ಭಾಷಾಶಾಸ್ತ್ರಜ್ಞರು ಆಧುನೀಕರಣ ಎಂಬ ಪರಿಕಲ್ಪನೆಯನ್ನು ಬಳಸಲು ಮೊದಲು ಮಾಡಿ ಹತ್ತಿರಹತ್ತಿರ ಐದು ದಶಕಗಳಾಗುತ್ತಿವೆ. ಮುಖ್ಯವಾಗಿ ಈ ಪರಿಕಲ್ಪನೆಯನ್ನು ಜಗತ್ತಿನ ಹಲವು ವಸಾಹತು ದೇಶಗಳ ಭಾಷೆಗಳ ಸಂದರ್ಭದಲ್ಲಿ ಬಳಸಲಾಯಿತು. ಹೊಸ ಜಗತ್ತಿನ ಅಗತ್ಯಗಳಿಗೆ ಅನುಗುಣವಾಗಿ ಒಂದು ಭಾಷೆ ಯನ್ನು ಸಜ್ಜುಗೊಳಿಸುವ ಯೋಜಿತ ಕ್ರಿಯೆಯನ್ನು ಆಧುನೀಕರಣ ಎನ್ನುತ್ತೇವೆ. ಈ ಕ್ರಿಯೆಯನ್ನು ಯೋಜಿತ ಎಂದಿದ್ದಕ್ಕೆ ಕಾರಣಗಳಿವೆ. ಯಾವ ಬಗೆಯ ಬದಲಾವಣೆಗಳು ಆಗಬೇಕು; ಆ ಬದಲಾವಣೆಯನ್ನು ಮಾಡುವ ವಿಧಾನ ಯಾವುದು; ಯಾರು ಅದನ್ನು ಜಾರಿಗೊಳಿಸಬೇಕು ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಒಂದು ಕಾರ್ಯಕ್ರಮ ವನ್ನು ರೂಪಿಸಲಾಗುತ್ತದೆ. ಕಾಲದಿಂದ ಕಾಲಕ್ಕೆ ಈ ನಿಟ್ಟಿನಲ್ಲಿ ಆಗಿರುವ ಬೆಳವಣಿಗೆ ಯನ್ನು ಅರ್ಥ ಮಾಡಿಕೊಳ್ಳಲಾಗುವುದು. ಸೂಕ್ತವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ.

ಈ ಕ್ರಿಯೆ ಇಂತಹ ದಿನಾಂಕದಿಂದ ಮೊದಲಾಗಿ ಇಂತಹ ದಿನಾಂಕವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಎಲ್ಲ ಬದಲಾವಣೆಗಳು ಆಗಿ ಬಿಡುತ್ತವೆ ಎಂದು ತಿಳಿಯಬಾರದು. ಏಕೆಂದರೆ ಬದಲಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಹೊಸ ಸಾಧ್ಯತೆಗಳು ಸಮಸ್ಯೆಗಳು ಎದುರಾಗಬಹುದು. ಆಗ ಕಾರ್ಯಯೋಜನೆಯನ್ನು ಬದಲಾಯಿಸಿಬೇಕಾಗುತ್ತದೆ.

ಕನ್ನಡದ ಆಧುನೀಕರಣ ಪ್ರಕ್ರಿಯೆ ಸರಿ ಸುಮಾರು ೧೯ನೇ ಶತಮಾನದ ಕೊನೆಕೊನೆಗೆ ಆರಂಭವಾಯಿತು. ಆಯಾ ಕಾಲಮಾನದ ಅಪೇಕ್ಷೆಯನ್ನು ಕಂಡು ಕೊಂಡು ಅದಕ್ಕನುಗುಣವಾದ ಯೋಜನೆಗಳನ್ನು ವಿಧಾನಗಳನ್ನು ರೂಪಿಸಬೇಕಾಗು ತ್ತದೆ. ಆಧುನೀಕರಣ ಜಾರಿಯಲ್ಲಿದ್ದಾಗ ಅದು ಒಳಗಿನಿಂದ ಮೂಡಿಬಂದ ಅಪೇಕ್ಷೆಯ ಪರಿಣಾಮವಲ್ಲ ಎಂದು ಭಾವಿಸುವವರು ಸದಾ ಈ ಪ್ರಕ್ರಿಯೆಯನ್ನು ವಿರೋಧಿಸುತ್ತಾರೆ. ಆದರೆ ಕಾಲಗತಿಯಲ್ಲಿ ಈ ವಿರೋಧಗಳು ಹಿಂದೆ ಸರಿದು ಆಧುನೀಕರಣ ಪ್ರಕ್ರಿಯೆಯ ಉದ್ದೇಶ ಪೂರ್ಣವಾಗುವವರೆಗೂ ಮುಂದುವರೆಯುತ್ತದೆ.

ಆಧುನೀಕರಣ ಕನ್ನಡದ ವಿವಿಧ ವಲಯಗಳನ್ನು ಹೇಗೆ ಪ್ರವೇಶಿಸಿದೆ ಎಂಬುದನ್ನು ನಾವೀಗ ಪರಿಶೀಲಿಸೋಣ. ಆಧುನೀಕರಣದಲ್ಲಿ ಮುಖ್ಯವಾಗಿ ಪದಕೋಶವನ್ನು ವೃದ್ಧಿಗೊಳಿಸುವ ಕಾರ್ಯಕ್ರಮ ಸೇರಿಕೊಂಡಿರುತ್ತದೆ. ಇದು ಹೊಸ ಭಾಷಾ ಬಳಕೆಯ ವಲಯಗಳಿಗೆ ಕನ್ನಡವನ್ನು ಸನ್ನದ್ಧಗೊಳಿಸುವ ಬಗೆಯಾಗಿರುತ್ತದೆ. ಹೊಸ ಬಗೆ ಎಂದರೆ ಹೊಸ ಬಗೆಯ ಬರವಣಿಗೆಯ ವಲಯ. ಈ ಬೆಳವಣಿಗೆಯಲ್ಲಿ ಮುಖ್ಯವಾಗಿ ಸಂಪರ್ಕ ಸಾಧನಗಳು ಪರಿಗಣನೆಗೆ ಬರುತ್ತವೆ. ಸಾಂಪ್ರದಾಯಿಕ ವಿಧಾನದ ಸಂಪರ್ಕ ಮಾರ್ಗಗಳು ಈಗ ಹೊಸ ತಂತ್ರಜ್ಞಾನದ ಕಾರಣಗಳಿಂದ ಅಮುಖ್ಯವಾಗಿ, ಹೊಸ ಜಾಗತಿಕ ವ್ಯಾಪ್ತಿಯ ಸಂಪರ್ಕ ಮಾಧ್ಯಮಗಳು ಭಾಷೆಯ ಬಳಕೆಯಲ್ಲಿ ಹೊಸ ದೃಷ್ಟಿಕೋನವನ್ನು ಅಪೇಕ್ಷಿಸುತ್ತದೆ. ಈ ಕಾರಣದಿಂದ ಎಷ್ಟೋ ವೇಳೆ ಇದುವರೆಗೂ ಬಳಕೆಯಾಗುತ್ತಿದ್ದ ಪದಕೋಶವನ್ನು ಹೊಸ ಅರ್ಥದಲ್ಲಿ ಇಲ್ಲವೇ ಅಗತ್ಯಕ್ಕನುಗುಣವಾಗಿ ಹೊಸ ಪದಗಳನ್ನು ರೂಪಿಸಬೇಕಾಗುತ್ತದೆ. ಕನ್ನಡದ ಮಟ್ಟಿಗೆ ಇದೊಂದು ತುರ್ತಿನ ಕೆಲಸ ಎಂಬಷ್ಟು ಮಾತ್ರ ಎಲ್ಲರ ಅರಿವಿಗೆ ಬಂದಿದೆ. ಆದರೆ ಪರಿಹಾರ ಕಾರಣಗಳನ್ನು ಕಂಡುಕೊಳ್ಳುವ ವ್ಯವಸ್ಥಿತ ಯತ್ನಗಳನ್ನು ಮಾಡಿಲ್ಲ. ಅವರವರು ಆಯಾ ಸಂದರ್ಭದ ಅಗತ್ಯಗಳಿಗೆ ಅನುಗುಣವಾಗಿ ಹೊಸ ಪದಗಳನ್ನು ರೂಪಿಸುವ ಬಳಸುವ ಕೆಲಸವನ್ನು ಮೈಮೇಲೆ ಹಾಕಿಕೊಳ್ಳುತ್ತಾರೆ.

ಈ ನಿಟ್ಟಿನಲ್ಲಿ ಕನ್ನಡ ಆಯ್ಕೆ ಮಾಡಿಕೊಂಡ ಮಾರ್ಗ ಸ್ಪಷ್ಟವಾಗಿ ಇಂಗ್ಲಿಶ್ ಮೊರೆ ಹೋಗುವುದಾಗಿದೆ. ಆ ಭಾಷೆಯಿಂದ ಎಣೆ ಇಲ್ಲದಷ್ಟು ಪದಗಳನ್ನು ಎರವಲು ಪಡೆದುಕೊಂಡು ಬಳಸುವ ಹಾದಿಯನ್ನು ಅನುಸರಿಸಲಾಗಿದೆ. ಇಂಗ್ಲಿಶ್ ಭಾಷೆಯ ಪದಗಳನ್ನು ನಮ್ಮ ಭಾಷೆಗೆ ತೆಗೆದುಕೊಂಡು ಬಂದಾಗ ಸಹಜವಾಗಿಯೇ ಕನ್ನಡದ ಅಗತ್ಯಕ್ಕನುಗುಣವಾಗಿ ಬದಲಾವಣೆಗಳು ಆ ಪದದಲ್ಲೇ ಸಂಭವಿಸಿಬಿಡುತ್ತವೆ. ಎಷ್ಟೋ ವೇಳೆ ಈ ಬದಲಾವಣೆಗಳನ್ನು ಗ್ರಹಿಸುವುದು ಸಾಧ್ಯವಿಲ್ಲ. ಅದು ನಡೆದು ನೆಲೆನಿಂತ ಮೇಲೆ ಬಳಕೆಯಲ್ಲಿ ಸ್ಥಾನವನ್ನು ಪಡೆದುಕೊಂಡುಬಿಡುತ್ತದೆ.

ಕೆಲವರು ಹೀಗೆ ಇಂಗ್ಲಿಶ್ ಪದಗಳನ್ನು ಕನ್ನಡದಲ್ಲಿ ಬಳಸುವುದು ಮೌಖಿಕ ನೆಲೆಯಲ್ಲಿ ಮಾತ್ರ ಎಂದು ವಾದಿಸುತ್ತಾರೆ. ಇದನ್ನು ಪೂರ್ಣವಾಗಿ ಅಲ್ಲಗಳೆಯಲು ಬರುವುದಿಲ್ಲ.  ಪೂರ್ಣಾಂಗ ಬದಲಾವಣೆಗಳು ನಡೆಯದೇ ಪದಗಳು ಅಥವಾ ಭಾಷಾಂಶಗಳ ಬಳಕೆ ಮಾತಿನ ಹಂತಕ್ಕೆ ಮಾತ್ರ ಉಳಿಯುತ್ತವೇಕೆ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು. ವಾಸ್ತವವಾಗಿ ಆಧುನೀಕರಣದ ಪ್ರಕ್ರಿಯೆ ಯಲ್ಲಿ ನಾವು ಹಿಂದೆ ಗುರುತಿಸಿದಂತೆ ಸಾರ್ವಜನಿಕ ವಲಯದ ಮಾತುಕತೆಗೆ ಹಿಂದಿಲ್ಲದಷ್ಟು ಮಹತ್ವ ಬಂದಿದೆ. ಈ ಸಂದರ್ಭಗಳು ಹೆಚ್ಚಿವೆ ಎಂಬುದರ ಜೊತೆಗೆ ಅವುಗಳ ವಿಷಯ ವ್ಯಾಪ್ತಿಯೂ ಈಗ ಹೆಚ್ಚಾಗಿದೆ. ಈ ಎರಡು ಕಾರಣಗಳ ಜೊತೆಗೆ ಸಂದರ್ಭದ ಒತ್ತಡ ಕೂಡ ಮುಖ್ಯ. ಎಲ್ಲವೂ ಇಲ್ಲೇ ಮತ್ತು ಈಗಲೇ ಆಗಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಆದ್ದರಿಂದ ಮಾತಿನ ವಲಯಗಳಲ್ಲಿ ಇಂಗ್ಲಿಶನ್ನು ಕನ್ನಡದೊಡನೆ ಮುಖಾಮುಖಿಯಾಗಿಸಲು ಜನರು ಹಿಂಜರಿಯುತ್ತಿಲ್ಲ.

ಆಧುನೀಕರಣ ಭಾಷೆಯ ಎಲ್ಲ್ಲ ಹಂತಗಳಲ್ಲೂ ಕಾಣಿಸಿಕೊಳ್ಳುತ್ತದೆ. ಕನ್ನಡದ ಧ್ವನಿರಚನೆಯನ್ನೇ ಪರಿಗಣಿಸಿದರೆ ಕನ್ನಡದಲ್ಲಿ ಈವರೆಗೆ ಇರದಿದ್ದ ಎಷ್ಟೋ ಧ್ವನಿಗಳು ಈಗ ಕನ್ನಡದ ಧ್ವನಿ ಮೊತ್ತದಲ್ಲಿ ಸೇರಿಕೊಂಡಿವೆ. ಉದಾಹರಣೆಗೆ ಇಂಗ್ಲಿಶಿನಿಂದ ನಾವು ಎರವಲು ಪಡೆದ ಎರಡು ಘರ್ಷ ಧ್ವನಿಗಳನ್ನು ಗಮನಿಸಬಹುದು. ಒಂದು ದಂತ್ಯ ಘರ್ಷ ಘೋಷ ಧ್ವನಿ, ಕನ್ನಡದ ಸಕಾರದ ಘೋಷರೂಪ. ಜೂ ಪದದಲ್ಲಿ ಈ ಧ್ವನಿಯನ್ನು ಉಚ್ಚರಿಸುತ್ತೇವೆ. ಹಾಗೆಯೇ ದ್ವಯೋಷ್ಟ್ಯ ಅಘೋಷ ಘರ್ಷ ಧ್ವನಿ ಇದು ಇಂಗ್ಲಿಶಿನ ಫಿ ಕಾಫಿ ಮುಂತಾದ ಪದಗಳಲ್ಲಿ ಉಚ್ಚಾರಣೆಗೊಳ್ಳುತ್ತಿದೆ. ಈ ಎರಡು ಧ್ವನಿಗಳಲ್ಲದೇ ಮತ್ತೆ ಕೆಲವು ಧ್ವನಿಗಳನ್ನು ನಮ್ಮ ಉಚ್ಚಾರಣೆಗೆ ಅನುಗುಣವಾಗಿ ಬದಲಾಯಿಸಿಕೊಂಡು ಬಳಸುತ್ತಿದ್ದೇವೆ. ಧ್ವನಿಗಳ ನೆಲೆಯ ಆಧಿನೀಕರಣ ಇದ್ದ ಧ್ವನಿಗಳನ್ನು ಈಗಿರುವ ಉಚ್ಚಾರಣಾ ವಿಧಾನಗಳಿಗಿಂತ ಬೇರೆ ರೀತಿಯಲ್ಲಿಉಚ್ಚರಿಸಿ ಅದನ್ನು ಆಧುನೀಕರಿಸಿಕೊಳ್ಳಲು ಯತ್ನಿಸುವುದುಂಟು. ಕನ್ನಡದ ಮೂರ್ಧನ್ಯ ಧ್ವನಿಗಳನ್ನು ಈಗ ವರ್ತ್ಸ್ಯ ಧ್ವನಿಗಳನ್ನಾಗಿ ನಾವು ಉಚ್ಚರಿಸುತ್ತಿದ್ದೇವೆ. ಟ, ಠ, ಡ, ಢ,ಣ ಮತ್ತು ಷಎಂಬ ಧ್ವನಿಗಳನ್ನು ನಾವು ಉಚ್ಚರಿಸುತ್ತಿರುವ ವಿಧಾನ ವನ್ನು ಎಚ್ಚರದಿಂದ ಗಮನಿಸಿದರೆ ಈ ಉಚ್ಚರಣಾ ಸ್ಥಾನದ ಪಲ್ಲಟ ಗೊತ್ತಾಗುತ್ತದೆ. ಇಂಗ್ಲಿಶ್ ಶಿಕ್ಷಣವನ್ನು ಪಡೆದವರಲ್ಲಿ ಈ ಬದಲಾವಣೆಗಳು ಎದ್ದುಕಾಣುತ್ತವೆ.

ಧ್ವನಿ ಉಚ್ಚಾರವಲ್ಲದೇ ಧ್ವನಿ ಲೇಖನ ಮತ್ತು ಮುದ್ರಣ ವಿಧಾನದಲ್ಲೂ ಹಲವು ಬದಲಾವಣೆಗಳು ನಡೆಯುತ್ತಿವೆ. ಮುಖ್ಯವಾಗಿ ಅಕ್ಷರ ವಿನ್ಯಾಸದಲ್ಲಿ ಅಗಾಧ ಬದಲಾವಣೆಗಳು ಕಾಣತೊಡಗಿವೆ. ಮುದ್ರಣ ಬೆರಳಚ್ಚುಗಳೇ ಮುಖ್ಯವಾಗಿದ್ದ ಕಾಲದಿಂದ ಗಣಕ ಅವಧಿಗೆ ನಾವು ದಾಟಿ ಬಂದಿದ್ದೇವೆ. ಇದರ ಪರಿಣಾಮವಾಗಿ ಶತಮಾನಗಳಿಂದಲೂ ಒಪ್ಪಿಕೊಂಡು ಬಂದಿದ್ದ ಬರವಣಿಗೆಯ ಸ್ವರೂಪ ಬೇರೆಯಾಗತೊಡಗಿದೆ. ಏಕೆಂದರೆ ಮುದ್ರಣ ಮತ್ತು ಬೆರಳಚ್ಚಿನಲ್ಲಿ ಹೊಸ ಬಗೆಯ ಅಕ್ಷರ ವಿನ್ಯಾಸ ಮಾಡುವುದು ಮತ್ತು ಜಾರಿಗೆ ಕೊಡುವುದು ಅಷ್ಟು ಸುಲಭದ ಮಾತಲ್ಲ. ಆದರೆ ಗಣಕದಲ್ಲಿ ಈ ಸಮಸ್ಯೆ ಇಲ್ಲ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಬರವಣಿಗೆಯ ವಿಧಾನ ಪಡೆದುಕೊಂಡ ಹೊಸ ನೆಲೆ ಎಂದರೆ ಪ್ರಮಾಣೀಕೃತ ಮತ್ತು ವ್ಯಕ್ತಿನಿರಪೇಕ್ಷ ಅಕ್ಷರ ಶೈಲಿ. ಇದು ಆಧುನೀಕರಣದ ಒಂದು ಬಹುಮುಖ್ಯ ಅಪೇಕ್ಷೆಯಾಗಿದೆ. ಇಂತಹ ವ್ಯಕ್ತಿ ನಿರಪೇಕ್ಷ ಅಕ್ಷರ ಶೈಲಿ ಸಂಪರ್ಕ ಮಾಧ್ಯಮಗಳಿಗೆ ತೀವ್ರ ಅಗತ್ಯವಾಗಿ ಬೇಕಾದ ಸಂಗತಿಯಾಗಿದೆ.

ಆಧುನೀಕರಣ ನಾವೀಗ ಗುರುತಿಸಿದಂತೆ ತುರ್ತಿನ ಅಗತ್ಯಗಳನ್ನು ಗಮನಿಸಲೇ ಬೇಕು. ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಎಷ್ಟು ವೇಗವಾಗಿ ಜನ ಜೀವನದ ಮೇಲೆ ದಾಳಿ ಇಡುತ್ತಿವೆ ಎಂದರೆ ಅಂತಹ ಪರಿಸರದಲ್ಲಿ ಕನ್ನಡ ಭಾಷೆಯನ್ನು ಬಳಸಲು ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಅವಕಾಶವೇ ಇಲ್ಲವಾಗಿದೆ. ಉದಾಹರಣೆಗೆ ಸಿದ್ಧ ಉತ್ತರಗಳನ್ನು ಒದಗಿಸುವ ವ್ಯವಸ್ಥೆಯನ್ನೇ ನೋಡೋಣ. ನಾವೀಗ ಸಾರ್ವಜನಿಕ ಸೇವೆಗಳ ಬಗೆಗೆ ದೂರು ಸಲ್ಲಿಸ ಹೊರಟಾಗ ಅಥವಾ ಹೆಚ್ಚಿನ ಮಾಹಿತಿಯನ್ನು ಪಡೆಯಲು ದೂರವಾಣಿಯ ಮೂಲಕ ಸಂಪರ್ಕಿಸುತ್ತೇವೆ. ಇನ್ನೊಂದು ತುದಿಯಿಂದ ನಮಗೆ ಸಿಗುವ ಉತ್ತರಗಳು ಈಗಾಗಲೇ ಧ್ವನಿ ಮುದ್ರಿತವಾದಂತಹವು. ಪ್ರಶ್ನೆ ಕೇಳುವವರು ಅಥವಾ ಪ್ರಶ್ನೆಗಳು ಎಷ್ಟೇ ವೈವಿಧ್ಯದಿಂದ ಕೂಡಿದ್ದರೂ ಸಿದ್ಧ ಉತ್ತರಗಳು ಅವೆಲ್ಲವನ್ನೂ ನಿರ್ದಿಷ್ಟ ಅವಧಿಯಲ್ಲಿ ಒದಗಿಸುವ ರೀತಿಯಲ್ಲಿರಬೇಕು. ಎಷ್ಟೋ ವೇಳೆ ಇಂತಹ ಸಿದ್ಧ ಉತ್ತರಗಳು ಮುಜುಗರವನ್ನು ತರುವಂತಿರುತ್ತವೆ. ಕಾರಣ ಅವುಗಳನ್ನು ಹೆಚ್ಚು ಪರಿಷ್ಕರಿಸಿ ಅನಂತರ ಜಾರಿಗೆ ನೀಡಲು ಕಾಲಾವಕಾಶದ ಅಭಾವ ತುಂಬಾ ಇರುತ್ತದೆ. ಸಂದರ್ಭದ ತುರ್ತಿಗೆ ಪ್ರತಿಕ್ರಿಯಿಸಲೇ ಬೇಕು. ನಾವು ಕರೆ ಮಾಡಿದ ಒಂದು ಸಂಖ್ಯೆಯೂ ನಮ್ಮ ಸಂಪರ್ಕಕ್ಕೆ ಸಿಗದಿದ್ದಾಗ ಬರುವ ಸಿದ್ಧ ಉತ್ತರವನ್ನು ಗಮನಿಸಿ. ಈ ಮಾರ್ಗದ ಎಲ್ಲಾ ಲೈನುಗಳು ವ್ಯಸ್ತವಾಗಿವೆ. ಸಹಜವಾಗಿಯೇ ಇಂತಹ ಪ್ರಯೋಗಗಳು ಆಧುನೀಕರಣದ ಪ್ರಭಾವದಿಂದ ಹುಟ್ಟಿದರೂ ಅವುಗಳಲ್ಲಿ ಒಂದು ಬಗೆಯ ಅಸಹಜತೆ ಎದ್ದು ಕಾಣುತ್ತದೆ. ಮೊದಲೇ ಹೇಳಿದಂತೆ ಸಂದರ್ಭದ ಒತ್ತಡಗಳು ಈ ಬಗೆಯ ಪ್ರಯೋಗಗಳನ್ನು ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತವೆ.

