ಚಿನುವಾ ಅಚಿಬೆ ಜೊತೆ ಒಂದು ಸಂವಾದ

ಯು.ಆರ್. ಅನಂತಮೂರ್ತಿ: ನಿಮ್ಮ ‘ಥಿಂಗ್ಸ್ ಪಾಲ್ ಅಪಾರ್ಟ್’ ಕಾದಂಬರಿಯ ನಿರೂಪಣಾ ತಂತ್ರದಿಂದ ಆರಂಭಿಸೋಣ; ಅಲ್ಲಿನ ನಿರೂಪಕ ಒಂದುಹಂತದಲ್ಲಿ ಪಾತ್ರಿ ರೆವರೆಂಡ್ ಸ್ಮಿತ್‌ನ ಉತ್ಸಾಹಾತಿರೇಕವನ್ನು ಟೀಕಿಸುತ್ತಾ ನಿಷ್ಠ ಕ್ರೈಸ್ತನ ಹಾಗೆ ಕಾಣುತ್ತಾನೆ. ಅದೇ ಇನ್ನೊಂದು ಹಂತದಲ್ಲಿ ‘ಧರ್ಮನಿಷ್ಠರ ಗುಡಾರದಲ್ಲಿ ವಿವೇಕ ಉದಯಿಸಿತು. ಹಾಗಾಗಿ ಅನೇಕ ಜೀವಿಗಳು ಉಳಿದುಕೊಂಡವು’ ಎನ್ನುವಲ್ಲಿ ಕ್ರೈಸ್ತಧರ್ಮದ ಬಗ್ಗೆ ವ್ಯಂಗ್ಯವಾಡುತ್ತಾನೆ. ನಿಮ್ಮ ದೃಷ್ಟಿ ಕೋನಗಳ ಈ ಜಿಗಿತವನ್ನು ಹೇಗೆ ವಿವರಿಸುತ್ತೀರಿ?

ಚಿನುವಾ ಅಚಿಬೆ: ನಿರೂಪಕನ ವ್ಯಕ್ತಿತ್ವದ ಬಗ್ಗೆ ನನಗೇ ಪೂರ್ಣ ಖಾತ್ರಿಯಿಲ್ಲ. ಅಲ್ಲಲ್ಲಿ ಈ ಬಗೆಯ ಜಿಗಿತಗಳಿವೆ ನಿಜ. ಜನಾಂಗದ ಹಿರಿಯ ವಿವೇಕಿಗಳ ಧ್ವನಿಯಾಗಿ ಕಾಣುವ ಪ್ರಧಾನ ನಿರೂಪಕ ಒಬ್ಬನಿದ್ದಾನೆ. ಜೊತೆಗೆ ಅಲ್ಲಲ್ಲಿ ಹಣಕಿ ಹಾಕುವ ಬೇರೆ ಧ್ವನಿಗಳೂ ಇವೆ.

: ಅಲ್ಲದೆ, ಆಫ್ರಿಕಾ ವಿರುದ್ದ ಆಕ್ರಮಣ ಶಿಕ್ಷಣ ಹಣ ಧರ್ಮಗಳ ಮೂಲಕ ಯಶಸ್ವಿಯಾಯಿತು ಎಂದು ಹೇಳುವ ಸುಶಿಕ್ಷಿತ ಪರಕೀಯ ವಿಮರ್ಶಕನೊಬ್ಬನ ಧ್ವನಿಯೂ ಬಹುಶಃ ಇದೆ.

ಚಿ: ಕೆಲಸ ಮಾಡುವ ಪ್ರಜ್ಞೆ ಭೂತಕಾಲದಿಂದ, ಪರಂಪರೆಯಿಂದ ವರ್ತಮಾನಕ್ಕೆ ಬದಲಾಗುತ್ತದೆ. ಈ ಪ್ರಜ್ಞೆ ಹಲವಾರು ಸ್ತರಗಳನ್ನುಳ್ಳದ್ದು ಅನಿಸುತ್ತದೆ ನನಗೆ ಇಲ್ಲಿ. ಸಂಪ್ರಾದಯಕ್ಕೆ ಅಂಟಿಕೊಂಡವರಿದ್ದಾರೆ, ಐರೋಪ್ಯ ಪ್ರಜ್ಞೆಯನ್ನು ಆತುಕೊಂಡವರಿದ್ದಾರೆ. ಹಾಗೆಯೇ ಕತೆಯ ಓಟದೊಡನೆ ಮುಂದೆ ಸಾಗುವವರೂ ಇದ್ದಾರೆ. ಕಾದಂಬರಿಯಲ್ಲಿ ಇವರೆಲ್ಲರನ್ನೂ ಒಳಗೊಂಡು ಆಯಾ ಕ್ಷಣದ ಸ್ಥಾಯೀ ಭಾವಗಳನ್ನು ಬಿಂಬಿಸುವ ಮುಕ್ತ ಧ್ವನಿಯೊಂದಿದೆ. ಈ ಧ್ವನಿ ಆ ಗಳಿಗೆಯಲ್ಲಿ ಏನು ಸಂಭವಿಸುತ್ತೋ ಅದರಿಂದ ಪ್ರಭಾವಿತವಾಗುತ್ತದೆ. ಹಾಗಾಗಿ ಅದು ಇದ್ದ ರೂಪದಲ್ಲಿಯೇ ಜಡವಾಗಿ ಉಳಿಯುವುದಿಲ್ಲ. ಅಲ್ಲದೆ ಅಲ್ಲಿ ಒಂದು ಸಮುದಾಯದ ಮೌನ ಚಲನಶೀಲತೆಯೂ ಇದೆ. ಈ ಸಮುದಾಯದ ಚಲನೆ ಎಷ್ಟೇ ಕ್ಷೀಣವಾದದ್ದಾಗಿರಲಿ, ಅದು ಎತ್ತಲೋ ಚಲಿಸುತ್ತಿದೆಯೆನ್ನುವುದಂತೂ ನಿಜ.

: ಈ ಬಗೆಯ ನಿರೂಪಣಾ ಕ್ರಮ ಆಧುನಿಕ ಕಾದಂಬರಿಗಿಂತ ಮಹಾಕಾವ್ಯದಲ್ಲಿ ಹೆಚ್ಚು ಬಳಕೆಯಾಗುತ್ತದೆ……

ಚಿ: ಹೌದು, ಅದು ನಿಜ. ಅಲ್ಲಿನ ನಿರೂಪಕನ ಧ್ವನಿ ಆಚಿನದಲ್ಲ, ಅಲ್ಲೇ ಪಾಲ್ಗೊಳ್ಳುವಂಥವನದು.

: ಕಾದಂಬರಿಯಲ್ಲಿ ಓಕೊಂಕೋ (ಕಥಾನಾಯಕ)ನ ಮಗ ನೋಯೆ ಕ್ರೈಸ್ತ ಕವಿತೆಗಳಿಂದಾಗಿ ಕ್ರೈಸ್ತಧರ್ಮದತ್ತ ಆಕರ್ಷಿತನಾಗುತ್ತಾನೆಂದಿದೆ. ಬಲಿದಾನದ ಹೆಸರಿನಲ್ಲಿ ಇಕೆಮೆಹ್ಯೂನ್ ನಿರ್ದಯನಾಗಿ ಕೊಲೆಗೀಡಾಗುವ ಸನ್ನಿವೇಶದಿಂದ ಏಳುವ ಪ್ರಶ್ನೆಗೆ ಅವನು ಕ್ರೈಸ್ತಧರ್ಮದಲ್ಲಿ ಒಂದು ಬಗೆಯ ಉತ್ತರ ಕಂಡುಕೊಳ್ಳುತ್ತಾನೆ. ಈ ಕೊಲೆ ಒಂದು ಧಾರ್ಮಿಕ ಆಚರಣೆಯಾಗಿ ಸಮರ್ಥನೀಯವಾದರೂ ಮಾನವೀಯ ದೃಷ್ಟಿಯಿಂದ ಅಪರಾಧವೇ ಆದ್ದರಿಂದ ಓಕೊಂಕೋ ಕೂಡ ಕೆಲ ದಿನಗಳ ಕಾಲ ಚಿತ್ತಕ್ಞೋಭೆಗೆ ಒಳಗಾಗುತ್ತಾನೆ. ಆದರೂ ಅವನಿಗೆ ತನ್ನ ತಂದೆಯ ಹಾಗೆ ಮಗನೂ ಎಲ್ಲಿ ಹೆಣ್ಣಿಗನಾದಾನೋ, ತಮ್ಮ ಜನಾಂಗದ ಗಂಡು ಮೌಲ್ಯಗಳಿಂದ ಎಲ್ಲಿ ಹೊರತಾಗಿಬಿಟ್ಟಾನೋ ಎಂಬ ಚಿಂತೆಯೂ ಕಾಡುತ್ತಿರುತ್ತೆ. ಅಂದರೆ ಆ ಜನಾಂಗದೊಳಗೆ ಕ್ರೈಸ್ತರು ಕಾಲಿಡುವ ಮುನ್ನವೇ ತುಮುಲಗಳಿರುತ್ತವೆಂದು ತೋರಿಸುತ್ತೀರಿ. ಧರ್ಮಪ್ರಚಾರಕರು ಆ ತುಮುಲಗಳಿಗೆ ಗಾಳಿ ಹಾಕುವ ಕೆಲಸವನ್ನಷ್ಟೇ ಮಾಡುತ್ತಾರಲ್ಲವೇ?

