ಯೋಚನೆ ಮಾತಾದಾಗ ಭಾಷೆಯಾಗುತ್ತದೆ. ನಮ್ಮ ಮಿದುಳಿನಲ್ಲಿ, ಮಾತು ಮತ್ತು ಅದರ ಹಿಂದೆ ಇರುವ ಯೋಚನೆ ಶಬ್ದ ಮತ್ತು ವಾಕ್ಯಗಳ ರೂಪದಲ್ಲಿರುತ್ತದೆಯೇ ಹೊರತು ಬಿಡಿ ಬಿಡಿ ಅಕ್ಷರಗಳ ರೂಪದಲ್ಲಿರುವುದಿಲ್ಲ.

ಯಾವುದೇ ಭಾಷೆಯ ಕಲಿಕೆಯನ್ನು ಶಬ್ದ ಮತ್ತು ವಾಕ್ಯಗಳ ಮೂಲಕ ಅಂದರೆ ಮೌಖಿಕ ಮತ್ತು ಮುದ್ರಿತ ಮಾತಿನ ಜೊತೆಗೆ ಕಲಿತಾಗ  ಆ ಭಾಷೆ ಸುಲಭದಲ್ಲಿ ಕರಗತವಾಗುತ್ತದೆ. ಆಲಿಸಿ ಗ್ರಹಿಸುವಲ್ಲಿ ಮತ್ತು ಓದಿನಲ್ಲಿ ವಿಚಾರ ಗ್ರಹಣದ ವೇಗ ಅಧಿಕವಾಗುತ್ತದೆ. ಅನಂತರ, ಸ್ವತಂತ್ರ ಬರವಣಿಗೆಯ ಸಂದರ್ಭದಲ್ಲಿ, ವಿಚಾರ ಅಡೆತಡೆಯಿಲ್ಲದೆ ಪ್ರವಹಿಸುತ್ತದೆ. ಭಾಷೆಯನ್ನು ಸ್ವಾಭಾವಿಕವಾದ ವಿಧಾನದಲ್ಲಿ ಯೋಚನೆಯ ಜೊತೆಜೊತೆಗೇ ಕಲಿಯಬೇಕಾದ ಮತ್ತು ಕಲಿಸಬೇಕಾದ ವೈಜ್ಞಾನಿಕ ವಿಧಾನ ಇದೇ ಆಗಿರುತ್ತದೆ.

ಈ ವಿಧಾನದಲ್ಲಿ ಭಾಷೆಯನ್ನು ಕಲಿಯುವುದು ಬಹಳ ಸುಲಭ. ಮೊದಲು ಮಾತುಗಳನ್ನು ಆಲಿಸಿ ಆಡಿ ಓದಿ ಕಲಿಯುವುದು; ಇದರ ಜೊತೆಗೇ  ಯೋಚನೆಗಳನ್ನು ಮಾತಿನಲ್ಲಿ ಅಭಿವ್ಯಕ್ತಿಸುವುದು ಮತ್ತು ಅದರ ಜೊತೆಯಲ್ಲಿ ಅಗತ್ಯದ ಅಕ್ಷರಗಳ ಪರಿಚಯ ಮಾಡಿಕೊಳ್ಳುತ್ತಾ ಅರ್ಥ ಮಾಡಿಕೊಂಡು ಓದುವುದು. ಕೊನೆಗೆ, ಓದಿನ ಮೂಲಕ ಕಲಿತ ಶಬ್ದಗಳಲ್ಲೇ ಶಬ್ದಗಳನ್ನು ಜೋಡಿಸಿಕೊಂಡು ಸ್ವತಂತ್ರವಾಗಿ ವಾಕ್ಯಗಳನ್ನು ರಚಿಸಿ ಬರೆಯುವುದು. ಇದು ಒಂದು ಭಾಷೆಯನ್ನು ಮಾತ್ರವಲ್ಲ, ಅದರ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೂಡ ನೇರವಾಗಿ ಪ್ರವೇಶಿಸುವ ವಿಧಾನ.

ಮಗು ತನ್ನ ತಾಯಿನುಡಿಯನ್ನು ತಾಯಿಯ ಮಾತನ್ನು ಆಲಿಸಿ ಕಲಿಯುತ್ತದೆ. ಕಲಿಯುವ ಅವಧಿಯಲ್ಲಿ ತಪ್ಪು ಉಚ್ಚಾರಗಳು ಮತ್ತು ತಪ್ಪು ಪದ ಬಳಕೆಗಳು ಸಹಜ. ತಪ್ಪು ಎನ್ನುವುದು ದೊಡ್ಡವರ ದೃಷ್ಟಿಕೋನ. ಮಗು ಕಲಿಯುತ್ತಿರುತ್ತದೆ ಅಷ್ಟೆ. ನಡೆಯಲು ಕಲಿಯುವ ಹಾಗೆ. ಹೇಗೆ ನಡೆಯಬೇಕು, ಹೇಗೆ ನುಡಿಯಬೇಕು ಎಂದು ಕಲಿಸುವುದು ಕಲಿಕೆ; ಅದು ಸಕಾರಾತ್ಮಕ. ಹೇಗೆ ನಡೆದರೆ ತಪ್ಪು, ಹೇಗೆ ನುಡಿದರೆ ತಪ್ಪು ಎಂದು ಮಾಡಿ ತೋರಿಸುವುದು ಅಥವಾ ಹೇಳಿ ತೋರಿಸುವುದು ಸಕಾರಾತ್ಮಕವಲ್ಲ. ಪುನಃ ಪುನಃ ಸರಿಯಾದುದನ್ನು ಮಾತ್ರ ಮಾಡಿ ಅಥವಾ ಆಡಿ ತೋರಿಸುವುದು ಮಾತ್ರ ಸಕಾರಾತ್ಮಕ, ಅದು ಕಲಿಕೆ.

ದೊಡ್ಡವನಾದ ಮೇಲೆ ವ್ಯಕ್ತಿ ಎರಡನೆಯ ಭಾಷೆಯನ್ನು ಕಲಿಯುವ ಉದ್ದೇಶ ಬೇರೆ ಇರಬಹುದು. ಅದು ಮಾತ್ರಸಂಸ್ಕೃತಿಯ, ಮಾತೃಭಾಷೆಯ ಒಂದು ಭಾಗವಾಗಿ ಬಂದರೆ ಒಂದು ಪರಿಪೂರ್ಣ ಕೌಶಲವಾಗುತ್ತದೆ. ಈ ಕೌಶಲವನ್ನು ಸತತವಾದ ಆಲಿಸುವಿಕೆಯಿಂದ ಮತ್ತು ಓದಿನಿಂದ ಗಳಿಸಿಕೊಳ್ಳಬಹುದು.

ಸ್ಪೋಕನ್ ಲಾಂಗ್ವೇಜ್ ಅಥವಾ ಆಡುಭಾಷೆ ಸುಲಭದಲ್ಲಿ ಕರಗತವಾಗುವುದಿಲ್ಲ. ಅದನ್ನು ಒಂದೋ ಆ ಭಾಷೆ ಮಾತೃಭಾಷೆಯಾಗಿರುವವರ ಅಥವಾ ಅದನ್ನು ಚೆನ್ನಾಗಿ ಮಾತಾಡುವವರ ಸಂಪರ್ಕದಿಂದ ಕಲಿತುಕೊಳ್ಳಬಹುದು. ಇದು ಬಹು ಮಟ್ಟಿಗೆ ಮಗು ತನ್ನ ತಾಯಿನುಡಿಯನ್ನು ಕಲಿತುಕೊಳ್ಳುವ ವಿದಾನವೇ ಆಗಿದೆ. ಲಭ್ಯ ಅವಕಾಶವನ್ನು ಉಪಯೋಗಿಸಿಕೊಂಡು ಸತತವಾಗಿ ಆಲಿಸುವ ಮತ್ತು ಓದುವ ಅಭ್ಯಾಸದ ಮೂಲಕ ಮಾತ್ರ ಭಾಷೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಮೊದಲು ಮಾತು, ಅನಂತರ ನೇರವಾಗಿ ಪುಸ್ತಕದ ಓದು; ಬರವಣಿಗೆ ಅನಂತರ. ಬರವಣಿಗೆ ಅಂದರೆ ಅಕ್ಷರ ಬರವಣಿಗೆ, ಕಾಗುಣಿತ ಕಲಿಕೆ ಅಲ್ಲ; ಬರವಣಿಗೆ ಅಂದರೆ ನೇರವಾಗಿ ಶಬ್ದಗಳ ಮತ್ತು ವಾಕ್ಯಗಳ ಬರವಣಿಕೆ. ಅದು ವೈಜ್ಞಾನಿಕ ವಿಧಾನದಲ್ಲಿ ಭಾಷೆಯ ಕಲಿಕೆ.  ಇಂಗ್ಲಿಷ್ ಬಲ್ಲವರಲ್ಲಿ ಕನ್ನಡ ಭಾಷೆಯನ್ನು ಮೌಖಿಕವಾಗಿಯೂ ಲಿಖಿತ ರೂಪದಲ್ಲಿಯೂ ಕರಗತ ಮಾಡಿಕೊಳ್ಳುವ ಆಸಕ್ತಿಯಿರುವವರಿಗಾಗಿ ಈ ಕೋರ್ಸನ್ನು ಸಿದ್ಧ ಪಡಿಸಲಾಗಿದೆ.