ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಪ್ರಾಚೀನತೆಯನ್ನು ಹೊಂದಿರುವ ಕನ್ನಡ ಭಾಷೆ ಬೆಳೆಯುತ್ತಾ ಬಂದಿದೆ. ಅನೇಕ ಬದಲಾವಣೆಗಳನ್ನು ಹೊಂದಿದೆ. ಈ ಬದಲಾವಣೆಗಳನ್ನು ನಾಲ್ಕು ಅವಸ್ಥೆಗಳಲ್ಲಿ ಗುರುತಿಸಿಕೊಳ್ಳಲಾಗಿದೆ. ಪ್ರತಿ ಅವಸ್ಥೆಯಲ್ಲಿಯೂ ಆದ ಬದಲಾವಣೆಗಳನ್ನು ಗಮನಿಸಿ ಆಯಾ ಕಾಲದ ಲಕ್ಷಣಗಳನ್ನು ಪಟ್ಟಿಮಾಡಿಲಾಗಿದೆ. ವಿಭಕ್ತಿ ಪ್ರತ್ಯಯ, ಧ್ವನಿಗಳು ವರ್ಣಗಳ ಬಳಕೆ, ಧ್ವನಿಗಳ ಸಮರೂಪಧಾರಣೆ ಹೀಗೆ ಅನೇಕ ಬದಲಾವಣೆಗಳನ್ನು ಗುರುತಿಸಬಹುದು. ಕ್ರಿಯಾಪದಗಳೂ ಸಹಾ ಬದಲಾವಣೆಗೆ ಒಳಪಟ್ಟಿವೆ. ಕೆಲವು ಕ್ರಿಯಾಪದಗಳು ಇಂದು ಬಳಕೆಯಲ್ಲಿ ಇಲ್ಲ. ಕೆಲವೊಂದು ಬರಹಕ್ಕೆ ಸೀಮಿತ, ಕೆಲವು ಮಾತಿನಲ್ಲಿ ಬೇರೆ ಬರಹದಲ್ಲಿ ಬೇರೆ ಇತ್ಯಾದಿ.

ಕ್ರಿಯಾಪದವೆಂದರೆ ಒಂದು ಕ್ರಿಯೆಯನ್ನು, ಸ್ಥಿತಿಯನ್ನು, ಘಟನೆಯನ್ನು ಸೂಚಿಸುವ ಪದ. ಅದು ಸಾಮಾನ್ಯವಾಗಿ ಕರ್ತೃವಿನ ಕೆಲಸವನ್ನು ಹೇಳುತ್ತದೆ. ಕನ್ನಡದಲ್ಲಿ ಇದು ವಾಕ್ಯದ ಕೊನೆಯಲ್ಲಿ ಬರುತ್ತದೆ. ಇವು ವಾಕ್ಯದ ಬಹು ಮುಖ್ಯ ಅಂಗಗಳಾಗಿ ಕೇಂದ್ರಾರ್ಥವನ್ನು ಸೂಚಿಸುತ್ತವೆ. ಕ್ರಿಯಾಪದಗಳು ಪ್ರತ್ಯಯಗಳಿಂದ ಕೂಡಿರುತ್ತವೆ. ಇದರ ಮೂಲರೂಪವನ್ನು ಧಾತು ಎನ್ನುತ್ತಾರೆ. ಕ್ರಿಯೆಯನ್ನು ಸೂಚಿಸುವ ಆದರೆ ಪ್ರತ್ಯಯರಹಿತವಾದ ರೂಪವನ್ನು ಧಾತು ಅಥವಾ ಕ್ರಿಯಾ ಪ್ರಕೃತಿಯೆಂದೂ ಕರೆಯಲಾಗುತ್ತದೆ. ಧಾತು ಹಾಗೂ ಇತರ (ಕಾಲ, ಅಖ್ಯಾತ) ಪ್ರತ್ಯಯಗಳು ಸೇರಿ ಕ್ರಿಯಾಪದಗಳೆನೆಸಿಕೊಳ್ಳುತ್ತವೆ.

ಕೇಶಿರಾಜನ ಈ ಸೂತ್ರ ಧಾತು ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ.

ಕ್ರಿಯೆಯರ್ಥದ ಮೂಲಂ ಪ್ರ
ತ್ಯಯರಹಿತಂ ಧಾತುವದನಭಾವಕ್ರಿಯೆಯೂ |
ಳ್ನಿಯತಂ ನಿಶ್ಚಯಿಪುದು ಬುಧ
ಚಯಾಮಾ ಧಾತುವಿಗೆ ವಿಭಕ್ತಿಯಾರಾಗಿರ್ಕುಂ | (೨೨೭)

ಕ್ರಿಯಾರ್ಥದ ಮೂಲವೂ ಪ್ರತ್ಯಯರಹಿತವೂ ಆದುದು ಧಾತು. ಇದನ್ನು ನಿಷೇಧ ಕ್ರಿಯಾಪದದ ಮೂಲಕ ಕಂಡುಕೊಳ್ಳಬಹುದು. ಧಾತುವಿನ ಮೇಲೆ ಹತ್ತುವ (ಆಖ್ಯಾತ) ಪ್ರತ್ಯಯಗಳು ಆರು ಎಂಬುದು ಈ ಸೂತ್ರದ ಅರ್ಥ.

ಕನ್ನಡದ ಕ್ರಿಯಾರಚನೆಗಳನ್ನು ಧಾತುಗಳು ಮತ್ತು ಕ್ರಿಯಾಪದಗಳೆಂದು ವಿಂಗಡಿಸಬಹುದು. ಈಗಾಗಲೇ ಹೇಳಿದಂತೆ ಧಾತುಗಳು ಕ್ರಿಯಾಪದಗಳ ಮೂಲ. ಅದಕ್ಕೆ ಪ್ರತ್ಯಯಗಳು ಸೇರಿ ಕ್ರಿಯಾಪದಗಳು ರೂಪುಗೊಳ್ಳುತ್ತವೆ. ಕ್ರಿಯಾಪದಗಳನ್ನು ಅವುಗಳ ರಚನೆ, ಬಳಕೆ, ಹಾಗೂ ಇತರ ಅಂಶಗಳನ್ನು ಆಧರಿಸಿ ವಿವಿಧ ರೀತಿಯಲ್ಲಿ ವಿಂಗಡಿಸಬಹುದು.

ಕ್ರಿಯಾಪದಗಳು ಬೆಳೆದುಬಂದು ಬಗೆಯನ್ನು ಗಮನಿಸಿದರೆ ಕ್ರಿಯಾಪದಗಳು ಕಾಲಕಾಲಕ್ಕೆ ಬದಲಾವಣೆಯನ್ನು ಹೊಂದಿರುವುದನ್ನು ಕಾಣಬಹುದು.

೧. ವಿಜಾತೀಯ ಸಂಯುಕ್ತಾಕ್ಷರಗಳನ್ನು ಹೊಂದಿದ್ದ ಎರಡು ಅಕ್ಷರದ ಕ್ರಿಯಾಪದಗಳು ಸಜಾತೀಯವಾಗಿ ಪರಿವರ್ತಿತವಾಗಿವೆ. ಆದರೆ ಈ ಪ್ರಕ್ರಿಯೆ ವಿಜಾತೀಯ ದ್ವಿತ್ವಾಕ್ಷರದ ಹಿಂದಿನ ಸ್ವರ ಹ್ರಸ್ವವಾಗಿದ್ದಾಗ ಮಾತ್ರ ಕಂಡುಬರುತ್ತದೆ.

ಉದಾ. ೧. ಒೞ್ಗು > ಒಗ್ಗು
ಕುೞ್ಗು > ಕುಗ್ಗು

೨. ಕೊರ್ಚು > ಕೊಚ್ಚು
ಉರ್ಕು > ಉಕ್ಕು
ಕರ್ಚು > ಕಚ್ಚು
ಕೊರ್ವು > ಕೊರ್ಬು ಕೊಬ್ಬು
ಗುರ್ದು > ಗುದ್ದು
ಪೂಣ್ಮು > ಹೊಮ್ಮು

ದ್ವಿತ್ವಾಕ್ಷರದ ಹಿಂದಿನಸ್ವರ ದೀರ್ಘವಾಗಿದ್ದಾಗ ದ್ವಿತ್ವ ಕಳೆದುಹೋಗುತ್ತದೆ.

ಬಾರ್ಚು > ಬಾಚು
ನಾಣ್ಚು > ನಾಚು

ಅಂತೆಯೇ ೩ ಅಕ್ಷರದ ಪದಗಳಲ್ಲಿಯೂ ದ್ವಿತ್ವ ಕಳೆದುಹೋಗಿದೆ.

ಕಿಮುಳ್ಚು > ಕಿಮುಚು > ಕಿವುಚು
ಮಗುಳ್ಚು > ಮಗುಚು

ಮೇಲಿನ ಎಲ್ಲ ಉದಾಹರಣೆಗಳನ್ನು ನೋಡಿದಾಗ ಈ ಪ್ರಕ್ರಿಯೆಯಲ್ಲಿ ಬಹುಪಾಲು ಆವರ್ಗೀಯ ವ್ಯಂಜನಗಳು ಕಳೆದು ಹೋಗಿ ವರ್ಗೀಯ ವ್ಯಂಜನಗಳು ಉಳಿದುಕೊಂಡಿರುವುದನ್ನು ಕಾಣಬಹುದು.

೨. ‘ಪ’ ಕಾರಾದಿಯಾದ ಕ್ರಿಯಾಪದಗಳು ‘ಹ’ ಕಾರಾದಿಯಾಗಿ ಬದಲಾಗಿವೆ.

ಪರಸು > ಹರಸು ; ಪೞಿ > ಹಳಿ
ಪಾಡು > ಹಾಡು ; ಪುಟ್ಟು > ಹುಟ್ಟು ಇತ್ಯಾದಿ

ಇದು ಇನ್ನಿತರ ಪರಿಸರದಲ್ಲೂ ‘ಹ’ ಕಾರವಾಗಿದೆ. ಉದಾ: ಗಳಪು > ಗಳಹು; ಕಪು > ಕಳುಹು. ಹೀಗೆ ಪ > ಹ ಆಗುವಾಗ ಇನ್ನಿತರ ಬದಲಾವಣೆಗಳೂ ಆಗುತ್ತವೆ. ಉದಾ. ಪಿಸುಂಕು > ಹಿಸುಕು > ಪುಡುಂಕು > ಹುಡುಕು ಇತ್ಯಾದಿಗಳಲ್ಲಿ ಅಬಿಂದುಕವೂ ಆಗಿರುವುದನ್ನು ಕಾಣಬಹುದು. ಕ್ರಿಯಾಪದಗಳಲ್ಲಿ ಬಹುತೇಕ ಪ ಹ ಬದಲಾವಣೆ ಆಗಿದೆ.

೩. ಕೆಲವೊಂದು ಆದಿಸ್ವರಗಳಲ್ಲಿ ಬದಲಾವಣೆಯಾಗಿವೆ. ನನೆ > ನೆನೆ (ನೆನೆ > ಆರ್ದ್ರ ಭಾವೇ); ನಕ್ಕು > ನೆಕ್ಕು (ನಕ್ಕು – ಲೇಹನೇ); ನಡು > ನೆಡು (ನಡು > ಸಂಸ್ಥಾಪನೇ) ಬಗುಳ್ > ಬಗುಳು > ಬೊಗಳು (ಬಗುಳ್ – ಕರ್ಕುರ ಧ್ವನೌ ಸಾರಣೇ ಚ) ಪೊಯ್ > ಹೊಯ್ > ಹುಯ್ಯು. ಇಲ್ಲೆಲ್ಲಾ ಆ > ಎ; ಅ > ಒ; ಒ > ಉ; ಬದಲಾವಣೆಯನ್ನು ಗಮನಿಸಬಹುದು.

೪. ಕೆಲವೊಂದು ಕ್ರಿಯಾಪದಗಳಲ್ಲಿ ಚ > ಸ ಮಾರ್ಪಾಟು ಕಾಣುತ್ತದೆ. ಇದು ಬಹುತೇಕ ಪ್ರೇರಣಾತ್ಮಕ ರೂಪಗಳಲ್ಲಿ ಕಂಡುಬರುತ್ತದೆ. ಉದಾ: ಉದುರ್ಚು > ಉದುರಿಸು: ತೊದಲ್ಚು > ತೊದಲಿಸು

೫. ವ್ಯಂಜನಾಂತ ಪದಗಳು ಸ್ವರಾಂತವಾಗಿ ಬದಲಾಗಿರುವುದು. ಕೆಲವು ಸ್ವರಾಂತವಾಗಿ ದ್ವಿತ್ವವೂ ಆಗಿವೆ.

ಉದಾ. ಸ್ವರಾಂತ್ಯ

ಕಾಣ್ > ಕಾಣು
ಕೀಳ್ > ಕೀಳು
ಸೋಲ್ > ಸೋಲು

ಸ್ವರಾಂತ್ಯವಾಗಿ ದ್ವಿತ್ವವಾಗಿರುವುದು.

ಒಯ್ > ಒಯ್ಯು
ನಿಲ್ > ನಿಲ್ಲು
ಮೆಲ್ > ಮೆಲ್ಲು

ಭಾಷಾ ಬದಲಾವಣೆಯಲ್ಲಿ ಕೆಲವು ಪದಗಳು ಸಬಿಂದುಕಗಳಾದ್ದವು. ಕಾಲಕ್ರಮೇಣ ಅವು ಅಬಿಂದುಕಗಳಾದವು. ಇದಕ್ಕೆ ಕಾರಣ ಸೌಲಭ್ಯಾಕಾಂಕ್ಷೆ. ಕ್ರಿಯಾಪದಗಳೂ ಸಹ ಇಂತಹ ಬದಲಾವಣೆಗೆ ಒಳಪಟ್ಟಿವೆ.

ಉದಾ ಕರಂಗು > ಕರಗು
ದಾಂಟು > ದಾಟು
ಕೊರಂಗು > ಕೊರಗು
ಚಿವುಂಟು > ಚಿವುಟು
ತೀಂಟು > ತೀಡು
ತೂಂಕು > ತೂಕು > ತೂಗು
ಅವುಂಕು > ಅಮುಕು > ಅವುಕು

ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ, ಬದಲಾವಣೆ ಕೇವಲ ಅಬಿಂದುಕಗಳಾಗಿರುವುದು ಮಾತ್ರವಲ್ಲ, ಧ್ವನಿಯಲ್ಲೂ ಮಾರ್ಪಾಟಾಗಿರುವುದು. ತೀಂಟು > ತೀಡು (ಟ > ಡ) ತೂಂಕು > ತೂಕು > ತೂಗು (ಕ > ಗ) ಇತ್ಯಾದಿಗಳಲ್ಲಿ ಕಂಡುಬರುತ್ತದೆ.

೭. ಶಕಟರೇಫದ ಸ್ಥಾನದಲ್ಲಿ ರೇಫೆಯ ಬಳಕೆ ರಳದ ಸ್ಥಾನದಲ್ಲಿ ಕುಳದ ಬಳಕೆ ಭಾಷಾ ಬದಲಾವಣೆಯಲ್ಲಾಗಿರುವ ಮತ್ತೊಂದು ಮಾರ್ಪಾಟು. ಉಚ್ಚಾರಣೆಯಲ್ಲಿ ಭಿನ್ನತೆಯನ್ನು ಕಳೆದುಕೊಂಡ ಧ್ವನಿಗಳು ಏಕೀಭವಿಸಿರುವುದನ್ನು ಕ್ರಿಯಾಪದಗಳಲ್ಲೂ ಕಾಣಬಹುದು.

ಒದ > ಒದಱು
ಇೞಿ > ಇಳಿ
ಆಱು > ಆರು
ಕೊೞೆ > ಕೊಳೆ
ಇಱಿ > ಇರಿ
ಎೞೆ > ಎಳೆ

೮. ಭಾಷೆಯಲ್ಲಾದ ಬದಲಾವಣೆಯಲ್ಲಿ ಒಂದು ಧ್ವನಿ ಇನ್ನೊಂದು ಧ್ವನಿಯಾಗಿ ಮಾರ್ಪಟ್ಟಿರುವುದೂ ಸೇರಿದೆ. ವಕಾರ ‘ಬ’ ಕಾರವಾಗಿದೆ: ‘ಮ’ ಕಾರ ‘ವ’ ಕಾರವಾಗಿವೆ. ಕ್ರಿಯಾಪದಗಳಲ್ಲಿ ಈ ಮಾರ್ಪಾಟು ಈ ಕೆಳಗಿನಂತಿದೆ.

ಉರ್ವು > ಉಬ್ಬು (ವ > ಬ)
ಸಮೆ > ಸವೆ (ಮ > ವ)
ನಮೆ > ನವೆ (ಮ > ವ)

೯. ಇನ್ನಿತರ ಧ್ವನಿ ಬದಲಾವಣೆಗಳು ಇಂತಿವೆ.

ನೆರಲ್ > ನೆರಳು (ಲ > ಳ)
ಉರ್ದು > ಉಜ್ಜು (ದ > ಜ)

ಒಟ್ಟಾರೆ ಭಾಷೆಯಲ್ಲಾದ ಬದಲಾವಣೆಗಳು ಕ್ರಿಯಾಪದದ ಮೇಲೂ ಪ್ರಭಾವಿಸಿವೆ.

ಕ್ರಿಯಾಪದಗಳ ಬಳಕೆಯನ್ನು ಕುರಿತಂತೆ ಹೇಳುವುದಾದರೆ, ಎಲ್ಲ ಕ್ರಿಯಾಪದಗಳ ಎಲ್ಲ ರೂಪಗಳೂ (ಕಾಲ, ಅರ್ಥ ಪುರುಷ, ಲಿಂಗ, ವಚನ ಇತ್ಯಾದಿ) ಬಳಕೆಯಾಗುವುದಿಲ್ಲ. ಕೆಲವು ಮಾತಿನಲ್ಲಿ ಬಳಕೆ ಇದ್ದರೆ. ಕೆಲವು ಬರಹಕ್ಕೆ ಮಾತ್ರ ಸೀಮಿತ. ಉದಾ: ಓಡು ಎಲ್ಲ ಕಾಲ, ವಚನ ಪುರುಷ ಲಿಂಗಗಳಲ್ಲಿ ಬಳಕೆಯಾದರೆ ‘ಚಿವುಟು’ ಕೇವಲ ಮನುಷ್ಯರಿಗೆ ಸಂಬಂಧಿಸಿದಂತೆ ಮಾತ್ರ ಬಳಕೆಯಾಗುತ್ತದೆ. ನಪುಂಸಕಲೊಂಗದಲ್ಲಿ ಅದರ ಬಳಕೆಯಿಲ್ಲ. ಕೆಲವು ಬರಹದಲ್ಲಿ ಮಾತ್ರ ಬಳಕೆಯಾಗುತ್ತದೆ. ಉದಾ: ಅಗಲು: ಆಡು ಮಾತಿನಲ್ಲಿ ಯಾರೂ ಅಗಲಿದ್ದಾರೆ, ಅಗಲಿದರು ಎಂದು ಬಳಸುವುದಿಲ್ಲ. ಸಾಹಿತ್ಯಿಕವಾಗಿ ಇದರ ಬಳಕೆಯಿದೆ. ಅನುಮೋದಿಸು ಇದು ಆಡಳಿತದಲ್ಲಿ ಹೆಚ್ಚು ಬಳಕೆಯಿರುವ ಪದ. ಅನುಲಕ್ಷಿಸು ಇದು ಹೆಚ್ಚಾಗಿ ಭೂತನ್ಯೂನರೂಪ (ಅನುಲಕ್ಷಿಸಿ)ದಲ್ಲಿ ಬಳಕೆಯಿದೆ.

ಮಾತು ಮತ್ತು ಬರಹದಲ್ಲಿ ಕ್ರಿಯಾಪದಗಳು ಭಿನ್ನವಾಗುತ್ತವೆ. ಎ ಕಾರಾಂತ ಕ್ರಿಯಾಪದಗಳು ಇಕಾರಾಂತವಾಗಿ ಉಚ್ಚರಿಸಲ್ಪಟ್ಟರೆ, ಬರೆಹದಲ್ಲಿ ಎ ಕಾರಾಂತವೇ ಇರುತ್ತದೆ. ಉದಾ: ಅಗೆ > ಅಗಿ; ಕರೆ > ಕರಿ; ಬರೆ > ಬರಿ ಇತ್ಯಾದಿ.

ಕೆಲವೊಂದು ಕ್ರಿಯಾಪದಗಳು ಇನ್ನೊಂದು ಕ್ರಿಯಾಪದದ ಬದಲಾಗಿಯೂ ಬಳಕೆಯಾಗುತ್ತದೆ. ಉದಾ: ‘ತಿನ್ನು’ ಎನ್ನುವ ಪದ ‘ಸೇವಿಸು’ ಎನ್ನುವ ಅರ್ಥದಲ್ಲಿ ಬಳಕೆಯಾಗುವುದರ ಜೊತೆಗೆ ಏಟು ತಿನ್ನು, ಹೊಡೆತ ತಿನ್ನು ಇತ್ಯಾದಿಗಳಲ್ಲಿ ಹೊಡೆಯಿಸಿಕೋ ಎಂಬರ್ಥದಲ್ಲಿ, ಮುಳ್ಯ್ಗು ಎಂಬುದು ನೀರಿನಲ್ಲಿ ಅಡಗುವುದು ಎಂಬಂತೆ ಯೋಚನೆಯಲ್ಲಿ ಮುಳುಗುವುದಕ್ಕೂ ಬಲಕೆಯಾಗುತ್ತದೆ. ಆಡುಮಾತಿನಲ್ಲಿ ವಿವಿಧ ವಲಯಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಒಳಚಲನೆಯೆಂಬುದು ಇದ್ದು. ಇದು ಕ್ರಿಯಾಪದಗಳಲ್ಲೂ ಕಾಣಿಸಿಕೊಳ್ಳುತ್ತದೆ. ಉದಾ ಕುದಿ ಅಡುಗೆಯಲ್ಲಿದ್ದದ್ದು ಭಾವಸೂಚಕವಾಗಿಯೂ (ವ್ಯಕ್ತಿಯ ಮನೋಭಾವ) ಬಳಕೆಯಲ್ಲಿದೆ: ರಕ್ತ ಕುದಿಯುತ್ತಿದೆ. ಆಡುಮಾತಿನಲ್ಲಿ ಬಳಕೆಯಲ್ಲಿರುವ ಸಾಮಾನ್ಯ ಕ್ರಿಯಾಪದಗಳಾದ ಮಾಡು, ಕೊಡು, ಹಾಕು, ನೋಡು, ಇರು, ತಗೋ, ಬರಿ, ಬಾ ಬರು ಕ್ರಿಯಾಪದಗಳು ಬೇರೆಯ ಕ್ರಿಯಾಪದಗಳಿಗೆ ಬದಲಾಗಿ ಬಳಕೆಯಾಗಿ ಬೇರೊಂದು ಅರ್ಥವನ್ನು ನೀಡುತ್ತವೆ ಅಥವಾ ನಿರ್ದಿಷ್ಟ ಪಡಿಸಿದ ಪದಗಳಿಗೆ ಬದಲಾಗಿ ಸಾಮಾನ್ಯ ಪದಗಳನ್ನು ಬಳಸಿ ನಿರ್ದಿಷ್ಟ ಅರ್ಥವನ್ನು ಪಡೆಯಲಾಗುತ್ತದೆ. ಉದಾ:

. ತಗೋ ಎನ್ನುವ ಕ್ರಿಯಾಪದ

೧. ಆ ಚೆಂಡು ತಗೋ, ತೆಗೆದುಕೋ ಎನ್ನುವ ಅರ್ಥ
೨. ನೀನು ಒಂದು ಸೈಟ್ ತಗೋ, ಖರೀದಿಸು ಕೊಂಡುಕೊಳ್ಳು ಎನ್ನುವ ಅರ್ಥ

. ಕೊಡು

೧. ಆ ಪುಸ್ತಕ ಕೊಡು – ಕೊಡು
೨. ಅವನಿಗೆ ಒಂದು ಏಟು ಕೊಡು – ಹೊಡೆ

. ಹಾಕು

೧. ಹಸು ಹೆಣ್ಣು ಕರುವನ್ನು ಹಾಕಿದೆ – ಪ್ರಸವಿಸು
೨. ಅಲ್ಲೊಂದು ಹೂವಿನ ಗಿಡ ಹಾಕು – ನೆಡು

. ಇರು

೧. ನೀನು ಮನೆಯಲ್ಲೇ ಇರು – ಇರು
೨. ಒಂದು ನಿಮಿಷ ಇರು, ಬಂದೆ – ನಿಲ್ಲು / ತಡೆ

. ನೋಡು

೧. ಆ ಬೆಟ್ಟವನ್ನು ನೋಡು – ನೋಡು
೨. ಆ ಕೆಲಸ ಏನಾಯಿತು ನೋಡು – ವಿಚಾರಿಸು / ಗಮನಿಸು

. ಬರೆ/ಬರಿ

೧. ನೀನು ಪಾಠವನ್ನು ಬರಿ – ಬರೆ
೨. ನೀನು ಚಿತ್ರ ಬರಿ – ರಚಿಸು / ಬಡಿಸು

. ಮಾಡು

೧. ನೀನು ಈ ಕೆಲಸ ಮಾಡಿ – ಮಾಡು
೨. ನೀನು ಒಂದು ಗೊಂಬೆ ಮಾಡು – ಸೃಷ್ಟಿಸು / ಕೆತ್ತು/ ರಚಿಸು

. ಬಾ / ಬರು

೧. ಸಕ್ರೆ ನಾಳೆ ಬರುತ್ತಾ? – ಬರುವಕ್ರಿಯೆ
೨. ನಿನಗೆ ಸಂಗೀತ ಬರುತ್ತಾ – ತಿಳಿದಿದೆಯಾ?
೩. ನಿಮ್ಮ ಮನೆ ಎಲ್ಲಿ ಬರುತ್ತೆ – ಇದೆ

ಹಿಂದೆ ಬಳಕೆಯಲ್ಲಿದ್ದ ಅನೇಕ ಕ್ರಿಯಾರೂಪಗಳು ಇಂದು ಮರೆಯಾಗಿದೆ. ನಾಮಪದವೂ ಆಗಿದ್ದ ಎಷ್ಟೋ ಕ್ರಿಯಾಪದಗಳು ಇಂದು ಕೇವಲ ನಾಮವಾಗಿ ಮಾತ್ರ ಉಳಿದಿದೆ ಉದಾ: ಅಚ್ಚು : ಹಿಡಿ, ಹಿಡಿದುಕೋ; ಅಣಿ; ಸಿದ್ಧವಾಗು (ಈಗ ಇದಕ್ಕೆ ಇನ್ನೊಂದು ಕ್ರಿಯಾಪದದ ಸಹಾಯ ಬೇಕು; ಅಣಿಯಾಗು; ಅಣಿಮಾಡು ಇತ್ಯಾದಿ) ಹಾಗೆಯೇ ಅರುಗು = ಪಕ್ಕಕ್ಕೆ ಸರಿ (ಈಗ ಅರುಗಾಗು) ಇತ್ಯಾದಿ. ಈಗ ಯಾರೂ ‘ಅಡು’ವುದಿಲ್ಲ ಅಡುಗೆ ಮಾಡುತ್ತಾರೆ ಇದರ ಕೃದಂತ ರೂಪ ‘ಅಟ್ಟ’ ಮೇಲೆ ಒಲೆ ಉರಿಯಿತು ಗಾದೆಗೆ ಮಾತ್ರ ಸೀಮಿತ. ಹಿಂದೆ ಬಳಕೆಯಾಗುತ್ತಿದ್ದ ಹಲವು ಅರ್ಥಗಳಿಗೆ ಬದಲಾಗಿ ಸೀಮಿತಾರ್ಥ ಬರುತ್ತಿದೆ. ಅದುರು = ಒಣಗು ಎಂಬ ಅರ್ಥ ಈಗ ಇಲ್ಲ.

