೧೯೪೭ರಲ್ಲಿ ಬ್ರಿಟಿಶರು ತಮ್ಮ ಆಳ್ವಿಕೆಯನ್ನು ಕೊನೆಗೊಳಿಸಿ ಸ್ಥಳೀಯ ಆಡಳಿತ ವರ್ಗಕ್ಕೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ದೇಶೀಯ ಆಡಳಿತ ವರ್ಗವು ಈಗಾಗಲೇ ಭಾರತದ ಬೇರೆ ಬೇರೆ ಪ್ರದೇಶದಲ್ಲಿ ಕೆಲವು ಮಿತಿಗಳಲ್ಲಿ ಆಡಳಿತವನ್ನು ನಡೆಸುತ್ತಿತ್ತು. ಆದರೆ ಆಗ ಬ್ರಿಟಿಶ್ ಸಂವಿಧಾನ ಮತ್ತು ಪಾರ್ಲಿಮೆಂಟ್‌ಗಳು ಆಡಳಿತಾತ್ಮಕ ನಿರ್ಧಾರಗಳನ್ನು ನಿರ್ವಹಿಸುತ್ತಿದ್ದವು. ಆದರೆ ಸ್ವತಂತ್ರವಾಗಿ ತಾವೇ ಆಡಳಿತ ಮಾಡಬೇಕಾಗಿ ಬಂದ ಈ ದೇಶೀಯ ಆಡಳಿತ ವರ್ಗದ ಎದುರು ಹಲವು ಮುಖ್ಯ ಪ್ರಶ್ನೆಗಳು ನಿಂತವು. ಅವುಗಳಲ್ಲಿ ಸ್ವತಂತ್ರ ಸಂವಿಧಾನವನ್ನು ರೂಪಿಸುವುದು ಒಂದು ಪ್ರಶ್ನೆಯಾದರೆ ಭಾರತವನ್ನು ಆಡಳಿತದ ದೃಷ್ಟಿಯಿಂದ ಹಲವು ಘಟಕಗಳನ್ನಾಗಿ ಹೇಗೆ ವಿಂಗಡಿಸುವುದು ಎಂಬುದು ಇನ್ನೊಂದು ಪ್ರಶ್ನೆ. ಮೊದಲನೆಯ ಪ್ರಶ್ನೆಯನ್ನು ನಿವಾರಿಸಿಕೊಳ್ಳಲು ಸಂವಿಧಾನ ರಚನೆಗಾಗಿ ಒಂದು ಸಮಿತಿಯನ್ನು ರೂಪಿಸಿದವು. ಎರಡನೆಯ ಪ್ರಶ್ನೆ ಸರಳವಾಗಿರಲಿಲ್ಲ. ಭಾರತವನ್ನು ಏಕಘಟಕೀಯ ರಾಷ್ಟ್ರವನ್ನಾಗಿ ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಹಾಗಾಗಿ ಅದನ್ನು ಆಡಳಿತಾತ್ಮಕವಾಗಿ ಹಲವು ಘಟಕಗಳನ್ನಾಗಿ ವಿಭಜಿಸುವುದು ಅಗತ್ಯವಾಗಿತ್ತು. ಈ ದೇಶ ಚರಿತ್ರೆಯ ನೆಲೆಯಲ್ಲಿ, ಭಾಷೆಯ ನೆಲೆಯಲ್ಲಿ, ಸಂಸ್ಕೃತಿಯ ನೆಲೆಯಲ್ಲಿ, ಸಂಪನ್ಮೂಲಗಳ ನೆಲೆಯಲ್ಲಿ ವೈವಿಧ್ಯವನ್ನು, ಬಹುಳತೆಯನ್ನು ಪಡೆದಿತ್ತು. ಅದನ್ನು ಒಂದೇ ಕೇಂದ್ರದ ಆಡಳಿತಕ್ಕೆ ಒಳಪಡಿಸುವುದು ಅಸಾಧ್ಯವಾಗಿತ್ತು. ಅದನ್ನು ಸೂಕ್ತವಾದ ರೀತಿಯಲ್ಲಿ ವಿಂಗಡಿಸಿಕೊಳ್ಳುವುದು ಅವಶ್ಯಕವಾಗಿತ್ತು. ಅಲ್ಲದೆ ಬ್ರಿಟಿಶರು ಅಧಿಕಾರ ಹಸ್ತಾಂತರ ಮಾಡಿದ ಸಂದರ್ಭದಲ್ಲಿ ಈ ಭೂಪ್ರದೇಶವು ರಾಜಕೀಯವಾಗಿ ಈಗಾಗಲೇ ಹಲವು ರೀತಿಗಳಲ್ಲಿ ವಿಭಜನೆಯಾಗಿತ್ತು. ಬ್ರಿಟಿಶರು ಕೆಲವೆಡೆ ನೇರ ಆಡಳಿತ ನಡೆಸುತ್ತಿದ್ದರು. ಆ ಪ್ರದೇಶಗಳು ಅವರ ಪ್ರೆಸಿಡೆನ್ಸಿಗಳಾಗಿದ್ದವು. ಒಂದು ಕಡೆ ಸ್ಥಾನಿಕ ರಾಜರ ಮೂಲಕ ಬ್ರಿಟಿಶರು ತಮ್ಮ ರೆಸಿಡೆಂಟ್‌ಗಳನ್ನು ಇರಿಸಿ ಆಡಳಿತ ನಡೆಸುತ್ತಿದ್ದ ಪ್ರದೇಶಗಳು. ಅಲ್ಲದೇ ಸ್ವತಂತ್ರವಾಗಿ ಆಡಳಿತ ನಡೆಸುತ್ತಿದ್ದರೂ ಬ್ರಿಟಿಶರಿಗೆ ಅಧೀನರಾಗಿದ್ದ ಪ್ರದೇಶಗಳು ಮತ್ತೊಂದು ಕಡೆ. ಇದಲ್ಲದೇ ಫ್ರ್ರೆಂಚ್ ಮತ್ತು ಪೋರ್ಚುಗೀಸ್ ವಸಾಹತುಗಳು ಅಷ್ಟಿಷ್ಟು ಪ್ರಮಾಣದಲ್ಲಿ ಇದ್ದವು. ಈ ಬಗೆಯಲ್ಲಿ ವಿಭಜನೆಗೊಂಡಿದ್ದ ಭಾರತವನ್ನು ಈಗಿರುವಂತೆ ಆಳುವುದು ಕೂಡ ಅಸಾಧ್ಯವಾಗಿತ್ತು. ಏಕೆಂದರೆ ಈ ಆಡಳಿತ ವಲಯಗಳ ವಿಸ್ತಾರದಲ್ಲಿ ಹಲವು ಅತಿರೇಕಗಳಿದ್ದವು. ಕೆಲವು ಸಾವಿರ ಮಂದಿಗಳಿಗೆ ಸೀಮಿತವಾಗಿದ್ದ ರಾಜ್ಯಗಳಿಂದ ಹಿಡಿದು ಹಲವು ಕೋಟಿ ಜನರಿದ್ದ ರಾಜ್ಯಗಳು ಇದ್ದವು. ಅಲ್ಲದೇ ಹೀಗೆ ವಿಭಜನೆಗೊಳ್ಳುವ ಸಂದರ್ಭಗಳಿಗೆ ಆಯಾಕಾಲದ ಹಲವು ರಾಜಕೀಯ ಪರಿಸ್ಥಿತಿಗಳು ಕಾರಣವಾಗಿದ್ದವು. ಅಂದಂದಿನ ಆ ಪ್ರದೇಶಗಳನ್ನು ಒಂದೇ ಘಟಕಗಳನ್ನಾಗಿ ಉಳಿಸಲು ಕಾರಣಗಳಿರಲಿಲ್ಲ. ಇದರೊಡನೆ ಇನ್ನೊಂದು ಮುಖ್ಯ ಸಂಗತಿಯು ಗಮನಿಸಲು ತಕ್ಕುದಾಗಿದೆ. ಬ್ರಿಟಿಶರ ಆಳ್ವಿಕೆಯಿಂದ ಹೊರಬರಬೇಕೆಂದು ಹೋರಾಟ ನಡೆಸುತ್ತಿದ್ದ ಜನರಲ್ಲಿ ಹಲವು ಬಗೆಯವರಿದ್ದರು. ಭಾರತದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವ ಮತ್ತು ಅದಕ್ಕಾಗಿ ಸಾಧನೆ ಮಾಡುತ್ತಿದ್ದ ಜನರು ಒಂದು ಕಡೆ, ಭಾರತದ ಸಾರ್ವಭೌಮತ್ವವನ್ನು ಒಪ್ಪಿಕೊಂಡು ಪ್ರಾಂತೀಯವಾದ ಸಾಂಸ್ಕೃತಿಕ ಘಟಕಗಳ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿದ್ದ ಜನರು ಇನ್ನೊಂದು ಕಡೆ. ಇವರಲ್ಲದೇ ಬ್ರಿಟಿಶ್ ಆಡಳಿತದಿಂದ ಹೊರಬಂದು ತಾವೇ ಸ್ವತಂತ್ರ ಆಡಳಿತಾಧಿಕಾರಿಗಳಾಗಬೇಕೆಂದು ಕನಸು ಕಾಣುತ್ತಿದ್ದ ಸ್ಥಾನೀಯ ರಾಜರುಗಳು ಮತ್ತೊಂದು ಕಡೆ ಇದ್ದರು. ಇವರಲ್ಲಿ ಮೊದಲನೆಯವರ ಆಸೆ ಪರಿಪೂರ್ಣ ಗೊಳ್ಳುವಂತಿರಲಿಲ್ಲ. ಭಾರತ ಸಾರ್ವಭೌಮವಾದರೂ ಒಂದು ಏಕ ಘಟಕವಾಗಿ ಆಡಳಿತ ನಿರ್ವಹಿಸುವುದು ಸಾಧ್ಯವಾಗಿತ್ತು. ಮೂರನೇ ಗುಂಪಿನ ಆಶೋತ್ತರಗಳು ನುಚ್ಚು ನೂರಾದವು. ಭಾರತ ಸರ್ಕಾರ ಕೈಗೊಂಡ ಆಡಳಿತಾತ್ಮಕ ಕ್ರಮಗಳಿಂದಾಗಿ ಸ್ವಾಯತ್ತಗೊಳ್ಳಬೇಕೆಂದು ಬಯಸಿದ ಸಾಂಸ್ಥಿಕ ರಾಜರುಗಳು ಈ ಆಡಳಿತಾತ್ಮಕ ಘಟಕದೊಳಗೆ ಸೇರುವುದು ಅನಿವಾರ್ಯವಾಗಿತ್ತು. ಇನ್ನು ಎರಡನೇ ಗುಂಪಿನವರ ಆಶೋತ್ತರಗಳು ಆಡಳಿತ ವರ್ಗದ ಅಪೇಕ್ಷೆಗಳಿಗೆ ಅನುಕೂಲವಾಗಿಯೇ ಇದ್ದವು. ಅಂದರೆ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಉಳಿಸಿಕೊಂಡು ಅದರೊಳಗೆ ಹಲವು ರಾಜ್ಯಗಳನ್ನು ನಿರ್ಮಿಸಿಕೊಳ್ಳಬೇಕು ಎಂಬುದು ಆಡಳಿತವರ್ಗದ ಆಸಕ್ತಿಯಾಗಿದ್ದಂತೆ ಈ ಎರಡನೇ ಗುಂಪಿನ ಜನರ ಬಯಕೆಯೂ ಆಗಿತ್ತು. ಹೀಗೆ ಆಳುವ ವರ್ಗ ಮತ್ತು ಜನರ ಒಂದು ಗುಂಪಿನ ಅಪೇಕ್ಷೆಗಳು ಒಂದಾಗಿ ಭಾರತವನ್ನು ಹಲವು ರಾಜ್ಯಗಳ ಒಕ್ಕೂಟವನ್ನಾಗಿ ರೂಪಿಸುವ ಯತ್ನ ಮೊದಲಾಯಿತು. ಈ ಪ್ರಯತ್ನ ಅಧಿಕಾರ ಹಸ್ತಾಂತರದ ಅನಂತರವೇ ಮೊದಲಾಯಿತು ಎಂದು ತಿಳಿಯುವಂತಿಲ್ಲ. ಅದಕ್ಕೂ ಮೊದಲಿಂದಲೇ ಕಾಂಗ್ರೆಸ್ ಅಧಿವೇಶನಗಳಲ್ಲಿ ಈ ಬಗೆಗೆ ಅನೌಪಚಾರಿಕವಾಗಿ ಚರ್ಚಿಸಿದ್ದರೆ, ಮತ್ತೆ ಕೆಲವು ಬಾರಿ ಅಧಿಕೃತ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಹೀಗೆ ಭಾರತವನ್ನು ಆಡಳಿತಾತ್ಮಕ ಘಟಕಗಳನ್ನಾಗಿ ವಿಭಜಿಸುವಾಗ ಯಾವ ಮಾನದಂಡವನ್ನು ಇರಿಸಿಕೊಳ್ಳಬೇಕು ಎಂಬುದು ಮುಂದಿನ ಪ್ರಶ್ನೆಯಾಗಿದೆ. ಇದಕ್ಕೆ ಹಲವು ಸಾಧ್ಯತೆಗಳಿದ್ದವು. ಚಾರಿತ್ರಿಕವಾಗಿ ಕೆಲವು ಸೂಚನೆಗಳನ್ನು ಪಡೆಯು ವುದು ಸಾಧ್ಯವಿತ್ತು. ನೈಸರ್ಗಿಕವಾಗಿ ಬೃಹತ್ ಪರ್ವತ ಶ್ರೇಣಿಗಳು, ನದಿಗಳು ಈ ರಾಷ್ಟ್ರವನ್ನು ಹಲವು ಬಗೆಗಳಲ್ಲಿ ವಿಭಜಿಸಿದ್ದವು. ಸಂಪನ್ಮೂಲಗಳ ಹಂಚಿಕೆಯನ್ನು ಅಭಿವೃದ್ಧಿಯ ಗತಿಶೀಲತೆಯನ್ನು ಆಧರಿಸಿ ವಿಭಜಿಸುವ ಅವಕಾಶಗಳಿದ್ದವು. ಅಲ್ಲದೇ ಸಾಂಸ್ಕೃತಿಕ ನೆಲೆಯನ್ನು ಆಧರಿಸಿ ವಿಭಜಿಸುವ ಸಾಧ್ಯತೆಯೂ ಒಂದಿತ್ತು. ಇವೆಲ್ಲದರ  ಜೊತೆಗೆ ಭಾಷೆಗಳನ್ನು ಆಧರಿಸಿ ಭಾರತವನ್ನು ಹಲವು ರಾಜ್ಯಗಳ ಒಕ್ಕೂಟವನ್ನಾಗಿ ರೂಪಿಸುವುದು ಮತ್ತೊಂದು ಸಾಧ್ಯತೆಯಾಗಿತ್ತು. ಮೇಲೆ ಹೇಳಿದ ಬಿಡುಗಡೆಯ ಹೋರಾಟದ ಎರಡನೆಯ ಗುಂಪಿನ ಜನರು ತಮ್ಮ ಒಂದು ಕಾರ್ಯಸೂಚಿಯನ್ನಾಗಿ ಭಾಷಾಧಾರಿತ ರಾಜ್ಯಗಳ ನಿರ್ಮಾಣವನ್ನು ಕಾರ್ಯಕ್ರಮವನ್ನಾಗಿ ಇರಿಸಿಕೊಂಡಿದ್ದರು. ರಾಜ್ಯ ನಿರ್ಮಾಣ ಪ್ರಕ್ರಿಯೆ ಆಳುವ ವರ್ಗದಿಂದ ಮೊದಲಾದ ಕೂಡಲೇ ಇವರೆಲ್ಲರೂ ಭಾಷೆಗಳನ್ನು ನೆಲೆಯಾಗಿ ಇರಿಸಿಕೊಂಡೇ ರಾಜ್ಯಗಳನ್ನು ನಿರ್ಮಿಸಬೇಕೆಂದು ಒತ್ತಾಯ ಮಾಡತೊಡಗಿದರು. ಹೀಗೆ ಹಲವು ಆಯ್ಕೆಗಳು ತನ್ನ ಮುಂದಿದ್ದರೂ ಆಗ ಆಡಳಿತ ನಡೆಸುತ್ತಿದ್ದ ಸರ್ಕಾರ ಭಾಷೆಯನ್ನು ರಾಜ್ಯ ವಿಂಗಡಣೆಯ ಒಂದು ಪರಾಮರ್ಶನಾ ನೆಲೆಯನ್ನಾಗಿ ಇರಿಸಿಕೊಳ್ಳಲು ಸಮ್ಮತಿಯನ್ನು ನೀಡಿತು. ಆ ಹೊತ್ತಿಗೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವು ತಾನೇ ಒಂದು ಸಮಿತಿಯನ್ನು ರಚಿಸಿ ಇಂತಹ  ವಿಭಜನೆಯ ಸಾಧಕ ಬಾಧಕಗಳನ್ನು ವರದಿ ಮಾಡಲು ನಿಯುಕ್ತಗೊಳಿಸಿತು. ಈ ವರದಿಯ ಶಿಫಾರಸ್ಸುಗಳನ್ನು ಸರ್ಕಾರದ ಹಂತದಲ್ಲಿ ಚರ್ಚಿಸಿ ರಾಜ್ಯ ಪುನರ್ ವಿಂಗಡನಾ ಆಯೋಗವನ್ನು ರಚಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಗೆ ಒತ್ತಾಯಿಸುತ್ತಿದ್ದ ಚಳುವಳಿಗಳು ಬಹುಮಟ್ಟಿಗೆ ದಕ್ಷಿಣ ಭಾರತದಲ್ಲಿ ಇದ್ದವು ಎಂಬುದು ಗಮನಿಸಬೇಕಾದ ವಿಷಯ. ವಿಶಾಲಾಂಧ್ರ ನಿರ್ಮಾಣಕ್ಕೆ ನಡೆಯುತ್ತಿದ್ದ ಅಂತಹ ಒಂದು ಚಳುವಳಿಯ ಕಾರ್ಯಕ್ರಮದಲ್ಲಿ ಆಮರಣಾಂತ ಉಪವಾಸ ಕುಳಿತಿದ್ದ ಪೊಟ್ಟಿ ಶ್ರೀರಾಮುಲು ಅವರು ಜೀವ ತ್ಯಾಗ ಮಾಡಬೇಕಾಗಿ ಬಂದಿತ್ತು. ಇದು ದೆಹಲಿಯ ಆಡಳಿತದ ಮೇಲೆ ಪರಿಣಾಮ ಬೀರಿ, ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತು.

ಏಕೀಕರಣ : ಒಂದು ರಾಜಕೀಯ ನಿರ್ಧಾರ

ಭಾಷೆಗಳನ್ನು ಆಧರಿಸಿ ರಾಜ್ಯಗಳನ್ನು ನಿರ್ಮಿಸುವುದು ತಿಳಿದಷ್ಟು ಸರಳವಾಗಿರಲಿಲ್ಲ. ಮುಖ್ಯವಾಗಿ ಭಾರತದಲ್ಲಿ ಯಾವುದು ಸ್ವತಂತ್ರ ಭಾಷೆ, ಯಾವುದು ಅದರ ಪ್ರಭೇದ ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಿತ್ತು. ಭಾಷೆಗಳು ಎಷ್ಟಿವೆ ಎಂಬುದು ಗೊತ್ತಿರಲಿಲ್ಲ. ಆ ಹೊತ್ತಿಗೆ ಲಿಪಿ ಇದ್ದು ಬರವಣಿಗೆಯಲ್ಲಿ ಬಳಕೆಯಾಗುತ್ತಿದ್ದ ಮತ್ತು ಬೇರೆ ಬೇರೆ ಚಾರಿತ್ರಿಕ ಸಂದರ್ಭಗಳಲ್ಲಿ ಕೆಲವು ಆಡಳಿತ ಪ್ರದೇಶಗಳಲ್ಲಿ ಆಡಳಿತ ಭಾಷೆಯಾಗಿ ಬಳಕೆಯಾಗುತ್ತಿದ್ದ ಭಾಷೆಗಳು ಕೆಲವು ಇದ್ದವು. ೧೯೫೦ರ  ಭಾರತ ಸಂವಿಧಾನವು ತನ್ನ ೮ನೇ ಅನುಚ್ಛೇದದಲ್ಲಿ ಇಂತಹ ಕೆಲವು ಭಾಷೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಅನುಸೂಚಿತ ಭಾಷೆಗಳೆಂದು ತೀರ್ಮಾನಿಸಿತು. ಭಾಷೆಗಳನ್ನು ಆಧರಿಸಿ ಪ್ರಾಂತಗಳನ್ನು ರಚಿಸಲು ಇದ್ದ ಇನ್ನೊಂದು ಸಮಸ್ಯೆಯೆಂದರೆ ಕೆಲವು ಭಾಷೆಗಳನ್ನು ಆಡುತ್ತಿದ್ದ ಜನರು ನಿರ್ದಿಷ್ಟ ಪ್ರಾಂತಗಳಿಗೆ ಸೀಮಿತಗೊಳ್ಳದೆ ದೇಶದ ಉದ್ದಗಲಕ್ಕೂ ಹರಡಿದ್ದರು. ಉದಾಹರಣೆಗೆ ಉರ್ದು ಭಾಷಿಕರು. ಮತ್ತೆ ಕೆಲವು ಭಾಷೆಗಳನ್ನಾಡುವವರು ಭಾರತದಲ್ಲಿ ಎಷ್ಟು ವಿಸ್ತಾರವಾದ ಪ್ರದೇಶಗಳಲ್ಲಿ ಹರಡಿ ಕೊಂಡಿದ್ದರೆಂದರೆ ಅವರನ್ನೆಲ್ಲಾ ಒಂದೇ ರಾಜ್ಯದಲ್ಲಿ ಇರಿಸುವುದು ಆಗದ ಮಾತಾಗಿತ್ತು. ಉದಾಹರಣೆಗೆ ಹಿಂದಿ ಭಾಷಿಕರು. ಏನೇ ಇರಲಿ. ಹೀಗೆ ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ಕಲ್ಪಿಸಿಕೊಂಡು ಅದನ್ನು ಒಂದು ಮುಖ್ಯ ಮಾನ ದಂಡವನ್ನಾಗಿ ಇರಿಸಿಕೊಳ್ಳಲು ರಾಜ್ಯ ಪುನರ್ ವಿಂಗಡನಾ ಆಯೋಗಕ್ಕೆ ಸೂಚನೆ ನೀಡಲಾಗಿತ್ತು.

ಕರ್ನಾಟಕದ ನಿರ್ಮಾಣದ ಹಿಂದೆ ಈ ಎಲ್ಲ್ಲ ಘಟನಾವಳಿಗಳೂ ಇವೆ ಎಂಬು ದನ್ನು ಗಮನಿಸಬೇಕು. ಕನ್ನಡ ಮಾತನಾಡುವ ಜನರೆಲ್ಲರೂ ಒಂದೇ ಆಡಳಿತ ಪ್ರದೇಶಕ್ಕೆ ಒಳಪಡಬೇಕೆಂಬ ಅಪೇಕ್ಷೆ ೧೯ನೇ ಶತಮಾನದ ಕೊನೆಕೊನೆಗೆ ತಲೆ ಎತ್ತಿತ್ತು. ಅದು ೨೦ನೇ ಶತಮಾನದಲ್ಲಿ ಒಂದು ಚಳುವಳಿಯಾಗಿಯೂ ರೂಪು ಗೊಂಡಿತು. ಏಕೀಕರಣ ಚಳುವಳಿಯೆಂದು ಅದನ್ನು ಸಾಮಾನ್ಯವಾಗಿ ಗುರುತಿಸಲಾಗು ತ್ತಿದೆ. ಬ್ರಿಟಿಶರು ಬಿಟ್ಟು ಹೋದ ಭಾರತದಲ್ಲಿ ಕನ್ನಡ ಮಾತನಾಡುವ ಜನರು ಹಲವು ಆಡಳಿತ ಪ್ರದೇಶಗಳಲ್ಲಿ ಹಂಚಿ ಹೋಗಿದ್ದರು. ಹಳೆಯ ಮೈಸೂರು ಎಂದು ಹೀಗೆ ಕರೆಯಲಾಗುತ್ತಿರುವ ಪ್ರದೇಶ ರಾಜರ ಆಳ್ವಿಕೆಗೆ ಮತ್ತು ಬ್ರಿಟಿಶರ ಪರೋಕ್ಷ ಹಿಡಿತಕ್ಕೆ ಸಿಕ್ಕಿತ್ತು. ಬ್ರಿಟಿಶರ ಎರಡು ಪ್ರೆಸಿಡೆನ್ಸಿಗಳಲ್ಲಿ ಕೆಲವು ಪ್ರದೇಶಗಳಿದ್ದವು. ಹೈದರಾಬಾದ್‌ನ ನಿಜಾಮರ ಆಡಳಿತಕ್ಕೆ ಮತ್ತೆ ಕೆಲವು ಪ್ರದೇಶಗಳಿಗೆ ಸೇರಿದ್ದವು. ಇವಲ್ಲದೆ ಪಾಳೇಗಾರರು ಸಂಸ್ಥಾನಿಕರು ಆಳುತ್ತಿದ್ದ ಚಿಕ್ಕಪುಟ್ಟ ರಾಜ್ಯಗಳು ಇದ್ದವು. ಕನ್ನಡ ಮಾತನಾಡುವ ಜನರನ್ನೆಲ್ಲ ಒಗ್ಗೂಡಿಸಿ ಒಂದು ರಾಜ್ಯವನ್ನು ನಿರ್ಮಿಸ ಬೇಕೆಂಬ ಚಳುವಳಿಯ ಅಪೇಕ್ಷೆ ಮತ್ತು ಆಡಳಿತ ಭಾಗಗಳನ್ನು ರಚಿಸಬೇಕೆಂಬ ಭಾರತ ಸರ್ಕಾರದ ಕಾರ್ಯಯೋಜನೆ ಇವೆರಡೂ ಒಗ್ಗೂಡಿ ೧೯೫೬ರ ನವೆಂಬರ್ ಒಂದರಂದು ಈ ರಾಜ್ಯ ರಚನೆಯಾಗಿ ಅಧಿಕೃತವಾಗಿ ಮನ್ನಣೆ ಪಡೆಯಿತು. ಮೇಲುನೋಟಕ್ಕೆ ಕನ್ನಡಿಗರ ಬಹು ದಶಕಗಳ ಅಪೇಕ್ಷೆಗಳು ಈ ಮೂಲಕ ಪೂರ್ಣಗೊಂಡಂತೆ ಅನಿಸಿದರೂ ವಾಸ್ತವವಾಗಿ ಇದೊಂದು ರಾಜಕೀಯ ನಿರ್ಧಾರ ವಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಕನ್ನಡ ಮಾತನಾಡುವ ಜನರು ಒಂದು ಘಟಕವಾದರೆ, ಕನ್ನಡ ಮಾತಾಡುವ ಜನರು ಇರುವ ಭೂಪ್ರದೇಶ ಇನ್ನೊಂದು ಘಟಕ. ಇದಲ್ಲದೇ ಚಾರಿತ್ರಿಕವಾಗಿ ಕನ್ನಡ ಮಾತಾಡುತ್ತಿದ್ದ ಜನರು ಇದ್ದ ಪ್ರದೇಶ ಮತ್ತು ಕನ್ನಡದ ಅರಸರು ಆಳ್ವಿಕೆ ನಡೆಸುತ್ತಿದ್ದ ಭೂಪ್ರದೇಶ ಎಂಬ ಘಟಕಗಳು ಸೇರಿಕೊಳ್ಳುತ್ತಿವೆ. ಏಕೀಕರಣದ ತಾತ್ವಿಕತೆಯಲ್ಲಿ ಕನ್ನಡಿಗರ ಒಗ್ಗೂಡುವಿಕೆಯ ಜೊತೆಗೆ ಭೂಪ್ರದೇಶದ ಕಲ್ಪನೆಯೂ ಸೇರಿಕೊಂಡಿತ್ತು. ಹಳೆಯ ಕಾವ್ಯಗಳನ್ನು ಚಾರಿತ್ರಿಕ ದಾಖಲೆಗಳನ್ನು ಉಲ್ಲೇಖಿಸಿ ಕನ್ನಡ ನಾಡಿನ ವ್ಯಾಪ್ತಿ ಎಷ್ಟಿತ್ತು ಎಂಬುದನ್ನು ಮೇಲಿಂದ ಮೇಲೆ ಜನರ ಗಮನಕ್ಕೆ ತರುವ ಯತ್ನಗಳು ನಡೆದಿವೆ. ಈ ಭೂಪ್ರದೇಶ ಚಾರಿತ್ರಿಕವಾಗಿ ಕನ್ನಡದ ವ್ಯಾಪ್ತಿಯ ಪ್ರದೇಶ ಎಂದು ಹೇಳಿದರೂ ವಾಸ್ತವವಾಗಿ ಅದು ಕನ್ನಡದ ಅರಸರ ಆಳ್ವಿಕೆಯ ಪ್ರದೇಶಗಳಾಗಿದ್ದವು ಅಂದರೆ ಅಲ್ಲಿ ಕನ್ನಡ ಮತ್ತು ಇತರ ಭಾಷೆಗಳನ್ನಾಡುವ ಜನರು ವಾಸಿಸುತ್ತಿದ್ದರು. ಕೇವಲ ಕನ್ನಡವನ್ನಷ್ಟೇ ಮಾತನಾಡುವ ಸಮಾಜಗಳನ್ನಾಗಲಿ ಅವುನೆಲೆಸಿರುವ ನಿರ್ದಿಷ್ಟ ಭೂಪ್ರದೇಶವನ್ನಾಗಲಿ ಕಲ್ಪಿಸುವುದು ಕಷ್ಟ. ೨೦ನೇ ಶತಮಾನದ ನಡುಭಾಗದಲ್ಲಂತೂ ಇದು ಇನ್ನಷ್ಟು ಇಕ್ಕಟ್ಟುಗಳನ್ನು ರೂಪಿಸುವಂತಿತು. ಹೀಗಾಗಿ ಒಂದು ಹೊಸ ರಾಜ್ಯದ ನಿರ್ಮಿತಿಯಲ್ಲಿ ಕನ್ನಡ ಮಾತನಾಡುವವರು ನಿರ್ಮಿತವಾಗಿ ಅವರ ಚಾರಿತ್ರಿಕ ವಿಸ್ತಾರಗಳು ಭೌಗೋಳಿಕವಾಗಿ ನೆಲೆಗೊಂಡ ಪ್ರದೇಶಗಳನ್ನು ಒಗ್ಗೂಡಿಸಬೇಕೆಂಬ ಆಸೆಯೇ ಏಕೀಕರಣದ ಹಿಂದಿನ ಒತ್ತಡವಾಗಿತ್ತು. ಇದು ಅಸಹಜವೇನೂ ಅಲ್ಲ. ಅದಕ್ಕಾಗಿ ಆ ಕಾಲದ ನಾಡಗೀತೆಗಳು ಭಾಷಾಭಿಮಾನ ವನ್ನು ಉತ್ಪಾದಿಸುವ ಗೀತೆಗಳು ರಚನೆಯಾಗಿದ್ದವು, ಅವುಗಳಲ್ಲಿ ಮೇಲಿಂದ ಮೇಲೆ ಕನ್ನಡಿಗರ ಶೌರ್ಯ, ಹಿರಿಮೆ, ನಾಡಿನ ವಿಸ್ತಾರಗಳ ಉಲ್ಲೇಖ ಬರುತ್ತದೆ. ಅನಿವಾರ್ಯವೆಂಬಂತೆ ಮತ್ತೆ ಮತ್ತೆ ಕರ್ನಾಟಕದ ರಾಜ್ಯ ಮನೆತನಗಳ ಹೆಸರುಗಳನ್ನು ಹೇಳಲಾಗುತ್ತದೆ. ಇವೆಲ್ಲವೂ ಕರ್ನಾಟಕದ ರಚನೆಯ ಹಿಂದೆ ಇದ್ದ ಒತ್ತಡಗಳನ್ನು