ಆಧುನೀಕರಣವು ಭಾಷೆಯ ಬಳಕೆಯ ವಲಯಗಳನ್ನು ವಿಸ್ತರಣೆಯನ್ನು ಗಮನದಲ್ಲಿ ಇರಿಸಿಕೊಳ್ಳುತ್ತದೆ. ಅದಕ್ಕಾಗಿ ಭಾಷೆಯನ್ನು ಸನ್ನದ್ಧಗೊಳಿಸುತ್ತದೆ ಎಂದೆವು. ಆದರೆ ಎಷ್ಟೋ ವೇಳೆ ಕನ್ನಡದ ಜನರು ಆಧುನಿಕ ವಲಯದ ವ್ಯವಹಾರಗಳಲ್ಲಿ ಈಗೀಗ ಹೆಚ್ಚಾಗಿ ಕನ್ನಡಕ್ಕೆ ಪರ್ಯಾಯವಾಗಿ ಇಂಗ್ಲಿಶನ್ನು ಆಶ್ರಯಿಸುತ್ತಿದ್ದಾರೆ. ಮೊದಮೊದಲು ಇಂತಹ ಆಯ್ಕೆಗಳನ್ನು ಜನರ ಆಧುನಿಕತೆಯ ವ್ಯಾಮೋಹ ಎಂದು ತಿಳಿಯುತ್ತಿದ್ದರು. ಆದರೆ ಈಗ ಹಾಗೆ ತಿಳಿಯಲು ಕಾರಣಗಳಿಲ್ಲ. ಇಂಗ್ಲಿಶ್ ಬಳಸಿ ಸಂಪರ್ಕ ಮಾರ್ಗವನ್ನು ಸುಗಮಗೊಳಿಸಿಕೊಳ್ಳುವುದು ಅಗತ್ಯವಾಗಿ  ಬಿಟ್ಟಿದೆ. ಆದರೆ ಇದಕ್ಕೆ ವಿರುದ್ಧವಾದ ಇನ್ನೊಂದು ಪ್ರಕ್ರಿಯೆ ಕನ್ನಡದ ಹೊರಗೆ ನಡೆಯುತ್ತಿದೆ. ಮತ್ತು ಅದರ ಪರಿಣಾಮ ಕನ್ನಡದ ಮೇಲೆ ಆಗುತ್ತಿದೆ. ಕರ್ನಾಟಕದ ಜನ ಸಮುದಾಯದ ಒಂದು ದೊಡ್ಡ ಭಾಗ ಉಪಭೋಗಿ ಸಂಸ್ಕೃತಿಗೆ ಗುರಿಯಾಗಿದೆ. ಅಂದರೆ ಹೊಸ ಸಾಮಗ್ರಿಗಳನ್ನು ಕೊಂಡು ಬಳಸುವ ಸಾಮರ್ಥ್ಯ ಈ ಜನವರ್ಗಕ್ಕೆ ಇದೆ. ಜಾಗತಿಕ ನೆಲೆಯಿಂದ ಗಮನಿಸಿದರೆ ಸುಮಾರು ಮೂರುವರೆ ಕೋಟಿ ಜನರ ಈ ಗುಂಪು ತುಂಬಾ ಗಣನೀಯವಾದುದ್ದು. ಅವರ ಆಸಕ್ತಿಯನ್ನು ಕಾಯ್ದು ಕೊಳ್ಳಲು ಮೊದಮೊದಲು ಇಂಗ್ಲಿಶ್ ಬಳಸುತ್ತಿದ್ದ ಈ ಮಾರಾಟಗಾರರು, ಗ್ರಾಹಕರು ಬಳಸುವ ದೇಶಿ ಭಾಷೆಗಳ ಕಡೆಗೆ ಈಗ ಓಲುವೆ ತೋರಿಸಿದ್ದಾರೆ. ಅವರು ರೂಪಿಸುತ್ತಿರುವ ಕನ್ನಡವು ಕೂಡ ಹೀಗೆ ಅವರ ಅಪೇಕ್ಷೆಯ ಕನ್ನಡ. ನಮ್ಮ ಅಗತ್ಯಕ್ಕೆ ನಾವು ರೂಪಿಸಿಕೊಂಡದ್ದಲ್ಲ. ಎರಡು ಉದಾಹರಣೆಗಳನ್ನು ಇಲ್ಲಿ ನೀಡಬಹುದು. ಒಂದು: ಮೈಕ್ರೋಸಾಫ್ಟ್ ಕಂಪನಿಯು ತನ್ನ ಗಣಕಗಳಲ್ಲಿ ಒದಗಿಸುತ್ತಿರುವ ಕನ್ನಡ ಕಾರ್ಯವಾಹಿ. ಇದನ್ನು ಕನ್ನಡಿಗರ ಅಗತ್ಯಕ್ಕಾಗಿ ಯಾರೋ ರೂಪಿಸಿದ್ದಾರೆ. ಹಾಗೆಯೇ ಅಂತರ್ಜಾಲದಲ್ಲಿ ಕಾಣಸಿಗುವ ಗೂಗಲ್ ಸರ್ಚ್ ಇಂಜಿನ್ ಇನ್ನೊಂದು ನಿದರ್ಶನ. ಎರಡು-ಮೂರು ವರ್ಷಗಳ ಹಿಂದಿನ ವರೆಗೂ ಈ ಸರ್ಚ್ ಇಂಜಿನ್ ಭಾಷೆ ಪೂರ್ಣವಾಗಿ ಇಂಗ್ಲಿಶಿನಲ್ಲಿ ಇತ್ತು. ಆದರೆ ಈಗ ಜಗತ್ತಿನ ಅರವತ್ತು ಭಾಷೆಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಈ ಅರವತ್ತು ಭಾಷೆಗಳಲ್ಲಿ  ಕನ್ನಡ ಕೂಡ ಒಂದು. ಇಲ್ಲಿಯೂ ಕೂಡ ಬಳಸಲಾದ ಕನ್ನಡ ಅಸಹಜತೆಯಿಂದ ಕೂಡಿದೆ. ಆದರೆ ಮೊದಲೇ ಹೇಳಿದಂತೆ ತಂತ್ರಜ್ಞಾನದ ಜಾಲಕ್ಕೆ ಸಿಲುಕಿದ್ದಾಗ ಈ ಬಗೆಯ ಭಾಷಾ ಪ್ರಯೋಗಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯ ವಾಗಿ ಬಿಡುತ್ತದೆ. ಮಾರುಕಟ್ಟೆ ಸಂಸ್ಕೃತಿಯಲ್ಲಿ ಇಂತಹ ತುರ್ತುಗಳು ಸೃಷ್ಟಿಸುವ ಪರಿಹಾರಗಳು ನಮ್ಮ ಕೊರಳಿಗೆ ಗಂಟುಬೀಳುತ್ತವೆ.

ಕನ್ನಡ ಹಾಗಿದ್ದರೆ ಇಪ್ಪತ್ತೊಂದನೆಯ ಶತಮಾನಕ್ಕೆ ಸಿದ್ಧಗೊಂಡಿದೆಯೇ; ಹಾಗಿಲ್ಲದಿದ್ದರೆ ಎಲ್ಲಿ ಕೊರತೆ ಉಂಟಾಗಿದೆ ಎಂಬುದನ್ನು ನಾವು ಕಂಡುಕೊಳ್ಳಲು ಇದು ಸುಸಂಧಿಯಾಗಿದೆ. ನಮ್ಮ ಸಮಸ್ಯೆ ಇರುವುದು ಭಾಷೆಯಲ್ಲಲ್ಲ. ಭಾಷೆಯ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಸರಿಯಾಗಿ ಗ್ರಹಿಸದ ನಮ್ಮ ಸ್ಥಿತಿಯಿಂದಾಗಿ ತಕ್ಕ ಪರಿಹಾರೋಪಾಯಗಳನ್ನು ರೂಪಿಸಲಾಗುತ್ತಿಲ್ಲ. ಇಂತಹ ಇಕ್ಕಟ್ಟುಗಳನ್ನು ಮುಂದೆ ಉದಾಹರಣೆಗಳೊಡನೆ ವಿವರಿಸಲಾಗುವುದು.

ಆಧುನೀಕರಣ, ಮಾತಿನ ಹೊಸ ರೂಪಗಳಿಗೆ ಹೆಚ್ಚು ಅವಕಾಶವನ್ನು ಕಲ್ಪಿಸುತ್ತದೆ ಎಂದೆವು ಮತ್ತು ಈ ಮಾತು ಸಾರ್ವಜನಿಕ ವಲಯದ ಬಳಕೆಯಲ್ಲಿ ಇರುವಂತದ್ದು. ಮಾತಿನ ಸಹಜ ಲಕ್ಷಣವಾದ ಸ್ವಯಂಸ್ಫೂರ್ತತೆ ಈ ಹೊಸ ಬಳಕೆಗಳಲ್ಲಿ ಕಡಿಮೆ ಯಾಗುತ್ತಿದೆ. ಅಂದರೆ ಈಗಾಗಲೇ ಬರಹ ರೂಪದಲ್ಲಿ ಸಿದ್ಧವಾದುದನ್ನು ಓದಿ ಹೇಳುವ ಅಥವಾ ಓದಿ ನೆನಪಿಟ್ಟುಕೊಂಡು ಹೇಳುವ ಬಗೆಗಳು ಈಗ ಹೆಚ್ಚಾಗುತ್ತಿವೆ. ಸ್ವಯಂಸ್ಫೂರ್ತಿಯ ಮಾತಿನ ಲಕ್ಷಣಗಳನ್ನು ಹೀಗೆ ಓದಿ ಹೇಳುವ ಭಾಷೆಗೆ ರವಾನಿಸಲು ಸಾಧ್ಯವಾಗದಿರುವುದು ಇಂದಿನ ಕನ್ನಡದ ಬಹುದೊಡ್ಡ ಕೊರತೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಓದಿನ ಕನ್ನಡಕ್ಕೂ ಬರಹದ ಕನ್ನಡಕ್ಕೂ ಇರುವ ರಾಚನಿಕ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳದಿರುವುದೇ ಆಗಿದೆ. ನಮ್ಮ ಬರಹದ ಕನ್ನಡ ಮೂರು ಬಗೆಯ ಓದುಗಳಿಗೆ ತೆರೆದುಕೊಳ್ಳುತ್ತದೆ. ಒಂದು ಕಣ್ಣೋದು, ಎರಡು ಕಿವಿ ಓದು, ಮೂರು ಬಾಯಿ ಓದು. ಕಣ್ಣೋದಿನಲ್ಲಿ ನಾವು ನಮ್ಮ ಧ್ವನ್ಯಂಗಗಳನ್ನು ಬಳಸುವುದಿಲ್ಲ. ಮುದ್ರಿತವಾದುದನ್ನು ಕಣ್ಣಿನ ಮುಖಾಂತರ ಗ್ರಹಿಸಿ ಅರ್ಥ ಮಾಡಿಕೊಳ್ಳುತ್ತಿರುತ್ತೇವೆ. ಇದು ಹೆಚ್ಚು ವೇಗದ ಓದು. ಬಹುಪಾಲು ಇಂದಿನ ಅಕ್ಷರಸ್ಥರೆಲ್ಲ ಬಳಸುವ ಓದು. ಕಿವಿ ಓದು ಎಂದರೆ ನಾವು ಕಣ್ಣಿನಲ್ಲಿ ಅಕ್ಷರಗಳನ್ನು ಕಾಣದಿದ್ದರೂ ಬೇರೊಬ್ಬರು ಓದುವುದನ್ನು ಕೇಳಿಸಿಕೊಳ್ಳುತ್ತಿರುತ್ತೇವೆ. ದೃಶ್ಯ ಮಾಧ್ಯಮಗಳಲ್ಲಿ ಈ ಮೊದಲೇ ಲಿಖಿತವಾದುದು ನಮಗೆ ಲಭಿಸುವುದು ಈ ಓದಿನ ಮೂಲಕ. ಕೆಲವೊಮ್ಮೆ ಬೇರೊಬ್ಬರು ಓದುತ್ತಿರುವುದನ್ನು ನಾವು ಕೇಳಿಸಿಕೊಳ್ಳುತ್ತಲೂ ಇರಬಹುದು. ಜೊತೆಗೆ ನಾವು ನಮ್ಮ ಕಣ್ಣಿನಿಂದ ಕಣ್ಣೋದು ಮಾಡುತ್ತಿರಬಹುದು. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ತರಗತಿಯಲ್ಲಿ ಮುದ್ರಿತ ಪಾಠವನ್ನು ನೋಡಿಕೊಂಡು ಅಧ್ಯಾಪಕರು ಓದುವಾಗ ಅದನ್ನು ಕೇಳಿಸಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಬಳಿ ಇರುವ ಪಠ್ಯಪುಸ್ತಕದಲ್ಲಿ ಮುದ್ರಿತ ಪಾಠವನ್ನು ತಾವು ಕಣ್ಣೋದಿನಲ್ಲಿ ಗ್ರಹಿಸುತ್ತಿರುತ್ತಾರೆ. ಮೂರನೆಯ ಓದು ಬಾಯಿ ಓದು. ಅಂದರೆ ಮುದ್ರಿತವಾದುದನ್ನು ಧ್ವನ್ಯಂಗಗಳನ್ನು ಬಳಸಿ ಓದುವುದು. ಇದು ತನಗಾಗಿ ಮಾಡಿಕೊಳ್ಳುವ ಓದು ಆಗಿರಬಹುದು, ಅಥವಾ ಇತರರಿಗೆ ಕೇಳಿಸಲೆಂದು ಮಾಡು ತ್ತಿರುವ ಓದು ಆಗಿರಬಹುದು. ಅಕ್ಷರಸ್ಥರು ಮೊದಮೊದಲು ಈ ಬಾಯಿ ಓದಿಗೆ ತರಬೇತನ್ನು ಪಡೆದಿರುತ್ತಾರೆ. ಆದರೆ ಮುಂದೆ ಈ ಬಗೆಯ ಓದನ್ನು ಮಾಡುವುದು ಇಲ್ಲವೆನ್ನುವಷ್ಟು ಕಡಿಮೆ. ಇದು ತುಂಬಾ ಆಯಾಸಕಾರಿ ಮತ್ತು ನಿಧಾನಗತಿಯದು. ಕಣ್ಣಿನ ವೇಗದಲ್ಲಿ ಧ್ವನ್ಯಂಗಗಳು ಚಲಿಸಲಾರವು.

ಇಷ್ಟು ವಿವರಣೆ ನೀಡಿದ್ದರ ಉದ್ದೇಶವಿಷ್ಟೇ, ನಮ್ಮ ಬರವಣಿಗೆಗಳು ಇವುಗಳಲ್ಲಿ ಯಾವ ಬಗೆಯ ಓದಿಗೆ ಸಿದ್ಧಗೊಂಡಿವೆ ಎಂಬುದು ಮುಖ್ಯ ಸಂಗತಿ. ಏಕೆಂದರೆ ಅದಕ್ಕನುಗುಣವಾಗಿ ಆಯಾ ಸಂದರ್ಭದ ಭಾಷಿಕ ರಚನೆಗಳು ಬದಲಾಗುತ್ತವೆ. ಈ ಅಂಶವನ್ನು ಆಧುನೀಕರಣ ಪಕ್ರಿಯೆಯಲ್ಲಿ ನಾವು ಸ್ಪಷ್ಟವಾಗಿ ಗುರುತಿಸಿಕೊಂಡಿಲ್ಲ. ಇದರಿಂದಾಗಿ ಒಂದೇ ಬಗೆಯ ಓದಿಗೆ ಗುರಿಪಡಿಸುವ ಅಸಹಜ ಸಂದರ್ಭಗಳು ಈಗ ಎದುರಾಗುತ್ತಿವೆ.

ಒಂದು ಪತ್ರಿಕೆಯನ್ನು ಗಮನಿಸೋಣ; ಅದು ಬಹುಮಟ್ಟಿಗೆ ಕಣ್ಣೋದಿನ ಬರಹ. ಅದನ್ನು ಯಾರೂ ಗಟ್ಟಿಯಾಗಿ ಓದಿಕೊಳ್ಳಬೇಕೆಂದು ಅಥವಾ ಇನ್ನೊಬ್ಬರಿಗೆ ಓದಿ ಹೇಳಬೇಕೆಂದು ನಿರೀಕ್ಷಿಸುವುದಿಲ್ಲ. ಹಾಗೆ ಮಾಡಿದರೆ ಅದು ವಿನಾಯಿತಿ ಅಷ್ಟೇ. ಏಕೆಂದರೆ ವೃತ್ತಪತ್ರಿಕೆಯನ್ನು, ಅದರ ಒಂದು ಪದವನ್ನು ಬಿಡದೇ ಗಟ್ಟಿಯಾಗಿ ಓದುವುದು ತುಂಬಾ ಆಯಾಸದ ಮತ್ತು ಅಷ್ಟೇ ನಿರರ್ಥಕ ಕ್ರಿಯೆಯಾಗುತ್ತದೆ. ಏಕೆಂದರೆ ಈ ಕಣ್ಣೋದಿನ ಬರಹದಲ್ಲಿ ಕಣ್ಣಿನ ವೇಗಕ್ಕೆ ಅನುಗುಣವಾಗಿ ಭಾಷೆಯ ರಚನೆ ಇರುತ್ತದೆ. ವಾಕ್ಯಗಳು ಬಹು ದೀರ್ಘವಾಗಿರಬಹುದು, ಕೆಲವೊಮ್ಮೆ ಅಗತ್ಯಬಿದ್ದಾಗ ಹಿಂದಿನ ಯಾವುದೋ ವಾಕ್ಯಕ್ಕೆ ಮರಳಿ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ರಚನೆಯಲ್ಲಿ ಒಟ್ಟು ಸಾರಸಂಗ್ರಹ ಮಾಡಿ ಹೇಳಿದರೆ ಅನಗತ್ಯವಾದ ಎಷ್ಟೋ ಭಾಗಗಳಿರುವುದು ಅನಂತರ ವಿಶ್ಲೇಷಣೆಗೆ ಗೊತ್ತಾಗುತ್ತದೆ. ಅನಗತ್ಯ ಎಂಬ ಮಾತು ಸಾಪೇಕ್ಷವಾದದ್ದು. ಅದನ್ನು ಹೊರತುಪಡಿಸಿ ಕೇವಲ ಸಾರಸಂಗ್ರಹವನ್ನು ಮಾತ್ರ ನೀಡಲು ಬರುವುದಿಲ್ಲ. ಆಗ ವೃತ್ತಪತ್ರಿಕೆ ಬದಲು ಒಂದು ಕರಪತ್ರ ಸಾಕಾಗಬಹುದು. ಅಂದರೆ ಕಣ್ಣೋದಿನ ವೇಗ ಮತ್ತು ಗ್ರಹಿಕೆಯ ವಿಧಾನಗಳನ್ನು ಅನುಸರಿಸಿ ಇಡೀ ಭಾಷಾರಚನೆಯಲ್ಲಿ ಎಷ್ಟೋ ಅಂಶಗಳು ನಮ್ಮ ಗ್ರಹಿಕೆಯಲ್ಲಿ ಪಾಲನ್ನು ಪಡೆಯದಿರಬಹುದು. ಇದರಲ್ಲಿ ಅಪಾಯವೇನೂ ಇಲ್ಲ. ಸಂವಹನಕ್ಕೆ ಇದರಿಂದ ಕೊರತೆ ಉಂಟಾಗುವುದಿಲ್ಲ. ವೃತ್ತ ಪತ್ರಿಕೆಗಳು ಹೀಗೆ ತಮ್ಮ ಭಾಷಾ ಕಟ್ಟಡವನ್ನು ರೂಪಿಸಿಕೊಳ್ಳುತ್ತವೆ. ಕನ್ನಡದ ಮಟ್ಟಿಗೆ ಈ ಕಣ್ಣೋದಿನ ಭಾಷೆಗೆ ಅನುಕೂಲವಾದ ಅಂಶಗಳು ಸಾಕಷ್ಟು ತಾಂತ್ರಿಕ ಪರಿಣತಿಯನ್ನು ಪಡೆದುಕೊಂಡಿವೆ. ಇದಕ್ಕೆ ಸುಮಾರು ಒಂದು ಶತಮಾನದ ಪ್ರಯೋಗಶೀಲತೆಯೇ ಕಾರಣವಾಗಿದೆ.

ಆದರೆ ನಮ್ಮ ಇತರ ವಲಯಗಳ ಭಾಷಾಬಳಕೆಯಲ್ಲಿ ಕಿವಿ ಓದು ಮತ್ತು ಬಾಯಿ ಓದುಗಳು ಅಗತ್ಯವಾಗಿವೆ. ಈಗ ಇವುಗಳಿಗೆ ಅನುಕೂಲವಾಗುವ ರೀತಿಯ ಬರವಣಿಗೆಯನ್ನು ಮಾಡಬೇಕಾಗುತ್ತದೆ. ಅಂದರೆ ಯಾವ ಪದ ಸಂಚಯಗಳನ್ನು ಉಚ್ಚರಿಸಲು ಅನುಕೂಲವಾಗುವುದೋ ಮತ್ತು ಅವುಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವುದೋ ಅಂತಹ ರಚನೆಗಳನ್ನು ಪ್ರಮಾಣಬದ್ಧವಾಗಿ ಅಳವಡಿಸ ಬೇಕಾಗುತ್ತದೆ.

ಸಾಮಾನ್ಯವಾಗಿ ಕನ್ನಡದ ಸಂಧಿ ನಿಯಮಗಳನ್ನು ಗಮನಿಸಿ. ಅವು ಬಹುಮಟ್ಟಿಗೆ ಧ್ವನಿ ಪರಿಸರಗಳಿಂದ ನಿಯಂತ್ರಿತವಾಗಿ ರೂಪುಗೊಂಡಿವೆ. ಅಂದರೆ ಪೂರ್ವಪದದ ಅಂತ್ಯಸ್ವರ ಮತ್ತು ಉತ್ತರಪದದ ಮೊದಲ ಧ್ವನಿಯನ್ನು ಅವಲಂಬಿಸಿ ಸಂಧಿಗಳು ನಡೆಯುತ್ತವೆ. ಈ ಸಂಧಿಗಳು ಉಚ್ಚಾರಣೆಯ ನಿಯಮಗಳನ್ನು ಅನುಸರಿಸುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ ಕಾಲನ್ನು ಎಂಬ ಪದವನ್ನು ಗಮನಿಸಿ ಅಲ್ಲಿ ಕಾಲು ಎಂಬ ಪದಕ್ಕೆ ಅನ್ನು ಪ್ರತ್ಯಯವಾಗಿದೆ. ಇದರಿಂದ ಕಾಲನ್ನು ರೂಪ ಹೇಗೆ ದೊರಕುತ್ತದೆ? ಇದಕ್ಕೆ ವಿವರಣೆ ಸರಳವಾಗಿದೆ. ಕಾಲು ರೂಪ ಸ್ವತಂತ್ರ ಉಚ್ಚಾರಣೆಯ ಸಂದರ್ಭದ ಪದ. ಅದರ ಅಂತಸ್ಥರೂಪ ಕಾಲ್. ಕೊನೆಯ ಉಕಾರ ಉಚ್ಚಾರಣಾ ಸೌಲಭ್ಯಕ್ಕಾಗಿ ಬಂದು ಸೇರಿದೆ. ಕನ್ನಡದಲ್ಲಿ ಇಂತಹ ನೂರಾರು ಪದಗಳಿವೆ. ಆದರೆ  ಅನ್ನು ಪ್ರತ್ಯಯವನ್ನು ಸೇರಿಸುವಾಗ ಉಚ್ಚಾರಣೆಯ ಮೂಲ ಘಟಕವಾದ ಕಾಲ್ ಎಂಬುದನ್ನು ಮಾತ್ರ ನಾವು ಗಮನಿಸುತ್ತೇವೆ. ಇದರಿಂದ ಕಾಲನ್ನು ರೂಪ ಸಿದ್ಧವಾಗುತ್ತದೆ. ನಮ್ಮ ವ್ಯಾಕರಣಗಳು ಹೇಳುವ ಲೋಪಸಂಧಿ ಎಂಬ ಪ್ರಕ್ರಿಯೆ ಇಲ್ಲಿ ನಡೆದೇ ಇಲ್ಲ. ಇರುವುದೇ ಕಾಲ್ ರೂಪ. ಅದಕ್ಕೆ ಅನ್ನು ಬಂದು ಸೇರಿದೆ, ಈ ಪದವನ್ನು ಉಚ್ಚರಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಗಮನಿಸಿದರೆ ಉಚ್ಚಾರಣೆಯಲ್ಲಿ ಸಂಧಿ ಕಾರ್ಯದ ಸುಳಿವು ಸಿಗುವುದೇ ಇಲ್ಲ ಎಂಬುದು ಗೊತ್ತಾಗುತ್ತದೆ. ಅಂದರೆ ಪ್ರಕೃತಿ ರೂಪ ಕಾಲ್ ಮತ್ತು ಪ್ರತ್ಯಯ ಅನ್ನುಗಳನ್ನು ಎರಡು ಸ್ವತಂತ್ರ ಘಟಕಗಳಾಗಿಯೇ ನಾವು ಉಳಿಸಿಕೊಳ್ಳುತ್ತೇವೆ. ಇದು ಉಚ್ಚಾರಣೆಯ ಒಂದು ನಿಯಮ. ಇದೇ ಕಾಲ್ ರೂಪಕ್ಕೆ ಚತುರ್ಥಿ ವಿಭಕ್ತಿ ಪ್ರತ್ಯಯ ಗೆ ಸೇರಿದರೆ ಏನಾಗುವುದು ಎಂಬುದನ್ನು ಗಮನಿಸಿ ಬರೆಯುವಾಗ ಅಲ್ಲಿ ಸ್ವರಭಕ್ತಿ ನಡೆದು ಎರಡು ವ್ಯಂಜನಗಳ ನಡುವೆ ಇಕಾರ ಸೇರುತ್ತದೆ. ಕಾಲಿಗೆ ಎಂಬ ರೂಪ ಸಿದ್ಧಗೊಳ್ಳುತ್ತದೆ. ಆದರೆ ಉಚ್ಚರಿಸುವಾಗ ಪ್ರಕೃತಿ ಮತ್ತು ಪ್ರತ್ಯಯಗಳನ್ನು ಯಾವ ಬದಲಾವಣೆಯೂ ಮಾಡದೇ ನಾವು ಉಳಿಸಿಕೊಳ್ಳುತ್ತೇವೆ. ಆದ್ದರಿಂದ ಕಾಲ್ಗೆ ಎಂದು ಉಚ್ಚರಿಸುತ್ತೇವೆ. ಈ ವಿವರಣೆಯನ್ನು ಇನ್ನಷ್ಟು ಪ್ರಸಂಗಗಳಲ್ಲಿ ಪರಿಶೀಲಿಸಿ ನೋಡಬಹುದು. ಅಕಾರಾಂತ ನಾಮಪದಗಳಿಗೆ ಇದೇ ಅನ್ನು ಪ್ರತ್ಯಯ ಸೇರಿದಾಗ ವಕಾರಾಗಮ ಆಗುವುದೆಂದು ವ್ಯಾಕರಣಗಳು ಹೇಳುತ್ತವೆ. ಅಂದರೆ ದೀಪ ಪದಕ್ಕೆ ಅನ್ನು ಸೇರಿದರೆ ದೀಪವನ್ನು ಎಂದಾಗುತ್ತದೆ. ಬರಹದಲ್ಲಿ ಇರುವ ದೀಪವನ್ನು ಎಂಬ ರೂಪವನ್ನು ನಾವು ಮಾತಿನಲ್ಲಿ ಹೇಗೆ ಉಚ್ಚರಿಸುತ್ತೇವೆ ಎಂಬುದನ್ನು ಗಮನಿಸಿ, ಯಾರೂ ಮಾತಿನಲ್ಲಿ ದೀಪವನ್ನು ಎಂದು ಹೇಳುವುದಿಲ್ಲ. ಇದು ಉಚ್ಚಾರಣೆಯ ಶುದ್ಧಾತಿಶುದ್ಧತೆಯ ಪ್ರಶ್ನೆಯಲ್ಲ. ಕನ್ನಡ ಮಾತಿನ ಲಯಕ್ಕೆ ಸಂಬಂಧಿಸಿದ ಪ್ರಶ್ನೆ. ಅಂದರೆ ಕಣ್ಣೋದಿಗೆ ಸಿದ್ಧಗೊಂಡ ಕನ್ನಡವನ್ನು ಯಥಾವತ್ತಾಗಿ ಬಾಯಿಯೋದಿಗೆ ಪರಿವರ್ತಿಸಲು ಬರುವುದಿಲ್ಲ.

