ವಿಶಾಲವಾದ ಅರ್ಥದಲ್ಲಿ ನಾನು ‘ಬ್ರಾಹ್ಮಣ’ ಎಂಬ ಶಬ್ದವನ್ನು ಅತಿ ಶಿಷ್ಟತೆಗೆ ಸಂಕೇತವಾಗಿಯೂ, ‘ಶೂದ್ರ’ ಶಬ್ದವನ್ನು ಶಿಷ್ಟತೆಯ ಸಂಕೋಚಗಳಾಚೆ ಸದಾ ಜಾಗೃತವಾಗಿ ಅಡಗಿರುವ ಪ್ರಾಕೃತ ಪ್ರವೃತ್ತಿಗಳಿಗೆ ಸಂಕೇತವಾಗಿಯೂ ಬಳಸಿದ್ದೇನೆ. ಈ ಸಾಂಕೇತಿಕ ಅರ್ಥಕ್ಕೆ ಪೋಷಕವಾಗುವಂತೆ ಸಂಕುಚಿತವಾದ ಅರ್ಥದಲ್ಲೂ ನಾನು ಬ್ರಾಹ್ಮಣ – ಶೂದ್ರ ದ್ವಂದ್ವಗಳನ್ನು ಬಳಸಲು ಹಿಂಜರಿಯುವುದಿಲ್ಲವೆಂದು ಹೇಳಲು ಬಯಸುತ್ತೇನೆ. ‘ಬ್ರಾಹ್ಮಣ’ ಶಬ್ದವನ್ನು ಉಪಯೋಗಿಸುವಾಗ ಶೂದ್ರ ಮತ್ಸ್ಯಗಂಧಿಯನ್ನು ಸುಗಂಧಿಯನ್ನಾಗಿ ಮಾಡಿದ ಪರಾಶರರಂತಹ ಪುರಾತನ ಋಷಿ ಬ್ರಾಹ್ಮಣರು ನನ್ನ ದೃಷ್ಟಿಯಲ್ಲಿಲ್ಲ; ಆದರೆ ಶಿಕ್ಷಿತರಾದ ಎಲ್ಲ ವರ್ಗದ ವರ್ಣದ ಜನ – ಈಗಿನ ನವ ಬ್ರಾಹ್ಮಣರು ಕೂಡಿ ನನ್ನ ದೃಷ್ಟಿಯಲ್ಲಿದ್ದಾರೆ. ಇವರಿಗೆ ಅಂದರೆ ಹಿಂದೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯಗಳಿಂದ ಮಾತ್ರ ಪ್ರಭಾವಿತರಾದ ಲೇಖಕರಿಗಾಗಲಿ ಅಥವಾ ಈಚೆಗೆ ನೌಕರಿಗೆಂದು ಇಂಗ್ಲಿಷ್ ಭಾಷೆಯ ಮೂಲಕ ಶಿಕ್ಷಿತರಾದ ವರ್ಗಕ್ಕಾಗಲಿ ತಮ್ಮ ಪ್ರಜ್ಞೆಯ ಪರಿಮಿತಿಯಲ್ಲೆ ಜೀವನವನ್ನು ಅಖಂಡವಾಗಿ ಗ್ರಹಿಸಲು ಅಸಾಧ್ಯವೆಂದು ನನ್ನ ಮತ.

ಬ್ರಾಹ್ಮಣರಲ್ಲಿ – ಅಂದರೆ ಭಾರತದ ಶಿಕ್ಷಿತ ಮಂದಿಯಲ್ಲಿ – ನಯನಾಜೂಕಿದೆ, ಹರಿತವಾದ ಬುದ್ಧಿಶಕ್ತಿ ಜಾಣ್ಮೆಗಳಿವೆ; ಆದರೆ ದೈಹಿಕವಾಗಿ ವ್ಯಕ್ತವಾಗುವ ಸಹಜ ಸ್ಫೂರ್ತಿಯಾಗಲಿ ಮಣ್ಣಿನ ಸಂಪರ್ಕದಿಂದ ಒದಗಿಬರುವ ಪ್ರಕೃತಿಪ್ರೇರಣೆಯಾಗಲಿ ಇಲ್ಲ. ಶೂದ್ರನ ಅನುಭವದಲ್ಲಿ ಮಣ್ಣಿನ ವಾಸನೆ ಇದೆ; ಆದರೆ ಹರಿತವಾದ ಬುದ್ಧಿಶಕ್ತಿ ಜಾಣ್ಮೆಗಳಿಂದ ಅದು ಜಾಗೃತವಾಗಿಲ್ಲ. ಗುಂಪುಗೂಡಿ ಕುಣಿಯಬಲ್ಲ, ಹಾಡಬಲ್ಲ. ಜಾನಪದ ಸಂಸ್ಕೃತಿಯನ್ನು ಮತ್ತು ಕನ್ನಡ ಭಾಷೆಯನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿರುವ ಜನರು ನಿಶ್ಚಿತ ಬುದ್ಧಿಯಿಂದ ಯೋಚನೆ ಮಾಡಲಾರರು. ಅಂತೆಯೇ ಶಿಕ್ಷಿತ ವರ್ಗದಲ್ಲಿ ಹುಟ್ಟಿಬಂದಿರುವ ಮಂದಿ ನಾಡಿನ ಭಾಷೆಗೆ, ಜಾನಪದ ಸಂಸ್ಕೃತಿಯ ವೀರ್ಯಕ್ಕೆ ಪರಕೀಯರಾದವರು. ಹುಟ್ಟಿನ ಮೂಲಕವೆ ಮನುಷ್ಯನ ಮೂಲಪ್ರಕೃತಿ ಕೂಡ ನಿರ್ಧರಿಸಲ್ಪಡುವ ವರ್ಣಭೇದದ ಸಮಾಜದಲ್ಲಿ, ದೇಹದ ಜೀವಂತತನದಿಂದ ಹೊಮ್ಮುವ ಸಹಜ ಸ್ಫೂರ್ತಿ ಮತ್ತು ಬುದ್ಧಿಶಕ್ತಿಯಿಂದ ಹುಟ್ಟುವ ಕೌಶಲಗಳು ಪರಸ್ಪರ ಪರಕೀಯವಾಗುಷ್ಟು ಇನ್ನು ಯಾವ ಸಮಾಜದಲ್ಲೂ ಆಗಲಾರದು. ಭಾರತದ ಪ್ರತಿಭೆ ಕೊಳೆಯುತ್ತಿರುವುದಕ್ಕೆ, ಸೊರಗಿರುವುದಕ್ಕೆ ಇದು ಒಂದು ಮುಖ್ಯ ಕಾರಣ.

ಹೀಗೆ ನಾಡಿನ ಭಾಷೆಯ ಸತ್ವಕ್ಕೆ ಮತ್ತು ಜಾನಪದ ಸಂಸ್ಕೃತಿಗೆ ಹುಟ್ಟಿನಿಂದ ಮತ್ತು ಶಿಕ್ಷಣದಿಂದ ಹೊರಗಾಗುತ್ತ ಹೋದುದು ಲೇಖಕನಾದ ನನಗೆ ಸ್ವಂತ ಜೀವನದಲ್ಲಿ ಅತ್ಯಂತ ಸಂಕಟದ ಪರಕೀಯತೆಯ ಅನುಭವವಾಗಿದೆ. ಹೀಗೆಯೇ ಶೂದ್ರನಾಗಿ ಹುಟ್ಟಿ ಬೌದ್ಧಿಕ ಜಗತ್ತನ್ನೆಲ್ಲ ಶ್ರಮಪೂರ್ವಕವಾಗಿ ಮಾತ್ರ ಗಳಿಸಿಕೊಳ್ಳಬೇಕಾದ ಲೇಖಕನಿಗೆ ಇನ್ನೊಂದು ರೀತಿಯ ಪರಕೀಯತೆಯ ಅನುಭವವೂ ಆಗಬಹುದು. ವರ್ಗಭೇದವಿರುವ ಸಮಾಜದಲ್ಲಿ ಹುಟ್ಟಿ ಬಂದ ಲೇಖಕ – ಉದಾಹರಣೆಗೆ ಲಾರೆನ್ಸ್ – ಒಂದು ವರ್ಗದಿಂದ ಇನ್ನೊಂದು ವರ್ಗದ ಅನುಭವ ಲೋಕಕ್ಕೆ ಸಂಚರಿಸುವಷ್ಟು ಸುಲಭವಾಗಿ ವರ್ಣಭೇದವಿರುವ ಭಾರತದಂತಹ ನಾಡಿನಲ್ಲಿ ಬರೆಯುವ ಲೇಖಕ ಇನ್ನೊಂದು ವರ್ಣದವರ ಅನುಭವವನ್ನು ತನ್ನದಾಗಿಸಿಕೊಳ್ಳಲಾರ. ದಟ್ಟವಾದ ಜಾನಪದ ಸಂಸ್ಕೃತಿಗಳನ್ನು ಪಡೆದು ಉತ್ತರ ಕರ್ನಾಟಕ ಮತ್ತು ಮಲೆನಾಡುಗಳಲ್ಲಿ ಹುಟ್ಟಿಬಂದ ಲೇಖಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಅನುಭವದ ಕೊರತೆ ತಟ್ಟುವುದು ಮೈಸೂರು ಬೆಂಗಳೂರಿನಂತಹ ಪಟ್ಟಣಗಳಲ್ಲಿ ಹುಟ್ಟಿ ಬೆಳೆಯುವ ಲೇಖಕರಿಗೆ. ಕನ್ನಡದಲ್ಲಿ ಕಾದಂಬರಿ ಅನುಭವದ ದಟ್ಟತೆ ಮತ್ತು ವಿಶಾಲತೆಯ ದೃಷ್ಟಿಯಿಂದ ಸೊರಗಿರಲು ಮುಖ್ಯ ಕಾರಣ ಇದು.

ಎಲ್ಲ ಸಮಾಜದಲ್ಲೂ ಲೇಖಕರು ಪರಕೀಯತೆಯನ್ನು ಅನುಭವಿಸಿದ್ದಾರೆ. ಯುರೋಪ್ ಸಾಹಿತ್ಯ ಚರಿತ್ರೆಯಲ್ಲಿ ವರ್ಗಭೇದದರಿಂದ ಉಂಟಾದ ಪರಕೀಯತೆಯಿಂದ ಬಿಡಿಸಿಕೊಳ್ಳಲೆಂದು, ಲೇಖಕರು ತಮ್ಮಪ್ರಜ್ಷೆಯನ್ನು ವಿಸ್ತರಿಸಿಕೊಳ್ಳಲೆಂದು ನಡೆದ ಅನೇಕ ಚಳವಳಿಗಳನ್ನು ನಾವು ನೋಡಬಹುದು; ಸಾಹಿತಿಯ ಶಿಕ್ಷಿತ ಪ್ರಜ್ಞೆ ಅತಿ ಶಿಷ್ಟಿತವಾದಾಗಲೆಲ್ಲ ಅದರ ಕಸುವು, ಗ್ರಹಿಕೆಯ ವಿಸ್ತಾರ ಕಡಿಮೆಯಾಗುತ್ತದೆ. ಶಿಷ್ಟ ಸಮಾಜದಲ್ಲಿ ಬದುಕುವ ಮನುಷ್ಯನಿಗೆ ತನ್ನಲ್ಲಿರುವ ಪ್ರಾಕೃತ ಪ್ರವೃತಿಗಳ ಬಗ್ಗೆ ಅರಿವು ಇರಬೇಕಾದ್ದು ಅವನು ತನ್ನ ಸಂವೇದನೆಗಳನ್ನು ಜೀವಂತವಾಗಿ ಉಳಿಸಿಕೊಳ್ಳಲು ಅವಶ್ಯ. ಶಿಕ್ಷಿತಪ್ರಜ್ಞೆ ಮಾತ್ರದಿಂದ ಹುಟ್ಟುವ ಸಾಹಿತ್ಯ ಮಣ್ಣಿನ ವಾಸನೆ ಕಳೆದುಕೊಂಡು ನಿರ್ವೀರ್ಯವಾಗುತ್ತದೆ. ಆದ್ದರಿಂದಲೇ ವರ್ಡ್ಸ್‌ವರ್ತನು ಸಾಮಾನ್ಯ ಮನುಷ್ಯನಿಗಿರುವ ನೆಲದಲ್ಲಿ ಊರಿದ ಬೇರುಗಳು ತನಗೂ ಬೇಕೆಂದು ಬಯಸಿದ್ದು. ಹಾಗೆಯೇ ಈ ಶತಮಾನದ ಪಾಶ್ಚಿಮಾತ್ಯ ಲೇಖಕರಿಗೆ ತಮ್ಮ ನಾಗರಿಕ ಜೀವನದ ಪ್ರಜ್ಞೆ ಬಂಜೆಯೆನ್ನಿಸಿ ತಮ್ಮ ಜಾಗೃತಪ್ರಜ್ಞೆಯ ಅಂತರಾಳದಲ್ಲಿ ಅಡಗಿದ ಸುಪ್ತಪ್ರಜ್ಞೆಯನ್ನು ಶೋಧಿಸಬೇಕು ಎನ್ನಿಸಿದ್ದು. ‘ಬ್ರಾಹ್ಮಣ’ – ‘ಶೂದ್ರ’ಗಳ ಸಂಗಮಕ್ಕೆ ಸಂಕೇತವಾಗಿ ಶಿಕ್ಷಿತ ಸಮಾಜದ ಲೇಡಿ ಚಾರ್ಲೆಗೆ ತೋಟ ಕಾಯುವವನೊಬ್ಬನಿಂದ ಲಾರೆನ್ಸಿನ ಕಾದಂಬರಿಯಲ್ಲಿ ಗರ್ಭಾದಾನವಾಗುತ್ತದೆ. ಅವಳನ್ನು ಮದುವೆಯಾದ ಸುಶಿಕ್ಷಿತ ಗಂಡ ನಪುಂಸಕನಾಗಿರುವುದು ಕೂಡ ಈ ಕಾದಂಬರಿಯಲ್ಲಿ ಅರ್ಥಪೂರ್ಣವಾಗಿದೆ.

‘ಶೂದ್ರ’ ಮತ್ತು ‘ಬ್ರಾಹ್ಮಣ’ ಒಂದಕ್ಕೊಂದು ಹೊರತಾಗಿ ಉಳಿಯದೆ ಇರುವುದರಿಂದಲೇ, ಪರಸ್ಪರ ಪರಕೀಯವಾಗಿಲ್ಲದಿರುವುದರಿಂದಲೇ ರಾಮಾಯಣ ಮತ್ತು ಮಹಾಭಾರತಗಳು ಓಜಸ್ಸಿನ, ಅಖಂಡ ಪ್ರಜ್ಞೆಯ ಕೃತಿಗಳಾಗಿವೆ. ಬರಿಯ ಶೂದ್ರ ಪ್ರಜ್ಞೆಯಿಂದ ಜಾನಪದ ಸಾಹಿತ್ಯ ಸೃಷ್ಟಿಯಾಗುತ್ತದೆ; ಬರಿಯ ಬ್ರಾಹ್ಮಣ ಪ್ರಜ್ಞೆಯಿಂದ ನಿರ್ವೀರ್ಯವಾದ, ನಯನಾಜೂಕಿನ, ಸ್ನಾಯುಶಕ್ತಿಹೀನವಾದ ಸಾಹಿತ್ಯ ಹೊರಬರುತ್ತದೆ. ಆದರೆ ಇವೆರಡೂ ಕೂಡಿದಾಗ ಮಾತ್ರ ಅಖಂಡ ಪ್ರಜ್ಞೆಯ ಸಾಹಿತ್ಯ ಸಾಧ್ಯವಾಗುತ್ತದೆ.