: ನಿಮ್ಮ ವಿಶ್ಲೇಷಣೆ ಸರಿ. ನಾನು ಆ ಸಂಸ್ಕೃತಿ, ನಾಗರಿಕತೆ ಸುಸಂಪೂರ್ಣವಾದದ್ದು, ಪರಿಪಕ್ವವಾದದ್ದು, ಸಂವೇದನಾರಹಿತ ವಿದೇಶೀ ದಾಳಿಕೋರರ ಕೈಯಲ್ಲಿ ಅದು ದ್ವಂಸವಾಯಿತು ಎಂದೇನೂ ಹೇಳುವುದಿಲ್ಲ. ಬದಲಿಗೆ ಅಲ್ಲಿನ ಸಾಂಪ್ರದಾಯಿಕ ಬದುಕಿನಲ್ಲಿ ಅದಾಗಲೇ ಬಿರುಕುಗಳಿದ್ದುದರಿಂದಲೇ ಕ್ರೈಸ್ತಧರ್ಮ ಅಷ್ಟರ ಮಟ್ಟಿನ ಪ್ರಭಾವ ಬೀರಿ ಅಂಥ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನನ್ನ ವಾದ. ಸಂಸ್ಕೃತಿ ಎಲ್ಲರಿಗೂ ಸುಖ ಸಂತೋಷ ಭದ್ರತೆಗಳನ್ನು ದೊರಕಿಸಿಕೊಟ್ಟಿರಲಿಲ್ಲ. ಹಾಗಾಗಿ ಅಲ್ಲಿ ಅತೃಪ್ತರಾದವರೇ ಹೊಸ ವ್ಯವಸ್ಥೆಯನ್ನು ಬರಮಾಡಿಕೊಳ್ಳಲು ಮೊದಲಾದವರು.

: ಕ್ರೈಸ್ತಧರ್ಮದ ಆಕ್ರಮಣಕ್ಕೆ ಮುಂಚೆಯೇ ಈ ಜನಾಂಗ ತಮ್ಮಷ್ಟು ಕಠಿಣವಲ್ಲದ ಇತರ ಜನಾಂಗಗಳ ವಿಧಿವಿಧಾನಗಳನ್ನು ಚರ್ಚಿಸುತ್ತಿತ್ತೆಂದು ಕಾದಂಬರಿಯಲ್ಲಿ ತೋರಿಸುತ್ತೀರಿ. ಅಂದರೆ ಅವರು ತಮಗಿಂತ ಅನ್ಯವಾದ ವಿಧಿವಿಧಾನಗಳ ಸಂಪರ್ಕ ಪಡೆದಿದ್ದಾರೆಂದಾಯಿತು. ಆ ಜನಾಂಗದ ಒಳಗೆಯೇ ಒಂದು ಬಗೆಯ ಚಲನಶೀಲತೆ ಇತ್ತೆಂಬುದೂ ಇದರಿಂದ ಸ್ಪಷ್ಟವಾಗುತ್ತದೆ. ಆಫ್ರಿಕಾದ ನಾಗರಿಕತೆ ಈ ಮಾರ್ಗದಲ್ಲಿಯೇ ಹಂತಹಂತವಾಗಿ ತನ್ನಿಂದ ತಾನೇ ವಿಕಾಸಗೊಳ್ಳಬಹುದಿತ್ತೆಂದು ನಿಮ್ಮ ಅಭಿಪ್ರಾಯವೇ?

ಚಿ: ಹೌದು, ಆಫ್ರಿಕಾ ನಾಗರಿಕತೆ ವಿಕಾಸದ ಹಾದಿಯಲ್ಲಿತ್ತು. ಬೇರೆ ಬೇರೆ ಸ್ಥಳಗಳಲ್ಲಿ ಜನರು ಒಂದೇ ಸಮಯದಲ್ಲಿ ಸ್ವಲ್ಪ ಭಿನ್ನವಾದ ತೀರ್ಮಾನಗಳಿಗೆ ಬರುತ್ತಿದ್ದರು. ಆಗ ನಾಗರಿಕತೆಯ ಬೆಳವಣಿಗೆ ಕ್ರಾಂತಿಶೀಲವಾಗದೆ ವಿಕಾಸಶೀಲವಾಗುತ್ತಿತ್ತು. ಕ್ರೈಸ್ತಧರ್ಮ ಕಾಲಿಟ್ಟಿದ್ದರಿಂದ ಅದರ ಗತಿಗೆ ಕ್ರಾಂತಿಯ ಗುಣ ಬೆರತುಕೊಂಡಿತು.

: ಜೊತೆಗೆ ಸ್ವಲ್ಪ ಮಟ್ಟಿನ ಭ್ರಷ್ಟತೆಯನ್ನೂ –

ಚಿ: ಕ್ರಾಂತಿ ಅಂದರೆ ಬರೀ ಒಳ್ಳೆಯದು ಅಂತಲ್ಲವಲ್ಲ? ಕ್ರಾಂತಿ ಅಂದರೆ ಬದಲಾವಣೆ ಮಾತ್ರ, ಇದರಲ್ಲಿ ಒಳ್ಳಯದಕ್ಕಿಂತ ಕೆಟ್ಟದ್ದೇ ಹೆಚ್ಚಿರಬಹುದು; ನಮ್ಮಲ್ಲಿನ ಎರಡನೇ ಪೀಳಿಗೆಗೆ ಭ್ರಷ್ಟಾಚಾರದ ವಿರಾಟದರ್ಶನವಾಗಿದೆ. ನಿಜ ಹೇಳುವುದಾದರೆ ನಮ್ಮ ಜನಾಂಗದ ಮೂಲಧಾರೆಯಲ್ಲಿ ಸೇರಿಹೋದ ಭ್ರಷ್ಟತೆಯ ಸೊಂಕಿನಿಂದ ನಾವಿನ್ನೂ ಚೇತರಿಸಿಕೊಂಡಿಲ್ಲ. ನಡೆದದ್ದೆಂದರೆ ಜನರನ್ನು ಅವರ ಇತಿಹಾಸದಿಂದ ಕಿತ್ತು ಬೇರೆಯೇ ಜನಾಂಗಗಳ ಇತಿಹಾಸಕ್ಕೆ ಜೋಡಿಸಿದರು. ಅಲ್ಲಿ ಅವರು ಅಡಿಟಿಪ್ಪಣಿ ಮಾತ್ರವಾದರು. ಆಗ ಸಕಲವನ್ನೂ ನಿರ್ಧರಿಸುವ ಸ್ವಾತಂತ್ರ್ಯದಿಂದ ಅವರು ವಂಚಿತರಾದರು. ಇಂಥದೊಂದು ಸನ್ನಿವೇಶ ಭ್ರಷ್ಟತೆಗೆ ಬೇಜವಾಬ್ದಾರಿತನಕ್ಕೆ ದಾರಿ ಮಾಡುತ್ತದೆ…. ನಮ್ಮ ನಾಗರಿಕತೆಗಳ ಮೇಲೆ ವಿದೇಶೀ ದಾಳಿಯ ಪರಿಣಾಮವನ್ನು ನಾನು ಅರ್ಥೈಸುವ ರೀತಿಯದು.

: ಒಬ್ಬ ಬರಹಗಾರನಾಗಿ ನಾನೂ ಕೂಡ ಎದುರಿಸುತ್ತಿರುವ ಒಂದು ಸಮಸ್ಯೆಗೆ ಪೀಠಿಕೆಯಾಗಿ ಈ ಪ್ರಶ್ನೆ ಕೇಳುತ್ತಿದ್ದೇನೆ. ನಾವು ಹತ್ತೊಂಬತ್ತನೇ ಶತಮಾನದ ಭಾರತದ ಸ್ಥಿತಿಯತ್ತ ಕಣ್ಣು ಹಾಯಿಸಿದಾಗ ರಾಜಾರಂ ಮೋಹನರಾಯಂಥ ಬುದ್ಧಿಜೀವಿಯೊಬ್ಬರು ಇಂಗ್ಲಿಷ್ ಶಿಕ್ಷಣ ಅನಿವಾರ್ಯ ಎಂದು ಭಾವಿಸಿದ್ದನ್ನು ಕಾಣುತ್ತೇವೆ. ಇಂಗ್ಲಿಷ್ ವಿನಾ ಭಾರತದಲ್ಲಿ ಪ್ರಗತಿ ಸಾಧ್ಯವಿಲ್ಲ ಎಂದು ನಂಬಿದ್ದರವರು. ಇಂದಿಗೂ ನಮ್ಮಲ್ಲನೇಕರು ಅಂಥದೇ ನಂಬಿಕೆಯನ್ನು ಇಟ್ಟುಕೊಂಡಿದ್ದೇವೆ. ಪಾಶ್ಚಾತ್ಯ ಸಂಗತಿಗಳಿಗೆ ನಮ್ಮ ಪ್ರತಿಕ್ರಿಯೆ ಈ ಬಗೆಯದು. ಆದರೆ ಅದೇ ಸಂದರ್ಭದಲ್ಲಿ ಭಾರತ ತನ್ನದೇ ಹಾದಿಯಲ್ಲಿ ಬದಲಾವಣೆಗೆ ಒಪ್ಪಿಕೊಳ್ಳುತ್ತಿತ್ತು ಎಂಬುದನ್ನು ನಾವು ಬಲ್ಲೆವು. ಪ್ರಾಚೀನ ಭಾರತ ಹಾಗೂ ಮಧ್ಯಯುಗದ ಭಾರತದಲ್ಲಿ ಬುದ್ಧ, ಬಸವನಂತಹ ಅನೇಕರು ಜಡ್ಡುಗಟ್ಟಿದ ಕಂದಾಚಾರಗಳ ವಿರುದ್ಧ ಬಂಡೆದ್ದಿದ್ದರು. ಇಷ್ಟಾದರೂ ಪಾಶ್ಚಾತ್ಯ ವಿಶ್ವವೇ ಭಾರತವನ್ನು ಉಳಿಸಬೇಕು ಎಂದು ರಾಯ್ ಭಾವಿಸಿದ್ದರು. ಇದು ನಮ್ಮ ಮನಸ್ಸಿನಲ್ಲಿ ಒಂದುಬಗೆಯ ಅನಿಶ್ಚತೆಯನ್ನು ಗೊಂದಲವನ್ನು ಹುಟ್ಟುಹಾಕಿತು. ಅಷ್ಟೇ ಅಲ್ಲ, ನಾವು ಈ ದ್ವಂದ್ವದಿಂದ ಎಂದೂ ಮುಕ್ತರಾಗಿಯೇ ಇಲ್ಲ. ಉದಾಹರಣೆಗೆ ನಾನು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ನೈಪಾಲ್‌ನನ್ನು ಓದಿಕೊಂಡಾಗ ಆತನ ಬಗ್ಗೆ ಉಗ್ರ ಸಿಟ್ಟು ಬಂದಿತ್ತು. ಅದೇ ನಾನು ಭಾರತಕ್ಕೆ ಹಿಂದಿರುಗಿದಾಗ ಇಲ್ಲಿನ ಭ್ರಷ್ಟಾಚಾರ ಕಲಸುಮೇಲೋಗರ ಸ್ಥಿತಿಗಳನ್ನು ಕಂಡು ನೈಪಾಲ್ ಅನೇಕ ರೀತಿಗಳಲ್ಲಿ ಸರಿ ಎಂದೇ ಅನಿಸಿತು. ಬ್ರಿಟಿಷ್ ಮತ್ತು ಪಾಶ್ಚಾತ್ಯ ವಿಶ್ವಗಳನ್ನು ಮರೆತಾಗ ನಾವು ಭಾರತದೊಡನೆ ನಮ್ಮದೇ ಸಂಘರ್ಷಗಳಲ್ಲಿ ತೊಡಗಿರುತ್ತೇವೆ. ಇಂಥದೊಂದು ಸಂಕೀರ್ಣ ಸನ್ನಿವೇಶವನ್ನು ಬರಹದಲ್ಲಿ ನಿರ್ವಹಿಸುವಾಗ ಏಕಕಾಲದಲ್ಲಿ ಹೊರಗಿನವನು ಹಾಗೇ ಒಳಗಿನವನೂ ಆದ ನಿರೂಪಕ ಅವಶ್ಯಕ ಎನ್ನಿಸುತ್ತದೆ. ನಿಮ್ಮ ಕಾದಂಬರಿಗಳಲ್ಲಿ ನೀವು ಇಂಥ ಯತ್ನದಲ್ಲೇ ಇರುತ್ತೀರಲ್ಲವೇ?

ಚಿ: ಹೌದು, ನಮ್ಮ ಸಂದರ್ಭಕ್ಕೆ ಇದು ಅಗತ್ಯ. ವಸಾಹತುವಾದದಂಥ ಸಂಕೀರ್ಣ ವಿಷಯ ನಿರೂಪಣೆಗೆ ಈ ವಿಧಾನ ಅತ್ಯವಶ್ಯ. ನೀವು ವಿ.ಎನ್.ನೈಪಾಲ್ ಬಗ್ಗೆ ಹೇಳಿದ್ದು ತುಂಬಾ ನಿಜ. ಭ್ರಷ್ಟಾಚಾರವನ್ನು ಭಾರತೀಯನೇ ಸೃಷ್ಟಿಸಿದನೆಂದು ಹೇಳಲು ಸಾಧ್ಯವಿಲ್ಲವಷ್ಟೇ? ತೃತೀಯ ಜಗತ್ತಿನ ಸಂದರ್ಭದಲ್ಲಿ ಮಾತ್ರ ಇದು ಪೂರ್ಣ ಸತ್ಯವಾಗಲಾರದು. ನೀವು ಯಾರ ಅಥವಾ ಯಾವುದರ ಪರ ಇದ್ದೀರಿ ಅನ್ನೋದು ಅಷ್ಟೇ ಮುಖ್ಯ.

: ನಮ್ಮ ಆತ್ಮ ದಂಡನೆ, ಆತ್ಮ ತೆಗಳಿಕೆ ಪಾಶ್ಚಾತ್ಯರಿಗೆ ಅಪ್ಯಾಯಮಾನವಾದದ್ದು….

ಚಿ: ಅಂದರೆ ನಾವೇ ಅವರ ಕೆಲಸ ಮಾಡುತ್ತಿದ್ದೀವಿ. ನಾವೇಕೆ ಕಂಡೂ ಕಂಡೂ ಕಂಡೂ ಅನಿಷ್ಟದ ಪರ ನಿಲ್ಲಬೇಕು? ಅವರು (ಪಾಶ್ಚಾತ್ಯರು) ನೈಪಾಲನನ್ನು ಹಾಗೆ ಬಳಸಿಕೊಳ್ಳುವುದು ಸರಿಯಲ್ಲ. ಆಫ್ರಿಕಾದಲ್ಲಿ ಒಂದು ಗಾದೆ ಇದೆ: ನಿಮ್ಮ ಕೋಳಿಗೆ ತೋಳ ಬೆನ್ನು ಹತ್ತಿದ್ದರೆ ಮೊದಲು ತೋಳ ಓಡಿಸು; ಆಮೇಲೆ ಕೋಳಿಗೆ ಬುದ್ಧಿ ಹೇಳಬಹುದು ಅಂತ. ಅದಕ್ಕಾಗಿಯೇ ಒಂದು ನಿರ್ದಿಷ್ಟ ನಿಲುವು ನಿರ್ದಿಷ್ಟ ಸಂದರ್ಭದಲ್ಲಿ ಮಾತ್ರ ಸೂಕ್ತವಾದದ್ದು. ನಿಮ್ಮ ಸಂಸ್ಕೃತಿಯನ್ನು ಎಲ್ಲಿ ರಕ್ಷಿಸಬೇಕೋ ಅಲ್ಲಿ ರಕ್ಷಿಸಿ. ಆಮೇಲೆ ಬನಂದು ಕಟುಟೀಕೆ ಬೇಕಾದರೂ ಮಾಡಿ. ಆದರೆ ನೀವು ಎಲ್ಲಿದ್ದೀರಿ ಅನ್ನೋದು ಬಹಳ ಮುಖ್ಯ. ನಿಮಗೆ ನಿಮ್ಮ ನಿಲುವಿನ ಬಗ್ಗೆ ಖಾತ್ರಿಯಿರದಿದ್ದರೆ ಅದು ಬಹಳ ಅಪಾಯಕಾರಿ. ಒಂದು ಹಂತದಲ್ಲಿ ಸಂಸ್ಕೃತಿಯನ್ನು ಟೀಕಿಸಿ ಇನ್ನೊಂದು ಹಂತದಲ್ಲಿ ಅದನ್ನು ತೆಗಳುವವ ನಾನು. ಆದರೆ, ನಾನೇನು ಅಂತ ನನಗೇ ಗೊತ್ತಿರದಿದ್ದರೆ ರಕ್ಷಿಸ ಬೇಕಾದಾಗಲೂ ಬರೀ ತೆಗಳಿಕೆಯಲ್ಲಿ ತೊಡಗಿರಬಹುದು.

: ಗಾಂಧೀಜಿ ಇದನ್ನು ಅದ್ಭುತವಾಗಿ ಮಾಡುತ್ತಿದ್ದರು. ಒಂದೆಡೆ ಬ್ರಿಟಿಷರನ್ನು ಓಡಿಸುವ ಮಾತಾಡುತ್ತಲೇ ಇನ್ನೊಂದು ಕಡೆ ಹರಿಜನರಿಗೆ ದೇವಾಲಯಗಳಲ್ಲಿ ಪ್ರವೇಶ ನೀಡಬೇಕೆಂದೂ ಹೇಳುತ್ತಿದ್ದರು. ಅವರದು ಒಂದೇ ಸಮಯದಲ್ಲಿ ಅಂತರ್ಮುಖವೂ ಬಹಿರ್ಮುಖವೂ ಆಗಿದ್ದ ಹೋರಾಟ. ಉದಾಹರಣೆಗೆ ೧೯೦೮ರಲ್ಲಿ ಅವರು ಬರೆದ ‘ಹಿಂದ್ ಸ್ವರಾಜ್’ ನೋಡಬಹುದು. ಅದು ಕಾರ್ಲ್ ಮಾರ್ಕ್ಸ್‌ನ ‘ದಾಸ್ ಕ್ಯಾಪಿಟಲ್’ ನಷ್ಟೇ ಮಹತ್ವದ ಕೃತಿಯೆಂದು ನನ್ನ ಭಾವನೆ, ಆ ಕೃತಿ ಒಬ್ಬ ಉಗ್ರಗಾಮಿ ಹಾಗೂ ಗಾಂಧೀಜಿ ನಡುವಣ ಸಂವಾದದ ರೂಪದಲ್ಲಿದೆ. ನಮಗೆ ಆಧುನಿಕ ನಾಗರಿಕತೆಯ ಮೋಹವಿರುವುದರಿಂದಲೇ ಬ್ರಿಟಿಷರು ಭಾರತದಲ್ಲಿ ನೆಲೆಯೂರಲು ಸಾಧ್ಯವಾಗಿದೆ ಎನ್ನುತ್ತಾರೆ ಗಾಂಧಿ. ಆದರೆ ಈ ನಾಗರಿಕತೆಯು ಬ್ರಿಟಿಷರಿಗೆ ಮತ್ತು ಭಾರತೀಯರಿಬ್ಬರಿಗೂ ಅಪಾಯಕಾರಿ ಎಂದು ಅವರ ವಾದ. ವೈದ್ಯರು, ರೈಲ್ವೇ, ವಕೀಲರುಗಳನ್ನು ಕುರಿತಂತಹ ಅವರ ಕೆಲವು ವಿಚಾರಗಳು ಹುಚ್ಚುತನದ್ದೆನಿಸಿದ್ದರೂ ‘ಹಿಂದ್ ಸ್ವಾರಾಜ್’ ನಲ್ಲಿ ಹಲವಾರು ಗಾಢ ಸತ್ಯಗಳಿವೆ. ಒಂದು ಅರ್ಥವ್ಯವಸ್ಥೆಯಲ್ಲಿರುವಂತೆಯೇ ಕೆಲವು ಸಾಂಪ್ರದಾಯಿಕ ಸಮಾಜಗಳಲ್ಲಿ ವಿವಿಧ ಎಳೆಗಳು ಹೇಗೆ ಸೂಕ್ಷ್ಮವಾದ ಅಂತರ ಸಂಬಂಧಗಳನ್ನು ಹೊಂದಿರುತ್ತವೆ ಎಂದವರು ಮನಗಂಡಿದ್ದರು. ಒಬ್ಬ ವ್ಯಕ್ತಿ ಸಮುದಾಯದ ಅಂಗವಾಗಿಯೇ ತನ್ನ ಸ್ವಂತಿಕೆಗೂ ನೀರೆರೆಯಲು ಸಾಧ್ಯ ಎಂದು ನಂಬಿದ್ದರು. ಆಧುನಿಕ ನಾಗರಿಕತೆ ಇಂಥ ಸಮಾಜಗಳನ್ನು ಒಡೆದು ವ್ಯಕ್ತಿಯ ಪ್ರಾಮುಖ್ಯವನ್ನು ವೈಭವೀಕರಿಸುತ್ತೆಂಬ ಆತಂಕ ಅವರದು. ಇದು ಸಮಗ್ರ ಜೀವನಕ್ಕೆ ಒಳಿತಲ್ಲವೆಂದೂ ಅವರು ಹೇಳುತ್ತಿದ್ದರು. ಅವರು ಹೇಳಿದ್ದನ್ನೆಲ್ಲಾ ನಾವು ಒಪ್ಪದಿರಬಹುದು. ಆದರ ಆಧುನಿಕ ನಾಗರಿಕತೆ ಬಗ್ಗೆ ಅವರ ವಿಚಾರ ವಿವೇಕಪೂರ್ಣವಾಗಿದ್ದಂತೂ ನಿಜ.

ನಿಮ್ಮ ಕಾದಂಬರಿಗಳಲ್ಲಿ ನೀವು ಚಿತ್ರಿಸುವ ಜಗತ್ತು ಒರ್ಬರಸ್ವರೂಪದ್ದಾಗಿರಬಹುದು. ಆದರೂ ಆಫ್ರಿಕನರಿಗೆ ಅನೇಕ ಆಧುನಿಕ ನಾಗರಿಕತೆಗಳಿಗಿಲ್ಲದ ವಿವೇಕವಿತ್ತು. ಆದರೆ ನಾವು ಮತ್ತೆ ಹಿಮ್ಮುಖವಾಗಿ ನಡೆಯಲು ಸಾಧ್ಯವಿಲ್ಲ. ನಾವು ನಮ್ಮ ಪೂರ್ವಿಕರಿಗಿಂತ ಮೇಲ್ಮಟ್ಟದಲ್ಲೇನೂ ಇಲ್ಲ. ಅವರಿದಂಲೇ ಕಲಿಯಬೇಕಾದ್ದು ಸಾಕಷ್ಟಿದೆ ಎಂದೂ ನೀವು ಹೇಳುತ್ತೀರಿ. ಆದ್ದರಿಂದ ಆಫ್ರಿಕಾದ ಇತಿಹಾಸವನ್ನು ನೀವು ಚಿತ್ರಿಸುವಾಗ ಯಾವುದೋ ಗ್ರೀಕ್ ದುರಂತ ಕತೆ ಓದುತ್ತಿರುವಂತೆ ಭಾಸವಾಗುತ್ತದೆ. ರಾಜಕಾರಣಿಗಳು ಬೇಕಾದರೆ ಪ್ರಗತಿಪರರಾಗಬಹುದು ಇಲ್ಲವೇ ಸಂಪ್ರದಾಯ ಶರಣರಾಗಬಹುದು. ಆದರೆ ನಿಮ್ಮಂಥ ಲೇಖಕರು ಅಷ್ಟು ಸರಳವಾಗಿ ಯಾವುದಾದರೊಂದು ಆಗಿರಲು ಸಾಧ್ಯವಿಲ್ಲ. ಅಲ್ಲವೇ? ನೀವು ನಿಮ್ಮ ಕಾದಂಬರಿಯಲ್ಲಿ ಇಂಥದ್ದೇನಾದರೂ ಹೇಳುತ್ತಿದ್ದೀರಾ?

