ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡವನ್ನು ಕಳೆದು ಹೋಗುತ್ತಿರುವ ಭಾಷೆ; ಅಪಾಯ ಎದುರಿಸುತ್ತಿರುವ ಭಾಷೆ ಎಂದು ಗುರುತಿಸುವ ಆತಂಕದ ಮಾತುಗಳು ಕೇಳಿ ಬರುತ್ತಿವೆ. ಹಲವು ವೇದಿಕೆಗಳಲ್ಲಿ ಈ ಕುರಿತು ಚರ್ಚೆಗಳು ನಡೆದಿವೆ. ವಿನಾಶದ ಅಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡವೂ ಇದೆ ಎಂಬ ಭಯ ಹುಟ್ಟಿಸುವ ಮಾತುಗಳು ಕೇಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭಾಷಾನಾಶವನ್ನು ಕುರಿತು ಕೆಲವು ಮೂಲಭೂತ ಸಂಗತಿಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಭಾಷಾನಾಶವೆಂದರೆ ಒಂದು ಭಾಷೆಯನ್ನು ಬಳಸುವ ಜನಸಮುದಾಯ ತನ್ನ ಭಾಷೆಯನ್ನು ಸಂಪೂರ್ಣ ವಾಗಿ ಕಳೆದುಕೊಳ್ಳುವುದು. ಇನ್ನೊಂದು ಭಾಷೆಯ ಮಡಿಲನ್ನು ಸೇರಿ ಆ ಭಾಷೆಯ ಭಾಷಿಕರಾಗುವುದು. ಇದು ಉಂಟಾಗುವುದು ಯಾವಾಗ? ಒಂದು: ಭಾಷೆಯನ್ನಾಡುವ ಜನರು ಸಂಖ್ಯೆಯಲ್ಲಿ ಕಡಿಮೆಯಾಗುತ್ತ ಕೊನೆಗೆ ಒಬ್ಬಿಬ್ಬರು ಉಳಿದು ಅನಂತರ ಅವರು ಮಾಯವಾಗಿ ಬಿಡುವುದು. ಎರಡು: ಒಂದು ಭಾಷಾಸಮುದಾಯ ಸಾಮಾಜಿಕ ಒತ್ತಡಗಳಿಂದಾಗಿ ತನ್ನ ಭಾಷೆಯನ್ನು ಬಿಟ್ಟುಕೊಟ್ಟು ಇನ್ನೊಂದು ಅಧಿಕಾರದ ಭಾಷೆ ಯನ್ನು ಬಳಸಲು ತೊಡಗುವುದು. ಇಂತಹ ಸಂದರ್ಭಗಳಲ್ಲಿ ದ್ವಿಭಾಷಿಕ ಸನ್ನಿವೇಶಗಳು ಉಂಟಾಗುವ ಸಂದರ್ಭಗಳಿರುತ್ತವೆ. ಅನಂತರದಲ್ಲಿ ಈ ದ್ವಿಭಾಷಿಕರು ತಮ್ಮ ಮೂಲಭಾಷೆಯನ್ನು ಬಿಟ್ಟುಕೊಟ್ಟು ಅನ್ಯಭಾಷಿಕರಾಗಿ ಬಿಡುವುದು ಸಾಧ್ಯ. ಮೂರು: ಒಂದು ಭಾಷೆಯನ್ನಾಡುವ ಜನರು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯದೆ ಇನ್ನೊಂದು ಭಾಷಾ ಸಮುದಾಯದೊಡನೆ ವ್ಯವಹರಿಸಬೇಕಾಗಿ ಬಂದಾಗ ನಡೆಯುವ ಬದಲಾವಣಿಗಳಿಂದ ಪಿಜಿನ್ ಎಂಬ ಭಾಷಾ ಪ್ರಭೇದ ಸಿದ್ದಗೊಳ್ಳುತ್ತದೆ. ಇದು ಈ ಭಾಷಿಕರ ಮಕ್ಕಳು ತಮ್ಮ ಪಾಲಕರು ಭಾಷೆಯನ್ನು ಬಿಟ್ಟು ಈ ಪಿಜಿನ್ ಅನ್ನೇ ತಮ್ಮ ಮೊದಲು ಭಾಷೆಯನ್ನಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ಕ್ರಿಯೊಲ್ ಎಂದು ಕರೆಯಲಾಗುವ ಈ ಭಾಷೆಯಲ್ಲಿ ಮೂಲ ಭಾಷೆಯ ವ್ಯಾಕರಣ ಮತ್ತು ಇನ್ನೊಂದು ಭಾಷೆಯ ಪದಕೋಶ ಇವೆರಡೂ ಸೇರಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಭಾಷಾನಾಶ ಸಂಭವಿಸಬಹುದು. ಕನ್ನಡವು ನಾಶವಾಗುತ್ತಿರುವ ಭಾಷೆ ಎಂದು ತಿಳಿಯಲು ಈ ಮೇಲಿನ ಮೂರು ಸಂದರ್ಭಗಳಲ್ಲಿ ಯಾವುದು ಈಗ ಒದಗಿಬಂದಿದೆ ಎಂಬುದನ್ನು ಗಮನಿಸಿದರೆ ಅಂತಹ ಯಾವುದೇ ಸಂದರ್ಭಗಳು ಇಲ್ಲಿ ಒದಗಿವೆ ಎನ್ನಿಸುವುದಿಲ್ಲ.

ಅಲ್ಲದೇ ಜಗತ್ತಿನಾದ್ಯಂತ ಭಾಷೆಗಳು ಕಳೆದುಹೋಗುತ್ತಿರುವ ನಾಶವಾಗುತ್ತಿರುವ ಪ್ರಮಾಣ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಆದರೆ ಹೀಗೆ ಕಳೆದುಹೋಗುತ್ತಿರುವ ಭಾಷೆಗಳು ಸಾಮಾನ್ಯವಾಗಿ ಅನ್ಯಭಾಷೆ ಸಂಸರ್ಗವಿಲ್ಲದೆ ಬದುಕುತ್ತಿರುವ ಆದಿವಾಸಿಗಳ ಭಾಷೆಗಳು. ಈ ಭಾಷೆಗಳ ಸಂಖ್ಯೆಯು ಸಾಕಷ್ಟು ದೊಡ್ಡದು. ಆದರೆ ಕನ್ನಡ ಹೀಗೆ ಅನ್ಯಭಾಷೆ ಸಂಸರ್ಗವಿಲ್ಲದ ಭಾಷೆಯಲ್ಲ. ಇದೊಂದು ಪೌರಸಮಾಜದ ಭಾಷೆ. ಆದ್ದರಿಂದ ಈ ಕಾರಣದಿಂದಲೂ ಕನ್ನಡವು ನಾಶವಾಗುವ ಭಾಷೆ ಎನ್ನುವಂತಿಲ್ಲ. ಎತ್ನೋಲಾಗ್ ಸಂಸ್ಥೆಯ ವಿಭಾಗವೊಂದು ಅಳಿವಿನ ಅಂಚಿನಲ್ಲಿರುವ  ಜಗತ್ತಿನ ಭಾಷೆಗಳ ಒಂದು ಮಾಹಿತಿ ಕೋಶವನ್ನು  ತಯಾರಿಸುತ್ತಿದೆ. ಇದಲ್ಲದೇ ಟೆರ್ರಾ ಲಿಂಗ್ವಾ ಮತ್ತು ಲಿಂಗ್ವಿಸ್ಫಿಯರ್ ಎಂಬ ಸ್ವಾಯತ್ತ ವೇದಿಕೆಗಳು ಅಳಿವಿನ ಅಂಚಿನಲ್ಲಿರುವ ಭಾಷೆಗಳ ಬಗೆಗೆ ಮಾಹಿತಿ ಸಂಗ್ರಹಿಸಿವೆ. ಈ ಮಾಹಿತಿಕೋಶವು ಕೂಡ ಕನ್ನಡವನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿಲ್ಲ.

ಹೀಗೆ ತಾರ್ಕಿಕ ಕಾರಣಗಳನ್ನು ಮುಂದಿಟ್ಟು ಕನ್ನಡ ಅಪಾಯದ ಅಂಚಿನಲ್ಲಿಲ್ಲ ಎಂದು ನಿರಾಳವಾಗಬೇಕೆಂದು ಹೇಳುತ್ತಿಲ್ಲ. ಕನ್ನಡಕ್ಕೇನೋ ಅಪಾಯವಿದೆ ಎಂಬ ಭಾವನೆ ಬರಲು ಕಾರಣಗಳೇನು? ಈ ಆತಂಕ ಮಂಡಿಸುವ ಜನರು ಹೇಳು ವುದಿಷ್ಟು. ಒಂದು: ಕನ್ನಡದ ಬಳಕೆ ಕಡಿಮೆಯಾಗುತ್ತ ಹೋಗುತ್ತಿದೆ. ಎರಡು: ಕನ್ನಡದ ಜಾಗವನ್ನು ಇತರ ಭಾಷೆಗಳು, ಮುಖ್ಯವಾಗಿ ಇಂಗ್ಲಿಶ್ ಆಕ್ರಮಿಸಿಕೊಳ್ಳುತ್ತಿದೆ. ಮೂರು: ನಾವು ಬಳಸುತ್ತಿರುವ ಕನ್ನಡ ಕೂಡ ಶುದ್ಧವಾಗಿಲ್ಲ; ಅದರಲ್ಲಿ ಅಶುದ್ಧತೆಯ ಅಂಶಗಳು ಹೆಚ್ಚಾಗುತ್ತಿವೆ; ಇದು ಅವನತಿಯ ಸೂಚಕ. ಈ ಮೂರು ಆತಂಕಗಳನ್ನು ಒಂದೊಂದಾಗಿ ವಿಶ್ಲೇಷಣೆ ಮಾಡೋಣ.ಕನ್ನಡದ ಬಳಕೆಯ ವಲಯಗಳು ಕಡಿಮೆ ಯಾಗುತ್ತಿವೆ ಎನ್ನುವುದು ನಿಜ. ಇದಕ್ಕೆ ಸಾಮಾಜಿಕವಾದ ಮತ್ತು ಸಾಂಸ್ಕೃತಿಕವಾದ ಕಾರಣಗಳು ಹಲವಾರಿವೆ. ಅಲ್ಲದೇ ಹೀಗೆ ಬಳಕೆಯ ವಲಯಗಳು ಕುಗ್ಗುವುದಕ್ಕೆ ಹೊರಗಿನ ಒತ್ತಡಗಳು ಕಾರಣವಾಗಿರುವಂತೆ ಕನ್ನಡಿಗರ ಆಯ್ಕೆಗಳು ಕೂಡ ಪ್ರೇರಣೆ ನೀಡುತ್ತಿವೆ. ಒಂದು ಸಾಮಾನ್ಯ ನಿದರ್ಶನ ಗಮನಿಸಿ. ಕಳೆದ ನಾಲ್ಕೈದು ದಶಕಗಳಲ್ಲಿ ಜನರು, ಬಂಧುಗಳು, ಆಪ್ತರು, ಪರಸ್ಪರ ಸಂಪರ್ಕ ಬೆಳೆಸಲು ಭೇಟಿಯಾಗುತ್ತಿದ್ದರು. ಇಲ್ಲವೇ ಮಧ್ಯವರ್ತಿ ಜನರ ಮೂಲಕ ಸಂದೇಶ ಕಳಿಸುತ್ತಿದ್ದರು. ಆದರೆ ಅಂಚೆ ವ್ಯವಸ್ಥೆ ವ್ಯಾಪಕಗೊಂಡಂತೆ ಊರಿಂದೂರಿಗೆ ಪತ್ರಗಳನ್ನು ಬರೆಯುವ ಬಳಕೆ ಹೆಚ್ಚತೊಡಗಿತ್ತು. ವ್ಯಾವಹಾರಿಕವಾದ ಪತ್ರಗಳು, ಸಮಾಚಾರದ ಪತ್ರಗಳು, ಮಾಹಿತಿ ನೀಡುವ ಪತ್ರಗಳು, ಆಪ್ತ ಪತ್ರಗಳು ಹೀಗೆ ಹಲವು ಹತ್ತು ಬಗೆಯ ಪತ್ರಗಳು ಜನರ ನಡುವೆ ಸಂಪರ್ಕಸೇತುಗಳಾಗಿದ್ದವು. ಪತ್ರಗಳು ಎಂದರೆ ಭಾಷೆಯ ಬಳಕೆಯ ಒಂದು ಬಗೆ ತಾನೆ. ಎಷ್ಟೋ ವೇಳೆಗಳಲ್ಲಿ ಅನಕ್ಷರಸ್ಥರು ಬರೆಯಬಲ್ಲವರ ಮೂಲಕ ಈ ಪತ್ರ ಸಂಪರ್ಕವನ್ನು ಬಳಸುತ್ತಿದ್ದರು. ಸಂಪರ್ಕ ಸಾಧನಗಳ ತಂತ್ರಜ್ಞಾನದ ಪಲ್ಲಟ ನಡೆಯುತ್ತಿದ್ದಂತೆ ಜನರು ಫೋನ್ ಮಾಧ್ಯಮಕ್ಕೆ ಬದಲಾದರು. ಬರಹ ಮಾಧ್ಯಮದ ಪತ್ರದ ಜಾಗದಲ್ಲಿ ಟೆಲಿಫೋನ್, ಸೆಲ್‌ಫೋನ್‌ಗಳು ಬಂದು ಕುಳಿತವು. ಅಂದರೆ ಪತ್ರ ವ್ಯವಹಾರದ ವಲಯ ಈಗ ತೀವ್ರಪ್ರಮಾಣದಲ್ಲಿ ಕುಗ್ಗಿ ಹೋಗಿದೆ. ಅತ್ಯಂತ ಅಧಿಕೃತ ದಾಖಲೆಗಳನ್ನು ಬಯಸುವ ಕಡೆಗಳಲ್ಲೂ ಈ-ಮೇಲ್‌ಗೆ, ವಾಯ್ಸ್-ಮೇಲ್‌ಗೆ ಮನ್ನಣೆ ದೊರಕಿದೆ. ಇಂಥಾ ನಿದರ್ಶನಗಳನ್ನು ಬೆಳೆಸುತ್ತಹೋಗಬಹುದು.

ಹಾಗೆ ನೋಡಿದರೆ ತಂತ್ರಜ್ಞಾನ ಬಳಕೆಯ ವಲಯಗಳನ್ನು ಯಾವಾಗಲೂ ಕುಗ್ಗಿಸುತ್ತದೆ ಎಂದು ಆರೋಪಿಸುವಂತಿಲ್ಲ. ಅದನ್ನು ಹೆಚ್ಚಿಸಲೂಬಹುದು ಬಹು ದೂರದ ಊರುಗಳಲ್ಲಿ ವಾಸಿಸುತ್ತಿರುವ ಆಪ್ತರು ಸಂಪರ್ಕಕ್ಕಾಗಿ ಪತ್ರ ಮತ್ತು ಫೋನ್‌ಗಳನ್ನು ಬಳಸುತ್ತಿದ್ದರು. ಪತ್ರ ಸಂಪರ್ಕ ಹೆಚ್ಚು ಸಮಯವನ್ನು ಬಯಸಿದರೆ ಫೋನ್ ಸಂಪರ್ಕ ಹೆಚ್ಚು ಹಣವನ್ನು ಬಯಸುತ್ತಿತ್ತು. ಎರಡು ಬಗೆಗಳಿಂದಲೂ ಜನರು ತಮ್ಮ ಮಿತಿಗನುಗುಣವಾಗಿ ಸಂಪರ್ಕವನ್ನು ನಿಗದಿ ಮಾಡಿಕೊಳ್ಳುತ್ತಿದ್ದರೂ ಆದರೆ ತಂತ್ರಜ್ಞಾನದ ನೆರವಿನಿಂದ ದೊರೆತ ಈ-ಮೇಲ್ ಎಂಬ ಅತೀ ಶೀಘ್ರದ ಮತ್ತು ಕನಿಷ್ಟ ಖರ್ಚಿನ ಸಂಪರ್ಕ ಒಂದು ಹೊಸ ಸೌಲಭ್ಯವನ್ನು ದೊರಕಿಸಿದೆ. ಸಂಪರ್ಕದ ಪ್ರಮಾಣಕ್ಕೆ ಈಗ ಮಿತಿಯೇ ಇಲ್ಲ.

ಇಂತಹ ನಿದರ್ಶನಗಳನ್ನು ಗಮನಿಸಿದಾಗ ಕನ್ನಡದ ಬಳಕೆಯ ವಲಯಗಳು ಕುಗ್ಗುತ್ತಿವೆ ಮತ್ತು ಅದಕ್ಕೆ ತಂತ್ರಜ್ಞಾನವೇ ಕಾರಣ ಎಂದು ಆರೋಪಿಸುವುದನ್ನು ಮರುಪರಿಶೀಲನೆ ಮಾಡಬೇಕಾಗುತ್ತದೆ. ಕನ್ನಡ ಬಳಕೆಯ ವಲಯಗಳನ್ನು ಔಪಚಾರಿಕ ಮತ್ತು ಅನೌಪಚಾರಿಕ ಎಂದು ವಿಭಜಿಸಿಕೊಂಡರೆ ಒಂದು ಸಂಗತಿ ಗೋಚರಿಸುತ್ತದೆ. ಬದಲಾಗುತ್ತಿರುವ ಸಂದರ್ಭದಲ್ಲಿ ಅನೌಪಚಾರಿಕ ವಲಯದಲ್ಲಿ ಕನ್ನಡದ ಬಳಕೆ ಹೆಚ್ಚಾಗುತ್ತ ಹೋದರೆ ಔಪಚಾರಿಕ ವಲಯಗಳಲ್ಲಿ ಮಿತಗೊಳ್ಳುತ್ತ ಹೋಗುತ್ತಿದೆ. ಅಷ್ಟಿಷ್ಟು ಬದಲಾವಣೆಗಳನ್ನು ಒಪ್ಪುವುದಾದರೆ ಕನ್ನಡದ ಮಾತಿನ ವಲಯಗಳು ಹೆಚ್ಚುತ್ತ ಹೋಗುತ್ತಿದ್ದರೆ ಬರಹದ ವಲಯಗಳು ಕಡಿಮೆಯಾಗುತ್ತಿವೆ ಎನ್ನಬಹುದು.

ಎರಡನೇ ಆತಂಕ ಕನ್ನಡ ಜಾಗವನ್ನು ಬೇರೊಂದು ಭಾಷೆ ಆಕ್ರಮಿಸುತ್ತಿದೆ ಎನ್ನುವುದು. ಈ ಆತಂಕ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಹಲವು ಭಾಷೆಗಳು ಇಂತಹ ಆರೋಪಗಳನ್ನು ಮಾಡುತ್ತಿವೆ. ಜಗತ್ತಿನ ಅಲ್ಪಸಂಖ್ಯಾತ ಭಾಷೆಗಳ ಮತ್ತು ಅಲ್ಪಸಂಖ್ಯಾತರ ಭಾಷೆಗಳ ಬಗೆಗೆ ಅಧ್ಯಯನ ನಡೆಸುವ ವಿದ್ವಾಂಸರು ಭಾಷಾಹತ್ಯೆ ಎಂಬ ಪರಿಕಲ್ಪನೆಯನ್ನು ಬಳಸುತ್ತಿದ್ದಾರೆ. ಲಿಂಗ್ವಿಸೈಡ್ ಎಂಬುದಕ್ಕೆ ಸಂವಾದಿಯಾದ ಪದ ಭಾಷಾಹತ್ಯೆ. ಭಾಷಾನಾಶ ಮತ್ತು ಭಾಷಾ ಹತ್ಯೆ ಪರಿಣಾಮದಲ್ಲಿ ಒಂದೇ ಆಗಿ ಕಂಡರೂ ವಿಧಾನಗಳು ಬೇರೆ ಬೇರೆ. ಭಾಷಾನಾಶ ಯಾರ ಆಯ್ಕೆಯೂ ಆಗಿರುವುದಿಲ್ಲ. ನಾವೀಗಾಗಲೇ ಗುರುತಿಸಿದಂತೆ ಎಷ್ಟೋ ಕಾರಣಗಳಿಂದ ಅದು ಸಂಭವಿಸುತ್ತದೆ. ಭಾಷಾಹತ್ಯೆ ಹಾಗಲ್ಲ. ಇದು ಇಚ್ಛಿತ ಕ್ರಿಯೆ. ಸೂಸೈಡ್, ಹೊಮಿಸೈಡ್, ಪಾಟ್ರಿಸೈಡ್, ಮುಂತಾದ ಪದಗಳಂತೆ, ಲಿಂಗ್ವಿಸೈಡ್ ಪದ ಕೂಡ. ಹತ್ಯೆ ಎಂಬ ಪದವೇ ಒಬ್ಬ ನಿಯೋಗಿಯನ್ನು ಗುರುತಿಸುತ್ತದೆ. ಭಾಷಾಹತ್ಯೆಯು ಒಂದು ಯೋಜಿತ ಕ್ರಿಯೆ. ಜಗತ್ತಿನಾದ್ಯಂತ ಹೀಗೆ ಅಲ್ಪಸಂಖ್ಯಾತ ದುರ್ಬಲ ಭಾಷೆಗಳನ್ನು ಕೊಲ್ಲುವ ಯತ್ನ ಯೋಜಿತವಾಗಿ ಮತ್ತು ಅವ್ಯಾಹತವಾಗಿ ನಡೆಯುತ್ತಿದೆ ಎಂದು ಕೆಲವು ವಿದ್ವಾಂಸರು ವಾದಿಸುತ್ತಾರೆ. ಇಂತಹ ಹತ್ಯೆಗಳಿಗೆ ಕಾರಣವಾಗುವ ಭಾಷೆಯನ್ನಾಗಿ ಇಂಗ್ಲಿಶನ್ನು ಬೆರಳು ಮಾಡಿ ತೋರಿಸುತ್ತಾರೆ. ಈ ವಾದವನ್ನು ನಿರಾಕರಿಸುವವರು ಇದ್ದಾರೆ. ಆದರೆ ಇಂಗ್ಲಿಶ್ ಭಾಷೆಯೇ ತಂತಾನೆ ಒಂದು ಭಾಷೆಯನ್ನು ಹತ್ಯೆ ಮಾಡಲಾರದು. ಅಧಿಕಾರ ಸಂಬಂಧದಲ್ಲಿ ಇಂಗ್ಲಿಶ್ ಭಾಷೆಯನ್ನು ಬಳಸಿ ಒಂದು ಜನಾಂಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಬಯಸುತ್ತಿರಬಹುದು. ಚಾರಿತ್ರಿಕವಾಗಿ ಇಂಗ್ಲಿಶ್ ಭಾಷೆಯನ್ನು ಹೀಗೆ ಹಿಡಿತದ ಸಾಧನವನ್ನಾಗಿ  ಬಳಸಿದ್ದು ಪರಿಚಿತ ವಿಧಾನವೇ ಆಗಿದೆ. ಭಾರತದಲ್ಲೂ ಇಂಗ್ಲಿಶರು ಇಲ್ಲಿನ ಜನತೆಗೆ ಇಂಗ್ಲಿಶ್ ಶಿಕ್ಷಣವನ್ನು ನೀಡಲು ಬಯಸಿದ್ದು ಎರಡು ಕಾರಣಗಳಿಂದ. ಒಂದು: ಆಡಳಿತ ನಡೆಸಲು ತಮಗೆ ನೆರವಾಗುವ ಇಂಗ್ಲಿಶ್ ಬಲ್ಲ ಜನವರ್ಗವನ್ನು ಇಲ್ಲಿ ರೂಪಿಸುವುದು. ಎರಡು: ಇಂಗ್ಲಿಶ್ ಭಾಷೆಯನ್ನು ಈ ಜನರಿಗೆ ಅರಿವಿನ ಕಿಟಕಿಯನ್ನಾಗಿ ಮಾಡುವುದು. ಎರಡು ಉದ್ದೇಶಗಳೂ ಬೇರೆ ಬೇರೆ ರೀತಿ ನೆರವೇರಿದವು. ಆದರೆ ಜನತೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಬಳಸಲಾದ ಈ ಇಂಗ್ಲಿಶ್ ಎಂಬ ಅಸ್ತ್ರ ಇಲ್ಲಿ ಕಲಿತವರ ಕೈಯಲ್ಲೇ ಒಂದು ಅಸ್ತ್ರವಾಗಿ ಬದಲಾಯಿತು ಎಂಬುದನ್ನು ಗಮನಿಸಬೇಕು. ಇದಕ್ಕೆ ಸಮಾಂತರವಾದ ಒಂದು ಪ್ರಸಂಗ ಷೇಕ್ಸ್‌ಪಿಯರ್‌ನ ದ ಟೆಂಪೆಸ್ಟ್ ನಾಟಕದಲ್ಲಿ ಬರುತ್ತದೆ. ಪ್ರಾಸ್ಪರೋ ತನ್ನ ರಾಜ್ಯದಿಂದ ಪರಿತ್ಯಕ್ತನಾಗಿ ಮಗಳೊಡನೆ ಜನರಿಲ್ಲದ ದ್ವೀಪದಲ್ಲಿ ವಾಸಿಸುವಾಗ ಅಲ್ಲಿನ ಮೂಲನಿವಾಸಿ ಕ್ಯಾಲಿಬನ್ ಅನ್ನು ತನ್ನ ಸೇವಕನನ್ನಾಗಿ ಮಾಡಿಕೊಳ್ಳುತ್ತಾನೆ. ಸೇವಕನನ್ನು ತನ್ನ ಅಧೀನದಲ್ಲಿ ಇರಿಸಿಕೊಳ್ಳಲು ಅವನಿಗೆ ತನ್ನ ಭಾಷೆಯನ್ನು ಕಲಿಸುತ್ತಾನೆ. ಘಟನೆಗಳ ವಿಪರ್ಯಾಸವೆಂಬಂತೆ ಕ್ಯಾಲಿಬನ್ ಒಡೆಯ ಪ್ರಾಸ್ಪರೋ ವಿರುದ್ಧ ತಿರುಗಿ ಬೀಳುತ್ತಾನೆ. ಆಗ ಅವನೇ ಕಲಿಸಿದ ಭಾಷೆಯನ್ನು ತನ್ನ ಬಂಡಾಯದ ಭಾಷೆಯನ್ನಾಗಿ ಪರಿವರ್ತಿಸಿಕೊಳ್ಳುತ್ತಾನೆ. ಅಂದರೆ ಯಾವ ಉದ್ದೇಶದಿಂದ ಒಂದು ಭಾಷೆಯನ್ನು ಹೇರಲಾಗುತ್ತದೋ ಅದಕ್ಕೆ ವಿರುದ್ಧವಾದ ಉದ್ದೇಶಕ್ಕಾಗಿ ಆ ಭಾಷೆ ಬಳಕೆಯಾಗಬಹುದು ಎಂಬುದನ್ನು ಈ ನಿದರ್ಶನಗಳು ಸೂಚಿಸುತ್ತವೆ. ಆದರೆ ವಾಸ್ತವವಾಗಿ ಇದು ಬಹಳ ಸಂಕೀರ್ಣವಾದ ಪ್ರಕ್ರಿಯೆ. ಇಂಗ್ಲಿಶ್ ಭಾಷೆ ತನ್ನ ಆಧಿಪತ್ಯವನ್ನು ಏಕಪಕ್ಷೀಯವಾಗಿ ಸಾಧಿಸುತ್ತದೆ ಎನ್ನುವ ಮಾತು ಅಷ್ಟು ಸರಳವಲ್ಲ, ಏಕೆಂದರೆ ಮಾರುಕಟ್ಟೆಯ ಶಕ್ತಿಗಳು ಇಂಗ್ಲಿಶನ್ನು ಅಸ್ತ್ರವಾಗಿ ಬಳಸುತ್ತಿವೆ ಎಂಬುದು ನಿಜ. ಆದರೆ ಕೊಳ್ಳುವ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಮಾರುಕಟ್ಟೆಯ ಶಕ್ತಿಗಳ ಮುಖ್ಯ ಗುರಿಯೇ ಹೊರತು ಇಂಗ್ಲಿಶನ್ನು ಬೆಳೆಸುವುದಲ್ಲ. ಒಂದು ವೇಳೆ ಕೊಳ್ಳುವವರನ್ನು ಓಲೈಸಲು ಅವರ ಭಾಷೆಯನ್ನು ಬಳಸಬೇಕು ಎಂಬ ಪ್ರಸಂಗ ಒದಗಿದರೆ ಆಗ ಇಂಗ್ಲಿಶಿನ ಜೊತೆಗೆ ಈ ಭಾಷೆಯನ್ನು ಬಳಸಲು ಹಿಂಜರಿಯುವುದಿಲ್ಲ. ಜಾಗತೀಕರಣ ಪ್ರಕ್ರಿಯೆಯಲ್ಲಿ ಈ ಅಂಶ ಈಗ ಬಹಿರಂಗಗೊಳ್ಳುತ್ತಿದೆ. ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿ ಮೈಕ್ರೋಸಾಫ್ಟ್ ಏಕಪಕ್ಷೀಯವಾಗಿ ಇಂಗ್ಲಿಶನ್ನು ಹೇರುತ್ತಿತ್ತು. ಆದರೆ ಈಗ ತಂತಾನೆ ಕನ್ನಡವೂ ಸೇರಿದಂತೆ ಜಗತ್ತಿನ ನೂರಾರೂ ಭಾಷೆಗಳನ್ನು ತನ್ನ ಕಾರ್ಯವಾಹಿಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಿದೆ. ಈ ವಿವರಣೆಯಿಂದ ಇಂಗ್ಲಿಶನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು  ಸುಲಭವಾದರೂ ಅದನ್ನು ಅಪರಾಧಿ ಎಂದು ಸಾಬೀತು ಮಾಡುವುದು ಕಷ್ಟವೆಂದು ಗೊತ್ತಾಗುತ್ತದೆ.

ಕನ್ನಡದ ಆತಂಕಗಳಿಗೆ ಇಂಗ್ಲಿಶ್ ಕಾರಣವೆಂಬುದು ಜಾಗತಿಕ ಶಕ್ತಿಯಾಗಿ ಇಂಗ್ಲಿಶನ್ನು ಪರಿಗಣಿಸಿದಾಗ ಅಷ್ಟು ನಿಜವಲ್ಲ ಎನ್ನಿಸುತ್ತದೆ. ಆದರೆ ದೇಶೀಯ ನೆಲೆಯಲ್ಲೇ ಚಾರಿತ್ರಿಕವಾಗಿ ಇಂಗ್ಲಿಶ್ ಪಡೆದುಕೊಂಡಿರುವ ಸಾಮರ್ಥ್ಯದಿಂದಾಗಿ ಅದು ದೇಶೀಯ ಭಾಷೆಗಳಿಗೆ ಎದುರಾಳಿ ಆಗಿರಬಹುದು. ಹಳೆಯ ಮಾದರಿಯನ್ನು ಗಮನಿಸುವುದಾದರೆ ಇಂಗ್ಲಿಶ್ ಈಗ ಸಂಸ್ಕೃತದ ಜಾಗದಲ್ಲಿ ಕುಳಿತಿದೆ. ಆಳುವ ವರ್ಗದ ಒತ್ತಾಸೆ ಆ ಭಾಷೆಗೆ ಇರುವುದು ಇದಕ್ಕೆ ಮುಖ್ಯ ಕಾರಣ. ಇದರಿಂದ ಸ್ಪಷ್ಟವಾಗುವ ಇನ್ನೊಂದು ಸಂಗತಿ ಎಂದರೆ ಆಳುವ ವರ್ಗದ ಗುಣ ಲಕ್ಷಣಗಳು ಬದಲಾದರೆ ಸಹಜವಾಗಿಯೇ ಇಂಗ್ಲಿಶಿನ ಸ್ಥಾನ ಕುಸಿಯುತ್ತದೆ. ಸದ್ಯದ ಸಂಭವನೀಯ ಪ್ರವೃತ್ತಿಯನ್ನು ಕಂಡರೆ ಇಂಗ್ಲಿಶಿನ ಜಾಗವನ್ನು ತುಂಬಲು ಸಿದ್ಧವಾಗಿ ನಿಂತಿರುವ ಭಾಷೆ ಎಂದರೆ ಹಿಂದಿ. ಕನ್ನಡ ಈ ಪ್ರಸಂಗವನ್ನು ಹೇಗೆ ಎದುರಿಸುತ್ತದೆ ಎಂಬುದನ್ನು ಮುಂದಿನ ದಶಕಗಳು ತೋರಿಸಿಕೊಡಲಿವೆ.

ಮೂರನೆಯ ಆತಂಕವೆಂದರೆ ಕನ್ನಡ ಭಾಷೆ ಅಶುದ್ಧವಾಗುತ್ತಿದೆ; ತನ್ನ ಲಕ್ಷಣಗಳನ್ನು ಕಳೆದುಕೊಳ್ಳುತ್ತಿದೆ; ಇದರಿಂದಾಗಿ ಭಾಷೆ ನಾಶವಾಗುತ್ತದೆ ಎಂಬುದು. ಇದೊಂದು ಸರಳವಾದ ಗ್ರಹಿಕೆ. ಭಾಷೆಯ ಬಳಕೆಯ ಪ್ರಕ್ರಿಯೆಗಳನ್ನು ಅರಿಯದೇ ತೀರ ನೈತಿಕ ನೆಲೆಗಳಲ್ಲಿ ಸಂಗತಿಗಳನ್ನು ಗ್ರಹಿಸುವವರು ಆಡುವ ಮಾತು. ಭಾಷೆ ಅಶುದ್ಧವಾಗುವುದು ಎಂದರೇನು? ನಮಗೆ ಗೊತ್ತಿರುವ ಭಾಷೆಯ ತಾತ್ವಿಕತೆಯ ನೆಲೆಗಳು ಈ ಬಗೆಗೆ ಏನು ಹೇಳುತ್ತವೆ ನೋಡೋಣ.

ಭಾಷೆ ಎಂಬುದು ಒಂದು ಅಂತಸ್ಥ ಸಾಮರ್ಥ್ಯ. ಅದನ್ನು ನಾವು ಹೇಗೆ ಗಳಿಸಿಕೊಳ್ಳುತ್ತೇವೆ ಎಂಬ ಬಗೆಗೆ ಈಗ ಖಚಿತವಾದ ತಿಳುವಳಿಕೆ ಲಭಿಸಿದೆ. ಈ ಅಂತಸ್ಥ ಸಾಮರ್ಥ್ಯ ಒಮ್ಮೆ ಗಳಿಸಿದರೆ ಅದು ಕುಗ್ಗುವುದೂ ಇಲ್ಲ? ವಿಸ್ತರಿಸುವುದೂ ಇಲ್ಲ. ಅದರ ನೆರವಿನಿಂದ ಸೀಮಿತ ಪರಿಕರಗಳನ್ನು ಉದಾಹರಣೆಗೆ ಧ್ವನಿ, ಪದ ಇವುಗಳನ್ನು ಬಳಸಿ ನಾವು ಜೀವನದುದ್ದಕ್ಕೂ ಅಪರಿಮಿತ ವಾಕ್ಯಗಳನ್ನು ಸೃಷ್ಟಿಸುತ್ತೇವೆ. ಇತರರು ಸೃಷ್ಟಿಸಿದ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ವಾಕ್ಯಗಳು ಮೊದಲೇ ನಮ್ಮಲ್ಲಿ ಇರುವುದಿಲ್ಲ. ಅಂದರೆ ಅಂತಸ್ಥ ಸಾಮರ್ಥ್ಯ ಕೇವಲ ಒಂದು ಉತ್ಪಾದಕ ನೆಲೆಯ ಯಂತ್ರ. ಆವಿಷ್ಕಾರಗೊಂಡ ವಾಕ್ಯ ಈ ಉತ್ಪಾದಕ ಯಂತ್ರದ ಒಂದು ಸಾಧ್ಯತೆ. ಹೀಗಿರುವಾಗ ನಾವು ಅಶುದ್ಧ ಎಂದು ಗುರುತಿಸುವುದು ಈ ಆವಿಷ್ಕಾರದ ನೆಲೆಯ ವಾಕ್ಯಗಳನ್ನು ಮಾತ್ರ. ಅದಕ್ಕೆ ಕಾರಣವಾದ ಉತ್ಪಾದಕ ಯಂತ್ರವೇ ಅಶುದ್ಧವಾಗಿರುವುದು ಅಥವಾ ಕೇವಲ ಅಶುದ್ಧ ವಾಕ್ಯಗಳನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಒಂದು ಚಿಕ್ಕ ಪರೀಕ್ಷೆಯನ್ನು ಮಾಡಬಹುದು. ಒಂದು ವಾಕ್ಯ ಅಶುದ್ಧ ಎಂದು ನಮಗೆ ಗೊತ್ತಾಗುವುದು ಹೇಗೆ? ಅದರ ಶುದ್ಧ ರೂಪ ಎಂಬುದೊಂದಿದ್ದರೆ ಅದನ್ನು ನಮ್ಮ ಅಂತಸ್ಥ ಭಾಷಾಸಾಮರ್ಥ್ಯ ನಮಗೆ ತೋರಿಸಿಕೊಟ್ಟಿದೆ ಎಂದರ್ಥ. ಈ ಅಂತಸ್ಥ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಲ್ಲ. ಎಲ್ಲರಿಗೂ ಸಮಾನ ವಾದುದು. ಆದ್ದರಿಂದ ತಾರ್ಕಿಕವಾಗಿ ಅಶುದ್ಧತೆಯ ಕಲ್ಪನೆಗೂ ಭಾಷಾ ಸಾಮರ್ಥ್ಯಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ.

ಆದರೆ ಅಂತಸ್ಥ ಸಾಮರ್ಥ್ಯಕ್ಕೂ ಬಳಕೆಯ ಸಾಮರ್ಥ್ಯಕ್ಕೂ ವ್ಯತ್ಯಾಸಗಳಿವೆ ಎಂಬುದನ್ನು ಈ ಅಧ್ಯಯನದಲ್ಲಿ ಬೇರೊಂದೆಡೆ ವಿವರಿಸಲಾಗಿದೆ. ಈ ಬಳಕೆಯ ಸಾಮರ್ಥ್ಯವನ್ನು ವ್ಯಕ್ತಿ ನಿರಂತರವಾಗಿ ಬದಲಾಯಿಸಿಕೊಳ್ಳಬಹುದು, ವಿಸ್ತರಿಸಬಹುದು. ಬಳಸದೆಯೂಇರಬಹುದು. ಇದರಿಂದ ಅಂತಸ್ಥ ಸಾಮರ್ಥ್ಯಕ್ಕೆ ಯಾವ ಕುಂದೂ ಇರುವುದಿಲ್ಲ. ಮೊದಲೇ ಕನ್ನಡ ಬಲ್ಲ ಒಬ್ಬ ವ್ಯಕ್ತಿ, ಕನ್ನಡ ಮಾತಾಡದೇ ಕೇಳಿಸಿಕೊಳ್ಳದೇ ಹತ್ತು ವರ್ಷ ಅಜ್ಞಾತವಾಗಿ ಜೀವಿಸಿದ್ದಾರೆ ಎಂದುಕೊಳ್ಳಿ. ಅವರು ತಮ್ಮ ಬಳಕೆಯ ಸಾಮರ್ಥ್ಯವನ್ನು ನಿಷ್ಕ್ರಿಯಗೊಳಿಸಿಕೊಂಡಿದ್ದಾರೆ ಎಂದರ್ಥ. ಆದರೆ ಹತ್ತು ವರ್ಷದ ನಂತರವೂ ಅವರ ಅಂತಸ್ಥ ಕನ್ನಡ ಸಾಮರ್ಥ್ಯಕ್ಕೆ ಯಾವ ಊನವು ಆಗಿರುವುದಿಲ್ಲ.

ಈ ವಿವರಣೆಯಿಂದ ಒಂದು ಪ್ರಶ್ನೆ ನಮ್ಮ ಎದುರು ಬರುತ್ತದೆ. ಕನ್ನಡ ಅಶುದ್ಧವಾಗುವುದರಿಂದ ಅದು ನಾಶವಾಗುತ್ತದೆ ಎಂದು ಹೇಳುವುದು ಸರಿಯೇ? ಅಶುದ್ಧವಾದುದನ್ನು ಸದ್ಯಕ್ಕೆ ಅಶುದ್ಧವೆಂದು ಒಪ್ಪಿದರೂ ಅದು ಬಳಕೆಗೆ ಸಂಬಂಧಿಸಿದ ಸಮಸ್ಯೆ. ಅಂತಸ್ಥ ಸಾಮರ್ಥ್ಯಕ್ಕೆ ಸಂಬಂಧಿಸಿದ್ದಲ್ಲ. ಹೀಗಿರುವಾಗ ಅಶುದ್ಧತೆಯ ಪ್ರಮಾಣ ಹೆಚ್ಚಿದ ಮಾತ್ರಕ್ಕೆ ಕನ್ನಡಿಗರ ತಲೆಮಾರುಗಳ ಅಂತಸ್ಥ ಸಾಮರ್ಥ್ಯಕ್ಕೆ ಕುಂದಾಗುವುದು ಸಾಧ್ಯವಿಲ್ಲ. ಅಂದರೆ ತಾರ್ಕಿಕವಾಗಿ ಕನ್ನಡ ಬಲ್ಲ ಪ್ರತಿ ವ್ಯಕ್ತಿಯೂ ಪೂರ್ಣವಾಗಿ ನಾಶವಾದ ಹೊರತು ಕನ್ನಡ ನಾಶವಾಯಿತು ಎಂದು ಹೇಳಲು ಬರುವುದಿಲ್ಲ. ಹಾಗಿದ್ದಲ್ಲಿ ಈ ಅಶುದ್ಧತೆಯ ಪ್ರಭಾವ ಏನು ಇಲ್ಲವೇ; ನಮ್ಮಲ್ಲಿ ಅದು ಆತಂಕಕ್ಕೆ ಕಾರಣವಾಗಬಾರದೇ ಎಂಬ ಪ್ರಶ್ನೆ ಮುಂಚೂಣಿಗೆ ಬರುತ್ತದೆ ಇದನ್ನು ಪರಿಹರಿಸಬೇಕಾದರೆ ಅಶುದ್ಧತೆ ಎಂದರೇನು ಎಂಬ ಪ್ರಶ್ನೆಯನ್ನು ಬಿಡಿಸಲು ಹೊರಡಬೇಕು.