ಈ ಬ್ರಾಹ್ಮಣ – ಶೂದ್ರ ಪ್ರಜ್ಞೆಗಳ ಎರಡು ಲೋಕಗಳನ್ನು ಸಂಸ್ಕೃತ – ಕನ್ನಡ, ಇಂಗ್ಲಿಷ್ – ಕನ್ನಡ ಭಾಷಾದ್ವಂದ್ವಗಳಲ್ಲೂ ಕಾಣುತ್ತೇವೆ. ನಮ್ಮಲ್ಲಿ ಹುಟ್ಟಿದ ಮತಾಚಾರ್ಯರು ಮತ್ತು ತಾತ್ವಿಕರು ತಮ್ಮ ಬುದ್ಧಿಯ ಕೆಲಸಕ್ಕೆ ಹಿಂದೆ ಸಂಸ್ಕೃತವನ್ನು ಮಾಧ್ಯಮವಾಗಿ ಉಪಯೋಗಿಸಿದರು; ಈಗಿನ ಜನ ಇಂಗ್ಲಿಷನ್ನು ಬುದ್ಧಿಯ ಮಾಧ್ಯಮವಾಗಿ ಬಳಸುತ್ತಿದ್ದಾರೆ. ಒಂದು ದೃಷ್ಟಿಯಿಂದ ನೋಡಿದರೆ ಓದು ಬರಹ ಬಾರದ ಅಶಿಕ್ಷಿತ ಜನರ ಏಕಮಾತ್ರ ಮಾಧ್ಯಮವಾದದ್ದರಿಂದಲೇ ಭಾರತೀಯ ಭಾಷೆಗಳು ಉಳಿದು ಬಂದುವು ಎನ್ನಬೇಕು. ಆದ್ದರಿಂದ ಕನ್ನಡದಂತಹ ಭಾಷೆಯಲ್ಲಿ ಹಿಂದಿನಿಂದಲೂ ಬರೆಯುತ್ತ ಬಂದವರು ಸಂಸ್ಕೃತ ಭಾಷೆಯಿಂದ ತಮಗೆ ಒದಗಿಬಂದ ವಿಚಾರವನ್ನು ಕನ್ನಡದ ಜಾನಪದ ನೆಲದಿಂದ ತಾವು ಪಡೆದ ಸಂವೇದನೆಗಳ ಜೊತೆ ಅನಿವಾರ್ಯವಾಗಿ ಬೆಸೆಯಬೇಕಾಯಿತು. ಅಶಿಕ್ಷತರು ಉಳಿಸಿಕೊಂಡು ಬಂದಿರುವ ಭಾಷೆಯ ಜೊತೆ ಜೀವಂತ ಸಂಪರ್ಕವಿರುವವನು ಮಾತ್ರ ಕನ್ನಡದಲ್ಲಿ ಸತ್ವಪೂರ್ಣವಾಗಿ ಬರೆಯಬಲ್ಲ.