ಇಂತಹ ಇನ್ನೂ ಕೆಲವು ಸಮಸ್ಯೆಗಳನ್ನು ಗಮನಿಸೋಣ. ಬೇರೊಂದು ಪ್ರಸಂಗದಲ್ಲಿ ನಾವು ಕನ್ನಡ ಪದಕೋಶವನ್ನು ಬಳಕೆಯ ಪದಕೋಶ ಮತ್ತು ಗ್ರಹಿಕೆಯ ಪದಕೋಶ ಎಂದು ವಿಭಜಿಸಿದ್ದೇವೆ. ಸಾಮಾನ್ಯವಾಗಿ ಗ್ರಹಿಕೆಯ ಪದಕೋಶ ವಿಸ್ತಾರವಾದದ್ದು. ಅದರಲ್ಲಿರುವ ಎಲ್ಲ ಪದಗಳನ್ನು ನಾವು ನಮ್ಮ ಮಾತಿನಲ್ಲಿ ಬಳಸುವುದಿಲ್ಲ. ಬಳಕೆಯ ಪದಕೋಶ ಚಿಕ್ಕದು, ಹೀಗೆಂದಾಗಲೂ ಎಚ್ಚರಿಕೆಯಿಂದ ಗಮನಿಸಬೇಕಾದ ಕೆಲವು ಸಂಗತಿಗಳಿವೆ. ಈ ಬಳಕೆಯ ಪದಕೋಶದಲ್ಲಿ ಬರಹ ಮತ್ತು ಮಾತುಗಳಿಗೆ ದೊರಕುವ ಪದಗಳು ಒಂದೇ ಅಲ್ಲ. ಅವು ಬೇರೆ ಬೇರೆ. ನಾವು ನಮ್ಮ ಬಳಕೆಯ ಪದಕೋಶದ ಪದಗಳಲ್ಲಿ ಇರುವ ಎಲ್ಲವನ್ನೂ ಬರಹದಲ್ಲಿ ಬಳಸುವುದಿಲ್ಲ. ಹಾಗೆಯೇ ಬರೆಯಲು ಬಳಸಿದ ಪದಗಳನ್ನೆಲ್ಲಾ ಮಾತಿನಲ್ಲಿ ಬಳಸುವುದಿಲ್ಲ. ಇವೆರಡು ಬೇರೆ ಬೇರೆ. ಕೆಲವರು ಈ ನೆಲೆಯನ್ನು ಇನ್ನೊಂದು ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ. ಹದಿಮೂರನೇ ಶತಮಾನದ ಕನ್ನಡ ಆಲಂಕಾರಿಕನೊಬ್ಬ  ‘ಆಡಿದ ಮಾತುಗಳನ್ನು ಛಂದಕ್ಕೆ ಬರ್ಪ (ಬರುವ) ಹಾಗೆ ಬರೆಯಬೇಕು ಎನ್ನುತ್ತಾನೆ. ಇದು ಇಬ್ಬಂದಿತನದ ಮಾತು. ಬರಹವು ಮಾತಿನಂತೆ ಇರಬೇಕು ಎಂಬ ವಾಖ್ಯೆಯನ್ನು ಸರಿಯಾಗಿ ಗ್ರಹಿಸಬೇಕು. ಕಣ್ಣೋದಿಗೆ ಸಿದ್ಧಪಡಿಸಿಬೇಕಾದ ಬರಹವನ್ನು ಮಾತಿನ ದಾಟಿಯಲ್ಲಿ ಬರೆದರೆ ಅದು ಕಣ್ಣೋದಿಗೆ ಅನುಕೂಲಕರವಾಗುವುದಿಲ್ಲ(ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರ ಪ್ರಕಟಿಸಿರುವ ಪಂಪ : ಒಂದು ಅಧ್ಯಯನ(೧೯೭೪) ಕೃತಿಯಲ್ಲಿರುವ ಶ್ರೀ ಕೆ.ವಿ.ಸುಬ್ಬಣ್ಣನವರ ಲೇಖನವನ್ನು ಈ ದೃಷ್ಟಿಯಿಂದ ಪರಿಶೀಲಿಸಬಹುದು). ಈ ಭಾಷೆಯ ಅಂತರಾಳವನ್ನು ಗ್ರಹಿಸಿದ್ದರೆ ಸಮಸ್ಯೆಗಳು ಉಂಟಾಗುತ್ತವೆ, ಬರೆಯಲು ಲಭ್ಯವಿರುವ ಪದಕೋಶ ಎಂದಾಗ ಮುಖ್ಯವಾಗಿ ಅದು ಕಣ್ಣೋದಿನ ಬರಹಕ್ಕೆ ಅನ್ವಯಿಸುವ ಮಾತು. ಅಲ್ಲಿನ ಪದಗಳನ್ನು ಅವು ಇರುವಂತೆಯೇ ಕಿವಿ ಓದಿನ ಅಥವಾ ಬಾಯಿ ಓದಿನ ಬರಹಗಳಲ್ಲಿ ಬಳಸಲು ಸಾಧ್ಯವಿಲ್ಲ. ಈ ಗೆರೆ ಎಳೆಯುವಿಕೆಯನ್ನು ಹೊಸ ಭಾಷಾಬಳಕೆಗಳು ಗ್ರಹಿಸದಿರುವುದು ಒಂದು ಮೂಲಭೂತ ಕೊರತೆಯಾಗಿದೆ. ಯಾವ ಪದಗಳು ಉಚ್ಚಾರಣೆಗೆ ತಕ್ಕುವಲ್ಲವೋ ಅಂದರೆ ನಮ್ಮ ಮಾತಿನಲ್ಲಿ ಸಹಜವಾಗಿ ಬಳಸುವುದಿಲ್ಲವೋ ಅಂತಹ ಪದಗಳನ್ನು ಓದಿ ಹೇಳಬೇಕಾದ ಬರಹಗಳಲ್ಲಿ ಬಳಸುತ್ತಿದ್ದೇವೆ. ಇಲ್ಲಿ ಕನ್ನಡ ಇನ್ನೂ ವೃತ್ತಿಪರತೆಯನ್ನು ಅಳವಡಿಸಿಕೊಳ್ಳುವ ಅಗತ್ಯ ಕಂಡುಬರುತ್ತಿದೆ.

ಆಧುನೀಕರಣದ ಮತ್ತೂ ಹೊಸ ಸಮಸ್ಯೆಗಳೆಂದರೆ ಈ ಹಿಂದೆ ಬಳಕೆಯಲ್ಲಿ ಕಾಣದಿದ್ದ ಎಷ್ಟೋ ಬಗೆಯ ರಚನೆಗಳನ್ನು ಈಗ ರೂಪಿಸಿಕೊಳ್ಳಬೇಕಾಗಿದೆ. ಇದಕ್ಕೆ ಅಗತ್ಯವಾದ ಸಿದ್ಧತೆಗಳು ಸೂಚನೆಗಳು ಕೈಪಿಡಿಯ ರೂಪದಲ್ಲಿ ಕನ್ನಡದಲ್ಲಿ ದೊರಕುತ್ತಿಲ್ಲ. ಕೆಲವು ದಶಕಗಳ ಹಿಂದೆ ತಂತಿ ಸಮಾಚಾರವನ್ನು ನೀಡುವ ಅವಕಾಶಗಳಿದ್ದವು. ಆಗ ಅದು ಲಭ್ಯವಿದ್ದ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಿದ್ಧ ಮಾದರಿಯ ಸಂದೇಶಗಳನ್ನು ಇಂಗ್ಲಿಶ್‌ನಿಂದ ಅನುವಾದಿಸಿಕೊಂಡು ಬಳಸಲು ಸೂಚನೆ ನೀಡಲಾಗುತ್ತಿತ್ತು, ಆದರೆ ಸ್ವತಂತ್ರ ಸಂದೇಶವೊಂದನ್ನು ರೂಪಿಸಬೇಕಾದಾಗ ಸಮಸ್ಯೆಗಳು ಎದುರಾಗುತ್ತಿದ್ದವು. ಕಡಿಮೆ ಪದಗಳಲ್ಲಿ ಎಷ್ಟು ಅರ್ಥ ಇರಬೇಕೋ ಅಷ್ಟನ್ನು ಮತ್ತು ಅಷ್ಟನ್ನು ಮಾತ್ರ ತಿಳಿಸಿ ಹೇಳುವಂತೆ ಪದಗಳನ್ನು ಆಯ್ಕೆ ಮಾಡುವುದು ಹೊಸ ಸವಾಲಾಗಿತ್ತು. ಇಂತಹದೇ ಸಮಸ್ಯೆಗಳು ಸಾರ್ವಜನಿಕ ವಲಯದ ಪತ್ರಗಳಲ್ಲಿ ಕೂಡ ಎದ್ದು ಕಾಣುತ್ತಿತ್ತು. ಸರ್ಕಾರದ ಕಛೇರಿಯೊಂದಕ್ಕೆ ಅಹವಾಲೊಂದನ್ನು ಸಲ್ಲಿಸುತ್ತೇವೆ ಎಂದುಕೊಳ್ಳೋಣ. ಈ ಅಹವಾಲಿನ ಚೌಕಟ್ಟನ್ನು ತಿಳಿಸಿ ಹೇಳುವ ಮಾರ್ಗದರ್ಶಿ ಗಳಿವೆ. ಎಂದರೆ ವಿಳಾಸ ಎಲ್ಲಿ ಬರೆಯಬೇಕು ದಿನಾಂಕ, ಸಹಿ, ಸಂಬೋಧನಾ ವಿಧಾನ, ಇವೆಲ್ಲ ಸೂಚನೆಗಳು ಲಭ್ಯವಿವೆ. ಆದರೆ ಅದಕ್ಕಿಂತ ಮುಖ್ಯವಾದುದು ಬರಹದ ರಾಚನಿಕ ನಿಯಮಗಳು. ಏಕೆಂದರೆ ಇಂತಹ ಅಹವಾಲುಗಳನ್ನು ನೂರಾರು ಸಂಖ್ಯೆಯಲ್ಲಿ ಪಡೆಯುವ ಕಛೇರಿಗಳು ಅದರಲ್ಲಿರುವ ಪ್ರತಿ ವಾಕ್ಯವನ್ನು ಓದುವುದಿಲ್ಲ. ಬೇಡದ ವಿವರ ಮತ್ತು ಬೇಕಾದ ವಿವರ ಎಂಬ ವಿಭಜನೆಗೆ ಅಲ್ಲಿ ಸಮಯಾವಕಾಶ ಇರುವುದಿಲ್ಲ. ಆದ್ದರಿಂದ ಅಲ್ಲಿಯ ಬರವಣಿಗೆಯಲ್ಲೂ ಹೇಳಬೇಕಾದಷ್ಟನ್ನು ಮತ್ತು ಎಲ್ಲವನ್ನು ಹೇಳಲು ಅನುಕೂಲವಾಗುವ ಪದಪುಂಜಗಳು ಸಿದ್ಧಗೊಳ್ಳಬೇಕಾಗಿದೆ. ಈ ಸಮಸ್ಯೆಗಳನ್ನು ಕನ್ನಡ ಇನ್ನೂ ನಿವಾರಿಸಿಕೊಂಡಿಲ್ಲ.

ಈ ಅಧ್ಯಾಯದ ಮೊದಲಲ್ಲಿ ಆಧುನೀಕರಣದ ತುರ್ತು ನೆಲೆಯಿಂದ ಅಲ್ಲಿ ಇಂಗ್ಲಿಶಿನ ಪ್ರಭಾವ ಹೆಚ್ಚಿದೆ ಎಂದು ಗಮನಿಸಿದ್ದೆವು. ಈ ಇಂಗ್ಲಿಶ್ ಪದಗಳನ್ನು ಕನ್ನಡಕ್ಕೆ ತೆಗೆದುಕೊಂಡು ಬಳಸುವಾಗ ಮಾತಿನಲ್ಲಿ ಎದುರಾಗದ ಸಮಸ್ಯೆಗಳು ಬರವಣಿಗೆಯಲ್ಲಿ ಎದುರಾಗುತ್ತವೆ. ಮಾತಿನಲ್ಲಿ ಒಂದು ಪದವನ್ನು ಸುಮ್ಮನೆ ಉಚ್ಚರಿಸಿ ಬಿಡುತ್ತೇವೆ. ಅದೇ ಪದವನ್ನು ಬರಹದಲ್ಲಿ ಬರೆಯಬೇಕಾಗಿ ಬಂದಾಗ ಕನ್ನಡ ಎರಡು ತಂತ್ರಗಳನ್ನು ಬಳಸುತ್ತಿದೆ. ಒಂದು: ಬರವಣಿಗೆ ಕನ್ನಡ ಲಿಪಿಯಲ್ಲಿ ಇದ್ದರೂ ನಡುವೆ ಬರುವ ಇಂಗ್ಲಿಶ್ ಪದಗಳನ್ನು ರೋಮನ್ ಲಿಪಿಯಲ್ಲಿ ಬರೆಯು ವುದು. ಈ ವಿಧಾನದಲ್ಲಿ ಕೆಲವು ಕಷ್ಟಗಳಿವೆ. ಆ ಪದದ ಕಾಗುಣಿತ ಸರಿಯಾಗಿ ಗೊತ್ತಿರಬೇಕು. ಉಚ್ಚರಿಸಿದ ಕೂಡಲೇ ಕಾಗುಣಿತ ಗೊತ್ತಿರಬೇಕೆಂದೇನಿಲ್ಲ. ಅಲ್ಲದೆ ಈ ಬರವಣಿಗೆಯನ್ನು ಓದುವವರಿಗೆ ಕನ್ನಡ ಲಿಪಿಯೊಡನೆ ರೋಮನ್ ಲಿಪಿ ಮತ್ತು ಇಂಗ್ಲಿಶ್ ಭಾಷೆಯ ಪರಿಚಯವಿರಬೇಕು. ಇವೆರಡೂ ಅಲ್ಲದೇ ಇನ್ನೂ ಒಂದು ತೊಂದರೆ ಇದೆ. ಅದು ಮುದ್ರಣದಲ್ಲಿ ತಲೆ ಎತ್ತುವ ಸಮಸ್ಯೆ. ಕನ್ನಡ ಲಿಪಿಯ ವಿನ್ಯಾಸ ಮತ್ತು ರೋಮನ್ ಲಿಪಿಯ ವಿನ್ಯಾಸ ಪರಸ್ಪರ ಹೊಂದಿ ಕೊಳ್ಳುವುದಿಲ್ಲ. ಎರಡನೆಯ ಮಾರ್ಗವೆಂದರೆ ಇಂಗ್ಲಿಶ್ ಪದವನ್ನು ಕನ್ನಡ ಲಿಪಿಯಲ್ಲಿ ಬರೆಯುವುದು. ಇದು ಹೆಚ್ಚು ಸೂಕ್ತವಾದ ವಿಧಾನವೆಂದು ತೋರುತ್ತದೆ. ಮೊದಲ ವಿಧಾನದ ಇಕ್ಕಟ್ಟುಗಳು ಇಲ್ಲಿ ಇರುವುದಿಲ್ಲ. ಅಲ್ಲದೇ ಬಹು ಹಿಂದಿನಿಂದಲೂ ಕನ್ನಡ ಭಾಷೆ ತಾನು ಎರವಲು ಪಡೆದ ಸಂಸ್ಕೃತ ಭಾಷೆಯ ಪದಗಳನ್ನು ಬರೆಯಲು ಕನ್ನಡ ಲಿಪಿಯನ್ನೇ ಬಳಸಿಕೊಂಡಿದೆ. ಇದಕ್ಕಾಗಿ ಕನ್ನಡ ಲಿಪಿ ವ್ಯವಸ್ಥೆಯಲ್ಲೇ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಇಂಗ್ಲಿಶ್ ವಿಷಯಕ್ಕೂ ಇದೇ ತಂತ್ರವನ್ನು ಅನುಸರಿಸುವುದು ಸೂಕ್ತ. ಕೆಲವು ದಶಕಗಳ ಅನಂತರ ಈ ಇಂಗ್ಲಿಶ್ ಪದಗಳು ಕನ್ನಡದ ಲಯಗಾರಿಕೆಗೆ ಅನುಗುಣವಾಗಿ ಬದಲಾಗಿ ಬಿಡುತ್ತವೆ.

ಇಂಗ್ಲಿಶ್ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆಯುವ ತಂತ್ರದಿಂದ ಇನ್ನೊಂದು ಬಹುಮುಖ್ಯ ಪ್ರಯೋಜನವಿದೆ. ಇಂಗ್ಲಿಶ್ ಭಾಷೆ ಅಧಿಕಾರದ ಸ್ಥಾನದಲ್ಲಿ ಇದೆ. ಆದ್ದರಿಂದ ಆ ಭಾಷೆಯ ಪದಗಳಿಗೆ ಸಹಜವಾಗಿಯೇ ಒಂದು ಮೇಲರಿಮೆಯ ಭಾವವನ್ನು ಉದ್ದೀಪಿಸುವ ಸಾಮರ್ಥ್ಯವಿರುತ್ತದೆ. ಆದರೆ ಕನ್ನಡ ಭಾಷಿಕರು ಇಂತಹ ಮೇಲರಿಮೆಯ ಭಾವದ ಪದಗಳ ಬಳಕೆಯಿಂದ ಯಾವುದೇ ಮಾನಸಿಕ ಕೀಳರಿಮೆಗೆ ಒಳಗಾಗಬಾರದೆಂಬುದು ಭಾಷಾಯೋಜನೆಯ ಒಂದು ಮುಖ್ಯ ಉದ್ದೇಶವಾಗಬೇಕು. ಅದಕ್ಕಾಗಿ ಇಂಗ್ಲಿಶ್ ಪದಗಳನ್ನು ಕನ್ನಡ ಲಿಪಿಯಲ್ಲೇ ಪದಗಳನ್ನು ಬರೆಯುವುದರಿಂದ ಕಾಲಕ್ರಮೇಣ ಆ ಪದಗಳು ಸಹಜವಾಗಿಯೇ ತಮ್ಮ ಮೇಲರಿಮೆಯನ್ನು ಕಳೆದು ಕೊಳ್ಳಬಹುದು. ಇದು ಒಂದು ಸಾಧ್ಯತೆ. ಸಂಸ್ಕೃತ ಭಾಷೆಯ ಪದಗಳ ಮಟ್ಟಿಗೆ ಇಂತದೇ ಪ್ರಭಾವ ಆಗುವ ಸಾಧ್ಯತೆ ಇತ್ತು. ಈಗ ಅದು ಕಡಿಮೆಯಾಗಲು ಆ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದದ್ದು ಒಂದು ಮುಖ್ಯ ಕಾರಣ. ನಾವು ದಿನನಿತ್ಯ ಬಳಸುವ ನೂರಾರು ಸಂಸ್ಕೃತ ಪದಗಳನ್ನು ಕನ್ನಡದ ಪದಗಳೆಂದೇ ತಿಳಿದುಬಿಟ್ಟಿದ್ದೇವೆ. ಇಂಗ್ಲಿಶ್ ಪದಗಳ ಮಟ್ಟಿಗೆ ಈ ಬದಲಾವಣೆ ಅಗತ್ಯವೆಂದು ತೋರುತ್ತದೆ.

ಹೀಗೆ ಮಾಡದೇ ಈಗ ನಾವು ಅನುಸರಿಸುತ್ತಿರುವ ವಿಧಾನವೆಂದರೆ ಇಂಗ್ಲಿಶ್ ಪದಕ್ಕೆ ಸಂವಾದಿಯಾದ ಒಂದು ಪದವನ್ನು ರೂಪಿಸುವುದು. ಅದು ಕನ್ನಡದ್ದಿರ ಬಹುದು. ಇಲ್ಲವೇ ಸಂಸ್ಕೃತದ್ದಿರಬಹುದು. ಈ ಸಂವಾದಿ ಪದವನ್ನು ಬಳಸಿ, ವಿವರಣೆ ಎನ್ನುವಂತೆ ಮೂಲ ಇಂಗ್ಲಿಶ್ ಪದಗಳನ್ನು ಕಂಸಗಳಲ್ಲಿ, ರೋಮನ್ ಲಿಪಿಗಳಲ್ಲಿ ನೀಡುತ್ತಿದ್ದೇವೆ. ಇದು ಸೌಲಭ್ಯದ ದೃಷ್ಟಿಯಿಂದ ಎಷ್ಟು ಸರಿ ಎಂಬ ಪ್ರಶ್ನೆ ಬದಿಗಿರಲಿ. ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಇದು ಸರಿಯಾದ ಕ್ರಮವಲ್ಲ.

ಆಧುನೀಕರಣದಿಂದಾಗಿ ಬರವಣಿಗೆಯಲ್ಲಿ ಆಗಿರುವ ಇನ್ನೊಂದು ಮುಖ್ಯ ಬದಲಾವಣೆ ಎಂದರೆ ಲೇಖನ ಚಿಹ್ನೆಗಳ ಬಳಕೆ ಮತ್ತು ಸಂಕ್ಷೇಪಾಕ್ಷರಗಳ ಬಳಕೆ. ಲೇಖನ ಚಿಹ್ನೆಗಳನ್ನು ಮುದ್ರಣದ ಆಗಮನದೊಂದಿಗೆ ಕನ್ನಡ ರೂಢಿಸಿಕೊಂಡಿದೆ. ಬಹುಮಟ್ಟಿಗೆ ಇಪ್ಪತ್ತನೇ ಶತಮಾನದಲ್ಲಿ ಕೆಲವು ಮುಖ್ಯ ಲೇಖನ ಚಿಹ್ನೆಗಳನ್ನು ಬಳಸುವ ಮತ್ತು ಸರಿಯಾಗಿ ಬಳಸುವ ಪ್ರಯತ್ನಗಳು ಮುಂದುವರೆದವು. ಹೀಗಿದ್ದರೂ ವಾಕ್ಯದ ಕೊನೆಗೆ ಬರುವ ಪೂರ್ಣ ವಿರಾಮದ ಬಳಕೆಯನ್ನು ಬಿಟ್ಟರೆ ಉಳಿದ ಲೇಖನ ಚಿಹ್ನೆಗಳನ್ನು ಬಳಸಲು ಅನುಕೂಲಕರವಾದ ನಿಯಮಗಳನ್ನು ನಾವು ರೂಪಿಸಿಕೊಂಡಿಲ್ಲ. ಮಾತಿನ ಕೆಲವು ಸೌಲಭ್ಯಗಳನ್ನು ಕಾಯ್ದುಕೊಳ್ಳಲು ಲೇಖನ ಚಿಹ್ನೆಗಳನ್ನು ಯಾವ ಉದ್ದೇಶಕ್ಕಾಗಿ ಎಲ್ಲಿ ಬಳಸಬೇಕು ಎಂಬುದನ್ನು ತಿಳಿಸುವ ಖಚಿತ ನಿಯಮಗಳನ್ನು ರೂಪಿಸಲಾಗಿಲ್ಲ. ಉದಾಹರಣೆಗೆ ಒಂದು ವಾಕ್ಯದಲ್ಲಿ ಪ್ರಶ್ನಾರ್ಥಕ ಚಿಹ್ನೆ ಎಲ್ಲಿ ಬಳಕೆಯಾಗುತ್ತದೆ? ಇಡೀ ವಾಕ್ಯವೇ, ಅದೆಷ್ಟೇ ದೀರ್ಘವಾಗಿರಲಿ, ಒಂದು ಪ್ರಶ್ನೆಯಾಗಿದ್ದರೆ, ಆಗ ಮಾತ್ರ ವಾಕ್ಯದ ಕೊನೆಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುತ್ತೇವೆ. ಆದರೆ ವಾಕ್ಯ, ಒಂದು ಹೇಳಿಕೆಯಾಗಿದ್ದು ಅದರೊಳಗೆ ಅಂತರ್ಗತವಾಗಿರುವ ವಾಕ್ಯ ಒಂದು ಪ್ರಶ್ನೆಯಾಗಿದ್ದರೆ ಆಗ ಆ ಅಂತರ್ಗತ ವಾಕ್ಯದ ಕೊನೆಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಬಳಸುವುದಿಲ್ಲ. ಉದಾಹರಣೆಗೆ ‘ನೀನು ಮನೆಗೆ ಯಾವಾಗ ಬಂದೆ ಎಂದು ಕೇಳಿದರು’ ಎಂಬ ವಾಕ್ಯದಲ್ಲಿ ಒಂದು ಅಂತರ್ಗತ ವಾಕ್ಯವಿದೆ. ಬರೆಯುವಾಗ ಈ ವಾಕ್ಯದ ಮಧ್ಯೆ ಅಥವಾ ವಾಕ್ಯದ ಕೊನೆಗಾಗಲೀ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುವುದು ಸರಿಯಲ್ಲ. ಇಂತಹ ಸರಳ ನಿಯಮಗಳು ಕೂಡ ಕನ್ನಡ ಬರವಣಿಗೆಯಲ್ಲಿ ಪಾಲಿತವಾಗುತ್ತಿಲ್ಲ. ಇದೇ ಮಾತು ಅರ್ಧವಿರಾಮ, ಅಲ್ಪವಿರಾಮ, ವಿವರಣಾತ್ಮಕ ಚಿಹ್ನೆ, ನಡುಗೆರೆ, ಉಲ್ಲೇಖ ಚಿಹ್ನೆಗಳು, ಇವೆಲ್ಲದರ ಬಳಕೆಯಲ್ಲೂ ಇಂತದೇ ಸಮಸ್ಯೆಗಳು ಕಾಣುತ್ತಿವೆ.

ಲೇಖನ ಚಿಹ್ನೆಯ ಜೊತೆಗೆ ಸಂಕ್ಷೇಪಾಕ್ಷರಗಳನ್ನು ಸಾಕಷ್ಟು ಬಳಸುತ್ತೇವೆ. ಇವು ಪೂರ್ಣಪದಗಳಾಗಿರಬಹುದು ಇಲ್ಲವೇ ಪೂರ್ಣ ಪ್ರಕ್ರಿಯೆಗಳಾಗಿರಬಹುದು. ಆದರೆ ಸಂಕ್ಷಿಪ್ತಗೊಳಿಸುವ ರೀತಿಯಲ್ಲೂ ಗೊಂದಲಗಳಿವೆ. ಮತ್ತು ಹೀಗೆ ಸಂಕ್ಷೇಪ ಗೊಳಿಸಿದನ್ನು ಓದುವಾಗ ಆ ಸಂಕೇತಾಕ್ಷರಗಳ ಪೂರ್ಣರೂಪವನ್ನೇ ಉಚ್ಚರಿಸಬೇಕು. ಇದು ಕೂಡ ಪಾಲನೆಯಾಗುವುದಿಲ್ಲ. ಕ್ರಿಸ್ತಶಕೆ ಎಂಬುದನ್ನು ಕ್ರಿ.ಶ. ಎಂದು ಬರೆದರೂ ಓದುವಾಗ ಕ್ರಿಸ್ತಶಕೆ ಎಂದೇ ಓದಬೇಕು. ಈ ಸಂಕ್ಷೇಪಾಕ್ಷರಗಳನ್ನು ರೂಪಿಸುವ ನೆಲೆಯಲ್ಲೂ ಕೆಲವು ಗೊಂದಲಗಳಿವೆ. ಹೆಚ್ಚು ಜನಪ್ರಿಯವಾದ ಮತ್ತು ಇಂಗ್ಲಿಶಿನಿಂದ ಎರವಲು ಪಡೆದ ಸಂಕ್ಷೇಪಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡು ಅದನ್ನು ಬಳಸುವುದುಂಟು.ಇದು ಕೂಡ ಕೆಲವು ಗೊಂದಲಗಳಿಗೆ ಕಾರಣವಾಗುತ್ತದೆ.

ಕನ್ನಡದಲ್ಲಿ ಭಾಷಾ ದ್ವಿಸ್ತರತೆ:(ಡೈಗ್ಲಾಸಿಯಾ)

ಕಳೆದ ಶತಮಾನದ ಉತ್ತರಾರ್ಧದಲ್ಲಿ ಸಾಮಾಜಿಕ ಭಾಷಾಶಾಸ್ತ್ರದ ದೃಷ್ಟಿಯಿಂದ ಬಹುಚರ್ಚಿತವಾದ ಪರಿಕಲ್ಪನೆಗಳಲ್ಲಿ ಭಾಷಾ ದ್ವಿಸ್ತರತೆಯು ಒಂದು. ಚಾರ್ಲ್ಸ್ ಫರ್ಗ್ಯುಸನ್ ಈ ಬಗೆಗೆ ಮೊದಲು ಪ್ರಸ್ತಾಪ ಮಾಡಿದರು. ಬಹು ಪುರಾತನ ಭಾಷೆಗಳು ಮತ್ತು ಆ ಭಾಷೆಗಳನ್ನಾಡುವ ಸಮುದಾಯ ಇವುಗಳ ಸಂಬಂಧದಲ್ಲಿ ಈ ಪರಿಕಲ್ಪನೆ ಚರ್ಚೆಗೆ ಬಂತು. ಅರಾಬಿಕ್, ಸಿಮೆಟಿಕ್ ಭಾಷಾ ವರ್ಗಕ್ಕೆ ಸೇರಿದ ಒಂದು ಭಾಷೆ. ಜಗತ್ತಿನ ಬಹು ಪ್ರದೇಶಗಳಲ್ಲಿ ವ್ಯಾಪಿಸಿರುವ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಈ ಭಾಷೆಯಲ್ಲಿದೆ. ಈಗಲೂ ಪ್ರಾರ್ಥನೆಗಾಗಿ ಬಳಸುವ ಭಾಷೆ ಅರಾಬಿಕ್. ಇಸ್ಲಾಂ ದೇಶಗಳ ಸಂದರ್ಭವನ್ನು ಅಭ್ಯಾಸ ಮಾಡಿದ ಫರ್ಗ್ಯುಸನ್ ಮುಖ್ಯವಾಗಿ ಈಜಿಪ್ತಿನಲ್ಲಿ ಎರಡು ಬಗೆಯ ಅರಾಬಿಕ್ ಇರುವುದನ್ನು ಗುರುತಿಸಿದ. ಇವುಗಳನ್ನು ಹೈ-ಅರಾಬಿಕ್ ಮತ್ತು ಲೋ-ಅರಾಬಿಕ್ ಎಂದು ಕರೆದರು. ಒಂದು ಭಾಷಾ ಸಮುದಾಯದಲ್ಲಿ ಈ ಎರಡು ಭಾಷಾ ಬಗೆಗಳು ನಿರ್ದಿಷ್ಟ ಕೆಲಸಗಳನ್ನು ಮಾಡಲೆಂದೇ ಇರುವ ಪರಿಸ್ಥಿತಿಯೇ ಭಾಷಾ ದ್ವಿಸ್ತರತೆ. ಹೈ-ಅರಾಬಿಕ್ ಪ್ರಾರ್ಥನೆ, ಆರಾಧನೆಗಳಲ್ಲಿ, ಉನ್ನತ ಮಟ್ಟದ ಧಾರ್ಮಿಕ ಪ್ರವಚನಗಳಲ್ಲಿ, ಲಿಖಿತ ನಿರೂಪಣೆಗಳಲ್ಲಿ ಬಳಕೆಯಾಗಹತ್ತಿತು. ಉಳಿದ ಕಡೆ, ಮುಖ್ಯವಾಗಿ ದಿನದಿನದ ವ್ಯಾವಹಾರಿಕ ಜಗತ್ತಿನಲ್ಲಿ ಲೋ-ಅರಾಬಿಕ್ ಬಳಕೆಯಲ್ಲಿತ್ತು. ಇದು ಒಂದು ವಿವರಣೆಯಾಗಿ ಕಾಣುತ್ತದೆ. ಒಂದು ಪ್ರಭೇದ ಬಳಕೆಯಾಗುವ ಕಡೆ ಇನ್ನೊಂದು ಪ್ರಭೇದ ಬಳಕೆಯಾಗುವುದು ಸಾಮಾಜಿಕ ಕಟ್ಟುಪಾಡಿನ ಉಲ್ಲಂಘನೆಯಾಗುತ್ತದೆ. ಅಲ್ಲದೇ ಲೋ-ಅರಾಬಿಕ್ ಜನರಿಗೆ ಅನೌಪಚಾರಿಕವಾಗಿ ಲಭಿಸುವ ಪ್ರಭೇದ. ಹೈ ಅರಾಬಿಕನ್ನು ಔಪಚಾರಿಕ ಶಿಕ್ಷಣದ ಮೂಲಕ ಕಲಿಯಬೇಕಾಗುತ್ತದೆ. ಈ ಎರಡು ಪ್ರಭೇದಗಳಲ್ಲಿ ಧ್ವನಿ ನಿಯಮ, ಪದರಚನೆ, ವಾಕ್ಯರಚನೆಗಳು ಭಿನ್ನವಾಗಿರುತ್ತವೆ. ಭಾಷಾ ದ್ವಿಸ್ತರತೆಯ ಇತರ ಲಕ್ಷಣಗಳು ನಮಗಿಲ್ಲಿ ಅಷ್ಟು ಪ್ರಸ್ತುತವಲ್ಲ. ಆದರೆ ಮುಂದಿನ ದಶಕಗಳಲ್ಲಿ ಈ ಪರಿಕಲ್ಪನೆಯ ವ್ಯಾಖ್ಯೆಯನ್ನು ಬದಲಾಯಿಸಲಾಯಿತು. ಮೊದಲ ವಾಖ್ಯೆಯಲ್ಲಿ ಒಂದೇ ಭಾಷೆಯ ಎರಡು ಚಾರಿತ್ರಿಕ ಭಿನ್ನ ಪ್ರಭೇದಗಳಲ್ಲಿ ದ್ವಿಸ್ತರತೆ ಇರುವುದನ್ನು ಗುರುತಿಸಿದರು. ಅನಂತರ ಸಮಕಾಲೀನವಾದ ಎರಡು ಪ್ರಭೇದಗಳ ನಡುವೆಯೂ ಈ ಪರಿಸ್ಥಿತಿ ಉಂಟಾಗಬಹುದು ಎಂದು ಮರುವ್ಯಾಖ್ಯಾನಿಸಲಾಯಿತು. ಮುಂದು ವರೆದು ದ್ವಿಭಾಷಿಕ ಸಮುದಾಯಗಳಲ್ಲಿ ಎರಡು ಭಾಷೆಗಳ ನಡುವೆ ಇರುವ ಅಧಿಕಾರ ಸಂಬಂಧದ ನೆಲೆಯಲ್ಲಿ ಈ ದ್ವಿಸ್ತರತೆಯನ್ನು ಕಾಣುವುದು ಸಾಧ್ಯವೆಂದು ವಿವರಿಸಲಾಗುತ್ತಿದೆ. ಈ ಎಲ್ಲ ವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಭಾಷಾ ದ್ವಿಸ್ತರತೆಯ ಪರಿಸ್ಥಿತಿ ಕನ್ನಡದಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ.

ಕನ್ನಡದ ಎರಡು ಚಾರಿತ್ರಿಕ ಪ್ರಭೇದಗಳನ್ನು ಇರಿಸಿಕೊಂಡು ಅವುಗಳಲ್ಲಿ ಒಂದನ್ನು ಹೆಚ್ಚು ಪವಿತ್ರವೆಂದು ಪರಿಗಣಿಸುವ ಪ್ರವೃತ್ತಿ ಇಲ್ಲ. ಹೆಚ್ಚೆಂದರೆ ಆ ಚಾರಿತ್ರಿಕ ಪ್ರಭೇದಕ್ಕೆ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಆರೋಪಿಸುವುದು ಕಂಡು ಬರುತ್ತಿದೆ. ಆದರೆ ಕನ್ನಡದ ಸಮಕಾಲೀನ ಪ್ರಭೇದಗಳ ನಡುವೆ ಈ ದ್ವಿಸ್ತರತೆಯ ಪರಿಸ್ಥಿತಿ ಆಂಶಿಕವಾಗಿ ಕಂಡುಬರುತ್ತದೆ. ಪ್ರಮಾಣ ಭಾಷೆ ಉನ್ನತ ಸ್ಥಾನವನ್ನು ಪಡೆದಂತೆ ತೋರುತ್ತದೆ. ಈ ಪ್ರಮಾಣ ಭಾಷೆ ಯಾರ ಆಡುಭಾಷೆಯೂ ಅಲ್ಲ. ಹಾಗೆ ನೋಡಿದರೆ ಅದು ಬರಹಕ್ಕೆ ಮಾತ್ರ ಬಳಕೆಯಾಗುವ ಭಾಷೆಯಾಗಿದೆ. ಬರಹದ ಎಲ್ಲ ಬಗೆಗಳಲ್ಲೂ ಪ್ರಮಾಣ ಭಾಷೆಯೇ ಬಳಕೆಯಾಗುವುದಿಲ್ಲ. ಆದರೆ ಎಲ್ಲಿ ಅದು ಬಳಕೆಯಾಗಬೇಕು ಮತ್ತು ಎಲ್ಲಿ ಅದನ್ನು ಬಳಸದಿದ್ದರೆ ತಪ್ಪಾಗುತ್ತದೆ ಎಂಬ ಬಗೆಗೆ ಒಂದು ಅಲಿಖಿತ ನಿಯಮ  ಕನ್ನಡದಲ್ಲಿ ಜಾರಿಯಲ್ಲಿದೆ. ಕನ್ನಡದ ಪ್ರಮಾಣ ರೂಪವನ್ನು ಕಲಿಸಿಕೊಡುವುದೇ ಶಿಕ್ಷಣದ ಒಂದು ಮುಖ್ಯ ಉದ್ದೇಶವಾಗಿದೆ. ಈ ಪ್ರಮಾಣ ಕನ್ನಡಕ್ಕೆ ಪದಕೋಶ, ಧ್ವನಿರಚನೆ ಮತ್ತು ಪದರಚನೆಗಳಲ್ಲಿ ನಿರ್ದಿಷ್ಟ ವ್ಯಾಪ್ತಿಯಿದೆ; ನಿಯಮಗಳಿವೆ. ಪ್ರಮಾಣ ಕನ್ನಡ ಅಲ್ಲದ ಕನ್ನಡಗಳು ಹಲವಾರು ಇವೆ. ಅವು ಬಹುಮಟ್ಟಿಗೆ ಮಾತಿನ ರೂಪಗಳು. ಇವುಗಳನ್ನು ಅನೌಪಚಾರಿಕವಾಗಿ ಪಡೆದುಕೊಳ್ಳುತ್ತೇವೆ. ಪ್ರಮಾಣ ಕನ್ನಡದಲ್ಲಿ ಬಳಕೆಯಾಗುವ ಪದಕೋಶ ಹೆಚ್ಚು ಸಂಸ್ಕೃತಮಯವಾಗಿರುತ್ತದೆ. ಒಂದು ಉದಾಹರಣೆಯನ್ನು ಗಮನಿಸೋಣ: ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಹುಡುಗ-ಹುಡುಗಿ ವರ-ವಧುವಾಗುತ್ತಾರೆ. ಆ ಪತ್ರಿಕೆಯ ಭಾಷೆ, ವಾಕ್ಯರಚನೆ ಒಂದು ನಿರ್ದಿಷ್ಟ ಮಾದರಿಯನ್ನು ಅವಲಂಬಿಸುತ್ತದೆ. ಮತ್ತು ಸಂಸ್ಕೃತ ಪದಗಳಿಂದ ತುಂಬಿರುತ್ತದೆ. ಆದರೆ ಮದುವೆಯ ಸಂದರ್ಭದಲ್ಲಿ ನಡೆಯುವ ಮಾತುಕತೆಗಳಲ್ಲಿ ಯಾರೂ ಈ ಪರಿಭಾಷೆಯನ್ನು ಬಳಸುವುದಿಲ್ಲ. ಅಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾದ ಆಡುಮಾತಿನ ಪ್ರಯೋಗಗಳು, ಪದಗಳು ಕೇಳಿ ಬರುತ್ತವೆ. ಹೀಗೆಯೇ ಸಾಮಾಜಿಕವಾಗಿ ನಿರ್ದಿಷ್ಟಗೊಂಡ ಹಲವು ಸಂದರ್ಭಗಳಲ್ಲಿ ಲಿಖಿತ ರೂಪದಲ್ಲಿ ಪ್ರಮಾಣ ಕನ್ನಡ ಬಳಕೆಯಾಗಬೇಕೆಂಬ ನಿಯಮವಿದೆ. ಆಡಳಿತದ ದಸ್ತಾವೇಜುಗಳಲ್ಲಿ, ನ್ಯಾಯಾಂಗದ ದಾಖಲೆಗಳಲ್ಲಿ, ಮಾಧ್ಯಮಗಳ ಲಿಖಿತ ಮಾದರಿಗಳಲ್ಲಿ ಪ್ರಾರ್ಥನೆ, ಪ್ರವಚನ ಮುಂತಾದ ಕಡೆಗಳಲ್ಲಿ ಈ ಪ್ರಮಾಣ ಕನ್ನಡ ಬಳಕೆಯಾಗಲೇಬೇಕು. ಇದು ಆಡುಮಾತಿನಲ್ಲಿ ಕಂಡುಬರುವುದಿಲ್ಲ ಎಂದರು ಕೆಲವು ನಿರ್ದಿಷ್ಟ ಮಾತಿನ ನಿರೂಪಣೆಗಳಲ್ಲಿ ಪ್ರಮಾಣ ಕನ್ನಡವನ್ನೇ ಬಳಸಲಾಗುತ್ತದೆ. ಈ ನಿರೂಪಣೆಗಳು ಪೂರ್ವ ನಿರ್ಧಾರಿತ ರಚನೆಗಳಾಗಿರುತ್ತವೆ. ಉದಾಹರಣೆಗೆ ಪ್ರಾರ್ಥನೆಗಳು. ಈ ಪ್ರಾರ್ಥನೆಗಳ ಭಾಷೆ ಲಿಖಿತ ರೂಪದ ಪ್ರಮಾಣ ಕನ್ನಡವೇ ಸರಿ. ಈಗ ಅದನ್ನು ಉಚ್ಚರಿಸುತ್ತ ಪುನರಾವರ್ತನೆ ಮಾಡಲಾಗುತ್ತದೆ. ಈ ಪ್ರಭೇದದಲ್ಲಿ ಸಂಸ್ಕೃತ ಪದಗಳ ಹೆಚ್ಚಳ ಇರುವುದಕ್ಕೆ ಬಹುಮಟ್ಟಿಗೆ ಅಪವಾದಗಳೇ ಇಲ್ಲ.

ಇದಲ್ಲದೆ ಇನ್ನೂ ಒಂದು ಬಗೆಯ ದ್ವಿಸ್ತರತೆಯ ವ್ಯಾಖ್ಯಾನ ಕನ್ನಡದಲ್ಲಿ ಜಾರಿಯಲ್ಲಿರುವಂತೆ ತೋರುತ್ತದೆ. ಅದು ಇಂಗ್ಲಿಶ್ ಮತ್ತು ಕನ್ನಡಗಳ ನಡುವೆ ಇರುವ ಸಂಬಂಧದಲ್ಲಿ ಗೋಚರವಾಗುತ್ತದೆ. ಕನ್ನಡ ಭಾಷಾ ಸಮುದಾಯ ಇಂಗ್ಲಿಶನ್ನು ಕಲಿಯುವುದು ಔಪಚಾರಿಕ ಶಿಕ್ಷಣದ ಭಾಗವಾಗಿ ಮಾತ್ರ. ನಾಲ್ಕು ಪ್ರಾಥಮಿಕ ಕೌಶಲಗಳಲ್ಲಿ ಕೇಳಿ ಅರಿಯುವ ಓದಿ ತಿಳಿಯುವ ಕೌಶಲಗಳು ಸ್ವಲ್ಪ ಹೆಚ್ಚಾಗಿ ನೆಲೆಗೊಳ್ಳುತ್ತವೆ. ಮಾತಾಡುವ ಮತ್ತು ಬರೆಯುವ ಕೌಶಲಗಳು ಎಲ್ಲರಲ್ಲೂ  ಸಮ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಆದರೆ ಅಧಿಕಾರದ ಸಂಬಂಧದಲ್ಲಿ ಇಂಗ್ಲಿಶ್‌ಗೆ ಇರುವ ಒತ್ತಾಸೆಗಳಿಂದಾಗಿ ಕನ್ನಡದ ಜೊತೆಗೆ ಅದು ಯಾಜಮಾನ್ಯದ ನೆಲೆಯನ್ನು ಪಡೆದುಕೊಳ್ಳುತ್ತದೆ. ಎಷ್ಟೋ ಭಾಷಿಕ ವ್ಯವಹಾರಗಳು ಈ ಸಂಬಂಧವನ್ನು ಹೊಂದಿದ್ದರೂ ಅವು ಜನರ ಅರಿವಿನಭಾಗವಾಗುವುದಿಲ್ಲ. ಉದಾಹರಣೆಗೆ ಉನ್ನತ ನ್ಯಾಯಾಲಯಗಳ ತೀರ್ಪುಗಳು. ಅವು ಕಡ್ಡಾಯವಾಗಿ ಇಂಗ್ಲಿಶಿನಲ್ಲೇ ಇರಬೇಕೆಂಬ ನಿಯಮವಿರುವುದರಿಂದ ತನಗೆ ಸಂಬಂಧಿಸಿದ ತೀರ್ಪು ಏನೆಂಬುದು ಕೂಡ ಕಕ್ಷಿದಾರರಿಗೆ ಗೊತ್ತಾಗದೇ ಹೋಗುವ ಪ್ರಸಂಗಗಳೇ ಹೆಚ್ಚು. ಇದಲ್ಲದೇ ಒಂದು ಹಂತದ ಅನಂತರದ ಆಡಳಿತ ಸಂಬಂಧಿ ವ್ಯವಹಾರಗಳು ಕೂಡ ಮಾತು ಮತ್ತು ಬರಹ ಎರಡರಲ್ಲೂ ಇಂಗ್ಲಿಶನ್ನೇ ಆಶ್ರಯಿಸುತ್ತವೆ. ಇಲ್ಲಿಯು ಕೂಡ ಜನರಿಗೆ ತಮ್ಮ ಪ್ರವೇಶವನ್ನು ಕಂಡುಕೊಳ್ಳುವುದು ಸಾಧ್ಯವಾಗದು. ಉನ್ನತ ಮಟ್ಟದ ಚರ್ಚೆಗಳು, ಜಾಗತಿಕ ನೆಲೆಯ ವರದಿಗಳು, ತಂತ್ರಜ್ಞಾನ ಮತ್ತು ವೈಜ್ಞಾನಿಕ ವಿವರಗಳು ದೇಹಾರೋಗ್ಯ ಸಂಬಂಧದ ವೈದ್ಯಕೀಯ ವಿವರಗಳು ಎಲ್ಲವೂ ಇಂಗ್ಲಿಶಿನಲ್ಲೇ ಇರುತ್ತವೆ. ಅಂದರೆ ಕನ್ನಡ ಭಾಷಾ ಸಮುದಾಯದ ಜೊತೆಗೆ ಇಂಗ್ಲಿಶ್ ಈ ಭಾಷಾ ದ್ವಿಸ್ತರತೆಯ ಸಂಬಂಧವನ್ನು ರೂಪಿಸಿದೆ ಎಂದು ವ್ಯಾಖ್ಯಾನಿಸಬಹುದಾಗಿದೆ.

