ಸ್ವಾಭಾವಿಕ ವಿಧಾನ

ಇಂಗ್ಲಿಷ್ ಮಾಧ್ಯಮದಲ್ಲಿ ಕನಿಷ್ಠ ಪ್ರಾಥಮಿಕ ಹಂತದ ಓದು ನಡೆಸಿದವರಲ್ಲಿ ಕನ್ನಡ ಭಾಷೆಯನ್ನು ಕಲಿಯಲು ಮತ್ತು ಹೆಚ್ಚಿನ ಪ್ರಭುತ್ವವನ್ನು ಗಳಿಸುವ ಉದ್ದೇಶ ಹೊಂದಿರುವವರಿಗಾಗಿ ಈ ಕೋರ್ಸನ್ನು ತಯಾರಿಸಲಾಗಿದೆ.

ಅನೇಕ ಮಂದಿ ಮಾತೃ ಭಾಷೆಯನ್ನು ಮತ್ತು ತಮ್ಮ ಮನೆ ಅಥವಾ ಕೌಟುಂಬಿಕ ಪರಿಸರದಲ್ಲಿರುವಂಥ ಎರಡನೆಯ ಭಾಷೆಯನ್ನು ಯಾವ ರೀತಿ ಸ್ವಾಭಾವಿಕವಾಗಿ ಕಲಿಯುತ್ತಾರೋ ಆ ಕಲಿಕೆಯ ವಿಧಾನದಲ್ಲಿ ಇದನ್ನು ರೂಪಿಸಲಾಗಿದೆ. ಒಂದು ಹೊಸ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಒಂದು ಮಗು ಭಾಷೆಯನ್ನು ಹೇಗೆ ಸಹಜ ರೀತಿಯಲ್ಲಿ ಕಲಿತುಕೊಳ್ಳುತ್ತದೆ ಎನ್ನುವುದನ್ನು ನೆನಪಿಗೆ ತಂದುಕೊಂಡರೆ, ಭಾಷಾರ್ಜನೆಯ ಸ್ವಾಭಾವಿಕ ವಿಧಾನ ಹೇಗಿರುತ್ತದೆ ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಮಗು ತನ್ನ ಮಾತೃಭಾಷೆಯನ್ನು ಸಹಜವಾಗಿಯೇ ಕೇಳಿ ಮತ್ತು ಕೇಳಿದ್ದನ್ನು ಪುನರುಚ್ಚರಿಸಿ ಕಲಿಯುತ್ತದೆ. ಅನೇಕ ಮಕ್ಕಳು ತಮ್ಮ ಮಾತೃಭಾಷೆಯಲ್ಲದ ಒಂದು ಭಾಷೆಯನ್ನು ಕೂಡ ಈ ರೀತಿ ಕಲಿತುಕೊಳ್ಳುತ್ತಾರೆ. ಎರಡಕ್ಕಿಂತ ಹೆಚ್ಚು ಭಾಷೆಯನ್ನು ನಿರಾಯಾಸವಾಗಿ ಆಡುವ ಮಕ್ಕಳು ಕೂಡ ಇದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ತಮ್ಮ ಮನೆ ಅಥವಾ ಕುಟುಂಬದೊಳಗೆ ಒಂದಕ್ಕಿಂತ ಹೆಚ್ಚು ಭಾಷೆಯನ್ನು ಬಳಸುವ ಮಕ್ಕಳ ಸಂಖ್ಯೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ದೊಡ್ಡವರು ಕೂಡ ಮಕ್ಕಳು ಕಲಿಯುವ ವಿಧಾನದಲ್ಲಿ ಕಲಿತರೆ ಮಾತೃಭಾಷೆಯಲ್ಲದ ಒಂದು ಭಾಷೆಯಲ್ಲಿ ಮಾತೃಭಾಷೆಯಲ್ಲಿರುವಷ್ಟೇ ಪ್ರಾವೀಣ್ಯವನ್ನು ಪಡೆಯುವುದು ಸಾಧ್ಯವಿದೆ.