ಈ ವಿಚಾರವನ್ನು ನಾನು ನವ್ಯ ಸಾಹಿತ್ಯ ದೃಷ್ಟಿಯಿಂದ ಮಾತ್ರ ಮಾಡುತ್ತಿಲ್ಲ. ವಚನಕಾರರ ಕೃತಿಗಳು ಸಮಾಜಕ್ರಾಂತಿಯ ಫಲವಾಗಿ. ‘ಶೂದ್ರ’ – ‘ಬ್ರಾಹ್ಮಣ’ಗಳು ಸಂಗಮಿಸಿ ಹುಟ್ಟಿದವುಗಳು. ಕಾರಂತರ ಅನೇಕ ಕಾದಂಬರಿಗಳಲ್ಲಿ ಶೂದ್ರ ಜೀವನಕ್ಕೆ ಅನಿವಾರ್ಯವಾಗಿ ಪರಕೀಯರಾಗದೆ ಉಳಿದ ಬೇಸಾಯದಿಂದ ಬದುಕುವವರ ಸುಖ ದುಃಖ ವಸ್ತುವಾಗುತ್ತದೆ. ಸತ್ವಯುತವಾಗಿ ಕನ್ನಡವನ್ನು ಬಳಸಬೇಕೆನ್ನುವ ಲೇಖಕರೆಲ್ಲರೂ ಬರಿಯ ಹಳ್ಳಿಗಳಲ್ಲಿ ಕನ್ನಡಭಾಷೆ ಜೀವಂತವಾಗಿರುವುದರಿಂದ ಹಳ್ಳಿಯ ಜೀವನವನ್ನೇ ತಮ್ಮ ಸಾಹಿತ್ಯದ ವಸ್ತುವಾಗಿ ಬಳಸಿಕೊಳ್ಳತೊಡಗಿದರು. ಬೇಂದ್ರೆಯವರ ಕವಿತೆಗಳಲ್ಲಿನ ಕಸುವು ಜಾನಪದ ಸಂಸ್ಕೃತಿಯಿಂದ ಬಂದದ್ದು. ತತ್ವ ಎಷ್ಟೇ ದೊಡ್ಡದಿರಲಿ, ವಿಚಾರ ಎಷ್ಟೇ ಗಹನವಿರಲಿ, ಸಂಸ್ಕೃತಮಯ ಪದಸರಣಿಯಲ್ಲಿ ವ್ಯಕ್ತಗೊಂಡಾಗ ನಮ್ಮನ್ನು ಅದು ಆಪ್ತವಾಗಿ ಮುಟ್ಟುವುದಿಲ್ಲ. ಬೇಂದ್ರೆಯವರಲ್ಲಾಗಲಿ ಉಳಿದ ಕವಿಗಳಲ್ಲಾಗಲಿ ‘ಬ್ರಾಹ್ಮಣ’ ವಿಚಾರ ಎಷ್ಟು ‘ಶೂದ್ರ’ ಭಾಷೆಯ ಮೃಣ್ಮಯತೆಯ ಮೂಲದಿಂದ ಹುಟ್ಟಿ ಬರುತ್ತದೋ ಅಷ್ಟು ಕಾವ್ಯಶಕ್ತಿಯಿಂದ ಕೂಡಿದ್ದಾಗಿದೆ ಎನ್ನಿಸುತ್ತದೆ. ಅಡಿಗರು ಕಾವ್ಯದಲ್ಲಿ ಮಣ್ಣಿನ ವಾಸನೆ ಹೊಡೆಯಬೇಕು ಎನ್ನುವಾಗ ಈ ಅಭಿಪ್ರಾಯವೇ ಹೊಮ್ಮುತ್ತದೆಂದು ನನ್ನ ಮತ. ತಮ್ಮ ಕಾವ್ಯದಲ್ಲಿ ಬ್ರಾಹ್ಮಣತ್ವವನ್ನು ಹೆಚ್ಚಿಸಿಕೊಳ್ಳುತ್ತ ಹೋದ ಕುವೆಂಪುರವರ ಸಂಸ್ಕೃತಮಯ ಭಾಷೆ ಈ ಕಾರಣದಿಂದಲೇ ನಮಗೆ ಕೃತಕವೆನ್ನಿಸುತ್ತದೆ. ಅದೇ ಅವರ ಕಾನೂರ ಹೆಗ್ಗಡತಿಯಲ್ಲಿ ಮಾತ್ರ ಭಾಷೆ ಮತ್ತು ಜೀವನದ ನಡುವೆ ನಿಕಟ ಸಂಪರ್ಕ ಸಾಧ್ಯವಾಗಿರುವುದರಿಂದ ಅವರ ಕಾದಂಬರಿ ಕನ್ನಡದಲ್ಲಿನ ಅತ್ಯಂತ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಬರಿಯ ಶಿಕ್ಷಿತ ಶಿಷ್ಟ ಪ್ರಜ್ಞೆಯ ಫಲವಾಗಿ ಹುಟ್ಟಿದ, ಮಣ್ಣಿನ ವಾಸನೆ ಹೊಡೆಯದ ಶ್ರೀ ವಿ.ಸೀ.ಯಂತಹವರ ಕಾವ್ಯ ಸಪ್ಪೆಯೆನ್ನಿಸುತ್ತದೆ. ಶ್ರೀ ಮಾಸ್ತಿ ಮತ್ತು ಶ್ರೀ ನರಸಿಂಹಸ್ವಾಮಿಗಳ ಹೊರತಾಗಿ ಇನ್ನು ಯಾರೂ ಶಿಷ್ಟಪ್ರಜ್ಞೆಯಿಂದಲೇ ಮನಸ್ಸನ್ನು ಮುಟ್ಟಬಲ್ಲಂತಹ ಕಾವ್ಯವನ್ನು ಬರೆದಿಲ್ಲವೆನ್ನುವುದು ಗಮನಾರ್ಹವಾದ ಸಂಗತಿ. ಇವರ ಕಾವ್ಯದಲ್ಲೂ ಸಹ ಕಸುವಿನ ಕೊರತೆ, ನೀರಸತೆ ಕೆಲವೊಮ್ಮೆ ಸ್ಪಷ್ಟವಾಗಿ ಕಂಡುಬರುತ್ತದೆ.

ಸಾಮಾಜಿಕ ಶಿಷ್ಟಾಚಾರಗಳ ನೆಪದಲ್ಲಿ ದಾಕ್ಷಿಣ್ಯವಶರಾಗದೆ, ಮನಸ್ಸಿನ ಸಂಕೋಚಗಳನ್ನು ಬಿಟ್ಟು ಅನುಭವದ ಆಮೂಲಾಗ್ರ ಪರಿಶೋಧನೆಯಲ್ಲಿ ತೊಡಗಿರುವ ನವ್ಯ ಲೇಖಕರಾದ ಕಂಬಾರ, ಲಂಕೇಶ್, ತೇಜಸ್ವಿಯಂತಹವರು ಈ ವರ್ಣಭೇದದ ಸಮಾಜದಲ್ಲಿ ಅನಿವಾರ್ಯ ವಾದ ಜೀವನಾನುಭವದ ಕ್ಷೀಣತೆಯನ್ನು ತಮ್ಮ ಕೃತಿಗಳ ಮೂಲಕ ಮೀರಲು ಪ್ರಯತ್ನಿಸುತ್ತಾರೆ. ಅಡಿಗರ ಭೂಮಿಗೀತವು ಕಾವ್ಯಭಾಷೆಯ (ಆದ್ದರಿಂದ ಅನುಭವದ) ವ್ಯಾಪ್ತಿಯ ಮೂಲಕ, ಜೀವಂತವಾದ ಲಯದ ವೈವಿಧ್ಯಗಳ ಮೂಲಕ ವರ್ಣಭೇದ ಸಮಾಜದ ಪರಸ್ಪರ ಹೊರತಾದ ಲೋಕಗಳನ್ನು ಭೇದಿಸಿಕೊಂಡು ಬಂದ ಕೃತಿಯಾಗಿದೆ. ರಾವಬಹಾದ್ದೂರರ ಗ್ರಾಮಾಯಣ ವರ್ಣಸಮಾಜದ ವಿವಿಧ ಅನುಭವಗಳನ್ನು ಒಂದು ಪ್ರಜ್ಞೆಯ ಆವೃತ್ತದಲ್ಲೇ ದಕ್ಕಿಸಿಕೊಂಡು ಸೃಷ್ಟಿಸುವ ಪ್ರಯತ್ನವಾಗಿದೆ. ಇನ್ನೊಂದು ದೃಷ್ಟಿಯಿಂದ ಶಾಂತಿನಾಥ ದೇಸಾಯಿ, ಚಿತ್ತಾಲ ಮತ್ತು ರಾಘವರ ಕತೆಗಳು; ಚನ್ನಯ್ಯ ಮತ್ತು ಲಂಕೇಶರ ಪದ್ಯಗಳು; ಶ್ರೀಕೃಷ್ಣ ಆಲನಹಳ್ಳಿಯಂತಹ ಕೆಲವು ಕಿರಿಯ ಲೇಖಕರ ನಿರ್ಭಯ ಕೃತಿಗಳು ಜಾತಿಪದ್ಧತಿ ಉಳಿಯಲೆಂದು ಮಾತ್ರ ನಾವು ಅಂಟಿಕೊಂಡಿರುವ ಸಾಮಾಜಿಕ ಶಿಷ್ಟಾಚಾರಗಳನ್ನು, ಸಂಕುಚಿತ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವ ದಿಟ್ಟ ಹೆಜ್ಜೆಗಳಾಗಿವೆ.

ನಾನು ನಮ್ಮ ಸಮಾಜದ ವರ್ಣಭೇದ ನೀತಿಯನ್ನು ದಕ್ಷಿಣ ಆಫ್ರಿಕಾದ ಅಪಾರ್ಥೈಡ್ ಧೋರಣೆಯನ್ನು ಎಷ್ಟು ಹೇಸಿಗೆಯಿಂದ ಕಾಣುತ್ತೇನೋ, ಅಷ್ಟೇ ಹೇಸಿಗೆಯಿಂದ ಮತ್ತು ಕ್ರೋಧದಿಂದ ಕಾಣುತ್ತೇನೆ. ಲೇಖಕನಾದ ನನಗೆ ವರ್ಣವಿಂಗಡಣೆಯಿಂದಾಗಿ ನನ್ನ ಅನುಭವದ ಲೋಕವೇ ಸಂಕುಚಿತವಾಗಿದೆ ಎಂಬ ದುಃಖವೂ ಈ ಕ್ರೋಧದ ಹಿಂದೆ ಅಡಗಿದೆ. ಭಾರತದ ಭಾಷೆಗಳಲ್ಲಿ ಬರೆಯುವುದರ ಮುಖಾಂತರ ಮಾತ್ರ ಈ ಪರಕೀಯತೆಯನ್ನು ನೀಗಿಕೊಂಡು ಜೀವನದ ಸಾಫಲ್ಯವನ್ನು ಸಾಧಿಸುವುದು ಸಾಧ್ಯವೆಂದು ನನ್ನ ಅಭಿಪ್ರಾಯ. ಆದ್ದರಿಂದ ಕನ್ನಡದಲ್ಲಿ ಸತ್ವಯುತವಾಗಿ ಬರೆಯುತ್ತಿರುವ ಲೇಖಕ ತನಗೆ ತಿಳಿದೋ ತಿಳಿಯದೋ – ಒಂದು ದೊಡ್ಡ ಸಾಮಾಜಿಕ ಕ್ರಾಂತಿಯಲ್ಲಿ ಭಾಗಿಯಾಗುತ್ತಿದ್ದಾನೆ.

—-
ಗ್ರಂಥ: ಪ್ರಜ್ಞೆ ಮತ್ತು ಪರಿಸರ, ಪುಟ, ೪೭೫೦

* * *