ಕೆಲವು ಭಾಷಾಶಾಸ್ತ್ರಜ್ಞರು ಇಂಗ್ಲಿಶ್ ಮತ್ತು ಕನ್ನಡಗಳ ನಡುವೆ ಈ ದ್ವಿಸ್ತರತೆಯ ಸಂಬಂಧ ಇದೆ ಎಂದು ಒಪ್ಪುವುದಿಲ್ಲ. ತಮ್ಮ ಈ ನಿರಾಕರಣೆಗೆ ಅವರು ನೀಡುವ ಮುಖ್ಯ ಕಾರಣ ಹೀಗಿದೆ. ಕನ್ನಡ ಮತ್ತು ಇಂಗ್ಲಿಶ್ ಸಂಬಂಧ ಒಂದು ಸ್ಥಿರಗೊಂಡ ಸಂಬಂಧವಲ್ಲ. ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಭಾಷಿಕರು ತಮ್ಮ ಕೌಶಲಗಳ ಬೆಳವಣಿಗೆಯ ಮೂಲಕ ಇಂಗ್ಲಿಶ್ ನಿರೂಪಣೆಗಳಲ್ಲಿ ಪಾಲುದಾರರಾಗು ತ್ತಾರೆ. ಅಲ್ಲದೇ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಇಂಗ್ಲಿಶ್ ನಿರೂಪಣೆಗಳು ಅಗ್ರಾಹ್ಯವಾಗಿದ್ದರೂ ಅಪಾರದರ್ಶಕವಾಗಿಲ್ಲ. ಎಂದರೆ ನಾವೇ ರೂಪಿಸಿಕೊಂಡಿರುವ ವ್ಯವಸ್ಥೆಗಳಿಂದಾಗಿ ಇಂಗ್ಲಿಶ್ ನಿರೂಪಣೆಗಳ ಕನ್ನಡ ರೂಪಾಂತರಗಳು ನಮಗೆ ಲಭ್ಯವಾಗುತ್ತವೆ. ಆದ್ದರಿಂದ ಅಷ್ಟರ ಮಟ್ಟಿಗೆ ಇಂಗ್ಲಿಶ್ ಪಾರದರ್ಶಕವಾಗಿದೆ. ಈ ವಾದ ತಾಂತ್ರಿಕವಾಗಿ ಸರಿಯಾಗಿದೆ. ಆದರೆ ಜಾಗತಿಕ ನೆಲೆಯ ಇನ್ನಿತರ ಪ್ರಸಂಗಗಳನ್ನು ಗಮನಿಸಿದಲ್ಲಿ ಕನ್ನಡ ಮತ್ತು ಇಂಗ್ಲಿಶ್‌ಗಳ ನಡುವಣ ಸಂಬಂಧ ಅಷ್ಟು ಸರಳವಾಗಿಲ್ಲ ಎಂಬುದು ಗೊತ್ತಾಗುತ್ತದೆ. ಭಾರತದಲ್ಲೇ ಹಲವು ಭಾಷೆಗಳು ಇಂಥಾ ಇಕ್ಕಟ್ಟನ್ನು ಅನುಭವಿಸುತ್ತಿವೆ. ಭಾಷಾ ದ್ವಿಸ್ತರತೆಯ ನಿರ್ದಿಷ್ಟ ಮಾದರಿಯಾಗಿ ಈ ಎರಡು ಭಾಷೆಗಳ ನಡುವಣ ಸಂಬಂಧವನ್ನು ನೋಡಲು ಆಗದಿದ್ದರೂ ಒಂದು ಹಂತದವರೆಗೆ ಆ ವ್ಯಾಖ್ಯೆ ಇಲ್ಲಿ ಅನ್ವಯಿಸುತ್ತದೆ.

ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ, ಇಂಗ್ಲಿಶ್ ಜೊತೆಗಿನ ತನ್ನ ಸಂಬಂಧವನ್ನು ಮತ್ತೆ ಮತ್ತೆ ಮರು ವ್ಯಾಖ್ಯಾನಿಸಿಕೊಳ್ಳುತ್ತ ಬಂದಿದೆ. ಏಕೀಕರಣದ ಮೊದಲ ಕೆಲವು ವರ್ಷಗಳಲ್ಲಿ ಇಂಗ್ಲಿಶನ್ನು ನಾವು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾದ ಸಾಧ್ಯತೆ ಎಂದು ಭಾವಿಸಿದ್ದೆವು. ಅದು ಸ್ವಯಂಚಾಲಿತ ಸಾಮರ್ಥ್ಯವುಳ್ಳ ಭಾಷೆ ಎನ್ನುವುದನ್ನು ಒಪ್ಪಲಿಲ್ಲ. ನಮಗೆಷ್ಟು ಅದರ ಪ್ರಯೋಜನ ಬೇಕೋ ಅಷ್ಟನ್ನು ಪಡೆದರೆ ಸಾಕು, ಉಳಿದಂತೆ ನಾವು ಭಾಷಿಕವಾಗಿ ಸ್ವಾಯತ್ತರಾಗಿ ಉಳಿಯುತ್ತೇವೆ ಎಂದು ನಂಬಿದ್ದೆವು. ಏಕೀಕರಣದ ಸರಿಸುಮಾರಿನಲ್ಲಿ(೧೯೬೨) ಕುವೆಂಪು ತಾವು ಬರೆದ ಗೀತೆಯಲ್ಲೇ ಇಂಗ್ಲಿಶನ್ನು ಪೂತನಿಗೆ ಹೋಲಿಸುತ್ತಾರೆ(ಭಾರತದ ವಿವಿಧ ರಾಜ್ಯಗಳ ವಿದ್ಯಾಮಂತ್ರಿಗಳ ಸಭೆಯಲ್ಲಿ ಇಂಗ್ಲಿಶನ್ನು ಶಾಲೆಯ ಮೂರನೆಯ ತರಗತಿಯಿಂದ ಕಲಿಸಲು ನಿರ್ಣಯ ತೆಗೆದುಕೊಂಡರೆಂಬ ಅಮಂಗಳ ಪತ್ರಿಕಾವಾರ್ತೆಯನ್ನು ಓದಿ ಈ ಕವಿತೆಯನ್ನು ಕುವೆಂಪು ಬರೆದಿದ್ದಾರೆ). ಇದೊಂದು ಪರೋಕ್ಷ ಹೋಲಿಕೆ. ಪಾರು ಮಾಡೆಮ್ಮನೀ ಇಂಗ್ಲಿಶಿನಿಂದ ಪೂತನಿಯ ಕೊಂದ ಓ ಗೋವಿಂದ ಎಂಬ ಈ ಸಾಲು ಕವಿತೆಯಲ್ಲಿ ಮುಂದುವರೆಯುತ್ತ ಹೋಗುತ್ತದೆ. ಇಂಗ್ಲಿಶ್ ನಮ್ಮ ಮೂಲ ಜೀವಸೆಲೆಯನ್ನು ನಿರ್ನಾಮ ಮಾಡಿ ನಮ್ಮನ್ನು ಪರಾವಲಂಬಿಗಳಾಗಿ ಪರಿವರ್ತಿಸುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿತ್ತು. ಪೂತನಿಯನ್ನು ಕೊಲ್ಲುವ ಮೊದಲು ಕೃಷ್ಣ ಆಕೆ ಊಡಿದ ವಿಷವನ್ನು ಅರಗಿಸಿಕೊಂಡಿದ್ದ. ಕುವೆಂಪು ಈ ಸೂಚನೆಯನ್ನು ಆ ಕವಿತೆಯಲ್ಲಿ ನೀಡುತ್ತಿರಬಹುದು. ಸುಮಾರು ಎರಡೂವರೆ ದಶಕಗಳ ನಂತರ ಯಾವುದೋ ಒಂದು ಸಾಮಾಜಿಕ ವಾಗ್ವಾದದಲ್ಲಿ ಭಾಗಿಯಾದ ಕುವೆಂಪು ಇಂಗ್ಲಿಶ್ ಕಲಿಯದೇ ಹೋಗಿದ್ದರೆ ತಾವು ಯಾರದೋ ಮನೆಯ ಕೊಟ್ಟಿಗೆಯಲ್ಲಿ ಕೆಲಸ ಮಾಡಿಕೊಂಡು ಇರಬೇಕಾಗುತ್ತಿತ್ತು ಎಂದರು. ಈ ಎರಡು ಪ್ರತಿಕ್ರಿಯೆಗಳು ನಮಗೆ ಸಾಂಕೇತಿಕವಾಗಿ ತೋರುತ್ತವೆ. ಇಂಗ್ಲಿಶನ್ನು ಗೆಲ್ಲಬಹುದು ಎಂಬ ಹುಮ್ಮಸಿನಲ್ಲಿ ನಾವು ಮುಂದಾದೆವು ಎಂದು ತೋರುತ್ತದೆ. ಅನಂತರದ ದಿನಮಾನಗಳು, ಆ ಇಂಗ್ಲಿಶಿಗೆ ಇರುವ ಸ್ವಯಂಚಾಲಿತ ಸಾಮರ್ಥ್ಯದ ಅರಿವನ್ನು ನಮಗೆ ಮಾಡಿಕೊಟ್ಟಿವೆ.

ಕನ್ನಡ ಭಾಷಿಕರು ಇಂಗ್ಲಿಶ್ ಜೊತೆಗೆ ಎರಡು ಬಗೆಯ ಸಂಬಂಧಗಳನ್ನು ರೂಢಿಸಿಕೊಂಡಿದ್ದಾರೆ. ಒಂದು: ಆಧುನೀಕರಣದ ನೆಲೆಯಲ್ಲಿ ಇಂಗ್ಲಿಶಿಗೆ ಮುಖಾ ಮುಖಿಯಾಗುತ್ತಾರೆ. ಎರಡು: ಸಾಂಸ್ಕೃತಿಕ ಸ್ವಾಯತ್ತತೆಯ ನೆಲೆಯಲ್ಲಿ ಇಂಗ್ಲಿಶನ್ನು ಎದುರಿಸುತ್ತಿರುವುದು. ಮೊದಲ ನೆಲೆ, ಹೆಚ್ಚು ವೈರುಧ್ಯಗಳಿಂದ ಕೂಡಿಲ್ಲ. ನಮ್ಮ ಸಾಂಪ್ರದಾಯಿಕ ಚಿಂತನೆಗಳ ಇಬ್ಬಂದಿತನದಿಂದ ಹೊರಬರಲು ಇಂಗ್ಲಿಶನ್ನು ಒಂದು ಸಾಧನವಾಗಿ ಕನ್ನಡಿಗರು ಬಳಸಿಕೊಂಡಿದ್ದಾರೆ. ಅವರ ಪದಕೋಶಕ್ಕೆ ಬಂದು ಸೇರಿರುವ ನೂರಾರು ಇಂಗ್ಲಿಶ್ ಪದಗಳನ್ನೇ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ನಾಗರಿಕ ಜಗತ್ತಿನ ತಂತ್ರಜ್ಞಾನದ ಹೊಸ ಸಾಮಗ್ರಿಗಳು ನಮ್ಮ ಬದುಕಿನಲ್ಲಿ ಪ್ರವೇಶ ಪಡೆದ್ದದರಿಂದ ಈ ಪದಗಳು ಬಂದು ಸೇರಿದವೆಂದು ಸುಲಭವಾಗಿ ಹೇಳಬಹುದು. ಆದರೆ ಎಷ್ಟೋ ಪದಗಳು ನಮ್ಮ ದಿನನಿತ್ಯದ ಕನ್ನಡ ಪದಗಳ ಬದಲಿಗೆ ಬಂದು ಸೇರಿವೆ. ಸಾಮಾಜಿಕ ಮತ್ತು ವೈಯಕ್ತಿಕ ವಲಯಗಳನ್ನು ವಿಭಜಿಸಿಕೊಳ್ಳಲು ಇಂಗ್ಲಿಶ್ ಭಾಷೆಯ ಪದಗಳನ್ನು ಕನ್ನಡಿಗರು ಉಪಯೋಗಿಸುತ್ತಾರೆ. ಸಂಬಂಧಸೂಚಕ ಪದಗಳನ್ನು ಹೀಗೆ ಬಳಸಿಕೊಳ್ಳುತ್ತಾರೆ. ಅಂಕಲ್, ಆಂಟಿ, ಕಜಿನ್, ಬ್ರದರ್, ಸಿಸ್ಟರ್ ಮುಂತಾದ ಪದಗಳನ್ನು ಎಲ್ಲಿ ಬಳಸುತ್ತೇವೆ ಮತ್ತು ಹೇಗೆ ಬಳಸುತ್ತೇವೆ ಎಂಬುದು ಗಮನಾರ್ಹ. ಹೀಗೆಯೇ ಎಷ್ಟೋ ಕೌಟುಂಬಿಕ ನೆಲೆಯ ಪದಗಳು ಸಾರ್ವಜನಿಕ ವಲಯದಲ್ಲಿ ಬಳಕೆಯಾಗಬೇಕಾದಾಗ ಇಂಗ್ಲಿಶ್ ಪದಗಳು ನೆರವಿಗೆ ಬಂದಿವೆ. ಮನೆ ಮತ್ತು ಜಗತ್ತುಗಳ ನಡುವಣ ಗಡಿಗೆರೆಗಳು ತೆಳುವಾಗುತ್ತ ಹೋಗುತ್ತಿವೆ. ಮನೆಯ ಲೋಕವನ್ನು ಹೊರಜಗತ್ತಿನಲ್ಲಿ ಮಂಡಿಸುವ ಅನುಭವಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ಹೆಚ್ಚು ಮೌಲ್ಯ ನಿರಪೇಕ್ಷ ಅಥವಾ ಮುಜುಗರ ತರದಿರುವ ಇಂಗ್ಲಿಶ್ ಪದಗಳನ್ನು ಬಳಸುವುದು ರೂಢಿಯಾಗುತ್ತಿದೆ. ಅಂದರೆ ವ್ಯಕ್ತಿ ಆಧುನೀಕರಣ ಗೊಳ್ಳಲು ಹಪಹಪಿಸುವಾಗ, ಆ ವ್ಯಕ್ತಿಯು ಮನೋಭಾವದ ನೆಲೆಗಳಲ್ಲಿ ಬದಲಾಗದೆಯೂ ಆಚರಣೆಯಲ್ಲಿ ಆಧುನೀಕರಣಗೊಳ್ಳುವ ಸಾಧ್ಯತೆಯನ್ನು ಇಂಗ್ಲಿಶ್ ಪದಗಳು ಒದಗಿಸಿ ಕೊಟ್ಟಿವೆ. ಈ ಪ್ರಕ್ರಿಯೆ ಈಗಲೂ ಬೇರೆ ಬೇರೆ ರೀತಿಯಲ್ಲಿ ಮುಂದುವರೆಯುತ್ತಿದೆ. ಇಲ್ಲಿ ಈ  ಭಾಷೆಯೊಡನೆ ಶತ್ರುತ್ವದ ಸಂಬಂಧ ಇದ್ದಂತಿಲ್ಲ.

ಎರಡನೆಯ ಬಗೆಯ ಸಂಬಂಧ ಹೆಚ್ಚು ಸಂಕೀರ್ಣವಾದುದು ಮತ್ತು ಕನ್ನಡಿಗರು ಕೆಲವು ದಶಕಗಳಿಂದ ಇದರಿಂದಾಗಿ ತೀವ್ರ ಸಂಘರ್ಷಗಳನ್ನು ಎದುರಿಸುವಂತೆ ಮಾಡಿದೆ. ಕನ್ನಡ ಮತ್ತು ಕನ್ನಡಿಗರ ಸಂಬಂಧದ ಸ್ವಾಯತ್ತತೆಯನ್ನು, ಸಾಂಸ್ಕೃತಿಕ ಅನನ್ಯತೆಯನ್ನು ಕಾಯ್ದುಕೊಳ್ಳಬೇಕೆಂಬ ಬಯಕೆ, ಎಲ್ಲ ಭಾಷಾ ಸಮುದಾಯಗಳಿಗೆ ಇರುವಂತೆ ಕನ್ನಡಿಗರಲ್ಲೂ ಇದ್ದುದು ಸಹಜ ಸಂಗತಿಯಾಗಿದೆ. ನಾವು ಬೇರೊಂದು ಕಡೆ ಇದೇ ಅಧ್ಯಯನದಲ್ಲಿ ಗಮನಿಸಿರುವಂತೆ ಈ ಅನನ್ಯತೆಯ ಸ್ಥಾಪನೆ ಮತ್ತು ಪೋಷಣೆಗಳಿಗಾಗಿ ಕೆಲವು ಗುರುತುಗಳನ್ನು ಕನ್ನಡಿಗರು ಸ್ಥಾಪಿಸಿಕೊಂಡರು. ಈ ಪ್ರಕ್ರಿಯೆಯಲ್ಲಿ ಚರಿತ್ರೆಯ ಪುನಾರಚನೆಯ ಪ್ರಯತ್ನಗಳು ನಡೆದವು. ಈಗಲೂ ಅಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಈ ಪ್ರಕ್ರಿಯೆಗೆ ಧಕ್ಕೆ ಒದಗಲಿದೆ ಎಂದು ಗೋಚರವಾಗಿದ್ದು ಇಂಗ್ಲಿಶಿನ ಮೂಲಕ. ಅಂದರೆ ಇಂಗ್ಲಿಶ್ ಭಾಷಾ ಸಮುದಾಯ ಅಥವಾ ಆಡಳಿತ ವರ್ಗ ವಸಾಹತು ಕಾಲದಲ್ಲಿದ್ದಂತೆ ಈಗ ಆಳ್ವಿಕೆ ನಡೆಸುತ್ತಿಲ್ಲ. ಆ ಮೂಲಕ ನಮ್ಮ ಸಾಂಸ್ಕೃತಿಕ ಬೇರುಗಳಿಗೆ ಯಾವ ಆಘಾತವನ್ನು ಉಂಟುಮಾಡುತ್ತಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಇಂಗ್ಲಿಶ್, ಕನ್ನಡಿಗರು ಕಲ್ಪಿಸದಿದ್ದ ಪಾತ್ರವೊಂದನ್ನು ವಹಿಸಲು ಮುಂದಾಯಿತು. ಇಂಗ್ಲಿಶ್ ಆಧುನಿಕತೆಗೆ ದಾರಿದೀಪ ಎಂದು ತಿಳಿಯುತ್ತಿದ್ದಾಗಲೇ ಅದು ನಮ್ಮ ಅಂತರಂಗಕ್ಕೆ ಹಿಡಿದ ಕನ್ನಡಿ ಎಂಬ ಸತ್ಯವು ರಾಚತೊಡಗಿತ್ತು. ಕನ್ನಡಿಗರು ರಚಿಸಿಕೊಂಡ ಸಾಂಸ್ಕೃತಿಕ ಪರಂಪರೆಯು ಸಮಕಾಲೀನ ಜೀವನದಲ್ಲಿ ಯಾವ ಸಂಬಂಧವನ್ನು ರೂಢಿಸಲು ಯತ್ನಿಸುತ್ತಿದೆ ಎಂಬ ಅರಿವು ಕನ್ನಡಿಗರಿಗೆ ದೊರೆತದ್ದೇ ಇಂಗ್ಲಿಶಿನಿಂದ ಎಂದು ಕುವೆಂಪು ಎಂಟನೇ ದಶಕದಲ್ಲಿ ಅಂದರೆ ಅವರಿಗೆ ಎಂಬತ್ತು ದಾಟಿದ ನಂತರ ಏಕೆ ಹೇಳಿದರು? ಅದು ಚರಿತ್ರೆಯ ಅಪವ್ಯಾಖ್ಯೆಯೆ? ಅಥವಾ ವಾಸ್ತವವನ್ನು ಹೊರಗಿಡುವ ಯತ್ನವೇ? ಕನ್ನಡ ಸಂಸ್ಕೃತಿಯ ಒಳಗಿನ ವೈರುಧ್ಯಗಳು ಜನವಿರೋಧಿಯಾಗಿವೆ. ನಾವು ಭಾವುಕತೆಯಲ್ಲಿ ಅದಕ್ಕೆ ಶರಣಾಗುವುದು ಸಾಧ್ಯವಿಲ್ಲ. ಈ ಸಂಸ್ಕೃತಿಯು ನಿಯುಕ್ತಿಗೊಳಿಸಿದ ಅಧೀನತೆಯ ಗುರಿಯಿಂದ ಹೊರಬರಲು ಇಂಗ್ಲಿಶ್ ತಮಗೆ ಅವಕಾಶ ನೀಡಿತ್ತು ಎಂದು ಕುವೆಂಪು ಹೇಳಿದರು. ಎರಡು ಸಂಗತಿಗಳು ಇಲ್ಲಿ ಸ್ಪಷ್ಟವಾಗುತ್ತಿವೆ. ಒಂದು: ನಾವು ರಚಿಸಿಕೊಂಡ ಕನ್ನಡ ಸಂಸ್ಕೃತಿಯ ಒಳ ಪದರುಗಳಲ್ಲಿ ಇರುವ ವೈರುಧ್ಯಗಳು ನಮಗೆ ಗೋಚರವಾದುದು. ಎರಡು: ಇಂತಹ ವೈರುಧ್ಯಗಳ ನಿವಾರಣೆಯ ಮೂಲಕ ಹೊಸ ಜೀವನ ವಿನ್ಯಾಸಕ್ಕೆ ದಾರಿಗಳನ್ನು ಹುಡುಕಿಕೊಂಡದ್ದು. ಈ ಎರಡೂ ಸಂದರ್ಭದಲ್ಲಿ ಇಂಗ್ಲಿಶಿಗೆ ಒಂದು ಮಹತ್ವದ ಪಾತ್ರವಿದ್ದಂತೆ ತೋರುತ್ತದೆ.

ಭಾಷಾ ದ್ವಿಸ್ತರತೆ ಕುರಿತು ಚಿಂತಿಸುವ ಸಾಮಾಜಿಕ ಭಾಷಾಶಾಸ್ತ್ರಜ್ಞರು ನಿರೂಪಿಸುವ ಲಕ್ಷಣಗಳನ್ನು ಯಥಾವತ್ತಾಗಿ ಕನ್ನಡ ಮತ್ತು ಇಂಗ್ಲಿಶ್‌ಗಳ ಸಂಬಂಧಕ್ಕೆ ಅನ್ವಯಿಸುವುದು ಸಾಧ್ಯವಿಲ್ಲ. ಆದರೆ ಭಾಷಾ ದ್ವಿಸ್ತರತೆಯನ್ನೇ ಬೇರೆ ಬೇರೆ ರೀತಿಯಲ್ಲಿ ನಾವೀಗ ವ್ಯಾಖ್ಯಾನಿಸುತ್ತಿದ್ದೇವೆ. ಆದ್ದರಿಂದ ಕನ್ನಡ ಮನಸ್ಸು ಎದುರಿಸುತ್ತಿರುವ ಭಾಷಿಕ ದ್ವಿಧಾಭಾವವನ್ನು ಅರಿತುಕೊಳ್ಳಲು ಕನ್ನಡ ಇಂಗ್ಲಿಶ್ ಸಂಬಂಧದ ನೆಲೆಗಟ್ಟನ್ನು ಅನ್ವಯಿಸಿಕೊಳ್ಳುವುದು ಅಗತ್ಯವೆನಿಸುತ್ತದೆ. ಈ ಮೊದಲೇ ಹೇಳಿದಂತೆ ಕಳೆದ ಐವತ್ತು ವರ್ಷದಲ್ಲಿ ಇಂಗ್ಲಿಶ್ ನಮ್ಮ ಭಾಷೆಯ ಜೊತೆಗೆ ಹೊಂದಿರುವ ಸಂಬಂಧದ ಸ್ವರೂಪ ಬದಲಾಗುತ್ತ ನಡೆದಿದೆ. ಇಂಗ್ಲಿಶ್ ಅಂತಾರಾಷ್ಟ್ರೀಯ ಭಾಷೆಯಾಗಿ ಪಡೆದುಕೊಳ್ಳುತ್ತಿರುವ ವಿಸ್ತಾರದಲ್ಲಿ ಕನ್ನಡ ಕೂಡ ಅದರ ಜೊತೆಗೆ ತನ್ನ ಸ್ಥಾನವನ್ನು ಮರುರೂಪಿಸಿಕೊಳ್ಳಬೇಕಾದ ಅಗತ್ಯ ಹೆಚ್ಚಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ತಂತ್ರಜ್ಞಾನದ ಜಿಗಿತದಿಂದ ಮಾಹಿತಿಸ್ಫೋಟ ಅಗಾಧ ಪ್ರಮಾಣದಲ್ಲಿ ನಡೆದಿದೆ. ಇದೆಲ್ಲವೂ ನಮಗೆ ದಕ್ಕುವುದು ಅಂತರ್ಜಾಲ ತಾಣಗಳಲ್ಲಿ. ಮಾಹಿತಿಯ ಪ್ರಮಾಣ ಮತ್ತು ಅದರ ಪ್ರಸಾರ ಇವುಗಳ ಬಗೆಗೆ ಚರ್ಚೆ ನಡೆಸುವುದು ಇಲ್ಲಿ ಸಾಧ್ಯವಿಲ್ಲ. ಆದರೆ ಮಾಹಿತಿ ಲಭಿಸುತ್ತಿರುವುದು ಇಂಗ್ಲಿಶ್ ಮೂಲಕ ಎನ್ನುವುದನ್ನು ಗಮನಿಸಬೇಕು. ಒಂದು ಸಂದರ್ಭವನ್ನು ವಿಶ್ಲೇಷಿಸಿ ಇಂಗ್ಲಿಶ್ ಜೊತೆಗೆ ಇತರ ಭಾಷೆಗಳ ಸಂಬಂಧ ಯಾವ ರೀತಿ ರೂಪಗೊಳ್ಳುತ್ತಿದೆ ಎನ್ನುವುದನ್ನು ಅರಿತುಕೊಳ್ಳಬಹುದು.

ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಲು ಗೂಗಲ್ ಎಂಬ ಹುಡುಕು ತಾಣ ಇದೆ. ಯಾವುದೇ ವಿಷಯವನ್ನು ಕುರಿತ ಮಾಹಿತಿಯನ್ನಾದರೂ ಹುಡುಕಿ ತೆಗೆಯಲು ಇಂತಹ ಹಲವು ಸರ್ಚ್ ಎಂಜಿನ್‌ಗಳು ಲಭ್ಯವಿವೆ. ಗೂಗಲ್ ಮಾಹಿತಿ ಕ್ರೋಡೀಕರಣಕ್ಕಾಗಿ ಮುಖ್ಯವಾಗಿ ಇಂಗ್ಲಿಶ್ ಭಾಷೆಯ ಅಂತರ್ಜಾಲ ತಾಣಗಳನ್ನು ಆಶ್ರಯಿಸುತ್ತದೆ. ಇಂತಹ ತಾಣಗಳ ಪ್ರಮಾಣ ಶೇಕಡಾ ೬೮. ಉಳಿದ ಶೇಕಡಾ ೩೨ ಪ್ರಮಾಣದ ತಾಣಗಳಲ್ಲಿ ಯುರೋಪಿನ ಹಲವು ಭಾಷೆಗಳಿಗೆ ಮತ್ತು ಚೀನಿ ಭಾಷೆಗೆ ಅವಕಾಶ ಹೆಚ್ಚಿದೆ. ಗೂಗಲ್ ಹುಡುಕಲು ಅವಕಾಶ ನೀಡುವ ಆದೇಶಗಳನ್ನು ಇಂಗ್ಲಿಶಿನಲ್ಲಿ ರೂಪಿಸಿಕೊಂಡಿದೆ. ಆದರೆ ಕಳೆದ ಆರು ವರ್ಷಗಳಿಂದ ಹೀಗೆ ನೀಡುವ ಆದೇಶಗಳನ್ನು ಜಗತ್ತಿನ ೬೦ ಭಾಷೆಗಳಿಗೆ ವಿಸ್ತರಿಸಿದೆ. ಆ ಅರವತ್ತು ಭಾಷೆಗಳಲ್ಲಿ ಕನ್ನಡವು ಒಂದು. ಅಂದರೆ ನಾವು ಹುಡುಕಲು ನೀಡುವ ಆದೇಶಗಳನ್ನು ಕನ್ನಡದಲ್ಲಿ ನೀಡಬಹುದು. ಎಷ್ಟೋ ಕಡೆಗಳಲ್ಲಿ ಕನ್ನಡ ಅಕ್ಷರಗಳನ್ನು ಕೂಡ ಬಳಸಬಹುದಾಗಿದೆ. ಆದರೆ ನಮಗೆ ಲಭಿಸುವ ಮಾಹಿತಿ ಮಾತ್ರ ಇಂಗ್ಲಿಶ್ ಭಾಷೆಯಲ್ಲೇ ಇರುತ್ತದೆ. ಅಂದರೆ ಮಾಹಿತಿಯ ಹುಡುಕುವಿಕೆಗೆ ಅನುಕೂಲವಾಗುವಂತೆ ಕನ್ನಡ ಭಾಷೆಯನ್ನು ಬಳಸಿಕೊಳ್ಳಬೇಕಾಗಿದೆ. ಆದರೆ ಮಾಹಿತಿಯೇ ಕನ್ನಡದಲ್ಲಿ ಇರುವುದಿಲ್ಲ. ಕನ್ನಡದ ಬಗೆಗೆ ಇರುವ ಮಾಹಿತಿಯು ಇಂಗ್ಲಿಶ್ ಭಾಷೆಯಲ್ಲೇ ಇರುತ್ತದೆ.

ಇಷ್ಟ್ಟು ವಿವರಣೆ ನೀಡಿದ್ದರ ಉದ್ದೇಶವಿಷ್ಟೇ. ಜಾಗತಿಕ ಭಾಷೆಯಾಗಿ ಇಂಗ್ಲಿಶ್ ತನ್ನ ಯಜಮಾನಿಕೆಯನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡಿದೆ. ಉಳಿದ ಭಾಷೆಗಳು ಅದರ ಸಚರ ಭಾಷೆಗಳಾಗಿ ಮಾತ್ರ ಸ್ಥಾನ ಪಡೆಯುತ್ತವೆ. ಮಾಹಿತಿಯ ಆಕರವಾಗಿ ಇಂಗ್ಲಿಶಿಗೆ ಹತ್ತಿರ ಹತ್ತಿರ ಬರುವ ಕೆಲವು ಭಾಷೆಗಳು ಮುಂದಿನ ದಶಕಗಳಲ್ಲಿ ಸಿದ್ಧಗೊಳ್ಳಬಹುದು. ಆದರೆ ಕನ್ನಡಕ್ಕೆ ಆ ಅವಕಾಶ ದೊರೆಯುವುದು ಕಷ್ಟ. ಏಕೆಂದರೆ ಆ ಮಾಹಿತಿಯ ಜಗತ್ತನ್ನು ಕನ್ನಡದಲ್ಲಿ ರೂಪಿಸುವುದು ಸಾಧ್ಯವಾಗುವುದಿಲ್ಲ. ಕನ್ನಡದ ವಾತಾವರಣದಲ್ಲಿ ಯೋಚಿಸುವವರಿಗೂ ಹೀಗೆ ಇಂಗ್ಲಿಶಿನ ಇರುವಿಕೆ ಪ್ರತಿಗಳಿಗೆಯಲ್ಲೂ ಅರಿವಿಗೆ ಬರುವ ವಿಷಯವಾಗಿ ಬಿಟ್ಟಿದೆ. ದ್ವಿಸ್ತರತೆಯ ಸಂದರ್ಭದಲ್ಲಿ ಒಂದು ಭಾಷೆಗೆ ದೊರಕುವ ಪಾವಿತ್ರ್ಯದ ಸ್ಥಾನ ಇಂಗ್ಲಿಶಿಗೆ ಲಭಿಸದೆ ಹೋಗಬಹುದು. ಆದರೆ ಮಾಹಿತಿಯ ಆಕರವಾಗಿ ಮತ್ತು ಆ ಮೂಲಕವೇ ನಮ್ಮ ಆಲೋಚನಾ ಕ್ರಮದ ನಿಯಂತ್ರಕವಾಗಿ ಇಂಗ್ಲಿಶ್ ಒಂದು ಸ್ಥಾನವನ್ನು ಪಡೆದುಕೊಂಡು ಬಿಟ್ಟಿದೆ. ದ್ವಿಸ್ತರತೆಯ ಸಂದರ್ಭದಲ್ಲಿ ಉನ್ನತ ಸ್ಥಾನ ಪಡೆದ ಭಾಷೆಯ ವ್ಯಾಪ್ತಿಗೆ ಭಾಷಾ ಸಮುದಾಯದ ಪ್ರತಿಯೊಬ್ಬರು ಒಳಗಾಗುತ್ತಾರೆ ಎಂದು ಹೇಳಬರುವುದಿಲ್ಲ. ಇಲ್ಲಿಯೂ ಆ ಮಾತು ನಿಜ. ಇಂಗ್ಲಿಶ್ ಜೊತೆಗೆ ಯಾವ ಸಂಪರ್ಕವನ್ನು ಇರಿಸಿಕೊಳ್ಳದಿದ್ದರೆ ಜೀವನ ನಿರ್ವಹಣೆ ಅಸಾಧ್ಯ ಎಂದು ಹೇಳಲು ಬರುವುದಿಲ್ಲ. ಆದರೆ ಸಮಕಾಲೀನ ಆಗು ಹೋಗುಗಳ ಲಯದಲ್ಲಿ ತೊಡಗಿಕೊಳ್ಳುವ ಪ್ರತಿಯೊಬ್ಬರೂ ಮೇಲೆ ಹೇಳಿದ ಭಾಷಿಕ ದ್ವಿಧಾಭಾವಕ್ಕೆ ಒಳಗಾಗಲೇ ಬೇಕಾಗಿದೆ.

ಕನ್ನಡ ಚಿಂತನೆಗಳು ಕಳೆದ ಐವತ್ತು ವರ್ಷಗಳಲ್ಲಿ ಎದುರಿಸಿದ ಬಿಕ್ಕಟ್ಟುಗಳ ಸ್ವರೂಪವನ್ನು ನಾವು ಸ್ವಲ್ಪ ಚರ್ಚಿಸುವ ಅಗತ್ಯವಿದೆ, ಏಕೀಕರಣದ ಪೂರ್ವದಲ್ಲಿ ವಸಾಹತು ಆಡಳಿತ ಇಂಗ್ಲಿಶ್ ವಿದ್ಯಾಭ್ಯಾಸ ಮತ್ತು ಆಧುನೀಕರಣ ಇವೆಲ್ಲವೂ ಒತ್ತಟ್ಟಿಗೆ ಪ್ರಭಾವ ಬೀರುತ್ತಿದ್ದುದರಿಂದ ಕನ್ನಡಿಗರ ಆಲೋಚನಾ ಕ್ರಮಕ್ಕೆ ಪೂರಕವಾದ ಪ್ರಭಾವಗಳು ಇಂಗ್ಲಿಶ್ ಮೂಲಕ ಒದಗಿ ಬಂದವು. ಆಗ ದೇಶಿಯ ಚಿಂತನೆ ಮತ್ತು ಪಾಶ್ಚಾತ್ಯ ಪ್ರಭಾವ ಇವುಗಳ ನಡುವೆ ಒಂದು ವಾಗ್ವಾದ ಮೊದಲಾಗಿದೆ. ಯಾವುದೇ ನಿರ್ಣಯಾತ್ಮಕ ಹಂತವನ್ನು ತಲುಪದಿದ್ದರೂ ವಾಗ್ವಾದದ ಹಲವು ಮುಖಗಳು ಆಗ ಅನಾವರಣಗೊಂಡಿವೆ. ಕನ್ನಡ ಚಿಂತನೆ ತನ್ನ ವಿನ್ಯಾಸಗಳಲ್ಲಿ ಇಂಗ್ಲಿಶ್ ಮೂಲಕ ಯುರೋಪಿಯನ್ ಚಿಂತನೆಗಳಿಗೆ ತೆರೆದುಕೊಂಡಿತ್ತು. ಏಕೀಕರಣದ ಅನಂತರವೂ ಈ ಬಗೆಯ ಪ್ರಭಾವಗಳಿಗೆ ಪ್ರೇರಣೆಗಳಿಗೆ ವಿರೋಧಗಳು ಹೆಚ್ಚಾಗಿ ವ್ಯಕ್ತವಾಗಲಿಲ್ಲ. ಈ ಪ್ರಭಾವಗಳು ಸಂಸ್ಕೃತಿ ಚಿಂತನೆಯ ಎಲ್ಲ ಕ್ಷೇತ್ರದಲ್ಲೂ ಕಾಣಿಸಿ ಕೊಂಡಿವೆ. ಸಾಹಿತ್ಯ, ಜಾನಪದ, ಚರಿತ್ರೆ, ಸಮಾಜಶಾಸ್ತ್ರ, ಅಭಿವೃದ್ಧಿ ಚಿಂತನೆ ಹೀಗೆ ಹಲವು ವಲಯಗಳಲ್ಲಿ ಈ ಪ್ರಭಾವಗಳನ್ನು ನಾವು ಗುರುತಿಸುತ್ತೇವೆ.

ಎಂಟನೇ ದಶಕದ ಅನಂತರದಲ್ಲಿ ಅಡಿಗರು ಹೇಳುವಂತೆ, ‘ಪಶ್ಚಿಮ ಬುದ್ಧಿಯನ್ನು ನಂಬಿ’ ಅನಾಥರಾಗುವ ಪ್ರವೃತ್ತಿಯ ಬಗೆಗೆ ವಿರೋಧವೊಂದು ಕಾಣಿಸಿಕೊಳ್ಳತೊಡಗಿತ್ತು. ಎಲ್ಲ ವಲಯಗಳಲ್ಲೂ ದೇಶೀಯ ಮೂಲದ ಚಿಂತನೆಗಳನ್ನು ರೂಢಿಸಬೇಕೆಂಬ ಒತ್ತಾಯ ಕಾಣಿಸಿಕೊಳ್ಳತೊಡಗಿತ್ತು. ವಿಪರ್ಯಾಸವೆಂದರೆ ಕನ್ನಡದಂತಹ ಭಾಷಾ ಸಂಸ್ಕೃತಿಗಳಲ್ಲಿ ಇಂತಹ ಅಪೇಕ್ಷೆಗಳು ತಲೆದೋರಿದರೂ ಅಖಿಲ ಭಾರತ ವ್ಯಾಪ್ತಿಯಲ್ಲಿ ಈ ಕುರಿತ ಚರ್ಚೆಗಳು ಮಾತ್ರ ಇಂಗ್ಲಿಶ್ ಭಾಷೆಯಲ್ಲೇ ನಡೆಯತೊಡಗಿದ್ದವು. ಅಂದರೆ ಇಂಗ್ಲಿಶ್ ವೈಚಾರಿಕ ಆಕೃತಿಗಳಿಗೆ ಆಕರವಾಗುವ ಪ್ರವೃತ್ತಿ ಮಾತ್ರ ಕುಗ್ಗಲಿಲ್ಲ. ಈಗ ಪಾಶ್ಚಾತ್ಯ ಪ್ರಭಾವವೆನ್ನುವುದು ಮರುವ್ಯಾಖ್ಯಾನಕ್ಕೆ ಗುರಿಯಾಗಿದೆ. ಇಂಗ್ಲಿಶ್ ಕಳೆದ ಎರಡು ದಶಕಗಳಲ್ಲಿ ಈ ದೃಷ್ಟಿಯಿಂದ ಹೊಸ ಪಾತ್ರವನ್ನು ವಹಿಸುತ್ತಿದೆ. ದೇಶೀಯತೆಯ ಪರಿಭಾಷೆ ಮತ್ತು ಚರ್ಚೆಗಳು ಕೂಡ ಇಂಗ್ಲಿಶ್ ಭಾಷೆಯಲ್ಲೇ ನಡೆಯತೊಡಗಿವೆ. ಭಾರತದಂತಹ ದೇಶಕ್ಕೆ ಇದು ಅನಿವಾರ್ಯವೆಂದು ಸಮರ್ಥನೆ ನೀಡಿದರೂ ಈ ಸಂದರ್ಭವನ್ನು ಇಂಗ್ಲಿಶ್ ಭಾಷೆ ತನ್ನ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡದ್ದನ್ನು ನಿರಾಕರಿಸುವಂತಿಲ್ಲ. ಕನ್ನಡ ಈಗಲೂ ತನ್ನ ವೈಚಾರಿಕತೆಯ ವಿಸ್ತರಣೆಯ ಸಂದರ್ಭದಲ್ಲಿ ಇಂಗ್ಲಿಶ್ ಭಾಷೆಯನ್ನು ಮಾಧ್ಯಮವನ್ನಾಗಿ ಬಳಸುವುದು ಅನಿವಾರ್ಯವೆನಿಸಿಬಿಟ್ಟಿದೆ.

ದೇಶೀಯ ಸಾಮಾಜಿಕ ಚಿಂತನೆಗಳು ಕಳೆದ ಎರಡು ದಶಕಗಳಲ್ಲಿ ನಾಡಿನ ಸಾಂಸ್ಕೃತಿಕ ಬಹುಳತೆ(ಪ್ಲೂರಾಲಿಟಿ) ಕುರಿತು ಚರ್ಚಿಸುತ್ತಿವೆ. ಕನ್ನಡದ ಸಂದರ್ಭದಲ್ಲಿ ಈ ಚರ್ಚೆ ಪ್ರಾರಂಭಗೊಂಡಿದೆ. ಏಕ ಘನಾಕೃತಿ ಮಾದರಿಯ ಗ್ರಹಿಕೆಗಳು ಈಗ ಪ್ರಶ್ನೆಗೆ ಒಳಗಾಗುತ್ತಿವೆ. ಸಂಸ್ಕೃತಿಯ ಹೆಣಿಗೆಯಲ್ಲಿ ಇರುವ ಅಂಗಗಳ ನಡುವೆ ಸಮರಸದ ಭಾವಕ್ಕಿಂತ ವಿರೋಧದ ಭಾವವೇ ಹೆಚ್ಚಾಗಿದೆ ಎನ್ನುವುದು ಹೊಸ ತಿಳುವಳಿಕೆಯಾಗಿದೆ. ೧೯೮೦ರ ನಂತರದಲ್ಲಿ ಕರ್ನಾಟಕದಲ್ಲಿ ಪ್ರವೃತ್ತಗೊಂಡ ದಲಿತ ಬಂಡಾಯ ಚಳುವಳಿಗಳನ್ನು ಈ ನಿಟ್ಟಿನಲ್ಲಿ ಗಮನಿಸಬೇಕು. ಈ ಚಳುವಳಿಗಳ ಎಲ್ಲ ಅಂಶಗಳನ್ನು ನಾವು ಚರ್ಚಿಸಬೇಕಾದ ಅಗತ್ಯವಿಲ್ಲ. ಆದರೆ ಭಾಷೆಗೆ ಸಂಬಂಧಿಸಿದ ನೆಲೆಗಳನ್ನು ಗಮನಿಸುವುದು ಅಗತ್ಯವಾಗುತ್ತದೆ. ಮುಖ್ಯವಾಗಿ ಈ ಚಳುವಳಿಗಳು ಸಮಾಜದ ಕೆಳಸ್ತರದ ಶೋಷಿತ ಜನ ಸಮುದಾಯಗಳನ್ನು ಗಮನದಲ್ಲಿ ಇರಿಸಿಕೊಂಡಿದ್ದವು. ಈ ಜನ ಸಮುದಾಯಗಳು ಸಮಾಜ ರಚನೆಯ ವಿನ್ಯಾಸದಲ್ಲಿ ತಮ್ಮ ಶೋಷಣೆಗೆ ಕಾರಣವಾಗುವ ನೆಲೆಗಳನ್ನು ಗುರುತಿಸಿಕೊಳ್ಳಲು ಯತ್ನಿಸಿವೆ. ಈ ಸಮುದಾಯಗಳ ಸ್ಥಿತಿಯಲ್ಲಿದ್ದ ರಿಕ್ತತೆ ಮತ್ತು ಸಮೃದ್ಧತೆಗಳನ್ನುಜೊತೆ ಜೊತೆಯಾಗಿಯೇ ಗಮನಿಸಲಾಗಿದೆ. ಆರ್ಥಿಕ ಸಾಮಾಜಿಕ ಸಂಬಂಧಗಳಲ್ಲಿ ರಿಕ್ತತೆಯನ್ನು ಗುರುತಿಸಿದ್ದರೆ ಭಾಷಿಕ ನೆಲೆಯಲ್ಲಿ ಸಾಂಸ್ಕೃತಿಕ ನೆನಪುಗಳ ನೆಲೆಯಲ್ಲಿ ಸಮೃದ್ಧತೆಯನ್ನು ಗುರುತಿಸಲಾಗಿದೆ. ಈ ಸಮೃದ್ಧತೆಯು ಈ ಸಮುದಾಯಗಳ ಸಾಮಾಜಿಕ ಬಂಡವಾಳ ಆಗಬಹುದೇ ಅಥವಾ ಈ ಸಮೃದ್ಧತೆಯು ಕೇವಲ ವಸ್ತು ಸ್ಥಿತಿಯನ್ನು ಮರೆಮಾಚಲು ಇರುವ ಒಂದು ಹುನ್ನಾರವೇ ಎಂಬ ಪ್ರಶ್ನೆಗಳು ಮುಂಚೂಣಿಗೆ ಬಂದಿವೆ.

೧೯೮೫ರ ಸುಮಾರಿನಲ್ಲಿ ದಲಿತ ಬಂಡಾಯ ಚಳುವಳಿಗಾರರು ಚಂದ್ರಗುತ್ತಿಯ ಬೆತ್ತಲೆ ಸೇವೆ ಆಚರಣೆಯ ವಿರುದ್ಧ ಚಳುವಳಿ ಮಾಡಿದರು. ಆಡಳಿತದ ದೃಷ್ಟಿಯಿಂದ ಇದೊಂದು ಕಾನೂನು ಪಾಲನೆಯ ಸಮಸ್ಯೆಯಾಯಿತು. ಬೆತ್ತಲೆ ಸೇವೆ ಆಚರಣೆ, ದೇವದಾಸಿಪದ್ಧತಿಇತ್ಯಾದಿಗಳ ಬಗೆಗೆ ಜಾರಿಗೆ ಬಂದಿದ್ದ ಕಾನೂನುಗಳ ಅನುಸರಣೆಯ ಪ್ರಶ್ನೆ ಮುಂಚೂಣಿಗೆ ಬಂದಿತು. ಆದರೆ ಅದೇ ಸುಮಾರಿಗೆ ಇನ್ನೊಂದು ಚರ್ಚೆ ಮೊದಲಾಯಿತು. ಬೆತ್ತಲೆ ಸೇವೆ ದಲಿತ ಸಮುದಾಯದ ಸಾಂಸ್ಕೃತಿಕ ನೆನಪುಗಳನ್ನು ಪ್ರತಿನಿಧಿಸುತ್ತಿರುವುದರಿಂದ ಅದನ್ನು ನಿಷೇಧಿಸುವುದೆಂದರೆ ದಲಿತರ ಹಕ್ಕುಗಳನ್ನು ಕಸಿದುಕೊಂಡಂತೆ ಎಂಬ ವಾದವನ್ನು ಮಂಡಿಸಲಾಗಿದೆ. ಡಾ.ಯು.ಆರ್.ಅನಂತಮೂರ್ತಿಯವರೇ(ಆ ಸಂದರ್ಭದಲ್ಲಿ ಆವರುಬೆತ್ತಲೆ ಪೂಜೆ ಏಕೆ ಕೂಡದು? ಎಂಬ ಲೇಖನವನ್ನು ಬರೆದರು) ಮೊದಲಾಗಿ ಹಲವು ಜನರು ಈ ವಾಗ್ವಾದದಲ್ಲಿ ಭಾಗಿಯಾದರು. ನಮಗಿಲ್ಲಿ ಎಲ್ಲ ವಿವರಗಳು ಅಗತ್ಯವಿಲ್ಲ. ಆದರೆ ಮೇಲೆ ಹೇಳಿದ ಕೆಳಸ್ತರದ ಬದುಕಿನ ರಿಕ್ತತೆ ಮತ್ತು ಸಮೃದ್ಧತೆಗಳ ಮುಖಾಮುಖಿಯನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದು ಒಂದು ಚರ್ಚೆಯ ವಿಷಯವಾಯಿತು. ಭಾಷೆಯ ದೃಷ್ಟಿಯಿಂದ ಈ ಚರ್ಚೆಗೆ ಇರುವ ಆಯಾಮಗಳನ್ನು ನಾವೀಗ ಗಮನಿಸೋಣ.

ಕೆಳಸ್ತರದ ಜನರ ಭಾಷೆ ಕನ್ನಡದ ಒಂದು ಪ್ರಭೇದವಾಗಿ ಅವರ ದೈನಿಕಗಳ ಅಭಿವ್ಯಕ್ತಿಗೆ ನೆರವಾಗುತ್ತಿದೆ. ಆದರೆ ಅದರೊಡನೆ ಅವರ ಅಗಾಧ ಪ್ರಮಾಣದ ಸಾಂಸ್ಕೃತಿಕ ನೆನಪುಗಳು ಹಾಡುಗಳಾಗಿ, ಕಾವ್ಯಗಳಾಗಿ, ಕಥೆಗಳಾಗಿ ದೃಶ್ಯರೂಪಗಳಾಗಿ ಮೈದಳೆಯುತ್ತಿವೆ. ಈ ಸಮೃದ್ಧ ನೆನಪುಗಳನ್ನು ಕನ್ನಡ ಸಂಸ್ಕೃತಿಯ ಭಾಗವೆಂದು ತಿಳಿದು ಅದನ್ನು ಒಳಗೊಳ್ಳುವ ವಿಧಾನಗಳನ್ನು ರೂಪಿಸಿಕೊಳ್ಳಲಾಗಿದೆ. ಮುಖ್ಯವಾಗಿ ಈ ಸಮೃದ್ಧ ನೆನಪುಗಳಿಗೂ ಅವರ ಭಾಷೆಗೂ ಇರುವ ಸಂಬಂಧ ಎಂತದ್ದು? ಎ.ಕೆ.ರಾಮಾನುಜನ್ ಮಾದರಿಯ ವಿದ್ವಾಂಸರಿಗೆ ಈ ಸಂಬಂಧ ಆಕಸ್ಮಿಕವಾದುದು. ಏಕೆಂದರೆ ಆ ಸಮೃದ್ಧ ನೆನಪುಗಳೆಲ್ಲವನ್ನೂ ಅವರು ಪ್ರಮಾಣ ಕನ್ನಡಕ್ಕೆ ಇಲ್ಲವೇ ಇಂಗ್ಲಿಶಿಗೆ ವರ್ಗಾಯಿಸಿದರೆ ಆಗ ದಲಿತರ ಕನ್ನಡಕ್ಕೆ ಯಾವ ಹೆಚ್ಚಿನ ಮಹತ್ವವೂ ಉಳಿಯದು. ಇದಲ್ಲದೇ ಇನ್ನೊಂದು ಮಾದರಿಯೆಂದರೆ ಆ ನೆನಪುಗಳನ್ನು ಮತ್ತು ಭಾಷೆಯನ್ನು ಒಂದು ಆಚರಣೆಯ ಸಾಮಗ್ರಿಯನ್ನಾಗಿ ಪರಿವರ್ತಿಸುವುದು. ಚಲನಚಿತ್ರಗಳಲ್ಲಿ ಕಂಸಾಳೆಯ ಪದಗಳನ್ನು ಕುಣಿತದ ಹೆಜ್ಜೆಗಳನ್ನು ಬಳಸುವ ರೀತಿ ಇದಕ್ಕೆ ಒಂದು ಉದಾಹರಣೆ. ಇವೆರಡು ಮಾದರಿಗಳು ಭಾಷೆಯನ್ನು ಒಂದು ಪರಿಕರವನ್ನಾಗಿ ಮಾತ್ರ ನೋಡುತ್ತವೆ.

