ಕಳೆದ ಐವತ್ತು ವರ್ಷಗಳಲ್ಲಿ ಮಾಧ್ಯಮ ವಲಯದಲ್ಲಿ ಸ್ಫೋಟವೊಂದು ಸಂಭವಿಸಿದೆ ಎಂಬ ಮಾತನ್ನು ಮೇಲಿಂದ ಮೇಲೆ ಕೇಳುತ್ತೇವೆ. ಈ ಮೊದಲು ಇದ್ದ ಪತ್ರಿಕೆಯ ಮಾಧ್ಯಮದ ಜೊತೆಗೆ ರೇಡಿಯೋ, ಟೆಲಿವಿಷನ್‌ಗಳು ಬಂದು ಸೇರಿವೆ. ರಂಜನೆಯ ಉದ್ದೇಶದ ರಂಗಭೂಮಿಯ ಜೊತೆಗೆ ಈ ಹಿಂದೆಯೂ ಇದ್ದ ಚಲನಚಿತ್ರ ಈಗ ವ್ಯಾಪಕವಾಗಿ ಬೆಳೆದಿದೆ. ಈ ಎಲ್ಲ ಮಾಧ್ಯಮಗಳು ಒಂದಲ್ಲ ಒಂದು ವಿಧದಲ್ಲಿ ಭಾಷೆಯನ್ನು ಬಳಸುತ್ತವೆ. ನಾವು ಈಗ ಗಮನಿಸಿರುವ ಭಾಷೆಯ ಬಳಕೆಯ ಎರಡು ರೂಪಗಳಾದ ಮಾತು ಮತ್ತು ಬರಹಗಳನ್ನು ಬೇರೆ ಬೇರೆ ರೀತಿಗಳಲ್ಲಿ ಬಳಸಿಕೊಳ್ಳುತ್ತವೆ. ಕಳೆದ  ಒಂದೆರಡು ದಶಕಗಳ ಮತ್ತೊಂದು ಬದಲಾವಣೆ ಎಂದರೆ ಮಾಧ್ಯಮಗಳನ್ನು ಕುರಿತ ಚರ್ಚೆಗಳು ವರದಿಗಳು ಕೂಡ ಈಗ ಬೆಳೆಯುತ್ತಿವೆ. ಇದಂತೂ ಅಪ್ಪಟ ಭಾಷೆಯ ವಲಯವೇ, ಉದಾಹರಣೆಗೆ ಪತ್ರಿಕೆಗಳ ಚಲನಚಿತ್ರ ಪುರವಣಿಗಳನ್ನು ಗಮನಿಸಬಹುದು. ಅಲ್ಲಿ ಚಲನಚಿತ್ರವೆಂಬ ಮಾಧ್ಯಮದ ಚಟುವಟಿಕೆಗಳನ್ನು ಕುರಿತ ಭಾಷಿಕ ಮಾಹಿತಿಗಳು, ವಿಶ್ಲೇಷಣೆಗಳು ಮಂಡಿತವಾಗುತ್ತವೆ. ಕನ್ನಡ ಈ ವಿವಿಧ ನೆಲೆಗಳಲ್ಲಿ ಹೇಗೆ ಬಳಕೆಯಾಗುತ್ತಿದೆ, ಅದರ ಸ್ವರೂಪವೇನು ಎಂಬುದನ್ನು ಈ ಭಾಗದಲ್ಲಿ ಚರ್ಚಿಸಲಾಗುವುದು.

ಈ ಮೊದಲೇ ಸ್ಪಷ್ಟಪಡಿಸಿದಂತೆ ಪ್ರತಿಯೊಂದು ಮಾಧ್ಯಮವೂ ಭಾಷೆಯನ್ನು ಒಂದೇ ರೀತಿಯಲ್ಲಿ ಬಳಸಿಕೊಳ್ಳುವುದಿಲ್ಲ. ಹಲವು ನೆಲೆಗಳಲ್ಲಿ ಈ ಬಳಕೆ ಕಂಡುಬರುತ್ತದೆ. ಎಷ್ಟೋ ವೇಳೆಗಳಲ್ಲಿ ಭಾಷೆಯ ಪ್ರಾಥಮಿಕ ನಿಯೋಗಗಳನ್ನು ನಿರಾಕರಿಸಿ ಅವುಗಳಿಗೆ ಹೊಸ ಜವಾಬ್ದಾರಿಯನ್ನು  ಒದಗಿಸುವ ಪ್ರಸಂಗಗಳು ಇವೆ. ಆದರೆ ಮೊದಲು ಈ ಮಾಧ್ಯಮದಲ್ಲಿ ಕನ್ನಡ ಹೇಗೆ ಮತ್ತು ಯಾವ ಯಾವ ರೀತಿಗಳಲ್ಲಿ ಬಳಕೆಯಾಗುತ್ತದೆ ಎಂಬುದನ್ನು ನೋಡೋಣ.

ಮಾಧ್ಯಮಗಳಲ್ಲಿ ಬಳಕೆಯಾಗುವ ಪದಕೋಶ ಅಗಾಧ ಪ್ರಮಾಣದ ಪಲ್ಲಟಗಳನ್ನು ಕಂಡಿದೆ. ಮುಖ್ಯವಾಗಿ ಕನ್ನಡದ ಪದಕೋಶದ ಜೊತೆಗೆ ಇಂಗ್ಲಿಶ್, ಸಂಸ್ಕೃತ, ಪರ್ಸೋ-ಅರಾಬಿಕ್ ಮತ್ತು ಕನ್ನಡದ ಇತರ ಉಪಭಾಷೆಗಳಿಂದ ಪದಗಳನ್ನು ಪಡೆದುಕೊಳ್ಳುವುದನ್ನು ನೋಡುತ್ತೇವೆ. ಸಾಮಾನ್ಯವಾಗಿ ಕನ್ನಡ ಮತ್ತು ಇಂಗ್ಲಿಶ್ ಪದಗಳ ಮಿಶ್ರಿತ ರೂಪಗಳನ್ನು ವಾಣಿಜ್ಯ, ಆಟೋಟ, ವೈದ್ಯಕೀಯ, ತಾಂತ್ರಿಕ ಭಾಷಾ ಬರಹಗಳಲ್ಲಿ ಕಾಣುತ್ತೇವೆ. ವರದಿ, ವ್ಯಾಖ್ಯಾನ ಮತ್ತು ವೈಚಾರಿಕ ಬರವಣಿಗೆಗಳ ಸಂದರ್ಭದಲ್ಲಿ ಸಂಸ್ಕೃತ ಪದಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದಲ್ಲದೇ ಕನ್ನಡದ ಇತರ ಪ್ರಭೇದಗಳ ಬಳಕೆ ಹಾಸ್ಯ ಮತ್ತಿತರ ಲಘು ಬರಹಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಈ ವಿಭಜನೆಗೆ ತರ್ಕಬದ್ಧವಾದ ಕಾರಣಗಳಿಲ್ಲ. ಆದರೆ ಹೀಗೆ ಮಾಡುತ್ತಿರುವುದು ಬಹುಮಟ್ಟಿಗೆ ಎಲ್ಲರಿಗೂ ಗೊತ್ತಾಗುವ ಮತ್ತು ಎಲ್ಲರೂ ಒಪ್ಪಿಕೊಂಡಂತಿರುವ ಸಂಗತಿಯಾಗಿದೆ. ಮಾಧ್ಯಮಗಳ ಕನ್ನಡ ಬಳಕೆಯಲ್ಲಿ ಬರಹವನ್ನು ಆಧರಿಸಿದ ಮಾಧ್ಯಮಗಳು ಹೆಚ್ಚು ಶುದ್ಧತೆಯ ಕಡೆಗೆ ಒತ್ತನ್ನು ನೀಡುತ್ತವೆ. ಶುದ್ಧತೆ ಎಂದರೇನು? ಸಾಮಾನ್ಯವಾಗಿ ಮೂರು ನೆಲೆಗಳನ್ನು ಶುದ್ಧ ಭಾಷೆಯ ಲಕ್ಷಣಗಳನ್ನು ಹೇಳುವಾಗ ಬಳಸಿಕೊಳ್ಳಲಾಗುತ್ತದೆ. ಒಂದು: ಬರಹದಲ್ಲಿ ಕಾಗುಣಿತ ದೋಷವಿಲ್ಲದಿರುವುದು. ಎರಡು: ಅಪಶಬ್ದಗಳ ಪ್ರಯೋಗ ಇಲ್ಲದಿರುವುದು. ಮೂರು: ವ್ಯಾಕರಣಬದ್ಧವಾದ ಭಾಷೆಯನ್ನು ಬಳ ಬೇಕೆಂಬುದು. ಸಾಮಾನ್ಯವಾಗಿ ಮುದ್ರಿತ ಭಾಷೆಯನ್ನು ಅವಲಂಬಿಸುವ ಮಾಧ್ಯಮ ಗಳೆಲ್ಲವೂ ಈ ಕಟ್ಟುಪಾಡನ್ನು ಎಡೆಬಿಡದೇ ಒಪ್ಪಿಕೊಂಡು ಅನುಸರಿಸುತ್ತವೆ.

ಈ ಮೂರು ಸೂಚಕಗಳನ್ನು ನಿರ್ಧರಿಸುವ ಶುದ್ಧ ಮಾನದಂಡಗಳು ಕನ್ನಡದಲ್ಲಿ ಇಲ್ಲ. ಏಕೆಂದರೆ ಲಿಖಿತ ಮಾಧ್ಯಮವೇ ಕನ್ನಡಕ್ಕೆ ಬಹು ಹಿಂದಿನಿಂದಲೂ ಪರಿಚಿತವಾದ ವಾಹಿನಿಯಾಗಿದೆ. ಆದರೆ ಅದರ ಗ್ರಹಿಕೆಯ ವ್ಯಾಪ್ತಿ ಮಾತ್ರ ಈ ಹಿಂದಿಗಿಂತ ಬೇರೆಯ ರೀತಿಯಲ್ಲಿತ್ತು. ಅಂದರೆ ಬರವಣಿಗೆ ಇದ್ದರೂ ಅದನ್ನು ಓದುವವರು ಹೆಚ್ಚು ಇರಲಿಲ್ಲ. ಆದರೆ ಬರೆದುದನ್ನು ಓದಿ ಹೇಳಿದಾಗ ಕೇಳುವವರಿದ್ದರು. ಈ ಪರಂಪರೆ ಕನ್ನಡದಂತಹ ಭಾಷೆಗೆ ತುಂಬ ವಿಶಿಷ್ಟವಾದದ್ದು. ನಮ್ಮ ಪ್ರಾಚೀನ ವೈಯಾಕರಣಿಗಳು ಭಾಷೆಯಲ್ಲಿ ಇರುವ ದೋಷಗಳನ್ನು ಕುರಿತು ಹೇಳುತ್ತಾರೆ. ಈ ದೋಷಗಳಲ್ಲಿ ಶ್ರುತಿಕಷ್ಟ ಮತ್ತು ಶ್ರುತಿದುಷ್ಟ ಎಂಬ ಎರಡು ದೋಷಗಳು ಗಮನಾರ್ಹ. ಇವು ಭಾಷೆಯಲ್ಲಿ ಇರಬಾರದು; ಎಲ್ಲವೂ ಸಾಧ್ಯವಿದ್ದಷ್ಟು ಶ್ರುತಿಸಹ್ಯ ಪದಗಳಾಗಿರಬೇಕು ಎನ್ನುತ್ತಾರೆ. ಭಾಷಾದೋಷಗಳ ಚರ್ಚೆ ಮಾಡಿದ ಸಂಸ್ಕೃತ ಆಲಂಕಾರಿಕರಿಗೂ ಈ ಪರಿಕಲ್ಪನೆಗಳು ಅಪರಿಚಿತ. ಕನ್ನಡದ ಮೊದಲ ಗ್ರಂಥಕರ್ತೃ ಶ್ರೀ ವಿಜಯನೇ ಈ ಪರಿಕಲ್ಪನೆಗಳನ್ನು ಹೇಳಿದ್ದಾನೆ. ಶ್ರುತಿಕಷ್ಟ ಎಂದರೆ ಕೇಳಿಸಿಕೊಳ್ಳಲು ಮನಸ್ಸಿಗೆ ಸಾಧ್ಯವಾಗದೇ ಹೋಗುವ ಪದಗಳು ಎಂದರ್ಥ, ಶ್ರುತಿದುಷ್ಟ ಎಂದರೆ ಕೇಳಿಸಿಕೊಳ್ಳಲು ಕಷ್ಟವಲ್ಲದಿದ್ದರೂ ಇಷ್ಟವಾಗದ ಪದಗಳು ಎಂದರ್ಥ. ಓದುವ ಪರಂಪರೆಯೇ ಪ್ರಧಾನವಾಗಿದ್ದರೆ ಆಗ ಈ ದೋಷಗಳ ಕಲ್ಪನೆಯೇ ಇರುವುದಿಲ್ಲ. ಏಕೆಂದರೆ ಓದು ಕಣ್ಣಿಗೆ ಸಂಬಂಧಿಸಿದ್ದು ಈ ದೋಷಗಳು ಕಿವಿಗೆ ಸಂಬಂಧಿಸಿದ ಅನುಭವಗಳು. ಆದ್ದರಿಂದ ಬರಹವನ್ನು ಓದಿ ಹೇಳಿದಾಗ ಕೇಳುವವರಿಗೆ ಯಾವ ಅನುಭವಗಳಾಗುತ್ತವೋ ಆ ಅನುಭವದ ನೆಲೆಯಲ್ಲಿ ಈ ದೋಷಗಳನ್ನು ಕಲ್ಪಿಸಲಾಗಿದೆ. ಈಗ ಪರಿಸ್ಥಿತಿ ಬದಲಾಗಿದೆ. ಓದಿಕೊಳ್ಳುವ ಜನರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಇವರ ಓದಿಗೆ ಅನುಕೂಲವಾಗುವ ಹಾಗೆ ಭಾಷೆಯನ್ನು ಬಳಸಬೇಕು. ಅದಕ್ಕೆ ಅನುಗುಣವಾಗಿ ಅದು ತನ್ನ ಸಾಮಗ್ರಿಗಳನ್ನು ಅಳವಡಿಸಿ ಕೊಳ್ಳಬೇಕು.

