ಸಾಮಾನ್ಯವಾಗಿ ಭಾಷಾ ಸಂಸ್ಕೃತಿಯೊಂದು ತನ್ನ ಅಸ್ತಿತ್ವವನ್ನು ಕಾಯ್ದು ಕೊಳ್ಳುವುದಕ್ಕಾಗಿ ಕೆಲವು ತಂತ್ರಗಳನ್ನು ಬೆಳಸುತ್ತದೆ. ಭಾಷಾ ಸಂಸ್ಕೃತಿಯೂ ಒಂದು ರಚನೆ. ಅದಕ್ಕೆ ಸಾಮಾಜಿಕ ವಿನ್ಯಾಸದಲ್ಲಿ ಒಂದು ಜೈವಿಕ ಮೂಲವಿಲ್ಲ. ಅದನ್ನು ನಿರ್ದಿಷ್ಟ ತಾತ್ವಿಕತೆಯೊಡನೆ ರೂಪಿಸಿ ಜನಸಮುದಾಯ ಒಪ್ಪುವಂತೆ ಮಾಡಬೇಕು. ಹಾಗೆ ಮಾಡಲು ನಿರಂತರ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಹಲವು ನೆಲೆಗಳಲ್ಲಿ ಈ ಭಾಷಾ ಸಂಸ್ಕೃತಿಯ ದೃಢೀಕರಣವನ್ನು ಮಾಡುವ ಪ್ರಯತ್ನಗಳು ಕೆಲವೊಮ್ಮೆ ಪ್ರತ್ಯಕ್ಷವಾಗಿ ಮತ್ತೆ ಕೆಲವೊಮ್ಮೆ ಪರೋಕ್ಷವಾಗಿ ನಡೆಯುತ್ತಿರುತ್ತವೆ. ಕನ್ನಡ ಭಾಷೆಗೆ, ಈ ಅಧ್ಯಯನದಲ್ಲಿ ಬೇರೆಡೆಗೆ ಈಗಾಗಲೇ ಗಮನಿಸಿರುವಂತೆ, ಒಂದು ಭಾಷೆ ಎಂಬ ಗುರುತಷ್ಟೇ ಸಾಲದು. ಏಕೆಂದರೆ ಅದು ಅಮೂರ್ತ. ಅಲ್ಲದೇ ಅದು ನಿರಾಕಾರ. ಕನ್ನಡ ಎಲ್ಲಿದೆ ಎಂಬ ಪ್ರಶ್ನೆಗೆ ಯಾರೂ ಉತ್ತರ ಕೊಡಲಾರರು. ಯಾವುದು ಹೀಗೆ ಅಮೂರ್ತ ಇಲ್ಲವೇ ನಿರಾಕಾರ ಆಗಿರುತ್ತದೋ ಅದನ್ನು ಒಂದು ಗುರುತಾಗಿ ಪರಿವರ್ತಿಸಲು ಬೇರೆ ಬೇರೆ ಹಾದಿಗಳನ್ನು ಹಿಡಿಯಲಾಗುತ್ತದೆ. ಅಂತಹ ಮೊದಲ ಹಾದಿ ಎಂದರೆ ಕನ್ನಡವನ್ನು ವ್ಯಕ್ತಿವಾಚಿಯನ್ನಾಗಿ ಪರಿವರ್ತಿಸುವುದು. ಕನ್ನಡ ಮಾತಾಡುವವರು ಕನ್ನಡಿಗರು. ಅಂದರೆ ಈ ಭಾಷೆ ನೆಲೆಗೊಂಡಿರುವ ವ್ಯಕ್ತಿಯನ್ನು ಒಂದು ಗುರುತಾಗಿ ಮಾಡಿಕೊಂಡು ಆ ವ್ಯಕ್ತಿಯ ಅಂತಸ್ಥ ಸಾಮರ್ಥ್ಯವನ್ನಾಗಿ ಕನ್ನಡವನ್ನು ಗುರುತು ಮಾಡಿಕೊಳ್ಳ್ಳುವುದು. ಇದಲ್ಲದೇ ದೇಶವಾಚಿಯಾಗಿಯೂ ಕನ್ನಡ ಬಳಕೆಯಾಗುತ್ತಿದೆ. ನಾವೀಗಾಗಲೇ ಗುರುತಿಸಿರುವಂತೆ ಕನ್ನಡ ಮತ್ತು ಕರ್ನಾಟಕಗಳನ್ನು ಬಿಗಿದು ಕಟ್ಟುವ ನಿರ್ಧಾರ ರಾಜಕೀಯ ನೆಲೆಯದ್ದು. ಈ ಕಾರಣದಿಂದ ಕನ್ನಡ ಎಂಬುದು ಭಾಷಾವಾಚಿ; ಕನ್ನಡಿಗ ಎಂಬುದು ವ್ಯಕ್ತಿ ಇಲ್ಲವೇ ಸಮೂಹವಾಚಿ; ಮತ್ತು ಕರ್ನಾಟಕ ಎಂಬುದು ದೇಶವಾಚಿ. ಈ ಮೂರು ಪರಸ್ಪರ ಸಂಬಂಧವುಳ್ಳ ಪರಿಕಲ್ಪನೆಗಳೆಂದೇ ಭಾವಿಸಲಾಗಿದೆ. ಅಂದರೆ ಒಂದನ್ನು ಇನ್ನೊಂದರ ಚಹರೆಯನ್ನಾಗಿ, ಗುರುತಾಗಿ ಪರಿಗಣಿಸಲಾಗುತ್ತದೆ.

ಕರ್ನಾಟಕದ ಚರಿತ್ರೆಯನ್ನು ಅದರ ಸಾಂಸ್ಕೃತಿಕ ವೈವಿಧ್ಯವನ್ನು ಕನ್ನಡದ ಗುರುತುಗಳನ್ನಾಗಿ ಪರಿಗಣಿಸುವ ಇನ್ನೊಂದು ನೆಲೆ ಬೆಳೆದುಬಂದಿದೆ. ಬಹು ಹಿಂದಿನಿಂದಲೂ ನಮ್ಮ ಕವಿಗಳು ಹೀಗೆ ಭಾಷೆ, ಜನ ಮತ್ತು ದೇಶಗಳನ್ನು ಒಂದೇ ಉಸಿರಿನಲ್ಲಿ ಸಮೀಕರಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಕಳೆದ ಐವತ್ತು ವರ್ಷಗಳಲ್ಲಿ ಹೀಗೆ ಈ ಮೂರು ನೆಲೆಗಳನ್ನು ಬೆಸೆಯುತ್ತಿರುವಾಗಲೇ ಮತ್ತಷ್ಟು ಗುರುತುಗಳನ್ನು ಪೂರಕವಾಗಿ ರೂಪಿಸಿಕೊಡಲಾಗಿದೆ. ಅವುಗಳಲ್ಲಿ ಕೆಲವನ್ನು ಮುಂದೆ ಗಮನಿಸಲಿದ್ದೇವೆ.

ಕನ್ನಡ ತಾಯಿಯ ಪರಿಕಲ್ಪನೆ

ಕನ್ನಡ ಭಾಷೆಯನ್ನು ತಾಯಿಗೆ ಸಮೀಕರಿಸುವುದು ಹತ್ತೊಂಬತ್ತನೇ ಶತಮಾನದಿಂದೀಚೆಗೆ ಬೆಳೆದು ಬಂದ ಪ್ರಕ್ರಿಯೆ. ದೇಶವನ್ನು ಮತ್ತು ಭಾಷೆಯನ್ನು ತಾಯಿಗೆ ಸಮೀಕರಿಸಲಾಗುತ್ತಿದೆ. ಹೀಗೆ ಭಾಷೆ ಎಂಬ ತಾಯಿಯ ಪರಿಕಲ್ಪನೆ ಮೂಡಲು ನಿರ್ದಿಷ್ಟ ತಾತ್ವಿಕತೆಯೊಂದು ಕೆಲಸ ಮಾಡಿದೆ. ತಾಯಿಯ ಕಲ್ಪನೆಯೇ ಜೈವಿಕ ನೆಲೆಯದ್ದು. ಲಾಲನೆ, ಪಾಲನೆ, ಪೋಷಣೆ ಇವು ಸಾಂಪ್ರದಾಯಿಕ ಚಿಂತನೆ ಗಳಂತೆ ತಾಯಿಯ ಹೊಣೆಗಾರಿಕೆ. ಇಲ್ಲಿ ತಂದೆಯ ಪಾತ್ರ ನಗಣ್ಯ. ಕನ್ನಡವನ್ನು ಹೀಗೆ ತಾಯಿಯೆಂದು ಕಲ್ಪಿಸಿಕೊಳ್ಳುವ ಮೂಲಕ ಕನ್ನಡಿಗರ ನಡುವೆ ಒಂದು ಜೈವಿಕ ಬಂಧವನ್ನು ರೂಪಿಸಲಾಗುತ್ತಿದೆ. ತಾಯಿಯೇ ಮಕ್ಕಳ ನಡುವೆ ಇರುವ ಜೈವಿಕ ಬಂಧ, ತಂದೆ ಮತ್ತು ಮಕ್ಕಳ ನಡುವೆ ಇರುವ ಜೈವಿಕ ಬಂಧಕ್ಕಿಂತ ನಿಕಟವಾದದ್ದು. ಏನೇ ಇರಲಿ; ಇಪ್ಪತ್ತನೇ ಶತಮಾನದ ಮೊದಲರ್ಧದ ಕನ್ನಡ ಸಾಂಸ್ಕೃತಿಕ ವಲಯ ಈ ತಾಯಿಯ ಕಲ್ಪನೆಯನ್ನು ಎರಡು ರೀತಿಯಲ್ಲಿ ಬಳಸಿ ಕೊಂಡಿದೆ. ಒಂದು, ಪಾಲಕಿಯಾಗಿ. ಇನ್ನೊಂದು ರಕ್ಷಕಿಯಾಗಿ. ಕನ್ನಡ ತಾಯಿಯನ್ನು ಭುವನೇಶ್ವರಿಗೆ ರಾಜರಾಜೇಶ್ವರಿಗೆ ಸಮೀಕರಿಸಿದ ಪ್ರಯತ್ನಗಳು ಗಮನಾರ್ಹ. ಏಕೆಂದರೆ ಇಲ್ಲಿ ತಾಯಿ ಕೇವಲ ಪಾಲಕಿಯಲ್ಲ, ರಕ್ಷಕಿ. ಅದಕ್ಕಾಗಿ ತನ್ನ ಉಗ್ರ ಅವತಾರವನ್ನು ತಳೆದು ನಿಲ್ಲಬಲ್ಲಳು. ಕನ್ನಡ ಹೀಗೆ ಒಳಗಿನಿಂದಲೇ ಪೋಷಣೆ ಪಡೆಯುವ ಹೊತ್ತಿನಲ್ಲೇ ಹೊರಗಿನಿಂದ ಬರುವ ಆಕ್ರಮಣಕಾರಿ ಶಕ್ತಿಗಳಿಗೆ ಸಡ್ಡು ಹೊಡೆಯುವ ತಾಯಿಯ ರಕ್ಷೆಯೂ ಬೇಕು. ಹೀಗೆ ತಾಯಿಯನ್ನು ರಕ್ಷಕಿಯನ್ನಾಗಿ ಕಲ್ಪಿಸಿಕೊಂಡ ಕೂಡಲೇ ಕನ್ನಡಕ್ಕೆ ಎದುರಾಳಿಯಾದ ಇನ್ನೊಂದು ಭಾಷಾ ಸಂಸ್ಕೃತಿಯನ್ನು, ಅದರ ಅಸ್ತಿತ್ವವನ್ನು ಒಪ್ಪಿದಂತಾಯಿತು. ಏಕೀಕರಣದ ಅನಂತರದಲ್ಲಿ ಕನ್ನಡ ತಾಯಿಯ ಪರಿಕಲ್ಪನೆ ಬಲವಾಗಿ ಬೇರೂರಿದೆ. ಆಕೆಯನ್ನು ಸ್ಥಳೀಯ ಶ್ರದ್ಧಾದೈವ ಕೇಂದ್ರಗಳಾದ ಮಾತೃದೇವತೆಯೊಡನೆ ಸಮೀಕರಿಸುವ ಯತ್ನಗಳು ನಡೆದಿವೆ. ಕನ್ನಡವನ್ನು ತಾಯಿಯೆಂದು ಆರಾಧಿಸುವ ಈ ಪರಿಕಲ್ಪನೆ ಅದಕ್ಕೆ ಅನುಕೂಲಕರವಾದ ಇತರ ಪರಿವೇಷವನ್ನು ಸೃಷ್ಟಿಸಿದೆ. ಮಾತೃದೇವತೆಗಳ ಸಂಬಂಧದಲ್ಲಿ ಇರುವ ಜಾತ್ರೆಗಳಂತೆ ಕನ್ನಡದ ಜಾತ್ರೆಗಳನ್ನು ಹಲವು ರೀತಿಯಲ್ಲಿ ಆಯೋಜಿಸಲಾಗುತ್ತದೆ. ನವೆಂಬರ್ ೧ರ ರಾಜ್ಯೋತ್ಸವ, ನಾಡಹಬ್ಬದ ದಸರಾ ಮೆರವಣಿಗೆ ಸಾಹಿತ್ಯ ಸಮ್ಮೇಳನಗಳು ಇವೆಲ್ಲ್ಲ ಇಂಥಾ ಆಚರಣೆಗಳು. ಇಂತಹ ಕಡೆಗಳಲ್ಲೆಲ್ಲಾ ಬಿಡದೇ ಕನ್ನಡ ತಾಯಿಯನ್ನು ಆಹ್ವಾನಿಸಲಾಗುತ್ತದೆ; ಆರಾಧಿಸಲಾಗುತ್ತದೆ; ಪೂಜಿಸಲಾಗುತ್ತದೆ. ಜಾತ್ರೆಗಳಲ್ಲಿ ಹೇಗೆ ಒಂದು ಸಾಮುದಾಯಿಕ ಶಕ್ತಿ ಬಹಿರ್ ರೂಪವನ್ನು ತಾಳುತ್ತದೆಯೋ ಇಲ್ಲೂ ಅದೇ ರೀತಿ ಕನ್ನಡ ಭಾಷಾಪ್ರೇಮ ಹೊರ ರೂಪವನ್ನು ಪಡೆದುಕೊಳ್ಳುತ್ತದೆ.

ಇದಲ್ಲದೇ ಚಾಲ್ತಿಗೆ ಬಂದ ಇನ್ನೊಂದು ಕನ್ನಡದ ಕುರುಹು ಎಂದರೆ ಕನ್ನಡದ ಬಾವುಟ. ಏಕೀಕರಣ ಹೋರಾಟದ ಸಂದರ್ಭದಲ್ಲಿ ಇಂತಹ ಬಾವುಟವೊಂದನ್ನು ಕಲ್ಪಿಸಿಕೊಳ್ಳಲಾಯಿತು. ಈಗದು ಅಧಿಕೃತವಾಗಿ ಕನ್ನಡ ಗುರುತಾಗಿದೆ. ಹಳದಿ ಮತ್ತು ಕೆಂಪು ಬಣ್ಣಗಳ ಪಟ್ಟಿಗಳು ನಡುವೆ ಕರ್ನಾಟಕದ ನಕ್ಷೆಯ ಚಿತ್ರ ಇವು ಈ ಬಾವುಟದ ವಿವರಗಳು. ಹಳದಿ ಮತ್ತು ಕೆಂಪು ಸಾಂಪ್ರದಾಯಿಕವಾಗಿ ಐದೆತನದ ಬಣ್ಣಗಳು. ಒಂದು ಅರಸಿನವನ್ನು ಇನ್ನೊಂದು ಕುಂಕುಮವನ್ನು ಪ್ರತಿನಿಧಿಸುತ್ತವೆ. ನಮ್ಮ ಸಾಂಸ್ಕೃತಿಕ ವಿನ್ಯಾಸದಲ್ಲಿ ಅರಿಸಿನ ಮತ್ತು ಕುಂಕುಮ ಮಾತೃದೇವತೆಯ ಆರಾಧನೆಯ ಗುರುತುಗಳು, ಎಲ್ಲಮ್ಮನ ಭಂಡಾರದಲ್ಲಿ ಈ ಬಣ್ಣ ಇರುವುದನ್ನು ನೋಡಬಹುದು. ಕನ್ನಡ ಬಾವುಟಕ್ಕೆ ಈ ಎರಡು ಬಣ್ಣಗಳನ್ನು ಆಯ್ದುಕೊಳ್ಳುವ ಮೂಲಕ ಪರೋಕ್ಷವಾಗಿ ಕನ್ನಡದ ಮಾತೃದೇವತೆಯ ಪರಿಕಲ್ಪನೆಯನ್ನು ಮರು ದೃಢೀಕರಿಸಲಾಗಿದೆ. ಕಳೆದ ಕೆಲವು ದಶಕಗಳಿಂದ ಬಾವುಟದ ಈ ಎರಡು ಬಣ್ಣಗಳು ಬಾವುಟದಲ್ಲಿ ಮಾತ್ರವಲ್ಲದೇ ಎಲ್ಲ ಕಡೆಯೂ ಕನ್ನಡದ ಪ್ರತೀಕವಾಗಿ ಬಳಕೆಯಾಗುತ್ತಿವೆ. ಇದಕ್ಕೆ ಹತ್ತಾರು ಉದಾಹರಣೆಗಳನ್ನು ನೋಡಬಹುದು.

ಬಾವುಟದಂತೆ ಇನ್ನೊಂದು ಗುರುತನ್ನು ಕೂಡ ಕನ್ನಡಕ್ಕಾಗಿ ಕಲ್ಪಿಸಿಕೊಂಡಿದ್ದೇವೆ. ಅದೇ ನಾಡಗೀತೆ. ಏಕೀಕರಣದ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ನಾಡಗೀತೆಯನ್ನಾಗಿ ಸ್ವೀಕರಿಸಲಾಗಿತ್ತು. ಏಕೀಕರಣದ ಅನಂತರ ಈ ಗೀತೆಯನ್ನು ಬಳಸಲು ಸಿದ್ಧರಿರಲಿಲ್ಲ. ಆಗ ನಡೆದ ಒಂದು ವಿವಾದದಲ್ಲಿ ಉದಯವಾಗಲಿ ಎಂಬ ಪದದ ಬಳಕೆಯನ್ನು ಪ್ರಶ್ನಿಸಲಾಯಿತು. ಈಗಾಗಲೇ ಕರ್ನಾಟಕ ರಾಜ್ಯ ನಿರ್ಮಾಣವಾಗಿರುವುದರಿಂದ ಉದಯವಾಗಲಿ ಎಂದು ಹಾರೈಸುವುದು ಅನಗತ್ಯ ಎಂದು ಕೆಲವರು ವಾದಿಸಿದರೆ ಮತ್ತೆ ಕೆಲವರು ಕರ್ನಾಟಕ ಉದಯಿಸಿದ ಕ್ರಿಯೆ ಪೂರ್ಣಗೊಂಡಿಲ್ಲ; ಅದು ನಿರಂತರವಾಗಿ ಉದಯಿಸುತ್ತಲೇ ಇರಬೇಕಾಗಿದೆ, ಪ್ರತಿದಿನದ ಸೂರ್ಯೋದಯದಂತೆ ಎಂದು ಹೇಳಿದರು. ಇಂತಹ ಸಮರ್ಥನೆ ದ.ರಾ.ಬೇಂದ್ರೆ ಅವರಂತಹ ಕವಿಗಳಿಂದ ಬಂದದ್ದು. ಏನೇ ಆಗಲಿ ಏಕೀಕರಣದ ಅನಂತರ ನಾಡಗೀತೆಯನ್ನಾಗಿ ಬೇರೊಂದು ರಚನೆಯನ್ನು ಆಯ್ದುಕೊಳ್ಳಬೇಕೆಂಬ ವಾದ ಬಲ ಪಡೆಯತೊಡಗಿತ್ತು. ಈ ನಾಡ ಗೀತೆಯ ಸ್ಥಾನಕ್ಕೆ ಬಹುದೀರ್ಘ ವಿವಾದಗಳ ಅನಂತರ ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆ ಎಂದು ಆರಂಭವಾಗುವ ಗೀತೆಯನ್ನು ಆಯ್ಕೆ ಮಾಡಲಾಯಿತು. ಇದು ಕೂಡ ಒಂದು ರಾಜಕೀಯ ನಿರ್ಧಾರವೇ ಆಗಿದೆ. ಆದರೆ ಈ ಗೀತೆಗೆ ಅನೌಪಚಾರಿಕವಾಗಿ ನಾಡಗೀತೆಯ ಮನ್ನಣೆ ಆ ವೇಳೆಗಾಗಲೇ ದೊರಕಿತ್ತು. ೧೯೬೩-೬೪ರ ಚಲನಚಿತ್ರ ಮನಮೆಚ್ಚಿದ ಮಡದಿಯಲ್ಲಿ ಈ ಗೀತೆಯನ್ನು  ಬಳಸಲಾಗಿತ್ತು. ಹಲವು ಗಾಯಕರು ವಿವಿಧ ಬಗೆಗಳಲ್ಲಿ ಸಮೂಹಗೀತೆಯನ್ನಾಗಿ ಇದನ್ನು ಹೆಚ್ಚು ಬಳಕೆಗೆ ತಂದಿದ್ದರು. ಹೀಗೆ ಕನ್ನಡಿಗರ ಗುರುತಾಗಿ ಒಂದು ನಾಡಗೀತೆಯನ್ನು ಆಯ್ದುಕೊಳ್ಳುವಂತೆ ಸೂಚನೆ ನೀಡಲು ಬೇರೆ ಬೇರೆ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಮುಖ್ಯವಾಗಿ ಚಲನಚಿತ್ರಗಳು ಇಂತಹ ಹಲವು ಸ್ವತಂತ್ರ ರಚನೆಗಳನ್ನು ಬಳಸಿ ಜನಪ್ರಿಯಗೊಳಿಸಿದವು. ಅಂತಹ ಗೀತೆಗಳಲ್ಲಿ ಸುಮಾರು ೧೦ರಿಂದ ೧೫ ಇಂದಿಗೂ ಜನಪ್ರಿಯವಾಗಿವೆ. ಕವಿಗಳ ರಚನೆಗಳು ಚಿತ್ರದಲ್ಲಿ ಬಳಕೆಯಾದ ಇನ್ನೊಂದು ನಿದರ್ಶನವೆಂದರೆ ಎಂ.ಗೋವಿಂದ ಪೈಯವರ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಎಂಬ ಗೀತೆ. ಇದು ಅರವತ್ತರ  ಸುಮಾರಿನ ಕುಲವಧು ಚಿತ್ರದಲ್ಲಿ ಬಳಕೆಯಾಯಿತು. ಇಷ್ಟೆಲ್ಲ ವಿವಾದಗಳು ನಡೆದ ಮೇಲೆ ಕೊನೆಗೆ ಕುವೆಂಪು ಅವರ ಪೂರ್ವೋಕ್ತ ಕವಿತೆಯನ್ನು ನಾಡಗೀತೆ ಎಂದು ಆಯ್ಕೆ ಮಾಡಲಾಗಿದೆ. ಆದರೆ ವಿವಾದಗಳು ಮುಗಿದಿಲ್ಲ. ಆ ಗೀತೆಯ ಯಾವ ಚರಣಗಳು ನಾಡಗೀತೆಯೆಂದು ಪರಿಗಣಿತವಾಗಬೇಕು ಎಂಬುದು ಒಂದು ಪ್ರಶ್ನೆ. ಅದರ ಪಾಠಾಂತರಗಳ ಗೊಂದಲ ಇನ್ನೊಂದು ಪ್ರಶ್ನೆ. ಚರಣವೊಂದರಲ್ಲಿ ಬರುವ ಮಧ್ವಾಚಾರ್ಯರ ಹೆಸರನ್ನು ತೆಗದು ಅಲ್ಲಿ ಬಸವ ಎಂಬ ಪದವನ್ನು ಇರಿಸಿದ್ದು ಇನ್ನೊಂದು ವಿವಾದಕ್ಕೆ ಕಾರಣವಾಯಿತು. ಈಗ ಅದನ್ನು ಅಧಿಕೃತವಾಗಿ ಹಾಡುವ ಧಾಟಿ ಯಾವುದು ಎಂಬ ಪ್ರಶ್ನೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಧ್ವಜದ ಗುರುತನ್ನು ಒಪ್ಪಿದಷ್ಟು ಸುಲಭವಾಗಿ ಗೀತೆಯನ್ನು ಒಪ್ಪದಿರಲು ಕಾರಣವೇನು? ಧ್ವಜ ಅದರ ಬಣ್ಣಗಳು ಸಾಂಕೇತಿಕವಾದವು. ಅವುಗಳಿಗೆ ಮೂರ್ತ ಅರ್ಥಗಳು ಇರುವುದಿಲ್ಲ. ಸಾಂಸ್ಕೃತಿಕ ನೆನಪುಗಳು ಇದ್ದರೂ ಅದು ಮುಂಚೂಣಿಗೆ ಬರುವುದಿಲ್ಲ. ಆದರೆ ಗೀತೆಯ ಮಾತು ಹಾಗಲ್ಲ. ಅಲ್ಲಿ ಮೂರ್ತ ಅರ್ಥಗಳನ್ನು ನೀಡುವ ಪದಗಳಿರುತ್ತವೆ. ಈ ಮೂರ್ತ ಅರ್ಥದ ಜೊತೆಗೆ ಲಕ್ಷಣಾರ್ಥಗಳು ಕೂಡ ಇರುತ್ತವೆ. ಆದ್ದರಿಂದ ಭಾಷಾಸಮುದಾಯ ನಾಡಗೀತೆಯನ್ನು ತಾನು ಒಪ್ಪುವ ಸಾಂಸ್ಕೃತಿಕ ಪರಂಪರೆಯ ಪ್ರತೀಕವೆಂದು ನಂಬಬೇಕು. ಆದರೆ ಈ ನಾಡಗೀತೆಯನ್ನು ಆಯ್ಕೆ ಮಾಡಿದ ಹೊತ್ತಿಗೆ ಕನ್ನಡ ನಾಡಿನ ಸಮುದಾಯಗಳು  ತಂತಮ್ಮ ಸಾಂಸ್ಕೃತಿಕ ಪರಂಪರೆಗಳು ಒಂದೇ ಅಲ್ಲ; ಅವುಗಳ ನಡುವೆ ಕೊಡುಕೊಳೆಯ ಸಂಬಂಧಗಳಿದ್ದರೂ ಪ್ರತಿಯೊಂದೂ ಅನನ್ಯ ಆಗಿವೆಯೆಂದು ಸಮರ್ಥಿಸುತ್ತಿರುವ ಸಂದರ್ಭವಿದು. ಅಂದರೆ ಒಂದು ಸಾಂಸ್ಕೃತಿಕ ಪರಂಪರೆಗೆ, ಒಂದು ಸಾಂಸ್ಕೃತಿಕ ನೆನಪಿಗೆ, ಒಂದು ಚರಿತ್ರೆಗೆ, ಒಂದು ಸಾಮಾಜಿಕ, ರಾಜಕೀಯ ವಿನ್ಯಾಸಕ್ಕೆ ಎಲ್ಲರೂ ಬದ್ಧರಲ್ಲ ಎಂಬ ನಂಬಿಕೆ ಆಚರಣೆಗಳು ಬಲಗೊಂಡಿರುವ ಈ ಸನ್ನಿವೇಶದಲ್ಲಿ ಸಹಜವಾಗಿಯೇ ಕನ್ನಡ ನಾಡಿನ ನಾಡಗೀತೆಯ ಬಗೆಗೆ ಒಂದು ವಿವಾದ ಸೃಷ್ಟಿಯಾಗಿದೆ.

ನಾಡಗೀತೆಯ ಇನ್ನೊಂದು ಸಮಸ್ಯೆ ಎಂದರೆ ಅದು ಕಾಲದೇಶಬದ್ಧ ಚರಿತ್ರೆಯೊಂದರ ಸ್ಮೃತಿಯನ್ನು ಅಳವಡಿಸಿಕೊಂಡಿರುತ್ತದೆ; ಆ ಸ್ಮೃತಿಗೆ ಭಾಷಿಕರೆಲರೂ ಹಕ್ಕುದಾರರು ಎಂಬ ಪೂರ್ವ ನಿರ್ಧಾರಿತ ತರ್ಕವನ್ನು ಹೊಂದಿರುತ್ತದೆ. ಯಾವುದೇ ನಾಡಗೀತೆ ಕೇವಲ ಸಮಕಾಲೀನ ವಿನ್ಯಾಸಗಳನ್ನು ಮಾತ್ರ ತನ್ನ ಭಾಷಿಕ ಶರೀರದಲ್ಲಿ ಹೊಂದಿರುವುದಿಲ್ಲ. ಅದು ವಿವರಿಸುವ, ಮೆಚ್ಚುವ ಚರಿತ್ರೆ ಸಹಜವಾಗಿಯೇ ಕೆಲವು ಆಯ್ಕೆಗಳನ್ನು ಮತ್ತು ಕೆಲವು ನಿರಾಕರಣೆಗಳನ್ನು ಹೊಂದಿರುತ್ತದೆ. ಕುವೆಂಪು ಅವರ ನಾಡಗೀತೆಯನ್ನೇ ಗಮನಿಸೋಣ. ಅದರಲ್ಲಿ ಭಾರತದಲ್ಲಿ ಅಂತರ್ಗತವಾದ ಕರ್ನಾಟಕವನ್ನು ಕಲ್ಪಿಸಲಾಗಿದೆ. ಭಾರತ ಮತ್ತು ಕರ್ನಾಟಕಗಳ ನಡುವೆ ತಾಯಿಮಗಳ ಸಂಬಂಧವನ್ನು ರೂಪಿಸಿದ್ದಾರೆ. ಧಾರ್ಮಿಕ ಮತ್ತು ರಾಜಕೀಯ ಚರಿತ್ರೆಗಳ ಒಂದು ಅಖಿಲ ಭಾರತ ಪರಂಪರೆಯೊಳಗೆ ಕರ್ನಾಟಕದ ಧಾರ್ಮಿಕ ಮತ್ತು ರಾಜಕೀಯ ಪರಂಪರೆಯನ್ನು ಸಂಯೋಜಿಸಲಾಗಿದೆ. ಇವೆರಡರ ಜೊತೆಗೆ ಕವಿಗಳ ಪರಂಪರೆ ಯೊಂದನ್ನು ನೆನಪಿಸಿಕೊಳ್ಳುತ್ತಿದೆ. ಕವಿಗಳ ಪರಂಪರೆಯನ್ನು ಕಾಲ, ದೇಶ ಮುಕ್ತ ಎಂದು ತಿಳಿದರೂ ರಾಜಕೀಯ ಚರಿತ್ರೆಗೆ ಈ ಮಾತನ್ನು ಅನ್ವಯಿಸಲು ಬರುವುದಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ದಿನಗಳಲ್ಲಿ ಸಾಮಂತಶಾಹಿಯ ನೆನಪುಗಳನ್ನು ನಮ್ಮ ಪರಂಪರೆಯ ಹೆಮ್ಮೆ ಎಂದು ಹಾಡುವ ಗೀತೆ ಸಹಜವಾಗಿಯೇ ವಿವಾದಗಳಿಗೆ ಅನುವು ಮಾಡಿಕೊಡುತ್ತದೆ. ಆದರೆ ನಮ್ಮ ಸದ್ಯದ ಸಾಮಾಜಿಕ ಚಿಂತನೆಗಳು ಚರಿತ್ರೆಯ ಬಗೆಗೆ ಇಬ್ಬಂದಿತನವನ್ನು ಪ್ರದರ್ಶಿಸುತ್ತವೆ. ಒಂದೆಡೆ ಆ ಚರಿತ್ರೆಯ ಜನವಿರೋಧಿ ನೆನಪುಗಳಿಂದ ಹೊರಬರಲು ಇಂದಿನ ತಲೆಮಾರು ಯತ್ನಿಸುತ್ತಿರು ವಾಗಲೇ ಆ ನೆನಪುಗಳನ್ನು ನಮ್ಮ ಸಾಂಸ್ಕೃತಿಕ ಆಸ್ತಿ ಎಂಬಂತೆ  ಬಿಂಬಿಸಲಾಗು ತ್ತದೆ. ಹಾಗೆ ನೋಡಿದರೆ ಕನ್ನಡ ಸಮುದಾಯಕ್ಕೆ ಇಂತಹ ಗುರುತುಗಳನ್ನು ಕಲ್ಪಿಸುವ ಉದ್ದೇಶವೇ ಈ ರೀತಿಯದು. ಆ ಸಮುದಾಯವನ್ನು ಒಟ್ಟುಗೂಡಿಸಲು ಹೀಗೆ ಕಲ್ಪಿತ ಸಮಾನಾಂಶಗಳನ್ನು ಎದುರಿಗೆ ಇರಿಸಲಾಗುತ್ತದೆ. ಅವೆಲ್ಲವುಗಳ ರಕ್ಷಣೆಗೆ ಸಮುದಾಯ ಹೊಣೆ ಎನ್ನಲಾಗುತ್ತದೆ. ಅವುಗಳ ಹಕ್ಕುದಾರರು ಭಾಷಿಕರು ಎಂಬ ಚಿಂತನೆಯನ್ನು ಬೆಳೆಸಲಾಗುತ್ತದೆ.

ಕನ್ನಡ ಗುರುತುಗಳಲ್ಲಿ ಮೇಲೆ ಹೇಳಿದ ಬಾಹ್ಯ ಆಚರಣೆಯ ಕೆಲವು ಪ್ರತೀಕಗಳನ್ನು ಬಿಟ್ಟರೆ ಉಳಿದಂತೆ ಇನ್ನೂ ಹತ್ತಾರು ಸಂಗತಿಗಳನ್ನು ಪ್ರಾಸಂಗಿಕವಾಗಿ ಗುರುತುಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅವುಗಳಲ್ಲಿ ರಾಜ್ಯದ ಭೌಗೋಳಿಕ ಗಡಿಗೆರೆಯು ಒಂದು. ಈ ಗಡಿಗೆರೆ ಒಂದು ರಾಜಕೀಯ ನಿರ್ಧಾರವೆಂದು ಗಮನಿಸಿದ್ದೇವೆ. ಭೂಪಟದಲ್ಲಿ ನಾವು ಕಾಣುವ ಆ ಗೆರೆಗಳಿಗೆ ಯಾವ ಜೀವಂತಿಕೆಯ ಮಿಡಿತವೂ ಇರುವುದಿಲ್ಲ. ಆದರೆ ಆ ಗೆರೆಗಳನ್ನು ನಮ್ಮ ಸಾಮುದಾಯಿಕ ಆಸ್ತಿ ಎಂದೂ ಅದರ ಇಂಚಿಂಚನ್ನು ರಕ್ಷಿಸುವುದು ಎಲ್ಲ ಕನ್ನಡಿಗರ ಕರ್ತವ್ಯವೆಂದು ಹೇಳಲಾಗುತ್ತದೆ. ಕಾಲಕಾಲಕ್ಕೆ ಅಂತಹ ಉದ್ದೀಪಕ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಈ ಗಡಿಗೆರೆಗಳು ಜನಸಮುದಾಯಗಳ ನಡುವೆ ಹರಿಯುವ ಗೋಡೆಗಳು. ಈ ಗೋಡೆಗಳು ಕಲ್ಪಿತವಾದರೂ ಅವುಗಳಿಗೆ ಸಾಮಾಜಿಕ, ಆರ್ಥಿಕ ವಾಸ್ತವವಿರುತ್ತದೆ. ಅವುಗಳ ಆಸುಪಾಸಿನಲ್ಲಿ ಜೀವಿಸುವ ಜನರ ದೈನಿಕ ಲಯಗಳನ್ನು ಒಂದಲ್ಲ ಒಂದು ರೀತಿ ಇವು ಪ್ರಭಾವಿಸುತ್ತವೆ. ಆದರೆ ಒಟ್ಟು ಭಾಷಾ ಸಮುದಾಯ ಈ ಅನುಭವದ ವ್ಯಾಪ್ತಿಯಲ್ಲಿ ನಿಲುಕುವುದಿಲ್ಲ. ಆದರೂ ಭಾವನಾತ್ಮಕವಾಗಿ ಒಂದು ಸ್ವ ಮತ್ತು ಇನ್ನೊಂದು ಅನ್ಯ ಎಂಬ ಚೌಕಟ್ಟನ್ನು ರೂಪಿಸಲಾಗುತ್ತದೆ. ಈ ಸ್ವ-ಅನ್ಯದ ಪರಿಕಲ್ಪನೆ ಇಂತಹ ಸಂದರ್ಭಗಳಲ್ಲಿ ಆಳುವ ವ್ಯವಸ್ಥೆಗೆ ಅನುಕೂಲಕರ ಪರಿಕರವಾಗಿ ಮಾರ್ಪಡುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳುನಾಡು, ಕರ್ನಾಟಕ-ಆಂಧ್ರಪ್ರದೇಶ, ಕರ್ನಾಟಕ-ಕೇರಳ ಮತ್ತು ಕರ್ನಾಟಕ-ಗೋವಾ ಎಂಬ ಸ್ವ-ಅನ್ಯ ಚೌಕಟ್ಟುಗಳನ್ನು ಕಳೆದ ಐದು ದಶಕಗಳಲ್ಲಿ ಮತ್ತೆ ಮತ್ತೆ ಬಳಸಿಕೊಳ್ಳಲಾಗಿದೆ. ಈ ಗಡಿಗೆರೆಗಳು ಭೌಗೋಳಿಕ ಚೌಕಟ್ಟನ್ನು ಒಂದೆಡೆಗೆ ರೂಪಿಸುತ್ತಿದ್ದರೆ ಇವುಗಳನ್ನು ಛೇದಿಸುವ ನೈಸರ್ಗಿಕ ಮತ್ತು ಮಾನವ ನಿರ್ಮಿತ ಸಂಗತಿಗಳು ಹಲವಿದೆ. ಉದಾಹರಣೆಗೆ ನದಿಗಳು. ನದಿಗಳು ರಾಜ್ಯಗಡಿಗೆರೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದ ನೈಸರ್ಗಿಕ ಸಂಗತಿಗಳು. ಅವು ಸಾವಿರಾರು ವರ್ಷಗಳಿಂದ ತಮ್ಮ ಪಾತ್ರವನ್ನು ತಾವು ರೂಪಿಸಿಕೊಂಡಿವೆ. ಅವು ಸಂಪನ್ಮೂಲಗಳು ಎಂಬ ಕಾರಣದಿಂದ ಈ ಸ್ವ-ಅನ್ಯ ಪರಿಕಲ್ಪನೆಯಲ್ಲಿ ಸಂಘರ್ಷದ ಬಿಂದುಗಳಾಗುತ್ತವೆ. ಹೀಗೆಯೇ ಮಾನವ ನಿರ್ಮಿತ ಛೇದಕಗಳು ಹಲವಿವೆ. ಉದಾಹರಣೆಗೆ ರಸ್ತೆಗಳು ಮತ್ತು ರೈಲು ಮಾರ್ಗಗಳು. ಕರ್ನಾಟಕವನ್ನು ಭಾಷಿಕ ನೆಲೆಯಲ್ಲಿ ರೂಪಿಸಿ ಅದಕ್ಕೊಂದು ಗಡಿಗೆರೆಯನ್ನು ಕೊರೆದರೂ ಅನಂತರದ ಪ್ರಗತಿಯ ನೆಲೆಗಳು ಬೇರೊಂದು ರೀತಿಯ ಸಂಪರ್ಕ ಜಾಲವನ್ನು ನಿರ್ಮಿಸಿವೆ. ಬೀದರ್ ಜಿಲ್ಲೆಯ ವ್ಯಕ್ತಿಗೆ ಬೆಂಗಳೂರು ಹದಿನೆಂಟರಿಂದ ಇಪ್ಪತ್ತು ಗಂಟೆಗಳಷ್ಟು ಪ್ರಯಾಣದ ದೂರದಲ್ಲಿದ್ದರೆ ಹೈದ್ರಾಬಾದ್ ಮೂರು ಗಂಟೆಗಳ ಪ್ರಯಾಣದ ಅಂತರದಲ್ಲಿದೆ. ಅರ್ಥವಿಷ್ಟೇ. ಜನರ ಬದುಕಿನ ವಿನ್ಯಾಸಗಳು ನಾವು ಗುರುತಾಗಿ ಕೊಡುವ ಗಡಿಗೆರೆಗಳನ್ನು ನಂಬಿ ಕೂರುವುದಿಲ್ಲ. ತನ್ನದೇ ಆದ ವಿಧಾನದಲ್ಲಿ ಅವರ ಬದುಕು ವಿನ್ಯಾಸಗಳನ್ನು ರೂಪಿಸಿಕೊಳ್ಳುತ್ತದೆ. ಹೀಗೆ ಸ್ವ-ಅನ್ಯ ಪರಿಕಲ್ಪನೆ ಕರಗಿಹೋಗುತ್ತದೆ ಎನ್ನುವ ಆತಂಕದಿಂದಲೇ ಮತ್ತೆ ಮತ್ತೆ ಈ ಗುರುತುಗಳನ್ನು ಮರುಸ್ಥಾಪಿಸುವ ಕೆಲಸವನ್ನು ಮಾಡಲಾಗುತ್ತದೆ.

ಹೊಸ ತಂತ್ರಜ್ಞಾನ ಈಗ ಭೌಗೋಳಿಕ ಗಡಿಗೆರೆಗಳನ್ನು ಮತ್ತಷ್ಟು ಹುಸಿಗೊಳಿಸಿತ್ತು. ಜಾಗತೀಕರಣದ ಮೂಲ ಉದ್ದೇಶವೇ ಗಡಿಗಳಿಲ್ಲದ ಲೋಕ ಕಲ್ಪನೆ. ಅವುಗಳ ಸಂಪರ್ಕ ವಿಧಾನವೇ ನೆಲವನ್ನು ಬಿಟ್ಟಿರುತ್ತದೆ ಎಂಬ ಅಂಶವೇ ಒಂದು ಪ್ರತೀಕವೆಂದು ತೋರುತ್ತದೆ. ನಾವು ನೆಲದಲ್ಲಿ ಗೋಡೆಗಳನ್ನು ಕಟ್ಟುತ್ತಿದ್ದರೆ ಇಡೀ ಆಕಾಶವೇ ರಂಧ್ರಮಯವಾಗಿ ಆ ರಂಧ್ರಗಳ ಮೂಲಕ ಹೊರಜಗತ್ತು ಒಳಕ್ಕೆ, ಒಳಜಗತ್ತು ಹೊರಕ್ಕೆ ಚಲಿಸತೊಡಗುತ್ತದೆ. ಈ ಪ್ರಕ್ರಿಯೆಗೆ ಕರ್ನಾಟಕವು ಹೊರತಾಗಿಲ್ಲ. ಕಳೆದ ಒಂದೂವರೆ ದಶಕದ ನಮ್ಮ ಆರ್ಥಿಕ ಪ್ರಗತಿಯನ್ನು ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. ದುಡಿಯುವವರು ಈ ರಾಜ್ಯದ ಚೌಕಟ್ಟಿನಲ್ಲಿ ಇದ್ದರೂ ಸಂಪರ್ಕ ಮಾತ್ರ ಜಾಗತಿಕವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕನ್ನಡದ ಮಣ್ಣು, ಕನ್ನಡದ ಗಾಳಿ, ಕನ್ನಡದ ನೀರು ಎಂಬ ಪರಿಕಲ್ಪನೆಗಳೇ ಭಾವುಕವಾಗಿ ಬಿಡುತ್ತವೆ ಮತ್ತು ಅಷ್ಟೇ ನಿರರ್ಥಕವಾಗುತ್ತವೆ.

ಈ ಸಂದರ್ಭದಲ್ಲಿಯೇ ಕುವೆಂಪು ಕಲ್ಪಿಸಿದ ರಾಜ್ಯ ಕಲ್ಪನೆಯ ಚರ್ಚೆ ಅಗತ್ಯ. ಒಂದು ನಿರ್ದಿಷ್ಟ ಚಾರಿತ್ರಿಕ ಪ್ರಸಂಗವೊಂದರಲ್ಲಿ ಅವರು ಬರೆದ ಗೀತೆಯೊಂದು ಇಡೀ ಕರ್ನಾಟಕವನ್ನು ಕಾಲದೇಶಾತೀತವಾಗಿ ಕಲ್ಪಿಸಿಕೊಳ್ಳುತ್ತದೆ. ಅಲ್ಲಿಯ ಯಾವ ಮುಂದಾಳುಗಳು ಈ ಕಾಲದವರಲ್ಲ. ಯಾವುದೋ ಗತದ ರಾಜರು; ಕವಿಗಳು; ಕಲಿಗಳು. ಅಖಂಡ ಕರ್ನಾಟಕವೆಂದು ಕುವೆಂಪು ಕರೆಯುವಾಗ ಅವರು ಈ ಕಾಲದ ಭೌಗೋಳಿಕ ಕರ್ನಾಟಕವನ್ನು ಕಲ್ಪಿಸುವುದಿಲ್ಲ. ಕಾಲಗತಿಯಲ್ಲಿ ಛಿದ್ರಗೊಳ್ಳದೇ ಅವಿರತವಾಗಿ ಮುಂದುವರೆಯುತ್ತಿರುವ ಕರ್ನಾಟಕವನ್ನು ಕಲ್ಪಿಸುತ್ತಾರೆ. ಹಾಗಾಗಿ ಕಾಲದೇಶಬದ್ಧವಾದ ಅವರ ಮಾತಿನಲ್ಲೇ ಹೇಳುವುದಾದರೆ ಇಂದು ಬಂದು ನಾಳೆ ಹೋಹ ಮಂತ್ರಿ ಮಂಡಲಗಳು ನಗಣ್ಯ. ಎಲ್ಲ ಕಾಲಕ್ಕೂ ಸಲ್ಲುವ ಒಂದು ಕರ್ನಾಟಕವನ್ನು ಅವರು ಮಂಡಿಸುತ್ತಾರೆ. ಇವರೇ ಮತ್ತೊಂದು ಭಾವಗೀತೆಯಲ್ಲಿ ಕರ್ನಾಟಕವನ್ನು ಭೌಗೋಳಿಕ ಗಡಿಗೆರೆಗಳನ್ನು ಮೀರಿದಂತೆ ರೂಪಿಸಿದ್ದಾರೆ. ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀ ಏರುವ ಮಲೆ ಸಹ್ಯಾದ್ರಿ ನೀ ಕುಡಿಯುವ ನೀರ್ ಕಾವೇರಿ ಎಂಬೆಲ್ಲ ವರ್ಣನೆಗಳಿರುವ ಈ ಕವಿತೆ ಸ್ಪಷ್ಟವಾಗಿ ಕರ್ನಾಟಕದ ಕಾಲದೇಶಬದ್ಧ ಗಡಿಯನ್ನು ನಿರಾಕರಿಸುತ್ತದೆ. ಏಕೆಂದರೆ ಸಹ್ಯಾದ್ರಿ ಕರ್ನಾಟಕದ ಗಡಿಯೊಳಗಿರುವ ವಾಸ್ತವವಾದರೂ ಜಗತ್ತಿನ ಯಾವ ಬೆಟ್ಟವನ್ನಾದರೂ ಸಹ್ಯಾದ್ರಿ ಎಂದು ಪರಿಗಣಿಸಲು ಸೂಚಿಸುತ್ತಾರೆ. ಈ ಭೌಗೋಳಿಕ ಕರ್ನಾಟಕ ಮತ್ತು ಮಾನಸಿಕ ಕರ್ನಾಟಕಗಳನ್ನು ಮುಖಾಮುಖಿ ಮಾಡುವ ವಿಧಾನ ಸೂಕ್ಷ್ಮ ಗ್ರಹಿಕೆಗೆ ಹಲವು ಸಾಧ್ಯತೆಗಳನ್ನು ಮುಂದಿಡುತ್ತವೆ. ಮುಖ್ಯವಾಗಿ ನಾವು ಕಲ್ಪಿಸಿಕೊಳ್ಳುವ, ರೂಢಿಸಿಕೊಳ್ಳುವ ಗುರುತುಗಳು ಹೇಗಿರಬೇಕು ಎನ್ನುವುದನ್ನು ಇಲ್ಲಿ ಸೂಚಿಸಲಾಗಿದೆ. ಸಾಮಾನ್ಯವಾಗಿ ಇಂತಹ ಗುರುತುಗಳು ಸಮುದಾಯದ ಜನರನ್ನು ನಿಷ್ಕ್ರಿಯ ನೆಲೆಯಲ್ಲಿ ಪರಿಭಾವಿಸುತ್ತವೆ. ಅಂದರೆ ಗುರುತುಗಳು ಇವೆ. ನೀವು ಅದನ್ನು ಒಪ್ಪಿಕೊಳ್ಳಿ, ಎಂಬ ನಿಲುವು ಮುಖ್ಯವಾಗುತ್ತವೆ. ಆದರೆ ನಾವೀಗ ಚರ್ಚಿಸಿದ ಕುವೆಂಪು ಮುಂದಿಟ್ಟ ಗುರುತು ಜನರನ್ನು ಕ್ರಿಯಾತ್ಮಕ ನೆಲೆಯಲ್ಲಿ ಪರಿಭಾವಿಸುತ್ತದೆ. ಏಕೆಂದರೆ ಅವರ ಮೇಲೆ ಏನನ್ನೂ ಒತ್ತಾಯದಿಂದ ಹೇರಿರುವುದಿಲ್ಲ. ಬದಲಿಗೆ ಅವರು ಕ್ರಿಯಾಶೀಲರಾಗಿ ಅದನ್ನು ಪರಿಭಾವಿಸಲು ಸಿದ್ಧರಿರಬೇಕು. ಅವರ ಜಾಗೃತ ನೆಲೆ ಅಲ್ಲಿ ಭಾಗಿಯಾಗುವುದು ಅತ್ಯಗತ್ಯ.

ಕನ್ನಡ ರಾಷ್ಟ್ರೀಯತೆ

ರಾಷ್ಟ್ರೀಯತೆಯ ಪರಿಕಲ್ಪನೆಯೇ ಹೊಸದು ಅಥವಾ ನಾಡು ದೇಶ ಇತ್ಯಾದಿಗಳನ್ನು ಹಿಂದೆ ವ್ಯಾಖ್ಯಾನಿಸುತ್ತಿದ್ದ ರೀತಿ ಈಗ ಬದಲಾಗಿದೆ. ರಾಷ್ಟ್ರವೆಂಬುದು ಒಂದು ರಾಜಕೀಯ ಸಾಂಸ್ಕೃತಿಕ ಸಂರಚನೆ. ಅದರಲ್ಲಿ ಅಮೂರ್ತವಾದ ನೆಲೆಗಳಿರುವಂತೆ ಮೂರ್ತವಾದ ಚಹರೆಗಳು ಇರುತ್ತವೆ. ಸಾಮಾನ್ಯವಾಗಿ ಒಪ್ಪಿಕೊಂಡ ವ್ಯಾಖ್ಯಾನದಲ್ಲಿ ರಾಷ್ಟ್ರಕಲ್ಪನೆಗೆ ಅಗತ್ಯವಾದ ಚಹರೆಗಳಲ್ಲಿ ಭಾಷೆಯು ಒಂದು. ಯುರೋಪಿನ ರಾಷ್ಟ್ರೀಯತೆಗೆ ಬಲವಾದ ಬೇರುಗಳನ್ನು ಒದಗಿಸಿದೆ ಭಾಷೆ. ಆದರೆ ಭಾರತದಂತಹ ಬಹುಭಾಷಿಕ ಮತ್ತು ಸಾಂಸ್ಕೃತಿಕ ವಿಭಿನ್ನತೆಯ ಭೂಪ್ರದೇಶಕ್ಕೆ ಒಂದು ಭಾಷೆಯನ್ನು ರಾಷ್ಟ್ರದ ಚಹರೆಯನ್ನಾಗಿ ಗುರುತಿಸುವುದು ಅಸಾಧ್ಯ. ಆದರೂ ಭಾವನಾತ್ಮಕ ನೆಲೆಯಲ್ಲಿ ಸಂಸ್ಕೃತವನ್ನು ಒಂದು ಚಹರೆಯನ್ನಾಗಿ ಗುರುತಿಸಲು ೧೯-೨೦ನೇ ಶತಮಾನದ ಮೊದಲ ಭಾಗಗಳಲ್ಲಿ ಪ್ರಯತ್ನಗಳು ನಡೆದವು. ಆದರೆ ಬಲು ಬೇಗನೇ ಆ ಪ್ರಯತ್ನ ವಿಫಲವಾಯಿತು. ಸಂಸ್ಕೃತದಷ್ಟೇ ದೃಢವಾದ ಭಿನ್ನ ಭಾಷಿಕ ಚಹರೆಗಳು ಸ್ವಾತಂತ್ರ್ಯ ಚಳುವಳಿಯ ಕಾಲದಿಂದಲೂ ಮುಂಚೂಣಿಗೆ ಬಂದವು. ಇದೆಲ್ಲ ಆಗಿಹೋದ ಚರಿತ್ರೆಯ ಭಾಗ. ಆದರೆ ಭಾಷೆಗಳನ್ನುಆಧರಿಸಿ ರಾಜ್ಯ ವಿಂಗಡನೆ ಮಾಡಿದ ಮೇಲೆ ಹೊಸ ಚಿಂತನಾ ಕ್ರಮಗಳು ಮೈದಳೆದವು.

ಕನ್ನಡನಾಡು ಎಂಬ ಪರಿಕಲ್ಪನೆ ಹಳೆಯದೇ. ದೇಶ-ಭಾಷೆ ಎರಡನ್ನು ಸೂಚಿಸುವ ಪದವಾಗಿ ಕನ್ನಡ ಬಳಕೆಯಾಗಿದೆ. ಏಕೀಕರಣದ ಅನಂತರದಲ್ಲಿ ಭಾರತದಲ್ಲಿ ಅಂತರ್ಗತವಾದ ಕರ್ನಾಟಕಕ್ಕೆ ಒಂದು ಉಪರಾಷ್ಟ್ರೀಯ ಚಹರೆ ಇದೆ ಎಂಬ ಚಿಂತನೆಗಳು ಮಂಡಿತವಾದವು. ಉಪರಾಷ್ಟ್ರೀಯತೆ ಎನ್ನುವುದು ಅಧೀನತೆಯನ್ನು ಮತ್ತು ಸಾಮರಸ್ಯವನ್ನು ಪ್ರತಿಪಾದಿಸುತ್ತದೆ. ಭಾರತವೆಂಬ ಸಂರಚನೆಯಲ್ಲಿ ಸ್ವತಂತ್ರ ಅಸ್ತಿತ್ವ ಇದ್ದರೂ ತಾನು ಬೇರೆಯಾಗಿ ತೋರದ ಕರ್ನಾಟಕ ಎಂಬುದನ್ನು ಕಲ್ಪಿಸಲಾಯಿತು. ನೆಹರು ಯುಗದ ವಿವಿಧತೆಯಲ್ಲಿ ಏಕತೆ ಎಂಬ ಪ್ರಸಿದ್ಧ ಹೇಳಿಕೆಯನ್ನು ಸಮರ್ಥಿಸುವಂತಹ ಚಿಂತನಾ ಕ್ರಮವಿದು.

ಆದರೆ ಎಂಟನೇ ದಶಕದ ಸುಮಾರಿನಲ್ಲಿ ಭಾರತದ ಹಲವು ಪ್ರದೇಶಗಳಲ್ಲಿ ಪ್ರತ್ಯೇಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಚಳುವಳಿಗಳು ಹುಟ್ಟಿಕೊಂಡವು. ಅಂತಹ ಚಳುವಳಿಗಳಲ್ಲಿ ಕೆಲವು ಸ್ವಾಯತ್ತತೆಯನ್ನು ಬಯಸಿದರೆ ಮತ್ತೆ ಕೆಲವು ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಲು ಈ ಚಳುವಳಿಯ ನೆರವನ್ನು ಪಡೆದುಕೊಂಡವು. ಸ್ವಾಯತ್ತತೆಯ ಬೇಡಿಕೆಗೆ ಭಾಷೆ ಮುಖ್ಯ ಆಧಾರವಾಗಿರುವ ಪ್ರಸಂಗಗಳು ಕಡಿಮೆ. ಹಲವು ಪ್ರಮುಖ ಚಹರೆಗಳ ಜೊತೆಗೆ ಪೂರಕವಾಗಿ ಭಾಷೆಯನ್ನು ಗುರುತಿಸಿಕೊಳ್ಳ ಲಾಗಿದೆ. ಧಾರ್ಮಿಕ ನೆಲೆಗಟ್ಟಿನ ಸ್ವಾಯತ್ತ ಚಳುವಳಿಗಳು ಧಾರ್ಮಿಕ ಗ್ರಂಥಗಳ ಭಾಷೆಯನ್ನು ತಮ್ಮ ಗುರುತನ್ನಾಗಿ ಮಾಡಿಕೊಂಡಿವೆ.

ಇಂತಹ ಚಳುವಳಿಗಳ ಪ್ರಭಾವ ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ಇದಕ್ಕೆ ಈ ರಾಜ್ಯದ ಸಾಮಾಜಿಕ ಬದಲಾವಣೆಗಳು ಮುಖ್ಯವಾದ ಭಿತ್ತಿಯನ್ನು ಒದಗಿಸಿವೆ. ಕರ್ನಾಟಕದಲ್ಲಿ ಕನ್ನಡ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಮೂಡಿದ್ದು ಭಾವನಾತ್ಮಕ ನೆಲೆಯಲ್ಲಿ ಮಾತ್ರವಲ್ಲ. ಪ್ರತ್ಯೇಕವಾಗಿ ಚಳುವಳಿಯ ಚಹರೆಗಳನ್ನು ಪಡೆದುಕೊಳ್ಳುತ್ತ್ತ ಬಂದ ಚಳುವಳಿಯಿದು.  ಮುಖ್ಯವಾಗಿ ಸಾಮಾಜಿಕ, ಆರ್ಥಿಕ ನೆಲೆಗಳ ಕಾರಣ ಗಳನ್ನು ಮುಂದೂಡಿ ಈ ಚಳುವಳಿಗಳನ್ನು ಕಟ್ಟಲಾಗಿದೆ. ಇಲ್ಲಿಯೂ ಕನ್ನಡ ಭಾಷೆ ಒಂದು ಪೂರಕ ನೆಲೆಯ ಗುರುತಾಗಿಯೇ ಮಾತ್ರ ಕಾಣಿಸಿಕೊಂಡಿದೆ. ಅದನ್ನು ಪ್ರಧಾನ ನೆಲೆಗೆ ತರುವ ಯತ್ನಗಳು ಪ್ರಾಸಂಗಿಕವಾಗಿ ಕಂಡುಬಂದರೂ ಅದೊಂದು ವ್ಯವಸ್ಥಿತ ಕ್ರಮವಾಗಿ ರೂಪುಗೊಂಡಿಲ್ಲ.

ಸಾಮಾಜಿಕ ವಿನ್ಯಾಸದಲ್ಲಿ ಆರ್ಥಿಕ ಏರುಪೇರುಗಳು ನಡೆದಿರುವುದು ಈಗಾಗಲೇ ಅಧ್ಯಯನಗಳಿಂದ ಹೊರಬಿದ್ದಿದೆ. ಕೆಲವೊಮ್ಮೆ ಈ ಏರುಪೇರಿಗೆ ಒಳಗಿನ ಕಾರಣಗಳಿಗಿಂತ ಹೊರಗಿನಿಂದ ಬಂದ ಅನ್ಯಭಾಷಿಕರೇ ಕಾರಣ ಎಂಬ ವಿವರಣೆಯನ್ನು ಮುಂದಿಡ ಲಾಗಿದೆ. ನೀರಾವರಿ ಪ್ರದೇಶದ ರೈತರ ಜಮೀನುಗಳನ್ನು ಅನ್ಯರಾಜ್ಯದವರು ಕೊಂಡು ಸ್ಥಳೀಯರನ್ನು ನಿರ್ಗತಿಕರನ್ನಾಗಿ ಮಾಡಿದ್ದು, ಕೈಗಾರಿಕೆಗಳ ಸ್ಥಾಪನೆಯಲ್ಲಿ ಇಲ್ಲಿನ ಸೌಲಭ್ಯಗಳನ್ನು ಪಡೆದು ಅನ್ಯಭಾಷಿಕ ಕಾರ್ಮಿಕರನ್ನು ದುಡಿಮೆಗೆ ತಂದು ಇಲ್ಲಿನ ಜನರ ಉದ್ಯೋಗವಕಾಶಗಳನ್ನು ಕಿತ್ತುಕೊಂಡದ್ದು, ವ್ಯಾಪಾರ ಮತ್ತು ವ್ಯವಹಾರ ಬಂಡವಾಳ ಹೂಡಿಕೆ ಇತ್ಯಾದಿ ವಲಯಗಳಲ್ಲಿ ಅನ್ಯಭಾಷಿಕ ಶ್ರೀಮಂತರು ಮೇಲುಗೈ ಸಾಧಿಸಿ ಸ್ಥಳೀಯರನ್ನು ಹಿಂದೆ ಸರಿಸಿದ್ದು, ಪ್ರಾಕೃತಿಕ ಕಾರಣಗಳಿಂದ ದುಡಿಯಲು ಅನ್ಯಭಾಷೆಯ ಜನರು ಬಂದು ದುಡಿಮೆಗಾರರಾಗಿ ಸ್ಥಳೀಯರಿಗೆ ಕೆಲಸವಿಲ್ಲದಂತಾಗಿದ್ದು ಹೀಗೆ ವಿಶ್ಲೇಷಣೆಗಳು ಮುಂದುವರೆಯುತ್ತವೆ. ಇಲ್ಲೆಲ್ಲ ಕನ್ನಡ ನಾಡಿನ ಸಂಪನ್ಮೂಲಗಳು ಕೇವಲ ಕನ್ನಡಿಗರಿಗೆ ದೊರಕಬೇಕು ಎಂಬ ಮಣ್ಣಿನ ಮಕ್ಕಳ ಸಿದ್ಧಾಂತ ಮುಂಚೂಣಿಗೆ ಬರುತ್ತದೆ. ಇಲ್ಲಿ ಕೂಡ ಸ್ಥಳೀಯರು ಮತ್ತು ಇಲ್ಲಿಯವರು ಎಂಬ ವ್ಯಾಖ್ಯೆಗೂ ಭಾಷೆಗೂ ಬಿಡಿಸಲಾರದ ನಂಟು ಕಾಣುವುದಿಲ್ಲ. ಆದರೂ ಉದ್ದೀಪ್ತ ವಾಗ್ವಾದಗಳಲ್ಲಿ ಮತ್ತೆ ಮತ್ತೆ ನಾಡಿನ ಗಾಳಿ, ನೀರು, ಮಣ್ಣು ಇವೆಲ್ಲವೂ ಕನ್ನಡಿಗರ ಸ್ವತ್ತು ಎಂಬ ಮಾತುಗಳು ಮಂಡನೆಯಾಗುತ್ತವೆ. ಈ ಭಾವನೆಗಳಿಗೆ ಪೂರಕವಾಗುವಂತೆ ನಾಡಿನ ಪರಂಪರೆಯ ಪುನಾರಚನೆ ಮಾಡುವುದನ್ನು ಈ ಹಿಂದೆಯೇ ಗುರುತಿಸಿದ್ದೇವೆ.

ಇಂತಹ ವ್ಯಾಖ್ಯೆಗಳು ತೋರಿಕೆಗೆ ತರ್ಕಬದ್ಧವಾಗಿ ಕಂಡರೂ ಜನರಲ್ಲಿ ಸ್ವ-ಅನ್ಯ ಎಂಬ ಭಾವವನ್ನು ಹುಟ್ಟುಹಾಕುತ್ತವೆ. ಸ್ವ-ಎಂಬುದು ಯಾವಾಗಲೂ ಶೋಷಿತವಾದ ಅನ್ಯಾಯಕ್ಕೊಳಗಾದ ನೆಲೆಯಾಗಿದ್ದು ಅನ್ಯ ಎಂಬುದು ಶೋಷಕ ಸ್ಥಾನದಲ್ಲಿ ಸದಾ ಆಕ್ರಮಣಶೀಲ ನೆಲೆಯಲ್ಲಿ ಇರುವಂತೆ ಚಿತ್ರಿತವಾಗುತ್ತದೆ. ಇದೊಂದು ಭ್ರಮಾತ್ಮಕ ವಾಸ್ತವ. ಎಷ್ಟೋ ಸಂದರ್ಭಗಳಲ್ಲಿ ಜನಸಮುದಾಯ ತಮ್ಮ ಸ್ಥಿತಿಗೆ ನಿಜ ಕಾರಣಗಳೇನು ಎಂಬುದನ್ನು ಗುರುತಿಸಲಾಗದಂತೆ ಈ ಭ್ರಮೆಯು ಅವರಿಗೆ ಕಣ್ಕಟ್ಟು ಮಾಡುತ್ತದೆ. ಆದ್ದರಿಂದ ಸ್ವ-ಅನ್ಯ ಸಮೀಕರಣಕ್ಕೆ ಕಾರಣವಾಗುವ ಭಾಷಿಕ ನೆಲೆಯ ವ್ಯಾಖ್ಯಾನದ ಬಗೆಗೆ ಜಾಗೃತರಾಗಿರುವುದು ಅಗತ್ಯವಾಗಿದೆ.

ಸಾಂಸ್ಕೃತಿಕ ನೆಲೆಯಲ್ಲಿ ಕನ್ನಡ ರಾಷ್ಟ್ರೀಯತೆಯನ್ನು ಕಟ್ಟುವ ಪ್ರಯತ್ನಗಳು ಹಲವು ರೀತಿಗಳಲ್ಲಿ ನಡೆದಿವೆ. ಏಳನೆಯ ದಶಕದ ಹೊತ್ತಿಗೆ ಒಂದು ವಿಶಿಷ್ಟ ಚಿಂತನೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ತಲೆ ಎತ್ತಿತ್ತು. ಜನಪದ ಸಂಸ್ಕೃತಿಯನ್ನು ಇಪ್ಪತ್ತನೇ ಶತಮಾನದಲ್ಲಿ ಮಾನವೀಯ ಮತ್ತು ಧರ್ಮ ನಿರಪೇಕ್ಷ ನೆಲೆಗಳಿಗಾಗಿ ಪುನರುತ್ಥಾನ ಮಾಡುವ ಪ್ರಯತ್ನಗಳು ನಡೆದಿದ್ದವು. ಆದರೆ ಈಗ ಆ ಜನಪದ ಸಂಸ್ಕೃತಿಯ ಅವೈದಿಕ ನೆಲೆಗಟ್ಟನ್ನು ಪ್ರಧಾನ ಸ್ತರಕ್ಕೆ ತಂದು ಆ ಮೂಲಕ ಕನ್ನಡಕ್ಕೆ ಚಹರೆಯನ್ನು ಒದಗಿಸುವ ಪ್ರಯತ್ನಗಳು ಮೊದಲಾದವು. ಆದರೆ ಇಲ್ಲಿನ ದೊಡ್ಡ ಸಮಸ್ಯೆ ಎಂದರೆ ಕನ್ನಡದ್ದೇ ಎಂದು ತಿಳಿಯಲಾದ ಪ್ರಧಾನ ಪರಂಪರೆಯ ನೆಲೆಗಳನ್ನೇ ಈ ಜನಪದ ಸಂಸ್ಕೃತಿ ನಿರಾಕರಿಸಿದ್ದು. ಈ ತಾತ್ವಿಕ ಗೊಂದಲ ಇನ್ನೂ ಮುಂದುವರೆದಿದೆ. ಇದಕ್ಕೆ ಕಳೆದ ಶತಮಾನದ ಕೊನೆಯೆರಡು ದಶಕಗಳ ದಲಿತ ಬಂಡಾಯ ಚಳುವಳಿಗಳು ಹೊಸ ಪ್ರಶ್ನೆಗಳನ್ನು ಸೇರಿಸಿವೆ.

ಆದರೆ ಆಳುವ ವರ್ಗ ಮಾತ್ರ ಕನ್ನಡ ಜನಪದ ಸಂಸ್ಕೃತಿಯನ್ನು ಅದರ ಮಾದರಿಗಳನ್ನು ತನ್ನ ಅಧಿಕೃತ ಚಹರೆಗಳನ್ನಾಗಿ ಬಳಸುತ್ತಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಅಚರಣೆಗಳಲ್ಲಿ ಹೀಗೆ ಜನಪದ ಕಲಾವಿದರ ಮೇಳಗಳ ಪ್ರದರ್ಶನ ಸರಣಿಗಳನ್ನು ಏರ್ಪಡಿಸುವ ಮೂಲಕ ತನ್ನ ಅಧಿಕಾರದ ಮುದ್ರೆಯನ್ನು ಒದಗಿಸಿದೆ. ಈ ಎಲ್ಲ ಸಂಗತಿಗಳು ಕನ್ನಡ ರಾಷ್ಟ್ರೀಯತೆಯ ಪ್ರಶ್ನೆ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಸೂಚಿಸುತ್ತವೆ.

ಶಾಸ್ತ್ರೀಯ ಭಾಷೆ

ಕನ್ನಡವನ್ನು ಶಾಸ್ತ್ರೀಯ ಭಾಷೆಯಾಗಿ ಪರಿಗಣಿಸಿ ಅದಕ್ಕೆ ಮನ್ನಣೆ ನೀಡಬೇಕೆಂದು ಹಲವು ಜನರು ಮತ್ತು ಗುಂಪುಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ತಮಿಳಿಗೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರಕಿದ್ದನ್ನು ಗಮನಿಸಿ ಇಂತಹ ಬೇಡಿಕೆಯನ್ನು ಮುಂದಿಡಲಾಗಿದೆ. ಶಾಸ್ತ್ರೀಯ ಭಾಷೆ ಎಂದು ಪರಿಗಣಿಸಲು ಅಗತ್ಯ ವಾದ ಎಲ್ಲ ಶರತ್ತುಗಳನ್ನು ಪೂರೈಸಿದ್ದರ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗಿದೆ. ಈ ಬೇಡಿಕೆಗೆ ಮುಖ್ಯ ಕಾರಣ ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದ್ದು. ಕರ್ನಾಟಕದಲ್ಲಿ ಈ ಚರ್ಚೆ ತೀವ್ರಗತಿಯಲ್ಲಿ ನಡೆದಿದೆ. ಕೆಲವರು ಶಾಸ್ತ್ರೀಯ ಭಾಷೆ ಎಂಬ ಪರಿಕಲ್ಪನೆಯೇ ನಿರುಪಯುಕ್ತವಾದುದು ಎನ್ನುತ್ತಾರೆ. ಶಾಸ್ತ್ರೀಯ ಎಂದರೆ ಕ್ಲಾಸಿಕಲ್ ಭಾಷೆ. ಎಂದರೆ ಅದು ಈಗಾಗಲೇ ಹಲವಾರು ಶತಮಾನಗಳಿಂದ ಜನಭಾಷೆಯ ಸ್ಥಾನದಿಂದ ಮಾಯವಾಗಿ ಅದು ಕೇವಲ ಬರವಣಿಗೆ ರೂಪದಲ್ಲಿ ಉಳಿದುಕೊಂಡಿರುತ್ತದೆ. ಅಂತಹ ಭಾಷೆಯನ್ನು ಜನರು ಪ್ರತ್ಯೇಕ ಅಧ್ಯಯನದ ಮೂಲಕ ಕಲಿಯಬೇಕೇ ಹೊರತು ತಂತಾನೇ ಯಾರಿಗೂ ಒದಗಿ ಬರುವುದಿಲ್ಲ. ಲಭ್ಯ ಬರವಣಿಗೆಯಲ್ಲಿ ಅಗಾಧ ಸಾಹಿತ್ಯ ಇರಬೇಕಾಗುತ್ತದೆ. ಅಲ್ಲದೇ ಜನೋಪಯೋಗಿಯಾದ ಮಾಹಿತಿ ಆ ಬರಹಗಳಲ್ಲಿ ಸಂಗ್ರಹಗೊಂಡಿರುತ್ತದೆ. ತಲೆಮಾರುಗಳ ಆ ಸಂಗ್ರಹಿತ ಜ್ಞಾನಕ್ಕಾಗಿ ಅದನ್ನು ಕಲಿಯುತ್ತಾರೆ. ಜ್ಞಾನ ಸಂಪತ್ತನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಕನ್ನಡವನ್ನಾಗಲೀ ಅಥವಾ ಇತರ ಆಧುನಿಕ ಭಾರತೀಯ ಭಾಷೆಗಳನ್ನಾಗಲೀ ಕ್ಲಾಸಿಕಲ್ ಎಂದು ಕರೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ಈ ಅರ್ಹತೆಯುಳ್ಳ ಸಂಸ್ಕೃತ ಭಾಷೆಯನ್ನೇ ಈವರೆಗೆ ಶಾಸ್ತ್ರೀಯ ಭಾಷೆ ಎಂದು ಗುರುತಿಸಿರಲಿಲ್ಲ. ತಮಿಳನ್ನು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ನೀಡಿ ಕ್ಲಾಸಿಕಲ್ ಭಾಷೆಯೆಂದು ಫೋಷಣೆ ನೀಡಿದ ಮೇಲೆ ಅದರಲ್ಲಿ ಸಂಸ್ಕೃತವನ್ನು ಈಗ ಸೇರಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಜಾರಿಗೆ ಬಂದಮೇಲೆ ತಮಿಳು ಭಾಷೆಯ ವಿದ್ವಾಂಸರು ಸಾವಿರದ ಆರು ನೂರ ಐವತ್ತಕ್ಕಿಂತ ಹಿಂದಿನ ತಮಿಳನ್ನು ಮಾತ್ರ ಕ್ಲಾಸಿಕಲ್ ಎಂದು ಪರಿಗಣಿಸುತ್ತಿದ್ದಾರೆ. ಆ ಸುಮಾರಿನಲ್ಲಿ ತಮಿಳುನಾಡಿಗೆ ಅನ್ಯಭಾಷೆಯ ವರ್ತಕ ಸಮುದಾಯ ಯುರೋಪಿ ನಿಂದ ಪ್ರವೇಶ ಮಾಡಿತು. ಅದರ ಪರಿಣಾಮದಿಂದ ತಮಿಳು ಬದಲಾಯಿತೆಂದು ತಿಳಿಯುತ್ತಾರೆ. ಅಂದರೆ ಒಂದು ಭಾಷೆ ಕ್ಲಾಸಿಕಲ್ ಆಗಬೇಕಾದರೆ ಅದು ಅನ್ಯ ಭಾಷೆಯ ಪ್ರಭಾವದಿಂದ ಮುಕ್ತವಾಗಿರಬೇಕು ಎಂದು ತಿಳಿಯಲಾಗಿದೆ. ಈ ಶರತ್ತುಗಳ ಹಿನ್ನೆಲೆಯಲ್ಲಿ ಕನ್ನಡವನ್ನು ಕ್ಲಾಸಿಕಲ್ ಭಾಷೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೂ ಪ್ರಯತ್ನಗಳು ಮಾತ್ರ ಮುಂದುವರೆದಿವೆ.

ಕ್ಲಾಸಿಕಲ್ ಎಂದು ಕರೆಸಿಕೊಳ್ಳಲು ಹಪಾಹಪಿ ಏಕೆ; ಒಂದು ವೇಳೆ ಕನ್ನಡ ಕ್ಲಾಸಿಕಲ್ ಭಾಷೆ ಎಂದು ಘೊಷಿತವಾದರೆ ಅದರಿಂದ ದೊರಕುವ ಲಾಭಗಳೇನು ಎಂಬ ಪ್ರಶ್ನೆಗಳು ಈಗ ನಮ್ಮ ಮುಂದಿವೆ. ಎರಡನೆಯ ಪ್ರಶ್ನೆ ಅಭಿಮಾನದ ಮಾತನ್ನು ಎತ್ತಿ ಹಿಡಿಯುತ್ತದೆ. ಇದು ಕನ್ನಡ ಬಲ್ಲವರಲ್ಲಿ ಒಂದು ಅಸ್ಮಿತೆಯನ್ನು ಬೆಳೆಸಲು ನೆರವಾಗುವುದರಿಂದ ನಾವು ಕ್ಲಾಸಿಕಲ್ ಭಾಷೆಯ ಪಟ್ಟಿಗೆ ಸೇರಬೇಕು ಎನ್ನುವ ವಾದ ಮಂಡನೆಯಾಗುತ್ತಿದೆ. ಕೇಂದ್ರ ಸರ್ಕಾರವು ಕ್ಲಾಸಿಕಲ್ ಭಾಷೆಗಳಿಗೆ ಅವುಗಳ ಅಭಿವೃದ್ಧಿಗೆ ಧನ ಸಹಾಯ ಮಾಡುವುದರಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರಿಯ ಮಟ್ಟದ ಅಧ್ಯಯನ ಪೀಠಗಳು ಸ್ಥಾಪನೆಯಾಗುವುದರಿಂದ ಕನ್ನಡಕ್ಕೆ ಲಾಭವಿದೆ ಎನ್ನುತ್ತಿದ್ದಾರೆ. ಇದು ನಮ್ಮ ಎಂದಿನ ಗೊಂದಲದ ಮುಂದುವರಿಕೆ. ಈಗಲೂ ಕನ್ನಡದ ಅಭಿವೃದ್ಧಿ ಮತ್ತು ಭಾಷಿಕರ ಅಭಿವೃದ್ಧಿ ಎರಡೂ ಒಂದೇ ಎನ್ನುವ ಭ್ರಮೆಯಲ್ಲಿಯೇ ನಾವಿದ್ದೇವೆ. ಕನ್ನಡವನ್ನು ಕ್ಲಾಸಿಕಲ್ ಎಂದು ಫೋಷಿಸಿದಾಗ ನಾವು ತಿಳಿದಂತೆ ದೇಶವಿದೇಶಗಳ ವಿದ್ವಾಂಸರು ಕನ್ನಡವನ್ನು ಅಧ್ಯಯನ ಮಾಡುತ್ತಾರೆ ಎಂದು ಒಪ್ಪಿದರೆ ಅದು ಕನ್ನಡಿಗರ ಉನ್ನತಿಗೆ ಕಾರಣವಾಗುವ ಸಂಗತಿಯಾಗಲಾರದು. ಅಸಂಖ್ಯಾತ ಜನರಿಗೆ ಗುರುತುಗಳ ಅಗತ್ಯವಿದೆ. ಆ ಗುರುತುಗಳು ಅವರ ನಿತ್ಯದ ಸಂಕಷ್ಟಗಳನ್ನು ಬಗೆಹರಿಸಲು ಸ್ವಲ್ಪವಾದರೂ ನೆರವಾಗಬೇಕು. ಇಲ್ಲವಾದರೆ ಅವು ಆಳುವ ಜನರ ಸಂಚುಗಳಾಗಿ ಮಾತ್ರ ಉಳಿಯುತ್ತವೆ. ಕನ್ನಡ ಜನರಿಗೆ ಸರ್ಕಾರ ಕೊಡುವ ಬಿ.ಪಿ.ಎಲ್ ಕಾರ್ಡುಗಳು ಉಪಯುಕ್ತ ಗುರುತುಗಳಾಗಬಹುದೇ ಹೊರತು ಅವರಾಡುವ ಭಾಷೆಗೆ ಕ್ಲಾಸಿಕಲ್ ಎಂಬ ಪಟ್ಟ ದೊರಕುವುದಲ್ಲ.

ಕ್ಲಾಸಿಕಲ್ ಭಾಷೆಗಳ ಬಗೆಗೆ ಭಾಷಾಶಾಸ್ತ್ರಜ್ಞರು ನೀಡಿದ ವ್ಯಾಖ್ಯೆಗಳನ್ನು ಮರೆತು ಈ ದೇಶಕ್ಕೆ ಅನುಕೂಲವಾಗುವ ವ್ಯಾಖ್ಯೆಯೊಂದನ್ನು ರೂಪಿಸಿಕೊಂಡಿದ್ದೇವೆ. ಎನ್ನೋಣ. ಈಗಲೂ ಹಾಗೆ ಒಂದು ಭಾಷೆ ಕ್ಲಾಸಿಕಲ್ ಎಂದು ನಾಮಕರಣಗೊಂಡರೆ ಅದರಿಂದ ಇಪ್ಪತ್ತೊಂದನೆಯ ಶತಮಾನದಲ್ಲಿ ಇಕ್ಕಟ್ಟಿನಲ್ಲಿರುವ ಭಾಷೆಗಳಿಗೆ ನೆರವಾಗಲಾರದು. ನಾವೀಗಾಗಲೇ ಗಮನಿಸಿದಂತೆ ಔಪಚಾರಿಕ ಬಳಕೆಯ ವಲಯಗಳ ಕುಗ್ಗುವಿಕೆಯಂತಹ ಇಕ್ಕಟ್ಟುಗಳು ಕನ್ನಡವನ್ನು ಕಾಡುತ್ತಿವೆ. ತಮಿಳಿನ ಉದಾಹರಣೆಯನ್ನೇ ಗಮನಿಸಿದರೆ ಅಲ್ಲಿಯೂ ಆಧುನಿಕ ತಮಿಳಿನ ಸಮಸ್ಯೆಗಳನ್ನು ಕುರಿತು ಅಧ್ಯಯನ ಮಾಡಿದರೆ ಅದು ಕ್ಲಾಸಿಕಲ್ ತಮಿಳಿನ ಅಧ್ಯಯನಗಳಾಗುವುದಿಲ್ಲ. ಹೀಗಿದ್ದ ಮೇಲೆ ಒಂದು ಭಾಷೆ ಕ್ಲಾಸಿಕಲ್ ಆಗುವುದು ಅದಕ್ಕೆ ಕಟ್ಟಿದ ಕಾಲಗುಂಡಾಗಬಹುದೇ ಹೊರತು ಬೇರೆ ಏನೂ ಅಲ್ಲ.

ಹಾಗಿದ್ದಲ್ಲಿ ಆಧುನಿಕ ಭಾರತೀಯ ಭಾಷೆಗಳಲ್ಲಿ ಈ ಕ್ಲಾಸಿಕಲ್ ಪಟ್ಟದ ಭ್ರಮೆ ಏಕೆ  ಮೂಡಿದೆ? ಇದಕ್ಕೆ ರಾಜ್ಯ ಪುನರ್ ವಿಂಗಡಣೆಯ ಅನಂತರದ ಭಾಷಾ ನೀತಿಗಳಲ್ಲಿ ಉತ್ತರವಿದೆ. ಕೇಂದ್ರಸರ್ಕಾರ ತನ್ನ ವ್ಯಾಪ್ತಿಯಲ್ಲಿ ಇಂಗ್ಲಿಶ್ ಮತ್ತು ಹಿಂದಿಗಳನ್ನು ಪೋಷಿಸುವ ಹೊಣೆಯನ್ನು ಹೊತ್ತಿದೆ. ರಾಜ್ಯ ಸರ್ಕಾರಗಳು ತಂತಮ್ಮ ಭಾಷೆಗಳ ಸಾರ್ವಭೌಮತ್ವವನ್ನು ಸಾರಸಗಟಾಗಿ ಒಪ್ಪಿಲ್ಲ. ಕಳೆದ ಐವತ್ತು ವರ್ಷದಲ್ಲಿ ಈ ಪರಿಸ್ಥಿತಿಯಿಂದ ದೇಶೀಯ ಭಾಷೆಗಳಲ್ಲಿ ತಾವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬ ಕುದಿತ ಮೂಡಿದರೆ ಅಚ್ಚರಿಯೇನಿಲ್ಲ.

ತಮಿಳು, ಕನ್ನಡದಂತಹ ಭಾಷೆಗಳು ಬಲು ದೀರ್ಘಕಾಲದ ಇತಿಹಾಸವನ್ನು ಹೊಂದಿವೆ. ಜಗತ್ತಿನ ಭಾಷೆಗಳನ್ನು ಅಧ್ಯಯನ ಮಾಡಿದಾಗ ಒಂದು ವಿಶಿಷ್ಟ ಸಂಗತಿ ನಮ್ಮ ಗಮನಕ್ಕೆ ಬರುತ್ತದೆ. ಮೊದಲ ಸಹಸ್ರಮಾನದ ಸಂದರ್ಭದಲ್ಲೂ ಜನಭಾಷೆಯಾಗಿದ್ದು ಬರವಣಿಗೆಯ ಪರಂಪರೆಯನ್ನುಹೊಂದಿದ್ದು, ಮೂರನೆಯ ಸಹಸ್ರಮಾನದಲ್ಲೂ ಅದೇ ಮನ್ನಣೆಯನ್ನು ಕಾಯ್ದುಕೊಂಡು ಬಂದಿರುವ ಭಾಷೆಗಳ ಸಂಖ್ಯೆ ಹೆಚ್ಚಾಗಿಲ್ಲ. ಅವು ಇಡೀ ಜಗತ್ತಿನಲ್ಲಿ ಎಂಟೋ ಹತ್ತೋ ಇರಬಹುದು. ಉಳಿದವು ಅನಂತರದಲ್ಲಿ ಮೈತಳೆದು ಚಲಾವಣೆಗೆ ಬಂದ ಭಾಷೆಗಳು. ಮೊದಲ ಸಹಸ್ರಮಾನದಲ್ಲಿ ಪ್ರಬಲವಾಗಿದ್ದ ಎಷ್ಟೋ ಭಾಷೆಗಳು ಈಗ ಜನರ ಆಡುಭಾಷೆಗಳಾಗಿ ಇಲ್ಲವೇ ಬರಹಭಾಷೆಗಳಾಗಿ ಉಳಿದಿಲ್ಲ. ಈ ದೃಷ್ಟಿಯಿಂದ ಕನ್ನಡದಂತಹ ಭಾಷೆಗಳು ತಮ್ಮ ಹಿರಿಮೆಯನ್ನು ಒಂದು ಭಾವನಾತ್ಮಕ ನೆಲೆಯಲ್ಲಿ ಅನುಭವಿಸುತ್ತಿರಬಹುದು.

ಐವತ್ತು ವರ್ಷದ ಕೇಂದ್ರದ ಭಾಷಾನೀತಿಯ ಪ್ರಭಾವದಿಂದಾಗಿ ಭಾಷೆಗಳ ನಡುವಣ ತಾರತಮ್ಯ ಬೆಳೆಯುತ್ತಲೇ ಹೋಗಿದೆ. ಕೆಲವು ಭಾಷೆಗಳು ಹಿಂದೆ ಕೇಂದ್ರ ಸರ್ಕಾರದ ಮನ್ನಣೆಯನ್ನು ಹೊಂದಿರಲಿಲ್ಲ. ಆದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಅಂತಹ ಕೆಲವು ಭಾಷೆಗಳು ಸಂವಿಧಾನದ ಎಂಟನೆಯ ಅನುಚ್ಛೇದಕ್ಕೆ ಸೇರ್ಪಡೆಯಾಗಿವೆ. ಕೊಂಕಣಿ, ಮೈಥಿಲಿ, ನೇಪಾಲಿ, ಬೋಡೋ, ಸಂತಾಲಿ, ಮತ್ತು ಡೋಗ್ರಿ ಈ ಭಾಷೆಗಳು ಹೀಗೆ ಮನ್ನಣೆಯನ್ನು ಪಡೆದುಕೊಂಡವು. ಇವುಗಳಲ್ಲಿ ಎಷ್ಟೋ ಭಾಷೆಗಳಿಗೆ ಬರವಣಿಗೆಯ ದೀರ್ಘಪರಂಪರೆಯೇ ಇಲ್ಲ. ಆದ್ದರಿಂದ ಈ ಪರಿಸ್ಥಿತಿಯು ಬಹು ಹಳೆಯ ಭಾಷೆಗಳಲ್ಲಿ ಒಂದು ಬಗೆಯ ಕಳೆದುಕೊಂಡ ಭಾವವನ್ನು ಮೂಡಿಸಿರಬೇಕು. ಹೊಸ ಸಹಚರ ಭಾಷೆಗಳ ಜೊತೆಯಲ್ಲಿ ಹಕ್ಕುಗಳಿಗೆ ಹೋರಾಡುವ ಬದಲು ತಮ್ಮ ಪಾರಂಪರಿಕ ಸಾಧನೆಗಳಿಂದ ಮನ್ನಣೆಯನ್ನು ಪಡೆದುಕೊಳ್ಳಬೇಕೆಂದು ಯೋಚಿಸಿದರೆ ಅದನ್ನು ನಿರಾಕರಿಸಲು ಬರುವುದಿಲ್ಲ. ಈ ದಿಕ್ಕಿನಲ್ಲಿ ನಾವು ಕ್ಲಾಸಿಕಲ್ ಲ್ಯಾಂಗ್ವೇಜ್ ಆಗಬೇಕೆಂಬ ಬಯಕೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಶಾಸ್ತ್ರೀಯ ಎಂಬ ಪದ ನಿಯಮಬದ್ಧ ಎನ್ನುವ ಅರ್ಥವನ್ನು ಹೊಂದಿದೆ. ಹಾಗೆ ನೋಡಿದರೆ ಎಲ್ಲ ಭಾಷೆಗಳು ಶಾಸ್ತ್ರೀಯವೇ. ಆದ್ದರಿಂದ ಕೆಲವು ಭಾಷೆಗಳನ್ನು ಮಾತ್ರ ಶಾಸ್ತ್ರೀಯವೆಂದು ಕರೆದರೆ ಅದು ಉಳಿದ ಭಾಷೆಗಳ ಮಹತ್ವವನ್ನು ಅಲ್ಲಗಳೆದಂತಾಗುತ್ತದೆ. ಹಾಗಿದ್ದಲ್ಲಿ ಪರ‍್ಯಾಯವಾಗಿ ಯಾವ ಪದವನ್ನು ಬಳಸಬೇಕು. ಮೇಲೆ ಹೇಳಿದ ವಿವರಣೆ ಹಿನ್ನೆಲೆಯಲ್ಲಿ ಕನ್ನಡದಂತಹ ಭಾಷೆಗಳನ್ನು ಪರಂಪರೆಯ ಭಾಷೆಗಳೆಂದು ಕರೆಯುವುದು ಸೂಕ್ತ. ಪರಂಪರೆಯ ಭಾಷೆ ಎಂದಾಗ ಅಲ್ಲಿ ಕಾಲದ ನಿರಂತರತೆ ಮಾತ್ರ ಮುಖ್ಯವಾಗುತ್ತದೆ. ಅದು ಯಾವ ಕಾಲಘಟ್ಟದ್ದು ಎಂಬ ಪ್ರಶ್ನೆ ಹಿಂದೆ ಸರಿಯುತ್ತದೆ. ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ ಭಾಷೆಗಳು ಹೊಸ ವಿನ್ಯಾಸದಲ್ಲಿ ತಮ್ಮ ಸ್ಥಾನಗಳನ್ನು ನಿರ್ದೇಶಿಸಿಕೊಳ್ಳಬೇಕಾಗಿದೆ. ನಿರಂತರ ವಿಸ್ತರಣಾಶೀಲತೆಯನ್ನು ಹೊಂದಿರುವ ಇಂಗ್ಲಿಶ್, ಪ್ರಮಾಣಬದ್ಧ ಆದರೆ ಸೀಮಿತ ನೆಲೆಯ ವಿಸ್ತರಣೆಯನ್ನು ಹೊಂದಿರುವ ಫ್ರೆಂಚ್, ಜರ್ಮನ್, ಜಪಾನಿ ಮುಂತಾದ ಭಾಷೆಗಳು ಒಂದೆಡೆಯಾದರೆ ಸಹಸ್ರಮಾನಗಳ ಅವಧಿಯಲ್ಲಿ ಜನರ ಭಾಷೆಯಾಗಿದ್ದು ಅಗಾಧ ಪ್ರಮಾಣದ ನೆನಪು ಸಂಚಯವಾಗಿರುವ ಭಾಷೆಗಳು ಇನ್ನೊಂದೆಡೆ. ಇವಲ್ಲದೇ ಹೊಸ ಲೋಕ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಆದಿವಾಸಿ ಭಾಷೆಗಳು ಮತ್ತೊಂದೆಡೆ. ಈ ಇಕ್ಕಟ್ಟಿನಲ್ಲಿ ಕನ್ನಡ ತನ್ನ ಚಹರೆಯನ್ನು ಕಾಯ್ದುಕೊಳ್ಳಲು ಒಂದು ಮಾರ್ಗವನ್ನು ಹಿಡಿಯಬೇಕಾಗುತ್ತದೆ. ಆದ್ದರಿಂದ ಕನ್ನಡದಂತಹ ಭಾಷೆಗಳನ್ನು ಪರಂಪರೆಯ ಭಾಷೆಗಳು ಅಥವಾ ಪಾರಂಪರಿಕ ಭಾಷೆ ಎಂದು ಕರೆಯುವುದು ಸೂಕ್ತ.

ಈ ಭಾಷಾ ಸಮುದಾಯಗಳಿಂದ ಬೇರೆ ಬೇರೆ ಭೂಪ್ರದೇಶಗಳಿಗೆ ವಲಸೆ ಹೋದ ಜನರು ತಮ್ಮ ಭಾಷೆಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆಯನ್ನು ಗುರುತಿಸಿದ್ದೆವು. ಅಂತಹ ಸಂದರ್ಭಗಳಲ್ಲೂ ಕೂಡ ಆ ಜನಸಮುದಾಯವು ಕನ್ನಡವನ್ನು ಮರು ಗಳಿಸಿಕೊಳ್ಳಲು ಸಾಧ್ಯ. ಪರಂಪರೆಯ ಭಾಷೆಯನ್ನಾಗಿ ಅವರು ಈ ಭಾಷೆಯನ್ನು ಕಲಿಯುವ ಅವಕಾಶವಿರುತ್ತದೆ.

ಜಗತ್ತಿನ ಹಲವು ಭಾಷೆಗಳು ಹೀಗೆ ವಲಸೆ ಸಮುದಾಯಗಳಲ್ಲಿ ಹಂಚಿಹೋಗುತ್ತಿವೆ. ಜಾಗತೀಕರಣದ ಪ್ರಭಾವದಿಂದ ಭಾಷೆಗಳು ಭೌಗೋಳಿಕ ಗಡಿಯ ಮಿತಿಗಳನ್ನು ದಾಟಿ ಹರಡಿಹೋಗುತ್ತಿವೆ. ವಲಸೆ ಸಮುದಾಯಗಳ ಪ್ರಮಾಣ ಈಗ ಶೇಕಡಾ ಇಪ್ಪತ್ತಕ್ಕೆ ಏರಿದೆ. ಆದ್ದರಿಂದ ಭಾಷೆಗಳ ಉಳಿಕೆ ಎಂಬುದು ಕೇವಲ ಮೂಲ ನೆಲೆಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಕನ್ನಡದಂತಹ ಭಾಷೆಗಳು ಈಗ ಇಂತಹ ವಲಸೆ ಸಮುದಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯತೊಡಗಿವೆ. ಅವರಲ್ಲಿ ಭಾಷೆಯು ಉಳಿದುಕೊಳ್ಳುವ ದೃಷ್ಟಿಯಿಂದ ಇದನ್ನು ಒಂದು ಪಾರಂಪರಿಕ ಭಾಷೆಯೆಂದು ಪರಿಗಣಿಸುವುದು ಸೂಕ್ತವಾಗುತ್ತದೆ.

ಕನ್ನಡ ಭಾಷಾ ಪರಂಪರೆ ಪುನಾರಚನೆ

ಏಕೀಕರಣ ಪೂರ್ವದಲ್ಲಿ ಕನ್ನಡದ ವಿದ್ವಾಂಸರು ಕನ್ನಡದ ಪ್ರಾಚೀನತೆಯನ್ನು ಶೋಧಿಸಲು ಯತ್ನಗಳನ್ನು ಮಾಡುತ್ತಿದ್ದರು. ಭಾಷೆಯ ಪ್ರಾಚೀನತೆಗೆ ಆಧಾರಗಳನ್ನು ಹುಡುಕುವ ಯತ್ನದ ಜೊತೆಗೆ ಭಾಷಿಕರ ಪ್ರಾಚೀನತೆ ಮತ್ತು ನಾಡಿನ ಪ್ರಾಚೀನತೆಗಳನ್ನು ಹುಡುಕುತ್ತಿದ್ದರು. ಈ ಮೂರು ಪ್ರಯತ್ನಗಳು ಪರಸ್ಪರ ಪೂರಕವಾಗಿವೆ ಎಂಬ ತಿಳುವಳಿಕೆ ಅದರಲ್ಲಿ ಇದ್ದಂತೆ ತೋರುತ್ತದೆ. ಈ ತಿಳುವಳಿಕೆಯ ಒಳಗೆ ಇರುವ ವಿರೋಧಗಳು ಇನ್ನೂ ಗೋಚರಿಸದಿರುವುದು ಆಶ್ಚರ್ಯದ ಸಂಗತಿ. ತೀರಾ ಈಚೆಗೆ ಇಪ್ಪತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಪ್ರಕಟವಾದ ಕನ್ನಡ ವಿಶ್ವವಿದ್ಯಾಲಯದ ಕರ್ನಾಟಕದ ಚರಿತ್ರೆ ಸಂಪುಟಗಳಲ್ಲಿ ಇತಿಹಾಸ ಪೂರ್ವಕಾಲದ  ಕರ್ನಾಟಕ ಎಂಬ ಪರಿಕಲ್ಪನೆ ಇದೆ. ಒಂದು ಸಂಪುಟ ಅದಕ್ಕಾಗಿಯೇ ಮೀಸಲಾಗಿದೆ. ಅಲ್ಲಿನ ಬರವಣಿಗೆಯ ಅಧಿಕೃತತೆಯನ್ನು ಬದಿಗಿಟ್ಟು ಕೆಲವು ಪ್ರಶ್ನೆಗಳನ್ನು ಮುಂದಿಡಬೇಕು. ಇತಿಹಾಸ ಪೂರ್ವ ಕರ್ನಾಟಕ ಎಂದರೇನು? ಕರ್ನಾಟಕವೆಂಬ ದೇಶ ಇತಿಹಾಸ ಪೂರ್ವಕಾಲದಲ್ಲಿ ಇತ್ತು ಎಂತಲೇ? ಅಥವಾ ಆ ಕಾಲದ ಆ ಪ್ರದೇಶದಲ್ಲಿ ಜನರು ಮಾತನಾಡುತ್ತಿದ್ದ ಭಾಷೆ ಕನ್ನಡವಾಗಿತ್ತು ಎಂತಲೇ? ಇವೆರಡೂ ಪರಿಶೀಲನೆಯ ಅನಂತರ ಬಿದ್ದುಹೋಗುವ ಪ್ರಕ್ರಿಯೆಗಳು. ವಾಸ್ತವವಾಗಿ ಈಗ ನಾವು ಕರ್ನಾಟವೆಂದು ಗುರುತಿಸುತ್ತಿರುವ ಭೂಭಾಗದಲ್ಲಿ ಇತಿಹಾಸ ಪೂರ್ವಕಾಲದಲ್ಲಿ ಏನು ನಡೆಯಿತು ಎಂಬುದಷ್ಟೇ ಅಲ್ಲಿನ ವಿದ್ವಾಂಸರ ಪರಿಗಣನೆಗೆ ಬಂದಿರುವ ಸಂಗತಿ. ಇದರಿಂದ ನಾವು ಇಂದಿನ ಕರ್ನಾಟಕದ ಗಡಿಗೆರೆಗಳನ್ನು ಕಾಲ್ಪನಿಕವಾಗಿ ಯಾವುದೋ ಕಾಲಕ್ಕೆ ಪ್ರಕ್ಷೇಪಿಸುತ್ತಿದ್ದೇವೆ. ಇಂತಹ ಪ್ರಯತ್ನಗಳು ಭಾಷೆಯ ಪ್ರಾಚೀನತೆಯನ್ನು ಭಾಷಿಕರಿಗೂ ಮತ್ತು ದೇಶಕ್ಕೂ ರವಾನಿಸುತ್ತವೆ. ಆದರೆ ನಮ್ಮ ಶೋಧಗಳು ಕನ್ನಡ ಭಾಷೆ ರಚನೆಗೊಂಡ ಬಗೆಗೆ ಮತ್ತು ಅದು ಮೂಲ ದ್ರಾವಿಡದಿಂದ ಬೇರ್ಪಟ್ಟ ಕಾಲ ಇವುಗಳ ಬಗೆಗೆ ಇನ್ನೂ ಖಚಿತವಾಗಿ ಹೇಳಲು ಸಾಧ್ಯವಾಗಿಲ್ಲ. ಈ ಭಾಷೆ ನಿರ್ಮಾಣವಾಗುವ ಹೊತ್ತಿನಲ್ಲಿ ಈ ನಾಡಿನ ಮೂಲ ವಾಸಿಗಳು ಯಾರು; ಅವರ ಜೀವನ ನಿರ್ವಹಣೆಯ ವಿಧಾನ ಏನಾಗಿತ್ತು; ಅವರೊಡನೆ ಸಂಪರ್ಕಕ್ಕೆ ಬಂದ ಭಾಷಿಕರು ಯಾರು; ಅವರ ವೃತ್ತಿ ಏನಾಗಿತ್ತು ಇವೆಲ್ಲವೂ ಬಿಡಿಸಬೇಕಾದ ಸಮಸ್ಯೆಗಳು. ಆದರೆ ಭಾಷೆಯ ಪ್ರಾಚೀನತೆಯು ದೇಶ ಮತ್ತು ಜನಗಳ ಜೊತೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ. ಏಕೀಕರಣದ ಅನಂತರ ಈ ಪ್ರಶ್ನೆಗಳು ಮುಖ್ಯವಾಗಿ ತೋರದಿದ್ದುದು ಒಂದು ಗಮನಾರ್ಹ ಸಂಗತಿ. ಸಾಮಾನ್ಯವಾಗಿ ಅಧ್ಯಯನಾಸಕ್ತಿಯ ಕೊರತೆಯಿಂದ ಹೀಗಾಯಿತು ಎನ್ನುವುದುಂಟು. ಆದರೆ ಈ ಪ್ರಶ್ನೆಗಳೇ ನಮಗೆ ಮುಖ್ಯ ಅನಿಸದೆಯೂ ಇರಬಹುದು. ಅಲ್ಲದೇ ಏಕೀಕರಣದ ಅನಂತರದ ಮೊದಲ ಎರಡು ದಶಕಗಳಲ್ಲಿ ಎದುರಾದ ಸಮಸ್ಯೆಗಳು ಬೇರೆಯ ರೀತಿಯವು. ಕನ್ನಡಿಗರು ಒಂದು ಆಡಳಿತದ ವ್ಯವಸ್ಥೆಗೆ ಬಂದಮೇಲೆ  ಅವರನ್ನು ಭಾವನಾತ್ಮಕವಾಗಿ ಒಗ್ಗೂಡಿಸಬೇಕೆಂಬುದು ಮುಖ್ಯ ಕಾಳಜಿಯಾಗಿತ್ತು. ವಾಸ್ತವವಾಗಿ ಇದು ಅಖಿಲ ಭಾರತ ನೆಲೆಯ ಕಾಳಜಿ. ಏಕೆಂದರೆ ನೆಹರು ಆಳ್ವಿಕೆಯ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಮಾತು ಭಾವೈಕ್ಯದ್ದು. ಅದರ ಸಾಧನೆಗೆ ಅಖಿಲ ಭಾರತ ಮಟ್ಟದ ಪರಿಕರಗಳನ್ನು ವ್ಯವಸ್ಥೆ ಶೋಧಿಸುತ್ತಿತು. ಇಂತಹುದೇ ಪ್ರಯತ್ನ ರಾಜ್ಯ ಮಟ್ಟದಲ್ಲೂ ಬೇರೆ ಬೇರೆ ಪರಿಕರಗಳೊಡನೆ ನಡೆದುದಕ್ಕೆ ಆಧಾರಗಳಿವೆ.

ಆದರೆ ಎರಡು ದಶಕಗಳ ಅನಂತರ ಕಂಡುಕೊಂಡ ಸಂಗತಿ ಎಂದರೆ ಈ ಕನ್ನಡ-ಕನ್ನಡಿಗ-ಕರ್ನಾಟಕ ಎಂಬ ತ್ರಿವಳಿ ಐಕ್ಯದಲ್ಲಿ ಒಗ್ಗೂಡಿಸುವ ಸಮಾನ ಅಂಶಗಳಿಗಿಂತ ಭಿನ್ನಾಂಶಗಳು ಹೆಚ್ಚಿವೆ ಎಂಬುದು. ಇದಕ್ಕೆ ಕಾರಣಗಳು ಹಲವು. ಈ ಭಿನ್ನತೆಗಳು ಮೊದಲೇ ಇದ್ದು ಈಗ ಪ್ರಕಟವಾದವೋ ಅಥವಾ ಏಕೀಕರಣದ ಅನಂತರದ ರಾಜ್ಯಾಡಳಿತವು ಆಯ್ದುಕೊಂಡು ಜಾರಿಗೆ ತಂದ ಅಭಿವೃದ್ಧಿಯ ಮಾದರಿಯಿಂದ ಉಂಟಾದುದೋ? ಈ ಪ್ರಶ್ನೆ ಕೂಡ ಮುಖ್ಯ. ವಾಸ್ತವವಾಗಿ ಎರಡೂ ನೆಲೆಗಳಲ್ಲಿ ಈ ಪ್ರಶ್ನೆಗಳಿಗೆ ಉತ್ತರಗಳಿರಬಹುದು. ಸಮಾಜ ರಚನೆಯಲ್ಲಿ ಅಂತಸ್ಥವಾಗಿದ್ದ ಎಷ್ಟೋ ಸಂಗತಿಗಳು ಈಗ ಹೊರಗೆ ತಲೆ ಎತ್ತಿ ಕಾಣತೊಡಗಿರಬಹುದು ಮತ್ತು ಕೆಲವು ಎರಡು ದಶಕಗಳ ರಾಜಕಾರಣದ ವೈರುಧ್ಯಗಳಿಂದ ಸೃಷ್ಟಿಯಾಗಿರ ಬಹುದು. ಆರ್ಥಿಕ ಸಾಮಾಜಿಕ ಅಸಮಾನತೆಗಳು, ಮೊದಲಿನ ಮಾದರಿಗಳು. ಪ್ರಾದೇಶಿಕ ಅಸಮಾನತೆಗಳು ಬೆಳವಣಿಗೆಯ ಏರು ಪೇರುಗಳು ಎರಡನೇ ಮಾದರಿಗಳು. ಈ ಅವಧಿಯಲ್ಲೇ ಎರಡು ಹೊಸ ಪರಿಕಲ್ಪನೆಗಳು ಹುಟ್ಟಿಕೊಂಡವು. ಇವು ಗಡಿನಾಡು ಕನ್ನಡಿಗರು ಮತು ಹೊರನಾಡು ಕನ್ನಡಿಗರು ಎಂಬ ಪರಿಕಲ್ಪನೆಗಳು. ಅನಂತರ ಇವು ರಾಜಕೀಯವಾಗಿಯೂ ಸಮರ್ಥನೆಯನ್ನು ಪಡೆದುಕೊಂಡವು.

ಏಕೀಕರಣದ ಅನಂತರದ ಎರಡು ದಶಕಗಳ ಪ್ರಯತ್ನಗಳ ಅನಂತರವೂ ಕನ್ನಡ ನಾಡು, ನುಡಿ ಮತ್ತು ನಾಡಿಗರು ಎಂಬ ತ್ರಿವಳಿಬಂಧ ಗಟ್ಟಿಗೊಳ್ಳಲಿಲ್ಲ. ಈ ಸಂದರ್ಭದಲ್ಲೇ ಬೇರೆಯ ಪ್ರಯತ್ನಗಳು ಮೊದಲಾದಂತೆ ತೋರುತ್ತಿದೆ. ಈ ಪ್ರಯತ್ನಗಳಲ್ಲಿ ಕೆಲವು ಕನ್ನಡ ಭಾಷೆ, ಕನ್ನಡ ನಾಡು ಮತ್ತು ಕನ್ನಡಿಗರನ್ನು ಒಂದು ವ್ಯಾಪಕ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಲು ಆಸಕ್ತವಾದವು. ಎಂಟನೇ ದಶಕದ ಗೋಕಾಕ್ ವರದಿ ಕುರಿತ ಚಳುವಳಿಯ ಅನಂತರ ಕರ್ನಾಟಕದಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯಬೇಕೆಂಬ ಮಾತು ಕೇಳತೊಡಗಿದ್ದು ಆಕಸ್ಮಿಕವಲ್ಲ. ತಮಿಳು ಭಾಷಿಕರು, ತೆಲುಗು ಭಾಷಿಕರು ಅಂತಹ ಸಮ್ಮೇಳನಗಳನ್ನು ಮಾಡಿದರು ಎಂಬುದು ಒಂದು ಕಾರಣವಾದರೆ ಕನ್ನಡ ಭಾಷಿಕರಲ್ಲೇ ಒಳಗೆ ತಲೆ ಎತ್ತಿದ ಭಿನ್ನಾಂಶಗಳ ಜಾಗೃತಿಯೂ ಇನ್ನೊಂದು ಮುಖ್ಯ ಕಾರಣ. ಏಳನೇ ದಶಕದ ರಾಜಕಾರಣ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಕನ್ನಡಿಗ ಎಂಬ ಪರಿಕಲ್ಪನೆಯನ್ನೇ ಛಿದ್ರಗೊಳಿಸಿದ್ದವು. ಇದನ್ನು ಹತ್ತಿಕ್ಕಲು ಇಂಥಾ ಸಮ್ಮೇಳನಗಳ ಭಾವನಾತ್ಮಕ ಲೇಪನ ಅಗತ್ಯವಾಗಿತ್ತು. ಆ ಹೊತ್ತಿನಲ್ಲಿ ನಡೆದ ವಿವಾದಗಳು ಗಮನಾರ್ಹ. ಇಂತಹ ಸಮ್ಮೇಳನಗಳ ಉಪಯುಕ್ತತೆಯ ಮಾತು ಒಂದು ಕಡೆಯಾದರೆ ಜನರ ನೂರೆಂಟು ಸಮಸ್ಯೆಗಳ ಪರಿಗಣನೆ ಮಾಡದೇ ಈ ಅದ್ದೂರಿ ಸಮಾರಂಭಗಳಿಗೆ ವೆಚ್ಚ ಮಾಡುವ ಔಚಿತ್ಯವನ್ನು ಕೆಲವರು ಪ್ರಶ್ನಿಸಿದರು. ಈ ವಿವಾದವೇ ವಸ್ತುಸ್ಥಿತಿಯನ್ನು ಬಯಲಿಗಿಡುತ್ತದೆ. ವಿಶ್ವಕನ್ನಡ ಎನ್ನುವ ಕಲ್ಪನೆಯ ಭ್ರಾಮಕತೆ ಅರಿವಿಗೆ ಬರುವುದು ತಡವಾಗಲಿಲ್ಲ. ಏಕೆಂದರೆ ಮತ್ತೆ ಅಂತಹ ಸಮ್ಮೇಳನ ನಡೆಯಲಿಲ್ಲ.

