ನಮ್ಮ ಕನ್ನಡ ಕವಿಗಳ, ಅದರಲ್ಲೂ ಮಾರ್ಗಕವಿಗಳ ಕಾವ್ಯದಲ್ಲಿ, ಕಥಾ ಪ್ರಾರಂಭಕ್ಕೆ ಮುನ್ನ ಬರುವ ಪೀಠಿಕಾ ಪ್ರಕರಣ ಭಾಗಗಳು, ಸಂಸ್ಕೃತ ಕಾವ್ಯ ಪರಂಪರೆಯಲ್ಲಿ ಅಷ್ಟಾಗಿ ಕಾಣದ, ಕನ್ನಡ ಕಾವ್ಯಕ್ಕೇ ವಿಶಿಷ್ಟವಾದ ಒಂದು ಲಕ್ಷಣವಾಗಿವೆ. ಈ ಪೀಠಿಕಾ ಪ್ರಕರಣದಲ್ಲಿ ಮುಖ್ಯವಾಗಿ ಐದು ಅಂಶಗಳಿವೆ : ಒಂದು, ತಮಗೂ ತಮಗಿಂತ ಹಿಂದಿನ ಪೂರ್ವ ಕವಿಗಳಿಗೂ ಇರುವ ಪಾರಂಪರಿಕ ಸಂಬಂಧವನ್ನು, ಪೂರ್ವಕವಿಗಳ ನೆನಕೆಯ ಮೂಲಕ, ಸ್ತುತಿಯ ಮೂಲಕ, ಮತ್ತು ಆಯಾ ಕವಿಗಳ ಸಲ್ಲಕ್ಷಣಗಳು ತಮ್ಮ ಕೃತಿಯಲ್ಲಿ ನೆಲಸಲಿ ಎಂಬ ಆಶಯದ ಮೂಲಕ ವ್ಯಕ್ತಪಡಿಸುವುದು. ಎರಡು, ತಮ್ಮ ಸ್ವಂತ ಅಥವಾ ವೈಯಕ್ತಿಕವಾದ ಸಂಗತಿಗಳನ್ನು ಹೇಳಿಕೊಳ್ಳುವುದು. ಮೂರು, ಸ್ವಕಾವ್ಯದ ಅಗ್ಗಳಿಕೆಯ ಮಾತುಗಳು; ಅಂದರೆ ತನ್ನ ಕೃತಿಯನ್ನು ಕುರಿತು ತನಗಿರುವ ಆತ್ಮ ಪ್ರತ್ಯಯ ಮೂಲವಾದ ನಂಬಿಕೆ ಹಾಗೂ ವಿಚಾರಗಳು. ನಾಲ್ಕು, ಸತ್ಕವಿ ಹಾಗೂ ಸತ್ಕಾವ್ಯ ಪ್ರಶಂಸೆ; ಇದು ತನಗೆ ಮೆಚ್ಚುಗೆಯಾದ ಒಳ್ಳೆಯ ಕವಿ ಹಾಗೂ ಕಾವ್ಯಗಳನ್ನು ಕುರಿತು, ತನ್ನ ಕೃತಿಯನ್ನು ಮೆಚ್ಚಿಕೊಳ್ಳುವಂಥ ಸಜ್ಜನರನ್ನು ಕುರಿತ ಪ್ರಶಂಸೆ. ಐದು, ಅಕವಿ ಹಾಗೂ ಕುಕವಿನಿಂದೆ; ನಿಜವಾದ ಕಾವ್ಯ ಸಾಮರ್ಥ್ಯವಿಲ್ಲದೆ, ಕೆಟ್ಟಕಾವ್ಯವನ್ನು ಬರೆದ ಮತ್ತು ಅಂಥ ಕಾವ್ಯಕ್ಕೆ ಶ್ರೋತೃಗಳಾದವರ ಬಗ್ಗೆ ತಿರಸ್ಕಾರ, ನಿಂಬೆ, ಟೀಕೆ ಇತ್ಯಾದಿ.

ಮೇಲೆ ಕಾಣಿಸಿದ ಸಂಗತಿಗಳಲ್ಲಿ ತಮ್ಮ ಸ್ವಂತ ವಿಷಯ ಹಾಗೂ ಪೂರ್ವಕವಿಗಳ ನೆನಕೆ, ಸಂಸ್ಕೃತ ಕಾವ್ಯ ಪಂರಪರೆಯಲ್ಲಿ ಕ್ವಚಿತ್ತಾಗಿ ಬರುವುದರ ಹೊರತು, ಉಳಿದವಂತೂ ಇಲ್ಲವೇ ಇಲ್ಲ. ಮತ್ತು ಈ ಎಲ್ಲಾ ಸಂಗತಿಗಳೂ ಕನ್ನಡ ಕವಿಗಳಲ್ಲಿ ಹೆಚ್ಚು ಕಡಮೆ ಕಾವ್ಯದ ಚೌಕಟ್ಟಿನೊಳಗೇ ಬಂದಿವೆ. ಈ ಕುರಿತು, ಈ ಬರಹದ ಮೊದಲ ಭಾಗದಲ್ಲಿ ಆಗಲೇ ಪ್ರಸ್ತಾಪಿಸಿರುವುದರಿಂದ, ಇಲ್ಲಿ ಚರ್ಚಿಸಬೇಕೆಂದಿರುವುದು, ಐದನೆಯ ಅಂಶವಾದ ಅಸತ್ಕಾವ್ಯ ಹಾಗೂ ಆಕವಿ – ಕುಕವಿ ನಿಂದೆಯ ಸಂಗತಿಗಳನ್ನು ಕುರಿತು. ಅಂದಂದಿನ ಸಮಕಾಲೀನ ಸಾಹಿತ್ಯ ಸಂದರ್ಭವನ್ನು ಕಟ್ಟಿಕೊಡುವ ಈ ‘ಕುಕವಿನಿಂದೆ’ಯ ಚರ್ಚೆಗಳಂತೂ, ಸಂಸ್ಕೃತದಲ್ಲಿ ಇಲ್ಲವೇ ಇಲ್ಲವೆಂದು ಹೇಳಬಹುದಾದ ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣದಿಂದ ಸೂಚಿತವಾದ ಕಾವ್ಯಲಕ್ಷಣಗಳಾಗಿವೆ. ಜಿನಸೇನರ ಪೂರ್ವ- ಪುರಾಣದ ಕಾವ್ಯ ಪ್ರಸ್ತಾವನೆಯಲ್ಲಿ, ಕಾವ್ಯ ನಿರ್ಮಾಣ ಸಮರ್ಥರಲ್ಲದ ಅಕವಿಗಳನ್ನು ಕುರಿತು ‘ಅವ್ಯುತ್ಪನ್ನರಾದ ಕೆಲವರು ಕವಿತೆಯನ್ನು ಮಾಡಲು ಪ್ರಯತ್ನಿಸಿ, ಮಾತನಾಡಲಪೇಕ್ಷಿಸುವ ಮೂಗರಂತೆ ಹಾಸ್ಯಕ್ಕೆ ಪಾತ್ರರಾಗುತ್ತಾರೆ’ (೧-೬೪); ‘ಬೇರೆಯವರ ಅಂಗಡಿಗಳಿಂದ ಬಟ್ಟೆಗಳನ್ನು ತಂದು ಇಟ್ಟುಕೊಂಡು ತಾವೂ ವರ್ತಕರೆಂದು ಹೇಳಿಕೊಳ್ಳುವಂತೆ, ತಾವೂ ಕವಿಗಳೆಂದು ಹೇಳಿಕೊಳ್ಳುವ ಕೆಲವರು ಅವರಿವರ ಕವಿತೆಯಿಂದ ಸ್ವಲ್ಪ ತಂದು ಬೇರೆ ತಾತ್ಪರ್ಯವನ್ನು ಕಲ್ಪಿಸುತ್ತಾರೆ.’ (೧-೬೫), ‘ವ್ಯಾಪಾರಿಗಳು ಮಾರಾಟಕ್ಕೆ ಸಾಮಾನು ತಂದು ಅದಕ್ಕೆ ಸದೃಶವಾದ ಬೇರೆ ಪದಾರ್ಥಗಳನ್ನು ಬೆರೆಸಿ ರೂಪಾಂತರ ಮಾಡುವಂತೆ ಬೇರೆಯವರ ಅರ್ಥಗಳನ್ನು ಶಬ್ದಗಳನ್ನು ಬದಲಾಯಿಸಿ ಕಾವ್ಯಾರ್ಥಗಳನ್ನು ಪ್ರಸಿದ್ಧ ಪಡಿಸುತ್ತಾರೆ’ (೧-೬೭). ‘ಕೆಲವರು ಕಾವ್ಯವನ್ನು ಪ್ರಾರಂಭಿಸಿ, ನಿರ್ವಹಿಸಲು ಅಸಮರ್ಥರಾಗಿ ರೈತನು ಕಂದಾಯವನ್ನು ಕಟ್ಟಲೂ ಆಗದೆ ದುಃಖಪಡುವಂತೆ ದುಃಖ -ಪಡುತ್ತಾರೆ.’ (೧-೭೧), ‘ಬಹುಕಾಲದಿಂದ ಬೆಳೆದು ಗಂಟಾಗಿರುವ ಬಿದಿರಿನ ಬುಡ -ದಂತೆಯೂ, ನಾಯಿಯ ಬಾಲದಂತೆಯೂ ಇರುವ ದುಷ್ಟರನ್ನು ಸರಿಪಡಿಸುವುದು ಕಷ್ಟ (೧-೮೯), ‘ನಿಜವಾದ ಕವಿಯು ಅನ್ಯರ ದೂಷಣೆಗೆ ಅಂಜುವುದಿಲ್ಲ; ಸೂರ‍್ಯನು ಗೂಗೆಯ ಭಯದಿಂದ ಮೂಡದೆ ಇರುತ್ತಾನೆಯೆ’ (೧-೭೫)*[*    ಜಿನಸೇನಾಚಾರ್ಯರ ಪೂರ್ವಪುರಾಣ : ಶಾಂತಿರಾಜ ಶಾಸ್ತ್ರಿಗಳ ಅನುವಾದ] – ಈ ಮಾತುಗಳನ್ನು ಹೇಳಿದ್ದಾರೆ. ಈ ಕೆಲವು ಮಾತುಗಳೇ ನಮ್ಮ ಕವಿಗಳ ‘ಕುಕವಿನಿಂದೆ’ಯ, ವಿಸ್ತಾರವಾದ ಪ್ರಸ್ತಾಪಕ್ಕೆ ಪೀಠಿಕೆ -ಗಳಾಗಿ ಪರಿಣಮಿಸಿವೆ. ಕನ್ನಡಿಗರೇ ಆದ ಜಿನಸೇನಾಚಾರ್ಯರು, ತಮ್ಮ ಸಂಸ್ಕೃತ ಪುರಾಣದ ಮೂಲಕ ಹಿಂದಿನ ಸಂಸ್ಕೃತ ಕಾವ್ಯಪರಂಪರೆಯಲ್ಲಿ ಇಲ್ಲದ, ಮತ್ತು ಮುಂದಿನ ಕನ್ನಡ ಕವಿಗಳಿಗೆ ಮಾರ್ಗದರ್ಶಕವಾದ ಸೂಚನೆಗಳನ್ನು ಕೊಟ್ಟಿದ್ದಾರೆ. ಇದರಿಂದಾಗಿ ಕನ್ನಡ ಕಾವ್ಯಗಳ ಒಳಗೇ, ಕಾವ್ಯದ ಒಂದು ಭಾಗವಾಗಿ ಒಂದು ಬಗೆಯ ಕಾವ್ಯ ಚರ್ಚೆ ಉದ್ದಕ್ಕೂ ಬೆಳೆದು ಬರುವಂತಾಯಿತು.

ಕುಕವಿನಿಂದೆ ಹಾಗೂ ಅಕಾವ್ಯವನ್ನು ಕುರಿತ ಚರ್ಚೆಯಲ್ಲಿ ಸ್ವಕಾವ್ಯ ಹಾಗೂ ಸತ್ಕಾವ್ಯ ಎರಡನ್ನೂ ನಮ್ಮ ಕವಿಗಳು, ಸಮಾನಾರ್ಥಕವನ್ನಾಗಿಯೆ ಬಳಸುವಂತೆ ತೋರುತ್ತದೆ. ತಾನು ಬರೆದ ಕಾವ್ಯ ಒಳ್ಳೆಯ ಕಾವ್ಯವಲ್ಲವೆಂದು ಯಾವ ಕಾಲದ ಕವಿ ತಾನೇ ಹೇಳಿಕೊಂಡಾನು? ಆದಕಾರಣ ತಮ್ಮ ಕಾವ್ಯಕ್ಕೆ ಅಥವಾ ಸತ್ಕಾವ್ಯಕ್ಕೆ ಸುಮುಖರಲ್ಲದವರೆಲ್ಲರೂ ಕುಜನರೇ, ಖಳರೇ ಆಗಿ ಕಾಣುವುದು ಆಶ್ಚರ್ಯವಲ್ಲ. ಹಾಗೆ ತಮ್ಮಕಾವ್ಯವನ್ನು ಮೆಚ್ಚುವವರು ಸಜ್ಜನರು. ಈ ನಮ್ಮ ಕವಿಗಳಿಗೆ ಸಜ್ಜನ ಸಂಸ್ತವ ಎಷ್ಟು ಪ್ರಿಯವಾಗಿತ್ತೊ, ತಮ್ಮ ಕಾವ್ಯವನ್ನು ಆದರಿಸದ ಕುಜನರ ಬಗೆಗೆ ಅಷ್ಟೇ ತಿರಸ್ಕಾರ. ಈ ‘ಕುಜನ’ ಹಾಗೂ ‘ಸುಜನ’ರನ್ನು ಸೂಚಿಸುವ ಕನ್ನಡ ಕವಿಗಳ ಪ್ರತೀಕ (Symbols)ಗಳೆಲ್ಲವೂ ಹೆಚ್ಚು ಕಡಮೆ ಒಂದು ಸಂಪ್ರದಾಯವೆಂಬಂತೆ ಪುನರಾವರ್ತಿತವಾಗಿವೆ. ‘ಪರಿಣತರೆನಿಸುವ ನಿರ್ಮತ್ಸರರನ್ನು ಮೆಚ್ಚಿಸುವುದು ಕಷ್ಟವಲ್ಲ; ಆದರೆ ಅಸೂಯಾ ಸದನರಾದ, ಮಾತ್ಸರ್ಯದಿಂದ ಕೂಡಿದ ಜಡರನ್ನು ಮೆಚ್ಚಿಸುವುದು ಕಷ್ಟ ಎಂಬುದು ಕವಿಗಳ ಕೊರಗು. ಸುಜನರು ದುಂಬಿಯಾದರೆ, ಕುಜನರುಗಳು ಕೊರೆಯುವ ಹುಳು (ಕಡಂದುರುತೆ); ಸುಜನರು ರವಿಯಾದರೆ ಕುಜನರು ಗೂಗೆ; ಸುಜನರು ಚಂದ್ರಕಾಂತವಾದರೆ, ಕುಜನರು ಗೋರಿಕಲ್ಲು; ಸುಜನರು ಸಿಂಹವಾದರೆ, ಕುಜನರು ಹಂದಿ; ಸುಜನರು ಹಂಸೆ, ಕೋಗಿಲೆಗಳಾದರೆ, ಕುಜನರು ಕಾಗೆ, ಮರುಕುಟಗ ಹಕ್ಕಿ, ಇಲಿ, ನಾಯಿ, ನೊಣ. ಹೀಗೆ – ಈ ನಿಯತವಾದ ಕೆಲವೇ ಉಪಮಾನಗಳ ಮೂಲಕ, ಕವಿಗಳು ತಮ್ಮಕಾವ್ಯಕ್ಕೆ ಸುಮುಖರಲ್ಲದ ಓದುಗರನ್ನು ಕುರಿತ ತಮ್ಮ ಅಸಹನೆಯನ್ನು ತೋಡಿಕೊಂಡಿದ್ದಾರೆ[1]. ಈ ಕೆಟ್ಟ ಓದುಗರು ಮುಖ್ಯವಾಗಿ ಅರಸಿಕರು, ‘ಬುಧಾಭಾಸ’ರು, ಶುಷ್ಕವೈಯ್ಯಾಕರಣಿಗಳು, ಶುಷ್ಕ ತಾರ್ಕಿಕರು, ಬೆಳ್ಳಕ್ಕರಿಗರು. ಇವರಿಗೆ ಕಾವ್ಯವನ್ನು ಹೇಗೆ ಓದಬೇಕು, ಅದರಲ್ಲಿ ಗ್ರಹಿಸಬೇಕಾದುದೇನು ಎಂಬುದು ತಿಳಿಯದು. ‘ಕೆನೆಹಾಲನ್ನು ಕಡೆದು ನವನೀತವನ್ನು ತೆಗೆದು ಬಾಯಿಗೆ ರುಚಿಯಾಗುವಂತೆ ಸವಿಯದೆ, ಅದರೊಳಗೆ ಹುಳಿ ಹಿಂಡಿ ಕೆಡಿಸುವ’ (ಲಕ್ಷಿ ಶ ೧-೭) ಜನ ಇವರು. ‘ಎಡೆವಾಯ್ದು ಬಂದ ತಪ್ಪನ್ನೆ’ ಹಿಡಿದು, ಕಾವ್ಯದಲ್ಲಿ ‘ಕಡೆತನಕ ಬಂದ ಲೇಸ’ನ್ನು (ರಾಘವಾಂಕ ಹ. ಚಕಾ. ೧-೨೩) ಕಾಣದವರು ಇವರು. ಹೀಗಾಗಿ ‘ಸಾರಣೆಯಂತಿರೆ ಕಸಮನೆ ಪಿಡಿವರ್ ಕೆಲಬರ್ ಮಹಾಪುರುಷರ್ಕಳ್’ (ರನ್ನ : ಅಜಿಪು ೧-೧೯) – ಜರಡಿಯ ಹಾಗೆ ಕಸವನ್ನೇ ಹಿಡಿಯುವವರು ಇವರು. ಇಂಥವರು ಕಾವ್ಯಕ್ಷೇತ್ರದ ತುಂಬ ಕಳೆಯಂತೆ ಬೆಳೆದುಕೊಂಡಿದ್ದಾರೆ. ಇಂಥ, ‘ಕಸಮಂ ಕಿಳ್ತಸಲ್ಲದೆ ಪೊಸ ಸಸಿಗಳ್ ಕೈಕೊಳ್ಳವು’ (ಲೀಲಾ ೧೨-೮) ತಮ್ಮ ಸುತ್ತ ಇರುವ ಕಾವ್ಯವನ್ನು ಟೀಕಿಸುವುದಲ್ಲದೆ ಬೇರೆಯ ಕೆಲಸವೇ ಇವರಿಗಿಲ್ಲ. ಈ ‘ದುರ್ಜನ ಪರಮೇಶ್ವರರಿಗೆ’ ಕಾವ್ಯಮುಖದಲ್ಲಿ ಕವಿಗಳು ಅರ್ಘ್ಯವೆತ್ತುತ್ತಾರೆ. ಇಂಥ ಪರಿಸರದ ಮಧ್ಯೆ ‘ರಸವತ್ ಕೃತಿಯಂ ಕವಿ ಪೇಳ್ಗೆ, ದುರ್ಜನಂ ಪಳಿಯುತಮಿರ್ಕೆ ಬಾಳ್ವಮನೆಗೊಂದು ಬಗುಳ್ವುದುವೇಳ್ಕುಮೆನ್ನಿರೇ’: (ಅನಂಪು ೧-೪೦) ಕವಿ ತನ್ನ ಕಾವ್ಯವನ್ನು ಬರೆಯುತ್ತಲೆ ಹೋಗಲಿ, ಅದನ್ನು ಮೆಚ್ಚಲಾರದವರು ಹಳಿಯುತ್ತಲೇ ಹೋಗಲಿ, ಬಾಳುವ ಮನೆಗೊಂದು ಸದಾ ಬೊಗಳುವುದೊಂದು ಬೇಕಲ್ಲವೆ?[2]

ಈ ಔದಾಸೀನ್ಯದ ನಿಲುವು ಒಂದುಕಡೆ ಇದ್ದರೆ, ‘ಇಂಥ ಖಳರನ್ನು ಬಯ್ದರೆ, ಎಲ್ಲಿ ಸೌಜನ್ಯಕ್ಕೆ ಧಕ್ಕೆ ಬರುವುದೋ ಎಂದು ಕೆಲವರು ಮೆಲ್ಲಗೆ ಬಯ್ಯುತ್ತಾರಂತೆ. ಆದರೆ ಈ ಖಳರಿಂದ ಯಾರಿಗಾದರೂ ಒಳ್ಳೆಯದಾಗಿದೆಯೆ? ಆದಕಾರಣ ಯಾವ ಮುಲಾಜೂ ಇಲ್ಲದೆ, ಒಲೆಯಲ್ಲಿ ಉಪ್ಪನ್ನು ಹಾಕಿದರೆ ಹೇಗೆ ಚಟಪಟ ಅನ್ನುತ್ತದೆಯೋ ಹಾಗೆ ಬಯ್ಯಬೇಕಾದದ್ದೆ ಸರಿ’ (ಸೂಸು, ೧-೩೨) ಎನ್ನುವ ನಿಲುವು ಕೆಲವರದು.

ತಮ್ಮ ಕೃತಿಯನ್ನು ಮೆಚ್ಚುವವರ ಬಗ್ಗೆ ಪ್ರಶಂಸೆ, ಮೆಚ್ಚದವರ ಬಗ್ಗೆ ತಿರಸ್ಕಾರವನ್ನು ಇಡೀ ಕನ್ನಡ ಕಾವ್ಯ ಪರಂಪರೆ ಹೀಗೆ ರಭಸದಿಂದ ಪ್ರಕಟಿಸಿರುವುದನ್ನು ನೋಡಿದರೆ, ಕನ್ನಡ ಕಾವ್ಯ ಒಂದು ರೀತಿಯಲ್ಲಿ ವಿಮರ್ಶಾವಿರೋಧಿಯಾದ ಧೋರಣೆಯೊಂದನ್ನು ಪ್ರಕಟಿಸುತ್ತಿದೆಯೆ ಎಂಬ ಅನುಮಾನಗಳು ಕಾಡುತ್ತವೆ. ಕಾವ್ಯದ ಸ್ವಾರಸ್ಯಗಳನ್ನು ಮೆಚ್ಚುವುದನ್ನೆ ಕಾವ್ಯಾಸ್ವಾದವೆಂದು ತಿಳಿದ ನಿಲುವು ಇದು. ಈ ನಿಲುವು ಬಹುಶಃ ಎಲ್ಲ ಕಾಲದಲ್ಲೂ ಇದ್ದದ್ದೆ. ನಿಜ ಹೇಳಬೇಕೆಂದರೆ ಎಲ್ಲ ಕಾಲದ ಕವಿಗಳೂ ತಮ್ಮಕಾಲದ ಓದುಗರಿಂದ ಬಯಸುವುದು ಮೆಚ್ಚುಗೆಯನ್ನೆ. ಕವಿಗೆ ಬೇಕಾದದ್ದು ಜನರ ಪ್ರೀತಿ, ಮನ್ನಣೆ, ತನ್ನ ಕೃತಿಯನ್ನು ಓದಿ ತನ್ನ ಸಮಕಾಲೀನರು ಪಡುವ ಸಂತೋಷ ಮತ್ತು ಆದರಿಂದ ಕವಿಗೊದಗುವ ತೃಪ್ತಿ – ಇದೇ ಕವಿ ನಿರೀಕ್ಷಿಸುವುದು. ಹಾಗೆಂದರೆ ವಿಮರ್ಶೆ ಬೇಡವೆಂದು ಅರ್ಥವಲ್ಲ. ಹಾಗೆ ನೋಡಿದರೆ ನಿಜವಾಗಿಯೂ ವಿಮರ್ಶೆ ಬೇಕಾಗಿರುವುದು ಕವಿಗಲ್ಲ, ಓದುಗರಿಗೆ; ಓದುಗರ ವಿವೇಚನೆಗೆ, ಚರ್ಚೆಗೆ, ಮೌಲ್ಯಮಾಪನಕ್ಕೆ; ಒಟ್ಟಾರೆಯಾಗಿ ಸಾಹಿತ್ಯದ ಅರ್ಥವಂತಿಕೆಗೆ. ವಿಮರ್ಶಕರ ವಿಮರ್ಶೆಯನ್ನೋದಿ ಕವಿ ತನ್ನ ಕಾವ್ಯಕ್ರಿಯೆಯನ್ನು ಸುಧಾರಿಸಿಕೊಂಡ ಉದಾಹರಣೆಗಳಿವೆಯೆಂದೇನೂ ನಮಗೆ ತೋರುವುದಿಲ್ಲ. ಮತ್ತು ವಿಮರ್ಶೆಯಿಂದ ಎಷ್ಟೋ ವೇಳೆ ಸಮಕಾಲೀನತೆಯಲ್ಲಿ ಕವಿಗೆ ಸಲ್ಲಬೇಕಾದ ನ್ಯಾಯ ಸಲ್ಲುತ್ತದೆ ಎಂಬ ನಂಬಿಕೆಯೂ ಇಲ್ಲ. ಆದರೆ ನಿಜವಾದ, ಸತ್ವಶಾಲಿಯಾದ ಕವಿ ಎಂದೂ ವಿಮರ್ಶೆಗೆ ಬೆನ್ನುತಿರುಗಿಸಬೇಕಾಗಿಲ್ಲ. ಈ ಧೈರ್ಯವೂ ಹಿಂದಿನ ಕಾವ್ಯಸಂದರ್ಭದಲ್ಲಿ ಅಭಿವ್ಯಕ್ತವಾಗಿದೆ. ತನ್ನ ಕೃತಿಯನ್ನು ಪರೀಕ್ಷಿಸುವವರಿಗೆ ಎಂಟೆದೆಯೇ ಎಂದು ಕೂಗು ಹಾಕಿದ ರನ್ನನೇ “ಗುಣದೋಷಮಂ ನಿಕಷಮಿಟ್ಟು ನೋಡೆ ತಾವೆ ಪೇಳವೆ? ಬುಧರಿರ್ದು ನೋಳ್ಪುದು ಪುರಾತನ ನೂತನ ಕಾವ್ಯ ರೇಖೆಯಂ’ (ಗ. ಯು ೧-೪೭) ಎನ್ನುತ್ತಾನೆ. “ಮತ್ಕಾವ್ಯಮಂ ಪರೀಕ್ಷಿಸುಗೆ ಗುಣಾನ್ವೇಷಿಗಳಪ್ಪೊಡೆ’ (ಲೀಲಾ, ೧-೬೯) ಎನ್ನುತ್ತಾನೆ ನೇಮಿಚಂದ್ರ. ಈ ಬಗೆಯ ವಿಮರ್ಶೆಗೆ ತೆರೆದ ಎದೆ ಇದ್ದರೂ, ಹಿಂದಿನ ಆ ಪರಿಸರದಲ್ಲಿ ಕಾವ್ಯವನ್ನು ಮುಕ್ತಮನಸ್ಸಿನಿಂದ ಆಸ್ವಾದಿಸಿ ಸಂತೋಷಪಡುವುದಷ್ಟೆ ಓದುಗನ ಪಾಲಿನ ಕೆಲಸವಾಗಿತ್ತೆ ಹೊರತು ಅದಕ್ಕಿಂತ ಹೆಚ್ಚೇನೂ ಆಗಿರಲು ಸಾಧ್ಯವಿಲ್ಲ. ಇಂದಿನ ಅರ್ಥದ ‘ವಿಮರ್ಶೆ’ಯಂತೂ, ಅಂದು ಬಹುಶಃ ಅಪರಿಚಿತವಾದ ಕಾರಣ, ಆಸ್ವಾದ ವಿರೋಧಿಯಾದ ಯಾವುದೇ ನಿಲುವು ಕೇವಲ ಅಪಸ್ವರದಂತೆ ತೋರಿದ್ದರೆ ಆಶ್ಚರ್ಯವಲ್ಲ. ಆದಕಾರಣ ಕವಿಯ ‘ಸರ್ವರಸೋತ್ಪಾದ ನವೀನ ಸೃಷ್ಟಿ’ಯಾದ ಕಾವ್ಯವನ್ನು ವಿದ್ವಾಂಸರೂ, ರಸಿಕರೂ ಮೆಚ್ಚಿ ತಲೆದೂಗುವುದೂ, ರೋಮಾಂಚಿತರಾಗಿ ಹರ್ಷಬಾಷ್ಪಗಳನ್ನು ಸುರಿಸುವುದೂ, ಆನಂದೋದ್ಗಾರ ಮಾಡುವುದೂ ಕಾವ್ಯಾನುಭವದ ಅಭಿವ್ಯಕ್ತಿಯಾಗಿದ್ದ ಸಂದರ್ಭದಲ್ಲಿ ಇಂದಿನರ್ಥದ ‘ವಿಮರ್ಶೆಗೆ’ ಅವಕಾಶವಾಗಲೀ, ಅನುಕೂಲವಾಗಲೀ, ತಕ್ಕ ಪರಿಸರವಾಗಲೀ ಇರಲಿಲ್ಲವೆಂದು ಹೇಳಬಹುದು.[3]

ತಮ್ಮ ಕೃತಿಗಳನ್ನು, ಮೆಚ್ಚದ ಹಾಗೂ ಟೀಕಿಸುವ ಓದುಗ ವರ್ಗದ ಜತೆಗೆ, ಅಂದಂದಿನ ಸಾಹಿತ್ಯ ಸಂದರ್ಭದಲ್ಲಿದ್ದ ಅಕವಿ ಹಾಗೂ ಕುಕವಿಗಳನ್ನು ಕುರಿತ ಪ್ರತಿ ಕ್ರಿಯೆಗಳು ಅಂದಂದಿನ ಸಮಕಾಲೀನ ಸಾಹಿತ್ಯ ಸಂದರ್ಭವನ್ನು ಪರಿಚಯ ಮಾಡಿಕೊಡುತ್ತವೆ. ಅಂದಂದಿಗೆ ನೆಲೆನಿಂತ ಒಳ್ಳೆಯ ಕವಿಗಳ ಜತೆಗೇ ರಾಜಾಸ್ಥಾನದಲ್ಲಿ ‘ತಾವೂ ಕವಿಗಳೆಂಬ ಲೆಕ್ಕದಲ್ಲಿ’ ಬಂದು ಸೇರಿಕೊಂಡ ಅಕವಿ – ಕುಕವಿಗಳೂ, ‘ಭೂಭೃತ್ ಸಭಾ ಭೂಷಣ’ (ನೇಮಿಪು ೧-೩) ರಾಗಿರುತ್ತ, ‘ಆನುಂ ಬುಧರೊಡನೆ ನೃಪಾಸ್ಥಾನದೊಳ್ ಇರ್ದಪೆವೆಂದು’ (ಲೀಲಾ, ೧-೩೫) ಬಾನುದ್ದ ಬೀಗುತಿದ್ದರು. ಹೀಗೆ, ಅಕವಿ-ಕುಕವಿಗಳ ಮಧ್ಯ, ಕವಿನಾಮಧಾರಕರೂ, ಕವಿಯಾಗಲಪೇಕ್ಷಿಸುವ ‘ಬಯಕೆಗವಿ’ಗಳೂ ಸಾಕಷ್ಟಿದ್ದರು. ಕಾವ್ಯ ಬರೆಯುವುದು ಆಕರ್ಷಣೀಯವೂ, ತಕ್ಕಮಟ್ಟಿಗೆ ಲಾಭದಾಯಕವೂ ಆದುದೆಂಬುದನ್ನು ಸಮರ್ಥಿಸಿದ ಅಂದಿನ ‘ರಾಜಾಶ್ರಯ’ಗಳು ಈ ಪರಿಸ್ಥಿತಿಗೆ ಕಾರಣವಾಗಿರಬೇಕು. ತಮ್ಮ ಸಭೆಯಲ್ಲಿ ಹೀಗೆ ಕವಿಗಳನ್ನು ಇರಿಸಿಕೊಳ್ಳುವುದೂ, ಅವರನ್ನು ಗೌರವಿಸುವುದೂ ಒಂದು ಪ್ರತಿಷ್ಠೆ ಕೂಡಾ ಆಗಿದ್ದಿರಬಹುದು ರಾಜರಿಗೆ. ಮತ್ತು ಇಂಥ ರಾಜರ ಕೊಡುಗೈ ಗುಣವನ್ನೂ ಕವಿಗಳು ಪ್ರಶಂಸಿಸದೆ ಇಲ್ಲ. ಈ ಬಗೆಯ ಪರಿಸರದಲ್ಲಿ ಮಹಾ  ಮಹಾಕವಿಗಳೂ, ಬಹುದೊಡ್ಡ ವಿದ್ವಾಂಸರೂ[4], ಗಮಕಿ-ವಾಗ್ಮಿಪ್ರವರರೂ ಇರುತ್ತಿದ್ದಂತೆ, ಅವರ ಜತೆಗೆ ಅಕವಿಗಳೂ ಹಾಗೂ ‘ಬುಧಾಭಾಸ’ರೂ (ವಿದ್ವಾಂಸರ ಹಾಗೆ ತೋರುವ, ಆದರೆ ನಿಜವಾಗಿಯೂ ವಿದ್ವಾಂಸರಲ್ಲದವರು) ಇರುತ್ತಿದ್ದರು. ಈ ಅಕವಿಗಳು ಕಾವ್ಯ ಬರೆಯಲು ಪಡುವ ಪ್ರಯಾಸವನ್ನು ಕುರಿತ ವರ್ಣನೆ ಸಾಕಷ್ಟಿದೆ. ‘ಲಲಿತಪದಂ ಪ್ರಸನ್ನ ಕವಿತಾ ಗುಣಮಿಲ್ಲದೆ’ ಕಾವ್ಯವನ್ನು ಬರೆದೇ ತೀರುವೆನೆಂದು ಹಠತೊಟ್ಟ ‘ಬೆಳ್ಗಳ ಕೃತಿ ಬಂಧ’ವಂತೂ, ಹಾಗೆ ಬರೆದವರ ಕೈಗಳ ಕೇಡಿನಂತೆ, ‘ನುಣ್ಣಗಿರುವ ತಾಳೆಗರಿಗಳ ಕೇಡು ಎಂಬಂತೆ ನಿಷ್ಟ್ರಯೋಜಕ’ (ಪಂಪ ಭಾ ೧-೧೨) ವಾಗಿರುತ್ತಿದ್ದವು. ಕಾವ್ಯಕ್ಕೆ ಅಗತ್ಯವಾದ ಪ್ರತಿಭೆಯಿಲ್ಲದೆ, ವ್ಯುತ್ಪತ್ತಿಯಿಲ್ಲದೆ, ‘ಬಗೆಗೊಂಡೋದದೆ, ಕೇಳದೆ, ಸರ್ವಜ್ಞರಿಂ ಕಲ್ವದೆ, ಅಚ್ಚಿಗದಿಂ ಕಟ್ಟಿದ ಕೆಟ್ಟ ಕನ್ನಡದ ಕಾಳ್ಕಂಬ್ಬಂಗಳಂ’ (ಲೀಲಾ ೧-೩೫) ಅವರಿವರಿಂದ ಓದಿಸಿ, ತಾವೂ ಕವಿಗಳೆಂದು ಬೀಗುವ ಕುಕವಿಗಳಿಗೆ, ‘ವಾಕ್ಕಿನೊಳಿಲ್ಲಪರಿಚಯಂ’. ಹೀಗಾಗಿ ‘ಗಂಟಿಕ್ಕುವರ್ ಎಂಜಲಾದ ಬರುವಾತುಗಳಂ’ (ಸೂಸು, ೧-೩೬). ‘ಒಳಗರಿಯದೆ, ಸತ್ಕಾವ್ಯದ ಕಳೆಯರಿಯದೆ ಲಘುತರತ್ವದಿಂದ ನಾಲ್ಕೆರಡಾಯ್ಕುಳಿ ಮಾತನಾಡಿ’ (ಹರಿಹರ ಗಿರಿಕ ೧-೨೭) ಕಾವ್ಯ ಬರೆದೆವೆಂದು ಭಾವಿಸುತ್ತಿದ್ದರು. ‘ಅಲ್ಲಲ್ಲಿ ಕಲ್ತ ಪಳವಾತೆಲ್ಲಮನ್ ಕೋದು’ (ಉದ್ಘಟಕಾವ್ಯ ೧-೧೫) ‘ಬರೆದೆ ಆಹಾ, ಬರೆದೆ ಭಾಪುರೆ, ಬರೆದೆ ಅಕ್ಕಟ’ (ಗಿರಿಕ : ಹರಿಹರ ೧-೨೮) ಎಂದು ಬೆನ್ನುತಟ್ಟಿಕೊಳ್ಳುತ್ತಾರೆ. ಮತ್ತೆ ಕೆಲವರು ಬರೆಯಲು ಪ್ರಾರಂಭಿಸಿ ‘ಬರೆಬರೆದು ಅಂತಂದಂ ತೊಡೆದು, ತೊಟ್ಟಗೆ ನಿಟ್ಟಿಸಿ, ಮೆಲ್ಲನೊಂದು ಸರಸಪದಾರ್ಥಮಂ ತಡಕಿ, ಕಾಣದೆ, ಕಳ್ದು ಪರೋಕ್ತಿಯಂ, ಅಂತುಂ ಇಂತುಂ ಅಳಿಗಬ್ಬಮನಾಗಿಸಿ’ (ರಾಜಶೇ. ೧-೨೩) ಸಮಾಧಾನಪಟ್ಟುಕೊಳ್ಳುವ ‘ಪರರ ಕಾವ್ಯಾರ್ಥಗಳನ್ನು ಛಿದ್ರಿಸುವ ಅಕ್ಷರ ದರಿದ್ರರು’ (ಹರಿಹರ, ಗಿರಿಕ ೧-೨೬). ಇಂಥವರ ಬರೆಹ ‘ಶಿಥಿಲ ಪದಪ್ರಪೂರ್ಣ, ಅಪಶಬ್ದ ತುಷಾವೃತ, ಅಸ್ತಭಾವ’ (ಸೂ.ಸು. ೧-೭೩). ಅಂಥವರ ಕವಿತೆಯ ‘ಅಕ್ಕರದ ಹೊಲಿಗೆ’ಯನ್ನು ಬಿಚ್ಚಿನೋಡಿದರೆ, ಎಲ್ಲಾ ‘ಬರಿ ತಾರಗೆ ಬೀರಗೆ ಅಸ್ತವ್ಯಸ್ತಂ’ (ಹರಿಹರ. ಗಿರಿಕ ೧-೨೩). ಇವರು ‘ಸರಸತಿಯನ್ ಅಬಲೆಯನ್ ಗೋಣ್ಮುರಿಗೊಂಡು ಅರ್ಥಕ್ಕೆ ಕುದಿದು ನೋಯಿಸುವ ಸರಸ್ವತೀ ದ್ರೋಹರು’ (ರನ್ನ, ಅಜಿಪು. ೧-೮೭); ಹೇಳಬೇಕಾದುದನ್ನು ಹೇಳುವ ಕಲೆಗಾರಿಕೆಯಿಲ್ಲದೆ ‘ಗೂಡಾರದ ಕವಿಯಂತೆ ಮುಚ್ಚಿಪೋದ ಕವಿ’ (ಅಜಿಪು ೧.೮೭)ಗಳು.

ಇನ್ನು ಕೆಲವರು ಅವರಿವರು ಬರೆದುದನ್ನು ತಮ್ಮ ಮಾತುಗಳ ಮೂಲಕ ಮರುದನಿಗೈಯುವ ಅನುಕರಣ ಕವಿಗಳು. ಅವರು ‘ಎಂದುದನ್ ಎನುತಿರ್ಪರ್ ಗಿರಿಯಂದದೆ” (ಲೀಲಾ : ೧-೨೫). ಇನ್ನು ಕೆಲವರದು ದಿಗ್ಭಾಗದವರೆಗೂ ಚಾಚಿಕೊಂಡ ‘ಸೀರುಡುವಿನಡವಿಯಂತೆ’ (ಮಲ್ಲಿಪು ೧-೩೦) ಕೇವಲ ಜೀರುಂಡೆಗಳು ಚೀರಿಡುವ ಕಾಡಿನ ಏಕತಾನತೆಯಂತೆ-ಕಿರಿಕಿರಿ ಹುಟ್ಟಿಸುವ ಕಾವ್ಯ. ಇದರ ಜತೆಗೆ ಕೇವಲ ಶುಷ್ಕ ಪಾಂಡಿತ್ಯದಿಂದ ರಚಿತವಾದ, ‘ಓದಿದೊಡೆ ಕಲ್ಲಮಾಲೆಯ ನಾದಂ, ಕರ್ಬೊನ್ನ ಕಡಲೆ, ಉರ್ಕಿನ ಪುಡಿ’ (ಗಿರಿಕ ೧-೨೨) ಯಂತಹ ಕವಿತೆ ಬರೆಯುವ ಜನ. ಇಂಥವರಿಗೆ ಒಳ್ಳೆಯ ಕವಿತೆಯನ್ನು ಬರೆಯುವವರನ್ನು ಕಂಡರೆ ಆಗದು. ಯಾಕೆಂದರೆ ‘ತನಗೆ ಕವಿತ್ವಮಿಲ್ಲ’. ಆದಕಾರಣ ಅವನು ‘ಪೆರರಂ ಪಳಿದಲ್ಲದೆ ನಿಲ್ಲನ್’ (ಹರಿಹರ ಗಿರಿಕ ೧-೨೯). ಇದರಿಂದ ಏನಾದರೊಂದು ನೆಪಮಾಡಿ ಇತರ ಕವಿಗಳ ಜತೆ ಜಗಳ ತೆಗೆಯುತ್ತಾರೆ. ‘ಕವಿಯಂ ಕಂಡಡೆ ಶಾಸ್ತ್ರಹೀನನ್ ಇವನ್’ ಎನ್ನುತ್ತಾರೆ, ಮತ್ತೆ  ‘ಶಾಸ್ತ್ರಜ್ಞನಂ ಕವಿಯಲ್ಲ’ ಎಂದು ಮೂದಲಿಸುತ್ತಾರೆ. ಕವಿಯೂ, ಶಾಸ್ತ್ರಜ್ಞನೂ ಎರಡೂ ಆದವನನ್ನು, ಅವನು ವಿದಗ್ಧನಲ್ಲ, ‘ದಗ್ಧವಾಣಿ’ (ಸೂಸು. ೧-೩೭) ಎಂದು ಕೊಂಕುಮಾತನಾಡಿ ತಾವು ಸಮಾಧಾನ ಪಟ್ಟುಕೊಳ್ಳುತ್ತಾರೆ. ಯಾವ ಹೊಸಕಾವ್ಯ ಬಂದರೂ ಅವರಿಗೆ ಸಹನೆಯಿಲ್ಲ, ಅದರ ಬದಲು ಹಿಂದಿನದು, ಅದು ಎಷ್ಟೇ ಕೆಟ್ಟ ಕಾವ್ಯವಾಗಿದ್ದರೂ ಚಿಂತೆಯಿಲ್ಲ, ಅದು ಅವರಿಗೆ ಮೆಚ್ಚು. ‘ಎಸೆಯದೆ, ಪೂಳ್ದು ಕೆಟ್ಟ ಪಳಗಬ್ಬಮನ್ ಎಮ್ಮವು’ ಎಂದು (ಅಭಿಮಾನದಿಂದ) ಬಾಜಿಸುತ್ತಾರೆ (ಶಾಂತಿಪು. ಪೊನ್ನ ೧೨-೭೬). “ಉಡುಗಿದುದು ಈಗಳಿನ ಕಬ್ಬದೊಳ್ ಒಟ್ಟಜೆ (ಒಟ್ಟಂದ); ಕೆಟ್ಟುದು ಈಗಡಿನ ಕವಿ ಜನಕ್ಕೆ ಪದಸಂಚಯಂ, ಅಚಿರಮಾದುದು ಈಗಡಿನ ಕಥಾನ್ವಯಕ್ಕೆ ರಸಂ; ಪೊಸಕಬ್ಬಂ ಅಪೂರ್ವಮಾದುವು” (ಪೊನ್ನ, ಶಾಂತಿಪು ೧೨-೭೯). ಹೀಗೆ ಹಳೆ ಕಾವ್ಯದ ಬಗ್ಗೆ ಪಕ್ಷಪಾತಿಗಳಾಗಿ, ಹೊಸತೇನು ಬಂದರೂ ಅದರಲ್ಲಿ ಹುರುಳಿಲ್ಲವೆಂದು ಟೀಕಿಸುವ ಈ ಜನಗಳ ಪಾಲಿಗೆ ಒಂದು ವೇಳೆ ಸರ್ವಲಕ್ಷಣ ಸಂಪನ್ನವಾದ ಕೃತಿಗಳೇನಾದರೂ ಇರುವುದಾದರೆ, “ಅವು ಪೇಳ್ದುದು ಸಾಧಿಸಿದ ಕಬ್ಬಮೆ ದಲ್” (ಶಾಂತಿಪು. ೧೨-೭೯), ಈಗಾಗಲೇ ಹಿಂದಿನವರು ಹೇಳಿ ನೆಲೆಗಿಂತ ಕಾವ್ಯಗಳೇ. ಹೀಗೆ ತಾವಾಗಿಯೇ ಒಳ್ಳೆಯ ಕಾವ್ಯ ಬರೆಯಲಾರದೆ, ತಮ್ಮೆದುರಿಗೆ ರಚಿತವಾಗುತ್ತಿರುವ ಒಳ್ಳೆಯ ಕಾವ್ಯಗಳನ್ನು ಮೆಚ್ಚಿಕೊಳ್ಳಲಾರದೆ, ಹಿಂದಿನ ಕೆಟ್ಟ ಕಾವ್ಯವನ್ನು ಮೆಚ್ಚಿಕೊಳ್ಳುವ ಈ ಜನ, ತಾವು ಬರೆಯುತ್ತಿದ್ದದ್ದೂ ಕೆಟ್ಟ ಕಾವ್ಯವನ್ನೆ. ಇಂಥ ಕೆಟ್ಟ ಕಾವ್ಯವನ್ನು ತಮ್ಮವರೇ ಆದ ನಾಲ್ಕು ಮಂದಿಯ ಮುಂದೆ ವಾಚಿಸುವ ಒಂದು ಕಾವ್ಯಗೋಷ್ಠಿಯ ಚಿತ್ರ ಹೀಗಿದೆ :

“ತಲೆಯಂ ತೂಗುವನ್ ಓರ್ವನ್” – ಕಾವ್ಯವಾಚನ ನಡೆದಿದೆ, ಒಬ್ಬ ತಲೆಯನ್ನು ತೂಗುತ್ತಿದ್ದಾನೆ. ಹಾಗೆ ಯಾಕೆ ತಲೆದೂಗುತ್ತಾನೆ ಅಂದರೆ, ಅವನ ಪಕ್ಕದಲ್ಲೆ “ಕಾಳ್ಕಬ್ಬಮನ್ ಕಟ್ಟಿ ಕೋಟಲೆಗೊಂಡು ಊಳ್ವವನ್ ಓರ್ವ” – ಕೆಟ್ಟಕವಿತೆಯೊಂದನ್ನು (ಬರೆದು) ಹಿಂಸೆಪಟ್ಟುಕೊಂಡು ‘ಊಳುವವನು’ (ಓದುವವನಲ್ಲ, ಊಳ್ವನ್ – ಊಳ್ ಎಂಬ ಮಾತಿನ ವ್ಯಂಗ್ಯವನ್ನು ಗಮನಿಸಿ) – ಒಬ್ಬ. ಅವನ ಓದುಗಾರಿಕೆಯ “ಚಾತುರ್ಯಕ್ಕೆ ಕೈವಾರಮಂ ಪೊಲೆಗೆಟ್ಟು ಈವವನ್ ಓರ್ವಂ,” ಹೀಗೆ ಭೂತ ಎಂಥದೋ ಬಲಿ ಆಂಥದು ಎನ್ನುವುದನ್ನು ನೆನಪಿಗೆ ತರುವ ಹಾಗಿತ್ತಂತೆ ಈ ಕಾವ್ಯವಾಚನ ಗೋಷ್ಠಿ. (ನೇಮಿಚಂದ್ರ : ಲೀಲಾವತಿ ೧-೪೦).

ಇನ್ನೊಂದು ವರ್ಣನೆ ಇದಕ್ಕೆ ಸಂವಾದಿಯಾದದ್ದು : ಒಂದೆಡೆ ಕಾವ್ಯಗೋಷ್ಠಿ ನಡೆದಿದೆ. ಆ ಗೋಷ್ಠಿಗೆ ಒಬ್ಬ ಕವಿ ಬಂದಿದ್ದಾನೆ. ಬಂದವನು ತನ್ನ ಕಾವ್ಯವನ್ನು ಓದಿದ್ದಾನೆ. ಆಗ ಆ ಗೋಷ್ಠಿಯಲ್ಲಿದ್ದವರು, ಅದನ್ನು ಕೇಳಿ, ಅವನ ಎದುರಿಗೆ (ಮುಂತೆ) ಈ ಕಾವ್ಯಕ್ಕೆ ಸಮನಾದ ಕಾವ್ಯವನ್ನೇ ನಾವು ಕೇಳಿಲ್ಲ ಎಂದು ಹೊಗಳುತ್ತಾರೆ. ಅನಂತರ ಆ ಕವಿ ಬಹುಶಃ ಏನೋ ಕೆಲಸದ ಮೇಲೆ ಹೋಗುತ್ತಾನೆ. ಈ ಕಾವ್ಯಗೋಷ್ಠಿ ಮುಂದುವರಿಯುತ್ತದೆ. ಆಗ “ಮುಂತೆ, ಸರಿಯಿಲ್ಲೆಂದು ಪೊಗಳ್ದು, ಅವನು ಪೊರಮಟ್ಟ ಬಳಿಕೆ’, ‘ಅವನ ಕವಿತೆಯೇನ್ ಎಂದು ನಿಂದಿಸಿ’ ತಮ್ಮ ‘ಕೊಂತಗವಿತೆಯ’* [5] (ಭರ್ಜಿಯಂಥ ಕವಿತೆಯ) ತೂಬನ್ನು ತೆರೆದು, ತಮ್ಮೆದುರು ನೆರೆದಿದ್ದ ಊರುಗರ ನಡುವೆ ನಿಜನಿಳಯದೊಳಗೆ ಮಂತಣಂಗೊಂಡು ಕಾಳ್ಗೆಡೆದು ಊಳ್ವಕವಿಯ ಚಿತ್ರವೊಂದನ್ನು ರಾಘವಾಂಕ ಕೊಡುತ್ತಾನೆ. ಇದು ಮನೆಯೊಳಗಡೆ ಹಲವರು ಸೇರಿಕೊಂಡು ನಡೆಯಿಸುವ ಕಾವ್ಯಗೋಷ್ಠಿಯನ್ನು ಕುರಿತದ್ದು.[6] (ರಾಘವಾಂಕ ಹಚಕಾ ೧-೩೦; ಸೋಮಚಾ ೧-೧೭).

ಮತ್ತೊಂದು ಚಿತ್ರ : ಅದು ಬಹುಶಃ ಮಾರ್ಗಕಾವ್ಯ, ದೇಶೀಪದ್ಧತಿಗೆ ಬದಲಾಗುತ್ತಿದ್ದ ಸಂದರ್ಭದ ಪ್ರತಿಕ್ರಿಯೆಯನ್ನು ಕುರಿತದ್ದು. ಮಾರ್ಗಕಾವ್ಯ, ದೇಸೀ ಕಾವ್ಯದತ್ತ ಹೊರಳಿದಾಗ, ಇಡೀ ಕನ್ನಡ ಕಾವ್ಯಸಂಪ್ರದಾಯವೇ ಅಧೋಗತಿಗೆ ಬಿದ್ದು ಹೋಯಿತೆಂದು ಭಾವಿಸಿದ ಒಂದು ಮನಃಸ್ಥಿತಿಯ ಉತ್ಪ್ರೇಕ್ಷಿತ ಚಿತ್ರ ಇಲ್ಲಿದೆ. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ ಸಂಕಲನದಲ್ಲಿ ದೊರೆಯುವ ಈ ಪದ್ಯ, ಅಂದಿನ ಮಾರ್ಗ ಕವಿಗಳಿಗೂ, ದೇಸೀ ಕವಿಗಳಿಗೂ ನಡೆದಿರಬಹುದಾದ ಸಂಘರ್ಷವನ್ನು, ಮಾರ್ಗಕವಿಯೊಬ್ಬನ ಆಪಾದನೆಯ ಧ್ವನಿಯಲ್ಲಿ ಹೀಗೆ ಚಿತ್ರಿಸುತ್ತದೆ :

‘ಛಂದಮಿದಾವುದು ಎಂದೊಡೆ ಇರಿವರ್’ – ಇದ್ಯಾವುದಪ್ಪ ನಿಮ್ಮ ಈ ಕಾವ್ಯದ ಛಂದಸ್ಸು ಎಂದು ಕೇಳಿದರೆ ಸಾಕು, ಇರಿದೇ ಬಿಡುತ್ತಾರೆ. ‘ಪದಬಂಧದೊಳ್ ಈ ಪ್ರಯೋಗಂ ಎಂತು ಎಂದೊಡೆ ಬಯ್ವರ್’ – ಈ ಪದ ಬಂಧದಲ್ಲಿ ಈ ಪ್ರಯೋಗ ಸರಿಯೆ ಎಂದರೆ ಸಾಕು, ನಮ್ಮನ್ನು ಬಯ್ಯುತ್ತಾರೆ. ‘ಆವ ಕವಿಮಾರ್ಗವಿದು ಎಂದೊಡೆ ಪೊಯ್ವರ್’ – ಇದು ಯಾವ ಕವಿಮಾರ್ಗಕ್ಕೆ ಸೇರಿದ್ದು ಅಂದರೆ, ಹೊಡೆಯುತ್ತಾರೆ. ‘ಅರ್ಥಮೇನ್ ಎಂದೊಡೆ ತೊಂಡುಬಂಡುಗೆಡೆದು ಉಟ್ಟುದನ್ ಇಕ್ಕುವರ್’-ನಿಮ್ಮ ಕಾವ್ಯದ ಅರ್ಥ ಏನು ಎಂದರೆ ಕೆಟ್ಟಮಾತನಾಡಿ ನಾವು ಉಟ್ಟ ಬಟ್ಟೆಯನ್ನೆ ಕಿತ್ತುಕೊಳ್ಳುತ್ತಾರೆ. (ಹೀಗೆಲ್ಲಾ ಮಾಡುತ್ತೀರಲ್ಲಾ) ‘ಆವ ನೀತಿ ಪೇಳ್ ಎಂದೊಡೆ ಕೊಲ್ವರ್’- ಇದು ಯಾವ ನೀತಿಯಪ್ಪ ಎಂದರೆ ನಮ್ಮನ್ನು ಕೊಂದೇ ಬಿಡುತ್ತಾರೆ. ಇವರು ಯಾರು ಗೊತ್ತೆ? “ಈಗಡಿನ ದೇಸಿಗೆ ಬಿಳ್ದ ಮಹಾಕವೀಶ್ವರರ್” ಈವತ್ತಿನ ದೇಸಿಗೆ ಬಿದ್ದ (ಬಿಳ್ದ ಎಂಬ ಮಾತನ್ನೂ ಗಮನಿಸಿ) ಮಹಾಕವೀಶ್ವರರು (ಸೂ. ಸು. ೧-೭೫).

ಈ ವ್ಯವಹಾರಕ್ಕೆ ಹೋಲಿಸಿದರೆ, ನಮ್ಮ ಇಂದಿನ ಸಮಕಾಲೀನ ಸಾಹಿತ್ಯ ಸಂಘರ್ಷಗಳು ಈ ಮಟ್ಟಕ್ಕೆ ಇನ್ನೂ ಇಳಿದಿಲ್ಲ ಎನ್ನುವುದು ಸಮಾಧಾನದ ಸಂಗತಿ!

ಹೊಸಕಾವ್ಯವೊಂದು ಬಂದ ಸಂದರ್ಭದಲ್ಲಿ ಈ ಬಗೆಯ ಸಂಘರ್ಷ ಇದ್ದದ್ದೆ. ಹಿಂದಿನ ಕಾವ್ಯಪರಿಸರದಲ್ಲಿ ಹಾಗೆ ಹೊಸಕಾವ್ಯವನ್ನು ಅನಾದರಿಸುವವರು, ‘ದುರ್ಜನ’ರೋ, ‘ಖಳ’ರೋ ಆಗಿ ಪರಿಣಮಿಸುತ್ತಿದ್ದರೇನೋ. ಹೀಗೆ ಹೊಸಕಾವ್ಯವನ್ನು ಬರೆದು ಓದುಗರ ಅನಾದರಕ್ಕೆ ಗುರಿಯಾಗಿ ನೊಂದ ಒಬ್ಬ ‘ಮರಿ’ ಕವಿಯೊಬ್ಬನನ್ನು, ನುರಿತ ಹಿರಿಯ ಕವಿಯೊಬ್ಬ ಸಮಾಧಾನ ಪಡಿಸುವ ಚಿತ್ರ ಹೀಗಿದೆ :

‘ಆದರಿಸರ್ ಖಳರ್ ಕೆಲಬರ್ ಈ ಪೊಸ ಕಬ್ಬಮನ್ ಎಂದು ಮನಃ ಖೇದ ಮನಾಳದಿರ್’ – ಯಾರೋ ಕೆಲವರು ನಾಲ್ಕು ಜನ ದುಷ್ಟರು (ನಿನ್ನ) ಈ ಹೊಸಕಾವ್ಯವನ್ನು ಆದರಿಸುವುದಿಲ್ಲವೆಂದು ಮನಸ್ಸಿಗೆ ಚಿಂತೆ ಹತ್ತಿಸಿಕೊಳ್ಳಬೇಡ. ಯಾಕೆಂದರೆ ಜನರ ಕಣ್ಣಿಗೆ ವಿಲಾಸವನ್ನು ನೀಡುವ ಸಾಂದ್ರ ಚಂದ್ರಿಕೆ, ವಿರಹಿಗಳಿಗೆ ಹೇಗೆ ಸಹನೀಯವಾದೀತು? ಆದ ಕಾರಣ, ಸ್ವಲ್ಪ ವಿಚಾರ ಮಾಡಿ ನೋಡಿದರೆ ನಿನ್ನ ಈ ಕೃತಿ ‘ಸಜ್ಜನರ್ಗೆ ಸೇವ್ಯಮಾದೊಡೆ ತಾನೆ ಸಾಲದೆ?’ (ಸೂಕ್ತಿ ಸು ಪದ್ಯ ೧-೬೨).

ಕೆಟ್ಟ ಕಾವ್ಯವನ್ನು ಕುರಿತು, ಕೆಟ್ಟಕವಿಗಳನ್ನು ಕುರಿತು ನಮ್ಮ ಹಿಂದಿನ ಕವಿಗಳು ತೋರುವ ಈ ಕೆಲವು ಪ್ರತಿಕ್ರಿಯೆಗಳು, ಪರೋಕ್ಷವಾಗಿ ಒಳ್ಳೆಯ ಕಾವ್ಯ ಹೇಗಿರಬೇಕು ಎಂಬುದನ್ನು ಸೂಚಿಸುತ್ತವೆ. ಇಂಥ ಒಳ್ಳೆಯ ಕಾವ್ಯ, ನಿರಷೆಕ್ಷರೂ ನಿರಸೂಯರೂ ಗುಣಜ್ಞರೂ ಆದ ಸಹೃದಯರ ಮೆಚ್ಚುಗೆಗೆ ಪಾತ್ರವಾದರೆ ಸಾಕು, ಕವಿ ಕೃತಾರ್ಥನಾದ ಹಾಗೇ.

ಕಾವ್ಯವೂ ರಾಜರ ಸಭೆಯಲ್ಲೋ, ಅಥವಾ ಬಹುಜನಸಮುದಾಯದ ಮುಂದೆಯೋ ಹಲವಾರು ದಿನಗಳ ಕಾಲ ವಾಚಿತವಾಗುವ ಸಂದರ್ಭವಿದ್ದುದರಿಂದ, ನೆನಪಿನಲ್ಲಿ ಉದ್ದಕ್ಕೂ ಉಳಿಯಲರ್ಹವಾದ ಕಥಾವಸ್ತುವನ್ನು ಎತ್ತಿಕೊಂಡು, ಸಾವಧಾನಗತಿಯಿಂದ, ಬಗೆಬಗೆಯ ವರ್ಣನೆಗಳ ಮೂಲಕ ಮತ್ತೆ ಮತ್ತೆ ಪುನರುಕ್ತವಾಗುವ ನುಡಿಗಟ್ಟುಗಳಿಂದ, ವಿವಿಧ ಹಂತದವರ ಅಭಿರುಚಿಗನುಸಾರವಾದ ಏರಿಳಿತಗಳಿಂದ, ಕೃತಿರಚಿತವಾಗಬೇಕಾಗಿತ್ತು. ಇದರಿಂದಾಗಿ ಇವತ್ತಿನ ಹಾಗೆ ಸಾಕಷ್ಟು ಹರಳುಗೊಳಿಸಿ ಹೇಳುವ ಕ್ರಮವನ್ನು ಹಿಂದಿನ ಕಾವ್ಯಗಳಲ್ಲಿ ನಿರೀಕ್ಷಿಸುವಂತಿಲ್ಲ.

ಈ ಬಗೆಯ ಶ್ರವಣವಿಧಾನಕ್ಕೆ ಬದ್ಧವಾದ ಅಂದಿನ ಕಾವ್ಯದ ಇನ್ನೆರಡು ಲಕ್ಷಣಗಳೇನೆಂದರೆ, ಕಾವ್ಯದ ಭಾಷೆಗಿರಬೇಕಾದ ಆಕರ್ಷಣೀಯತೆ ಮತ್ತು ಓದಿದೊಡನೆ ಅಥವಾ ಕೇಳಿದೊಡನೆ ನೇರವಾಗಿ ತಿಳಿಯುವಂಥ ಅರ್ಥಸ್ಪಷ್ಟತೆ, ಇಂದಿನಂತೆ ಕಣ್ಣುಗಳ ಮೂಲಕವಲ್ಲದೆ, ಕಿವಿಯ ಮೂಲಕವೇ ಕಾವ್ಯದ ಅನುಭವವನ್ನು ಪಡೆಯಬೇಕಾದ ಪರಿಸರದಲ್ಲಿ, ಅಂದಿನ ಕವಿಗಳ ಕಾವ್ಯ ಭಾಷೆ ಮೊಟ್ಟ ಮೊದಲಿಗೆ ಯಾರ ಕಿವಿಗಾದರೂ ನುಣ್ಪು ಹಾಗೂ ಇಂಪನ್ನು ಉಂಟುಮಾಡುವ ಗುಣವನ್ನು ಪಡೆದುಕೊಂಡಿರಬೇಕಾಗಿತ್ತು. ‘ಲಲಿತ ಪದಂ ಪ್ರಸನ್ನ ಕವಿತಾಗುಣಮಿಲ್ಲದನ’ ಕಾವ್ಯ ಕಾವ್ಯವೆ ಅಲ್ಲ ಅನ್ನುತ್ತಾನೆ ಪಂಪ. ಕಾವ್ಯ ಅನ್ನುವುದು ಸಮಸ್ತ ಇಂದ್ರಿಯಗಳ ಅನುಭವವನ್ನೂ ಶಬ್ದಗಳ ಮೂಲಕವೇ ಉದ್ಭೋದಿಸುವ ಕಲೆಯಾದುದರಿಂದ, ಕವಿ ಬಳಸುವ ಶಬ್ದ ಸಮುದಾಯ ಅದರ ಅರ್ಥವನ್ನು ಕೇಳಿದವನ ಮನಸ್ಸಿನಲ್ಲಿ ಥಟ್ಟನೆ ತೆರೆದು ತೋರುವಂತಿರಬೇಕು. ‘ನವರಸಮಂ ತೆರೆಯೆ ನುಡಿದನ್ ಎನಿಸಿದ ಕವಿ ಸತ್ಕವಿಯೆನಿಕುಂ’ (ಅಜಿಪು ೧-೮೭). ಕವಿಯ ಕಾವ್ಯ ಓದಿದೊಡನೆ, ‘ಮನೋಭವನ ಅಲರಂಬಿನಂತೆ’ (ಷಡಕ್ಷರಿ. ಶಶಂವಿ ೧-೨೬) ಎದೆಗೆ ನಾಟಬೇಕು. ಈ ದೃಷ್ಟಿಯಿಂದ ಕವಿಯ ಅಭಿವ್ಯಕ್ತಿ ಅಕ್ಲಿಷ್ಟವಾಗಿರಬೇಕು. ‘ಕಾಡಿನ ಪ್ರವಾಹದ ಹಾಗೆ ಮೊರೆದು ನೇರವಾಗಿ ಗುರಿಯ ಕಡೆ ಧಾವಿಸುವಂತಿರಬೇಕು. ಹಾಗಲ್ಲದೆ ಸುಮ್ಮನೆ ಒಗಟು ಹೇಳಿ, ತನ್ನ ಕೃತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಟೀಕೆ ಬೇಕು, ಟಿಪ್ಪಣಿ ಬೇಕು, ವ್ಯಾಖ್ಯಾನ ಬೇಕು ಅನ್ನುವವನು ಕವಿ ಹೇಗಾದಾನು?’ (ನಾಗವರ್ಮ : ಕಾವ್ಯಾವಲೋಕನ ಪ. ೨೯೯). ರತ್ನಾಕರ ಹೇಳುವಂತೆ ‘ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗ, ಅಯ್ಯಾ ಮಂಚಿದಿ ಎನೆ ತೆಲುಗ, ಅಯ್ಯಯ್ಯ ಎಂಚಪೊರ್ಲಾಡೆಂದು ತುಳುವರು ಮೈಯುಬ್ಬಿ ಕೇಳಬೇಕಣ್ಣಾ’ (ಭವೈ ೧-೭). ಕಾವ್ಯದ ಸಂವಹನವನ್ನು ಕುರಿತ ಈ ಕೆಲವು ಮಾತುಗಳು, ಕಾವ್ಯ ಓದುಗರ ಅಥವಾ ಕೇಳುಗರ ಮುಂದೆ ವಾಚಿತವಾಗಬೇಕಾದ ಸಂದರ್ಭದಲ್ಲಿ ಹುಟ್ಟಿಕೊಂಡವು.

ಯಾರೋ ಓದಿ ಹೇಳಬೇಕಾದ ಮತ್ತು ಆ ಕಾರಣದಿಂದ ಕೇಳಬೇಕಾಗಿದ್ದ ಶ್ರೋತೃ, ಈ ದಿನ ಮುದ್ರಣದ ಸೌಕರ‍್ಯ ಮತ್ತು ಶಿಕ್ಷಣದ ಮೂಲಕ ತಾನೇ ಓದಿಕೊಳ್ಳಬೇಕಾದ ನೆಲೆಗೆ ಬಂದಿದ್ದಾನೆ. ಹಿಂದಿನ ಕಾವ್ಯ ಅದರ ಶ್ರವ್ಯಪರಿಸರದ ಕಾರಣದಿಂದ ಓದಿದ ಕೂಡಲೇ ತಿಳಿಯುವಂಥ ಅರ್ಥವ್ಯಕ್ತಿಯನ್ನು ಪಡೆದುಕೊಂಡಿರಬೇಕಾಗಿತ್ತು ಎಂದು ನಾವು ಹೇಳುವ ಮಾತಿನಿಂದ, ಓದಿದಕೂಡಲೇ ಅಂದಿನ ಕಾವ್ಯ ಪೂರ್ತಿಯಾಗಿ ಅರ್ಥವೇ ಆಗಿ ಬಿಡುವಷ್ಟು ಸರಳವಾಗಿತ್ತೆಂದು ಯಾರೂ ತಿಳಿಯಬಾರದು. ಆದರೆ ಇಂದಿನ ಓದುಗನಿಗೂ, ಅಂದಿನ ಶ್ರಾವಕನಿಗೂ ಕಾವ್ಯ ಸಂವಹನವಾಗುವ, ಹಾಗೂ ಆತ ಅದನ್ನು ಅರ್ಥಮಾಡಿಕೊಳ್ಳುವ ಕ್ರಮದಲ್ಲಿ ಸಹಜವಾಗಿಯೇ ತರತಮಗಳಿದ್ದರೂ, ಹಿಂದಿನ ಕಾವ್ಯ ಇಂದಿನ ವಿಮರ್ಶೆಯ ನಿಕಷದಲ್ಲಿ ತನ್ನ ಗೆರೆ – ಬಣ್ಣಗಳನ್ನು ಪ್ರಕಟಿಸುವ ಸತ್ವವನ್ನು ಖಂಡಿತವಾಗಿಯೂ ಒಳಗೊಂಡಿದೆ. ಕವಿ ರನ್ನನ ಮಾತಿನಲ್ಲಿ ಹೇಳುವುದಾದರೆ – ‘ಪುರಾಣ ಕವಿಪುಂಗವರೊಳ್ಳಿದರ್, ಈಗಳಿಲ್ಲ ಸತ್ಕವಿಗಳ್ ಎನಲ್ಕೆವೇಡ, ಅವರ ಪೋದೊಡೆ ಅವಂದಿರ ಕಬ್ಬಮಿನ್ನುಮಿರ್ಪವು; ಗುಣದೋಷಮಂ ನಿಕಷಮಿಟ್ಟು ನೋಡೆ ತಾಮೆ ಪೇಳವೆ? ಬುಧರ್ ಇರ್ದು ನೋಳ್ಪುದು ಪುರಾತನ ನೂತನ ಕಾವ್ಯರೇಖೆಯಂ’ – ಹಿಂದಿನ ಕವಿಶ್ರೇಷ್ಠರೆ ಒಳ್ಳೆಯವರು; ಈಗ ಒಳ್ಳೆಯ ಕವಿಗಳಿಲ್ಲ ಎನ್ನಬೇಡ. ಆ ಹಿಂದಿನ ಕವಿಗಳು ಹೋದರೂ, ಅವರ ಕಾವ್ಯಗಳು ಇನ್ನೂ ಇವೆ. ಅವುಗಳ ಗುಣದೋಷಗಳನ್ನು ಒರೆಗೆ ಹಚ್ಚಿನೋಡಿದರೆ ತಮ್ಮ ಯೋಗ್ಯತೆಯೇನೆಂಬುದನ್ನು ಅವುಗಳೇ ಹೇಳುವುದಿಲ್ಲವೆ? ವಿದ್ವಾಂಸರು (ತಿಳಿದವರು) ಹಿಂದಿನ ಹಾಗೂ ಇಂದಿನ ಕಾವ್ಯದ ಯೋಗ್ಯತೆಗಳನ್ನು ನೋಡಿ ನಿರ್ಣಯಿಸಬೇಕು (ಗ. ಯು ೧-೪೭).

ಗ್ರಂಥಋಣ

ಡಾ. ಕೆ. ಕೃಷ್ಣಮೂರ್ತಿ : ಕನ್ನಡದಲ್ಲಿ ಕಾವ್ಯತತ್ವ, ಪ್ರ. ಶಾರದಾಮಂದಿರ, ಮೈಸೂರು ೪ (೧೯೬೪)

ಡಾ. ಕೆ. ಕೃಷ್ಣಮೂರ್ತಿ : ರಸೋಲ್ಲಾಸ, ಪ್ರ. ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ (೧೯೫೮)

ಡಾ. ರಂ. ಶ್ರೀ ಮುಗಳಿ : ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು, ಪ್ರ. ಉಷಾಸಾಹಿತ್ಯ ಮಾಲೆ, ಮೈಸೂರು (೧೯೭೩)

ಡಾ. ರಂ. ಶ್ರೀ ಮುಗಳಿ : ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ, ಪ್ರ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ (೧೯೭೧, ದ್ವಿತೀಯ ಮುದ್ರಣ)

ಡಾ. ಹಾ. ಮಾ. ನಾಯಕ (ಸಂ) : ಶ್ರೀ ಸಾಹಿತ್ಯ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು (೧೯೮೩)

ಡಾ. ಹಾ. ಮಾ. ನಾಯಕ ಮತ್ತು ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ : ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ, ಸಂಪುಟ ಮೂರು (೧೯೭೬)

ಡಾ. ಜಿ. ನಾಗಯ್ಯ : ತೆಲುಗು ಕಾವ್ಯಾವತಾರಿಕಲು, ಪ್ರ : ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿ (೧೯೬೮)

ಎಂ. ವಿ. ಸೀತಾರಾಮಯ್ಯ : ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ, ಪ್ರ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ (೧೯೭೪)

ಜಿ.ಎಸ್. ಶಿವರುದ್ರಪ್ಪ : ಕನ್ನಡ ಸಾಹಿತ್ಯ ಸಮೀಕ್ಷೆ, ಪ್ರ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ (೧೯೭೫)

ಜಿ.ಎಸ್. ಶಿವರುದ್ರಪ್ಪ : ಅನುರಣನ, ಪ್ರ. ವಾಗ್ದೇವೀ ಪ್ರಕಾಶನ ಮೈಸೂರು (೧೯೮೨ ದ್ವಿತೀಯ ಮುದ್ರಣ)

ಜಿ.ಎಸ್. ಶಿವರುದ್ರಪ್ಪ : ಪ್ರತಿಕ್ರಿಯೆ, ಪ್ರ. ಪುರೋಗಾಮಿ ಪ್ರಕಾಶನ, ಬೆಂಗಳೂರು (೧೯೮೨)

ಜಿ.ಎಸ್. ಶಿವರುದ್ರಪ್ಪ (ಸಂ) : ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟ III, ಬೆಂಗಳೂರು ವಿಶ್ವವಿದ್ಯಾಲಯ (೧೯೭೫)

ತೀ.ನಂ. ಶ್ರೀಕಂಠಯ್ಯ : ಭಾರತೀಯ ಕಾವ್ಯಮೀಮಾಂಸೆ, ಪ್ರ. ಮೈಸೂರು ವಿಶ್ವವಿದ್ಯಾಲಯ (೧೯೬೧, ದ್ವಿತೀಯ ಮುದ್ರಣ)

ತೀ. ನಂ. ಶ್ರೀಕಂಠಯ್ಯ (ಅನು) : ಬಿಡಿಮುತ್ತು, ಪ್ರ. ಕಾವ್ಯಾಲಯ, ಮೈಸೂರು (೧೯೭೦)

Kamel Veith Zvelebl : A History of indian literature (Tamil Literature)

Pub. Otto Harrassowitz Wiesbaden (1974)


[1] ಸೂಕ್ತಿ ಸುಧಾರ್ಣವದಲ್ಲಿ ಕಾವ್ಯಕ್ಕೆ ಯಾರು ಶ್ರೋತೃಗಳಲ್ಲ ಎಂಬುದನ್ನು ಕುರಿತು ಹೇಳುವ ಪದ್ಯವೊಂದು ಹೀಗಿದೆ –

ಅಲಸಂ, ಶಾಂತಂ, ಜಡಂ, ದುರ್ಮತಿ, ಮತಿವಿಕಳಂ ಮತ್ಸರಂ, ಭೋಗಿ,
ರುಕ್ಚಂಚಲನ್, ಅನ್ಯಾಸಕ್ತಂ, ಅಪ್ರಸ್ತುತಮತಿ, ವಿರತಂ, ನೀರಸಂ
ಛಾಂದಸಂ, ವಾಕಲಿ, ಬಾಲಂ, ವೃದ್ಧಜೀರ್ಣಂ, ಸಮದನ್, ಅಧಿಕ
ಸ್ತೋತ್ರಶೀಲಂ, ಕಥಾವ್ಯಾಕುಲನ್, ಉಗ್ರಂ, ಲೋಕಮೂಢಂ, ಸಮಯವಿರಹಿತನ್
ಕಾವ್ಯದೊಳ್‌ಶ್ರೋತೃವಲ್ಲಂ (ಸೂ.ಸು. ೧-೭೧)

[2] ಸ್ವಾರಸ್ಯವೆಂದರೆ, ಇಂಥ  ಪ್ರತಿಕ್ರಿಯೆಗೆ ಬೇಸತ್ತು, ತಮ್ಮ ಕೃತಿಗಳನ್ನು ನಿಜವಾದ ಕವಿಗಳಲ್ಲದವರು ಹೇಗೆ ಅರ್ಥಮಾಡಿಕೊಂಡಾರು ಎಂಬ ಪ್ರಶ್ನೆಯ ಮೂಲಕ, ಕವಿಗಳು ಮಾತ್ರ ನಿಜವಾದ ಓದುಗರಾಗಬಲ್ಲರೆಂದೂ ಭಾವಿಸಿದಂತೆ ತೋರುತ್ತದೆ. ‘ಸ್ತ್ರೀ ರಹಸ್ಯವನ್ನು ವಿಟ, ಕವಿತಾ ರಸವನ್ನು ಕವಿ ಅರಿಯುತ್ತಾನೆ’ (ಆ. ಪು. ೧-೨೦) ಎಂದು ಪಂಪನೂ, ‘ರಸಮಂ ನಾಲಗೆ, ಕವಿತಾರಸಮಂ ಕವಿ, ಕುಸುಮ ರಸಮನ್ ಅಳಿಮಾಲೆ ಅಕ್ಷಯ ಸುಖರಸಮನ್ ಪರಮಾತ್ಮನರಿವರ್ ಉಳಿದವರರಿಯರ್’ (ಪಂ.ರಾ. ೧-೨೮) ಎಂದು ನಾಗಚಂದ್ರನೂ ‘ಸೊಗಯಿಪ ಕಬ್ಬಮನ್ ಕಬ್ಬಿಗರಲ್ಲದೆ ಮೆಚ್ಚರ್’ (ಕ.ಕಾ. ೧-೮) ಎಂದು ಆಂಡಯ್ಯನೂ ಹೇಳಿರುವುದನ್ನು ಗಮನಿಸಬಹುದು. ಇದು ತೀರಾ ಅತಿರೇಕದ ನಿಲುವು.

[3] ಅಪರೂಪಕ್ಕೆ ಚಾಮರಸನಂಥವನು ಕಾವ್ಯದ ಓದು ಎಂದರೆ “ಕುರಿಗಳೋಪಾದಿಯಲಿ ಕಬ್ಬಿನ ಹೊರಗಣೆಲೆಯನು ಮೇದು ಮೆಲುಕಿರಿವುತ, ಅಲ್ಪಸುಖಕ್ಕೆ ಸೋಲದೆ, ಕಬ್ಬಿನೊಳು ರಸವ ನೆರೆ ಸವಿವ ಗಜದಂತೆ” (ಪ್ರ. ಲಿಂಲೀ ೧-೧೪) ಇರಬೇಕು ಅನ್ನುತ್ತಾನೆಂಬುದನ್ನು ನೆನೆಯಬಹುದು.

[4] ದೊಡ್ಡ ಕವಿಗಳ ಕಾವ್ಯವನ್ನು ಹಸ್ತಪ್ರತಿಯಲ್ಲೆ ತಿದ್ದಬಲ್ಲ ಮೇಧಾವಿಗಳಿದ್ದ ಉಲ್ಲೇಖಗಳಿವೆ. ದುರ್ಗಸಿಂಹನ ಪಂಚತಂತ್ರವನ್ನು ‘ಕವಿಗಮಕಿ ವಾದಿವಾಗ್ಮಿ ಪ್ರವರ’ರಾದ ಮಾದಿರಾಜ ಮುನಿಪುಂಗವರು ತಿದ್ದಿದರಂತೆ. ರನ್ನನ ಗದಾಯುದ್ಧವನ್ನು ಕೇಶಿ ಎಂಬ ದಂಡನಾಯಕ ವಿದ್ವಾಂಸ ತಿದ್ದಿದನಂತೆ.

[5] ‘ತೂಂತಗವಿತೆಯ’ – ಎಂಬ ಪಾಠಾಂತರವೂ ಇದೆ. ‘ತೂಂತಗವಿತೆ’ ಎಂದರೆ ತೂತು ಬಿದ್ದ ಕವಿತೆ. ಛಿದ್ರವಾದ ಕವಿತೆ ಎಂದು ಅರ್ಥ.

[6] ರಾಘವಾಂಕನ ಇದೇ ಪದ್ಯವನ್ನು ಜೀವಂಧರ ಚರಿತೆಯನ್ನು ಬರೆದ ಭಾಸ್ಕರನು ಯಥಾವತ್ತಾಗಿ ಭಟ್ಟಿ ಇಳಿಸಿದ್ದಾನೆ. ‘ಮುಂದೆ ನಿನ್ನಯ ಕವಿತೆಗೆಣೆಯಿಲ್ಲೆಂದು ನಾನಾ ತೆರದಿ ಬಣ್ಣಿಸಿ | ಹಿಂದೆ ತಾಳ್ದುದ ಬದ್ಧವೆಂದಜ್ಞರೊಳು ತಾವೆಸಗಿ | ಸಂಧಿಸಿದ ಕೃತಿಯನ್ನು ಮನೆಗಳ ಸಂಧಿಗೊಂದಿಯೊಳೊದರಿ ನರಕದೊ | ಳೊಂದುತಿಹ ದುರ್ಜನರ ಜಯಿಸುವರಾರು ಲೋಕದೊಳು’ (೧-೨೩)