ಹೊರಗಿಡುತ್ತವೆ. ಮೊದಲ ಕನ್ನಡ ರಾಜನೆಂದು ಕದಂಬ ವಂಶದ ಮಯೂರವರ್ಮ ನನ್ನು ಗುರುತಿಸುವುದು, ನಿಜವಾದ ಕರ್ನಾಟಕ ಸಾಮ್ರಾಜ್ಯ ಸ್ಥಾಪಕರು ವಿಜಯನಗರದ ಅರಸರು ಆಗಿದ್ದರೆಂದು ಘೋಷಿಸುವುದು ಮೇಲೆ ಹೇಳಿದ ದೃಷ್ಟಿಕೋನಕ್ಕೆ ನಿದರ್ಶನಗಳು. ೧೯೩೬ರಲ್ಲಿ ವಿಜಯನಗರ ಸಂಸ್ಥಾಪನೆಯ ಆರನೇ ಶತಮಾನೋತ್ಸವ ಆಚರಣೆ ಸಂದರ್ಭದ ದಾಖಲೆಗಳನ್ನು ನೋಡಿದರೆ ಈ ಸಂಗತಿ ಮತ್ತಷ್ಟು ಸ್ಪಷ್ಟವಾಗುತ್ತದೆ. ಎಂದರೆ ಏಕೀಕರಣದ ಪರವಾಗಿದ್ದ ಜನರ ಮನಸ್ಸಿನಲ್ಲಿ ಚಾರಿತ್ರಿಕ ಮರುಗಳಿಕೆಯ ಉದ್ದೇಶ ಸ್ಪಷ್ಟವಾಗಿದೆ ಮತ್ತು ಈ ಮರುಗಳಿಕೆಯೂ ಒಂದು ಪ್ರದೇಶದ ನೆಲೆಯಲ್ಲಿಯೇ ಕೆಲಸ ಮಾಡುತ್ತದೆ.

ಈ ಮಾತು ಇನ್ನಷ್ಟು ಚರ್ಚಿತವಾಗುವುದು ಅಗತ್ಯ. ಕನ್ನಡ ಮಾತಾಡುವವರೆಲ್ಲ ಒಂದು ಆಡಳಿತಕ್ಕೆ ಒಳಪಡುವುದು ಹಿಂದೆಯೂ ಆಗಿಲ್ಲ, ಈಗಲೂ ಆಗಿಲ್ಲ. ಮುಂದೆಯೂ ಆಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಆರ್ಥಿಕ ಸಾಮಾಜಿಕ ಕಾರಣಗಳಿಂದ ಚಲನಶೀಲತೆಯನ್ನು ಪಡೆದ ಭಾಷಾ ಸಮುದಾಯಗಳು ಅಗತ್ಯ ಮತ್ತು ಅವಕಾಶಗಳನ್ನು ಅನುಸರಿಸಿ ಬೇರೆ ಬೇರೆ ಕಡೆಗಳಲ್ಲಿ ಹೋಗಿ ನೆಲೆಸುತ್ತವೆ. ಅವರು ಹೀಗೆ ನೆಲೆಸಿದ ಪ್ರದೇಶಗಳಲ್ಲಿ ತಮ್ಮ ಭಾಷಾ ಗುರುತುಗಳನ್ನು ಕಾಯ್ದುಕೊಳ್ಳಬಹುದು. ಇಲ್ಲವೆ ಕಳೆದುಕೊಳ್ಳಬಹುದು. ಹಲವು ಶತಮಾನಗಳ ಹಿಂದೆ ತಮಿಳುನಾಡಿನ ಮಧುರೆಗೆ ಹೋಗಿ ತಮಿಳು ಭಾಷಿಕರ ನಡುವೆ ನೆಲೆಸಿದ ಕನ್ನಡ ಭಾಷೆಯನ್ನಾಡುತ್ತಿದ್ದ ಚಿಕ್ಕ ವೃತ್ತಿಪರ ಸಮುದಾಯವೊಂದು ಹೇಗೆ ತನ್ನ ಭಾಷಾಗುರುತನ್ನು ಉಳಿಸಿಕೊಂಡಿದೆ ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಹೀಗೆ ನೆಲೆಸುವವರು ಈ ದೇಶದಲ್ಲಿ ಇರುವಂತೆ ಹಲವು ದೇಶಗಳಲ್ಲೂ ಹರಡಿ ಹೋಗಿದ್ದಾರೆ. ಆದ್ದರಿಂದ ಭಾಷಿಕ ಸಮುದಾಯ ಒಂದು ಭೌಗೋಳಿಕ ಪ್ರದೇಶದಲ್ಲಿ ಒಗ್ಗೂಡಿ ನೆಲೆಸುವುದು ಪೌರ ಸಮಾಜಗಳ ರಚನೆಯ ಈ ಕಾಲದಲ್ಲಿ ಊಹಿಸುವುದು ಸಾಧ್ಯವಿಲ್ಲ. ಉಳಿದಿರುವ ಮಾರ್ಗವೆಂದರೆ ಹೀಗೆ ರಚನೆಗೊಂಡ ರಾಜ್ಯಗಳಲ್ಲಿ ಬಹುಸಂಖ್ಯಾತರು ಕನ್ನಡ ಭಾಷಿಕರೇ ಆಗಿರಬೇಕು ಎಂದು ಕಲ್ಪಿಸುವುದು. ಬಹುಮಟ್ಟಿಗೆ ಈ ಲೆಕ್ಕಾಚಾರವನ್ನೇ ಆಧರಿಸಿ, ಈ ರಾಜ್ಯವನ್ನು ರಚಿಸಲಾಗಿದೆ. ಇಲ್ಲಿ ಕನ್ನಡವನ್ನು ಆಡುವವರ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಕೊಂಕಣಿ, ತುಳು, ಕೊಡವ, ಕೊರಗ, ಲಂಬಾಣಿ ಹೀಗೆ ಹಲವು ಹತ್ತು ಭಾಷೆ ಗಳನ್ನಾಡುವ ಜನರು ವಾಸಿಸುತ್ತಿದ್ದಾರೆ. ಒಂದು ಭೂಪ್ರದೇಶವನ್ನು ಆಡಳಿತಾತ್ಮಕ ಘಟಕವನ್ನಾಗಿ ರಚಿಸುವಾಗ ಅಲ್ಲಿನ ಬಹುಸಂಖ್ಯಾತರ ಭಾಷೆಯನ್ನು ಆಧಾರವಾಗಿ ತೆಗೆದುಕೊಳ್ಳಬೇಕೆಂಬ ರಾಜಕೀಯ ನಿರ್ಧಾರವೊಂದು ಇಲ್ಲಿ ಕೆಲಸ ಮಾಡಿದೆ.

ಭಾಷಾವಾರು ಪ್ರಾಂತ ರಚನೆ ಆಗಿನ ಸರಕಾರದ ತಾತ್ಪೂರ್ತಿಕ ನಿರ್ಧಾರ ವಾಗಿತ್ತು ಎಂಬುದಕ್ಕೆ ಹಲವು ಪುರಾವೆಗಳು ಅನಂತರದ ಬೆಳವಣಿಗೆಗಳಲ್ಲಿ ಗೋಚರಿಸುತ್ತವೆ. ೧೯೫೬ರ ಅನಂತರದಲ್ಲಿ ಭಾರತ ಸರಕಾರವು ಮತ್ತೆ ರಾಜ್ಯಗಳನ್ನು ಮರುವಿಂಗಡಣೆ ಮಾಡಿದೆ. ಹೊಸರಾಜ್ಯಗಳು ರೂಪುಗೊಂಡಿವೆ. ಇವು ಹೊಸದಾಗಿ ಸೇರ್ಪಡೆಯಾದ ಭೂಭಾಗಗಳಲ್ಲ(ಸಿಕ್ಕಿಂ ರಾಜ್ಯವನ್ನು ಹೊರತುಪಡಿಸಿ). ಹಿಂದೆ ಇದ್ದ ರಾಜ್ಯಗಳನ್ನೇ ಮರುರೂಪಿಸಿದ್ದರಿಂದ ನಿರ್ಮಾಣವಾದವು. ಈಶಾನ್ಯ ರಾಜ್ಯಗಳ ನಿರ್ಮಿತಿಯಲ್ಲಿ ಎಲ್ಲ ಕಡೆಯೂ ಭಾಷಾ ನೆಲೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗೆ ತೆಗೆದುಕೊಳ್ಳುವುದು ಸಾಧ್ಯವೂ ಇರಲಿಲ್ಲ. ತೀರಾ ಈಚೆಗೆ ನಿರ್ಮಾಣವಾದ ಚತ್ತೀಸ್‌ಘಡ್ ಹಲವು ಬುಡಕಟ್ಟುಗಳ ಸಮೂಹವಾಗಿದ್ದು ಅಲ್ಲಿನ ರಾಜ್ಯಭಾಷೆ ಯಾವುದು ಎಂಬುದನ್ನು ನಿರ್ಧರಿಸುವುದು ಸುಲಭದ ಮಾತಾಗಿಲ್ಲ. ಈಶಾನ್ಯರಾಜ್ಯಗಳಲ್ಲಿ ಕೆಲವು, ಅರುಣಾಚಲ, ನಾಗಾಲ್ಯಾಂಡ್, ಇಂಗ್ಲಿಶ್ ಭಾಷೆಯನ್ನು ರಾಜ್ಯಭಾಷೆಯನ್ನಾಗಿ ಮಾಡಿಕೊಂಡಿವೆ. ಇಂಗ್ಲಿಶ್ ಅಲ್ಲಿನ ಜನರ ಮೊದಲಭಾಷೆಯಲ್ಲದಿದ್ದರೂ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಎಂಬ ಈ ಮೂರು ಪರಿಕಲ್ಪನೆಗಳು ಪರಸ್ಪರ ಬೆರೆತುಕೊಳ್ಳುವುದು ಕಷ್ಟವೇ. ಕನ್ನಡಿಗರು ಕನ್ನಡವಲ್ಲದೆ ಇತರ ಭಾಷೆಯನ್ನು ಕಲಿತು ಮಾತಾಡಬಹುದು. ಅಲ್ಲದೆ ಬೇರೆ ದೇಶದಲ್ಲಿ ಪ್ರದೇಶದಲ್ಲಿ ವಾಸ ಮಾಡಬಹುದು. ಕನ್ನಡ ಮಾತ್ರ ಕರ್ನಾಟಕದ ಭಾಷೆಯಾಗಿ ಪರಿಗಣಿತವಾಗಲಾರದು. ಈಗಾಗಲೇ ಗಮನಿಸಿದಂತೆ ಆ ಭೂಪ್ರದೇಶದಲ್ಲಿ ಹಲವು ಭಾಷೆಗಳನ್ನು ಮಾತಾಡುವ ಜನರು ಇರುತ್ತಾರೆ. ಸದ್ಯ ಮೇಲೆ ಹೇಳಿದ ರಾಜಕೀಯ ನಿರ್ಧಾರದಂತೆ ಹೆಚ್ಚು ಸ್ಥಿರವಾಗಿರುವುದು ಭೌಗೋಳಿಕವಾದ ಪರಿಕಲ್ಪನೆ. ಅದು ಕರ್ನಾಟಕ. ಉಳಿದೆರಡು ಪರಿಕಲ್ಪನೆಗಳು ಸದಾ ಚಲನಶೀಲ. ಅವು ದೇಶಬದ್ಧವಲ್ಲ.

ಈ ಹಿನ್ನೆಲೆಯಲ್ಲಿ ೧೯೫೬ರ ನವೆಂಬರ್ ೧ರಂದು ರೂಪುಗೊಂಡ ಕರ್ನಾಟಕವನ್ನು ನಾವು ಪರಿಗಣಿಸಬೇಕು. ಈ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಕನ್ನಡ ಸ್ಥಾನ ಪಡೆದಿದ್ದು ಸುಮಾರು ೭ ವರ್ಷಗಳ ಅನಂತರದಲ್ಲಿ. ಆದರೆ ಭಾವನಾತ್ಮಕವಾಗಿ ಈ ರಾಜ್ಯದ ನಿರ್ಮಾಣದ ಹಿಂದೆ ಕನ್ನಡ ಎಂಬ ಗುರುತು ಕೆಲಸ ಮಾಡಿದೆ ಎನ್ನುವುದು ಖಚಿತ. ಅದು ಬಹುಜನರ ನಂಬಿಕೆಯೂ ಆಗಿತ್ತು.