ಕ್ರಿಯಾಪದಗಳಲ್ಲಿ ಪರ್ಯಾಯ ರೂಪಗಳಿರುವ ಕ್ರಿಯಾಪದಗಳೂ ಇವೆ. ಉದಾ: ಅದಿರು – ಅದುರು; ಅಮುಕು – ಅವುಕು; ಮಡಿಸು – ಮಡಿಚು ಈಜು – ಈಸು ಇತ್ಯಾದಿ.

ಕೆಲವೊಂದು ಕ್ರಿಯಾಪದಗಳ ಬಳಕೆ ಹೆಚ್ಚಾಗಿದ್ದರೆ ಕೆಲವು ತೀರಾ ಕಡಿಮೆ. ಉದಾ: ಹಾಕು ಕ್ರಿಯಾಪದ ಇನ್ನೊಂದು ನಾಮಪದದೊಡನೆ ಬಳಕೆಯಾಗಿ ಅನೇಕ ಅರ್ಥಗಳನ್ನು ನೀಡುತ್ತದೆ. ಉದಾ: ನೀರು ಹಾಕು (ಸುರಿ); ಬಾಗಿಲು ಹಾಕು (ಮುಚ್ಚು) ಬಟ್ಟೆ ಹಾಕು (ತೊಡಿಸು); ಏಟು ಹಾಕು – (ಹೊಡೆ); ಅರ್ಜಿ ಹಾಕು (ಸಲ್ಲಿಸು) ಹೀಗೆ ಅನೇಕ ಅರ್ಥಗಳಲ್ಲಿ ಬಳಕೆಯಾಗುತ್ತವೆ.

ಹಾಕು ಎಂಬ ಪದ ಎಷ್ಟೋ ವೇಳೆ ಅರ್ಥಹೊಂದಿರದೆ ಸಹಾಯಕ ಕ್ರಿಯಾಪದ ವಾಗಿಯೂ ಬರುತ್ತವೆ. ಉದಾ : ಇಲಿಗಳು ಧಾನ್ಯವನ್ನೆಲ್ಲ ‘ತಿಂದು ಹಾಕಿವೆ’ ಎನ್ನುವಲ್ಲಿ ‘ತಿಂದಿವೆ’ ಎಂಬರ್ಥವೇ ಇರುವುದು. ಅದೇ ರೀತಿಯಲ್ಲಿ ‘ಎಂಟರಲ್ಲಿ ಮೂರನ್ನು ತೆಗೆದುಹಾಕು’ ಎಂಬಲ್ಲಿ ‘ತೆಗೆ’ ಎಂಬರ್ಥವಷ್ಟೇ ಇದ್ದು ‘ಹಾಕು’ ಸುಮ್ಮನೆ ಸೇರಿದೆ. ‘ಈ ವಿಷಯವನ್ನು ಅವನ ಕಿವಿಗೆ ಹಾಕು’ ಎಂಬಲ್ಲಿ ‘ತಿಳಿಯುವಂತೆ ಮಾಡಿ’ ; ‘ಅಲ್ಲೇ ಟೆಂಟ್ ಹಾಕಿದ್ದಾನೆ’ ಎಂಬಲ್ಲಿ ‘ನೆಲೆಸು’ ಎಂದು ವಾಚ್ಯಾರ್ಥವಿಲ್ಲದ ಬೇರೊಂದು ಅರ್ಥ ಬರುತ್ತದೆ.

ಈಗಾಗಲೇ ಹೇಳಿದಂತೆ ಕನ್ನಡದ ಕ್ರಿಯಾಪದಗಳನ್ನು ಧಾತುಗಳು ಮತ್ತು ಕ್ರಿಯಾಪದಗಳೆಂದು ವಿಂಗಡಿಸಬಹುದು. ಧಾರುಗಳು ಪ್ರತ್ಯಯರಹಿತವಾಗಿಯೂ, ಪ್ರತ್ಯಯ ಸಹಿತವಾಗಿಯೂ ಇರುತ್ತವೆ. ಪ್ರತ್ಯಯರಹಿತವಾದ ರಚನೆಯಿರುವ ಧಾತುಗಳನ್ನು ಸಹಜ ಅಥವಾ ಮೂಲಧಾತುಗಳೆಂದು, ಪ್ರತ್ಯಯಸಹಿತವಾದ ಧಾತುಗಳನ್ನು ಸಾಧಿತಧಾತುಗಳೆಂದು ಕರೆಯಲಾಗುತ್ತದೆ. ಕ್ರಿಯಾಪದಗಳು ಕಾಲವಾಚಕ ಪ್ರತ್ಯಯಗಳನ್ನು, ಅಖ್ಯಾತಪ್ರತ್ಯಯ (ಲಿಂಗ, ವಚನ, ಪುರುಷ)ಗಳನ್ನು ಹೊಂದಿರುತ್ತದೆ. ಅಲ್ಲದೆ ಅವು ವಿವಿಧ ಅರ್ಥಗಳಲ್ಲಿ ಬಳಕೆಯಾಗುತ್ತವೆ.

ಕ್ರಿಯಾರೂಪಗಳನ್ನು, ರಚನೆಯನ್ನು ಆಧರಿಸಿ, ಬಳಕೆಯನ್ನು ಆಧರಿಸಿ ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ರಚನೆಯನ್ನಾಧರಿಸಿ ಏಕಾಕ್ಷರ, ದ್ವಯಕ್ಷರ, ತ್ರಯಕ್ಷರ ಎಂಬುದಾಗಿ ಅಕ್ಷರಗಳನ್ನಾಧರಿಸಿದ ಧಾತುಗಳು, ಇ, ಉ, ಎ, ಎಂಬ ಅಂತ್ಯಸ್ವರವುಳ್ಳ ಧಾತುಗಳು, ಅನುಸ್ವಾರಯುಕ್ತ, ಒತ್ತಕ್ಷರಯುಕ್ತ ಧಾತುಗಳು ಎಂಬುದಾಗಿಯೂ ವಿಂಗಡಿಸಬಹುದು. ಹಾಗೆಯೇ ಮೂರು ಮುಖ್ಯ ವಿಧಗಳಾಗಿ ಸಹಜ, ಸಾಧಿತ ಮತ್ತು ಸಂಯುಕ್ತ ಎಂದೂ ವಿಂಗಡಣೆ ಮಾಡುವುದಿದೆ. ಇವುಗಳನ್ನು ಡಿ.ಎನ್. ಶಂಕರಭಟ್ಟರು ಆಂತರಿಕ ರಚನೆಯಿಲ್ಲದ (ಸಹಜ), ಆಂತರಿಕ ರಚನೆಯಿರುವ (ಸಾಧಿತ, ಸಂಯುಕ್ತ) ಎಂಬುದಾಗಿ ಪರಿಗಳಿಸುತ್ತಾರೆ. (ಕನ್ನಡ ಶಬ್ದರಚನೆ ಪು. ೧೩೪)