ಎರಡನೆಯ ಅಥವಾ ಮೂರನೆಯ ಭಾಷೆಯ ಕಲಿಕೆಯಲ್ಲಿ  ಕೇಳಿ ಕಲಿಯುವ ಅವಕಾಶ ಸೀಮಿತವಾದುದರಿಂದ, ವಿದ್ಯಾರ್ಥಿ ಒಂದೋ ಆ ಭಾಷೆಯನ್ನು ಚೆನ್ನಾಗಿ ಮಾತಾಡಬಲ್ಲವರ ನೆರವನ್ನು ಪಡೆಯಬೇಕು ಅಥವಾ ಒಂದು ಆಡಿಯೋ ಪರಿಕರವನ್ನು ಉಪಯೋಗಿಸಬೇಕು.

ಕನ್ನಡ ಕಲಿಕೆಯಲ್ಲಿ ಆಲಿಸಿ ಕಲಿತ ಹಂತದಿಂದ ಓದಿ ಕಲಿಯುವ ಹಂತವನ್ನು ಪ್ರವೇಶಿಸುವುದು ಬಹಳ ಸುಲಭ. ಹೇಗೆಂದರೆ, ಉದಾಹರಣೆಗಾಗಿ, ಮುದ್ರಿತ ಇಂಗ್ಲಿಷ್ ಭಾಷೆಯಲ್ಲಿ ನಾವು ಕಾಣುವ ಅಕ್ಷರಗಳು (letters) ಕೇವಲ ಬರೆಯುವ ಅಕ್ಷರಗಳಾಗಿರುತ್ತವೆಯೇ ಹೊರತು, ಮಾತಿನ ಅಕ್ಷರಗಳು (syllables) ಆಗಿರುವುದಿಲ್ಲ. ‘cow’ ಎಂಬ ಶಬ್ದದಲ್ಲಿರುವ ಮೂರು ಅಕ್ಷರಗಳು ಬರೆಯುವ ಅಕ್ಷರಗಳೇ ಹೊರತು ಮಾತಿನ ಅಕ್ಷರಗಳಲ್ಲ. ಮಾತಿನ ಅಕ್ಷರದಲ್ಲಿ ಅದು ‘ಕೌ’ ಎಂದಾಗಿರುತ್ತದೆ. ಆ ಶಬ್ದ (word) ದ ಉಚ್ಚಾರವನ್ನು ಆಲಿಸುವ ಮೂಲಕವೇ ತಿಳಿಯಬೇಕಾಗುತ್ತದೆ. ಆದ್ದರಿಂದ ಇಂಗ್ಲಿಷನ್ನು ಓದಲು ಆರಂಭಿಸುವುದಕ್ಕೆ ಮೊದಲು, ಸಾಕಷ್ಟು ಆಲಿಸಿಕೊಂಡಿರಬೇಕಾಗುತ್ತದೆ. ಕೆಲವು ಇಂಗ್ಲಿಷ್ ಸ್ವರಗಳು ಮತ್ತು ವ್ಯಂಜನಗಳು ಕನ್ನಡದಲ್ಲಿಲ್ಲ. ಅವುಗಳ ಸರಿಯಾದ ಉಚ್ಚಾರವನ್ನು ಓದು ಆರಂಭಿಸುವ ಮೊದಲು ಆಲಿಸಿಯೇ ಕಲಿತುಕೊಳ್ಳಬೇಕಾಗುತ್ತದೆ. ಆದರೆ ಕನ್ನಡದ ‘ದನ ಎಂಬ ಶಬ್ದದಲ್ಲಿರುವ ಎರಡು ಅಕ್ಷರಗಳು ಮಾತಿನ ಅಕ್ಷರಗಳೂ ಹೌದು, ಬರೆಯುವ ಅಕ್ಷರಗಳೂ ಹೌದು. ಆದುದರಿಂದ ಕನ್ನಡದಲ್ಲಿ ಆಲಿಸುವುದರ ಜೊತೆಗೇ ಓದನ್ನು ಕೂಡ ನಿರಾಯಾಸವಾಗಿ ನಡೆಸಬಹುದಾಗಿದೆ.