ಮುಂದಿನ ಅಧ್ಯಾಯಗಳಲ್ಲಿ ಹೀಗೆ ಭೌಗೋಳಿಕವಾಗಿ ರೂಪುಗೊಂಡ ಕರ್ನಾಟಕದಲ್ಲಿ ಕನ್ನಡ ಭಾಷೆಯು ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಏನೆಲ್ಲಾ ಪರಿವರ್ತನೆಗಳನ್ನು ಕಂಡಿದೆ ಎಂಬುದನ್ನು ಇಲ್ಲಿ ಅಧ್ಯಯನ ಮಾಡಲಾಗುವುದು. ಯಾವುದೇ ಭಾಷೆಗೆ ಸಂಬಂಧಿಸಿದಂತೆ ಐವತ್ತು ವರ್ಷಗಳ ಅವಧಿ ತುಂಬಾ ಕಿರಿದಾದದ್ದು. ಕನ್ನಡ ನಮಗೆಲ್ಲಾ ತಿಳಿದಂತೆ ಸರಿಸುಮಾರು ೨೦ ಶತಮಾನಗಳ ಬಳಕೆಯನ್ನು ಕಂಡಿರುವ ಭಾಷೆ. ಈ ಭಾಷೆಯಲ್ಲಿ ನಡೆದಿರುವ ಪರಿವರ್ತನೆಗಳು ಅಪಾರ. ಬಳಕೆ ಮತ್ತು ರಚನೆ ಈ ಎರಡು ನೆಲೆಗಳಲ್ಲಿ ಈ ಪರಿವರ್ತನೆಗಳು ನಡೆದಿವೆ. ಈ ದೀರ್ಘಾವಧಿಯ ಪರಿವರ್ತನೆಗಳ ಅಧ್ಯಯನ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಐವತ್ತು ವರ್ಷಗಳ ಕಿರು ಅವಧಿಯ ಪರಿವರ್ತನೆಗಳನ್ನು ಅಧ್ಯಯನ ಮಾಡಲು ಸಾಕಷ್ಟು ಬಲವಾದ ಸಮರ್ಥನೆಗಳು ಅಗತ್ಯ. ಅಂತಹ ಎರಡು ಸಮರ್ಥನೆಗಳನ್ನು ಮೊದಲು ಮಂಡಿಸುತ್ತೇನೆ.

೧.ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಮತ್ತು ಆಧುನಿಕ ಜಗತ್ತಿನ ಒತ್ತಡಗಳಿಂದಾಗಿ ಈ ಭಾಷೆಯಲ್ಲಿ ಹಿಂದೆಂದೂ ಇಲ್ಲದಷ್ಟು ಪ್ರಮಾಣ ಮತ್ತು ವೇಗದಲ್ಲಿ ಬದಲಾವಣೆಗಳು ನಡೆಯುತ್ತಿವೆ. ಕಳೆದ ಐವತ್ತು ವರ್ಷಗಳು ಈ ಬಗೆಯ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.

೨.ಎರಡನೆಯ ಕಾರಣ ಇನ್ನೂ ಮುಖ್ಯವಾದದ್ದು. ಕಳೆದ ೨೦ ಶತಮಾನಗಳಲ್ಲಿ ಕನ್ನಡ ಭಾಷೆಯಲ್ಲಿ ಆಗಿರುವ ಪರಿಣಾಮಗಳನ್ನು ಯೋಜಿತ ನೆಲೆಯ ಬದಲಾವಣೆಗಳು ಎಂದು ಹೇಳಲಾಗುವುದಿಲ್ಲ. ರಾಜಕೀಯ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಈ ಬದಲಾವಣೆಗಳು ಆ ಭಾಷೆಯಲ್ಲಿ ತಂತಾನೆ ಸಂಭವಿಸಿವೆ. ಅವುಗಳ ಮೇಲೆ ಭಾಷಿಕರಿಗೆ ಯಾವುದೇ ನಿಯಂತ್ರಣ ಇರಲಿಲ್ಲ. ಆದರೆ ಕರ್ನಾಟಕ ರಾಜ್ಯ ನಿರ್ಮಾಣಗೊಂಡ ಮೇಲೆ ಈ ಭಾಷೆಯಲ್ಲಿ ಯಾವ ಬಗೆಯ ಬೆಳವಣಿಗೆಗಳು ಆಗಬೇಕು ಎಂಬುದನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ವ್ಯವಸ್ಥೆಯೊಂದು ಇದೆ. ಸಾಮಾನ್ಯವಾಗಿ ಈ ವ್ಯವಸ್ಥೆಯನ್ನು ಸರಕಾರ ಎನ್ನಬಹುದಾದರೂ ಸರ್ಕಾರವೇ ನೇರವಾಗಿ ಬೆಳವಣಿಗೆಗಳಿಗೆ ತಕ್ಕ ನಿರೂಪಗಳನ್ನು ಸಿದ್ಧ ಮಾಡುತ್ತದೆ ಎಂದಲ್ಲ. ಆದರೆ ತನ್ನ ಭಾಷಾನೀತಿಯಿಂದಾಗಿ ಮತ್ತು ಆ ನೀತಿಯನ್ನು ಜಾರಿಗೊಳಿಸಲು ಸರಕಾರವೇ ರೂಪಿಸಿದ ಸಾಂಸ್ಥಿಕ ವ್ಯವಸ್ಥೆಗಳಿಂದಾಗಿ ಈ ಬದಲಾವಣೆಗಳು ಜಾರಿಗೆ ಬರುತ್ತಿರುತ್ತವೆ. ಈ ಐವತ್ತು ವರ್ಷಗಳಲ್ಲಿ ಹೀಗೆ ಯೋಜಿತ ರೀತಿಯಲ್ಲಿ ಬದಲಾವಣೆ ನಡೆದಿದೆ. ಆದ್ದರಿಂದ ಈ ಬದಲಾವಣೆಗಳನ್ನು ಈ ಹಿಂದಿನ ಬದಲಾವಣೆಗಳಿಗಿಂತ ಬೇರೆಯಾಗಿಯೇ ನೋಡಬೇಕಾಗುತ್ತದೆ. ಈ ಎರಡು ಸಮರ್ಥನೆಗಳ ಹಿನ್ನೆಲೆಯಲ್ಲಿ ಈ ಅಧ್ಯಯನವನ್ನು ಕಟ್ಟಲಾಗಿದೆ.