ಕ್ರಿಯಾಪದಗಳ ಬಳಕೆಯನ್ನು ಆಧರಿಸಿಯೂ ಅವುಗಳನ್ನು ವರ್ಗೀಕರಿಸಬಹುದು. ಇದಕ್ಕೆ ವಾಕ್ಯದಲ್ಲಿ ಬರುವ ವಿವಿಧ ವರ್ಗದ ಪದಗಳನ್ನು ಆಧರಿಸಿಲಾಗುತ್ತದೆ. ವಾಕ್ಯದಲ್ಲಿ ಬರುವ ಕರ್ಮಪದವನು ಆಧಾರವಾಗಿ ಇಟ್ಟುಕೊಂಡು ಕ್ರಿಯಾಪದಗಳನ್ನು ಸಕರ್ಮಕ ಅಕರ್ಮಕ ಎಂದು ವರ್ಗೀಕರಿಸುವುದುಂಟು. ವಾಕ್ಯದಲ್ಲಿ ಕರ್ಮಪದವನ್ನು ಅಪೇಕ್ಷಿಸುವ ಧಾತುಗಳೆಲ್ಲ ಸಕರ್ಮಕ ಧಾತುಗಳಾದರೆ, ಕರ್ಮಪದದ ಅವಶ್ಯಕತೆಯಿರದ ಧಾತುಗಳು ಅಕರ್ಮಕ ಧಾತುಗಳು. ಅಂದರೆ ಕರ್ಮಪದದ ಸಹಾಯವನ್ನು ಪಡೆದು ಕರ್ತೃ ವಿನಿಂದಾದ ಕ್ರಿಯೆಯನ್ನು ಸ್ಪಷ್ಟಪಡಿಸಿಸುವ ಕ್ರಿಯಾಪದವು ಸಕರ್ಮಕವಾದರೆ ಕರ್ಮಪದದ ಸಹಾಯವಿಲ್ಲದೆ ಕರ್ತೃವಿನ ಕ್ರಿಯೆಯನ್ನು ತಿಳಿಸುವ ಕ್ರಿಯಾಪದವು ಅಕರ್ಮಕ ಕ್ರಿಯಾಪದ. ಉದಾಹರಣೆಗೆ

ಸೂರ್ಯ ಮೂಡಿದನು
ಮಗು ಮಲಗಿತು
ಹುಡುಗ ಓಡಿದನು

ಇಲ್ಲಿನ ಮೂಡಿದನು, ಮಲಗಿತು, ಓಡಿದನು ಎಂಬ ಕ್ರಿಯಾಪದಗಳು ಕರ್ಮಪದವನ್ನು ಅಪೇಕ್ಷಿಸದೆ ಕರ್ತೃವಿನ ಕ್ರಿಯೆಯನ್ನು ಪೂರ್ಣವಾಗಿ ತಿಳಿಸುತ್ತವೆ. ಹಾಗಾಗಿ ಇವು ಅಕರ್ಮಕ. ಕರ್ಮಪದವನ್ನು ಅಪೇಕ್ಷಿಸದೆ ಕ್ರಿಯಾಪದಗಳು

ಕರು ಹಾಲನ್ನು ಕುಡಿಯಿತು
ಹುಡುಗ ಪುಸ್ತಕವನ್ನು ಓದಿದನು
ಬಾಲಕ ಊರನ್ನು ಸೇರಿದನು

ಇಲ್ಲಿ ಕುಡಿಯಿತು, ಓದಿದನು, ಸೇರಿದನು ಎಂಬ ಕ್ರಿಯಾಪದಗಳು ಕರ್ತೃವಿನ ಕ್ರಿಯೆಯನ್ನು ಸ್ಪಷ್ಟಪಡಿಸಲು ಕರ್ಮಪದವನ್ನು ಅಪೇಕ್ಷಿಸಿವೆ. ಹಾಗಾಗಿ ಇವು ಸಕರ್ಮಕ. ಕರ್ಮಪದವನ್ನು ಅಪೇಕ್ಷಿಸುವ ಕ್ರಿಯಾಪದಗಳು

ಹಾಆಗಿ ಕ್ರಿಯಾಪದಗಳನ್ನು ಸಕರ್ಮಕ ಅಕರ್ಮಕ ಎಂದು ಎರಡು ಬಗೆಯಲ್ಲಿ ವರ್ಗೀಕರಿಸಬಹುದು. ಕನ್ನಡದ ಕ್ರಿಯಾಪದಗಳ ಈ ಎರಡು ಗುಂಪುಗಳ ಪಟ್ಟಿಯನು ಮುಂದೆ ನೀಡಲಾಗಿದೆ.

.. ಅಕರ್ಮಕ ಸಕರ್ಮಕ ರೂಪಗಳು

ಇಂಗು ಇಡು ಇಣಿಕು ಉರಿ ಊಳು ಎಗರು
ಎಟಕು ಏಗು ಏಳು ಒಗ್ಗು ಒರಗು ಒದಗು
ಒಲಿ ಒಸರು ಓಡು ಓದು ಕಂದು ಕರಗು
ಕರಟು ಕವಿ ಕಾಣು ಕಾದು ಕಾಯು ಕುಂಟು
ಕುಗ್ಗು ಕುಣಿ ಕುದಿ ಕುದುರು ಕುಲುಕು ಕುಸಿ
ಕೂಗು ಕೂಡು ಕೆಡು ಕೊರಗು ಗಿಟ್ಟು ಗೆಲ್ಲು
ಚಿಗುರು ಜಜ್ಜು ಜಡಿ ಜರುಗು ಜಿಗಿ ತಗುಲು
ತಣಿ ತಪ್ಪು ತಾಗು ತಿಣುಕು ತಿರುಗು ತುಡಿ
ತುಳುಕು ತೇಗು ತೇಲು ತೊಡಗು ತೊನೆ ತೊಯ್ಯು
ತೊಲಗು ತೊಳಸು ತೋಚು ದಕ್ಕು ದಣಿ ದುಡಿ
ದುಡುಕು ದೊರಕು ದೊರೆ ನಂದು ನಗು ನಡುಗು
ನಡೆ ನರಳು ನವೆ ನಲುಗು ನಾಟು ನಾದು
ನಿಗುರು ನಿಮಿರು ನಿಲ್ಲು ನಿಲುಕು ನೀಸು ನುಗ್ಗು
ನುಣುಚು ಸುಸುಳು ನೆರೆ ನೋಯು ಪಳಗು ಪುಟಿ
ಬಗರು ಬಗ್ಗು ಬತ್ತು ಬದುಕು ಬಳಲು ಬಾ
ಬಾಗು ಬಾಡು ಬಿಕ್ಕು ಬಿರಿ ಬೀಗು ಬೆವರು
ಬೆರೆ ಬೆಳಗು ಬೊಗಳು ಮಡಿ ಮಣಿ ಮರಳು
ಮಲಗು ಮಲೆ ಮಾಗು ಮಾಯು ಮಾಸು ಮಿಂಚು
ಮಿಗು ಮಿಡಿ ಮಿಡುಕು ಮಿಸುಕು ಮಿನುಗು ಮೀಯು
ಮುನಿ ಮುಸುಕು ಮುಳುಗು ಮೂಡು ಮೆರೆ ಮೊರೆ
ಮೊಳಗು ರೇಗು ರೋಸು ವಾಲು ಸರಿ ಸಲ್ಲು
ಸವೆ ಸಾಗು ಸಾರು ಸಿಡುಕು ಸೀನು ಸೀಯು
ಸುಂಡು ಸುಳಿ ಸೊರಗು ಸೋಕು ಸೋರು ಸೋಲು
ಹಣಿಕು ಹನಿ ಹಬ್ಬು ಹರಿ ಹಲುಬು ಹಳಸು
ಹಾರು ಹುಟ್ಟು ಹುದುಗು ಹೂಸು ಹೆಣಗು ಹೆದರು
ಹೇಲು ಹೊಂಗು ಹೊರಡು ಹೊಳೆ ಇತ್ಯಾದಿ.

... ಸಕರ್ಮಕ ಧಾತುಗಳು

ಎಡೆ ಎತ್ತು ಎರಚು ಎಸೆ ಎಳೆ ಎಳಿಸು
ಏರಿಸು ಏರು ಒಕ್ಕು ಒಗೆ ಒಡೆ ಒಡ್ಡು
ಒತ್ತು ಒದರು ಒಗೆ ಒಪ್ಪು ಒಯ್ಯು ಒರಸು
ಕಕ್ಕು ಕಚ್ಚು ಕಟ್ಟು ಕಡಿ ಕಡೆ ಕದಡು
ಕದಿ ಕರಿ ಕರೆ ಕಲಿ ಕಲಕು ಕಲಸು
ಕಸಿ ಕಳೆ ಕಾಡು ಕೀಳು ಕುಕ್ಕು ಕುಟುಕು
ಕೂಡು ಕೆರೆ ಕೇಳು ಕೇರು ಕೊಡು ಕೊಯ್ಯು
ಕೊಲ್ಲು ಕೊಳ್ಳು ಕೊರೆ ಗದರು ಗುನುಗು ಗುದ್ದು
ಗೊಣಗು ಚಚ್ಚು ಚಲ್ಲು ಚಾಚು ಜಗಿ ಜಗ್ಗು
ಜಜ್ಜು ಜಿನುಗು ತೆಗೆ ತಟ್ಟು ತಳೆ ತಡೆ
ತಬ್ಬು ತಳ್ಳು ತಲುಪು ತರಿ ತಾ ತಾಳು
ತಿಕ್ಕು ತಿದ್ದು ತಿನ್ನು ತಿವಿ ತಿಳಿ ತುಂಬು
ಚಿಮ್ಮು ತುಯ್ಯು ತುರುಕು ತುಡಿ ತೂಗು ತೂರು
ತೆಗಳು ತೆಗೆ ತೆರೆ ತೆತ್ತು ತೇಯು ತೊಡು
ತೊದಲು ತೊರೆ ತೋಡು ತೋರು ದಬ್ಬು ದಾಟು
ದೂರು ದೂಡು ದೋಚು ನಂಬು ನೆಕ್ಕು ನೆಚ್ಚು
ನಾದು ನೀಗು ನೀಡು ನೀವು ನುಂಗು ನುಡಿ
ನುಲಿ ನೂಕು ನೂಲು ನೆಕ್ಕು ನೆಡು ನೋಡು
ಪಡೆ ಪರಚು ಪೀಕು ಬಡಿ ಬಯ್ಯು ಬಯಸು
ಬರೆ ಬಳಸು ಬಿಡು ಬಿತ್ತು ಬಿಸುಡು ಬೀಸು
ಬಿದಕು ಬೆಳಗು ಬೆಳೆ ಬೇಯು ಬೇಡು ಮಗುಚು
ಮಡಗು ಮಸೆ ಮರೆ ಮಾಡು ಮಾರು ಮೀಟು
ಮೀರು ಮುಕ್ಕು ಮುಟ್ಟು ಮುಡಿ ಮುತ್ತು ಮುರಿ
ಮೂಸು ಮೆಚ್ಚು ಮೆಟ್ಟು ಮೆತ್ತು ಮೆಲ್ಲು ಮೊಗೆ
ಮೊಟಕು ಮೋಚು ರುಬ್ಬು ಸವಿ ಸಾಕು ಸಿಗಿ
ಸೀಳು ಸುಡು ಸುರಿ ಸುಲಿ ಸೂಸು ಸೇದು
ಸೇರು ಹಂಚು ಹಚ್ಚು ಹಡೆ ಹತ್ತು ಹರಟು
ಹರಡು ಹರಸು ಹರಿ ಹಾಡು ಹಾಕು ಹಾಸು
ಹಿಂಜು ಹಿಂಡು ಹಿಡಿ ಹಿಚುಕು ಹೀಜು ಹುಗಿ
ಹುಡುಕು ಹುಯ್ಯು ಹೂಣು ಹೆಕ್ಕು ಹೆರು ಹೆರೆ
ಹೇಳು ಹೇರು ಹೊಂಚು ಹೊಂದು ಹೊಗಳು ಹೊಡೆ
ಹೊರಳು ಹೊರು ಹೊಲಿ ಹೊಸೆ ಇತ್ಯಾದಿ.

.. ಮುಖ್ಯ ಘಟಕಗಳ ಆಧಾರ

ವಾಕ್ಯಗಳಲ್ಲಿ ಬರುವ ಮುಖ್ಯ ಘತಕಗಳನ್ನು ಆಧರಿಸಿ ಕ್ರಿಯಾಪದಗಳನ್ನು ವಿಂಗಡಿಸಬಹುದೆಂದು ಡಾ. ಡಿ.ಎನ್. ಶಂಕರಭಟ್ಟರು ಅಭಿಪ್ರಾಯಪಡುತ್ತಾರೆ. ಕ್ರಿಯಾರ್ಥಕ ವಾಕ್ಯಗಳಲ್ಲಿ ನಿಯೋಗಿ, ಅನುಭೋಗಿ, ಆಕರ, ವಿಷಯ ಮತ್ತು ಪ್ರೇರಕಗಳೆಂಬ ಐದು ಘಟಕಗಳು ಬರಬಲ್ಲವು. ಆದರೂ ನಿಯೋಗಿ, ಅನುಭೋಗಿ, ಮತ್ತು ಆಕರಗಳೆಂಬ ಮೂರು ಮುಖ್ಯ ಘಟಕಗಳ ಆಧಾರದ ಮೇಲೆ ಕ್ರಿಯಾಪದಗಳನ್ನು ವಿಂಗಡಿಸಬಹುದು ಅಂದು ಹೇಳುತ್ತಾರೆ. (ಕನ್ನಡ ವಾಕ್ಯಗಳು ೪೮ – ೭೨)

ಅಲ್ಲದೆ ಒಂದು ಕ್ರಿಯಾಪದದೊಂದಿಗೆ ನಿಯೋಗಿಯನ್ನು ಸೂಚಿಸುವ ಪದಗುಚ್ಚ ಬರಬಲ್ಲದೇ ಅಥವಾ ಬರಲಾರದೇ ಎಂಬುದರ ಮೇಲೆಯೂ ಎರಡು ಗುಂಪುಗಳಾಗಿ ನಿಯೋಕ್ತಿಯುಕ್ತ, ನಿಯೋಗಿ ವಿರಹಿತ ಎಂದು ವಿಂಗಡಿಸಬಹುದು ಎನ್ನುತ್ತಾರೆ.

... ನಿಯೋಗಿಯುಕ್ತ

ಕೆಲವು ವಾಕ್ಯಗಳಲ್ಲಿ ಬೇರೊಂದು ವಸ್ತು ಪ್ರಾಣಿ, ವ್ಯಕ್ತಿ ಮೊದಲಾದವುಗಳ ಮೇಲೆ ಏನಾದರೊಂದು ಪರಿಣಾಮ ಬೀರುವಂತಹ ಕಾರ್ಯ ನಡೆಸುತ್ತಿರುವ ಪದ ಬೇಕಾಗುತ್ತದೆ. ಹಾಗೆ ಕಾರ್ಯ ನಡೆಸುತ್ತಿರುವ ಪದವೇ ನಿಯೋಗಿ, ಉದಾ: ಹುಲಿ ಜಿಂಕೆಯನ್ನು ಕೊಲ್ಲುತ್ತಿದೆ ಎಂಬುದರಲ್ಲಿ ಕೆಲಸ ನಡೆಸುತ್ತಿರುವ ಪದ ಹುಲಿ ಎಂಬುದು ನಿಯೋಗಿ. ಪರಿಣಾಮಕ್ಕೆ ಒಳಗಾಗುತ್ತಿರುವುದು ಜಿಂಕೆ ಎಂಬುದು ವಿಷಯ. ಹೀಗೆ ನಿಯೋಗಿಯನ್ನು ಹೊಂದಿರಬಹುದಾದ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳನ್ನು ನಿಯೋಗಿಯುಕ್ತ ಕ್ರಿಯಾಪದಗಳು ಎಂಬ ವರ್ಗದಲ್ಲಿ ತರಬಹುದು. ಇದು ಇನ್ನೊಂದು ಬಗೆಯಲ್ಲಿ ಕರ್ತೃಯುಕ್ತ ಕ್ರಿಯಾ ಪದಗಳು ಎನ್ನಬಹುದು.

ಮತ್ತೆ ಕೆಲವು ಉದಾಹರಣೆಗಳು: ಮಾಡು, ಕೊಡು ಹಂಚು ಮಾರು, ಗುದ್ದು, ತೆರೆ, ಹಿಂಡು, ಹೆಕ್ಕು, ಕುಡಿ, ತಿನ್ನು, ತಳ್ಳು, ಅದ್ದು, ತುಂಬ, ಹಾಡು, ತಾ, ಹಾಕು, ಹಾಸು, ಕಚ್ಚು, ಸೀಳು ಹೇಳು ಒಡೆ ಇತ್ಯಾದಿ.

... ನಿಯೋಗಿ ವಿರಹಿತ

ಕೆಲವು ವಾಕ್ಯಗಳಲ್ಲಿ ಕೆಲಸ ಮಾಡುವವನ ಬಗೆಗಿನ ವಿವರಣೆ ಇರುವುದಿಲ್ಲ. ಅಂದರೆ ಅಂತಹ ವಾಕ್ಯಗಳಲ್ಲಿ ನಿಯೋಗಿಯನ್ನು ಸೂಚಿಸುವ ಪದ, ಪದಪುಂಜ ವಿರುವುದಿಲ್ಲ. ಅಂತಹ ಕರ್ತೃರಹಿತ ವಾಕ್ಯದಲ್ಲಿ ಬರುವ ಕ್ರಿಯಾಪದಗಳನ್ನು ನಿಯೋಗಿ ವಿರಹಿತ ಕ್ರಿಯಾಪದಗಳು ಎಂಬ ಗುಂಪಿನಲ್ಲಿ ಸೇರಿಸಬಹುದು. ಉದಾ: ಕರಡಿ ಗುಹೆಯಲ್ಲಿ ಅಡಗಿತು; ನಾಟಕಕ್ಕೆ ಮಕ್ಕಳು ಬಂದಿದ್ದಾರೆ. ಬಿಸಿಲಿಗೆ ಬಟ್ಟೆಗಳು ಒಣಗುತ್ತಿವೆ. ಎಂಬ ವಾಕ್ಯಗಳಲ್ಲಿ ಬಂದಿರುವ ಅಡಗು, ಬಂದಿದ್ದಾರೆ, ಒಣಗುತ್ತಿವೆ ಎಂಬ ಕ್ರಿಯಾಪದದೊಡನೆ ನಿಯೋಗಿಯನ್ನು ಸೂಚಿಸುವ ಪದಪುಂಜವಿಲ್ಲ. ಹಾಗಾಗಿ ಇವು ನಿಯೋಗಿವಿರಹಿತ ಎಂಬ ಗುಂಪಿಗೆ ಸೇರುತ್ತವೆ. ಈ ಗುಂಪಿಗೆ ಸೇರುವ ಇತರ ಪದಗಳೆಂದರೆ, ನಗು, ಅಳು, ಮಾಡು, ಓಡು, ಮೂಡು, ನಾಟು, ಎಟಕು, ಸಲ್ಲು, ತೋರು, ನೇಲು, ಹಾರು, ತಲುಪು, ಹಬ್ಬು, ಮುಳುಗು, ಮರೆ, ಕುದಿ, ಬೇಯು, ಇತ್ಯಾದಿ.

... ಅನುಭೋಗಿ

ನಿಯೋಗಿಯು ಸ್ವಪ್ರಯತ್ನದಿಂದ ಒಂದು ಕಾರ್ಯದಲ್ಲಿ ಭಾಗವಹಿಸುತ್ತಿದೆಯಾದರೆ ಅನುಭೋಗಿಯು ಬೇರಾವುದೇ ಕಾರಣಕ್ಕಾಗಿ ಒಂದು ಕಾರ್ಯದಲ್ಲಿ ಸೇರಿಕೊಂಡಿರುತ್ತದೆ. ಆದರೆ ಇದು ಕೇವಲ ಫಲಾನುಭವಿಯಲ್ಲ. ಅನುಭೋಗಿಯುಕ್ತ ಕ್ರಿಯಾಪದಗಳಿರುವ ವಾಕ್ಯಗಳಲ್ಲಿ ಅನುಭೋಗಿ ಸೂಚಕ ಪದಗುಚ್ಛವು ಸಾಮಾನ್ಯವಾಗಿ ಚತುರ್ಥಿ ವಿಭಕ್ತಿಯಲ್ಲಿ ಇರುತ್ತದೆ. ಉದಾ: ಗುರುಗಳು ವಿದ್ಯಾರ್ಥಿಗಳಿಗೆ ಪಾಠ ಹೇಳು ತ್ತಿದ್ದಾರೆ, ರಮೇಶ ತನ್ನ ಪುಸ್ತಕಗಳನ್ನು ಸುರೇಶನಿಗೆ ಕೊಟ್ಟನು ಎಂಬ ವಾಕ್ಯಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ, ಸುರೇಶನಿಗೆ ಎನ್ನುವ ಪದಗುಚ್ಛಗಳು ಅನುಭೋಗಿಗಳಾಗಿ ಚತುರ್ಥಿ ವಿಭಕ್ತಿಯಲ್ಲಿರುವುದನ್ನು ಗಮನಿಸಬಹುದು.

ಕೆಲವು ನಿಯೋಗಿಯುಕ್ತ ಕ್ರಿಯಾಪದಗಳು ಕೆಲವು ವಿಶಿಷ್ಟವಾದ ವಿಷಯಗಳೊಂದಿಗೆ ಬಂದಾಗ ಅನುಭೋಗಿಯುಕ್ತಗಳಾಗುತ್ತವೆ. ಉದಾ: ‘ಬರೆ’ ಎಂಬ ಕ್ರಿಯಾಪದ ‘ಪತ್ರ’ ಎಂಬ ವಿಷಯವನ್ನು ಹೊಂದಿದ್ದರೆ ಆಗ ಯಾರಿಗೆ ಎಂಬ ಪ್ರಶ್ನೆ ಬರುತ್ತದೆ. ಅಂತಹ ಸಂದರ್ಭದಲ್ಲಿ ಅನುಭೋಗಿಯ ಅವಶ್ಯಕತೆ ಬರುತ್ತದೆ. ಆದರೆ ಲೇಖನ, ಕಾದಂಬರಿ, ಚಿತ್ರ ಮುಂತಾದ ವಿಷಯಗಳನ್ನು ಹೊಂದಿದ್ದರೆ ಅನುಭೋಗಿ ಬರುವುದಿಲ್ಲ.

ಅವನು ತನ್ನ ತಂದೆಗೆ ಪತ್ರ ಬರೆದಿದ್ದಾನೆ.
ಅವನು ಒಂದು ಕಾದಂಬರಿ ಬರೆದಿದ್ದಾನೆ.

ಹಾಗೆಯೇ ಯಾವ ಸಂದರ್ಭಗಳಲ್ಲಿ ಅನುಭೋಗಿಯು ಬರುತ್ತದೆ. ಎಂಬುದಕ್ಕೆ ಮತ್ತಷ್ಟು ಉದಾಹರಣೆಗಳನ್ನು ನೀಡಬಹುದು.

ನರಿಗೆ ದ್ರಾಕ್ಷಿ ಹಣ್ಣು ಕಾಣಿಸಿತು
ಆಕೆಗೆ ಮನೆಯ ದಾರಿ ಮರೆತಿದೆ
ರಾಮನಿಗೆ ಹಾಡಲು ಬರುತ್ತದೆ
ಮತ್ತಷ್ಟು ಉದಾಹರಣೆಗಳು : ನಾಟು, ಸಲ್ಲು, ತೋರು, ಬೆರೆ, ಇತ್ಯಾದಿ

... ಆಕರ

ಕ್ರಿಯೆ ರೂಪಗೊಳ್ಳಲು ಕಾರಣವಾಗುವ ಅಂಶವೇ ‘ಆಕರ’ ಎನಿಸಿ ಕೊಳ್ಳುತ್ತದೆ. ಉದಾ: ರಾಮು ಹಣವನ್ನು ಕಪಾಟಿನಲ್ಲಿ ಇಟ್ಟಿದ್ದಾನೆ. ಎನ್ನುವಲ್ಲಿ ‘ಕಪಾಟಿನಲ್ಲಿ’ ಎನ್ನುವ ಪದ ಆಕರ ಎಂಬ ಘಟಕವನ್ನು ಸೂಚಿಸುತ್ತದೆ. ಆಕರಯುಕ್ತವಾದ ವಾಕ್ಯಗಳಲ್ಲಿ ಬರುವ ಕ್ರಿಯಾಪದಗಳನ್ನು ಈ ರೀತಿ ಪಟ್ಟಿ ಮಾಡಬಹುದು.

೧. ಅಡಗು ನಿಲ್ಲು ಮಲಗು ಕುಣಿ ಮುಡಿ
ತಂಗು ತಿರುಗು ಅಲೆ ಇಡು ಹುಡುಕು
ದಾಟು

 

೨.  ಬಳಿ ಮೆತ್ತು ಸವರು ಹಾಸು ತುರುಕು ಹುಚ್ಚು
ತಲಪು ನುಗ್ಗು ಹೊಗು ತಗಲು ಇತ್ಯಾದಿ

ಆಕರಯುಕ್ತ ಕ್ರಿಯಾಪದಗಳನ್ನು ಸ್ಥಾಯಿ ಮತ್ತು ಅಸ್ಥಾಯಿಗಳೆಂದು ಮತ್ತೆ ಎರಡು ವಿಭಾಗಗಳನ್ನಾಗಿ ಮಾಡಬಹುದು. ಮೇಲಿನ ಪಟ್ಟಿಯಲ್ಲಿ ೧ ನೆಯ ಭಾಗದಲ್ಲಿ ಸ್ಥಾಯಿಯೂ ೨ನೇ ಭಾಗದಲ್ಲಿ ಅಸ್ಥಾಯಿ ಸ್ವರೂಪದ ಕ್ರಿಯಾಪದಗಳನ್ನು ನೀಡಲಾಗಿದೆ. ಸ್ಥಾಯಿ ಕ್ರಿಯಾಪದಗಳ ಆಕರಸೂಚಕ ತೃತೀಯ, ಸಪ್ತಮಿ ಚತುರ್ಥಿ ವಿಭಕ್ತಿಯಲ್ಲಿರುತ್ತದೆ. ಉದಾ:

ರಾಮು ಹಣವನ್ನು ಕಪಾಟಿನಲ್ಲಿ ಇಟ್ಟಿದ್ದಾನೆ.
ರಂಗ ತೋಟಕ್ಕೆ ನೀರು ಹಾಯಿಸುತ್ತಿದ್ದಾನೆ.
ರಾಜು ಕಪಾಟಿನಿಂದ ಹಣ ತೆಗೆದ

ಮೇಲಿನವಾಕ್ಯಗಳಲ್ಲಿ ಮೊದಲನೇ ವಾಕ್ಯದಲ್ಲಿ ಆಕರವು ಕಪಾಟು ಸಪ್ತಮಿ ವಿಭಕ್ತಿಯನ್ನು ಎರಡನೇ ವಾಕ್ಯದಲ್ಲಿ ಚತುರ್ಥಿ (ತೋಟಕ್ಕೆ) ಯಲ್ಲಿರುವ ಮೂರನೆಯ ವಾಕ್ಯದಲ್ಲಿ ತೃತೀಯ (ಕಪಾಟಿನಿಂದ) ದಲ್ಲಿರುವ ಪದವನ್ನು ಹೊಂದಿದೆ.

ಮತ್ತಷ್ಟು ಕ್ರಿಯಾಪದಗಳು ಹೀಗಿವೆ: ನೆಕ್ಕು, ಸುಲಿ, ಹಿಂಡು, ಕೊಯ್ಯು, ಹೆಕ್ಕು, ಹೀರು, ನೇಲು, ಜಿನುಗು, ಕಳಚು, ತೆಗೆ, ಎರೆ, ಹಾಕು, ಮೊಗೆ, ಎಳೆ, ತರು, ಬರು, ಹೋಗು, ಇಳಿ, ಜಾರು, ಈಜು, ಓಡು, ಚೆಲ್ಲು, ಬೀಸು, ಅದ್ದು ಇತ್ಯಾದಿ.

... ವಿಷಯ

ವಾಕ್ಯದಲ್ಲಿ ಪ್ರಯೋಗವಾಗುವ ವಿಷಯದ ಆಧಾರದ ಮೇಲೂ ಕ್ರಿಯಾ ಪದವನ್ನು ವಿಂಗಡಿಸಲಾಗುತ್ತದೆ. ‘ಬಟ್ಟೆಗಳು ಒಣಗುತ್ತಿವೆ’ ಎಂಬಲ್ಲಿ ಬಟ್ಟೆಗಳು ವಿಷಯವಾಗಿ ಬಂದಿದೆಯೇ ಹೊರತು ನಿಯೋಗಿಯಲ್ಲ. ಏಕೆಂದರೆ ಅಲ್ಲಿ ಇನ್ನೊಂದು ವ್ಯಕ್ತಿ ವಸ್ತು ಇತ್ಯಾದಿ ಮೆಲೆ ಪರಿಣಾಮವನ್ನು ಬೀರುವ ಕಾರ್ಯ ನಡೆಸುವವರಿಲ್ಲ. ಹಾಗಾಗಿ ‘ವಿಷಯ’ ವನ್ನುಳ್ಳ ವಾಕ್ಯಗಳಲ್ಲಿ ಬರುಬಹುದಾದ ಅನೇಕ ಕ್ರಿಯಾಪದಗಳಿವೆ. ಓಡು, ಅಡಗು, ನಗು, ಒಡೆ, ಒಣಗು, ಅರಳು, ಸಾಯು, ಮುಳುಗು, ಬೀಳು, ಹಾರು, ಎಂಬ ಕ್ರಿಯಾಪದಗಳೊಂದಿಗೆ ‘ವಿಷಯ’ ಬರುವುದರಿಂದ ಈ ಬಗೆಯ ಕ್ರಿಯಾಪದಗಳನ್ನು ಒಂದು ಗುಂಪಿಗೆ ಸೇರಿಸಲಾಗಿದೆ. ವಿಷಯಗಳಲ್ಲಿ ಸ್ವಪ್ರೇರಿತ ಮತ್ತು ಪರಪ್ರೇರಿತ ಎಂಬ ವರ್ಗೀಕರಣವೂ ಉಂಟು. ಸ್ವಪ್ರೇರಿತ ವಿಷಯಗಳೊಡನೆ ಓಡು, ಅದಗು, ನಗು, ಮೊದಲಾದ ಕ್ರಿಯಾ ಪದಗಳೂ, ಪರಪ್ರೇರಿತ ವಿಷಯಗಳೊಡನೆ ಒಣಗು, ಅರಳು, ಸಾಯು, ಒಡೆ ಇತ್ಯಾದಿ ಪದಗಳು ಬರಬಲ್ಲವು. ಆದರೆ ಕೆಲವು ಕ್ರಿಯಾಪದಗಳೊಡನೆ ಈ ಎರಡೂ ಬಗೆಯ ವಿಷಯಗಳೂ ಬರಬಲ್ಲದು ಅವುಗಳೆಂದರೆ, ಮುಳುಗು, ಬೀಳು, ಹಾರು ಇತ್ಯಾದಿ.

... ಪ್ರೇರಕ

‘ಇಸು’ ಪ್ರತ್ಯಯದೊಡನೆ ಬರುವ ಕ್ರಿಯಾರೂಪಗಳನ್ನು ಬಳಸಿದ ವಾಕ್ಯಗಳಲ್ಲಿ ಕೆಲವು ಪ್ರೇರಕಯುಕ್ತ ವಾಕ್ಯಗಳಾಗುತ್ತವೆ. ಅಂದರೆ ಅಲ್ಲಿ ಪ್ರೇರಕ ಎಂಬ ಘಟಕವು ಇರುತ್ತದೆ. ಉದಾ: ೧ ಅವನೊಂದು ಗೊಂಬೆ ಮಾಡಿದನು; ೨. ರಾಮನು ಅವನಿಂದ ಗೊಂಬೆ ಮಾಡಿಸಿದನು ಎಂಬ ವಾಕ್ಯಗಳಲ್ಲಿ, ಎರಡನೇ ವಾಕ್ಯದಲ್ಲಿ ಬಂದಿರುವ ಮಾಡಿಸು ಎಂಬ ಸಾಧಿತ ಕ್ರಿಯಾರೂಪ ಹಾಗೂ ‘ರಾಮ’ ಎಂಬ ಪದಗಳು ಪ್ರೇರಕ ಎಂಬ ಘಟಕವನ್ನು ಸೂಚಿಸುತ್ತದೆ. ಅಂದರೆ ವಾಕ್ಯದಲ್ಲಿ ಬರುವ ಪ್ರೇರಕ ಘಟಕದ ಆಧಾರದ ಮೇಲೆಯೂ ಕ್ರಿಯಾಪದಗಳ ವರ್ಗೀಕರಣ ಸಾಧ್ಯ. ಹಿಂದೆ ಸಾಧಿತನಾಮಪದಗಳಲ್ಲಿ ಪ್ರೇರಣಾರ್ಥಕ ರೂಪ ಎಂಬುದನ್ನು ಗಮನಿಸಿ.

ಹೀಗೆ ವಾಕ್ಯದ ವಿವಿಧ ಘಟಕಗಳನ್ನು ಆಧರಿಸಿ ಯಾವ ಕ್ರಿಯಾಪದದೊಡನೆ ಯಾವ ಘಟಕಗಳು ಬರಬಹುದು ಎಂಬುದರ ಆಧಾರದ ಮೇಲೆ ಐದು ರೀತಿಯಲ್ಲಿ ವಿಂಗಡಿಸಲಾಗಿದೆ. ಹೀಗೆ ವಿಂಗಡಿಸುವಾಗಲೂ ಒಂದು ಕ್ರಿಯಾಪದ ಒಂದು ಘಟಕಕ್ಕೆ ಮಾತ್ರ ಸೀಮಿತ ಎಂದೇನೂ ಇಲ್ಲ. ಒಂದೇ ಕ್ರಿಯಾಪದವಿರುವಾಗ ಅದಕ್ಕೆ ನಿಯೋಗೊಯೂ ಅನುಭೋಗಿಯೂ ಬರಬಹುದು, ನಿಯೋಗಿ ಆಕರ ಬರಬಹುದು. (ನೋಡಿ ಕನ್ನಡ ವಾಕ್ಯಗಳು. ೧೯೭೮)

.. ವಿರುದ್ಧಾರ್ಥವಿರುವ, ಇಲ್ಲದ ರೂಪಗಳು

ಕನ್ನಡ ಕ್ರಿಯಾಪದಗಳನ್ನು ಮತ್ತೊಂದು ರೀತಿಯಲ್ಲೂ ವರ್ಗೀಕರಿಸಬಹುದು. ಅದೆಂದರೆ ವಿರುದ್ಧಾರ್ಥ ರೂಪವಿರುವ ವಿರುದ್ಧಾರ್ಥವಿಲ್ಲದ ಎಂದು. ಸಾಮಾನ್ಯವಾಗಿ ಪದಗಳಿಗೆ ವಿರುದ್ಧ ರೂಪಗಳಿರುತ್ತವೆ. ಆದರೆ ಅದು ನಿಜವಾಗಿ ವಿರುದ್ಧವೇ ಎಂದರೆ ಹಾಗಿಲ್ಲ. ಆದರೂ ವಿರುದ್ಧಗಳಾಗಿ ಬಳಸುತ್ತಿರುತ್ತೇವೆ. ಉದಾ: ಕಪ್ಪು ಅಂದರೆ ಬಿಳುಪು ಎಂಬುದು ವಿರುದ್ಧವಾಗಿ ನೀಡುವ ಉತ್ತರ. ನಿಜವಾಗಿ ಹಾಗೇನಿಲ್ಲ. ಆದರೂ ಎಲ್ಲ ಪದಗಳಿಗೂ ವಿರುದ್ಧ ಪದಗಳಿರಬೇಕೆಂದೇನೂ ಇಲ್ಲ. ಹಾಗೆ ಇಲ್ಲವೂ ಇಲ್ಲ. ಅಂತೆಯೇ ಕ್ರಿಯಾ ಪದಗಳನ್ನು ವಿರುದ್ಧಗಳಾಗಿ ಬಳಸುವುದುಂಟು. ಉದಾ: ಓಡು ಎಂಬುದಕ್ಕೆ ನಿಲ್ಲು ಎಂಬುದು ವಿರುದ್ಧ ರೂಪ. ಓಡಬೇಡ ಎಂಬುದು ವಿರೋಧವನ್ನು ಸೂಚಿಸಿದರೂ, ಅದು ಸಂಯುಕ್ತ ಕ್ರಿಯಾಪದವಾಗುತ್ತದೆ. ಹಾಗಾಗಿ ನಿಲ್ಲು ಎಂಬುದನ್ನು ವಿರೋಧವಾಗಿ ಬಳಸಲಾಗುತ್ತಿದೆ. ಅಂತೆಯೇ ಒಂದೇ ಪದಕ್ಕೆ ಎರಡು ವಿರುದ್ಧ ಪದಗಳಂತೆ ವರ್ತಿಸುತ್ತವೆ. ಉದಾ: ಎಳೆ ಎಂಬುದಕ್ಕೆ ನೂಕು/ತಳ್ಳು ಎಂಬ ಎರಡೂಪದಗಳು ವಿರುದ್ಧಗಳಾಗಬಹುದು. ಅರ್ಥಛಾಯೆ ಭಿನ್ನವಾದರೂ ಸಾಮೀಪ್ಯವಿದೆ. ಹಾಗೆಯೇ ಕೂರು ಕೂಡು ಎಂಬುದಕ್ಕೂ ನಿಲ್ಲು, ಓಡು ಎಂಬುದಕ್ಕೂ ನಿಲ್ಲು, ನಡೆ ಎಂಬುದಕ್ಕೂ ನಿಲ್ಲು ಎಂಬುದು ವಿರುದ್ಧ ಪದವಾಗಬಹುದು. ಕೆಲವೊಂದು ಪದಗಳಿಗೆ ಖಚಿತವಾದ ವಿರುದ್ಧ ರೂಪಗಳಿರಬಹುದು. ಹೀಗೆ ವಿರುದ್ಧವಾಗಿ ಬಳಕೆಯಾಗಬಹುದಾದ ಕ್ರಿಯಾಪದಗಳನ್ನು ಒಂದು ವರ್ಗವಾಗಿ ವಿರುದ್ಧ ರೂಪಗಳಿರದ ಕ್ರಿಯಾಪದಗಳನ್ನು ಮತ್ತೊಂದು ಗುಂಪಾಗಿ ವಿಂಗಡಿಸಬಹುದು.

ವಿರುದ್ಧ ರೂಪಗಳಿರುವ ಕ್ರಿಯಾಪದಗಳು

ಅಳು-ನಗು ಏರು-ಇಳಿ ಬಾ-ಹೋಗು
ಉಗುಳು-ನುಂಗು ಏಳು-ಕೂರು ಕುಗ್ಗು-ಹಿಗ್ಗು
ಇಂಗು-ಉಕ್ಕು ಎಳೆ-ನೂಕು ಕುಡಿ-ತಿನ್ನು
ಉರಿ-ಆರು ಎಸೆ-ಹಿಡಿ ಕೂಡು-ಅಗಲು
ಹತ್ತಿಸು-ಆರಿಸು ಒಗೆ-ಹಿಡಿ ಕೂರು-ನಿಲ್ಲು
ಕೊಡು/ನೀಡು-ಪಡೆ ಓಡು-ನಿಲ್ಲು ಕೇಳು-ಹೇಳು
ಏರಿಸು-ಇಳಿಸು ನಡೆ-ನಿಲ್ಲು ಕೊಡು-ಬಿಡು
ಗೆಲ್ಲು-ಸೋಲು ಸುರಿ/ಚೆಲ್ಲು-ತುಂಬು ಕೊಲ್ಲು-ಉಳಿಸು
ಎತ್ತು-ಇಡು ಹತ್ತಿಸು-ಇಳಿಸು ತೇಲು-ಮುಳುಗು

.. ಮೂರ್ತ, ಅಮೂರ್ತ ರೂಪಗಳು

ಭಾಷೆಯಲ್ಲಿರುವ ಕ್ರಿಯಾಪದಗಳು ಲೋಕ ಘಟನೆಯನ್ನು ವಿವರಿಸುತ್ತವೆ. ಉದಾ: ಓಡು, ತಿನ್ನು, ಕುಡಿ, ಎತ್ತು, ಇಡು, ದೂಡು ಮುಂತಾದ ಕ್ರಿಯಾಪದಗಳನ್ನು ಕೇಳಿದಾಗ ಘಟನೆ ಸಂಭವಿಸಿರುವುದನ್ನು ಅಥವಾ ಮುಂದೆ ಸಂಭವಿಸುವುದನ್ನು ಕಾಣಬಹುದು. ಅಂದರೆ ಆ ಕ್ರಿಯಾಪದಗಳು ಹೇಳುವ ಕ್ರಿಯೆ ಗೋಚರಕ್ಕೆ ಬರುವಂತೆ ಇರುತ್ತವೆ. ಇವು ದೈಹಿಕ ಕ್ರಿಯೆಗಳು. ಇವನ್ನು ಮೂರ್ತ ಕ್ರಿಯಾಪದಗಳು ಎಂದು ಕರೆಯಬಹುದು. ಕೆಲವು ಕ್ರಿಯಾ ಪದಗಳು ದೈಹಿಕವಲ್ಲ, ಕೇವಲ ಕೇಳಿಸುತ್ತವೆ. ಉದಾ: ಗುನುಗು, ಗೊಣಗು ಬಿಕ್ಕು ಇತ್ಯಾದಿ ಇವುಗಳನ್ನು ಕೇಳಿಸಿಕೊಳ್ಳಬಹುದು. ದೈಹಿಕ ಕ್ರಿಯೆಯಾಗಿನೋಡಲು ಸಾಧ್ಯವಿಲ್ಲ. ಇನ್ನು ಕೆಲವು ಶಾಬ್ದಿಕವಾಗಿ ಮಾತ್ರ ಬಳಕೆಯಾಗುತ್ತವೆ. ಗೋಚರಕ್ಕೂ ಬರುವುದಿಲ್ಲ, ಕೇಳಿಸಿ ಕೊಳ್ಳುವುದೂ ಸಾಧ್ಯವಿಲ್ಲ. ಇವು ಹೆಚ್ಚಾಗಿ ಮನಸ್ಸಿನ ಚಟುವಟಿಕೆಗಳಿಗೆ ಸಂಬಂಧಿಸಿದವು. ಮನಸ್ಸಿನ ದುಗುಡ ದುಮ್ಮಾನ, ತುಮುಲಮುಂತಾದ ಮಾನಸಿಕ ಸ್ಥಿತಿಯನ್ನು ವ್ಯಕ್ತಪಡಿಸಲು ಈ ಕ್ರಿಯಾಪದಗಳು ಬಳಕೆಯಾಗುತ್ತವೆ. ಹಾಗಾಗಿ ಇವುಗಳನ್ನು ಅಮೂರ್ತ ಕ್ರಿಯಾಪದಗಳು ಎಂದು ಹೇಳಬಹುದು. ಅಂದರೆ ಕ್ರಿಯಾಪದಗಳನ್ನು ಮೂರ್ತ-ಅಮೂರ್ತ ಕ್ರಿಯಾಪದಗಳು ಎಂದೂ ವಿಂಗಡಿಸಬಹುದು. ಕೆಲವು ಉದಾಹರಣೆಗಳನ್ನು ಈ ಮುಂದೆ ನೀಡಿದೆ.

ಮೂರ್ತ ಅಮೂರ್ತ ಮೂರ್ತ ಅಮೂರ್ತ
ಎಡೆ ಒಪ್ಪು ಒರೆಸು ನರಳು
ಎತ್ತು ಕಳೆ ಕಚ್ಚು ನಲುಗು
ಎರಚು ಕಾಡು ಕಟ್ಟು ನೀಸು
ಎಸೆ ಕೇಳು ಕಡಿ ನೋಯು
ಎಳೆ ಕಳೆ ಕಡೆ ಪಳಗು
ಏರಿಸು ತಾಳು ಕದಡು ಒದಗು
ಏರು ತಿಳಿ ಕದಿ ಬಳಲು
ಒಕ್ಕು ನಂಬು ಕರಿ ಮಣಿ
ಒಗೆ ಬಯಸು ಕರೆ ಮಿಡಿ
ಒಡೆ ಬಳಸು ಕೀಳು ಮಿಡುಕು
ಒತ್ತು ತಿಣುಕು ಕುಕ್ಕು ಮುನಿ
ಒದರು ತುಡಿ ಕುಟುಕು ಸಲ್ಲು
ಒದೆ ತೋಚು ಕೂಡು ಸೊರಗು
ಒಯ್ಯು ದಣಿ ಕೆರೆ ಹಲುಬು
ನವೆ ಕೇರು ಹಳಸು ಚಿಂತಿಸು
ಕೂರು ಹೆಣಗು ಬೆಳೆ ಯೋಚಿಸು
ಕೂಡು ಹೊಳೆ ಬಿಸಾಡು ಕೆಣಕು
ಕೊಯ್ಯು ಮೆಚ್ಚು ಬಿತ್ತು ಓಲೈಸು
ಕೊಲ್ಲು ಮೋಚು ಮಾಡು ಒತ್ತಾಯಿಸು
ಕೊಳ್ಳು ಸವಿ ಮಾರು ಹಂಬಲಿಸು
ಕೊರೆ ಸೂಸು ಮೀಟು ಕೊರಗು
ಗದರು ಒಗ್ಗು ನೀಡು ಬಳಲು
ಗುದ್ದು ಒಲಿ ನೀವು
ಚಚ್ಚು ಕುದುರು ತಿನ್ನು
ಓದು ಹರಸು ತಿಕ್ಕು
ಓಡು ಮರೆ ತಿವಿ
ಬೇಡು ತಣಿ ತುಂಬು
ಮಗುಚು ಹುಡುಕು ಚಿಮ್ಮು
ತುಯ್ಯು
ತುರುಕು
ತುಳಿ
ತೂಗು
ತೂರು
ತೆಗಳು ಇತ್ಯಾದಿ

.. ಕ್ರಿಯಾಪದವೇ ನಾಮಪದವಾಗಿರುವ ರೂಪ

ಕೆಲವು ಧಾತುಗಳು ನಾಮವೂ ಆಗಿದ್ದುದನ್ನು ಕೇಶಿರಾಜನು ಹೇಳಿದ್ದಾನೆ. ಹೊಸಗನ್ನಡದಲ್ಲಿಯೂ ಕೆಲವು ಧಾತುಗಳು ಕ್ರಿಯಾಪದವಾಗಿಯೂ ನಾಮಪದವಾಗಿಯೂ ಬಳಕೆಯಲ್ಲಿವೆ. ಇವುಗಳು ಮೊದಲು ನಾಮವಾಗಿದ್ದು ಆನಂತರ ಧಾತುರೂಪ ಪಡೆದಿರಬಹುದೇ ಎಂಬ ಸಂದೇಹ ಬರುತ್ತದೆ. ನಿಘಂಟುಗಳಲ್ಲಿ ಅರ್ಥನೀಡುವಾಗಲೂ ಮೊದಲು ನಾಮರೂಪಕ್ಕೆ ಅರ್ಥ ಆನಂತರ ಕ್ರಿಯಾರೂಪದ ಅರ್ಥ ಬರುತ್ತದೆ. ಹೀಗೆ ನಾಮ ಕ್ರಿಯಾರೂಪದ ಆಧಾರದ ಮೇಲೆ ಕ್ರಿಯಾ ಪದಗಳನ್ನು ಎರಡು ಬಎಯಲ್ಲಿ ವಿಂಗಡಿಸಬಹುದು: ಒಂದು: ನಾಮರೂಪಬೂ ಆಗಿರುವ, ಎರಡು: ಕೇವಲ ಕ್ರಿಯಾಪದವಾಗಿರುವ ರೂಪಗಳು. ಇವು ಎರಡಕ್ಷರ, ಮೂರಕ್ಷರ ಮತ್ತು ಎರಡಕ್ಷರಗಳಲ್ಲಿ ಅನುಸ್ವಾರವಿರುವ ರೂಪಗಳಿವೆ. ಇವು ಇ, ಎ, ಉಕಾರಾಂತ್ಯಗಳಾಗಿವೆ.

ನಾಮರೂಪವಿರುವ ಕ್ರಿಯಾಧಾತುಗಳು

ಅಂಟು ಎತ್ತ ಕುಣಿ ನಗು ಮುನಿ
ಅರಗು ಎಳೆ ಕೂಗು ನಡೆ ಮುಸುಕು
ಅರಳು ಎರೆ ಕೆನೆ ನವೆ ಮೆಟ್ಟು
ಅರೆ ಏಳು ಕೆಮ್ಮು ನಾರು ಮೊರೆ
ಅಲೆ ಒಂದು ಕೆರೆ ನುಡಿ ಸರಿ
ಆಡು ಒಡ್ಡು ಕೊಂಕು ಪಡೆ ಸಾಕು
ಆರು ಒತ್ತು ಕೊಡೆ ಪಾರು ಸಾರು
ಆಳು ಒಪ್ಪು ಕೊಬ್ಬು ಪೆಟ್ಟು ಸಿಡಿ
ಇಂಗು ಒರೆ ಕೊಸರು ಮೊರೆ ಸೀನು
ಈಜು ಒಲೆ ಗೀರು ಬದುಕು ಸೀಳು
ಉಕ್ಕು ಓಡು ಗುದ್ದು ಬರೆ ಸುತ್ತು
ಉಗಿ ಕಂತು ಗುಬರು ಬೆವರು ಸೇರು
ಉಗುಳು ಕಂದು ಚಿಗುರು ಬೆಳಗು
ಉಗ್ಗು ಕಟ್ಟು ಜೋಲು ಬೆಳೆ ಹತ್ತು
ಉಡಿ ಕರೆ ತಡೆ ಮಡಿ ಹನಿ
ಉರಿ ಕಲೆ ತಪ್ಪು ಮಣಿ ಹಳಿ
ಉರುಳು ಕವಲು ತರಿ ಮರೆ ಹಾಡು
ಉಲಿ ಕವಿ ತಿಳಿ ಮಲೆ ಹಿಂಡು
ಉಸಿರು ಕಳೆ ತೇಗು ಮಾಡು ಹಿರಿ
ಉಳುಕು ಕಾಡು ತೊಡೆ ಮಾರೆ ಹುರಿ
ಊರು ಕೀಳು ತೊರೆ ಮಿಂಚು ಹೂಸು
ಎಡೆ ಕುಡಿ ತೊಳೆ ಮಿಡಿ ಹೊರೆ
ದೊರೆ ಮುಡಿ ಮುತ್ತು ಇತ್ಯಾದಿ

. ಉದ್ದೇಶದ ಆಧಾರ

ಕ್ರಿಯಾಪದಗಳ ಬಳಕೆಯಲ್ಲಿನ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ವರ್ಗೀಕರಿಸುವ ಪ್ರಯತ್ನ ನಡೆದಿದೆ. ಏಕೆಂದರೆ ಪ್ರತಿ ಕ್ರಿಯಾಪದದ ಬಳಕೆಯಲ್ಲೂ ಉದ್ದೇಶಗಳು ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರುವುದಿಲ್ಲ ಎಂದು ಹೇಳಲಾಗಿದೆ. ಕ್ರಿಯಾಪದಗಳ ಉದ್ದೇಶಗಳಾಗಲೀ ಅವನ್ನು ಬಳಸುತ್ತಿರುವ ವ್ಯಕ್ತಿಯ ಉದ್ದೇಶವಾಗಲೀ ಯಾವಗಲೂ ಸ್ಪಷ್ಟವಾಗಿರುವುದಿಲ್ಲ. ಬೆಂಕಿಯನ್ನು ಕಂಡು ಓಡಿದ ಎಂಬ ವಾಕ್ಯದಲ್ಲಿ ಓಡು ಕ್ರಿಯಾಪದ ಒಂದು ದೈಹಿಕ ಕ್ರಿಯೆಯನ್ನು ಸೂಚಿಸುತ್ತದೆ. ಆದರೆ ಈ ವಾಕ್ಯದಲ್ಲಿ ಯಾರೋ ಒಬ್ಬಾತ ಓಡಿದ್ದೇಕೆ ಹೆದರಿಕೆಯಿಂದಲೋ ಅಥವಾ ಬೆಂಕಿಯನ್ನುಆರಿಸಲು ಬೇಕಾದ ಸಾಮಗ್ರಿ ತರಲೆಂದೋ ಅಥವಾ ವ್ಯಕ್ತಿಯೇ ಬೆಂಕಿ ಹಚ್ಚಿದವನಾಗಿದ್ದು ಇತರರ ಕಣ್ಣಿಗೆ ಬೀಳಲಾ ರದೆಂದೋ ಇದೆಲ್ಲವೂ ಊಹೆಯ ಪ್ರಶ್ನೆಗಳಲ್ಲ ಸಾಧ್ಯತೆಗಳು (ಕೆ.ವಿ ನಾರಾಯಣ ೨೦೦೭) ಆದರೂ ಕ್ರಿಯಾಪದಗಳ ಉದ್ದೇಶಗಳನ್ನು ಆಧಾರವಾಗಿಟ್ಟುಕೊಂಡೇ ಆರ್ ಸಿಯರ್ಲ್ ಎಂಬವರು ವರ್ಗೀಕರಿಸುವ ರೀತಿ ಹೀಗಿದೆ. ೧. ಒಪ್ಪಿತಗಳು ೨. ಸೂಚಕಗಳು ೩. ಆಣೆಗಳು ೪. ಭಾವವಾಚಿಗಳು ೫. ಘೋಷಣೆಗಳು. ಮಾತಾಡುವ ವ್ಯಕ್ತಿ ಕ್ರಿಯಾಪದ ಸೂಚಿಸುವ ಸಂಗತಿಯನ್ನು ಒಪ್ಪುವಂತಿದ್ದರೆ ಆ ಬಗೆಯ ಕ್ರಿಯಾಪದಗಳು ಒಪ್ಪಿತಗಳು. ಉದಾ: ನಂಬು, ನಿರಾಕರಿಸು, ಸರಿಮಾಡು, ಸಮರ್ಥಿಸು. ಯಾವುದಾದರೊಂದು ಕ್ರಿಯೆಯನ್ನು ಮಾಡಲು ಕೇಳುವ ವ್ಯಕ್ತಿಯನ್ನು ಪ್ರೇರೇಪಿಸುವ ಕ್ರಿಯಾಪದಗಳೇ ಸೂಚಕಗಳು. ಉದಾ: ಆಜ್ಞಾಪಿಸು, ಕೇಳು, ಒತ್ತಾಯಿಸು ಬೇಡು, ನೀಡು ಇತ್ಯಾದಿ. ಹೇಳುವ ವ್ಯಕ್ತಿಯೇ ತಾನೊಂದು ಕ್ರಿಯೆಯನ್ನು ಮಾಡುವುದಾಗಿ ಒಪ್ಪುವ, ಬದ್ಧವಾಗುವ ಕ್ರಿಯಾಪದಗಳೇ ಆಣೆಗಳು. ಉದಾ: ಶಪಥಮಾಡು, ಒಪ್ಪು, ಯಾವುದಾದರೂ ಒಂದು ಘಟನೆಯ ಬಗ್ಗೆ ಹೇಳುವ ವ್ಯಕ್ತಿಯ ದೃಷ್ಟಿಕೋನವನ್ನು ಸೂಚಿಸುವ ಕ್ರಿಯಾಪದಗಳು ಭಾವಸೂಚಕಗಳು. ಉದಾ: ಕ್ಷಮೆಕೋರು, ಖಂಡಿಸು, ಮೆಚ್ಚು ಇತ್ಯಾದಿ. ಹೇಳುವ ವ್ಯಕ್ತಿ ಕೆಲವು ಕ್ರಿಯಾಪದಗಳನ್ನು ಬಳಸುವ ಮೂಲಕವೇ ವಸ್ತು ಜಗತ್ತಿನಲ್ಲಿ ಕೆಲವು ಪರಿವರ್ತನೆಗಳನ್ನು ತರುವುದು ಸಾಧ್ಯವಿದ್ದರೆ ಅಂತಹ ಕ್ರಿಯಾಪದಗಳು ಘೋಷಣೆಗಳು. ಉದಾ: ಘೋಷಿಸು, ಹೆದರಿಸು, ರಾಜೀನಾಮೆ ನೀಡು ಇತ್ಯಾದಿ.

ಕನ್ನಡ ಕ್ರಿಯಾರಚನೆಗಳು ವಿಂಗಡಣೆ

ರಚನೆಯನ್ನಾಧರಿಸಿ

01_362_KKB-KUH

 

ಬಳಕೆಯನ್ನಾಧರಿಸಿ

02_362_KKB-KUH