ಸ್ವಾಗತ, ಸುಸ್ವಾಗತ ; ಒಳಗೆ ದಯಮಾಡಿಸಿ,
ಇದೆಲ್ಲವೂ ನಿಮ್ಮದೇ ಮಹಾಸ್ವಾಮಿ.
ನಾವು ಕನ್ನಡಿಗರು, ಯಾರು ಬಂದರು ಹೀಗೇ
ಅಭ್ಯಾಸವಾಗಿದೆ ನಡುಬಗ್ಗಿಸುವ ಡವಾಲಿ.

ನಿಮ್ಮ ಹಾಸಿಗೆ ಪೆಟ್ಟಿಗೆಗಳನ್ನು ನಾವೇ ಹೊತ್ತು
ತರುತ್ತೇವೆ – ಅದರಲ್ಲೇನು ಮಹಾ.
ಬನ್ನಿ, ಹಾಗೆಯೆ ಏನೂ ತರದೆ ಬಂದಿರಾ
ಇದ್ದೇ ಇವೆ ನಮ್ಮ ಹಾಸಿಗೆ ಹೊದಿಕೆ.
ನಿಮ್ಮ ಕಾಲೊತ್ತಿ, ನಾವು ಮೂಲೆಯಲ್ಲೇ ನಿಂತು
ಉಪಚಾರ ಮಾಡುತ್ತೇವೆ – ನಾವು ಕನ್ನಡಿಗರು.

ನಮಗೆ ನಮ್ಮದೆನ್ನುವುದೇನೂ ಬೇಡಿ,
ನಾವು ಅಲಕ್ ನಿರಂಜನರು.
ಅಯ್ಯೋ ಈ ಜೀವನವೇನು ಮಹಾ, ಈ
ಲೌಕಿಕ ಭೋಗಗಳೆಲ್ಲ ನಶ್ವರ ; ಹೀಗೆಂದು
ಹಾಡಿ ಹರಸಿದ್ದಾರೆ ತಂಬೂರಿ ದಾಸರು.
ನಾವು ವಿರಕ್ತರು – ಈ ಕನ್ನಡಿಗರು.

ಹೇಳಿ, ಯಾವ ಭಾಷೆಯನ್ನಾದರೂ ನಾವು
ಕಲಿಯಲು ತಯಾರು. ನಮ್ಮದಿರುತ್ತದೆ-
ಶತಮಾನಗಳಿಂದ ಇದ್ದೇ ಇದೆ, ಬಿಡಿ.
ನಮ್ಮ ಔದಾರ್ಯ ನೀವು ಕಾಣಿರಿ ಸ್ವಾಮಿ ;
ನಿಮ್ಮಂತೆ ಭಾಷೆ ಭಾಷೆ ಎಂದು ಬಡಕೊಂಡು
ಸಾಯುವವರಲ್ಲ – ನಾವು ಕನ್ನಡಿಗರು.

ನಮ್ಮದರಲ್ಲಿ ನಿಮಗೆ ಯಾವುದು ಬೇಕು ?
ತಟ್ಟೆಯಲ್ಲಿಟ್ಟು ನೆಟ್ಟಗೇ ಕೊಟ್ಟುಬಿಡುತ್ತೇವೆ.
ಯಾವ ಕಾಲಕ್ಕೂ ನಾವು ತಣ್ಣಗೆ ಬದುಕಿದವರಪ್ಪ ;
ಯಾವ ಕೆಚ್ಚಲಾದರೆ ಏನು ಮೂತಿ ಇಕ್ಕುತ್ತೇವೆ.
ನಮ್ಮ ಪ್ರಾರ್ಥನೆ ಇಷ್ಟೆ :
ಹಿಂದೆ ಬಂದರೆ ಒದೆಯಬೇಡಿ
ಮುಂದೆ ಬಂದರೆ ಹಾಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.