ಕನ್ನಡ ಭಾಷೆಯನ್ನು ಒಂದು ಅಧ್ಯಯನ ವಸ್ತುವಾಗಿ ಆಯ್ದುಕೊಂಡು ಹಲವಾರು ಶತಮಾನಗಳೇ ಕಳೆದಿವೆ. ಕಳೆದ ಐವತ್ತು ವರ್ಷಗಳಲ್ಲಿ ಈ ಅಧ್ಯಯನ ಪರಂಪರೆ ಹೇಗೆ ಸಾಗಿ ಬಂದಿದೆ ಎಂಬುದನ್ನು ಈ ಅಧ್ಯಾಯದಲ್ಲಿ ಪರಿಗಣಿಸ ಲಾಗುತ್ತದೆ.

ಕಳೆದ ಶತಮಾನದ ಆರಂಭಕಾಲದಿಂದ ಕನ್ನಡ ಭಾಷೆಯ ಪ್ರಾಚೀನತೆಯನ್ನು ಅಧ್ಯಯನ ಮಾಡುವ ಆಸಕ್ತಿ ಬೇರೂರಿದೆ. ಸ್ವಾತಂತ್ರ್ಯ ಚಳುವಳಿ ಮತ್ತು ಏಕೀಕರಣ ಚಳುವಳಿಯ ಇಂಥಾ ಒತ್ತಾಸೆಗಳು ಸಹಜವಾಗಿಯೇ ಕಂಡುಬಂದಿದೆ. ಏಕೀಕರಣದ ಅನಂತರದಲ್ಲಿ ಹಾಗೆ ನೋಡಿದರೆ ಈ ಪ್ರಾಚೀನತೆಯ ಹುಡುಕಾಟಕ್ಕೆ ಹೆಚ್ಚಿನ ಒತ್ತಾಸೆ ಸಿಕ್ಕಿಲ್ಲ. ಆ ಹೊತ್ತಿಗೆ ಲಭ್ಯವಿದ್ದ ಆಕರ ಸಾಮಗ್ರಿ ಮತ್ತು ಅದನ್ನು ಬಳಸಿ ನಡೆಸಿದ ಸಂಶೋಧನೆಗಳ ಫಲಿತವನ್ನು ಒಪ್ಪಿಕೊಳ್ಳಲಾಗಿದೆ. ಆ ಸಾಂಸ್ಥಿಕ ನೆಲೆಯ ಯತ್ನಗಳಲ್ಲಿ ಇರಬಹುದಾದ ಪ್ರಶ್ನೆಗಳನ್ನು ಬಿಡಿಸುವ ಯತ್ನಕ್ಕೆ ಹೋಗದೆ ಅವು ಇರುವಂತೆಯೇ ಒಪ್ಪಿಕೊಳ್ಳಲಾಗಿದೆ ಅಥವಾ ನಿರ್ಲಕ್ಷಿಸಲಾಗಿದೆ. ಆದರೆ ಮೇಲಿಂದ ಮೇಲೆ ಆಗಾಗ ಕನ್ನಡ ಅಭಿಮಾನದ ಮಾತು ಬಂದಾಗ ಅದರ ಪ್ರಾಚೀನತೆಯನ್ನು ಕುರಿತು ವಿವರಗಳು ಮತ್ತೆ ಮುಂಚೂಣಿಗೆ ಬರುತ್ತವೆ. ತೀರ ಈಚೆಗೆ ತಮಿಳನ್ನು ಜೀವಂತ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಿದಾಗ ಕನ್ನಡದ ಪ್ರಾಚೀನತೆಯ ಬಗೆಗೆ ಮರಳಿ ಚಿಂತನೆಗಳು ಮೊದಲಾದವು. ಈ ದಿಕ್ಕಿನಲ್ಲಿ ಹೊಸ ಆಕರಗಳನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ. ಆದರೆ ಈವರೆಗೆ ಲಭ್ಯವಿದ್ದ ಆಕರ ಸಾಮಗ್ರಿಗಳ ನಡುವೆ ಇರುವ ಸಂಬಂಧವನ್ನು ಹೊಸ ದಿಕ್ಕಿನಲ್ಲಿ ನೋಡಿ ಪ್ರಾಚೀನತೆಯನ್ನು ಸ್ಥಾಪಿಸಲು ಯತ್ನಿಸಲಾಗಿದೆ.

ಭಾಷೆಯ ಪ್ರಾಚೀನತೆ ಯಾಕೆ ಮುಖ್ಯ? ಅದರ ಅಂತಸ್ಥ ಘನತೆಗೂ ಅದರ ಪ್ರಾಚೀನತೆಗೂ ಸಂಬಂಧ ಏನಾದರೂ ಇದೆಯೇ? ಆದರೆ ಈ ಪ್ರಾಚೀನತೆಯ ನಿರ್ಧಾರ ಮಾಡಲು ಹೊರಡುವವರು ಕೆಲವು ಲಿಪಿ ಪರಂಪರೆಯುಳ್ಳ ಭಾಷೆಗಳನ್ನು ಮಾತ್ರ ತಮ್ಮ ಅಧ್ಯಯನ ಗುರಿಗಳನ್ನಾಗಿ ಇರಿಸಿಕೊಂಡಿದ್ದಾರೆ. ಲಿಪಿ ಇಲ್ಲದ ಭಾಷೆಗಳಿಗೆ ಲಿಖಿತ ಚಾರಿತ್ರಿಕ ದಾಖಲೆಗಳು ಇರುವುದಿಲ್ಲ. ಹಾಗಾಗಿ ಆ ಭಾಷೆಗಳ ಮಟ್ಟಿಗೆ ಪ್ರಾಚೀನತೆಯ ನಿರ್ಧಾರ ಅಸಾಧ್ಯ. ಹೀಗೆ ಒಂದು ಭಾಷೆಗೆ ಪ್ರಾಚೀನತೆಯನ್ನು ನಿರ್ಧರಿಸಲು ಸಾಧ್ಯವಿಲ್ಲವೆಂದರೆ ಆ ಭಾಷೆಯು ಪ್ರಾಚೀನವಲ್ಲ ಎಂದು ವಾದಿಸಲು ಬರುತ್ತದೆಯೇನು? ಹೆಚ್ಚೆಂದರೆ ಆ ಬಗೆಗೆ ನಮಗೇನು ತಿಳಿದಿಲ್ಲ ಎಂದು ಮಾತ್ರ ಹೇಳಬಹುದು. ಕನ್ನಡದ ಪ್ರಾಚೀನತೆಯನ್ನು ಲಿಖಿತ ದಾಖಲೆಗಳಿಗೆ ಸೀಮಿತಗೊಳಿಸಿಕೊಳ್ಳುವುದರಿಂದ ಆಗುವ ಇಕ್ಕಟ್ಟನ್ನು ನಾವು ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ಗಮನಿಸಬೇಕು.

ಪ್ರಾಚೀನತೆಯ ಕಲ್ಪನೆಯೂ ಚರಿತ್ರೆಯ ಕಲ್ಪನೆಯೊಡನೆ ಹೆಣೆದುಕೊಂಡಿದೆ. ಕನ್ನಡ ಭಾಷೆಯ ಚರಿತ್ರೆಯನ್ನು ಬರೆಯುವವರು ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲೇ ಕನ್ನಡದ ಇಂತಹ ಚರಿತ್ರೆಗಳನ್ನು ಕಟ್ಟಲು ಪ್ರಾರಂಭಿಸಿದರು. ಬಹುಮಟ್ಟಿಗೆ ಇಲ್ಲಿ ಚರಿತ್ರೆಯೆಂಬುದು ರೇಖಾತ್ಮಕ ಚಲನೆಯಲ್ಲಿರುವ ಒಂದು ಘಟನಾವಳಿ. ಹಿಂದಿನ ಒಂದು ಭಾಷಾ ಸ್ಥಿತಿಯು ತನ್ನ ಒಡಲಿನಿಂದ ಇನ್ನೊಂದು ಭಾಷಾ ರೂಪವನ್ನು ತೆಗೆದಿಡುತ್ತದೆಂದೂ ಹೀಗೆ ಕಾಲಾನುಕ್ರಮಣಿಕೆಯಲ್ಲಿ ಒಂದು ಭಾಷೆಯ ಚರಿತ್ರೆ ನಿರ್ಮಾಣವಾಗುತ್ತದೆ ಎಂಬ ನಂಬಿಕೆ ಈ ಯತ್ನಗಳಲ್ಲಿ ಬಲವಾಗಿ ಬೇರೂರಿದೆ. ಚರಿತ್ರೆಯ ಸಾಂಪ್ರದಾಯಿಕ ದೃಷ್ಟಿಕೋನ ಕಳೆದ ಐವತ್ತು ವರ್ಷದಲ್ಲೂ ಬೇರೆ ಬೇರೆ ಪ್ರಮಾಣದಲ್ಲಿ ಇಂಥಾ ಚರಿತ್ರೆಗಳನ್ನು ನಡೆಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯ ಅತಿ ಪ್ರಾಚೀನ ರೂಪ, ಪೂರ್ವದ ರೂಪ, ಮಧ್ಯಕಾಲೀನ ರೂಪ ಮತ್ತು ಹೊಸಗನ್ನಡ ಅಥವಾ ಆಧುನಿಕ ಕನ್ನಡ ಎಂಬ ಸರಣಿಯನ್ನೇ ಮುಂದೆ ಇಡುತ್ತ ಬರಲಾಗಿದೆ. ಈ ವಾದ ಅಥವಾ ನಿರ್ಣಯ ಬಹುಶ್ರುತವಾಗಿದ್ದು ಯಾರೂ ಇದರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿಲ್ಲ. ಮುಖ್ಯವಾಗಿ ಈ ವಿವರಣೆಗಳಲ್ಲಿ ಕೊರತೆ ಇರುವ ಮುಖ್ಯ ನೆಲೆ ಎಂದರೆ ಈ ಪ್ರಭೇದಗಳ ನಡುವಣ ಗೆರೆ ಎಲ್ಲಿದೆ ಎಂಬುದು. ಒಂದು ಕಾಲಘಟ್ಟದಲ್ಲಿ ಈ ಗೆರೆಯನ್ನು ಎಳೆಯುವುದು ಸಾಧ್ಯವೇ? ಹಾಗಿಲ್ಲದಿದ್ದಲ್ಲಿ ಚರಿತ್ರೆಯ ತಾರ್ಕಿಕ ಕಲ್ಪನೆಯನ್ನೇ ಬದಲಾಯಿಸಬೇಕಲ್ಲವೆ? ಅದೂ ಅಲ್ಲದೇ ಈ ಕಾಲಾನುಕ್ರಮಣಿಯ ನಿರ್ಣಯಕ್ಕೆ ಆಯ್ದುಕೊಳ್ಳುವುದು ಲಿಖಿತ ದಾಖಲೆಗಳನ್ನು. ಈ ಲಿಖಿತ ದಾಖಲೆಗಳು ನಿರ್ದಿಷ್ಟ ಕಾಲಘಟ್ಟದಲ್ಲಿ ರೂಪಗೊಂಡಿವೆ ಎಂದು ಹೇಳಿದರೂ ಅವು ಬಳಸಿದ ಕನ್ನಡಕ್ಕೆ ಅಂತಹ ಕಾಲದ ಕಟ್ಟು ಸಾಧ್ಯವಾಗು ವುದಿಲ್ಲ. ಉದಾಹರಣೆಗೆ ಹನ್ನೆರಡು-ಹದಿಮೂರನೆಯ ಶತಮಾನಗಳಲ್ಲಿ ರಚನೆಯಾದ ದಾಖಲೆಗಳು ವಚನಗಳು. ಅದೇ ಸುಮಾರಿನಲ್ಲಿ ಮತ್ತು ಅದರ ಅನಂತರವೂ ರಚನೆಯಾದ ಕೃತಿಗಳಲ್ಲಿ ಈ ವಚನಗಳಿಗಿಂತ ಬೇರೆಯದೇ ಆದ ಮತ್ತು ಕಾಲದ ದೃಷ್ಟಿಯಿಂದ ಇನ್ನೂ ಹಿಂದಿನದ್ದು ಎಂದು ಹೇಳಬಹುದಾದ ಕನ್ನಡ ಕಾಣಿಸುತ್ತದೆ. ಅಂದರೆ ಈ ದಾಖಲೆಗಳ ಬಳಕೆಯಿಂದ ಹೇಗೆ ಭಾಷೆಯ ಕಾಲಾನುಕ್ರಮಣಿ ಚರಿತ್ರೆಯನ್ನು ಬರೆಯುವುದು ಸಾಧ್ಯ? ಎಲ್ಲಕ್ಕಿಂತ ಮುಖ್ಯವಾಗಿ ಈ ಚರಿತ್ರೆ ರಚನೆಯ ತರ್ಕ ಮುಂದಿಡುವ ಪ್ರಶ್ನೆ ಎಂದರೆ ಇದು ಹೀಗಿದೆ ಎಂಬ ವಿವರಣೆ ಮಾತ್ರ, ಆದರೆ ಇದು ಏಕೆ ಹೀಗಿದೆ ಎಂಬ ಪ್ರಶ್ನೆ ನಮ್ಮ ಭಾಷೆಯ ಚರಿತ್ರೆಗೆ ಮುಖ್ಯ ವಾಗಿಯೇ ಇಲ್ಲ. ಉದಾಹರಣೆಗೆ ನಡುಗನ್ನಡದಲ್ಲಿ ಸಂಸ್ಕೃತ ಪದಗಳ ಪದಮಧ್ಯದ ವಿಜಾತೀಯ ದ್ವಿತಾಕ್ಷರಗಳ ನಡುವೆ ಉಕಾರವನ್ನು ಸೇರಿಸಿದರು ಎಂದು ಹೇಳಿದರೆ ಅದು ವಿವರಣೆ. ಹಾಗೆಯೇ ಹಳೆಗನ್ನಡದ ಸಬಿಂದುಕ ಪದಗಳಲ್ಲಿ ಬಿಂದು ಲೋಪವಾಯಿತು ಎಂದು ಹೇಳಿದರೆ ಅದು ವಿವರಣೆ. ಆದರೆ ಈ ಬದಲಾವಣೆಗಳು ಏಕೆ ಉಂಟಾದವು ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುವುದಿಲ್ಲ. ಅಂತಹ ಪ್ರಶ್ನೆಯನ್ನು ಹಾಕಿಕೊಂಡರೂ ಅದಕ್ಕೆ ಭಾಷೆಯ ನೆಲೆಯ ಉತ್ತರವನ್ನು ನೀಡುವ ಬದಲು ಭಾಷೇತರವಾದ ಉತ್ತರವನ್ನು ನೀಡಿ ಸುಮ್ಮನೆ ಇರುತ್ತಾರೆ. ಉದಾಹರಣೆಗೆ ಸಬಿಂದುಕಗಳು ಅಬಿಂದುಕಗಳಾಗಿದ್ದು ಉಚ್ಚಾರಣೆಯ ಸೌಲಭ್ಯಕ್ಕಾಗಿ ಎನ್ನುವ ವಿವರಣೆ ಭಾಷಿಕವಲ್ಲ. ಅದು ಭಾಷೇತರವಾದುದ್ದು. ಅಲ್ಲದೇ ಈ ಸೌಲಭ್ಯ ಬೇಕೆಂಬ ಬಯಕೆ ಒಂದು ಕಾಲದ ಭಾಷಿಕರಿಗೆ ಮಾತ್ರ ಏಕೆ ಬರುತ್ತದೆ? ಈ ಪ್ರಶ್ನೆ ಕೂಡ ಮುಖ್ಯ. ನಮ್ಮ ಚರಿತ್ರೆಕಾರರು ಈ ಪ್ರಶ್ನೆಯನ್ನು ಹೊರಗಿಟ್ಟಿದ್ದಾರೆ. ಅಂದರೆ ಕನ್ನಡ ಭಾಷೆಯ ಚರಿತ್ರೆಯನ್ನು ರಚಿಸುವಲ್ಲಿ  ನಾವು ಹೊಸ ಪ್ರಶ್ನೆಗಳನ್ನು ಎತ್ತಿಕೊಂಡಿಲ್ಲ. ಇದಕ್ಕೆ ಒಂದು ಪ್ರಮುಖ ವಿನಾಯಿತಿ ಎಂದರೆ ಡಾ. ಡಿ.ಎನ್. ಶಂಕರ ಭಟ್ ಅವರ ಕನ್ನಡ ಭಾಷೆಯ ಕಲ್ಪಿತ ಚರಿತೆ.

ಡಾ. ಭಟ್ ಅವರು ಮೂವತ್ತು ವರ್ಷಗಳ ಅವಧಿಯಲ್ಲಿ ಈ ನಿಟ್ಟಿನ ತಮ್ಮ ಚಿಂತನೆಯನ್ನು ವಿಸ್ತರಿಸಿದ್ದಾರೆ. ಭಾಷೆಯ ಚರಿತ್ರೆಯನ್ನು ರಚಿಸುವಾಗ ಲಿಖಿತ ದಾಖಲೆಗಳನ್ನು ಮಾತ್ರ ಅವಲಂಬಿಸದೆ ಇಂದಿನ ಆಡುರೂಪಗಳನ್ನು ಕೂಡ ಪರಿಗಣಿಸಬೇಕೆಂದು ವಾದಿಸುತ್ತಾರೆ. ನಾವು ಪ್ರಾದೇಶಿಕ ಇಲ್ಲವೇ ಸಾಮಾಜಿಕ ಪ್ರಭೇದಗಳು ಎಂದು ಗುರುತಿಸುತ್ತಿರುವ ಕನ್ನಡದ ವಿವಿಧ ಮಾದರಿಗಳು ಈಗ ಸಮಕಾಲೀನವಾಗಿಒಂದೇ ಕಾಲದಲ್ಲಿ ಬಳಕೆಯಲ್ಲಿರುವಂತೆ ಕಂಡರೂ ಅವು ಬೇರೆ ಬೇರೆ ಕಾಲಘಟ್ಟದಲ್ಲಿ ರೂಪುಗೊಂಡಿರುತ್ತವೆ. ತಾವು ರೂಪುಗೊಂಡ ಕಾಲದ ಕನ್ನಡದ ಲಕ್ಷಣಗಳನ್ನು ಆಯಾ ಪ್ರಭೇದಗಳು ತಮ್ಮಲ್ಲಿ ಅಡಗಿಸಿಕೊಂಡಿರುತ್ತವೆ. ಆ ಪ್ರಭೇದಗಳನ್ನು ಸಮಕಾಲೀನ ಮಾದರಿ ಎಂದಷ್ಟೇ ವಿಶ್ಲೇಷಿಸದೆ ಅವುಗಳಲ್ಲಿ ಅಡಗಿರುವ ಚಾರಿತ್ರಿಕ ಪದರಗಳನ್ನು ಹೊರತೆಗೆಯಬೇಕು. ಆಗ ಮಾತ್ರ ಭಾಷೆ ಬೆಳೆದುಬಂದ ರೀತಿ ನಮಗೆ ಗೊತ್ತಾಗಲು ಸಾಧ್ಯ. ಭಾಷೆಯ ಚರಿತ್ರೆಯನ್ನು ಆಡುಮಾತಿನ ಬಗೆಗಳನ್ನು ಆಧರಿಸಿಯೂ ನಿರ್ಮಿಸಬಹುದು. ಮತ್ತು ಹಾಗೆ ಮಾಡುವ ಮೂಲಕವೇ ಆ ಚರಿತ್ರೆಗೆ ಸಮಗ್ರತೆ ಸಾಧ್ಯ. ಈ ವಾದವನ್ನು ಡಾ. ಭಟ್ ಕನ್ನಡದ ನಿದರ್ಶನಗಳ ಮೂಲಕ ಸ್ಪಷ್ಟಪಡಿಸುತ್ತಾರೆ.

ಇದಲ್ಲದೆ ಈ ವ್ಯಾಖ್ಯೆಯ ಮೂಲಕ ಅವರು ಈ ಸಮಸ್ಯೆಗೆ ಬೇರೊಂದು ನೆಲೆಯನ್ನು ನೀಡಿದ್ದಾರೆ. ಈವರೆಗೆ ಕನ್ನಡ ಭಾಷೆಯೂ ಮೊದಲು ಉತ್ತರ ಮತ್ತು ದಕ್ಷಿಣ ಪ್ರದೇಶಗಳ ಪ್ರಭೇದವಾಗಿ ವಿಭಜನೆಗೊಂಡಿತ್ತು ಎಂದು ನಿರೂಪಿಸುತ್ತ್ತ ಬಂದಿದ್ದೇವೆ. ಕವಿರಾಜ ಮಾರ್ಗಕಾರನ ದಕ್ಷಿಣೋತ್ತರ ಮಾರ್ಗಗಳ ಚಿಂತನೆಯನ್ನು ಒಪ್ಪಿಕೊಂಡಿದ್ದೇವೆ. ಈಗಲೂ ಈ ವಿಭಜನೆ ಧ್ವನಿರಚನೆ ಮತ್ತು ಪದಕೋಶಗಳ ನೆಲೆಯಲ್ಲಿ ತೋರಿಕೆಗೆ ಸರಿ ಎಂದು ಅನಿಸುತ್ತದೆ. ನಡುವೆ ಹರಿಯುವ ತುಂಗಭದ್ರಾ ನದಿಯು ಗಡಿಗೆರೆಯಾಗಿ ಕನ್ನಡದ ಎರಡು ಪ್ರಭೇದಗಳು ಮೈದೆಳೆದಿರುವುದನ್ನು ಒಪ್ಪಿದ್ದೇವೆ. ಆದರೆ ಈ ವಿಭಜನೆ ಆಗುವ ಮೊದಲೇ ಕನ್ನಡ ಪೂರ್ವ ಪಶ್ಚಿಮ ಪ್ರಭೇದವಾಗಿ ವಿಭಜನೆಗೊಂಡಿದೆ ಎಂಬ ಸಾಧ್ಯತೆಯನ್ನು ಡಾ. ಭಟ್ ಮುಂದಿಡುತ್ತಾರೆ. ಕನ್ನಡದ ಅತೀ ಪ್ರಾಚೀನ ಧ್ವನಿರೂಪಗಳು, ಪದರೂಪಗಳು ಕರಾವಳಿಯ ಇಂದಿನ ಕೆಲವು ಪ್ರಭೇದಗಳಲ್ಲಿ ಉಳಿದಿರುವುದನ್ನು ಅವರು ಗುರುತಿಸುತ್ತಾರೆ. ಈ ಮೂಲಕ ಕನ್ನಡ ಭಾಷಾ ಚರಿತ್ರೆಯ ಇನ್ನೊಂದು ಘಟ್ಟವನ್ನು ಅವರು ನಿರೂಪಿಸಿದ್ದಾರೆ.

ಭಟ್ ಅವರ ಈ ಚರಿತ್ರೆ ಒಂದು ಕಲ್ಪಿತ ಚರಿತ್ರೆ. ಏಕೆಂದರೆ ಭಾಷಾ ಚರಿತ್ರೆಯನ್ನು ನಾವು ಪುನಾರಚಿಸುತ್ತೇವೆ. ಹೀಗೆ ಆಗಿದೆ ಎಂದು ಹೇಳಲು ನಮ್ಮಲ್ಲಿ ಆಧಾರಗಳಿರುವುದಿಲ್ಲ. ಹೀಗೆ ಆಗಿರಲು ಸಾಧ್ಯ ಎಂದು ನಾವು ಊಹಿಸುತ್ತೇವೆ. ಆದ್ದರಿಂದ ಇದು ರಚಿತ ಮತ್ತು ಕಲ್ಪಿತ. ಡಾ. ಭಟ್ ಅವರು ಕನ್ನಡ ಭಾಷಾ ಚರಿತ್ರೆಯ ಅಧ್ಯಯನಕ್ಕೆ ಈ ದೃಷ್ಟಿಯಿಂದ ತಾತ್ವಿಕವಾಗಿ ಮತ್ತು ಪ್ರಾಯೋಗಿಕವಾಗಿ ಹೊಸ ರೂಪವನ್ನು ನೀಡಿದ್ದಾರೆ.

ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಭಾಷೆಯನ್ನು ವಿವರಿಸುವ ಹಲವು ಪ್ರಯತ್ನಗಳು ನಡೆದಿವೆ.

೧೯೫೭ರಲ್ಲಿ ಅಮೇರಿಕಾದ ಲಿಂಗ್ವಿಸ್ಟಿಕ್ ಸೊಸೈಟಿ ಆಫ್ ಅಮೆರಿಕ ಇವರು ನಡೆಸಿದ ಭಾಷಾಶಾಸ್ತ್ರದ ಬೇಸಿಗೆ ಶಾಲೆಯಲ್ಲಿ ಭಾಗವಹಿಸಿದ ಕನ್ನಡದ ಅಂದಿನ ಹಲವು ವಿದ್ವಾಂಸರು ಮತ್ತು ತರುಣರು ಕನ್ನಡವನ್ನು ವಿಶ್ಲೇಷಿಸುವ ಮಾರ್ಗಗಳನ್ನು ಕಂಡುಕೊಂಡರು. ಆಗ ಪ್ರಚಲಿತವಿದ್ದ ಭಾಷಾಶಾಸ್ತ್ರದ ಸಿದ್ಧಾಂತಗಳನ್ನು ಅನ್ವಯಿ ಸುವ ಪ್ರಯತ್ನಗಳನ್ನು ಮಾಡಿದರು. ಮುಖ್ಯವಾಗಿ ವರ್ಣನಾತ್ಮಕ ಭಾಷಾಶಾಸ್ತ್ರ ಚಾರಿತ್ರಿಕ ಭಾಷಾಶಾಸ್ತ್ರ ಮತ್ತು ತೌಲನಿಕ ಭಾಷಾಶಾಸ್ತ್ರದಲ್ಲಿ ಆಸಕ್ತಿಗಳು ಬೆಳೆದವು. ಇದರ ಪರಿಣಾಮವಾಗಿ ಹಲವು ಅಧ್ಯಯನಗಳು ನಡೆದಿವೆ. ವರ್ಣನಾತ್ಮಕ ಭಾಷಾ ಶಾಸ್ತ್ರದ ನೆಲೆಯಲ್ಲಿ ಕನ್ನಡದ ಹಲವು ಪ್ರಭೇದಗಳನ್ನು ವಿಶ್ಲೇಷಿಸುವ ಪ್ರಯತ್ನಗಳು ಮುಂದುವರೆದವು. ಮುಖ್ಯವಾಗಿ ಸಮಕಾಲೀನ ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಭೇದಗಳನ್ನು ವಿವರಿಸಲು ಕೆಲವರು ಆಸಕ್ತರಾದರೆ ಮತ್ತೆ ಕೆಲವರು ಕನ್ನಡದ ವಿವಿಧ ಚಾರಿತ್ರಿಕ ಪ್ರಭೇದಗಳನ್ನು ವಿವರಿಸುವ ಪ್ರಯತ್ನಗಳನ್ನು ಮಾಡಿದರು. ಚಾರಿತ್ರಿಕ ಪ್ರಭೇದಗಳನ್ನು ವಿಶ್ಲೇಷಿಸಲು ಸಾಹಿತ್ಯ ಕೃತಿಗಳನ್ನು ಮತ್ತು ಶಾಸನಗಳನ್ನು ಭಾಷಿಕ ಆಕರಗಳೆಂದು ಬಳಸಿಕೊಂಡಿದ್ದಾರೆ. ಈ ಎಲ್ಲ ಪ್ರಯತ್ನಗಳಿಂದ ಕನ್ನಡವನ್ನು ಆಧುನಿಕ ಭಾಷಾಶಾಸ್ತ್ರದ ಪರಿಕರಗಳ ಅನ್ವಯ ನೋಡುವ ಪ್ರಯತ್ನಗಳು ನೆಲೆಗೊಂಡವು.

ಈ ಎಲ್ಲ ಅಧ್ಯಯನಗಳು ಸ್ವತಂತ್ರವಾಗಿ ಪರಿಪೂರ್ಣ ಎನ್ನಿಸಲು ಯತ್ನಿಸು ತ್ತಿದ್ದವು. ಅವುಗಳ ನಡುವೆ ಒಂದು ಸಂವಾದವನ್ನು ಬೆಳೆಸುವ ಆಸಕ್ತಿಯನ್ನು ಅಧ್ಯಯನಕಾರರು ತೋರಲಿಲ್ಲ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಇಂತಹ ಅಧ್ಯಯನಗಳನ್ನು ಬಹುಮಟ್ಟಿಗೆ ಮಂಡಿಸಿದ್ದು ಇಂಗ್ಲಿಶ್ ಭಾಷೆಯಲ್ಲಿ. ಅವು ಅಂತಾರಾಷ್ಟ್ರೀಯ ವ್ಯಾಪ್ತಿಯ ಆಸಕ್ತಿಯನ್ನು ಉಳಿಸಿಕೊಂಡರೂ ಕನ್ನಡ ಭಾಷಾಧ್ಯಯನ ಗಳಲ್ಲಿ ಆಸಕ್ತರಾದವರ ವಲಯವನ್ನು ಮುಟ್ಟಲಿಲ್ಲ ಅಥವಾ ಅವರು ತಮ್ಮ ಆಸಕ್ತಿಯ ವಲಯದೊಳಗೆ ಇಂತಹ ಅಧ್ಯಯನಗಳನ್ನು ಸೇರಿಸಿಕೊಳ್ಳಲಿಲ್ಲ. ಈ ಕಾರಣದಿಂದ ಮೇಲೆ ಹೇಳಿದ ಅಧ್ಯಯನಗಳ ಶೈಕ್ಷಣಿಕ ಪ್ರಭಾವ ತುಂಬಾ ಕಡಿಮೆ ಎಂದೇ ಹೇಳಬೇಕು. ಇದರಿಂದಾಗಿ ಭಾಷೆಯ ಅಧ್ಯಯನದ ಹಳೆಯ ಪರಂಪರೆಯೊಂದು ಯಾವ ಅಡೆತಡೆಯೂ ಇಲ್ಲದೆ ಮುಂದುವರೆಯುತ್ತ್ತ ಹೋಯಿತು. ಡಾ.ಎಚ್.ಎಸ್. ಬಿಳಿಗಿರಿಯವರು ಆಧುನಿಕ ಭಾಷಾಶಾಸ್ತ್ರದ ತರಬೇತನ್ನು ಪಡೆದವರಾಗಿದ್ದು, ಈ ಮೇಲೆ ಹೇಳಿದ ಸಂವಾದದ ಕೊರತೆಯನ್ನು ನಿವಾರಿಸಲು ಏಳನೆಯ ದಶಕದ ಸುಮಾರಿನಲ್ಲಿ ಕೇಶಿರಾಜನ ಶಬ್ದಮಣಿದರ್ಪಣವನ್ನು ಹೊಸ ಶಾಸ್ತ್ರೀಯ ನೆಲೆಗಟ್ಟಿನಲ್ಲಿ ವಿಶ್ಲೇಷಿಸತೊಡಗಿದರು. ಅವರ ಆಲೋಕ ಈ ನಿಟ್ಟಿನಲ್ಲಿ ಹೆಚ್ಚು ಪ್ರಭಾವಶಾಲಿಯಾದ ಗ್ರಂಥವಾಯಿತು. ಆದರೆ ಕೇಶಿರಾಜನ ಶಬ್ದಮಣಿದರ್ಪಣದ ಎಲ್ಲ ಪ್ರಕರಣಗಳನ್ನು ಹೀಗೆ ವಿಶ್ಲೇಷಿಸುವ ಅವರ ಯತ್ನ ಪೂರ್ಣಗೊಳ್ಳಲಿಲ್ಲ. ಬೇರೆ ಯಾರೂ ಆ ಮಾರ್ಗವನ್ನು ತುಳಿದು ಮುಂದುವರೆಯಲೂ ಇಲ್ಲ. ಡಾ. ಬಿಳಿಗಿರಿಯವರ ವಿಧಾನ ಕೇವಲ ಟೀಕಾಕಾರನ ನೆಲೆಯಲ್ಲಿ ಇಲ್ಲ. ಕೇಶಿರಾಜನ ವಿಚಾರಗಳು ಆಧುನಿಕ ಚಿಂತನೆಗಳ ಹಿನ್ನೆಲೆಯಲ್ಲಿ ಎಷ್ಟು ಮಾನ್ಯ ಅಥವಾ ಅಮಾನ್ಯ, ಅವನು ಎತ್ತಿಕೊಂಡ ಸಮಸ್ಯೆಗಳನ್ನು ಇಂದಿನ ಪರಿಕರಗಳಿಂದ ನೋಡಿದಾಗ ಯಾವ ಫಲಿತಾಂಶ ದೊರೆಯುತ್ತದೆ ಎನ್ನುವುದನ್ನು ವಿವರಿಸಲು ಯತ್ನಿಸಿದ್ದರು.

ಆಧುನಿಕ ಭಾಷಾಶಾಸ್ತ್ರದ ವರ್ಣನಾತ್ಮಕ ನೆಲೆಗಳು ಕನ್ನಡದ ಪ್ರಭೇದಗಳನ್ನು ವಿವರಿಸಿದ್ದರೂ ಆ ಶಾಸ್ತ್ರದ ಒಳಗೆ ಇದ್ದ ಕೆಲವು ಮಿತಿಗಳಿಂದಾಗಿ ಹೆಚ್ಚು ಪರಿಣಾಮ ಬೀರುವುದು ಸಾಧ್ಯವಾಗಲಿಲ್ಲ. ಮುಖ್ಯವಾಗಿ ಭಾಷೆಯನ್ನು, ಅದರ ಅಂಶಗಳನ್ನು ವಿವರಿಸುವಾಗ ಇದು ಹೀಗಿದೆ ಎಂದು ಹೇಳುವುದು ಮುಖ್ಯವಾಯಿತೇ ಹೊರತು ಇದುಏಕೆ ಹೀಗಿದೆ ಎಂಬುದನ್ನು ವಿವರಿಸುವ ಆಸಕ್ತಿಯನ್ನು ತೋರಲಿಲ್ಲ. ಉದಾಹರಣೆಗೆ ಉತ್ತರ ಕರ್ನಾಟಕದ ಹಲವು ಉಪಭಾಷೆಗಳಲ್ಲಿ ನಾಮಪದಗಳು ಪ್ರಮಾಣ ಕನ್ನಡದ ಎಕಾರಾಂತದ ಬದಲು ಇಕಾರಾಂತವಾಗುತ್ತವೆ ಎಂಬುದು ಒಂದು ವಿವರಣೆ. ಅಂದರೆ ಪ್ರಮಾಣ ಕನ್ನಡದ ಮನೆ, ತಲೆ, ಬಲೆ ಮುಂತಾದ ಪದಗಳು ಮನಿ, ತಲಿ, ಬಲಿ, ಎಂದಾಗುತ್ತವೆ. ಇದು ವಸ್ತುಸ್ಥಿತಿಯ ವಿವರಣೆ. ಆದರೆ ಏಕೆ ಹೀಗಾಗುತ್ತದೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಲಿಲ್ಲ. ಉತ್ತರಿಸಲೂ ಹೋಗಲಿಲ್ಲ. ಪದಾಂತ್ಯದ ಎಕಾರ ಇಕಾರವಾಗುವುದು ನಾಮಪದಗಳಿಗೆ ಮಾತ್ರ ಈ ಪ್ರದೇಶದಲ್ಲಿ ಸೀಮಿತವಾಗಿದೆ. ಆದರೆ ದಕ್ಷಿಣದಲ್ಲಿ ಕ್ರಿಯಾಪದಗಳು ಈ ಬದಲಾವಣೆ ತೋರುತ್ತವೆ. ಉದಾಹರಣೆಗೆ ಬರೆ>ಬರಿ, ತೆಗೆ>ತೆಗಿ, ಮರೆ>ಮರಿ. ಈ ವ್ಯತ್ಯಾಸ ಉಂಟಾಗಲು ಕಾರಣಗಳೇನು? ವರ್ಣನಾತ್ಮಕ ಭಾಷಾ ಶಾಸ್ತ್ರದ ಜೊತೆಗೆ ಚಾರಿತ್ರಿಕ ಭಾಷಾಶಾಸ್ತ್ರದ ಪರಿಕರಗಳನ್ನು ಬೆರೆಸುವ ಪ್ರಯತ್ನವನ್ನು ಮಾಡಿದ್ದರೆ ಇನ್ನಷ್ಟು ಪ್ರಮುಖವಾದ ವಿಶ್ಲೇಷಣೆಗಳು ದೊರಕಬಹುದಿತ್ತು.

ಕನ್ನಡವನ್ನು ಕುರಿತು ಅಧ್ಯಯನಗಳು ಮುಖ್ಯವಾಗಿ ಎರಡು ದಿಕ್ಕಿನಲ್ಲಿ ಸಾಗಿವೆ. ಒಂದು: ಕನ್ನಡವನ್ನೇ ಕೇಂದ್ರದಲ್ಲಿ ಇರಿಸಿಕೊಂಡು ನಡೆಸಿದ ಅಧ್ಯಯನಗಳು. ಎರಡು: ಕನ್ನಡವನ್ನು ನಿದರ್ಶನವಾಗಿ ತೆಗೆದುಕೊಂಡು ಆ ಮೂಲಕ ಭಾಷಾ ಅಧ್ಯಯನದ ತಾತ್ವಿಕನೆಲೆಗಳನ್ನು ವಿಸ್ತರಿಸುವ ಪ್ರಯತ್ನಗಳನ್ನು ಮಾಡುವುದು. ಹಾಗೆ ನೋಡಿದರೆ ಭಾರತದ ಹಲವು ಭಾಷೆಗಳಲ್ಲಿ ಭಾಷಾಧ್ಯಯನ ಹೀಗೆ ದ್ವಿಮುಖವಾಗಿ ನಡೆದಿರುವುದು ಗೊತ್ತಾಗುತ್ತದೆ. ಎರಡನೆಯ ನೆಲೆಯ ಅಧ್ಯಯನಗಳು ಸಹಜವಾಗಿಯೇ ಅಂತಾರಾಷ್ಟ್ರೀಯಚೌಕಟ್ಟನ್ನು ಪಡೆದಿವೆ ಮತ್ತು ಜಾಗತಿಕ ನೆಲೆಯ ಹಲವು ವಿದ್ವಾಂಸರು ಇಂತಹ ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಥಾ ಅಧ್ಯಯನಗಳು ಕನ್ನಡವನ್ನು ಮಾಹಿತಿಯನ್ನಾಗಿ ಬಳಸಿಕೊಂಡಿದೆ ಮತ್ತು ಬಹುಮಟ್ಟಿಗೆ ಇಂಗ್ಲಿಶ್ ಭಾಷೆಯಲ್ಲಿವೆ. ಇಂತಹ ಎಷ್ಟೋ ಅಧ್ಯಯನಗಳು ಕನ್ನಡ ವಿದ್ವತ್ ಜಗತ್ತಿಗೆ ಅಪರಿಚಿತವಾಗಿಯೇ ಉಳಿದುಬಿಟ್ಟಿವೆ. ಉದಾಹರಣೆಗೆ ಉಲ್ ರೀಚ್ ಅವರು ನಡೆಸಿದ ಹವ್ಯಕ ಭಾಷೆಯ ಅಧ್ಯಯನಗಳು. ಸೂಸನ್ ಬಿನ್ ನಡೆಸಿದ ಕನ್ನಡ ಸಂಬಂಧಸೂಚಕಗಳ ಅಧ್ಯಯನಗಳು ಇಂತಹವು. ಮತ್ತೆ ಕೆಲವೊಮ್ಮೆ ಕನ್ನಡವನ್ನು ಮಾಹಿತಿಯ ನೆಲೆಯಲ್ಲಿ ಬಳಸಿಕೊಂಡ ಕೆಲವರು ತೌಲನಿಕ ಭಾಷಾಶಾಸ್ತ್ರದ ನಿಟ್ಟಿನಲ್ಲಿ ಅಧ್ಯಯನಗಳನ್ನು ಮುಂದುವರೆಸಿದ್ದಾರೆ. ಇಂತಹವು ಕೂಡ ಶೈಕ್ಷಣಿಕವಾಗಿ ಕನ್ನಡ ಅಧ್ಯಯನ ವಲಯದಿಂದ ದೂರವುಳಿದಿವೆ. ಉದಾಹರಣೆಗೆ ದ್ರಾವಿಡ ಭಾಷೆಗಳನ್ನು ಅಧ್ಯಯನ ಮಾಡುತ್ತ ಬಂದ ಎಂ.ಬಿ. ಎಮಿನೋ ಅವರು ಟಿ.ಬರೋ ಅವರೊಡನೆ ರಚಿಸಿದ ದ್ರವಿಡಿಯನ್ ಎಟಿಮೆನೋಲಾಜಿಕಲ್ ಡಿಕ್ಷನರಿ ಎಂಬ ಗ್ರಂಥವನ್ನು ಉಲ್ಲೇಖಿಸಬಹುದು. ಹಾಗೆಯೇ ಅವರು ಈ ಸರಿಸುಮಾರಿನಲ್ಲಿಯೇ ಬರೆದ ‘ಇಂಡಿಯಾ ಆಸ್ ಎ ಲಿಂಗ್ವಿಸ್ಟಿಕ್ ಏರಿಯಾ’ಎಂಬ ಲೇಖನವನ್ನು ಉಲ್ಲೇಖಿಸ ಬಹುದು. ಇವು ಯಾವುವೂ ಹೆಚ್ಚಿನ ಅಧ್ಯಯನಗಳಿಗೆ ಪ್ರೇರೇಪಣೆಯನ್ನು ನೀಡಲಿಲ್ಲ. ಮೊದಲು ಹೇಳಿದ ಡಿಕ್ಷನರಿಗೆ ಎಮಿನೋ ಮತ್ತು ಬರೋ ಅವರು ಕನ್ನಡದ ಮಾಹಿತಿಗಾಗಿ ಆ ಹೊತ್ತಿಗೆ ಮುಖ್ಯವಿದ್ದ ಕಿಟಲ್ ನಿಘಂಟನ್ನು ಅದು ಇಂಗ್ಲಿಶ್ ಅರ್ಥಗಳನ್ನು ನೀಡುತ್ತದೆ ಎಂಬ ಕಾರಣಕ್ಕಾಗಿ ಬಳಸಿದರು. ಆದರೆ ಕನ್ನಡದ ಮಾಹಿತಿ ಮತ್ತಷ್ಟು ಪರಿಷ್ಕೃತ ರೂಪದಲ್ಲಿ ಎಮಿನೋ ಅವರು ಅಧ್ಯಯನ ಮಾಡುವ ವೇಳೆಗೆ ಲಭ್ಯವಿತ್ತು. ಅದು ಕನ್ನಡ ಭಾಷೆಯಲ್ಲಿ ಇದ್ದುದರಿಂದ ಅವರು ಅದನ್ನು ಬಳಸಿಕೊಳ್ಳಲಾಗಲಿಲ್ಲ. ಕನ್ನಡ ವಿದ್ವಾಂಸರು ಈ ಮಾಹಿತಿಯನ್ನು ಬಳಸಿ ಬರೋ, ಎಮಿನೋ ಅವರ ಕೃತಿಯನ್ನು ಪರಿಷ್ಕರಿಸುವಕೆಲಸಕ್ಕೆ ಕೈ ಹಾಕಲಿಲ್ಲ. ಇದೇ ಮಾತನ್ನು ಮೇಲೆ ಉಲ್ಲೇಖಿಸಿದ ಇನ್ನೊಂದು ಲೇಖನಕ್ಕೂ ಅನ್ವಯಿಸಬಹುದು. ಭಾಷಾ ಸಂಯೋಜನೆ ಮೂಲಕ ಭಾರತದ ಬೇರೆ ಬೇರೆ ಭಾಷಾವಂಶದ ಭಾಷೆಗಳು ಹೇಗೆ ಕೆಲವು ಸಾಮಾನ್ಯ ಲಕ್ಷಣಗಳನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ಆ ಲೇಖನ ವಿವರಿಸುತ್ತದೆ. ಆದರೆ ಇದು ಕೂಡ ತಾನು ಬೀರಬಹುದಾದ ಶೈಕ್ಷಣಿಕ ಪರಿಣಾಮಗಳನ್ನು ಬೀರಲಿಲ್ಲ. ಇದೇ ಸರಣಿಗೆ ೧೯೬೮ರ ಜಾನ್ ಗುಂಪರ್ಜ್ ಅವರ ಕುಪ್‌ವಾರ್ ಅಧ್ಯಯನವನ್ನು ಸೇರಿಸಬಹುದು. ಇದು ಕರ್ನಾಟಕದ ಗಡಿ ಪ್ರದೇಶದ ಒಂದು ಊರು ಕುಪವಾರ್‌ನಲ್ಲಿದೆ(ಮಹಾರಾಷ್ಟ್ರದ ಸಾಂಗ್ಲಿ ತಾಲ್ಲೂಕಿನಲ್ಲಿ). ಕನ್ನಡ, ಮರಾಠಿ ಮತ್ತು ಉರ್ದು ಭಾಷೆಗಳು ಒಟ್ಟಾಗಿ ಇರುವುದರಿಂದ ಆ ಭಾಷೆಗಳ ಮೇಲೆ ಏನೆಲ್ಲ ರಾಚನಿಕ ಪರಿಣಾಮಗಳಾಗಿವೆ ಎನ್ನುವುದನ್ನು ವಿಶ್ಲೇಷಿಸುತ್ತದೆ. ಜಾಗತಿಕವಾಗಿ ಈವರೆಗೆ ಇನ್ನೂರಕ್ಕೂ ಹೆಚ್ಚು ಬಾರಿ ಉಲ್ಲೇಖಿತವಾಗಿರುವ ಈ ಅಧ್ಯಯನ ಕನ್ನಡದ ಸಂದರ್ಭದಲ್ಲಿ ಒಮ್ಮೆಯೂ ತಲೆ ಹಾಕಿಲ್ಲ. ಇದೆಲ್ಲ ವಿವರಣೆಯ ಉದ್ದೇಶವಿಷ್ಟೇ. ಕನ್ನಡವನ್ನು ಆಕರವಾಗಿ ಬಳಸುವ ಅಂತಾರಾಷ್ಟ್ರೀಯ ನೆಲೆಯ ಅಧ್ಯಯನಗಳು ಕರ್ನಾಟಕದಲ್ಲಿ ಹೆಚ್ಚು ಚರ್ಚಿತವೂ ಆಗುವುದಿಲ್ಲ. ಅವುಗಳ ವಿಶ್ಲೇಷಣೆಯನ್ನು ಮರುರೂಪಿಸುವ ಪ್ರಯತ್ನಗಳನ್ನು ಯಾರೂ ಮಾಡುವುದಿಲ್ಲ. ಇದರಿಂದ ಆ ಅಧ್ಯಯನಗಳಿಗೂ ಮತ್ತು ಕನ್ನಡ ವಿದ್ವತ್ತಿಗೂ ಒಟ್ಟಾಗಿಯೇ ನಷ್ಟವಾಗಿತ್ತು. ಈಚಿನ ವರ್ಷಗಳಲ್ಲಿ ತಾತ್ವಿಕ ನೆಲೆಯ ಅಧ್ಯಯನಗಳು ಹೆಚ್ಚು ವ್ಯಾಪಕವಾಗುತ್ತಿವೆ. ಜಾಗತಿಕವಾಗಿ ಭಾಷೆಯ ರಚನೆಯನ್ನು ಕುರಿತು ಸಿದ್ಧಾಂತಗಳು ಮಂಡನೆಯಾಗುತ್ತಿವೆ. ಈ ಸಿದ್ಧಾಂತಗಳನ್ನು ಮುಖ್ಯವಾಗಿ ಇಂಗ್ಲಿಶ್ ಮತ್ತು ಕೆಲವು ಯುರೋಪಿಯನ್ ಭಾಷೆಗಳ ನಿದರ್ಶನಗಳಿಂದ ನಿರೂಪಿಸಲಾಗುತ್ತಿದೆ. ಈ ವಿಧಾನವನ್ನೇ ಪ್ರಶ್ನಿಸುವ ಚಿಂತನೆಗಳು ಇವೆ, ಅಂತಹವರು ಹೆಚ್ಚು ಪರಿಚಿತವಲ್ಲದ ಭಾಷೆಗಳ ಉದಾಹರಣೆ ಗಳಿಂದ ಆ ಸಿದ್ಧಾಂತಗಳನ್ನು ಸಮರ್ಥಿಸುವ ಇಲ್ಲವೇ ನಿರಾಕರಿಸುವ ವಿಧಾನವನ್ನು ಅನುಸರಿಸುತ್ತಿದ್ದಾರೆ. ಕನ್ನಡವನ್ನು ಹೀಗೆ ನಿದರ್ಶನಕ್ಕಾಗಿ ಆಯ್ಕೆ ಮಾಡಿಕೊಂಡ ಉದಾಹರಣೆಗಳಿವೆ. ಇಂತಹ ಅಧ್ಯಯನಗಳ ನೇರ ಉದ್ದೇಶ ಕನ್ನಡವನ್ನು ವಿಶ್ಲೇಷಿಸುವುದಾಗಿರುವುದಿಲ್ಲ. ಆದರೂ ಕನ್ನಡ ಭಾಷೆಯ ಅಧ್ಯಯನಕಾರರಿಗೆ ಇಂತಹ ಪ್ರಯತ್ನಗಳ ಪರಿಚಯವಿದ್ದರೆ ಅವರ ಭಾಷಾ ಅಧ್ಯಯನಗಳು ಇನ್ನಷ್ಟು ನಿಖರವಾಗುತ್ತವೆ. ಈ ದಿಕ್ಕಿನಲ್ಲಿ ಯಾವ ಪ್ರಯತ್ನಗಳು ಆಗಿಲ್ಲ ಎಂಬುದೇ ಖೇದನೀಯ ಸಂಗತಿ.

ಇನ್ನು ಕನ್ನಡವನ್ನೇ ಕೇಂದ್ರವನ್ನಾಗಿರಿಸಿಕೊಂಡ ಅಧ್ಯಯನಗಳಲ್ಲೂ ಆಧುನಿಕ ತಾತ್ವಿಕತೆಯನ್ನು ಆಧರಿಸಿದ ಅಧ್ಯಯನಗಳು ಮತ್ತು ಪಾರಂಪರಿಕ ನೆಲೆಯ ಅಧ್ಯಯನಗಳು ಎಂದು ಎರಡು ಗುಂಪುಗಳನ್ನು ಮಾಡಬಹುದು. ಪಾರಂಪರಿಕ ನೆಲೆಯ ಅಧ್ಯಯನಗಳು ಹೊಸ ಪ್ರಶ್ನೆಗಳನ್ನು ಎದುರಿಸುವುದಿಲ್ಲ. ಹೊಸ ಚಿಂತನೆಗಳನ್ನು ತಾತ್ವಿಕವಾಗಿ ಮೈಮೇಲೆ ಹಾಕಿಕೊಳ್ಳುವುದಿಲ್ಲ. ಅಂತಹ ಎರಡು ನಿದರ್ಶನಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ. ಒಂದು: ಗಮಕ ಸಮಾಸ ಕುರಿತ ಚರ್ಚೆ. ಡಾ.ಎಚ್.ಎಸ್. ಬಿಳಿಗಿರಿಯವರು ಗಮಕ ಸಮಾಸ ಒಂದು ಸಮಾಸವೇ ಅಲ್ಲ ಎಂಬ ಪ್ರಶ್ನೆಯನ್ನು ಮೊದಲು ಎತ್ತಿದರು. ಕೇಶಿರಾಜನು ಕನ್ನಡದ ವಿಶೇಷ ಲಕ್ಷಣಗಳನ್ನು ಹೇಳುವಾಗ ಗಮಕ ಸಮಾಸವನ್ನು ಅವುಗಳಲ್ಲಿ ಒಂದು ಎಂದು ಹೇಳಿದನಷ್ಟೆ. ಅದನ್ನು ತನ್ನ ವ್ಯಾಕರಣದಲ್ಲಿ ವಿವರವಾಗಿ ಚರ್ಚಿಸಿದ್ದಾನೆ. ಬಿಳಿಗಿರಿಯವರ ವಾದ ಸರಳವಾಗಿದೆ. ಕೇಶಿರಾಜ ಸಮಾಸ ಎಂದು ವಿವರಿಸುತ್ತಿರುವ ಈ ರಚನೆಯು ಒಂದು ಪದಗುಂಪನವೇ ಹೊರತು ಸಮಾಸವಲ್ಲ; ಒಂದು ಪದರಚನೆ ಸಮಾಸವೆನಿಸಬೇಕಾದರೆ ಇರಬೇಕಾದ ಲಕ್ಷಣಗಳು ಈ ರಚನೆಯಲ್ಲಿ ಇಲ್ಲ. ಹಾಗಾಗಿ ಇದನ್ನು ಒಂದು ಪದಗುಂಫನ ಎಂದು ಕರೆಯಬೇಕೇ ಹೊರತು ಸಮಾಸವೆಂದಲ್ಲ. ಅನಂತರ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಪಾರಂಪರಿಕ ನೆಲೆಯ ವಿದ್ವಾಂಸರು ಆಧುನಿಕ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ವಾದಿಸುವುದನ್ನೇ ಪ್ರಶ್ನಿಸಿದರು. ಅವರ ತರ್ಕ ಇಷ್ಟೆ, ಕೇಶಿರಾಜ ಅದನ್ನು ಕನ್ನಡದ ವಿಶೇಷ ಲಕ್ಷಣಗಳಲ್ಲಿ ಸೇರಿಸಿರುವುದರಿಂದ ಮತ್ತು ಸಂಸ್ಕೃತ ವೈಯಾಕರಣರ ಸಮಾಸ ಕಲ್ಪನೆಗೆ ಅನುಗುಣವಾಗಿರುವುದರಿಂದ ಅದೊಂದು ಸಮಾಸವೇ ಹೊರತು ಬೇರೇನೂ ಅಲ್ಲ. ಬಿಳಿಗಿರಿಯವರನ್ನು ಸಮರ್ಥಿಸುವ ಅಧ್ಯಯನಗಳು ಮುಂದೆ ನಡೆದವು. ಗಮಕ ಸಮಾಸದ ಪದರಚನೆಯ ಬಂಧ ಮತ್ತು ಅರ್ಥರಚನೆಯ ಬಂಧ ಅದನ್ನು ಸಮಾಸವೆಂದು ಪರಿಗಣಿಸಲು ಅನುಕೂಲಕರ ವಾಗಿಲ್ಲ ಎಂಬುದೇ ಆ ಅಧ್ಯಯನಗಳ ತಿರುಳು. ಹೀಗಾದರೂ ಪಾರಂಪರಿಕ ಚಿಂತಕರು ತಮ್ಮ ನಿಲುವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಒಂದು ಪದಗುಂಪನವನ್ನೇ ಸಮಾಸವೆಂಬ ಹೆಸರಿನಿಂದ ಕರೆಯಲು ಸಿದ್ಧರಾಗಿದ್ದಾರೆ. ಇದು ಸರಿತಪ್ಪುಗಳ ಪ್ರಶ್ನೆಯಲ್ಲ, ತಾತ್ವಿಕತೆಯ ಪ್ರಶ್ನೆ. ವಿಶ್ಲೇಷಣೆಗೆ ಅನುಕೂಲಕರವಾದ ಚೌಕಟ್ಟುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನೇ ಈ ಚರ್ಚೆಗಳು ಹಿಂದಕ್ಕೆ ಸರಿಸುತ್ತಿವೆ.

ಇಂತಹುದೇ ಇನ್ನೊಂದು ವಿವಾದ ಕನ್ನಡ ವರ್ಣಮಾಲೆಯಲ್ಲಿ ಸೇರಿಸಲಾದ ಋ ಸ್ವರದ ಚಿಂತನೆಯನ್ನು ಕುರಿತಿದೆ. ಸಂಸ್ಕೃತ ಪದಗಳಲ್ಲಿ ಈ ಚಿಹ್ನೆಯ ಅಗತ್ಯ ಉಂಟಾದುದಕ್ಕೆ ಕಾರಣವಿದೆ. ರಕಾರವು ಒಂದು ವ್ಯಂಜನವಾದರೂ ಪ್ರಸಂಗವಶಾತ್ ಅದು ಅಕ್ಷರ ರಚನೆಯ ಕೇಂದ್ರವಾದಾಗ ಅದಕ್ಕೆ ಸ್ವರದ ಲಕ್ಷಣ ಬರುತ್ತದೆ. ಹೀಗಾಗಿ ವ್ಯಂಜನ ಮತ್ತು ಋ ಸ್ವರ ಒಂದೇ ಧ್ವನಿಯ ಎರಡು ನಿಯೋಗಳನ್ನು ಪ್ರತಿನಿಧಿಸುತ್ತವೆ. ಕನ್ನಡದಲ್ಲಿ ಅಕ್ಷರರಚನೆಯ ಕೇಂದ್ರವಾಗಿ ರಕಾರ ಬರುವುದು ಸಾಧ್ಯವಿಲ್ಲವಾದರಿಂದ ಅದು ಯಾವಾಗಲೂ ರ್ ಎಂಬ ವ್ಯಂಜನವನ್ನು ಮಾತ್ರ ಒಪ್ಪಿಕೊಳ್ಳುತ್ತದೆ. ಸಹಜವಾಗಿಯೇ ಕನ್ನಡ ಧ್ವನಿರಚನೆಯಾಗಿ ಋ ಎಂಬ ಸ್ವರಕ್ಕೆ ಸ್ಥಾನವಿಲ್ಲ. ಈ ವಿಶ್ಲೇಷಣೆ ನೆಲೆಯನ್ನು ಪಾರಂಪರಿಕ ವಿದ್ವಾಂಸರು ಎಷ್ಟು ಕಟುವಾಗಿ ಟೀಕಿಸಿದರೆಂದರೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಋಕಾರವನ್ನು ಒಂದು ಲಿಪಿ ಚಿಹ್ನೆಯನ್ನಾಗಿ ಕನ್ನಡದಲ್ಲಿ ಉಳಿಸಿಕೊಳ್ಳ್ಳಬೇಕು ಎಂಬ ನಿರ್ಣಯವನ್ನು ಮಾಡಲಾಯಿತು.

ಈ ಎರಡು ನಿದರ್ಶನಗಳು ನಮಗೆ ಸ್ಪಷ್ಟಪಡಿಸುತ್ತಿರುವ ಸಂಗತಿ ಎಂದರೆ ಭಾಷೆಯ ಅಧ್ಯಯನದಲ್ಲಿ ಹೊಸ ತಾತ್ವಿಕತೆಯನ್ನು ಅಳವಡಿಸಿಕೊಳ್ಳಲು ಕನ್ನಡ ಅಧ್ಯಯನ ಪರಂಪರೆ ಸಿದ್ಧವಿಲ್ಲ. ಅಷ್ಟೇ ಅಲ್ಲ, ಅಂತಹ ಪ್ರಯತ್ನಗಳನ್ನು ಸಾರಾಸಗಟಾಗಿ ವಿರೋಧಿಸುತ್ತವೆ. ಈ ಸಮಸ್ಯೆಯ ಮುಂದುವರಿಕೆ ಕಳೆದ ದಶಕದ ಕೆಲವು ವಾಗ್ವಾದಗಳಲ್ಲಿ ಮತ್ತಷ್ಟು ಗಟ್ಟಿಗೊಂಡಿದೆ. ಕನ್ನಡ ವ್ಯಾಕರಣಗಳನ್ನು ಮೊದಲಿನಿಂದಲೂ ಸಂಸ್ಕೃತ ಭಾಷೆಯ ರಚನೆಯ ನಿಯಮಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಯಾವ ನಿಯಮಗಳು ಸಂಸ್ಕೃತಕ್ಕೆ ಸಲ್ಲುತ್ತವೆಯೋ ಅವು ಕನ್ನಡದಲ್ಲಿ ಇವೆಯೋ ಇಲ್ಲವೋ; ಇದ್ದರೆ ಅವುಗಳ ಸ್ವರೂಪವೇನು ಎಂಬುದನ್ನು ಶೋಧಿಸುವ ಮಾದರಿಯನ್ನು ಅನುಸರಿಸಲಾಗಿದೆ. ಕೆಲವೊಮ್ಮೆ ಸಂಸ್ಕೃತ ವ್ಯಾಕರಣದ ಚೌಕಟ್ಟಿಗೆ ಹೊಂದಿಸಲು ಕನ್ನಡ ಭಾಷೆಯಲ್ಲಿ ಇಲ್ಲದಿರುವ ರಾಚನಿಕ ನಿಯಮಗಳನ್ನು ಕಂಡುಕೊಳ್ಳುವ ವ್ಯರ್ಥ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ಕನ್ನಡ ಭಾಷೆಯ ನಿಜವಾದ ಸ್ವರೂಪ ತಿಳಿಯುತ್ತಿಲ್ಲ. ೧೯ನೇ ಶತಮಾನದಲ್ಲಿ ಕನ್ನಡಕ್ಕೆ ವ್ಯಾಕರಣ ರಚಿಸಿದ ಕ್ರಿಶ್ಚಿಯನ್ ಮಿಷನರಿಗಳು ಲ್ಯಾಟಿನ್ ಭಾಷೆಯ ನಿಯಮಗಳನ್ನು, ರಚನೆಯ ಸ್ವರೂಪವನ್ನು ಕನ್ನಡದಲ್ಲಿ ಗುರುತಿಸಲು ಯತ್ನಿಸಿದರು. ಇಲ್ಲಿಯೂ ಕನ್ನಡದ ನಿಜಸ್ವರೂಪ ಪ್ರಕಟವಾಗುವ ಅವಕಾಶ ತಪ್ಪಿಹೋಯಿತು. ಡಾ.ಡಿ.ಎನ್.ಶಂಕರ್‌ಭಟ್ ಅವರು ಈ ಪರಿಸ್ಥಿತಿಯನ್ನು ಮನಗಂಡು ಕನ್ನಡ ಭಾಷೆಯ ರಚನೆಯನ್ನು ಆ ಭಾಷೆಯ ಮೂಲಕವೇ ಕಂಡುಕೊಳ್ಳಬೇಕೆಂದು ವಾದಿಸುವ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಕೃತಿಯನ್ನು ರಚಿಸಿದರು. ಇಲ್ಲಿ ಅವರ ವಾದ ಎರಡು ನೆಲೆಯಲ್ಲಿ ಮುಂದುವರೆದಿದೆ. ಒಂದು: ಸಂಸ್ಕೃತ ವ್ಯಾಕರಣದ ನಿಯಮಗಳು ಕನ್ನಡಕ್ಕೆ ಹೊಂದುವುದಿಲ್ಲ ಎಂದು ತೋರಿಸುವುದು. ಎರಡು: ಕನ್ನಡ ಭಾಷೆಯನ್ನು ವಿಶ್ಲೇಷಿಸುವ ಮೂಲಕವೇ ಆ ಭಾಷೆಯ ರಚನೆಯನ್ನು ಗ್ರಹಿಸಲು ತೊಡಗುವುದು. ಇವೆರಡೂ ಪೂರಕ ಪ್ರಯತ್ನಗಳು, ಕನ್ನಡದಲ್ಲಿ ಇರುವ ಪದವರ್ಗಗಳು ಎಷ್ಟು? ಸಂಸ್ಕೃತದ ನಿಯಮದಂತೆ ನಾಮಪದ, ಮತ್ತು ವಿಶೇಷಣಗಳನ್ನು ಒಂದೇ ಪದವರ್ಗಕ್ಕೆ ಸೇರಿಸಿದರೆ ಆಗುವ ತೊಂದರೆಗಳೇನು, ಇವೆಲ್ಲ ಪ್ರಶ್ನೆಗಳನ್ನು ಭಟ್ ವಿವರಿಸುತ್ತಾರೆ. ಕನ್ನಡದಲ್ಲಿ ವಿಶೇಷಣಗಳು ನಾಮಪದದಿಂದ ಬೇರೆಯೇ ಆದ ಪದವರ್ಗವೆಂಬುದನ್ನು ತೋರಿಸಿಕೊಡುತ್ತ ಜಗತ್ತಿನ ಹಲವು ಭಾಷೆಗಳಲ್ಲಿ ಈ ಲಕ್ಷಣ ಇದೆ ಎಂಬುದನ್ನು ವಿವರಿಸಿದ್ದಾರೆ. ಹಾಗೆಯೇ ಕನ್ನಡದಲ್ಲಿ ಸಮಾಸಗಳನ್ನು ವಿವರಿಸುವಾಗ ಈಗಿರುವಂತೆ ಸಂಸ್ಕೃತದ ಸಮಾಸಗಳ ವ್ಯಾಖ್ಯೆಯನ್ನು ಬಳಸುವುದು ಸೂಕ್ತವಲ್ಲ; ಕನ್ನಡದಲ್ಲಿ ಉತ್ತರ ಪದವು ರಚನೆಯ ಕೇಂದ್ರವಾಗುವುದರಿಂದ ಆ ಪದವು ಯಾವ ಪದವರ್ಗಕ್ಕೆ ಉದಾಹರಣೆಗೆ ನಾಮಪದ, ಕ್ರಿಯಾಪದ ಮತ್ತು ಗುಣಪದ ಸೇರುತ್ತವೆ ಎಂಬುದನ್ನು ಅವಲಂಬಿಸಿ ಮೂರು ಬಗೆಯ ಸಮಾಸಗಳನ್ನು ಗುರುತಿಸಿದರೆ ಸಾಕು ಎಂದು ವಾದಿಸುತ್ತಾರೆ. ಅವರ ಇಂತಹ ವಾದಗಳು ಹಲವಿವೆ. ಈ ಪುಸ್ತಕ ಪ್ರಕಟವಾದಾಗ ಪಾರಂಪರಿಕ ನೆಲೆಯ ಬೋಧನೆ ಮತ್ತು ಅಧ್ಯಯನಗಳಲ್ಲಿ ತೊಡಗಿದವರು ಮೊದಲನೆಯದಾಗಿ ಡಾ.ಭಟವರ ವಾದವನ್ನು ಒಪ್ಪುವುದು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಆಧುನಿಕ ಕನ್ನಡದ ಸಂದರ್ಭದಲ್ಲಿ ಒಪ್ಪಿದರೂ ಹಳಗನ್ನಡ ಅಧ್ಯಯನಕ್ಕೆ ಹಳಗನ್ನಡ ವ್ಯಾಕರಣಗಳೇ ಅಗತ್ಯ ಎಂದು ವಾದಿಸಿದರು. ಈ ವಾದವನ್ನು ಗಮನಿಸಿದ ಡಾ.ಭಟ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಳಗನ್ನಡ ವ್ಯಾಕರಣಗಳು ಕೂಡ ಹಳಗನ್ನಡದ ನಿಜ ಲಕ್ಷಣಗಳನ್ನು ವಿವರಿಸುವುದಿಲ್ಲ ಎಂದು ತೋರಿಸುವ ಗ್ರಂಥ ನಿಜಕ್ಕೂ ಹಳಗನ್ನಡ ವ್ಯಾಕರಣ ಎಂಥಹುದು?(೨೦೦೫) ವನ್ನು ಪ್ರಕಟಿಸಿದರು.ಈ ಅಧ್ಯಯನ ಕೂಡ ಕನ್ನಡ ವಿದ್ವತ್ ಪ್ರಪಂಚದಲ್ಲಿ ಯಾವ ಪಲ್ಲಟವನ್ನೂ ತರಲಿಲ್ಲ. ಮತ್ತೆ ಶಬ್ದಮಣಿದರ್ಪಣ ಮೊದಲಾಗಿ ಕನ್ನಡ ಕೈಪಿಡಿವರೆಗಿನ ಎಲ್ಲ ಹಳೆಯ ಮಾದರಿಯ ವಿವರಣೆಗಳಿಗೆ ಹಿಂದಿರುಗಿದ್ದಾರೆ.

ಡಾ. ಭಟ್ ಅವರು ತಮ್ಮ ವಾದವನ್ನು ಸಮರ್ಥಿಸಲು ಇನ್ನೂ ಹಲವು ವಲಯಗಳಿಂದ ತಮ್ಮ ವಾದವನ್ನು ಮಂಡಿಸಿದರು. ಮುಖ್ಯವಾಗಿ ಅವರ ಕನ್ನಡ ಬರಹವನ್ನು ಸರಿಪಡಿಸೋಣ(೨೦೦೫) ಎಂಬ ಹೆಸರಿನ ಈ ಗ್ರಂಥ ಪ್ರಕಟವಾದುದ್ದು ತೀರಾ ಈಚೆಗೆ. ಇದರಲ್ಲಿ ಕನ್ನಡ ಬರವಣಿಗೆಯನ್ನು ಸಂಸ್ಕೃತ ಭಾಷೆ ಹಲವು ರೀತಿಯಲ್ಲಿ ನಿಯಂತ್ರಿಸುತ್ತಿದೆ; ಈ ನಿಯಂತ್ರಣ ತಪ್ಪಬೇಕಾದರೆ ಮಾತು ಮತ್ತು ಬರಹಗಳ ನಡುವೆ ಹೆಚ್ಚು ನಿಕಟವಾದ ಸಂಬಂಧವಿರಬೇಕು; ಬರಹದಂತೆ ಮಾತು ಇರುವುದಾದರೆ ಅದು ಕೃತಕವಾಗಿ ಬಿಡುತ್ತದೆ; ಆದ್ದರಿಂದ ಮಾತಿನಂತೆ ಬರಹ ಇರುವುದು ಸೂಕ್ತ; ಹಾಗಿಲ್ಲದಿದ್ದಲ್ಲಿ ಆಗುವ ಅಡ್ಡಿ ಆತಂಕಗಳೇನು; ಅವುಗಳನ್ನು ನಿವಾರಿಸುವುದು ಹೇಗೆ ಎಂಬ ಚರ್ಚೆಯನ್ನು ಮೊದಲು ಮಾಡುತ್ತಾರೆ. ಡಾ.ಭಟ್ ತಮ್ಮ ವಾದವನ್ನು ಸಮರ್ಥಿಸಲು ಕನ್ನಡ ಬರವಣಿಗೆಯಲ್ಲಿ ಮಾತಿನ ಲಕ್ಷಣಗಳನ್ನು ಪಾಲಿಸದಿರುವ ಹಲವು ನಿದರ್ಶನಗಳನ್ನು ಮಂಡಿಸಲು ಪ್ರಯತ್ನಪಡುತ್ತಾರೆ. ಪದಗಳ ಆಯ್ಕೆ ಮತ್ತು ಬರವಣಿಗೆಯ ಕಾಗುಣಿತಗಳನ್ನು ಕುರಿತಂತೆ ಒಂದು ತೀವ್ರ ಪ್ರಾಯೋಗಿಕ ನೆಲೆಯನ್ನು ರೂಪಿಸಿಕೊಟ್ಟಿದ್ದಾರೆ. ಈ ಗ್ರಂಥ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ಕಳೆದ ಐವತ್ತು ವರ್ಷದಲ್ಲಿ ಕನ್ನಡ ಅಧ್ಯಯನಗಳು ಚಾರಿತ್ರಿಕ ಪುನಾರಚನೆಯನ್ನು ಗುರಿಯಾಗಿರಿಸಿಕೊಂಡು ಸಾಗಿರುವ ನಿದರ್ಶನಗಳು ಇವೆ. ಈ ಅಧ್ಯಯನಗಳಲ್ಲಿ ಒಂದು ಪದದ ನಿಷ್ಪತ್ತಿ, ಅರ್ಥಗಳನ್ನು ವಿವೇಚಿಸುವ ಜೊತೆಗೆ ಚಾರಿತ್ರಿಕವಾಗಿ ಏನೆಲ್ಲ ಬದಲಾವಣೆಗಳು ಆಗಿವೆ ಎನ್ನುವುದನ್ನು ವಿವರಿಸಲಾಗುತ್ತದೆ. ಮೈಸೂರು  ವಿಶ್ವವಿದ್ಯಾಲಯದ ಪ್ರಕಟಣೆ ಪ್ರಬುದ್ಧ ಕರ್ಣಾಟಕ’ದಲ್ಲಿ ಕಮ್ಮಟದ ಕಿಡಿಗಳು ಎಂಬ ಅಂಕಣ ಕರ್ನಾಟಕ ಭಾರತಿ ಪತ್ರಿಕೆಯ ಒರೆಗಲ್ಲು ಈ ಅಂಕಣಗಳು ಇಂತಹ ಅಧ್ಯಯನಗಳನ್ನು ಪ್ರಕಟಿಸಿವೆ. ಬಹುಮಟ್ಟಿಗೆ ಹಳೆಗನ್ನಡ ಕಾವ್ಯಗಳು ಮತ್ತು ಶಾಸನಗಳನ್ನು ಅಭ್ಯಾಸ ಮಾಡುತ್ತಿದ್ದ ಅಧ್ಯಾಪಕರು ಇಂಥಾ ಪ್ರಯತ್ನಗಳಲ್ಲಿ ತೊಡಗಿದರು. ಪುನಾರಚನಾವಾದಿಗಳು ಎಂದು ಇವರನ್ನು ಕರೆಯಬಹುದು. ಈಗ ಇರುವ ಮಾಹಿತಿಯನ್ನು ಅವಲಂಬಿಸಿ ನಾವು ಬಲ್ಲ ಭಾಷಾ ನಿಯಮಗಳನ್ನು ಅನ್ವಯಿಸಿ ಹಿಂದೆ ಹೀಗಿತ್ತು ಎನ್ನುವ ತಿಳುವಳಿಕೆಯನ್ನು ನೀಡುತ್ತವೆ. ಈ ಪುನಾರಚನೆಯಲ್ಲಿ ಭಾಷಿಕ ಅಂಶಗಳಿಗೆ ಮತ್ತು ನಿಯಮಗಳಿಗೆ ಒತ್ತು ನೀಡಲಾಗಿದೆ. ಕಳೆದ ಎರಡು ದಶಕಗಳಲ್ಲಿ ಇಂತಹ ಪ್ರಯತ್ನಗಳು ಕಡಿಮೆಯಾಗಿವೆ. ಇದನ್ನು ವಿದ್ವತ್ತಿನ ಕೊರತೆ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ವಿದ್ವತ್ ಶೋಧಗಳಿಗೆ ತೆತ್ತುಕೊಂಡ ಅಧ್ಯಯನಕಾರರ ಉದ್ದೇಶ ಮತ್ತು ಗುರಿಗಳು ಇವೆಯಾದರೂ ಏಕೆ ಹಳೆಯ ಮಾದರಿಯ ವಿದ್ವತ್ತು ಕಾಣುತ್ತಿಲ್ಲವೆಂಬ ಕೊರಗು ಮೂಡುತ್ತಿದೆಯೋ ತಿಳಿಯದು. ಈಗಿನ ಅವಧಾರಣೆ ಭಾಷೆಯ ರಚನೆಯ ವಿವರಣೆಗಿಂತ ಬಳಕೆಯ ವಿವರಣೆ ಕಡೆಗೆ ಒಲುಮೆಯನ್ನು ತೋರುತ್ತಿದೆ. ಹಾಗಾಗಿ ಪುನಾರಚನೆಯ ಮಾದರಿಗಳಿಗೆ ಅವಕಾಶ ಕಡಿಮೆಯಾಗಿದೆ.

ಕನ್ನಡ ಭಾಷೆಯ ಪುನಾರಚನೆಯ ಪ್ರಯತ್ನದ ಶಿಖರ ಸಾಧನೆಯೆಂದರೆ ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸಿ ಪ್ರಕಟಿಸಿರುವ ಕನ್ನಡ ನಿಘಂಟು. ಇದರ ಸಿದ್ಧತೆ ಮತ್ತು ರಚನೆ ಕಳೆದ ಶತಮಾನದ ಐದನೇ ದಶಕದಲ್ಲೇ ಆರಂಭಗೊಂಡಿತ್ತಾದರೂ ಏಕೀಕರಣದ ಅನಂತರ ಮಾತ್ರ ಅದರ ಕಾರ್ಯ ಯೋಜನೆ ತೀವ್ರಗೊಂಡಿದೆ. ಸುಮಾರು ಮೂವತ್ತು ವರ್ಷಗಳ ಅವಧಿಯಲ್ಲಿ ಈ ನಿಘಂಟಿನ ಒಂದರಿಂದ ಎಂಟು ಸಂಪುಟಗಳು ರಚನೆಗೊಂಡು ಬಿಡುಗಡೆಯಾದವು. ಆಕ್ಸ್‌ಫರ್ಡ್ ಇಂಗ್ಲಿಶ್ ಡಿಕ್ಷನರಿಯ ಮಾದರಿಯನ್ನು ಆಧರಿಸಿರುವ ಈ ನಿಘಂಟಿನಲ್ಲಿ ಒಂದು ನಿಘಂಟಿಮಾದ ಸಮಕಾಲೀನ ಬಳಕೆಯ ವಿಶೇಷಣೆಗಿಂತ ಭಾಷೆಯ ಚಾರಿತ್ರಿಕ ವಿಕಾಸ ಮತ್ತು ವಿನ್ಯಾಸಗಳ ಕಡೆಗೆ ಹೆಚ್ಚು ಗಮನ ಹರಿದಿದೆ. ಹೀಗಾಗಿ ಪದದ ಬಳಕೆಯ ಚೌಕಟ್ಟಿನ ಬಗೆಗೆ ಬೇರೆಯೇ ಚರ್ಚೆಗಳು ನಡೆಯಬೇಕಾಗುತ್ತವೆ. ಈ ನಿಘಂಟಿನಲ್ಲಿ ಪದ, ಪದರೂಪ, ವಿಕಲ್ಪಗಳು ಇವುಗಳನ್ನು ಮುಖ್ಯ ನಮೂದು ಗಳನ್ನಾಗಿ ಮಾಡಿಕೊಳ್ಳಲಾಗಿದೆ. ಚಾರಿತ್ರಿಕವಾಗಿ ಆ ಪದದ ರೂಪ ಮತ್ತು ಅರ್ಥ ದಲ್ಲಿ ಆಗಿರುವ ಪರಿವರ್ತನೆ ಮತ್ತು ಬೆಳವಣಿಗೆಗಳನ್ನು ವಿಶದವಾಗಿ ದಾಖಲಿಸಲಾಗಿದೆ ನೂರಾರು ಸಾಹಿತ್ಯ ಕೃತಿಗಳನ್ನು ಪ್ರಧಾನ ಆಕರಗಳನ್ನಾಗಿ ಮಾಡಿಕೊಳ್ಳಲಾಗಿದೆ.

ಈ ಸಂಪುಟಗಳ ಉದ್ದೇಶ ಪುನಾರಚನೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಭಾಷೆಯನ್ನು ವಿಶ್ಲೇಷಿಸುವ ವಿಧಾನಗಳಲ್ಲಿ ತೀವ್ರತರದ ಬದಲಾವಣೆಗಳಾಗಿವೆ. ಇದರ ಪರಿಣಾಮ ನಿಘಂಟಿನ ರಚನೆಯ ಮೇಲೂ ಆಗಿದೆ. ಮೂವತ್ತು ವರ್ಷಗಳ ಅವಧಿ ಚಿಕ್ಕದೇ, ಆದರೂ ಸೂಕ್ಷ್ಮವಾಗಿ ಅಭ್ಯಾಸ ಮಾಡಿದರೆ ಒಂದನೇ ಸಂಪುಟದಿಂದ ಎಂಟನೇ ಸಂಪುಟದವರೆಗೆ ಈ ಬದಲಾವಣೆಗಳು ಅಘೋಷಿತವಾಗಿ ಕಾಣಿಸಿ ಕೊಂಡಿವೆ. ಮೊದಲ ಸಂಪುಟದಲ್ಲಿ ಇಂಗ್ಲಿಶಿನಿಂದ ಎರವಲು ಪಡೆದ ಪದಗಳನ್ನು ನಿಘಂಟಿನಲ್ಲಿ ಸೇರಿಸಲು ಹಿಂಜರಿಕೆ ಕಾಣುತ್ತದೆ. ಆದರೆ ಎಂಟನೆಯ ಸಂಪುಟದ ಹೊತ್ತಿಗೆ ಈ ಹಿಂಜರಿಕೆ ಮಾಯವಾಗುತ್ತದೆ.

ಮಾಹಿತಿಯ ಸಂಗ್ರಹ, ಜೋಡಣೆ, ವ್ಯಾಖ್ಯಾನ, ಅಳವಡಿಕೆ ಇವುಗಳ ದೃಷ್ಟಿಯಿಂದ ಈ ನಿಘಂಟು ಅನನ್ಯವಾದುದ್ದು. ಇದಕ್ಕೆ ಸರಿದೂಗುವ ಪ್ರಯತ್ನಗಳು ಭಾರತದ ಬೇರೆ ಯಾವ ಭಾಷೆಯಲ್ಲೂ ಇರುವುದು ಸಂದೇಹ. ಆದರೆ ಐವತ್ತು ವರ್ಷಗಳಲ್ಲಿ ಕನ್ನಡ ಭಾಷೆ ಬಳಕೆಯ ದೃಷ್ಟಿಯಿಂದ ಪಡೆದುಕೊಂಡಿರುವ ಹೊಸ ಅರ್ಥ ವಿನ್ಯಾಸಗಳನ್ನು, ನಿಯೋಗ ಮತ್ತು ಪಲ್ಲಟಗಳನ್ನು ಈ ನಿಘಂಟು ಗುರುತಿಸುತ್ತಿಲ್ಲ. ಈ ಕಾರಣದಿಂದ ಈ ನಿಘಂಟಿನ ಬಳಕೆ ಅತ್ಯಂತ ಕನಿಷ್ಟ ಪ್ರಮಾಣದಲ್ಲಿದೆ. ಕನ್ನಡವನ್ನೇ ವಿಶೇಷ ವಿಷಯವನ್ನಾಗಿ ಕಲಿಯುವ ಮತ್ತು ಬೋಧಿಸುವ, ಅಭ್ಯಾಸ ಮಾಡುವ ಜನರು ಈ ನಿಘಂಟನ್ನು ಬಳಸುವುದೇ ಇಲ್ಲ. ಈ ನಿಘಂಟನ್ನು ಭಾಷಾ ಅಧ್ಯಯನಕಾರರು ಪದ, ಪದಾರ್ಥಗಳ ಸಂಬಂಧದಲ್ಲಿ ನೋಡದೆ ಹೆಚ್ಚಿನ ಮಾಹಿತಿಯ ಆಕರವನ್ನಾಗಿ ಬಳಸುತ್ತಿದ್ದಾರೆ. ಈ ನಿಘಂಟು ಈಗಿರುವಂತೆ ಕನ್ನಡ ನಾಡಿನ ಭಾಷಾ ಅಧ್ಯಯನದ ಚಾರಿತ್ರಿಕ ನೆಲೆಗೆ ಒಂದು ಅತ್ಯುತ್ತಮ ಸ್ಮಾರಕವಾಗಿ ನಿಲ್ಲಬಹುದು.

ಕನ್ನಡ ಭಾಷೆಯ ಅಧ್ಯಯನಗಳು ಕಳೆದ ಐವತ್ತು ವರ್ಷದಲ್ಲಿ ಭಾಷೆಯ ಪ್ರಭೇದಗಳ ಅಧ್ಯಯನಗಳ ಕಡೆಗೂ ಗಮನ ಹರಿಸಿದೆ. ಈ ಬಗೆಗೆ ಕೆಲವು ವಿವರಗಳು ಈಗಾಗಲೇ ಬಂದು ಹೋಗಿವೆ. ಉಪಭಾಷೆಗಳ ಅಧ್ಯಯನ ಈ ಹಿಂದೆ ನಡೆಯುತ್ತಿದ್ದ ವಿಧಾನದ ತಾತ್ವಿಕತೆಗೂ ಈಗಿನ ತಾತ್ವಿಕತೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಉಪಭಾಷೆಗಳು ಪ್ರಮಾಣ ಅಥವಾ ಶಿಷ್ಟ ಭಾಷೆಯ ಅಪಭ್ರಂಶಗಳು; ಮುಖ್ಯಧಾರೆಯಿಂದ ಪಕ್ಕಕ್ಕೆ ಸರಿದು ಬೇರೆಯದೇ ಆದ ಭಾಷಿಕ ಸಮುದಾಯವನ್ನು ಪಡೆದುಕೊಂಡಿರುವ ಭಾಷಾ ಪ್ರಭೇದ ಎಂದು ವಿವರಿಸಲಾಗುತ್ತಿತ್ತು. ಅದಕ್ಕಾಗಿಯೇ ಆ ಪ್ರಭೇದಕ್ಕೂ ಪ್ರಮಾಣ ಭಾಷೆಗೂ ಇರುವ ವ್ಯತ್ಯಾಸಗಳನ್ನು ಒಂದೆಡೆ ಗುರುತಿಸುತ್ತ ಮತ್ತೊಂದೆಡೆ ಈ ಉಪಭಾಷೆಗಳು ಕೇವಲ ವಿಕಲ್ಪಗಳಾಗಿ ಉಳಿಯುವ ಬದಲು ಮುಖ್ಯಧಾರೆಗೆ ಅಂದರೆ ಪ್ರಮಾಣ ಭಾಷೆಗೆ ಹೊರಳಬೇಕು ಎಂಬುದೇ ಒಂದು ಗುರಿಯಾಗಿತ್ತು. ಉಪಭಾಷೆಯ ಹಲವು ಪರ್ಯಾಯಗಳನ್ನು ವಿವರಿಸುವಾಗ ಅದನ್ನಾಡುವ ಜನರ ಪರಿಸ್ಥಿತಿಯನ್ನು ಮುಖ್ಯ ನೆಲೆಯಾಗಿ ಇರಿಸಿಕೊಳ್ಳಲಾಗುತ್ತಿತ್ತು.

ಆದರೆ ಈಗ ಉಪಭಾಷೆಗಳನ್ನು ನೋಡುವ ಬಗೆ ಬೇರೆಯಾಗಿದೆ. ಉಪಭಾಷೆ ಗಳನ್ನು ಅನುಬಂಧಗಳೆಂದು ನೋಡುವ ಬದಲು ಅವು ಭಾಷೆಯ ವಿಭಿನ್ನ ಅವಸ್ಥೆಗಳನ್ನು ಪ್ರತಿನಿಧಿಸುತ್ತವೆಯೆಂದೂ ಅಲ್ಲದೇ ಒಂದು ಭಾಷಿಕ ಸಮುದಾಯದ ಚಹರೆಗಳನ್ನು ಹೊಂದಿರುತ್ತವೆ ಎಂದು ತಿಳಿಯಲಾಗುತ್ತಿದೆ. ಅಲ್ಲದೇ ಉಪಭಾಷೆಗಳ ನಿರ್ನಾಮ ಅಥವಾ ಏಕರೂಪೀಕರಣ ಮುಖ್ಯ ಗುರಿಯಾಗದೇ ಭಾಷಾ ವಿನ್ಯಾಸಗಳ ಹಾಸುಹೊಕ್ಕೊಂದನ್ನುಉಳಿಸಿಕೊಳ್ಳಬೇಕು ಎಂಬ ತರ್ಕ ಮುಂದೆ ಬಂದಿದೆ. ಇದೂ ಅಲ್ಲದೇ ಉಪಭಾಷೆ ಮತ್ತು ಪ್ರಮಾಣಭಾಷೆಗಳನ್ನು ತರತಮ ಭಾವದಿಂದ ನೋಡುವ ವಿಧಾನವನ್ನು ನಿರಾಕರಿಸಲಾಗುತ್ತಿದೆ. ಏಕೆಂದರೆ ಅವೆರಡರ ನಡುವೆ ಇರುವುದು ಭಿನ್ನತೆ ಮಾತ್ರವೇ ಹೊರತು ತಾರತಮ್ಯದ ನಿರೂಪಣೆಯಲ್ಲ. ಈ ದೃಷ್ಟಿಕೋನದ ವ್ಯತ್ಯಾಸ ಗಮನಾರ್ಹವಾಗಿದೆ.

ಕನ್ನಡ ಭಾಷಾ ಅಧ್ಯಯನದಲ್ಲಿ ನಡೆದಿರುವ ಮತ್ತೊಂದು ಮುಖ್ಯ ಪರಿವರ್ತನೆ ಎಂದರೆ ಭಾಷೆಯನ್ನು ಒಂದು ಸ್ವತಂತ್ರ ಸಾಮರ್ಥ್ಯ ಎಂದು ತಿಳಿಯದೇ ಅದನ್ನು ಸಾಮಾಜಿಕ ರಚನೆಯ ವಿನ್ಯಾಸಗಳನ್ನು ಸೂಚಿಸುವ ಒಂದು ಸಾಧ್ಯತೆ ಎಂದು ಪರಿಗಣಿಸುತ್ತಿರುವುದು. ಇಲ್ಲಿ ಒಂದು ಸ್ಪಷ್ಟ ವಿವರಣೆ ಅಗತ್ಯ. ಭಾಷೆಯು ಸಾಮಾಜಿಕ ನೆಲೆಯ ಸೂಚಕ ಎಂದರೆ ಏನು? ಸಾಮಾಜಿಕ ನೆಲೆಯಲ್ಲಿರುವ ವಿನ್ಯಾಸಗಳಿಗೆ ಘಟಕಗಳ ನಡುವಣ ಒಳಸಂಬಂಧಗಳಿಗೆ ಭಾಷೆ ಕಾರಣ ಎಂದಲ್ಲ. ಆದರೆ ಆ ಸಾಮಾಜಿಕ ವಿನ್ಯಾಸ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಸೂಚಕದ ಕೆಲಸವನ್ನು ಮಾಡುತ್ತದೆ. ಹೀಗೆಯೇ ಸೂಚಕವಾಗಿ ಕೆಲಸ ಮಾಡುವಾಗಲೇ ಪರೋಕ್ಷವಾಗಿ ಈ ಭಾಷೆಯ ಲಕ್ಷಣಗಳಿಂದ ಪ್ರಭಾವಿತವೂ ಆಗಿರುತ್ತದೆ. ಇದೊಂದು ದ್ವಂದ್ವಾತ್ಮಕ ಸಂಬಂಧ. ಈ ಸಂಬಂಧದಲ್ಲಿ ಭಾಷೆ ಕೇವಲ ಸೂಚಕವಾಗಿರುತ್ತದೆ ಎಂದಷ್ಟೇ ತಿಳಿಯುವುದು ಸರಿಯಾಗದು. ಹಾಗೆಯೇ ಯಾವ ವಿನ್ಯಾಸವನ್ನು ತನ್ನ ಮೂಲಕ ಸೂಚಿತವಾಗಿದೆಯೋ ಅದು ತನ್ನ ಮೇಲೆ ಯಾವ ಪ್ರಭಾವವನ್ನಾಗಲೀ ಪರಿಣಾಮವ ನ್ನಾಗಲೀ ಉಂಟುಮಾಡದಂತೆ ಕಾಯ್ದುಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ ಭಾಷೆ ತಾರತಮ್ಯಕ್ಕೆ ಕಾರಣವಾಗದಿದ್ದರೂ ಆ ತಾರತಮ್ಯದ ಪರಿಣಾಮಕ್ಕೆ ಮಾತ್ರ ಗುರಿಯಾಗಿರುತ್ತದೆ. ಈ ಬದಲಾದ ದೃಷ್ಟಿಕೋನ ಕನ್ನಡ ಭಾಷಾ ಅಧ್ಯಯನ ಕ್ಷೇತ್ರಕ್ಕೆ ಒಂದು ಹೊಸ ನೆಲೆಗಟ್ಟನ್ನು ಒದಗಿಸಿದೆ.

ಇಷ್ಟಾದರೂ ಕನ್ನಡ ಭಾಷೆಯನ್ನು ಸಮಕಾಲೀನ ನೆಲೆಯಲ್ಲಿ ವರ್ಣನಾತ್ಮಕವಾಗಿ, ಚಾರಿತ್ರಿಕ ನೆಲೆಯಲ್ಲಿ ಚರಿತ್ರಾತ್ಮಕವಾಗಿ ಗ್ರಹಿಸುವ ಯತ್ನಗಳು ಅಗಾಧ ಪ್ರಮಾಣದಲ್ಲಿ ನಡೆದಿವೆಯಾದರೂ ಅಖಿಲ ಕರ್ನಾಟಕ ವ್ಯಾಪ್ತಿಯ ಭಾಷಾ ವಿನ್ಯಾಸಗಳನ್ನು ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. ಕನ್ನಡದ ಎಷ್ಟೋ ಪ್ರಭೇದಗಳು ಈ ಅಧ್ಯಯನಕ್ಕೆ ಒಳಗಾಗಿಲ್ಲ. ಹೀಗಾಗಿ ಇಂದಿನ ಕನ್ನಡದ ಲಕ್ಷಣಗಳನ್ನು ಗ್ರಹಿಸಲು ಹೊಸ ಪ್ರಯತ್ನಗಳನ್ನು ಮಾಡಬೇಕಾಗಿದೆ.