KANNADA MADE EASY

 

Interactive Method

ಭಾಷೆಯನ್ನು ಕಲಿಯುವುದರ ಕುರಿತಾದ ಎಲ್ಲ ಪೂರ್ವಗ್ರಹಗಳನ್ನು ತೊರೆದು, ಯಾವುದೇ ಭಾಷೆಯನ್ನು ಒಂದೆರಡು ತಿಂಗಳಲ್ಲಿ ಕಲಿಯಲು ಸಾಧ್ಯ ಮತ್ತು ಅಷ್ಟೇ ಸುಲಭವಾಗಿ ಕಲಿಸಲು ಕೂಡ ಸಾಧ್ಯ ಎಂಬ ಹೈಪೋಥೀಸಿಸನ್ನು ಮೊದಲು ಒಪ್ಪಿಕೊಳ್ಳೋಣ. ಈ ಪ್ರಯೋಗಕ್ಕೆ ಬೇಕಾಗಿರುವುದು ‘ಮುಕ್ತ ಪಠ್ಯ’ವನ್ನು ಮಾಡಿಕೊಳ್ಳುವ ಸಾಮರ್ಥ್ಯವಿರುವ ಒಬ್ಬ ಅಧ್ಯಾಪಕ ಅಥವಾ ಅಧ್ಯಾಪಿಕೆ, ಅವರಿಗೆ ಒಬ್ಬ ಸಹಾಯಕ ಅಥವಾ ಸಹಾಯಕಿ, ಮತ್ತು ಕಲಿಯುವ ಮನಸ್ಸಿರುವ ಯಾವುದೇ ಪ್ರಾಯದ ‘ಮಕ್ಕಳು’. ಈ ವಿಚಾರದಲ್ಲಿ ಅರುವತ್ತು-ಎಪ್ಪತ್ತು ವರ್ಷದವರನ್ನು ಕೂಡ ‘ಮಕ್ಕಳು’ ಎಂದೇ ಪರಿಗಣಿಸಬೇಕಾಗುತ್ತದೆ.

ಮೊದಲಾಗಿ ತಿಳಿದುಕೊಳ್ಳಬೇಕಾದ ವಿಚಾರಗಳೆಂದರೆ, ಈ ವಿಧಾನದ ಕಲಿಕೆಯಲ್ಲಿ ಮಕ್ಕಳು ಸಂಪೂರ್ಣವಾಗಿ ಶಾಲೆಯಲ್ಲಿ ನಡೆಯುವ ಅಧ್ಯಾಪಕನ ಪಾಠದ ವಿಧಾನವನ್ನು ಅನುಸರಿಸಬೇಕು. ಮಕ್ಕಳ ಪಾಲಕರು ಎಷ್ಟೇ ತಿಳಿದವರಿದ್ದರೂ ಅವರು ಇದರಲ್ಲಿ ಕೈ ಹಾಕಬಾರದು. ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಕನ್ನಡ ಅಕ್ಷರಗಳನ್ನು ಅಥವಾ ಶಬ್ದಗಳನ್ನು ಓದಿಸುವ, ಬರೆಸುವ ಕೆಲಸವನ್ನು ಮಾಡಬಾರದು. ಕನ್ನಡ ಅಕ್ಷರ ಮಾಲೆಯನ್ನು ಅಥವಾ ಶಬ್ದಗಳನ್ನು ಕಲಿಸುವ ಯಾವ ಪುಸ್ತಕವೂ ಮಗುವಿಗೆ ಅಗತ್ಯವಿಲ್ಲ. ಅದರ ಮೂಲಕ ಮಗುವಿಗೆ ಕನ್ನಡ ಭಾಷೆ ಬರುವುದಿಲ್ಲ. ಮಾತ್ರವಲ್ಲ, ಅವುಗಳಿಂದ ತೊಂದರೆಯೇ ಉಂಟಾಗುತ್ತದೆ ಎಂಬುದನ್ನು ಶಿಕ್ಷಕರು ಮನವರಿಕೆ ಮಾಡಿಕೊಂಡರೆೆ ಕಲಿಸುವ ಕೆಲಸ ಹಗುರವಾಗುತ್ತದೆ. ಈ ವಿಧಾನದ ಕಲಿಕೆಯ ಸಫಲತೆಯನ್ನು ತಿಳಿದುಕೊಳ್ಳಲು ತಾಳ್ಮೆಯಿಂದ ಕಾಯುವಂತೆ ಮಕ್ಕಳ ಪಾಲಕರಿಗೆ ತಿಳಿಸಬೇಕು. ಯಾವ ಹಂತದಿಂದ ಮತ್ತು ಹೇಗೆ ಈ ಕಲಿಕಾ ವಿಧಾನದಲ್ಲಿ ಪಾಲಕರು ಪಾಲುದಾರರಾಗಬಹುದು ಎನ್ನುವುದನ್ನು ಮಗು ಮಾತಾಡಲು, ಓದಲು ಮತ್ತು ಬರೆಯಲು ಕಲಿತ ಮೇಲೆ ಪಾಲಕರಿಗೆ ತಾನಾಗಿಯೇ ತಿಳಿಯುತ್ತದೆ.

ಈ ವಿಧಾನದಲ್ಲಿ ಮಕ್ಕಳಿಗೆ ಶಾಲೆಯಲ್ಲಿ ಎರಡು ಅಥವಾ ಮೂರು ಭಾಷೆಗಳನ್ನು ಕಲಿಸಬಹುದು.

ಹಂತ ಒಂದು: ಅಧ್ಯಾಪಕ ಆರನೆಯ (ಅಥವಾ ಅದಕ್ಕಿಂತ ಮೇಲಿನ ತರಗತಿಯ) ಒಂದು ಮಗುವನ್ನು ಸಹಾಯಕನನ್ನಾಗಿ ತೆಗೆದುಕೊಳ್ಳಬೇಕು. (ಪ್ರತಿ ಪಾಠಕ್ಕೂ ಒಂದೇ ಸಹಾಯಕನನ್ನು ಬಳಸುವ ಬದಲು ಸಹಾಯಕನನ್ನು ಬದಲಾಯಿಸುತ್ತಾ ಇರುವುದು ಉತ್ತಮ. ಇದರಿಂದಾಗಿ ಆ ಮಗುವಿಗೂ ಪ್ರಯೋಜನವಿದೆ) . ಈ ಸಹಾಯಕ ಈ ಪ್ರಯೋಗಕ್ಕೆ ಬೇಕಾದಷ್ಟು ಕನ್ನಡ ತಿಳಿದಿರಬೇಕಾದ್ದು ಮತ್ತು ಅಧ್ಯಾಪಕ ಹೇಳಿದಂತೆ ಮಾಡುವಷ್ಟು ಚುರುಕು ಇರಬೇಕಾದ್ದು ಅಗತ್ಯ. ಈ ಪ್ರಯೋಗದಲ್ಲಿ ಮಾತನಾಡುವ ಮೂಲಕ ನೇರವಾಗಿ ಭಾಷೆಯನ್ನೇ ಕಲಿಸಲಾಗುತ್ತದೆ. ಭಾಷೆಯನ್ನು ಆಡುವಾಗ ನಮಗೆ ಮೊಟ್ಟಮೊದಲು ಪರಿಚಯ ಆಗಬೇಕಾದ್ದು ಹೆಸರುಗಳದ್ದು ಮತ್ತು ಕ್ರಿಯೆಗಳದ್ದು. ಅಂದರೆ, ಹೆಸರು ಮತ್ತು ಹೆಸರು (Noun and Noun) , ಹೆಸರು ಮತ್ತು ಕ್ರಿಯೆ (Noun and Verb) ಈ ಎರಡು ಬಗೆಯ ಸಂಬಂಧಗಳದ್ದು. ಇದು ಮಾತಿನ ಮೂಲಕ ಯಾವುದೇ ವ್ಯಾಕರಣ ವಿವರಣೆಯಿಲ್ಲದೆ ಸ್ವಾಭಾವಿಕವಾದ ರೀತಿಯಲ್ಲಿಯೇ ಆಗುತ್ತದೆ.

(ಈ ಪ್ರಯೋಗದಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಅಥವಾ ಕನ್ನಡದಿಂದ ಇಂಗ್ಲಿಷಿಗೆ ಯಾವುದೇ ಭಾಷಾಂತರ ಇಲ್ಲ. ಮಾರ್ಗದರ್ಶನದ ಮಾತು ಕನ್ನಡದಲ್ಲಿರುತ್ತದೆ. ಅಗತ್ಯವೆನಿಸಿದಾಗ ಇಂಗ್ಲಿಷಿನಲ್ಲಿರುತ್ತದೆ. ಮಾತೃಭಾಷೆಯ ಕಲಿಕೆಯಲ್ಲಾದರೆ, ಮಾತು ಆಡುವ ಮೊದಲನೆಯ ಹಂತ ಅನಿವಾರ್ಯವಲ್ಲ. ಓದುವ ಬರೆಯುವ ಎರಡನೆಯ ಹಂತದಿಂದಲೇ ಆರಂಭಿಸಬಹುದು)       

ಶಿಕ್ಷಕರಿಗೆ ಸೂಚನೆಗಳು: ತರಗತಿಯಲ್ಲಿರುವ ಮಕ್ಕಳಿಗೆ ಕನ್ನಡ ಭಾಷೆ ಹೇಗಿದೆ ಎಂದು ತಿಳಿದಿಲ್ಲ ಎಂದು ನೀವು ಭಾವಿಸಬೇಕು. ಒಂದು ವೇಳೆ ಕನ್ನಡ ಕೇಜಿ ಶಾಲೆಯಲ್ಲಿ ಓದಿದ ಅಥವಾ ತಾಯಿತಂದೆಯ ಮೂಲಕ ಕನ್ನಡದ ಪರಿಚಯವಾದ ಮಕ್ಕಳು ತರಗತಿಯಲ್ಲಿದ್ದರೆ, ಆ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗಿಲ್ಲ.

ಕೆಳಗೆ ಅಭ್ಯಾಸಕ್ಕೆ ಕೊಟ್ಟಿರುವ ವಾಕ್ಯಗಳು ಕೇವಲ ಮಾದರಿಗೆ. ಶಿಕ್ಷಕರು ತಾವು ಬಳಸುವ ವಾಕ್ಯಗಳನ್ನು ತಾವೇ ತಯಾರಿಸಿಕೊಳ್ಳಬೇಕು. ಅದನ್ನು ಒಂದು ಪಠ್ಯದಂತೆ ಜೋಪಾನವಾಗಿಟ್ಟುಕೊಳ್ಳಬೇಕು. ಮುಂದೆ ಇದೇ ವಾಕ್ಯಗಳನ್ನು ಓದು ಮತ್ತು ಬರವಣಿಗೆಯ ಕಲಿಕೆಗೂ ಬಳಸಬೇಕಾಗುತ್ತದೆ. ಯಾವುದೇ ವಾಕ್ಯ ಅಥವಾ ಶಬ್ದವನ್ನು ಮರಳಿ ಮರಳಿ ಬಳಸುವುದು ಒಂದು ಭಾಷೆಯ ಕಲಿಕೆಯಲ್ಲಿ ಬಹಳ ಪರಿಣಾಮಕಾರಿ ಎನ್ನುವುದನ್ನು ಯಾವಾಗಲೂ ನೆನಪಿನಲ್ಲಿಡಬೇಕು.

 

ಪಾಠದ ಮಾದರಿ:

Children, now watch what I and my friend are doing. Watch our action and listen to what we say. Keep your mouth closed. Don’t move your tonguge when we speak. Just listen carefully. Then do what I say.

 (ಮೊದಲ ಪಾಠದಲ್ಲಿ ಸಹಾಯಕನಾಗಿರುವ ಹುಡುಗನ ಹೆಸರು ಉದಾಹರಣೆಗೆ, ‘ರವಿ’ ಎಂದಿರಲಿ. ೩ನೇ ಪಾಠದ ವರೆಗೆ ಸಹಾಯಕ ಇರಲೇ ಬೇಕು. ಅನಂತರ ಇರದಿದ್ದರೂ ತೊಂದರೆಯಿಲ್ಲ)

‘‘ರವಿ, ಕಿಟಕಿಯನ್ನು ಮುಚ್ಚು  ಎಂದು ಹೇಳಿ.

ರವಿ ಹೋಗಿ ಕಿಟಕಿಯನ್ನು ಮುಚ್ಚುತ್ತಾನೆ. ತರಗತಿಯ ಒಬ್ಬ ವಿದ್ಯಾರ್ಥಿಯನ್ನು ಕರೆದು ಇದೇ ವಾಕ್ಯವನ್ನು ಹೇಳಿರಿ. (ಕಲಿಕೆಯ ಸಂದರ್ಭದಲ್ಲಿ, ಪ್ರತಿಯೊಂದು ವಿದ್ಯಾರ್ಥಿಯ ಹೆಸರು ಹೇಳಿ ಕರೆಯಬೇಕು. ಬೆರಳು ತೋರಿಸಿ ‘ನೀನು’ ಅಂತ ಅಲ್ಲ) ಅವನು ಅದೇ ರೀತಿ ಮಾಡುತ್ತಾನೆ. ಇದೇ ರೀತಿ ಹತ್ತು-ಹದಿನೈದು ವಾಕ್ಯಗಳನ್ನು ಈ ಪಾಠದಲ್ಲಿ ಬಳಸಿರಿ.

ಉದಾಹರಣೆಗೆ:

೧. ಕಿಟಕಿಯನ್ನು ತೆರೆ. ೨. ಬಾಗಿಲು ಮುಚ್ಚು. ೩. ಬಾಗಿಲು ತೆರೆ. ೪. ಕುರ್ಚಿಯ ಮೇಲೆ ಕುಳಿತುಕೊ. ೫. ಈ ಕುರ್ಚಿಯ ಮೇಲೆ ಕುಳಿತುಕೊ. ೬. ಆ ಕುರ್ಚಿಯ ಮೇಲೆ ಕುಳಿತುಕೊ. ೭. ಹಾರು. ೮. ಹಾರುವುದನ್ನು ನಿಲ್ಲಿಸು. ೮. ಓಡು. ೯. ಓಡುವುದನ್ನು ನಿಲ್ಲಿಸು ೧೦. ನನ್ನನ್ನು ಮುಟ್ಟು.  ೧೧. ನಡೆ (ನಡಿ) ೧೨. ನಗು (ನೆಗಾಡು) ೧೩. ನಗುವುದನ್ನು ನಿಲ್ಲಿಸು. ೧೪. ಅಳು. ೧೫. ಅಳುವುದನ್ನು ನಿಲ್ಲಿಸು.

(ಟಿಪ್ಪಣಿ: ವಿದ್ಯಾರ್ಥಿಗಳು ದೊಡ್ಡವರಾಗಿದ್ದಲ್ಲಿ, ಆಜ್ಞಾರ್ಥಕ ಪದಗಳನ್ನು ಅಗತ್ಯಕ್ಕನುಸಾರ ಬಹುವಚನವಾಗಿಸಿಕೊಳ್ಳಬಹುದು)

ಸಹಾಯಕನಿಂದ ಮಾಡಿಸಿದ ನಂತರ ಈ ವಾಕ್ಯಗಳನ್ನು ತರಗತಿಯ ಮಕ್ಕಳಲ್ಲಿ ಒಬ್ಬರು ಇನ್ನೊಬ್ಬರಿಗೆ ಹೇಳಬೇಕು. ಎಲ್ಲಾ ಒಟ್ಟಿಗೇ ಅಲ್ಲ, ಒಂದು ವಾಕ್ಯದ ನಂತರ ಇನ್ನೊಂದು. ಇದನ್ನು ಸುಮಾರು ೪೫ ನಿಮಿಷಗಳ ಅಥವಾ ಒಂದು ಗಂಟೆಯ ಐದು ಪಿರೆಡುಗಳ ತನಕ ಮಾಡಬೇಕು. (ಕ್ರಿಯೆಯನ್ನು ಮಾಡುವವನು ಮಾತು ಆಡಲಿಕ್ಕೆ ಇಲ್ಲ. ನಾಲಗೆ ಅಲ್ಲಾಡಿಸಲಿಕ್ಕೆ ಇಲ್ಲ.  ಮಾತು ಅವನೊಳಗೆ ಅನುರಣಿಸುತ್ತಾ ಇರುತ್ತದೆ)

ಒಟ್ಟು ಕಾಲ ಸುಮಾರು ಗಂಟೆಗಳು

 

Lesson 2. ಮೊದಲನೆಯ ಪಾಠದ್ದೇ ವಿಧಾನ. ಈಗಾಗಲೇ ಕಲಿತಿರುವ ವಾಕ್ಯಗಳ ಜೊತೆ ಹೊಸ ವಾಕ್ಯಗಳನ್ನು ಸೇರಿಸಿಕೊಳ್ಳಿ. ಕೆಲವು ಸಂಬಂಧಸೂಚಕ ಪದ (Preposition) ಗಳಿರುವ ವಾಕ್ಯಗಳನ್ನು ಸೇರಿಸಿಕೊಳ್ಳಿ. ಉದಾಹರಣೆಗೆ,

೧. ಕಿಟಕಿಯನ್ನು ತೆರೆದು ಬಾಗಿಲನ್ನು ಮುಚ್ಚು. ೨. ನಗುತ್ತಾ ಕುಣಿ. ೩. ಕಣ್ಣು ಮುಚ್ಚು. ೪. ಬಾಯಿ ತೆರೆ. ೫. ಇಲ್ಲಿ ಬಾ. ೬. ಇಲ್ಲಿ ಬಂದು ನನ್ನ ಬಳಿ ನಿಲ್ಲು. ೭. ನಿನ್ನ ಪೆನ್ನು ಕೊಡು. ೮. ಕುರ್ಚಿಯ ಮೇಲೆ ಕುಳಿತು ಇದನ್ನು ಓದು. ೧೧. ಕಿಟಕಿಯ ಬಳಿ ಕುರ್ಚಿ ಇಟ್ಟು ಕುಳಿತುಕೊ. ೧೨. ನಿನ್ನ ನಾಲಿಗೆ ತೋರಿಸು. ೧೩. ಗೋಡೆಯನ್ನು ಮುಟ್ಟು. ೧೪. ಎದ್ದು ನಿಂತುಕೊಂಡು ನಿನ್ನ ಪುಸ್ತಕ ತೆರೆ. ೧೫. ಬಾಗಿಲು ಮುಚ್ಚಿ, ಕಿಟಕಿ ತೆರೆದು ನಿನ್ನ ಸ್ಥಾನದಲ್ಲಿ ಕುಳಿತುಕೊ.

ನಾಮ ವಿಶೇಷಣಗಳು ಮತ್ತು ಕ್ರಿಯಾವಿಶೇಷಣಗಳು ಈ ಹಂತದಲ್ಲಿ ಬೇಡ. ‘‘ಮತ್ತು ಎಂಬ ಪದವನ್ನು ಬೇಕಾದಂತೆ ಬಳಸಬಹುದು. ನಿಧಾನವಾಗಿ, ಹೊಸ ಹೊಸ ವಾಕ್ಯಗಳನ್ನು ಸೇರಿಸುತ್ತಾ ಹೋಗಬೇಕು. ಒಂದೇ ಸಲ ಹಲವು ವಾಕ್ಯಗಳನ್ನು ಸೇರಿಸಬಾರದು.

ಈ ಮೂಲಕ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಕೆಲವು ವಸ್ತುಗಳ ಹೆಸರುಗಳು, ಕೆಲವು ಕ್ರಿಯೆಯ ಹೆಸರುಗಳ ಬಳಕೆ ತಿಳಿಯುತ್ತದೆ. ಇದರ ಜೊತೆಗೆ ಕೆಲವು ಸಂಬಂಧಸೂಚಕ ಪದಗಳ ಪರಿಚಯ ಕೂಡ ಆಗುತ್ತದೆ. ಹೊಸದಾಗಿ ಬಳಸುವ ಪದಗಳ ಅರ್ಥ ಮಕ್ಕಳಿಗೆ ತಿಳಿಯಲೇ ಬೇಕು. ಮತ್ತೆ ಮತ್ತೆ ಹಲವು ಬಾರಿ ಕೇಳುವುದರಿಂದ ಮತ್ತು ಆಡುವುದರಿಂದ ವಾಕ್ಯ ರಚನೆ ತಂತಾನೇ ತಿಳಿಯುತ್ತದೆ. ಪ್ರತಿಯೊಂದು ವಾಕ್ಯವನ್ನು ಆಡುವ ಅವಕಾಶ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರೆಯಬೇಕು.

ಸಹಾಯಕನಿಂದ ಮಾಡಿಸಿದ ನಂತರ ಈ ವಾಕ್ಯಗಳನ್ನು ತರಗತಿಯ ಮಕ್ಕಳಲ್ಲಿ ಒಬ್ಬರು ಇನ್ನೊಬ್ಬರಿಗೆ ಹೇಳಬೇಕು. ಇದನ್ನು ಸುಮಾರು ೪೫ ನಿಮಿಷ ಅಥವಾ ಒಂದು ಗಂಟೆಯ ಐದು ಪಿರೆಡುಗಳ ತನಕ ಮಾಡಬೇಕು. (ಕ್ರಿಯೆಯನ್ನು ಮಾಡುವವನು ಮಾತು ಆಡಲಿಕ್ಕೆ ಇಲ್ಲ. ಮಾತು ಅವನ ಮನಸ್ಸಿನಲ್ಲಿ ಅನುರಣಿಸುತ್ತಾ ಇರುತ್ತದೆ)

ಒಟ್ಟು ಕಾಲ ಸುಮಾರು ಗಂಟೆಗಳು          

 

Lesson 3. ಈ ಪಾಠದಲ್ಲಿ ಶಿಕ್ಷಕರು ವಾಕ್ಯವನ್ನು ಹೇಳುತ್ತಾರೆ. ಮಕ್ಕಳು ಆ ವಾಕ್ಯಗಳನ್ನು ಪುನರುಚ್ಚರಿಸಬೇಕು.

ಶಿಕ್ಷಕರು ಹಲವು ವಸ್ತುಗಳನ್ನು (ಹೂವು, ಎಲೆ, ಹಣ್ಣು, ನಿತ್ಯೋಪಯೋಗಿ ವಸ್ತುಗಳು ಇತ್ಯಾದಿ) ತರಗತಿಗೆ ತಂದು ಮೇಜಿನ ಮೇಲೆ ಅಥವಾ ನೆಲದ ಮೇಲೆ ಮಕ್ಕಳಿಗೆ ಕಾಣಿಸುವಂತೆ ಹರವಿ ಇಡಬೇಕು. ಅವುಗಳನ್ನು ಬಳಸಿಕೊಂಡು ಮಾತಾಡಬೇಕು.

ಮಾತಾಡುವ ಮಾದರಿ: ಶಿಕ್ಷಕ ಒಂದು ಬಾಚಣಿಗೆಯನ್ನು ಕೈಯಲ್ಲಿ ಹಿಡಿದು ‘‘ಇದು ಬಾಚಣಿಗೆ ಎಂದು ಹೇಳುತ್ತಾರೆ. ಸಹಾಯಕನೂ ಒಂದು ಬಾಚಣಿಗೆಯನ್ನು ಕೈಯಲ್ಲಿ ಹಿಡಿದು ‘‘ಇದು ಬಾಚಣಿಗೆ ಎಂದು ಹೇಳುತ್ತಾನೆ. ಆಗ ಶಿಕ್ಷಕರು ‘‘ಹೌದು, ಅದು ಒಂದು ಬಾಚಣಿಗೆ ಎಂದು ಕೈ ತೋರಿಸಿ ಹೇಳುತ್ತಾರೆ. ಅನಂತರ ಅದನ್ನು ಒಬ್ಬ ವಿದ್ಯಾರ್ಥಿಯ ಕೈಯಲ್ಲಿಡುತ್ತಾನೆ. ಅವನು ಹಾಗೆಯೇ ಹೇಳಬೇಕು.

ಶಿಕ್ಷಕ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು, ‘‘ಇದು ಬಾಚಣಿಗೆಯೆ? ಎಂದು ಕೇಳುತ್ತಾನೆ. ‘‘ಅಲ್ಲ, ಅದು ಪುಸ್ತಕ ಎಂದು ಸಹಾಯಕ ಹೇಳುತ್ತಾನೆ.

ಶಿಕ್ಷಕ ಮತ್ತು ಸಹಾಯಕನ ನಡುವೆ ನಡೆಯುವ ಇಂಥ ಸಂವಾದ ಎಲ್ಲಾ ವಿದ್ಯಾರ್ಥಿಗಳ ನಡುವೆ ನಡೆಯಬೇಕು.

ಗಮನಿಸಿ:

ಶಿಕ್ಷಕ ಪೆನ್ಸಿಲನ್ನು ಕೈಯಲ್ಲಿ ಹಿಡಿದು ‘‘ಇದು ಏನು? ಎಂದು ಕೇಳುತ್ತಾನೆ. ಅದಕ್ಕೆ ಬರುವ ಉತ್ತರ ಕೇವಲ ‘‘ಪೆನ್ಸಿಲು ಎಂದರೂ ಸರಿ, ‘‘ಅದು ಒಂದು ಪೆನ್ಸಿಲು ಎಂದರೂ ಸರಿ. (ಅದು ಒಂದು, ಇದು ಒಂದು ಎಂದು ಹೇಳುವುದು ಇಂಗ್ಲಿಷಿನ ಬಳುವಳಿ. ಕನ್ನಡದಲ್ಲಿ Indefinite Article ಮತ್ತು Definite Article ಪ್ರಯೋಗ ಇಲ್ಲ)

ಒಟ್ಟು ಕಾಲ ಸುಮಾರು ಗಂಟೆಗಳು

 

Lesson 4. ಈ ಪಾಠದಲ್ಲಿ ಶಿಕ್ಷಕರು ಪ್ರಶ್ನೆಗಳನ್ನು ಕೇಳುತ್ತಾರೆ. ಸಹಾಯಕ ಅದಕ್ಕೆ ಉತ್ತರ ನೀಡುತ್ತಾನೆ. ಅನಂತರ ಶಿಕ್ಷಕ ಅದೇ ಪ್ರಶ್ನೆಯನ್ನು ಒಂದು ವಿದ್ಯಾರ್ಥಿಗೆ ಹಾಕುತ್ತಾರೆ. ಉದಾಹರಣೆಗೆ, ‘‘ಚೆಂಡು ಎಲ್ಲಿದೆ? ಅವನು ಅದಕ್ಕೆ ಚೆಂಡು ಮೇಜಿನ ಮೇಲಿದೆ ಎಂದು ಉತ್ತರ ಹೇಳಿ, ಅಂಥದೇ ಒಂದು ಪ್ರಶ್ನೆಯನ್ನು ಇನ್ನೊಂದು ವಿದ್ಯಾರ್ಥಿಗೆ ಹಾಕುತ್ತಾನೆ. (ಅವನಿಂದ ಉತ್ತರಿಸಲಾಗದಿದ್ದರೆ ಶಿಕ್ಷಕ ಹೇಳಿಕೊಡಬೇಕು) ಇದೇ ರೀತಿ ಉತ್ತರ-ಪ್ರಶ್ನೆ ಒಬ್ಬರಿಂದ ಇನ್ನೊಬ್ಬರಿಗೆ ದಾಟುತ್ತಿರುತ್ತದೆ. ಶಿಕ್ಷಕ ಅಥವಾ ಸಹಾಯಕ ಒಳಗೆ, ಕೆಳಗೆ, ಮೇಲೆ, ಹತ್ತಿರ, ದೂರ, ದೂರದಲ್ಲಿ, ಹತ್ತಿರದಲ್ಲಿ, ಎತ್ತರದಲ್ಲಿ, ತಗ್ಗಿನಲ್ಲಿ, ಹಿಂದೆ, ಮುಂದೆ ಇತ್ಯಾದಿ ಪದಗಳು ಉಪಯೋಗಕ್ಕೆ ಬರುವ ಹಾಗೆ ವಸ್ತುಗಳ ಸ್ಥಳ ಬದಲಾಯಿಸುತ್ತಾ ಇರಬೇಕು. ಇದಕ್ಕನುಸಾರ ವಾಕ್ಯಗಳು ಬದಲಾಗುತ್ತವೆ. ವಿಪುಲವಾಗಿ ಪುನರುಕ್ತಿಯಿರಬೇಕು. ಎಲ್ಲಿ, ಏನು, ಯಾವುದು, ಯಾರದು, ಯಾರನ್ನು, ಯಾಕೆ, ಎಷ್ಟು ಮುಂತಾದ ಪ್ರಶ್ನಾ ಶಬ್ದಗಳ ಬಳಕೆಯ ಪ್ರಶ್ನೆಗಳನ್ನು ಕೂಡ ಸೇರಿಸಿಕೊಳ್ಳಬೇಕು.

