ಈ ಹಿಂದೆ ಹೇಳಿದಂತೆ ಕನ್ನಡ ಹಲವು ಆಡಳಿತ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿತ್ತು. ಈ ಪರಿಸ್ಥಿತಿಯಿಂದಾಗಿ ಕನ್ನಡ ಭಾಷಿಕರ ನಡುವೆ ವ್ಯಾವಹಾರಿಕ ಸಂಬಂಧ ಕನಿಷ್ಟ ಪ್ರಮಾಣದಲ್ಲಿ ನಡೆಯುತ್ತಿತ್ತು. ಭಾಷಿಕ ಕೊಡುಗೆಗಳು ಹೆಚ್ಚಿನ ಪ್ರಮಾಣದಲ್ಲಿ ದೈನಂದಿನ ವ್ಯವಹಾರಗಳಲ್ಲಿ ನಡೆಯುತ್ತಿದ್ದುದು ಕಡಿಮೆ. ಇಡೀ ಕನ್ನಡ ಪ್ರದೇಶವನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನಿಸಿತ್ತು(ಈ ಸಂಸ್ಥೆಯ ಮೊದಲ ಹೆಸರು ಕರ್ಣಾಟಕ ಸಾಹಿತ್ಯ ಪರಿಷತ್ತು ಎಂದಿತ್ತು. ಅನಂತರದಲ್ಲಿ ಅದು ಕರ್ಣಾಟಕವೋ ಕರ್ನಾಟಕವೋ ಎಂಬ ವಿವಾದ ಮೊದಲಾಗಿ ಕೊನೆಗೆ ಅದರ ಹೆಸರು ಕನ್ನಡ ಸಾಹಿತ್ಯ ಪರಿಷತ್ತು ಎಂದಾಯಿತು. ದೇಶವಾಚಿಯಾಗಿದ್ದ ಹೆಸರು ಭಾಷಾವಾಚಿಯಾಗಿ ಬದಲಾದದ್ದು ಆಕಸ್ಮಿಕವಿರಲಾರದು). ತನ್ನ ವಾರ್ಷಿಕ ಸಾಹಿತ್ಯ ಸಮ್ಮೇಳನಗಳ ಮೂಲಕ ಜನರು ಒಂದೆಡೆ ಸೇರುವಂತೆ ಏರ್ಪಾಡು ಮಾಡುತ್ತಿತ್ತು. ಭಾಷಿಕ ಕೊಡುಗೆಗಳ ದೃಷ್ಟಿಯಿಂದ ಈ ಸಮ್ಮೇಳನಗಳ ಪ್ರಭಾವ ಹೆಚ್ಚೇನು ಇದ್ದಿರಲಾರದು. ಅಭಿಮಾನವನ್ನು ಹುಟ್ಟಿಸುವ ಕೆಲಸಕ್ಕೆ ಮಾತ್ರ ಅವು ಸೀಮಿತವಾಗಿರಬಹುದು. ಈ ಸಮ್ಮೇಳನಗಳ ಅಧ್ಯಕ್ಷರು ಮಾಡಿದ ಭಾಷಣಗಳು ಮುಖ್ಯ ಸಾಂಸ್ಕೃತಿಕ ದಾಖಲೆಗಳಾಗಿವೆ.

ಇದಲ್ಲದೇ ಶೈಕ್ಷಣಿಕ ವಾಣಿಜ್ಯ ಮತ್ತು ಆಡಳಿತ ಈ ನೆಲೆಗಳಲ್ಲಿಯೂ ವಿವಿಧ ಕನ್ನಡ ಪ್ರದೇಶಗಳ ನಡುವೆ ಸಂವಾದ ಸಾಧ್ಯವಿರಲಿಲ್ಲ. ಸಾಹಿತ್ಯ ಕೃತಿಗಳು ಒಂದು ನೆಲೆಯಲ್ಲಿ ಈ ಎಲ್ಲ ಕಟ್ಟುಪಾಡುಗಳನ್ನು ಮೀರಲು ಯತ್ನಿಸಿದವು. ಆದರೂ ಕನ್ನಡದ ವಿವಿಧ ಪ್ರಭೇದಗಳು ಎಲ್ಲ ಪ್ರದೇಶಗಳಲ್ಲೂ ಗಣನೆಗೆ ಬರುವಷ್ಟು ವ್ಯಾಪಕ ನೆಲೆಗಳು ರೂಪುಗೊಳ್ಳಲಿಲ್ಲ. ಎಲ್ಲ ಕನ್ನಡ ಪ್ರದೇಶಗಳನ್ನು ವ್ಯಾಪಿಸುವ ಸಮೂಹ ಮಾಧ್ಯಮಗಳು ಇರಲಿಲ್ಲ. ಇದಕ್ಕೆ ಚಲನಚಿತ್ರ ಮತ್ತು ವೃತ್ತಿ ರಂಗಭೂಮಿಯ ನಾಟಕಗಳು ವಿನಾಯಿತಿಯಾಗಿವೆ. ಆಖಿಲ ಕರ್ನಾಟಕ ವ್ಯಾಪ್ತಿಯ ಪತ್ರಿಕೆಗಳಾಗಲಿ, ಬಾನುಲಿಯಾಗಲಿ ಆಗ ಇರಲಿಲ್ಲ. ವಾಕ್‌ಚಿತ್ರಗಳು ಸಾಕಷ್ಟು ಪ್ರಮಾಣದಲ್ಲಿ ಏಕೀಕರಣ ಹೊತ್ತಿಗೆ ಕರ್ನಾಟಕದ ಬಹುಪಾಲು ಪ್ರದೇಶಗಳಿಗೂ ವ್ಯಾಪಿಸಿದ್ದವು. ಹಾಗೆ ನೋಡಿದರೆ ಕರ್ನಾಟಕ ಏಕೀಕರಣಗೊಂಡ ಮೇಲೆ ಅದರ ಭೌಗೋಳಿಕ ಚಹರೆ ಯನ್ನು ಸೂಚಿಸುವ ಭೂಪಟವೊಂದು ಮೊದಲು ಕನ್ನಡಿಗರಿಗೆ ಕಾಣಿಸಿದ್ದು ಒಂದು ಚಲನಚಿತ್ರದಲ್ಲಿ ಎಂಬುದನ್ನು ಗಮನಿಸಬೇಕು. ೧೯೫೮ರ ಸ್ಕೂಲ್ ಮಾಸ್ಟರ್ ಚಲನಚಿತ್ರದಲ್ಲಿ ಹಳ್ಳಿಯ ಶಾಲೆಯ ಗೋಡೆಯ ಮೇಲೆ ಒಂದು ಕರ್ನಾಟಕದ ಭೂಪಟ ಕಾಣಿಸುತ್ತದೆ. ಹೀಗಿದ್ದರೂ ಚಲನಚಿತ್ರಗಳು ಬಳಸುತ್ತಿದ್ದ ಭಾಷೆ ಒಂದು ಬಗೆಯಲ್ಲಿ ಕನ್ನಡ ಮಾತಾಡುವ ಜನರೆಲ್ಲರಿಗೂ ಬಹುಮಟ್ಟಿಗೆ ಒಪ್ಪಿತವಾದ ಪ್ರಮಾಣ ಭಾಷೆಯಾಗಿತ್ತು. ಅದರಲ್ಲೂ ಹಲವು ಬಗೆಗಳಿದ್ದವು. ಕಲಿತ ನಗರದ ಜನ ಬಳಸುವ ಕನ್ನಡ ಒಂದು ಬಗೆಯದ್ದಾದರೆ ಕಲಿಯದ ಹಳ್ಳಿಯ ಜನರು ಬಳಸುವ ಕನ್ನಡ ಇನ್ನೊಂದು ಬಗೆಯದು. ಈ ಮಾದರಿಗಳನ್ನು ಚಿತ್ರಗಳು ಅಚ್ಚುಕಟ್ಟಾಗಿ ಬಳಸುತ್ತ ಬಂದವು.

ವೃತ್ತಿ ರಂಗಭೂಮಿಯ ನಾಟಕಗಳು ಒಂದು ರೀತಿಯಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ಪಡೆಯಲು ಆರಂಭಿಸಿದವು. ದಕ್ಷಿಣದ ಕಂಪನಿಗಳು ತುಂಗಭದ್ರೆಯನ್ನು ದಾಟಿ ಎತ್ತರಕ್ಕೆ ಹೋಗುವುದು, ಉತ್ತರದ ಕಂಪನಿಗಳು ಆಗಾಗ ದಕ್ಷಿಣಕ್ಕೆ ಬರುವುದು ನಡೆದಿತ್ತು. ಇದು ಹೆಚ್ಚು ವ್ಯಾಪಕವಾಗಿ ನಡೆಯುತ್ತಿರಲಿಲ್ಲ. ಇದಕ್ಕೆ ಆರ್ಥಿಕ ಕಾರಣಗಳು ಇರುವಂತೆ ತೋರುತ್ತದೆ. ಹೊರತಾಗಿ ಆಯಾ ಕಂಪನಿಗಳು ತಮ್ಮ ನಾಟಕಗಳಲ್ಲಿ ಬಳಸುತ್ತಿದ್ದ ಭಾಷೆಯಲ್ಲಿ ಅಷ್ಟೇನು ವ್ಯತ್ಯಾಸಗಳು ಆಗ ಕಾಣಿಸುತ್ತಿರಲಿಲ್ಲ. ಶಿರಹಟ್ಟಿ ಕಂಪನಿ, ಕೊಣ್ಣೂರು ಕಂಪನಿ, ಗರುಡ ಸದಾಶಿವರಾವ್ ಕಂಪನಿ ನಟಿಸುತ್ತಿದ್ದ ನಾಟಕಗಳ ಭಾಷೆಗಳು; ದಕ್ಷಿಣದ ರತ್ನಾವಳಿ ಕಂಪನಿ, ಮಹಮದ್ ಪೀರ್ ಅವರ ಕಂಪನಿ, ಹಿರಣ್ಣಯ್ಯನವರ ಕಂಪನಿ, ಗುಬ್ಬಿ ವೀರಣ್ಣನವರ ಕಂಪನಿಯ ನಾಟಕಗಳ ಭಾಷೆಗಳಲ್ಲಿ ಅಗಾಧ ವ್ಯತ್ಯಾಸಗಳೇನೂ ಇರಲಿಲ್ಲ. ಅಂದರೆ ಈ ನಾಟಕಗಳೆಲ್ಲ ನಾಟಕದ ಒಂದು ಮನ್ನಿತ ಶೈಲಿಯನ್ನೇ ಒಟ್ಟಾರೆ ಬಳಸುತ್ತಿದ್ದವು.

ಕರ್ನಾಟಕದ ಜನತೆಗೆ ಕೇಳಲು ಸಿಗುತ್ತಿದ್ದ ಈ ಪ್ರಮಾಣ ಕನ್ನಡ,  ಮಾಧ್ಯಮ ಗಳಾದ ಚಲನಚಿತ್ರ ಮತ್ತು ವೃತ್ತಿ ರಂಗಭೂಮಿಗಳಲ್ಲಿ ಬಹುಮಟ್ಟಿಗೆ ಬಳಕೆಯಾಗುತ್ತಿದೆ. ಉಳಿದಂತೆ ಈ ಭಾಷಾ ಪ್ರದೇಶಗಳು ಪರಸ್ಪರ ಭಾಷಿಕ ಸಂಪರ್ಕ ಇಲ್ಲದೇ ವ್ಯವಹರಿಸುತ್ತಿದ್ದವು. ಈ ಮೇಲಿನ ವಿವರಣೆಯಲ್ಲಿ ಕರಾವಳಿ ಪ್ರದೇಶಕ್ಕೆ ಮತ್ತು ನಿಜಾಮರ ಆಡಳಿತಕ್ಕೆ ಒಳಪಟ್ಟ ಪ್ರದೇಶಕ್ಕೆ ಹೆಚ್ಚು ಅನ್ವಯಿಸುವುದಿಲ್ಲ. ಆ ಪ್ರದೇಶಗಳಂತೂ ಇನ್ನೂ ಕನ್ನಡದ ತೆಕ್ಕೆಗೆ ಬಂದಿರಲಿಲ್ಲ.

ಏಕೀಕರಣದ ಸಂದರ್ಭದಲ್ಲಿ ಹೀಗೆ ಇದ್ದ ಹಲವು ಕನ್ನಡಗಳ ಪರಿಸ್ಥಿತಿಯು ಬೀಚಿಯವರು ಏಕೀಕರಣ ಕುರಿತು ಬರೆದ ನಾಟಕದಲ್ಲಿ ಗೇಲಿಗೆ ಒಳಗಾಗಿದೆ. ವಿವಿಧ ಪ್ರದೇಶದ ಉಪಭಾಷೆಗಳನ್ನು ಆಡುವ ಜನರು ಕನ್ನಡ ಮಾತೆಯ ಪೂಜೆಗೆ ಬಂದಾಗ ಆಗುವ ಅವಾಂತರವನ್ನು ಆ ನಾಟಕ ಚಿತ್ರಿಸುತ್ತದೆ. ಹೀಗೆ ಕನ್ನಡದ ವಿವಿಧ ಪ್ರಭೇದಗಳು ಆಯಾ ಪ್ರದೇಶದ ಜನರ ಓರೆಕೋರೆಗಳನ್ನು ತಿಳಿಸಲು ಬಳಕೆಯಾದಂತೆ ಕಾಣುತ್ತದೆ. ಹಾಸ್ಯ ಪ್ರಸಂಗಗಳನ್ನು ರೂಪಿಸಲು ಭಾಷೆಯ ವಿವಿಧ ಬಗೆಯಲ್ಲಿ ಇರುವ ವ್ಯತ್ಯಾಸಗಳನ್ನು ಆ ಹೊತ್ತಿನ ಬರಹಗಾರರು ಬಳಸಿಕೊಂಡರು. ಈ ಪರಿಸ್ಥಿತಿಯಿಂದ ಇನ್ನೂ ನಾವು ಹೊರಬಂದಿಲ್ಲ.

ಕರ್ನಾಟಕ ರಾಜ್ಯ ನಿರ್ಮಿತಿಯ ಸಂದರ್ಭದಲ್ಲಿ ಅಂದಿನ ಆಡಳಿತ ವರ್ಗಕ್ಕೆ ಎದುರಿದ್ದ ಮುಖ್ಯ ಸವಾಲೆಂದರೆ, ಹೀಗೆ ಭಿನ್ನ ಹಿನ್ನೆಲೆಯ ಭಾಷಾ ಪ್ರದೇಶದ ಜನರನ್ನು ಒಂದು ಚೌಕಟ್ಟಿಗೆ ಹೇಗೆ ತರುವುದು ಎಂಬ ಪ್ರಶ್ನೆ. ರಾಜ್ಯಾಂಗದಲ್ಲಿ ಆಗ ಲಭ್ಯವಿದ್ದ ಅವಕಾಶವನ್ನು ಬಳಸಿಕೊಂಡು ಆ ಹೊತ್ತಿಗೆ ಇಂಗ್ಲಿಶನ್ನು ಆಡಳಿತ ಭಾಷೆಯೆಂದು ಬಳಸಲು ಒಪ್ಪಿಗೆ ನೀಡಿದರು. ಆದರೆ ಭಾಷಾವಾರು ಪ್ರಾಂತ್ಯ ರಚನೆಯ ಮೂಲತರ್ಕವೇ ಆಯಾ ಪ್ರಾಂತ್ಯದ ಭಾಷೆಗಳ ಬೆಳವಣಿಗೆ ಆಗಬೇಕು ಎಂದಿತು. ಆದ್ದರಿಂದ ಇಂಗ್ಲಿಶನ್ನೇ ಎಂದೆಂದೂ ಹೀಗೆ ಸಂಪರ್ಕ ಭಾಷೆಯಾಗಿ ರಾಜ್ಯದೊಳಗೆ ಬಳಸುವುದು ಸಾಧ್ಯವಿರಲಿಲ್ಲ. ಹಾಗೆಂದು ಕನ್ನಡವನ್ನು ತಟ್ಟನೆ ರಾಜ್ಯದ ಸಂಪರ್ಕ ಭಾಷೆಯಾಗಿ ಉನ್ನತೀಕರಿಸುವುದು ಕೂಡ ಸಾಧ್ಯವಿರಲಿಲ್ಲ. ಅದಕ್ಕೆ ಸಾಂದರ್ಭಿಕ ಕಾರಣಗಳು ಹಲವಿವೆ. ಮುಖ್ಯವಾಗಿ ಮದ್ರಾಸ್ ಪ್ರೆಸಿಡೆನ್ಸಿಯಿಂದ ಈ ರಾಜ್ಯಕ್ಕೆ ಸೇರ್ಪಡೆಯಾದ ಮಂಗಳೂರು ಪ್ರದೇಶ ತುಳು ಪ್ರಧಾನವಾದ ನಾಡಾಗಿತ್ತು. ಅಲ್ಲಿ ಹಿಂದಿನಿಂದಲೂ ಕನ್ನಡ ಎರಡನೇ ಪ್ರಧಾನಭಾಷೆಯಾಗಿ ಬಳಕೆಯಾಗಿತ್ತು. ಆದರೂ ಕಲಿಕೆಯ ಪ್ರಮಾಣ ಕಡಿಮೆ ಇದ್ದ ಆ ಹೊತ್ತಿನಲ್ಲಿ ಕನ್ನಡವನ್ನು ಅಧಿಕೃತವಾಗಿ ಬರಹದಲ್ಲಿ ಬಳಸುವವರ ಸಂಖ್ಯೆ ಅಲ್ಲಿ ಹೆಚ್ಚಿರಲಿಲ್ಲ. ಸಿ ರಾಜ್ಯವೆಂದು ಮನ್ನಣೆ ಪಡೆದಿದ್ದ ಕೊಡಗನ್ನು ಅದರ ಪ್ರತ್ಯೇಕತೆಯಿಂದ ಪಲ್ಲಟಗೊಳಿಸಿ ಕರ್ನಾಟಕದ ಭಾಗವನ್ನಾಗಿ ಮಾಡಲಾಯಿತು. ಇಲ್ಲಿ ೧೯೫೨ರ ಅನಂತರದಲ್ಲಿ ಸ್ವತಂತ್ರ ಅಸೆಂಬ್ಲಿ ಇದ್ದು ಪ್ರತ್ಯೇಕ ಮಂತ್ರಿ ಮಂಡಲ ಆಡಳಿತ ನಡೆಸುತ್ತಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ಕರ್ನಾಟಕ ಕೊಡವರ ಆಯ್ಕೆಯಾಗಿದೆಯೇ ಎಂಬುದು ಇಂದಿಗೂ ಬಿಡಿಸಲಾಗದ ಪ್ರಶ್ನೆ.  ಈಗಲೂ ಕೊಡವರಲ್ಲಿ ಒಂದು ಸಮುದಾಯ ಕರ್ನಾಟಕದಿಂದ ಬೇರೆಯಾಗಿ ರಾಜ್ಯವೊಂದನ್ನು ಕಟ್ಟಿಕೊಳ್ಳಲು ಇಲ್ಲವೇ ಈ ರಾಜ್ಯದೊಳಗೇ ಸ್ವಾಯತ್ತ ಪ್ರದೇಶವಾಗಲು ಕೇಂದ್ರಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದೆ. ಇನ್ನು ಮುಂಬೈ ಪ್ರೆಸಿಡೆನ್ಸಿಗೆ ಸೇರಿದ ವಾಯುವ್ಯ ಕರ್ನಾಟಕ ಭಾಗಗಳಲ್ಲಿ ಮರಾಠಿಯ ಪ್ರಾಬಲ್ಯವಿತ್ತು. ಜೊತೆಗೆ ಕೊಂಕಣಿ ಮತ್ತಿತರ ಭಾಷೆಗಳನ್ನಾಡುವ ಜನರು ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಪ್ರದೇಶದಲ್ಲಿ ಕನ್ನಡದ ಬಳಕೆ ಶಿಕ್ಷಣ ಕ್ಷೇತ್ರದಲ್ಲಿ ನೆಲೆಗೊಂಡಿತ್ತು. ಆದರೆ ಆಡಳಿತಾತ್ಮಕವಾಗಿ ಅದು ಇನ್ನೂ ಮರಾಠಿಯ ಗುಂಗಿನಲ್ಲಿತ್ತು. ನಿಜಾಮರ ಆಳ್ವಿಕೆಯಲ್ಲಿದ್ದ ಪ್ರದೇಶಗಳಲ್ಲಿ ಉರ್ದು ಎಷ್ಟು ಪ್ರಬಲವಾಗಿತ್ತೆಂದರೆ ಅಲ್ಲಿ ಕಲಿಯುವವರೆಲ್ಲ ಉರ್ದುವಿನ ಮೂಲಕವೇ ಕಲಿಯ ಬೇಕಿತ್ತು. ಅಂದರೆ ಅಕ್ಷರಸ್ಥರು ಕೂಡ ಕನ್ನಡವನ್ನು ಬರೆದು ಓದುವ ಕೌಶಲ್ಯಗಳನ್ನು ಪಡೆಯುವುದು ಸಾಧ್ಯವಿರಲಿಲ್ಲ. ಇನ್ನು ಕಲಿಯದ ಅಸಂಖ್ಯಾತ ಕನ್ನಡಿಗರು ದ್ವಿಭಾಷಿಕರಾಗಿ ತಮ್ಮ ದೈನಂದಿನ ವ್ಯವಹಾರವನ್ನು ನಡೆಸುತ್ತಿದ್ದವರು. ಅವರಲ್ಲಿದ್ದ ಕನ್ನಡದ ಕೌಶಲಗಳು ಕನಿಷ್ಟ ಪ್ರಮಾಣದಲ್ಲಿ ಇದ್ದಂತೆ ತೋರುತ್ತದೆ.

ಇದಲ್ಲದೆ, ಇಡೀ ಕರ್ನಾಟಕ ಹಲವಾರು ದ್ವಿಭಾಷಿಕ ಸಮುದಾಯಗಳನ್ನು ಹೊಂದಿತ್ತು. ಈ ಸಮುದಾಯಗಳಲ್ಲಿ ಹೆಚ್ಚಿನವಕ್ಕೆ ಕನ್ನಡ ಎರಡನೇ ಭಾಷೆ. ಪೂರ್ವ ಗಡಿಭಾಗದುದ್ದಕ್ಕೂ ತೆಲುಗು-ಕನ್ನಡ, ವಾಯುವ್ಯ ಗಡಿಭಾಗದಲ್ಲಿ ಮರಾಠಿ-ಕನ್ನಡ, ಕೊಂಕಣಿ-ಕನ್ನಡ, ಕರಾವಳಿಯಲ್ಲಿ ತುಳು-ಕನ್ನಡ ಮಾತಾಡುವವರು ಇದ್ದರು. ನಾಡಿನ ಒಳಗೆ ಕೂಡ ಈ ದ್ವಿಭಾಷಿಕ ಸಮುದಾಯಗಳು ಬೇರೆ ಬೇರೆ ರೀತಿ ವ್ಯಾಪಿಸಿದ್ದವು. ಮಧ್ಯ ಕರ್ನಾಟಕದಲ್ಲಿ ಮತ್ತು ದಕ್ಷಿಣದ ಕೆಲವು ಭಾಗಗಳಲ್ಲಿ ಉರ್ದು-ಕನ್ನಡ ಸಮುದಾಯವು ನೆಲೆಸಿತ್ತು. ಈ ಎಲ್ಲ್ಲ ಸಂಗತಿಗಳಿಂದ ಕರ್ನಾಟಕದ ಚಿತ್ರ ಸ್ಪಷ್ಟಗೊಳ್ಳುತ್ತದೆ. ರಾಜಕೀಯ ನಿರ್ಧಾರದಿಂದ ಒಗ್ಗೂಡಿದ ಈ ಭೂಪ್ರದೇಶದ ಜನ ಸಮುದಾಯ; ೧.ಹಲವು ಭಾಷೆಗಳ ನಡುವೆ ಹಂಚಿ ಹೋಗಿತ್ತು. ಮತ್ತು ೨.ಕನ್ನಡ ಮಾತಾಡುವವರು ಕೂಡ ಪರಸ್ಪರ ಸಂಪರ್ಕವಿಲ್ಲದೆ ಹಲವು ಉಪಭಾಷೆಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿದ್ದರು.

ಇದು ಅಲ್ಲಿಯವರೆಗಿನ ಆಡಳಿತಗಳಿಗೆ ದೊಡ್ಡ ಸಮಸ್ಯೆಯಾಗಿಯೇ ಪರಿಣಮಿಸಲಿಲ್ಲ. ಏಕೆಂದರೆ ಆ ಆಡಳಿತ ವರ್ಗದ ತಾತ್ವಿಕತೆಯು ಜನಪರವಾದು ದ್ದಾಗಿರಲಿಲ್ಲ. ಆಡಳಿತದ ವಿವಿಧ ಅಂಗಗಳು ಜನರಿಗೆ ಉತ್ತರದಾಯಿಯಾಗಿರಲಿಲ್ಲ. ಜನರ ಕೆಲವು ಪ್ರತಿನಿಧಿಗಳು ಅಥವಾ ಜನರನ್ನು ಪ್ರತಿನಿಧಿಸುತ್ತೇವೆ ಎಂದು ಹೇಳುವವರು ಆಡಳಿತದೊಡನೆ ಸಂಪರ್ಕ ಹೊಂದಿದ್ದರೆ ಸಾಕಾಗಿತ್ತು. ಅಂತಹವರು ತಾವು ಇಂಗ್ಲಿಶ್ ಮೂಲಕ ಈ  ಕೆಲಸವನ್ನು ಮಾಡುತ್ತಿದ್ದರು. ಆದರೆ ೧೯೫೦ರ ಭಾರತ ಸಂವಿಧಾನ, ಪ್ರಜಾಪ್ರಭುತ್ವವನ್ನು ತನ್ನ ಆಯ್ಕೆಯ ಆಡಳಿತ ಮಾದರಿಯನ್ನಾಗಿ ಪ್ರತಿಪಾದಿಸಿತ್ತು. ೧೯೫೨ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಕೃಷಿಗೆ ಒತ್ತುಕೊಟ್ಟ ಮೊದಲ ಪಂಚವಾರ್ಷಿಕ ಯೋಜನೆ ಜಾರಿಗೆ ಬಂದಿತು. ಗ್ರಾಮೀಣ ನೆಲೆಯ ಆಡಳಿತ ಕೇಂದ್ರಗಳಾಗಿ ಪಂಚಾಯಿತಿಗಳು ಜಿಲ್ಲಾ ಬೋರ್ಡುಗಳು ನೆಲೆಗೊಂಡಿದ್ದವು. ಅಂದರೆ ತಾತ್ವಿಕವಾಗಿಯಾದರೂ ಆಡಳಿತ ಜನರಿಗೂ ಉತ್ತರದಾಯಿಯಾಗಿತ್ತು. ರಾಜ್ಯಾಂಗವು ರಾಜ್ಯಗಳಿಗೆ ನೀಡಿದ ನಿರ್ದೇಶಕ ಸೂತ್ರಗಳಲ್ಲಿ ಶಿಕ್ಷಣ ಕೂಡಾ ಸೇರಿತು. ಅಂದರೆ ಎಲ್ಲ ರಾಜ್ಯಗಳು ತನ್ನ ವ್ಯಾಪ್ತಿಯ ಮಕ್ಕಳಿಗೆ ಗೊತ್ತಾದ ಅವಧಿಯವರೆಗೆ ಶಿಕ್ಷಣ ನೀಡುವುದು ಕಡ್ಡಾಯವೆಂದು ಸೂಚಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಜನರ ಭಾಷೆ ಮತ್ತು ಸರ್ಕಾರದ ಭಾಷೆ ಬೇರೆ ಬೇರೆ ಯಾಗಿ ಉಳಿಯುವುದು ಸಾಧ್ಯವಿರಲಿಲ್ಲ. ಕರ್ನಾಟಕದಲ್ಲೂ ಕನ್ನಡವನ್ನು ಅದು ಯಾವ ಸ್ಥಿತಿಯಲ್ಲೇ ಇರಲಿ ಆ ಸ್ಥಿತಿಯಿಂದ ಬೇರ್ಪಡಿಸಿ ಅದಕ್ಕೆ ಅಖಿಲ ಕರ್ನಾಟಕ ವ್ಯಾಪ್ತಿ ಮತ್ತು ಬಳಕೆಯ ಮನ್ನಣೆಯನ್ನು ತಂದುಕೊಡುವುದು ಸರ್ಕಾರದ ಜವಾಬ್ದಾರಿಯಾಯಿತು.