ಇದಲ್ಲದೆ, ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಸಂಸ್ಕೃತಿ ರೂಪಿಸಿಕೊಟ್ಟ ಪ್ರಗತಿಯ ಮಾದರಿಯಲ್ಲಿ ಕೆಳಸ್ತರದ ಜನರು ತಮ್ಮ ಭಾಷಿಕ ರೂಪಗಳನ್ನು ಬಿಟ್ಟುಕೊಡಬೇಕೆಂಬ ಒತ್ತಾಯವನ್ನು ಹೇರುತ್ತಿವೆ. ಅಂದರೆ ಅವರು ತಮ್ಮ ಭಾಷಾ ಪ್ರಭೇದವನ್ನು ಒಂದು ಚಹರೆಯನ್ನಾಗಿ ಉಳಿಸಿಕೊಳ್ಳಲು ಅವಕಾಶವಿಲ್ಲ. ಅದನ್ನು ಬಿಟ್ಟುಕೊಟ್ಟು, ಪ್ರಮಾಣ ಕನ್ನಡಕ್ಕೆ ದಾಟಬೇಕೆಂಬ ಒತ್ತಾಯವನ್ನು ಶಿಕ್ಷಣಕ್ರಮ ಹೇರುತ್ತಿದೆ. ನಾವು ಗುರುತಿಸಿದಂತೆ ಎಂಟನೇ ದಶಕದ ನಂತರದ ದಲಿತ ಅರಿವಿನ ಸ್ಫೋಟದಲ್ಲಿ ಈ ಭಾಷೆಯ ಪ್ರಶ್ನೆ ಮುಂಚೂಣಿಗೆ ಬರುತ್ತದೆ. ಸಮೃದ್ಧ ನೆನಪುಗಳು ಅಡಕಗೊಂಡಿರುವ ಭಾಷೆಯು ನಿಜಬದುಕಿನಲ್ಲಿ ರಿಕ್ತತೆಯ ಸಂಕೇತವಾಗುವುದು ಒಂದು ವಿಪರ್ಯಾಸವೇ ಸರಿ. ಒಟ್ಟು ಕನ್ನಡ ಸಂಸ್ಕೃತಿ ದಲಿತರ ನೆನಪುಗಳನ್ನು ತನ್ನ ಸಾಂಸ್ಕೃತಿಕ ಪರಂಪರೆಯ ಭಾಗವನ್ನಾಗಿ ಮಾಡಿಕೊಳ್ಳಲು ಸಿದ್ಧವಿದೆ. ಆದರೆ ಅವರ ಭಾಷೆಯನ್ನು ಮಾತ್ರ ತನ್ನದೆಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈ ಅರಿವಿನ ನೆಲೆಗಳು ಶತಮಾನದ ತಿರುವಿನಲ್ಲಿ ಹೊಸ ಬಗೆಯ ಚಿಂತನೆಗೆ ಕಾರಣವಾದವು. ದೇವನೂರ ಮಹದೇವ ಅವರ ಕುಸುಮಬಾಲೆ ಕೃತಿಯಲ್ಲಿ ಕುಸುಮಬಾಲೆ ಮುಖ್ಯ ಪಾತ್ರವಾದರೂ ಅವಳು ಮಾತನಾಡುವುದು ಒಂದೇ ಬಾರಿ. ಹಾಗೆ ಮಾತನಾಡಿದಾಗ ಅವಳ ಬಾಯಿಂದ ಬರುವ ವಾಕ್ಯ ಇಂಗ್ಲಿಶಿನಲ್ಲಿರುತ್ತದೆ. ಐ ವಾಂಟ್ ಟು ಬಿ ಇನ್ ಮೈ ಹೋಮ್ ಎಂದು ಕುಸುಮಬಾಲೆ ಇಂಗ್ಲಿಶಿನಲ್ಲಿ ಹೇಳುತ್ತಾಳೆ. ಕಾದಂಬರಿಯಲ್ಲಿ ಈ ಮಾತಿನ ಅರ್ಥ ವ್ಯಾಪ್ತಿ ಏನಾದರೂ ಇರಲಿ ಕೆಳಸ್ತರದ ಬದುಕಿನಲ್ಲಿ ಕಳೆದ ಎರಡು ದಶಕಗಳಿಂದ ಭಾಷೆಗೆ ಸಂಬಂಧಿಸಿದಂತೆ ನಡೆದಿರುವ ವಾಗ್ವಾದಗಳಿಗೆ ಹೊಸ ತಿರುವೊಂದು ಈಗ ಕಾಣತೊಡಗಿದೆ.

ಅಖಿಲ ಭಾರತ ವ್ಯಾಪ್ತಿಯ ದಲಿತ ಚಿಂತಕರಾದ ಕಂಚ ಐಲಯ್ಯ ಅವರು ಮಂಡಿಸುವ ವಿಚಾರದಂತೆ ಭಾರತೀಯ ರಾಜಕೀಯ ವಿನ್ಯಾಸದಲ್ಲಿ ದಲಿತರು ಅವಕಾಶ ವಂಚಿರಾಗಿರಲು ಇರುವ ಹಲವು ಕಾರಣಗಳಲ್ಲಿ ಭಾಷೆಯ ಪ್ರಶ್ನೆಯೂ ಮುಖ್ಯವಾಗಿದೆ. ಈಗ ದಲಿತರು ತಂತಮ್ಮ ಪ್ರದೇಶಗಳಲ್ಲಿ ಶೋಷಿತರಾಗಲು ಆಯಾ ಪ್ರದೇಶದ ಭಾಷೆಗಳು ಕಾರಣವಾಗಿವೆ. ಆದ್ದರಿಂದ ಅವರು ಆ ಭಾಷೆಗಳೊಡನೆ ತಮಗಿರುವ ಸಂಬಂಧವನ್ನು ಕಡಿದಕೊಂಡು ಅಖಿಲ ಭಾರತ ಮಟ್ಟದ ಒಂದು ಭಾಷೆಗೆ ವರ್ಗಾವಣೆಗೊಳ್ಳಬೇಕು. ಚಾರಿತ್ರಿಕವಾಗಿ ಈ ಸಾಧ್ಯತೆ ಇರುವುದು ಇಂಗ್ಲಿಶಿಗೆ ಮಾತ್ರ. ಆದ್ದರಿಂದ ದಲಿತರು ಮತ್ತು ಕೆಳಜಾತಿಯ ಜನರು ದೇಶ ಭಾಷೆಗಳ ಹಂಗನ್ನು ಕಿತ್ತೊಗೆದು ಇಂಗ್ಲಿಶ್ ಭಾಷೆಯನ್ನು ತಮ್ಮದೆಂದು ಒಪ್ಪಿಕೊಳ್ಳಬೇಕು. ಶ್ರೀ ಐಲಯ್ಯ ಅವರ ವಾದಕ್ಕೆ ಹಲವು ನೆಲೆಗಳಿವೆ. ನಮಗಿಲ್ಲಿ ಮುಖ್ಯವಾದದು ದೇಶ ಭಾಷೆಗಳ ಬಗೆಗೆ ಅವರ ವ್ಯಾಖ್ಯೆ ಮತ್ತು ಇಂಗ್ಲಿಶಿಗೆ ಅವರು ನೀಡಿರುವ ಚಾರಿತ್ರಿಕ ಮಹತ್ವ. ಕರ್ನಾಟಕದಲ್ಲೂ ಕಳೆದ ಮೂರು ವರ್ಷಗಳಿಂದ ಒಂದು ಚರ್ಚೆ ಮೊದಲಾಗಿದೆ. ಕನ್ನಡವನ್ನು ದಲಿತರು ಕೆಳಜಾತಿಯ ಜನರು ಯಾವ ಸಂಬಂಧದಲ್ಲಿ ಪರಿಗ್ರಹಿಸಬೇಕು ಎಂಬುದೇ ಆ ಪ್ರಶ್ನೆ. ಈಗಂತೂ ಇಂಗ್ಲಿಶ್ ಈ ಇಕ್ಕಟ್ಟಿನಿಂದ ಬಿಡುಗಡೆ ಪಡೆಯಲು ಒಂದು ಹೊರದಾರಿ ಎಂಬ ವಾದಗಳು ಮಂಡನೆಯಾಗುತ್ತಿವೆ.

ಇಂಗ್ಲಿಶ್ ಭಾಷೆ ಕನ್ನಡದ ಸಂದರ್ಭದಲ್ಲಿ ಮೊದಮೊದಲು ಕೇವಲ ಆಧುನಿಕತೆಯ ಮತ್ತು ತಿಳುವಳಿಕೆಯ ಆಕರ ಎಂಬ ನೆಲೆಯನ್ನು ಪಡೆದಿತ್ತು. ಆಧುನಿಕತೆಯ ಸೂಚಕವಾಗಿ ಈ ಭಾಷೆಯನ್ನು ಪರಿಗಣಿಸಿದಾಗ ಕನ್ನಡ ಸಂಸ್ಕೃತಿಗೆ ಆಘಾತಕಾರಿ ಯಾದ ಅಂಶಗಳು ಅಷ್ಟು ಕಂಡುಬರಲಿಲ್ಲ. ಹೆಚ್ಚೆಂದರೆ ಕೆಲವು ಹೊಸ ಪದಗಳು ಸಾರ್ವಜನಿಕ ನಿರೂಪಣೆಗಳಲ್ಲಿ ಸೇರ್ಪಡೆಯಾದವು. ತಿಳುವಳಿಕೆಯ ಆಕರವನ್ನಾಗಿ ಇಂಗ್ಲಿಶ್ ಭಾಷೆಯನ್ನು ಪರಿಗಣಿಸಬೇಕೆಂಬ ವಾದ ಇಂದಿಗೂ ಬಲವಾಗಿದೆ. ಇಂಗ್ಲಿಶನ್ನು ಗ್ರಂಥಾಲಯದ ಭಾಷೆಯನ್ನಾಗಿ ಕಲಿಸಬೇಕೆಂಬ ಮಾತನ್ನು ಮೇಲಿಂದ ಮೇಲೆ ಹೇಳುತ್ತಲೇ ಬರಲಾಗಿದೆ. ಆದರೆ ತಿಳುವಳಿಕೆಯ ಆಕರವಾಗುತ್ತಲೇ ಭಾಷೆ ಯಜಮಾನಿಕೆಯ ನೆಲೆಗೂ ತಲುಪುವುದು ಸಾಧ್ಯ ಎಂಬ ಅರಿವು ಏಳನೇ ದಶಕ ದಿಂದ ಈಚೆಗೆ ಕನ್ನಡ ಜನ ಮನದಲ್ಲಿ ನೆಲೆಯೂರಲು ಮೊದಲಾಯಿತು. ಅದರಲ್ಲೂ ಕಲಿಕೆ ಮತ್ತು ಇಂಗ್ಲಿಶ್ ಎರಡನ್ನು ಸಮಾನ ಪಾತಳಿಯಲ್ಲಿ ಇರಿಸಿ, ಈ ಎರಡರಿಂದಲೂ ಪಾರಂಪರಿಕ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಚಿಂತನೆಗಳು ಜನಪ್ರಿಯ ಆಕೃತಿಗಳಲ್ಲಿ ಮೈದಳೆದವು. ಆ ಸರಿ ಸುಮಾರಿನ ಎಷ್ಟೋ ಚಲನಚಿತ್ರಗಳು ಇಂತದ್ದೇ ವಸ್ತುವನ್ನು ಹೊಂದಿವೆ. ಇಂಗ್ಲಿಶ್ ಕಲಿತ ಮಕ್ಕಳು ತಂದೆ-ತಾಯಿಗಳನ್ನು ಕೌಟುಂಬಿಕ ಮೌಲ್ಯಗಳನ್ನು ತಿರಸ್ಕರಿಸುವ ಅಂಶವನ್ನು ಅಲ್ಲಿ ಎತ್ತಿ ಹೇಳಲಾಗುತ್ತಿತ್ತು. ಹಾಗೆ ನೋಡಿದರೆ ಈ ಅಪಾಯದ ಮುನ್ಸೂಚನೆ ಏಕೀಕರಣಪೂರ್ವದಲ್ಲೇ ಕಂಡು ಬಂದಿತ್ತು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಇಂಗ್ಲಿಶ್ ಕಲಿತ ಲಚ್ಚ ದಾರಿತಪ್ಪಿದ ಹುಡುಗನಾಗುವ ಸೂಚನೆಯನ್ನು ಶಿವರಾಮ ಕಾರಂತರು ನೀಡಿದರು. ಅದೇ ಸುಮಾರಿನಲ್ಲಿ ಕುವೆಂಪು ಇಂಗ್ಲಿಶ್ ಕಲಿತ ಹೂವಯ್ಯನನ್ನು ಸೃಷ್ಟಿಸಿದರು. ಈತ ಲಚ್ಚನಂತೆ ದಾರಿ ತಪ್ಪಿ ಹೋಗದಿದ್ದರೂ ಪಾರಂಪರಿಕ ಮೌಲ್ಯಗಳನ್ನು, ನಂಬಿಕೆಗಳನ್ನು ಧಿಕ್ಕರಿಸುತ್ತಾನೆ. ಅನಂತರದಲ್ಲೂ ಈ ಸೂಚನೆಗಳು ಮುಂದುವರೆಯುತ್ತ ಬರುತ್ತವೆ. ಇಂಗ್ಲಿಶ್ ಕಲಿತವರ ಬಗೆಗೆ ಇರುವ ಆತಂಕ ಭಯಗಳು ಸಾಂಸ್ಕೃತಿಕವಾಗಿ ಬೇರೂರುತ್ತವೆ. ಇದೇ ಭಯಗಳು ಮತ್ತೊಂದು ರೀತಿಯಲ್ಲಿ ಹೊರಬರಲು ಯತ್ನಿಸಿದ ಪ್ರಸಂಗಗಳು ಇಲ್ಲವೆಂದಲ್ಲ. ಹೀಗಾದಾಗ ಇಂಗ್ಲಿಶ್ ಮೂಲಕ ದೊರಕುವ ವೈಚಾರಿಕತೆ, ವೈಜ್ಞಾನಿಕತೆ, ವಿಚಾರವಾದ ಇವೆಲ್ಲವೂ ಪರಂಪರೆಯ ಬೇರುಗಳಿಗೆ ಕೊಡಲಿ ಪೆಟ್ಟು ಹಾಕುತ್ತವೆ ಎಂಬ ಚಿಂತನೆ ಕನ್ನಡ ಸಂಸ್ಕೃತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲೇ ದಲಿತ ಬಂಡಾಯ ಚಳುವಳಿಯು ರೂಪಿಸಿದ ತಲೆಕೆಳಗು ಮಾದರಿ ಆವಿಷ್ಕಾರಗೊಳ್ಳುತ್ತದೆ. ಇದನ್ನು ತಲೆಕೆಳಗು ಮಾದರಿ ಎಂದು ಕರೆಯಲು ಕಾರಣಗಳಿವೆ. ಇಂಗ್ಲಿಶ್ ಪರಂಪರೆಗೆ ಧಕ್ಕೆ ತರುತ್ತದೆ ಎಂಬ ಭಯ ಮೂಡಿದ್ದು ಇಡೀ ಕನ್ನಡ ಸಂಸ್ಕೃತಿಗಲ್ಲ. ಅದರೊಳಗೆ ಇರುವ ಯಜಮಾನಿಕೆಯ ಕೇಂದ್ರಗಳಿಗೆ ಮಾತ್ರ ಈ ಅಪಾಯ ತೋರತೊಡಗಿತ್ತು. ತಮ್ಮ ಅಧಿಕಾರವನ್ನು ಪ್ರಶ್ನಿಸುವ ನೆಲೆ ಗಳನ್ನು ಸಹಜವಾಗಿಯೇ ಅವರು ನಿರಾಕರಿಸಿದ್ದಾರೆ. ದಲಿತ ಬಂಡಾಯ ಚಳುವಳಿಗಳು ಈ ಅಧಿಕಾರ ಕೇಂದ್ರಗಳ ಭಯವನ್ನು ಸರಿಯಾಗಿಯೇ ಗ್ರಹಿಸಿದೆ. ಆದ್ದರಿಂದ ಯಾವುದು ಸಂಸ್ಕೃತಿಯ ಯಜಮಾನರಿಗೆ ಅಪಾಯಕಾರಿ ಎಂದು ತೋರುತ್ತದೋ ಅದೇ ಕೆಳಸ್ತರದ ಜನರಿಗೆ ಬಿಡುಗಡೆಯ ದಾರಿಯಾಗಿ ಕಾಣತೊಡಗುತ್ತದೆ. ಆ ಮೂಲಕ ಮಾತ್ರ ತಮ್ಮ ರಿಕ್ತತೆ ಮತ್ತು ಸಮೃದ್ಧತೆಗಳ ನಡುವಣ ವಿರೋಧವನ್ನು ಪರಿಹರಿಸಿಕೊಳ್ಳಲು ಸಾಧ್ಯ ಎಂಬ ನೆಲೆಗೆ ಬರುವುದು ಅನಿವಾರ್ಯವಾಗುತ್ತದೆ. ಕನ್ನಡದ ಹಂಗನ್ನು ಬಿಟ್ಟುಕೊಟ್ಟ ಹೊರತು ತಮಗೆ ಬಿಡುಗಡೆ ಇಲ್ಲ ಎನ್ನುವ ಚಿಂತನೆ ಒಟ್ಟು ಸಾಂಸ್ಕೃತಿಕ ವಿನ್ಯಾಸದಲ್ಲಿ ಬಂಡುಕೋರತನ ಎನ್ನಿಸಿದರೂ ಚಾರಿತ್ರಿಕ ಅಗತ್ಯವಾಗಿ ಅದನ್ನು ಗ್ರಹಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಅಂಶವನ್ನು ಪರಿಗಣಿಸಬೇಕು. ಕಳೆದ ಶತಮಾನದ ಕೊನೆಯ ದಶಕದಲ್ಲಿ ಇಂಗ್ಲಿಶ್ ಪ್ರಭಾವದಿಂದ ಮತ್ತು ಜಾಗತೀಕರಣದ ಅಪಾಯದಿಂದ ಕನ್ನಡಕ್ಕೆ ಕುತ್ತುಗಳು ಒದಗಿವೆ ಎನ್ನಿಸಿದಾಗ ಕನ್ನಡದ ಪ್ರಜ್ಞಾವಂತರು, ಕನ್ನಡ ಮುಂದೆ ಉಳಿಯುವುದು ದಲಿತರು ಮತ್ತು ಕೆಳಜಾತಿಯವರಲ್ಲಿ ಮಾತ್ರ; ಅವರು ಮಾತ್ರ ಕನ್ನಡವನ್ನು ಉಳಿಸಬಲ್ಲರು ಎಂದು ಹೇಳುತ್ತಿದ್ದಾರೆ. ಇದು ಮೇಲುನೋಟಕ್ಕೆ ದಲಿತರಿಗೆ ಕೆಳಜಾತಿಯವರಿಗೆ ವಹಿಸಿದ ಚಾರಿತ್ರಿಕ ಹೊಣೆಗಾರಿಕೆ ಎಂದು ತೋರುತ್ತದೆ. ಈ ಹೊಸ ಜವಾಬ್ದಾರಿಯಿಂದ ಅವರು ಉಬ್ಬುಬ್ಬಿ ತಾವು ಕನ್ನಡದ ಕಟ್ಟಾಳುಗಳು ಆಗಬೇಕು ಎಂದು ತಿಳಿಯಲು ಸಿದ್ಧರಾದರು. ವಾಸ್ತವವಾಗಿ ಈ ಹೊಣೆಗಾರಿಕೆ ಕಲ್ಪಿತವಾದುದು. ಏಕೆಂದರೆ ಆಘಾತಕ್ಕೆ ಒಳಗಾಗಿರುವ ಕನ್ನಡ, ದಲಿತರ ಮತ್ತು ಕೆಳಜಾತಿಯವರ ಕನ್ನಡವಲ್ಲ. ಅವರು ತಮ್ಮ ಕನ್ನಡವನ್ನು ಕಳೆದುಕೊಂಡು ತಮ್ಮದಲ್ಲದ ಕನ್ನಡವನ್ನು ಬಳಸಬೇಕೆಂದು ಹೇಳಿದಂತಾಗಿದೆ. ಈ ತರ್ಕ ಸಹಜವಾಗಿಯೇ ದಲಿತ ಕೆಳವರ್ಗಕ್ಕೆ ಒಪ್ಪಿತವಾಗಲಿಲ್ಲ. ಇನ್ನೂ ಒಂದು ಮುಖ್ಯ ಕಾರಣವನ್ನು ಕಂಚ ಐಲಯ್ಯ ಸೂಚಿಸಿದ್ದಾರೆ. ಭಾರತದ ಬೇರೆ ಬೇರೆ ಪ್ರದೇಶದ ಜಾತಿಗಳು ಆಳುವ ವರ್ಗವಾಗಿ ಮಾರ್ಪಟ್ಟಾಗ ತಮ್ಮ ಪ್ರಾದೇಶಿಕ ಲಕ್ಷಣಗಳನ್ನು ಮೀರಲು ಇಂಗ್ಲಿಶ್ ಅಥವಾ ಹಿಂದಿಯನ್ನು ಬಳಸಿಕೊಂಡಿವೆ. ಮೇಲ್ಜಾತಿಯ ರಾಜಕಾರಣವೆಲ್ಲ ಈ ನಿಟ್ಟಿನಲ್ಲೇ ನಡೆದಿರುವುದು. ಆದರೆ ದಲಿತರು ಕೆಳಜಾತಿಯವರು ಅಖಿಲ ಭಾರತ ವ್ಯಾಪ್ತಿಯ ಜಾತಿಗಳಾದರೂ ಅವರು ತಮ್ಮ ಸಂಪರ್ಕ ಜಾಲವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾಷೆಯೇ ಅದಕ್ಕೆ ದೊಡ್ಡ ಅಡೆ ತಡೆ. ಅಲ್ಲದೇ ಇವರು ಪ್ರಾದೇಶಿಕ ಸಂಸ್ಕೃತಿಯ ವಕ್ತಾರರು ಎಂಬ ಭ್ರಾಮಕ ಹಕ್ಕುದಾರಿಕೆಯನ್ನು ತೊರೆಯುವುದು ಆಗಿಲ್ಲ. ಐಲಯ್ಯ ಹೇಳುವಂತೆ ಈ ಇಕ್ಕಟ್ಟಿನಿಂದ ಹೊರಬರಲು ಇಂಗ್ಲಿಶ್ ಒಂದು ಅವಕಾಶವನ್ನು ನೀಡುತ್ತದೆ. ಈ ಎರಡು ಕಾರಣಗಳು ಮುಖ್ಯವಾಗುತ್ತವೆ. ಒಂದು: ಪ್ರಾದೇಶಿಕ ಭಾಷೆಯ ಹಕ್ಕುದಾರಿ ಯಿಂದ ಹಂಗಿನಿಂದ ಹೊರಬರಬೇಕು ಎನ್ನುವ ಇಚ್ಛೆ. ಎರಡು: ಅಖಿಲ ಭಾರತ ನೆಲೆಯಲ್ಲಿ ಸಂಪರ್ಕಜಾಲ ರೂಪಿಸಲು ಇಂಗ್ಲಿಶ್ ಒಂದು ಅಗತ್ಯ ಹೊರದಾರಿ ಎಂಬ ತಿಳುವಳಿಕೆ. ಇವೆರಡು ಒಟ್ಟಾಗಿ ಸೇರಿ ಇಂಗ್ಲಿಶ್ ಪರವಾದ ವಾದವೊಂದು ಈಗ ಮುಂಚೂಣಿಗೆ ಬಂದು ನಿಂತಿದೆ. ವರ್ಣಭೇದ ನೀತಿಯ ಅಂತಾರಾಷ್ಟ್ರೀಯ ಸಮ್ಮೇಳನ ನಡೆದಾಗ ಅಲ್ಲಿ ಭಾರತವನ್ನು ಪ್ರತಿನಿಧಿಸಿದ ದಲಿತರು ವರ್ಣಭೇದ ಮತ್ತು ಅಸ್ಪೃಶ್ಯತೆಗಳನ್ನು ಸಮೀಕರಿಸಲು ಯತ್ನಿಸಿದರು. ಈ ಪ್ರಯತ್ನಕ್ಕೆ ಭಾರತದ ಆಳುವ ಸಮುದಾಯ ತನ್ನ ಸಮ್ಮತಿ ನೀಡಿಲ್ಲ. ಆದರೆ ಕೆಳಸ್ತರದ ಸಮುದಾಯಕ್ಕೆ ಅಂತಾರಾಷ್ಟ್ರೀಯ ಸಂವಾದ ಆರಂಭಗೊಂಡಿರುವ ಸಂದರ್ಭದಲ್ಲಿ ಇಂಗ್ಲಿಶಿಗೆ ಈವರೆಗೆ ಇರದಿದ್ದ ಮಹತ್ವ ಒದಗಿ ಬಂದಿದೆ.