ಇದಲ್ಲದೇ ಕನ್ನಡ ಮಾತಾಡುವವರ ಸಮಾನಾಂಶಗಳನ್ನು ಗುರುತಿಸಲು ಮತ್ತೆ ಕೆಲವು ಪ್ರಯತ್ನಗಳು ನಡೆದವು. ತಮಿಳುನಾಡಿಗರು ಅವೈದಿಕ ಪರಂಪರೆಯೊಂದನ್ನು ಕಲ್ಪಿಸಿಕೊಂಡು ತಮ್ಮ ಅಸ್ಮಿತೆಯನ್ನು ಕಟ್ಟಿಕೊಂಡಂತೆ ಇಲ್ಲಿಯೂ ಅಂತಹ ಪ್ರಯತ್ನಗಳನ್ನು ನಡೆಸುವ ಸಾಧ್ಯತೆಯನ್ನು ಪರೀಕ್ಷಿಸಿರುವುದುಂಟು. ಏಳನೆಯ ದಶಕದಲ್ಲಿ ಪೆರಿಯಾರ್ ರಾಮಸ್ವಾಮಿ ನಾಯಕರ್ ಮತ್ತು ಪವಾಡಗಳ ನಿರಾಕರಣೆ ಮಾಡುತ್ತಿದ್ದ ನಾಸ್ತಿಕವಾದಿ ಕೋವೂರ್ ನೆರವಿನಿಂದ ಕರ್ನಾಟಕದಲ್ಲಿಯೂ ಅಂತಹ ಚಳುವಳಿಯನ್ನು ರೂಪಿಸಲು ಯತ್ನಗಳು ನಡೆದವು. ಆದರೆ ಅವೈದಿಕ ಪರಂಪರೆಯ ನೆಲೆಗಟ್ಟನ್ನು ಕರ್ನಾಟಕದಲ್ಲಿ ಸ್ಥಾಪಿಸಲು ನಡೆಸಿದ ಯತ್ನಗಳು ಬೇರೆಯೇ ದಿಕ್ಕಿನಲ್ಲಿ ಹರಿದಂತೆ ತೋರುತ್ತದೆ. ಹಾಗೆಯೇ ನಾಸ್ತಿಕವಾದದ ನೆಲೆಗಳು ವೈಜ್ಞಾನಿಕತೆ ಮತ್ತು ವೈಚಾರಿಕತೆಗಳ ದಿಕ್ಕಿನಲ್ಲಿ ಹರಿದು ಭಾರತ ಜ್ಞಾನ ವಿಜ್ಞಾನ ಚಳುವಳಿಗೆ ಕಾರಣವಾದವು.

ವಾಸ್ತವವಾಗಿ ಕನ್ನಡ ಸಂಸ್ಕೃತಿಯ ನೆಲೆಗಳನ್ನು ಜನಪದ ಸಂಸ್ಕೃತಿಯೊಡನೆ ಸಮೀಕರಿಸುವ ಪ್ರಯತ್ನಗಳು ಏಕೀಕರಣ ಪೂರ್ವದಲ್ಲೇ ಆರಂಭಗೊಂಡವು. ಆದರೆ ಆಗ ಜನಪದ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ ಬಗೆ ಭಿನ್ನವಾಗಿತ್ತು. ಅದು ಮಾನವೀಯ ಮೌಲ್ಯಗಳ ಮತ್ತು ಪಾರಂಪರಿಕತೆಯ ಆಕರವಾಗಿ ಕಂಡಿತ್ತು. ಆದರೆ ಏಕೀಕರಣದ ಅನಂತರದಲ್ಲಿ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಬಗೆಯಲ್ಲಿ ಮೂಲಭೂತ ಬದಲಾವಣೆಗಳಾದವು. ಅಖಿಲ ಭಾರತ ನೆಲೆಯ ಪರಂಪರೆಗಿಂತ ಭಿನ್ನವಾದ ಮತ್ತು ಸ್ವತಂತ್ರವಾದ ಪರಂಪರೆಗಳನ್ನು ಶೋಧಿಸುವ ಯತ್ನಗಳು ಮುಖ್ಯವಾದವು. ಮೊದಮೊದಲು ಕಲಾಪ್ರಕಾರಗಳಿಗೆ ಸೀಮಿತವಾಗಿದ್ದ ಈ ಪ್ರಯತ್ನಗಳು ಅನಂತರ ವ್ಯಾಪಕ ನೆಲೆಯನ್ನು ಕಂಡುಕೊಂಡವು. ಮುಖ್ಯವಾಗಿ ಈ ಅಧ್ಯಯನಗಳು ಅವೈದಿಕ ನೆಲೆಯನ್ನು ಕನ್ನಡ ಜನಪದ ಸಂಸ್ಕೃತಿಯ ಮೂಲ ಶೋಧವನ್ನಾಗಿ ಗುರುತಿಸಲು ಯತ್ನಿಸುತ್ತವೆ. ಇಂತಹ ಯತ್ನಗಳು ಮೊದಲ ಹಂತದಲ್ಲಿ ವೈದಿಕ ಪರಂಪರೆಯೊಡನೆ ವೈರುಧ್ಯವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಅದಕ್ಕಿಂತ ಭಿನ್ನವಾದ ಒಂದು ನೆಲೆಯನ್ನು ಮಾತ್ರ ಕಾಣಲು ಯತ್ನಿಸುತ್ತಿದ್ದವು. ಆದರೆ ಎಂಟನೇ ದಶಕದ ನಂತರ ಈ ನೆಲೆಗಳು ಭಿನ್ನವಾದವು. ಇದಕ್ಕೆ ಕಾರಣಗಳು ಹಲವಾರಿವೆ. ಮುಖ್ಯವಾಗಿ ಅವೈದಿಕ ಎಂದು ಗ್ರಹಿಸಿದ ನೆಲೆಯೊಳಗೆ ಹಲವು ಎಳೆಗಳು ಸೇರಿಕೊಂಡದ್ದು ಗೋಚರವಾಗತೊಡಗಿತ್ತು. ಕೃಷಿಮೂಲ ಎಂದು ತಿಳಿಯಲಾಗಿದ್ದ ಜನಪದ ಸಂಸ್ಕೃತಿಯ ಎಷ್ಟೋ ಬೇರುಗಳು ಕೆಳಜಾತಿಯ ಸಮುದಾಯಗಳ ಜೊತೆಗೆ ಹೆಣೆದುಕೊಂಡದ್ದು ಸ್ಪಷ್ಟವಾಗತೊಡಗಿತ್ತು.

ಈಗ ಜನಪದದ ತಾತ್ವಿಕ ನೆಲೆಗಟ್ಟನ್ನು ಕನ್ನಡದ ಅಸ್ಮಿತೆಯ ಗುರುತನ್ನಾಗಿ ಪರಿಗಣಿಸುವ ಯತ್ನವನ್ನು ಹಿಂದಕ್ಕೆ ತಳ್ಳಿ ಅದರ ಬದಲು ಅದರ ಬಾಹ್ಯ ರೂಪ ಗಳನ್ನು ಮಾತ್ರ ಗುರುತುಗಳನ್ನಾಗಿ ಉಳಿಸಿಕೊಳ್ಳುವ ಪ್ರಯತ್ನಗಳು ಮೊದಲಾದವು. ವಿವಿಧ ಸಮಾರಂಭಗಳಲ್ಲಿ, ನಾಡಹಬ್ಬಗಳಲ್ಲಿ, ರಾಜ್ಯೋತ್ಸವದಲ್ಲಿ, ಕರ್ನಾಟಕವನ್ನು ಬೇರೆ ಕಡೆ ಪ್ರತಿನಿಧಿಸಬೇಕಾದ ಕಡೆಗಳಲ್ಲಿ ಜನಪದ ಕಲೆಗಳನ್ನು ಪ್ರದರ್ಶಿಸುವ ಪರಿಪಾಟ ಬೆಳೆಯಿತು. ಅಂದರೆ ಅವು ಕನ್ನಡಿಗರ ಗುರುತಾಗಿ ಬಿಟ್ಟವು. ಯಕ್ಷಗಾನ, ಡೊಳ್ಳು ಕುಣಿತ, ನಂದಿಕುಣಿತ, ಪಟದ ಕುಣಿತ, ಸುಗ್ಗಿ ಕುಣಿತ ಹೀಗೆ ಹಲವು ಹತ್ತು ಇವುಗಳಲ್ಲಿ ಎಷ್ಟೋ ಕಲೆಗಳಲ್ಲಿ ಕನ್ನಡಿಗರು ಭಾಗಿಗಳಾಗುವುದಿರಲಿ, ಅವುಗಳಲ್ಲಿ ನಿಜಸ್ಥಿತಿಯಲ್ಲಿ ಆಚರಣೆಯ ಭಾಗವಾಗಿ ನೋಡಿಯೂ ಇರುವುದಿಲ್ಲ. ಆದರೆ ಅವೆಲ್ಲವೂ ಈಗ ಕನ್ನಡಿಗರ ಪ್ರತಿನಿಧಿಗಳಾಗಿಬಿಟ್ಟಿವೆ.

ಕನ್ನಡದ ಹೆಮ್ಮೆಯನ್ನು ಮರಳಿ ಸ್ಥಾಪಿಸುವ ಪ್ರಯತ್ನ ಸಾಮುದಾಯಿಕವಾಗಿ ನಡೆಯದಿದ್ದರೂ ವ್ಯಕ್ತಿಗತ ಶೋಧಗಳಲ್ಲಿ ಶೈಕ್ಷಣಿಕ ನೆಲೆಗಳಲ್ಲಿ ಮುಂದುವರೆದವು. ತಮ್ಮ ಹಲವು ವರ್ಷಗಳ ಸಂಶೋಧನೆಯ ಫಲವಾಗಿ ಡಾ.ಎಂ.ಚಿದಾನಂದ ಮೂರ್ತಿಯವರು ಈ ಶತಮಾನದಲ್ಲಿ ಪ್ರಕಟಿಸಿದ ಭಾಷಿಕ ಬೃಹತ್ ಕರ್ನಾಟಕ ಎಂಬ ಗ್ರಂಥವನ್ನು ಈ ದೃಷ್ಟಿಯಿಂದ ಪರಿಶೀಲಿಸಬೇಕು. ಇಂತಹ ಪ್ರಯತ್ನಗಳು ಕೆಲವೊಮ್ಮೆ ಆಕಸ್ಮಿಕ ಮತ್ತೆ ಕೆಲವೊಮ್ಮೆ ವಿಕ್ಷಿಪ್ತವೆನ್ನಿಸಿದರೂ ಇದರ ಹಿಂದಿನ ತಾತ್ವಿಕ ಒತ್ತಡಗಳನ್ನು ಅವಗಣಿಸುವುದು ಸಾಧ್ಯವಿಲ್ಲ. ಈ ಮೊದಲು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕರ್ನಾಟಕದ ಅರ್ಥಾತ್ ಕನ್ನಡಿಗರ ಉತ್ತರದ ಗಡಿಗೆರೆ ನರ್ಮದೆಯವರೆಗೂ ಇತ್ತೆಂದು ಡಾ.ಶಂಬಾ ಜೋಶಿ, ನಾ.ಶ್ರೀ. ರಾಜಪುರೋಹಿತ ಮುಂತಾದವರು ಪ್ರಸ್ತುತಪಡಿಸಿದರು. ಮರೆಯಾಗಿ ಹೋದ ಕನ್ನಡ ಪ್ರದೇಶಗಳ ಶೋಧ ನಿಧಾನವಾಗಿ ನಡೆಯುತ್ತಿತ್ತಾದರೂ ಅನಂತರದ ದಶಕಗಳಲ್ಲಿ ನಿಂತು ಹೋಗಿತ್ತು. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರಗಳ ಕನ್ನಡ ಶಾಸನಗಳನ್ನು ಶೋಧಿಸಿದ್ದು ಒಂದು ಬಗೆಯ ವಿಸ್ತರಣೆಯ ಆಕಾಂಕ್ಷೆಯನ್ನು ತೋರಿಸುತ್ತಿದ್ದವು. ಎಂಟನೇ ದಶಕದಲ್ಲಿ ಪಂಪನ ವೇಮುಲವಾಡ, ಧರ್ಮವುರ ಮುಂತಾದವುಗಳನ್ನು ಗುರುತಿಸುವ ಪ್ರಯತ್ನಗಳು ನಡೆದವು. ಈ ಪ್ರಯತ್ನಗಳನ್ನು ಕನ್ನಡ ಮನಸ್ಸು ಕೇವಲ ಶೈಕ್ಷಣಿಕ ಆಸಕ್ತಿ ಎಂದಷ್ಟೇ ಪರಿಗಣಿಸಿದೆ. ಅದನ್ನು ವೈಭವೀಕರಿಸುವ ಪ್ರಯತ್ನಗಳು ನಡೆಯಲಿಲ್ಲ. ಡಾ. ಚಿದಾನಂದಮೂರ್ತಿಯವರ ಭಾಷಿಕ ಬೃಹತ್ ಕರ್ನಾಟಕ ಕೇವಲ ಶೈಕ್ಷಣಿಕ ಆಸಕ್ತಿಯಷ್ಟೇ ಹೊಂದಿಲ್ಲ. ನೇಪಾಳದ ಪಶುಪತಿ ದೇವಾಲಯದ ಅರ್ಚಕರ ಮೂಲದ ಶೋಧ, ಮಹಾರಾಷ್ಟ್ರದ ಹಲವು ಸ್ಥಳನಾಮಗಳ ಮರುವ್ಯಾಖ್ಯೆ, ಮಿಥಿಲಾ ಮತ್ತು ಅವಧ ಪ್ರದೇಶದ ಮಧ್ಯಕಾಲೀನ ಚರಿತ್ರೆಯ ಮರು ಅವಲೋಕನ ಇವೆಲ್ಲವೂ ಕನ್ನಡಿಗರ ಹಳೆಯ ವಿಜಯಗಳನ್ನು ಸಾಧನೆಗಳನ್ನು ನೆನಪಿಸುವ ಪ್ರಯತ್ನಗಳು. ಈ ಮರುಖನನ ಪ್ರಯತ್ನದಿಂದ ನಿರ್ಮಾಣಗೊಂಡ ಕನ್ನಡ ಚರಿತ್ರೆಗೆ ಯಾರು ಹಕ್ಕುದಾರರು; ಯಾರು ಆ ಚರಿತ್ರೆಯ ಬಗೆಗೆ ಅಭಿಮಾನ ಪಡುವವರು ಎಂಬ ಪ್ರಶ್ನೆ ಇಪ್ಪತ್ತೊಂದನೆಯ ಶತಮಾನದಲ್ಲಿ ಮುಖ್ಯವಾಗುತ್ತದೆ.

ಚರಿತ್ರೆಯ ಬಗೆಗೆ ಇರುವ ಪ್ರಸಿದ್ಧ ಹೇಳಿಕೆಯೊಂದು ಹೀಗಿದೆ: ಚರಿತ್ರೆಯನ್ನು ಮರೆತವರು ಅದನ್ನು ಪುನಾರಾವರ್ತಿಸುತ್ತಾರೆ. ಈ ಹೇಳಿಕೆಯ ಉದ್ದೇಶ ಏನೇ ಇದ್ದರೂ ಚರಿತ್ರೆಯು ನೆನಪಿನ ಭಾಗವಾಗಬೇಕು ಎಂಬುದು ಇಲ್ಲಿ ಮುಖ್ಯ ಅಪೇಕ್ಷೆ ಆದಂತಿದೆ. ಆದರೆ ಇಪ್ಪತ್ತನೇ ಶತಮಾನದ ಗತಿಶೀಲತೆಯ ಅಭ್ಯಾಸ ಮಾಡಿದ ವಿದ್ವಾಂಸರು ಈ ಮೇಲಿನ ಹೇಳಿಕೆಗೆ ಒಂದು ತಿದ್ದುಪಡಿ ಮಾಡುತ್ತಾರೆ: ಚರಿತ್ರೆ ಯನ್ನು ನೆನಪಿಟ್ಟುಕೊಂಡವರು ಅದನ್ನು ಪುನರಾವರ್ತಿಸುತ್ತಾರೆ. ಚರಿತ್ರೆಯು ಮರೆಯಲೆಂದು ಇದೆಯೋ ಅಥವಾ ನೆನಪು ಮಾಡಿಕೊಳ್ಳಲೆಂದು ಇದೆಯೋ? ಈ ಪ್ರಶ್ನೆಗೆ ಉತ್ತರ ಹೇಳುವುದು ಇಲ್ಲಿನ ಉದ್ದೇಶವಲ್ಲ. ನೆನಪುಗಳಿಂದ ಚರಿತ್ರೆಯನ್ನು ಮರುಸ್ಥಾಪಿಸುವ ಯತ್ನ ಕನ್ನಡಿಗರ ಮಟ್ಟಿಗೆ ಎಷ್ಟು ಉಪಯುಕ್ತ ಅಥವಾ ಅಗತ್ಯ? ಈ ಪ್ರಶ್ನೆಯಷ್ಟೇ ನಮಗೆ ಮುಖ್ಯ.

