಯ ಕಾದಂಬರಿ ಓದಲು ಶುರುಮಾಡಿದ ತಕ್ಷಣ, ನಾಯಕಿ ಮೈಸೂರಿನಲ್ಲಿ, ಸ್ಟಾಚ್ಯೂ ಸ್ಕ್ವೇರ್‌ನಲ್ಲಿ ಇಳಿದಳು ಅಂದ ತಕ್ಷಣ, ಅವಳು ಹೋಗುವು ಲಕ್ಷ್ಮೀ ಸಿಲ್ಕ್ ಹೌಸ್‌ಗೆ ನಾವು ಓದುಗರೂ ಹೋಗುತ್ತೇವೆ. ಅವಳು ನೋಡುವ ಎಲ್ಲ ಸೀರೆಗಳನ್ನೂ ನೋಡುತ್ತೇವೆ, ಅವಳು ಹುಡುಕುವ ಹಾಗೆ ನಾವೂ ಹುಡುಕುತ್ತೇವೆ, ನಾವು ಆಸೆ ಪಡುವಂಥ ಸೀರೆಗಳನ್ನು ಅವಳು ಕೊಂಡುಕೊಳ್ಳುತ್ತಾಳೆ, ನಾವು ಆಸೆ ಪಡುವಂಥ ಹುಡುಗನನ್ನು ಅವಳು ಮದುವೆಯಾಗುತ್ತಾಳೆ, ನಾವು ಆಸೆ ಪಡುವಂಥ ಊರುಗಳಿಗೆಲ್ಲ ಆಕೆ ಹೋಗಿ ಬರುತ್ತಾಳೆ. ಆದರೆ ಇದು ಇಷ್ಟೆಲ್ಲ ಸುಲಭವೂ ಆಗಬಾರದು, ಹಾಗಾದರೆ ರೋಮಾಂಚನದ ಸುಖ ಇರುವುದಿಲ್ಲ ನೋಡಿ. ಆದ್ದರಿಂದ ಮಧ್ಯೆ ಕೆಲವು ಆಡಚಣೆಗಳೂ ಬರಬೇಕು, ಆಕೆ ಅವುಗಳನ್ನೆಲ್ಲ ದಾಟಿಕೊಂಡು ಬಂದಾಗ ನಮ್ಮ ಖುಷಿ ಹೆಚ್ಚಾಗುತ್ತದೆ. ನಾವು ಸ್ವತಃ ಇಂಥದ್ದನ್ನು ನಮ್ಮ ಹಗಲುಗನಸಿನಲ್ಲಿ ಮಾಡುತ್ತಿರುತ್ತೇವೆ: ಅಡಚಣೆಗಳನ್ನು ತಂದುಕೊಂಡು, ಖುಷಿ ಪಟ್ಟುಕೊಂಡು, ಅವನ್ನು ದಾಟಿಕೊಂಡು, ಖುಷಿ ಪಟ್ಟುಕೊಂಡು ಅದರ ಸುಖ ಅನುಭವಿಸುತ್ತಿರುತ್ತೇವೆ. ಕಾದಂಬರಿ ಹೀಗಾಗಿಬಿಟ್ಟರೆ ಅಲ್ಲಿ ನಾನು ಮೇಲೆ ಹೇಳಿದಂಥ ಯಾವ ಕೆಲಸವನ್ನೂ ಮಾಡಲಿಕ್ಕಾಗುವುದಿಲ್ಲ. ಯಾಕೆಂದರೆ ಇಂಥ ಕಾದಂಬರಿ ಓದುಗರಿಗೆ ಕೇವಲ ನೆಮ್ಮದಿಯನ್ನು, ಕಾಲ್ಪನಿಕ ಸುಖವನ್ನು ತಂದುಕೊಡುತ್ತದೆಯೇ ಹೊರತು ಒಂದು ಸಂಕೀರ್ಣ ಅನುಭವವಾಗಿ ಕಾಡುವುದಿಲ್ಲ, ಕದಡುವುದಿಲ್ಲ.

ನಾವು ಇಂದು ಹೊಸ ಪ್ರಜ್ಞೆ, ಸಂವೇದನೆ, ಪ್ರಭೆ ಪಡೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಇಂಥ ಮೈ ಮರೆಸುವ ಬರಹಗಳಿಂದ ಪ್ರಯೋಜನವಿಲ್ಲ. ಅಂಥ ಬರಹವನ್ನೂ ನಾವು ವಿರೋಧೀಸಬೇಕಾಗುತ್ತದೆ. ಇದು ಸಿನೆಮಾದ ಮಟ್ಟಿಗೂ ತುಂಬಾ ನಿಜ. ನಮ್ಮ ಇವತ್ತಿನ ಬಹಳಷ್ಟು ಸಿನೆಮಾಗಳು ಕೇವಲ ನಮ್ಮ ಕಲ್ಪನೆಯ ಅಪೇಕ್ಷೆಗಳನ್ನು ಪೂರೈಸಿಕೊಡುವ ಸಾಧನಗಳು. ನೀವು ಕೆಲವರ ಮನೆಯಲ್ಲಿ ರಂಪವಾಗುವುದನ್ನು ನೋಡಿರಬಹುದು. ಅಂಥ ಜನ ದಿನನಿತ್ಯ ಅದೇ ವಿಷಯ ತೆಗೆದುಕೊಂಡು ಜಗಳವಾಡುತ್ತಿರುತ್ತಾರೆ; ಇಂದು ಸರಿಯಾಗುತ್ತಾರೆ, ನಾಳೇ ಮತ್ತೆ ಅದೇ ಜಗಳವಾಡುತ್ತಾರೆ. ಟಾಲ್‌ಸ್ಟಾಯ್‌ನಲ್ಲಿ ಎರಡು ರೀತಿಯ ಜನ ಬರುತ್ತಾರೆ: ಅನುಭವದಿಂದ ಪಾಠ ಕಲಿಯುವವರು, ಮತ್ತು ಅನುಭವದಿಂದ ಏನೂ ಪಾಠ ಕಲಿಯದೆ ಇರುವವರು. ಎರಡನೆ ರೀತಿಯವರು ಯಾವತ್ತೂ ರಂಪ ಮಾಡಿಕೊಂಡಿರುತ್ತಾರೆ. ಈ ಸಿನೆಮಾ ನೋಡುವುದೂ ರಂಪ ಇದ್ದ ಹಾಗೆ: ನಿತ್ಯ ಸಿನೆಮಾಕ್ಕೆ ಹೋಗುವುದು, ಅಲ್ಲಿ ಹೃದಯ ಕರಗಿ ಆಳುವುದು, ಅದರ ಸಂತೋಷ ಪಡೆದುಕೊಂಡು ಬರುವುದು, ಮತ್ತೆ ಮರುದಿನ ಸಿನೆಮಾಕ್ಕೆ ಹೋಗುವುದು, ಮತ್ತದೇ ಭ್ರಮೆಯ ಪುನರಾವರ್ತನೆಯಾಗುವುದು. ಇದಕ್ಕೆ ಒಂದು ಬಿಡುಗಡೆ ಅನ್ನುವುದೇ ಇಲ್ಲ; ಏನೋ ಮನಸ್ಸಿನಲ್ಲಿ ಒಂದು ಅನಾವರಣವಾಯಿತು, ಹೊಸ ಪ್ರಜ್ಞೆಮೂಡಿತು ಅನ್ನುವುದೇ ಇಲ್ಲ; ಪ್ರತಿಯೊಂದು ಸಲೀಸು, ಪ್ರತಿಯೊಂದು ಸುಖಕರ. ಆದ್ದರಿಂದಲೇ ಇಂಥ ಸಿನೆಮಾವನ್ನು, ಕಾದಂಬರಿಯನ್ನು ವಿರೋಧಿಸಬೇಕಾಗುತ್ತದೆ. ನಾನು ಒಂದು ಸಿನೆಮಾವನ್ನು ಇದಕ್ಕಿಂತ ಬೇರೆಯೇ ಆದ ರೀತಿಯಲ್ಲಿ ಮಾಡಿ, ಅದರ ಮೂಲಕ, ನಿಮ್ಮಲ್ಲಿ ಹೊಸತನ್ನು ಕಾಣುವ ಆಸೆಯನ್ನು ಹುಟ್ಟಿಸಬೇಕು, ನನ್ನಲ್ಲಿ ಹಾಗೆ ಹೊಸತನ್ನು ಕಾಣಿಸುವ ಆಸೆಯನ್ನು ಬೆಳೆಸಿಕೊಳ್ಳಬೇಕು, ಹಾಗೆ ನಿಮಗೆ ಹೊಸತರ ಆಸೆಯನ್ನು ಹುಟ್ಟಿಸುವಂಥ ಶಕ್ತಿಯನ್ನು ಪಡೆದುಕೊಳ್ಳಬೇಕು. ಅಂಥ ಶಕ್ತಿ ನನಗೆ ನಿಮ್ಮಿಂದಲೇ ಬರಬೇಕು. ಹಾಗಾದಾಗ ಮಾತ್ರ ಒಂದು ಅರ್ಥಪೂರ್ಣ ಸಂವಾದ ಸಾಧ್ಯವಾಗುತ್ತದೆ.

ಇಂಥ ಹೊಸ ರೀತಿಯ ಶಕ್ತಿಯನ್ನು ಪಡೆದುಕೊಳ್ಳುವಾಗ ಹೊಸ ರೀತಿಯ ಕಥೆಯನ್ನೇ ಹೇಳಬೇಕಾಗುತ್ತದೆ. ಅದಕ್ಕೆ ಅಲ್ಲಿ ಮತ್ತೆ ರೂಢಿ ಜಡ ಹೆಜ್ಜೆಯನ್ನು ತಪ್ಪಿಸಬೇಕಾಗುತ್ತದೆ, ರೂಢಿಗತ ದಾರಿಯಲ್ಲಿ ಓದುಗನ್ನು ಕೊಂಚ ದೂರ ಕರೆದುಕೊಂಡು ಹೊಗಿ ಹೆಜ್ಜೆ ತಪ್ಪಿಸಿ ಷಾಕ್ ನೀಡಬೇಕಾಗುತ್ತದೆ. ಹೀಗೆ ಷಾಕ್ ನೀಡದಿದ್ದರೆ ಓದುಗನ, ಕೇಳುಗನ ಮನಸ್ಸು ಎಚ್ಚರವಾಗಿರುವುದಿಲ್ಲ. ಒಂದು ಉದಾಹರಣೆ: ಒಂದು ಕಾದಂಬರಿಯಲ್ಲಿ ಒಬ್ಬ ಮನುಷ್ಯ ಮೂವತ್ತೈದನೆ ವರ್ಷಕ್ಕೆ ಸಾಯುವಂಥ ಮನುಷ್ಯ. ಅವನು ಬದುಕಿದ್ದ ಕಾಲದ ಮಟ್ಟಿಗೆ ತಾನು ಬದುಕುತ್ತ ಇದ್ದೇನೆ ಎಂದು ತಿಳಿದುಕೊಂಡು ಬದುಕುತ್ತಿರುವ ಮನುಷ್ಯ. ಕಾದಂಬರಿಯ ಆ ಪಾತ್ರ ಯಾವುದೇ ಕ್ಷಣದಲ್ಲೂ ತನ್ನ ಮೂವತ್ತೈದನೆ ವರ್ಷಕ್ಕೆ ಸಾಯುವ ಪಾತ್ರವೂ ಹೌದು. ಯಾಕೆಂದರೆ, ನೀವು ಆ ಕಾದಂಬರಿಯನ್ನು ಎರಡನೇ ಬಾರಿ, ಮೊದಲು ಓದಿದ ನೆನಪಿನೊಂದಿಗೆ, ಓದುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಹೀಗೆ ಎರಡನೇ ಸಲ ಓದುವಾಗ ಆತ ಸಂತೋಷದಲ್ಲಿದ್ದಾಗಲೂ, ದುಃಖದಲ್ಲಿದ್ದಾಗಲೂ, ಪ್ರೇಮಮಗ್ನನಾಗಿದ್ದಾಗಲೂ, ತಾನು ಬದುಕುತ್ತಿದ್ದೇನೆ ಎಂದು ತಿಳಿದುಕೊಂಡು ಬದುಕುತ್ತಿರುವಾಗಲೂ, ಆತ ನಿಮಗೆ ತನ್ನ ಮೂವತ್ತೈದನೇ ವಯಸ್ಸಿನಲ್ಲಿ ಸಾಯುವ ಮನುಷ್ಯನಾಗಿ ಕಂಡುಬರುತ್ತಿರುತ್ತಾನೆ. ಕೇವಲ ಸುಖ ನೀಡುವ ಜನಪ್ರಿಯ ಕಾದಂಬರಿಯಲ್ಲಿ, ಒಂದು ಪತ್ತೇದಾರಿ ಕಾದಂಬರಿಯಲ್ಲಿ ಇಂಥ ಅನುಭವ ಸಿಗುವುದಿಲ್ಲ. ಯಾಕೆಂದರೆ ಅವನ ಸಾವಿನ ವಿಷಯ ಕೇವಲ ಸಸ್ಪೆನ್ಸ್‌ನ ಅಂಶವಾಗಿ, ನೀವು ಆ ಸಸ್ಪೆನ್ಸ್‌ನಲ್ಲಿ ಪಡೆಯಬಹುದಾದ ದುಃಖ ಸಂತೋಷವನ್ನೆಲ್ಲಾ ಪಡೆದುಬಿಟ್ಟ ಮೇಲೆ ಅಂಥ ಕಾದಂಬರಿಯ ಎರಡನೆಯ ಓದಿನಲ್ಲಿ ಏನೂ ಸ್ವಾರಸ್ಯ, ಮಹತ್ವ ಉಳಿದಿರುವುದಿಲ್ಲ. ಯಾಕೆಂದರೆ ಈಗ ತಿಳಿಯಬಹುದಾದ ಹೊಸ ಅಂಶವೇನೂ ಉಳಿಯುವುದಿಲ್ಲ. ಯಾಕೆಂದರೆ ಈಗ ತಿಳಿಯಬಹುದಾದ ಹೊಸ ಅಂಶವೇನೂ ಉಳಿಯುವುದಿಲ್ಲ. ಆದರೆ ಆ ಪಾತ್ರದ ಎರಡೂ ಮುಖಗಳನ್ನು ಹೇಳುವಂಥ ಕಾದಂಬರಿ, ಕಾವ್ಯ, ಸಿನೆಮಾ ಮಾತ್ರ ಮತ್ತೊಂದು ಸಲವೂ ತನ್ನ ಶಕ್ತಿಯನ್ನು ಉಳಿಸಿಕೊಂಡಿರುತ್ತದೆ. ನೆನಪಿನಲ್ಲೂ ಜೀವಂತವಾಗಿರುತ್ತದೆ. ನಾವು ಇಂದು ಸೃಷ್ಟಿಸಬೇಕಾಗಿರುವುದು ಇಂಥ ಬಂಧಗಳನ್ನು.

ಇಂಗ್ಲಿಷಿನಲ್ಲಿ ‘ಪ್ರತಿಯೊಂದು ಕೃತಿಯೂ ಓದುವವನು ತಾನು ಓದುವಾಗ ಸೃಷ್ಟಿಸಿಕೊಳ್ಳುವ ಕೃತಿ’ ಎಂಬ ಒಂದು ಮಾತಿದೆ. ಓದುವವನು ಹೀಗೆ ಸೃಷ್ಟಿಸಿಕೊಳ್ಳುವಾಗ ಅವನ ಮನಸ್ಸಿನ ಹಿನ್ನೆಲೆಯಲ್ಲಿ ಅವನ ಸಂಸ್ಕೃತಿ, ಜೀವನಕ್ರಮ, ಜೀವಾನಾನುಭವ, ಅವನು ಓದಿರುವ ಬೇರೆ ಕೃತಿಗಳು, ಅವನ ಅಪೇಕ್ಷೆಗಳು, ಅವನ ವ್ಯಕ್ತಿತ್ವ – ಹೀಗೆ ಹತ್ತು ಹಲವು ಅಂಶಗಳು ಕೆಲಸ ಮಾಡುತ್ತಿರುತ್ತವೆ. ಇದೆಲ್ಲದರ ಮೂಲಕ ಹಾದುಹೊಕ್ಕು ಆ ಕೃತಿ ಅವನ ಮೇಲೆ ತನ್ನ ಪರಿಣಾಮ ಮಾಡಿರುತ್ತದೆ. ಆದರೆ ಮೇಲ್ಕಂಡ ಅಂಶಗಳ ಚೌಕಟ್ಟಿನಲ್ಲಿ ಹೀಗೆ ಹೊಸ ಮನಸ್ಸೊಂದನ್ನು ಸೃಷ್ಟಿಸುವ ಕ್ರಿಯೆಯನ್ನು ನೇರವಾಗಿ ಮಾಡಲು ಸಾ‌ಧ್ಯವಿಲ್ಲ. ಅದಕ್ಕೆ ಪರೋಕ್ಷವಾದ, ವಕ್ರವಾದ ಮಾರ್ಗವೊಂದನ್ನು ಬಳಸಬೇಕಾಗುತ್ತದೆ. ತನ್ನ ದಿಕ್ಕಲ್ಲೇ ಏನೇನೋ ಯೋಚನೆ ಮಾಡುತ್ತಿರುವ ನಿಮ್ಮ ಮನಸ್ಸಿಗೆ ನನ್ನ ಮಾತು ಕೇಳುವಂತೆ ಮಾಡಲು ಅದಕ್ಕೆ ಒಂದು ಕೊಕ್ಕೆ ಹಾಕಿ ಎಳೆಯಬೇಕಾಗುತ್ತದೆ. ಪರೋಕ್ಷ ಮಾತನ್ನು ಉಪಯೋಗಿಸಬೇಕಾಗುತ್ತದೆ. ಇದಕ್ಕೆ ಒಂದುಉದಾಹರಣೆ ಕೊಡುತ್ತೇನೆ. ಸಾಕ್ರಟೀಸ್‌ನಿಗೆ ಒಬ್ಬಾತ ಅಂದು ಸಂಜೆ ಊಟಕ್ಕೆ ಕರೆದಾಗ, ಸಾಕ್ರಟೀಸ್ ಉತ್ತರ ಬರೆದು ಕಳಿಸುತ್ತಾನೆ: ‘ಸಂಜೆ ನದಿ ದಾಟಿ ಬರುವಾಗ ಸಾಯದೆ ಇದ್ದ ಪಕ್ಷದಲ್ಲಿ ನಾನು ಖಂಡಿತ ನಿನ್ನ ಮನೆಗೆ ಊಟಕ್ಕೆ ಬರುತ್ತೇನೆ.’ ವಿಚಿತ್ರ ಮಾತು, ಆದರೆ ಸಾಕ್ರಟೀಸ್ ಯಾಕೆ ಹೀಗೆ ಹೇಳುತ್ತಾನೆ ಎಂದು ಗಮನಿಸಿ: ಮನುಷ್ಯ ನಶ್ವರ ಜೀವಿ, ಸಾಯುವವನು. ಅದನ್ನು ನೇರವಾಗಿ ಹೇಳಿದರೆ ಯಾರೂ ಗಮನಿಸುವುದಿಲ್ಲ, ನಂಬುವುದೂ ಇಲ್ಲ, ಆದರೆ ನದಿ ದಾಟುವಾಗ ಸಾಯುವ ಸಾರ್ಧಯತೆ ಇದೆ ತಾನೆ? ಹೀಗೆ ವಕ್ರ ಮಾತಿನ ಮೂಲಕ ಸಾಕ್ರಟೀಸ್ ಮನುಷ್ಯನ ನಶ್ವರತೆಯ ಪ್ರಜ್ಞೆಯನ್ನು ತಂದುಕೊಡುತ್ತಾನೆ, ವಕ್ರೋಕ್ತಿಯ ಕೊಕ್ಕೆ ಹಾಕಿ ನಮ್ಮ ಮನಸ್ಸನ್ನು ಎಳೆದುಕೊಂಡು ತನ್ನ ಮಾತಿಗೆ ಹೌದೆನ್ನಿಸುತ್ತಾನೆ. ಇಂಥ ಮಾತು ನಮ್ಮನ್ನುಹಿಡಿಯುವುದು ಅದರ ವಕ್ರತೆಯಿಂದ, ಅದು ಕೂಡಲೆ ಅರ್ಥವಾಗದ್ದರಿಂದ. ಯಾಕೆಂದರೆ ಕೂಡಲೆ ಅರ್ಥವಾಗಿದ್ದನ್ನು ನಾವು ಮತ್ತೆ ಯೋಚಿಸಲು ಹೋಗುವುದಿಲ್ಲ. ಇಲ್ಲಿ ಇನ್ನೊಂದು ಉದಾಹರಣೆ ನೋಡಿ. ಒಥೆಲೊ ನಾಟಕದಲ್ಲಿ ಒಂದು ಮಾತು ಬರುತ್ತದೆ: ‘ಪುಟ್‌ಔಟ್ ದ ಲೈಟ್, ದೆನ್ ಪುಟ್ ಔಟ್ ದ ಲೈಟ್’ ಈಗ ನಾನು ನಿಮಗೆ ‘ಪುಟ್ ಔಟ್ ದ ಲೈಟ್’ ಎಂದು ಹೇಳಿದರೆ ನೀವು ಹೋಗಿ ದೀಪ ಆರಿಸುತ್ತೀರಿ, ಇಲ್ಲಿ ಮಾತು ಕೃತಿಯಾಗಿ ಪರಿಣಮಿಸುತ್ತದೆ. ಅಂದರೆ ಮಾತು ಒಂದು ಸಾಧನವಾಗಿ ಕೆಲಸ ಮಾಡುತ್ತದೆ. ಇದೇ ಮಾತು ಒಥೆಲೊದಲ್ಲಿ ಏನು ಕೆಲಸ ಮಾಡುತ್ತದೆ ನೋಡಿ: ಒಥೆಲೊಗೆ ಡೆಸ್ಡೆಮೋನಾಳ ಬಗ್ಗೆ ಬಹಳ ಪ್ರೀತಿಯಿದೆ. ಅಷ್ಟೇ ಅನುಮಾನವೂ ಇದೆ. ಆ ಸುಂದರ, ಮುಗ್ಧ ಹುಡುಗಿ, ಕತ್ತಲಲ್ಲಿ ನಿದ್ದೆ ಹೋಗಿದ್ದಾಳೆ. ಅಲ್ಲಿ ಒಂದು ಮೇಣದ ಬತ್ತಿ ಮಾತ್ರ ಉರಿಯುತ್ತಿದೆ. ಮಹಾ ಉತ್ಪಾದಲ್ಲಿರುವ ಒಥೆಲೊ ಪ್ರೀತಿಯಲ್ಲಿ, ಅನುಮಾನದಲ್ಲಿ ಡೆಸ್ಡೆಮೋನಾಳನ್ನು ಕೊಲ್ಲಲು ಹೋಗಿದ್ದಾನೆ. ಆತ ಆಕೆಯನ್ನು ನೋಡುತ್ತಾನೆ, ಆ ಮೇಣದ ಬತ್ತಿಯನ್ನು ನೋಡುತ್ತಾನೆ. ತನಗೆ ತಾನೆ ನುಡಿಯುತ್ತಾನೆ: ‘ಪುಟ್ ಔಟ್ ದಲೈಟ್, ದೆನ್ ಪುಟ್‌ಔಟ್ ದ ಲೈಟ್’. ಮೊದಲ ‘ಪುಟ್ಔಟ್‌ದ ಲೈಟ್’ ಎಂದರೆ ‘ದೀಪವಾರಿಸು’ ಎಂದು. ಈ ಮಾತು ಕೂಡಲೆ ಅರ್ಥವಾಗುವುದಿಲ್ಲ. ನಂತರ ಮತ್ತೊಮ್ಮೆ ‘ಪುಟ್‌ಔಟ್‌ದ ಲೈಟ್’ ಎನ್ನುತ್ತಾನೆ: ಅಂದರೆ ‘ಡೆಸ್ಡೆಮೋನಾ ಒಂದು ದೀಪವಿದ್ದ ಹಾಗೆ; ನಾನು ಆ ದೀಪವನ್ನು ಆರಿಸುತ್ತೇನೆ. ಆದರಿಂದ ನನ್ನ ಜೀವನದಲ್ಲಿ ಕತ್ತಲೆಯಾಗುತ್ತದೆ’ ಎಂದಾಗುತ್ತದೆ. ಒಟ್ಟು ಸಾಲಿನ ಧ್ವನಿ ‘ಮೊದಲು ದೀಪವನ್ನು ಆರಿಸುತ್ತೇನೆ. ಇಲ್ಲದಿದ್ದರೆ ಅವಳನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವಳನ್ನು ನೋಡಿದಾಕ್ಷಣ ನನ್ನ ಮನಸ್ಸು ಕರಗಿ ಹೋಗುತ್ತದೆ. ಹಾಗಾಗಿ ಅವಳನ್ನು ಕತ್ತಲಲ್ಲಿಯೇ ಕೊಲ್ಲಬೇಕು. ಆ ಕತ್ತಲಲ್ಲಿ ಅವಳ ಜೀವದ ದೀಪವನ್ನು ಆರಿಸಬೇಕು. ಅದರಿಂದ ನನ್ನ ಜೀವನವೂ ಕತ್ತಲಾಗಿ ಹೋಗುತ್ತದೆ ಎಂದಾಗುತ್ತದೆ. ಅವನ ಆ ಕ್ಷಣದ ದುಃಖ, ಸಂಕಟ, ತೊಳಲಾಟ ಎಲ್ಲವೂ ವ್ಯಕ್ತವಾಗುತ್ತದೆ. ಒಥೆಲೊ ರಂಗದ ಮೇಲೆ ಈ ಮಾತನ್ನಾಡಿದಾಗ ಅಲ್ಲಿ ಎದುರಿಗೆ ಪ್ರತ್ಯಕ್ಷವಾಗಿ ಮೇನದ ಬತ್ತಿ ಕಾಣುತ್ತಿದ್ದು, ದೀಪವಾರಿಸುವುದು ಒಂದು ನಿತ್ಯ ವಿಧಿಯಾಗಿದ್ದು, ಒಟ್ಟು ಅನುಭವದ ಅವನ ಮನಸ್ಸಿಗೂ ಒಂದು ಕೊಕ್ಕೆಯಾಗಿ ಬೀಳಲುಸ ಸಾಧ್ಯವಾಗುತ್ತದೆ. ಮಾತಿನ ವಕ್ರಾರ್ಥವನ್ನು ಇಷ್ಟು ಚೆನ್ನಾಗಿ ದುಡಿಸಿಕೊಂಡ ಷೇಕ್ಸ್‌ಪಿಯರ್ ಮಾತಿನ ಸಹಜತೆಯನ್ನೂ ಅಷ್ಟೇ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಕಿಂಗ್ ಲಿಯರ್‌ನಲ್ಲಿ ಲಿಯರ್ ಮಗಳು ಕಾರ್ಡೀಲಿಯಾಗೆ ‘ಪ್ರೇ ಅನ್‌ಬಟನ್‌ಮಿ’ (ದಯೆಯಿಟ್ಟು ಗುಂಡಿ ಬಿಚ್ಚು) ಎಂದು ಹೇಳುತ್ತಾನೆ. ಅದ್ಭುತವಾದ ಸಾಲು ಇದು, ಇಂಥದ್ದು ಜನಪ್ರಿಯ ಕಲೆಯಲ್ಲಿ ಇರುವುದಿಲ್ಲ. ಜನಪ್ರಿಯ ಸಿನೆಮಾ, ಸಾಹಿತ್ಯ, ನಾಟಕ ಸಲೀಸಾಗಿ ಮನಸ್ಸನ್ನು ದ್ರವಿಸುತ್ತಿರುತ್ತದೆ. ಒಂದು ತೆಳು ಅನುಭವವನ್ನು ಪದೇ ಪದೇ ನೀಡುತ್ತ ರಂಪ ಮಾಡುತ್ತಿರುತ್ತದೆ. ಜನಪ್ರಿಯ ಕಲೆಯ ಸ್ವರೂಪವೇ ಈ ರೀತಿಯಾಗಿ ಒಂದು ಅಪೇಕ್ಷೆಯನ್ನು ಕೆರಳಿಸಿ, ಅದನ್ನು ತಣಿಸಿ ಆದ ಮೇಲೆ ಮತ್ತೂ ಹೆಚ್ಚು ಅಪೇಕ್ಷೆಗಳನ್ನು ಕೆರಳಿಸುವುದಾಗಿದೆ. ಉದಾಹರಣೆಯಾಗಿ, ಕಾಮುಕತೆ ಕೆರಳಿಸುವಂಥ ಪುಸ್ತಕಗಳಿವೆಯಲ್ಲ, ಅವು ಬರೆಯುವುದಕ್ಕೆ ಅಸಾಧ್ಯವಾದ ಪುಸ್ತಕಗಳು. ಯಾಕೆಂದರೆ ಓದುಗನನ್ನು ಓದುವ ಸಮಾಧಾನವೂ ಇರುವುದಿಲ್ಲ. ಆದ್ದರಿಂದ ಅಂಥ ಪುಸ್ತಕಗಳನ್ನು ಇನ್ನೂ ಹೆಚ್ಚು ರೋಚಕವಾಗಿಸಬೇಕಾಗುತ್ತದೆ. ಹಾಗಾಗಿ ಜನಪ್ರಿಯ ಕಲೆ ತನ್ನನ್ನು ಉಳಿಸಿಕೊಳ್ಳಲು, ತನ್ನ ಗಿರಾಕಿ ವರ್ಗವನ್ನು ಉಳಿಸಿಕೊಳ್ಳಲು ಹೆಚ್ಚು ಹೆಚ್ಚು ಲಂಪಟವಾಗುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ.

ಆದರೆ ಯಾವಾಗ ನಾವು ನಮ್ಮ ಮನಸ್ಸಿನಲ್ಲಿರುವುದನ್ನು ವಿಸ್ತರಿಸಲು ಸಾಧ್ಯವಾಗುತ್ತದೋ ಆಗ ಕಲೆ ಹುಟ್ಟುತ್ತದೆ. ನಡೆಯುವಾಗ ನಾವು ಒಂದು ಗುರಿಗೆ ಹೋಗುತ್ತೇವೆ, ಗುರಿಯ ದಾರಿ ಹಿಡಿದು ನಡೆಯುತ್ತೇವೆ. ಆದರೆ ಅದೇ ಕಾಲುಗಳನ್ನು ಇನ್ನೊಂದು ರೀತಿಯಲ್ಲಿ, ಯಾವ ವ್ಯವಹಾರಿಕ ಗುರಿಯೂ ಇಲ್ಲದೆ ಬಳಸಿದಾಗ ಅದು ನೃತ್ಯವಾಗುತ್ತದೆ. ಹಾಗೆಯೇ ಸ್ವರ ಸಂಗೀತವಾಗುತ್ತದೆ. ಕಲೆ ಮೂಡುತ್ತದೆ. ಈ ಕ್ರಿಯೆಗಳನ್ನು ವಿಸ್ತರಿಸಲು ಸಾಧ್ಯವಿರುತ್ತದೆ, ಕಾರಣ ವಿಸ್ತರಿಸಿದಷ್ಟೂ ಅವು ನಮಗೆ ಹೊಸ ಹೊಸ ಅನುಭವವನ್ನು ನೀಡುತ್ತಿರುತ್ತವೆ. ಇಂಥ ಕಲಾತ್ಮಕ ಕ್ರಿಯೆ ನಮಗೆ ಭ್ರಮೆಯ ಸುಖವನ್ನು ನೀಡದೆ, ನಮ್ಮ ಅಪೇಕ್ಷೆಯಂತೆ ನಡೆಯದೆ, ನಮ್ಮ ಬಯಕೆಗೆ ವಿರುದ್ಧವಾದದ್ದನ್ನೆ ಕೊಟ್ಟಿರುತ್ತದೆ. ಹಗಲುಗನಸಿನಂತೆ ಸಮಾಧಾನ ನೀಡದೆ ಷಾಕ್ ಕೊಡುವ ಕೊಕ್ಕೆಯ ಕೆಲಸ ಮಾಡಿರುತ್ತದೆ. ಆದರೆ ಇನ್ನೊಂದು ವಿಚಿತ್ರ ವಿಷಯ ಗಮಿನಿಸಿ: ಹೀಗೆಲ್ಲ ಮಾಡುವಂಥ ಕೃತಿಯನ್ನು ಸೃಷ್ಟಿಸುವ ಲೇಖಕ ಕೂಡ ಎಷ್ಟೋ ಸಲ ಇತರರಂತೆಯೇ ಹಗಲುಗನಸನ್ನು ಬಯಸುವವನೂ, ಸಲೀಸಾಗಿ ಹೇಳಬೇಕೆಂದು ಇಷ್ಟಪಡುವವನೂ ಆಗಿರುತ್ತಾನೆ. ಬಹಳ ಒಳ್ಳೆಯ ಲೇಖಕರು ತಾವು ಓದುವಾಗ ಬಹಳ ಅಗ್ಗದ ಬರಹಗಳನ್ನೇ ಇಷ್ಟಪಡಬಹುದು, ಒಳ್ಳೆಯ ಕ್ರಿಕೆಟ್ ಆಟಗಾರ  ಬಿಡುವಿನಲ್ಲಿ ಗಾಲ್ಫ್ ಆಡಲು ಇಷ್ಟಪಡುವಂತೆ, ಅದು ಬೇರೆ ವಿಷಯ. ಆದರೆ ಅಂಥ ಮನುಷ್ಯನೂ ಹೊಸತನ್ನು ಸೃಷ್ಟಿ ಮಾಡಲು ಯತ್ನಿಸುವಾಗ, ಅವನಲ್ಲಿ ನಾವು ಈವರೆಗೆ ಕಂಡ ಎಲ್ಲ ಶಕ್ತಿಗಳೂ ಇರಬೇಕಾಗುತ್ತದೆ.

ಹೀಗೆ ಹೊಸ ಸಂವೇದನೆ, ಹೊಸ ಪ್ರಜ್ಞೆಯನ್ನು ಸೃಷ್ಟಿಸಬಲ್ಲ ಶಕ್ತಿ ಎಲ್ಲ ಕಲಾಪ್ರಕಾರಗಳಿಗೂ ಇರುತ್ತದೆ. ನಾನು ಕೆಲವು ದಿನಗಳ ಹಿಂದೆ ಚಿಕಾಗೋ ನಗರದಲ್ಲಿ ಗಿರೀಶ್ ಕಾರ್ನಾಡರ ನಾಗಮಂಡಲ ನಾಟಕವನ್ನು ನೋಡಿದ. ಅಲ್ಲಿಯವರೆಗೆ ಅದು ಅತ್ಯಂತ ಹೊಸತಾದ, ಆಧುನಿಕವಾದ ಅನುಭವವಾಗಿತ್ತು. ನಾನು ಅವರಿಗೆ ಹೇಳಿದೆ ‘ದಿಸ್ ಈಸ್‌ಓಲ್ಡ್ ಹ್ಯಾಟ್ ಇನ್ ಕರ್ನಾಟಕ’ ಎಂದು. ನೀವು ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸಿರಬಹುದು, ನಮ್ಮಲ್ಲಿ ಯಾವತ್ತೂ ಕ್ಲಾಸಿಕಲ್ ಸಂಸ್ಕೃತಿ – ಜಾನಪದ ಸಂಸ್ಕೃತಿಗಳು, ಸಂಸ್ಕೃತ ಸಾಹಿತ್ಯ – ದೇಶೀ ಸಾಹಿತ್ಯಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿದ್ದವು. ಒಂದು ಆರೋಗ್ಯವಂತ ಸಮತೋಲನವನ್ನು ಕಾಪಾಡಿಕೊಳ್ಳುತ್ತಿದ್ದವು. ಕಾರ್ನಾಡರ ನಾಗಮಂಡಲ ನೋಡುವಾಗ ನನಗೆ ಇದೆಲ್ಲ ನೆನಪಿಗೆ ಬಂದಿತು, ಅಹಲ್ಯೆಯ ಕಥೆ ನೆನಪಾಯಿತು. ಆದರೆ ಈ ನಾಟಕದಲ್ಲಿ ಗಂಡ ಆಕೆಗೆ ಮೋಸ ಮಾಡುತ್ತಿರುತ್ತಾನೆ, ಒಬ್ಬ ಸೂಳೆಯನ್ನು ಇಟ್ಟುಕೊಂಡಿರುತ್ತಾನೆ, ಗಂಡ ಹೊರಗಡೆ ಹೋದಾಗ ಹಿಂದುಗಡೆ ಇರುವ ಒಂದು ಸಪ ಆಕೆಯ ಬಳಿ ಬರುತ್ತಾನೆ, ಅಹಲ್ಯೆಯ ಬಳಿ ಇಂದ್ರ ಬಂದಂತೆಯೆ ಬರುತ್ತಾನೆ. ಅವಳಿಗು ಗೊತ್ತು, ಈತ ತನ್ನ ಗಂಡನಲ್ಲ ಎಂದು, ಆದರೂ ನಂಬಿ ಅವನನ್ನು ಕೂಡುತ್ತಾಳೆ. ಮಗುವನ್ನು ಪಡೆಯುತ್ತಾಳೆ, ಆದರೆ ಈ ಕಥೆಯ ಮಟ್ಟಿಗೆ ಮಾತ್ರ ಆಕೆ ಕಲ್ಲಾಗುವುದಿಲ್ಲ. ಕೊನೆಗೆ ಗಂಡನೇ ಸೋತುಬಿಡುತ್ತಾನೆ. ಆಖೆ ಮಗುವನ್ನು ಪಡೆಯುತ್ತಾಳೆ, ಗಂಡನನ್ನೂ ಪಡೆಯುತ್ತಾಳೆ, ತನ್ನ ಗಂಡನ ಸೂಳೆಯನ್ನು ತನ್ನ ಸೇವಕಿಯಾಗಿ ಇಟ್ಟುಕೊಳ್ಳುತ್ತಾಳೆ. ಈ ಜಾನಪದ ಕಥೆಯಲ್ಲಿ ನಮ್ಮ ಸಂಸ್ಕೃತ ಸಾಹಿತ್ಯದಲ್ಲಿ ಕಂಡುಬರುವ ಪುನರ್ಜನ್ಮವಾಗಲಿ, ಪಾಪಪ್ರಜ್ಞೆಯಾಗಲಿ ಇಲ್ಲವೇ ಇಲ್ಲ. ಇಂಥ ವಿಭಿನ್ನವಾದ, ಪರಸ್ಪರ ವಿರುದ್ಧ ಆದರೂ ಪೂರಕವಾದ ಪರಂಪರೆಗಳು ನಮ್ಮಲ್ಲಿ ಒಟ್ಟೊಟ್ಟಿಗೆ ಇರುವುದು ಕಂಡುಬರುತ್ತದೆ. ನಾವು ಈ ಮೊದಲು ಚರ್ಚಿಸಿದ ದೃಷ್ಟಿ ಇದ್ದ ಮನುಷ್ಯನಿಗೆ ನಮ್ಮ ಸಂಸ್ಕೃತದ ಹಾಗೆಯ ನಮ್ಮಜಾನಪದ ಪರಂಪರೆಗಳಲ್ಲಿ ತನಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಪಾಶ್ಚಾತ್ಯ ಪ್ರಭಾವದಿಂದ ಹೆಚ್ಚು ಹೆಚ್ಚು ಮುಕ್ತವಾಗುವ ಪ್ರಯತ್ನದಲ್ಲಿರುವ ನಮಗೆ ಇದು ನಮ್ಮ ಸ್ವಂತದ ಪ್ರಭೆಯನ್ನು ಕಟ್ಟಿಕೊಳ್ಳುವಲ್ಲಿ ಮಾರ್ಗದರ್ಶಕವಾಗಬಲ್ಲದು. ಇಂತಹ ಒಂದು ಸಂದರ್ಭದಲ್ಲಿ ಇಂದಿನ ಕನ್ನಡ ಸಾಹಿತ್ಯ, ಕನ್ನಡ ರಂಗಭೂಮಿ, ಕನ್ನಡ ಸಿನಿಮಾ ಇವೆ. ಇವುಗಳನ್ನು ಗಾಢಗೊಳಿಸಿಕೊಳ್ಳುವುದು ಹೇಗೆ, ಇವುಗಳನ್ನು ಸ್ವೀಕರಿಸುವಂಥ ಸಹೃದಯರನ್ನು ಪಡೆದುಕೊಳ್ಳುವುದು ಹೇಗೆ – ಎನ್ನುವ ನಮ್ಮ ಹುಡುಕಾಟದ ಹೆಜ್ಜಗಳಾಗಿ ಇಂಥ ಶಿಬಿರಗಳು ನಡೆಯುತ್ತಿರುತ್ತವೆ.

—-
ಗ್ರಂಥ : ಬೆತ್ತಲೆ ಪೂಜೆ ಯಾಕೆ ಕೂಡದು? ಪುಟ, ೧೮೩೧೯೩

* * *