ಸಾಧಿತ ಧಾತುಗಳಲ್ಲಿ (ಇಸುವಿನೊಡನಿರುವ) ಸಾಮಾನ್ಯ, ಪ್ರೇರಣಾರ್ಥಕ ಎಂದು ಎರಡು ವಿಧಗಳು. ಸಾಮಾನ್ಯ ರೂಪಗಳಲ್ಲಿ ಇಸು, ಪಡು, ಕೊಳ್ಳು ರೆಂಬ ಕ್ರಿಯಾ ಸಾಧಕ ಪ್ರತ್ಯಯ / ನಾಮಪ್ರಕೃತಿಯಿಂದಾದ ಧಾತು ಹಾಗೂ ಪದವಾಗಲೀ ಬಂದು ಕ್ರಿಯಾಧಾತುಗಳ ರಚನೆಯಾಗುತ್ತವೆ. ಪ್ರೇರಣಾರ್ಥಕ ರೂಪಗಳಲ್ಲಿ ‘ಇಸು’ ಕ್ರಿಯಾಸಾಧಕ ಪ್ರತ್ಯಯ ಬಂದು ಪ್ರೇರಣಾರ್ಥಕ ರೂಪಗಳಾಗುತ್ತವೆ. ‘ತಾಯಿ ಮಗುವಿಗೆ ಹಾಲು ಕುಡಿಸಿದಳು’ ಎಂಬಲ್ಲಿನ ಕ್ರಿಯಾಪದ ಇನ್ನೊಬ್ಬರ ಪ್ರೇರಣೆಯಿಂದ ಕೆಲಸವಾದುದನ್ನು ಸೂಚಿಸುತ್ತದೆ. ಅಂದರೆ ಇಲ್ಲಿ ಇಬ್ಬರು ಕರ್ತೃಗಳು ಇರುತ್ತಾರೆ. ತಾಯಿ ಪ್ರೇರಣಾರ್ಥಕ ಕರ್ತೃ, ಮಗು ಪ್ರೇರ್ಯ ಕರ್ತೃ ಪ್ರೇರಣಾರ್ಥದಲ್ಲಿ ಎಲ್ಲ ಧಾತುಗಳ ಮೇಲೂ ಸಾಮಾನ್ಯವಾಗಿ ‘ಇಸು’ ಬರುತ್ತದೆ.

ಸಂಯುಕ್ತ ಕ್ರಿಯಾಪದಗಳಲ್ಲಿ ಎರಡು ಅಥವಾ ಹಲವುಧಾತುಗಳ ಬೇರೆ ಬೇರೆ ಕ್ರಿಯಾರೂಪಗಳು ಒಟ್ಟುಸೇರಿರುತ್ತವೆ. ಇವುಗಳಲ್ಲಿ ಒಂದು ಸಾಪೇಕ್ಷ ಕ್ರಿಯಾರೂಪ ಒಂದು ಪೂರ್ಣಕ್ರಿಯಾಪದವಿರುತ್ತವೆ. ಎರಡೂ ಒಟ್ಟಿಗೆ ಸೇರಿ ಸಂಯುಕ್ತ ಕ್ರಿಯಾಪದ ರೂಪುಗೊಳ್ಳುತ್ತದೆ. ಇನ್ನೊಂದು ಮಾದರಿಯಲ್ಲಿ ಧಾತುವಿನ ಭಾವಾರ್ಥರೂಪದ ಮುಂದೆ ಕೆಲವು ಕ್ರಿಯಾರ್ಥಕ (ಬೇಕು, ಸಾಕು, ತಕ್ಕದ್ದು, ಬಾರದು ಬೇಡ ಇತ್ಯಾದಿ) ಪದಗಳನ್ನು ಸೇರಿಸಿ ವಿವಿಧ ಅರ್ಥಗಳ ಸಂಯುಕ್ತ ಕ್ರಿಯಾಪದಗಳನ್ನು ರಚಿಸಲಾಗುತ್ತದೆ.

ಕ್ರಿಯಾರಚನೆಗಳನ್ನು ಮತ್ತೂ ಹಲವು ವಿಧಗಳಲ್ಲಿ ವಿಂಗಡಿಸಬಹುದು. ಅವು ಪೂರ್ಣ ಕ್ರಿಯಾಪದ, ಅಪೂರ್ಣ ಕ್ರಿಯಾಪದ ಅಥವಾ ಕ್ರಿಯಾಪದಗಳು ಎಂದು ವಿಂಗಡಿಸಬಹುದು. ಪೂರ್ಣ ಕ್ರಿಯಾಪದಗಳಲ್ಲಿನ ಧಾತುವಿಗೂ ಅಖ್ಯಾತಪ್ರತ್ಯಯಕ್ಕೂ ನಡುವೆ ಬರುವ ಕಾಲಸೂಚನೆಯನ್ನು ಗಮನಿಸಿ ಮೂರು ಬಗೆಯಲ್ಲಿ ವರ್ಗೀಕರಿಸುವುದು ಇದೆ. ಅವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ ಕ್ರಿಯಾಪದಗಳು, ಹಾಗೆಯೇ ಕ್ರಿಯಾರಚನೆಗಳು ಸೂಚಿಸುವ ವಿವಿಧ ಅರ್ಥಗಳ ಆಧಾರದ ಮೇಲೆ ಅವುಗಳನ್ನು ವಿಧ್ಯರ್ಥ, ನಿಷೇಧಾರ್ಥ ಮತ್ತು ಸಂಭಾವನಾರ್ಥ ಎಂದು ಮೂರು ಪ್ರಕಾರಗಳಲ್ಲಿ ವಿಂಗಡಿಸಬಹುದು. ಅಪೂರ್ಣ ಅಥವಾ ಸ್ದಾಪೇಕ್ಷ ಕ್ರಿಯಾರೂಪಗಳಲ್ಲಿ ಏಕಕರ್ತೃಕ, ಭಿನ್ನಕರ್ತೃಗಳೆಂದು ಎರಡು ಬಗೆಯನ್ನು ಕಾಣಬಹುದು. ಇಸು ಪ್ರತ್ಯಯವನ್ನು೮ ಹೊಂದಿ ಧಾತುವಾದ ಶಬ್ದಗಳಲ್ಲಿಯೂ ಸ್ವಯಂ ಕರ್ತೃಕಾರ್ಥ, ಹೇತು ಕರ್ತೃಕಾರ್ಥ, ಭಿನ್ನ ಕರ್ತೃಕಾರ್ಥ ಎಂಬ ವಿಂಗಡಣೆಯನ್ನು ಮಾಡಬಹುದು. ಸಾಪೇಕ್ಷ ಕ್ರಿಯಾರೂಪಗಳಲ್ಲೂ ಒಳವಿಂಗಡಣೆ ಇದೆ. ಅವು ಕಾಲವನ್ನು ಮತ್ತು ಅರ್ಥವನ್ನು ಅನುಸರಿಸಿ ರೂಪುಗೊಳ್ಳುತ್ತವೆ. ವರ್ತಮಾನನ್ಯೂನ, ಭೂತನ್ಯೂನ, ನಿಷೇಧಾರ್ಥನ್ಯೂನ, ಪಕ್ಷಾರ್ಥ ಮತ್ತು ಭಾವಾರ್ಥ ಎಂಬುವೇ ಆ ಬಗೆಗಳು.