ಇದಕ್ಕೆ ಇಂಗ್ಲಿಶ್ ಭಾಷೆಯ ಸ್ವರೂಪದಲ್ಲೂ ಆಗಿರುವ ಬದಲಾವಣೆಗಳು ಮುಖ್ಯವಾಗಿವೆ. ಜಾಗತಿಕವಾಗಿ ಲಭ್ಯವಿರುವ ಮಾಹಿತಿಯ ಪ್ರಕಾರ ಇಂಗ್ಲಿಶ್ ಭಾಷೆ ಯನ್ನು ಕಲಿಯುವವರು ಮೂರು ಗುಂಪುಗಳಲ್ಲಿ ಇದ್ದಾರೆ. ಮೊದಲ ಭಾಷೆ ಯಾಗಿ ಕಲಿಯುವವರು ಒಂದು ಗುಂಪು. ವಸಾಹತು ಆಡಳಿತದ ಸಂದರ್ಭದಲ್ಲಿ ಇಂಗ್ಲಿಶನ್ನು ಕಲಿಯಬೇಕಾಗಿ ಬಂದು ವಸಾಹತೋತ್ತರ ಕಾಲದಲ್ಲೂ ಅದರ ಕಲಿಕೆಯನ್ನು ಮುಂದುವರೆಸಿರುವವರು ಇನ್ನೊಂದು ಗುಂಪು. ಜಾಗತಿಕ ವ್ಯವಹಾರ ಗಳಿಗಾಗಿ ಈಗ ಹೊಸದಾಗಿ ಇಂಗ್ಲಿಶನ್ನು ಕಲಿಯುತ್ತಿರುವವರದು ಮೂರನೆಯ ಗುಂಪು. ಸಂಖ್ಯಾದೃಷ್ಟಿಯಿಂದ ಎರಡನೇ ಗುಂಪಿನವರು ಅತ್ಯಧಿಕವಾಗಿದ್ದಾರೆ. ಎಂದರೆ ಇಂಗ್ಲಿಶನ್ನು ಎರಡನೆಯ ಭಾಷೆಯಾಗಿ ಕಲಿಯುತ್ತಿರುವ ಜನರು ಇವರು. ಇವರ ಸಾಂಸ್ಕೃತಿಕ ಸ್ವರೂಪದಿಂದ ಇಂಗ್ಲಿಶ್ ಭಾಷೆ ಈಗ ತನ್ನ ಲಕ್ಷಣಗಳನ್ನು ಬದಲಾಯಿಸಿಕೊಳ್ಳತೊಡಗಿದೆ. ಇದು ಪೂರ್ಣವಾಗಿ ಸಂಪರ್ಕ ಭಾಷೆಯಾಗಿ ಪರಿವರ್ತನೆ ಆಗಿಲ್ಲವಾದರೂ ಮೊದಲಿನ ಯಾಜಮಾನ್ಯದ ಅಂಶಗಳು ಕಡಿಮೆ ಯಾಗಿವೆ. ಈ ಲಕ್ಷಣ ಪರಿವರ್ತನೆಯಿಂದ ಕೂಡ ಇಂಗ್ಲಿಶನ್ನು ಕರ್ನಾಟಕದ ದಲಿತ ಕೆಳವರ್ಗ ಒಂದು ಹೊರದಾರಿಯನ್ನಾಗಿ ಪರಿಗಣಿಸತೊಡಗಿದೆ. ಭಾಷಾ ದ್ವಿಸ್ತರತೆಯ ಸಂದರ್ಭವೊಂದು ಚಾರಿತ್ರಿಕ ವಿನ್ಯಾಸದಲ್ಲಿ ಈ ಬದಲಾವಣೆಯನ್ನು ಹೊಂದಿರುವುದು ಇನ್ನಷ್ಟು ಅಭ್ಯಾಸಯೋಗ್ಯವಾಗಿದೆ.

ಇದಕ್ಕೆ ಪೂರಕವಾದ ಮತ್ತೊಂದು ಕಾರಣವನ್ನು ಇಲ್ಲಿ ವಿವರಿಸಬೇಕಾಗಿದೆ. ಭಾಷಾ ದ್ವಿಸ್ತರತೆಯ ಸಂದರ್ಭದಲ್ಲಿ ಸಂಸ್ಕೃತ ಮತ್ತು ಕನ್ನಡ ಇವುಗಳ ಸಂಬಂಧ ಬಹು ಹಿಂದಿನಿಂದಲೂ ಕರ್ನಾಟಕದಲ್ಲಿ ಒಂದು ಪ್ರಶ್ನೆಯಾಗಿದೆ. ವೈಯಾಕರಣರು ರೂಪಿಸಿದ ನಿಯಮಗಳಿರಲಿ; ಕವಿಗಳು ಕನ್ನಡ ಸಂಸ್ಕೃತಗಳ ಬೆರಕೆಯನ್ನು ಕುರಿತು ಹೇಳಿದ ಹೋಲಿಕೆಗಳಾಗಲಿ ಈ ವಿವಾದವನ್ನು ಸ್ಪಷ್ಟಪಡಿಸುತ್ತವೆ. ಕನ್ನಡದಲ್ಲಿ ಸಂಸ್ಕೃತ ಬೆರೆಯುವುದು ಮುತ್ತು-ಮೆಣಸು ಸೇರಿದಂತೆ, ತುಪ್ಪ-ಎಣ್ಣೆ ಸೇರಿದಂತೆ ಎಂದೆಲ್ಲ ಬಣ್ಣಿಸಿರುವುದು ಗಮನಾರ್ಹ. ಈ ಬೆರೆಯುವಿಕೆಗೆ ಆದರ್ಶ ಸ್ಥಿತಿಯನ್ನು ರೂಪಿಸಲು ಯತ್ನಿಸಿದ್ದಾರೆ. ಆದರೆ ಬಹುಮಟ್ಟಿಗೆ ಈ ಬೆರೆಯುವಿಕೆಗೆ ಅಷ್ಟು ಸಹ್ಯವಲ್ಲದ ಪ್ರತಿಕ್ರಿಯೆಯೇ ಇದ್ದಂತೆ ತೋರುತ್ತದೆ. ೧೯ನೇ ಶತಮಾನದ ಕೊನೆಯವರೆಗೂ ಇದೇ ಅಭಿಪ್ರಾಯ ಬಲವಾಗಿದೆ. ಸಂಸ್ಕೃತಮಯ ಕನ್ನಡ ನೀರು ಕುಡಿಯಲು ಕಷ್ಟಪಡುವ ಗಂಟಲಿನಲ್ಲಿ ಕಡುಬನ್ನು ತುರುಕಿದಂತೆ ಎಂದು ಮುದ್ದಣ ಹೇಳಿದನು. ಆದರೆ ಚಾರಿತ್ರಿಕ ವಿನ್ಯಾಸಗಳಿಂದಾಗಿ ೨೦ನೇ ಶತಮಾನದ ಉತ್ತರಾರ್ಧದಲ್ಲಿ ಸಂಸ್ಕೃತ ಭಾಷೆಯ ಮರುಸ್ಥಾಪನೆ ಆಗುವುದನ್ನು ನೋಡುತ್ತೇವೆ. ಕನ್ನಡ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳಲು ಸಂಸ್ಕೃತದ ನೆರವನ್ನು ಪಡೆಯುತ್ತ್ತ ಹೋದದ್ದು ಸ್ಪಷ್ಟ. ಇದರಿಂದ ಶುದ್ಧಕನ್ನಡವೆಂದರೆ ಸಂಸ್ಕೃತಮಯ ಕನ್ನಡ ಎನ್ನುವ ತರ್ಕ ನೆಲೆಗೊಳ್ಳುತ್ತದೆ. ಏಕೀಕರಣಪೂರ್ವದಲ್ಲಿ ತೀ.ನಂ ಶ್ರೀಕಂಠಯ್ಯ ನವರು ಬರೆದ ಕಾಸಿನ ಸಂಘ ಎಂಬ ಪ್ರಬಂಧದಲ್ಲಿ ಹಾಸ್ಯಮಯ ಘಟನೆಗಳು ನಿರೂಪಿತವಾಗಿವೆ. ಕನ್ನಡ ಮಾತನಾಡುವಾಗ ಇಂಗ್ಲಿಶ್ ಭಾಷೆಯ ಪದಗಳನ್ನು ಬೆರೆಸಬಾರದೆಂದು ಶಪಥ ಮಾಡಿದ ಅಧ್ಯಾಪಕರು ಎದುರಿಸಿದ ಬಿಕ್ಕಟ್ಟನ್ನು ಅಲ್ಲಿ ಬಣ್ಣಿಸಿದ್ದಾರೆ. ಅಚ್ಚರಿ ಎಂದರೆ ಈ ಅಧ್ಯಾಪಕರಿಗೆ ಇಂಗ್ಲಿಶ್ ಬೆರೆತ ಕನ್ನಡ ಇಷ್ಟವಾಗದಿದ್ದರೂ ಸಂಸ್ಕೃತ ಬೆರೆತ ಕನ್ನಡ ಒಪ್ಪಿಗೆಯಾಗುತ್ತದೆ. ಈ ದೃಷ್ಟಿಕೋನ ಕನ್ನಡ ಮನಸ್ಸಿನಲ್ಲಿ ಒಂದು ನೆಲೆನಿಂತ ದೃಷ್ಟಿಕೋನವಾಗಿ ಕಾಣುತ್ತಿದೆ. ಇಂದಿಗೂ ಈ ನಿಲುವನ್ನು ದೃಢವಾಗಿ ಸಮರ್ಥಿಸುವವರು ಇದ್ದಾರೆ. ಆದರೆ ಸಂಸ್ಕೃತಮಯವಾದ ಕನ್ನಡ ಲಿಖಿತ ನಿರೂಪಣೆಗಳ ವ್ಯಾಪ್ತಿಯಲ್ಲಿ ಮೆರೆದರೂ ಮಾತಿನ ನಿರೂಪಣೆಗಳಲ್ಲಿ ಅದಕ್ಕೆ ಅವಕಾಶ ಕಡಿಮೆ, ಲಿಖಿತ ನಿರೂಪಣೆಗಳನ್ನು ಈ ಭಾಷಾಶೈಲಿ ಒಂದು ಅತಿರೇಕದಲ್ಲಿ ಜನರನ್ನು ದೂರವಿರಿಸುವ ಪ್ರಯತ್ನವಾಗಿ ತೋರುತ್ತದೆ. ಅಲ್ಲದೇ ಆ ಶೈಲಿಯಲ್ಲಿ ಸಂಸ್ಕೃತಕ್ಕೆ ಆರೋಪಿಸಿಲಾದ ಪಾವಿತ್ರ್ಯ ನುಂಗಲಾರದ ತುತ್ತಾಗುತ್ತದೆ. ಕನ್ನಡ ಪದಗಳ ಬರವಣಿಗೆಯಲ್ಲಿ ಪರ್ಯಾಯ ರೂಪಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವವರು ಸಂಸ್ಕೃತದ ಕಾಗುಣಿತದಲ್ಲಿ ಕೊಂಚ ತಪ್ಪಾದರೂ ಅದು ಪಾವಿತ್ರ್ಯ ನಾಶ ಎಂದೇ ಭಾವಿಸಿದರು. ಈ ದ್ವಿಸ್ತರತೆಯ ಇಕ್ಕಟ್ಟಿನಿಂದ ಹೊರಬರಲು ಹಲವು ದಾರಿಗಳು ಇದ್ದವು. ಒಂದು: ಕನ್ನಡದ ಪದಕೋಶವನ್ನು ಮರಳಿ ನೆಲೆಗೊಳಿಸುವುದು. ಎರಡು: ಸಂಸ್ಕೃತ ಪದಗಳ ಕಾಗುಣಿತಕ್ಕೆ ಮೊದಲ ಮಣೆ ಹಾಕದೇ ಬಳಸುವುದು. ಮೂರು: ಸಂಸ್ಕೃತದ ಬದಲು ಪಾವಿತ್ರ್ಯದ ಅಂಟಿಲ್ಲದೆ ಮತ್ತೊಂದು ಭಾಷೆಯನ್ನು ಬಳಸುವುದು. ಕುತೂಹಲಕ್ಕಾಗಿ ಕನ್ನಡ ಸಮಾಜದ ಜನರು ಕಳೆದ ಐವತ್ತು ವರ್ಷದಲ್ಲಿ ಮುದ್ರಿಸಿದ ಮದುವೆಯ ಆಹ್ವಾನ ಪತ್ರಿಕೆಗಳನ್ನು ಗಮನಿಸಬಹುದು. ಕನ್ನಡ ಮತ್ತು ಇಂಗ್ಲಿಶ್‌ನಲ್ಲಿ ಜೊತೆಯಾಗಿ ಮುದ್ರಿಸುವ ಪರಿಪಾಟ ಹೆಚ್ಚಿದೆ. ಇಲ್ಲವೇ ಇಂಗ್ಲಿಶಿನಲ್ಲೇ ಮಾತ್ರ ಮುದ್ರಿಸಲಾಗುತ್ತದೆ. ಕನ್ನಡ ಭಾಗದ ಪಾಠ ಪೂರ್ಣವಾಗಿ ಸಂಸ್ಕೃತಮಯ. ಅಲ್ಲೊಂದು ಶ್ಲೋಕ, ಬಳಸುವ ಪದಗಳು, ಪಾವಿತ್ರ್ಯದ ಸೂಚನೆ ನೀಡುವ ಪದಗಳು ಎಷ್ಟೇ ಔಪಚಾರಿಕವಾಗಿ ಕಂಡರೂ ಈ ಕರೆಯೋಲೆಗಳು ಏಕೆ ಇಂಗ್ಲಿಶಿಗೆ ಬರುಬರುತ್ತಾ ವರ್ಗಾವಣೆಯಾದವು ಎನ್ನುವುದು ಕುತೂಹಲಕಾರಿ. ಎಷ್ಟೋ ವೇಳೆ ಆ ಮದುವೆಗೆ ಸಂಬಂಧಿಸಿದ ಕುಟುಂಬದವರು ಯಾರೂ ಆ ಇಂಗ್ಲಿಶ್ ಒಕ್ಕಣೆಗೆ ಕಾರಣರಾಗಿರುವುದಿಲ್ಲ. ಆದರೂ ಇಂಗ್ಲಿಶಿಗೆ ಗಂಟು ಬೀಳುತ್ತಾರೆ. ಇದು ಒಂದು ಕಡೆ ಆಧುನಿಕತೆಯ ಸೂಚಕವಾದರೆ ಇನ್ನೊಂದು ಕಡೆ ಹೆಚ್ಚುಧರ್ಮ ನಿರಪೇಕ್ಷ ಆಗಬೇಕೆಂಬ ಸೂಚನೆಯೂ ಇದ್ದೀತು. ಬಹುಶಃ ಈ ತರ್ಕವನ್ನು ವಿಸ್ತರಿಸಿದರೆ ಸಹಜವಾಗಿಯೇ ಸಂಸ್ಕೃತದ ಸ್ಥಾನ ಬದಲಾಗಿ ಇಂಗ್ಲಿಶಿಗೆ ಆ ಅವಕಾಶ ದೊರಕುತ್ತದೆ. ನಾವು ಈವರೆಗೆ ಚರ್ಚಿ ಸುತ್ತಿದ್ದ ಪ್ರಸಂಗದಲ್ಲಿ ಭಾಷಾ ದ್ವಿಸ್ತರತೆಯ ಸನ್ನಿವೇಶವನ್ನು ಭಾಷಿಕ ಸಮುದಾಯಗಳು ಒಪ್ಪಿ ಆಚರಿಸುವ ಬದಲಾಗಿ ಅದನ್ನು ನಿರಾಕರಿಸುವ ಇಲ್ಲವೇ ಮರಳಿ ಮರುರೂಪಿ ಸುವ ಪ್ರಯತ್ನವನ್ನು ಮಾಡಿದನ್ನು ಗಮನಿಸುತ್ತೇವೆ. ಸಂಸ್ಕೃತ, ಕನ್ನಡ ಈ ದ್ವಿಸ್ತರತೆಯ ಇಕ್ಕಟ್ಟನ್ನು ಮುರಿಯಲು ಯತ್ನಗಳು ಈ ನೆಲೆಯಲ್ಲಿ ಮೊದಲಾಗಿವೆ. ಸಂಸ್ಕೃತವನ್ನು ಕನ್ನಡದ ಸಾಧ್ಯತೆಯ ವಿಸ್ತರಣೆಗೆ ಬಳಸಬಹುದಾದರೆ ಅದೇ ಕಾರಣಕ್ಕೆ ಇಂಗ್ಲಿಶನ್ನು ಬಳಸಬಹುದಾಗಿದೆ. ಆದರೆಬದಲಾದ ಚಾರಿತ್ರಿಕ ಸಂದರ್ಭದಲ್ಲಿ ಸಂಸ್ಕೃತಕ್ಕೆ ಸೇರಿದ ಪಾವಿತ್ರ್ಯದ ನಂಟು ಇಂಗ್ಲಿಶಿಗೆ ಇಲ್ಲ. ಬದಲಿಗೆ ಅದು ಆಧುನಿಕತೆಯ ಚಹರೆಯನ್ನು ಭಾಷಾ ಬಳಕೆದಾರರಿಗೆ ದೊರಕಿಸಿಕೊಡುತ್ತದೆ.

ಸಂಸ್ಕೃತದ ಸ್ಥಾನ ಹೆಚ್ಚು ಸಂಕೀರ್ಣವಾದುದು. ಏಕೀಕರಣ ಪೂರ್ವದಲ್ಲಿ ಓರಿಯಂಟಲಿಸ್ಟರು ಭಾರತಶಾಸ್ತ್ರವನ್ನು ಕಟ್ಟುವಾಗ ಅದಕ್ಕೆ ಮೂಲ ಆಕರವಾಗಿ ಸಂಸ್ಕೃತ ಭಾಷೆಯ ಗ್ರಂಥ ಸಮುದಾಯವನ್ನು ಬೆಳೆಸಿಕೊಂಡರು. ಭಾರತ ಮತ್ತು ಸಂಸ್ಕೃತ ಎರಡು ಸಮಾನವಾಚಿಗಳಾದವು. ಕನ್ನಡದಲ್ಲೂ ಈ ಚಿಂತನೆ ಬಲವಾಗಿ ಬೇರೂರಿತ್ತು. ಸಂಸ್ಕೃತ ಕಾವ್ಯಮೀಮಾಂಸೆಯನ್ನು ಭಾರತೀಯ ಕಾವ್ಯಮೀಮಾಂಸೆ ಎಂದೆವು. ಸಂಸ್ಕೃತ ಭಾಷೆಯ ವ್ಯಾಕರಣದ ಚೌಕಟ್ಟನ್ನು ಕನ್ನಡ ಭಾಷೆಗೆ ಅನ್ವಯಿಸಿದ್ದೆವು. ಬಹು ಮುಖ್ಯವಾದ ಎಲ್ಲ ಚರ್ಚೆಗಳಲ್ಲೂ ಹೀಗೆ ಸಂಸ್ಕೃತವನ್ನು ದೇಶವ್ಯಾಪಿ ಚಿಂತನೆಗೆ ಸೂಚಕವನ್ನಾಗಿ ಮಾಡಿಕೊಂಡೆವು. ಏಕೀಕರಣದ ಅನಂತರದಲ್ಲಿ ಕನ್ನಡ ಭಾಷೆಯಲ್ಲಿ ಸೃಷ್ಟಿಯಾದ ಚಿಂತನಾ ಸಾಹಿತ್ಯ ಈ ಕಾರಣಗಳಿಂದಾಗಿ ಹೆಚ್ಚು ಸಂಸ್ಕೃತಮಯವಾಯಿತು. ಅದರಲ್ಲೂ ಸಂಸ್ಕೃತದಿಂದಲೇ ಕನ್ನಡಕ್ಕೆ ಅನುವಾದಗೊಂಡ ಕೃತಿಗಳಲ್ಲಿ ಆ ಪದಗಳನ್ನು ಯಥಾನುಕ್ರಮದಲ್ಲಿ ಉಳಿಸಿಕೊಳ್ಳಲಾಯಿತು. ಇಂಗ್ಲಿಶ್ ಭಾಷೆಯಿಂದ ಅನುವಾದಿಸುವಾಗಲೂ ಸಂಸ್ಕೃತದ ಪದಕೋಶದ ಮೊರೆ ಹೋಗಲಾಯಿತು. ಮಾಧ್ಯಮಗಳ ನವಪದ ಸೃಷ್ಟಿಯಲ್ಲೂ ಹೀಗೆಯೇ ಸಂಸ್ಕೃತದ ಪ್ರವೇಶ ಹೆಚ್ಚಿತ್ತು. ೧೯೬೮ರಲ್ಲಿ ಪ್ರಕಟಣೆ ಮೊದಲು ಮಾಡಿದ ಕನ್ನಡಪ್ರಭ ಪತ್ರಿಕೆಯ ಹೆಸರನ್ನು ಕುರಿತು ನಡೆದ ಚರ್ಚೆಯನ್ನು ಇಲ್ಲಿ ನೆನಪಿಗೆ ತಂದುಕೊಳ್ಳಬಹುದು. ಆ ಪತ್ರಿಕೆಯ ಮಾಲೀಕರು ಆಂಧ್ರಪ್ರಭ ಮಾದರಿಯಲ್ಲಿ ಕನ್ನಡಪ್ರಭ ಸೃಷ್ಟಿಸಿದರು. ಆದರೆ ನಮ್ಮ ಚರ್ಚೆ ಇದ್ದದ್ದು ಆ ಪದ ರೂಪ ಪ್ರಭಾ, ಪ್ರಭ ಇಲ್ಲವೇ ಪ್ರಭೆ ಈ ಮೂರರಲ್ಲಿ ಯಾವುದು ಸರಿ ಎಂಬ ಕಡೆಗೆ ಇತ್ತು. ಇದು ಒಂದು ಸೂಚನೆ ಮಾತ್ರ. ಇಂತಹ ಪ್ರಯತ್ನಗಳು ಮೇಲಿಂದ ಮೇಲೆ ನಡೆಯುತ್ತಲೇ ಬಂದವು. ಮೇಲು ನೋಟಕ್ಕೆ ಇದು ಭಾಷೆಗಳ ಸಂಬಂಧದಂತೆ ತೋರಿದರೂ ಒಳಗೆ ನಮ್ಮ ಕನ್ನಡ ಸಮಾಜ ರಚನೆಯ ಕೆಲವು ವಿರೋಧಗಳು ಅಡಕಗೊಂಡಿದ್ದವು. ಭಾಷೆಯನ್ನು ಹೀಗೆ ಸಂಸ್ಕೃತದ ಚೌಕಟ್ಟಿಗೆ ಸಿಲುಕಿಸುವ ಪ್ರಯತ್ನ ಮೂಲಭೂತವಾಗಿ ಪುರೋಹಿತ ಶಾಹಿ ಪ್ರೇರಣೆಯನ್ನು ಪಡೆದಿತ್ತು. ಇದು ಹಲವು ರೀತಿಗಳಲ್ಲಿ ವ್ಯಕ್ತವಾಗುವ ಅಂಶ. ಆದರೆ ನಾವೀಗ ಗಮನಿಸಿದಂತೆ ಎಂಟನೇ ದಶಕದಿಂದ ಆದ ಸಾಮಾಜಿಕ ಚಿಂತನೆಗಳ ಪಲ್ಲಟದಿಂದ ಈ ಪುರೋಹಿತಶಾಹಿ ಪ್ರೇರಣೆಗಳನ್ನು ನಿರಾಕರಿಸುವ, ಪ್ರತಿಭಟಿಸುವ ಪ್ರಯತ್ನಗಳು ಮೊದಲಾದವು. ದಲಿತ ಬಂಡಾಯ ಚಳುವಳಿಗಳ ಸಾಮಾಜಿಕ ಪ್ರಣಾಳಿಗಳು ಏನೇ ಇರಲಿ; ಭಾಷಿಕವಾಗಿ ಅವು ಸಂಸ್ಕೃತದ ಯಜಮಾನಿಕೆಯನ್ನು ಪಾವಿತ್ರ್ಯ ಪರಿವೇಶವನ್ನು ನಿರಾಕರಿಸಿದವು ಮತ್ತು ಪರ್ಯಾಯವಾಗಿ ಇಂಗ್ಲಿಶನ್ನು  ಒಂದು ಹೊರದಾರಿಯನ್ನಾಗಿ ಪರಿಗಣಿಸಿದ್ದವು. ಈ ಇಂಗ್ಲಿಶ್ ಕುರಿತ ಪರಿಭಾವನೆ ಪರೋಕ್ಷವಾಗಿ ಕನ್ನಡ ಸಂಸ್ಕೃತಿಯ ಒಳಗಿದ್ದ ಯಜಮಾನಿಕೆಗೂ ಆಘಾತ ನೀಡುವಂತಿದೆ ಎನ್ನುವುದು ಗಮನಿಸಬೇಕಾದ ಮಾತು.