“ಚಹಾ ಖಂಡಿತಾ ಬೇಡ” ಎನ್ನುತ್ತಾರೆ ಶ್ರೀಪಡ್ರೆ. ಅದಕ್ಕೆ ಕನಿಷ್ಠ ೨೫ ಸಿಂಪಡಣೆಗಳಿವೆ. ನೀವೆಲ್ಲಾ ಕುಡಿಯುತ್ತಿರುವುದು ರಾಸಾಯನಿಕ ವಿಷವೇ ಹೊರತು ಸೊಪ್ಪಿನ ಚಹಾ ಅಲ್ಲ ಎನ್ನುವ ವಿವರಣೆ.
ನೋಡಲು ದೂರದ ಅಸ್ಸಾಂಗೆ ಹೋಗಬೇಕಿಲ್ಲ. ಪಕ್ಕದ ಚಿಕ್ಕಮಗಳೂರಿಗೆ ಹೋದರೆ ಸಾಕು. ಮೂಡಿಗೆರೆ ತಾಲ್ಲೂಕಿನಲ್ಲಿ ಐದು ಚಹಾ ತೋಟಗಳು, ಕೊಪ್ಪ ತಾಲ್ಲೂಕಿನಲ್ಲಿ ಐದು, ಒಟ್ಟು ಮೂರು ಸಾವಿರದ ಮುನ್ನೂರು ಎಕರೆ.
ಕಳಸದಿಂದ ಕುದುರೆಮುಖಕ್ಕೆ ಹೋಗುವ ರಸ್ತೆಯಲ್ಲಿ ಎಡಕ್ಕೆ ಹಿರೇಬೈಲು. ಅಲ್ಲಿರುವುದು ಗುಮ್ಮಾನ್ಖಾನ್ ತೋಟ. ಬೆಳಗಿನ ಇಬ್ಬನಿಯನ್ನು ಸರಿಸುತ್ತಾ ಚಹಾ ಚಿಗುರು ಕೊಯ್ಯುತ್ತಲೋ, ಔಷಧಿಗಳನ್ನು ಸಿಂಪಡಿಸುತ್ತಲೋ, ಗಿಡವನ್ನು ಬೋಳು ಮಾಡುತ್ತಲೋ ಇರುವ ನೂರಾರು ಕೆಲಸಗಾರರು ಕಾಣುತ್ತಾರೆ.
ಬ್ರಿಟಿಷರ ಕಾಲದ ತೋಟ. ಉದಕಮಂಡಲದಿಂದ ಚಹಾಕಡ್ಡಿಗಳನ್ನು ತಂದು, ಮಡಿಗಳಲ್ಲಿ ನೆಟ್ಟು, ಮೇಲಿನಿಂದ ಪ್ಲಾಸ್ಟಿಕ್ ಚಪ್ಪರ ಮಾಡಿ ಬೆಳೆಸಿದ್ದಂತೆ. ಅಂದು ಹಸುರುಮನೆ ನಿರ್ಮಿಸಿ ಬೆಳೆಸಿದ ತೋಟ ಹಾಗೂ ಗಿಡಗಳು. ತಾತಜ್ಜನ ವಯಸ್ಸಿನವು. ಹಳೆಯ ನೆನಪಾದ ಕೂಡಲೇ ನಿಟ್ಟುಸಿರುಬಿಡುತ್ತವೆ.
ತೋಟಕ್ಕಾಗಿ ದಟ್ಟ ಕಾಡು ಕಡಿದು, ನೆಲ ಹದಗೊಳಿಸಿ, ಸಿಲ್ವರ್ ಓಕ್ ಅಲ್ಲಲ್ಲಿ ಗುರುತಿಗಾಗಿ ನೆಟ್ಟು ಮಾಡಿದ ತೋಟ. ೫೦೦ ಎಕರೆ ಎಂದರೆ ಅದೆಷ್ಟು ಜೀವವೈವಿಧ್ಯಗಳಿದ್ದವೋ, ತೊರೆಗಳು ಝರಿಗಳು, ಕಲ್ಲುಬಂಡೆಗಳು…
ನೆಟ್ಟ ಮೂರು ವರ್ಷಕ್ಕೆ ತಲೆ ಕತ್ತರಿಸಿ ಪೊದರುಗಳಾಗಿ ಮಾಡುತ್ತಾರೆ. ಆಮೇಲೆ ಗೊಬ್ಬರ ನೀಡುವುದು, ರೋಗ, ಕೀಟಗಳಿಗೆ ಸಿಂಪಡಣೆ ಹಾಗೂ ಚಿಗುರು ಕೊಯ್ಯುವುದು. ನಿರಂತರ ಕೆಲಸ. ನಿರಂತರ ಬೆಳವಣಿಗೆ.
ಈ ಇನ್ನೂರು ವರ್ಷಗಳಲ್ಲಿ ಒಂದು ದಿನವೂ ಉಸಿರಾಡಲು ಕೊಟ್ಟಿಲ್ಲ ಎಂದು ಗೋಳು ತೋಡಿಕೊಳ್ಳುತ್ತವೆ. ಅಲ್ಲಿ ಉಸಿರಾಡುತ್ತಿರುವ ಕೂಲಿಗಳೂ ಸಹ ವಿಷವನ್ನೇ ಉಸಿರಾಡುತ್ತಿದ್ದಾರೆಂಬುದು ಗಿಡಗಳಿಗೆ ಯಾರೂ ಹೇಳಿಲ್ಲ. ತೋಟದ ಮಾಲಿಕರು ನಮ್ಮ ದೇಶದಲ್ಲಿದ್ದಾರೋ, ವಿದೇಶದಲ್ಲಿದ್ದಾರೋ ಗೊತ್ತಿಲ್ಲ. ಯಾವಾಗಲೋ ಒಮ್ಮೆ ಸಂಸೆಯಲ್ಲಿ ಇರುವ ವಿಶ್ರಾಂತಿಗೃಹಕ್ಕೆ ಬರುತ್ತಾರೆ, ಇರುತ್ತಾರೆ, ಹೋಗುತ್ತಾರೆ. ಲೆಕ್ಕಾಚಾರಗಳೆಲ್ಲಾ ಆಯಾ ಅಧಿಕಾರಿಗಳದು.
ಕೂಲಿಗಳು ಇಲ್ಲಿಂದ ಬಿಟ್ಟುಹೋಗುವುದಿಲ್ಲ. ಪಕ್ಕದ ಕುದುರೆಮುಖದ ಸ್ಥಿತಿ ಇವರಿಗಿಲ್ಲ. ದಿನಸಂಬಳ, ತಿಂಗಳ ಸಂಬಳ. ಹೆಚ್ಚಿನ ಕೆಲಸಕ್ಕೆ ಭತ್ಯೆ. ಹಬ್ಬಕ್ಕೆ, ರೋಗಗಳಿಗೆ, ಕೊನೆಗೆ ಪೆನ್ಷನ್ ಸಹಾ ಉಂಟು. ಇದೂ ಬ್ರಿಟಿಷ್ ಕಾಲದ ಪದ್ಧತಿ. ಯಾವ ಸುಖಸಂತೋಷಗಳಿಗೂ ಕೊರತೆಯಿಲ್ಲ.
ಕೊರತೆ ಹೇಗಾದೀತು. ವರ್ಷಕ್ಕೆ ಎಕರೆಗೆ ಎರಡು ಟನ್ ಚಹಾಪುಡಿ ಉತ್ಪಾದನೆ. ೫೦೦ ಎಕರೆಗೆ ಹತ್ತು ಸಾವಿರ ಟನ್!
ಯುರೋಪಿನಲ್ಲಿ ಇದರಲ್ಲಿರುವ ವಿಷಕ್ಕೆ ಹೆದರಿ ಬೇಡವೆಂದರು. ಆದರೆ ಕೆಳಗಿರುವ ಕಾಫಿ ತೋಟದ ರೈತರು “ಅವರು ನೀಡುವ ಗೊಬ್ಬರವೆಲ್ಲಾ ಹರಿದು ನಮ್ಮ ತೋಟಕ್ಕೆ ಬರುತ್ತದೆ ನಾವು ಗೊಬ್ಬರ ಕೊಡುವುದೇ ಇಲ್ಲ” ಎಂದು ಕಣ್ಣರಳಿಸುತ್ತಾರೆ. ಅದು ಬರೀ ವಿಷ. ಈಗಾಗಲೇ ಇವರ ತೋಟ, ಪಕ್ಕದ ಕಾಡು, ನದಿ, ನೆಲ ಎಲ್ಲವನ್ನೂ ಹಾಳು ಮಾಡಿದೆ ಎಂದರೆ ನಂಬುವುದಿಲ್ಲ ಬಿಡಿ.
ಕಾಫಿ ತೋಟ ಪುಟ್ಟ ಕಾಡಿನಂತೇ ಇರುತ್ತದೆ. ಆದರೆ ಚಹಾ ತೋಟದಲ್ಲಿ ನಖಶಿಖಾಂತ ಬೋಳಿಸಿಕೊಂಡ ಸಿಲ್ವರ್ ಓಕ್ ಮರಗಳು ಫರ್ಲಾಂಗ್ಗೆ ಒಂದು ನಿಂತಿರುತ್ತವೆ. ಉಳಿದಂತೆಲ್ಲಾ ಚಹಾ, ಚಹಾ, ಚಹಾ… ಮಾನೋಕಲ್ಚರ್.
ಬುಡದಲ್ಲಿರುವ ಒಂದಿಷ್ಟು ಚಹಾಗಿಡಗಳನ್ನು ಮಧ್ಯದ ಕೊಂಬೆಯನ್ನು ಬಿಟ್ಟು ಕವಲುಗಳನ್ನೆಲ್ಲಾ ಕತ್ತರಿಸುತ್ತಿದ್ದರು. ಹೀಗೆ ಮೂರು ವರ್ಷಕ್ಕೊಮ್ಮೆ ಕ್ಷೌರ ಮಾಡಿದರೂ ನೂರು ವರ್ಷ ಬದುಕುತ್ತವೆ ಎಂದರು ಮ್ಯಾನೇಜರ್.
ಇದನ್ನೇ ಚವುಲದ ಹಬ್ಬವಾಗಿ ಆಚರಿಸುತ್ತಾರೆ ಗಂಡಸರು. ಚಿಗುರು ಬಂದಾಗ ಕುಡಿಹಬ್ಬವೆಂದು ಹೆಂಗಸರು ಆಚರಿಸುತ್ತಾರೆ. ಅಂದಿನ ಕೋಳಿ ಊಟಕ್ಕೆ ನಮಗೂ ಆಹ್ವಾನವಿತ್ತು. ನಾಲ್ಕು ಗಂಟೆಗೇ ಕತ್ತಲೂ ಆಗುತ್ತಿತ್ತು.
ಈ ಚಹಾ ತೋಟಕ್ಕೆ ನಾವು ಸಣ್ಣವರಿರುವಾಗ ಗೊಬ್ಬರ ಕೊಡುವುದು ಬಿಟ್ಟರೆ ಬೇರೇನೂ ಸಿಂಪಡಣೆಯೆಲ್ಲಾ ಇರಲಿಲ್ಲ ಎಂದು ಮಾರಿಯಾ ಅಜ್ಜಿ ಗೊಣಗುತ್ತಾರೆ.
ತರಗೆಲೆ ಗೊಬ್ಬರ, ಹಸುರೆಲೆ ಗೊಬ್ಬರಗಳನ್ನು ಕಾಡಿನಿಂದ ತಂದಷ್ಟೂ ಬೇಕಾಗಿತ್ತು. ಮಾಲಿಕರು ವಿದೇಶದಿಂದ ಹಡಗಿನಲ್ಲಿ ಹಕ್ಕಿಗೊಬ್ಬರ, ಮೂಳೆಗೊಬ್ಬರ, ಮೀನುಗೊಬ್ಬರಗಳನ್ನೆಲ್ಲಾ ತರುತ್ತಿದ್ದರು. ಅದನ್ನೇ ಬುಡಕ್ಕೆ ಕೊಡುವುದು. ಅದರಲ್ಲಂತೂ ಅತಿಕೆಟ್ಟ ವಾಸನೆಯ ಹಕ್ಕಿಗೊಬ್ಬರವನ್ನು ತಿಂಗಳು ತಿಂಗಳು ನೀಡಬೇಕಾಗಿತ್ತು ಎನ್ನುವ ನೆನಪಿನಲ್ಲಿ ಈಗಲೂ ಮುಖ ಹಿಂಡುತ್ತಾರೆ.
ಅಂದಿನ ಚಹಾದ ರುಚಿಯೇ ಬೇರೆ. ಬೆಳಗ್ಗೆ ಒಮ್ಮೆ ಒಂದು ಲೋಟ ಚಹಾ ಕುಡಿದರೆ ಮಧ್ಯಾಹ್ನ ೧೨ಕ್ಕೆ ಊಟ. ಒಮ್ಮೆಯೂ ಸುಸ್ತಾದದ್ದಿಲ್ಲ. ನಮಗೆಲ್ಲಾ ಯಾವ ರೋಗ ಬಂದದ್ದೂ ಇಲ್ಲ. ಬಂದರೂ ನಿಂಬೆ ಚಹಾ, ಕಾಳುಮೆಣಸಿನ ಚಹಾ, ಶುಂಠಿ ಚಹಾಗಳೇ ಔಷಧಿ. ಅಂದು ಊರೆಲ್ಲಾ ಬಲಿ ತೆಗೆದುಕೊಂಡಿದ್ದ ಮಲೇರಿಯಾ ಸಹ ನಮ್ಮ ಕಾಲೋನಿಗೆ ಕಾಲಿಟ್ಟಿರಲಿಲ್ಲ. “ಎಲ್ಲಾ ಚಹಾ ಮಹಿಮೆ” ಎನ್ನುವ ೯೪ರ ವಯಸ್ಸಿನ ಮಾಪಳಜ್ಜನಿಗೆ ಈಗಿನವರು ನಾಲ್ಕು ದಿನಗಳಿಗೊಮ್ಮೆ ಗಂಟುನೋವು, ಸೊಂಟನೋವು ಎಂದು ಮಲಗುವುದನ್ನು ನೋಡಲಾಗದು.
ಸ್ಥಳೀಯರಾರೂ ಏಕೆ ಚಹಾ ತೋಟ ಮಾಡಿಲ್ಲ?
ಕೇಂದ್ರ ಚಹಾ ಮಂಡಳಿಯಿಂದ ಒಪ್ಪಿಗೆ ಬೇಕು. ಅಂತಾರಾಷ್ಟ್ರೀಯ ಒಪ್ಪಿಗೆ ಬೇಕು. ಇಷ್ಟಾಗಿಯೂ ತೋಟ ಮಾಡಲು ಕೋಟಿ ಕೋಟಿ ಹಣ ಬೇಕು. ಸಂಸ್ಕರಿಸಲು ವಿದೇಶದಿಂದ ಯಂತ್ರಗಳನ್ನು ತರಿಸಬೇಕು.
ಈಗಿನ ಕೃಷಿಪದ್ಧತಿಗಳನ್ನು ನೋಡಿದರೆ ಚಹಾ ತೋಟ ಬೇಡ ಬಿಡಿ. ಆದರೆ ಅಸ್ಸಾಂನಲ್ಲಿ ಚಹಾವನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರಂತೆ. ಬೆಳೆದಿದ್ದೆಲ್ಲಾ ವಿದೇಶಕ್ಕೆ ಹೋಗುತ್ತಿದೆಯಂತೆ. ಇಲ್ಲಿನ ಚಹಾತೋಟದ ಮಾಲಿಕರು ಈ ಸುದ್ದಿಯನ್ನು ಓದಿದ್ದರೆ ಚೆನ್ನಾಗಿತ್ತು.
Leave A Comment