ಕೇವಲ ದೈನಂದಿನ ವ್ಯಾವಹಾರಿಕ ‘ಸ್ಪೋಕನ್ ಕನ್ನಡ ಕಲಿಸುವುದು ಈ ಕೋರ್ಸಿನ ಉದ್ದೇಶವಲ್ಲ. ವಾಸ್ತವದಲ್ಲಿ, ವಿದ್ಯಾವಂತರಾದವರಿಗೆ ತಾವು ಕಲಿತ ಭಾಷೆಗಳ ಅತಿ ಹೆಚ್ಚಿನ ಉಪಯೋಗ ಓದುವಿಕೆಯಲ್ಲಿ. ಎರಡನೆಯ ಭಾಷೆಯಲ್ಲಂತೂ ಓದುವಿಕೆಯ ಉಪಯೋಗವೇ ಹೆಚ್ಚು. ಆದುದರಿಂದ ನಮ್ಮ ಎರಡನೆಯ ಅಥವಾ ಮೂರನೆಯ ಭಾಷೆಯ ಕಲಿಕೆಯನ್ನು ಕೇವಲ ಸ್ಪೋಕನ್ ಲಾಂಗ್ವೇಜಿನ ಬಿಡಿ ಬಿಡಿ ವಾಕ್ಯಗಳಿಗೆ ಸೀಮಿತಗೊಳಿಸಬಾರದು. ಆ ಭಾಷೆಯಲ್ಲಿ ಸ್ವತಂತ್ರವಾಗಿ ಯೋಚಿಸಿ, ಮಾತಾಡುವ ಮತ್ತು ಬರೆಯುವ ಸಾಮರ್ಥ್ಯವನ್ನು ಗಳಿಸಬೇಕು.

ಮಾತೃಭಾಷೆಯ ಜೊತೆಯಲ್ಲಿ ಇನ್ನೊಂದು ಭಾಷೆಯನ್ನು ಕಲಿಯುವಾಗ ಸ್ವಾಭಾವಿಕವಾಗಿಯೇ ನಮ್ಮ ಮಾತೃಭಾಷೆಯಲ್ಲಿ ಕೂಡ ನಮ್ಮ ಗ್ರಹಣ ಶಕ್ತಿ ಮತ್ತು ಅಭಿವ್ಯಕ್ತಿ ಸಾಮರ್ಥ್ಯ ವೃದ್ಧಿಸುತ್ತದೆ. ಆದುದರಿಂದ ಒಂದು ಭಾಷೆಯನ್ನು ಕಲಿಯುವಾಗ ನಾವು ಆ ಭಾಷೆಯ ಚೆಂದವನ್ನು ಕಾಣಬೇಕು. ನಮ್ಮ ಶಬ್ದ ಭಂಡಾರವನ್ನು ಬೆಳೆಸುತ್ತಾ ಹೋಗಬೇಕು. ಒಂದು ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳುವ ಕೌಶಲವನ್ನು ಪಡೆಯಬೇಕು. ಹೊಸ ಹೊಸ ವಿಚಾರಗಳನ್ನು ಹೊಸ ಹೊಸ ಆಶಯಗಳನ್ನು ನಮ್ಮದಾಗಿಸಿಕೊಳ್ಳಬೇಕು. ನಾವು ಕಲಿಯಲು ಬಳಸುವ ಭಾಷಾ ಪಠ್ಯದಲ್ಲಿ ಅದಕ್ಕೆ ಅವಕಾಶ ಇರಬೇಕು. ಆ ನಿಟ್ಟಿನಲ್ಲಿ ಈ ಕೋರ್ಸಿನ ಪಠ್ಯದಲ್ಲಿ ಸಾಕಷ್ಟು ವೈವಿಧ್ಯವನ್ನು ತರುವ ಪ್ರಯತ್ನ ಮಾಡಲಾಗಿದೆ. ಎರಡನೆಯ ಭಾಷೆಯನ್ನು ಕಲಿಯುವಾಗ ಆಗುವ ಕಷ್ಟದಲ್ಲಿ ಸುಖವನ್ನು ಕಾಣದಿದ್ದರೆ, ಅದಕ್ಕಾಗಿ ಮತ್ತೆ ಮತ್ತೆ ಕಷ್ಟಪಡದಿದ್ದರೆ ಎರಡನೆಯ ಭಾಷೆಯ ಮೇಲೆ ಪ್ರಭುತ್ವ ಲಭಿಸುವುದಿಲ್ಲ. ‘ತಪ್ಪಾದರೂ ಮಾತಾಡುತ್ತೇನೆ. ಅರ್ಥವಾಗದಿದ್ದರೂ ಓದುತ್ತೇನೆ ಎಂಬ ಛಲಕ್ಕೆ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ.