ಭಾಷಾ ಯೋಜನೆಯ ಚರ್ಚೆ ಮಾಡುವಾಗ ಪ್ರಮಾಣೀಕರಣದ ಮಾತು ಬಂದಿದೆ. ಇದು ವ್ಯವಸ್ಥಿತ ಕ್ರಮದ ಮೂಲಕ ಭಾಷೆಯಲ್ಲಿರುವ ವಿಕಲ್ಪಗಳನ್ನು, ಪರ್ಯಾಯಗಳನ್ನು ಕಡಿಮೆ ಮಾಡಿ ಯಾವುದಾದರೊಂದು ರೂಪ ಅಧಿಕೃತವೆಂದು ನಿರ್ಧರಿಸುವ ಪ್ರಕ್ರಿಯೆ. ಭಾಷಾ ಯೋಜನೆಯಲ್ಲಿ ಸರ್ಕಾರ ನೇರವಾಗಿ ಪಾತ್ರ ವಹಿಸುತ್ತದೆ. ಜೊತೆಗೆ ತಾನು ರೂಪಿಸಿದ ಅಥವಾ ಪ್ರೋತ್ಸಾಹಿಸಿದ ಸಾರ್ವಜನಿಕ ಸಂಸ್ಥೆಗಳ ಮೂಲಕ ಅದನ್ನು ನಿರ್ಣಯಿಸಿ ಜಾರಿಗೆಕೊಡುತ್ತದೆ. ಕರ್ನಾಟಕದ ಏಕೀಕರಣದ ಪೂರ್ವದಲ್ಲಿಯೂ ಪ್ರಮಾಣೀಕರಣದ ಪ್ರಯತ್ನಗಳು ನಡೆದಿದ್ದವು. ಮುದ್ರಣದ ಅವಿಷ್ಕಾರದ ಅನಂತರದಲ್ಲಿ ಈ ಪ್ರಕ್ರಿಯೆಯ ವ್ಯಾಪ್ತಿ ವಿಸ್ತಾರವಾಗ ತೊಡಗಿತ್ತು. ಏಕೀಕರಣದ ಹೊತ್ತಿನಲ್ಲಿ ಪ್ರಮಾಣೀಕರಣವು ಮುಖ್ಯವಾಗಿ ಸಾರ್ವಜನಿಕ ವೇದಿಕೆಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಹೊಣೆಯಾಗಿ ಇತ್ತೆಂದು ಸ್ಥೂಲವಾಗಿ ಹೇಳಬಹುದು. ಕನ್ನಡ ಪರಂಪರೆಯ ಲಕ್ಷಣಗಳನ್ನು ಕಟ್ಟಿಕೊಡಲು ಇಂತಹ ಕೆಲವು ವೇದಿಕೆಗಳು ಆ ವೇಳೆಗೆ ಕೆಲಸ ಆರಂಭಿಸಿದ್ದವು. ಕರ್ನಾಟಕದ ಶಾಸನ ಸಂಪುಟಗಳ ಪ್ರಕಟಣೆ, ಕನ್ನಡ ಇಂಗ್ಲಿಶ್ ನಿಘಂಟಿನ ಪ್ರಕಟಣೆ, ಶಾಲಾ ವ್ಯಾಕರಣಗಳ ಸಿದ್ಧತೆ ಇವೇ ಮುಂತಾದ ನೆಲೆಗಳಲ್ಲಿ ಚಟುವಟಿಕೆಗಳುನಡೆದಿದ್ದವು. ದೇಶಿಯ ವಿದ್ವಾಂಸರು ಮತ್ತು ಅವರ ನೆರವಿನೊಡನೆ ಪಾಶ್ಚಾತ್ಯ ಮಿಷನರಿಗಳು ಈ ಕೆಲಸದಲ್ಲಿ ತೊಡಗಿಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣ ಪೂರ್ವದಲ್ಲಿಯೇ ಕನ್ನಡಕ್ಕೊಂದು ಚಾರಿತ್ರಿಕ ನಿಘಂಟಿನ ಅಗತ್ಯವಿರುವುದನ್ನು ಗಮನಿಸಿ ಆ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನಿಘಂಟು ರಚನೆಗೆ ಆ ಹೊತ್ತಿಗೆ ಪ್ರಖ್ಯಾತವಾಗಿದ್ದ ಆಕ್ಸ್‌ಫರ್ಡ್ ಇಂಗ್ಲಿಶ್ ಡಿಕ್ಷನರಿಯ ಮಾದರಿಯನ್ನು ಪರಿಷತ್ತಿನ ನಿಘಂಟು ಕೂಡ ಅನುಸರಿಸಿದಂತಿದೆ. ಈ ನಿಘಂಟನ್ನು ರಚಿಸಲು ಕನ್ನಡ ಲಿಖಿತ ಸಾಹಿತ್ಯದ ಮತ್ತು ಬರವಣಿಗೆಯ ದಾಖಲೆಗಳನ್ನು ಆಕರವಾಗಿ ಬೆಳಸಿಕೊಳ್ಳಲಾಗುತ್ತಿತ್ತು. ಏಕೀಕರಣದ ಹೊತ್ತಿಗೆ ಈ ನಿಘಂಟಿನ ಮೊದಲ ಸಂಪುಟ ಪ್ರಕಟಣೆಗೆ ಸಿದ್ಧವಿರಲಿಲ್ಲ. ಅದರ ಸಂಪಾದಕ ಮಂಡಳಿಯು ಹೆಚ್ಚು ವಿಸ್ತೃತವಾದ ಪ್ರಾತಿನಿಧ್ಯವನ್ನು ಪಡೆದುಕೊಳ್ಳಬೇಕಾದ ಅಗತ್ಯ ಕಂಡುಬಂದಿತ್ತು.

ಏಕೀಕರಣದ ನಂತರ ಪ್ರಮಾಣೀಕರಣಕ್ಕಾಗಿ ಸರ್ಕಾರದ ಕಡೆಯಿಂದ ಯಾವ ವ್ಯವಸ್ಥಿತ ಪ್ರಯತ್ನವೂ ಮೊದಲಾಗಲಿಲ್ಲ. ಆದರೆ ಆಗ ಕಾರ್ಯ ನಿರ್ವಹಿಸುತ್ತಿದ್ದ ಸಾಹಿತ್ಯ ಸಂಸ್ಕೃತಿ ನಿರ್ದೇಶನಾಲಯವು ಕನ್ನಡ ಪರಂಪರೆಯ ಪ್ರಮುಖ ದಾಖಲೆಗಳನ್ನು ಕನ್ನಡಿಗರಿಗೆ ಒದಗಿಸುವ ಯತ್ನದಲ್ಲಿ ತೊಡಗಿತ್ತು. ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ, ವಚನಗಳ ಸಂಪುಟ ಇವೇ ಮುಂತಾದ ಪ್ರಕಟಣೆಗಳ ಮೂಲಕ ಕನ್ನಡ ಸಂಸ್ಕೃತಿಯ ಲಕ್ಷಣಗಳನ್ನು ವ್ಯಾಖ್ಯಾನಿಸುವಲ್ಲಿ ನಿರತವಾಗಿತ್ತು. ಇದರಾಚೆಗೆ ಕನ್ನಡದ ಪ್ರಮಾಣೀಕರಣ ನೆಲೆಗಳನ್ನು ಕಂಡುಕೊಳ್ಳಲು ಇಲ್ಲವೇ ಜಾರಿಗೆ ಕೊಡಲು ಸರ್ಕಾರ ಆಸಕ್ತವಾಗಿದ್ದಂತೆ ತೋರಲಿಲ್ಲ.

ಪ್ರಮಾಣೀಕರಣದ ಮೊದಲ ವ್ಯವಸ್ಥಿತ ಪ್ರಯತ್ನವೆಂದರೆ ಅಖಿಲ ಕರ್ನಾಟಕ ವ್ಯಾಪ್ತಿಯ ಶಾಲಾ ಪಠ್ಯವಸ್ತವನ್ನು ಮತ್ತು ಪಠ್ಯಕ್ರಮವನ್ನು ಇಡೀ ಕರ್ನಾಟಕ ಏಕರೂಪಿಯಾಗಿರುವಂತೆ ನಿರ್ಧರಿಸಲು ಕೈಗೊಂಡ ಕ್ರಮ. ಇದರ ಉಪಯುಕ್ತತೆ ಏನೇ ಇರಲಿ. ಅದರ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ.

ಶಾಲೆಯ ಪಠ್ಯಗಳನ್ನು ಏಕರೂಪಿ ಮಾದರಿಯಲ್ಲಿ ರೂಪಿಸಲು ಮನಸ್ಸು ಮಾಡಿದಾಗ ಸರ್ಕಾರ ಸ್ಪಷ್ಟವಾಗಿ ಆಯ್ಕೆಗಳನ್ನು ಮಾಡಬೇಕಾಗಿ ಬಂತು. ಈ ಆಯ್ಕೆಗಳು ಕೆಲವೊಮ್ಮೆ ಸಾಮಾಜಿಕ ಒತ್ತಡಗಳಿಂದಲೂ ರೂಪುಗೊಂಡಿರುವುದು ಸಾಧ್ಯ. ಏಕೆಂದರೆ ಕನ್ನಡದ ಹತ್ತಾರು ಪ್ರಭೇದಗಳಲ್ಲಿ ಕೆಲವನ್ನು ಮಾತ್ರ ಪ್ರಮಾಣ ಭಾಷೆಯ ಮಾದರಿಯನ್ನಾಗಿ ಆಯ್ಕೆ ಮಾಡಿಕೊಂಡದ್ದು ಒಂದು ವಿಪರ್ಯಾಸ. ಕನ್ನಡದ ಈ ಪ್ರಭೇದ ವ್ಯತ್ಯಾಸಗಳಲ್ಲಿ ಮೊದಮೊದಲು ಭಿನ್ನತೆ ಮಾತ್ರ ಕಂಡುಬರುತ್ತಿದ್ದರೆ ಈ ಆಯ್ಕೆಗಳಿಂದಾಗಿ ತರತಮ ಭಾವವು ತಲೆಹಾಕತೊಡಗಿತ್ತು. ಉತ್ತಮ, ಸ್ವೀಕಾರಾರ್ಹ ಎಂಬ ಸೂಚನೆಯನ್ನು ಬಹಿರಂಗವಾಗಿ ನೀಡದಿದ್ದರೂ ಚಾಲನೆಗೊಂಡ ಪ್ರಕ್ರಿಯೆಯಲ್ಲಿ ಈ ಎಲ್ಲ್ಲ ಅಂಶಗಳು ಗಮನಕ್ಕೆ ಬರುವಂತಿದ್ದವು.

ಪ್ರಮಾಣೀಕರಣ ಎಂದಾಗ ಅದನ್ನು ಶಿಷ್ಟೀಕರಣ ಎಂದು ಸಮೀಕರಿಸಿಬಿಡಲಾಗು ತ್ತದೆ. ಕನ್ನಡದಲ್ಲಿ ಇವೆರಡು ಒಂದೇ ಎನ್ನಿಸಿಬಿಟ್ಟಿರುವುದು ಒಂದು ವಿಪರ್ಯಾಸ ಅಥವಾ ನಮ್ಮ ಸಾಮಾಜಿಕ ರಚನೆಯ ಲಕ್ಷಣಗಳನ್ನು ಅದು ತೋರಿಸುತ್ತಿರಬಹುದು. ಏಕೆಂದರೆ ಶಿಷ್ಟೀಕರಣದಲ್ಲಿ ಸ್ಪಷ್ಟವಾಗಿ ಸಾಮಾಜಿಕ ಉನ್ನತ ಸ್ತರಕ್ಕೆ ಮತ್ತು ಅದರ ನಡವಳಿಕೆಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಬೇರೆ ಒಂದು ಸಂದರ್ಭದಲ್ಲಿ ಸಮಾಜ ಶಾಸ್ತ್ರಜ್ಞ ಡಾ.ಎಂ.ಎನ್.ಶ್ರೀನಿವಾಸ್ ಅವರು ಪ್ರಸ್ತುತಪಡಿಸಿದ ಸ್ಯಾನ್‌ಸ್ಕ್ರಿಟೈಸೇಶನ್ (ಸಂಸ್ಕೃತಾನುಕರಣ) ಎಂಬ ಪರಿಕಲ್ಪನೆಯನ್ನು ಇಲ್ಲಿ ಅನ್ವಯಿಸಿಕೊಳ್ಳಬಹುದು. ಈ ಪರಿಕಲ್ಪನೆಯು ಸಮಾಜವನ್ನು, ಸಮಪಾತಳಿಯಲ್ಲಿ ಸಮಾಂತರವಾಗಿ ವಿಭಜನೆಗೊಂಡ ನೆಲೆಯಲ್ಲಿ ಒಪ್ಪಿಕೊಳ್ಳುತ್ತದೆ; ಸಮರ್ಥಿಸುತ್ತದೆ. ಆಗ ಉಳಿದ ಸಮಾಜದ ಭಾಗಗಳ ಜನರು ಈ ಮೇಲುಸ್ತರದ ಸಾಂಸ್ಕೃತಿಕ ಮಾದರಿಯನ್ನು ತನ್ನ ಆಚರಣೆಗೆ ತಕ್ಕುದೆಂದು ತಿಳಿದು ಅದನ್ನು ಅನುಕರಿಸ ತೊಡಗುತ್ತದೆ. ಈ ಮೇಲ್ಮುಖ ಚಲನೆಗೆ ಸಂಸ್ಕೃತೀಕರಣ ಎಂದಿದ್ದಾರೆ. ಇದೊಂದು ಬಹುಚರ್ಚಿತ ಪರಿಕಲ್ಪನೆಯಾಗಿದೆ. ಭಾಷೆಯಲ್ಲಿ ಶಿಷ್ಟೀಕರಣ ಎನ್ನುವುದು ಕೂಡ ಸಮಾಜದ ಉಳ್ಳವರ ಪಕ್ಷಪಾತಿಯಾಗಿರುತ್ತದೆ. ಶಿಷ್ಟ ಎನ್ನುವ ಮಾತೇ ಈ ಅಂಶವನ್ನು ಸ್ಪಷ್ಟಗೊಳಿಸುತ್ತದೆ. ನಾವೀಗ ಗುರುತಿಸಿರುವಂತೆ ಪ್ರಮಾಣೀಕರಣ ಮತ್ತು ಶಿಷ್ಟೀಕರಣ ಗಳು ಒಂದೇ ಎನ್ನಿಸಿಬಿಟ್ಟರೆ ಆಗ ಪ್ರಮಾಣ ಭಾಷೆಯ ರಾಜಕಾರಣಕ್ಕೆ ತೆಕ್ಕೆ ಬೀಳುವ ಸಂಭವವಿದೆ. ಕನ್ನಡದಲ್ಲೂ ಕೆಲವು ಚಾರಿತ್ರಿಕ ಕಾರಣಗಳಿಂದಾಗಿ ಇದೇ ಪ್ರಕ್ರಿಯೆಯು ಮೊದಲಾದಂತೆ ತೋರುತ್ತದೆ.

ಪ್ರಮಾಣೀಕರಣಕ್ಕಾಗಿ ಕನ್ನಡದಲ್ಲಿ ನಡೆಸಿದ ಮೊದಲ ವ್ಯವಸ್ಥಿತ ಕಾರ್ಯಕ್ರಮವೆಂದರೆ ಈ ಮೊದಲೇ ಹೇಳಿದಂತೆ ಪಠ್ಯಪುಸ್ತಕಗಳ ನಿರ್ಮಾಣ. ಅನಂತರದಲ್ಲಿ ಆಡಳಿತ ವಲಯದಲ್ಲಿ ಕನ್ನಡ ಬಳಕೆಗೆ ಅನುಕೂಲಕರವಾಗುವ ಸಾಮಗ್ರಿಗಳನ್ನು ಸೃಷ್ಟಿಸುವುದು. ಆಡಳಿತ ಪದಕೋಶವನ್ನು ರಚಿಸುವುದು. ಇವೇ ಮುಂತಾದ ಪ್ರಯತ್ನಗಳು ನಡೆಯುತ್ತ ಬಂದವು. ಕರ್ನಾಟಕ ಸರ್ಕಾರವು ಎಂಟನೇ ದಶಕದವರೆಗೂ ಈ ಬಗೆಗೆ ನಿರ್ದಿಷ್ಟ ಕಾರ್ಯಕ್ರಮಗಳನ್ನು ಯೋಜಿಸಿಕೊಂಡಿಲ್ಲ. ಎಂಟನೆಯ ದಶಕದ ಅನಂತರವೂ ಆಗಿ ಹೋಗಿರುವ ಪ್ರಮಾದಗಳನ್ನು ಸರಿಪಡಿಸುವ ಕಡೆಗೆ ಸರ್ಕಾರದ ಗಮನವಿತ್ತೇ ಹೊರತು ಬೇರೆ ಯಾವುದರ ಕಡೆಗೂ ಅಲ್ಲ.

ಲಿಪಿ ವ್ಯವಸ್ಥೆ: ಕನ್ನಡಕ್ಕೆ ಅದರದೇ ಆದ ಬಾಹ್ಯಜನ್ಯ ಲಿಪಿ ವ್ಯವಸ್ಥೆಯೊಂದು ಬಳಕೆಯಲ್ಲಿದೆ. ಈ ಲಿಪಿ ವ್ಯವಸ್ಥೆಯು ಸುಮಾರು ಒಂದೂವರೆ ಸಾವಿರ ವರ್ಷದ ಅವಧಿಯಲ್ಲಿ ಹಲವು ಪರಿವರ್ತನೆಯನ್ನು ಕಂಡಿವೆ. ಎಲ್ಲಕ್ಕಿಂತ ಮುಖ್ಯವಾದುದೆಂದರೆ ಸಂಸ್ಕೃತ ಭಾಷೆಯ ಪದಗಳನ್ನು ಕನ್ನಡದಲ್ಲಿ ಬರೆಯಲು ಅನುಕೂಲವಾಗುವಂತೆ ಕನ್ನಡ ಲಿಪಿ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಂಡದ್ದು. ಕನ್ನಡಕ್ಕೆ ಅನಗತ್ಯವಾದ ಲಿಪಿ ಚಿಹ್ನೆಗಳನ್ನು ಮೂಲ ಕನ್ನಡದ ಲಿಪಿ ವ್ಯವಸ್ಥೆಗೆ ಹೊಂದಿಸಿತ್ತು. ಈ ಕ್ರಮದಿಂದಾಗಿ ಸಂಸ್ಕೃತ ಪಠ್ಯಗಳನ್ನು ಕನ್ನಡದಲ್ಲಿ ಬರೆಯುವುದು ಸುಲಭ ವಾಯಿತು. ಆದರೆ ಇದು ದಿನಕಳೆದಂತೆ ಕನ್ನಡದ ಬರವಣಿಗೆಯು ಹೆಚ್ಚು ಹೆಚ್ಚು ಸಂಸ್ಕೃತಮಯವಾಗಲು ಒಂದು ಕಾರಣವನ್ನು ಒದಗಿಸಿಕೊಟ್ಟಂತೆ ತೋರುತ್ತದೆ. ಈ ಕನ್ನಡ ಲಿಪಿ ವ್ಯವಸ್ಥೆಯನ್ನು ಆಧುನೀಕರಿಸಲು ಕೆಲವು ಪ್ರಯತ್ನಗಳು ನಡೆದವು. ಇಂತಹ ಹಲವು ಪ್ರಯತ್ನಗಳಲ್ಲಿ ಮುಖ್ಯವಾದುದು, ತೆಲುಗು ಕನ್ನಡಗಳಿಗೆ ಏಕಲಿಪಿಯನ್ನು ರೂಪಿಸಬೇಕೆಂದು ಪ್ರಯತ್ನಿಸಿದ್ದು. ಈ ಯೋಜನೆಯ ಉದ್ದೇಶವೇ ನಾದರೂ ಇರಲಿ; ಅದರ ಹಿಂದಿನ ತಾತ್ವಿಕತೆ ನಮಗೆ ಮುಖ್ಯವಾಗಿ ತೋರುತ್ತದೆ. ಕನ್ನಡ ಲಿಪಿಯನ್ನು ಇನ್ನೊಂದು ಭಾಷೆಯ ಬರವಣಿಗೆಗೆ ಬಳಸುವುದರಲ್ಲಿ ಅಥವಾ ಕನ್ನಡ ಭಾಷೆಯ ನಿರೂಪಣೆಯನ್ನು ಇನ್ನೊಂದು ಲಿಪಿಯ ಮುಖಾಂತರ ಮಂಡಿಸುವುದು ಹೊಸ ವಿಚಾರವೇನು ಅಲ್ಲ. ಈಗಾಗಲೇ ಸಂಸ್ಕೃತ ಕೃತಿಗಳನ್ನು ಕನ್ನಡ ಲಿಪಿಯಲ್ಲಿ ಬರೆದ ನಿದರ್ಶನಗಳಿವೆ. ಪ್ರಮಾಣೀಕರಣದ ಪ್ರಯತ್ನದಲ್ಲಿ ಈ ಲಿಪಿ ಸುಧಾರಣೆಯ ತಾರ್ಕಿಕತೆ ಅರ್ಥಹೀನವಾಗಿದೆ.

ಅನಂತರದಲ್ಲಿ ಬಿ.ಎಂ. ಶ್ರೀಕಂಠಯ್ಯನವರು ಕನ್ನಡ ಲಿಪಿಯನ್ನು ಸುಧಾರಿಸಲು ಪ್ರಯತ್ನಿಸಿದರು. ಇದು ಏಕೀಕರಣ ಪೂರ್ವಕಾಲದ ಪ್ರಯತ್ನವೇ. ಬಿ.ಎಂ.ಶ್ರೀಯವರಿಗೆ ಇಂಗ್ಲಿಶ್ ಮತ್ತು ತಮಿಳಿನ ಧ್ವನ್ಯಾತ್ಮಕ ಲಿಪಿಯ ಮಾದರಿ ಅನುಕೂಲಕರವಾಗಿ ಕಂಡಿತು. ಆ ಕಾರಣದಿಂದ ವ್ಯಂಜನ ಮತ್ತು ಸ್ವರಗಳನ್ನು ವ್ಯಂಜನ ದ್ವಿತ್ವಗಳನ್ನು ಬೇರ್ಪಡಿಸಿ ಒತ್ತಕ್ಷರಗಳಿಲ್ಲದಂತೆ ಬರೆಯುವ ರೇಖಾತ್ಮಕ ಬರವಣಿಗೆಯನ್ನು ಬಳಸಲು ಸಲಹೆ ಮಾಡಿದರು. ಆ ಮಾದರಿಯ ಮುದ್ರಣಕ್ಕಾಗಿ ಸಾಹಿತ್ಯ ಪರಿಷತ್ತಿನ ಪ್ರಕಟಣೆಯಾದ ಕನ್ನಡ ಬಾವುಟ ಎಂಬ ಕವನ ಮತ್ತು ಗೀತೆಗಳ ಸಂಕಲನವನ್ನು ಈ ಪರಾಮರ್ಶಿತ ಲಿಪಿ ವ್ಯವಸ್ಥೆಯಲ್ಲಿ ಮುದ್ರಿಸಿದರು. ಏಕೀಕರಣದ ಹೊತ್ತಿಗೆ ಇವೆಲ್ಲವೂ ಸಂದ ಜೀವನದ ಮಾದರಿಗಳಾಗಿ ಬಿಟ್ಟವು. ಈ ಸೋಲಿಗೆ ಬೇರೆ ಕಾರಣಗಳಿವೆ. ಹೆಚ್ಚಾಗಿ ತಾಂತ್ರಿಕ ಬದಲಾವಣೆಗಳ ವೇಗ ಮೇಲೆ ಹೇಳಿದ ಬದಲಾವಣೆಗಳನ್ನು ನಿಷ್ಕ್ರಿಯಗೊಳಿಸಿದವು. ಕನ್ನಡದ ಲಿಪಿ ಸುಧಾರಣೆಯು ಮುಂದೆಯೂ ಕೂಡ ಬೇರೊಂದು ರೀತಿಯಲ್ಲಿ ಮುಂದುವರೆದಿದೆ. ಅದರಂತೆ ಹೊಸ ಮಾದರಿಯ ಅಕ್ಷರ ವಿನ್ಯಾಸಗಳನ್ನು ರೂಪಿಸುವತ್ತ ಪ್ರಯತ್ನಗಳು ನಡೆದಿವೆ. ಮುಖ್ಯವಾಗಿ ಲಿಪಿ ವ್ಯವಸ್ಥೆಯ ಸುಧಾರಣೆಯು ಬರೆಯವವರನ್ನು ಉದ್ದೇಶಿಸಿಲ್ಲ; ಓದುವವರನ್ನು ಗಮನಿಸುತ್ತಿದೆ. ಬರೆಯುವವರು ಆಪ್ತ ಸಂಪರ್ಕಗಳನ್ನು ಹೊರತು ಪಡಿಸಿದರೆ ಬಹುಮಟ್ಟಿಗೆ ತಮ್ಮ ಬರವಣಿಗೆಯನ್ನು ಸಾರ್ವಜನಿಕ ಬಳಕೆಗಾಗಿ ಒಪ್ಪಿಸುವವರು. ಹಾಗೆ ಮಾಡುವಾಗ ಕೈ ಬರಹದ ರೂಪದಲ್ಲಿ ಯಾರೂ ಒದಗಿಸು ವುದಿಲ್ಲ. ಮುದ್ರಿತ ರೂಪಕ್ಕೆ ಪರಿವರ್ತಿಸುತ್ತಾರೆ. ಆದ್ದರಿಂದ ಇಲ್ಲಿಯೂ ಲಿಪಿ ಸುಧಾರಣೆ ಓದುಗರನ್ನು ಗಮನದಲ್ಲಿ ಇರಿಸಿಕೊಂಡಿದೆ ಎನ್ನಬಹುದು.

ಓದುಗರ ಕಣ್ಣೋದಿಗೆ ನೆರವಾಗುವಂತೆ ಕನ್ನಡ ಅಕ್ಷರಗಳ ವಿನ್ಯಾಸದಲ್ಲಿ ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಪಕಾರ ಮತ್ತು ಮಕಾರಳಿಗೆ ಒ ಅಥವಾ ಓ ಸ್ವರಗಳು ಸೇರಿದಾಗ ಕಾಗುಣಿತ ಚಿಹ್ನೆಯನ್ನು ಅನಿವಾರ್ಯವಾಗಿ ಆ ಎರಡು ಲಿಪಿಗಳ ತಳಭಾಗದಿಂದ ಆರಂಭಿಸುವ ಪದ್ಧತಿ ಇತ್ತು. ಈಗ ಅದನ್ನು ಪ ಕಾರದಿಂದ ಬದಲಿಸಿ ವಕಾರಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲಾಗಿದೆ. ಹೀಗೆಯೇ ಅಕ್ಷರಗಳ ಗೆರೆಗಳು ಆರಂಭಗೊಳ್ಳುವ ಸ್ಥಾನ, ಗೆರೆಗಳು ಚಲಿಸುವ ದಿಕ್ಕು, ಕೊನೆಗೊಳ್ಳಬೇಕಾದ ಸ್ಥಾನ, ಗೆರೆಗಳ ಗಾತ್ರ, ಒತ್ತಕ್ಷರಗಳು ಮತ್ತು ಮುಖ್ಯ ಅಕ್ಷರಗಳ ಗಾತ್ರದ ಅನುಪಾತ ಇವೇ ಮುಂತಾದ ಹತ್ತಾರು ತಾಂತ್ರಿಕ ಅಂಶಗಳನ್ನು ಈಗ ಗಮನಕ್ಕೆ ತೆಗೆದುಕೊಂಡು ಸುಧಾರಣೆಗಳನ್ನು ಜಾರಿಗೆ ಕೊಡಲಾಗಿದೆ.

ಇದಲ್ಲದೇ ಅಕ್ಷರಗಳ ಜೋಡಣೆಯಿಂದ ನಿರ್ಮಾಣವಾಗುವ ಪದಗಳ ನಡುವಣ ತೆರಪು, ಓದುವ ಸಾಲುಗಳ ಉದ್ದ, ಪುಟದಲ್ಲಿ ಇರಬಹುದಾದ ಸಾಲುಗಳು, ಅಕ್ಷರಗಳ ಗಾತ್ರ ಈ ಎಲ್ಲ ಸಂಗತಿಗಳು ಈಗ ತಂತ್ರಜ್ಞಾನಕ್ಕೆ ಸಂಬಂಧಿಸಿವೆ. ಇದ ರಲ್ಲಿ ಹಲವು ಆಯ್ಕೆಗಳಲ್ಲಿ ಸೂಕ್ತವಾದುದನ್ನು ಅಳವಡಿಸಿಕೊಳ್ಳುವ ಅವಕಾಶವು ಈಗ ಲಭ್ಯವಿದೆ. ಪತ್ರಿಕೆಗಳ ಓದಿಗೆ ಅನುಕೂಲಕರವಾದ ರೀತಿಯಲ್ಲಿ ಈ ಎಲ್ಲ ಅಂಶಗಳನ್ನು ಕಳೆದ ಒಂದೆರಡು ದಶಕಗಳಲ್ಲಿ ಪ್ರಯೋಗಗಳಿಂದ ಆಯ್ಕೆಗಳನ್ನು ಕಂಡುಕೊಂಡು ಅನಂತರ ಸ್ಥಿರೀಕರಿಸಲಾಗಿದೆ. ಮತ್ತೆ ಸ್ಪಷ್ಟಪಡಿಸಲೇಬೇಕಾದ ಸಂಗತಿ ಎಂದರೆ ಇದು ಬರಹದ ಲಿಪಿಯನ್ನು ಕುರಿತ ಪರಿಷ್ಕಾರಗಳಲ್ಲ. ಕಣ್ಣಿನ ಮೂಲಕ ಓದುವವರ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಪ್ರಮಾಣೀಕರಣದ ಮುಂದಿನ ಕ್ಷೇತ್ರವೆಂದರೆ ಪದರೂಪಗಳನ್ನು ಮತ್ತು ಪದಾರ್ಥಗಳನ್ನು ಖಚಿತಪಡಿಸುವುದು. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಅಗಾಧ ಪ್ರಯತ್ನಗಳು ಕಳೆದ ಐದು ದಶಕಗಳಲ್ಲಿ ಆಗಿವೆ. ಆದರೆ ಆ ಮಾಹಿತಿ ಮತ್ತು ಪರಿಹಾರ ಸುಲಭವಾಗಿ ಎಲ್ಲರಿಗೂ ಲಭ್ಯವಾಗುವಂತಿಲ್ಲ. ನಾವೀಗ ಮೊದಲು ಗಮನಿಸಿದ ಕನ್ನಡ ಕನ್ನಡ ನಿಘಂಟಿನ ಸ್ವರೂಪವನ್ನು ಗಮನಿಸೋಣ. ಎಂಟು ಬೃಹತ್ ಸಂಪುಟಗಳಲ್ಲಿ ಸುಮಾರು ಐದರಿಂದ ಆರು ದಶಕಗಳ ಪರಿಶ್ರಮದಿಂದ ಸಿದ್ಧಗೊಂಡ ನಿಘಂಟುಗಳು. ಈ ನಿಘಂಟಿನಲ್ಲಿ ಮುಖ್ಯನಮೂದು, ಅದರ ಪರ್ಯಾಯ, ಬರವಣಿಗೆಯ ರೂಪಗಳು, ವ್ಯಾಕರಣ ವರ್ಗ, ಅನಂತರ ಪದಾರ್ಥಗಳು, ಸಮರ್ಥನೆ ಗಳಾಗಿ ಉಲ್ಲೇಖಗಳು, ಅಗತ್ಯವಿದ್ದಾಗ ಸಾಧಿತ ರೂಪಗಳು ಇವೆಲ್ಲವನ್ನು ನೀಡಿ ಕೊನೆಗೆ ಆ ನಮೂದಿನ ಪದರಚನೆಯ ಸಾಧ್ಯತೆಯನ್ನು ಮತ್ತು ಆಕರವನ್ನು ಸೂಚಿಸಲಾಗಿದೆ.ಇದು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣಗೊಂಡ ಚಾರಿತ್ರಿಕ ನಿಘಂಟು. ಈ ನಿಘಂಟಿನಲ್ಲಿ ನಮೂದುಗಳನ್ನು ಆಯ್ಕೆ ಮಾಡುವಾಗ ಬರಹದ ದಾಖಲೆಗಳನ್ನು ಮುಖ್ಯಆಕರಗಳನ್ನಾಗಿ ಬಳಸಿಕೊಳ್ಳಲಾಗಿದೆ. ಆ ನಿಟ್ಟಿನ ಶ್ರಮ ತುಂಬ ಹೆಚ್ಚಿದೆ. ಆದರೆ ಆಡುಮಾತಿನ ರೂಪಗಳು ದಾಖಲೆಯಾಗಿಲ್ಲ. ಮಾತಿನ ವರಸೆಗಳು ಕೂಡ ಹೀಗೆಯೇ ಹೊರಗೆ ಉಳಿದಿವೆ. ಅವಕ್ಕೆ ಲಿಖಿತ ದಾಖಲಾತಿ ಇಲ್ಲದಿದ್ದರೆ ಈ ನಿಘಂಟಿನಲ್ಲಿ ಸ್ಥಾನ ಕಳೆದುಕೊಳ್ಳುತ್ತವೆ. ಅಲ್ಲದೇ ಒಂದು ಅಂದಾಜಿನ ಪ್ರಕಾರ ಈ ನಿಘಂಟು ನಮೂದುಗಳಲ್ಲಿ ಪ್ರತಿಶತ ಐವತ್ತೈದಕ್ಕೂ ಮಿಕ್ಕಿ ಸಂಸ್ಕೃತ ಮೂಲದ ಪದಗಳನ್ನು ನೀಡಲಾಗಿದೆ. ಈ ನಿಘಂಟಿನ ರಚನೆಯ ಲಕ್ಷಣಗಳನ್ನು ನೋಡಿದಾಗ ಇದು ಪಂಡಿತರಿಂದ, ಪಂಡಿತರಿಗಾಗಿ ರೂಪುಗೊಂಡ ದಾಖಲಾತಿ ಎನ್ನಿಸುತ್ತದೆ. ಪ್ರಮಾಣೀಕರಣದ ಪ್ರಯತ್ನಗಳು ಇಲ್ಲವೆಂದಲ್ಲ. ಆದರೆ ಅದರ ಫಲಿತಾಂಶ ಮಾತ್ರ ಸುಲಭಗ್ರಾಹ್ಯವಲ್ಲ. ಈ ನಿಘಂಟಿನ ಸ್ವರೂಪ ಮತ್ತು ಗಾತ್ರದಿಂದಾಗಿ ದಿನದಿನವೂ ಕನ್ನಡವನ್ನು ವಿವಿಧ ಉದ್ದೇಶಗಳಿಗಾಗಿ ಬರೆಯುತ್ತಿರುವವರಿಗೆ ಸಿಗುವ ನೆರವು ತುಂಬಾ ಕಡಿಮೆ. ಸಂಪುಟಗಳ ಗಾತ್ರ, ವಿನ್ಯಾಸ, ಮತ್ತು ದುರ್ಲಭತೆ ಈ ಕಾರಣಗಳಿಂದಾಗಿ ಒಂದು ಅಪೂರ್ವ ದಾಖಲಾತಿಯು ಕೂಡ ಜನದೂರವಾಗಿ ಉಳಿದು ಬಿಟ್ಟಿದೆ.

ಕನ್ನಡ ನಿಘಂಟಿನ ಪ್ರಯತ್ನ ಪ್ರಮಾಣ ಕನ್ನಡದ ಚಾರಿತ್ರಿಕ ಬೇರುಗಳನ್ನು ಗುರುತಿಸುವುದೇ ಆಗಿದೆ ಎಂದು ಒಪ್ಪಿದರೆ ಇನ್ನೊಂದು ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಅದೆಂದರೆ ಈ ಪ್ರಮಾಣ ಕನ್ನಡದ ಚಾರಿತ್ರಿಕ ವಿಕಾಸವನ್ನು ಗುರುತಿಸಲು ಅನುಸರಿಸಿದ ವಿಧಾನ ಒಂದು ತಾತ್ವಿಕತೆಯನ್ನು ಬಿಂಬಿಸುತ್ತದೆ. ಈ ತಾತ್ವಿಕತೆಯು ಈ ನಿಘಂಟಿನ ಕೇಂದ್ರವಾಗಿದೆ. ಯಾರೂ ಅದನ್ನು ಬಾಯಿಬಿಟ್ಟು ಲಿಖಿತವಾಗಿ ಸ್ಪಷ್ಟೀಕರಿಸದಿದ್ದರೂ ಕನ್ನಡ ಲಿಖಿತ ಪರಂಪರೆಯ ಪರವಾಗಿ ನಿಲುವು ತಳೆದ ಈ ನಿಘಂಟು ಭಾಷೆಯ ಪರಿವರ್ತನಾ ಶೀಲತೆಯನ್ನು ಮತ್ತು ಅದರ ಆಡುಮಾತಿನ ನೆಲೆಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ನಿರಾಕರಿಸುತ್ತಿದೆ. ಕನ್ನಡ ನಿಘಂಟಿನ ಚಾರಿತ್ರಿಕ ದಾಖಲಾತಿಯ ಪ್ರಯತ್ನದಲ್ಲಿ ಗೊತ್ತಿಲ್ಲದಂತೆ ಅಡಕಗೊಂಡಿರುವ ಕೆಲವು ವಿನ್ಯಾಸಗಳಿವೆ. ಇಲ್ಲಿ ದಾಖಲಾದ ಕೆಲವು ಪದ, ಪದರಚನೆಗಳಿಗೆ ೧೯೦೦ಕ್ಕಿಂತ ಹಿಂದಿನ ಲಿಖಿತ ದಾಖಲೆಗಳ ಪ್ರಯೋಗಮಾನ್ಯತೆ ಇಲ್ಲ. ಒಂದುವೇಳೆ ಇದ್ದರೂ ಅರ್ಥದ ವಿನ್ಯಾಸದಲ್ಲಿ ಬದಲಾವಣೆಗಳಾಗಿವೆ. ಹೀಗಾಗಲು ಕಾರಣಗಳೇನು? ಈ ಪದಗಳು ಇಪ್ಪತ್ತನೆಯ ಶತಮಾನದಲ್ಲೇ ಮೊದಲ ಪ್ರಯೋಗ ಕಂಡಿವೆ ಎಂದರೆ ಅವುಗಳ ಮೂಲಪ್ರಯೋಗ ಆಡುಮಾತಿನಲ್ಲಿರಬಹುದೇ? ಈ ಎಲ್ಲ ಪ್ರಶ್ನೆಗಳೂ ಅಧ್ಯಯನಯೋಗ್ಯವಾಗಿವೆ.

