ಕನ್ನಡ ಭಾಷಾಧ್ಯಯನ ವಿಭಾಗದ ‘ನಮ್ಮ ಕನ್ನಡ’ ಪತ್ರಿಕೆಯಲ್ಲಿ ಕ್ರಿಯಾಪದಗಳ ರಚನೆ, ಬಳಕೆ ಕುರಿತಂತೆ ಅಂಕಗಳನ್ನು ಬರೆಯುತ್ತಿದ್ದ ಸಮಯದಲ್ಲಿ ಕ್ರಿಯಾಪದಗಳ ಬಗೆಗೆ ಹೆಚ್ಚಿನ ಕುತೂಹಲ ಬೆಳೆಯಿತು. ರಚನೆ ಕುರಿತಂತೆ ಹೆಚ್ಚಿನ ಅಧ್ಯಯನಗಳು ಕನ್ನಡದಲ್ಲಿ ನಡೆದಿಲ್ಲದ ಕಾರಣ ಅದನ್ನು ಒಂದು ವೈಯಕ್ತಿಕ ಯೋಜನೆಯಾಗಿ ತೆಗೆದುಕೊಳ್ಳುವ ಆಲೋಚನೆ ಬಂದಿತು. ಕನ್ನಡದ ಕ್ರಿಯಾಪದಗಳ ಆಮೂಲಾಗ್ರ ಚರ್ಚೆ ಬೆಳೆಸಬೇಕೆಂದು ಈ ಯೋಜನೆಯನ್ನು ತೆಗೆದುಕೊಳ್ಳಲಾಯಿತು. ಕ್ರಿಯಾಪದಗಳನ್ನು ಕೇವಲ ವ್ಯಾಕರಣ ಗ್ರಂಥಗಳಲ್ಲಿ ಒಂದು ಪದವರ್ಗವಾಗಿ ಗಮನಿಸಿ ಕ್ರಿಯಾಪದ ಎಂದರೇನು, ಅರ್ಥ, ಇತ್ಯಾದಿ ಬಗೆಗಳನ್ನು ಕುರಿತ ಪ್ರಾಥಮಿಕ ಸ್ವರೂಪದ ಚರ್ಚೆಯನ್ನು ಮಾತ್ರ ಮಾಡಲಾಗುತ್ತಿತ್ತು. ಇವೂ ಕೂಡಾ ತುಂಬ ಸರಳವಾದ ಬಗೆಯಲ್ಲಿ ಆಗುತ್ತಿತ್ತು. ನಂತರ ಆಗಾಗ ಬಂದ ವ್ಯಾಕರಣ ಕೃತಿಗಳೂ ಸಹಾ ಇದೇ ಮಾದರಿಯನ್ನು ಅನುಸರಿಸಿದವು. ಈ ದೆಸೆಯಲ್ಲಿ ಅಧ್ಯಯನ ನಡೆಸಿದ ಅನೇಕ ವಿದ್ವಾಂಸರು ಭಿನ್ನ ರೀತಿಯಲ್ಲಿ ಕಾಣುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲವರು ಪದ – ಪದಪುಂಜವನ್ನು ಆಶ್ರಯಿಸಿದರೆ ಇನ್ನು ಕೆಲವರು ವಾಕ್ಯದ ಆಧಾರದ ಮೇಲೆ ಕ್ರಿಯಾಪದವನ್ನು ವಿಂಗಡಿಸಿದ್ದಾರೆ. ಆದರೂ ಕ್ರಿಯಾಪದಗಳಲ್ಲಿ ಪ್ರಾಣಿವರ್ಗಕ್ಕೆ ಸಂಬಂಧಿಸಿದ, ಮನುಷ್ಯ ವರ್ಗಕ್ಕೆ ಸಂಬಂಧಿಸಿದ, ಸಸ್ಯವರ್ಗಕ್ಕೆ ಸಂಬಂಧಿಸಿದ ಕ್ರಿಯಾಪದಗಳಿವೆ. ಉದಾ: ಅರಳು ಎಂಬ ಪದ ಸಸ್ಯವರ್ಗಕ್ಕೆ ಸೇರಿದೆ (ಅದನ್ನು ಮನುಷ್ಯವರ್ಗಕ್ಕೂ ವಿಸ್ತರಿಸಿರುವುದು ಒಳಚಲನೆ) ‘ಓದು’ ಮನುಷ್ಯವರ್ಗಕ್ಕೆ ಸೇರಿದೆ, ಮೇಯು ಪ್ರಾಣಿ ವರ್ಗಕ್ಕೆ ಸೇರಿದೆ. ‘ಓಡು’ ಮನುಷ್ಯ ಪ್ರಾಣಿ ಎರಡೂ ವರ್ಗಕ್ಕೆ ಸೇರಿದೆ. ಹೀಗೆ ಕ್ರಿಯಾಪದ ಲೋಕವೇ ಕುತೂಹಲಕಾರಿಯಾಗಿದೆ. ಇಂತಹ ಲೋಕದ ವೈವಿಧ್ಯಗಳನ್ನು ಬಿಚ್ಚಿಡುವ ಪ್ರಯತ್ನವೇ ಈ ಕೃತಿ. ಇದು ಮೊದಲ ಘಟ್ಟ ಇಲ್ಲಿ ಕ್ರಿಯಾಪದಗಳನ್ನು ರಚನೆ, ಬಳಕೆ, ಉದ್ದೇಶ ಇತ್ಯಾದಿಗಳನ್ನು ಗಮನಿಸಿ ಯಾವ ರೀತಿಯಲ್ಲಿ ವಿಂಗಡಿಸಲಾಗಿದೆ. ಮತ್ತು ವಿಂಗಡಿಸಬಹುದು ಎಂಬುದನ್ನು ವಿವಿಧ ವ್ಯಾಕರಣ ಕೃತಿಗಳು ಮತ್ತು ಅಧ್ಯಯನಕಾರರ ವಿಭಜನಾಕ್ರಮವನ್ನು ಗಮನಿಸಿ ನೀಡಲಾಗಿದೆ. ನಂತರ ಘಟ್ಟಗಳಲ್ಲಿ ಸಂಯುಕ್ತ ಕ್ರಿಯಾಪದಗಳ ರಚನೆ ಮತ್ತು ವೈಶಿಷ್ಟ್ಯಗಳನ್ನು, ಕೊನೆಯ ಘಟ್ಟದಲ್ಲಿ ಐತಿಹಾಸಿಕ ಬೆಳವಣಿಗೆಯನ್ನು ಗಮನಿಸಲಾಗುತ್ತದೆ.

ಇದನ್ನು ವೈಯಕ್ತಿಕ ಯೋಜನೆಯಾಗಿ ಕೈಗೊಳ್ಳಲು ಅನುವು ಮಾಡಿಕೊಟ್ಟವರು ಮಾನ್ಯ ಕುಲಪತಿಯವರಾದ ಡಾ. ಎ. ಮುರಿಗೆಪ್ಪನವರು ಇದಕ್ಕೆ ಸಹಾಯ ಸಹಕಾರ ನೀಡಿದವರು ವಿಭಾಗದ ಹಿಂದಿನ ಪ್ರಾಧ್ಯಾಪಕರಾದ ಡಾ. ಕೆ.ವಿ. ನಾರಾಯಣ, ಸಹದ್ಯೋಗಿ ಮಿತ್ರರಾದ ಡಾ. ಅಶೋಕ ಕುಮಾರ, ಡಾ. ಪಿ. ಮಹಾದೇವಯ್ಯ ಮತ್ತು ಡಾ. ಎಸ್.ಎಸ್. ಅಂಗಡಿಯವರು. ಇವರೆಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ಈ ಕೃತಿಯನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ ಸಹಾಯಕ ನಿರ್ದೇಶಕರಾದ ಶ್ರೀ. ಬಿ. ಸುಜ್ಞಾನಮೂರ್ತಿ ಅವರಿಗೂ ಮುಖಪುಟ ಬರೆದ ಶ್ರೀ. ಕೆ.ಕೆ. ಮಕಾಳಿ ಅವರಿಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀ. ಎಚ್, ಶರಣಬಸಪ್ಪ, ಕಮಲಾಪುರ ಅವರಿಗೂ ಹಾಗೂ ಮುದ್ರಕರಿಗೆ ನನ್ನ ಕೃತಜ್ಞತೆಗಳು.

ಡಾ. ಸಾಂಬಮೂರ್ತಿ