ಭಾಷೆಯ ಅಧ್ಯಯನ ಮಾಡುವವರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪರಿಚಿತವಾಗುತ್ತಿರುವ ಪಾರಿಭಾಷಿಕ ಪದಗಳಲ್ಲಿ ಭಾಷಾನೀತಿಯೆಂಬುದು ಒಂದಾಗಿದೆ. ಭಾಷೆಯನ್ನು ದಿನವೂ ಬಳಸುವ ವ್ಯಕ್ತಿಗಳಿಗೆ ಅವರದ್ದೇ ಆದ ಭಾಷಾನೀತಿಯೆಂಬುದು ಇರುವುದಿಲ್ಲ. ಹಾಗೆಯೇ ವ್ಯಕ್ತಿಗೆ ಭಾಷೆಯ ಆಯ್ಕೆ ಮತ್ತು ದೃಷ್ಟಿಕೋನಗಳು ಇರುವುದು ಸಾಧ್ಯ. ಉದಾಹರಣೆಗೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳನ್ನು ಬಳಸುವ ವ್ಯಕ್ತಿಗೆ ತಾನು ಕನ್ನಡವನ್ನು ಎಲ್ಲಿ ಬಳಸಬೇಕು ಅಥವಾ ಎಲ್ಲಿ ಬಳಸಬಾರದು, ಹಾಗೆಯೇ ತೆಲುಗನ್ನು ಎಲ್ಲಿ ಬಳಸಬೇಕು ಮತ್ತು ಎಲ್ಲಿ ಬಳಸಬಾರದು ಎಂಬ ಬಗೆಗೆ ಒಂದು ನಿರ್ಧಾರವಿರುತ್ತದೆ. ಆ ನಿರ್ಧಾರಕ್ಕೆ ಆ ವ್ಯಕ್ತಿಯದೇ ಆದ ತಾರ್ಕಿಕ ಸಮರ್ಥನೆಗಳು ಇರುತ್ತವೆ. ಇದನ್ನು ಭಾಷಾ ಆಯ್ಕೆ ಎನ್ನುತ್ತೇವೆ. ಹಾಗೆಯೇ ಅದೇ ವ್ಯಕ್ತಿಗೆ ಕನ್ನಡಕ್ಕಿಂತ ತೆಲುಗು ಇಂಪಾದ ಭಾಷೆ ಎಂಬ ಅಭಿಪ್ರಾಯ ಮನಸ್ಸಿನಲ್ಲಿ ಇರಬಹುದು. ಹಾಗೆಯೇ ಕೆಲವರು ಸಂಸ್ಕೃತವನ್ನು ದೇವಭಾಷೆಯೆಂದು ಭಾವಿಸಿ, ಅದನ್ನು ಪ್ರಾರ್ಥನೆ ಪೂಜೆಗಳಲ್ಲಿ ಬಳಸುತ್ತಾರೆ. ಇದು ಭಾಷಾ ದೃಷ್ಟಿಕೋನ. ಈ ದೃಷ್ಟಿಕೋನಗಳಿಗೆ ಸಾಂಸ್ಕೃತಿಕವಾದ ಸಂದರ್ಭಗಳು ಪ್ರೇರಣೆ ನೀಡಿರಬಹುದು. ಭಾಷಾ ಆಯ್ಕೆಯಾಗಲೀ, ಭಾಷಾ ದೃಷ್ಟಿಕೋನವಾಗಲಿ ವ್ಯಕ್ತಿಯ ನೆಲೆಯಲ್ಲಿ ಇರುವಂತೆ ಸಾಮುದಾಯಿಕ ನೆಲೆಯಲ್ಲೂ ಇರಲು ಸಾಧ್ಯ.

ಆದರೆ ಭಾಷಾನೀತಿಯೆನ್ನುವುದು ಸಾಂಸ್ಥಿಕ ನೆಲೆಯ ಪರಿಕಲ್ಪನೆ. ಈ ಸಾಂಸ್ಥಿಕ ನೆಲೆಗಳಲ್ಲಿ ಸರಕಾರ ಪ್ರಧಾನವಾದದ್ದು. ಹಾಗೆಯೇ ಭಾಷೆಯ ಹಿತಾಸಕ್ತಿಗಳನ್ನು ರೂಪಿಸಲು ನಿರ್ಮಾಣಗೊಂಡು ಕೆಲಸ ಮಾಡುತ್ತಿರುವ ಸಂಸ್ಥೆಗಳು ಕೂಡ ತಮ್ಮದೇ ಆದ ಭಾಷಾನೀತಿಯನ್ನು ಹೊಂದಿರುತ್ತವೆ. ಉದಾಹರಣೆಗೆ ಕನ್ನಡದ ವಿಷಯ ದಲ್ಲಿ ತೆಗೆದುಕೊಂಡಾಗ ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಕನ್ನಡ ಭಾಷೆಯ ನೆಲೆಗಳನ್ನು ನಿರ್ದೇಶಿಸಲು ಉದ್ದೇಶಿತವಾದ ಸಂಸ್ಥೆ. ಅದರ ಹಲವಾರು ಕಾರ್ಯಕ್ರಮಗಳಲ್ಲಿ ಈ ಉದ್ದೇಶವನ್ನು ಪೂರೈಸಲು ಅನುಕೂಲಕರವಾದ ಕಾರ್ಯಕ್ರಮಗಳನ್ನು ಅದು ಕಾಲದಿಂದ ಕಾಲಕ್ಕೆ ರೂಪಿಸುತ್ತ ಬಂದಿದೆ. ಹೀಗಾಗಿ ಅದಕ್ಕೂ ಒಂದು ಭಾಷಾನೀತಿಯಿದೆ ಎಂದು ಹೇಳಲಡ್ಡಿಯಿಲ್ಲ. ಸರಕಾರದ ಭಾಷಾ ನೀತಿಗೂ ಇತರ ಸಾಮಾಜಿಕ ಸಂಸ್ಥೆಗಳ ಭಾಷಾನೀತಿಗೂ ಇರುವ ಸಂಬಂಧ ಕಾಲದಿಂದ ಕಾಲಕ್ಕೆ ಬೇರೆಯಾಗುತ್ತ ಹೋಗಬಹುದು. ಕೆಲವೊಮ್ಮೆ ಪೂರಕ ಸಂಬಂಧಗಳು ಇದ್ದರೆ ಮತ್ತೆ ಕೆಲವೊಮ್ಮೆ ವಿರೋಧ ನೆಲೆಯ ಸಂಬಂಧಗಳು ನಿರ್ಮಾಣಗೊಳ್ಳುತ್ತವೆ. ನಾವು ಈ ಅಧ್ಯಯನದಲ್ಲಿ ಈ ಭಾಷಾನೀತಿಗಳು ಹೇಗೆ ಕರ್ನಾಟಕದಲ್ಲಿ ರೂಪಗೊಂಡಿವೆ ಎಂಬುದನ್ನು ಪ್ರಾಸಂಗಿಕವಾಗಿ ಗಮನಿಸಲಿದ್ದೇವೆ.

ಕರ್ನಾಟಕ ಸರಕಾರದ ಭಾಷಾ ನೀತಿಗೆ ಎರಡು ನೆಲೆಯ ಒತ್ತಾಯಗಳು ಪ್ರೇರಕಗಳಾಗಿವೆ. ೧.ಸಂವಿಧಾನ ನಿರೂಪಿಸಿದ ಭಾಷಾ ನೀತಿಯನ್ನು ಕರ್ನಾಟಕದ ಸಂದರ್ಭದಲ್ಲಿ ಯಥಾವತ್ತಾಗಿ ಆಚರಿಸುವುದು. ೨.ಜನತೆಯ ಆಶೋತ್ತರಗಳನ್ನು ಅಪೇಕ್ಷೆಗಳನ್ನು ಗಮನಿಸಿ ಅದಕ್ಕನುಗುಣವಾದ ಭಾಷಾ ನೀತಿಯನ್ನು ರೂಪಿಸುವುದು. ಕರ್ನಾಟಕದಲ್ಲಿ ಈ ಎರಡೂ ಪ್ರೇರಣಾ ಮೂಲಗಳು ಯಾವಾಗಲೂ ಒಂದೇ ದಿಕ್ಕಿನಲ್ಲಿ ಕೆಲಸ ಮಾಡಿಲ್ಲ. ಸಂವಿಧಾನದ ಅಪೇಕ್ಷೆಗಳು ಜನರ ಅಗತ್ಯಗಳಿಗೆ ಪೂರಕವಾಗಿದ್ದಾಗ ಸರಕಾರದ ಭಾಷಾ ನೀತಿ ಉಪಯುಕ್ತ ಮತ್ತು ಅನುಕರಣೆಗೆ ಅರ್ಹವಾಗಿವೆ ಎನಿಸಿದೆ. ಆದರೆ ಈ ಪ್ರೇರಣೆಗಳಲ್ಲಿ ಯಾವಾಗ ಪರಸ್ಪರ ವಿರೋಧ ಉಂಟಾಗಿದೆಯೋ ಅಂತಹ ಸಂದರ್ಭದಲ್ಲಿ ಸರಕಾರ ತನ್ನ ಮೊದಲ ಕರ್ತವ್ಯವೆಂದು ಸಂವಿಧಾನ ಪರ ನೀತಿಯನ್ನೇ ತೋರಿಸಿದೆ. ಆಗ ಅದು ಜನರ ಅಪೇಕ್ಷೆಗಳನ್ನು ನಿರಾಕರಿಸಬೇಕಾದ ಪ್ರಸಂಗಗಳು ಉಂಟಾಗಿವೆ. ಅಂತಹ ಸಂದರ್ಭಗಳಲ್ಲಿ ಸರಕಾರದ ಭಾಷಾ ನೀತಿಯ ವಿರುದ್ಧ ಜನರು ವಿರೋಧವನ್ನು ವ್ಯಕ್ತಪಡಿಸುತ್ತಾ ಹೋರಾಟಕ್ಕೆ ಇಳಿದಿರುವುದು ಉಂಟು.

