ಭಾಷೆ ಮತ್ತು ಸಾಹಿತ್ಯಗಳ ನಡುವೆ ಇರುವ ಸಂಬಂಧ ಪ್ರಾಚೀನವಾದುದು. ಕನ್ನಡ ಸಾಹಿತ್ಯ ಚರಿತ್ರೆಯ ಬರವಣಿಗೆಯಲ್ಲಿ ಕನ್ನಡ ಭಾಷೆಯ ಬಗೆಗೆ ಚರ್ಚೆಗಳು ಬಂದೇಬರುತ್ತವೆ. ಭಾಷೆಯ ವಿವಿಧ ಸಾಮರ್ಥ್ಯಗಳನ್ನು ಚರ್ಚಿಸುವವರು ಸಾಹಿತ್ಯವನ್ನು ಒಂದು ಮುಖ್ಯ ಸಾಧನೆಯನ್ನಾಗಿ ಪರಿಗಣಿಸುತ್ತಾರೆ. ಸಾಹಿತ್ಯ ಚರಿತ್ರೆಗೂ ಭಾಷಾ ಚರಿತ್ರೆಗೂ ನೇರ ಸಂಬಂಧವನ್ನು ಕಲ್ಪಿಸುವುದು ಸಾಧ್ಯವಿಲ್ಲ. ಉದಾ.ಗೆ ಹಳಗನ್ನಡದಿಂದ ನಡುಗನ್ನಡಕ್ಕೆ ಪರಿವರ್ತನೆ ಹೊಂದಿದ್ದಕ್ಕೂ ಸಾಹಿತ್ಯ ವಲಯದಲ್ಲಿ ಆದ ಬದಲಾವಣೆಗೂ ಸಂಬಂಧಗಳನ್ನು ಹುಡುಕುವುದು ಅಸಾಧ್ಯ. ಹಾಗೆಂದು ಅವರೆರಡೂ ಪರಸ್ಪರ ಸಂಬಂಧವಿಲ್ಲದ ಘಟನೆಗಳು ಎಂದು ತಿಳಿಯುವುದು ಸರಿಯಲ್ಲ. ಉದಾಹರಣೆಗೆ ಹಳಗನ್ನಡದ ರಚನೆಗೂ ನಡುಗನ್ನಡದ ರಚನೆಗೂ ಇರುವ ವ್ಯತ್ಯಾಸವನ್ನು ಅಕ್ಷರಗಣ ಮತ್ತು ಮಾತ್ರಾಗಣಗಳ ಸಂಬಂಧದಲ್ಲಿ ಗುರುತಿಸಲು ಸಾಧ್ಯವಿದೆ. ಹೀಗೆ ಭಾಷಾ ಚರಿತ್ರೆಯನ್ನು ಸಾಹಿತ್ಯ ರಚನೆಯೊಡನೆ ಇಟ್ಟು ನೋಡುವುದು ಅಗತ್ಯವಾಗುತ್ತದೆ.

ಕನ್ನಡದ ಸಂದರ್ಭದಲ್ಲಿ ಈ ಮಾತು ಇನ್ನಷ್ಟು ಮುಖ್ಯವಾಗುವುದು. ಏಕೆಂದರೆ ಕನ್ನಡ ಪರಂಪರೆಯ ಪುನಾರಚನೆ ಮಾಡುವವರು ಅನಿವಾರ್ಯ ಎನ್ನುವಂತೆ ಸಾಹಿತ್ಯ ಪರಂಪರೆಯನ್ನು ಉಲ್ಲೇಖಿಸುತ್ತಾರೆ. ಆ ಕೃತಿಕಾರರ ಕೃತಿಗಳನ್ನು ತಮ್ಮ ನೆನಪುಗಳ ಭಾಗವನ್ನಾಗಿ ಮಾಡಿಕೊಳ್ಳುತ್ತಾರೆ. ಕನ್ನಡದ ಬಗೆಗೆ ಹೆಮ್ಮೆಯ ಮಾತುಗಳನ್ನು ಆಡುವವರು ಕವಿಗಳನ್ನು ಸೂಚಕಗಳನ್ನಾಗಿ ಬಳಸುತ್ತಾರೆ. ಆದ್ದರಿಂದ ಭಾಷೆಯ ಮಾತಿನಲ್ಲಿ ಸಾಹಿತ್ಯ ಸೇರಿಕೊಳ್ಳುವುದು ಅಗತ್ಯವಾಗಿದೆ.

ಏಕೀಕರಣದ ಸುಮಾರಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಒಂದು ಮುಖ್ಯ ಚರ್ಚೆ ಆರಂಭವಾಗಿತ್ತು. ಅದು ೨೦ನೇ ಶತಮಾನದ ಕನ್ನಡ ಸಾಹಿತ್ಯದ ಕೆಲವು ದೃಷ್ಟಿಕೋನಗಳನ್ನು ಪ್ರಶ್ನಿಸುವ ಆಸಕ್ತಿಯನ್ನು ಪಡೆದಿತ್ತು. ಆದರ್ಶ, ಕನಸು, ಸನಾತನಮೌಲ್ಯಗಳಲ್ಲಿ ಶ್ರದ್ಧೆ, ನಾಯಕ ಕಲ್ಪನೆ ಇವೆಲ್ಲವೂ ಪ್ರಶ್ನಾರ್ಹವಾಗತೊಡಗಿದ್ದವು. ಸಾಹಿತ್ಯದ ವಸ್ತುವಿನ ಜೊತೆಗೆ ಆಶಯ ಮತ್ತು ಭಾಷಾ ರೂಪಗಳು ಬದಲಾಗಬೇಕು ಎನ್ನುವ ವಾದಗಳು ಮಂಡನೆಯಾಗುತ್ತಿದ್ದವು. ಸಾಮಾನ್ಯವಾಗಿ ನವೋದಯ ಎಂದು ಗುರುತಿಸಲಾಗುವ ಸಾಹಿತ್ಯ ಪರಂಪರೆಯನ್ನು ಪ್ರಗತಿಶೀಲ ಚಳುವಳಿ ವಿರೋಧಿಸಿತೆಂದು ಅನಂತರ ನವ್ಯ ಚಳುವಳಿ ಆರಂಭವಾಯಿತೆಂದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅಭ್ಯಾಸವಿದೆ. ಆದರೆ ಅಧಿಕಾರ ಹಸ್ತಾಂತರದ ಹೊತ್ತಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಎರಡು ಪ್ರಮುಖ ಧ್ವನಿಗಳು ಪರಸ್ಪರ ವಿರೋಧಿ ನೆಲೆಯಲ್ಲಿ ಕೇಳತೊಡಗಿದ್ದವು. ಆದ್ದರಿಂದ ಪ್ರಗತಿಶೀಲ ