ಸಮಾಹಿತವಾದ ಮನಸ್ಸುಳ್ಳ ವ್ಯಕ್ತಿಯ ಬುದ್ಧಿ, ಹೃದಯಗಳ ಸಮಾನ ಸ್ಪಂದನದ ಮೂಲಕ ವ್ಯಕ್ತವಾಗುವ, ವಾಕ್‌ ಅಭಿವ್ಯಕ್ತಿಯೇ ಕಾವ್ಯ ಎನ್ನಬಹುದು. ಕಾವ್ಯ ಪ್ರಜ್ಞಶಿಶುವಷ್ಟೇ ಅಲ್ಲದೆ ಅಂತರಂಗದ ಕೂಸು ಹೌದು. ರಮಣೀಯಾರ್ಥವನ್ನು ಪ್ರತಿಪಾದಿಸುವುದು ಕಾವ್ಯ. ಹೀಗೆ ರುದ್ರಟ, ಮಮ್ಮಟ ರಾಜಶೇಖರ, ಜಗನ್ನಾಥ, ವಿಶ್ವನಾಥ ಮುಂತಾದ ಮೀಮಾಂಸಕರು ಕಾವ ಲಕ್ಷಣಗಳನ್ನು ಕುರಿತು ವಿವೇಚಿಸಿದ್ದಾರೆ. ರವಿಕಾಣದನ್ನು ಕವಿ ಕಂಡ ಎಂದೂ, ಆತನನ್ನು ಮೂರನೇ ಕಣ್ಣುಳ್ಳ ಶಿವನಿಗೆ ಹೋಲಿಸಿದ್ದಾರೆ.

ಒಬ್ಬ ಉತ್ತಮ ಕವಿ ಪ್ರಕೃತಿಯಲ್ಲಿ ಕಾಣುವ ಸೌಂದರ್ಯಕ್ಕೆ ತನ್ನ ಸ್ವಂತ ಅನುಭವದ ಪಾಕವನ್ನು ಸೇರಿಸಿ, ಸಾಮಾನ್ಯರು ಕಾಣದೇ ಇರುವ ಅಥವಾ ಕಲ್ಪಿಸಲಾರದ ಸೌಂದರ್ಯವನ್ನು ಹೃದ್ಯವಾಗಿ ಬಣ್ಣಿಸಬಲ್ಲ. ಕಲ್ಪನೆ ಹಾಗೂ ಪ್ರತಿಭೆಯ ಬಲದಿಂದ ತಾನು ಕೈಗೆತ್ತಿಕೊಂಡ ಕಾವ್ಯ ಸೌಧವನ್ನು ಸದೃಢವಾಗಿಯೂ ರಸಪೂರ್ಣವೂ ಸುಂದರವಾಗಿಯೂ ನಿರ್ಮಿಸಬಲ್ಲ ಸಾಮರ್ಥ ಕವಿಗಿರುತ್ತದೆ. ಅಲ್ಲಿ ಆತನೇ ಸೃಷ್ಟಿಕರ್ತ. ಕಾವ್ಯದ ಸಂವಿಧಾನ, ಘಟನೆ, ಸನ್ನಿವೇಶ, ಪಾತ್ರಗಳ ವರ್ಣನೆಗಳಲ್ಲಿ ಆತನದೇ ಆಧಿಪತ್ಯ. ಕವಿಯ ಈ ಒಂದು ಸಾಮರ್ಥ್ಯವನ್ನು ಕುರಿತು ಆನಂದ ವರ್ಧನ :

“ಅಪಾರೋಕಾವ್ಯ ಸಂಸಾರೇಕವಿರೇವ ಪ್ರಜಾಪತಿಃ
ಯಥಾಸ್ಮೆ ರೋಚತೇ ವಿಶ್ವಕಮಥೇದಂ ಪರಿವರ್ತನೇ”
(ಧ್ವನ್ಯಾಲೋಕ ಪು. 222)

(ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನ್ನ ಅಭಿರುಚಿಗೆ ಸರಿಯಾಗಿ ವಿಶ್ವವನ್ನು ಪರಿವರ್ತಿಸಬಲ್ಲ.) ಎಂದು ಹೇಳಿದ್ದಾನೆ.

ವನವಿಹಾರ, ಜಲಕ್ರೀಡೆ, ಉದ್ಯಾನ, ನಗರ ವರ್ಣನೆ, ಯುದ್ಧ, ಸಂಗೀತ ಇತ್ಯಾದಿಗಳಂಥ ಹದಿನೆಂಟು ಬಗೆಯ ವರ್ಣನೆಗಳು (ಅಷ್ಟಾದಶ ವರ್ಣನೆಗಳು) ಕಾವ್ಯದ ಪ್ರಮುಖ ಲಕ್ಷಣ. ಸಾವಿರ ವರ್ಷಕ್ಕೂ ಹೆಚ್ಚಿನ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ನಮ್ಮ ಕವಿಗಳು ನೃತ್ಯ, ಸಂಗೀತ ಪ್ರಸಂಗಗಳ ವರ್ಣನೆಗಳಿಂದ ತಮ್ಮ ಕಾವ್ಯ ಸೌಧದ ಒಪ್ಪಂದವನ್ನು ಶ್ರೀಮಂತಗೊಳಿಸಿದ್ದಾರೆ.

ಕರ್ನಾಟಕದ ಪ್ರಮುಖ ರಾಜವಂಶಗಳಾದ ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರುಗಳು ನೃತ್ಯವನ್ನು ಒಂದು ಸಾಮಾಜಿಕ, ಬೌದ್ಧಿಕ, ಆಧ್ಯಾತ್ಮಿಕ ಹಾಗೂ ಮನೋರಂಜಕ ಚಟುವಟಿಕೆಗಳಾಗಿ ಪರಿಭಾವಿಸಿದ್ದಾರೆ. ಇವರು ತಮ್ಮ ಆಳ್ವಿಕೆಯಲ್ಲಿ ಅನೇಕ ಬೃಹತ್ ದೇವಾಲಯಗಳನ್ನು ನಿರ್ಮಿಸಿ ಅಲ್ಲಿ ಶಾಶ್ವತವಾಗಿ ನೃತ್ಯ ಕಲೆ ವಿಜೃಂಭಿಸುವ ಶಿಲ್ಪಗಳನ್ನು ಕಡೆಸಿದ್ದಾರೆ. ಅಲ್ಲದೇ ಪ್ರತಿಭಾವಂತ ಕವಿಗಳಿಗೆ ಆಶ್ರಯವನ್ನಿತ್ತು ಆಯಾ ಕಾಲದ ನೃತ್ಯಕಲೆಗಳು ಪ್ರತಿಬಿಂಬಿತವಾಗುವಂತಹ ಕಾವ್ಯಗಳ ರಚನೆಗೆ ಕಾರಣ ಶೀಲರಾಗಿದ್ದಾರೆ.

ಪಂಪ, ಪೊನ್ನ, ನೇಮಿಚಂದ್ರ, ನಾಗಚಂದ್ರ, ಜನ್ನ ಅಗ್ಗಳದೇವ, ಬಾಹುಬಲಿ, ರತ್ನಾರವಣಿ, ಚಾಮರಸ, ಚಂದ್ರಶೇಖರ, ಕನಕದಾಸ, ಗೋವಿಂದ ವೈದ್ಯ ಮೊದಲಾದ ಕವಿಗಳು ತಮ್ಮ ಕಾವ್ಯಗಳಲ್ಲಿ ನರ್ತನ ಪ್ರಸಂಗಗಳ ಸುಂದರ ನಿರೂಪಣೆಯನ್ನು ಮಾಡಿದ್ದಾರೆ. ಕಾವ್ಯ ಜನ ಜೀವನದ ಪ್ರತಿಬಿಂಬ, ಪ್ರಾಚೀನ ಮದ್ಯಕಾಲೀನ ಕರ್ನಾಟಕದಲ್ಲಿ ಮಾರ್ಗೀ ಹಾಗೂ ದೇಶೀ ಎರಡರ ಮಿಶ್ರ ಶೈಲಿಗಳ ನೃತ್ಯ ಸಂಪ್ರದಾಯಗಳು ಕಲಾಜಗತ್ತಿನಲ್ಲಿ ಜೀವಂತವಾಗಿದ್ದ ಮಾಹಿತಿಯನ್ನು ಅಂದಿನ ಕನ್ನಡ ಕಾವ್ಯಗಳು ವಿವರಿಸುತ್ತವೆ.

ಕನ್ನಡ ಕವಿಗಳು ಒಂದು ನೃತ್ಯ ಪ್ರಸಂಗವನ್ನು ನಾಲ್ಕು ಸ್ತರಗಳಲ್ಲಿ ವರ್ಣಿಸಿ, ನೃತ್ಯಕಲೆ ನೀಡಬಹುದಾದ ಆನಂದವನ್ನು ದೃಶ್ಯಮಾನ ಮಾಡಿದ್ದಾರೆ. 1. ನೃತ್ಯ ಪ್ರಸಂಗಗಳಲ್ಲಿ ಅವರು ಬಳಸುವ ಛಂದಸ್ಸು, ಲಯ, ನಾದಮಯತೆಗಳು ಶ್ರವಣ ಸುಖವನ್ನು ನೀಡುತ್ತವೆ. 2. ಅಲ್ಲಿಯ ಭಾಷಾ ವೈವಿಧ್ಯ, ಶಬ್ದ ಸಂಪತ್ತು ಮಸ್ತಿಷ್ಕವನ್ನು ಪ್ರವೇಶಿಸಿ ಮಾನಸಿಕ ವಿಕಾಸವನ್ನುಂಟು ಮಾಡುತ್ತದೆ. 3. ಚತುರ್ವಿಧಾಭಿನಯಗಳಿಂದ ಸಂಪತ್ ಭರಿತವಾದ ನೃತ್ಯ ಪ್ರಸಂಗಗಳು ಕಣ್ಣುಗಳ ಮುಂದೆ ಸಾಕಾರವಾಗಿ ದೃಶ್ಯಕಾವ್ಯ ನೀಡುವ ಸೌಂದರ್ಯ, ಸೊಬಗನ್ನು ತೋರುತ್ತವೆ. 4. ಹೀಗೆ ಪರಿಭಾವಿಸಿದ ನೃತ್ಯಗಳಲ್ಲಿನ ಹಾವ, ಭಾವ, ಲಾವಣ್ಯ, ರಸೋತ್ಕರ್ಷಗಳು ಹೃದಯವನ್ನು ಹೊಕ್ಕು ಆನಂದದ ದರ್ಶನವನ್ನು ಮೂಡಿಸುತ್ತದೆ. ಹೀಗೆ ಮನವನ್ನು ಮುಟ್ಟಿ, ಹೃದಯವನ್ನು ತಟ್ಟಿ ಮಾನವನನ್ನು ವಿಕಸನದತ್ತ ಕರೆದೊಯ್ಯುವ ನೃತ್ಯ ಕಲೆಯ ಹಿರಿಮೆಯ ದರ್ಶನವನ್ನು ಮಾಡಿಸುವ ನಮ್ಮ ಕವಿಗಳ ಕಲಾಭಿಜ್ಞತೆ ಪ್ರಶಂಸನೀಯ.

ಕನ್ನಡ ಕಾವ್ಯಗಳ ನೃತ್ಯ ಪ್ರಸಂಗಗಳ ವಿಶ್ಲೇಷಣೆಯ ಸೌಕರ್ಯಕ್ಕಾಗಿ ಅವುಗಳನ್ನು ಜೈನ, ವೀರಶೈವ ಹಾಗೂ ವೈದಿಕ ಕಾವ್ಯಗಳೆಂದು ಗುರುತಿಸಲಾಗಿದೆ. ಜೈನ ಕಾವ್ಯಗಳಲ್ಲಿ ನೃತ್ಯ ಅಥವಾ ನೃತ್ಯ ಪ್ರಸಂಗಗಳು ಇಹಲೋಕದ ಭೋಗಾಂಶವಾಗಿ ಕಂಡು ಬಂದರೂ ಅವುಗಳ ವರ್ಣನೆ, ನಿರೂಪಣೆಯಲ್ಲಿ ದೈವೀಕತೆ ಇದೆ. ನೃತ್ಯಕಲೆ ಮುಂದೆ ಜಿನನಾಗಲಿರುವ ಜೀವಿಗೆ ಕೇವಲ ಜ್ಞಾನವನ್ನು ಹೊಂದುವ ಸೋಪಾನದಂತೆ ವರ್ಣಿತವಾಗಿದೆ. ಅಂತೆಯೇ ವೀರಶೈವ ಕಾವ್ಯಗಳಲ್ಲಿ ಭಕ್ತಿಯ ಪರಾಕಾಷ್ಠೆಯಲ್ಲಿ ನಡೆಯುವ ಭಕ್ತನ ಆಂಗಿಕ ಚಲನವಲನಗಳಂತೆ ವರ್ಣಿತವಾಗಿದೆ. ವೈದಿಕ ಕಾವ್ಯಗಳು ಹರಿಯನ್ನು ಒಲಿಸುವ ಒಂದು ಮಾರ್ಗದಂತೆ ನೃತ್ಯ ಪ್ರಸಂಗವನ್ನು ವರ್ಣಿಸಿವೆ.

ಈ ಮೇಲಿನ ಮೂರು ವಿಭಾಗದಲ್ಲಿ ಪ್ರಾತಿನಿಧಿಕವಾಗಿ ಕೆಲವು ಕಾವ್ಯಗಳ ನೃತ್ಯ ಪ್ರಸಂಗಗಳ ವಿಶ್ಲೇಷಣೆಯನ್ನು ಮಾಡಲಾಗಿದೆ.

ಕನ್ನಡ ಕಾವ್ಯಗಳಲ್ಲಿ ಸಾಮಾನ್ಯವಾಗಿ ಮಂಗಳಕರ ಸನ್ನಿವೇಶಗಳಾದ ಪುತ್ರಜನನ, ವಿವಾಹ, ಸ್ವಯಂವರ, ದೇವಪೂಜಾ ವಿಧಾನ ದಿಗ್ವಿಜಯ ಹಾಗೂ ರಾಜಾದಿಗಳ ಮನೋರಂಜನೆಯಂತಹ ಸಂದರ್ಭಗಳಲ್ಲಿ ನೃತ್ಯ ಪ್ರಸಂಗಗಳು ವರ್ಣಿತವಾಗಿವೆ. ವಿವಾಹ ಪುಂಸವನ, ಪುತ್ರಜನನ, ನಾಮಕರಣದಂತಹ ಶುಭ ಸಮಾರಂಭಗಳಲ್ಲಿ ನೃತ್ಯವನ್ನು ಆಚರಿಸಬೇಕೆಂದು ಭರತನ ಆದೇಶವೂ ಹೌದು. (ನಾಟ್ಯಶಾಸ್ತ್ರ – ಅ4-271-72) ಪ್ರಾಚೀನ ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾಗದಲ್ಲಿ ದೇವಾಲಯಗಳಲ್ಲಿ ಸಂಗೀತ, ನೃತ್ಯ, ಸೇವೆಗಳು “ರಂಗಭೋಗ”ವೆಂದು ಗುರುತಿಸಿ ಗರ್ಭಗುಡಿಯಲ್ಲಿ ಪ್ರಧಾನ ದೇವತೆಯ ಎದುರೇ ನಡೆಯುತ್ತಿತ್ತು. ಇದೊಂದು ಪೂಜಾ ವಿಧಾನವೂ ಆಗಿತ್ತು. (ದೇವರಿಗೆ ಸಲ್ಲಿಸುವ ಷೋಡಶೋಪಚಾರಗಳಲ್ಲಿ ನೃತ್ಯ, ಸಂಗೀತವೂ ಸೇರಿದೆ.)

ಪಂಚಕಲ್ಯಾಣಗಳು (ಗರ್ಭಾವತರಣ, ಜನ್ಮಾಭಿಷೇಕ, ಪರಿ ನಿಷ್ಕ್ರಾಂತ, ಕೈವಲ್ಯಬೋಧ ಹಾಗೂ ಪರಿನಿರ್ವಾಣ ಕಲ್ಯಾಣಗಳು) ಜೈನ ಕಾವ್ಯಗಳ ಅವಿಭಾಜ್ಯ ಅಂಗ. ಇವುಗಳಲ್ಲಿ ನೃತ್ಯ ಪ್ರಸಂಗಗಳ ಹೆಚ್ಚಳ ಕಾಣುವುದು ಜನ್ಮಾಭಿಷೇಕ ಹಾಗೂ ಪರಿನಿರ್ವಾಣ ಕಲ್ಯಾಣಗಳಲ್ಲಿ ಜಿನ ಸೇನಾಚಾರ್ಯರ ಮಹಾಪುರಾಣವೇ ಕನ್ನಡದ ಕವಿಗಳಿಗೆ ಆಧಾರವಾದರೂ ನೃತ್ಯ ಪ್ರಸಂಗಗಳ ವರ್ಣನೆಯಲ್ಲಿ ಕವಿಗಳು ಸೋಪಜ್ಞತೆಯನ್ನು ಕಲಾತ್ಮಕತೆಯನ್ನು ಮೆರೆದಿದ್ದಾರೆ.

ಕನ್ನಡದ ಆದಿಕವಿ ಪಂಪನ ಹೊತ್ತಿಗಾಗಲೇ ಕನ್ನಡ ನಾಡಿನಲ್ಲಿ ನೃತ್ಯವು ಒಂದು ಶಿಷ್ಟಕಲೆಯಾಗಿ ನಾಡಿನ ಸಂಸ್ಕೃತಿಯ ದ್ಯೋತಕವಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದ ಪುರಾವೆಗಳಿವೆ. “ಆದಿಪುರಾಣ”ದಲ್ಲಿ ಪಂಪವರ್ಣಿಸುವ ಇಂದ್ರನ ಆನಂದ ನೃತ್ಯ ಆತನ ಕಲಾಭಿಜ್ಞತೆಗೆ ಹಿಡಿದ ಕನ್ನಡಿಯಾಗಿದೆ.

ಮುಂದೆ ತೀರ್ಥಂಕರನಾಗಲಿರುವ ಶಿಶುವಿನ ಜನನದ ವಾರ್ತೆಯನ್ನು ಕೇಳಿ ಇಂದ್ರ ಅಮರ ಲೋಕದವರೊಡನೆ ಜಿನ ಶಿಶುವಿನಲ್ಲಿಗೆ ಆಗಮಿಸಿ ಸಂತೋಷಪಡುತ್ತಾನೆ. ಆತ ತನ್ನ ಸಂತೋಷವನ್ನು ನೃತ್ಯ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸುತ್ತಾನೆ. ಇಂದ್ರ ದೇವಲೋಕದ ಅಪ್ಸರೆಯನ್ನು ತನ್ನೊಡನೆ ನರ್ತಿಸಲು ಕರೆತರುತ್ತಾನೆ. ಗಂಧರ್ವರು, ದೇವತೂರ್ಯಗಳು ಇವರ ನೃತ್ಯಕ್ಕೆ ಗಾಯನ ಹಾಗೂ ವಾದನವನ್ನು ಒದಗಿಸುತ್ತಾರೆ. ಇಂದ್ರ ರಂಗಪ್ರವೇಶ ಮಾಡಿ ವೈಶಾಖ ಸ್ಥಾನಕದಲ್ಲಿ ನಿಂತು ಅಂಗ, ಉಪಾಂಗ ಪ್ರತ್ಯಾಂಗಗಳ ಮೂಲಕ ಶುದ್ಧ ನೃತ್ಯವನ್ನು ಆಚರಿಸುತ್ತಾನೆ. ಇಂದ್ರನ ವಿಶಾಲವಾದ ಭುಜ, ಅಂಗೈ, ಉಗುರುಗಳ ಮೇಲೆ ಸುಕುಮಾರವಾದ ಲಾಸ್ಯವನ್ನು ಸುಂದರಿಯರಾದ ಅಪ್ಸರೆಯರು ಆಡುತ್ತಿದ್ದರೆ ಇಂದ್ರ ತಾಂಡವ, ಲಾಸ್ಯ ಈ ಎರಡೂ ಪ್ರಕಾರಗಳನ್ನು ಒಟ್ಟಿಗೇ ನರ್ತಿಸುತ್ತಿರುವಂತೆ ಭಾಸವಾಗುತ್ತಿತ್ತಂತೆ ! ಪಂಪ ಇಂದ್ರನ ನೃತ್ಯವನ್ನು ವರ್ಣಿಸುವಾಗ ಒಂದು ನೃತ್ಯ ಕಾರ್ಯಕ್ರಮದ ಪರಿಕರವನ್ನು ದೃಶ್ಯಮಾನವನ್ನಾಗಿಸುತ್ತಾನೆ. ಆತನ ನೃತ್ಯಕ್ಕೆ ಧರೆಯೇ ರಂಗಭೂಮಿಯಾಯ್ತಂತೆ!

ಧರೆರಂಗಂ ಗಗನಂ ಮನೋಹರಂ ನಾಟ್ಯಾಲಯಂ, ನರ್ತಕಂ ಸುರರಾಜಂ ಸಭೆ ದೇವ – ಮರ್ತ್ಯಸಭೆ, ಸಂದರಾಧ್ಯನೀಜಂಜಗದ್ ಗುರು ತನ್ನೃತ್ಯಫಲಂ ತ್ರಿವರ್ಗವಿಭವಂ ತಾನೆಂದೊಡೇ ಮಾತೋ ಸಾ ಸಿರಮುಂ ನಾಲಗೆಯುಳ್ಳ ವಾಸುಗಿಯಂ ಮಿನ್ನೇನೆಂದದಂ ಬಣ್ಣಿಸಂ

(ಆದಿಪುರಾಣ – 7 – 128)

ಇದರಲ್ಲಿ ಸುಂದರವೂ, ಚೇತೋಹಾರಿಯೂ ಆದ ಕಲ್ಪನೆಯ ಚಿತ್ರಣವಿದೆ. ವೃಷಭದೇವ, ಶಿಶುವಾಗಿ ಜನ್ಮಾಭಿಕ್ಷೇಚನಗೊಳ್ಳುವ ಶುಭ ಸಂದರ್ಭದಲ್ಲಿ ಇಂದ್ರ ಇಡಿಯ ಭೂಮಂಡಲನ್ನೇ ರಂಗಭೂಮಿಯನ್ನಾಗಿಸಿ ಅಲ್ಲಿ ನರ್ತಿಸುತ್ತಾನೆ. ಅವನಿಗೆ ಗಗನವೆ ನಾಟ್ಯ ಮಂಟಪ! ಅವರ ನೃತ್ಯವನ್ನು ವೀಕ್ಷಿಸುವ ಪ್ರೇಕ್ಷಕರೋ ಅಮರರು, ಮರ್ತ್ಯರು! ಇಂತಹ ಅಪೂರ್ವ ನೃತ್ಯದ ಫಲವನ್ನು ಸಾವಿರನಾಲಿಗೆಯುಳ್ಳ ವಾಸುಕಿಯೂ ಬಣ್ಣಿಸಲಾರನಂತೆ! ನರ್ತನಾಧಿದೇವತೆ ನಟರಾಜನ ಆನಂದ ನೃತ್ಯವನ್ನು ಈ ದೃಶ್ಯ ನೆನಪಿಗೆ ತರುತ್ತದೆ.

ಮುಂದೆ ವೃಷಭದೇವನ ಪರಿನಿಷ್ಕೃಮಣಿ ಕಲ್ಯಾಣದಲ್ಲಿ ಅಮರ ನರ್ತಕಿ ನೀಲಾಂಜನೆಯ ನೃತ್ಯದ ಮೂಲಕ ಪಂಪ ಕನ್ನಡ ಸಾಹಿತ್ಯ ಪ್ರಪಂಚವಷ್ಟೇ ಅಲ್ಲದೇ ನೃತ್ಯ ಕ್ಷೇತ್ರದಲ್ಲೂ ಅದ್ವಿತೀಯ ನೃತ್ಯ ಪ್ರಸಂಗದ ವರ್ಣನೆಯನ್ನು ಮಾಡಿದ್ದಾನೆ. 30 ಕಂದ ಪದ್ಯಗಳಲ್ಲಿ ಆಕರ್ಷಕ ನೃತ್ಯ ಪ್ರಸಂಗವನ್ನು ಚಿತ್ರಿಸಿ, ಕನ್ನಡಿಗರಿಗೆ ಒಂದು ಶಾಸ್ತ್ರೀಯ ನೃತ್ಯ ಕಾರ್ಯಕ್ರಮದ ಸುಂದರ ಚಿತ್ರವನ್ನು ದೃಶ್ಯಮಾನವಾಗಿಸಿದ್ದಾನೆ.

ಸುರನರ್ತಕಿಯರಲ್ಲಿ ತಿಲಕಪ್ರಾಯಳಾದ ನೀಲಾಂಜನೆಯ ನೃತ್ಯವನ್ನು ಇಂದ್ರ ವೃಷಭದೇವನಿಗಾಗಿ ಏರ್ಪಡಿಸುತ್ತಾನೆ.

ಜನನಿಕೆಯ ಹಿಂದೆ ನಿಂತು ನೀಲಾಂಜನೆಯನ್ನು ಪಂಪ ಮೋಡಗಳ ಮರೆಯ ಮಿಂಚಿಗೆ ಹೋಲಿಸುತ್ತಾನೆ. “ಜವನಿಕೆಯ ಮರೆಯೊಳ್‌ಪೋಲ್ತಳವಳ್ ಮುಗಿಲ ಮರೆಯ ವಿದ್ಯುಲ್ಲತೆಯಂ” ಹೀಗೆ ಕಂಗೊಳಿಸುವ ನೀಲಂಜನೆ ರಂಗವನ್ನು ಮಾತ್ರ ಪ್ರವೇಶಿಸಲಿಲ್ಲ! ಅಲ್ಲಿನ ನೆರೆದ ಸಮಸ್ತರ ಅಂತರಂಗವನ್ನೇ ಪ್ರವೇಶಿಸಿದಳಂತೆ! ಆಕೆಯ ನರ್ತನದಲ್ಲಿನ ಕರಣ, ಚಾರಿ, ಚಲ್ಲಿ, ರಸ, ಭಾವಗಳು, ಚತುರ್ವಿಧ ಅಭಿನಯಗಳು ಎಲ್ಲವೂ ಹೊಸದಾಗಿದ್ದು, ನಾಟ್ಯ ಶಾಸ್ತ್ರವನ್ನೇ ಹೊಸದಾಗಿ ರಚಿಸಿರುವಂತೆ ಕಾಣುತ್ತಿತ್ತಂತೆ!

ರಸಭಾವಾಭಿನಯಂಗಳ್‌
ಪೊಸವೆ ಪುಗಿಲ್ ಪೊಸವೆ ಚಲ್ಲಿಗಳ್‌ಪೊಸವೆನಯಂ
ಪೊಸವೆ ಕರಣಂಗಳುಂನಿ
ಪೊಸವೆನೆ ಪೊಸಯಿಸಿದಳಾಕೆ ನಾಟ್ಯಾಗಮಮಂ
(ಆದಿಪುರಾಣ – 9-35)

ಲಕ್ಷ್ಯ ಲಕ್ಷಣಗಳ ನಿಕಟ ಸಂಬಂಧವನ್ನು ಪಂಪ ಚೆನ್ನಾಗಿ ಅರಿತಿದ್ದನೆಂದು ಮೇಲಿನ ಪದ್ಯದಿಂದ ತಿಳಿಯುತ್ತದೆ. ನೀಲಾಂಜನೆಯ ಅಂಗ ಶುದ್ಧ ತಾಳಶುದ್ಧ ನರ್ತನವನ್ನು ಪಂಪ ಬಾರಿ ಬಾರಿಗೂ ಹೊಗಳಿದ್ದಾನೆ. ಕ್ಲಿಷ್ಟವಾದ ಜತಿಗಳನ್ನು ನುಡಿಸಲು ವಾದಕರು, ತಡವರಿಸಿದರೆ, ತನ್ನ ಹುಬ್ಬುಗಳನ್ನೇ ವಾದನದ ಸಾಧನವಾಗಿ ಬಳಸಿ, ನರ್ತಕಿಯೇ ವಾದಕಿಯಾಗಿ ಪರಿಣಮಿಸಿದಳಂತೆ!

ಕುಡುಪುಂ ಕಯ್ಯಂ ಜತಿಯೊಳ್‌
ತಡತಡವರೆ ವಾದಕಂಗೆ ಪುರ್ವಿಂಜತಿಯಂ
ತೊಡರದೆ ನಡೆಯಿಸಿ ಪುರ್ವದೆ
ಕುಡುಪೆನೆ ನರ್ತಕಿಯ ಸಭೆಗೆ ವಾದಕಿಯಾದಳ್‌
(ಆದಿ ಪುರಾಣ 9-31)

ಕನ್ನಡ ಕಾವ್ಯಗಳಲ್ಲಿ ಮೊತ್ತ ಮೊದಲಿಗೆ ನೀಲಾಂಜನೆಯ ನೃತ್ಯ ಪ್ರಸಂಗದ ಮೂಲಕ ಒಂದು ಸಂಪೂರ್ಣ ನೃತ್ಯ ಕಾರ್ಯಕ್ರಮದ ಚಿತ್ರವನ್ನು ಪಂಪ ಕೊಡುತ್ತಾನೆ. ಅದ್ವಿತೀಯ ನೃತ್ಯ ವಿಶಾರದೆ ನೀಲಾಂಜನೆ ಪೃಥಗರ್ಧ ನೃತ್ಯ ಬಂಧಗಳನ್ನು ಪ್ರದರ್ಶಿಸುವ ಪರಿಯನ್ನು ಕವಿ ಪಂಪ ಆಕೆಯ ರಂಗಪ್ರವೇಶ ರಂಗಾಕ್ರಮಣ ರಂಗನಿಷ್ಟ್ರಮಣ ವಿಧಾನಗಳಲ್ಲಿ ಸೆರೆ ಹಿಡಿದಿದ್ದಾನೆ.

ಅಪ್ರತಿಮ ಕಲಾವಿದೆಯೂ, ತಾಲಲಯಾಭಿಜ್ಞೆಯೂ ಆದ ನೀಲಾಂಜನೆಯ ನೃತ್ಯದ ಸ್ವರೂಪಕವಿ ಪಂಪನಿಂದ ಒಡ ಮೂಡಲು ಅಂದು ಪ್ರಚಾರದಲ್ಲಿದ್ದ ನೃತ್ಯ ಶೈಲಿ, ಶಾಸ್ತ್ರಗ್ರಂಥಗಳು ಹಾಗೂ ಕವಿಯ ಕಲಾಭಿಜ್ಞತೆಗಳೇ ಕಾರಣವೆನ್ನಬಹುದು.

ಕವಿ ಪೊನ್ನ ತನ್ನ ಕಾವ್ಯ “ಶಾಂತಿಪುರಾಣ”ದಲ್ಲಿ ಅಪ್ಸರೆಯರ ವೈವಿಧ್ಯಮಯ ನೃತ್ಯವನ್ನು ಹಲವು ಕಾಲ ಮೆಲುಕು ಹಾಕುವಂತೆ ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಅಪ್ಸರೆಯರು ಸಮ, ವಿಷಮ, ಲಘು, ವಿಚಿತ್ರ, ತಾಂಡವ ಲಾಸ್ಯ, ಲಘುವಿನಂತಹ ನೃತ್ತಭೇದಗಳನ್ನು ಪ್ರದರ್ಶಿಸಿದರೆಂದು “ಅದೇ ಸುರಲಂಜಿಕೆಯರ್ ವಿಷಮಂ ಸಮಂ ಮಾಡಿದರೋ” ಎಂದು ಹೊಗಳುತ್ತಾನೆ. ಸೂಚೀ ನೃತ್ಯದ ಲಕ್ಷಣ, ತಂತ್ರ, ಪ್ರಯೋಗಗಳನ್ನು ಹೇಳುವುದರಲ್ಲಿ ಪೊನ್ನವನ್ನೇ ಮೊದಲಿಗ.

ನಿಲೆ ಸೂಚಿಯಲರೆಸಳ್‌ಕೂರ
ಗಲೀಯದೆಭಿನಯದಕರಣದ ಭ್ರಮರಿಯ ನಿ
ಶ್ಚಲತೆಯ ಲಘತೆ ಮಾರ್ದವ
ವಿಲಾಸ ವರ್ತನದಿಂದ ಮರಿಯರ ನರ್ತಿಸಿದರ್ ||
(ಶಾಂತಿ ಪುರಣ 7-34)

ಸಾಮಾನ್ಯವಾಗಿ ಕನ್ನಡ ಕವಿಗಳು ಪುಷ್ಪಾಂಜಲಿಯೊಂದಿಗೆ ಸೂಚಿ ನೃತ್ಯವನ್ನು ಸಮೀಕರಿಸಿದ್ದಾರೆ.

ಕವಿ ರನ್ನ “ಅಜಿತ ತೀರ್ಥಂಕರ ಪುರಾಣತಿಲಕಂ” ಕಾವ್ಯದಲ್ಲಿ ಇಂದ್ರ ಹಾಗೂ ಅಪ್ಸರೆಯರ ಮಾರ್ಗನೃತ್ಯವನ್ನು ವಿಸ್ತಾರವಾಗಿ ವರ್ಣಿಸುತ್ತಾನೆ. ದೇಶೀ ನೃತ್ಯಗಳಾದ “ಸುರಗೆ ವೆಕ್ಕಣ” ಹಾಗೂ ವಿಚಿತ್ರ ನೃತ್ಯಗಳ (5-33, 5-36) ರೋಚಕ ವರ್ಣನೆಯನ್ನೂ ಕೊಡುತ್ತಾನೆ. ನಾಗಚಂದ್ರ ತನ್ನ ಕಾವ್ಯ “ಮಲ್ಲಿನಾಥ ಪುರಾಣಂ”ನಲ್ಲಿ ರಾಜನರ್ತಕಿಯ ನೃತ್ಯ ಹಾಗೂ ಇಂದ್ರನ ಆನಂದ ನೃತ್ಯದ ವರ್ಣನೆಗಳನ್ನು ಕೊಡುತ್ತಾನೆ. ರಾಜನರ್ತಕಿ ಪ್ರದರ್ಶಿಸುವ ಚಾರಿಗಳನ್ನು ಆಕೆಯ ತಾಳಜ್ಞಾನವನ್ನು ಆಕೆ ತನ್ನ ಚಿಗುರಿನಂತಹ ಬೆರಳುಗಳಿಂದ ಸಂಯುತ, ಅಸಂಯುತ ಹಾಗೂ ನೃತ್ಯ ಹಸ್ತಗಳ ಬಳಕೆಯ ಅಂದಗಳನ್ನು ವರ್ಣಿಸುತ್ತಾನೆ. ನೃತ್ಯದಲ್ಲಿ ಅಭಿನಯದ ವಾಹಕ ಹಸ್ತಗಳೇ, ಇದನ್ನು ಅರಿತಂತೆ ನಾಗಚಂದ್ರ ಹಸ್ತಗಳ ಬಳಕೆಯನ್ನು ಕುರಿತು ಸುಂದರವಾದ ಉಪಮೆಯನ್ನು ಹೀಗೆ ಕೊಡುತ್ತಾನೆ.

ನಿರಿದಳಿರೆಲರಲಪಿಂಪಲ
ತೆರದಿಂ ಪೊಳಪಂತೆ ಸಂಯುತಾಸಂಯುತ ಮೆಂ
ಬರವತ್ತು ನಾಲ್ಕು ಹಸ್ತದ
ತೆರೆನೊಳ್‌ತೆರನರಿದು ಮರೆದವಳದಳಭಿನಯಮಂ (8-35)

ಆಕೆಯ ನರ್ತನದಿಂದ ಸಹೃದಯ ಪ್ರೇಕ್ಷಕರಿಗೆ ಚಿತ್ತ ವಿಕಾಸ ಉಂಟಾಯಿತೆಂದೂ ನಾಗಚಂದ್ರ ಹೇಳುತ್ತಾನೆ. ಇಂದ್ರ ಮತ್ತು ಅಪ್ಸರೆಯರ ನೃತ್ಯವನ್ನು ಯಕ್ಷಾಂದೋಲಕ್ಕೆ ಹೋಲಿಸುವುದುದಲ್ಲದೇ ಇದರಿಂದಲ್ಲೇ ಲಾಸ್ಯ, ತಾಂಡವ ಎರಡೂ ಪ್ರಕಾರಗಳ ವೈಭವವನ್ನು ವರ್ಣಿಸುತ್ತಾ ನೃತ್ಯ ಕಲೆಯ ಸೌಂದರ್ಯವನ್ನು ಓದುಗರಿಗೆ ಮುಟ್ಟಿಸುತ್ತಾನೆ.

“ನೇಮಿನಾಥಪುರಾಣ” ಕಾವ್ಯದ “ಮಗದ ಸುಂದರಿ” ಕವಿ ನೇಮಿಚಂದ್ರ ನಿರ್ಮಿಸಿದ ವಿಚಿತ್ರ ನೃತ್ಯ ವಿಶಾರದೆ ಈಕೆ ನಾನಾ ಬಗೆಯ ನೃತ್ಯಗಳನ್ನು ಕರಗತ ಮಾಡಿಕೊಂಡಿದ್ದಳೆಂದು ವಿವರಣೆ ಇದೆ. ಆಕೆ ಚಾಲಿ, ಅಂಗಹಾರ, ಕರಣಗಳನ್ನು ಅತ್ಯಂತ ಕಲಾತ್ಮಕತೆಯಿಂದ ಪ್ರದರ್ಶಿಸಿದಳೆಂದೂ ವಿವರಿಸುತ್ತಾನೆ. ಆಕೆ ಲಲಾಟತಿಲಕವೆಂಬ ಕರಣವನ್ನು ಚಮತ್ಕಾರ ಪೂರಿತವಾಗಿ ಪ್ರದರ್ಶಿಸಿದ ಪರಿಯನ್ನು ಹೀಗೆ ಹೇಳುತ್ತಾನೆ.

ಪರೆದ ತಿಳಕಮನೆಕಂಡೆಸಿದಿರೆ ಕಂಡೆಸೆ
ದಿರೆ ಕೊಟ್ಟಿದ್ದಂಡಪಾದದುಗುರ್ಗನ್ನಡಿಯೊಳ್‌
ತರಳಾಕ್ಷಿತೀರ್ದಿದಳ್‌ಚ
ಚ್ಚರದಿಂ ಮತ್ತೊಂದು ಪಾದದುಂಗುಟದಿಂದಂ
(ನೇಮಿನಾಥ ಪುರಾಣ -3 – 101)

ನರ್ತಿಸುತ್ತಾ ಮಗಧಸುಂದರಿ ಹಣೆಯ ತಿಲಕವನ್ನು ಸರಿಪಡಿಸಿಕೊಳ್ಳುವಂತೆ ಒಂದು ಪಾದವನ್ನು ಮೇಲಕ್ಕೆ ಚಾಚಿ ಅದರ ಉಂಗುಷ್ಟದಿಂದ ತಿಲಕವನ್ನು ತಿದ್ದಲು ಮತ್ತೊಂದು ಕಾವ್ಯ “ಲೀಲಾವತಿ ಪ್ರಬಂಧಂ”ನಲ್ಲಿ ರಂಭೆಯ ನೃತ್ಯ ಪ್ರಸಂಗದಲ್ಲಿ ಆಕೆ ಪ್ರದರ್ಶಿಸುವ ನೃತ್ಯ, ನೃತ್ಯ ಸ್ಥಾನಕ, ಚಾಲಿ ದೇಶೀಕರಣ, ಜತಿಗಳ ಬಗ್ಗೆ ವಿಷದವಾಗಿಯೂ, ರೋಚಕವಾಗಿಯೂ ವರ್ಣಿಸಿದ್ದಾನೆ. ಬಂಧುವರ್ಮ “ಹರಿವಂಶಾಭ್ಯುದಯ” ಕಾವ್ಯದಲ್ಲಿ ಜಯಸೇನೆ ವಸುದೇವನನ್ನು ನೃತ್ಯ ಸಭೆಯಲ್ಲಿ ಸೋಲಿಸುತ್ತಾಳೆ. ಆಕೆ ಮಾರ್ಗಚಾರಿಗಳನ್ನಷ್ಟೇ ಅಲ್ಲದೆ ಕುಂಚನ, ಪ್ರಸಾರಣ, ಮನೋಭ್ರಮಣ, ಜಾವನ, ಸ್ಥಿತಚಾಳಿತದಂತಹ ದೇಶೀಚಾರಿಗಳನ್ನೂ ಸಮರ್ಥವಾಗಿ ಪ್ರಯೋಗಿಸುತ್ತಾಳೆ.

ಅಗ್ಗಳದೇವ (ಚಂದ್ರಪ್ರಭಪುರಾಣ) ಮೊತ್ತ ಮೊದಲು ಸುಳಾದಿ ಸಪತ್ತತಾಳಗಳ ಗಾಯನದ ಬಗ್ಗೆ ವಿವರಿಸುತ್ತಾನೆ. ಈತನ ನೃತ್ಯದ ವಿವರಣೆಯಿಂದ ಸರ್ವಕಾಲೀನ ಶಾಸ್ತ್ರಗ್ರಂಥಗಳ ತಿಳುವಳಿಕೆಯೂ ಬರುತ್ತದೆ. ದೇಶೀಲಾಸ್ಯಾಂಗಗಳಾದ ಕಿತ್ತು, ಚಂಡಣೆ, ನಿಜ್ಜವಣೆ, ಭಸಕ, ರೇಖಾ, ಡಿಳ್ಳಾಯಿ, ಝಂಕಾ ಮುಂತಾದವುಗಳ ಪ್ರಯೋಗವನ್ನು ನರ್ತಕಿಯರು ತಮ್ಮ ನರ್ತನದಲ್ಲಿ ಪ್ರಯೋಗಿಸಿದರೆಂದು ಅಗ್ಗಳದೇವ, ಜನ್ನ, ಪಾರ್ಶ್ವಪಂಡಿತ ಕಮಲಭವ ಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ಕರ್ನಾಟಕದ ವಿಶೇಷ ನೃತ್ಯಗಳಾದ ಪೇರಣಿ, ಕಟ್ಟರೆ, ಕೈವಾಡ, ಗುಂಡಲ, ಪೆಕ್ಕಣಗಳನ್ನು ನರ್ತಕ/ಕಿಯರು ಮಾಡಿದರೆಂದು ಬಾಹುಬಲಿ, ಬಾಹುಬಲಿಪಂಡಿತ, ಬೊಮ್ಮರಸರು ಶಾಸ್ತ್ರೀಯವಾಗಿ ನಿರೂಪಿಸಿದ್ದಾರೆ. ರತ್ನಾಕರವರ್ಣಿಯಂತೂ ತನ್ನ ಕಾವ್ಯ ಭರತೇಶ ವೈಭವದಲ್ಲಿ ಏಕಲ, ಯುಗಲ ಹಾಗೂ ಸಮೂಹ ನೃತ್ಯಗಳ ಸಮಾರಾಧನೆಯನ್ನೇ ಮಾಡಿದ್ದಾನೆ. ಆತ ಬೆಂದು, ಜಕ್ಕಟಿ, ಕೊರವಂಜಿ, ಗಜಲುಗಳಂತಹ ದೇಶೀ ನೃತ್ಯಗಳ ಸ್ವರೂಪವನ್ನು ಕೊಡುತ್ತಾನೆ.

ಜೈನ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು ಹೆಚ್ಚು ಲಾಲಿತ್ವೂ, ಲಾವಣ್ಯಮಯವೂ ಆಗಿ ಮೂಡಿದೆ. ಈ ಪ್ರಸಂಗಗಳು ಕವಿಗಳಿಗೆ ಇದ್ದ ನಾಟ್ಯಶಾಸ್ತ್ರದ ಅಪಾರ ಜ್ಞಾನವನ್ನು ತೋರುವ ಕೈಗನ್ನಡಿಗಳಾಗಿವೆ.

ವೀರಶೈವ ಕಾವ್ಯಗಳು ನೃತ್ಯವು ಭಕ್ತಿಪಾರಮ್ಯದ ಒಂದು ಚಟುವಟಿಕೆಯಂತೆ ಚಿತ್ರಿಸಿವೆ. ಕವಿಗಳು ಭಾವೋನ್ಮಾದದ ಉತ್ತುಂಗ ಶಿಖರದಂತೆ ನರ್ತನವನ್ನು ಚಿತ್ರಿಸಿದ್ದಾರೆ. ಶೈವಾರಾಧನೆಯ ಪೂಜಾ ವಿಧಾನಗಳಲ್ಲಿ ಒಂದಾಗಿ ಹಲವಾರು ದೇಶೀ ನೃತ್ಯಗಳ ಪೂರ್ಣ ಪರಿಚಯ ಇಲ್ಲಿ ಲಭ್ಯ. ಕವಿ ಚಾಮರಸ ತನ್ನ ಕಾವ್ಯ “ಪ್ರಭುಲಿಂಗ ಲೀಲೆ”ಯಲ್ಲಿ ಮಾಯೆಯ ದಿನವೂ ಮಾಧುಕೇಶ್ವರ ದೇವಾಲಯಕ್ಕೆ ಬಂದು ನರ್ತನ ಸೇವೆಯನ್ನು ತನ್ನ ಆರಾಧ್ಯ ದೈವವಾದ ಮಧುಕನಾಥಗೆ ಸಲ್ಲಿಸುತ್ತಾಳೆ. ಇದಕ್ಕೆ ತಕ್ಕ ವಾದ್ಯವೃಂದ, ಆಕೆಯ ನರ್ತನ ಪಾಂಡಿತ್ಯಗಳನ್ನು ಕವಿ ಮನಮುಟ್ಟುವಂತೆ ವರ್ಣಿಸಿದ್ದಾನೆ. ಆಕೆ ಪ್ರದರ್ಶಿಸುವ ಸ್ಥಾನಗಳು ಪಾದಗರ, ಸೌಷ್ಠಿತಿ, ರೇಖಾಗಳನ್ನು ಕುರಿತು ಹೊಸ ಪರಿಭಾಷೆಯನ್ನು ಹೀಗೆ ಕೊಡುತ್ತಾನೆ.

ನೇಮನೆಲೆ ಪಯಪಾಡು ಪಲ್ಲಟ
ಸೀಮೆ ಸೊಗಸತಿಬೆಡಗು ಬಿನ್ನಣ
ರಾಮಣೀಯತೆ ರೇಖೆಯಂತರ ಕರಣ ತಿರುಪಿನಲಿ
ಕಾವಿನಿಯೋ ತಾ ಭರತ ಸಂಭವ
ಭೋಮಿಯೋ ಪೇಳೆನಲು ಮೆರೆದಾ
ಶ್ಯಾಮ ಮಾಯಾದೇವಿ ಮೋಹಿಸಿ ಪಾತ್ರವಾಡಿದಳು
(ಪ್ರಭುಲಿಂಗ ಲೀಲೆ – 4-57)

ಮಾಯೆಯ ಲಾಸ್ಯಾಭಿನಯವನ್ನು ಕವಿ ಚಾಮರಸ ಹಲವು ರೀತಿಯಲ್ಲಿ ವರ್ಣಿಸಿದ್ದಾನೆ.

“ವಿರೂಪಾಕ್ಷ ಪಂಪಾಸ್ಥಾನ ವರ್ಣನಂ” ಎಂಬ ಕಾವ್ಯದಲ್ಲಿ ಕವಿ ಚಂದ್ರಶೇಖರನು ಒಂದು ನೃತ್ಯ ಸನ್ನಿವೇಶಕ್ಕೆ ಬೇಕಾಗುವ ಪರಿಕರ, ತಾಂತ್ರಿಕತೆಯನ್ನು ಆಸ್ಥೆಯಿಂದ ಅಳವಡಿಸಿದ್ದಾನೆ. ಈತನ ವರ್ಣನೆಯ ಆಧಾರದ ಮೇಲೆ ಕರ್ನಾಟಕದ ಅಂದಿನ ನೃತ್ಯ ಸಂಪ್ರದಾಯವನ್ನು ತಲಸ್ಪರ್ಶಿಯಾಗಿ ತಿಳಿಯಲು ಸಾಧ್ಯವಾಗಿದೆ. ಪಂಪಾಕ್ಷೇತ್ರದ ಆರಾಧ್ಯ ದೈವನಾದ ವಿರೂಪಾಕ್ಷನ ಒಡ್ಡೋಲಗದಲ್ಲಿ ನಡೆಯುವ ಸಂಗೀತ, ನೃತ್ಯದ ಕೂಲಂಕುಷ ವಿವರಣೆಯನ್ನು ಕವಿ ಕೊಡುತ್ತಾನೆ. ಒಟ್ಟು ಮೂರು ಜನ ನರ್ತಕಿಯರನ್ನು ಕವಿ ರಂಗದ ಮೇಲೆ ತರುತ್ತಾನೆ. ಮೊದಲನೇ ನರ್ತಕಿ ಮಾರ್ಗ ಸಂಪ್ರದಾಯವನ್ನು ಅನುಸರಿಸಿ ಭರತೋಕ್ತ ಆಂಗಿಕ ಅಭಿನಯಗಳನ್ನು ಪ್ರದರ್ಶಿಸುತ್ತಾಳೆ. ಎರಡನೆಯ ನರ್ತಕಿ ಅಪೂರ್ವವೂ ಅವಶ್ಯಕವೂ ಆದ ಅಡವುಗಳನ್ನು ತನ್ನ ನೃತ್ಯದಲ್ಲಿ ಅಳವಡಿಸಿ ತಾಂಡವ ಹಾಗೂ ಲಾಸ್ಯವನ್ನು ತೋರುತ್ತಾಳೆ. ಆಕೆ ಅಳವಡಿಸಿದ ಅಡವುಗಳನ್ನು ಚಂದ್ರಶೇಖರ ಮೂರು ವಿಧವಾಗಿ ವಿಂಗಡಿಸುತ್ತಾನೆ.

1. ಅಂದವುಳ್ಳ ಅಡವುಗಳು, 2. ಸಾಹಸಮಯ ಅಡವುಗಳು, 3. ಅವಗಡದ ಅಡವುಗಳು, “ಮತ್ತೋರ್ವ ನರ್ತಕಿ ತಕ್ಕ ನೇಪಥ್ಯ ಮಂಧರಿಸಿ ಲವಣಿ, ಗುಂಡಲ, ಲಾಗಾನುಲಾಗ, ಬೀಸುಗಾಲು, ದೊಷಿ ವಿಷಮದೊಷಿ, ಪೇರಣಿ, ಡೊಕ್ಕರಮಂಡಿ, ಮೊದಲಾದವಗಡದ ಅಡುವುಗಳನಳವಡಸಿ” (ಪಂಪಾಸ್ಥಾನವರ್ಣನಂ 88-) ಮೇಲಿನ ಪ್ರಯೋಗವು ಅತ್ಯಂತ ಆಕರ್ಷಕವಾಗಿದ್ದು, ಕರ್ನಾಟಕ ನೃತ್ಯ ಶೈಲಿಯ ಸ್ವರೂಪವನ್ನು ಸ್ವಚ್ಚವಾಗಿ ಬಿಡಿಸಿ ತೋರುತ್ತದೆ.

ಮೂರನೆಯ ನರ್ತಕಿ ದೇಶೀ ನೃತ್ಯಗಳಾದ ಕವಿಲು, ಜಕ್ಕಡಿ, ಕೋಲಾಚಾರಿ, ಚಂದು ಯೋಗನಕಟ್ಟರ ಮುಂತಾದವನ್ನು ನರ್ತಿಸುತ್ತಾಳೆ. ವೀರಶೈವ ಕಾವ್ಯಗಳಲ್ಲಿ ನೃತ್ಯ ಪ್ರಸಂಗಗಳು ದೇಶೀ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಭರತ ನಾಟ್ಯಶಾಸ್ತ್ರದ ನಂತರದ ಶಾಸ್ತ್ರಗ್ರಂಥಗಳನ್ನು ಕವಿಗಳು ಅನುಸರಿಸಿದ್ದಾರೆಂದು ತಿಳಿಯುತ್ತದೆ. ದಕ್ಷಿಣ ಭಾರತದ ನೃತ್ಯ ಶೈಲಿಗಳ ಮೂಲಾಂಶವಾದ ಅಡವುಗಳ ಬಗ್ಗೆ ಚಂದ್ರಶೇಖರ ಸಾಕಷ್ಟು ಮಾಹಿತಿಯನ್ನು ಕೊಡುತ್ತಾನೆ. ಈತನ ಕಾವ್ಯದ ಆಳವಾದ ಅಧ್ಯಯನದಿಂದ ಕರ್ನಾಟಕ ನೃತ್ಯಶೈಲಿಯ ಆರಂಭಿಕ ಪಾಠಗಳನ್ನು ಗುರುತಿಸಬಹುದು. ಕನ್ನಡ ಕವಿಗಳು ಅಡವುಗಳನ್ನು “ಉರುಪು”ಗಳೆಂದು ಕರೆದಿದ್ದಾರೆ.

ಶ್ರೀಹರಿ ಭಕ್ತರಾದ ವೈದಿಕ ಕವಿಗಳು ತಮ್ಮ ಕಾವ್ಯದಲ್ಲಿ ರಾಸಲೀಲಾ, ರಾಸನೃತ್ಯಗಳನ್ನು ವರ್ಣಿಸಿದ್ದಾರೆ. ವೈದಿಕ ಕಾವ್ಯಗಳು ಭಾಷೆ ಹಾಗೂ ಛಂದಸ್ಸುಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕಂಡವು. ದಾಸಸಾಹಿತ್ಯದ ಸುಳಾದಿ, ಪದ, ವೃತ್ತನಾಮ, ಉಗಾಭೋಗ ಹಾಗೂ ತಿರುಮಲಾರ್ಯನ ಶೃಂಗಾರ ಪದಗಳು, ಚಕದೇವರಾಯನ ಗೀತ ಗೋಪಾಲ ಇತ್ಯಾದಿಗಳು ಹೆಣ್ಣುಮಕ್ಕಳಿಗೆ ಹಾಡಲು, ನರ್ತಿಸಲು ಯೋಗ್ಯವಾಗಿ ಪ್ರಚುರಗೊಂಡವು.

ಮೋಹನ ತರಂಗಿಣಿ ಕಾವ್ಯದಲ್ಲಿ ಕನಕದಾಸರು ನರ್ತಕರು, ನರ್ತಕಿಯರು, ನೃತ್ಯ ಶಿಕ್ಷಕರು ವಾಸಿಸುವ ಸ್ಥಳವನ್ನು ಗುರುತಿಸಿದ್ದಾರೆ. ಕೃಷ್ಣಾಗಮನದಿಂದ ಸಂತಸಗೊಂಡ ಕೃಷ್ಣಸತಿಯರು ಕೋಲಾಟ, ಹೋಳಿಯಾಟವನ್ನು ಆಡುತ್ತಾರೆ.

ನರ್ತನ ಕೋಲಾಟ ಹೊನ್ನಂಡೆಗಳನಾತು
ಪುತ್ತಳಿ ಮದನ ಕೈಯಡೆಯ
ಚಿತ್ತರ ಗೈದಿರ್ದಬಿನ್ನಾಣಗಳ ನೋಡಿ
ಚಿತ್ರೈಸಿದನು ಕೃಷ್ಣನಗುತ
(ಮೋಹನತರಂಗಿಣಿ – 14-30)

ಕೋಲಾಟ ಸಂತೋಷ, ಸಂಭ್ರಮ ಸೂಚಕವಾದ ನೃತ್ಯ. ಇಡೀ ಭಾರತದೇಶದಲ್ಲಿ ಆಯಾ ಪ್ರಾಂತ್ಯದ ಭಾಷೆ, ವೇಷ, ಆಂಗಿಕ ಚಲನೆಗಳನ್ನು ಹೊಂದಿರುವ ವಿಶೇಷ ನರ್ತನ ಪ್ರಕಾರ – ಹೆಣ್ಣು ಗಂಡಿನ ಭೇದವಿಲ್ಲದೆ ಆಚರಿಸುವಂತದು. ರುದ್ರಭಟ್ಟ ತನ್ನ “ಜಗನ್ನಾಥ ವಿಜಯ”ದಲ್ಲಿ ಹಲವು ರೀತಿಯ ಕೋಲಾಟಗಳನ್ನು ಉಲ್ಲೇಖಿಸಿದ್ದಾನೆ. ಕನಕದಾಸರು ಉತ್ತಮ ನರ್ತಕಿಯರಿಗೆ ಬಿರುದು ನೀಡುತ್ತಿದ್ದರ ಬಗ್ಗೆ ನೆಟ್ಟುವಿಗರ ಬಗ್ಗೆ, ನರ್ತನಕ್ಕೆ ಎರಡೂ ಪಕ್ಕಗಳಲ್ಲಿ ನಿಂತು ವಿಶೇಷವಾದ ಗಾಯನ ಒದಗಿಸುತ್ತಿದ್ದರ ವಿವರಗಳನ್ನು ಕೊಡುತ್ತಾರೆ. ಅಂದಿನ ಕರ್ನಾಟಕ ನೃತ್ಯ ಹಾಗೂ ಗಾಯನ ಸಂಪ್ರದಾಯವನ್ನು ಅರಿಯಲು ಮೋಹನ ತರಂಗಿಣಿ ಒಂದು ಪ್ರಮುಖ ಕಾವ್ಯವಾಗಿದೆ.

ಗೋವಿಂದ ವೈದ್ಯನ “ಕಂಠೀರವ ನರಸರಾಜ ವಿಜಯ” ಅಂದು ಮೈಸೂರು ಸಂಸ್ಥಾನದಲ್ಲಿ ಪ್ರಚಲಿತವಿದ್ದ ನೃತ್ಯ ಸಂಪ್ರದಾಯದ ಪೂರ್ಣ ಮಾಹಿತಿಯನ್ನು ನೀಡುತ್ತದೆ. ರಾಜನ ಒಡ್ಡೋಲಗದಲ್ಲಿ ನರ್ತಿಸಬೇಕಾದ ನರ್ತಕಿಯರು ಅತ್ಯಂತ ಶ್ರೇಷ್ಠಮಟ್ಟದವರಾಗಿ ಕನಕಮಯ ರತ್ನಖಚಿತ ಆಭರಣಗಳಿಂದ ಶೋಭಿತರಾಗಿ ಸರ್ವಾಂಗ ಸುಂದರಿಯರಾಗಿದ್ದರು. ಇವರಿಗಾಗಿ ಅರಮನೆಯಲ್ಲಿ ನಾಟ್ಯ ಮಂಟಪಗಳನ್ನು ಕಲಾತ್ಮಕವಾಗಿ ನಿರ್ಮಿಸಲಾಗುತ್ತಿತ್ತು. ನರ್ತಕಿಯರನ್ನು ಮಂಗಳವಾದ್ಯಗಳೊಂದಿಗೆ ಬರಮಾಡಿಕೊಳ್ಳುತ್ತಿತ್ತು.

ಆ ಸಮಯದಲ್ಲಿ ತೂರ್ಯತ್ರಯ ಮಂಗಳ
ಘೋಷವೆಸೆಯೇ ನಸುನಗುತ
ಭಾಸುರ ಬಿರುದನನಾಟ್ಯ ಔದುಗಳು ಸಂ
ತೋಷದೆ ನಡೆತಂದರೊಲಿದು (8-55)

ಮೇಲಿನ ಪದ್ಯ ನರ್ತಕಿಯರಿಗೆ ಅಂದು ಸಮಾಜದಲ್ಲಿದ್ದ ಉನ್ನತ ಸ್ಥಾನವನ್ನು ತಿಳಿಸುತ್ತದೆ.

ರಾಜನ ಮುಂದೆ ಮೂರು ಪ್ರಕಾರಗಳ ನೃತ್ಯಗಳನ್ನು ನರ್ತಕಿಯರು ಪ್ರದರ್ಶಿಸುತ್ತಾರೆ. 1. ಪುಷ್ಪಾಂಜಲಿ, ನರಸಿಂಹಸ್ತುತಿ ಹಾಗೂ ಲಾಸ್ಯ ನೃತ್ತಗಳ ಮಾರ್ಗ ಸಂಪ್ರದಾಯ, 2. ಕೋಲಾಚಾರಿ ಚಿಂದು, ಕಟ್ಟಳೆ ನೃತ್ಯಗಳ ದೇಶೀ ಸಂಪ್ರದಾಯ, 3. ನವಿಲು ನೃತ್ಯ, ಜಕ್ಕಣಿ ಮೊದಲಾದ ಜಾನಪದ ನೃತ್ಯ ಸಂಪ್ರದಾಯ.

ಹೀಗೆ ಗೋವಿಂದ ವೈದ್ಯ ಅಂದಿನ ಸಾಂಸ್ಕೃತಿಕ ಮಟ್ಟವನ್ನು ರಾಜನ ವಿಶಾಲ ಮನೋಭಾವ, ಸದಭಿರುಚಿಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತಾನೆ.

ನವೋದಯ ಕವಿಗಳು (ಕುವೆಂಪು, ಗೋಕಾಕ್‌, ಬೇಂದ್ರೆ, ಪು.ತಿ.ನ ಮಾಸ್ತಿ) ಹಿಂದಿನ ಕವಿಗಳಂತೆ ನೇಪಥ್ಯ ವಿಧಿಯಿಂದ ಆರಂಭಿಸಿ ಅಂತ್ಯದವರೆಗೆ ಒಂದು ನೃತ್ಯ ಪ್ರಸಂಗವನ್ನು ವರ್ಣಿಸುವುದಿಲ್ಲ. ಅದು ಆ ಕವಿಗಳ ಉದ್ದೇಶವೂ ಅಲ್ಲ. ನೃತ್ಯ ಸಂಗೀತದಂತಹ ಕಲೆಗಳಲ್ಲಿ ಅಭಿರುಚಿಯು ತಿಳಿಯುವ ಮಟ್ಟಿಗೆ ಅಲ್ಲಲ್ಲಿ ಅವು ವರ್ಣಿತವಾಗಿವೆ.

ಒಂದು ಸಹಸ್ರ ವರ್ಷಗಳ ಅವಧಿಯಲ್ಲಿ ರಚಿತವಾದ ಕನ್ನಡ ಕಾವ್ಯಗಳು ಕರ್ನಾಟಕದ ಶ್ರೀಮಂತವಾದ ನೃತ್ಯ ಶೈಲಿಗಳನ್ನಷ್ಟೆ ಅಲ್ಲದೇ, ಆಸುಪಾಸಿನ ಪ್ರಾಂತೀಯ ನೃತ್ಯ ಶೈಲಿಗಳನ್ನು ಕನ್ನಡ ಜನತೆಗೆ ಪರಿಚಯಿಸುತ್ತವೆ. ಕಾಲಧರ್ಮದ ಜೊತೆಯಲ್ಲಿ ಬದಲಾದ ಜೀವನ ಕ್ರಮ, ಅನೇಕ ವಿಧವಾದ ಪ್ರಭಾವಗಳಿಂದ ನೃತ್ಯ – ಸಂಗೀತದಂತಹ ಲಲಿತಕಲೆಗಳು ಪರಿವರ್ತನೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದುದನ್ನು ಕನ್ನಡ ಕಾವ್ಯಗಳು ಚೆನ್ನಾಗಿ ನಿರೂಪಿಸುತ್ತವೆ. ಇದು ಕನ್ನಡ ಕವಿಗಳ ಕೌಶಲ್ಯಕ್ಕೆ, ಕಾಲ್ಪನಿಕತೆಗೆ ಸಾಮರ್ಥ್ಯಕ್ಕೆ ಒಂದು ಕೈಗನ್ನಡಿಯಾಗಿದೆ.