ಕ್ರಿಯಾಪದದ ಭೂತಕಾಲದ ಸ್ವರೂಪದಲ್ಲಾಗುವ ಬದಲಾವಣೆಯನ್ನು ಗಮನಿಸಿ ಕ್ರಿಯಾಪದಗಳನ್ನು ಮತ್ತೂ ವರ್ಗೀಕರಿಸಬಹುದು ಭೂತಕಾಲದ ಪ್ರತ್ಯಯ ‘ದ’. ಆದರೆ ಇದು ಎಲ್ಲ ಕ್ರಿಯಾಪದಗಳಲ್ಲಿಯೂ ಒಂದೇ ತೆರನಾಗಿರುವುದಿಲ್ಲ. ಬೇರೆ ಬೇರೆ ಆಗಮಗಳನ್ನು ಪಡೆಯುತ್ತದೆ. ಇವುಗಳು ಭೂತಕಾಲ ಪಡೆದಾಗ ಆಗುವ ಬದಲಾವಣೆಗಳನ್ನು ಗಮನಿಸಿ ರೂಪಬದಲಾವಣೆ ಹೊಂದುವ ಮತ್ತು ರೂಪಬದಲಾವಣೆ ಹೊಂದದ ಎಂದು ಎರಡು ರೀತಿಯಲ್ಲಿ ವರ್ಗೀಕರಿಸಬಹುದು. ಎಸ್.ಎಸ್. ಅಂಗಡಿಯವರು ಇದನ್ನು ೧. ಕ್ರಿಯಾಪದ ವಿಕಾರ ಹೊಂದುವ ಭೂತಕಾಲ ಧಾತುಗಳು ೨. ಕ್ರಿಯಾಪದ ವಿಕಾರ ಹೊಂದದ ಭೂತಕಾಲದ ಧಾತುಗಳು ಎಂದು ವರ್ಗೀಕರಿಸುತ್ತಾರೆ. (ಕನ್ನಡ ಕ್ರಿಯಾರೂಪಗಳು ಪು. ೫)

ಇದೇ ಮಾದರಿಯ ಮತ್ತೊಂದು ಅಧ್ಯಯನದಲ್ಲಿ ಕೆ. ಕುಶಾಲಪ್ಪಗೌಡರು ನಾಲ್ಕು ರೀತಿಯಲ್ಲಿ ವರ್ಗೀಕರಿಸುತ್ತಾರೆ. ಇವುಗಳ ಒಳಗೂ ಪ್ರತಿಯೊಂದರಲ್ಲೂ ವರ್ಗೀಕರಣವನ್ನು ಮಾಡಲಾಗಿದೆ. (ಕನ್ನಡ ಸಂಕ್ಷಿಪ್ತ ವ್ಯಾಕರಣ ಪು. ೬೪ – ೮೪)

ಬಳಕೆಯನ್ನಾಧರಿಸಿಯೂ ಕ್ರಿಯಾಪದಗಳನ್ನು ಅನೇಕ ರೀತಿಯಲ್ಲಿ ವರ್ಗೀಕರಿಸುವುದುಂಟು. ಅವು ವಾಕ್ಯದಲ್ಲಿ ಕರ್ಮಪದವನ್ನು ಅಪೇಕ್ಷಿಸುವುದಾದರೆ ಸಕರ್ಮಕವೆಂದೂ, ಅಪೇಕ್ಷಿಸದಿದ್ದರೆ ಅಕರ್ಮಕ ಎಂದು ವಿಂಗಡಿಸಲಾಗುತ್ತದೆ. ಡಿ.ಎನ್. ಶಂಕರಭಟ್ಟರು ವಾಕ್ಯದಲ್ಲಿ ಬರುವ ಮುಖ್ಯ ಘಟಕಗಳನ್ನು ಆಧರಿಸಿ ಕ್ರಿಯಾಪದಗಳನ್ನು ಐದು ರೀತಿಯಲ್ಲಿ ವರ್ಗೀಕರಿಸುತ್ತಾರೆ. ಇವರು ಹೇಳುವ ನಿಯೋಗಿಯುಕ್ತ ಮತ್ತು ನಿಯೋಗಿವಿರಹಿತ ವರ್ಗೀಕರಣ ಕ್ರಮವಾಗಿ ಸಕರ್ಮಕ ಮತ್ತು ಅಕರ್ಮಕವನ್ನು ಹೋಲುತ್ತದೆ.

ಇಷ್ಟೇ ಅಲ್ಲದೆ ಧಾತುಗಳೇ ನಾಮಪದಗಳೂ ಆಗಿರುವ ವರ್ಗವೊಂದಿದೆ. ಅವು ಕ್ರಿಯಾಪದವೂ, ಹೌದು, ನಾಮಪದವೂ ಹೌದು. ಹಾಗಾಗಿ ಇವುಗಳನ್ನು ನಾಮಪದ ರೂಪವಿರುವ, ನಾಮಪದರೂರವಿರದ ಎಂಬ ಎರಡು ವರ್ಗಗಳಲ್ಲಿ ಕಾಣಬಹುದು.

ಕ್ರಿಯಾಪದಗಳನ್ನು ಅವುಗಳ ಉದ್ದೇಶದ ಆಧಾರದ ಮೇಲೂ ವರ್ಗೀಕರಿಸಿರುವುದು ಉಂಟು. ಆರ್. ಸಿಯರ್ಲ್ ಎಂಬುವರು ಐದು ಬಗೆಗಳಲ್ಲಿ ಇವುಗಳನ್ನು ವರ್ಗೀಕರಿ ಸಿರುವುದನ್ನು ಕೆ.ವಿ. ನಾರಾಯಣರವರು ಗುರುತಿಸುತ್ತಾರೆ. (ಭಾಷೆ : ವಿಶ್ವಕೋಶ ಪು. ೧೩೫) ಇವುಗಳು ಒಪ್ಪಿತಗಳು, ಸೂಚಕಗಳು ಆಣೆಗಳು, ಭಾವವಾಚಿ ಮತ್ತು ಘೋಷಣೆ.

ಮೇಲಿನ ವಿಂಗಡಣೆಗಳಲ್ಲದೆ ವಿರುದ್ದಾರ್ಥವಿರುವ ಕ್ರಿಯಾಪದ, ವಿರುದ್ಧಾರ್ಥಗಳಿಲ್ಲದ ಕ್ರಿಯಾಪದ (ಹೋಗು – ಬಾ ಏರು-ಇಳಿ, ಹತ್ತು-ಇಳಿ, ನಗು-ಅಳು, ತೆಗೆ-ಮುಚ್ಚು ಇತ್ಯಾದಿ); ಮೂರ್ತ (ಓಡು, ನೆಗೆ, ತಿನ್ನು, ಕುಡಿ ಇತ್ಯಾದಿ) ಅಮೂರ್ತ (ತಿಳಿ, ಬಗೆ, ಕೆಣಕು, ಚಿಂತಿಸು ಇತ್ಯಾದಿ); ನುಡಿಗಟ್ಟಿನ ರೂಪದ ಕ್ರಿಯಾಧಾತು (ತಲೆತಿನ್ನು, ಕಿವಿಕಚ್ಚು, ಹೊಟ್ಟೆ ಹೊರೆ ಇತ್ಯಾದಿ), ಹೀಗೆ ಕ್ರಿಯಾಪದಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಿಸಬಹುದು.