ಚಿ: ನಿಮ್ಮ ವಿಶ್ಲೇಷಣೆ ಮತ್ತೆ ಸರಿ. ನನಗೆ ಗಾಂಧಿಯವರ ಪುಸ್ತಕದ ಪರಿಚಯವಿರಲಿಲ್ಲ. ಆದರೆ ನನ್ನ ಸಹಮತವಿದೆ. ಅವರದು ಎಲ್ಲಾ ಪ್ರವಾದಿಗಳ, ಮಹಾನ್ ಬೋಧಕರ ಮಾರ್ಗ. ಜನ ನಿಮಗೆ ಕಿವಿಗೊಡಬೇಕಿದ್ದರೆ ನೀವು ಉತ್ಪ್ರೇಕ್ಷೆ ಮಾಡಲೇ ಬೇಕಾಗುತ್ತದೆ. ರೈಲ್ವೇಯನ್ನು ಈಗ್ಯಾರು ದೂರೀಕರಿಸುವುದಿಲ್ಲ. ಆದರೆ ಆ ಬಗ್ಗೆ ಗಾಂಧೀ ಮಾತನ್ನು ನೀವು ಕೇಳಿದಾಗ ಆ ಕಡೆ ಹೊಸ ದೃಷ್ಟಿ ಬೀರುತ್ತಿರಿ. ಅರೆ, ಹೌದಲ್ಲಾ, ಸಾವಿರಾರು ವರ್ಷಗಳಿಂದ ನಾವು ರೈಲುಗಳಿಲ್ಲದೆ ಬದುಕಿರಲಿಲ್ಲವೇ ಎಂದು ಬೆರಗಾಗಲೂಬಹುದು.

ಆದರೆ ಈಗ ನೀವು ನೈಜೀರಿಯಾಕ್ಕೆ ಬಂದು ನೋಡಿ. ಇಡೀ ಮಧ್ಯಮವರ್ಗ ಪಾಶ್ಚಾತ್ಯ ಪ್ರಭಾವದ ವಿಷಯದಲ್ಲಿ ನಿಮಗಿಂತ ಹೆಚ್ಚು ಭ್ರಷ್ಟವಾಗಿಬಿಟ್ಟಿದೆ. ಒಂದೋ ಎರಡೋ ಕಾರುಗಳಿಲ್ಲದ ಪ್ರೊಫೆಸರನೇ ನಿಮಗೆ ಕಾಣಿಸಿಗುವುದಿಲ್ಲ. ‘ಇದಿಲ್ಲದೆ ಆಗುವುದೇ ಇಲ್ಲ’ ಅನ್ನೋದು ಸುಳ್ಳು. ಇಲ್ಲದೆಯೂ ಬದುಕು ನಡೆಯುತ್ತೇ. ನಾವು ಭೋಗಿಸುವ ಐಶ್ವರ್ಯವನ್ನು ಉತ್ಪಾದಿಸುವ ಜನರಿಗೆ ಇವ್ಯಾವುವೂ ಇರುವುದೇ ಇಲ್ಲ. ಭಾರತದ ಒಬ್ಬ ಜನಸಾಮಾನ್ಯ ರೈಲ್ವೇ ಹತ್ತದಿರಬಹುದು. ಆದ್ದರಿಂದ ಪ್ರವಾದಿಗಳು ವ್ಯಕ್ತಪಡಿಸುವ ಇಂಥ ಉಗ್ರ ವಿಚಾರಗಳು ಮೇಲ್ನೋಟಕ್ಕೆ ಕಂಡು ಬರುವಷ್ಟು ಮೂರ್ಖತನದ್ದಲ್ಲ. ನೀವು ಹಿಮ್ಮುಖವಾಗಿ ನಡೆಯುವುದಿಲ್ಲವಾದರೂ ಇಂಥ ವಿಚಾರಗಳ ಬಗ್ಗೆ ಕೂಲಂಕಷವಾಗಿ ಯೋಚಿಸುತೊಡಗುತ್ತೀರಿ. ಒಂದು ಸಂಗತಿಯ ಪೂರ್ವಾಪರ ವಿವೇಚಿಸದೆ ಅದನ್ನು ತೆಪ್ಪಗೆ ಒಪ್ಪಿಕೊಳ್ಳಲು ಹಿಂಜರಿಯುತ್ತೀರಿ. ನಾವು ನಮ್ಮ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಾವೆಲ್ಲಿಂದ ಬರುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. ನೀವೇಲ್ಲಿದ್ದೀರಿ ಎಂದು ತಿಳಿಯದಿದ್ದಾಗ ನೀವು ಮುಂದೆ ಸಾಗುವುದಾದರೂ ಹೇಗೆ? ಆದ್ದರಿಂದ ನಮ್ಮ ಇತಿಹಾಸದ ಬೆಳಕಿನಲ್ಲಿ ಪರ್ಯಾಯ ಸಂಸ್ಕೃತಿಯೊಂದರ ಸೃಷ್ಟಿಗೆ ಹೊರಡುವುದೆಂದರೆ ಪಾಶ್ಚಾತ್ಯವಾದುದೆಲ್ಲವನ್ನು ತಿರಸ್ಕರಿಸುವುದು ಅಂತಲ್ಲ., ನಮ್ಮ ಜನ ಸಹಸ್ರಾರು ವರ್ಷ ಬಾಳಿ ಬದುಕಿದ್ದಾರೆಂದರೆ ನಾವು ಅವರಿಂದ ಕಲಿಯುವುದೇನೋ ಇದ್ದೇ ಇದೆ ಎಂದರ್ಥ. ಅಲ್ಲವೇ?

ಯುರೋಪು ಎಷ್ಟೇ ಯಶಸ್ವಿಯಾಗಿದ್ದರೂ ಅದು ಎಲ್ಲಾ ವಿಷಯಗಳಲ್ಲೂ ಯಶಸ್ಸು ಸಾಧಿಸಿಲ್ಲ. ಆದ್ದರಿಂದ ಯುರೋಪನ್ನು ಆದರ್ಶವಾಗಿಟ್ಟುಕೊಳ್ಳುವುದರಿಂದ ನಾವು ಕೇವಲ ಅನುಕರಣಶೀಲರಾಗುವುದಷ್ಟೇ ಅಲ್ಲ, ಪಾಶ್ಚಾತ್ಯ ವಾಸ್ತವಕ್ಕೆ ನಮ್ಮನ್ನೇ ಕಟ್ಟಿಹಾಕಿಕೊಂಡುಬಿಡುತ್ತೇವೆ. ಈಗ ಲ್ಯಾಟಿನ್ ಅಮೆರಿಕಾ ಭಾರತ ಚೀನಾ ಅಮೆರಕಾದ ಭಾರತೀಯರು ಇವರೆಲ್ಲಾ ವಿಶ್ವದ ಮೂಲೆ ಮೂಲೆ ಸುತ್ತಿ ಸಹಸ್ರಾರು ವರ್ಷ ಬದುಕಿ ದಂತಕತೆಗಳನ್ನು ಸೃಷ್ಟಿಗೆ ವಾಸ್ತವದ ಬಗ್ಗೆ ಆಧುನಿಕ ವಾಖ್ಯಾನಗಳನ್ನು ಮುಂದಿಟ್ಟು ಹೋಗಿದ್ದಾರೆ. ಇವರ ಬಗ್ಗೆ ಏನನ್ನುತ್ತೀರಿ? ಇವೆಲ್ಲವನ್ನೂ ನಾವು ಮರೆತು ಕೇವಲ ಯಶಸ್ವಿಯಾದುದರ ಬೆನ್ನು ಹತ್ತುವದರಲ್ಲಿ ಅರ್ಥವಿಲ್ಲ.

: ನಾನು ಇತ್ತೀಚೆಗೆ ರಷ್ಯಾ ಹಂಗೇರಿಗಳಿಗೆ ಹೋಗಿದ್ದೆ. ಕೆಲವು ವಿಧಗಳಲ್ಲಿ ಅದು ನನ್ನನ್ನು ಕಲಕಿದ ಅನುಭವವಾಗಿತ್ತು. ಅಲ್ಲಿ ಸಮಾಜವಾದಿ ಅರ್ಥವ್ಯವಸ್ಥೆಯಿರುವುದೇನೋ ಸರಿ. ಆದರೆ ಅವರು ಸಮಾಜವಾದಿ ಪ್ರಜ್ಞೆ ಸೃಷ್ಟಿಸಿಲ್ಲ. ಮೂಲತಃ ಅವರದೂ ವ್ಯಕ್ತಿಯನ್ನು ವೈಭವೀಕರಿಸುವ ಪಾಶ್ಚಾತ್ಯ ಐರೋಪ್ಯ ಸಮಾಜವೇ. ಅವರ ನಾಗರಿಕತೆಯೂ ಅಮೆರಿಕ ದಿಕ್ಕಿನಲ್ಲಿ ಹೆಜ್ಜೆಯಿಡುತ್ತಿದೆ. ಅದೇ ಇನ್ನೊಂದೆಡೆ, ಜನಸಾಮಾನ್ಯರ ತಿಳಿವಳಿಕೆ ದೃಷ್ಟಿಯಿಂದ ಹೇಳುವುದಾದರೆ ಭಾರತದಂತ ‘ಹಿಂದುಳಿದ’ ಸಮಾಜಗಳು ಸಮಾಜವಾದಕ್ಕೆ ತಯಾರಿವೆ.  ನಿಮ್ಮ ಎರಡನೇ ಉಪನ್ಯಾಸದಲ್ಲಿ ವ್ಯಕ್ತಿ – ಸಮುದಾಯದ ಸಂಬಂಧವನ್ನು ವಿವರಿಸಲೆತ್ನಿಸುತ್ತಿದ್ದುದರಿಂದ ಈ ವಿಷಯ ಹೇಳುತ್ತಿದ್ದೇನೆ. ಸಮುದಾಯಕ್ಕೆ ಹೆಚ್ಚಿನ ಒತ್ತು ಹಾಕುವ ನೀವು ಪಾಶ್ಚಾತ್ಯ ಜೀವನಶೈಲಿಗೆ ಪರ್ಯಾಯವಾದುದೊಂದನ್ನು ಸೂಚಿಸುತ್ತಿದ್ದೀರಿ ಅನಿಸುತ್ತದೆ. ಅಂದರೆ ವ್ಯಕ್ತಿಯೊಬ್ಬ ತನ್ನ ಸಮೂಹದ ಅಂಗವಾಗಿಯೇ ವೈಯಕ್ತಿಕ ಬೆಳವಣಿಗೆ ಸಾಧಿಸಬಹುದು.

ಚಿ: ನೀವು ಎಲ್ಲಿ ನೋಡಿದರೂ ವ್ಯಕ್ತಿ ಪ್ರಧಾನ ಹಾಗೂ ಸಮುದಾಯಪ್ರಧಾನವೆಂಬ ಈ ಎರಡು ವಾಸ್ತವಗಳ ಅರಿವು ಇದ್ದೇ ಇದೆ. ಆದರೆ ನೀವು ಯಾವುದಕ್ಕೆ ಹೆಚ್ಚು ಮಹತ್ವ ಕೊಡುತ್ತೀರಿ ಎನ್ನುವುದೇ ಪ್ರಶ್ನೆ.

: ನಿಮ್ಮ ‘ಥಿಂಗ್ಸ್ ಫಾಲ್ಸ್ ಅಪಾರ್ಟಿ’ನ ನಾಯಕ ಓಕೊಂಕೋ ತನ್ನ ಜನಾಂಗಕ್ಕಾಗಿ ಬದುಕುವವನಾದರೂ ಅವನಲ್ಲಿ ಸ್ವಂತಿಕೆಯ ಪ್ರಜ್ಞೆಯೂ ಜಾಗೃತವಾಗಿರುತ್ತದೆ.

ಚಿ: ಹೌದು, ಕೆಲವರು ಒಂದನ್ನು ಎತ್ತಿ ಹಿಡಿದು ಇನ್ನೊಂದನ್ನು ಮರೆಯುತ್ತಾರೆ. ಹಾಗೆ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವುದನ್ನು ಬಿಟ್ಟು ಎರಡರ ಮಧ್ಯೆ ಸಮತೋಲ ಸಾಧಿಸುವುದೇ ಸರಿ ಎಂದು ನನ್ನ ಅನಿಸಿಕೆ.

ನಮ್ಮ ಅಸ್ತಿತ್ವದ ಸಾರ್ಥಕ್ಯ ಈ ದ್ವಿಮುಖತೆಯಲ್ಲೇ ಅಡಗಿದೆ. ನಮ್ಮಲ್ಲನೇಕರು ಅವೆರಡೂ ಒಟ್ಟಿಗೇ ಇರಲು ಸಾಧ್ಯ ಎಂದು ನಂಬಲೇ ತಯಾರಿಲ್ಲ. ಯಾವುದಾದರೊಂದಕ್ಕೆ ಮಹತ್ವ ಕೊಡುವುದೇ ನಮಗೆ ಖುಷಿದಾಯಕ. ಎರಡರ ಸಮತೋಲ ರೋಮಾಂಚಕಾರಿಯೂ ಅಲ್ಲ, ನಾಟಕೀಯವೂ ಅಲ್ಲ ನೋಡಿ.

: ನಿಮ್ಮ ಕಾದಂಬರಿಯಲ್ಲಿ ಪಾಶ್ಚಾತ್ಯ ವ್ಯಕ್ತಿಯ ಬಳಿ ಆಧುನಿಕ ತಂತ್ರಜ್ಞಾನ ಇದೆ ಎಂಬುದರ ಜೊತೆಗೆ ಆಫ್ರಿಕಾದವನು ಮುಗ್ಧ ಎಂಬ ಕಾರಣಕ್ಕೂ ಆತನಿಗೆ ಯಶಸ್ಸು ಲಭಿಸುತ್ತದೆ.

ಉದಾಹರಣೆಗೆ ಆಫ್ರಿಕನರು ‘ಅನಿಷ್ಟಕಾಡಿ’ನಲ್ಲಿ ಚರ್ಚ್‌ಕಟ್ಟಿದರೆ ಅದುನಾಶವಾಗುತ್ತೆ ಅನ್ನುವ ನಂಬಿಕೆಯಿದೆ ಅಲ್ಲಿ ಚರ್ಚ್ ಕಟ್ಟಲು ಅವಕಾಶ ನೀಡುತ್ತಾರೆ…

ಚಿ : ಅಮೆರಿಕಾದ ಕರಿಯ ಚರಿತ್ರಕಾರ ಛಾನ್ಸಲರ್ ವಿಲಿಯಮ್ಸ್‌ ತನ್ನ ಆಫ್ರಿಕಾ ನಾಗರಿಕತೆಯ ಅವನತಿ ಎಂಬ ಪುಸ್ತಕದಲ್ಲಿ ಆಫ್ರಿಕಾ ಅಷ್ಟು ಸುಲಭದಲ್ಲಿ ಹೇಗೆ ಮೋಸ ಹೋಯಿತು ಎಂಬ ಪ್ರಶ್ನೆ ಎತ್ತುತ್ತಾರೆ. ಕಡೆಗೆ ಅವರು ‘ಆಫ್ರಿಕನ್ನರು ಬಲು ಉದಾರಿಗಳು, ಅವರೇ ಬಿಳಿಯನನ್ನು ಊಟಕ್ಕೆ ಆಮಂತ್ರಿಸಿದರು, ಆದರೆ ಬಿಳಿಯ ಅವರ ಮನೆಯನ್ನೇ ವಶಪಡಿಸಿಕೊಂಡ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ನಮ್ಮ ಬಹುತೇಕ ಸಂಸ್ಕೃತಿಗಳಿಗೆ ಸಹನೆ ಹೆಚ್ಚು. ಉದಾಹರಣೆಗೆ ಈಬೋ ಸಂಸ್ಕೃತಿ ಈ ಜಗತ್ತಿನಲ್ಲಿ ವಿಭಿನ್ನ ಕಲ್ಪನೆಗಳು ವಿಭಿನ್ನ ದೃಷ್ಟಿಕೋನಗಳು ಏಕಕಾಲದಲ್ಲಿ ಒಟ್ಟಿಗೇ ಇರಲು ಸಾಧ್ಯವೆಂದು ನಂಬುತ್ತೆ. ‘ನನಗೆ ನನ್ನದೇವರಿದ್ದರೆ ನನಿಗೆ ನಿನ್ನದು ತಪ್ಪೇನು? ಎರಡು ಒಟ್ಟಿಗೇ ಇರಲಿ, ಇನ್ನೂ ಒಬ್ಬ ಯಾರಾದರೂ ಬಂದು ‘ಇಲ್ಲ, ಮೂರು ದೇವರಿವೆ’ ಅಂದರೆ – ಇರಲಿ ಬಿಡಿ. ಹಾಗಾಗಿ ಪರಸ್ಪರ ವಿಶ್ವಾಸದ ತಳಹದಿಯ ಮೇಲೆ ಅವರು ಬೇರೊಬ್ಬರನ್ನು ಸುಲಭದಲ್ಲಿ ಅಂಗೀಕರಿಸಿಬಿಡಬಲ್ಲರು. ಆದರೆ ಯಾರಾದರೂ ಮತಾಂಧರು ಬಂದು ‘ಇರುವುದು ಒಂದೇ ಮಾರ್ಗ’ ಅಂದರೆ ಆಗ ನಿಮಗೆ ಕಷ್ಟ. ಯಾಕೆಂದರೆ ಆ ಮನುಷ್ಯ ಸ್ವಮತಾಂಧ. ಆತ ಹೋರಾಡುತ್ತಾನೆ. ನೀವು ಹೋರಾಡುವುದಿಲ್ಲ. ಅದರ ಬದಲು ನೀವು ‘ಹೋಗಲಿ, ಆಗಲಿ, ಬಿಡಪ್ಪ’ ಎಂದು ಬಗ್ಗಿಬಿಡುತ್ತೀರಿ.

: ಹೌದು,ನೀವು ನಿಮ್ಮ ಪ್ರಬಂಧದಲ್ಲಿ ಕೇಳುವುದೂ ಅದೇ. ನನ್ನ ಮೇಳೆ ಆಕ್ರಮಣ ಮಾಡುವವನು ಗಟ್ಟಿಯಾಗಿರುವಾಗ ನಾನೇಕೆ ಗಟ್ಟಿಯಾಗಬಾರದು? ಪಾಶ್ಚಾತ್ಯ ಟೀಕಾಕಾರನಿಗೆ ಮೆಚ್ಚಿಕೆಯಾಗಲೆಂದು ನಾನೇಕೆ ಮೃದುವಾಗಬೇಕು?

ಚಿ : ಪಾಶ್ಚಾತ್ಯ ಬಂಡವಳಾದವರೆಂದರೆ ಅತ್ಯಂತ ಏಕಾಗ್ರವಾದ ಆಕ್ರಮಣಶೀಲ ವ್ಯವಸ್ಥೆ. ಜಗತ್ತು ಕಂಡ ಅತಿ ದೊಡ್ಡ ಆಕ್ರಮಣಕಾರಿ ವಿಕಲ್ಪ ಅದು. ಅಂಥ ಹಿಟ್ಲರನ ಜರ್ಮನಿ ಥರ ಘೋರರೂಪ ತಾಳಿದಾಗ ಮಾತ್ರ ಎಲ್ಲರೂ ದಿಗಿಲಿನಿಂದ ಕೈಯೆತ್ತಿ ಬಿಡುತ್ತಾರೆ. ಅದು ಜಗತ್ತಿನಲ್ಲಿರುವ ಚಿರವಾಸ್ತವ ತಾನು ಮಾತ್ರ ಎಂದು ನಂಬುವಂಥಾದ್ದು. ಅಲ್ಲಿಂದ ಮುಂದಕ್ಕೆ ಸತ್ಯವಾದದ್ದು ಒಂದೇ ವರ್ಣ ಅನ್ನಬಹುದು. ಉಳಿದವರು ಬೇರೆ ಥರ ಇದ್ದಾರಲ್ಲಾ ಎಂಬ ಕಾರಣಕ್ಕೆ ಅವರನ್ನೆಲ್ಲಾ ಕೊಲ್ಲುತ್ತಾ ಸಾಗಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ಪ್ರಾಯಶಃ ನಮ್ಮ ಉಳಿವಿಗಾಗಿಯಾದರೂ ಸ್ವಲ್ಪ ನಿಷ್ಕಾರುಣ್ಯ ಕಲಿಯಬೇಕಾದ ಅವಶ್ಯಕತೆಯಿದೆ.

: ನಿಮ್ಮ ಕಾದಂಬರಿ ನೈಜೀರಿಯಾದಲ್ಲಿ ಎರಡುಲಕ್ಷ ಪ್ರತಿಗಳಷ್ಟು ಖರ್ಚಾಯಿತು. ಅಂದರೆ ನಿಮ್ಮಲ್ಲಿ ವ್ಯಾಪಕವಾದ ಇಂಗ್ಲಿಷ್ ಓದುಗರ ಸಮೂಹವಿದೆ ಎಂದಾಯಿತು. ಅವರಿಗೆ ನೀವು ಕೊಡುವ ಕೆಲವು ವಿವರಗಳು ಅಪರಿಚಿತ ಎನಿಸಬಹುದೇ?

ಚಿ: ಹೌದು ಮತ್ತು ಇಲ್ಲ. ಈ ಕತೆ ನಡೆಯುವುದು ನೈಜೇರಿಯಾದ ಈಬೋ ಸಂಸ್ಕೃತಿಯಲ್ಲಿ. ಅಲ್ಲಿರುವ ಉಳಿದೆರಡು ಸಂಸ್ಕೃತಿಗಳೆಂದರೆ ಹೌಸಾ ಮತ್ತು ಯೊರುಬಾ. ಆ ಎರಡು ಸಂಸ್ಕೃತಿಗಳಿಗೆ ನನ್ನ ಕಾದಂಬರಿ ಪೂರ್ಣ ಸಮೀಪವಾಗದಿರಬಹುದು. ಹಾಗೆಯೇ ತನ್ನ ಸಂಸ್ಕೃತಿಯ ಮೂಲದ್ರವ್ಯ ತಿಳಿಯದ ಈಬೊ ಒಬ್ಬನಿಗೂ ಇದು ಅಪರಿಚಿತವಾಗಬಹುದು. ಆದರೂ ನನ್ನ ಆಫ್ರಿಕನ್‌ಗೆ ನನ್ನ ಕಾದಂಬರಿ ಎಂದೂ ಸಂಪೂರ್ಣ ಪರಕೀಯವಾಗಲಾರದು. ನೀವು ಸಂಸ್ಕೃತಿಯನ್ನು ಮರೆಯಬಹುದು. ಆದರೆ ಸಂಸ್ಕೃತಿ ನಿಮ್ಮನ್ನು ಮರೆಯುವುದಿಲ್ಲವಲ್ಲ? ಸಂಸ್ಕೃತಿ ಈಗ ಛಿದ್ರ ಛಿದ್ರವಾಗಿರಬಹುದು. ಆದರೆ ಅದರ ಮೂಲ ಸತ್ವ ನೈಜೀರಿಯಾ ಅಷ್ಟೆ ಅಲ್ಲ. ಇಡೀ ಆಫ್ರಿಕಾದಲ್ಲೇ ಇನ್ನೂ ಉಳಿದುಕೊಂಡಿದೆ.

: ನಿಮ್ಮ ಕಾದಂಬರಿಗಳು ಕನ್ನಡ ಭಾಷೆಗೆ ಬರಬೇಕೆಂದು ನನ್ನ ತೀವ್ರ ಅಭಿಲಾಷೆ. ಇಬ್ಬರಿಗೂ ಒಂದೇ ಆದ ಅನೇಕ ಸಾಮಾನ್ಯ ವಿಚಾರಗಳು ನಮ್ಮ ನಡುವೆ ಇದ್ದಾವೆ. ಮತ್ತೆ ಈ ಸಾಮ್ಯ ಸಾಹಿತ್ಯದ ‘ಸಾರ್ವತ್ರಿಕತೆ’ಯ ಕಡೆಗೂ ಗಮನ ಸೆಳೆಯುವಂಥಾದ್ದು.

