ಕನ್ನಡ ಭಾಷೆಯ ಇತಿಹಾಸದಲ್ಲಿ ಮಾತು ಮತ್ತು ಬರಹಗಳ ನಡುವೆ ಏರ್ಪಟ್ಟ ಸಂಬಂಧಗಳು ಹಲವು ಪಲ್ಲಟಗಳನ್ನು ಕಂಡಿದೆ. ಕಳೆದ ಐವತ್ತು ವರ್ಷಗಳಲ್ಲಿ ಭಾಷಾಭಿವ್ಯಕ್ತಿಯ ಈ ಎರಡು ನೆಲೆಗಳ ನಡುವೆ ಉಂಟಾಗಿರುವ ಸಂಬಂಧಗಳ ಸ್ವರೂಪವನ್ನು ಚರ್ಚಿಸುವುದು ಈ ಅಧ್ಯಾಯದ ಉದ್ದೇಶ.

ಮಾತು ಮತ್ತು ಬರಹ ಎರಡೂ ಭಾಷೆಯ ಅಭಿವ್ಯಕ್ತಿ ಕೌಶಲಗಳು. ಮಾತು ಕೇಳಿಸಿಕೊಳ್ಳುವುದನ್ನು, ಬರಹ ಓದುವುದನ್ನು ಗ್ರಹಿಕೆಯ ಕೌಶಲಗಳನ್ನಾಗಿ ನಿರೀಕ್ಷಿಸುತ್ತದೆ. ಕನ್ನಡದಲ್ಲಿ ಬರೆದುದನ್ನು ಓದುವ ಪರಂಪರೆ ಇದ್ದಂತೆ, ಓದಿ ಹೇಳುವ ಪರಂಪರೆಯು ಬಹು ದೃಢವಾಗಿ ನೆಲೆಗೊಂಡಿತ್ತು. ಹಾಗೆ ನೋಡಿದರೆ ಕನ್ನಡ ಬರಹವನ್ನು ಓದಿಕೊಳ್ಳುವ ಪರಂಪರೆಗೆ ಬಹುದೀರ್ಘ ಇತಿಹಾಸವಿಲ್ಲ. ಅಕ್ಷರಸ್ಥರ ಸಂಖ್ಯೆ ಕನಿಷ್ಟವಾಗಿದ್ದಾಗಲೂ ಬರೆದ ಕೃತಿಗಳು, ಓದಿ ಹೇಳುವ ವಾಚನ ಪರಂಪರೆಯಿಂದ ಜನಸಮುದಾಯದ ಭಾಗವಾಗಿದ್ದವು. ಹಾಗೆಯೇ ಕೇವಲ ಮಾತಿನ ರೂಪದಲ್ಲಿ ಜನರ ನೆನಪಿನಲ್ಲಿ ಉಳಿದಿರುವ ಎಷ್ಟೋ ಸಾಮಗ್ರಿಗಳು ಕಾಲಾನುಕ್ರಮದಲ್ಲಿ ಬರಹ ರೂಪಕ್ಕೆ ಬಂದಿವೆ. ಹೀಗೆ ಬರಹರೂಪದಲ್ಲಿ ಇದ್ದರೂ ಅವುಗಳ ನಿಜ ಆವಿಷ್ಕಾರ ಅವುಗಳನ್ನು ಓದಿದಾಗ ಮಾತ್ರ ಸಾಧ್ಯ. ಶೂನ್ಯಸಂಪಾದನೆಗಳು ಇದಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ. ಅಲ್ಲಿ ವಚನಗಳನ್ನು ಬರಹಕ್ಕೆ ಪರಿವರ್ತಿಸಲಾಗಿದ್ದರೂ ಇಡೀ ಶೂನ್ಯಸಂಪಾದನೆ ವಾಚನದ ಮೂಲಕ ತನ್ನ ಸ್ವರೂಪವನ್ನು ಬಿಟ್ಟುಕೊಡುತ್ತದೆ. ಮುದ್ರಣದ ಆವಿಷ್ಕಾರವಾದ ಅನಂತರದ ಅವಧಿಯಲ್ಲಿ ಓದಿ ಹೇಳುವ ಕೃತಿಗಳ ಸಂಖ್ಯೆಗಿಂತ ಓದಿಕೊಳ್ಳುವ ಕೃತಿಗಳು ಹೆಚ್ಚಾದವು. ಈ ಬದಲಾವಣೆ ಕನ್ನಡ ಸಂಸ್ಕೃತಿಯಲ್ಲಿ ಸಾಕಷ್ಟು ಪರಿವರ್ತನೆಗಳನ್ನು ಉಂಟುಮಾಡಿದೆ.

ಕಳೆದ ಐವತ್ತು ವರ್ಷಗಳಲ್ಲಿ ಪರಿಸ್ಥಿತಿಯಲ್ಲಿ ಒಂದು ಗಮನಾರ್ಹ ಪಲ್ಲಟವಾಗಿರು ವುದನ್ನು ನೋಡಬಹುದು. ಶಿಕ್ಷಣದ ಸಾರ್ವತ್ರಿಕತೆಯಿಂದಾಗಿ ಓದುವವರ ಮತ್ತು ಬರೆಯುವವರ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಹೆಚ್ಚಳ ಉಂಟಾಗಬಹುದೆಂದು  ನಿರೀಕ್ಷಿಸಲಾಗಿತ್ತು. ಆದರೆ ಕಳೆದ ಆರು ದಶಕಗಳಲ್ಲಿ ಶಿಕ್ಷಣದ ಸಾರ್ವತ್ರಿಕತೆ ನಿರೀಕ್ಷಿಸಿದ ಮಟ್ಟದಲ್ಲಿ ವ್ಯಾಪಕವಾಗಿಲ್ಲ. ಇದರ ಸಾಮಾಜಿಕ ಪರಿಣಾಮಗಳು ಬೇರೆಯೇ ಇವೆ. ನಮಗೆ ಈ ಪರಿಸ್ಥಿತಿಯಿಂದ ಉಂಟಾಗಿರುವ ಭಾಷಿಕ ಪರಿಣಾಮಗಳು ಮುಖ್ಯವಾಗಿವೆ.  ಅಲ್ಲದೇ ಓದುವ ಸಾಮರ್ಥ್ಯ ಇರುವವರು ಬರೆಯುವವರೂ ಆಗಿರುತ್ತಾರೆ ಎಂಬುದು ಒಂದು ಸಾಮಾನ್ಯ ನಿರೀಕ್ಷೆ. ಇದು ಸಹಜವಾಗಿಯೂ ಇದೆ. ಆದರೆ ಓದಬಲ್ಲವರು ಬರೆಯಬಲ್ಲವರಾಗಿರುತ್ತಾರಾದರೂ ಅವರು ಬರೆಯಬೇಕೆಂಬ ಒತ್ತಾಯ ಇರುವುದಿಲ್ಲ. ಈ ಅಂಶವನ್ನು ನಾವು ಪರಿಗಣಿಸಬೇಕು. ಇದೂ ಅಲ್ಲದೇ ಮಾತು, ಕೇಳುವ ಕೌಶಲವನ್ನು ಬಯಸುತ್ತದೆ. ಈಗ ಹೀಗೆ ಆಡುವ ಮಾತು ಸ್ವಯಂಸ್ಫೂರ್ತವಾಗಿಯೇ ಅಂದರೆ ಮಾತಾಡುತ್ತಿರುವಾಗಲೇ ಸೃಷ್ಟಿಯಾಗಬೇಕೆಂಬ ನಿಯಮವಿಲ್ಲ. ಈಗಾಗಲೇ ಸೃಷ್ಟಿಯಾದ ಮಾತನ್ನು ಯಾರೋ ಹೇಳುತ್ತಿರಬಹುದು.

ಕನ್ನಡ ಮಾತು ಮತ್ತು ಬರಹ ಇವುಗಳ ಅಧಿಕೃತತೆಯ ಬಗೆಗೂ ಒಂದು ಮುಖ್ಯ ಪಲ್ಲಟ ಆದಂತೆ ತೋರುತ್ತದೆ. ಬಹು ಹಿಂದೆ ಸಾಂಸ್ಕೃತಿಕವಾದ ನೆಲೆಗಳಲ್ಲಿ ಮಾತಿಗೆ ಅಧಿಕೃತ ನೆಲೆ ಒದಗಿತ್ತು. ಅದನ್ನು ಬದಲಿಸಲು ಬರುವುದಿಲ್ಲ ಮತ್ತು ಒಮ್ಮೆ ಮಾತಾಡಿದರೆ ಮಾತಾಡಿದ ವ್ಯಕ್ತಿ ತನ್ನ ಮಾತಿಗೆ ಬದ್ಧವಾಗಿರಬೇಕು ಎಂಬ ನಂಬಿಕೆಗಳು ಪ್ರಚಲಿತ ವಾಗಿದ್ದವು. ಆದರೆ ಈಗ ಮಾತಿಗಿಂತ ಬರಹಕ್ಕೆ ಹೆಚ್ಚು ಅಧಿಕೃತತೆ ಇದೆ. ಜನರು ಬರೆದುದನ್ನು ಒಪ್ಪುವಷ್ಟು, ನಂಬುವಷ್ಟು ಮಾತನ್ನು ಪರಿಗ್ರಹಿಸಬೇಕಾಗಿಲ್ಲ ಎಂಬ ನೆಲೆಗೆ ಹೊರಳಿದ್ದಾರೆ. ಈ ಪರಿವರ್ತನೆಗೆ ಚಾರಿತ್ರಿಕ ವಾದ ಒತ್ತಡಗಳು ಕಾರಣವಾಗಿವೆ. ಬರೆದದ್ದು ಅಕ್ಷರಗಳಲ್ಲಿರುತ್ತದೆ. ಆದ್ದರಿಂದ ಅದನ್ನು ಬದಲಾಯಿಸಲು ಬರುವುದಿಲ್ಲ. ಹಾಗಾಗಿ ಅದು ಅಧಿಕೃತ ಎಂಬ ತಿಳುವಳಿಕೆ ಜಾರಿಯಲ್ಲಿದೆ. ಮಾತಿಗಿಂತ ಬರಹಕ್ಕೆ ದೊರೆತ ಹೆಚ್ಚಿನ ಮಹತ್ವ ಸಾಂಸ್ಕೃತಿಕವಾಗಿ ಸಿಂಧುವಾಗಿದೆಯೇ ಎಂಬುದನ್ನು ನಾವು ಪರಿಗಣಿಸಬೇಕಾಗಿದೆ.

ಮಾತಿನ ಒಂದು ಲಕ್ಷಣವೆಂದರೆ ಅದರ ರೇಖಾತ್ಮಕ ಚಲನೆ. ಒಮ್ಮೆ ಧ್ವನಿಗಳು ಹೊರಬಂದ ಮೇಲೆ ಅವುಗಳನ್ನು ಮತ್ತೆ ಕೇಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಈ ಮಿತಿಯನ್ನು ಮೀರಲು ಮಾತಿನಲ್ಲಿ ಕೆಲವು ತಂತ್ರಗಳನ್ನು ಬಳಸುತ್ತೇವೆ. ಅವುಗಳಲ್ಲಿ ಮುಖ್ಯವಾದುದು ಪುನರಾವರ್ತನೆ. ಮರೆಯಬಹುದಾದ ಸಂಗತಿಗಳನ್ನು ಮೇಲಿಂದ ಮೇಲೆ ಹೇಳುವುದರಿಂದ ಈ ಅಪಾಯವನ್ನು ಮೀರಬಹುದು. ಬರಹದಲ್ಲಿ ಓದಿದ್ದನ್ನು ಮರಳಿ ಓದುವ ಅವಕಾಶವಿರುವುದರಿಂದ ಅದರಲ್ಲಿ ಅಭಿವ್ಯಕ್ತಿಯೂ ಹ್ರಸ್ವ ಮತ್ತು ಖಚಿತ ಎಂಬುದು ಒಂದು ತಿಳುವಳಿಕೆ. ಈ ಎಲ್ಲ ಲಕ್ಷಣಗಳು ಕನ್ನಡದ ಮಟ್ಟಿಗೆ ನಿಜ. ಅಷ್ಟೇ ಅಲ್ಲ, ಇವೆಲ್ಲವೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗುತ್ತಿರುವ ಲಕ್ಷಣಗಳು ಎಂಬುದೂ ಅಷ್ಟೇ ನಿಜ.

ಮಾತನ್ನು ಅನೌಪಚಾರಿಕ ಎಂದೂ ಬರಹವನ್ನು ಔಪಚಾರಿಕ ಎಂದೂ ವಿವರಿಸುವುದುಂಟು. ಆದರೆ ಅನೌಪಚಾರಿಕವಾದ ಬರಹಗಳು ಮತ್ತು ಔಪಚಾರಿಕವಾದ ಮಾತುಗಳು ಇರಲು ಸಾಧ್ಯ. ಆದ್ದರಿಂದ ಈ ಲಕ್ಷಣಗಳನ್ನು ವಿಭಜನೆಗೆ ಅನುಕೂಲ ವಾಗುವ ಪರಿಕರಗಳು ಎಂದು ಭಾವಿಸಲು ಸಾಧ್ಯವಿಲ್ಲ. ಹೀಗಾದರೂ ಈ ಎರಡು ಬಗೆಗಳಲ್ಲಿ ಔಪಚಾರಿಕತೆ ಎನ್ನುವುದು ಸಾಪೇಕ್ಷವಾಗಿಯಾದರೂ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಾಗೆ ನೋಡಿದರೆ ಔಪಚಾರಿಕ ಮತ್ತು ಅನೌಪಚಾರಿಕ ಎಂಬ ವಿಭಜನೆಯೂ ಎಷ್ಟೋ ಸಂದರ್ಭಗಳಲ್ಲಿ ಕೃತಕ ಅನ್ನಿಸುತ್ತದೆ.

ಏಕೀಕರಣದ ಅನಂತರ ಕನ್ನಡದಲ್ಲಿ ಮುದ್ರಣ ರೂಪದಲ್ಲಿ ಸಿದ್ಧವಾಗುವ ಬರಹಗಳು ಅಗಾಧ ಪ್ರಮಾಣದಲ್ಲಿ ಹೆಚ್ಚಿವೆ. ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಪುಸ್ತಕಗಳು ಸಿದ್ಧಗೊಳ್ಳುತ್ತಿವೆ. ಪತ್ರಿಕೆಗಳು ಪ್ರಸಾರ ಪಡೆದಿವೆ. ಇದಲ್ಲದೆ ಇನ್ನೂ ಹಲವು ರೀತಿಗಳಲ್ಲಿ ಬರಹದ ವ್ಯಾಪ್ತಿ ಹೆಚ್ಚುತ್ತಿವೆ. ಹೀಗೆ ಬರಹರೂಪದಲ್ಲಿ ಸಿದ್ಧಗೊಂಡು ಹೊರಬಂದದ್ದು, ಅಷ್ಟೇ ವೇಗವಾಗಿ ನಾಶವೂ ಆಗುತ್ತಿದೆ. ಅಥವಾ ಜನರ ನೆನಪಿನಿಂದ ಜಾರಿಹೋಗುತ್ತಿದೆ. ಅತಿರೇಕದ ಸಂದರ್ಭಗಳಲ್ಲಿ ಬರಹರೂಪದಲ್ಲಿ ಸಿದ್ಧಗೊಂಡು ಪ್ರಕಟವಾದುದು ಕೆಲವು ವೇಳೆ ಓದಿನ ನೆಲೆಗೆ ಪ್ರವೇಶಿಸದೆ ಇರುವುದುಂಟು. ಪುಸ್ತಕರೂಪದಲ್ಲೇ ಅದು ಉಳಿದುಬಿಡುತ್ತದೆ. ಕನ್ನಡದಲ್ಲಿ ಬರಹ ಈ ಪ್ರಮಾಣದಲ್ಲಿ ಸಿದ್ಧಗೊಂಡು ಅಷ್ಟೇ ತೀವ್ರವಾಗಿ ನಾಶವಾಗುತ್ತಿರುವುದು ಎದ್ದು ಕಾಣುವ ಒಂದು ಲಕ್ಷಣವಾಗಿದೆ. ಬರಹದ ಪ್ರಧಾನ ತಾತ್ವಿಕತೆಗೆ ಇದು ವಿರುದ್ಧವಾಗಿದೆ. ಬರಹ ಶಾಶ್ವತ ಎಂದು ಭಾವಿಸಿರುವಾಗಲೇ ಅದು ಕಾಲಕ್ರಮೇಣ ಓದುವವರ ನೆನಪಿನಿಂದ ಸರಿದು ಹೋಗಿಬಿಡಬಹುದು. ಅಲ್ಲದೇ ತಾಂತ್ರಿಕ ಕಾರಣಗಳಿಂದ ಅದರ ಲಭ್ಯತೆಯು ಕಡಿಮೆಯಾಗಿ ಬಿಡಬಹುದು.  ಬರಹದ ಈ ಲಕ್ಷಣ ಕಳೆದ ಮೂರುನಾಲ್ಕು ದಶಕದ ಒಂದು ಮುಖ್ಯ ಬದಲಾವಣೆ ಎಂದು ಪರಿಗಣಿಸಲು ಅಡ್ಡಿಯಿಲ್ಲ.

ಮಾತು ಮೈತಳೆಯುವ ವಲಯಗಳು ಅಗಾಧ ಪ್ರಮಾಣದಲ್ಲಿವೆ. ಜನರು ತಮ್ಮ ದೈನಿಕಗಳಲ್ಲಿ ಮಗ್ನರಾಗಿ ಆಡುವ ಮಾತು ಅನೌಪಚಾರಿಕವಾದರೆ ಔಪಚಾರಿಕ ನೆಲೆಯಲ್ಲಿಯೂ ಭಾಷೆ ಮಾತಾಗಿ ರೂಪುಗೊಳ್ಳುತ್ತದೆ. ಈ ಮಾತು ಅನೌಪಚಾರಿಕ ನೆಲೆಯಲ್ಲಿ ಯಾವ ಯಾವ ಭಾಷಿಕ ಅಂಶಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ನಾವು ಕಾಣುವುದು ಸಾಧ್ಯವಿಲ್ಲ. ಅದರಲ್ಲಿ ವೈವಿಧ್ಯಗಳು ಕನಿಷ್ಟ ಪ್ರಮಾಣದಲ್ಲಿ ಇರಬಹುದು. ಆದರೆ ಔಪಚಾರಿಕ ಮಾತುಕತೆಗಳಿಗೆ ಅಗಾಧ ಗಾಂಭೀರ್ಯವಿರುತ್ತದೆ. ಅಲ್ಲಿ ನಿರೀಕ್ಷೆಯ ಚೌಕಟ್ಟನ್ನು ಗಮನಿಸಿ ಅದಕ್ಕನುಗುಣವಾಗಿ ಮಾತನಾಡಬೇಕೆಂಬ ಒತ್ತಡ ಇರುತ್ತದೆ. ಇದೂ ಅಲ್ಲದೇ ಔಪಚಾರಿಕ ಮಾತಿನ ಒಂದು ವಲಯದಲ್ಲಿ, ಮಾತಾಡುತ್ತಿರುವವರು ವಾಸ್ತವವಾಗಿ, ಬರೆದ ಮಾತನ್ನು ಓದುತ್ತ್ತ ಇರುವವರು ಆಗಿರಬಹುದು. ಉದಾಹರಣೆಗೆ ದೂರದರ್ಶನದ ವಾರ್ತಾವಾಚನವನ್ನು ಗಮನಿಸಿ. ಅಲ್ಲಿ ಈಗಾಗಲೇ ಬರೆದು ಸಿದ್ಧಪಡಿಸಿದ್ದನ್ನು ನಮಗೆ ಕಾಣದಂತೆ ಓದುತ್ತಾ ಅಂದರೆ ಮಾತಾಡುತ್ತಾ ಇರುತ್ತಾರೆ. ವಾರ್ತಾವಾಚಕರು ಕಣ್ಣಿಂದ ಓದಿ ಆ ಕೂಡಲೇ ಧ್ವನಿಯಾಗಿ ಪರಿವರ್ತಿಸುವವರು. ಇದಕ್ಕಿಂತ ಬೇರೆಯೇ ಆದ ಇನ್ನೊಂದು ನೆಲೆಯಿದೆ. ಮಾತಾಡುವವರು ಬರೆದುದನ್ನು ಓದಿ, ಮನಸ್ಸಿನಲ್ಲಿ ಗ್ರಹಿಸಿ ಆ ನೆನಪಿನಿಂದಲೇ ಪುನರುಚ್ಚರಿಸುತ್ತಿರಬಹುದು. ನಾಟಕದ ಪಾತ್ರಗಳು ಇದಕ್ಕೊಂದು ನಿದರ್ಶನ. ಅಲ್ಲದೇ ಟಿ.ವಿ. ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ನಿರೂಪಕರು ಹೀಗೆ ಒಮ್ಮೆ ಬರೆದುದನ್ನು ಓದಿಕೊಂಡು ಅದನ್ನು ನೆನಪಿನಿಂದ ಮಾತಾಡುವಂತೆ ಹೇಳಬೇಕು. ಈ ಅಂಶ ಮುಖ್ಯ. ಬರೆದುದನ್ನು ಓದುವಾಗ ಅದು ಬರೆದಂತೆಯೇ ಇರುವ ಹಾಗೆ ನೋಡಿ ಕೊಳ್ಳುವುದು ಒಂದು ಸಾಧ್ಯತೆ. ಇನ್ನೊಂದು ಬರೆದುದನ್ನು ಮಾತಾಗಿ ಪರಿವರ್ತಿಸುವುದು ಅಥವಾ ಅದನ್ನು ಓದುವವರಿಗೆ ಅನುಕೂಲವಾಗುವಂತೆ ಬರವಣಿಗೆಯನ್ನು ಕೂಡ ಮಾತಿನ ಲಯದಲ್ಲಿ ಸಿದ್ಧಪಡಿಸುವುದು. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಈ ಬಗೆಯ ಪರಿಣಾಮಗಳನ್ನು ಎದುರಿಸಿದೆ. ಮಾತನ್ನು ಸಹಜ ಎನ್ನುವಂತೆ ಪರಿವರ್ತಿಸುವುದು ನಿರೂಪಕರ ಕೌಶಲವು ಹೌದು. ಅವರಿಗೆ ನೆರವಾಗುವಂತೆ ಬರಹ ರೂಪದಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ಅಷ್ಟೇ ಅಗತ್ಯವಾಗಿದೆ.

ಈ ಮೇಲೆ ಹೇಳಿದ ಲಕ್ಷಣ ಕನ್ನಡದ ಮಟ್ಟಿಗೆ ಹೊಸದು. ಇಂತಹ ಪ್ರಸಂಗಗಳು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಈ ಹಿಂದೆ ಇದ್ದಿರಬಹುದು. ಹಳೆಗಾಲದ ಬರಹಗಾರರು ತಾವು ಬರೆಯುತ್ತಿದ್ದರೂ ಅದನ್ನು ಯಾರೋ ಕೇಳಿಸಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ಅದಕ್ಕನುಗುಣವಾಗಿ ತಮ್ಮ ಶೈಲಿಯನ್ನು ರೂಪಿಸಿಕೊಳ್ಳುತ್ತಿದ್ದರು. ಅಥವಾ ಬರೆಯುವವರು ಓದುತ್ತಿರುವವರ ಜೊತೆಯಲ್ಲಿ ತಾವು ಕುಳಿತು ಕೇಳುತ್ತಿದ್ದೇವೆ ಎಂಬ ಭಾವನೆ ಬರುವಂತೆ ನಡುನಡುವೆ ಓದುಗರನ್ನು ಉದ್ದೇಶಿಸಿ ಮಾತನಾಡುವಂತೆ ಬರೆಯುತ್ತಿದ್ದುದು ಉಂಟು. ಇವೆಲ್ಲವೂ ಇದ್ದರೂ ಈ ಐದು ದಶಕಗಳಲ್ಲಿ ಇಂತಹ ಬದಲಾವಣೆಯ ಸಾಧ್ಯತೆಗಳು ಅಗಾಧ ಪ್ರಮಾಣದಲ್ಲಿ ಹೆಚ್ಚಿಕೊಂಡಿವೆ.

ಬರಹ ಮತ್ತು ಮಾತುಗಳ ನಡುವೆ ಪ್ರಯೋಗದ ಹಂತದಲ್ಲಿ ಇರುವ ಬದಲಾವಣೆ ಮತ್ತು ಪಲ್ಲಟಗಳನ್ನು ಗಮನಿಸುವಾಗಲೇ ಭಾಷಿಕ ನೆಲೆಯಲ್ಲಿ ಅವುಗಳಿಗೆ ಇರುವ ಇನ್ನಷ್ಟು ವ್ಯತ್ಯಾಸಗಳನ್ನು ಗುರುತಿಸಬೇಕು. ಬರಹದ ಪದಕೋಶ ಸಾಕಷ್ಟು ಪ್ರಮಾಣದಲ್ಲಿ ಮಾತಿನ ಪದಕೋಶಕ್ಕಿಂತ ಬೇರೆಯಾಗಿರುತ್ತದೆ. ಬೇರೆ ಬೇರೆ ಪದಗಳನ್ನು ಬಳಸುವ ಜೊತೆಗೆ ಒಂದೇ ಪದದ ಭಿನ್ನ ರೂಪಗಳಲ್ಲಿ ಒಂದನ್ನು ಮಾತಿನಲ್ಲೂ ಇನ್ನೊಂದನ್ನು ಬರಹದಲ್ಲೂ ಬಳಸುತ್ತೇವೆ. ಈ ವ್ಯತ್ಯಾಸ ಅಭ್ಯಾಸಯೋಗ್ಯವಾದದ್ದು. ಏಕೆಂದರೆ ಬೇರೆ ಬೇರೆ ಉದ್ದೇಶಗಳಿಗಾಗಿ ಬರೆಯುತ್ತಿರುವವರು ಈ ಸೌಲಭ್ಯವನ್ನು ಬಳಸಿಕೊಂಡು ಸೂಕ್ಷ್ಮ ರೀತಿಯ ಪರಿವರ್ತನೆಗಳನ್ನು ಮಾಡಿಕೊಳ್ಳಬಹುದು.

ಕನ್ನಡದಲ್ಲಿ ಈ ಬಗೆಯ ತರಬೇತು ಇಲ್ಲವೇ ಇಲ್ಲ. ಎಲ್ಲೆಲ್ಲಿ ಮಾತಾಗಿ ಅಥವಾ ಮಾತಾಡಿದ ರೀತಿಗೆ ಬದಲಾಗುತ್ತದೆಯೋ ಅಂತಹ ಕಡೆಗಳಿಗೆ ಸೂಕ್ತವಾದ ರೀತಿಯ ಬರವಣಿಗೆ ಮಾತಾಗಬೇಕೆಂಬ ಅರಿವು ಇಲ್ಲ. ಒಂದು ವೇಳೆ ಅರಿವಿದ್ದರೂ ಅದನ್ನು ನಿರ್ವಹಿಸಲು ಅನುಕೂಲವಾಗುವ ಪರಿಕರಗಳು ಇಲ್ಲವಾಗಿವೆ. ಈಗಾಗಲೇ ಉದಾಹರಿಸಿ ದಂತೆ ಟಿ.ವಿ.ವಾರ‍್ತಾವಾಚಕರ ಶೈಲಿಯನ್ನು ಗಮನಿಸಿದರೆ ಅವರ ಮಾತಿನ ಲಯ ಓದಿನ ಲಯ ಹೌದು. ಆದರೆ ನೋಡಿಕೊಂಡು ಓದುತ್ತಿರುವವರ ಲಯ. ವಾಸ್ತವವಾಗಿ ಅವರು ಓದಲು ಅನುಕೂಲವಾಗುವ ತಂತ್ರಜ್ಞಾನ ಅವರಿಗೆ ಲಭ್ಯವಿರುತ್ತದೆ. ಆದರೆ ಅದೇ ಮಾಧ್ಯಮದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುವ ನಿರೂಪಕರ ಮಾತಿಗೆ ಬಂದರೆ ಅವರಿಗೆ ತಮ್ಮ ನಿರೂಪಣೆಯನ್ನು ಮಾಡಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗಿರುತ್ತದೆ. ಆದರೆ ಅವರು ಒಂದು ಸ್ಕ್ರಿಪ್ಟಿಗೆ ಬದ್ಧರಾಗಿರಬೇಕು. ಅವರು ಆಡಬೇಕಾದ ಮಾತುಗಳನ್ನು ಮೊದಲೇ ಬರೆದು ಸಿದ್ಧಪಡಿಸಲಾಗಿರುತ್ತದಾದರೂ ಕಾರ್ಯಕ್ರಮ ಸಿದ್ಧಗೊಳ್ಳುವಾಗ ಅಥವಾ ಪ್ರಸಾರಗೊಳ್ಳುವಾಗ ನಿರೂಪಕರಿಗೆ ಅದು ಲಭ್ಯವಿರುವುದಿಲ್ಲ. ಒಂದು ವೇಳೆ ಅವರಿಗೆ ಸಿದ್ಧಪಡಿಸಿದ ಮಾತುಗಳು ಬರಹದ ಹಳೆಯ ಲಕ್ಷಣವನ್ನೇ ಬಳಸಿಕೊಂಡಿದ್ದರೆ ಆಗ ಸಂವಹನಕ್ಕೆ ಅಗಾಧ ಪ್ರಮಾಣದ ಪೆಟ್ಟು ಬೀಳುತ್ತದೆ. ನಿರೂಪಣೆ ಅಸಹಜವಾಗುತ್ತದೆ.

ಈ ಸಮಸ್ಯೆ ನಮ್ಮ ದೃಶ್ಯಮಾಧ್ಯಮಗಳಲ್ಲೂ ಇರುವುದನ್ನು ಸುಲಭವಾಗಿ ಗಮನಿಸಬಹುದು. ಒಂದೆರಡು ಸರಳ ಉದಾಹರಣೆಗಳನ್ನು ಗಮನಿಸೋಣ. ಕನ್ನಡ ಮಾತಿನಲ್ಲಿ ಯಾರೂ ಮತ್ತು ಎಂಬ ಪದವನ್ನು ಬಳಸುವುದಿಲ್ಲ. ಅಂದರೆ ಈ ಪದವನ್ನು ಉಚ್ಚರಿಸುವುದಿಲ್ಲ ಎಂದಲ್ಲ. ಕನ್ನಡ ಮಾತಿನ ಲಯದಲ್ಲಿ ಈ ಪದಕ್ಕಿರುವ ಅರ್ಥದ ನಿಯೋಗನ್ನು ನಿರ್ವಹಿಸಲು ಬೇರೆಯ ಪರಿಕರಗಳೇ ಇವೆ. ಹಾಗಾಗಿ ಮಾತಿನಲ್ಲಿ ಅದನ್ನು ಬಳಸಬೇಕಾದ ಪ್ರಸಂಗ ಬರುವುದಿಲ್ಲ. ಆದರೆ ಈಗ ಯಾವುದೇ ವಾರ್ತಾ ವಾಚನದ ಮಾದರಿಯನ್ನು ಕೇಳಿಸಿಕೊಂಡರೆ ಅಲ್ಲಿ ಈ ಪದ ಬಳಕೆಯಾಗು ವುದನ್ನು ಗುರುತಿಸಬಹುದು. ಅದು ಓದುವವರ ದೋಷವಲ್ಲ. ಅವರಿಗೆ ಬರೆದುಕೊಟ್ಟದ್ದೇ ಹಾಗೆ. ಅದನ್ನು ಅವರು ಓದುತ್ತಿದ್ದಾರೆ. ಅಂದರೆ ಓದಿಕೊಳ್ಳಲು ಸಿದ್ಧವಾದ ಬರಹವನ್ನು ಓದಿ ಹೇಳಲು ಬಳಸುತ್ತಿದ್ದೇವೆ. ಇಂತಹದೇ ಇನ್ನೂ ಹಲವು ಉದಾಹರಣೆಗಳನ್ನು ಗುರುತಿಸಬಹುದು. ಮುಖ್ಯವಾಗಿ ಸಂಕಥನ ಸೂಚಕಗಳು  ಮಾತು ಮತ್ತು ಬರಹಗಳಲ್ಲಿ ಹೇಗೆ ಬಳಕೆಯಾಗುತ್ತವೆ; ಅವುಗಳ ಪ್ರಸಾರದಲ್ಲಿ ಇರುವ ವ್ಯತ್ಯಾಸಗಳೇನು ಎಂಬ ಅರಿವು ಇಲ್ಲದಿದ್ದರೆ ಓದಿ ಹೇಳುವ ಬರಹ ಎಂಬ ಹೆಸರಿನಲ್ಲಿ, ಈಗಾಗಲೇ ಹೇಳಿದಂತೆ ಓದಿಕೊಳ್ಳುವ ಬರಹವನ್ನು ಸೃಷ್ಟಿಸಿಬಿಡುತ್ತೇವೆ.

ಈಗ ಬರಹದ ಲಕ್ಷಣವನ್ನು ಗುರುತಿಸುತ್ತ್ತ ಖಚಿತತೆ ಮತ್ತು ಸಂಕ್ಷಿಪ್ತತೆಗಳು ಅದರ ಒಂದು ಮುಖ್ಯ ಲಕ್ಷಣವೆಂದು ಹೇಳಿದ್ದೆವು. ಕನ್ನಡದಲ್ಲಿ ಈ ಲಕ್ಷಣ ಕೂಡ ಬದಲಾಗಿದೆ. ಬರಹ ಅಗಾಧ ಪ್ರಮಾಣದಲ್ಲಿ ಸಿದ್ಧಗೊಂಡು ನಾಶವಾಗುತ್ತಿರುವ ಮಾತು ಬದಿಗಿರಲಿ. ಈ ಕ್ಷಣದಲ್ಲಿ ನಮ್ಮ ಓದಿಗೆಂದು ಸಿದ್ಧವಾಗುವ ಬರವಣಿಗೆಯಲ್ಲಿ ಅಗಾಧ ಪ್ರಮಾಣದಲ್ಲಿ ನಿರುಪಯುಕ್ತ ಅಂಶಗಳು ಇರುತ್ತವೆ. ಈ ನಿರುಪಯುಕ್ತ ಎಂದರೆ, ಬರವಣಿಗೆಯಲ್ಲಿ ಯಾವ ಭಾಗವನ್ನು ಓದದೇ ಬಿಟ್ಟರೂ ಅರ್ಥ ಸಂವಹನಕ್ಕೆ ಅಡ್ಡಿಯಾಗದಿರುವುದು ಎಂದೇ ಅರ್ಥ. ಪ್ರಯೋಗಾರ್ಥ ಒಂದು ದಿನಪತ್ರಿಕೆಯನ್ನು ಗಮನಿಸಿ. ಸರಾಸರಿ ಹತ್ತು ಪುಟಗಳು ಮುದ್ರಣಗೊಂಡಿದ್ದರೆ ಜಾಹೀರಾತುಗಳು ಸೇರಿದಂತೆ ಅದರಲ್ಲಿ ಲಕ್ಷಗಟ್ಟಲೇ ಪದಗಳು ಮುದ್ರಣಗೊಂಡಿರುತ್ತವೆ. ಆದರೆ ಆ ಎಲ್ಲ ಪದಗಳನ್ನು ಒಬ್ಬರೂ ಓದುವುದಿಲ್ಲ. ಎಷ್ಟೋ ಭಾಗಗಳ ಮೇಲೆ ಸುಮ್ಮನೇ ಕಣ್ಣಾಡಿಸುತ್ತೇವೆ. ಗಮನವಿಟ್ಟು ಯಾವುದಾದರೂ ಭಾಗವನ್ನು ಓದಿದರೂ, ಉದಾಹರಣೆಗೆ ಒಂದು ವರದಿ, ಅಲ್ಲಿಯೂ ಇರುವ ಎಲ್ಲ ಪದಗಳನ್ನು ವಾಕ್ಯಗಳನ್ನು ಓದುವುದಿಲ್ಲ. ಹಾಗೆ ಓದದಿದ್ದರೂ ಅರ್ಥ ಸಂವಹನಕ್ಕೆ ಅಡ್ಡಿಯಾಗುವುದಿಲ್ಲ. ಹಾಗೆ ನೋಡಿದರೆ ಓದುವವರು ಹೀಗೆ ಎಲ್ಲವನ್ನು ಓದದಿರಲಿ ಎಂಬ ಅಂತರ್ಗತ ಉದ್ದೇಶ ಅಂತಹ ಬರವಣಿಗೆಯಲ್ಲಿ ಇರುತ್ತದೆ. ಒಂದು ವೇಳೆ ಅಕ್ಷರಕ್ಷರವನ್ನು ಬಿಡದೇ ಒಂದು ಪತ್ರಿಕೆಯನ್ನು ಓದುತ್ತೇವೆಂದರೆ ಅದೊಂದು ಅಸಹಜ ಕೆಲಸವೆಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅಂದರೆ ಈ ಬಗೆಯ ಬರಹಗಳಲ್ಲಿ ಖಚಿತತೆ ಮತ್ತು ಸಂಕ್ಷಿಪ್ತತೆ ಎನ್ನುವ ಮಾತಿಗೆ ಹೊಸ ಅರ್ಥಗಳು ಅಗತ್ಯವಾಗುತ್ತವೆ. ಈ ಮೊದಲು ಹೇಳಿದ ಹಾಗೆ ಓದಿ ಹೇಳುವ ಉದ್ದೇಶಕ್ಕಾಗಿ ರೂಪಗೊಳ್ಳುವ ಬರಹಗಳು ತಮ್ಮೊಳಗೆ ನಿರರ್ಥಕತೆಯ ಮತ್ತು ನಿರುಪಯುಕ್ತತೆಯ ಅಂಶಗಳನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಿಕೊಂಡಿರುತ್ತವೆ. ಅಷ್ಟೇ ಆದರೂ ಅವುಗಳಲ್ಲಿ ನಿಜ ಓದಿಗೆ ನೆರವಾಗುವ ಬದಲಾವಣೆಗಳು ಇನ್ನೂ ಆಗಬೇಕಾಗಿದೆ.

ಕನ್ನಡ ಮಾತು ಮತ್ತು ಬರಹಗಳಲ್ಲಿ ಆಗಿರುವ ಈ ಪರಿವರ್ತನೆಗಳ ಪರಿಣಾಮವನ್ನು ಮತ್ತೊಂದು ರೀತಿಯಿಂದ ಪರಿಗಣಿಸಬಹುದು. ಕನ್ನಡಿಗರು ಓದುವ ಹವ್ಯಾಸವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಮಾತನ್ನು ಆಗಾಗ ಕೇಳುತ್ತೇವೆ. ಅಕ್ಷರಸ್ಥರಾದವರೂ ತಮ್ಮ ಎಲ್ಲ ಭಾಷಾ ಕೌಶಲ್ಯಗಳನ್ನು ಸಮ ಪ್ರಮಾಣದಲ್ಲಿ ಯಾವ ಕಾಲದಲ್ಲೂ ಬಳಸುವುದಿಲ್ಲ. ಹಾಗೆ ಬಳಸಬೇಕೆಂಬ ಒತ್ತಾಯವೂ ಇರುವುದಿಲ್ಲ. ಬಳಸುವ ಅವಕಾಶಗಳು ಇರುವುದಿಲ್ಲ. ಆದರೂ ಓದುವ ಹವ್ಯಾಸ ಕಡಿಮೆಯಾಗಿದೆ ಎಂಬ ತೀರ್ಮಾನಕ್ಕೆ ಬರುವವರು ನೀಡುವ ತರ್ಕ ಸರಳವಾಗಿದೆ. ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳು ಖರ್ಚಾಗುವುದು ಕಷ್ಟ. ಪತ್ರಿಕೆಗಳಿಗೆ ಪ್ರಸಾರ ಸಂಖ್ಯೆ ಕಡಿಮೆ. ಈ ಅಂಕಿ ಅಂಶಗಳನ್ನು ನೀಡುವಾಗ ಸಾಮಾನ್ಯವಾಗಿ ಬೇರೊಂದು ಭಾಷೆಯ ನಿದರ್ಶನವನ್ನು ನೀಡುವುದುಂಟು. ಪ್ರಮಾಣದಲ್ಲಿ ಅಷ್ಟಿಷ್ಟು ವ್ಯತ್ಯಾಸವಿದ್ದರೂ ಎಲ್ಲ್ಲ ಪ್ರಾಂತೀಯ ಭಾಷೆಯಲ್ಲೂ ಜನರು ಓದುವುದು ಕಡಿಮೆ ಮತ್ತು ಹಾಗೆ ಓದಲು ಬಳಸುವ ಸಾಮಗ್ರಿಯೂ ಸೀಮಿತ ವಲಯಕ್ಕೆ ಮಿತಗೊಂಡಿರುತ್ತದೆ. ಅದರ ಅಗತ್ಯ ಬಿದ್ದ ಹೊರತು ಓದುವುದನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭಗಳು ಕಡಿಮೆ. ಆದರೆ ಹೀಗೆ ಮಾಡುವ ಜನರು ಭಾಷೆಯೊಡನೆ ಸಂಪರ್ಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಬರುವುದಿಲ್ಲ. ಅನೌಪಚಾರಿಕವಾಗಿ ಮಾತಾಡುವುದು ಮತ್ತು ಮಾತು ಕೇಳುವುದು ಇವುಗಳನ್ನು ಹೊರತುಪಡಿಸಿಯೂ ಜನರು ಭಾಷೆಯೊಡನೆ ಅಗಾಧ ಪ್ರಮಾಣದಲ್ಲಿ ಸಂಪರ್ಕ ಪಡೆದಿರುತ್ತಾರೆ. ಆದರೆ ಈ ಸಂಪರ್ಕದ ಸ್ವರೂಪ ತೀರ ಇತ್ತೀಚಿನ ದಶಕಗಳಲ್ಲಿ ರೂಪಗೊಂಡಿರುವುದು.

ಹೀಗೆ ಜನರು ಮಾತಿನ ಸಂಪರ್ಕ ಪಡೆಯುವ ವಲಯಗಳನ್ನು ಸ್ಥೂಲವಾಗಿ ದೃಶ್ಯ ಮತ್ತು ಶ್ರವ್ಯ ಎಂದು ವಿಭಜಿಸಬಹುದು. ಈ ವಿಭಜನೆ ಕೊಂಚ ದಾರಿ ತಪ್ಪಿಸುವಂತಹದ್ದು. ಏಕೆಂದರೆ ಶುದ್ಧ ದೃಶ್ಯಾನುಭವದಲ್ಲಿ ಭಾಷೆಗೆ ಜಾಗವಿಲ್ಲ. ಆದ್ದರಿಂದ ಒಂದು ಕಡೆ ಕಣ್ಣು ಕಿವಿಗಳೆರಡನ್ನು ಬಳಸಿದರೆ ಮತ್ತೊಂದು ಕಡೆ ಹೆಚ್ಚಾಗಿ ಕಿವಿಯನ್ನು ಮಾತ್ರ ಬಳಸುತ್ತೇವೆ ಎಂದು ಹೇಳುವುದು ಸರಿ. ದೃಶ್ಯ ಎಂದು ಗುರುತಿಸುವ ವಲಯಗಳು ಚಲನಚಿತ್ರ, ರಂಗಭೂಮಿ ಮತ್ತುಟೆಲಿವಿಜನ್. ಶುದ್ಧ ಶ್ರವ್ಯ ಎನ್ನುವುದು ಮುಖ್ಯವಾಗಿ ರೇಡಿಯೋ. ಇಲ್ಲೆಲ್ಲ್ಲ ಕೇಳುಗರು ನೋಡುಗರು ಇರಲೇ ಬೇಕು. ಭಾಷೆಗೊಂದು ಮಹತ್ವದ ಸ್ಥಾನವಿದೆ. ಆದರೆ ಇಲ್ಲಿ ಭಾಷೆ ನಮ್ಮ ಕಿವಿಯ ಅನುಭವ ಆಗಿದ್ದರೂ ವಾಸ್ತವವಾಗಿ ಈ ಮಾಧ್ಯಮಗಳಿಗಾಗಿ ಮೊದಲು ಬರಹ ರೂಪದಲ್ಲಿ ಸಾಮಗ್ರಿ ಸಿದ್ಧವಾಗಬೇಕು. ಹಾಗೆ ಸಿದ್ಧಗೊಂಡ ಸಾಮಗ್ರಿಯನ್ನು ಜನರು ಮಾತಾಡುತ್ತಾರೆ ಅಥವಾ ಓದಿ ಹೇಳುತ್ತಾರೆ, ಅಂದರೆ ನೋಡುಗ/ಕೇಳುಗ ಸಮುದಾಯ ಕನ್ನಡ ಬರವಣಿಗೆಯನ್ನು ಪರೋಕ್ಷವಾಗಿ ಓದುತ್ತಿವೆ ಎಂದೇ ತಿಳಿಯಬೇಕು. ಜನರೇ ಬರೆದದ್ದನ್ನು ಓದುವುದಿಲ್ಲ. ಅವರಿಗಾಗಿ ಇತರರು ಅದನ್ನು ಉಚ್ಚರಿಸುತ್ತಾರೆ. ಉಳಿದವರು ಕೇಳುತ್ತಾರೆ. ಕನ್ನಡ ಸಂಸ್ಕೃತಿಗೆ ಇದು ಅಪರಿಚಿತವಾದ ಸಂದರ್ಭವಲ್ಲ. ಈ ಹಿಂದೆಯೂ ಇಂತಹ ಪ್ರಸಂಗಗಳು ಇದ್ದವು. ಉದಾಹರಣೆಗೆ ಯಕ್ಷಗಾನ ಪ್ರಸಂಗವೊಂದನ್ನು ಕೃತಿಕಾರರೊಬ್ಬರು ರಚಿಸಿದ್ದಾರೆಂದುಕೊಳ್ಳೋಣ. ಆ ಪ್ರಸಂಗದ ಬರಹರೂಪ ತಾಳೆಗರಿಯಲ್ಲಿ ಅಥವಾ ಕೋರಿಕಾಗದದ ಪ್ರತಿಯಲ್ಲಿ ಇರಬಹುದು. ಅದನ್ನು ಕಣ್ಣೋದು ಮಾಡುವ ಜನರು ಅಷ್ಟಿಷ್ಟು ಇದ್ದಾರೆ. ಆದರೆ ಆ ಪ್ರಸಂಗವನ್ನು ರಂಗದ ಮೇಲೆ ತಂದಾಗ ಭಾಗವತರು ವಾದ್ಯಗಾರರೊಡನೆ ಹಾಡಲು ತೊಡಗುತ್ತಾರೆ. ಈಗ ಬರೆದದ್ದು ಸಾವಿರಾರು ಜನರ ಕಿವಿಯ ಮೂಲಕ ಅವರಿಗೆ ತಲುಪುತ್ತದೆ. ಹೀಗೆಯೇ ಸುಮಾರು ಒಂದು ಸಾವಿರ ವರ್ಷ ಕಾಲ ಕನ್ನಡ ಸಂಸ್ಕೃತಿ ಬರಹವನ್ನು ತಾನೇ ನೇರವಾಗಿ ಓದದೆ ಓದುವವರ ಮೂಲಕ ಪಡೆದುಕೊಳ್ಳುತ್ತಿತ್ತು.

ಈಗ ಇಂತಹದೇ ಸಂದರ್ಭ ಇದೆ ಎಂದು ಹೇಳಿದರೆ ಸಾಕಾಗುವುದಿಲ್ಲ. ಈಗಿನ ಸಂದರ್ಭದಲ್ಲಿ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಆ ವ್ಯತ್ಯಾಸಕ್ಕೆ ತಂತ್ರಜ್ಞಾನ ಕಾರಣವಾಗಿದೆ. ಈ ಹಿಂದಿನ ಸಂದರ್ಭದಲ್ಲಿ ನೆನಪು ಬಹುದೊಡ್ಡ ಪಾತ್ರ ವಹಿಸುತ್ತಿತ್ತು. ಬರೆದುದನ್ನು ನಿರೂಪಿಸುವವರು ಮತ್ತು ಕೇಳುವವರು ಇಬ್ಬರಲ್ಲೂ ನೆನಪು ವ್ಯಾಪಕವಾಗಿ ಪ್ರವೃತ್ತವಾಗುತ್ತದೆ. ತಂತ್ರಜ್ಞಾನದ ನೆರವಿನ ಇಂದಿನ ನವ ಮೌಖಿಕತೆಯಲ್ಲಿ ನೆನಪಿಗೆ ಅಷ್ಟು ಪ್ರಧಾನ ಪಾತ್ರವಿಲ್ಲ. ಅಲ್ಲದೇ ಹಿಂದಿನ ಸಂದರ್ಭದಲ್ಲಿ ನಿರೂಪಣೆ ಮತ್ತು ಅದನ್ನು ಪಡೆಯುವ ಶ್ರೋತೃವರ್ಗ ಒಂದೇ ಕಾಲದೇಶಕ್ಕೆ ಸೇರಿರಬೇಕಿತ್ತು. ಆ ಪ್ರದರ್ಶನವನ್ನು ಮರಳಿ ಆವೃತ್ತಿಸಬಹುದೇ ಹೊರತು ಅದನ್ನೇ ಇನ್ನೊಮ್ಮೆ ಪಡೆಯುವುದು ಅಸಾಧ್ಯ. ಪ್ರತಿ ಪ್ರದರ್ಶನವೂ ಭಿನ್ನವೇ ಆಗುತ್ತಿತ್ತು. ತಂತ್ರಜ್ಞಾನವು ನವಮೌಖಿಕತೆಯಲ್ಲಿ ನಿರೂಪಕರು ಮತ್ತು ಕೇಳುಗರು ಒಂದೇ ಕಾಲ ಮತ್ತು ದೇಶಕ್ಕೆ ಸೇರಿರಬೇಕೆಂದು ಶರತ್ತು ಹಾಕುವುದಿಲ್ಲ. ಪ್ರದರ್ಶನಗಳು ಯಥಾವತ್ತಾಗಿ ಮರಳಿ ಆವರ್ತನಗೊಳ್ಳುವುದು ಈಗ ಸಾಧ್ಯ. ಇನ್ನೂ ಕೆಲವು ವ್ಯತ್ಯಾಸಗಳನ್ನು ಉಂಟುಮಾಡುವಲ್ಲಿ ತಂತ್ರಜ್ಞಾನ ಕಾರಣವಾಗಿದೆ. ಬರೆದುದನ್ನು ಮಾತಾಡುವ ವ್ಯಕ್ತಿ ತನ್ನ ಪ್ರದರ್ಶನವನ್ನು ಪರಿಷ್ಕರಿಸಿಕೊಳ್ಳಲು ಅವಕಾಶಗಳಿವೆ. ಆದ್ದರಿಂದ ಕೇಳುಗ/ ನೋಡುಗರಿಗೆ ಪ್ರದರ್ಶನ ರೂಪುಗೊಳ್ಳುವ ಸಂದರ್ಭವನ್ನೇ ತಮ್ಮ ಅನುಭವದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂಬ ಒತ್ತಾಯವಿಲ್ಲ.

ಒಟ್ಟಾರೆ ಕನ್ನಡ ಸಮುದಾಯ ಕನ್ನಡ ಬರವಣಿಗೆಯನ್ನು ಅದರ ಮಾತಿನ ಸ್ತರದಲ್ಲಿ ತನ್ನದನ್ನಾಗಿ ಮಾಡಿಕೊಳ್ಳುತ್ತಿದೆ. ಇಂತಹ ಕಡೆ ಬಳಕೆಯಾಗುವ ಕನ್ನಡದ ಬಗೆಗೆ ಕೆಲವು ಮಾತುಗಳನ್ನು ಹೇಳಬಹುದಾಗಿದೆ. ಬೇರೊಂದು ಪ್ರಸಂಗದಲ್ಲಿ ಕನ್ನಡದ ವೈವಿಧ್ಯಮಯ ಪ್ರಭೇದಗಳು ಪ್ರಮಾಣ ಭಾಷೆಯ ಒತ್ತಡದಿಂದಾಗಿ ತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವ ಸಂಗತಿಯನ್ನು ಗಮನಿಸಿದ್ದೆವು. ಆದರೆ ಈ ನವಮೌಖಿಕ ಪರಂಪರೆಯು ಕನ್ನಡ ಪ್ರಭೇದಗಳನ್ನು ತನ್ನದೇ ಆದ ರೀತಿಯಲ್ಲಿ ಬಳಸುತ್ತಿದೆ. ಚಲನಚಿತ್ರಗಳಲ್ಲಿ ರಂಗಭೂಮಿಯಲ್ಲಿ ಈ ಪ್ರಯತ್ನಗಳು ವ್ಯಾಪಕವಾಗಿರುವುದನ್ನು ಸುಲಭವಾಗಿ ಗಮನಿಸಬಹುದು. ಹೀಗೆ ಬಳಸುವಾಗ ಕೆಲವು ಸಾಮಾಜಿಕ ತೀರ್ಮಾನ ಗಳನ್ನು ಬೇಶರತ್ತಾಗಿ ಪಾಲಿಸಲಾಗುತ್ತದೆ ಎಂಬುದೂ ನಿಜ. ಉದಾಹರಣೆಗೆ ಕನ್ನಡದ ಸಾಮಾಜಿಕ ಪ್ರಭೇದಗಳನ್ನು ಚಲನಚಿತ್ರದ ಸಂಭಾಷಣೆಗಳಲ್ಲಿ ಬಳಸಲಾಗುತ್ತದೆ. ಹಾಗೆ ಬಳಸಲು ಕೆಲವು ಪೂರ್ವ ಶರತ್ತುಗಳಿವೆ. ಒಂದು: ಆ ಪಾತ್ರ ಅಶಿಕ್ಷಿತ ಇಲ್ಲವೆ ಗ್ರಾಮೀಣ ಪ್ರದೇಶದಿಂದ ಬಂದಿರಬೇಕು. ಎರಡು: ಸಮಾಜದ ಅಂಚಿನ ವಲಯಕ್ಕೆ ಸೇರಿರಬೇಕು. ಮುಖ್ಯ ಪ್ರವಾಹದ ಪಾತ್ರವಾಗಿರಬಾರದು. ಮೂರು: ಉದ್ದೇಶ ಪೂರ್ವಕವಾಗಿ ನಗೆ ಉಕ್ಕಿಸುವ ಪ್ರಸಂಗಗಳಲ್ಲಿ. ಹೀಗೆ ಭಾಷಾ ಪ್ರಭೇದಗಳನ್ನು ಬಳಸಲಾಗುತ್ತದೆ. ಆದ್ದರಿಂದ ಬರಹರೂಪದಲ್ಲಿ ಕೂಡ ಕನ್ನಡ ಪ್ರಭೇದಗಳು ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ ಎಂದು ತೀರ್ಮಾನಿಸಬಹುದು. ಆದರೆ ಇಲ್ಲಿ ಮತ್ತಷ್ಟು ಸೂಕ್ಷ್ಮ ವಿಶ್ಲೇಷಣೆ ಅಗತ್ಯ. ಮೊದಲನೆಯದಾಗಿ ಅಕ್ಷರಸ್ಥ ಸಮುದಾಯದ ಜನರು ಮಾತ್ರ ಈ ನವಮೌಖಿಕ ಪರಂಪರೆಯ ಶ್ರೋತೃಗಳಲ್ಲ. ಎರಡನೆಯದು ಅವರು ತಮ್ಮ ಕಣ್ಣೋದಿನ ಭಾಗವಾಗಿ ಪ್ರಭೇದಗಳನ್ನು ಎದುರಿಸುತ್ತಿಲ್ಲ. ಅವು ಕಿವಿಗೆ ಮಾತ್ರ ಬೀಳುತ್ತಿವೆ. ಮೂರನೆಯದಾಗಿ ಈ ಪ್ರಭೇದಗಳು ಜನರ ಅನುಭವದ ಭಾಗವಾಗುವಾಗಲೇ ಆ ಪ್ರಭೇದಗಳನ್ನಾಡುವ ವ್ಯಕ್ತಿಗಳ ಬಗೆಗೆ ಈಗಾಗಲೇ ನೀಡಲಾದ ತೀರ್ಮಾನಗಳನ್ನು ಒಪ್ಪಬೇಕಾಗುತ್ತದೆ. ಅಂದರೆ ಹಳ್ಳಿಯವರು ಮತ್ತು ಅಶಿಕ್ಷಿತರು ಮಾತ್ರ ಈ ಉಪಭಾಷೆ ಯನ್ನು ಬಳಸುತ್ತಾರೆ. ಸಮಾಜದ ಅಂಚಿನವರು ಮಾತ್ರ ಈ ಬಗೆಯ ಭಾಷೆಯನ್ನು ಪೋಷಿಸುತ್ತಾರೆ ಎಂಬ ತೀರ್ಮಾನಗಳಿಗೆ ಬರಬೇಕಾಗುತ್ತದೆ. ಇದು ಅಲ್ಲದೇ ಪ್ರಭೇದ ಗಳನ್ನು ಕೇಳುತ್ತಿರುವುದು ಮಾತ್ರ ನಿಜ. ಅವುಗಳನ್ನು ಕಣ್ಣೋದಿನಲ್ಲಿ ಎದುರಿಸಬೇಕಾಗಿಲ್ಲ. ಇದು ಸದ್ಯ ಕನ್ನಡ ಪರಿಸರ ಎದುರಿಸುತ್ತಿರುವ ಮಾತು ಮತ್ತು ಬರಹಗಳ ನಡುವಣ ಇನ್ನೊಂದು ಸಂಘರ್ಷದ ನೆಲೆಯನ್ನು ಮುಂದಿಡುತ್ತದೆ.

ಈ ಸಂಘರ್ಷದಂತೆ ಮಾತು ವೈವಿಧ್ಯಗಳಿಂದ ಕೂಡಿರಬಹುದು. ವೈವಿಧ್ಯ ಅದರ ಜೀವಾಳವಾಗಿರುವಂತೆ ಅದರ ಮಿತಿಯೂ ಹೌದು. ಏಕೆಂದರೆ ವೈವಿಧ್ಯವು ತನಗೆ ತಾನೇ ಆಕರ್ಷಕವಾದ ವಿಷಯ. ಆದರೆ ಅದು ಮತ್ತೇನನ್ನೂ ತನ್ನ ಮೂಲಕ ಸಮರ್ಥಿಸಲಾರದು. ಮತ್ತೆ ಯಾವುದಕ್ಕೂ ಮಹತ್ವ ಪ್ರಧಾನ ಮಾಡಲಾರದು. ವೈವಿಧ್ಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ನಿರಾಕರಿಸುವ ಕಣ್ಣೋದಿನ ಬರಹ ಹೆಚ್ಚು ಅಧಿಕೃತವಾದುದು. ಇಲ್ಲಿ ಅಧಿಕೃತ ಎನ್ನುವ ಮಾತನ್ನು ಅದು ನೀಡುವ ಅನುಭವದ ಧಾರಣಾ ಸಾಮರ್ಥ್ಯವನ್ನು ಗಮನಿಸಿ ಹೇಳಲಾಗಿದೆ. ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಪ್ರಭೇದಗಳನ್ನು ಅಳವಡಿಸಿಕೊಳ್ಳುವ ಬರಹವು ಕೂಡ ಅಧಿಕೃತವೇ ಅಲ್ಲವೇ? ಅಂದರೆ ಸಿನಿಮಾಗಾಗಲೀ ರಂಗಭೂಮಿಗಾಗಲೀ ಸಿದ್ಧಗೊಂಡ ಕೃತಿಗಳಲ್ಲಿ ಈ ಪ್ರಭೇದಗಳು ಬಳಕೆಯಾಗುತ್ತವೆ ಎಂದ ಮೇಲೆ ಅವುಗಳಿಗೆ ಬರಹದ ಲಕ್ಷಣ ಒದಗಿದಂತಲ್ಲವೆ? ಅಲ್ಲ; ಅದು ಹಾಗಲ್ಲ. ಇಲ್ಲಿ ಈ ಮಾಧ್ಯಮಗಳಲ್ಲಿ ಸಿದ್ಧಗೊಳ್ಳುವ ಬರಹಕ್ಕೆ ಮಧ್ಯವರ್ತಿ ಸ್ಥಾನವಿದೆಯೇ ಹೊರತು ಅದೇ ಅಂತಿಮ ಗುರಿಯಾಗಲಾರದು. ಚಲನಚಿತ್ರಗಳ ಸಂಭಾಷಣೆಗಳನ್ನೇ ಯಾರೂ ಒಂದು ಗ್ರಂಥವನ್ನಾಗಿ ಓದಲಾರರು. ಅದರ ಧ್ವನಿವಾಹಿನಿ ಯನ್ನು ದೃಶ್ಯದಿಂದ ಬೇರ್ಪಡಿಸಿ ಪ್ರಸ್ತುತಪಡಿಸಿದರೂ ಅಲ್ಲಿಯೂ ಕಿವಿಯೇ ಮುಖ್ಯವಾಗುತ್ತದೆ. ಈ ಮಾಧ್ಯಮಗಳ ಬಳಕೆಗಾಗಿ ಸಿದ್ಧಗೊಳ್ಳುವ ಬರವಣಿಗೆ ಒಂದು ಸಂಚಾರಿ ಅವಸ್ಥೆಯನ್ನು ಪಡೆದುಕೊಳ್ಳುತ್ತದೆ. ಒಬ್ಬರು ಅದನ್ನು ತಂತ್ರಜ್ಞಾನದ ಚೌಕಟ್ಟಿನಲ್ಲಿ ಉಚ್ಚರಿಸಿ ಬಿಟ್ಟರೆ ಅನಂತರ ಈ ಬರವಣಿಗೆಗೆ ಯಾವ ಬೆಲೆಯೂ ಇರುವುದಿಲ್ಲ. ಹೆಚ್ಚೆಂದರೆ ಅಧ್ಯಯನಕಾರರಿಗೆ ಸರಕಾಗಿ ಮಾತ್ರ ಬೇಕಾಗಬಹುದು.

ಶುದ್ಧ ಶ್ರವ್ಯ ನೆಲೆಯ ರೇಡಿಯೋ ಕೂಡ ತನ್ನ ಹಲವು ಕಾರ್ಯಕ್ರಮಗಳಲ್ಲಿ ಲಿಖಿತ ರೂಪವನ್ನು ಮೌಖಿಕವಾಗಿ ಪರಿವರ್ತಿಸಿಕೊಳ್ಳುತ್ತದೆ. ಕಳೆದ ಐದು ದಶಕಗಳಲ್ಲಿ ರೇಡಿಯೋ ತನ್ನ ಸಾಮಾಜಿಕ ಸ್ಥಾನವನ್ನು ಗಳಿಸಿ, ಅದನ್ನು ಕಳೆದುಕೊಂಡು ಮತ್ತೆ ಪಡೆದುಕೊಳ್ಳುವ ನೆಲೆಯಲ್ಲಿದೆ. ಈಗ ಮರಳಿ ನೆಲೆಗೊಂಡಿರುವ ರೇಡಿಯೋದಲ್ಲಿ ನಾವು ತಿಳಿದಂತೆ ಬರಹವನ್ನು ಪೂರ್ವಭಾವಿಯಾಗಿ ಸಿದ್ಧಪಡಿಸಬೇಕಾದ ಅಗತ್ಯ ಇಲ್ಲ. ಅಲ್ಲಿ ರೇಡಿಯೋ ಜಾಕಿಗಳು ನಿರರ್ಗಳವಾಗಿ ಮತ್ತು ಸ್ವಯಂಸ್ಫ್ಪೂರ್ತವಾಗಿ ಮಾತಾಡುತ್ತಾರೆ. ಅದಕ್ಕೂ ಬರಹಕ್ಕೂ ಸಂಬಂಧವಿಲ್ಲ. ಈ ಪುನರಾವತಾರ ಪಡೆದ ಎಫ್.ಎಮ್. ರೇಡಿಯೋಗಳಲ್ಲಿ ಭಾಷೆ ಇರುವುದು ಕೇವಲ ಹೊದಿಕೆಯಾಗಿ. ಅಲ್ಲಿಯ ಬಹುಪಾಲು ಕಾರ್ಯಕ್ರಮಗಳು ಗೀತಗಳನ್ನು ಅವಲಂಬಿಸುತ್ತವೆ. ಆದ್ದರಿಂದ ಇಲ್ಲಿ ನವಮೌಖಿಕತೆಯ ಸಂದರ್ಭದ ಲಕ್ಷಣಗಳು ಮತ್ತೆ ಪರಿವರ್ತನೆ ಹೊಂದುತ್ತಿರುವುದು ಗೋಚರಿಸುತ್ತಿರುತ್ತದೆ. ನಿರೂಪಣೆಗಳನ್ನು ಕುರಿತ ಅಧ್ಯಾಯದಲ್ಲಿ ಮತ್ತೆ ಈ ಚರ್ಚೆಯನ್ನು ಬೆಳೆಸಲಿದ್ದೇವೆ.

ಅಂದರೆ ನಾವೀಗ ಭಾಷೆಯ ಮೂರು ರೂಪಗಳನ್ನು ಒಪ್ಪುತ್ತಿದ್ದೇವೆ. ಒಂದು: ಮಾತು. ಎರಡು: ಬರಹ. ಮೂರು: ಬರಹವಾಗಿಯೂ ಮಾತಾಗುವುದು. ಮೂರನೆಯ ಬಗೆಯನ್ನು ನಾವು ಇದುವರೆಗೂ ಗಮನಿಸಿ ಅದರ ಲಕ್ಷಣ ನಿರ್ವಚನವನ್ನು ಮಾಡಿದ್ದೇವೆ. ಈ ಮೂರು ಪ್ರಭೇದಗಳಲ್ಲಿ ಬಳಸುವ ಕನ್ನಡದ ಬಗೆಗೆ ಇನ್ನಷ್ಟು ಸಂಗತಿಗಳನ್ನು ತಿಳಿಯಬಹುದು. ಮಾತಿನಲ್ಲಿ ಮತ್ತು ಮಾತಾಗುವ ಬರಹದಲ್ಲಿ ಕನ್ನಡದ ಶುದ್ಧತೆಯ ಬಗೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಇಲ್ಲಿ ಶುದ್ಧತೆ ಎಂಬ ಪದದ ಅರ್ಥವ್ಯಾಪ್ತಿಯನ್ನು ಸ್ಪಷ್ಟಪಡಿಸಬೇಕು. ಇದೊಂದು ಶುದ್ಧ ಪರಿಕಲ್ಪನೆಯಲ್ಲ. ಸಾಪೇಕ್ಷವಾದುದು. ಅವು ಇರುವುದು ಅಥವಾ ಇಲ್ಲದಿರುವುದು ಒಂದು ಅಂತಸ್ಥ ಗುಣವಾಗಿರದೇ ಹೊರಗಿನಿಂದ ನೋಡಿದಾಗ ಕಾಣುವ ಲಕ್ಷಣಗಳಾಗಿವೆ. ಕೆಲವು ಅಂತಹ ಲಕ್ಷಣಗಳನ್ನು ನೋಡೋಣ.

ಮಾತಿನಲ್ಲಿ ಮತ್ತು ಮಾತಾಗುವ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳ ನುಡಿಮಿಶ್ರಣಕ್ಕೆ ವಿರೋಧ ಕಡಿಮೆ. ಅದನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಮಾಧ್ಯಮಗಳು ಬಳಸಿಕೊಳ್ಳುತ್ತಿವೆ. ಈ ಪ್ರವೃತ್ತಿ ಕನ್ನಡದ ಮಟ್ಟಿಗೆ ಸುಮಾರು ಐವತ್ತು ವರ್ಷಗಳಷ್ಟು ಹಳೆಯದ್ದು. ನಿದರ್ಶನಕ್ಕಾಗಿ ೧೯೫೮ರಲ್ಲಿ ಸಿದ್ಧಗೊಂಡು ಬಿಡುಗಡೆಯಾದ ಅಣ್ಣ ತಂಗಿ ಎಂಬ ಚಿತ್ರವನ್ನು  ಅದರ ಭಾಷಾ ನೆಲೆಯಲ್ಲಿ ನೋಡಬಹುದು. ಅದು ಹಳ್ಳಿಯ ಕುಟುಂಬಗಳ ಕತೆ. ಹಾಗಾಗಿ ಆ ಹೊತ್ತಿಗೆ ಹಳ್ಳಿಯ ಭಾಷೆಯೆಂದು ತಿಳಿದಿದ್ದ ಮಾದರಿಯೊಂದನ್ನು ಬಳಸಿಕೊಳ್ಳುತ್ತಾರೆ. ಇಂಗ್ಲಿಶ್ ಪ್ರವೇಶಿಸಿರುವುದು ಕಲಿತವರ ನುಡಿಯಲ್ಲಿ. ನಗರಕ್ಕೆ ಹೋಗಿ ಓದಿ ಬಂದ ಹುಡುಗ-ಹುಡುಗಿ ಪರಸ್ಪರ ಮಾತಾಡಿ ಕೊಳ್ಳುವುದು ಈ ನುಡಿಬೆರಕೆಯ ಕನ್ನಡದಲ್ಲಿ. ಅವರು ಇತರರೊಡನೆ ಮಾತಾಡುವಾಗಲೂ ತಮ್ಮನ್ನು ತಾವು ಬೇರೆ ಮಾಡಿಕೊಳ್ಳಲು ಇಂಗ್ಲಿಶನ್ನು ಕನ್ನಡದ ನಡುವೆ ಬಳಸುತ್ತಾರೆ. ಹೆಚ್ಚು ವಿವರಗಳಿಗೆ ಹೋಗುವುದು ಅನಗತ್ಯ. ಮುಖ್ಯ ಸಂಗತಿ ಇಷ್ಟೇ. ಇಂಗ್ಲಿಶ್ ಕನ್ನಡಗಳ ನುಡಿಬೆರಕೆ ಉದ್ದೇಶಪೂರ್ವಕವಾಗಿ ಬಳಕೆಯಾದರೂ ಅದು ದೋಷಪೂರ್ಣ ಭಾಷಾ ಬಳಕೆಯೆಂದು ಪರಿಭಾವಿತವಾಗುವುದಿಲ್ಲ. ಆದರೆ ಶುದ್ಧ ಬರಹಗಳಲ್ಲಿ ಅಂದರೆ ಕಣ್ಣೋದಿನ ಬರಹಗಳಲ್ಲಿ ಇಂಗ್ಲಿಶ್ ಕನ್ನಡ ನುಡಿಬೆರಕೆಯನ್ನು ಅಶುದ್ಧ ಭಾಷಾ ಪ್ರಯೋಗವೆಂದೇ ತೀರ್ಮಾನಿಸಲಾಗುತ್ತದೆ. ಮತ್ತೆ ನಮ್ಮ ಹಳೆಯ ವ್ಯಾಖ್ಯೆಗೆ ಮರಳುವುದಾದರೆ ವೈವಿಧ್ಯದ ನೆಲೆಯಲ್ಲಿ ಕನ್ನಡ, ಇಂಗ್ಲಿಶ್ ಬೆರಕೆ ದೋಷವಲ್ಲ. ಅಧಿಕೃತ ನಿಯತತೆಯ ನೆಲೆಯಲ್ಲಿ ಅದು ದೋಷಪೂರ್ಣವೆಂದು ತಿಳಿಯಲಾಗುತ್ತಿದೆ

ಶುದ್ಧ ಬರಹದಲ್ಲಿ ಅನ್ಯಭಾಷಾ ಪದಗಳನ್ನು ಆಯ್ಕೆ ಮಾಡಿಕೊಳ್ಳುವ ಕನ್ನಡ, ಸಂಸ್ಕೃತ ಪದಗಳನ್ನು ಧಾರಾಳವಾಗಿ ಅಳವಡಿಸಿಕೊಳ್ಳುತ್ತದೆ. ಬೇರೆ ಬೇರೆ ವಲಯದ ಬರಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯ ಪ್ರಮಾಣ ವ್ಯತ್ಯಾಸವಾಗುತ್ತ ಹೋಗುತ್ತದೆ. ಆದರೂ ಶುದ್ಧ ಬರಹದ ಮಾದರಿಯಲ್ಲಿ ಭಾಷಾಪ್ರಭೇದದ ಬಳಕೆಗೆ ಅಡ್ಡಿ ಇದ್ದರೂ ಸಂಸ್ಕೃತ ಪದಗಳನ್ನು ಮತ್ತು ಅವುಗಳಿಂದ ಸಾಧಿತವಾದ ರೂಪಗಳನ್ನು ಬಳಸಲು ಯಾವುದೇ ಮಿತಿ ಇಲ್ಲ. ಎಷ್ಟೋ ಕಡೆ ತೀರ ಸರಳವಾಗಿ ಕನ್ನಡದ ಪದಗಳಿಂದ ಹೇಳಬಹುದಾದ ಸಂಗತಿಗಳನ್ನು ಈ ಬಗೆಯ ಬರಹಗಳಲ್ಲಿ ಸಂಸ್ಕೃತದ ಮೂಲಕ, ಆ ಭಾಷೆಯ ಪದಗಳನ್ನು ಧಾರಾಳವಾಗಿ ಬಳಸುವ ಮೂಲಕ ನಿರ್ವಹಿಸಲಾಗುತ್ತಿದೆ. ಹೀಗೆ ಈ ಮಾದರಿಯ ಕನ್ನಡದಲ್ಲಿ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕೆ ತರ್ಕಗಳು ಹಲವಾರಿವೆ. ಅದೆಲ್ಲವನ್ನು ನಾವಿಲ್ಲಿ ಗಮನಿಸಬೇಕಾಗಿಲ್ಲ. ಒಂದು ಮಾತು ಮಾತ್ರ ಚರ್ಚೆಯಾಗಬೇಕು. ಅದೆಂದರೆ ಸಂಸ್ಕೃತ ಪದಗಳ ಬಳಕೆಯಿಂದ ನಾವು ಮಂಡಿಸಬೇಕಾದ ವಿಷಯ ಖಚಿತಗೊಳ್ಳುತ್ತದೆ; ನಿರ್ದಿಷ್ಟಗೊಳ್ಳುತ್ತದೆ; ಏಕೆಂದರೆ ಆ ಭಾಷೆಯಲ್ಲಿ ವಿಪುಲ ಪದಸಂಪತ್ತಿದ್ದು ಅದನ್ನು ಕನ್ನಡ ಪಡೆದು ಬಳಸುವುದು ಅನುಕೂಲಕರವಾದ ತಂತ್ರ. ಈ ವಾದವನ್ನು ಒಪ್ಪುವುದು ಬಿಡುವುದು ಪ್ರತ್ಯೇಕ ಮಾತು. ಆದರೆ ಖಚಿತತೆಗಾಗಿ ಸಂಸ್ಕೃತ ಪದಗಳು ಎಂಬ ಹೇಳಿಕೆಯ ಮೂಲಕ ಕಣ್ಣೋದಿನ ಬರಹಕ್ಕೆ ಕಲ್ಪಿಸಲಾದ ನಿಖರತೆಯ ಲಕ್ಷಣವನ್ನು ಖಚಿತಪಡಿಸಿದಂತಾಗಿದೆ. ಸಂಸ್ಕೃತ ಪದಗಳನ್ನು ಬಳಸುವವರು ನೀಡುವ ಮುಖ್ಯ ಕಾರಣಗಳು ಹೀಗಿವೆ. ಒಂದು: ಬಹಳ ಹಿಂದಿನಿಂದಲೂ ಆ ಪದಗಳನ್ನು ನಾವು ಬಳಸುತ್ತ್ತ ಬಂದಿದ್ದೇವೆ. ಹಾಗಾಗಿ ಅವು ಕನ್ನಡದ ಪದಗಳೇ ಎನ್ನುವಷ್ಟರಮಟ್ಟಿಗೆ ಬೆರೆತು ಹೋಗಿವೆ. ಎರಡು: ಕನ್ನಡದಲ್ಲಿ ಎಲ್ಲ್ಲ ವಿಚಾರಗಳ್ನು ಹೇಳಲು ಸಾಕಷ್ಟು ಸೂಕ್ತವಾದ ಪದಗಳಿಲ್ಲ. ಆದ್ದರಿಂದ ಸಂಸ್ಕೃತ ಪದಗಳನ್ನು ಬಳಸಿಕೊಳ್ಳುವುದು ಸರಿಯಾದ ಮಾರ್ಗ. ಮೂರು: ಸಂಸ್ಕೃತ ಭಾಷೆಯ ವ್ಯಾಕರಣ ಪ್ರಕ್ರಿಯೆಯಿಂದಾಗಿ ಹೊಸ ಪದಗಳನ್ನು ಸೃಷ್ಟಿಸುವುದು ಸಾಧ್ಯ. ಕನ್ನಡದ ಪದಗಳಿಗೆ ಈ ಸಾಧ್ಯತೆ ಇಲ್ಲ. ಆದ್ದರಿಂದ ಸಂಸ್ಕೃತ ಪದಗಳನ್ನು ಬಳಸುವುದು ಅನುಕೂಲ. ನಾಲ್ಕು:  ಸಂಸ್ಕೃತ ಪದಗಳಿಗೆ ನಿಖರವಾದ ಅರ್ಥ ಇರುವುದರಿಂದ ಶಾಸ್ತ್ರೀಯ ಮತ್ತು ವೈಚಾರಿಕ ಬರವಣಿಗೆಗೆ ಈ ಪದಗಳು ಸರಿಯಾಗಿ ಹೊಂದಿಕೊಳ್ಳುತ್ತವೆ. ಈ ವಿವರಣೆ ಇನ್ನೂ ಬೇರೆ ಬೇರೆ ಬಗೆಯಲ್ಲಿ ಮುಂದುವರೆಯಬಹುದು. ಕನ್ನಡದ ಸಾಧ್ಯತೆಯನ್ನು ಕುರಿತು ಹೇಳುವ ವಿವರಣೆಗಳನ್ನು ಕೆಲವೊಮ್ಮೆ ನಿರಾಕರಿಸುವುದು ಕಷ್ಟ. ಆದರೆ ಇದಕ್ಕೆ ಭಾಷೆ ಕಾರಣವಲ್ಲ. ಅದನ್ನು ಬಳಸುವವರು ಮಾಡಿರುವ ಯತ್ನದಲ್ಲಿ ಇರುವ ಕೊರತೆ ಕಾರಣ.

ಚಾರಿತ್ರಿಕವಾಗಿ ಕನ್ನಡ ಬರವಣಿಗೆ ತನ್ನ ಚಹರೆಯನ್ನು ಕಾಯ್ದುಕೊಳ್ಳಲು ಮಾಡಿದ ಯತ್ನ ಪರೋಕ್ಷವಾಗಿ ಈಗ ಹೇಗೆ ಒಂದು ತೊಡರಾಗಿದೆ ಎಂಬುದನ್ನು ಗಮನಿಸೋಣ: ಸಂಸ್ಕೃತ ಪದಗಳನ್ನು ಕನ್ನಡಕ್ಕೆ ಪಡೆದುಕೊಂಡಾಗ ಅವುಗಳನ್ನು ಉಚ್ಚರಿಸುವ ರೀತಿಯಲ್ಲಿ ಸಹಜವಾಗಿಯೇ ಹಲವು ಬದಲಾವಣೆಗಳಾದವು. ಆಕಾರಾಂತ ನಾಮಪದಗಳನ್ನು ಎಕಾರಾಂತ ಮಾಡಿಕೊಂಡದ್ದು, ಲ ಧ್ವನಿಯನ್ನು ಳ ಆಗಿ ಪರಿವರ್ತಿಸಿದ್ದು, ವಿಜಾತೀಯ ದ್ವಿತ್ವಗಳ ನಡುವೆ ಉಕಾರವನ್ನು ಸ್ವರಭಕ್ತಿ ಮಾಡಿದ್ದು, ಅಲ್ಲದೇ ಪ್ರಾಕೃತದ ಮಾದರಿಯಲ್ಲಿ ತದ್ಭವಗಳನ್ನು ಮಾಡಿಕೊಂಡದ್ದು ಇವೆಲ್ಲ್ಲ ಇಂತಹ ಬದಲಾವಣೆಗಳೇ ಆಗಿವೆ. ಆದರೆ ಉಚ್ಚಾರಣೆಯಲ್ಲಿ ಅಂದರೆ ಮಾತಿನಲ್ಲಿ ಮಾಡಿಕೊಂಡ ಪರಿವರ್ತನೆಗಳನ್ನು ಬರಹದ ಭಾಷೆಗೆ ರವಾನಿಸಲು ಕನ್ನಡಿಗರು ಹಿಂಜರಿದಂತೆ ತೋರುತ್ತದೆ. ಅದಕ್ಕಾಗಿ ಕನ್ನಡ ಲಿಪಿವ್ಯವಸ್ಥೆಯಲ್ಲೇ ಬದಲಾವಣೆ ಮಾಡಿಕೊಂಡರು. ಮಹಾಪ್ರಾಣಗಳಿಗಾಗಿ ತಾಲವ್ಯ ಮತ್ತು ಮೂರ್ಧನ್ಯ ಘರ್ಷಧ್ವನಿಗಳಿಗಾಗಿ ವಿಶೇಷ ಲಿಪ್ಯಕ್ಷರಗಳನ್ನು ರೂಪಿಸಿಕೊಂಡರು. ಇದರಿಂದ ಸಂಸ್ಕೃತ ಪದಗಳ ಮೂಲ ಉಚ್ಚಾರಣೆಯನ್ನು ಕನ್ನಡ ಬರವಣಿಗೆಯಲ್ಲಿ ದಾಖಲಿಸುವುದು ಸಾಧ್ಯವಾಯಿತು. ಉಚ್ಚಾರಣೆಯಲ್ಲಿ ಉಳಿಸಿಕೊಳ್ಳಲಾಗದ ಧ್ವನಿಗಳನ್ನು ಬರಹದಲ್ಲಿ ಕಾಯ್ದುಕೊಂಡರು. ಇದರಿಂದ ಸಂಸ್ಕೃತ ಭಾಷೆಯ ದಾಖಲೆಗಳನ್ನು ಯಥಾವತ್ತಾಗಿ ಉಚ್ಚಾರಣೆಯ ಸಹಿತ ಕನ್ನಡಲಿಪಿಯಲ್ಲಿ ಬರೆಯುವುದು ಸಾಧ್ಯವಾಯಿತು. ಕನ್ನಡಲಿಪಿಯ ಈ ಸುಧಾರಣೆ ಒಂದು ದೃಷ್ಟಿಯಿಂದ ಕನ್ನಡಕ್ಕೆ ವಿಶೇಷವಾದ ಬರಹ ಮಾದರಿಯನ್ನು ನೀಡಿತಾದರೂ ಆ ಮೂಲಕ ಬಹುದೀರ್ಘ ಸಂಸ್ಕೃತ ಪದಗಳು ಕನ್ನಡದಲ್ಲಿ, ಕೊನೆಯ ಪಕ್ಷ ಕನ್ನಡ ಬರವಣಿಗೆಯಲ್ಲಿ ಮೂಲರೂಪದಲ್ಲೇ ಉಳಿದುಕೊಂಡವು. ಈ ಚಾರಿತ್ರಿಕ ಸಂಗತಿಯನ್ನು ಗಮನದಲ್ಲಿ ಇಟ್ಟುನೋಡಿದರೆ ಕನ್ನಡ ಭಾಷೆಯೂ ಸಂಸ್ಕೃತದ ದೂರತ್ವವನ್ನು ಕಡಿಮೆ ಮಾಡಲು ಬಳಸಿದ ತಂತ್ರವೇ ಕನ್ನಡ ಭಾಷೆಗೆ ಅಡ್ಡಿಯಾಗಿದ್ದು ಗಮನಿಸಬೇಕಾದ ವಿಚಾರ.

ಒಂದು ವೇಳೆ ವಿಚಾರವಂತರು ಹೇಳುವಂತೆ ಕನ್ನಡ ಬರವಣಿಗೆಯಲ್ಲಿ ಸಂಸ್ಕೃತವನ್ನು ಬಳಸಿದ್ದರಿಂದ ಹೆಚ್ಚು ಪರಿಚಿತವಾಗಿವೆ ಎನ್ನುವುದಾದರೆ ಆ ಪದಕೋಶ ಜನರ ಆಡುಮಾತಿನ ಭಾಗವಾಗಬೇಕಿತ್ತು. ಅಂದರೆ ಆ ಪದಗಳನ್ನು ಜನರು ಗ್ರಹಿಕೆಗೆ ಮಾತ್ರವಲ್ಲದೆ ಅಭಿವ್ಯಕ್ತಿಗೂ ಬಳಸಲು ಸಿದ್ಧರಿರಬೇಕಿತ್ತು. ವಾಸ್ತವವಾಗಿ ಹಾಗಾಗಿಲ್ಲ. ಬರಹದಲ್ಲಿ ಬಳಕೆಯಾಗುವ ಸಾವಿರಾರು ಸಂಸ್ಕೃತ ಪದಗಳನ್ನು ಜನರು ಬರವಣಿಗೆಯಲ್ಲಿ ಗಮನಿಸುವುದು ಸಾಧ್ಯವಾಗಿವೆಯೇ ಹೊರತು ತಮ್ಮ ಆಡುಮಾತಿನಲ್ಲಲ್ಲ. ಈ ಕಾರಣದಿಂದ ಕನ್ನಡ ಬರವಣಿಗೆಯಲ್ಲಿ ಸಂಸ್ಕೃತದ ಹೆಚ್ಚುವರಿ ಸೇರ್ಪಡೆಗೆ ನೀಡುವ ಸಮರ್ಥನೆಗಳು ಸಂಪೂರ್ಣವಾಗಿ ಸರಿಯಾಗುವುದಿಲ್ಲ.

ಮಾತಿನ ರೂಪಗಳಿಗೂ ಬರಹದ ರೂಪಗಳಿಗೂ ವ್ಯತ್ಯಾಸ ಇರುವುದು ಎಲ್ಲ್ಲ ಭಾಷೆಗಳಲ್ಲೂ ಸಹಜ. ಆದರೆ ಈ ವ್ಯತ್ಯಾಸ ಅಗಾಧ ಪ್ರಮಾಣದಲ್ಲಿ ಬೆಳೆದರೆ ಆಗ ಮಾತನಾಡಬಲ್ಲವರೆಲ್ಲರೂ ಓದುತ್ತಾರೆ ಅಥವಾ ಬರೆಯುತ್ತಾರೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಕನ್ನಡದಲ್ಲಿ ಹೀಗಾಗಿರುವ ಕಾರಣದಿಂದಲೇ ಕನ್ನಡದ ಬರವಣಿಗೆ ಓದುಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಲ್ಲಿ ಸೋತಿದೆ. ಈ ಪರಿಸ್ಥಿತಿಯನ್ನು ಸಾಮಾನ್ಯವಾಗಿ ಅಕ್ಷರಸ್ಥರ ನಿರಾಸಕ್ತಿ ಎಂತಲೂ ಅವರ ಅಸಾಮರ್ಥ್ಯ ಎಂತಲೂ ವಾದ ಮಾಡಲಾಗುತ್ತದೆ. ಆದರೆ ಈ ಪರಿಸ್ಥಿತಿಯನ್ನು ಬೇರೊಂದು ರೀತಿಯಲ್ಲೂ ನೋಡಬೇಕು. ಓದುವವರು ತಾವು ಓದುತ್ತಿರುವ ಕನ್ನಡ ತಮ್ಮ ಪರಿಚಿತ ಕನ್ನಡಕ್ಕಿಂತ ತುಂಬ ಬೇರೆಯಾಗಿದೆ ಎಂದು ತಿಳಿಯುವುದರಿಂದ ಅಂತಹ ಬರವಣಿಗೆಯನ್ನು ಓದಲು ಹಿಂಜರಿಯುತ್ತಾರೆ, ನಿರಾಕರಿಸುತ್ತಾರೆ, ಪ್ರತಿಭಟಿಸುತ್ತಾರೆ. ಓದದಿರುವುದು ಒಂದು ರೀತಿಯ ನಿರಾಕರಣೆ ಮತ್ತು ಪ್ರತಿಭಟನೆಗಳೇ ಆಗಿವೆ. ಈ ಮಾತನ್ನು ಓದದಿರುವವರ ವರ್ತನೆಯನ್ನು ಸಮರ್ಥಿಸಲು ಹೇಳುತ್ತಿಲ್ಲ. ಅವರ ಸಾಂಸ್ಕೃತಿಕ ವಿನ್ಯಾಸದಲ್ಲಿ ಬರಹಕ್ಕೆ ಗೌಣಸ್ಥಾನ ದೊರಕಿರುತ್ತದೆ. ಅಷ್ಟೇ ಅಲ್ಲ ಇಂತಹ ಬರಹವನ್ನು ಓದಿ ಹೇಳಿದಾಗಲೂ ಅದು ಕೂಡ ಸಮ್ಮತಿಯನ್ನು ಪಡೆದುಕೊಳ್ಳುತ್ತಿಲ್ಲ. ಜನರು ಅಂಥಾ ಭಾಷಾ ಶೈಲಿಯನ್ನು ಪಾಂಡಿತ್ಯದ ಲಕ್ಷಣವೆಂದು ಗುರುತಿಸಿಕೊಳ್ಳುತ್ತಾರೆಯೇ ಹೊರತು ಅದನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ.

ಬರವಣಿಗೆಯ ಈ ಜನವಿದೂರತೆ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಕೆಲವರು ಹೇಳುವಂತೆ ಏಕೀಕರಣದ ಅನಂತರದ ಕರ್ನಾಟಕದಲ್ಲಿ ಓದುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಅಂಕಿ ಅಂಶಗಳು ಏನನ್ನು ಸೂಚಿಸಲಾರವು. ಓದುಗರ ಸಂಖ್ಯೆಯ ಹೆಚ್ಚಳ ಎನ್ನುವುದು ಜನಸಂಖ್ಯಾ ಬೆಳವಣಿಗೆಯ ಪ್ರಮಾಣಬದ್ಧವಾಗಿ ಇರುತ್ತದೆಯೇ? ಹಾಗಿಲ್ಲದಿದ್ದಾಗ ಓದುವವರು ಹೆಚ್ಚಿದ್ದಾರೆ ಎಂಬ ಮಾತನ್ನು ಎಚ್ಚರದಿಂದ ಗಮನಿಸಬೇಕು. ಓದುವವರು ಏನನ್ನು ಓದುತ್ತಾರೆ ಮತ್ತು ಹೇಗೆ ಓದುತ್ತಾರೆ ಎಂಬುದು ಇನ್ನೊಂದು ಬೇರೆಯ ಚರ್ಚೆಯ ವಿಷಯ. ಸದ್ಯ ನಮಗೆ ಕನ್ನಡ ಬರವಣಿಗೆಯ ಯಾವ ಲಕ್ಷಣ ಅದನ್ನು ಜನರಿಂದ ದೂರವಿರಿಸಿದೆ ಎಂಬುದನ್ನು ಕಂಡುಕೊಳ್ಳಬೇಕಾಗಿದೆ.

ಸಂಸ್ಕೃತ ಪದಗಳು ಕನ್ನಡದಲ್ಲಿ ಬಳಕೆಯಾಗುತ್ತಲೇ ಅವು ಕನ್ನಡದವಾಗಿ ಬಿಟ್ಟಿವೆ ಎಂದು ನಿರ್ಣಯಿಸುವುದು ಸರಿಯಾಗಲಾರದು. ಈ ಪದಗಳು ಪದಕೋಶದಲ್ಲಿ ಕೆಳಗಿಳಿಯುವ ವಿಧಾನ ವಿಚಿತ್ರವಾಗಿದೆ. ವಿಚಿತ್ರ ಏಕೆಂದರೆ ಅವು ಯಾವುದೋ ಒಂದು ನಿರ್ದಿಷ್ಟ ನೆಲೆಯಿಂದ ಆಚೆಗೆ ದಾಟುವುದೇ ಇಲ್ಲ. ಅಂದರೆ ಅವುಗಳಲ್ಲಿ ಬಹುಪಾಲು ಕನ್ನಡಿಗರು ತಮ್ಮ ಕಿಸೆಯಲ್ಲಿಟ್ಟು ಸಂತೋಷಪಡುವ ಆದರೆ ಬಳಸಲಾಗದ ನಾಣ್ಯದಂತಿದೆ. ಈ ಮಾತನ್ನು ಕೊಂಚ ಸ್ಪಷ್ಟಪಡಿಸಬೇಕಾಗಿದೆ. ಶಬ್ದಜಗತ್ತನ್ನು ಏನೋ ಕಾರಣದಿಂದ ನಾಣ್ಯಜಗತ್ತಿಗೆ ಸಮೀಕರಿಸುತ್ತೇವೆ. ಎರವಲು ಪಡೆ, ಸ್ವೀಕರಿಸು, ಚಲಾವಣೆ ಮಾಡು, ಟಂಕಿಸು ಇತ್ಯಾದಿ ಪದಗಳೆಲ್ಲ ಎರಡು ವಲಯಕ್ಕೆ ಸಮಾನವಾಗಿವೆ. ಸಂಸ್ಕೃತ ಪದಗಳು ಈ ದೃಷ್ಟಿಯಲ್ಲಿ ಕನ್ನಡದ ಅಹಂ ಅನ್ನು ವೃದ್ಧಿಗೊಳಿಸುವ ನೆಲೆಯಲ್ಲಿ ನೆರವಾಗಿವೆ. ಆದರೆ ಅವು ದಿನನಿತ್ಯದ ವ್ಯಾವಹಾರಿಕ ಜಗತ್ತಿನಲ್ಲಿ ನಿಷ್ಫಲವಾಗುತ್ತವೆ. ಯಾವುದೋ ದೇಶದ ನಾಣ್ಯವೊಂದನ್ನು ಇನ್ನೊಂದು ದೇಶದಲ್ಲಿ ಬಳಸಲು ಯತ್ನಿಸಿದಂತಿದೆ. ಆ ನಾಣ್ಯಗಳಿಗೆ ಬೆಲೆಯಿಲ್ಲವೆಂದಲ್ಲ, ಆದರೆ ಗೊತ್ತಾದ ಸಂದರ್ಭದಲ್ಲಿ ಅವು ಬಳಸಲು ಅರ್ಥ ಸಾಧ್ಯತೆಯನ್ನು ಶೋಧಿಸಲು ಉಪಯೋಗಕ್ಕೆ ಬರುವುದಿಲ್ಲ.

ಈ ತರ್ಕವನ್ನು ಸಂಸ್ಕೃತ ವಿರೋಧಿ ನೆಲೆಯಲ್ಲಿ ನೋಡಬಾರದು. ಕನ್ನಡದ ಬಳಕೆಯ ವಲಯಗಳನ್ನು ಸದೃಢಗೊಳಿಸಲು ಬಯಸುವವರು ಕನ್ನಡದಲ್ಲಿ ಸಂಸ್ಕೃತ ಈಗ ವಹಿಸುತ್ತಿರುವ ಪಾತ್ರದಲ್ಲಿ ಯಾವ ಯಾವ ವಿಚಾರಗಳು ಅಡಕಗೊಂಡಿವೆ ಎಂಬುದನ್ನು ಗೊತ್ತುಮಾಡಲೇಬೇಕು. ಹಾಗೆ ನೋಡಿದರೆ ಕನ್ನಡಿಗರ ಭಾಷಾ ಪ್ರಯೋಗದ ಪರಿಕಲ್ಪನೆಯೇ ದೋಷಪೂರಿತವಾಗಿದೆ. ಇದರಿಂದ ಮಾತು ಮತ್ತು ಬರಹಗಳು ಒಂದಕ್ಕೊಂದು ಪೂರಕ ಮತ್ತು ಪ್ರೇರಕ ಎಂಬ ನೆಲೆಯನ್ನು ಕಳೆದುಕೊಂಡಿವೆ. ಅವುಗಳ ನಡುವಣ ಮೌಲ್ಯಾತ್ಮಕ ವ್ಯತ್ಯಾಸಗಳಲ್ಲೂ ಆಸಕ್ತಿಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಿಲ್ಲ.

ಕನ್ನಡ ನಿರೂಪಣೆಗಳು

ಕನ್ನಡ ಭಾಷೆಯ ಬಳಕೆಯ ವಲಯಗಳು ಹೆಚ್ಚುತ್ತಾ ಹೋಗಿರುವುದು ಒಂದು ಪ್ರಕ್ರಿಯೆಯಾದರೆ ಆ ವಲಯಗಳಲ್ಲಿ ಕನ್ನಡವನ್ನು ನಿರೂಪಿಸುವ ಬಗೆಗಳು ಬದಲಾಗುತ್ತ ಹೋಗಿರುವುದು ಇನ್ನೊಂದು ಪ್ರಕ್ರಿಯೆ. ಕಳೆದ ಐವತ್ತು ವರ್ಷಗಳಲ್ಲಿ ಈ ನಿರೂಪಣೆಗಳ ಸ್ವರೂಪ ಹೇಗೆ ಬದಲಾಗುತ್ತ್ತ ಬೆಳೆದಿದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗುತ್ತದೆ.

ಸಾಮಾನ್ಯವಾಗಿ ನಿರೂಪಣೆಗಳನ್ನು ಬರಹ ಮತ್ತು ಮಾತು ಎಂದು ವರ್ಗೀಕರಿಸುವು ದುಂಟು. ಆದರೆ ನಾವು ಬರಹ ಎಂದು ಪರಿಗಣಿಸುವ ನಿರೂಪಣೆ ಯಲ್ಲಿ ಹಲವು ಮಾದರಿಗಳು ರೂಪಗೊಳ್ಳುತ್ತಿವೆ. ಈ ನಿರೂಪಣೆಯ ಬಗೆಗಳು ಬೇರೆಯಾಗಲು ನಿರೂಪಿತ ವಸ್ತು, ನಿರೂಪಕರ ಸ್ವರೂಪ, ನಿರೂಪಣೆಯ ಸಂದರ್ಭ, ನಿರೂಪಣೆ ಉದ್ದೇಶಿತವಾಗಿರುವ ವ್ಯಕ್ತಿ ಮತ್ತು ನಿರೂಪಣೆಯ ಮಾಧ್ಯಮ ಇವೆಲ್ಲವೂ ಕಾರಣವಾಗುತ್ತವೆ. ಬಹು ಹಿಂದಿನಿಂದಲೂ ಬರಹ ಎಂಬುದು ಮಾತಿನ ದಾಖಲೆ ಎಂಬ ಸರಳ ವ್ಯಾಖ್ಯೆಯನ್ನು ಒಪ್ಪಿಕೊಂಡು ಬರಲಾಗಿದೆ. ಅಂದರೆ ಮಾತಾಗಬಹು ದಾದದ್ದು, ನಾಶವಾಗುವ ಸಾಧ್ಯತೆ ಇರುವುದರಿಂದ ಅದನ್ನು ಲಿಪಿಕರಿಸಿ ಕಾಲ, ದೇಶ ಬದ್ಧತೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಬರಹವನ್ನು ಬಳಸಲಾಗುತ್ತದೆ. ಇದು ತೀರಾ ಸರಳ ವ್ಯಾಖ್ಯೆ. ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಬರಹವೆಂಬ ನಿರೂಪಣೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿದೆ. ಅಂತಹ ಕೆಲವು ನಿರೂಪಣೆಗಳನ್ನು ನಾವಿಲ್ಲಿ ಪರಿಶೀಲಿಸುತ್ತೇವೆ. ವರದಿಗಳು ಎಂಬ ನಿರೂಪಣೆ ಈಗ ವ್ಯಾಪಕವಾಗಿ ಬೆಳೆದಿದೆ. ಪತ್ರಿಕೆಗಳ ಉಗಮದೊಂದಿಗೆ ಬೇರುಬಿಟ್ಟ ಈ ಮಾದರಿ ಹೆಚ್ಚು ವ್ಯಾಪಕ ಸಾಮಾಜಿಕ ಚಟುವಟಿಕೆಗಳನ್ನು ಒಳಗೊಳ್ಳುತ್ತಿದೆ. ವರದಿಗಳಲ್ಲಿ ಒಬ್ಬ ನಿರೂಪಕರು ಇರುತ್ತಾರೆ. ಅವರು ಘಟನೆಯ ಪ್ರತ್ಯಕ್ಷದರ್ಶಿ ಆಗಿರಬಹುದು, ಇಲ್ಲವೇ ಬೇರೆ ಮೂಲದಿಂದ ದೊರೆತ ಮಾಹಿತಿಯನ್ನು ನಿರೂಪಿಸುತ್ತಿರಬಹುದು. ಪ್ರತ್ಯಕ್ಷದರ್ಶಿ ವರದಿಗಳಲ್ಲೂ ಘಟನೆ ನಡೆಯುವ ಸಂದರ್ಭದಲ್ಲಿ ನಿರೂಪಕರು ಭಾಗಿಯಾಗುವ  ಬಗೆ ಒಂದಾದರೆ, ಘಟನೆಯ ಅನಂತರ ಅಲ್ಲಿಗೆ ನಿರೂಪಕರು ವರದಿ ಮಾಡಲು ಹೋಗುವುದು ಇನ್ನೊಂದು ಬಗೆ. ನಿರೂಪಕರು ಘಟನೆಯಲ್ಲಿ ಭಾಗಿಯಾಗುವ ಸಂದರ್ಭ ಇದ್ದಾಗ ಅವರು ಆ ಘಟನೆಯ ಪಾತ್ರಧಾರಿಯೂ ಆಗಿರಬಹುದು ಅಥವಾ ಅದನ್ನು ಹೊರಗಿನವರಾಗಿ ನೋಡುತ್ತಿರುವವರು ಆಗಿರಬಹುದು. ಇವಿಷ್ಟು ವಿನ್ಯಾಸಗಳಲ್ಲಿ ನಿರೂಪಣೆಯು ಬಯಸುವ ಭಾಷೆಯ ಸ್ವರೂಪ ಬೇರೆ ಬೇರೆಯೇ ಆಗಿರುತ್ತದೆ. ಇದಲ್ಲದೆ ವರದಿಗಳು ಯಾರನ್ನು ಉದ್ದೇಶಿಸಿರುತ್ತವೆ ಎನ್ನುವುದು ಇನ್ನೊಂದು ಪ್ರಭಾವಶಾಲಿ ಅಂಶ. ಒಂದು ಪತ್ರಿಕೆಗಾಗಿ ವರದಿ ಮಾಡುವವರು ಆ ಪತ್ರಿಕೆಯ ಓದುಗರ ಸ್ವರೂಪವನ್ನು ಗಮನದಲ್ಲಿ ಇರಿಸಿಕೊಳ್ಳುತ್ತಾರೆ. ಇದರ ಪರಿಣಾಮಗಳು ಅವರು ವರದಿಯಲ್ಲಿ ಬಳಸುವ ಭಾಷೆಯಲ್ಲಿ ಕಾಣುತ್ತವೆ. ಏಕೆಂದರೆ ಪತ್ರಿಕೆ ಒಂದು ದಿನದ ಓದಿಗಾಗಿ ರೂಪಗೊಂಡದ್ದು. ಅದಕ್ಕೆ ನಿನ್ನೆ ಮತ್ತು ನಾಳೆಗಳು ಇರುವುದರೂ ಅದು ಕೇವಲ ಔಪಚಾರಿಕ. ಆ ವರದಿಯ ಸ್ಥಾನದಲ್ಲಿ ಮತ್ತೊಂದು ವರದಿ ಬಂದು ಕೂಡುತ್ತದೆ. ಅಪರಾಧದ, ಅಪಘಾತದ ವಸ್ತುವನ್ನುಳ್ಳ ವರದಿಗಳನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಇಲ್ಲಿ ಸದ್ಯತನ ಮುಖ್ಯವಾಗಿರುತ್ತದೆ. ಅಂದರೆ ಆ ಘಟನೆಯ ತಾಜಾತನವನ್ನು ನಿರೂಪಣೆಯ ಭಾಷೆಯಲ್ಲಿ ಸಾಧಿಸುವುದು ಅಗತ್ಯ. ಅದರಾಚೆಗೆ ಅದಕ್ಕೆ ನಿರಂತರತೆ ಪತ್ರಿಕೆಯ ದೃಷ್ಟಿಯಿಂದ ಅನಗತ್ಯ. ಏಕೆಂದರೆ ಅಂತದ್ದೇ ಮತ್ತೊಂದು ನಿರೂಪಣೆಗಾಗಿ ನಾಳಿನ ಪತ್ರಿಕೆಯಲ್ಲಿ ಅವಕಾಶವಿರುತ್ತದೆ.

ಇದಲ್ಲದೆ ಸದ್ಯ ನಿರೂಪಿತವಾಗುವ ಸಂಗತಿಯಲ್ಲಿ ನಿನ್ನೆ, ನಾಳೆಗಳನ್ನು ಕೊನೆಯ ಪಕ್ಷ ನಿನ್ನೆಗಳನ್ನು ಸೇರ್ಪಡೆ ಮಾಡಿಕೊಳ್ಳುವ ವರದಿಗಳು ಇರುತ್ತವೆ. ಈ ವರದಿಗಳಲ್ಲಿ ನಿರೂಪಕರು ಸದ್ಯದ ಘಟನೆಗಳನ್ನು ಮತ್ತು ಅದರ ಉಗಮ ಬೆಳವಣಿಗೆಗಳನ್ನು ಚರಿತ್ರೆಯನ್ನಾಗಿ ನಿರೂಪಿಸುತ್ತಾರೆ. ಎಲ್ಲ ಚರಿತ್ರೆಗಳು ರಚನೆಗಳೇ ಆಗಿರುತ್ತವೆ. ಅಂದರೆ ಆಯ್ಕೆ ಮತ್ತು ನಿರಾಕರಣೆಗಳ ಮೂಲಕ ಸಂಗತಿಗಳನ್ನು ಒಂದು ತರ್ಕ ಸಾಂಗತ್ಯಕ್ಕೆ ತರುವ ಪ್ರಯತ್ನ ಅಲ್ಲಿ ನಡೆಯುತ್ತದೆ. ಆದ್ದರಿಂದ ಇಲ್ಲಿಯೂ ಕೂಡ ಭಾಷೆಯ ಸ್ವರೂಪ ಅದಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.

ಇದಲ್ಲದೆ ವರದಿಗಳಲ್ಲಿ ಈಗ ನಿರೂಪಣೆ ಆಗುತ್ತಿದ್ದರೂ ಎಂದೋ ನಡೆದ ಅಥವಾ ನಡೆದಿರಬಹುದಾದ ಅಥವಾ ಹೀಗೆಯೇ ನಡೆಯಿತೆಂದು ಕಲ್ಪಿಸಲಾದ ಘಟನೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಇಂದಿನ ಓದುಗರಿಗೆ ಎಂದೋ ನಡೆದಿರಬಹುದಾದ ಘಟನೆಯನ್ನು ಚಿತ್ರವತ್ತಾಗಿಸುವುದು ಅಗತ್ಯವಾಗುತ್ತದೆ. ಆಗ ಕನ್ನಡ ಭಾಷೆಯಲ್ಲಿ ಕ್ರಿಯಾಪದಗಳನ್ನು ಬಳಸುವ ರೀತಿಯಲ್ಲಿ ಎದ್ದು ಕಾಣುವ ವ್ಯತ್ಯಾಸ ಕಾಣುತ್ತದೆ. ಉದಾಹರಣೆಗೆ ಒಂದು ಕೊಲೆಯ ಘಟನೆಯನ್ನು ವರದಿ ಮಾಡುತ್ತಾರೆ ಎಂದುಕೊಳ್ಳೋಣ. ಅದು ಆಗಿ ಹೋದ ಘಟನೆ ವರದಿಗಾರರು ತಾವು ಆ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾಗಿರುವ ಸಂಭವ ಇರುವುದಿಲ್ಲ. ಹಾಗಿದ್ದರೂ ವರದಿಗಾರ ರಾಗಿರುವಾಗ ಆ ಪಾತ್ರವನ್ನು ಬದಿಗಿರಿಸುತ್ತಾರೆ. ಆ ಕೊಲೆಯ ಘಟನೆ ಯಾವ ಅನುಕ್ರಮದಲ್ಲಿ ಹಂತ ಹಂತವಾಗಿ ನಡೆದಿವೆ ಎನ್ನುವುದನ್ನು ನಿರೂಪಿಸುವಾಗ ಕ್ರಿಯಾಪದಗಳು ವಿಶಿಷ್ಟ ಬಗೆಯಲ್ಲಿರುತ್ತವೆ. ಘಟನೆ ಭೂತಕಾಲದ್ದಾದರೂ ಕ್ರಿಯಾಪದದ ಕಾಲಸೂಚಕ ಪ್ರತ್ಯಯಗಳು ಸಂಭಾವ್ಯ ಭವಿಷ್ಯತ್‌ನಲ್ಲಿ ಇರುತ್ತವೆ. ಅಂದರೆ ಬಂದನು, ಹೋದನು ಎನ್ನುವ ಭೂತಕಾಲದ ರೂಪಗಳ ಬದಲು ಬರುತ್ತಾನೆ, ಹೋಗುತ್ತಾನೆ ಎಂಬ ಅಭೂತರೂಪಗಳನ್ನು ಬಳಸುವುದಿಲ್ಲ. ಬದಲಿಗೆ ಬಂದಿದ್ದಾನೆ, ನೋಡಿದ್ದಾನೆ, ತೆಗೆದಿದ್ದಾನೆ ಎಂಬ ಮಾದರಿಯ ರೂಪಗಳನ್ನು ಬಳಸುತ್ತಾರೆ, ಈ ರೂಪಗಳ ಬಳಕೆಯ ಚರಿತ್ರೆ ಕನ್ನಡದಲ್ಲಿ ಬಹಳ ದೀರ್ಘವಾಗಿಲ್ಲ. ಈಚಿನ ದಶಕಗಳಲ್ಲಿ ಇಂತಹ ನಿರೂಪಣೆಗಳಿಗಾಗಿಯೇ ಈ ಕ್ರಿಯಾರೂಪಗಳನ್ನು ವ್ಯವಸ್ಥಿತವಾಗಿ ಬಳಸಲಾಗುತ್ತದೆ. ಮಾದರಿಗಾಗಿ ಈ ಕೆಳಗಿನ ವಾಕ್ಯವನ್ನು ನೋಡೋಣ. ರಾತ್ರಿಯಲ್ಲಿ ಬಾಡಿಗೆ ಕಾರಿನಲ್ಲಿ ಬಂದಿದ್ದಾನೆ ಎಂಬ ವಾಕ್ಯ ಸ್ವತಂತ್ರವಾಗಿದ್ದಾಗ ಈಗ ನಡೆದಿರುವ ಘಟನೆಯೊಂದನ್ನು ನಿರೂಪಿಸಿದಂತೆ ತೋರುತ್ತದೆ. ಆದರೆ ನಾವು ಚರ್ಚಿಸುತ್ತಿರುವ ಸಂದರ್ಭದಲ್ಲಿ ಕೊಲೆಗೆ ಕಾರಣನಾದ ವ್ಯಕ್ತಿಯೂ ಹಾಗೆ ಕಾರಿನಲ್ಲಿ ಬಂದದ್ದನ್ನು ಊಹಿಸಿ ವಿವರಿಸಿದರೆ ಆಗಲೂ ಈ ವಾಕ್ಯದ ಸ್ವರೂಪ ಹೀಗೆಯೇ ಇರುತ್ತದೆ. ಆದರೆ ಕೊಲೆ ಮಾಡಿದವನು ಬಾಡಿಗೆ ಕಾರಿನಲ್ಲಿ ಬಂದ ಘಟನೆ ವರದಿಗಾರರು ನಿರೂಪಿಸುತ್ತಿರುವ ಅಥವಾ ಓದುಗರು ಓದುತ್ತಿರುವ ಕಾಲದಲ್ಲಿ ಸಂಭವಿಸಿರುವುದಿಲ್ಲ. ಆದರೆ ಆ ಕಾಲಗಳಲ್ಲಿ ಅದು ಸಂಭವಿಸಿತೇನೋ ಎಂಬಂತೆ ಈ ಕ್ರಿಯಾಪದದ ಬಳಕೆಯಿಂದ ಭಾಸವಾಗುತ್ತದೆ. ಇದೊಂದು ವಿಶಿಷ್ಟವಾದ ಭಾಷಾತಂತ್ರ. ಈಗಾಗಲೇ ಹೇಳಿದಂತೆ ಕನ್ನಡದಲ್ಲಿ ತೀರಾ ಹೊಸದಾಗಿ ಬಳಕೆಯಾಗುತ್ತಿರುವ ಪ್ರಸಂಗ.

ಇಂತಹುದೇ ಇನ್ನೊಂದು ಬಳಕೆ ಸ್ವಲ್ಪ ಹಿಂದಿನಿಂದಲೂ ಕಂಡುಬರುತ್ತಿದೆ. ಒಂದು ಘಟನೆ ಇನ್ನೂ ನಡೆಯಬೇಕಾಗಿರುವಾಗ ಅದು ಹೇಗೆ ನಡೆಯಬೇಕು ಎನ್ನುವುದನ್ನು ಸೂಚಿಸಲು, ನಿರೂಪಣೆಯಲ್ಲಿ ಕ್ರಿಯಾಪದಗಳನ್ನು ಭಿನ್ನ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಚಲನಚಿತ್ರದ ದೃಶ್ಯಾವಳಿಯನ್ನು ಚಿತ್ರೀಕರಿಸಲು ಅನುಕೂಲವಾಗುವಂತೆ ಬರೆದ ಚಿತ್ರಕಥೆಯನ್ನು ಗಮನಿಸಬಹುದು. ಆ ಚಿತ್ರಕತೆಯ ಆ ಭಾಗದಲ್ಲಿ ನಿರೂಪಿತವಾದ ಘಟನೆ ಇನ್ನೂ ನಡೆದಿರುವುದಿಲ್ಲ. ಆದರೆ ಹೇಗೆ ನಡೆಯಬೇಕು ಅಂದರೆ ಹೇಗೆ ಚಿತ್ರೀಕರಣವಾಗಬೇಕು ಎಂಬ ಪೂರ್ವಕಲ್ಪನೆಯೊಡನೆ ಈ ವರದಿಯನ್ನು ಬರೆದಿರುತ್ತಾರೆ. ಅಲ್ಲಿ ಬಳಸುವ ಕ್ರಿಯಾಪದದಲ್ಲಿ ಅಭೂತಕಾಲ ಪ್ರತ್ಯಯದ ಬಳಕೆ ಅಗತ್ಯ ಮತ್ತು ಅನಿವಾರ್ಯವೆಂಬಂತೆ ಮಾಡಲಾಗಿದೆ. ಉದಾಹರಣೆಗೆ ಎಕ್ಸ್ ಅಥವಾ ವೈ ಪಾತ್ರಧಾರಿ ಬಾಗಿಲು ತೆಗೆದು ಒಳಗೆ ಬರುತ್ತಾರೆ. ಬಲಬದಿಯ ಗೋಡೆಯತ್ತ ಕಣ್ಣು ಹಾಯಿಸುತ್ತಾರೆ. ಅಲ್ಲಿ ಇರುವ ಗಡಿಯಾರದಲ್ಲಿ ೩ ಗಂಟೆ ಬಾರಿಸುತ್ತದೆ. ಈ ಮಾದರಿಯ ವಾಕ್ಯಗಳನ್ನು ಗಮನಿಸೋಣ. ಇಲ್ಲಿ ಮೂರು ಚಿತ್ರಪಟ್ಟಿಕೆಗಳ ಜೋಡಣೆ ಇದೆ. ಇಲ್ಲಿ ಆ ಘಟನೆಗಳು ಇನ್ನೂ ನಡೆದಿಲ್ಲ. ಹಾಗೆ ನಡೆಯಬೇಕಾದ ಘಟನೆಗಳನ್ನು ಸೂಚಿಸುವಂತೆ ಹೀಗೆ ಕ್ರಿಯಾಪದಗಳನ್ನು ಬಳಸಿ ನಿರೂಪಣೆ ಮಾಡಲಾಗುತ್ತದೆ. ನಾವು ಹಿಂದೆ ಚರ್ಚಿಸಿದ ಸಂದರ್ಭದಲ್ಲಿ ಘಟನೆ ಆಗಿ ಹೋಗಿದೆ. ಅದು ಈಗ ಆಗುತ್ತಿರುವಂತೆ ವರದಿ ಮಾಡಲಾಗುತ್ತಿದೆ. ಈಗ ನೀಡಿದ ಉದಾಹರಣೆಯಲ್ಲಿ ಘಟನೆ ನಡೆದಿಲ್ಲ, ಆದರೆ ಹೇಗೆ ನಡೆಯಬೇಕು ಎಂಬುದನ್ನು ಸೂಚಿಸುವ ಹಾಗೆ ನಿರೂಪಿಸಲಾಗಿದೆ. ಇಲ್ಲಿ ನೀಡಿದ ಎರಡನೇ ಉದಾಹರಣೆಯಲ್ಲಿ ಸಾಮಾನ್ಯವಾಗಿ ಆ ನಿರೂಪಣೆಗಳು ಬಹು ಸೀಮಿತ ವ್ಯಾಪ್ತಿಯನ್ನು ಪಡೆದಿವೆ ಎಂದು ಮೇಲುನೋಟಕ್ಕೆ ಅನಿಸಬಹುದು. ಆದರೆ ಅದು ಹಾಗಲ್ಲ, ಏಕೆಂದರೆ ಇಂತಹ ನಿರೂಪಣೆಗಳು ಇನ್ನೂ ವ್ಯಾಪಕವಾದ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಒಂದು ನಾಟಕದಲ್ಲಿ ಪಾತ್ರ ಒಂದು ರಂಗದ ಮೇಲೆ ಆಡುವ ಮಾತಿನೊಡನೆ ಮಾಡಬೇಕಾದ ಚಟುವಟಿಕೆಯನ್ನು ಸೂಚಿಸುವಾಗ ಕೂಡ ಇದೇ ಬಗೆಯ ಕ್ರಿಯಾಪದಗಳ ಬಳಕೆ ಕಾಣುತ್ತದೆ.  ಇದಲ್ಲದೇ ಪತ್ರಿಕೆಗಳಲ್ಲಿ ಕೂಡ ಒಂದು ಘಟನೆ ಇನ್ನು ನಡೆಯದಿರುವಾಗ, ಆದರೆ ಅದು ಹೇಗೆ ನಡೆಯುವುದೆಂದು ಖಚಿತವಾಗಿ ತಿಳಿದಿರುವಾಗ ಇದೇ ರೀತಿ ಕ್ರಿಯಾಪದಗಳನ್ನು ಬಳಸುತ್ತಾರೆ. ಮತ್ತೂ ಒಂದು ಸಂದರ್ಭವೆಂದರೆ ನಾವೀಗ ಉದಾಹರಿಸಿದ ಚಿತ್ರದ ಸಂದರ್ಭವನ್ನು ಗಮನಿಸಿ. ಆ ಚಿತ್ರ ನಿರ್ಮಾಣಗೊಂಡು ನೋಡಲು ಸಾಧ್ಯವಾದ ಮೇಲೆ ಆ ಘಟನೆಯನ್ನು ನಿರೂಪಿಸುವಾಗ ಕೂಡ ಇದೇ ಮಾದರಿಯ ಕ್ರಿಯಾಪದಗಳು ಕಾಣಿಸಿಕೊಳ್ಳುತ್ತವೆ. ಇದು ಬಹು ಹಿಂದಿನಿಂದಲೂ  ನಿರೂಪಣೆಗಳಲ್ಲಿ ಕಂಡುಬರುತ್ತಿದೆ ಎಂದು ಹೇಳಿದೆವಷ್ಟೆ. ಎಂದರೆ ಈ ಬಗೆಯ ನಿರೂಪಣೆಗಳು ಮಾತಿನಲ್ಲೇ ಕಾಣಿಸಿಕೊಳ್ಳುತ್ತಿದ್ದವು. ಈಗಲೂ ಜನಪದ ಕತೆಯೊಂದನ್ನು ನಿರೂಪಿಸುವ ಬಗೆಯನ್ನು ಗಮನಿಸಿ. ಒಂದೂರಿನಲ್ಲಿ ಒಬ್ಬ ರಾಜ ಇರುತ್ತಾನೆ. ಅವನಿಗೆ ನಾಲ್ಕು ಜನ ಮಕ್ಕಳು ಇರುತ್ತಾರೆ ಎಂದು ಮೊದಲಾಗುವುದೇ ಹೊರತು ನಾವು ಸಾಮಾನ್ಯವಾಗಿ ಬರಹದಲ್ಲಿ ಕಾಣುವಂತೆ ಒಂದೂರಿನಲ್ಲಿ ಒಬ್ಬ ರಾಜ ಇದ್ದನು; ಅವನಿಗೆ ನಾಲ್ಕು ಜನ ಮಕ್ಕಳು ಇದ್ದರು ಎಂದು ಮೊದಲಾಗು ವುದಿಲ್ಲ. ಎರಡು ನಿರೂಪಣೆಗಳಲ್ಲೂ ಇರುವ ಕ್ರಿಯಾಪದಗಳ ಕಾಲಸೂಚಕ ಪ್ರತ್ಯಯಗಳಲ್ಲೂ ವ್ಯತ್ಯಾಸವಿದೆ. ಅಂದರೆ ಮಾತಿನ ನಿರೂಪಣೆಯಲ್ಲಿ ವ್ಯಾಪಕವಾಗಿ ಇದ್ದ ಮಾದರಿಯೊಂದು ಈಗ ಬರಹಕ್ಕೆ ರವಾನೆಯಾಗಿದೆ. ಇಂತಹ ನಿರೂಪಣೆ ಗಳು ಘಟನೆಗಳ ಸಂಭಾವ್ಯತೆಯನ್ನು ಮತ್ತು ಸ್ವರೂಪವನ್ನು ಪೂರ್ವಭಾವಿಯಾಗಿ ಕಲ್ಪಿಸಿಕೊಂಡಿರುತ್ತವೆ. ಈ ಅಂತಸ್ಥ ರೂಪವನ್ನು ಬಹಿರ್ ಜಗತ್ತಿನಲ್ಲಿ ಮಂಡಿಸುವಾಗ ಕ್ರಿಯಾಪದಗಳ ಚರ್ಚಿತ ರೂಪವನ್ನು ನೆರವಿಗೆ ತೆಗೆದುಕೊಳ್ಳಲಾಗುತ್ತದೆ. ಅಂದರೆ ಮಾತಿನ ನಿರೂಪಣೆಗಳಲ್ಲಿ ಬಳಕೆಯಲ್ಲಿದ್ದ ಒಂದು ಮಾದರಿ ಈಗ ಲಿಖಿತ ರೂಪಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಅಗತ್ಯ ಕಂಡುಬರುತ್ತಿದೆ.

ವರದಿಯಲ್ಲದೇ ಈಗ ವಿಶ್ಲೇಷಣೆಯ ಬರಹ ಇನ್ನೊಂದು ಮಾದರಿಯಾಗಿ ಬೆಳೆಯುತ್ತಿದೆ. ಈ ಹಿಂದೆ ಟೀಕೆ ವ್ಯಾಖ್ಯಾನ ಎಂಬ ಮಾದರಿಯ ಬರಹಗಳು ಇದ್ದವು. ಒಂದು ಸೂತ್ರರೂಪದ ಮಾತು ಇಲ್ಲವೇ ಹೇಳಿಕೆಗಳನ್ನು ನಿರ್ದಿಷ್ಟ ತಾತ್ವಿಕ ಚೌಕಟ್ಟಿನಲ್ಲಿ ವಿಶದೀಕರಿಸುವ ಬಗೆಯನ್ನು ಈ ಟೀಕೆಗಳಲ್ಲಿ ಕಾಣುತ್ತೇವೆ. ಕೆಲವೊಮ್ಮೆ ಟೀಕಾಕಾರರ ಸ್ವತಂತ್ರ ವಿಚಾರಗಳು ಅದರಲ್ಲಿ ಸೇರಬಹುದು. ಈಗ ವಿಶ್ಲೇಷಣೆಯಲ್ಲಿ ಯಾವುದೇ ಮೂಲವಿಚಾರದ ಉಲ್ಲೇಖ ಇರಬೇಕಾಗಿಲ್ಲ. ಅದರ ಬದಲು ನಡೆದಿರುವ, ನಡೆಯುತ್ತಿರುವ ಮತ್ತು ನಡೆಯಬಹುದಾದ ಘಟನೆಗಳನ್ನು ಆಧಾರವಾಗಿರಿಸಿಕೊಂಡು ವಿಶ್ಲೇಷಣಾಕಾರರು ತಮ್ಮ ವಿಚಾರಗಳನ್ನು ಬೆಳೆಸುತ್ತಾರೆ. ಇಂತಹ ಬರಹಗಳಲ್ಲಿ ವಿಶ್ಲೇಷಣಾಕಾರರು ಕೆಲವೊಮ್ಮೆ ಅನಾಮಿಕರಾಗಿ ಇರುತ್ತಾರೆ. ಮತ್ತೆ ಕೆಲವೊಮ್ಮೆ ತಾವು ಮುಂಚೂಣಿಯಲ್ಲಿ ಇದ್ದು ವಿವರಣೆಗಳನ್ನು ನೀಡುತ್ತಾರೆ. ಈ ಎರಡು ಬಗೆಗಳಲ್ಲಿ ಭಾಷೆ ಬೇರೆ ಬೇರೆ ಬಗೆಗಳಲ್ಲಿ ಬಳಕೆಯಾಗಬೇಕು.ವಿಶ್ಲೇಷಣೆಯ ನಿರೂಪಕರು ತಾವು ಆ ಪ್ರಕ್ರಿಯೆಯಿಂದ ಹೊರಗೆ ಉಳಿದರೆ ಆಗ ಬರವಣಿಗೆಯು ತೃತೀಯ ಪುರುಷದಲ್ಲಿ ಇರುತ್ತದೆ. ಅಲ್ಲದೇ ತಮ್ಮ ವಿಚಾರಗಳನ್ನು ಸಮರ್ಥಿಸುವ ಇಲ್ಲವೇ ವಿಶ್ಲೇಷಿಸುವ ಅವಕಾಶವನ್ನು ನಿರೂಪಕರು ಬಿಟ್ಟುಕೊಡುತ್ತಾರೆ. ಪತ್ರಿಕೆಗಳ ಸಂಪಾದಕೀಯಗಳು ಇದಕ್ಕೆ ಒಳ್ಳೆಯ ಉದಾಹರಣೆ. ಸಾಂದರ್ಭಿಕವಾದ ಒಂದು ಸಂಗತಿಯನ್ನು ಉಲ್ಲೇಖಿಸಿ ಅದನ್ನು ಕುರಿತು ಚರ್ಚೆಯೊಂದನ್ನು ಬೆಳೆಸುವ ಮುಖ್ಯ ಗುರಿ ನಿರೂಪಕರಿಗೆ ಇರುತ್ತದೆ.  ಆದರೆ ತಾವೇ ನಿರೂಪಕರಾದಾಗ ತಮ್ಮ ವಿಶ್ಲೇಷಣೆಯ ಪರಿಕರಗಳನ್ನು ತಾವು ಸಂರಕ್ಷಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಅಭಿಪ್ರಾಯ ಎಂದು ಸ್ಪಷ್ಟಪಡಿಸಲು ಪ್ರಥಮಪುರುಷ ನಿರೂಪಣೆಗಳು ಕಾಣಸಿಗುತ್ತವೆ. ಇಂತಹ ಬರಹಗಳನ್ನು ಬರೆಯುವವರು ತಮಗೆ ಗೊತ್ತಿಲ್ಲದಂತೆ ಅಥವಾ ಉದ್ದೇಶ ಪೂರ್ವಕವಾಗಿಯೇ ಒಂದು ದೃಷ್ಟಿಕೋನವನ್ನು ಹೊಂದಿರುವುದು ಸರ್ವೇಸಾಮಾನ್ಯ. ಇದನ್ನು ಭಾಷಾ ಬಳಕೆಯಲ್ಲಿ ಸ್ಪಷ್ಟಪಡಿಸುತ್ತಾರೆ. ಒಂದು ನಿದರ್ಶನವನ್ನು ಗಮನಿಸೋಣ. ಕ್ರೀಡೆಯೊಂದನ್ನು ವರ್ಣಿಸುವಾಗ ತಮ್ಮ ವಿಶ್ಲೇಷಣೆಗೆ ಕೊಡುವ ಶೀರ್ಷಿಕೆಯನ್ನು ಗಮನಿಸಿ ಭಾರತಕ್ಕೆ ಸೋಲು ಈ ವಾಕ್ಯ ಮೇಲುನೋಟಕ್ಕೆ ಒಂದು ವರದಿಯಂತಿದೆ. ಪಂದ್ಯದಲ್ಲಿ ಭಾಗಿಗಳಾದ ತಂಡಗಳು ಎರಡು ಇರುತ್ತವೆ. ಭಾರತ, ಇಂಗ್ಲೆಂಡ್ ವಿರುದ್ಧ ಆಡಿರಬಹುದು. ಆಗ ವಾಕ್ಯ ಇಂಗ್ಲೆಂಡ್‌ಗೆ ಜಯ ಅಥವಾ ಗೆಲುವು ಎಂದು ಇರಬಹುದು. ಅದರ ಬದಲು ಭಾರತಕ್ಕೆ ಸೋಲು ಎಂದಾಗ ಘಟನೆಯನ್ನು ನೋಡುವ ದೃಷ್ಟಿಯೊಂದು ನಿಖರವಾಗುತ್ತದೆ. ಭಾರತೀಯರ ದೃಷ್ಟಿಯಿಂದ ಅವರ ಆತ್ಮಾಭಿಮಾನವನ್ನು ಕುಗ್ಗಿಸುವ ಉದ್ದೇಶವುಳ್ಳ ವಾಕ್ಯ ಇದೆಂದು ಸ್ಪಷ್ಟವಾಗಿ ಹೇಳಬಹುದು. ಇದು ಒಂದು ವಾಕ್ಯದಲ್ಲಿ ಕಂಡುಬರುವ ನಿದರ್ಶನವಾದರೆ ದೀರ್ಘ ಸಂಕಥನಗಳು ಈ ಬಗೆಯ ಬಳಕೆಯನ್ನು ಕೆಲವೊಮ್ಮೆ ನಿರೀಕ್ಷಿಸುತ್ತವೆ. ನಿರೂಪಣೆಯಲ್ಲಿ ಅದು ಯಾವಾಗ ವರದಿಯಾಗುತ್ತದೆ ಅಥವಾ ಅದು ಯಾವಾಗ ವಿಶ್ಲೇಷಣೆಯಾಗುತ್ತದೆ ಎನ್ನುವುದನ್ನು ಗುರುತಿಸಿಕೊಳ್ಳುವುದು ಅಗತ್ಯ. ಇವೆರಡರ ನಡುವೆ ಇರುವ ಗೆರೆ ತೀರಾ ತೆಳುವಾದದ್ದು.

ಕಳೆದ ಐದು ದಶಕಗಳಲ್ಲಿ ಈವರೆಗೆ ಇದ್ದ ಮಾದರಿಗಳಿಗಿಂತ ಇಂತಹ ನಿರೂಪಣೆಗಳು ಹೆಚ್ಚಾಗುವುದು ಅನಿವಾರ್ಯವಾಗಿದೆ. ಏಕೆಂದರೆ ಪತ್ರಿಕೆಗಳು ದಿನದಿನವೂ ಯಾವುದಾದರೊಂದು ವಿಷಯವನ್ನು ಕುರಿತು ಹೀಗೆ ತಮ್ಮ ವಿಶ್ಲೇಷಣೆಗಳನ್ನು ಮಂಡಿಸುತ್ತಲೇ ಇರುತ್ತವೆ. ಆ ನಿಲುವುಗಳು ಸ್ಪಷ್ಟವಾಗುವುದು ಈ ವಿಶ್ಲೇಷಣೆ ನಿರೂಪಣೆಗಳಲ್ಲೇ. ಹಾಗೆ ನೋಡಿದರೆ ಕಳೆದ ಐವತ್ತು ವರ್ಷಗಳಲ್ಲಿ ಇಂತಹ ಬರಹಗಳು ಜಾಗತಿಕವಾಗಿಯೂ ಹೇಗೆ ಪ್ರಭಾವಶಾಲಿಯಾಗಿವೆ ಎಂಬ ಚರ್ಚೆಯೊಂದನ್ನು ಖ್ಯಾತ ಚಿಂತಕ ನೋಮ್ ಚಾಮ್ಸ್‌ಕಿ ಮಂಡಿಸಿದ್ದಾರೆ. ಅವರು ತಮ್ಮ ಸಹೋದ್ಯೋಗಿ ಹರ್ಬರ್ಟ್ ಜೊತೆಗೂಡಿ ಮಂಡಿಸಿದ ‘ಮ್ಯಾನುಫ್ಯಾಕ್ಚರಿಂಗ್ ಕನ್‌ಸೆಂಟ್’ ಕೃತಿಯಲ್ಲಿ ಈ ಚರ್ಚೆ ಬೆಳೆದಿದೆ. ಆಳುವ ವರ್ಗಗಳು ತಮ್ಮ ಅಧಿಕಾರದ ಬೇರುಗಳನ್ನು ಬಲಪಡಿಸಿಕೊಳ್ಳಲು ಎಷ್ಟೇ ತಂತ್ರಗಳನ್ನು ಬಳಸಿದರೂ ಸಾರ್ವಜನಿಕ ಅಭಿಪ್ರಾಯ ಅದಕ್ಕೆ ಪೂರಕವಾಗಿರಬೇಕಾದದ್ದು ಪ್ರಜಾಪ್ರಭುತ್ವದ ಒಂದು ಲಕ್ಷಣ. ಪತ್ರಿಕೆಗಳು ತಮ್ಮ ವಿಶ್ಲೇಷಣೆಗಳಲ್ಲಿ ಮಂಡಿಸುವ ದೃಷ್ಟಿಕೋನಗಳು ಹೇಗೆ ಅವರಿಗೇ ತಿಳಿಯದಂತೆ ಸರ್ಕಾರದ ದೃಷ್ಟಿಕೋನವನ್ನು ಪ್ರತಿಪಾದಿಸುತ್ತವೆ ಎನ್ನುವುದು ಭಾಷಿಕವಾಗಿ ಕುತೂಹಲಕಾರಿ. ಏಕೆಂದರೆ ಈ ಪ್ರಯತ್ನ ಯಶಸ್ವಿಯಾಗುವುದು ವಾಸ್ತವವಾಗಿ ಭಾಷೆಯ ನೆರವಿನಿಂದ. ಕನ್ನಡದಲ್ಲೂ ಕಳೆದ ಒಂದೆರಡು ದಶಕಗಳಿಂದ ಹೀಗೆ ಅಭಿಪ್ರಾಯ ರೂಪಿಸುವ ಉದ್ದೇಶದ ಬರವಣಿಗೆಗಳು ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತಿವೆ. ವಿಶ್ಲೇಷಣೆಯ ಭಾಷೆಯಲ್ಲಿ ಓದುವವರ ಮನಸ್ಸಿಗೆ ಒಂದು ಭ್ರಾಂತಿ ಕವಿಯುವಂತೆ ಮಾಡುವ ಸಾಮರ್ಥ್ಯವಿರುತ್ತದೆ. ಈ ಕೆಲಸವನ್ನು ಕನ್ನಡ ಎಷ್ಟು ಅಧಿಕೃತವಾಗಿ ಮಾಡುತ್ತಿದೆ ಎಂಬುದು ಕುತೂಹಲದ ವಿಷಯ. ಏಕೆಂದರೆ ಹೆಚ್ಚು ಸಂದರ್ಭಗಳಲ್ಲಿ ಹೀಗೆ ದೃಷ್ಟಿಕೋನವನ್ನು ಓದುಗರು ಪಡೆದುಕೊಳ್ಳುವುದು ಅಖಿಲ ಭಾರತ ಇಲ್ಲವೇ ಅಂತಾರಾಷ್ಟ್ರೀಯ ಪತ್ರಿಕೆಗಳಿಂದ. ಈ ಬಗೆಗೆ ಪ್ರತ್ಯೇಕ ಚರ್ಚೆಯನ್ನು ಮುಂದೆ ಬೆಳೆಸಲಾಗುವುದು.

ಮತ್ತೊಂದು ಹೊಸ ಮಾದರಿ ಈಗ  ಸಂದರ್ಶನಗಳಲ್ಲಿ ಅನಿವಾರ್ಯವಾಗಿ ರೂಪುಗೊಳ್ಳುತ್ತಿದೆ. ಸಂದರ್ಶನಗಳು ನಮಗೆ ತಿಳಿದಂತೆ ಮೌಖಿಕವಾಗಿಯೇ ನಡೆಯುತ್ತವೆ. ಸಂದರ್ಶಕರು ಮತ್ತು ಸಂದರ್ಶಿತರು ಪರಸ್ಪರ ಮಾತಾಡಿದ್ದನ್ನು ಅನಂತರ ಲಿಖಿತ ರೂಪಕ್ಕೆ ತರಲಾಗುತ್ತಿದೆ. ಹೀಗೆ ಲಿಖಿತ ರೂಪಕ್ಕೆ ತರುವಾಗ ಎರಡು ಮುಖ್ಯ ಮಾದರಿಗಳಿವೆ. ಒಂದು: ಸಂದರ್ಶಕರು ಲಿಖಿತ ಪ್ರಶ್ನೆಗಳನ್ನು ನೀಡಿ ಅವುಗಳಿಗೆ ಸಂದರ್ಶಿತರು  ಮೌಖಿಕವಾಗಿ ಉತ್ತರಿಸುವುದು. ಎರಡು: ಇಬ್ಬರೂ ಮಾತಾಡಿಯೇ ಅನಂತರ ಅದನ್ನು ಲಿಖಿತಗೊಳಿಸುವುದು. ಎರಡೂ ಸಂದರ್ಭಗಳಲ್ಲಿ ಭಾಷೆಯ ಸ್ವರೂಪ ಬೇರೆಯಾಗುತ್ತದೆ. ಇಬ್ಬರು ಮಾತಾಡುತ್ತಿದ್ದರೆ ಅದರ ಲಿಖಿತರೂಪ ಒಂದು ನಿಶ್ಚಿತ ಆಕಾರವನ್ನು ತಾಳಬೇಕಾದರೆ ಹಲವು ಸ್ತರಗಳ ಸಂಪಾದನಾ ಕಾರ್ಯ ಅಗತ್ಯ. ಇದೇನೇ ಇರಲಿ. ಸಂದರ್ಶನಗಳು ಮೌಖಿಕ ಮಾತಿನ ನೆಲೆಗಳಿಂದ ಬರಹಕ್ಕೆ ಪರಿವರ್ತಿತವಾಗುವ ಸ್ವರೂಪವನ್ನು ಹೊಂದಿವೆ. ಇದು ಈಗಾಗಲೇ ನಾವು ಚರ್ಚಿಸಿದ ಒಂದು ಮಾದರಿಯಂತೆ ಇದೆ. ಒಂದು ಮುಖ್ಯ ವ್ಯತ್ಯಾಸವೆಂದರೆ ಲಿಖಿತರೂಪಕ್ಕೆ ಬಂದ ಮೇಲೆ ಹಲವು ಹಂತಗಳ ಪರಿಷ್ಕರಣೆ ಸಾಧ್ಯವಿರುತ್ತದೆ. ಈ ಪರಿಷ್ಕರಣೆ ಕೇವಲ ಭಾಷಾ ದೋಷಗಳನ್ನು ತಿದ್ದುವುದಕ್ಕೆ ಸೀಮಿತಗೊಳ್ಳದೇ ವಿಚಾರಗಳ ಸ್ಪಷ್ಟತೆ ಗೋಸ್ಕರವೂ ನಡೆಯುತ್ತಿರುತ್ತದೆ. ಹೇಳುತ್ತಿರುವ ವಿಷಯಗಳು ಹೆಚ್ಚು ಸ್ಪಷ್ಟಗೊಳ್ಳಲು ಮತ್ತೆ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಇದೆಲ್ಲವೂ ಭಾಷೆಯ ವಿಶೇಷ ರೀತಿಯ ಬಳಕೆಯನ್ನು ಅಪೇಕ್ಷಿಸುತ್ತದೆ. ಸಂದರ್ಶನಗಳ ಯಥಾರೂಪಗಳು ಕೆಲವೊಮ್ಮೆ ಬರಹಕ್ಕೆ ಬರುವುದುಂಟು. ಕನ್ನಡದಲ್ಲಿ ಇಂತಹ ಸಂದರ್ಭಗಳು ತುಂಬಾ ಕಡಿಮೆ. ಜಾಗತಿಕವಾಗಿ ಬಿ.ಬಿ.ಸಿ ರೇಡಿಯೋ ಇಂತಹ ಯಥಾ ವರದಿಗಳನ್ನು ನಿಯತವಾಗಿ ಒದಗಿಸುತ್ತದೆ.

ಬರಹದ ಹೊಸ ನಿರೂಪಣೆಗಳು ಒಂದೆಡೆಯಾದರೆ ಮಾತುಗಳ ನೆಲೆಯ ಹೊಸ ನಿರೂಪಣೆಗಳು ಮತ್ತೂ ಹಲವಿವೆ. ಕಳೆದ ಶತಮಾನವೇ ಮಾತನ್ನು ಸಾರ್ವಜನಿಕ ಗೊಳಿಸಿದ ಕಾಲಾವಧಿ. ಅಂದರೆ ಜನರು ತಮ್ಮತಮ್ಮಲ್ಲಿ ಮಾತಾಡುವ ವಲಯದಿಂದ ಹೆಚ್ಚು ಸಾರ್ವಜನಿಕವಾಗಿ ಭಾಷೆಯನ್ನು ಬಳಸುವ ಮತ್ತು ಗ್ರಹಿಸುವ ವಲಯಗಳಿಗೆ ದಾಟಿದ್ದಾರೆ. ಏಕೀಕರಣದ ಹಿಂದೆಯೂ ಇಂತಹ ಕೆಲವು ಸಂದರ್ಭಗಳು ಮೈದೋರಿದ್ದರೂ ಈಗ ಅವುಗಳ ಸ್ವರೂಪ ಮತ್ತು ಪ್ರಮಾಣ ಅಧಿಕವಾಗಿದೆ. ಅಂತಹ ಕೆಲವನ್ನು ನಾವು ಗಮನಿಸಬಹುದು. ಮುಖ್ಯವಾಗಿ ಇಂತಹ ನಿರೂಪಣೆಗಳಲ್ಲಿ ಮಾತಾಡುವವರು ಮತ್ತು ಕೇಳುವವರು ಒಂದೇ ಜಾಗದಲ್ಲಿ ಇರುವ ಸಾಧ್ಯತೆಗಳು ಒಂದು ಬಗೆಯಲ್ಲಿದ್ದರೆ ಮತ್ತೊಂದು ಬಗೆಯಲ್ಲಿ ಇವರಿಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಇರುವ ಸಾಧ್ಯತೆಗಳು ಹೆಚ್ಚಾಗಿವೆ. ಎರಡನೇ ಬಗೆಗೆ ನಾವು ನೇರಪ್ರಸಾರಗಳನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಇದು ಬರಹದ ವರದಿಯ ಮಾದರಿಯ ನಿರೂಪಣೆ. ಆದರೆ ಇಲ್ಲಿ ಮಾತು ಬಳಕೆಯಾಗುತ್ತದೆ. ಕಣ್ಣೆದುರು ನಡೆಯುತ್ತಿರುವ ಪ್ರಸಂಗವೊಂದನ್ನು ವರದಿಗಾರರು ತಾವು ನೋಡುತ್ತಿರುವಂತೆಯೇ ಎಲ್ಲೋ ದೂರ ದಲ್ಲಿರುವ ಕೇಳುಗರಿಗಾಗಿ ಹೇಳುವ ನಿರೂಪಣೆ ಇದು. ಇಲ್ಲಿ ಭಾಷೆಯ ಬಳಕೆಯ ಹೊಸ ಬಗೆ ಕಾಣಿಸಿಕೊಳ್ಳುತ್ತದೆ. ಘಟನೆಯ ವಿವರಗಳನ್ನು ಆಯ್ಕೆ ಮಾಡಿ ಅವುಗಳನ್ನು ಆ ಕೂಡಲೇ ಮರುಸಂಯೋಜಿಸಿ ಕೇಳುತ್ತಿರುವವರಿಗೆ ತಾವು ಆ ಪ್ರಸಂಗವನ್ನು ಈಗಲೇ ತಾವೇ ನೋಡುತ್ತಿರುವಂತೆ ಭಾಸವಾಗುವಂತೆ ವರ್ಣಿಸಬೇಕಾಗುತ್ತದೆ. ಇದು ಕೇವಲ ಜಾಣತನದ ಕೆಲಸವಲ್ಲ. ಭಾಷಾಸಾಮಗ್ರಿಗಳನ್ನು ಸೂಕ್ತ ರೀತಿಯಲ್ಲಿ ಸಂಯೋಜಿಸಿ ಕೊಳ್ಳುವ ಸಾಮರ್ಥ್ಯವಿರುವುದು ಅಗತ್ಯ. ಕೆಲವೊಮ್ಮೆ ಹೀಗೆ ವರ್ಣಿಸುತ್ತಿರುವ ಘಟನೆಗಳು ತೀರಾ ಅನನ್ಯ ಆಗಿರದೆ, ಈ ಹಿಂದೆಯೂ ಅಂತ ಘಟನೆಗಳು ನಡೆದಿದ್ದರೆ ಆಗ ಈ ನಿರೂಪಣೆಗಳು ಮತ್ತೆ ಬೇರೊಂದು ಸ್ವರೂಪವನ್ನು ಪಡೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಒಂದು ಕ್ರೀಡೆಯ ವರದಿಯನ್ನು ವಿವರಿಸುತ್ತಿರುವ ಪ್ರಸಂಗದಲ್ಲಿ ಈಗ ನಡೆಯುತ್ತಿರುವ ಆಟದ ಜೊತೆಗೆ ಹಿಂದೆ ಇನ್ನೆಲ್ಲೋ ನಡೆದ ಆಟದ ಉಲ್ಲೇಖಗಳನ್ನು ತರಬೇಕಾಗುತ್ತದೆ. ಇದು ವ್ಯವಧಾನದಿಂದ ಸಮಯಾವಕಾಶ ಪಡೆದು ನಿರ್ಮಾಣ ಗೊಳ್ಳುವ ನಿರೂಪಣೆಯಲ್ಲಿ ಆಗಲೇ ಮೈತಳೆಯಬೇಕು.

ಈಚಿನ ದಿನಗಳಲ್ಲಿ ಈ ನಿರೂಪಣೆ ಇನ್ನೊಂದು ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಅದೆಂದರೆ ರೇಡಿಯೋ ಬದಲಿಗೆ ಟಿ.ವಿ. ಬಂದಿರುವುದರಿಂದ ನಿರೂಪಣೆ ಮಾಡುತ್ತಿರುವವರು ಏನನ್ನೂ ನೋಡುತ್ತಿರುತ್ತಾರೋ ಅದನ್ನು ಕೇಳುವವರೂ ಟಿ.ವಿ.ವೀಕ್ಷಕರೂ ನೋಡುತ್ತಿರುತ್ತಾರೆ. ಆದ್ದರಿಂದ ಈ ನಿರೂಪಣೆಯಲ್ಲಿ ವಿವರಗಳ ಅಗತ್ಯ ಕಡಿಮೆಯಾಗಿದೆ. ಆದರೂ ಕೇವಲ ದೃಶ್ಯಾವಳಿಗಳನ್ನು ಮಾತ್ರ ಪ್ರಸಾರ ಮಾಡುವುದು ಸಾಧ್ಯವಾಗುವುದಿಲ್ಲ. ಇಂತಹ ಪ್ರಯೋಗಗಳು ನಡೆದಿವೆ. ಭಾಷೆಯ ವ್ಯಾಖ್ಯೆಯ ನೆರವಿಲ್ಲದೇ ಪ್ರತ್ಯಕ್ಷ ವರದಿಗಳು ಸಾಧ್ಯವಾಗವು. ಹಾಗಾದರೆ ಇಲ್ಲಿ ಭಾಷೆಯ ಕೆಲಸವೇನು? ಜಾಗತಿಕವಾಗಿ ಈ ವಲಯದಲ್ಲಿ ತುಂಬಾ ವೃತ್ತಿಪರತೆ ಬೆಳೆದು ಬಂದಿದೆ. ಆದರೆ ಕನ್ನಡ ಇಂತಹ ಪ್ರಸಂಗಗಳಲ್ಲಿ ಬಳಕೆಯಾಗುವ ಸಾಧ್ಯತೆಗಳು ಮೂಡಿರುವುದು ತೀರಾ ಈಚಿನ ವರ್ಷಗಳಲ್ಲಿ. ಹಾಗಾಗಿ ಇಲ್ಲಿ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿದೆ. ಒಂದು ಘಟನಾವಳಿಯನ್ನು ತೋರಿಸುತ್ತಲೇ ಹೇಗೆ ವರ್ಣಿಸಬೇಕು ಎಂಬುದನ್ನು ಇನ್ನೂ ಸ್ಪಷ್ಟವಾಗಿ ಗುರುತಿಸಿಕೊಂಡಂತಿಲ್ಲ. ಅದರಲ್ಲೂ ನಡೆಯುತ್ತಿರುವ ಪ್ರಸಂಗಗಳು ಅನಿಯಂತ್ರಿತ ಮತ್ತು ಅನಿಯೋಜಿತ ಆದಾಗ ಈ ಕೊರತೆ ಮತ್ತಷ್ಟು ಎದ್ದು ಕಾಣುತ್ತದೆ.

ಈ ಪ್ರಸಂಗಗಳಲ್ಲಿ ಕೇಳುಗರಂತೆಯೇ ನಿರೂಪಕರೂ ಘಟನೆಯ ಸ್ಥಳದಿಂದ ದೂರವಿರುವ ಸಂದರ್ಭಗಳು ಈಗ ಹೆಚ್ಚಾಗಿವೆ. ಅಂದರೆ ಒಂದು ಪ್ರಸಂಗದ ದೃಶ್ಯಾವಳಿಗಳು ಪ್ರಸಾರವಾಗುತ್ತಿರುವಾಗಲೇ ನಿರೂಪಕರು ತಾವು ಆ ಪ್ರಸಾರದ ದೃಶ್ಯಗಳನ್ನು ನೋಡುತ್ತ ವ್ಯಾಖ್ಯಾನ ಮಾಡಬೇಕಾದ ಪ್ರಸಂಗಗಳಿವೆ. ಇಲ್ಲಿಯೂ ಕೂಡ ಭಾಷೆಯ ಬಳಕೆಯ ತುರ್ತು ಬೇರೆಯ ನೆಲೆಯನ್ನು ಕಂಡುಕೊಳ್ಳುತ್ತದೆ. ಇಂತಹ ಸಂದರ್ಭಗಳನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡಿದರೆ ನಿರೂಪಣೆಗಳಿಗೂ ದೃಶ್ಯಾವಳಿಗಳಿಗೂ ಎಷ್ಟೋ ಸಂದರ್ಭಗಳಲ್ಲಿ ನೇರ ಸಂಬಂಧ ಇರುವುದಿಲ್ಲವೆಂಬುದು ಗೊತ್ತಾಗುತ್ತದೆ. ಹಾಗಾಗುವುದು ಅಪೇಕ್ಷಣೀಯವಲ್ಲ. ಕೇಳುವವರು ಎರಡು ಭಿನ್ನ ನೆಲೆಗಳಿಂದ ಗ್ರಹಿಸುವವರಾಗಿರುತ್ತಾರೆ. ಒಂದು ಕಣ್ಣಿನ ಗ್ರಹಿಕೆ. ಇನ್ನೊಂದು ಕಿವಿಯ ಗ್ರಹಿಕೆ. ಈ ಎರಡು ಗ್ರಹಿಕೆಗಳು ಬೀರುವ ಪರಿಣಾಮಗಳು ಪರಸ್ಪರ ಪೂರಕವಾಗಿರಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುವುದೇ ಇಲ್ಲ. ಹಾಗಾಗದಿರುವುದು ಒಂದು ಕೊರತೆ ಎಂದೂ ಕೂಡ ಭಾವಿಸುತ್ತಿಲ್ಲ. ಕಿವಿಯನ್ನು ಮುಟ್ಟುವ ಭಾಷೆಗೆ ಇಲ್ಲಿ ಕೆಲಸವೇನು? ಅದು ಸ್ವತಂತ್ರವೇ? ಪೂರಕವೇ? ಅಥವಾ ವೈರುಧ್ಯದ ನೆಲೆಯಲ್ಲಿರುತ್ತದೆಯೇ? ಈ ಸಮಸ್ಯೆಗಳನ್ನು ಕನ್ನಡ ಸಂಸ್ಕೃತಿ ಈಗ ಎದುರಿಸತೊಡಗಿದೆ.

ಇಂತಹದೇ ಮತ್ತೊಂದು ನಿರೂಪಣೆಯನ್ನು ದೃಶ್ಯಮಾಧ್ಯಮದಿಂದಲೇ ನಾವು ನೋಡಬಹುದು. ಇದು ಟಿ.ವಿ. ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರ್ವಾಹಕರ  ಭಾಷಾ ನಿರೂಪಣೆಗಳು. ಅವರು ಈಗಾಗಲೇ ಸಿದ್ಧಗೊಂಡ ದೃಶ್ಯದ ತುಣುಕುಗಳನ್ನು ಇರಿಸಿಕೊಂಡು ನಡುವೆ ಕೇಳುಗರೊಡನೆ ಮಾತನಾಡುತ್ತ ಅವರ ಪ್ರಶ್ನೆಗಳಿಗೆ ಉತ್ತರಿಸುತ್ತ್ತ ಕಾರ್ಯಕ್ರಮ ನಿರ್ವಹಿಸುತ್ತಾರೆ. ಕೇಳುಗರು ತಾವು ನಿಷ್ಕ್ರಿಯವಾಗಿ ಮಾತು ಕೇಳುವ ಜೊತೆಗೆ ದೃಶ್ಯ ನೋಡುವ ಬಗೆ ಒಂದಿದೆ. ಅಲ್ಲಿ ನಿರೂಪಕರಿಗೆ ಈಗಾಗಲೇ ಸಿದ್ಧಗೊಂಡ ಪಠ್ಯವೊಂದನ್ನು ಮಾತನಾಡಲು ಒದಗಿಸಲಾಗುತ್ತದೆ. ಆದರೆ ಇನ್ನೊಂದು ಬಗೆಯಲ್ಲಿ ಕೇಳುಗರು ಕೂಡ ಮಾತನಾಡುವ ಅವಕಾಶವನ್ನು ಕಲ್ಪಿಸಲಾಗು ತ್ತದೆ. ಕನ್ನಡ ವಾತಾವರಣಕ್ಕೆ ಇದು ಅತ್ಯಂತ ಹೊಸ ಅನುಭವ. ವೈಯಕ್ತಿಕ ಮತ್ತು ಸಾರ್ವಜನಿಕಗಳೆರಡು ವಿಚಿತ್ರ ರೀತಿಯಲ್ಲಿ ಬೆರೆಯುತ್ತಿವೆ. ಇಲ್ಲಿ ಭಾಷೆ ಕೇವಲ ಲೋಕಾಭಿರಾಮವಾದ ಕಾಡು ಹರಟೆಯ ಕೆಲಸ ಮಾಡುತ್ತಿದೆ ಎಂದು ತಿಳಿಯುವಂತಿಲ್ಲ. ಹಾಗಿದ್ದಾಗಲೂ ಖಾಸಗಿ ವಲಯದ ಕಾಡುಹರಟೆಯಷ್ಟು ಈ ಕೆಲಸ ಸುಲಭವಲ್ಲ. ನಾವೀಗ ಬಣ್ಣಿಸಿದ ಪ್ರಸಂಗದಲ್ಲಿ ನಿರೂಪಣೆ ಮಾಡುತ್ತಿರುವವರು ಕಿವಿಗೆ ತಲುಪುವ ಮಾತುಗಳನ್ನು ಆಗಲೇ ಅಲ್ಲೇ ಸೃಷ್ಟಿಸಬೇಕು, ಮಾತಾಡಬೇಕು. ಆ ವೇಳೆಯಲ್ಲಿ ಅವರು ಸಾರ್ವಜನಿಕ ದೃಷ್ಟಿಗೆ ನಿರಂತರವಾಗಿ ಒಳಗಾಗುತ್ತಿರಬೇಕು. ಪ್ರಸಂಗಾವಧಾನದಿಂದ ಎಲ್ಲವನ್ನೂ ಭಾಷಿಕವಾಗಿ ನಿರ್ವಹಿಸುವ ಸಾಮರ್ಥ್ಯ ಇರಬೇಕು. ಇದು ಬುದ್ಧಿವಂತಿಕೆಯಷ್ಟೇ ಅಲ್ಲ, ಭಾಷೆಯ ಸಾಧ್ಯತೆಗಳ ಮೇಲಿರುವ ಪ್ರಭುತ್ವವೂ ಹೌದು.

ಈ ಎರಡು ವಲಯಗಳ ಮುಖಾಮುಖಿ ಹಿಂದೆ ಇದ್ದ ರಂಗಭೂಮಿಯ ನಟ ನಟಿಯರ ಸ್ವರೂಪಕ್ಕಿಂತ ಭಿನ್ನವಾದದ್ದು. ಅವರು ಈಗಾಗಲೇ ಸಿದ್ಧಗೊಂಡ ಮಾತಿನ ಲೋಕಕ್ಕೆ ತೆತ್ತುಕೊಂಡು ಸಾರ್ವಜನಿಕರು ನೋಡದ ವಲಯದಲ್ಲಿ ಯಾವ ಮುಜುಗರವೂ ಇಲ್ಲದೇ ಭಾಗಿಯಾಗಬಹುದಿತ್ತು. ಆದರೆ ನಾವೀಗ ವರ್ಣಿಸುತ್ತಿರುವ ಸ್ಥಿತಿಯಲ್ಲಿ ಮಾತು ‘ಅಲ್ಲೇ ಮತ್ತು ಆಗಲೇ’ ಸಾರ್ವಜನಿಕ ಗ್ರಹಿಕೆಗೆ ಸಿದ್ಧವಾಗಬೇಕು. ಇನ್ನೊಂದು ಸಂದರ್ಭದೊಡನೆ ಇದನ್ನು ಹೋಲಿಸಿ ನೋಡೋಣ. ಯಾವುದೋ ಅಪಘಾತ, ನೈಸರ್ಗಿಕ ಪ್ರಕೋಪ ಇಲ್ಲವೇ ಅಪರಾದ ಅಥವಾ ಸಾಧನೆಗಳನ್ನು ವರದಿ ಮಾಡುವಾಗ ಕ್ಯಾಮೆರಾದೊಡನೆ ನಿರೂಪಕರು ಆಯಾ ಜಾಗಗಳಿಗೆ ಹೋಗುತ್ತಾರೆ. ಅಲ್ಲಿ ಪ್ರಸಂಗವನ್ನು ವರದಿ ಮಾಡುತ್ತಲೇ ಭಾಗೀದಾರರನ್ನು ಇಲ್ಲವೇ ಅನುಭೋಗಿಗಳನ್ನು ಮಾತನಾಡಿಸುತ್ತಾರೆ. ಇಲ್ಲಿ ಕೂಡಲೇ ಖಾಸಗಿಯಾದದ್ದು ಸಾರ್ವಜನಿಕವಾಗುವ ಪ್ರಸಂಗ ಸೃಷ್ಟಿಯಾಗುತ್ತದೆ. ಇಂತಹ ದೃಶ್ಯಗಳನ್ನು ಗಮನಿಸಿದರೆ ನಿರೂಪಕರೊಡನೆ ಭಾಗಿಯಾಗುವ ಆ ಪ್ರಸಂಗದ ಭಾಗೀದಾರರೂ ಮಾತಿನ ಬಗೆಗೆ ತೀವ್ರ ಗೊಂದಲದಲ್ಲಿರುವುದು ಗೊತ್ತಾಗುವಂತಿರುತ್ತದೆ. ಖಾಸಗಿ ಮತ್ತು ಸಾರ್ವಜನಿಕಗಳ ಗಡಿಗೆರೆಗಳನ್ನು ಅಳಿಸಿ ಹಾಕಲು ಕನ್ನಡ ಇನ್ನೂ ಸಮರ್ಥವಾಗಿಲ್ಲ ಎಂಬುದನ್ನು ಇಂತಹ ಪ್ರಸಂಗಗಳು ನಮಗೆ ತೋರಿಸಿಕೊಡುತ್ತವೆ. ಹೀಗೆ ಮಾತನಾಡುವ ಭಾಗೀದಾರರು ಮಾತುಗಳನ್ನು ಸಂಯೋಜಿಸುವಲ್ಲಿ ಅನುಭವಿಸುವ ಗೊಂದಲವೇ ಅವರ ಆಂಗಿಕಗಳಲ್ಲೂ ತೋರಿಸುತ್ತಾರೆ. ಕಣ್ಣುಗಳು ದೃಶ್ಯವನ್ನು ರವಾನಿಸುತ್ತಿರುವ ಕ್ಯಾಮೆರಾದ ಕಡೆಗೆ ಇರಬೇಕೋ ಅಥವಾ ಮಾತನ್ನು ರವಾನಿಸುತ್ತಿರುವ ಮೈಕ್ರೋಫೋನ್ ಕಡೆಗೆ ಇರಬೇಕೋ ಅಥವಾ ಈ ಸಂದರ್ಭವನ್ನು ನಿರೂಪಿಸುತ್ತಿರುವವರ ಕಡೆಗೆ ಇರಬೇಕೋ ಎಂಬ ಗೊಂದಲ ಎದ್ದು ಕಾಣುತ್ತದೆ. ಅವರ ಭಾಷೆಯೂ ಕೂಡ ಈ ಮೂರು ನೆಲೆಗಳಲ್ಲಿ ತುಯ್ದಾಟವಾಡುತ್ತಿರುತ್ತದೆ.

ದೃಶ್ಯ ಮಾಧ್ಯಮದ ಬೆಳವಣಿಗೆಯಿಂದಾಗಿ ಮಾತಿನ ನಿರೂಪಣೆಗಳು ಇನ್ನೂ ಹಲವು ಸ್ವರೂಪಗಳನ್ನು ಹೊಸದಾಗಿ ಪಡೆದುಕೊಳ್ಳುತ್ತಿವೆ. ಮುಖ್ಯವಾಗಿ ನಿರೂಪಕರು ನಿರೂಪಣೆ ಮಾಡುತ್ತಿರುವ ಸಂದರ್ಭದಲ್ಲೇ ನೋಡುಗ ಕೇಳುಗರು ಅದನ್ನು ಗ್ರಹಿಸುತ್ತಿರುವುದು ಮತ್ತು ಹೀಗೆ ಕೇಳುತ್ತಿರುವವರು ಕೂಡ ನಿರೂಪಕರೊಡನೆ ಮಾತನಾಡಲು ಸಾಧ್ಯವಿದ್ದು ಅದಕ್ಕೂ ನಿರೂಪಕರು ತಮ್ಮ ನಿರೂಪಣೆಯಲ್ಲಿ ಅವಕಾಶ ಕಲ್ಪಿಸಿಕೊಳ್ಳಬೇಕಾಗುತ್ತದೆ. ಇದು ಭಾಷೆಯ ಬಳಕೆ ಮತ್ತು ನಿರ್ವಹಣೆಗೆ ಹೊಸ ಸವಾಲನ್ನು ತಂದೊಡ್ಡಿದೆ. ಇಲ್ಲಿ ಮಾತಿನ ವಿಷಯಕ್ಕಿಂತ ಮುಖ್ಯವಾಗಿ ಅದರ ರೀತಿಗೆ ಹೆಚ್ಚಿನ ಒತ್ತು ಬೀಳುತ್ತದೆ. ಜೊತೆಗೆ ಮಾತು ಮತ್ತು ಮೌನಗಳ ಸಮತೋಲನವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬ ಸಮಸ್ಯೆಯೂ ಮುಂಚೂಣಿಗೆ ಬರತೊಡಗಿದೆ. ಇಂತಹ ನಿರೂಪಣೆಗಳ ಮತ್ತೊಂದು ಆಯಾಮವೆಂದರೆ ನಿರೂಪಕರ ಮತ್ತು ಪ್ರಾಸಂಗಿಕವಾಗಿ ಅವರೊಡನೆ ಸಂಭಾಷಣೆ ಮಾಡುತ್ತಿರುವವರ ಮಾತುಗಳನ್ನು ಅಸಂಖ್ಯಾತ ಪ್ರೇಕ್ಷಕರು ಅಥವಾ ನೋಡುಗರು ನೋಡುತ್ತಿರುತ್ತಾರೆ/ಕೇಳುತ್ತಿರುತ್ತಾರೆ. ಅಂದರೆ ಇದು ಖಾಸಗಿ ಮತ್ತು ಸಾರ್ವಜನಿಕಗಳು ವಿಶಿಷ್ಟ ರೀತಿಯಲ್ಲಿ ಮುಖಾ ಮುಖಿಯಾಗುವ ಸನ್ನಿವೇಶ.

ಟಿ.ವಿ.ಯಲ್ಲಿ ಒಂದು ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂದುಕೊಳ್ಳಿ. ನಿರೂಪಕರು ಕೇಳುಗರೊಬ್ಬರ ದೂರವಾಣಿ ಕರೆಗೆ ಓಗೊಟ್ಟು ಅವರೊಡನೆ ಮಾತನಾಡುತ್ತಾರೆ. ಕರೆ ಮಾಡುತ್ತಿರುವವರು ಮಾತಾಡುತ್ತಿರುವ ಹೊತ್ತಿನಲ್ಲಿ, ಅದು ಕೆಲವೇ ಸೆಕೆಂಡುಗಳು ಇರಬಹುದು, ಅಷ್ಟೂ ಹೊತ್ತು ನಿರೂಪಕರು ಒಂದು ದೃಶ್ಯದ ಭಾಗವಾಗಿ ಇರಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾಷೆಯ ಕಿವಿಯ ಕೆಲಸ ಮತ್ತು ಕಣ್ಣಿನ ಕೆಲಸಗಳು ಈವರೆಗೆಎದುರಿಸದಿದ್ದ ಹೊಸ ಇಕ್ಕಟ್ಟಿಗೆ ಸಿಲುಕುತ್ತಿವೆ. ಈ ಬಗೆಯ ಆಧುನೀಕರಣಕ್ಕೆ ಕನ್ನಡವನ್ನು ಸಜ್ಜುಗೊಳಿಸುವ ಯೋಜಿತ ಪ್ರಯತ್ನಗಳು ನಡೆದಿಲ್ಲ. ಅವು ತಮ್ಮ ಪಾಡಿಗೆ ತಾವು ಸಮಸ್ಯೆಯಲ್ಲಿ ಮುಳುಗಿ ಹೇಗೋ ಪಾರಾಗಲೂ ಯತ್ನಿಸುತ್ತಿವೆ.

ಜಾಹೀರಾತಿನ ಮತ್ತು ವಾರ್ತಾ ಪ್ರಸಾರದ ನಿರೂಪಣೆಗಳನ್ನು ಕೂಡ ಈ ದೃಷ್ಟಿಯಿಂದ ನೋಡಬಹುದು. ಜಾಹೀರಾತಿನಲ್ಲಿ ಭಾಷೆಯ ಕೆಲಸವೇನು? ಮಾಹಿತಿ ರವಾನೆ ಮಾಡುವ ಅತ್ಯಂತ ಪ್ರಾಥಮಿಕ ಕೆಲಸ ಅದಕ್ಕಿದೆ ಎಂದು ಹೇಳಿದರೂ ವಾಸ್ತವವಾಗಿ ದೃಶ್ಯ ಮಾಧ್ಯಮದ ಜಾಹೀರಾತಿನ ಭಾಷೆಯುಆ ಕೆಲಸವನ್ನು ಮಾಡುತ್ತಿಲ್ಲ. ಮಾಡಬೇಕೆಂಬ ಅಪೇಕ್ಷೆ ಕೂಡ ಇದ್ದಂತಿಲ್ಲ. ಜಾಹೀರಾತಿನಲ್ಲಿ ಮಾತಿನ ಜೊತೆಗೆ ಕನಿಷ್ಟ ಪ್ರಮಾಣದ ಬರಹವು ಕೂಡ ಅಲ್ಲಿ ಅಳವಟ್ಟಿರುತ್ತದೆ. ಕೆಲವು ಪದಗಳು ಅತಿ ಚಿಕ್ಕ ವಾಕ್ಯಗಳು ಕಾಣಿಸಿಕೊಳ್ಳುತ್ತವೆ. ಉಳಿದಂತೆ ದೃಶ್ಯಗಳು ಮತ್ತು ನಾದ ಸೇರಿ ಒಟ್ಟು ಜಾಹೀರಾತು ರೂಪಗೊಂಡಿರುತ್ತದೆ. ಈ ಸಂವಹನದಲ್ಲಿ  ಬಳಕೆಯಾಗುವ ಭಾಷೆಯಲ್ಲಿ, ಅದರ ಮೂಲಭೂತ ಉದ್ದೇಶವಾದ ಅರ್ಥಸಂಯೋಜನೆ ಎನ್ನುವುದು ಕನಿಷ್ಟ ಪ್ರಮಾಣಕ್ಕೆ ಇಳಿದಿರುತ್ತದೆ. ಎಷ್ಟೋ ವೇಳೆ ದೃಶ್ಯ ವಿವರಗಳಿಗೂ ಬಳಕೆಯಾದ ಭಾಷೆಗೂ ನೇರ ಸಂಬಂಧ ಇರುವುದಿಲ್ಲ. ಅಂದರೆ ಇಲ್ಲಿನ ಭಾಷೆಯ ನಿರೂಪಣೆ ಕೂಡ ಕನ್ನಡಕ್ಕೆ ಹೊಸದು. ನೂರಕ್ಕೆ ನೂರು ಪಾಲು ಜಾಹೀರಾತುಗಳಲ್ಲಿ ಕನ್ನಡ ಅನುವಾದವಾಗಿ ಮಾತ್ರ ಬಳಕೆಯಾಗುತ್ತದೆ. ಆದ್ದರಿಂದ ಕನ್ನಡವೇ ಈ ಪರಿಸ್ಥಿತಿಗೆ ತನ್ನ ಸಾಮಗ್ರಿಗಳನ್ನು ಬಳಸಿಕೊಂಡೇ ಸನ್ನದ್ಧವಾಗಬೇಕು ಎಂಬ ಒತ್ತಾಯ ಈಗ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಆಗಬಹುದು ಎಂದು ಯೋಚಿಸಲು ಕಾರಣಗಳಿಲ್ಲ.

ವಾರ್ತಾ ಪ್ರಸಾರಗಳಲ್ಲಿ ಭಾಷೆಗೆ ಮಾಹಿತಿಯನ್ನು ರವಾನಿಸುವ ಹೊಣೆಯು ಇರುತ್ತದೆ. ಆದರೆ ದೃಶ್ಯಗಳ ಮೇಲೆ ಬಹುಪಾಲು ಅವಲಂಬಿತವಾಗುವ ಈ ಮಾಧ್ಯಮಗಳಲ್ಲಿ ನಿರೂಪಣೆ ಮತ್ತು ದೃಶ್ಯಾವಳಿಗಳ ಸಂಯೋಜನೆ ಯಾವಾಗಲೂ ಪೂರಕವಾಗಿಯೇ ಇರಬೇಕಾಗಿಲ್ಲ. ಭಾಷಿಕ ನಿರೂಪಣೆಯಲ್ಲಿ ನಿರ್ಮಮತೆ, ನಿಷ್ಪಕ್ಷಪಾತ ಮತ್ತು ನಿರಾಳತೆಗಳನ್ನು ಕಾಯ್ದುಕೊಳ್ಳಬಹುದು. ಆದರೆ ದೃಶ್ಯಾವಳಿಗಳು ಅದಕ್ಕೆ ಭಿನ್ನವಾದ ನೆಲೆಯನ್ನು ಪ್ರತಿಪಾದಿಸಲು ಸಾಧ್ಯ. ಅಂದರೆ ವಾರ್ತೆಗಳ ವಿಷಯ ಏನೇ ಆಗಿದ್ದರೂ ದೃಶ್ಯಾವಳಿಗಳು ಆ ವಾರ್ತೆಯ ವಿಷಯವನ್ನು ಕೇವಲ ಸಮರ್ಥಿಸಬೇಕಾಗಿಲ್ಲ. ಅದರ ಟೊಳ್ಳುತನವನ್ನು, ಸತ್ಯಪರತೆಯ ಕೊರತೆಯನ್ನು ಆ ದೃಶ್ಯಗಳು ಪ್ರತಿಪಾದಿಸ ಬಹುದು. ಭಾಷೆಗೆ ಈ ಬಗೆಯ ಪರೀಕ್ಷೆಗಳು ಈ ಹಿಂದೆ ಅಲ್ಪ ಪ್ರಮಾಣದಲ್ಲಿ ಬಂದಿದ್ದರೂ ಅದೆಲ್ಲವೂ ಈಗ ಅಗಾಧ ಸ್ವರೂಪದಲ್ಲಿ ಹೆಚ್ಚಳಗೊಂಡಿವೆ. ವಾರ್ತಾ ಪ್ರಸಾರಗಳಲ್ಲಿ ಈಗ ಅಂದರೆ ವಾರ್ತೆ ಪ್ರಸಾರವಾಗುವಾಗ ನಡೆದ ಘಟನೆಗಳ ಮಾಹಿತಿಯು ದೊರಕುವ ಪ್ರಸಂಗಗಳಿರುತ್ತವೆ. ಆಗಲೂ ಕೂಡ ಭಾಷೆಯ ಮುಖ್ಯ ಉದ್ದೇಶ ಈಡೇರದೆ ಹೋಗಬಹುದು. ಕನ್ನಡ ಈ ಮೊದಲೇ ಹೇಳಿದಂತೆ ಈ ಬಗೆಯ ಜವಾಬ್ದಾರಿಗೆ  ಇನ್ನೂ ಕಿಂಚಿತ್ ಪ್ರಮಾಣದಲ್ಲಾದರೂ ಸಿದ್ಧಗೊಂಡಿಲ್ಲವೆಂದೇ ಹೇಳಬೇಕಾಗಿದೆ.