ಉದಾಹರಣೆಗೆ, ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು: ಪೆನ್ನು ಎಲ್ಲಿದೆ? ಪುಸ್ತಕ ಎಲ್ಲಿದೆ? ಅವನು ಎಲ್ಲಿ ಕುಳಿತಿದ್ದಾನೆ? ನಿನ್ನ ಪೆನ್ನು ಯಾವುದು? ನೀನು ಎಷ್ಟು ಇಡ್ಲಿ ತಿಂದೆ? ಅದು ಯಾರ ಪುಸ್ತಕ? ಕೆಂಪು ಪೆನ್ನು ಯಾರದು? ಲತಾ ಕಿಟಕಿಯ ಬಳಿ ನಿಂತಿದ್ದಾಳೆ. ಇದು ರಾಜುವಿನ ಪುಸ್ತಕ. ಇದು ಶಾಂತಿಯ ಪುಸ್ತಕ. ಅದು ಲತಾಳ ಪೆನ್ನು. ನೀನು ಯಾರನ್ನು ಕರೆದೆ?

In Kannada Preposition is appended to the Noun. As you have noted in previous lessons, Preposition as a part of the Noun changes into different forms. This can be learnt by learning the language first in the spoken form. Interactive Method is the best first step in learning a language.

ಆಡಿದ ವಾಕ್ಯಗಳನ್ನೇ ಮರಳಿ ಮರಳಿ ಬಳಸುತ್ತಾ ಸುಮಾರು ೪೫ ನಿಮಿಷ ಅಥವಾ ಒಂದು ಗಂಟೆಯ ಹತ್ತು ಪಿರೆಡುಗಳ ತನಕ ಮಾಡಬೇಕು. ಈ ಮೂಲಕ ಮಕ್ಕಳಿಗೆ ಮಾತಾಡಲು ಅಗತ್ಯವಿರುವ ಹೆಚ್ಚಿನ Prepositionಗಳು, Adjectiveಗಳು, ಮತ್ತು Pronounಗಳು ಮತ್ತು Question-wordಗಳ ಬಳಕೆ ತಿಳಿಯುತ್ತದೆ. ಈ ಹಂತದಲ್ಲಿ When, Why, How ಎನ್ನುವ ಪ್ರಶ್ನೆಗಳನ್ನು ಬಳಸಬಾರದು. ಯಾಕೆಂದರೆ, ಇವು ಉತ್ತರದಲ್ಲಿ ಕಾಲ, ಕಾರಣ, ರೀತಿ ಮುಂತಾದವುಗಳನ್ನು ಅಪೇಕ್ಷಿಸುತ್ತವೆ. ವಸ್ತುಗಳನ್ನು ಉಪಯೋಗಿಸಿ ಅವುಗಳ ಬಳಕೆಯನ್ನು ಕಲಿಸುವುದು ಈ ಹಂತದಲ್ಲಿ ಕಷ್ಟ. ಇವುಗಳನ್ನು ಮುಂದೆಂದಾರೂ ಅಗತ್ಯಕ್ಕೆ ತಕ್ಕಂತೆ ಕಲಿಸಬಹುದು.

ಒಟ್ಟು ಕಾಲ ಸುಮಾರು ೧೦ ಗಂಟೆಗಳು

 

Lesson 5. ಈ ಪಾಠದಲ್ಲಿ ಶಿಕ್ಷಕರು ಮಕ್ಕಳನ್ನು ತರಗತಿ ಕೋಣೆಯ ಹೊರಗಡೆ ಕರೆದುಕೊಂಡು ಹೋಗಿ ಅಲ್ಲಿ ಕಾಣಿಸುವ ಹತ್ತು ಹಲವು ವಸ್ತುಗಳನ್ನು ತೋರಿಸಿ ಅವುಗಳ ಬಗ್ಗೆ ಮಾತಾಡುತ್ತಾರೆ. ಪ್ರಶ್ನೆಗಳನ್ನು ಕೇಳುತ್ತಾರೆ. ಮಕ್ಕಳು ಶಿಕ್ಷಕರಿಗೆ ಪ್ರಶ್ನೆ ಹಾಕಿ, ವಸ್ತುಗಳ ಹೆಸರು ತಿಳಿದುಕೊಳ್ಳುತ್ತಾರೆ. ಈ ಹಂತದಲ್ಲಿ When, Why, How ಪ್ರಶ್ನಾ ಪದಗಳು ಸ್ವಾಭಾವಿಕವಾಗಿ ಬಂದರೆ ಅವುಗಳಿಗೆ ಉತ್ತರ ನೀಡಬಹುದು. ಅರ್ಥವಾಗುವುದಾದರೆ, ಅವುಗಳನ್ನು ಬಳಸಿ ಪ್ರಶ್ನೆ ಕೇಳಬಹುದು.

ಮಾದರಿಗೆ, ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು:

ಇದು ಏನು?: ಅದು ಚಿಟ್ಟೆ.
ಹೂವಿನ ಬಣ್ಣ ಏನು?: ಅದರ ಬಣ್ಣ ಕೆಂಪು.
ಇದು ಯಾವ ಹೂವು?: ಅದು ಗುಲಾಬಿ.
ಇದು ಗುಲಾಬಿಯೆ?: ಅಲ್ಲ, ಅದು ಮಲ್ಲಿಗೆ.
ನನಗೆ ಒಂದು ಗುಲಾಬಿ ಕೊಡು.