ಚಿ: ಸಾರ್ವತ್ರಿಕತೆ ಸಾಧ್ಯವಾಗುವುದೇ ನಿರ್ದಿಷ್ಟ ನೆಲೆಯಲ್ಲಿ. ಒಬ್ಬ ಸರಳ ಅಮೆರಿಕನ್ ವಿಮರ್ಶಕ ಆಫ್ರಿಕಾದ ಕೃತಿ ಓದಿ ‘ಇದು ನ್ಯೂಯಾರ್ಕಿನಲ್ಲೂ ನಡೆಯಬಹುದಿತ್ತು, ಅದಕ್ಕೇ ಸಾರ್ವತ್ರಿಕ ಗುಣ ಪಡೆದಿದೆ, ಅಂದುಬಿಟ್ಟರೆ ಅದು ಅಸಂಗತ ವಿವರಣೆ. ನನ್ನ ಪ್ರಕಾರ ಇದು ನಿಮ್ಮನ್ನು ನಿಮ್ಮ ಅನುಭವದಿಂದ ಬೇರ್ಪಡಿಸಿ ಇನ್ನೊಬ್ಬರ ಇತಿಹಾಸಕ್ಕೆ ತಳುಕು ಹಾಕುವ ಪ್ರಯತ್ನ.

ಮತ್ತೆ ನಾನು ನನ್ನ ಅನುಭವವನ್ನು ಸೇರಿಕೊಂಡೇ ಸಾರ್ವತ್ರಿಕತೆಯ ವ್ಯಾಖ್ಯಾನ ಮಾಡಬಯಸುತ್ತೇನೆ. ಸಾಹಿತ್ಯದ ಸಾರ್ವತ್ರಿಕತೆ – ಸಿಂಗರ್ ಹೇಲುವ ಹಾಗೆ – ಎಲ್ಲರೂ ತಮ್ಮ ಅನುಭವದ ಕೊಯ್ಲು ಪಡೆಯುವಂಥ ಸಾರ್ವತ್ರಿಕ ಫಸಲು. ಯುರೋಪಿನ ಅನುಭವ ಮಾತ್ರ ಸಾರ್ವತ್ರಿಕ ಎಂದು ಹೇಳಿಕೊಳ್ಳುವುದು ಅವರ ಹಮ್ಮಿನ ಫಲ ಅಷ್ಟೆ.

ನಾನು ನಿಮ್ಮ ದೇಶದ ಬಗ್ಗೆ ಒಂದು ಮಾತು ಹೇಳಲೇ?

ಸಮೃದ್ಧ ಪುರಾತನ ಸಂಸ್ಕೃತಿಯುಳ್ಳ ನಿಮ್ಮಂಥ ದೇಶದಲ್ಲಿ ಬ್ರಿಟನ್ ಮತ್ತು ಅಮೆರಿಕಾ ಸಾಹಿತ್ಯದ ಬಗ್ಗೆ ಇರುವ ಹುಚ್ಚು ಒಳ್ಳೆಯದಲ್ಲ ಅನಿಸುತ್ತೆ. ನಿಮ್ಮ ಅನೇಕ ವಿದ್ವಾಂಸರಿಗೆ ಇಂಗ್ಲೆಂಡು ಅಮೆರಿಕಾಗಳಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆಯೇ ವಿಪರೀತ ಕಾಳಜಿ.

: ಇದು ಆತ್ಮಹತ್ಯಾತ್ಮಕ ಎಂದು ನಾನು ಬಲ್ಲೆ. ಈಗ ನೀವು ಬರಹದಲ್ಲಿ ಸ್ವಂತಿಕೆ ಉಳಿಸಿಕೊಳ್ಳುವ ಮಾತಾಡಿರುವುದರಿಂದ ಒಂದು ಪ್ರಶ್ನೆ. ಆಫ್ರಿಕಾ ಭಾಷೆಗಳ ದೃಷ್ಟಿಯಿಂದ ಇಂಗ್ಲಿಷ್ ಭಾಷೆಯ ಬಗ್ಗೆ ನಿಮ್ಮ ನಿಲುವೇನು? ೧೯೬೪ರಲ್ಲಿ ನೀವು ‘ಇಂಗ್ಲಿಷ್ ರಾಷ್ಟ್ರೀಯ ಭಾಷೆ, ಸ್ವಾಹಿಲಿಯಂಥವು ಜನಾಂಗ ಭಾಷೆಗಳು’ ಅಂತ ಹೇಳಿದ್ದೀರಿ. ನಿಮ್ಮ ಈ ಆಲೋಚನೆ ಕ್ರಮದಲ್ಲಿ ಈಗೇನಾದರೂ ಬದಲಾವಣೆ ಆಗಿದೆಯೇ?

ಚಿ : ಆಗಿದೆ. ನನ್ನ ನಿಲುವು ಬದಲಾಗಿರುವುದಷ್ಟೆ ಅಲ್ಲ, ನನಗೆ ಅದರ ಬಗ್ಗೆ ಹೆಮ್ಮೆಯೂ ಇದೆ. ನನ್ನ ಆಗಿನ ಪ್ರಬಂಧದಲ್ಲಿ ನಾನು ಸ್ವದೇಶೀ ಭಾಷೆಗಳ ಮಹತ್ವವನ್ನು ಗುರುತಿಸಿದ್ದರೂ ನನ್ನ ವಾದವನ್ನು ನಿರಾಳವಾಗಿ ಅಪಾರ್ಥ ಮಾಡಿಕೊಳ್ಳಬಹುದಾದ ಸಾಧ್ಯತೆಗಳಿದ್ದವು. ಆದರೆ ಬ್ರಿಟಿಷರಿಂದಾಗಿ ಹುಟ್ಟಿದ ಹೊಸ ದೇಶಗಳನ್ನು ಒಗ್ಗೂಡಿಸುವ ಒಂದು ಶಕ್ತಿಯಾಗಿ ಇಂಗ್ಲಿಷ್‌ಗೆ ಎಷ್ಟು ಪ್ರಾಮುಖ್ಯವಿದೆ ಎಂದು ನಾನು ಭಾವಿಸಿದ್ದೇನೋ ಅಷ್ಟನ್ನು ಆಗ ಹೇಳಿದೆ.

ಇಂದು ನಾನು ಅಷ್ಟೇ ಆರಾಮಾಗಿರಲಾರೆ. ಎಲ್ಲಾ ಭಾಷೆಗಳೂ ಸಹಬಾಳ್ವೆ ನಡೆಸಲಿ ಎಂದು ಹೇಳಲಾರೆ. ಇಂಗ್ಲಿಷ್ ಈಗಾಗಲೇ ಬಹಳ ಸಶಕ್ತವಾಗಿದೆ. ಆದ್ದರಿಂದ ನಂನಮ್ಮ ಭಾಷೆಗಳಿಗೆ ಬಲ ತುಂಬುವ ದಿಕ್ಕಿನಲ್ಲಿ ಏನಾದರೂ ಮಾಡಬೇಕಾದ್ದು ಅತ್ಯಗತ್ಯ ನಮ್ಮಲ್ಲೂ ಅನೇಕ ಲೇಖಕರು ಇದನ್ನು ಅರ್ಥ ಮಾಡಿಕೊಂಡು ಸ್ವಾಹಿಲಿಯಂಥ ನೆಲದ ಭಾಷೆಗಳಲ್ಲೇ ಬರೆಯಬೇಕೆಂದು ಹೇಳುತ್ತಿದ್ದಾರೆ.

: ಭಾರತದಲ್ಲೂ ಅಂಥದೇ ಪರಿಸ್ಥಿತಿಯಿದೆ. ಆದರೆ ನಮ್ಮ ಭಾಷೆಗಳು ಐರೋಪ್ಯ ಭಾಷೆಗಳಂತೆಯೇ ದೊಡ್ಡವೆಂಬ ನಂಬಿಕೆ ನನಗಿದೆ.

ಚಿ.: ಅದು ಸರಿ. ಡಚ್ ಸಾಹಿತ್ಯ ಬದುಕುಳಿಯಬಹುದಾದರೆ ಕನ್ನಡ ಏಕಾಗಬಾರದು?

—-
ಗ್ರಂಥ: ಪೂರ್ವಾಪರ, (ಪುಟ ೨೦೧೨೧೦)

* * *