ಒಂದು ಪತ್ರಿಕೆಯನ್ನು ಗಮನಿಸೋಣ. ಅದರಲ್ಲಿ ಸರಾಸರಿ ಹತ್ತು ಪುಟಗಳಿದ್ದರೆ ಅಂದಾಜು ಎಂಬತ್ತು ಕಾಲಂ ಬರಹ ಮುದ್ರಿತವಾಗಿರುತ್ತದೆ. ಒಂದು ಅಂದಾಜಿ ನಂತೆ ಒಂದು ಪತ್ರಿಕೆಯ ಸಂಚಿಕೆಯೊಂದರಲ್ಲಿ ಸರಿ ಸುಮಾರು ಒಂದು ಲಕ್ಷ ಪದಗಳಿರುತ್ತವೆ. ಈಮಾಹಿತಿ ಇಲ್ಲಿ ಅಗತ್ಯ. ಇದನ್ನು ಹೇಗೆ ಓದುತ್ತಾರೆ? ಯಾರೂ ಅಲ್ಲಿ ಮುದ್ರಣಗೊಂಡ ಎಲ್ಲ ಒಂದು ಲಕ್ಷ ಪದಗಳನ್ನು ಬಿಡದೇ ಓದುವುದಿಲ್ಲ. ಅಷ್ಟೇಕೆ ಆ ಒಂದು ಲಕ್ಷ ಪದಗಳನ್ನು ಬಿಡಿಬಿಡಿಯಾಗಿ ನೋಡುವುದೂ ಇಲ್ಲ. ಕೆಲವು ಸಾವಿರ ಪದಗಳನ್ನು ಮೀರಿ ಯಾವ ಸರಾಸರಿ ಓದುಗರೂ ಹೆಚ್ಚಿನ ಪದಗಳ ಕಡೆಗೆ ಗಮನವಿಡುವುದಿಲ್ಲ. ಹಾಗಿದ್ದಲ್ಲಿ ಇಷ್ಟು ಪ್ರಮಾಣದ ವಾಕ್ಯಗಳನ್ನು ಪತ್ರಿಕೆಯೊಂದು ಸಿದ್ಧಪಡಿಸಿ ನೀಡಿದ್ದೇಕೆ? ಇದೆಲ್ಲವನ್ನು ಒಬ್ಬರೇ ಬರೆದಿರುವುದಿಲ್ಲ. ಹಲವರ ಬರಹಗಳು ಅಲ್ಲಿ ಬೆರೆತಿರುತ್ತವೆ ಎಂಬುದೂ ನಿಜ. ಹಾಗೆಯೇ ಎಲ್ಲ ಓದುಗರು ತಮ್ಮತಮ್ಮ ಪಾಲಿಗೆ ಗ್ರಹಿಸಿಕೊಳ್ಳುವ ಕೆಲವು ಸಾವಿರ ಪದಗಳು ಕೂಡ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಅಂದರೆ ಪತ್ರಿಕೆ ತನ್ನ ಮಾಧ್ಯಮವಾಗಿರುವ ಭಾಷೆಯ ಸಾಮಗ್ರಿಗಳನ್ನು ಸುಮ್ಮನೆ ಹರಡಿರುತ್ತದೆ. ಅದೊಂದು ಅಂಗಡಿ ಇದ್ದಂತೆ. ಬೇರೆ ಬೇರೆ ಗ್ರಾಹಕರಿಗೆ ಬೇಕುಬೇಕಾದ ವಸ್ತುಗಳು, ಬೇಕುಬೇಕಾದೆಡೆ ದೊರಕುತ್ತವೆ. ಈ ಹೋಲಿಕೆ ಉದ್ದೇಶಪೂರ್ವಕವಾದದ್ದು. ಅಂಗಡಿಯ ಅಳವಡಿಕೆ ಯಲ್ಲಿ ಜನ ಹೆಚ್ಚು ಬಳಸುವ ವಸ್ತುಗಳು ಸುಲಭವಾಗಿ ಕಣ್ಣಿಗೆ ಬೀಳುವಂತೆ ಕೈಗೆ ಸಿಗುವಂತೆ ಇರಿಸಲಾಗುತ್ತದೆ. ಯಾರೋ ಕೆಲವರು ಯಾವಾಗಲೋ ಕೇಳುವ ವಸ್ತುಗಳು ಸುಲಭವಾಗಿ ಸಿಗುವಂತಿರುವುದಿಲ್ಲ. ಪತ್ರಿಕೆಯಲ್ಲಿ ಭಾಷಾ ಸಾಮಗ್ರಿಯನ್ನು ಇದೇ ತತ್ವಕ್ಕೆ ಅನುಗುಣವಾಗಿ ಅಳವಡಿಸಲಾಗುತ್ತದೆ. ಉದಾಹರಣೆಗೆ ಒಂದು ವರದಿಯ ಮುಖ್ಯ ಶೀರ್ಷಿಕೆಯನ್ನು ಗಮನಿಸಿ. ಆ ಶೀರ್ಷಿಕೆಯ ಅಕ್ಷರಗಳ ಗಾತ್ರ ಕೂಡ ಸಾಮಾನ್ಯ ಅಕ್ಷರಗಳಿಗಿಂತ ದೊಡ್ಡದಾಗಿದ್ದು ಕಣ್ಣಿಗೆ ಬೀಳುವಂತಿರುತ್ತದೆ. ಭಾಷಿಕವಾಗಿ ಅದರ ವಿನ್ಯಾಸ ಕೂಡ ಬೇರೆ ರೀತಿಯದ್ದು. ವಿಷಯಗ್ರಹಿಕೆಗೆ ಹೆಚ್ಚು ಅನುಕೂಲವಾಗುವ ಹಾಗೆ ಅದನ್ನು ರೂಪಿಸಲಾಗುತ್ತದೆ. ಅಂದರೆ ಪತ್ರಿಕೆಯ ಭಾಷೆ ನಾವು ಸಾಮಾನ್ಯವಾಗಿ ಗ್ರಹಿಸುವಂತೆ ಕೇವಲ ಮಾಹಿತಿಪ್ರಧಾನವಾಗಿ ಇರುವುದಿಲ್ಲ. ಓದುವವರ ಆಸಕ್ತಿ, ಬಿಡುವು, ಗ್ರಹಿಕೆಯ ಸಾಮರ್ಥ್ಯ ಇವುಗಳನ್ನ ವಲಂಬಿಸಿ, ತನ್ನ ಭಾಷೆಯ ಸ್ವರೂಪದಲ್ಲಿ ತನ್ನದೇ ಆದ ಹೊಸವಿನ್ಯಾಸವನ್ನು ನಿರ್ಮಿಸಿಕೊಳ್ಳುತ್ತದೆ. ಕನ್ನಡದ ಪತ್ರಿಕೆಗಳು ಕಳೆದ ಐವತ್ತು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಅಗಾಧ ಪ್ರಮಾಣದ ಪ್ರಯೋಗಗಳನ್ನು ಮಾಡಿವೆ.

ಸಾಮಾನ್ಯವಾಗಿ ಪತ್ರಿಕೆಯ ಭಾಷಾ ಸ್ವರೂಪವನ್ನು ವಿವರಣಾತ್ಮಕ, ನಾಟಕೀಯ ಮತ್ತು ಚಿಂತನಾತ್ಮಕ ಎಂದು ವಿಭಜಿಸಲಾಗುತ್ತದೆ. ಪಾರಂಪರಿಕ ಚಿಂತನೆಯಂತೆ ಈ ಮೂರು ಬಗೆಗಳು ಚರಿತ್ರೆ, ಸಾಹಿತ್ಯ ಮತ್ತು ತತ್ವಶಾಸ್ತ್ರಗಳಿಗೆ ಸಂಬಂಧಿಸಿದ ಭಾಷಾ ಪ್ರಯೋಗಗಳು. ಪತ್ರಿಕೆಗಳು ತಮ್ಮ ಒಡಲಿನಲ್ಲಿ ಇಂತಹ ಮೂರು ಶೈಲಿಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ ಓದುವವರನ್ನು ಕೂಡ ತಮ್ಮ ಭಾಷಾ ನಿರ್ಮಿತಿಯಲ್ಲಿ ಪಾತ್ರಧಾರಿಗಳನ್ನಾಗಿ ಮಾಡಬೇಕಾಗುತ್ತದೆ. ಪ್ರತಿ ಪತ್ರಿಕೆಯೂ ಓದುಗರ ಬರವಣಿಗೆಗಾಗಿ ಒಂದಷ್ಟು ಜಾಗವನ್ನು ಮೀಸಲಿಡುತ್ತದೆ. ಈ ಪ್ರವೃತ್ತಿ ಕನ್ನಡ ಪತ್ರಿಕೋದ್ಯಮದಲ್ಲಿ ಈಗ ಗುಣ ಮತ್ತು ಪ್ರಮಾಣದಲ್ಲಿ ತುಂಬಾ ಹೆಚ್ಚಿದೆ ಎನ್ನುವುದನ್ನು ಗಮನಿಸಬೇಕು. ಈ ಮೊದಲು ಹೇಳಿದಂತೆ ವಿವರ, ನಾಟಕೀಯತೆ ಮತ್ತು ಚಿಂತನಾಶೀಲತೆಗಳನ್ನು ಪತ್ರಿಕೆ ಮಂಡಿಸುವಾಗ ಅದರಲ್ಲಿ ಸೂಕ್ತ ರೀತಿಯ ಭಾಷಾಬಳಕೆಯನ್ನು ಶೈಲಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಏಕಮುಖಿಯಾದ ಆದಿ, ಅಂತ್ಯ ಬೆಳವಣಿಗೆಗಳಿರುವ ನಿರೂಪಣೆಗಳಿಗೆ ಹೋಲಿಸಿದರೆ ಪತ್ರಿಕೆಯ ಭಾಷಾರಚನೆಗೆ ಇಂಥಾ ಆದಿ ಅಂತ್ಯ ಬೆಳವಣಿಗೆಗಳು ಇರುವುದಿಲ್ಲ.