ಪ್ರಸ್ತುತ ಕೃತಿ ಈ ಎಲ್ಲ ಮಾದರಿಗಳ ಬಗೆಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತದೆ.

ಕ್ರಿಯಾಪದಗಳನ್ನು ಕುರಿತ ಅಧ್ಯಯನಗಳು ಕೇಶಿರಾಜನಿಂದ ಆರಂಭವಾಗುತ್ತದೆ. ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಾದ ಧಾತುಗಳನ್ನು ತನ್ನ ಕೃತಿ ಶಬ್ದಮಣಿದರ್ಪಣದಲ್ಲಿ ಕಲೆಹಾಕಿದ್ದಾನೆ. ನಂತರದಲ್ಲಿ ವ್ಯಾಕರಣ ಕೃತಿಗಳಲ್ಲಿ ಕ್ರಿಯಾಪದಗಳನ್ನು ಪರಿಚಯಿಸುವ ಕೆಲಸ ಆಗಿದೆ. ಭಾಷೆಯ ಇತಿಹಾಸ ಕುರಿತ ಪ್ರ.ಗೋ. ಕುಲಕರ್ಣಿಯವರ ‘ಕನ್ನಡ ಭಾಷೆಯ ಚರಿತ್ರೆ’ (೧೯೬೭)ಯಲ್ಲಿಯೂ ಧಾತುಗಳ ಕುರಿತ ಮಾಹಿತಿಯಿದೆ. ಡಿ.ಎನ್. ಶಂಕತಭಟ್ಟರ ‘ಕನ್ನಡ ವಾಕ್ಯಗಳು’ ಕೃತಿಯಲ್ಲಿ ವಿವಿಧ ವಾಕ್ಯ ಮಾದರಿಗಳನ್ನು ಪರಿಚಯಿಸುವಾಗ ‘ಕ್ರಿಯಾಪದಗಳ ವಿಭಜನೆ’ ಯನ್ನು ವಾಕ್ಯಗಳಲ್ಲಿಬರುವ ವಿವಿಧ ಘಟಕಗಳ ಆಧಾರದ ಮೇಲೆ ಮಾಡಲಾಗಿದೆ. ಎಸ್.ಎಸ್. ಅಂಗಡಿಯವರು ‘ಕನ್ನಡ ಕ್ರಿಯಾರೂಪಗಳು’ (೨೦೦೦) ಎಂಬ ಕೃತಿಯನ್ನು ಭ. ಕೃಷ್ಣಮೂರ್ತಿಯವರ ‘ತೆಲುಗು ವರ್ಬಲ್ ಬೇಸಸ್’ (೧೯೬೧) ನ ಮಾದರಿಯಲ್ಲಿ ರಚಿಸಿದ್ದಾರೆ. ಕೋಶ ರಚನೆಯ ಶಾಸ್ತ್ರೀಯ ಚೌಕಟ್ಟಿನಲ್ಲಿ ರಚನೆಯಾಗಿರುವ ಈ ಕೃತಿಯಲ್ಲಿ ಶಿಷ್ಟಕನ್ನಡದಲ್ಲಿ ಬಳಕೆಯಾದ ಶಬ್ದ, ಅರ್ಥ, ದ್ರಾವಿಡ ಭಾಷೆಗಳ ಜ್ಞಾತಿರೂಪಗಳು ಒಳಗೊಂಡಿದೆ. ಅನುಬಂಧದಲ್ಲಿ ಶಬ್ದಮಣಿದರ್ಪಣದಲ್ಲಿನ ಕ್ರಿಯಾರೂಪಗಳು ಮತ್ತು ಕನ್ನಡದ ಪ್ರಾಚೀನ ಮತ್ತು ಆಧುನಿಕ ಕ್ರಿಯಾರೂಪಗಳನ್ನು ನೀಡಲಾಗಿದೆ. ಕುಶಾಲಪ್ಪಗೌಡರು ಕನ್ನಡ ಸಂಕ್ಷಿಪ್ತ ವ್ಯಾಕರಣ (ಪ್ರ. ಕನ್ನಡ ವಿಶ್ವವಿದ್ಯಾಲಯ, ಹಂಪಿ) ಎಂಬ ಕೃತಿಯಲ್ಲಿ ಕ್ರಿಯಾಪದಗಳ ವಿಭಜನೆಯನ್ನು ಭಾಷಾವಿಜ್ಞಾನದ ಹಿನ್ನೆಲೆಯಲ್ಲಿ ಮಾಡಿದ್ದಾರೆ.

ಪ್ರಸ್ತುತ ಕೃತಿಯು ಕನ್ನಡದ ಕ್ರಿಯಾರೂಪಗಳ ವರ್ಗೀಕರಣವನ್ನು ಪರಿಚಯಿಸುವ, ವಿವರಿಸುವ ಕೆಲಸ ಮಾಡುತ್ತದೆ. ವ್ಯಾಕರಣಗ್ರಂಥಗಳು ಮುಖ್ಯವಾಗಿ ನೀಡುವ ವರ್ಗೀಕರಣವಲ್ಲದೆ, ವಿವಿಧ ವಿದ್ವಾಂಸರು ಮಾಡಿರುವ ವರ್ಗೀಕರಣವನ್ನು ಒಳಗೊಂಡಿದೆ. ಇವಲ್ಲದೆ ಕ್ರಿಯಾಪದಗಳನ್ನು ಇನ್ನೂ ಅನೇಕ ರೀತಿಯಲ್ಲಿ ವಿಂಗಡಿಸಬಹುದು. ಪೂರಕ ಕ್ರಿಯಾಪದಗಳು, ಅಂದರೆ, ಇಂದಕ್ಕೊಂದು ಪೂರಕವಾಗಿ ಬರುವಂತಹದ್ದು. ಉದಾ: ಹೊತ್ತು ಹೆತ್ತು; ಸಾಕಿ ಸಲಹು; ಕಾಯಿಸಿ ಬೇಯಿಸಿ; ತಿಂದು ತೇಗು, ನುಂಗಿನೋಣೆ, ಇತ್ಯಾದಿ. ಇವು ಸಾಪೇಕ್ಷ ಕ್ರಿಯಾರೂಪಗಳ ಅಡಿಯಲ್ಲಿ ಬಂದರೂ ಇವುಗಳ ನಡೆ ಬೇರೆ ರೀತಿಯದೇ ಆಗಿದೆ. ಅಲ್ಲದೆ ಎರಡು ಕ್ರಿಯಾಪದಗಳ ಸಾಪೇಕ್ಷೆರೂಪಗಳನ್ನು ದ್ವಿರುಕ್ತಿಯಾಗಿಯೂ ಬಳಸುವುದು ಇದೆ. ಕೂಗಿ ಕೂಗಿ ಸಾಕಾಯಿತು; ಬರೆದೂ ಬರೆದೂ ಕೈ ಸೋತಿತು, ತಿಂದು ತಿಂದು ಕೊಬ್ಬಿವೆ ಇತ್ಯಾದಿ.