ಎಂಟನೇ ದಶಕದ ಅನಂತರದ ಬೆಳವಣಿಗೆಗಳು ಕರ್ನಾಟಕದ ಮಟ್ಟಿಗೆ ಮಾತ್ರವಲ್ಲದೇ ಇಡೀ ಜಗತ್ತಿನ ಎಷ್ಟೋ ಪ್ರದೇಶಗಳ ಭೂಪಟಗಳನ್ನು ಬದಲಾಯಿಸಿ ಬಿಟ್ಟವು. ಶೀತಲಸಮರ ಎಂಬ ಪರಿಕಲ್ಪನೆಯೇ ಮಾಯವಾಯಿತು. ಜಾಗತೀಕರಣ ತನ್ನ ಹೊಸ ಬಗೆಗಳೊಂದಿಗೆ ಕಾಣತೊಡಗಿತ್ತು. ಕರ್ನಾಟಕವು ಇದರಿಂದ ಹೊರ ಗುಳಿಯುವ ಸಾಧ್ಯತೆ ಇರಲಿಲ್ಲ. ೧೯೯೧ರಲ್ಲಿ ಭಾರತವನ್ನು ಆಳುತ್ತಿದ್ದ ಸರ್ಕಾರ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡುವ ಉದಾರೀಕರಣ ನೀತಿಯನ್ನು ಜಾರಿಗೆ ತಂದಿತ್ತು. ಅದೇ ವರ್ಷ ಕರ್ನಾಟಕದಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಮೇಲುನೋಟಕ್ಕೆ ಸಂಬಂಧವಿಲ್ಲದ ಘಟನೆಗಳಿವು. ಆದರೆ ಚಾರಿತ್ರಿಕ ವಿನ್ಯಾಸದಲ್ಲಿ ಇವುಗಳಿಗೆ ಸಂಬಂಧವಿದೆ.

ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂಬ ಬೇಡಿಕೆ ಹಳೆಯದೇ. ತಮಿಳು ಮತ್ತು ತೆಲುಗು ವಿಶ್ವವಿದ್ಯಾಲಯಗಳ ಮಾದರಿಯನ್ನು ಕರ್ನಾಟಕವು ಅನುಸರಿಸ ಬೇಕೆಂಬ ಒತ್ತಾಯ ವಿಶ್ವಕನ್ನಡ ಸಮ್ಮೇಳನದ ನಡಾವಳಿಗಳಲ್ಲಿ ಕಾಣಿಸಿಕೊಂಡಿತ್ತು. ಅನಂತರ ಹಲವು ವರ್ಷಗಳ ಮತ್ತು ಹಲವರ ಪ್ರಯತ್ನಗಳ ಫಲವಾಗಿ ಈ ವಿಶ್ವವಿದ್ಯಾಲಯ ನೆಲೆಯೂರಿತ್ತು. ಇದು ಕನ್ನಡಿಗರ ನೆನಪಿನ ಮರುಖನನದ ಭಾಗವಾಗಬೇಕೆಂಬ ಬಯಕೆ ಈ ಸಂಸ್ಥೆಯ ಸ್ಥಾಪನೆಯ ಕನಸು ಕಂಡವರಲ್ಲಿ ಇದ್ದಿತು. ಆ ಕಾರಣದಿಂದಲೇ ಕನ್ನಡಿಗರ ನೆನಪಿನ ಮತ್ತು ಹೆಮ್ಮೆಯ ಭಾಗವೆಂದು ಭಾವಿಸಲಾದ ವಿಜಯನಗರ ಸಾಮ್ರಾಜ್ಯದ ಕೇಂದ್ರಸ್ಥಾನ ಹಂಪಿಯಲ್ಲಿ ಇದನ್ನು ಸ್ಥಾಪಿಸಿದರು.

ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದೆ ಇದ್ದ ತಾತ್ವಿಕತೆ ಪ್ರಾಚೀನ ಕರ್ನಾಟಕದ ಪರಂಪರೆಯನ್ನು ಪುನಾರಚಿಸುವುದು ಮತ್ತು ಕನ್ನಡ ಭಾಷೆಯನ್ನು ಆಧುನಿಕ ಸಂದರ್ಭದ ಎಲ್ಲ ಸವಾಲುಗಳಿಗೂ ಸಿದ್ಧವಾಗುವಂತೆ ಮಾಡುವುದು. ಈ ಉದ್ದೇಶ ನಾವೀಗಾಗಲೇ ಗುರುತಿಸಿದಂತೆ ಕರ್ನಾಟಕ ರಾಜ್ಯದೊಳಗೆ ಸೃಷ್ಟಿಯಾದ ಆಂತರಿಕ ಬಿಕ್ಕಟ್ಟಿನಿಂದ ಪ್ರೇರಣೆ ಪಡೆದಿತ್ತು. ಅದರ ಜೊತೆಗೆ ಜಾಗತಿಕವಾಗಿ ಬೆಳೆಯುತ್ತಿದ್ದ ಇಂಗ್ಲಿಶ್ ಮತ್ತು ಅದರ ಮೂಲಕ ಆದ ಪಾಶ್ಚಾತ್ಯ ಪ್ರಭಾವವು ದೇಶಿಯ ಭಾಷಾ ಸಂಸ್ಕೃತಿಗಳ ಅವಕಾಶಗಳನ್ನು ಸಂಕುಚಿತಗೊಳಿಸತೊಡಗಿತ್ತು. ಈ ಎರಡು ಕಾರಣಗಳು ಒಟ್ಟಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣವಾದವು.

ಕನ್ನಡ ವಿಶ್ವವಿದ್ಯಾಲಯ ಕಳೆದ ಒಂದೂವರೆ ದಶಕದಲ್ಲಿ ಭಾಷಾ ಸಂಸ್ಕೃತಿಯ ಶೋಧಗಳನ್ನು ಮುಂದುವರೆಸಿದೆ. ಭೂತಕಾಲದ, ವರ್ತಮಾನದ ಮತ್ತು ಭವಿಷ್ಯದ ಕರ್ನಾಟಕದ ಬಗೆಗೆ ಹಲವು ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರೈಸಿದೆ. ಪರಂಪರೆಯ ಪುನಾರಚನೆ ಮಾಡುವ ಅಧ್ಯಯನ ವಿಧಾನಗಳನ್ನು ಪೂರ್ಣವಾಗಿ ನಿರಾಕರಿಸಿದೆ. ಆ ಪರಂಪರೆಗೂ ಸಮಕಾಲೀನ ಬದುಕಿಗೂ ಇರುವ ಸಂಬಂಧಗಳನ್ನು ವಿಶ್ಲೇಷಿಸುವ ನೆಲೆಗಳಿಗೂ ಈ ಯೋಜನೆಗಳು ವ್ಯಾಪ್ತಿಯನ್ನು ಹೊಂದಿವೆ. ಇಷ್ಟಾದರೂ ಇದರ ಸ್ಥಾಪನೆಯ ಹಿಂದೆ ಇದ್ದ ಮುಖ್ಯ ಉದ್ದೇಶವಾದ ಕನ್ನಡಿಗರ ಗುರುತಾಗಿ ಈ ಸಂಸ್ಥೆ ಬೆಳೆಯಬೇಕೆಂಬುದು ನೆರವೇರಿದೆ ಎನ್ನುವಂತಿಲ್ಲ. ಇದು ಋಣಾತ್ಮಕ ನೆಲೆಯ ಮಾತಲ್ಲ. ಏಕೆಂದರೆ ಒಂದು ಸಂಸ್ಥೆ ಚಹರೆಯಾಗಿ ಗುರುತಾಗಿ ಮಾರ್ಪಡುವುದು ಸಂಸ್ಕೃತಿಯ ದೃಷ್ಟಿಯಿಂದ ಅಪೇಕ್ಷಣೀಯವಾದರೂ ಸಂಸ್ಥೆಯ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಅಷ್ಟೇನೂ ಹಿತಕರವಾದ ಸಂಗತಿಯಲ್ಲ.

ಎಂಟನೇ ದಶಕದಿಂದ ಈಚೆಗೆ ಕನ್ನಡ ಮತ್ತು ಸಮಾಜದ ನಡುವೆ ಅಗತ್ಯವಿದ್ದಷ್ಟು ನಂಟು ಬೆಳೆದಿಲ್ಲ ಎನ್ನುವ ಸಂಗತಿ ಅರಿವಿಗೆ ಬಂತಷ್ಟೇ. ಇದರ ಪರಿಣಾಮವಾಗಿ ನಡೆದ ಮುಖ್ಯ ಬದಲಾವಣೆಗಳಲ್ಲಿ ಕರ್ನಾಟಕ ಸರ್ಕಾರವು ಕನ್ನಡ ಭಾಷಾಭಿವೃದ್ಧಿ ಮತ್ತು ಗಡಿನಾಡಿನ ಸಮಸ್ಯೆಗಳ ಬಗೆಗೆ ಸಲಹೆ ನೀಡಲು ಒಂದು ವೇದಿಕೆಯನ್ನು ರಚಿಸಿತ್ತು. ಅನಂತರ ಈ ವೇದಿಕೆಯೇ ಕನ್ನಡ ಕಾವಲು ಸಮಿತಿ ಎಂಬ ಹೆಸರು ಪಡೆದಿದೆ. ಕನ್ನಡಕ್ಕೆ ವಿವಿಧ ಸಾಮಾಜಿಕ ವಲಯಗಳಲ್ಲಿ ದೊರೆಯಬೇಕಾಗಿರುವ ಸ್ಥಾನಮಾನಗಳು ದೊರೆತಿವೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಅನುಷ್ಠಾನಕ್ಕೆ ಅರ್ಹವಾದ ಸಲಹೆಗಳನ್ನು ನೀಡಲು ಈ ಕಾವಲು ಸಮಿತಿಯ ಕಾರ್ಯ ನಿಗದಿಯಾಗಿತ್ತು. ಈ ಉಸ್ತುವಾರಿ ಕೆಲಸದ ನಡುವೆಯೂ ಉದ್ದೇಶಗಳಲ್ಲಿ ಕನ್ನಡ ಬಲ್ಲವರಿಗೆ ಉದ್ಯೋಗ ಕಾಯ್ದಿರಿಸುವ ವ್ಯವಸ್ಥೆಯೊಂದನ್ನು ರೂಪಿಸಬೇಕೆಂಬುದು ಮುಖ್ಯ ಬೇಡಿಕೆಯಾಗಿದ್ದ ಕಾಲವದು. ಆಗ ಸರೋಜಿನಿ ಮಹಿಷಿಯವರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಯಿತು. ಆ ಸಮಿತಿಯು ಕನ್ನಡಿಗರೆಂದರೆ ಯಾರು ಎಂಬ ಪ್ರಶ್ನೆಯನ್ನು ಬಿಡಿಸಬೇಕಾಗಿ ಬಂತು. ಕನ್ನಡ ಮಾತಾಡುವ ಯಾರಾದರೂ ಕನ್ನಡಿಗರೇ. ಅಲ್ಲದೆ ಹೀಗೆ ಮಾತನಾಡುವ ಕನ್ನಡ ವ್ಯಕ್ತಿಯ ಮೊದಲ ಭಾಷೆಯೋ ಅಥವಾ ಎರಡನೆ ಭಾಷೆಯೋ ಎಂಬುದು ಮುಖ್ಯವಲ್ಲ. ಆದರೆ ಇನ್ನೊಂದು ಸಮಸ್ಯೆ ಎದುರಾಯಿತು. ಬಹು ದೀರ್ಘಕಾಲದಿಂದ ಕರ್ನಾಟಕದಲ್ಲಿ ನೆಲೆಸಿ ಕರ್ನಾಟಕದ ಭಾಷೆಯನ್ನು ಬಳಸದವರನ್ನು ಕನ್ನಡಿಗರೆಂದು ಕರೆಯಬೇಕೆ? ಯಾವ ಮಾನದಂಡಗಳನ್ನು ಅನುಸರಿಸಬೇಕು? ಕನ್ನಡಿಗರಿಗೆ ಸಿಗುವ ಸವಲತ್ತುಗಳು ಕರ್ನಾಟಕದ ವಾಸಿಯಾಗಿದ್ದು, ಈಗ ಇನ್ನೊಂದು ರಾಜ್ಯ ಅಥವಾ ರಾಷ್ಟ್ರದಲ್ಲಿ ವಾಸಿಸುತ್ತಿರುವವರಿಗೆ ದೊರೆಯಬೇಕೆ, ಬೇಡವೇ? ಈ ಪ್ರಶ್ನೆಗಳು ನಿರ್ವಿವಾದವಾಗಿ ಉತ್ತರಗಳನ್ನು ಪಡೆಯಬಹುದು ಎಂದು ಹೇಳುವುದು ಕಷ್ಟ. ಆದರೂ ಸರೋಜಿನಿ ಮಹಿಷಿ ಸಮಿತಿಯು ನೀಡಿದ ವರದಿಯಂತೆ ಯಾವುದೇ ವ್ಯಕ್ತಿ ೧೫ ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿದರೆ ಆ ವ್ಯಕ್ತಿಯನ್ನು ಕರ್ನಾಟಕದ ಪ್ರಜೆ ಹಾಗೂ ಕನ್ನಡಿಗ ಎಂದು ಗುರುತಿಸಲು ಸಾಧ್ಯ. ಈ ನಿರ್ಣಯ ಬೇರೊಂದು ರೀತಿಯಲ್ಲಿ ಉಪಯುಕ್ತವಾದರೂ ಕನ್ನಡಿಗರನ್ನು ವ್ಯಾಖ್ಯಾನಿಸುವಾಗ ಭಾಷೆಯ ಪ್ರಶ್ನೆ ಹಿಂದೆ ಸರಿಯಿತು. ೧೫ವರ್ಷ ಕಾಲಾವಧಿ ಮತ್ತು ಕರ್ನಾಟಕದಲ್ಲಿ ವಾಸ ಇವೆರಡು ಮುಖ್ಯ ನೆಲೆಗಳಾಗಿ ಭಾಷೆಯ ಪ್ರಶ್ನೆ ಹಿಂದಕ್ಕೆ ಸರಿಯಿತು. ಕನ್ನಡಿಗ ಪದದಲ್ಲಿ ಕನ್ನಡ ಮಾತಾಡುವ ವ್ಯಕ್ತಿ ಎಂಬ ಅರ್ಥವಿದ್ದರೂ ಇಡೀ ವ್ಯಾಖ್ಯೆ ಭಾಷೆಯನ್ನು ಬಿಟ್ಟು ದೇಶ ಮತ್ತು ವ್ಯಕ್ತಿಗಳಿಗೆ ಸೀಮಿತವಾಯಿತು. ಈ ಸಮಿತಿಯ ವರದಿ ಕೂಡ ಯಥಾವತ್ತಾಗಿ ಜಾರಿಗೆ ಬಂದಿಲ್ಲ. ಆ ಸಮಿತಿಯ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಈಗ ಮತ್ತಷ್ಟು ಬಿಗಡಾಯಿಸಿದೆ.

ಕನ್ನಡ ಕಾವಲು ಸಮಿತಿಯನ್ನು ಅನಂತರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು. ಅನಂತರವೂ ಕನ್ನಡ ಬಳಕೆಯ ಬಗೆಗೆ ಯಾವಾಗಲೂ ಎಚ್ಚರಿಕೆ ವಹಿಸುವ ಅಧಿಕಾರ ಮತ್ತು ಕಾರ್ಯವ್ಯಾಪ್ತಿಗಳು ಮೊದಲಿನಂತೆಯೇ ಮುಂದುವರೆದವು. ಭಾಷಾಭಿವೃದ್ಧಿಗಾಗಿ ಬೇರೆ ಬೇರೆ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿಯನ್ನು ಮೂಡಿಸುವ ಕೆಲಸವನ್ನು ಈ ಪ್ರಾಧಿಕಾರ ಮಾಡುತ್ತಿದೆ. ಉದಾಹರಣೆಗೆ ಇಂಗ್ಲಿಶ್ ನಾಮಫಲಕಗಳನ್ನು ಬಳಸುವವರ ವಿರುದ್ಧ ಟಿಪ್ಪಣಿಗಳನ್ನು ರವಾನಿಸುವುದು. ತಿದ್ದಿಕೊಳ್ಳಲು ಕಾಲಾವಕಾಶ ಕೊಟ್ಟು ಅನಂತರ ತಾವೇ ಆ ನಾಮ ಫಲಕಗಳನ್ನು ವಿರೂಪಗೊಳಿಸುವುದು ಇತ್ಯಾದಿ ಕಾರ್ಯಕ್ರಮಗಳು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡದ ಬಳಕೆಗೆ ಅನುಕೂಲಕರವಾದ ಪರಿಸರವನ್ನು ನಿರ್ಮಾಣ ಮಾಡಬೇಕಾಗಿದೆ. ಈ ಅಪೇಕ್ಷೆಯನ್ನು ಪೂರೈಸುವುದು ಕಷ್ಟ. ಏಕೆಂದರೆ ಈ ಅಗತ್ಯಗಳಿಗೆ ಅನುಕೂಲಕರವಾದ ಪರಿಕರ ಸಿದ್ಧತೆ ನಡೆಯಬೇಕಾದಷ್ಟು ಪ್ರಮಾಣದಲ್ಲಿ ನಡೆಯದಿರುವುದು. ಇದರಿಂದ ಇಚ್ಛಾಶಕ್ತಿ ಇದ್ದರೂ ಕಾರ್ಯಕ್ರಮವನ್ನು ಜಾರಿಗೆ ಕೊಡಲು ತೊಡಕುಗಳು ಹಲವಾರಿವೆ. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರದ ಒಂದು ಇಲಾಖೆಯಂತೆ ಕೆಲಸ ನಡೆಸುತ್ತದೆಯೇ ಹೊರತು ಸ್ವಾಯತ್ತ ಸಂಸ್ಥೆಯಾಗಿಲ್ಲ. ಭಾಷಾಭಿವೃದ್ಧಿಗೆ ಅಗತ್ಯವಾದ ಯೋಜನೆಗಳು, ಮುಂಗಾಣ್ಕೆಗಳು ಈ ಪ್ರಾಧಿಕಾರಕ್ಕೆ ದೊರಕಿಲ್ಲ. ಆದರೆ ಸರ್ಕಾರದ ಅಂಗ ಎಂಬ ಭಾವನೆ ಇರುವುದರಿಂದ ಕನ್ನಡ ಅನುಷ್ಠಾನದಲ್ಲಿ ಕೊರತೆ ಕಂಡ ಸಂದರ್ಭದಲ್ಲೆಲ್ಲ ಪ್ರಾಧಿಕಾರವು ನೀಡುವ ನೋಟಿಸುಗಳು ಸಂಬಂಧ ಪಟ್ಟವರನ್ನು ಎಚ್ಚರಿಸಿವೆ. ಕನ್ನಡಿಗರು ಈ ಪ್ರಾಧಿಕಾರವನ್ನು ಒಂದು ಗುರುತನ್ನಾಗಿ ಚಹರೆಯನ್ನಾಗಿ ಒಪ್ಪಿಕೊಂಡಂತೆ ತೋರುತ್ತದೆ.