ಕಳೆದ ಒಂದು ದಶಕದಲ್ಲಿ ಕನ್ನಡ ಪತ್ರಿಕೆಗಳ ಭಾಷೆ ಮತ್ತೊಂದು ಹೊಸ ಸವಾಲನ್ನು ಎದುರಿಸುತ್ತಿದೆ. ಈ ಮೊದಲು ಓದುಗರು ಪತ್ರಿಕೆಗಳನ್ನು ಸುದ್ದಿಗಳಿಗಾಗಿ ಆಶ್ರಯಿಸಿದರೂ ಟಿ.ವಿ.ಮಾಧ್ಯಮದ ಬೆಳವಣಿಗೆಯಿಂದಾಗಿ ಓದುಗರಿಗೆ ಪತ್ರಿಕೆಯ ಸುದ್ದಿ ಹೊಸದೆಂದು ಅನ್ನಿಸುವುದಿಲ್ಲ ಅಥವಾ ಆ ಸುದ್ದಿಗಾಗಿ ಪತ್ರಿಕೆಗಳನ್ನು ಅವಲಂಬಿಸಬೇಕಾಗಿಲ್ಲ. ಹೀಗಿರುವಾಗ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಕಾಯ್ದು ಕೊಳ್ಳುವುದು ಹೇಗೆ? ಹಾಗೆಂದು ಪತ್ರಿಕೆಗಳ ಓದುವವರ ಸಂಖ್ಯೆ ಕೂಡ ಇಳಿಕೆಯಾಗಿಲ್ಲ. ಅಂದರೆ ಜನರು ಟಿ.ವಿಯನ್ನು ನೋಡುತ್ತಿದ್ದಾರೆ; ಪತ್ರಿಕೆಗಳನ್ನು ಓದುತ್ತಿದ್ದಾರೆ. ಇವೆರಡು ಕೆಲಸಗಳಿಗೆ ಬೇಕಾದಷ್ಟು ಸಮಯ ಅವರಲ್ಲಿದೆ ಎಂದು ಹೇಳಬೇಕೆ? ಅಥವಾ ಪತ್ರಿಕೆಗಳನ್ನು ಓದುವವರೇ ಬೇರೆ; ಟಿ.ವಿಗಳನ್ನು ನೋಡುವವರೇ ಬೇರೆ ಎಂದು ತೀರ್ಮಾನಿಸಬೇಕೇ? ಎರಡನೆಯದು ಕೊಂಚ ನಿಜವೂ ಇರಬಹುದು. ಆದರೆ ಪತ್ರಿಕೆಗಳು ಓದುಗರ ಬದಲಾದ ಸನ್ನಿವೇಶದಿಂದ ಭಾಷೆಯ ಮಟ್ಟಿಗೆ ಅಗಾಧ ವ್ಯತ್ಯಾಸಗಳನ್ನು ಮಾಡಿಕೊಳ್ಳಬೇಕಾಗಿ ಬಂದಿರುವುದು ಕೂಡ ಅಷ್ಟೇ ನಿಜ. ಸುದ್ದಿಯ ವಿವರಣೆಗಿಂತ ಅದನ್ನು ಮಂಡಿಸುವ ರೀತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಕೆಲವರು ಈ ಸಮಸ್ಯೆಯನ್ನು ಬೇರೊಂದು ರೀತಿಯಲ್ಲಿ ವಿವರಿಸುವುದುಂಟು. ಟಿ.ವಿ ಕ್ಲುಪ್ತ ಕಾಲದಲ್ಲಿ ವರದಿಗಳನ್ನು ನೀಡುತ್ತದೆ. ಆದರೆ ಅದನ್ನು ವಿಶ್ಲೇಷಿಸುವ ಅವಕಾಶ ಪತ್ರಿಕೆಗಳಿಗೆ ಹೆಚ್ಚಿದೆ. ಅಂದರೆ ಅದು ತನ್ನ ಭಾಷೆಯ ವರ್ಣನಾತ್ಮಕ, ನಾಟಕೀಯ ನೆಲೆಗಳಿಗಿಂತ ಚಿಂತನಶೀಲ ನೆಲೆಗೆ ಹೆಚ್ಚು ಒತ್ತನ್ನು ನೀಡಬೇಕಾಗುತ್ತದೆ. ಈ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಬರುವುದಿಲ್ಲ. ಕನ್ನಡ ಪತ್ರಿಕೆಗಳು ಈ ಹೊಸ ಸವಾಲನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಂತೆ ತೋರುವುದಿಲ್ಲ. ನಾಟಕೀಯತೆಯನ್ನು ಬಿಟ್ಟುಕೊಡಲು ಸಿದ್ಧವಿಲ್ಲದೇ ಅದನ್ನು ಸುದ್ದಿಯ ಮಂಡನೆಯ ವಿಧಾನಕ್ಕಿಂತ ಭಿನ್ನವಾಗಿ ಮಂಡಿಸಲು, ಅದರ ಭಾಷಿಕ ಅಕಾರಗಳಲ್ಲಿ ಹೊಸ ತಂತ್ರಗಾರಿಕೆಯನ್ನು ಅಳವಡಿಸುವ ಜಾಣ್ಮೆಯನ್ನು ಪತ್ರಿಕೆಗಳು ತೋರಿಸುತ್ತಿವೆ. ತಮ್ಮೆದುರು ಇದ್ದ ಸವಾಲನ್ನು ನಿವಾರಿಸಿಕೊಳ್ಳಲು ಇಂತದೊಂದು ಪ್ರಯತ್ನಕ್ಕೆ ಕೈ ಹಾಕಿವೆ.

ಪತ್ರಿಕೆಗಳು ಭಾಷೆಯ ನೆಲೆಯಲ್ಲಿ ಪ್ರಯೋಗ ಮಾಡಲು ಆರಂಭಿಸಿದ್ದು ಬಹು ಹಿಂದಿನಿಂದಲೇ. ಅಗತ್ಯವಾದ ಪದಕೋಶವೊಂದನ್ನು ರೂಪಿಸಿಕೊಳ್ಳಲು ಈ ಪ್ರಯತ್ನಗಳು ಉದ್ದೇಶಿತವಾಗಿದ್ದವು. ಅದಕ್ಕಾಗಿ ಆ ಪತ್ರಿಕೆಗಳು ಹೊಸ ಪದಗಳನ್ನು ರಚಿಸಿಕೊಂಡು ಬಳಕೆಗೆ ತಂದವು. ಹೀಗೆ ಮಾಡುವಾಗ ಲಭ್ಯವಿದ್ದ ಸಂಸ್ಕೃತ ಪದ ಗಳನ್ನು ಅಗತ್ಯ ನಿಯಮಗಳಿಗೆ ಅನುಸಾರವಾಗಿ ಸಿದ್ಧಮಾಡಿಕೊಂಡಂತೆ ಕಾಣುತ್ತದೆ. ಹೀಗೆ ಚಲಾವಣೆಗೆ ಬಂದ ಪದಗಳು ಮೇಲ್ನೋಟಕ್ಕೆ ಸಂಸ್ಕೃತ ಪದ ಗಳಿಂದ ನಿರ್ಮಾಣಗೊಂಡಂತೆ ಕಂಡರೂ ಅವುಗಳ ಅರ್ಥದ ದೃಷ್ಟಿಯಿಂದ ಕನ್ನಡದ ಸಾಧ್ಯತೆಗಳನ್ನು ವಿಶೇಷವಾಗಿ ಅಳವಡಿಸಿಕೊಂಡಿದ್ದವು. ಆದರೆ ಕಳೆದ ಎರಡು ದಶಕಗಳಿಂದ ಈ ಬಗೆಯ ಪದನಿರ್ಮಾಣ ಬಹುಮಟ್ಟಿಗೆ ನಿಂತು ಹೋಗಿದೆ. ಅದರ ಬದಲು ಸಾರೂಪ್ಯ ಮಾದರಿಯಲ್ಲಿ ಹೊಸ ಪದಗಳನ್ನು ನಿರ್ಮಿಸುತ್ತಿದ್ದಾರೆ. ಇಂತಹ ಪದಗಳಲ್ಲಿ ಪದಗಳ ಒಳರಚನೆಯ ಬಗೆಗೆ ಯಾವ ಆಸಕ್ತಿಯೂ ಇರುವುದಿಲ್ಲ.

ದಶಕಗಳು ಕಳೆದರೂ ಕನ್ನಡದ ವಾರ್ತೆಗಳ ಭಾಷೆಯಲ್ಲಿ ನಾವು ಮೇಲೆ ಹೇಳಿದ ಲಕ್ಷಣ ಇನೂ ಮೈಗೂಡಿಲ್ಲ. ಕಣ್ಣೋದಿಗೆ ಅನುಕೂಲವಾಗುವಂತೆ ಬರೆದಿರುವುದನ್ನೇ ವಾಚಕರು ಕಿವಿಯೋದಿಗೆ ಪರಿವರ್ತಿಸುತ್ತಾರೆ. ವಾರ್ತೆ ಓದಿದಂತೆ ಭಾಸವಾಗುತ್ತದೆಯೇ ಹೊರತು ಹೇಳಿದಂತೆ ಭಾಸವಾಗುವುದಿಲ್ಲ. ಇಂತಹದೊಂದು ಭಾಷಿಕ ಕೊರತೆ ಇದೆ ಎಂಬುದು ಆ ಮಾಧ್ಯಮಕ್ಕೆ ತಿಳಿದಂತೆ ತೋರುತ್ತಿಲ್ಲ. ವಾರ್ತಾವಾಚಕರು ಒಂದು ಬಗೆಯ ನಿರ್ಮಮತೆಯನ್ನು ಮತ್ತು ವಸ್ತುದೂರವನ್ನು ಕಾಯ್ದುಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತಿರಲೂಬಹುದು. ಇದರಿಂದ ವಾರ್ತೆಗಳಿಗೆ ಒಂದು ದೃಷ್ಟಿಕೋನ ಒದಗದಂತೆ ಮಾಡುತ್ತಿರಬಹುದು. ಆದರೆ ಬದಲಾಗುತ್ತಿರುವ ಕಾಲಮಾನಗಳಲ್ಲಿ ಇಂತಹ ವ್ಯಾಖ್ಯಾನಗಳೇ ನಿರುಪಯುಕ್ತವಾಗುತ್ತಿವೆ. ಅದರಲ್ಲೂ ಹೆಚ್ಚು ತೀವ್ರತೆಯ ಮಾಧ್ಯಮವಾದ ಟೆಲಿವಿಜನ್ ಎದುರು ಇಂಥಾ ತರ್ಕಗಳನ್ನು ನಿರೂಪಿಸುವುದು ವ್ಯರ್ಥ.

ದೃಶ್ಯ ಮಾಧ್ಯಮವಾಗಿ ಮಾತನ್ನು ಬಳಸುತ್ತಿರುವ ಟೆಲಿವಿಜನ್ ಮಟ್ಟಿಗೆ ಕನ್ನಡ ಇನ್ನೂ ವೃತ್ತಿಪರತೆಯ ಕೊರತೆಯನ್ನು ಎದುರಿಸುತ್ತಿದೆ. ಮುಖ್ಯವಾಗಿ ದೃಶ್ಯದ ಲಯ ಮತ್ತು ಮಾತಿನ ಲಯಗಳ ನಡುವೆ ಒಂದು ಅವಿರತ ಸಂಬಂಧವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಆ ಸಮಸ್ಯೆಯ ಅರಿವಿಲ್ಲದಿರುವುದೇ ಮುಖ್ಯ ಕಾರಣ. ದೃಶ್ಯಗಳ ತಾಂತ್ರಿಕ ಪರಿಣತಿ, ಅವುಗಳ ಜೋಡಣೆಯ ಲಯ ಇವುಗಳೊಡನೆ ಅಲ್ಲಿ ಬಳಕೆಯಾಗುವ ಭಾಷೆ ಕೂಡ ಹೊಂದಿಕೆಯಾಗಬೇಕು. ಮಾತು ಅಲ್ಲಿ ಕೇವಲ ಸೇತುವೆಯಲ್ಲ. ಅಲ್ಲದೇ ಮಾತಿನ ಅಪವ್ಯಯ ಕೂಡ ಆಗಬಾರದು. ಈ ಅಂಶ ಕನ್ನಡದ ಟೆಲಿವಿಜನ್ ವಾಹಿನಿಗಳಲ್ಲಿ ಭಾಷೆಯ ತಜ್ಞರಾಗಿ ಕೆಲಸ ಮಾಡುತ್ತಿರುವವರ ಗಮನಕ್ಕೆ ಬಂದಂತೆ ತೋರುತ್ತಿಲ್ಲ.

ಮತ್ತೊಂದು ಸಮೂಹ ಮಾಧ್ಯಮದ ಚರ್ಚೆ ಇಲ್ಲಿ ಅಗತ್ಯ. ಇದು ಚಲನಚಿತ್ರ. ಏಕೀಕರಣದ ಮೊದಲಿಗೂಕನ್ನಡ ಚಲನಚಿತ್ರಗಳು ಸಿದ್ಧಗೊಳ್ಳುತ್ತಿದ್ದವು. ಆ ಹೊತ್ತಿಗೆ ಸಿದ್ಧಗೊಂಡ ಚಲನಚಿತ್ರಗಳ ಸಂಖ್ಯೆ ಲಭ್ಯ ಮಾಹಿತಿಯ ಪ್ರಕಾರ ಐವತ್ತನ್ನು ದಾಟುವುದಿಲ್ಲ. ಈ ಐವತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆ ಎರಡು ಸಾವಿರವನ್ನು ದಾಟಿವೆ. ಅಂದರೆ ವರ್ಷಕ್ಕೆ ಸರಾಸರಿ ನಲವತ್ತು ಚಲನಚಿತ್ರಗಳು. ಅದರಿಂದ ಭಾಷೆಯ ಬಳಕೆಯ ನಿಟ್ಟಿನಲ್ಲಿ ಕನ್ನಡ ಚಲನಚಿತ್ರಗಳಿಗೆ ಒಂದು ಮಹತ್ವದ ಸ್ಥಾನವಿದೆ.

ಚಲನಚಿತ್ರಗಳಲ್ಲಿ ಭಾಷೆ ಮುಖ್ಯವಾಗಿ ಸಂಭಾಷಣೆ ಮತ್ತು ಹಾಡುಗಳ ರೂಪಗಳಲ್ಲಿ ಬಳಕೆಯಾಗುತ್ತದೆ. ಕೆಲವು ಪ್ರಸಂಗಗಳಲ್ಲಿ ಹಿನ್ನೆಲೆಯ ನಿರೂಪಣೆಯ ಭಾಷೆಯೂ ಇರಬಹುದು. ಆದರೆ ಅದು ನಿಯಮವಲ್ಲ. ಉಳಿದೆರಡು ಬಹುಮಟ್ಟಿಗೆ ಖಚಿತ. ಹಾಡುಗಳಿಲ್ಲದಿರುವುದು ಕೂಡ ಕೇವಲ ಆಕಸ್ಮಿಕ. ಈ ಎರಡು ನೆಲೆಗಳಲ್ಲಿ ಕನ್ನಡ ಭಾಷೆ ಹೇಗೆ ಬಳಕೆಯಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು.

ಮೊದಲ ಕೆಲವು ದಶಕಗಳಲ್ಲಿ ಚಲನಚಿತ್ರಗಳ ಸಂಭಾಷಣೆಯ ಭಾಷೆ ಒಂದು ಪ್ರಮಾಣಿತ ರೂಪವನ್ನು ಮಾತ್ರ ಬಳಸುತ್ತಿತ್ತು. ಈ ರೂಪ ನಾವು ಹಿಂದೊಮ್ಮೆ ಚರ್ಚಿಸಿದಂತೆ ವೃತ್ತಿ ರಂಗಭೂಮಿಯ ಭಾಷೆಯ ಮುಂದುವರಿಕೆಯಾಗಿತ್ತು. ಅದು ಕನ್ನಡದ ಆಡುನುಡಿಗೆ ಹತ್ತಿರವಾಗಿ ಇರಲಿಲ್ಲ. ಆದರೆ ಹಾಗಿಲ್ಲದಿರುವುದು ಕೊರತೆ ಯೆಂದು ಭಾಸವಾಗುತ್ತಿರಲಿಲ್ಲ. ಮೊದಮೊದಲು ಈ ಚಿತ್ರಗಳು ಪೌರಾಣಿಕ, ಐತಿಹಾಸಿಕ ಮತ್ತು ಜಾನಪದದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದವು. ಆದ್ದರಿಂದ ಅವುಗಳ ಭಾಷೆಗೆ ಒಂದು ಬಗೆಯ ಕಾಲಾತೀತ ಸ್ಥಿತಿ ಸರಿ ಎನ್ನಿಸುವಂತಿತ್ತು. ಸಾಮಾಜಿಕ ವಸ್ತುಗಳು ಚಿತ್ರಗಳಿಗೆ ಆಯ್ಕೆಯಾದಾಗಲೂ ಭಾಷೆ ಮತ್ತು ಶೈಲಿ ಕೃತಕವಾಗಿಯೇ ಉಳಿದಿದ್ದವು. ಚಿತ್ರಗಳ ಭ್ರಾಮಕತೆಯನ್ನು ಕಾಯ್ದುಕೊಳ್ಳಲು ಈ ಭಾಷೆ ಅನುಕೂಲಕರವಾಗಿತ್ತು. ಮೊದಲ ಹಂತದ ಚಿತ್ರಗಳು ಕಪ್ಪುಬಿಳುಪು. ಅಂದರೆ ಅವುಗಳ ದೃಶ್ಯ ರೂಪಗಳೇ ವಾಸ್ತವತೆಯನ್ನು ಶೈಲೀಕೃತಗೊಳಿಸಿದವು. ಆದ್ದರಿಂದ ಭಾಷೆ ಕೂಡ ಅದಕ್ಕೆ ಪೂರಕವಾದುದು. ಆದರೆ ಎಲ್ಲಿ ಅನೌಚಿತ್ಯ ಉಂಟಾಗಿ ನಗೆ ಉಕ್ಕಬೇಕೋ ಅಂತಹ ಕಡೆ ಮಾತ್ರ ಭಾಷೆ ಬೇರೆಯಾಗುವುದು. ಹಳೆಯ ಚಿತ್ರಗಳ ಹಾಸ್ಯ ದೃಶ್ಯಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಚಿತ್ರದ ವಸ್ತು ಏನೇ ಇದ್ದರೂ ಅದು ರೂಪಿಸುತ್ತಿದ್ದ ಮೌಲ್ಯಜಗತ್ತಿನಲ್ಲಿ ಪಾತ್ರ ಗಳು ಒಂದು ಪರೀಕ್ಷೆಗೆ ಒಳಗಾಗಿ ಪರಿಷ್ಕಾರಗೊಳ್ಳುತ್ತಿದ್ದವು. ಈ ಕಾರಣದಿಂದ ಕಥಾವಸ್ತುವಿನ ಮೌಲ್ಯಪ್ರತಿಪಾದಕ ನಾಯಕ ವಾಸ್ತವವಾಗಿ ಜನರಿಗೆ ಬೆನ್ನು ಮಾಡಿದವನು. ಹಾಗಾಗಿ ಆ ಪಾತ್ರಗಳ ಭಾಷೆ ಕೂಡ ಜನರ ಭಾಷೆಗಿಂತ ಬೇರೆಯಾಗುವುದು ಅಗತ್ಯವಾಗುತ್ತದೆ. ಆದರೆ ಎಂಟನೇ ದಶಕದ ಅನಂತರದಲ್ಲಿ ಕನ್ನಡ ಚಲನಚಿತ್ರಗಳ ಲೋಕ ಸಂಪೂರ್ಣ ಬದಲಾಗುತ್ತಿದೆ. ತಾಂತ್ರಿಕ ಪರಿಣತಿ ಒಂದೆಡೆ ಆದರೆ, ಚಿತ್ರಗಳ ಒಳಗಿನ ಕಥಾಲೋಕ ಕೂಡ ಸಂಪೂರ್ಣವಾಗಿ ಭಿನ್ನವಾಗುತ್ತದೆ. ತಾಂತ್ರಿಕ ಪರಿಣತಿಯು ಎಲ್ಲ ಬಗೆಯ ವೈಭವಗಳನ್ನು ಅತಿಭ್ರಾಮಕ ಎನ್ನಿಸುವ ರೀತಿಯಲ್ಲಿ ನಿರೂಪಿಸುತ್ತಿತ್ತು. ಆದರೆ ಈ ಸೆಳೆವನ್ನು ಹತ್ತಿಕ್ಕಲು ಪಾತ್ರಗಳ ಜಗತ್ತಿನ ಸ್ವರೂಪವನ್ನು ಪರಿವರ್ತಿಸಲಾಯಿತು. ಈ ಅಂಶ ಅವರ ಸಾಮಾಜಿಕ ಹಿನ್ನೆಲೆ, ವಸ್ತ್ರವಿನ್ಯಾಸ ಇವುಗಳಲ್ಲಿ ಬಿಂಬಿತವಾದಂತೆ ಅವರ ಭಾಷೆಯಲ್ಲೂ ಕಾಣಿಸಿಕೊಳ್ಳತೊಡಗುತ್ತದೆ. ಶೈಲೀಕೃತ ಭಾಷಾ ಬಳಕೆ ಹಿಂದೆ ಸರಿದು ದಿನದ ಮಾತಿನ ರೂಪಗಳು ಬಳಕೆಯಾಗತೊಡಗುತ್ತದೆ. ಇದು ತಂದ ಬದಲಾವಣೆ ಏನೆಂಬುದನ್ನು ಕೊಂಚ ವಿವರವಾಗಿ ಪರಿಶೀಲಿಸಬೇಕು. ಈ ಕಥಾನಾಯಕರು  ಆದರ್ಶದ ಜಗತ್ತಿನಿಂದ ಬಂದವರಲ್ಲ. ಆ ಜಗತ್ತಿನೊಡನೆ ಅವರು ಆಗಾಗ ಮುಖಾಮುಖಿಯಾಗುತ್ತಾರೆ. ಆದರೆ ಅವರು ಅದರ ಹೊರಗಿನವರೇ. ಸಾಮಾಜಿಕ ನೆಲೆಯ ವಿವಿಧ ಸ್ತರಗಳನ್ನು ಮರುಗಳಿಸುವ ಈ ಪ್ರಯತ್ನ ಚಿತ್ರಗಳಲ್ಲಿ ಒಂದು ವಿಚಿತ್ರ ಬಗೆಯ ಭಾಷಾ ಬಳಕೆಗೆ ಅನುವು ಮಾಡಿಕೊಟ್ಟಿದೆ. ಮಾತಿನ ವರಸೆಗಳು ಸಂದರ್ಭದ ಅಗತ್ಯಗಳನ್ನು ಅನುಲಕ್ಷಿಸಿ ಹುಟ್ಟುತ್ತಿದ್ದವು. ಆದರೆ ಅದರಾಚೆಗೆ ಭಾಷೆಗಿರುವ ಅವಕಾಶಗಳನ್ನು ಚಲನಚಿತ್ರಗಳು ಈಗ ಸಂಪೂರ್ಣವಾಗಿ ಕೈಬಿಟ್ಟಿವೆ. ಮೇಲುನೋಟಕ್ಕೆ ಕನ್ನಡದ ಆಡುನುಡಿಯ ಪ್ರಾದೇಶಿಕ ಪ್ರಭೇದಗಳ ಮತ್ತು ಸಾಮಾಜಿಕ ಪ್ರಭೇದಗಳ ಮರುಸ್ಥಾಪನೆಯಾಗಿದೆ ಎಂದು ತೋರುತ್ತದೆ. ಆದರೆ ಇದು ಈ ಮಾಧ್ಯಮದ ಒಟ್ಟು ತಾತ್ವಿಕತೆಯೊಡನೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮಾತನ್ನು ಚಲನಚಿತ್ರಗಳ ಜಾಗತಿಕ ಇಲ್ಲವೇ ಭಾರತೀಯ ನೆಲೆಯಲ್ಲಿ ಇರಿಸಿ ನೋಡಿ ಹೇಳುತ್ತಿಲ್ಲ. ಏಕೆಂದರೆ ಕನ್ನಡ ಸಂಸ್ಕೃತಿಯ ವಿಶಿಷ್ಟ ಅಗತ್ಯಗಳಿಗನುಗುಣವಾಗಿ ಕನ್ನಡ ಚಲನಚಿತ್ರಗಳು ನೆಲೆಗೊಂಡಿವೆ. ಆದ್ದರಿಂದ ಅದರ ಭಾಷಿಕ ನೆಲೆಯೂ ಕೂಡ ಆ ನಿಟ್ಟಿನಲ್ಲೇ ಪರಿಶೀಲನೆಗೆ ಒಳಗಾಗಬೇಕು.

ಚಿತ್ರಗಳಲ್ಲಿ ಭಾಷೆ ಬಳಕೆಯಾಗುವ ಇನ್ನೊಂದು ನೆಲೆಯೆಂದರೆ ಹಾಡುಗಳು. ನಮಗೆ ತಿಳಿದಿರುವಂತೆ ಇದು ಭಾರತೀಯ ಚಲನಚಿತ್ರಗಳ ವೈಶಿಷ್ಟ ಮತ್ತು ನಮ್ಮ ರಂಗಭೂಮಿಯ ಮುಂದುವರಿಕೆ. ಅವಾಸ್ತವತೆಯ ಕಾರಣವನ್ನು ಮುಂದೂಡಿ ಹಾಡುಗಳನ್ನು ನಿರಾಕರಿಸುವವರು ಇದ್ದಾರೆ. ಆದರೆ ನಮ್ಮ ಚಿತ್ರಗಳ ಸಾಂಸ್ಕೃತಿಕ ವ್ಯಾಕರಣವನ್ನು ಅರಿತರೆ ಆ ಹಾಡುಗಳಿಗೆ ಇರುವ ಮಹತ್ವ ಗೊತ್ತಾಗುತ್ತದೆ. ನಾವು ಈ ಹಿಂದೆ ಹೇಳಿದ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಕನ್ನಡ ಚಲನಚಿತ್ರಗಳಲ್ಲಿ ಸರಿಸುಮಾರು ಹದಿನೈದು ಸಾವಿರ ಹಾಡುಗಳು ರಚನೆಯಾಗಿರಬೇಕು. ಕನ್ನಡದಲ್ಲಿ ಚಿತ್ರಗಳ ಆಚೆಗೆ ರಚನೆಯಾಗಿರುವ ಗೀತೆಗಳ ಮತ್ತು ಕವಿತೆಗಳ ಸಂಖ್ಯೆಗೆ ಹೋಲಿಸಿದರೆ ಇದು ಸಾಕಷ್ಟು ದೊಡ್ಡದೇ. ಆದರೆ ಈ ನಿಟ್ಟಿನಲ್ಲಿ ಭಾಷೆಯ ನೆಲೆಯಿಂದ ವಿಶ್ಲೇಷಣೆಗಳುನಡೆದಿಲ್ಲ. ಹಾಡುಗಳು ಚಿತ್ರಗಳಲ್ಲಿ ಹಲವು ಕೆಲಸಗಳನ್ನು ಮಾಡುತ್ತವೆ. ಮುಖ್ಯವಾಗಿ ನಿರೂಪಣೆಯ ಲಯಗಳನ್ನು ವಿಸ್ತರಿಸಿ ವೈವಿಧ್ಯ ತರುತ್ತವೆ. ಕತೆಯನ್ನು ಸಂಗ್ರಹಿಸಲು, ಸಂಪರ್ಕ ನೀಡಲು, ಪಾತ್ರಗಳ ಮನಸ್ಥಿತಿಯ ಬಗೆಗೆ ವ್ಯಾಖ್ಯಾನಿಸಲು, ಸಂದರ್ಭದ ಬಗೆಗೆ ಚಿಂತನೆ ನಡೆಸಲು, ನಾಟಕೀಯ ಗೊಳಿಸಲು ಹೀಗೆ ಹಲವು ಹತ್ತು ಉದ್ದೇಶಗಳು ಈ ಹಾಡುಗಳಿಗಿದೆ. ಮನುಷ್ಯರ ಪ್ರಾಚೀನ ಕಲೆಗಳು ತ್ರಿವಳಿಗಳಾಗಿದ್ದವು. ಅಲ್ಲಿ ಹಾಡು, ನಿರೂಪಣೆ ಮತ್ತು ಕುಣಿತ ಗಳು ಒಟ್ಟಾಗಿ ಇರುತ್ತಿದ್ದವು. ಈಗಲೂ ಉಳಿದಿರುವ ಎಷ್ಟೋ ಜನಪದ ಕಲೆಗಳಲ್ಲಿ ಈ ಅಂಶಗಳು ಬೆರೆತಿವೆ. ಈ ಮೂರು ಪರಸ್ಪರ ಪೂರಕ ಕೆಲಸವನ್ನು ಮಾಡುತ್ತವೆ. ಅವುಗಳ ಲಯಗಳಲ್ಲಿ ಈ ಪೂರಕತೆ ಎದ್ದು ಕಾಣುತ್ತದೆ. ಚಿತ್ರಗಳ ಹಾಡುಗಳಲ್ಲೂ ಈ ಮೂರು ಅಂಶಗಳು ಬೇರೆ ಬೇರೆ ಪ್ರಮಾಣದಲ್ಲಿ ಬೆರೆತಿರುತ್ತವೆ. ಮೊದಮೊದಲು ದಶಕಗಳ ಚಿತ್ರಗಳಲ್ಲೂ ಹಾಡುಗಳ ಉದ್ದೇಶ ಏನೇ ಇರಲಿ ಅವುಗಳ ಭಾಷೆ ಸಂಭಾಷಣೆಯ ಭಾಷೆಯಂತೆ ಶೈಲೀಕೃತಗೊಂಡಿರುತ್ತಿತ್ತು. ಎಷ್ಟೋ ವೇಳೆ ಹಳೆಗನ್ನಡದ ನಡುಗನ್ನಡದ ರೂಪಗಳನ್ನು ಬಳಸಲು ಹಿಂಜರಿಯುತ್ತಿರಲಿಲ್ಲ. ಬಳಸುವ ಪದಗಳು ಅಮೂರ್ತ ನೆಲೆಯ ರಚನೆಗಳಾಗಿದ್ದರೂ ಹಿಂಜರಿಯುತ್ತಿರಲಿಲ್ಲ. ಲಯ ಮತ್ತು ನಾದಗಳನ್ನು ಪ್ರಧಾನವಾಗಿಸಿಕೊಳ್ಳುತ್ತಿದ್ದರು. ಕಥಾವಸ್ತುವಿನಲ್ಲಿ ಆದ ಪಲ್ಲಟವೇ ಅನಂತರದ ಹಾಡುಗಳಲ್ಲೂ ಕಂಡುಬರುತ್ತದೆ. ಈ ಹಾಡುಗಳು ಈಗ ಸ್ವತಂತ್ರ ಘಟಕಗಳಾಗುತ್ತವೆ. ಚಿತ್ರದ ಲಯಕ್ಕೂ ಅವುಗಳಿಗೂ ನೇರ ಸಂಬಂಧ ಇರುವುದಿಲ್ಲ, ಅವುಗಳನ್ನು ಬೇಕೆಂದಾಗ ತೆಗೆಯಬಹುದು; ಇಲ್ಲವೇ ಸೇರಿಸಬಹುದು. ಮೊದಲಿನ ಹಾಡುಗಳ ಉದ್ದೇಶಕ್ಕೂ ಈಗಿನ ಹಾಡುಗಳ ಉದ್ದೇಶಕ್ಕೂ ಅಗಾಧ ವ್ಯತ್ಯಾಸವಿದೆ. ಮೊದಲ ಹಾಡುಗಳು ಹೇಗೆ ಕತೆಯ ಅಂತಸ್ಥ ಸಾಧ್ಯತೆಗಳನ್ನು ಹೊರಗಿಡಲು ನೆರವಾಗುತ್ತಿದ್ದವೋ ಆ ಹೊಣೆ ಈಗಿನ ಹಾಡುಗಳಿಗೆ ಇರಲೇ ಬೇಕೆಂದಿಲ್ಲ. ಇವು ಹೆಚ್ಚಿನ ಅಲಂಕಾರಗಳು. ಈ ಬದಲಾದ ಉದ್ದೇಶಗಳಿಂದಾಗಿ ಅವುಗಳ ಭಾಷಾ ಸ್ವರೂಪದಲ್ಲೂ ಅಗಾಧ ವ್ಯತ್ಯಾಸಗಳಾಗಿವೆ. ಮೊದಮೊದಲ ಹಾಡುಗಳು ರಾಚನಿಕವಾಗಿ ಬಹುಮಟ್ಟಿಗೆ ಕೀರ್ತನೆಗಳಿಗೆ ಸಮೀಪವಾಗಿವೆ. ಪಲ್ಲವಿ, ಚರಣಗಳ ವರ್ತುಲಗಳು ಅಲ್ಲಿ ಕಾಣಸಿಗುತ್ತವೆ. ಭಾಷಿಕವಾಗಿಯೂ ಒಂದು ತರ್ಕ ಬದ್ಧತೆಗಳನ್ನು ಈ ವರ್ತುಲಗಳಲ್ಲಿ ಕಾಯ್ದುಕೊಳ್ಳಬೇಕಾಗಿದೆ. ಆದರೆ ಈಗ ರಾಚನಿಕವಾಗಿ ಈ ಲಕ್ಷಣಗಳು ಇರುವುದಿಲ್ಲ. ಹಾಗೆ ನೋಡಿದರೆ ಭಾಷಿಕವಾಗಿ ಅವು ಸ್ವತಂತ್ರ ರಚನೆಗಳಾಗಿ ಕಾಣಿಸಿಕೊಳ್ಳಲಾರವು. ಈ ಹೊತ್ತಿನ ಚಿತ್ರಗಳ ತಾಂತ್ರಿಕ ಚೌಕಟ್ಟನ್ನು ಹಾಡಿನ ಮಾತುಗಳು ಕೇವಲ ಲೇಪಿಸುತ್ತವೆಯೇ ಹೊರತು ಸ್ವತಂತ್ರ ಅಸ್ತಿತ್ವನ್ನು ಕಾಯ್ದುಕೊಳ್ಳುವುದಿಲ್ಲ. ಭಾಷೆಯ ದೃಷ್ಟಿಯಿಂದ ಇದು ಒಂದು ಆಘಾತಕಾರಿಯಾದ ಸಂಗತಿಯಾಗಿದೆ.

ಈ ಪರಿಸ್ಥಿತಿಯನ್ನು ಇನ್ನೂ ಒಂದು ರೀತಿಯಿಂದ ನೋಡಲು ಸಾಧ್ಯವಿದೆ. ಅದೆಂದರೆ ಈ ಚಲನಚಿತ್ರ ಮಾಧ್ಯಮಕ್ಕೂ ಭಾಷೆಗೂ ಯಾವುದೇ ಸಂಬಂಧ ಇಲ್ಲ ಎನ್ನುವ ಹಂತವನ್ನು ನಾವೀಗ ತಲುಪಿರಬಹುದು. ಈ ಮಾಧ್ಯಮದ ಉಗಮವೇ ಭಾಷೆಯನ್ನು ಬಯಸದ ಸ್ಥಿತಿಯಲ್ಲಿ ಆಗಿದೆ. ಮೂಕಿ ಚಿತ್ರಗಳು ಬಹುಕಾಲ ಜಾರಿಯಲ್ಲಿದ್ದವು. ಭಾಷೆಯ ಸೇರ್ಪಡೆ ಅನಂತರ ಆದದ್ದು. ಈ ಸೇರ್ಪಡೆಯ ಮಾತನ್ನು ಎಚ್ಚರದಿಂದ ಗಮನಿಸಬೇಕು ಏಕೆಂದರೆ ಅದನ್ನು ಯಾವಾಗಬೇಕಾದರೂ ಸೇರಿಸಬಹುದು; ತೆಗೆಯಬಹುದು; ಇಲ್ಲವೇ ಬೇರೆ ಮಾಡಬಹುದು. ಇದರಿಂದ ಮಾಧ್ಯಮಕ್ಕೆ ಯಾವ ಗಣನೀಯ ಆಘಾತವೂ ಆಗುವುದಿಲ್ಲ. ಕನ್ನಡ ಚಲನಚಿತ್ರ ಗಳು ಕನ್ನಡ ಭಾಷೆಯೊಡನೆ ಹೊಂದಿರುವ ಸಂಬಂಧವು ಇದೇ ಹಂತವನ್ನು ತಲುಪಿರಬಹುದು. ಬೇರೆ ಭಾಷೆಗಳ ಸಂದರ್ಭಗಳಲ್ಲಿ ಈ ಮಾತು ಹೆಚ್ಚು ಸ್ಪಷ್ಟಗೊಂಡಿದೆ. ಚಲನಚಿತ್ರಕ್ಕೂ, ಭಾಷೆಗೂ ಇರುವ ಸಂಬಂಧ ಕೇವಲ ಆಕಸ್ಮಿಕ. ಭಾಷೆಯ ಅರ್ಥವಲಯ ಮತ್ತು ಆಂಶಿಕವಲಯಗಳು ಚಲನಚಿತ್ರದಲ್ಲಿ ಬಳಕೆಯಾಗುತ್ತವೆ. ವಾಸ್ತವವಾಗಿ ಇಡೀ ಚಿತ್ರದ  ಅಂದರೆ ದೃಶ್ಯ ಸಂಯೋಜನೆಯ ವ್ಯವಸ್ಥೆಯೊಡನೆ ಭಾಷೆಯ ಅರ್ಥವಲಯಕ್ಕೆ ಏರ್ಪಡುವ ಸಂಬಂಧ ಈಚಿನ ದಿನಮಾನಗಳಲ್ಲಿ ಅತ್ಯಂತ ಕನಿಷ್ಟವಾಗಿದೆ. ಹೆಚ್ಚೆಂದರೆ ಹಾಸ್ಯ ಸನ್ನಿವೇಶಗಳಲ್ಲಿ ಮಾತ್ರ ಈ ಸಾಧ್ಯತೆಗಳನ್ನು ಬಳಸಿಕೊಳ್ಳಲಾಗುತ್ತದೆ. ಆಂಗಿಕದ ನೆಲೆ ತುಂಬಾ ಸೂಕ್ಷ್ಮವಾದುದು. ಕನ್ನಡ ಭಾಷೆಗೆ ಮತ್ತು ಸಂಸ್ಕೃತಿಗೆ ವಿಶಿಷ್ಟವಾದ ಆಂಗಿಕವೊಂದು ಇದೆಯೇ; ಇದ್ದರೆ ಅದನ್ನು ಚಲನಚಿತ್ರಗಳು ಹೇಗೆ ಬಳಸುತ್ತವೆ ಎನ್ನುವುದು ಆಳವಾದ ಅಧ್ಯಯನವನ್ನು ನಿರೀಕ್ಷಿಸುವ ವಸ್ತುವಾಗಿದೆ. ಕೆಲವು ಭಾಷಾ ಸಂಸ್ಕೃತಿಗಳಿಗೆ ನಿರ್ದಿಷ್ಟ ಆಂಗಿಕಗಳಿರುತ್ತವೆ. ಉದಾಹರಣೆಗೆ ಕೆಲವು ಭಾವಗಳಿಗೂ ಆ ಸಂದರ್ಭದ ಮುಖ ಮತ್ತು ದೇಹದ ಚರ್ಯೆಗಳಿಗೂ ನಿಕಟವಾದ ಸಂಬಂಧವಿರುತ್ತದೆ. ಈ ಸಂಬಂಧದಲ್ಲಿ ಭಾಷೆಯನ್ನು ಬದಲಿಸಿದರೆ ಚರ್ಯೆಗಳು ಬದಲಾಗಬೇಕು. ಹಾಗಿಲ್ಲದಿದ್ದರೆ ಅನೌಚಿತ್ಯ ತಲೆದೋರುತ್ತದೆ. ಕನ್ನಡ ಚಲನಚಿತ್ರಗಳು ತಮ್ಮ ದೇಹಚರ್ಯೆ ಮತ್ತು ಮುಖಚರ್ಯೆಗಳಲ್ಲಿ ಹೀಗೆ ಭಾಷಾ ವಿಶಿಷ್ಟವಾದ ನೆಲೆಗಳನ್ನು ಒಂದು ಕಾಲದವರೆಗೆ ಬಳಸಿದಂತೆ ತೋರುತ್ತದೆ. ಆದರೆ ಈಚಿನ ದಶಕಗಳಲ್ಲಿ ಆ ನೆಲೆ ಸಂಪೂರ್ಣ ಹಿಂದೆ ಸರಿದಿದೆ. ಅದರಲ್ಲೂ ತಂತ್ರಜ್ಞಾನದ ನೆರವಿನಿಂದಾಗಿ ದೈಹಿಕ ಚರ್ಯೆಗಳು ದಾಖಲಾಗುವ ಬಗೆ ಈಗ ಬೇರೆ ಬೇರೆ ಕಾಲದೇಶಗಳಲ್ಲಿ ಸಂಭವಿಸುತ್ತವೆ. ಹಾಗಾಗಿ ಚಲನಚಿತ್ರಕ್ಕೂ ಭಾಷೆಗೂ ಇರುವ ಸಂಬಂಧ ಅತ್ಯಂತ ಮೇಲುಪದರದ್ದು. ಇದನ್ನು ಭಾಷಾ ಸೂಚಕವನ್ನಾಗಿ ಅಧ್ಯಯನ ಮಾಡಬಹುದೇ ಹೊರತು ಬೇರೇನೂ ಸಾಧ್ಯವಿಲ್ಲ.