.... ಕೊಳ್ಳು ಬಳಕೆ

೩. ಕೊಳ್ಳು ಎಂಬ ರೂಪ ಸಹಾಯಕ ಕ್ರಿಯಾಪದದಂತೆ ಇನ್ನೊಂದು ನಾಮಕ್ರಿಯಾಪದದೊಡನೆ ಬಂದು ಸಾಧಿತ ಧಾತುವಾಗುತ್ತದೆ. ಕ್ರಿಯಾಪದದೊಡನೆ ಸೇರುವಾಗ ಕ್ರಿಯಾಪದದ ಭೂತನ್ಯೂನ ರೂಪಕ್ಕೆ ಸೇರಿದರೆ (ಮಾಡಿಕೊಳ್ಳು) ನಾಮಪದದೊಡನೆ ನೇರವಾಗಿ ಸೇರಿ (ಆರಂಭಗೊಳ್ಳು) ಬಳಕೆಯಾಗುತ್ತದೆ. ಹೀಗೆ ಬಳಕೆಯಾಗುವ ಕ್ರಿಯಾಧಾತುಗಳ ಉದಾಹರಣೆಗಳನ್ನು ಕೆಳಗೆ ನೀಡಲಾಗಿದೆ. ಕನ್ನಡದ ಬಹುತೇಕ ಕ್ರಿಯಾಪದಗಳಿಗೆ ಕೊಳ್ಳು ಸೇರಿ ಸಾಧಿತ ರೂಪಗಳನ್ನು ಪಡೆಯಬಹುದು.

ಅಂಟಿಕೊಳ್ಳು ತಾಳಿಕೊಳ್ಳು
ಅಂದುಕೊಳ್ಳು ತಿಂದುಕೊಳ್ಳು
ಅಡಗಿಕೊಳ್ಳು ತಿಳಿದುಕೊಳ್ಳು
ಉಟ್ಟುಕೊಳ್ಳು ತೀಡಿಕೊಳ್ಳು
ಉಳಿದುಕೊಳ್ಳು ತುಂಬಿಕೊಳ್ಳು
ಇಳಿದುಕೊಳ್ಳು ತೂಗಿಕೊಳ್ಳು
ಈಸಿಕೊಳ್ಳು ತೊಳೆದುಕೊಳ್ಳು
ಊದಿಕೊಳ್ಳು ದೂರಿಕೊಳ್ಳು
ಎತ್ತಿಕೊಳ್ಳು ನಂಜಿಕೊಳ್ಳು
ಒಗೆದುಕೊಳ್ಳು ನಡೆದುಕೊಳ್ಳು
ಒಡೆದುಕೊಳ್ಳು ನಿಂತುಕೊಳ್ಳು
ಒಣಗಿಕೊಳ್ಳು ನೋಡಿಕೊಳ್ಳು
ಒದರಿಕೊಳ್ಳು ಹತ್ತಿಕೊಳ್ಳು
ಕಚ್ಚಿಕೊಳ್ಳು ಹೊತ್ತಿಕೊಳ್ಳು
ಕರೆದುಕೊಳ್ಳು ಬಗ್ಗಿಕೊಳ್ಳು
ಕಸಿದುಕೊಳ್ಳು ಬರೆದುಕೊಳ್ಳು
ಕಂಡುಕೊಳ್ಳು ಬಳಸಿಕೊಳ್ಳು
ಕಿತ್ತುಕೊಳ್ಳು ಬಳಿದುಕೊಳ್ಳು
ಓದಿಕೊಳ್ಳು ಬಾಡಿಕೊಳ್ಳು
ಹೂಡಿಕೊಳ್ಳು ಬಿದ್ದುಕೊಳ್ಳು
ಕೇಳಿಕೊಳ್ಳು ಮಲಗಿಕೊಳ್ಳು
ಪಡೆದುಕೊಳ್ಳು ಮಾರಿಕೊಳ್ಳು
ಗೊಣಗಿಕೊಳ್ಳು ಮುಚ್ಚಿಕೊಳ್ಳು
ಗೆದ್ದುಕೊಳ್ಳು ಹಾಡಿಕೊಳ್ಳು
ತಬ್ಬಿಕೊಳ್ಳು ಸುರಿದುಕೊಳ್ಳು
ತರಚಿಕೊಳ್ಳು ಸೇರಿಕೊಳ್ಳು

ಇವು ಕ್ರಿಯಾಪದಗಳಿಗೆ ಸೇರಿದ ಉದಾಹರಣೆಗಳು ಅಲ್ಲದೆ ಈ ಕೊಳ್ಳು ಎಂಬುದರ ಭೂತಕಾಲ ರೂಪವನ್ನು ಸಾಧಿತ ಕ್ರಿಯಾರೂಪಗಳಲ್ಲೂ ಬಳಸಬಹುದು. ಉದಾ ಕಾಣಿಸಿ ಕೊಂಡಿತು. ಬರೆಯಿಸಿಕೊಂಡರು, ತೋರಿಸಿಕೊಂಡರು ಇತ್ಯಾದಿ. ನಾಮಪದಗಳೊಂದಿಗೆ ‘ಗೊಳ್ಳು’ ಎಂಬುದಾಗಿ ಬಂದು ಇದೇ ರೀತಿಯಲ್ಲಿ ಬಳಕೆಯಾಗುವುದು. ಉದಾ:

ಸಂತೋಷಗೊಳ್ಳು ಆರಂಭಗೊಳ್ಳು ಪೂರ್ಣಗೊಳ್ಳು
ಅಂತ್ಯಗೊಳ್ಳು ಸ್ಥಿರಗೊಳ್ಳು ಪ್ರಕಟಗೊಳ್ಳು
ಉಲ್ಲೇಖಗೊಳ್ಳು ಸ್ಥಾಪನೆಗೊಳ್ಳು ವ್ಯತ್ಯಾಸಗೊಳ್ಳು
ಉದ್ವೇಗಗೊಳ್ಳು ಆವೇಶಗೊಳ್ಳು ಸಾಕಾರಗೊಳ್ಳು
ಸಂವಹನಗೊಳ್ಳು ಒಳಗೊಳ್ಳು

ಅಲ್ಲದೆ ಇದರೊಡನೆ ‘ಇಸು’ ಪ್ರತ್ಯಯ ಸೇರಿ ಮತ್ತೊಂದು ಕ್ರಿಯಾಧಾತುವಿನ ರಚನೆಯನ್ನು ಮಾಡಬಹುದು. ಉದಾ: ಮುಕ್ತಗೊಳಿಸು; ಬಿಗಿಗೊಳಿಸು ಇತ್ಯಾದಿ

.... ‘ಪಡುಬಳಕೆ

೪. ಪಡುಎಂಬುದು ಕ್ರಿಯಾಸಾಧಕ ಪ್ರತ್ಯಯದಂತೆ ಕೆಲಸಮಾಡುತ್ತದೆ. ಇದು ನಾಮ ಪ್ರಕೃತಿಯಿಂದ ಆದ ಧಾತು. ಇದನ್ನು ನಾಮಪದಕ್ಕೆ ಸೇರಿರುವುದರ ಮೂಲಕ ಸಾಧಿತ ಧಾತುವನ್ನು ಪಡೆಯಬಹುದು. ಇದು ಕೆಲವು ವೇಳೆ ‘ಇಸು’ ವಿನ ರೀತಿಯಲ್ಲಿ ವರ್ತಿಸುತ್ತದೆ. ಇದರ ಭೂತಕಾಲರೂಪದ ಬಳಕೆಯೂ ಉಂಟು (ಪಡು > ಪಟ್ಟ) ಸಂತೋಷಪಟ್ಟ ಇತ್ಯಾದಿ. ಆದರೆ ಇದರ ಬಳಕೆ ಹೆಚ್ಚೇನೂ ಇಲ್ಲ.

ಸುಖಪಡು ಆಶ್ಚರ್ಯಪಡು
ಕಷ್ಟಪಡು ಬೇಸರಪಡು
ಶ್ರಮಪಡು ಬೇರ್ಪಡು
ಒಳಪಡು ತೃಪ್ತಿಪಡು
ಸಂತಸಪಡು ದುಃಖಪಡು
ಅಭಿಪ್ರಾಯಪಡು ದೃಢಪಡು
ಭಯಪಡು ಆನಂದಪಡು

ಅಲ್ಲದೆ ಇದು ‘ಇಸು’ ಎಂಬ ಪ್ರತ್ಯಯವನ್ನು ಪಡೆದುಕೊಂಡು ಮತ್ತೊಂದು ಧಾತುವಿಗೂ ಕಾರಣವಾಗುತ್ತದೆ. ಉದಾ: ಸಂತೋಷಪಡಿಸು. ತೃಪ್ತಿಪಡಿಸು ಇತ್ಯಾದಿ. ‘ಪಡು’ ಎಂಬುದು ಬಹುತೇಕ ಮಾನಸಿಕ ಅವಸ್ಥೆಗಳಿಗೆ ಸಂಬಂಧಿಸಿದ ಪದಗಳೊಂದಿಗೆ ಬರುತ್ತದೆ. ಸಂಸ್ಕೃತ ಹಾಗೂ ಕನ್ನಡ ರೂಪಗಳೊಂದಿಗೆ ಬರುವ ಇದು ಒಂದೇ ರೀತಿಯ ಅರ್ಥವನ್ನೇನೂ ನೀಡುವುದಿಲ್ಲ.