ಇಂತಹ ವಿರೋಧಗಳು ಉಂಟಾದಾಗ ಒಂದು ಸಂವಿಧಾನದ ಆಶೋತ್ತರಗಳನ್ನು ಜನರು ಒಪ್ಪುವಂತೆ ಅವರಿಗೆ ತಿಳಿಸಿ ಹೇಳುವ ಕೆಲಸಗಳನ್ನು ಮಾಡಿರಬಹುದು. ಇಲ್ಲವೆ ಅವರ ಅಪೇಕ್ಷೆಗಳನ್ನು ಹತ್ತಿಕ್ಕಿ ಸರಕಾರದ ಕಾರ್ಯಕ್ರಮವಾಗಿ ತಾನು ನಿರೂಪಿಸುವ ಭಾಷಾನೀತಿಯನ್ನು ಜಾರಿಗೆ ಕೊಟ್ಟಿರಬಹುದು. ಎರಡನೇ ಸಂದರ್ಭದಲ್ಲಿ ಜನರು ತೋರಿಕೆಗೆ ಒಪ್ಪಿದಂತೆ ಭಾಸವಾದರೂ ಅತೃಪ್ತಿಯೆಂಬುದು ಮಡುಗಟ್ಟಿದ್ದು ಅದು ಯಾವಾಗಲಾದರೂ ಸಿಡಿಯುವ ಉದಾಹರಣೆಗಳು ಇವೆ.

ಈಗ ಹೇಳಿದಂತೆ ಸರಕಾರ ಸಂವಿಧಾನದ ಅನುಕರಣೆ ಮಾಡುತ್ತ್ತ ಅದಕ್ಕೆ ಅನುಗುಣವಾದ ಭಾಷಾನೀತಿಯನ್ನು ರೂಪಿಸುತ್ತದೆ. ಆದರೆ ಹೀಗೆ ನೀತಿಯೊಂದು ಆಕಾರ ಪಡೆಯುವಾಗ ಕೇವಲ ಸಂವಿಧಾನದ ಭಾಷಾ ಸಂಬಂಧಿಕ ನಿಲುವುಗಳು ಮಾತ್ರ ಪ್ರೇರಕಗಳಾಗಿ ಕೆಲಸ ಮಾಡುತ್ತವೆ ಎನ್ನುವಂತಿಲ್ಲ. ಸಂವಿಧಾನದಲ್ಲೇ ಅಡಕವಾಗಿರುವ ಇನ್ನಿತರ ಸಾಮಾಜಿಕ, ಸಾಂಸ್ಕೃತಿಕ ನೆಲೆಯ ನಿರೂಪಣೆಗಳು ಪರೋಕ್ಷವಾಗಿ ಭಾಷಾನೀತಿಯನ್ನು ನಿರ್ಧರಿಸುವ ಕೆಲಸ ಮಾಡುತ್ತವೆ. ಉದಾಹರಣೆಗೆ ಸಂವಿಧಾನ ವ್ಯಕ್ತಿಗೆ ನೀಡಿರುವ ಮೂಲಭೂತ ಹಕ್ಕುಗಳಿವೆ. ಈ ಹಕ್ಕುಗಳ ವ್ಯಾಪ್ತಿಯು ಕೇವಲ ಭಾಷೆಗೆ ಮಾತ್ರ ಸಂಬಂಧಿಸಿಲ್ಲ. ಆದರೆ ಭಾಷಾನೀತಿಯ ನಿರ್ಧಾರದ ಸಂದರ್ಭದಲ್ಲಿ ಈ ಮೂಲಭೂತ ಹಕ್ಕುಗಳು ನಿರ್ದೇಶಕ ನೆಲೆಯಲ್ಲಿ ಕೆಲಸ ಮಾಡುತ್ತಿವೆ. ಇದಕ್ಕೆ ಹಲವು ನಿದರ್ಶನಗಳು ಸಾಧ್ಯ. ಉದಾಹರಣೆಗೆ ಶಾಲೆಯಲ್ಲಿ ಮಕ್ಕಳು ಯಾವ ಭಾಷೆಯ ಮೂಲಕ ವಿಷಯ ಗ್ರಹಣ ಮಾಡಬೇಕು ಎಂಬುದು ಒಂದು ಪ್ರಶ್ನೆ. ಭಾಷಿಕ ನೆಲೆಯಲ್ಲಿ ಇದಕ್ಕಿರುವ ಉತ್ತರ ಮತ್ತು ಮೂಲಭೂತ ಹಕ್ಕುಗಳ ನೆಲೆಯಲ್ಲಿ ಇರುವ ಉತ್ತರ ಬೇರೆ ಬೇರೆಯಾಗಿವೆ. ಮಗುವಿನ ಮನೆಯ ಮಾತನ್ನೇ ಕಲಿಕೆಯ ಮಾಧ್ಯಮವನ್ನಾಗಿ ಬಳಸಬೇಕೆಂಬ ನಿಲುವು ಕೆಲವೊಮ್ಮೆ ವ್ಯಕ್ತಿಯ ಮೂಲಭೂತ ಹಕ್ಕಿನ ಮಿತಿಯನ್ನು ಒಪ್ಪದೆಯೇ, ಅದರ ಉಲ್ಲಂಘನೆಯಾಗಿದೆ ಎಂದು ಸಮಾಜದ ಕೆಲವು ವರ್ಗಗಳಿಗೆ ಅನಿಸಿದೆ. ಆದ್ದರಿಂದ ಸರಕಾರ ಈ ಎರಡು ಪರಸ್ಪರ ಮುಖಾಮುಖಿಯಾಗಿರುವ ನಿಲುವುಗಳಲ್ಲಿ ಯಾವ ಆಯ್ಕೆಯನ್ನು ಮಾಡಿಕೊಳ್ಳಬೇಕು ಎಂಬುದು ಪ್ರಶ್ನೆಯಾಗಿದೆ. ಕರ್ನಾಟಕದ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಮೇಲಿಂದ ಮೇಲೆ ಮುಂಚೂಣಿಗೆ ಬಂದು ವಾಗ್ವಾದಗಳನ್ನು ಸೃಷ್ಟಿಸಿರು ವುದನ್ನೇ ನಾವು ಗಮನಿಸಬಹುದು. ಈ ಅಧ್ಯಯನದಲ್ಲಿ ಈ ಕುರಿತು ಚರ್ಚೆಯನ್ನು ಮುಂದೆ ಬೆಳೆಸಲಾಗುವುದು. ಸರ್ಕಾರದ ಭಾಷಾನೀತಿಯು ಕೆಲವೊಮ್ಮೆ ಖಚಿತ ಮಾತುಗಳಲ್ಲಿಯೂ ನಿರೂಪಿತವಾಗದೆ ಇರಬಹುದು. ಅದರ ಭಾಷಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಈ ನೀತಿಯು ಕಾರ್ಯಪ್ರವೃತ್ತವಾಗಿರುವುದನ್ನು  ಗಮನಿಸಿ ಆ ಮೂಲಕ ಭಾಷಾನೆಲೆಯನ್ನು ನಾವು ಪುನಾರಚಿಸಬೇಕಾಗಿದೆ. ಕೆಲವೊಮ್ಮೆ ಇಂತಹ ಭಾಷಾನೀತಿಗಳು ಅಂಶಿಕವಾಗಿ ನಿರೂಪಿತವಾದ ಕಾರ್ಯಕ್ರಮಗಳ ಮೂಲಕ ಪೂರ್ಣ ಆಕಾರವನ್ನು ಪಡೆದುಕೊಳ್ಳುತ್ತಿರುತ್ತವೆ.

ಭಾಷಾನೀತಿಯು ಜಾರಿಗೆ ಬರುವ ನೆಲೆಯೆಂದರೆ ಭಾಷಾಯೋಜನೆ. ಭಾಷಾ ಯೋಜನೆ ಎಂದರೇನು, ಇಲ್ಲಿ ಯೋಜನೆ ಎಂಬ ಮಾತು ಏಕೆ ಬಂದಿದೆ ಎಂಬುದು ಗಮನಿಸಬೇಕಾದ ಸಂಗತಿ. ಪ್ರಗತಿಯ ಸಾಧನೆಗೆ ಅನುಕೂಲಕರವಾದ ಕಾರ್ಯಕ್ರಮಗಳನ್ನು ಮುಂಚೆಯೇ ಯೋಚಿಸಿ ಅದಕ್ಕೆ ಅನುಗುಣವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಇದು ಸಮಾಜದ ಪ್ರಗತಿಯಲ್ಲಿ ನಂಬಿಕೆಯುಳ್ಳ ಪ್ರತಿಯೊಬ್ಬರು ಅನುಸರಿಸುವ ವಿಧಾನ. ಯೋಜನೆಯಿಂದ ಸಂಪನ್ಮೂಲ ಗಳ ಸರಿಯಾದ ವಿತರಣೆ, ನಿರ್ವಹಣೆ ಸಾಧ್ಯವಾಗಿರುತ್ತದೆ. ಸಂಪನ್ಮೂಲಗಳು ಹಾಳಾಗುವುದು, ಅನುಪಯುಕ್ತವಾಗುವುದು, ಅನಗತ್ಯವಾಗಿ ಹೆಚ್ಚು ಬಳಕೆಯಾಗುವುದು, ಅಗತ್ಯವಿದ್ದರೂ ಬಳಕೆಗೆ ಲಭ್ಯವಿಲ್ಲದಿರುವುದು. ಇಂತಹವನ್ನೆಲ್ಲ ಯೋಜನೆಗಳ ನಿರೂಪಣೆಗಳ ಮುಖಾಂತರ ನಿರ್ವಹಿಸಲು ಸಾಧ್ಯವಾಗುತ್ತದೆ. ಯೋಜನೆಯ ಈ ಸಾಮಾನ್ಯ ವ್ಯಾಖ್ಯಾನ, ಭಾಷೆಗೂ ಅನ್ವಯಿಸುವಂತಿದೆ. ಈ ಬಗೆಗೆ ಭಾಷಾಶಾಸ್ತ್ರಜ್ಞರಲ್ಲಿ ಒಮ್ಮತ ಇಲ್ಲದಿದ್ದರೂ ಈಗ ಚಾಲ್ತಿಯಲ್ಲಿರುವ ಕ್ರಮದಂತೆಯೇ ಯೋಜನೆಗಳ ನಿರೂಪಣೆ ಮತ್ತು ನಿರ್ವಹಣೆಗಳ ಬಗೆಗೆ ಒಂದು ಸರ್ವ ಸಮ್ಮತ ಒಲವು ಇದೆ ಎಂದು ತೋರುತ್ತದೆ. ಅದರಲ್ಲೂ ಸರಿಸುಮಾರು ಹತ್ತೊಂಬನೇ ಶತಮಾನದ ಅನಂತರದಲ್ಲಿ ಹೀಗೆ ಯೋಜನೆಗಳನ್ನು ಭಾಷೆಗಳ ನೆಲೆಯಲ್ಲಿ ರೂಪಿಸಿದ ಪ್ರವೃತ್ತಿ ಬೆಳೆದು ಬಂದಿದೆ. ಭಾಷೆಯ ಬೆಳವಣಿಗೆಯ ಬಗೆಗೆ ಹೀಗೆ ಯೋಜನೆಗಳನ್ನು ರೂಪಿಸುವ ಪ್ರವೃತ್ತಿ ಬಹು ಹಿಂದಿನಿಂದಲೂ ಇದ್ದಿತ್ತೆಂದು ಹೇಳಲು ನಿದರ್ಶನಗಳಿವೆ. ಭಾಷೆಗಳಿಗೆ ಲಿಪಿ ವ್ಯವಸ್ಥೆ ರೂಪಿಸಿದ್ದು, ವ್ಯಾಕರಣಗಳನ್ನು ಬರೆದದ್ದು, ಕಲಿಕೆಯ ವಿಧಾನಗಳನ್ನು ನಿರೂಪಿಸಿದ್ದು, ನಿಘಂಟುಗಳನ್ನು ರಚಿಸಿದ್ದು, ಇವೆಲ್ಲವೂ ಒಂದಲ್ಲ ಒಂದು ವಿಧದಲ್ಲಿ ಭಾಷಾ ಯೋಜನೆಗಳೇ. ಇವುಗಳನ್ನೆಲ್ಲ ವ್ಯಕ್ತಿಗಳು ಕಾರ್ಯ ಪ್ರವೃತ್ತಿಸಿದಂತೆ ತೋರಿದರೂ ಎಷ್ಟೋ ವೇಳೆ ಆಯಾ ಕಾಲದ ಆಳುವ ವರ್ಗದ ಒತ್ತಾಸೆಗಳು ಇಂತಹ ಯೋಜನೆಗಳ ಹಿಂದೆ ಇವೆ ಎನ್ನುವುದಕ್ಕೂ ನಿದರ್ಶನಗಳಿವೆ.

ಕರ್ನಾಟಕ ಸರಕಾರದ ಭಾಷಾನೀತಿಯು ಹೀಗೆ ಎಲ್ಲಿಯೂ ನಿರ್ದಿಷ್ಟ ದಾಖಲೆಯಾಗಿ ಲಭಿಸುವುದಿಲ್ಲ. ಕಾಲದಿಂದ ಕಾಲಕ್ಕೆ ಸರಕಾರ ತನ್ನ ನಿರ್ಣಯ ಸ್ವರೂಪ ಕಾರ್ಯಕ್ರಮಗಳ ಮೂಲಕ ತನ್ನ ಭಾಷಾನೀತಿಯನ್ನು ತಾನೇ ಕಂಡುಕೊಳ್ಳುತ್ತ್ತ ಹೋದಂತೆ ಕಾಣುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಈ ಭಾಷಾನೀತಿ ಶೋಧದ ಹೆಜ್ಜೆಗಳನ್ನು ನಾವು ಗುರುತಿಸಲು ಬರುತ್ತದೆ. ಈ ಪ್ರಮಾಣದಲ್ಲಿ ಸರಕಾರ ಪ್ರಾಂತೀಯ, ದೇಶೀಯ ಮತ್ತು ಜಾಗತಿಕ ನೆಲೆಯ ಪ್ರಭಾವ ಪ್ರೇರಣೆಗಳಿಗೆ ಒಳಗಾಗಿದೆ.

ಎಷ್ಟೊ ಸಂದರ್ಭಗಳಲ್ಲಿ ತನ್ನ ಆಚರಿತ ಭಾಷಾನೀತಿಯನ್ನು ಬಿಟ್ಟುಕೊಟ್ಟು ಹೊಸ ಭಾಷಾನೀತಿಯ ಕಡೆಗೆ ಸರಕಾರ ಪಲ್ಲಟಗೊಂಡಿರುವುದು ಉಂಟು. ಇದರಿಂದಾಗಿ ಸರಕಾರದ ಭಾಷಾಯೋಜನೆಯು ಕೂಡ ನಿರ್ದಿಷ್ಟ ಚೌಕಟ್ಟಿನಲ್ಲಿ ನಿಗದಿಗೊಂಡಿಲ್ಲ. ಅದರಲ್ಲಾಗಿರುವ ಬದಲಾವಣೆಗಳನ್ನು ಗಮನಿಸಿಯೇ ಕೆಲವೊಮ್ಮೆ ಸರಕಾರಕ್ಕೆ ಭಾಷಾಯೋಜನೆಯೇ ಇಲ್ಲ ಎಂದು ಕೆಲವರು ಹೇಳಿರುವುದುಂಟು. ಇದೊಂದು ಅತಿರೇಕದ ಪ್ರತಿಕ್ರಿಯೆ. ಆದರೆ ಭಾಷಾಯೋಜನೆಯಲ್ಲಿ ಗೊಂದಲ ಗಳಿಲ್ಲವೆಂದಲ್ಲ. ಈ ಗೊಂದಲಗಳಿಗೆ ಕಾರಣಗಳು ಸಾಮಾಜಿಕ ನೆಲೆಯಲ್ಲಿವೆ. ಅಥವಾ ಸಾಮಾಜಿಕ ನೆಲೆಯ ಗೋಜಲುಗಳೇ ಭಾಷಾಯೋಜನೆಯಲ್ಲೂ ಪ್ರತಿನಿಧಿತ ವಾಗಿವೆ ಎನ್ನಲು ಅಡ್ಡಿಯಿಲ್ಲ.