ಇದು ನಾವು ಈಗಾಗಲೇ ಬೇರೆ ಬೇರೆ ಸಂದರ್ಭದಲ್ಲಿ ಗುರುತಿಸುವಂತೆ ಕಳೆದ ಐದು ದಶಕಗಳಲ್ಲಿ ನಡೆದ ಕನ್ನಡಪ್ರಜ್ಞೆಯ ಪಲ್ಲಟದ ಗ್ರಹಿಕೆಗೆ ಹೊಂದಿಕೆಯಾಗದ ಸಂಗತಿಯಾಗಿದೆ. ಈ ಕಾರಣದಿಂದಾಗಿ ಈ ನಿಘಂಟಿನ ಬಳಕೆ ಕೇವಲ ಪದಾರ್ಥ ಗ್ರಹಿಕೆಗೆ ಸೀಮಿತಗೊಂಡಿದೆಯೇ ಹೊರತು, ಕನ್ನಡದ ಪ್ರಮಾಣರೂಪವನ್ನು ಕಂಡುಕೊಳ್ಳಲು ಇದು ನೆರವಾಗುವುದಿಲ್ಲ,

ಕನ್ನಡ ನಿಘಂಟಿನ ನೆರವಿನಿಂದ ಕನ್ನಡದ ಪ್ರಮಾಣರೂಪಕ್ಕೆ ಒಂದು ಪರಾಮರ್ಶನ ಬಿಂದುವನ್ನು ಒದಗಿಸುವ ಪ್ರಯತ್ನ ವಿಫಲಗೊಂಡಿದ್ದು ಕಳೆದ ಐದು ದಶಕಗಳ ಒಂದು ದೊಡ್ಡ ಸೋಲು ಎನ್ನಬೇಕು. ಅದು ಹೆಮ್ಮೆಯ ಪ್ರತೀಕವಾಯಿತೇ ಹೊರತು ಭಾಷೆಯ ಪ್ರಕ್ರಿಯಾತ್ಮಕ ನೆಲೆಯಲ್ಲಿ ಭಾಗಿಯಾಗಲಿಲ್ಲ. ಕನ್ನಡವನ್ನು ವಿವಿಧ ಹಂತಗಳಲ್ಲಿ ಬೋಧಿಸುವ ಅಧ್ಯಾಪಕರು ಕೂಡ ಈ  ನಿಘಂಟನ್ನು ಬಳಸುವುದಿಲ್ಲ. ಹೀಗೆ ಬಳಸದಿರಲು ಅದು ಸುಲಭವಾಗಿ ಲಭ್ಯವಾಗುವುದಿಲ್ಲ ಎಂಬ ಕಾರಣ ಮುಖ್ಯವಲ್ಲ. ಇಂದಿನ ಕನ್ನಡದ ಸಮಸ್ಯೆಗಳಿಗೆ ಅಲ್ಲಿ ಉತ್ತರಗಳು ಲಭಿಸುವುದಿಲ್ಲ ಎನ್ನುವುದೇ ನಿಜವಾದ ಕಾರಣ.

ಪ್ರಮಾಣೀಕರಣಕ್ಕಾಗಿ ಸರ್ಕಾರವು ನಡೆಸಿದ ಇನ್ನೊಂದು ಮುಖ್ಯ ಪ್ರಯತ್ನವೆಂದರೆ ಆಡಳಿತ ಕನ್ನಡವನ್ನು ನಿಗದಿಗೊಳಿಸಲು ಯತ್ನಿಸಿದ್ದು. ಅದಕ್ಕಾಗಿ ಕೈಪಿಡಿಯೊಂದನ್ನು ರಚಿಸಲು ಸಮಿತಿಯನ್ನು ನೇಮಿಸಿತು. ಕಛೇರಿ ಕೈಪಿಡಿ ಎಂಬ ಪುಸ್ತಕವನ್ನು ಈ ಸಮಿತಿ ಸಿದ್ಧಪಡಿಸಿದೆ. ಕೊನೆಯ ಪಕ್ಷ ಒಂದು ಹಂತದವರೆಗಿನ ಆಡಳಿತದಲ್ಲಿ ಕನ್ನಡವನ್ನು ಬಳಸಲು ನೆರವಾಗುವ ಸಾಮಗ್ರಿಯನ್ನು ಈ ಕೈಪಿಡಿ ಹೊಂದಿದೆ. ಅಗತ್ಯವಾದ  ನಮೂನೆಗಳು, ಮಾದರಿಗಳು, ಸೂಚನೆಗಳು, ಪಾರಿಭಾಷಿಕ ಪದಗಳು ಎಲ್ಲವೂ ಈ ಕೈಪಿಡಿಯಲ್ಲಿವೆ. ಪಾರಿಭಾಷಿಕ ಪದಗಳನ್ನು ರೂಪಿಸುವಾಗ ಬಹುಮಟ್ಟಿಗೆ ಸಂಸ್ಕೃತದಪದಕೋಶದ ನೆರವನ್ನು ಪಡೆಯಲಾಗಿದೆ. ಅದೇ ಸುಮಾರಿನಲ್ಲಿ ಕೇಂದ್ರ ಸರ್ಕಾರವು ಪಾರಿಭಾಷಿಕ ಪದಗಳ ಕೋಶವೊಂದನ್ನು ರೂಪಿಸಲು ಡಾ.ರಘುವೀರ  ಅವರ  ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. ಆ ಸಮಿತಿಯು ಅತಿಯಾದ ಸಂಸ್ಕೃತ ವ್ಯಾಮೋಹವನ್ನು ಪ್ರಕಟಿಸಿದ್ದು ಈಗ ಚಾರಿತ್ರಿಕ ವಿಷಯವಾಗಿದೆ. ಕನ್ನಡದ ಮಟ್ಟಿಗೆ ಆಡಳಿತದಲ್ಲಿ ಸಮಸ್ಯೆಗೆ ಬೇರೊಂದು ಮುಖವಿತ್ತು. ಆ ಹೊತ್ತಿಗೆ ಇಂಗ್ಲಿಶ್ ಆಡಳಿತದಲ್ಲಿ ಬೇರೂರಲೂ ಅವಕಾಶ ದೊರಕಿತ್ತಾದರೂ ಆ ಪೂರ್ವದಲ್ಲಿ ಆಡಳಿತ ನಡೆಸಿದ ಉರ್ದು ಭಾಷೆಯ ಪ್ರಭಾವ ಇನ್ನೂ ದಟ್ಟವಾಗಿ ಇತ್ತು. ಈ ಹಿನ್ನೆಲೆ ಯಿಂದ ಸೂಕ್ತ ಮಾದರಿಗಳನ್ನು ಆಯ್ದುಕೊಳ್ಳಬಹುದಾಗಿತ್ತು. ಎಷ್ಟೋ ಕಡೆಗಳಲ್ಲಿ  ಆ ಪದಗಳು ಇನ್ನೂ ಉಳಿದಿವೆ. ಆದರೂ ಆ ಪದಗಳ ಬದಲು ಸಂಸ್ಕೃತ ಪದಗಳನ್ನು ಬಳಸುವ ಅಪೇಕ್ಷೆಯು ಆಡಳಿತದ ಒಂದು ಭಾಗಕ್ಕೆ ಇನ್ನೂ ಇದ್ದಂತಿದೆ. ಕಛೇರಿ ಕೈಪಿಡಿಯು ರೂಪಿಸಿಕೊಟ್ಟ ಮಾದರಿಯನ್ನು ಬಳಸಲು ಇದ್ದ ಅಡ್ಡಿಗಳು ಹಲವು. ಆದರೆ ಪಾರಿಭಾಷಿಕ ಪದಗಳು ಕಠಿಣವಾಗಿವೆ ಎಂಬ ನೆಪವನ್ನು ಮುಂದಿಡಲಾಯಿತು. ಈ ಕಾರಣದಿಂದ ಈ ಪದಗಳನ್ನು ಸರಳೀಕರಿಸುವ ಪ್ರಯತ್ನಕ್ಕಾಗಿ ಮತ್ತೊಂದು ಸಮಿತಿಯನ್ನು  ಸರ್ಕಾರವೇ ರಚಿಸಿದೆ. ಈ ಸಮಿತಿಯ ಸಲಹೆಗಳು ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಯಲು ಅವಕಾಶಗಳೇ ಇಲ್ಲವಾಗಿವೆ. ಏಕೆಂದರೆ ಜೊತೆ ಜೊತೆಯಲ್ಲಿ ಪ್ರತಿಯೊಂದು ಇಲಾಖೆಗೂ ಅಗತ್ಯವಾದ ಪಾರಿಭಾಷಿಕ  ಪದಗಳನ್ನು ರೂಪಿಸುವ ಪ್ರಯತ್ನಗಳು ನಡೆಯುತ್ತ ಬಂದಿವೆ. ಈ ಎಲ್ಲ ಪ್ರಯತ್ನಗಳು ಕನ್ನಡವನ್ನು ಆಡಳಿತದಲ್ಲಿ ಬಳಸಲು ನೆರವಾಗುವ ಉದ್ದೇಶವನ್ನು ಹೊಂದಿದ್ದರೂ ಪ್ರಮಾಣೀಕೃತ ರೂಪವೊಂದನ್ನು ನಿಗದಿಪಡಿಸುವಲ್ಲಿ ಸಾಕಷ್ಟು ಯಶಸ್ಸು ಪಡೆದಿಲ್ಲ. ಆದರೆ ಇದನ್ನು ಒಂದು ಕೊರತೆ ಎಂದು ತಿಳಿಯಬೇಕೇ? ಇದು ಬೇರೆಯೇ ಮಾತು. ಜಾಗತಿಕ ಸಂದರ್ಭಗಳಲ್ಲಿ ಎರಡು ವಿಭಿನ್ನ ಮಾದರಿಗಳು ಚಲಾವಣೆಯಲ್ಲಿವೆ. ಪ್ರಮಾಣರೂಪವನ್ನು ಸಿದ್ಧಪಡಿಸಿ ಅದಕ್ಕೆ ಸಂಪೂರ್ಣವಾಗಿ ನಿಷ್ಠವಾಗುವುದು ಒಂದು ಮಾದರಿಯಾದರೆ ಒಂದು ಚೌಕಟ್ಟನ್ನು ಸಡಿಲವಾಗಿ ರೂಪಿಸಿಕೊಂಡು ಅಂದಂದಿನ ಸಮಸ್ಯೆಗಳಿಗೆ ಅಗತ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ಮಾದರಿ ಇನ್ನೊಂದು. ಈ ಎರಡನೆಯ ಮಾದರಿ ಪ್ರಮಾಣಭಾಷೆಯನ್ನು ಒಂದು ಪ್ರಕ್ರಿಯೆ ಎಂದು ತಿಳಿಯುತ್ತದೆ.