ರೀತಿ, ಮಾತಾಡುತ್ತಾ ಬಹಳ ಮಾತುಗಳನ್ನು ಕಲಿಸಬಹುದುಕಲಿಯಬಹುದು. ಮಾತಿನಲ್ಲಿ ಯಾಕೆ, ಯಾವಾಗ, ಎಷ್ಟು ಮುಂತಾದ ಬಳಕೆಯನ್ನು ಸೇರಿಸಿಕೊಳ್ಳಬಹುದು ಉದಾಹರಣೆಗೆ, ಈ ಗಿಡ ಯಾಕೆ ಒಣಗಿಹೋಗಿದೆ? ಸಾಕಷ್ಟು ನೀರು ಸಿಗದೆ ಅದು ಒಣಗಿಹೋಗಿದೆ. ಆ ಗಿಡ ಸತ್ತಿದೆಯೆ? ಇಲ್ಲ, ಅದು ಸತ್ತಿಲ್ಲ, ಇನ್ನೂ ಹಸಿಯಾಗಿದೆ. ಈ ಗಿಡಗಳಿಗೆ ಯಾರು ನೀರು ಹಾಕುತ್ತಾರೆ? ತೋಟದ ಮಾಲಿ ಗಿಡಗಳಿಗೆ ನೀರು ಹಾಕುತ್ತಾನೆ. ಅವನು ಬೆಳಗ್ಗೆ ನೀರು ಹಾಕುತ್ತಾನೆ. ನೀನು ಶಾಲೆಗೆ ಹೇಗೆ ಬರುತ್ತಿ? ನಾನು ಶಾಲೆಗೆ ಬಸ್ಸಿನಲ್ಲಿ ಬರುತ್ತೇನೆ. ನಿನ್ನ ಅಣ್ಣ ಕಾಲೇಜಿಗೆ ಹೇಗೆ ಹೋಗುತ್ತಾನೆ? ಅವನು ನಡೆದುಕೊಂಡು ಹೋಗುತ್ತಾನೆ. ಅವನ ಕಾಲೇಜು ಮನೆಗೆ ಹತ್ತಿರ ಇದೆ.

ಉದ್ದದ ಮಾತುಗಳು ಮಕ್ಕಳಿಗೆ ಅರ್ಥವಾಗುತ್ತವೆಯೇ ಎನ್ನುವ ಚಿಂತೆ ಬೇಡ. ಆಡಿದ್ದನ್ನೇ ಆಡುತ್ತಾ ಎಲ್ಲಾ ವಾಕ್ಯಗಳ ಬಳಕೆ ತಿಳಿಯುತ್ತದೆ. ಅರ್ಥ ಆಗುವುದು ಅಂದರೆ ಅದೇ ಮತ್ತು ಹಾಗೆಯೇ ಹೊರತು ಶಬ್ದಗಳ ಮತ್ತು ವಾಕ್ಯಗಳ ‘ಅರ್ಥ’ ಹೇಳುವ ಮೂಲಕ ಅಲ್ಲ. ಹೊಸ ಹೊಸ ಪ್ರಶ್ನೆಗಳು ಮತ್ತು ಹೊಸ ಹೊಸ ಉತ್ತರಗಳ ಸಂಭವನೀಯತೆಯ ಬಗ್ಗೆ ಶಿಕ್ಷಕರಿಗೆ ಅರಿವು ಇರಬೇಕು.

ಒಟ್ಟು ಕಾಲ ಸುಮಾರು ೧೦ ಗಂಟೆಗಳು

 

STAGE 2: READING AND WRITING

ಮಕ್ಕಳು ಕನ್ನಡ ಅಕ್ಷರಗಳನ್ನು ಮೊತ್ತಮೊದಲ ಬಾರಿಗೆ ನೋಡುತ್ತಿದ್ದಾರೆ ಎಂದು ಭಾವಿಸಬೇಕು. ಈಗಾಗಲೇ ಮಕ್ಕಳು ಏನಾದರೂ ಕಲಿತಿದ್ದರೆ ಅದನ್ನು ಗಮನಕ್ಕೆ ತೆಗೆದುಕೊಳ್ಳಬಾರದು. ಓದಲು ಮತ್ತು ಬರೆಯಲು ಆಯ್ದುಕೊಳ್ಳುವ ವಾಕ್ಯಗಳು ಮಕ್ಕಳಿಗೆ ಈಗಾಗಲೇ ನಡೆಸಿದ ಮಾತಿನ ಪಾಠಗಳ ಮೂಲಕ ಸುಪರಿಚಿತವಾದ ವಾಕ್ಯಗಳೇ ಆಗಿರಬೇಕು.

ಮಾತಿನ ಪಾಠಗಳಲ್ಲಿ ಬಳಸಿರುವ ವಾಕ್ಯಗಳನ್ನು ಗಾತ್ರದಲ್ಲಿ ತುಸು ದೊಡ್ಡ ಮತ್ತು ಸುಂದರವಾದ ಅಕ್ಷರಗಳಲ್ಲಿ ಪಾಠದ ರೂಪದಲ್ಲಿ ಬರೆದು ಪಾಠಗಳನ್ನು ಮಾಡಿಟ್ಟುಕೊಳ್ಳಬೇಕು. ಪಾಠಗಳು ಒಟ್ಟು ೨೦-೨೫ ಶಬ್ದಗಳಿಗೆ ಸೀಮಿತವಾಗಿರಲಿ. ಇದೇ ಶಿಕ್ಷಕರು ಓದಲು ಮತ್ತು ಬರೆಯಲು ಕಲಿಸುವ ಮೊದಲ ಪಠ್ಯ ಪುಸ್ತಕ

ಕಲಿಕೆಯ ಮಾದರಿ:

ಹಂತ ೧.
ಮಕ್ಕಳೆ, ಈಗ ನೀವು ಕನ್ನಡ ಭಾಷೆಯನ್ನು ಬರೆಯುವುದು ಹೇಗೆ ಎಂದು ಕಲಿಯುತ್ತೀರಿ. ಇದು ಬಹಳ ಸುಲಭ. ಇಂಗ್ಲಿಷಿನಲ್ಲಿ ಕೇವಲ ೨೬ ಅಕ್ಷರಗಳಿವೆ. ಕನ್ನಡದಲ್ಲಿ ೫೨ ಅಕ್ಷರಗಳಿವೆ. ಗುಣಿತಾಕ್ಷರ ಮತ್ತು ಒತ್ತಕ್ಷರ ಇದೆ.

ಕನ್ನಡದಲ್ಲಿ ನಾವು ಹೇಗೆ ಬರೆಯುತ್ತೇವೋ ಹಾಗೆಯೇ ಓದುತ್ತೇವೆ. ಆದ್ದರಿಂದ spelling ಮತ್ತು ಉಚ್ಚಾರದ ಸಮಸ್ಯೆ ಇರುವುದಿಲ್ಲ. ಗುಣಿತಾಕ್ಷರ ಮತ್ತು ಒತ್ತಕ್ಷರವನ್ನು ನಾವು ಓದುವ, ಬರೆಯುವ ಶಬ್ದಗಳ ಮೂಲಕ, ವಾಕ್ಯಗಳ ಮೂಲಕ ಕಲಿತುಕೊಂಡರೆ ಆಯಿತು. ಬರವಣಿಗೆ ಮತ್ತು ಉಚ್ಚಾರ ಎರಡೂ ಸುಲಭದಲ್ಲಿ ತಿಳಿಯುತ್ತದೆ. ಅದಕ್ಕಾಗಿ ಗುಣಿತಾಕ್ಷರಗಳ, ಒತ್ತಕ್ಷರವಿರುವ ಶಬ್ದಗಳ ಉದ್ದನೆಯ ಪಟ್ಟಿಯನ್ನು ಓದುವುದು, ಬರೆಯುವುದು ಅನಗತ್ಯ. ಆ ರೀತಿ ಓದಿ ಉಚ್ಚರಿಸಿದ ನೂರಾರು ಶಬ್ದಗಳೆಲ್ಲ ನಮಗೆ ಒಮ್ಮೆಲೇ ಉಪಯೋಗಕ್ಕೆ ಬರುವುದಿಲ್ಲ. ಇಂಟರ‌್ಯಾಕ್ಟಿವ್ ಮೆಥಡಿನಲ್ಲಿ, ನೀವು ಚಿಕ್ಕವರಿರಲಿ, ದೊಡ್ಡವರಿರಲಿ, ಹತ್ತಿಪತ್ತು ಗಂಟೆಗಳಲ್ಲಿ ಎಂಥ ಪುಸ್ತಕವನ್ನೂ ಓದುವ ಸಾಮರ್ಥ್ಯ ಗಳಿಸುತ್ತೀರಿ. ಆಗ ಅಕ್ಷರ ಮಾಲೆಗಳ ಪಟ್ಟಿ, ಗುಣಿತಾಕ್ಷರದ ಉದ್ದನೆಯ ಪಟ್ಟಿ ನಿರರ್ಥಕ ಎಂದು ತಿಳಿಯುತ್ತದೆ. ನಿಮ್ಮ ಓದಿನಲ್ಲಿ ಸಹಕರಿಸುವ ತಾಯಿತಂದೆ ಮತ್ತು ಶಿಕ್ಷಕ ಇಲ್ಲದಿದ್ದಲ್ಲಿ ಮಾತ್ರ ಯಾವುದೋ ಒಂದು ಅಕ್ಷರದ ಸ್ವರೂಪವನ್ನು ನೋಡಲು ಗುಣಿತಾಕ್ಷರಗಳ ಪಟ್ಟಿ ಉಪಯೋಗಕ್ಕೆ ಬರಬಹುದು!

ಇಂಗ್ಲಿಷಿನಲ್ಲಿ ಪ್ರತಿಯೊಂದು ವಾಕ್ಯದ ಆರಂಭದ ಅಕ್ಷರವನ್ನು ‘ಕ್ಯಾಪಿಟಲ್ ಅಕ್ಷರ’ ಎಂದು ಕರೆಯುತ್ತೇವೆ. ಕನ್ನಡದಲ್ಲಿ ಹಾಗೆ ಇಲ್ಲ. ಇಂಗ್ಲಿಷಿನಲ್ಲಿ ಮನುಷ್ಯರ ಹೆಸರು ಮತ್ತು ಇತರ ಕೆಲವು ಹೆಸರುಗಳ ಮೊದಲಿನ ಅಕ್ಷರ ಕೂಡ ಕ್ಯಾಪಿಟಲ್ ಅಕ್ಷರವಾಗಿರುತ್ತದೆ. ಕನ್ನಡದಲ್ಲಿ ಇಂಥದೇನೂ ಇಲ್ಲ. ಎಲ್ಲಾ ಅಕ್ಷರಗಳಿಗೂ ನಿಶ್ಚಿತವಾದ ಒಂದೇ ರೂಪ ಇರುತ್ತದೆ.

ಕಲಿಕೆಯ ಮಾದರಿ:

ಹಂತ .
ಶಿಕ್ಷಕ: ಈಗ ನಾನು ಒಂದು ವಾಕ್ಯವನ್ನು ಬರೆಯುತ್ತೇನೆ. ನಾನು ಅಕ್ಷರಗಳನ್ನು ಹೇಗೆ ಬರೆಯುತ್ತೇನೆ ಎನ್ನುವುದನ್ನು ಗಮನವಿಟ್ಟು ನೋಡಿ.

ಬೋರ್ಡಿನ ಮೇಲೆ ‘ಅದು ಮರ. ಇದು ಮರದ ಎಲೆ ಎಂದು ಶಬ್ದವನ್ನು ಉಚ್ಚರಿಸುತ್ತಾ ಬರೆಯಿರಿ. ಬಹಳ ನಿಧಾನವಾಗಿ ಬರೆಯಿರಿ. ಅಕ್ಷರ ರೂಪುಗೊಳ್ಳುವಿಕೆಯನ್ನು ಮಕ್ಕಳು ಗಮನಿಸಲಿ. ಬರೆದುದನ್ನು ಅಳಿಸಿ ಇನ್ನೆರಡು ಸಲ ಬರೆಯಿರಿ. ಮೂರನೆಯ ಸಲ ಬರೆಯುವಾಗ ಪ್ರತಿ ಅಕ್ಷರವನ್ನು ಹೇಳುತ್ತಾ ಬರೆಯಿರಿ. ಒಂದಷ್ಟು ಹೊತ್ತು ಹಾಗೆಯೇ ಇಟ್ಟು ಅನಂತರ ಅಳಿಸಿರಿ.

ಗಮನಿಸಿ:

ಪರಸ್ಪರ ಸಂಬಂಧವಿರುವ ಜೋಡಿ ವಾಕ್ಯಗಳು ಬಹಳ ಸುಲಭವಾಗಿ ನೆನಪಿನಲ್ಲಿ ಉಳಿಯುತ್ತವೆ. ಏಕ ವಾಕ್ಯಕ್ಕೆ ಭಾಷಾ ಸ್ವರೂಪ ಇಲ್ಲ; ಜೋಡಿ ವಾಕ್ಯಕ್ಕೆ ಇದೆ. ಅದಕ್ಕೆ ಒಂದು ಸಂಬಂಧ ಸೂಚಕ, ಕಾವ್ಯಾತ್ಮಕ ಅಂದ ಕೂಡ ಇರುವುದನ್ನು ನೀವು ಕ್ರಮೇಣ ಕಂಡುಕೊಳ್ಳುತ್ತೀರಿ.

ನಾಲ್ಕನೆಯ ಬಾರಿ ಬರೆಯುವಾಗ ನೀವು ಬರೆಯುವುದನ್ನು ನೋಡುತ್ತಾ ಹಾಗೆಯೇ ಬರೆಯಲು ಮಕ್ಕಳಿಗೆ ಹೇಳಿ. ಎಲ್ಲಾ ಮಕ್ಕಳೂ ಸರಿಯಾಗಿ ಬರೆಯುವ ವರೆಗೆ ಇವೆರಡೇ ವಾಕ್ಯಗಳನ್ನು ಬರೆಯಲು ಕಲಿಸಲು ನಿಮಗೆ ಎರಡು ಪಿರೆಡುಗಳು ಬೇಕಾಗಬಹುದು.

ಅನಂತರ ಇನ್ನೊಂದು ಜೋಡಿ ವಾಕ್ಯ ಆಯ್ದುಕೊಳ್ಳಿ. ವಾಕ್ಯದ ವಿಚಾರ ಮಕ್ಕಳಿಗೆ ಗೊತ್ತಿರುವಂಥದಾಗಿರುವುದು ಬಹಳ ಮುಖ್ಯ. ನಿಜವಾದ ವಸ್ತು ಮತ್ತು ಅದನ್ನು ಪ್ರತಿನಿಧಿಸುವ ಶಬ್ದ ಒಂದು ಸಂಯೋಜಿತ ಚಿತ್ರವಾಗಿ ಮನಸ್ಸಿನಲ್ಲಿ-ನೆನಪಿನಲ್ಲಿ ಉಳಿಯುತ್ತದೆ. ಕಲಿಕೆಯಲ್ಲಿ ಇದು ಬಹಳ ಮುಖ್ಯ.

ಇದೇ ರೀತಿ ಸುಮಾರು ಐವತ್ತು-ಅರುವತ್ತು ಜೋಡಿ ವಾಕ್ಯಗಳನ್ನು ಕಲಿಸುವಷ್ಟರಲ್ಲಿ ಮಗುವಿಗೆ ಇಡೀ ಭಾಷೆಯ ಪರಿಚಯ ಆಗುತ್ತದೆ. ಮಗುವಿಗೆ ಯಾವ ತರಗತಿಯ ಪುಸ್ತವನ್ನೂ ಓದುವ ಸಾಮರ್ಥ್ಯ ಬರುತ್ತದೆ. ಯಾವುದೇ ಪುಸ್ತಕ, ವಾರ್ತಾ ಪತ್ರಿಕೆ ಮತ್ತು ಮ್ಯಾಗಜೀನುಗಳನ್ನು ಮಗು ಓದುತ್ತದೆ. ಮಗು ಶಿಕ್ಷಕರ ಬಳಿ ಅಥವಾ ತಾಯಿತಂದೆಯರ ಬಳಿ ಕೇಳುವುದು ಇದನ್ನು ಹೇಗೆ ಓದುವುದು? ಎಂದಲ್ಲ, ‘‘ಇದರ ಅರ್ಥ ಏನು? ಹಾಗೆಂದರೆ ಏನು? ಎಂದು. ಅದಕ್ಕೆ ಸಮರ್ಪಕವಾದ ಉತ್ತರವನ್ನು ಪ್ರೀತಿಯಿಂದ ಉತ್ತರಿಸಿದರೆ ಸಾಕು.

ಒಟ್ಟು ಕಾಲ ಸುಮಾರು ೧೦-೧೫ ಗಂಟೆಗಳು

 

ಕಲಿಕೆಯ ಮಾದರಿ

ಹಂತ ೨.
ನೀವು ಮಾಡಿಟ್ಟುಕೊಂಡಿರುವ ಪಠ್ಯದ ಒಂದೊಂದೇ ಪಾಠವನ್ನು ಆಯ್ಕೆ ಮಾಡಿಕೊಂಡು ದಿನಕ್ಕೊಂದರಂತೆ ಬೋರ್ಡಿನಲ್ಲಿ ಓದುತ್ತಾ ಬರೆಯಿರಿ. ಇದೇ ರೀತಿ ಮಕ್ಕಳು ಕೂಡ ಮಾಡಲಿ. ಇದೇ ಕಾಪಿ ಬರೆಯುವಿಕೆ. ಮನೆಯಲ್ಲಿ ಅಲ್ಲ, ಶಾಲೆಯಲ್ಲೇ. ಈ ರೀತಿ ನಿಮ್ಮ ಇಡೀ ಪಠ್ಯವನ್ನು ಮುಗಿಸಿ. ನಡು ನಡುವೆ ಹಾಡುಗಳು, ರೈಮುಗಳು, ಕನ್ನಡದಲ್ಲಿ ಮಾತು ಇತ್ಯಾದಿ ಇರಲಿ.

ಇಷ್ಟಾದ ಮೇಲೆ ಮಗುವಿಗೆ ಒಂದನೆಯ ತರಗತಿಯ ಪುಸ್ತಕವನ್ನು ಓದಲು ಕೊಡಿ. ಓದಲು ಅಗತ್ಯವಿರುವ ಸಹಾಯ ಮಾಡಿ. ಒಂದೇ ದಿನದಲ್ಲಿ ಮಗು ಮೊದಲ ಪಠ್ಯ ಪುಸ್ತಕವನ್ನು ಓದಿ ಮುಗಿಸಿದರೆ ಆಶ್ಚರ್ಯವಿಲ್ಲ. ಒಂದೆರಡು ದಿನಗಳಲ್ಲಿ ಎರಡನೇ ತರಗತಿಯ ಪುಸ್ತಕಗಳನ್ನು ಕೂಡ ಓದಬಹುದು. ಇದೇ ರೀತಿ ಮಗು ಕನ್ನಡದಲ್ಲಿರುವುದೆಲ್ಲವನ್ನೂ ಓದುತ್ತದೆ. ಮಗುವಿಗೆ ಶಿಕ್ಷಕರು ಅಥವಾ ಪಾಲಕರ ನೆರವು ಬೇಕಾಗುವುದು ಶಬ್ದಗಳ ಉಚ್ಚಾರದಲ್ಲಿ ಮತ್ತು ಹೊಸ ಶಬ್ದಗಳ ಅರ್ಥ ತಿಳಿದುಕೊಳ್ಳುವಲ್ಲಿ ಮಾತ್ರ.

ಇನ್ನು, ನಿಜವಾದ ಭಾಷೆಯ ಕಲಿಕೆಯ ಮುಂದಿನ ಹೆಜ್ಜೆ: ಕತೆಗಳನ್ನು ಕೇಳುವುದು, ಹೇಳುವುದು; ಹಾಡುಗಳನ್ನು, ಕವಿತೆಗಳನ್ನು ಓದುವುದು; ಸಂವಾದ ಮಾಡುವುದು; ನಾಟಕ ಆಡುವುದು, ಓದುವುದು; ಕೊನೆಗೆ, ಸ್ವತಂತ್ರವಾಗಿ ಪ್ರಬಂಧ, ಕತೆ, ಹಾಡು, ನಾಟಕ ಇತ್ಯಾದಿಗಳನ್ನು ಬರೆಯುವುದು ಮತ್ತು ಇದೆಲ್ಲದರ ಜೊತೆಗೆ ಓದುವುದು, ಓದುವುದು ಮತ್ತು ಓದುವುದು.

ಒಟ್ಟು ಕಾಲ ಸುಮಾರು ೧೦ ಗಂಟೆಗಳು
ಒಟ್ಟು ೭೦ ಗಂಟೆಗಳು

ಈ ವಿಧಾನದಲ್ಲಿ ಯಾವುದೇ ಭಾಷೆಯನ್ನು ಕಲಿಸಬಹುದು. ಎರಡು ಮೂರು ಭಾಷೆಗಳನ್ನು ಕೂಡ ಕಲಿಸಬಹುದು. ವಿದ್ಯಾವಂತರಾದ ತಾಯಿತಂದೆ ತಮ್ಮ ಮಕ್ಕಳೂ ಸೇರಿದಂತೆ ನಾಲ್ಕೈದು ಮಕ್ಕಳ ಗುಂಪು ರಚಿಸಿ ಒಂದು ಆಟದ ರೀತಿಯಲ್ಲಿ ಇಂಟರ‌್ಯಾಕ್ಟಿವ್ ಮೆಥಡಿನಲ್ಲಿ ಭಾಷೆಗಳನ್ನು ಕಲಿಸಬಹುದು.