ಶಿಕ್ಷಣ ಸರಕಾರದ ಒಂದು ಕಾರ್ಯಕ್ರಮವಾಗಿ ರೂಪುಗೊಂಡಿದ್ದರಿಂದ ಮೊದಲ ಹಂತದಲ್ಲಿ ಇಡೀ ಕರ್ನಾಟಕದ ಪ್ರಾಥಮಿಕ ಶಾಲೆಗಳ ಪಠ್ಯದಲ್ಲಿ ಬಳಕೆ ಯಾಗುವ ಕನ್ನಡದಲ್ಲಿ ಒಂದು ಸಾಮಾನ್ಯ ರೂಪವನ್ನು ತರುವುದು ಸರಕಾರದ ನೀತಿಯಾಯಿತು. ಕನ್ನಡದ ಮಟ್ಟಿಗೆ ಏಕೀಕರಣದ ಅನಂತರದ ಸರಕಾರ ತೆಗೆದು ಕೊಂಡ ಮೊದಲ ಪ್ರಮುಖ ನಿರ್ಧಾರವಿದು. ಇಡೀ ಕರ್ನಾಟಕದ ಎಲ್ಲ್ಲ ಶಾಲೆಗಳಿಗೂ ಒಂದೇ ಬಗೆಯ ಪಠ್ಯಕ್ರಮವನ್ನು ಮತ್ತು ಪಠ್ಯವಸ್ತುವನ್ನು ರೂಪಿಸಬೇಕೆಂದು ಸರಕಾರ ನಿರ್ಣಯಿಸಿತು. ಈ ನೀತಿಯ ಸರಿ ತಪ್ಪುಗಳೇನು; ಅದನ್ನು ಜಾರಿಗೆ ಕೊಡುವಾಗ ಆದ ಪರಿಣಾಮಗಳೇನು ಎಂಬುದು ಸದ್ಯ ನಮ್ಮ ಚರ್ಚೆಯ ವಿಷಯವಲ್ಲ. ಆದರೆ ಹೀಗೆ ತೆಗೆದುಕೊಂಡ ನಿರ್ಣಯ ದೂರಗಾಮಿ ಯಾದ ಪರಿಣಾಮಗಳಿಗೆ ಕಾರಣವಾಯಿತು ಎಂಬುದನ್ನು ಮರೆಯುವಂತಿಲ್ಲ. ದಕ್ಷಿಣದ ತುದಿಯ ಕೊಳ್ಳೇಗಾಲದ ಶಾಲೆಯ ಮಗು ಓದುವ ಕನ್ನಡ ಪಠ್ಯವನ್ನೇ ಉತ್ತರದ ತುದಿಯ ಔರಾದ್‌ನ ಶಾಲೆಯ ಮಗು ಕೂಡ ಓದಬೇಕಾದ ಪ್ರಸಂಗ ಎದುರಾಯಿತು.

ಕರ್ನಾಟಕ ಎಂಬ ಈ ರಾಜ್ಯ ನಿರ್ಮಾಣವಾದಾಗ ಇದ್ದ ಈ ಭಾಷಿಕ ಸ್ಥಿತಿಯನ್ನು ಬದಲಾಯಿಸುವುದು ಅತ್ಯಂತ ಮುಖ್ಯವಾದ ಹೊಣೆಯಾಗಿ ಸರಕಾರಕ್ಕೆ ಕಂಡಿತು. ಈ ಮೊದಲೇ ಹೇಳಿದಂತೆ ಭಾಷೆಯಲ್ಲಿ ನಡೆದ ಪರಿವರ್ತನೆಗಳು ಈ ಹಿಂದೆ ನಿರ್ದಿಷ್ಟ ಗುರಿಗಳನ್ನಾಗಲೀ, ಯೋಜಿತ ಕಾರ್ಯಕ್ರಮಗಳನ್ನಾಗಲೀ ಅನುಸರಿಸಿರಲಿಲ್ಲ. ಆದರೆ ಈಗ ಚುನಾಯಿತ ಸರಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ದೃಷ್ಟಿಯಿಂದ ಗುರಿಯುಳ್ಳ ಯೋಜನೆಗಳನ್ನು ಭಾಷಾ ಪರಿವರ್ತನೆಗಾಗಿ ರೂಪಿಸುವುದು ಅಗತ್ಯವಾಗಿತ್ತು.