ಅಶುದ್ಧತೆ ಎನ್ನುವುದು ಒಂದು ಸಾಮಾಜಿಕ ನೆಲೆಯ ಗ್ರಹಿಕೆ. ನಮ್ಮ ಸಮಾಜದ ರಚನೆಯಲ್ಲಿ ಇರುವ ಬಿರುಕುಗಳು ಹೊರಬರಲು ಹಲವು ರೀತಿಗಳಲ್ಲಿ ಯತ್ನಿಸುತ್ತವೆ. ಸಾಮಾಜಿಕವಾಗಿ ಮನ್ನಣೆ ಪಡೆದ ಜನವರ್ಗ ಹಾಗೆ ಮನ್ನಣೆ ಪಡೆಯದ ಜನವರ್ಗವನ್ನು ಗುರುತಿಸಲು ಈ ಅಶುದ್ಧತೆಯ ಸೂಚಕವನ್ನು ಬಳಸುತ್ತದೆ. ಹಿಂದೆ ಶಿಕ್ಷಿತರು, ಅಶಿಕ್ಷತರು ಎಂಬ ಭೇದವನ್ನು ಗುರುತಿಸಲು ಗ್ರಾಮ್ಯ ಎಂಬ ಪರಿಕಲ್ಪನೆಯನ್ನು ಬಳಸಲಾಗುತ್ತಿತ್ತು. ಈಗ ಸಾಮಾಜಿಕವಾಗಿ ಕೆಳಸ್ತರದ ಜನರನ್ನು ಗುರುತಿಸಲು ಈ ಅಶುದ್ಧತೆಯ ಸೂಚಕವನ್ನು ರೂಪಿಸಿಕೊಳ್ಳಲಾಗಿದೆ. ಈ ಪರಿಕಲ್ಪನೆಯಲ್ಲಿ ಮಾತಿಗೆ ಸಂಬಂಧಿಸಿದಂತೆ, ಉಚ್ಚಾರಣೆಯ ನೆಲೆ, ಬರಹಕ್ಕೆ ಸಂಬಂಧಿಸಿದಂತೆ ಕಾಗುಣಿತ ದೋಷಗಳು ಪರಿಗಣನೆಗೆ ಬರುತ್ತಿವೆ. ಉಚ್ಚಾರಣೆಯ ನೆಲೆಯಲ್ಲಿ ಪದಾದಿಯ ಹಕಾರ ಲೋಪ, ಮಹಾಪ್ರಾಣಗಳ ಉಚ್ಚಾರಣೆಯ ಲೋಪ ಮತ್ತು ಸ, ಶ, ಷ ಗಳನ್ನು ಸಕಾರವನ್ನಾಗಿ ಉಚ್ಚರಿಸುವುದು ಈ ಮೂರು ಅಂಶಗಳನ್ನು ಗುರುತಿಸಿ ಕೊಳ್ಳಲಾಗಿದೆ. ಕಾಗುಣಿತ ದೋಷಗಳು ಎರಡು ಬಗೆಯವು. ಒಂದು: ವ್ಯಕ್ತಿಗತ ಹಂತದ ದೋಷಗಳು. ಎರಡು: ವ್ಯಾಪಕವಾಗಿ ಬಹುಜನರು ನಿಯತವಾಗಿ ಮಾಡುವ ತಪ್ಪುಗಳು. ಮೊದಲನೆಯ ಬಗೆ ನಮಗೆ ಮುಖ್ಯವಲ್ಲ. ಎರಡನೆಯ ಬಗೆಯನ್ನು ಎಚ್ಚರಿಕೆಯಿಂದ ವಿಶ್ಲೇಷಿಸಬೇಕು. ಒಂದೇ ಬಗೆಯ ತಪ್ಪುಗಳನ್ನು ಒಂದೇ ಕಾಲದಲ್ಲಿ ಹಲವು ಜನರು ಮಾಡುತ್ತಿದ್ದರೆ ಅದಕ್ಕೆ ಬೇರೆ ಕಾರಣಗಳು ಇರಬೇಕು. ಈ ಕಾರಣಗಳು ಎರಡು ರೀತಿಯಲ್ಲಿ ಇರಲು ಸಾಧ್ಯ. ಒಂದು: ಕನ್ನಡದ ಧ್ವನಿರಚನೆ ಯಲ್ಲಿ ಯಾವುದೋ ಒಂದು ಮುಖ್ಯ ಬದಲಾವಣೆ ನಡೆಯುತ್ತಿದ್ದು, ಆ ಬದಲಾವಣೆಯ ಪ್ರತೀಕವಾಗಿ ಈ ತಪ್ಪುಗಳು ನಡೆಯುತ್ತಿರಬಹುದು. ಎರಡು: ಕನ್ನಡ ಬರೆಯುವ ಎಷ್ಟೋ ಜನ ತಾವು ಬರೆಯುತ್ತಿರುವ ಪದಗಳ ಲಿಖಿತರೂಪವನ್ನು ಓದಿನಲ್ಲಿ ಕಣ್ಣಿನ ಮೂಲಕ ಗ್ರಹಿಸಿರುವುದಿಲ್ಲ. ಆದ್ದರಿಂದ ಲಿಖಿತರೂಪದ ಪರಿಚಯ ಇಲ್ಲದೇ ಅದನ್ನು ತಮ್ಮ ಉಚ್ಚಾರಣೆಯ ನೆಲೆಯಲ್ಲಿ ಬರೆಯಲು ಹೊರಟಾಗ ಹೊಸ ರೂಪವೊಂದು ಕಾಣಿಸಿಕೊಳ್ಳಬಹುದು. ಮೇಲುನೋಟಕ್ಕೆ ಇದು ಕಾಗುಣಿತ ದೋಷವಾಗಿ ತೋರುತ್ತದೆ. ಆದರೆ ಅದರ ಕಾರಣಗಳು ಬೇರೆ. ಇದಲ್ಲದೇ ನಾವು ಅಶುದ್ಧವೆಂದು ಗುರುತಿಸುವ ಇತರ ಬಗೆಗಳು ಇಂತವೇ ಕೆಲವು ಗೊಂದಲಗಳಿಂದ ಹುಟ್ಟಿಕೊಂಡವು. ಕನ್ನಡ ಬರವಣಿಗೆ ಪರ‍್ಯಾಯ ರೂಪಗಳನ್ನು ಒಪ್ಪಿಕೊಂಡು ಬಂದಿದೆ. ಒಂದೇ ಪದವನ್ನು ಒಂದಕ್ಕಿಂತ ಹೆಚ್ಚು ರೀತಿ ಬರೆಯುವ ಹಲವು ನಿದರ್ಶನಗಳಿವೆ. ಉದಾಹರಣೆಗೆ ನಂತರ, ಅನಂತರ; ಆದ್ದರಿಂದ, ಆದುದರಿಂದ; ಸದ್ಯ, ಸಧ್ಯ; ಇಂಥ, ಇಂತಹ ಹೀಗೆ ನೂರಾರು ಉದಾಹರಣೆಗಳನ್ನು ಪಟ್ಟಿ ಮಾಡ ಬಹುದು. ಬರವಣಿಗೆಯ ನೆಲೆಯಲ್ಲಿ ಅಶುದ್ಧತೆಯ ಕಲ್ಪನೆ ಒಂದು ರೀತಿಯಲ್ಲಿ ಕಾಣಿಸಿಕೊಂಡರೆ ಮಾತಿನ ನೆಲೆಯಲ್ಲಿ ಅಚ್ಚಕನ್ನಡ ಪದಗಳನ್ನು ಬೆರೆಸಿ ಮಾತನಾಡಿದರೆ ಕನ್ನಡದ ಕೊಲೆಯಾಯಿತು ಎಂದು ಉದ್ಗಾರ ತೆಗೆಯುತ್ತಾರೆ. ಆದರೆ ಶುದ್ಧಕನ್ನಡ ಎಂದು ಹೇಳಿ ಸಂಸ್ಕೃತಮಯವಾಗಿ ಮಾತನಾಡಿದರೆ ಅದು ಚಂದವೆಂದು ಒಪ್ಪಿಗೆ ಪಡೆಯುತ್ತದೆ. ಇವೆಲ್ಲವೂ ನಮ್ಮ ಅಶುದ್ಧತೆಯ ಕಲ್ಪನೆ. ಇದು ಸಾಮಾಜಿಕ ಪೂರ್ವಗ್ರಹಗಳಿಗೆ ಅನುಗುಣವಾಗಿ ರೂಪಗೊಂಡಿರುವುದನ್ನು ತೋರಿಸುತ್ತದೆ.