ಕನ್ನಡ ಈ ಎರಡು ಮಾದರಿಗಳನ್ನು ಯಥಾವತ್ತಾಗಿ ಅನುಸರಿಸುವುದು ಕಷ್ಟ. ಏಕೆಂದರೆ ಬದಲಾದ ಸನ್ನಿವೇಶದಲ್ಲಿ ಇಂಗ್ಲಿಶ್ ಜಾಗತಿಕ ಪರಾಮರ್ಶನ ನೆಲೆಯಲ್ಲಿ ನಿಂತಿದೆ. ಅಲ್ಲದೇ ಒಕ್ಕೂಟ ಆಡಳಿತದಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರ ಸರ್ಕಾರದೊಡನೆ ಸಂಪರ್ಕದಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಪಾರಿಭಾಷಿಕ ಪದಗಳ ಆಯ್ಕೆಯ ವಿಷಯದಲ್ಲಿ ಕನ್ನಡಕ್ಕೆ ಸ್ವಾತಂತ್ರ್ಯ ಕಡಿಮೆ. ಹೆಚ್ಚೆಂದರೆ ಒಂದು ಸೂಕ್ತ ಮಾದರಿಯ ಅನುವಾದವನ್ನು ಮಾತ್ರ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ನೋಡಿದರೆ ಕರ್ನಾಟಕ ಸರ್ಕಾರ ರಚಿಸಿರುವ ಭಾಷಾಂತರ ನಿರ್ದೇಶನಾಲಯ ನಿರಂತರವಾಗಿ ಇಂತಹ ಅನುವಾದಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅನುವಾದದ ಪ್ರಕ್ರಿಯೆಯಲ್ಲೇ ಒಂದು ಪಾರಿಭಾಷಿಕ ಪದಕೋಶವನ್ನು ರೂಪಿಸಿಕೊಂಡಿದೆ. ಅದರಲ್ಲಿ ನಿಯತತೆಯನ್ನು ಕಾಯ್ದುಕೊಳ್ಳುವುದೇ ಪ್ರಮಾಣ ಕನ್ನಡದ ನಿರ್ಮಾಣ ಎನ್ನಬೇಕಾಗಿದೆ. ಈ ಸಮಸ್ಯೆಯ ಆಡಳಿತಾಂಗಕ್ಕಿಂತ ನ್ಯಾಯಾಂಗವನ್ನು ಬಲವಾಗಿ ಕಾಡುತ್ತದೆ. ಏಕೆಂದರೆ ಅಲ್ಲಿ ಪದ ನಿಖರತೆ ಅತ್ಯಗತ್ಯ. ವ್ಯಾಖ್ಯಾನಗಳನ್ನೇ ಅವಲಂಬಿಸಿ ಕಾನೂನನ್ನು ಅನ್ವಯಿಸುವ ಪ್ರಯತ್ನ ಮುಖ್ಯವಾಗುವುದರಿಂದ ಅಲ್ಲಿ ನಿಯತವಾದ ಪದ ಪ್ರಯೋಗ ದೈನಂದಿನ ಅಗತ್ಯವಾಗುತ್ತದೆ. ಮೇಲೆ ಹೇಳಿದಂತೆ ಅನುವಾದದ ನೆರವಿನಿಂದ ಈ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ನಿವಾರಿಸಿಕೊಳ್ಳಲಾಗಿದೆ.

ಪ್ರಮಾಣ ಕನ್ನಡದ ನೆಲೆಗಳು ಲಿಖಿತ ರೂಪದಲ್ಲಿ ಹೆಚ್ಚಾಗಿ ಪ್ರವೃತ್ತವಾಗುವುದು  ಮಾತಿನ ಸಾರ್ವಜನಿಕ ನಿರೂಪಣೆಗಳಲ್ಲಿ ಮಾತ್ರ. ಅಲ್ಲಿ ಕೂಡ ಪದಾರ್ಥಕ್ಕಿಂತ ಪದಕ್ಕೆ ಹೆಚ್ಚಿನ ಮನ್ನಣೆ. ಉದಾಹರಣೆಗೆ ನಮ್ಮ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಓದುವ ವಾಕ್ಯಗುಚ್ಛವನ್ನು ಗಮನಿಸಬಹುದು. ಅದನ್ನು ಎಂದರೆ ಅದರಲ್ಲಿರುವ ಪದಗಳನ್ನು ಅವುಗಳ ಅನುಕ್ರಮವನ್ನು ಯಾರೂ ಬದಲಾಯಿಸಲಾರರು. ಬದಲಾಯಿಸಲು ಅವಕಾಶವಿಲ್ಲ. ಅದನ್ನು ಇರುವಂತೆಯೇ ಪೂರ್ಣವಾಗಿ ಓದಿ ಹೇಳಬೇಕು. ಅಂದರೆ ಭಾಷೆಯ ಪ್ರಮಾಣಿತ ರೂಪದ ಒಂದು ಅತಿರೇಕದಲ್ಲಿ ಶಬ್ದ ಪ್ರಧಾನವಾಗುತ್ತದೆ. ಅರ್ಥ ಹಿಂದಕ್ಕೆ ಸರಿಯುತ್ತದೆ. ಅಥವಾ ಪೂರ್ಣವಾಗಿ ಅಮುಖ್ಯವಾಗುತ್ತದೆ. ಕನ್ನಡದ ಕೆಲವು ಮಾದರಿಗಳನ್ನು ಬಿಟ್ಟರೆ ಇಷ್ಟು ಪ್ರಮಾಣದ ಶಬ್ದಪ್ರಾಧಾನ್ಯವನ್ನು ಗಳಿಸಿಕೊಳ್ಳುವುದು ಸಾಧ್ಯವೇ ಎನ್ನುವುದೊಂದು ಪ್ರಶ್ನೆ. ಎಷ್ಟೋ ವೇಳೆಗಳಲ್ಲಿ ಪ್ರಮಾಣರೂಪದ ರಚನೆಗಳನ್ನು ಸರಳಗೊಳಿಸಿ ಹೇಳಲು ಸಾಧ್ಯವಿದ್ದರೂ ಹಾಗೆ ಹೇಳಲು ಅವಕಾಶ ನೀಡುವುದಿಲ್ಲ. ಅವುಗಳು ಯಾವ ರಾಚನಿಕ ಬಂಧವನ್ನು ಹೊಂದಿರುತ್ತವೋ ಅದನ್ನು ಬದಲಿಸಿದರೆ ಪ್ರಮಾಣಬದ್ಧತೆಗೆ ಕುಂದು ಬರುವುದೆಂದು ತಿಳಿಯಲಾಗುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಈ ನೆಲೆಗೆ ಕನ್ನಡವನ್ನು ಒಯ್ಯುವ ಪ್ರಯತ್ನಗಳು ಸಾಕಷ್ಟು ಪ್ರಮಾಣದಲ್ಲಿ ನಡೆದಿವೆ. ಆದರೂ ಒಟ್ಟು ಚಾರಿತ್ರಿಕ ಸನ್ನಿವೇಶದಿಂದಾಗಿ ಕನ್ನಡ ಭಾಷೆ ಇಂತಹ ಪಾತ್ರವನ್ನು ವಹಿಸುವುದು ಅಥವಾ ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುವುದು ಅಸಾಧ್ಯವೇ ಆಗಬಹುದು.

ಬರಹ ಕನ್ನಡದ ಪ್ರಮಾಣೀಕರಣ ಬೇರೆ ಬೇರೆ ವಲಯಗಳಲ್ಲಿ ಆಯೋಜಿತವಾಗಿ ನಡೆಯುತ್ತಲೇಇದೆ. ಮೊದಲೇ ಹೇಳಿದಂತೆ ಇಲ್ಲೆಲ್ಲ ತಂತ್ರಜ್ಞಾನದ ಪ್ರಭಾವ ದಟ್ಟವಾಗಿ ಕಾಣಿಸಿಕೊಳ್ಳುತ್ತಿದೆ. ನಮ್ಮ ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ನೋಡಿದರೆ ಕೆಲವು ಸಂಗತಿಗಳು ಗೊತ್ತಾಗುತ್ತವೆ. ಆ ಪತ್ರಿಕೆಗಳ ವಿನ್ಯಾಸದಿಂದ ಹಿಡಿದು ಅಲ್ಲಿ ಬಳಕೆಯಾಗುವ ಪದಗಳವರೆಗೆ ಪ್ರತಿಯೊಂದು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಇರುತ್ತವೆ. ಅವುಗಳಲ್ಲಿ ಕನಿಷ್ಟ ವಿವರಗಳನ್ನು ಬದಲಿಸಿ ಮತ್ತೊಂದು ಆಹ್ವಾನವನ್ನು ಸಿದ್ಧಪಡಿಸಬಹುದು. ಇಂತಹ ಸಾಧ್ಯತೆಗಳು ನಮಗೆ ಹಲವು ಕಡೆಗಳಲ್ಲಿ ಕಾಣಸಿಗುತ್ತವೆ. ನಾಮಫಲಕಗಳು, ಸಾರ್ವಜನಿಕ ಪ್ರದೇಶದ ಸೂಚನೆಗಳು ವಿವಿಧ ಸನ್ನಿವೇಶಗಳಲ್ಲಿ ಪ್ರಕಟವಾಗುವ ಸೂಚನಾಪತ್ರಗಳು, ಹೀಗೆ ಹಲವು ಹತ್ತು ಕಡೆಗಳಲ್ಲಿ ಯಾವ ಯಾವ ಮಾದರಿಯನ್ನು ಬಳಸಬೇಕು; ಅಲ್ಲಿ ಇರಬೇಕಾದ ಕನ್ನಡದ ಸ್ವರೂಪವೇನು ಇವೆಲ್ಲವೂ ಖಚಿತಗೊಂಡಿವೆ. ಅದನ್ನು ಮತ್ತೆಮತ್ತೆ ಆವೃತ್ತಗೊಳಿಸುವಾಗ ತಜ್ಞತೆಯ ಅಗತ್ಯ ಬರುವುದಿಲ್ಲ. ಒಂದು ಭಾಷೆಯ ಪ್ರಮಾಣರೂಪವನ್ನು ರೂಪಿಸುವುದೆಂದರೆ ಈ ತಜ್ಞತೆಯ ಪಾತ್ರವನ್ನು ಕುಗ್ಗಿಸಿ ಯಾರು ಬೇಕಾದರೂ ಬಳಸಬಹುದಾದ ಅಚ್ಚನ್ನು ಸಿದ್ಧಪಡಿಸುವುದೇ ಆಗಿದೆ. ಯಾಂತ್ರಿಕ ಉತ್ಪಾದನಾ ವ್ಯವಸ್ಥೆಯ ಅನುಕರಣೆ ಯಿಂದ ಈ ಪ್ರಮಾಣ ಭಾಷಾರೂಪದ ಪರಿಕಲ್ಪನೆ ಹುಟ್ಟಿಕೊಂಡಿದೆ. ಕನ್ನಡ ಈ ನಿಟ್ಟಿನಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಒಂದು ಖಚಿತ ಹಂತವನ್ನು ತಲುಪಿದೆ.

ಪ್ರಮಾಣ ಕನ್ನಡದ ಚರ್ಚೆಯಲ್ಲಿ ಭಾಷಾಕ್ರಿಯೆಯ ಉಲ್ಲೇಖವನ್ನು ಮಾಡಲೇಬೇಕು. ಕ್ರಿಯೆಯನ್ನು ಬಣ್ಣಿಸಲು ಕ್ರಿಯಾಪದಗಳು ಇರುತ್ತವೆ. ಇದು ಎಲ್ಲ್ಲ ಭಾಷೆಗಳಿಗೂ ಇರುವ ಒಂದು ಸಾಮಾನ್ಯ ಲಕ್ಷಣ. ಆದರೆ ಭಾಷೆಯಲ್ಲಿ ಇನ್ನೊಂದು ಸ್ಥಿತಿ ಸಾಧ್ಯ. ಅದನ್ನು ಭಾಷಾಕ್ರಿಯೆ ಎಂದು ಕರೆಯುತ್ತಾರೆ. ಈ ವಾಕ್ಯವನ್ನು ಗಮನಿಸಿ. ನಾನು ಈ ಸಂದರ್ಭದಲ್ಲಿ ಭಾರತವು ಜಾಗತೀಕರಣವನ್ನು ಎದುರಿಸಲು ಶಕ್ತವಾಗಿಲ್ಲ ಎಂದು ಘೋಷಿಸುತ್ತೇನೆ ಈ ವಾಕ್ಯದಲ್ಲಿ ಫೋಷಿಸು ಎನ್ನುವ ಕ್ರಿಯಾಪದವಿದೆ. ಆದರೆ ಇದು ಇತರ ಕ್ರಿಯಾಪದಗಳಂತಲ್ಲ. ತಿನ್ನು, ನೋಡು, ಕೊಡು, ಓಡು, ಓದು, ಹಾಡು ಮುಂತಾದ ಕ್ರಿಯಾಪದಗಳಲ್ಲಿ ಒಂದು ಲೋಕಸಂವಾದಿ ಕ್ರಿಯೆ ಇದೆ. ಆ ಕ್ರಿಯೆಯನ್ನು ಬಣ್ಣಿಸಲು ಒಂದು ಪದವನ್ನು ನಾವು ಬಳಸುತ್ತೇವೆ. ‘ನಾನು ಹಾಡುತ್ತೇನೆ’ ಎನ್ನುವ ವಾಕ್ಯ ನಿಜವೂ ಆಗಿರಬಹುದು. ಸುಳ್ಳೂ ಆಗಿರಬಹುದು. ಇದನ್ನು ತೀರ್ಮಾನಿಸಲು ಸಾಧ್ಯ. ಹೇಳಿದ ವ್ಯಕ್ತಿ ನಿಜವಾಗಿಯೂ ಹಾಡುವ ಕ್ರಿಯೆಯನ್ನು ಮಾಡಲು ಶಕ್ತರಾದರೆ ಆಗ ವಾಕ್ಯ ನಿಜವಾಗುತ್ತದೆ. ಹಾಗೆ ಮಾಡಲು ಅಶಕ್ತರಾದರೆ ವಾಕ್ಯ ಸುಳ್ಳಾಗುತ್ತದೆ. ಇಂತಹ ಲೋಕಸಂವಾದಿತ್ವದ ಪರೀಕ್ಷೆಗಳು ಕ್ರಿಯಾಪದಗಳ ಮಟ್ಟಿಗೆ ಸಾಧ್ಯ. ಆದರೆ ಮೇಲೆ ಉಲ್ಲೇಖಿಸಿದ ವಾಕ್ಯದಲ್ಲಿ ಘೋಷಿಸು ಎಂಬ ಪದದ ಮಾತು ಬೇರೆ. ಏಕೆಂದರೆ ಅಲ್ಲಿ ಪ್ರತ್ಯೇಕ ಕ್ರಿಯೆಯಿಲ್ಲ. ಆ ವಾಕ್ಯದಲ್ಲಿರುವ ಪದಗಳನ್ನು ಉಚ್ಚರಿಸಿದ್ದೇ ಒಂದು ಕ್ರಿಯೆ. ಇಂತಹ ನೂರಾರು ರಚನೆಗಳನ್ನು ನಾವು ಬಳಸುತ್ತೇವೆ. ಇವುಗಳನ್ನು ಭಾಷಾಕ್ರಿಯೆಗಳೆಂದೂ ವರ್ಣಿಸುತ್ತಾರೆ.

ಪ್ರಮಾಣ ಭಾಷೆಯ ಚರ್ಚೆಯಲ್ಲಿ ಭಾಷಾಕ್ರಿಯೆಗಳ ಮಹತ್ವ ಏನು? ಈ ಪ್ರಶ್ನೆ ನಮಗೆ ಮುಖ್ಯ. ನಾವು ಬಳಸುವ ಒಂದು ಕರೆನ್ಸಿ ನೋಟನ್ನು ಗಮನಿಸಿ. ಅದು ನಿರ್ದಿಷ್ಟ ಮೊತ್ತದ ಹಣವನ್ನು ಪ್ರತಿನಿಧಿಸುತ್ತದೆ. ಅದು ನಮ್ಮೆಲ್ಲರ ನಂಬಿಕೆ. ಆದರೆ ಆ ಮೊತ್ತ ನಮಗೆ ಕಾಣಿಸುವುದು ಅದರ ಮೇಲೆ ಮುದ್ರಿತವಾಗಿರುವ ಭಾಷಿಕ ಸಂಕೇತದಲ್ಲಿ ಮಾತ್ರ. ರಿಜರ್ವ್‌ಬ್ಯಾಂಕ್ ಗವರ್ನರ್ ಸಹಿ ಇರುವ ಆ ವಾಕ್ಯ. ಈ ನೋಟನ್ನು ಹೊಂದಿರುವ ವ್ಯಕ್ತಿಗೆ ನಿರ್ದಿಷ್ಟ ಮೊತ್ತದ ಹಣವನ್ನು ನಾನು ಪಾವತಿಸುತ್ತೇನೆ ಎಂದು ಅಲ್ಲಿ ಬರೆದಿರುತ್ತದೆ. ಅಲ್ಲಿ ಬಳಕೆಯಾಗುವ ಪ್ರಾಮಿಸ್ ಎಂಬ ಕ್ರಿಯಾಪದವನ್ನು ಗಮನಿಸಿ ವಾಸ್ತವವಾಗಿ ಯಾರು ರಿಸರ್ವ್ ಬ್ಯಾಂಕ್ ಗವರ್ನರ್ ಬಳಿ ಹೋಗಿ ಆ ಮೊತ್ತದ ಹಣವನ್ನು ಕೇಳುವುದಿಲ್ಲ. ಅಂದರೆ ಅದು ನಿಜವೋ ಸುಳ್ಳೋ ಎಂದು ಪರೀಕ್ಷಿಸುವುದಿಲ್ಲ. ಪ್ರಾಮಿಸ್ ಎನ್ನುವ ಕ್ರಿಯಾಪದ ಇಡೀ ಕರೆನ್ಸಿ ನೋಟಿನ ಚಲಾವಣೆಯನ್ನು ನಿಯಂತ್ರಿಸುತ್ತದೆ. ಎಂದರೆ ಅದಕ್ಕೆ ಒಂದು ಕ್ರಿಯಾಸಾಮರ್ಥ್ಯವಿದೆ. ಇಂತದೇ ನೂರಾರು ಪ್ರಸಂಗಗಳು ನಮ್ಮ ದೈನಿಕ ವ್ಯವಹಾರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ಚಲನಚಿತ್ರ ಮಂದಿರಕ್ಕೆ ಹೋದಾಗ ಅಥವಾ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಹಣಕೊಟ್ಟು ಪಡೆದುಕೊಳ್ಳುವ ಟಿಕೆಟ್ ಮೇಲೆ ಭಾಷೆಯಲ್ಲಿ ಏನನ್ನು ಮುದ್ರಿಸಿರುತ್ತಾರೆ. ಹೆಚ್ಚು ಗಮನವಿಟ್ಟು ನಾವು ಅದನ್ನು ಓದುವುದಿಲ; ನೋಡುವುದೂ ಇಲ್ಲ. ಆದರೆ ಹಾಗೆಂದು ಖಾಲಿ ಕಾಗದವನ್ನು ಕೊಟ್ಟರೆ ಅದಕ್ಕೆ ಸುಮ್ಮನಾಗುವುದಿಲ್ಲ. ಅಂದರೆ ಆ ಚೀಟಿಯ ಮೇಲೆ ಮುದ್ರಿಸಿದ ಭಾಷೆಯ ರಚನೆಗೆ ಏನೋ ಮಹತ್ವವಿದೆ ಎಂದಾಯಿತು. ಆದರೆ ಆ ಮಹತ್ವವಿರುವುದು ಅಲ್ಲಿರುವ ಪದಗಳ ಅರ್ಥದಲ್ಲಲ್ಲ. ಆ ಪದಗಳನ್ನು ಒಂದು ನಿರ್ದಿಷ್ಟ ಬಂಧದಲ್ಲಿ ಅಳವಡಿಸಿರುವ ರೀತಿಗೆ ನಾವು ಸಮ್ಮತಿಯನ್ನು ಸೂಚಿಸುತ್ತೇವೆ. ಈ ಪ್ರಕ್ರಿಯೆಗಳನ್ನು ಭಾಷಾಕ್ರಿಯೆಗಳೆಂದು ಕರೆಯುವುದು ವಾಡಿಕೆ. ಇದು ಬಹಳ ವಿಶಾಲವಾದ ವ್ಯಾಪ್ತಿಯುಳ್ಳ ಪ್ರಕ್ರಿಯೆ. ಆದರೆ ಭಾಷಾಕ್ರಿಯೆಯಲ್ಲಿ ಭಾಷೆ ಪ್ರಮಾಣರೂಪದಲ್ಲಿ ಅಂದರೆ ಸುಲಭವಾಗಿ ಬದಲಾಯಿಸಲಾಗದ ರೂಪದಲ್ಲಿ ಇರಬೇಕಾಗುತ್ತದೆ. ಅಂದರೆ ಆ ನಿಗದಿತ ರೂಪದಲ್ಲಿ ಇರುವುದರಿಂದಲೇ ಅದಕ್ಕೆ ಒಂದು ಭಾಷಾಕ್ರಿಯೆಯಾಗುವ ಸಾಮರ್ಥ್ಯ ಒದಗುತ್ತದೆ.