ಕೆಲವು ಪದಗಳಲ್ಲಿ ಇದು ಹೊಂದು. ಅನುಭವಿಸು ಎಂಬರ್ಥ ನೀಡಿದರೆ ಕಷ್ಟಪಡು, ಶ್ರಮಪಡು, ಒಳಪಡು, ಬೇರ್ಪಡು ಎಂಬುದರಲ್ಲಿ ಆ ಅರ್ಥವಿಲ್ಲ. ‘ಅವನು ಕಷ್ಟ ಪಡುತ್ತಾನೆ’ ಎಂದಾಗ ಇದು ಶ್ರಮವಹಿಸುತ್ತಾನೆ ಎಂದರ್ಥ ನೀಡುತ್ತದೆ. ಶರತ್ತಿಗೆ ಒಳಪಡುತ್ತದೆ. ಎಂದಾಗ ಇಲ್ಲಿ ಅಧೀನವಾಗಿರುತ್ತದೆ ಎಂಬರ್ಥವೂ, ಬೇರ್ಪಡು ಎಂಬಲ್ಲಿ ಬೇರೆಯಾಗು ಎಂಬರ್ಥವೂ ಬರುತ್ತದೆ. ಸಂದರ್ಭಾನುಸಾರಿಯಾಗಿ ಅನುಭವಿಸು, ವಹಿಸು, ಆಗು ಎಂಬರ್ಥಗಳಿವೆ. ಬೇರೆಲ್ಲೂ ಅದರ ಧಾತು ರೂಪ ಒಂದೇ ಬಳಕೆಯಾಗದಿದ್ದರೂ ನಿಷೇಧಸೂಚಕವಾದ ಬಾರದು ಎಂಬುದರ ಒಡನೆ ಇದು ಬರುತ್ತದೆ. ತಾನು ಅಪಾಯಕ್ಕೆ ಒಳಗಾಗಿ ಪಡಬಾರದ ಕಷ್ಟಪಟ್ಟಳು. ಇದಕ್ಕೆ ಹೊರತುಪಡಿಸಿದಂತೆ ಬೇರೆಲ್ಲೂ ‘ಪಡು’ ಒಂದೇ ಬಳಕೆಯಾಗುವುದಿಲ್ಲ. ಈ ಪದದ ಭೂತ ಕೃದಂತ, ಭೂತನ್ಯೂನ ರೂಪಗಳ ಬಳಕೆ ಬಹುವಾಗಿದೆ. ಪಟ್ಟ, ಪಟ್ಟು, ಮೇಲಿನಂತೆಯೇ ಇನ್ನೊಂದು ಪದದೊಡನೆ ಬರುತ್ತವೆ. ಪ್ರಯತ್ನಪಟ್ಟ ನಂತರ, ಪ್ರಯತ್ನ ಪಟ್ಟು, ಸಂತೋಷಪಟ್ಟ ಬಾಲಕ, ಸಂತೋಷ ಪಟ್ಟು, ದುಃಖಪಟ್ಟ – ದುಃಖಪಟ್ಟು, ಭೂತನ್ಯೂನ ರೂಪ ಒಳಪಟ್ಟ ಒಳಪಟ್ಟು, ಬೇರ್ಪಟ್ಟ – ಬೇರ್ಪಟ್ಟು ಇತ್ಯಾದಿಗಳನ್ನು ಗಮನಿಸಬಹುದು. ಇವುಗಳು ಕೆಲವು ವೇಳೆ ‘ಇಸು’ ಪ್ರತ್ಯಯಕ್ಕೆ ಸಮನಾಗಿಯೂ ಕಾಣಿಸುತ್ತದೆ. ಉದಾ: ಸಂತೋಷಪಟ್ಟು – ಸಂತೋಷಿಸಿ; ಸುಖಪಟ್ಟು – ಸುಖಿಸಿ, ಆದರೆ ಇನ್ನು ಕೆಲವು ಪದಗಳಲ್ಲಿ ಇದು ಸಾಧ್ಯವಿಲ್ಲ; ಕಷ್ಟಪಟ್ಟು; ಒಳಪಟ್ಟು; ಬೇರ್ಪಟ್ಟು ಇಲ್ಲಿ ಸಾಧ್ಯವಿಲ್ಲ.

... ಸಂಯುಕ್ತ ಧಾತುರೂಪಗಳು

ಕ್ರಿಯಾಧಾತುಗಳನ್ನು ಸಹಜ, ಸಾಧಿತ ಮತ್ತು ಸಂಯುಕ್ತ ಕ್ರಿಯಾಧಾತುಗಳೆಂದು ಅವುಗಳ ರಚನೆಯನ್ನು ಆಧರಿಸಿ ವರ್ಗೀಕರಿಸಬಹುದು. ಇವುಗಳಲ್ಲಿ ಎರಡು ವರ್ಗ. ಮೊದಲ ವರ್ಗದಲ್ಲಿ ಎರಡು ಅಥವಾ ಹಲವು ಧಾತುಗಳ ಬೇರೆ ಬೇರೆ ಕ್ರಿಯಾರೂಪಗಳು ಒಟ್ಟು ಸೇರಿರುತ್ತವೆ. ಇವುಗಳಲ್ಲಿ ಒಂದು, ಧಾತುವಿನ ಸಾಪೇಕ್ಷ ಕ್ರಿಯಾರೂಪವೂ ಇನ್ನೊಂದು ಪೂರ್ಣ ಕ್ರಿಯಾರೂಪವೂ ಇರುತ್ತವೆ ಎರಡು ರೂಪಗಳೂ ಒಟ್ಟಿಗೇ ಸೇರಿ ಒಂದೇ ಕ್ರಿಯಾ ಪದದಂತೆ ವರ್ತಿಸುತ್ತದೆ. ಉದಾ: ರಮೇಶ ಬೆಂಗಳೂರಿಗೆ ಹೋಗುತ್ತಿದ್ದಾನೆ, ರಜನಿ ಬೆಂಗಳೂರಿಗೆ ಬಂದಿದ್ದಾಳೆ ಎಂಬ ವಾಕ್ಯಗಳಲ್ಲಿನ ಹೋಗುತ್ತಿದ್ದಾನೆ, ಬಂದಿದ್ದಾಳೆ ಎಂಬ ರೂಪಗಳನ್ನು ಬಿಡಿಸಿದಾಗ ಅವು ಹೋಗುತ್ತ + ಇದ್ದಾನೆ; ಬಂದು + ಇದ್ದಾಳೆ ಎಂದಾಗುತ್ತದೆ. ಹೋಗುತ್ತ ಎಂಬುದು ‘ಹೋಗು’ ಧಾತುವಿನ ವರ್ತಮಾನನ್ಯೂನ ರೂಪವಾದರೆ ಬಂದು ಎಂಬುದು ‘ಬರು’ ಧಾತುವಿನ ಭೂತನ್ಯೂನ ರೂಪ. ಇವುಗಳೊಡನೆ ಇದ್ದಾನೆ, ಇದ್ದಾಳೆ ಎಂಬುದು ಇರು ಧಾತುವಿನ ವರ್ತಮಾನ ಕಾಲದ ವಿಶೇಷ ರೂಪ ಸೇರಿ ಪದರಚನೆಯಾಗಿದೆ. ಹೀಗೆ ಎರಡು ಧಾತುಗಳ ಬೇರೆ ಬೇರೆ ಕ್ರಿಯಾರೂಪಗಳು ಒಟ್ಟಿಗೆ ಸೇರಿ ಸಂಯುಕ್ತ ಕ್ರಿಯಾ ಪದವಾಗಿ ರಚನೆಯಾಗಿದೆ.

ಹೀಗೆ ರಚನೆಯಾಗುವ ಸಂಯುಕ್ತ ಕ್ರಿಯಾಪದಗಳು ವರ್ತಮಾನ ಕಾಲಕ್ಕೆ, ಭೂತಕಾಲಕ್ಕೆ ಬೇರೆ ಬೇರೆ ರೀತಿಯಲ್ಲಿ ರಚನೆಯಾಗುತ್ತವೆ. ಒಂದು ಧಾತುವಿನ ವರ್ತಮಾನ್ಯೂನ ರೂಪಕ್ಕೆ ‘ಇರು’ ಧಾತುವಿನ ವರ್ತಮಾನ ಕಾಲದ ವಿಶೇಷ ರೂಪಗಳನ್ನು ಸೇರಿರುವ ಮೂಲಕ (ಅಪೂರ್ಣ ವರ್ತಮಾನ ಕಾಲದ ರೂಪ) ಮತ್ತು ಧಾತುವಿನ ಭೂತನ್ಯೂನ ರೂಪಕ್ಕೆ ‘ಇರು’ ಧಾತುವಿನ ವರ್ತಮಾನ ಕಾಲದ ವಿಶೇಷ ರೂಪಗಳನ್ನು ಸೇರಿರುವ ಮೂಲಕ (ಪೂರ್ಣವರ್ತಮಾನ ಕಾಲದ ರೂಪ) ವರ್ತಮಾನ ಕಾಲದ ರೂಪಗಳನ್ನು ಪಡೆಯಬಹುದು.

ಕೆಲವು ಉದಾಹರಣೆಗಳು

ಅಪೂರ್ಣ ವರ್ತಮಾನ ಕಾಲಕ್ಕೆ ನರಳುತ್ತಿದೆ (ನರಳುತ್ತ + ಇದೆ)
ತಿನ್ನುತ್ತಿದೆ (ತಿನ್ನುತ್ತ + ಇದೆ)
ಬೀಳುತ್ತಿದ್ದೇನೆ (ಬೀಳುತ್ತ + ಇದ್ದೇನೆ) ಇತ್ಯಾದಿ
ಪೂರ್ಣವರ್ತಮಾನ ಕಾಲಕ್ಕೆ ಬಿದ್ದಿದೆ (ಬಿದ್ದು + ಇದೆ)
ನೋಡಿದ್ದೀರಿ (ನೋಡಿ + ಇದ್ದೀರಿ)
ಬರೆಸಿದ್ದಾರೆ (ಬರೆಸು + ಇದ್ದಾರೆ) ಇತ್ಯಾದಿ

ಒಂದು ಧಾತುವಿನ ವರ್ತಮಾನನ್ಯೂನ ರೂಪಕ್ಕೆ ‘ಇದು’ ಧಾತುವಿನ ಭೂತಕಾಲದ ರೂಪಗಳನ್ನು ಸೇರಿಸುವ ಮೂಲಕ (ಅಪೂರ್ಣ ಭೂತಕಾಲದ ರೂಪಗಳನ್ನು) ಮತ್ತು ಧಾತುವಿನ ಭೂತನ್ಯೂನ ರೂಪಕ್ಕೆ ‘ಇರು’ ಧಾತುವಿನ ಭೂತಕಾಲದ ರೂಪಗಳನ್ನು ಸೇರಿಸುವ ಮೂಲಕ (ಪೂರ್ಣ ಭೂತಕಾಲದ ರೂಪಗಳನ್ನು) ಭೂತಕಾಲದ ರೂಪಗಳನ್ನು ಪಡೆಯ ಬಹುದು.

ಕೆಲವು ಉದಾಹರಣೆಗಳು

ಅಪೂರ್ಣ ಭೂತಕಾಲಕ್ಕೆ ತಿನ್ನುತ್ತಿದ್ದರು (ತಿನ್ನುತ್ತ + ಇದ್ದರು)
ಹೊಡೆಯುತ್ತಿದ್ದರು (ಹೊಡೆಯುತ್ತ + ಇದ್ದರು)
ಬರೆಯುತ್ತಿದ್ದೆ (ಬರೆಯುತ್ತ + ಇದ್ದೆ) ಇತ್ಯಾದಿ
ಪೂರ್ಣ ಭೂತಕಾಲಕ್ಕೆ ಹೋಗಿದ್ದಳು (ಹೋಗಿ + ಇದ್ದಳು)
ಕಂಡಿದ್ದನು (ಕಂಡು + ಇದ್ದನು)
ಬಂದಿತ್ತು (ಬಂದು + ಇತು) ಇತ್ಯಾದಿ

ಧಾತುವಿನ ಭಾವಾರ್ಥದ ರೂಪದ ಮುಂದೆ ಕೆಲವು ಕ್ರಿಯಾರ್ಥಕ ಪದಗಳನ್ನು ಸೇರಿಸಿ ವಿವಿಧ ಅರ್ಥಗಳನ್ನು ನೀಡುವ ಸಂಯುಕ್ತ ಕ್ರಿಯಾಪದಗಳನ್ನು ರಚಿಸಲಾಗುತ್ತದೆ. ಇವುಗಳು ವಿಧ್ಯರ್ಥ, ಸಂಬಾವನಾರ್ಥ, ನಿಷೇಧಾರ್ಥ ಸೂಚಿಸುವ ರೂಪಗಳಾಗುತ್ತವೆ.

ಉದಾಹರಣೆ

ಈ ಎಲ್ಲ ಕೆಲಸಗಳನ್ನೂ ಇಂದೇ ಮುಗಿಸಬೇಕು.
ಈ ಕೆಲಸಕ್ಕಾಗಿ ನಾವೆಲ್ಲರೂ ಬೆಳಿಗ್ಗೆಯೇ ಹೊರಡಬೇಕು
ಕೆಲಸ ಮಾಡಲು ಅಪೇಕ್ಷಿಸುವವರು ಠೇವಣಿ ಇಡಬೇಕು
ಎಲ್ಲ ಸಿಬ್ಬಂದಿಗಳೂ ಬೆಳಿಗ್ಗೆ ಹತ್ತು ಗಂಟೆಯೊಳಗೆ ಹಾಜರಿರತಕ್ಕದ್ದು
ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡತಕ್ಕದ್ದು
ಈ ಕೊಠಡಿಯೊಳಕ್ಕೆ ಯಾರೂ ಹೋಗಕೂಡದು
ಮೊಬೈಲುಗಳನ್ನು ತರಗತಿಯೊಳಗೆ ತರಕೂಡದು
ಈ ಸಮಯದಲ್ಲಿ ಯಾರೂ ಗಲಾಟೆ ಮಾಡಬಾರದು
ಹೊರಗಿನ ತಿಂಡಿಯನ್ನು ತಿನ್ನಬಾರದು
ಹುಲ್ಲಿನ ಮೇಲೆ ನಡೆಯಬೇಡಿ
ಹೋಟೆಲಿನ ತಿಂಡಿ ತಿನ್ನಬೇಡ

ಮೇಲಿನ ವಾಕ್ಯಗಳಲ್ಲಿನ ಬೇಕು ತಕ್ಕದ್ದು, ಕೂಡದು, ಬಾರದು ಬೇಡ ಬೇಡಿ, ಎಂಬ ಕ್ರಿಯಾಪದಗಳು ಧಾತುವಿನ ಭಾವಾರ್ಥರೂಪಕ್ಕೆ ಸೇರಿ ಸೂಚಿಸುವ ಕ್ರಿಯೆ ಖಂಡಿತ ನಡೆಯತಕ್ಕದ್ದು, ನಡೆಯತಕ್ಕದ್ದಲ್ಲ ಎಂದು ವಿಧಿಸುತ್ತದೆ ಇವೆಲ್ಲ ವಿಧ್ಯರ್ಥ ಸೂಚಿಸುವ ಸಂಯುಕ್ತ ಪದಗಳಾಗಿ ಬಂದಿವೆ. ಬೇಡ ಬೇಡಿ ಎಂಬುದನ್ನು ಬಳಸುವಾಗ ಏಕವಚನ, ಬಹುವಚನ ಭೇದವಿದ್ದು ಇವು ಕೇವಲ ಮಧ್ಯಮ ಪುರುಷದಲ್ಲಿ ಮಾತ್ರ ಸಾಧ್ಯ.

ಉದಾ :

ನೀನು ಕೆಟ್ಟ ದನಿಯಲ್ಲಿ ಹಾಡಬೇಡ
ನೀವು ಇನ್ನೆಂದು ಹಾಗೆ ಹೇಳಬೇಡಿ

ನೋಡಲು, ಮಾಡಲು ಎಂಬ ಭಾವಾರ್ಥದ ಕ್ರಿಯೆಗೆ ಇಲ್ಲ ಎಂಬುದನ್ನು ಸೇರಿಸಿ ಸಂಯುಕ್ತ ಕ್ರಿಯಾಪದ ರಚನೆಯಾಗುತ್ತದೆ. ಇದು ಭೂತಕಾಲದಲ್ಲಿ ಕ್ರಿಯೆ ನಡೆಯದಿರುವುದನ್ನು ಸೂಚಿಸುತ್ತದೆ.

ಉದಾ :

ಮಗು ಹಾಲನ್ನು ಕುಡಿಯಲಿಲ್ಲ (ಕುಡಿಯಲು + ಇಲ್ಲ)
ಮಳೆ ಬಂದರೂ ಕೆರೆ ತುಂಬಲಿಲ್ಲ (ತುಂಬಲು + ಇಲ್ಲ)

ಬಾವನಾಮ ರೂಪಗಳಿಗೆ ‘ಇಲ್ಲ’ ಎಂಬುದು ಸೇರಿ ವರ್ತಮಾನ ಭವಿಷ್ಯತ್ಕಾಲಗಳಲ್ಲಿ ಕ್ರಿಯೆಯ ನಿಷೇಧವನ್ನು ಹೇಳುತ್ತದೆ.

ಈ ಬಿಸಿಲಿಗೆ ಬಟ್ಟೆ ಇಣಗುವುದಿಲ್ಲ (ಒಣಗುವುದು + ಇಲ್ಲ)
ಮಳೆ ಕೈಕೊಟ್ಟರೆ ಕೆರೆ ತುಂಬುವುದಿಲ್ಲ (ತುಂಬುವುದು + ಇಲ್ಲ)

ಸಂಯುಕ್ತ ಕ್ರಿಯಾಧಾತುಗಳು

ಎರಡನೆಯ ವರ್ಗದ ಸಂಯುಕ್ತ ಕ್ರಿಯಾಧಾತುಗಳಲ್ಲಿ ಎರಡು ಅಥವಾ ಹೆಚ್ಚು ಶಬ್ದಗಳು ಒಟ್ಟು ಸೇರಿರುತ್ತವೆ. ಇವುಗಳಲ್ಲಿ ಒಂದು ಕ್ರಿಯಾಪದ ಮತ್ತೊಂದು ನಾಮ, ವಿಶೇಷಣ ಅಥವಾ ಕ್ರಿಯಾಪದಗಳ ಭೂತನ್ಯೂನ ರೂಪಗಳೊಡನೆ ಬರುತ್ತದೆ. ಕ್ರಿಯಾಪದ ಯಾವಾಗಲೂ ಕೊನೆಯಲ್ಲಿ ಬರುತ್ತದೆ. ಹೀಗೆ ಬರುವ ನಾಮ ಪದಗಳು ಕನ್ನಡ ಅಥವಾ ಸಂಸ್ಕೃತ ಪದಗಳಾಗಿರಬಹುದು. ಕನ್ನಡದಲ್ಲಿ ಬಳಕೆಯಲ್ಲಿರುವ ಅನೇಕ ಕ್ರಿಯಾ ಪದಗಳು ಈ ಬಗೆಯ ಸಂಯುಕ್ತ ಕ್ರಿಯಾಪದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಕಾಣು ತುಂಬು, ಆಗು, ಆಡು, ಇಕ್ಕು, ತಳೆ, ಬಿಡು, ಕೊಡು, ಬರು, ಮಾಡು, ಕಟ್ಟು, ಬೀಳು, ಹೊಡೆ, ಕುಡು, ಒಡ್ಡು ಹಿಡಿ ಮುಂತಾದ ಕ್ರಿಯಾಪದಗಳು ಸಂಯುಕ್ತ ಕ್ರಿಯಾಪಗಳ ರಚನೆಯಲ್ಲಿ ಪಾತ್ರವಹಿಸುತ್ತವೆ.

ಇಂಬುಗಾಣು, ಮೈದುಂಬು, ಇದಿರಾಗು, ಆಸರೆಯಾಗು, ನಗೆಯಾಡು, ಈಜಾಡು, ಓಡಾಡು, ಹಿಂದಕ್ಕು, ಧುಮ್ಮಿಕ್ಕು, ಮೈದಳೆ, ಅಲ್ಲಗಳೆ, ಬೇರುಬಿಡು, ಛೂಬಿಡು, ಮಾತು ಕೊಡು ಇಂಬುಕೊಡು, ಕಂಡುಬರು, ಉಂಟುಮಾಡು, ಉಡುಹೊಡೆ, ಭುಸುಗುಡು, ಕಡೆಯೊಡ್ಡು, ಬೊಬ್ಬೆಹಾಕು, ತುಕ್ಕುಹಿಡಿ, ನೆಲೆಯೂರು, ತಳವೂರು, ತಲೆದೋರು, ಇತ್ಯಾದಿ.

ಹೀಗೆ ರಚನೆಯಾಗುವಾಗ ಇವುಗಳಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಗಕಾರಾದೇಶ (ಕಾಣು + ಗಾಣು, ಕಳೆ + ಗಳೆ) ದ ಕಾರಾದೇಶ (ತುಂಬು + ದುಂಬು) ಉಕಾರ ಲೋಪ (ಇದಿರು + ಆಗು) ಯಕಾರಾಗಮ, ವಕಾರಾಗಮ (ನಗೆಯಾಡು; ಗುಣವಾಗು); ಹೀಗೆ ಅನೇಕ ಬದಲಾವಣೆಗಳನ್ನು ಕಾಣಬಹುದು.

ಕೆಲವು ಮಾದರಿಗಳನ್ನು ಕೆಳಗೆ ನೀಡಲಾಗಿದೆ.

ಪೆಟ್ಟಾಗು ಇದಿರಾಗು ಆಸರೆಯಾಗು
ಸಿಟ್ಟಾಗು ಒಂದಾಗು ಮಾಯವಾಗು
ಸಿದ್ದವಾಗು ಬಲಿಯಾಗು ಗುರಿಯಾಗು
ಗುಣವಾಗು ತಡವಾಗು ಸುಳ್ಳಾಗು
ತಪ್ಪಾಗು ಬೇಕಾಗು ಸಾಕಾಗು
ಇಲ್ಲವಾಗು ಉಂಟಾಗು ಸರಿಯಾಗು
ಹಾಳಾಗು ಬಡವಾಗು ಮುಂದಾಗು
ಕಪ್ಪಾಗು ಮೇಲಾಗು ಸುಳ್ಳಾಗು
ಕುಣಿದಾಡು ಓಡಿಬರು ಉಸಿರೆತ್ತು
ಸುಳಿದಾಡು ಕಂಡುಬರು ಕಣ್ಣೆತ್ತು
ವ್ಯಂಗ್ಯಮಾಡು ತೋರಿಬರು ಕೈಯೆತ್ತು
ನಗೆಯಾಡು ಕಾಣಬರು ಒಳಪಡು
ಎಳೆದಾಡು ಅಡ್ಡಿಬರು ಕೊನೆಗಾಣು
ಅಲೆದಾಡು ಮುಂದೆಬರು ಎದೆಗುಂದು
ಬಡಿದಾಡು ಹಿಂದೆಬರು ತಡೆಗಟ್ಟು
ಹೊಡೆದಾಡು ಹೆಸರುಬರು ಬೇರೂರು
ಹೋರಾಡು ಕೈಬಿಡು ಈಡೇರು
ಹಾರಾಡು ಕೈಮಾಡು ಕಂಡುಹಿಡಿ
ಗೋಳಾಡು ಹಾಳುಮಾಡು ಬೊಬ್ಬರಿ
ಕಾದಾಡು ತಡಮಾಡು ಕೈಚಾಚು
ತಿರುಗಾಡು ಕೈಹಾಕು ತಲೆಬಾಗು
ತೂಗಾಡು ತೆಗೆದುಹಾಕು ಕೈಮುಗಿ
ಗುದ್ದಾಡು ಮೋಸಹೋಗು ಸುತ್ತುವರಿ
ಕಚ್ಚಾಡು ಸೋತುಹೋಗು ಉರುಹೊಡೆ
ಒದ್ದಾಡು ಓಡಿಹೋಗು ಗಸ್ತುಹೊಡೆ
ಹೊರಳಾಡು ಅಡ್ಡಬೀಳು ಮುಂದುವರಿ
ಜೂಜಾಡು ಹಿಂದೆಬೀಳು ಬಾಣತೊಡು
ಜಗಳಾಡು ಗಂಟುಬೀಳು ಭೋರ್ಗರೆ
ಒಡನಾಡು ತಿರುಗಿಬೀಳು ಬಿಟ್ಟುಬಿಡು
ಕಿವಿಕೊಡು ಹೆಪ್ಪುಗಟ್ಟು ಮನಸೆಳೆ
ಬೀಳ್ಕೊಡು ಎತ್ತಿಕಟ್ಟು ಸದೆಬಡಿ
ಬೆಲೆಕೊಡು ಕಣ್ಣಿಡು ನೆಲಕಚ್ಚು
ಬರಗೊಡು ಹೆಸರಿಡು ಕೈಮೀರು
ಬರೆದಿಡು ಆಸೆದೋರು
ಅಂದಗೆಡು ತಲೆದೋರು
ಕಂಗೆಡು ನೀರೂರು
ಹದಗೆಡು ಜಂಬಕೊಚ್ಚು ಇತ್ಯಾದಿ

ತಿಳಿದವನು ಎಂಬ ಅರ್ಥವಿರುವ ‘ಬಲ್ಲ’ ಎಂಬುದನ್ನು ಇತರ ಧಾತುಗಳೊಡನೆ ಸೇರಿಸಿ ಸಾಮರ್ಥ್ಯ ಸೂಚಿಸುವ ಕ್ರಿಯಾಪದವಾಗಿ ಬಳಸುವುದುಂಟು. ಇದು ವಿಶೇಷ ರೀತಿಯದು. ಮುಖ್ಯ ಕ್ರಿಯಾಪದದ ಭಾವಾರ್ಥದ ರೂಪಕ್ಕೆ (ಮಾಡ + ಬಲ್ಲ) ಇದು ಸೇರುತ್ತದೆ. ಅಲ್ಲದೆ ಇದು ಎಲ್ಲ ಪುರುಷ, ವಚನ, ಲಿಂಗಕ್ಕೆ ಅನುಸಾರವಾಗಿ ಅಖ್ಯಾತ ಪ್ರತ್ಯಯಗಳನ್ನು ಪಡೆಯುತ್ತದೆ.

ಏಕ ಬಹು
ಪ್ರ ಪು ಪು ಅನು ಅರು
ಸ್ತ್ರೀ ಅಳು ಆರು
ನಪುಂ ಅದು ಅವು
ಮ.ಪು ಪು. ಸ್ತ್ರೀ ಇರಿ
ಉ. ಪು. ಪು. ಸ್ತ್ರೀ ಎವು

ಧಾತುಮಾಡು

ಏಕ ಬಹು
ಮಾಡಬಲ್ಲನು ಮಾಡಬಲ್ಲರು
ಮಾಡಬಲ್ಲಳು ಮಾಡಬಲ್ಲರು
ಮಾಡಬಲ್ಲದು ಮಾಡಬಲ್ಲವು
ಮಾಡಬಲ್ಲೆ ಮಾಡಬಲ್ಲಿರಿ
ಮಾಡಬಲ್ಲೆ ಮಾಡಬಲ್ಲೆವು

ಕೆಲವು ವೇಳೆ ಪ್ರ. ಪು. ಪುಲ್ಲಿಂಗ ಏಕವಚನ ರೂಪ ‘ಅನು’ ಬದಲಾಗಿ ‘ಅ’ ಎಂದೂ ಆಗುತ್ತದೆ. ಮಾಡಬಲ್ಲನು – ಮಾಡಬಲ್ಲ

.. ಪೂರ್ಣ, ಸಾಪೇಕ್ಷ ರೂಪಗಳು

ಕ್ರಿಯಾರಚನೆಗಳನ್ನು ಇನ್ನೊಂದು ರೀತಿಯಲ್ಲಿ ಪೂರ್ಣ ಕ್ರಿಯಾಪದಗಳು ಮತ್ತು ಸಾಪೇಕ್ಷ ಕ್ರಿಯಾರೂಪಗಳು ಎಂದೂ ವಿಂಗಡಿಸಬಹುದು. ವಾಕ್ಯದ ಅಭಿಪ್ರಾಯವನ್ನು ಯಾವ ಕ್ರಿಯಾಪದ ಪೂರ್ಣ ಮಾಡುವುದೋ ಅದು ಪೂರ್ಣ ಕ್ರಿಯಾಪದವಾಗುತ್ತದೆ. ಇದು ‘ಕಾಲ’ ವನ್ನು ಅಥವಾ ‘ಅರ್ಥ’ ವನ್ನು ಸೂಚಿಸಬಹುದು. ಇಲ್ಲಿ ವಾಕ್ಯದ ಅಭಿಪ್ರಾಯ ಪೂರ್ಣವಾಗಲು ಬೇರೆ ಪದದ ಅಪೇಕ್ಷೆ ಇರುವುದಿಲ್ಲ. ಆದರೆ ಕೆಲವೊಂದು ಕ್ರಿಯಾರೂಪಗಳಿಗೆ ಇನ್ನೊಂದು ಕ್ರಿಯಾಪದದ ಸಹಾಯ ಬೇಕಾಗುತ್ತವೆ. ಅಂತಹ ಸಹಾಯವನ್ನು ಅಪೇಕ್ಷಿಸುವ ಕ್ರಿಯಾರೂಪಗಳನ್ನು ಸಾಪೇಕ್ಷ ಕ್ರಿಯಾರೂಪಗಳು ಎನ್ನಲಾಗುತ್ತದೆ. ಅಂದರೆ ಯಾವ ಕ್ರಿಯಾಪದಗಳ ಅರ್ಥಪೂರ್ತಿಗಾಗಿ ಬೇರೊಂದು ಕ್ರಿಯಾಪದದ ಸಹಾಯ ಬೇಕಾಗುತ್ತದೆಯೋ ಅಂತಹ ಕ್ರಿಯಾರೂಪಗಳಿಗೆ ಸಾಪೇಕ್ಷ ಕ್ರಿಯಾರೂಪಗಳೆಂದು ಹೇಳಬಹುದು. ಪೂರ್ಣ ಕ್ರಿಯಾಪದಗಳು ಲಿಂಗ, ವಚನ, ಪುರುಷಗಳನ್ನು ಹೊಂದಿದಾಗ ಬೇರೆ ಬೇರೆ ರೂಪಗಳನ್ನು ಪಡೆಯುತ್ತವೆ. ಆದರೆ ಸಾಪೇಕ್ಷ ಕ್ರಿಯಾರೂಪಗಳಿಗೆ ಈ ಬಗೆಯ ಭಿನ್ನತೆ ಇರದು. ಅವು ಎಲ್ಲ ಲಿಂಗ, ವಚನ, ಪುರುಷಗಳಲ್ಲೂ ಒಂದೇ ರೂಪದಲ್ಲಿ ಇರುತ್ತವೆ. ಆದರೆ ಕಾಲಭೇದ, ಅರ್ಥ ಭೇದಗಳನ್ನು ಹೊಂದುತ್ತವೆ. ಉದಾ: ಬರೆ ಎಂಬು ಧಾತುವಿಗೆ ಬರೆದು ಎಂಬುದು ಭೂತಕಾಲವನ್ನು, ಬರೆಯುತ್ತಾ ಎಂಬುದು ವರ್ತಮಾನ ಕಾಲವನ್ನೂ ಬರೆದರೆ ಎಂಬುದು ಪಕ್ಷಾರ್ಥವನ್ನು, ಬರೆಯಲು ಎಂಬುದು ಭಾವಾರ್ಥವನ್ನು ಸೂಚಿಸುವ ರೂಪಗಳಾಗುತ್ತವೆ.

ಪೂರ್ಣ ಕ್ರಿಯಾಪದಗಳು ಕಾಲ ಮತ್ತು ಅರ್ಥಭೇದಗಳನ್ನು ಹೊಂದುವಲ್ಲಿನ ರೂಪಗಳನ್ನು ಈ ಕೆಳಗೆ ನೀಡಲಾಗಿದೆ.