ಕನ್ನಡ ನಾಶವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸುವವರು ಮಂಡಿಸಿದ ವಾದದ ತರ್ಕವನ್ನು ಗಮನಿಸಿದರೆ ಈ ಆತಂಕಕ್ಕೆ ಕಾರಣವಿಲ್ಲ ಎಂದು ತಿಳಿದಿದ್ದೇವೆ. ಹಾಗಿದ್ದರೆ ಕನ್ನಡ ನಿರಾತಂಕವಾಗಿದೆಯೇ? ಈ ಪ್ರಶ್ನೆ ಜಟಿಲವಾದುದು. ಚರಿತ್ರೆಯಲ್ಲಿ ದುರ್ಬಲ ಭಾಷಾ ಸಮುದಾಯಗಳು ಪ್ರಬಲ ಭಾಷೆಯಿಂದ ಸುತ್ತುವರೆದಿದ್ದಾಗ ಹಲವು ರೀತಿಯಲ್ಲಿ ದಾಳಿಯನ್ನು ಎದುರಿಸಿರುವುದನ್ನು ಕಾಣುತ್ತೇವೆ. ಈಗಲೂ ಇಂತಹ ಹೋರಾಟಗಳು ಎಡೆಬಿಡದೇ ನಡೆಯುತ್ತಲೇ ಇವೆ. ದುರ್ಬಲ ಭಾಷೆಗಳು ಪ್ರಬಲ ಭಾಷೆಯ ಜೊತೆ ವ್ಯವಹರಿಸುತ್ತ್ತ ನಿಧಾನವಾಗಿ ತಮ್ಮ ಭಾಷೆಯ ಬದಲು ಪ್ರಬಲ ಭಾಷೆಯ ಆಡುಗರಾಗಿ ಬದಲಾಗುವುದು ಸಾಧ್ಯ. ಸಾಮಾನ್ಯವಾಗಿ ವಲಸೆಗಾರರಲ್ಲಿ ಈ ಪ್ರವೃತ್ತಿ ಕಾಣುತ್ತದೆ. ವಲಸೆ ಹೋದವರು ತಮ್ಮ ಭಾಷೆಯನ್ನು ಕಳೆದುಕೊಂಡರೂ ಮೂಲ ಭೂಪ್ರದೇಶದಲ್ಲಿ ಆ ಭಾಷೆಯ ಆಡುಗರು ಇದ್ದೇ ಇರುತ್ತಾರೆ. ವಲಸೆಯ ಸಂದರ್ಭಗಳೆಲ್ಲ ಭಾಷಾನಾಶಕ್ಕೆ ಕಾರಣವಾಗಬೇಕಿಲ್ಲ. ಮೂಲಭಾಷೆಯ ಒಂದು ಉಪಭಾಷೆಯಾಗಿ ಬದಲಾಗುವ ಸಾಧ್ಯತೆ ಇದೆ. ತಮಿಳುನಾಡಿನ ಮಧುರೈಯಲ್ಲಿ ನೆಲೆಸಿದ ಕನ್ನಡ ಭಾಷಾಸಮುದಾಯವೊಂದು  ಎಂಟು ಶತಮಾನಗಳಿಂದ ತನ್ನ ಭಾಷೆಯನ್ನು ಕಾಯ್ದುಕೊಂಡಿದೆ. ಆದರೆ ಆ ಕನ್ನಡ ಗುರುತಿಸಲಾಗದಷ್ಟು ಬೇರೆಯಾಗಿ ಹೋಗಿದೆ. ಇಂತದೇ ನಿದರ್ಶನಗಳು ಹಲವಾರಿವೆ. ವಲಸೆ ಹೋದ ಹಿಂದಿ ಮಾತೃಭಾಷಿಕರು ಫಿಜಿ, ಮಾರಿಷಸ್, ದಕ್ಷಿಣ ಆಫ್ರಿಕಾ ಮುಂತಾದ ಪ್ರದೇಶಗಳಲ್ಲಿ ಹಲವು ಶತಮಾನಗಳಿಂದ ಭಾಷೆಯನ್ನು ಕಾಯ್ದುಕೊಂಡಿದ್ದಾರೆ. ಅಂದರೆ  ಅಲ್ಲಿ ಹಿಂದಿಯ ಉಪಭಾಷೆಗಳು ಸೃಷ್ಟಿಯಾಗಿವೆ.

ಹೀಗಲ್ಲದೇ ಭಾಷೆ ನಿರಂತರ ಪರಿವರ್ತನೆಯನ್ನು ಹೊಂದುವುದರಿಂದ ತಟ್ಟನೇ ಅದರಲ್ಲಾಗುವ ಬದಲಾವಣೆಗಳು ಗೋಚರಿಸದಿದ್ದರೂ ಎಷ್ಟೋ ಶತಮಾನಗಳ ನಂತರ ಮೂಲಭಾಷೆಯ ಲಕ್ಷಣಗಳು ಸಂಪೂರ್ಣ ಬೇರೆ ಎಂಬಂತೆ ಆಗಿಬಿಡು ತ್ತವೆ. ಇಂತಹ ಪ್ರಸಂಗಗಳನ್ನು ಯಾರೂ ಭಾಷಾನಾಶ ಎನ್ನುವುದಿಲ್ಲ. ಕನ್ನಡವೂ ಹೀಗೆ ನಿರಂತರವಾಗಿ ಬದಲಾಗುತ್ತಿದೆ. ಆ ಬದಲಾವಣೆಯ ಪರಿಣಾಮವಾಗಿ ಮುಂದೆಯೂ ಕನ್ನಡ ಇದ್ದೇ ಇರುತ್ತದೆ. ಮೊದಲೇ ಹೇಳಿದಂತೆ ಅದು ಗುರುತು ಹಿಡಿಯಲು ಸಾಧ್ಯವಾಗದಷ್ಟು ಬೇರೆಯ ಆಕಾರವನ್ನು ಪಡೆಯಬಹುದು. ಹೀಗೆ ಮೂಲ ಆಕಾರ ಕಳೆದುಹೋಗುವುದಕ್ಕೆ ಆತಂಕ ವ್ಯಕ್ತಪಡಿಸುವುದು ಅಷ್ಟೇನೂ ಸರಿಯಾದ ಪ್ರತಿಕ್ರಿಯೆಯಲ್ಲ. ಏಕೆಂದರೆ ಒಂದು ಭಾಷೆ ಹೀಗೆ ಬೇರೆ ಬೇರೆ ಆಕಾರ ಗಳನ್ನು ಪಡೆಯುವುದು ಅದರ ಜೈವಿಕತೆಯ ಲಕ್ಷಣವಾಗಿದೆ.