ಪ್ರಮಾಣ ಭಾಷೆಯನ್ನು ರೂಪಿಸುವವರು ತಮಗೆ ಗೊತ್ತಿಲ್ಲದಂತೆ ಈ ಅಂಶವನ್ನು ಪಾಲಿಸುತ್ತಾರೆ. ಸಾಮಾನ್ಯವಾಗಿ ಅರ್ಥ ಖಚಿತತೆಯೇ ಪ್ರಮಾಣ ಭಾಷೆಯ ಪ್ರಧಾನ ಲಕ್ಷಣ ಎಂದು ತಿಳಿಯುವುದು ವಾಡಿಕೆ. ಆದರೆ ಇದು ಸರಿಯಾದ ಕಲ್ಪನೆಯಲ್ಲ. ಅರ್ಥ ಖಚಿತತೆಗಿಂತಲೂ ಮುಖ್ಯವಾದ ಸಂಗತಿ ಬೇರೊಂದಿರುತ್ತದೆ. ಮತ್ತೊಂದು ನಿದರ್ಶನವನ್ನು ಗಮನಿಸೋಣ. ಪ್ರಮಾಣ ಭಾಷೆಯ ರಚನೆಯನ್ನು ಗೇಲಿ ಮಾಡು ವವರು ಕೆಲವೊಮ್ಮೆ ಆ ಪದಗಳ ಅರ್ಥರಾಹಿತ್ಯವನ್ನು ಎತ್ತಿ ಹೇಳುತ್ತಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಎಂಬ ಪದಕ್ಕೆ ವೃತ್ತ ನಿರೀಕ್ಷಕ ಆರಕ್ಷಕ ಎಂಬ ಪದವನ್ನು ಬಳಸುತ್ತಾರೆಂದು ಕೊಳ್ಳಿ. ಸಹಜವಾಗಿಯೇ ವೃತ್ತ ನಿರೀಕ್ಷಕ ಆರಕ್ಷಕ ಪದ ಗೇಲಿಗೆ ಒಳಗಾಗುತ್ತದೆ. ಹಾಗೆಂದರೇನು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಅದರ ಅರ್ಥರಾಹಿತ್ಯವನ್ನು ಎತ್ತಿ ಹೇಳುತ್ತಾರೆ. ವಾಸ್ತವವಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಎಂಬ ಪದಕ್ಕೂ ಅರ್ಥವಿಲ್ಲ. ಆ ಪದವಿಯ ವ್ಯಕ್ತಿ ತೊಡುವ ಉಡುಪು, ಆ ಉಡುಪಿನಲ್ಲಿ ಭುಜದ ಮೇಲೆ ಇರುವ ನಕ್ಷತ್ರಗಳ ಸಂಖ್ಯೆ ಇವೆಲ್ಲವೂ ಸೂಚಕಗಳು. ಆದ್ದರಿಂದ ಆ ಪದಕ್ಕೆ ಸ್ವತಂತ್ರ ಅರ್ಥವಿಲ್ಲ. ಉಳಿದ ಸಂಗತಿಗಳೊಡನೆ ಅದು ಒಂದು ಭಾಷಾಕ್ರಿಯೆಯಾಗಿ ಬಳP ಯಾಗುತ್ತದೆ. ಪ್ರಮಾಣ ಭಾಷೆಯ ಆತ್ಯಂತಿಕ ಸ್ಥಿತಿಯಲ್ಲಿ ಈ ಅಂಶ ಮುಖ್ಯವಾಗುತ್ತದೆ. ನಾಗರಿಕ ಸಮಾಜ ತನ್ನ ಆಚರಣಾ ಜಗತ್ತನ್ನು ನೆಲೆಗೊಳಿಸಿಕೊಳ್ಳಲು ಬಳಸುವ ಹತ್ತಾರು ಪರಿಕರಗಳಲ್ಲಿ ಭಾಷೆಯೂ ಒಂದು. ಭಾಷೆಗೆ ಇರುವ ಅದರ ಸಹಜ ನೆಲೆಗಳನ್ನು ಸಂದಿಗ್ಧಗೊಳಿಸಿ ಅದಕ್ಕೊಂದು ಆಚರಣಾತ್ಮಕ ನೆಲೆಯನ್ನು ಕಲ್ಪಿಸಲಾಗುತ್ತದೆ. ಆಗಲೇ ಭಾಷೆ ಪ್ರಮಾಣರೂಪವನ್ನು ಪಡೆದಿರುತ್ತದೆ. ಈ ನೆಲೆ ನಮ್ಮ ಗ್ರಹಿಕೆಗೆ ಬಾರದಿದ್ದರೆ ಅದನ್ನು ನಿರ್ಲಕ್ಷಿಸುತ್ತೇವೆ ಅಥವಾ ಗೇಲಿ ಮಾಡುತ್ತೇವೆ.

ಕನ್ನಡ ಪ್ರಮಾಣ ಭಾಷೆಯ ರೂಪಣ ಕ್ರಿಯೆ ಕನ್ನಡ ಸಮಾಜದ ಮನ್ನಣೆಗೆ ಒಳಗಾಗಿದೆಯೇ ಎಂಬುದು ಒಂದು ಮಹತ್ವದ ಪ್ರಶ್ನೆಯಾಗಿದೆ. ನಾಗರಿಕ ಸಮಾಜದ ಚಹರೆಗಳನ್ನು ಪೂರ್ಣವಾಗಿ ಮೈಗೂಡಿಸಿಕೊಂಡಾಗ ಭಾಷೆಯ ಪ್ರಮಾಣ ರೂಪವನ್ನು ಒಪ್ಪುವ ಅಥವಾ ಒಪ್ಪದಿರುವ ಪ್ರಶ್ನೆ ಮುಖ್ಯವಾಗುವುದಿಲ್ಲ. ಏಕೆಂದರೆ ಅದಕ್ಕೆ ವಾಸ್ತವವಾಗಿ ಯಾವ ಅರ್ಥವೂ ಇರುವುದಿಲ್ಲ. ಕನ್ನಡ ಭಾಷೆಯಲ್ಲಿ ಈ ಪ್ರಕ್ರಿಯೆ ನಿಧಾನವಾಗಿ ನೆಲೆಯೂರುತ್ತಿದೆ. ಮೇಲುನೋಟಕ್ಕೆ ಇದು ಸಂವೇದನೆಗಳನ್ನು ಕಳೆದುಕೊಳ್ಳುವ ಸ್ಥಿತಿ ಎಂದು ತೋರುತ್ತದೆ. ಏಕೆಂದರೆ ನಮ್ಮ ಎರಡನೆಯ ಪ್ರಕೃತಿಯೇ ಆಗಿರುವ ಭಾಷೆ ಹೀಗೆ ಕೇವಲ ಒಂದು ಸೂಚಕವಾಗಿ ಬದಲಾಗು ವುದು ಯಾರಿಗಾದರೂ ಮುಜುಗರ ತರುವಂತದ್ದೇ. ಆದರೆ ಆಗಲೇ ಹೇಳಿದಂತೆ ಸಾಮಾಜಿಕ ವಿನ್ಯಾಸಗಳು ಬಯಸುವ ಸ್ಥಿತಿಯೇ ಇಂತದ್ದು. ಈ ವಿನ್ಯಾಸದ ಮೇಲೆ  ನಮಗೆ ಹಿಡಿತವಿಲ್ಲ. ಅದು ಭಾಷೆಯನ್ನು ಹೀಗೆ ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿರುತ್ತದೆ. ಹತ್ತಾರು ಬಗೆಗಳಲ್ಲಿ ಭಾಷಿಕ ಸಾಮಗ್ರಿಗಳನ್ನು ಅಳವಡಿಸಿ ಅದಕ್ಕೊಂದು ಸೂಚಕದ ಸ್ಥಾನವನ್ನು ರೂಪಿಸಿರುತ್ತದೆ. ಸಾಮಾಜಿಕವಾಗಿ ನಾವು ಆಚರಣೆಯ ಭಾಗವಾಗುತ್ತೇವೆ. ನಮ್ಮ ಮಾಧ್ಯಮಗಳು ದಿನದಿನವೂ ಬಳಸುವ ನೂರಾರು ಇಂತಹ ಪ್ರಮಾಣ ರೂಪಗಳು ನಮ್ಮ ಸಂವೇದನೆಯ ಅಂಚನ್ನು ಕೂಡಾ ಮುಟ್ಟದೇ ಹೋಗುವ ಸ್ಥಿತಿಯನ್ನು ನಾವು ಅನುಭವಿಸುತ್ತಿದ್ದೇವೆ.