... ಪೂರ್ಣ ಕ್ರಿಯಾಪದ : () ಕಾಲಗಳು

ಪೂರ್ಣ ಕ್ರಿಯಾಪದದಲ್ಲಿ ಎರಡು ಪ್ರತ್ಯಯಗಳು ಸೇರಿರುತ್ತವೆ. ಧಾತುವಿಗೆ, ಮೊದಲು ಕಾಲಸೂಚಿಸುವ ಪ್ರತ್ಯಯ ಆನಂತರ ಪುರುಷ, ಲಿಂಗ, ವಚನ ಸೂಚಿಸುವ ಪ್ರತ್ಯಯ ಸೇರುತ್ತವೆ. ಹೀಗೆ ಸೇರಿರುವ ಕ್ರಿಯಾರೂಪವನ್ನು ಪೂರ್ಣಕ್ರಿಯಾಪದ ಎನ್ನಲಾಗುತ್ತದೆ. ಇವು ಈಗಾಗಲೇ ಮೇಲೆ ಹೇಳಿದಂತೆ ವಾಕ್ಯದ ಅಭಿಪ್ರಾಯವನ್ನು ಪೂರ್ಣಮಾಡುತ್ತವೆ.

ಧಾತುವಿಗೆ, ಮೊದಲು ಸೇರುವ ಪ್ರತ್ಯಯ ಕಾಲಸೂಚಿಸುತ್ತದೆ. ಕನ್ನಡದಲ್ಲಿ ಭೂತ, ವರ್ತಮಾನ, ಭವಿಷ್ಯತ್ಕಾಲವನ್ನು ಸೂಚಿಸುವ ಪ್ರತ್ಯಯಗಳು ಬಳಕೆಯಲ್ಲಿವೆ. ಉತ್ತ, ದ ಮತ್ತು ಉವ / ವ ಎಂಬುವೇ ಆ ಪ್ರತ್ಯಯಗಳು. ಆಧುನಿಕ ಕನ್ನಡದ ಪ್ರಯೋಗಗಳಲ್ಲಿ ಭವಿಷ್ಯತ್ಕಾಲ ಸೂಚಿ ಪ್ರತ್ಯಯದ ಬಳಕೆ ಕಡಿಮೆಯಾಗುತ್ತಿದೆ. ವರ್ತಮಾನ ಕಾಲದ ರೂಪವನ್ನೇ ಕಾಲಸೂಚಿಸುವ ಪದದೊಂದಿಗೆ ಬಳಸಲಾಗುತ್ತಿದೆ. ಆದರೂ ವ್ಯಾಕರಣದ ರೀತಿಯಲ್ಲಿ ಕನ್ನಡದ ಮೂರು ಕಾಲಸೂಚಿ ಕ್ರಿಯಾಪದಗಳ ರೂಪಗಳು ಇಂತಿವೆ.

‘ನಡೆ’ ಎಂಬ ಧಾತುವಿಗೆ ಮೂರು ಕಾಲಗಳಲ್ಲಿ ಸೇರುವ ರೂಪಗಳನ್ನು ನೀಡಲಾಗಿದೆ.

ವರ್ತಮಾನ ಕಾಲಕ್ಕೆ ಕಾಲ ಪ್ರತ್ಯಯ ಉತ್ತ

ಪ್ರಥಮ ಪುರುಷ ಸ್ತ್ರೀ ಏಕವಚನ ನಡೆಯುತ್ತಾಳೆ ನಡೆ + ಉತ್ತ + ಅಳೆ
ಪು ಏಕವಚನ ನಡೆಯುತ್ತಾನೆ ನಡೆ + ಉತ್ತ + ಆನೆ
ಸ್ತ್ರೀ ಪು ಬಹುವಚನ ನಡೆಯುತ್ತಾರೆ ನಡೆ + ಉತ್ತ + ಆರೆ
ನಪ್ ಏಕವಚನ ನಡೆಯುತ್ತದೆ ನಡೆ + ಉತ್ತ + ಅದೆ
ಬಹುವಚನ ನಡೆಯುತ್ತವೆ ನಡೆ + ಉತ್ತ + ಅವೆ.
ಮಧ್ಯ ಪುರುಷ ಏಕವಚನ ಸ್ತ್ರೀ ಪು ನಡೆಯುತ್ತೀಯೆ ನಡೆ + ಉತ್ತ + ಈಯೆ
ಬಹುವಚನ ಸ್ತ್ರೀ ಪು ನಡೆಯುತ್ತೀರಿ ನಡೆ + ಉತ್ತ + ಈರಿ
ಉತ್ತಮ ಪುರುಷ ಏಕವಚನ ಸ್ತ್ರೀ ಪು ನಡೆಯುತ್ತೇನೆ ನಡೆ + ಉತ್ತ + ಏನೆ
ಬಹುವಚನ ಸ್ತ್ರೀ ಪು ನಡೆಯುತ್ತೇವೆ ನಡೆ + ಉತ್ತ + ಏವೆ

ಭೂತಕಾಲಕ್ಕೆ ಕಾಲಪ್ರತ್ಯಯ

ಪ್ರ ಪು ನ ಪುಂ ಸ್ತ್ರೀ ಏಕವಚನ ನಡೆದಳು ನಡೆ+ ದ್+ಅಳು
ಪ್ರ ಪು ಪು ನ ಪಂ ಏಕವಚನ ನಡೆದನು ನಡೆ+ದ್+ಅನು
ಪ್ರ ಪು ಸ್ತ್ರೀ ಪು ಬಹುವಚನ ನಡೆದರು ನಡೆ+ದ್+ಅರು
ಪ್ರ ಪು ಏಕವಚನ ನಡೆಯಿತು ನಡೆ+ದ್+ಇತು
ಪ್ರ ಪು ಬಹುವಚನ ನಡೆದವು ನಡೆ+ದ್+ಅವು
ಮ.ಪು. ಸ್ತ್ರೀ ಏಕವಚನ ನಡೆದೆ ನಡೆ+ದ್+ಎ
ಮ.ಪು. ಪುಲ್ಲಿಂಗ ಏಕವಚನ ನಡೆದೆ ನಡೆ+ದ್+ಎ
ಮ.ಪು. ಸ್ತ್ರೀ ಬಹುವಚನ ನಡೆದಿರಿ ನಡೆ+ದ್+ಇರಿ
ಮ.ಪು.. ಪುಲ್ಲಿಂಗ ಬಹುವಚನ ನಡೆದಿರಿ ನಡೆ+ದ್+ಇರಿ
ಉತ್ತಮ ಪು ಸ್ತ್ರೀ ಏಕವಚನ ನಡೆದೆ ನಡೆ+ದ್+ಎ
ಪು ಏಕವಚನ ನಡೆದೆ ನಡೆ+ದ್+ಎ
ಸ್ತ್ರೀ ಪು ಬಹುವಚನ ನಡೆದೆವು ನಡೆ+ದ್+ಎವು

ಭವಿಷ್ಯತ್ಕಾಲಕ್ಕೆ ಕಾಲಪ್ರತ್ಯಯ ಉವವ

ಪ್ರ ಪು ಸ್ತ್ರೀ ಏಕವಚನ ನಡೆಯುವಳು ನಡೆ+ಉವ+ಅಳು
ಪ್ರ ಪು ಪು ಬಹುವಚನ ನಡೆಯುವನು ನಡೆ+ಉವ+ಅನು
ಪ್ರ ಪು ಪು ಸ್ತ್ರೀ ನಪು ನಡೆಯುವುದು ನಡೆ+ಉವ+ಅದು
ಪ್ರ ಪು ಬಹುವಚನ ನಡೆಯುವವು ನಡೆ+ಉವ+ಅವು
ಮಧ್ಯಮ ಪುರುಷ ಏಕವಚನ ಸ್ತ್ರೀ ನಡೆಯುವೆ ನಡೆ+ಉವ+ಎ
ಪು ಏಕವಚನ ನಡೆಯುವೆ ನಡೆ+ಉವ+ಎ
ಸ್ತ್ರೀ ಬಹುವಚನ ನಡೆಯುವಿರಿ ನಡೆ+ಉವ+ಇರಿ
ಉತ್ತಮ ಪುರುಷ ಸ್ತ್ರೀ ಏಕವಚನ ನಡೆಯುವೆ ನಡೆ+ಉವ+ಎ
ಪು ಏಕವಚನ ನಡೆಯುವೆ ನಡೆ+ಉವ+ಎ
ಬಹುವಚನ ನಡೆಯುವೆವು ನಡೆ+ಉವ+ಎವು

ಹೀಗೆಯೇ ವಿವಿಧ ಧಾತುಗಳಲ್ಲಿ ಕಾಲಸೂಚಕಗಳು ಬಳಕೆಯಾಗುವುವು. ಕೆಲವು ಉದಾಹರಣೆಗಳು ಹೀಗಿವೆ.

 

ವರ್ತಮಾನ ಕಾಲ

ಭೂತಕಾಲ

ಭವಿಷ್ಯತ್ಕಾಲ

ಏಕವಚನ

ಬಹುವಚನ ಏಕವಚನ ಬಹುವಚನ ಏಕವಚನ ಬಹುವಚನ
ಹಾಕುತ್ತಾನೆ ಹಾಕುತ್ತಾರೆ ಹಾಕಿದನು ಹಾಕಿದರು ಹಾಕುವನು ಹಾಕುವರು
ಹಾಕುತ್ತಾಳೆ ಹಾಕುತ್ತಾರೆ ಹಾಕಿದಳು ಹಾಕಿದರು ಹಾಕುವಳು ಹಾಕುವರು
ಹಾಕುತ್ತದೆ ಹಾಕುತ್ತವೆ ಹಾಕಿತು ಹಾಕಿದವು ಹಾಕುವದು ಹಾಕುವವು
ಹಾಕುತ್ತೀಯೆ ಹಾಕುತ್ತೀರಿ ಹಾಕಿದೆ ಹಾಕಿದಿರಿ ಹಾಕುವೆ ಹಾಕುವಿರಿ
ಹಾಕುತ್ತೇನೆ ಹಾಕುತ್ತೇವೆ ಹಾಕಿದೆನು ಹಾಕಿದೆವು ಹಾಕುವೆನು ಹಾಕುವೆವು
ತಿಳಿಯುತ್ತಾನೆ ತಿಳಿಯುತ್ತಾರೆ ತಿಳಿದನು ತಿಳಿದರು ತಿಳಿಯುವನು ತಿಳಿಯುವರು
ತಿಳಿಯುತ್ತಾಳೆ ತಿಳಿಯುತ್ತಾರೆ ತಿಳಿದಳು ತಿಳಿದರು ತಿಳಿಯುವಳು ತಿಳಿಯುವರು
ತಿಳಿಯುತ್ತದೆ ತಿಳಿಯುತ್ತವೆ ತಿಳಿಯಿತು ತಿಳಿದವು ತಿಳಿಯುವದು ತಿಳಿಯುವವು
ತಿಳಿಯುತ್ತೀಯ ತಿಳಿಯುತ್ತೀರಿ ತಿಳಿದೆ ತಿಳಿದಿರಿ ತಿಳಿಯುವೆ ತಿಳಿಯುವಿರಿ
ತಿಳಿಯುತ್ತೇನೆ ತಿಳಿಯುತ್ತೇವೆ ತಿಳಿದೆನು ತಿಳಿದೆವು ತಿಳಿಯುವೆನು ತಿಳಿಯುವೆವು
ಕಾಣುತ್ತಾನೆ ಕಾಣುತ್ತಾರೆ ಕಂಡನು ಕಂಡರು ಕಾಣುವನು ಕಾಣುವರು
ಕಾಣುತ್ತಾಳೆ ಕಾಣುತ್ತಾರೆ ಕಂಡಳು ಕಂಡರು ಕಾಣುವಳು ಕಾಣುವರು
ಕಾಣುತ್ತದೆ ಕಾಣುತ್ತವೆ ಕಂಡಿತು ಕಂಡವು ಕಾಣುವದು ಕಾಣುವುವು
ಕಾಣುತ್ತೀಯ ಕಾಣುತ್ತೀರಿ ಕಂಡೆ ಕಂಡಿರಿ ಕಾಣುವೆ ಕಾಣುವಿರಿ
ಕಾಣುತ್ತೇನೆ ಕಾಣುತ್ತೇವೆ ಕಂಡೆನು ಕಂಡೆವು ಕಾಣುವನು ಕಾಣುವೆವು

... ಪೂರ್ಣ ಕ್ರಿಯಾಪದ : () ಅರ್ಥ

ಪೂರ್ಣ ಕ್ರಿಯಾಪದವನು ಅರ್ಥದ ಆಧಾರದಲ್ಲಿ ವಿಂಗಡಿಸುವಾಗ ಒಂದು ಕ್ರಿಯೆಯ ವಿಷಯದಲ್ಲಿ ಮಾತನಾಡುವವನ ಅಭಿಪ್ರಾಯವನ್ನು ಪರಿಗಣಿಸಿ ವಿಧ್ಯರ್ಥ, ನಿಷೇಧಾರ್ಥ ಮತ್ತು ಸಂಭಾವನಾರ್ಥದ ಕ್ರಿಯಾಪದಗಳು ಎಂದು ೩ ಬಗೆಯಾಗಿ ವಿಂಗಡಿಸಬಹುದು. ಹೀಗೆ ವಿವಿಧ ಅಭಿಪ್ರಾಯಗಳನ್ನುಳ್ಳ ಕ್ರಿಯಾಪದಗಳು ವಿಧಿ, ನಿಷೇಧ ಮತ್ತು ಸಂಭಾವನೆಯನ್ನು ವ್ಯಕ್ತ ಪಡಿಸುತ್ತವೆ. ವಿವಿಧ ಕಾಲಗಳಲ್ಲಿ ಲಿಂಗ, ವಚನ, ಪುರುಷಗಳನ್ನು ಸೂಚಿಸುವುದಕ್ಕೆ ಬೇರೆ ಬೇರೆ ರೂಪಗಳಿರುವಂತೆ ವಿಧಿ, ನಿಷೇಧ ಸಂಭಾವನಾರ್ಥಗಳಲ್ಲಿಯೂ ಬೇರೆ ಬೇರೆ ರೂಪಗಳಿವೆ.

. ವಿಧ್ಯರ್ಥ

ಒಂದು ಕ್ರಿಯೆ ನಡೆಯಬೇಕೆಂಬ ಅಭಿಪ್ರಾಯವನ್ನು ಅಪ್ಪಣೆಯ ರೂಪದಲ್ಲಿ ಹೇಳುವ ಕ್ರಿಯಾಪದಗಳು ವಿಧ್ಯರ್ಥದಲ್ಲಿ ಬರುತ್ತದೆ. ಅಲ್ಲದೆ ವಿಧ್ಯರ್ಥದ ಪ್ರಯೋಗವನ್ನು ವಿವಿಧ ಅರ್ಥಗಳನ್ನು – ಅಂದರೆ, ಕೋರಿಕೆ, ಹಾರೈಕೆ, ಅನುಮತಿ, ಉದ್ದೇಶ ತೋರಿಸುವುದಕ್ಕಾಗಿಯೂ ಉಪಯೋಗಿಸಲಾಗುತ್ತದೆ. ವಿಧ್ಯರ್ಥದ ಕ್ರಿಯಾಪದಗಳು ರೂಪುಗೊಳ್ಳುವಾಗ ಪುರುಷ, ವಚನಕ್ಕೆ ಅನುಗುಣವಾಗಿ ಪ್ರತ್ಯಯಗಳು ಸೇರುತ್ತವೆ. ಇವು ಧಾತುವಿಗೆ ನೇರವಾಗಿ ಹತ್ತುತ್ತವೆ.

ಏಕ ಬಹು
ಪ್ರಥಮ ಪುರುಷ ಅಲಿ ಅಲಿ
ಮಧ್ಯಮ ಪುರುಷ ಇರಿ, ಇ
ಉತ್ತಮ ಪುರುಷ (ಅಲಿ) ಓಣ

 

ಏಕ
ಬಹು ಏಕ ಬಹು
ಪ್ರಥಮ ಪುರುಷ ತಿಳಿಯಲಿ ತಿಳಿಯಲಿ ಮಾಡಲಿ ಮಾಡಲಿ
ಮಧ್ಯಮ ಪುರುಷ ತಿಳಿ ತಿಳಿಯಿರಿ ಮಾಡು ಮಾಡಿರಿ ಮಾಡಿ
ಉತ್ತಮ ಪುರುಷ (ತಿಳಿಯಲಿ) ತಿಳಿಯೋಣ (ಮಾಡಲಿ) ಮಾಡೋಣ

. ನಿಷೇಧಾರ್ಥ

ಒಂದು ಕೆಲಸ ನಡೆಯಲಿಲ್ಲ ಅಥವಾ ನಡೆಯುವುದಿಲ್ಲ ಎಂಬ ಕ್ರಿಯೆಯ ನಿಷೇಧವನ್ನು ಈ ರೂಪಗಳು ತಿಳಿಸುತ್ತವೆ. ನಿಷೇಧಾರ್ಥದ ಆಖ್ಯಾತ ಪ್ರತ್ಯಯಗಳು ಭೂತ ಭವಿಷ್ಯತ್ಕಾಲದ ಆಖ್ಯಾತ ಪ್ರತ್ಯಯಗಳಂತೆಯೇ ಇವೆ. ಪ್ರಥಮ ಪುರುಷ ನಪುಂಸಕ ಲಿಂಗದಲ್ಲಿ ಮಾತ್ರ ಬದಲಾವಣೆಯಿದೆ. ನಿಷೇಧಾರ್ಥದ ಆಖ್ಯಾತ ಪ್ರತ್ಯಯಗಳು ಈ ಕೆಳಗಿನಂತಿವೆ.

ಏಕ ಬಹು
ಪ್ರ. ಪುರುಷ ಪು ಅನು ಅರು
ಸ್ತ್ರೀ ಅಳು ಅದು
ನಪುಂ ಅದು ಅವು
ಮ. ಪುರುಷ ಪು ಅರಿ
ಸ್ತ್ರೀ ಅರಿ
ಉ. ಪುರುಷ ಪು ಎನು ಎವು
ಸ್ತ್ರೀ ಎನು ಎವು

 

ಏಕ ಬಹು ಏಕ ಬಹು
ಪ್ರ. ಪುರುಷ ಪುಲ್ಲಿಂಗ ತಿಳಿಯನು ತಿಳಿಯರು ಮಾಡನು ಮಾಡರು
    ಸ್ತ್ರೀ ತಿಳಿಯಳು ತಿಳಿಯರು ಮಾಡಳು ಮಾಡರು
    ನಪುಂ ತಿಳಿಯದು ತಿಳಿಯವು ಮಾಡದು ಮಾಡವು
ಮಧ್ಯಮ ಪುರುಷ ತಿಳಿಯೆ ತಿಳಿಯರಿ ಮಾಡೆ ಮಾಡರಿ
ಉತ್ತಮ ಪುರುಷ ತಿಳಿಯೆನು ತಿಳಿಯೆವು ಮಾಡೆನು ಮಾಡೆವು

ನಿಷೇಧಾರ್ಥದ ಪ್ರತ್ಯಯಗಳು ಸೇರುವಾಗ ತರು, ಬರು ಎಂಬ ಧಾತುಗಳ ಮೊದಲ ಸ್ವರವು ದೀರ್ಘವಾಗುತ್ತವೆ.

ಅಲ್ಲದೆ ಪ್ರ. ಪು. ಪುಲ್ಲಿಂಗ ಏಕವಚನದ ಅನು, ಉ.ಪು. ಏಕವಚನದ ಎನು ಎಂಬ ರೂಪಗಳು ಕೊನೆಯ ಅಕ್ಷರವನ್ನು ಕಲೆದುಕೊಂಡು ಅ, ಎ ಎಂದೂ ಆಗುವುದು.

ತಾನೂ ಮಾಡ ಬೇರೆಯವರಿಗೂ ಬಿಡ

ಆ ಕೆಲಸವನ್ನು ನಾನಂತೂ ಮಾಡೆ

. ಸಂಭಾವನಾರ್ಥ

ಒಂದು ಕ್ರಿಯೆ ನಡೆದೇ ನಡೆಯುವುದೆಂಬ ನಿಶ್ಚಯವಿಲ್ಲದಿದ್ದರೂ ಅದು ನಡೆಯುವ ಸಂಭವ ಇರುವುದು ಎಂಬುದನ್ನು ತಿಳಿಸುವ ಕ್ರಿಯಾರೂಪಗಳನ್ನು ಸಂಭಾವನಾರ್ಥದ ಕ್ರಿಯಾ ರೂಪಗಳೆಂದು ಹೇಳಲಾಗುತ್ತದೆ. ಇವುಗಳಿಗೆ ಸೇರುವ ಆಖ್ಯಾತ ಪ್ರತ್ಯಯಗಳು ಹೀಗಿವೆ.

ಏಕ ಬಹು
ಪ್ರಥಮ ಪುರುಷ ಪುಲ್ಲಿಂಗ ಆನು ಆರು
ಸ್ತ್ರೀ ಆಳು ಆರು
ನಪುಂ ಈತು ಅವು
ಮಧ್ಯಮ ಪುರುಷ ಈಯೆ ಈರಿ
ಉತ್ತಮ ಪುರುಷ ಏನು ಏವು

 

ಏಕ ಬಹು ಏಕ ಬಹು
ಪ್ರ. ಪು. ಪುಲ್ಲಿಂಗ ತಿಳಿದಾನು ತಿಳಿದಾರು ಹೋದಾನು ಹೋದಾರು
ಸ್ತ್ರೀ ತಿಳಿದಾಳು ತಿಳಿದಾರು ಹೋದಾಳು ಹೋದಾರು
ಪು ತಿಳಿದೀತು ತಿಳಿದಾವು ಹೋದೀತು ಹೋದಾವು
ಮ. ಪು. ತಿಳಿದೀಯೆ ತಿಳಿದೀರಿ ಹೋದೀತೆ ಹೋದೀರಿ
ಉ.ಪು. ತಿಳಿದೇನು ತಿಳಿದೇವು ಹೋದೇನು ಹೋದೇವು

... ಸಾಪೇಕ್ಷ ಕ್ರಿಯಾರಚನೆಗಳು

ವಾಕ್ಯದಲ್ಲಿ ಬಳಕೆಯಾದ ಕ್ರಿಯಾಪದದ ಅರ್ಥ ಪೂರ್ಣವಾಗಲು ಬೇರೊಂದು ಕ್ರಿಯಾಪದದ ಸಹಾಯವನ್ನು ಅಪೇಕ್ಷಿಸಿದರೆ ಅಂತಹ ಕ್ರಿಯಾರೂಪವನ್ನು ಸಾಪೇಕ್ಷ ಕ್ರಿಯಾರೂಪಗಳು ಎನ್ನಲಾಗುತ್ತದೆ. ಇವಕ್ಕೆ ಪುರುಷ, ಲಿಂಗ, ವಚನಗಳಲ್ಲಿ ರೂಪಭೇದವಿಲ್ಲದಿದ್ದರೂ ಬೇರೆ ಬೇರೆ ಕಾಲಗಳನ್ನೂ, ಅರ್ಥಗಳನ್ನೂ ತಿಳಿಸುವುದಕ್ಕೆ ಬೇರೆ ಬೇರೆ ರೂಪಗಳಿವೆ. ಇವುಗಳಲ್ಲಿ ವರ್ತಮಾನ ಮ್ಯಾನ, ಭೂತನ್ಯೂನ, ನಿಷೇಧ ನ್ಯೂನ, ಪಕ್ಷಾರ್ಥ, ಭಾವಾರ್ಥ ಎಂಬ ವಿಧಗಳಿವೆ.

. ವರ್ತಮಾನ ನ್ಯೂನ : ಧಾತುವಿಗೆ ಉತ್ತಾ ಎಂಬ ಪ್ರತ್ಯಯವು ಸೇರಿ ವರ್ತ ಮಾನನ್ಯೂನ ರೂಪಗಳಾಗುತ್ತವೆ.

ಮಗು ಕುಣಿಯುತ್ತಾ ಬೀದಿಗೆ ಹೋಯಿತು
ಹೆಂಗಸರು ಹಾಡುತ್ತಾ ರಂಗೋಲಿ ಬಿಡಿಸುತ್ತಾರೆ.
ಅಳುತ್ತಾ ಬಂದೆವು ನಗುತ್ತಾ ಹೋಗುವೆವು

ಮೇಲಿನ ವಾಕ್ಯಗಳಲ್ಲಿ ಕುಣಿಯುತ್ತಾ ಹಾಡುತ್ತಾ, ಅಳುತ್ತಾ, ನಗುತ್ತಾ ಎಂಬುವು ಕಾರ್ಯ ಪೂರ್ಣಮಾಡಲು ಹೋಯಿತು, ಬಿಡಿಸುತ್ತಾರೆ, ಬಂದರು, ಹೋದರು, ಎಂಬ ಪೂರ್ಣ ಕ್ರಿಯಾ ಪದಗಳನ್ನು ಆಶ್ರಯಿಸಿವೆ. ಅಲ್ಲದೆ ಸಾಪೇಕ್ಷ ಕ್ರಿಯಾರೂಪಗಳು ಪೂರ್ಣಕ್ರಿಯಾ ಪದಗಳ ಕಾಲವನ್ನೇ ಅವಲಂಬಿಸುತ್ತವೆ.

. ಭೂತನ್ಯೂನ : ಧಾತುವಿಗೆ ‘ಇ’ ಅಥವಾ ‘ದು’ ಎಂಬ ಪ್ರತ್ಯಯ ಸೇರಿ ಭೂತನ್ಯೂನ ರೂಪಗಳಾಗುತ್ತವೆ.

ಕೆಲಸ ಮಾಡಿ ಮಾಡಿ ದಣಿದಿದ್ದರು
ಈ ಸುದ್ದಿಯನ್ನು ಹೇಳಿ ನೋಯಿಸಿದೆಯಲ್ಲ
ಚಿತ್ರವನ್ನು ಬರೆದು ಹೆಸರು ನೀಡು

ಮೇಲಿನ ವಾಕ್ಯಗಳಲ್ಲಿ ಮಾಡಿ, ಹೇಳಿ, ಬರೆದು ಎಂಬುವು ಪೂರ್ಣ ಕ್ರಿಯಾಪದದ ಕಾರ್ಯಕ್ಕೆ ಮೊದಲೇ ಸಾಪೇಕ್ಷ ಕ್ರಿಯಾಪದದ ಕಾರ್ಯ ನಡೆದಿರುತ್ತವೆಂಬುದನ್ನು ಸೂಚಿಸುತ್ತವೆ.

. ನಿಷೇಧ ನ್ಯೂನ : ಯಾವುದೇ ಕಾರ್ಯ ನಡೆಯಲಿಲ್ಲವೆಂದು ಹೇಳುತ್ತಾ ಅರ್ಥವನ್ನು ಪೂರ್ಣಗೊಳಿಸಲು ಬೇರೊಂದು ಕ್ರಿಯಾಪದದ ಸಹಾಯವನ್ನು ಅಪೇಕ್ಷಿಸುವ ರೂಪವೇ ನಿಷೇಧ ನ್ಯೂನರೂಪ. ಕ್ರಿಯೆಯ ನಿಷೇಧವನ್ನು ತಿಳಿಸುತ್ತದೆಯಾದರೂ ಅರ್ಥಪೂರ್ತಿಯಾಗಲು ಬೇರೊಂದು ಕ್ರಿಯಾಪದದ ಸಹಾಯವಿರಲೇಬೇಕಾದ ಈ ರೂಪ ಧಾತುವಿಗೆ ‘ಅದೆ’ ಎಂಬ ಪ್ರತ್ಯಯ ಸೇರಿ ರಚನೆಯಾಗುತ್ತದೆ.

ಮುಖ್ಯಸ್ಥರಿಗೆ ತಿಳಿಸದೆ ಹೋಗಬೇಡಿ
ಕೊಳಲಿನ ದನಿ ಕೇಳಿ ಹಸುಗಳು ಹುಲ್ಲನ್ನು ಮೇಯದೆ ನಿಂತವು

ಅಂತೆಯೇ, ಕಾಯದೆ ಕಾಣದೆ, ಓದದೆ, ಕೊಲ್ಲದೆ, ಬರೆಯದೆ, ನಿಲ್ಲದೆ, ಚಾಚದೆ ಕುಣಿಯದೆ, ಕುಲುಕದೆ, ತಿದ್ದದೆ, ನೆಡದೆ, ಮುಟ್ತದೆ, ಮುಳುಗದೆ ಇತ್ಯಾದಿ. ತರು, ಬರು ಧಾತುಗಳಿಗೆ ತಾರದೆ ತರದೆ, ಬಾರದೆ, ಬರದೆ ಎಂಬ ರೂಪಗಳೂ ಬಳಕೆಯಾಗುತ್ತವೆ.

ಪಕ್ಷಾರ್ಥ : ಇದರ ಪ್ರತ್ಯಯ ‘ಅರೆ’. ಇದು ಧಾತುವಿನ ನಂತರ ಬರುವ ‘ದ’ ಪ್ರತ್ಯಯಕ್ಕೆ ಸೇರುತ್ತದೆ. ಒಂದು ಕಾರ್ಯ ನಡೆದ ಪಕ್ಷದಲ್ಲಿ ಇನ್ನೊಂದು ಕಾರ್ಯವೂ ನಡೆಯುತದೆ. ಇಲ್ಲವಾದರೆ ಇಲ್ಲ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ಉದಾ:

ಒಂದು ಕೊಂಡರೆ ಇನ್ನೊಂದು ಉಚಿತ ಸಿಗುತ್ತದೆ
ಬಿಸಿ ಸೋಕಿದರೆ ಕೈ ಸುಡುತ್ತದೆ.
ನೀನು ಬಂದರೆ ನಾನೂ ಬರುತ್ತೇನೆ.

ಇಲ್ಲಿ ಒಂದು ಕಾರ್ಯ ನಡೆದ ಪಕ್ಷದಲ್ಲಿ ಇನ್ನೊಂದು ಘಟಿಸುತ್ತದೆ. ಇಲ್ಲಾವಾದರೆ ಇಲ್ಲ ಎಂಬಂತೆ ಅದಕ್ಕೆ ಆವಶ್ಯಕವಾದ ಪರಿಸ್ಥಿತಿಯನ್ನು ‘ಕೊಂಡರೆ’ ‘ಸೋಕಿದರೆ’, ‘ಬಂದರೆ’ ಎಂಬ ರೂಪಗಗಳು ತೋರಿಸುತ್ತದೆ.

ಇನ್ನಿತರ ಉದಾ : ಓಡಿದರೆ, ನುಡಿದರೆ, ಬಂದರೆ, ಹೋದರೆ, ತಿಂದರೆ ಇತ್ಯಾದಿ.

ಭಾವಾರ್ಥ : ಯಾವುದೇ ಒಂದು ಕ್ರಿಯೆಯ ಪ್ರಯೋಜನವನ್ನು ತೋರಿಸಲು ಕ್ರಿಯಾ ಧಾತುವಿಗೆ ‘ಅಲು’ ಎಂಬ ಪ್ರತ್ಯಯವನ್ನು ಸೇರಿಸಲಾಗುತ್ತದೆ. ಉದಾ: ದಸರೆಯನ್ನು ನೋಡಲು ದೂರದ ಊರುಗಳಿಂದ ಜನರು ಬರುತ್ತಾರೆ; ಊರಿನ ಜನರು ಚಿರತೆಯನ್ನು ಹಿಡಿಯಲು ಉಪಾಯವನ್ನು ಮಾಡಿದರು. ಮೇಲಿನ ವಾಕ್ಯಗಳಲ್ಲಿ ನೋಡಲು, ಹಿಡಿಯಲು ಎಂಬ ರೂಪಗಳು ಬರುತ್ತಾರೆ. ಮಾಡಿದರು ಎಂಬ ಕ್ರಿಯೆಯ ಪ್ರಯೋಜನವನ್ನು ತೋರಿಸು ತ್ತದೆ. ಎರಡು ಕ್ರಿಯೆಗಳಲ್ಲಿ (ನೋಡಲು ಬರುತ್ತಾರೆ) ಒಂದಕ್ಕಾಗಿ ಮತ್ತೊಂದು ನಡೆಯಿತು ಎಂದು ಹೇಳುವಾಗ ಮೊದಲನೆಯ ಕ್ರಿಯೆ (ನೋಡು)ಯನ್ನು ತಿಳಿಸುವ ಧಾತುವಿಗೆ ‘ಅಲು’ ಎಂಬ ಪ್ರತ್ಯಯ ಸೇರುತ್ತದೆ. ಹೀಗೆ ಪ್ರತ್ಯಯ ಸೇರಿದರೂ ಕ್ರಿಯೆ ಪೂರ್ಣವಾಗಲು ಇನ್ನೊಂದು ಪೂರ್ಣ ಕ್ರಿಯಾಪದ ಬೇಕೇ ಬೇಕು. ಹಾಗಾಗಿ ‘ಅಲು’ ಪ್ರತ್ಯಯದೊಡನೆ ಬರುವ ರೂಪ ಸಾಪೇಕ್ಷ ಕ್ರಿಯಾರೂಪವಾಗಿದೆ. ಕೆಲವು ವೇಳೆ ‘ಅಲು’ ಎಂಬುದು ‘ಅ’ ಎಂಬ ರೂಪದಲ್ಲೂ (ಪೋಲಿಸರನ್ನು ನೋಡಿ ಕಳ್ಳ ಓಡತೊಡಗಿದನು; ಓಡಿ + ಅ); ‘ಅಲಿಕ್ಕೆ’ ಎಂಬ ರೂಪದಲ್ಲೂ (ಮುಖವನ್ನು ತೊಳಿಯಲಿಕ್ಕೆ ನೀರಿನ ಬಳಿ ಹೋದನು; ತೊಳೆ + ಅಲಿಕ್ಕೆ) ಬರುತ್ತವೆ.

ಇಷ್ಟೇ ಅಲ್ಲದೆ ಇನ್ನೂ ಹಲವು ರೂಪಗಳು ಭಾವಾರ್ಥವನ್ನು ಸೂಚಿಸುವುದುಂಟು ‘ದಸರೆ ನೋಡುವುದಕ್ಕೆ ಜನ ಬಂದರು’. ಇಲ್ಲಿ ’ನೋಡುವುದಕ್ಕೆ’ ಬದಲು ನೋಡುವು ದಕ್ಕಾಗಿ, ನೋಡುಬುದಕ್ಕೋಸ್ಕರ, ನೋಡಲೆಂದು, ನೋಡಲಿಕ್ಕೆಂದು, ನೋದಬೇಕೆಂದು ಎಂಬ ರೂಪಗಳೂ ಬಳಕೆಯಲ್ಲಿವೆ. ಇವೆಲ್ಲವೂ ಸಾಪೇಕ್ಷ ಕ್ರಿಯಾರೂಪಗಳು.

.. ಭೂತಕಾಲದ ರೂಪದಲ್ಲಿ ಬದಲಾವಣೆ

ಧಾತುಗಳಿಗೆ ಭೂತಕಾಲವಾಚಕ ಪ್ರತ್ಯಯವನ್ನು ಸೇರಿಸಿದಾಗ ಆಗುವ ಬದಲಾವಣೆಯನ್ನು ಗಮನಿಸಿ ಕ್ರಿಯಾಪದಗಳನ್ನು ಎರಡು ವರ್ಗಗಳಾಗಿ ವಿಂಗಡಿಸಬಹುದು. ಭೂತಕಾಲದ ಪ್ರತ್ಯಯ ‘ದ’. ಆದರೆ ಎಲ್ಲ ಕಡೆಯೂ ‘ದ’ ಎಂಬುದು ಸೇರದೇ ಬೇರೆ ಬೇರೆ ಅಕ್ಷರಗಳನ್ನು ಪಡೆಯುತ್ತವೆ. ಹಾಎ ಅಕ್ಷರಗಳನ್ನು ಪಡೆದ ನಂತರ ಪದದ ರೂಪವೇ ಭಿನ್ನವಾಗುತ್ತದೆ. ಅಂತಹ ಕೆಲವು ಕ್ರಿಯಾರೂಪಗಳಿವೆ. ಧಾತುವಿಎ ಸೇರುವ ವಿವಿಧ ಅಕ್ಷರಗಳ ಆಧಾರದ ಮೇಲೆ ಕ್ರಿಯಾಪದಗಳು ರೂಪ ಪಡೆಯುತ್ತವೆ. ಹೀಗೆ ಆಗಮವಾಗಿ ಬರುವ ಅಕ್ಷರಗಳೆಂದರೆ ದ, ತ, ಡ, ಕ, ಟ್, ಇದ್, ಹೀಗೆ ಬರುವಾಗಲೂ ಧ್ವನಿ ಪರಿಸರವನ್ನು ಅವಲಂಬಿಸಿ ಬರುತ್ತದೆ. ಅಂತ್ಯವ್ಯಂಜನ ‘ಣ್’ ಇದ್ದಾಗ ‘ಡ’ (ಕಾಣು > ಕಂಡೆ); ಗ್ ಇದ್ದಾಗ ಕ (ನಗು > ನಕ್ಕೆ); ಡ್ ಇದ್ದಾಗ ಟ (ಇಡು > ಇಟ್ಟೆ); ಲ ಇದ್ದಾಗ ತ ಅಥವಾ ದ (ನಿಲ್ಲು > ನಿಂತೆ; ಸೋಲು > ಸೋತೆ; ಕೊಲ್ಲು > ಕೊಂದೆ); ಆದರೆ ಬಹುತೇಕ ಧಾತುಗಳೊಡನೆ ಬರುವ ಪ್ರತ್ಯಯ ‘ಇದ್’ ಇದು ಅಂತ್ಯದಲ್ಲಿ ದ್ವಿತ್ವವ್ಯಂಜಗಳಿರುವಾಗ (ಅಪ್ಪು – ಅಪ್ಪಿದನು; ಕುಕ್ಕು > ಕುಕ್ಕಿದನು); ಅನುಸ್ವಾರಯುಕ್ತ ಧಾತುಗಳಲ್ಲಿ (ಹಂಚು – ಹಂಚಿದನು; ತಂಗು – ತಂಗಿ ದನು); ದೀರ್ಘಾದಿ ಸ್ವರವಿರುವ ಧಾತುಗಳಲ್ಲಿ (ತೇಲು – ತೇಲಿದನು ಬಾಳು+ಇದ್+ಅನು); (c) vcvcv ರಚನೆಯಿರುವ ಧಾತುಗಳಲ್ಲಿ (ಒದರು+ಇದ್+ಅನು; ಕಲು+ಇದ್+ಅನು); ಮತ್ತು ‘ಇಸು’ ವಿನಿಂದಾದ ಧಾತುಗಳಲ್ಲಿ ‘ಇದ್’ ರೂಪ ಬಳಕೆಯಾಗುತ್ತದೆ.

ವಿವಿಧ ಅಕ್ಷರಗಳನ್ನು ಭೂತಕಾಲದ ರೂಪವಾಗಿ ಪಡೆದು ಬದಲಾವಣೆ ಹೊಂದುವ ರೂಪಗಳನ್ನು ಆಧರಿಸಿ ಕ್ರಿಯಾಪದಗಳನ್ನು ಬದಲಾವಣೆ ಹೊಂದುವ ರೂಪಗಳು, ಹೊಂದದ ರೂಪಗಳು ಎಂದು ಎರಡು ವರ್ಗಗಳಾಗಿ ವಿಂಗಡಿಸಬಹುದು. ಮೊದಲಿಗೆ ವಿವಿಧ ಅಕ್ಷರಗಳನ್ನು ಪಡೆದು ಬದಲಾವಣೆ ಹೊಂದುವ ರೂಪಗಳನ್ನು ನೋಡೋಣ.

ದ್ ಭೂತಕಾಲವಾಚಕ ಪಡೆಯುವ ರೂಪಗಳು

ಹೋಗು – ಹೋದೆನು
ತಿನ್ನು – ತಿಂದೆನು
ಬೀಳು – ಬಿದ್ದೆನು
ಬಾ/ ಬಾರು – ಬಂದೆನು
ತಾ/ತರು – ತಂದನು
ಕೊಲ್ಲು – ಕೊಂದನು
ಏಳು – ಎದ್ದನು
ಇರು – ಇದ್ದನು
ಗೆಲ್ಲು – ಗೆದ್ದನು
ಬೇಯು – ಬೆಂದಿತು
ಸಲ್ಲು – ಸಂದಿತು
ನೋಯು – ನೊಂದೆನು
ಕಾಯು – ಕಾದನು
ತೇಯು – ತೇದನು
ಸೀಯು – ಸೀದಿತು
ಮಾಯು – ಮಾದಿತು
ಆಗು – ಆದನು
ಕಳು – ಅದ್ದನು
ಅನ್ನು – ಅಂದೆ …..ಇತ್ಯಾದಿ

ತ್ ಭೂತಕಾಲ ವಾಚಕ ಪಡೆಯುವ ರೂಪಗಳು

ಕೀಳು – ಕಿತ್ತೆನು
ಸೋಲು – ಸೋತನು
ನೂಲು – ನೂತನು
ಅಳು – ಅತ್ತಿತು
ಸಾಯು – ಸತ್ತಿತು
ಉಳು – ಉತ್ತನು
ಹೊರು – ಹೊತ್ತನು
ಬಾ/ಬಾಯು – ಬಾತಿತು
ಜೋಲು – ಜೋತಿತು
ಹೆರು – ಹೆತ್ತಳು
ಹೇಲು – ಹೇತಿತು
ನಿಲ್ಲು – ನಿಂತಿತು
ಈಯ್ – ಇತ್ತೆನು
ಕೂರು – ಕೂತನು ….ಇತ್ಯಾದಿ

ಡ್ ಭೂತಕಾಲವಾಚಕ ಪಡೆಯುವ ರೂಪಗಳು

ಕಾಣು – ಕಂಡೆನು
ಕೊಳ್ಳು – ಕೊಂಡೆನು
ಉಣ್ಣು – ಉಂಡೆನು

ಕ್ ಭೂತಕಾಲವಾಚಕ ಪಡೆಯುವ ರೂಪಗಳು

ಮಿಗು – ಮಿಕ್ಕಿತು
ನಗು – ನಕ್ಕಿತು
ಹೋಗು – ಹೊಕ್ಕಿತು
ಸಿಗು – ಸಿಕ್ಕಿತು
ಒಗು – ಒಕ್ಕೆನು

ಟ್ ಭೂತಕಾಲವಾಚಕ ಪಡೆಯುವ ರೂಪಗಳು

ಕೊಡು – ಕೊಟ್ಟನು
ಸುಡು – ಸುಟ್ಟಿತು
ತೊಡು – ತೊಟ್ಟಳು
ಉಡು – ಉಟ್ಟಳು
ಇಡು – ಇಟ್ಟನು
ಪಡು – ಪಟ್ಟನು
ನೆಡು – ನೆಟ್ಟನು
ಕೆಡು – ಕೆಟ್ಟಳು
ಅಡು – ಅಟ್ಟಳು

ಹೀಗೆ ಬದಲಾವಣೆ ಕಾಣಿಸಿಕೊಳ್ಳುವ ರೂಪವನ್ನು ವಿಕಾರ ಹೊಂದುವ ಮತ್ತು ಬದಲಾವಣೆಯಾಗದ ರೂಪವನ್ನು ವಿಕಾರ ಹೊಂದದ ಕ್ರಿಯಾಧಾತುಗಳು ಎಂದು ಕರೆಯಲಾಗಿದೆ. (ಅಂಗಡಿ, ೨೦೦೦)

ವಿವಿಧ ಆಗಮಗಳನ್ನು ಪಡೆಯುವ ರೂಪಗಳನ್ನು ಕುಶಾಲಪ್ಪಗೌಡರು (೨೦೦೭) ನಾಲ್ಕು ರೀತಿಯಲ್ಲಿ ವಿಂಗಡಿಸುತ್ತಾರೆ ಈ ವಿಂಗಡಣೆ ಧಾತುವಿನ ಅಂತ್ಯಸ್ವರ ವ್ಯಂಜನವನ್ನು ಗಮನಿಸಿ ಮಾಡಲಾಗಿದೆ ಒಂದನೆಯ ವರ್ಗದಲ್ಲಿ ಭೂತಕಾಲದ ರೂಪವಾಗಿ ತ್ ಪಡೆಯುವ ಧಾತುಗಳನ್ನು ಉಪರೂಪವಿರುವ ಧಾತುಗಳು (ಈಯ್-ಇಯ್+ತ್+ಎನ್ = ಇತ್ತೆನು; ಕೀಳ್+ಕಿತ್+ತ್+ಎನ್ ಇತ್ಯಾದಿ) ಉಪರೂಪವಿಲ್ಲದ ಧಾತುಗಳು ಹೆರ್-ತ್+ಅಳು = ಹೆತ್ತಳು; ಹೊರ್+ತ್+ಅನು = ಹೊತ್ತನು; ಆಂಶಿಕ ವರ್ಣ ಸಮೀಕರಣ ನಡೆಯುವ ಸಂದರ್ಭ, ಧಾತ್ವಂತ್ಯದ ಲ ಕಾರ ತಕಾರದೆದುರು ‘ನ’ ಕಾರವಾಗಿ ಪರಿವರ್ತಿಸುವಿಕೆ (ನಿಲ್+ತ್+ಅನು = ನಿಂತನು ‘ತ’ ಕಾರ ನೇರವಾಗಿ ಸೇರುವ ರೂಪಗಳು (ಕಲಿತೆ, ಬಲಿತಿತು; ಮೊಳೆತಿತು ಇತ್ಯಾದಿ) ಎಂದು ಒಳವಿಂಗಡಣೆ ಮಾಡಲಾಗಿದೆ.

‘ದ್’ ಭೂತಕಾಲವಾಚಕ ಹೊಂದುವ ಧಾತುಗಳು ಎರಡನೆಯ ವರ್ಗದಲ್ಲಿ ಬರುತ್ತವೆ. ಇವು ಸ್ವರಾಂತವಾದ ಧಾತುಗಳ ಪರದಲ್ಲಿ (ಕೇಳು-ಕೇಳಿದೆ; ಮಾಡು-ಮಾಡಿದೆ, ಆಗಿ-ಆಗಿದೆ ಅಲೆ-ಅಲೆದ) ನ, ಯ, ಲ, ಳ ದಿಂದ ಅಂತ್ಯವಾಗುವ ಧಾತುಗಳ ಪರದಲ್ಲಿ ಬರುತ್ತದೆ. (ತಿನ್ನು – ತಿಂದೆನು; ನೋಯು – ನೊಂದೆನು; ಕೊಲ್ಲು-ಕೊಂದನು; ಕಳು-ಕದ್ದನು ಇತ್ಯಾದಿ) ಮೂರನೆಯ ವರ್ಗದಲ್ಲಿ ಟ, ಡ, ಕ, ಎಂಬ ಭೂತಕಾಲವಾಚಕಗಳು ತಕ್ಕ ಧ್ವನಿ ಪರಿಸರದಲ್ಲಿ ಸೇರುತ್ತವೆ: (ಕೆಡು-ಕೆಟ್ಟಿತು ಕಾಣು+ಕಂಡನು; ನಗು-ನಕ್ಕನು ಇತ್ಯಾದಿ). ನಾಲ್ಕನೆಯ ವರ್ಗದಲ್ಲಿ ಇದ್ ಎಂಬ ಭೂತಕಾಲವಾಚಕವನ್ನು ಹೊಂದುವ ರೂಪಗಳು ಸೇರುತ್ತವೆ. ಇದು ಅತಿ ದೊಡ್ಡವರ್ಗ. ಇದರಲ್ಲಿ ೧. ಹ್ರಸ್ವ ಸ್ವರವಿದ್ದು ಅಂತ್ಯದಲ್ಲಿ ಸಂಯುಕ್ತವ್ಯಂಜನ ಅಥವಾ ದ್ವಿತ್ವ ವ್ಯಂಜನವಿರುವ ಧಾತುಗಳು (ಈಂಟ್+ಇದ್+ಅನು – ಈಂಟಿದನು; ಅಟ್ಟ್+ಇದ್+ಅನು – ಅಟ್ಟಿದನು) ೨. ಒಂದನೆಯ ವರ್ಗದಲ್ಲಿ ಬರುವುದಕ್ಕೆ ಹೊರತಾದ ದೀರ್ಘಸ್ವರಗಳಿದ್ದು ವ್ಯಂಜನಾಂತವಾದ ದ್ವಿವರ್ಣ ಅಥವಾ ಬಹುವರ್ಣಧಾತುಗಳು ಸೇರುತ್ತವೆ (ಅಗಲ್+ಇದ್+ಅನು ಅಗಲಿದನು; ಅಣಕಿಸು+ಇದ್+ಅನು-ಅಣಕಿಸಿದನು); ಅಲ್ಲದೆ ಒಂದು ಮತ್ತು ಮೂರನೇ ವರ್ಗದ ಧಾತುಗಳು ‘ಇಸು’ ಎಂಬ ಪ್ರೇರಣಾರ್ಥಕ ಪ್ರತ್ಯಯ ಹೊಂದಿದಾಅ ಈ ವರ್ಗಕ್ಕೆ ಸೇರುತ್ತವೆ. (ಅಣಕಿಸ+ಇದ್+ಅನು) (ಕನ್ನಡ ಸಂಕ್ಷಿಪ್ತ ವ್ಯಾಕರಣ, ಪು. ೬೪ – ೮೨)

ಬದಲಾವಣೆ ಹೊಂದದ ರೂಪಗಳು

ಈ ರೂಪಗಳಲ್ಲಿ ಭೂತಕಾಲವಾಚಕ ಪ್ರತ್ಯಯವಾದ ದ್ ಸೇರಿದಾಗ ಯಾವ ಬದಲಾವಣೆಯೂ ಆಗುವುದಿಲ್ಲ.

ಅಗಿ-ಅಗಿದನು ಜಿಗಿ-ಜಿಗಿದನು
ಅಳೆ-ಅಳೆದನು ತಡೆ-ತಡೆದನು
ಅಗೆ-ಅಗೆದನು ದಣಿ-ದಣಿದನು
ಅಳಿ-ಅಳಿದಿತು ನೆನೆ-ನೆನೆದನು
ಇರಿ-ಇರಿದನು ಬೆಳೆ-ಬೆಳೆದರು
ನಲಿ-ನಲಿದನು
ಒಡೆ-ಒಡೆದನು ಮುರಿ-ಮುರಿದನು
ಒದೆ-ಒದೆದನು ನುಡಿ-ನುಡಿದನು
ಒಲಿ-ಒಲಿದಳು ತುಳಿ-ತುಳಿದಳು
ಕಡಿ-ಕಡಿದಳು ತಿವಿ-ತಿವಿದನು
ಕರೆ-ಕರೆದನು ಜರೆ-ಜರೆದನು
ಕುಡಿ-ಕುಡಿದನು ಮಿಡಿ-ಮಿಡಿದನು
ಕುದಿ-ಕುದಿದನು ಬಿಗಿ-ಬಿಗಿದನು
ಕಸಿ-ಕಸಿದನು ಹರಿ-ಹರಿದನು
ಒರೆ-ಒರೆದನು ಹಿಡಿ-ಹಿಡಿದನು
ಕುಸಿ-ಕುಸಿದನು ತುರಿ-ತುರಿದಳು
ಕುಣಿ-ಕುಣಿದಳು ಹೊಡೆ-ಹೊಡೆದನು
ಕೆರೆ-ಕೆರೆದನು ಹುರಿ-ಹುರಿದನು
ಒರೆ-ಒರೆದನು
ನೆಗೆ-ನೆಗೆದನು  ಸರಿ-ಸರಿದನು
ಮುನಿ-ಮುನಿದನು ಬಡಿ-ಬಡಿದನು
ಸುಳಿ-ಸುಳಿದನು ಮಡಿ-ಮಡಿದನು ಇತ್ಯಾದಿ

ಹೀಗೆ ಧಾತುಗಳನ್ನು ಅವು ಭೂತಕಾಲವಾಚಕ ಪ್ರತ್ಯಯವನು ಪಡೆದ ನಂತರ ಆಗುವ ರೂಪವ್ಯತ್ಯಾಸದ ಆಧಾರದ ಮೇಲೆ ಬದಲಾವಣೆ ಹೊಂದುವ ಮತ್ತು ಬದಲಾವಣೆಯಾಗದ ಧಾತುಗಳು ಎಂದು ವಿಂಗಡಿಸಬಹುದು.

ಪ್ರಥಮ ಪುರುಷ ನಂಪೂಂಸಕಲಿಂಗ ಏಕವಚನದಲ್ಲಿ ‘ದ್’ ಕಾರಕ್ಕೆ ಬದಲಾಗಿ ‘ಯ್’ ಕಾರ ಬರುತ್ತದೆ (ಮೆರೆ-ಮೆರೆಯಿತು; ಸಿಡಿ-ಸಿಡಿಯಿತು; ಆಗು-ಆಯಿತು; ಹೋಗು-ಹೋಯಿತು ಇತ್ಯಾದಿ) ಹಾಡು, ನೋಡು ಇತ್ಯಾದಿ ಉಕಾರಾಂತ ರೂಪಗಳಲ್ಲಿ ‘ದ್’ ಕಾಣಿಸುವುದಿಲ್ಲ ಹಾಡಿತು. ಇದುವರೆಗೆ ನೋಡಲಾದ ವರ್ಗೀಕರಣವು ಕ್ರಿಯಾರೂಪಗಳ ರಾಚನಿಕ ವರ್ಗೀಕರಣವಾಗಿದೆ. ಅಕ್ಷರ ಸಂಖ್ಯೆ, ವಿವಿಧ ಸ್ವರಾಂತಗಳು ಕಾಲ, ಅರ್ಥಭೇದಗಳು, ಭೂತಕಾಲ ರೂಪದ ಆಧಾರ, ಪೂರ್ಣಕ್ರಿಯಾಪದ, ಸಾಪೇಕ್ಷ ರೂಪಗಳು ಹೀಗೆ ಕ್ರಿಯಾರೂಪಗಳ ರಚನೆಯನ್ನು ಆಧರಿಸಿ ವರ್ಗೀಕರಿಸಲಾಗಿದೆ. ಪ್ರತಿಯೊಂದು ವರ್ಗೀಕರಣದ ಬಗೆಗೂ ಅನೇಕ ಉದಾಹರಣೆಗಳನ್ನು ನೀಡಲಾಗಿದೆ.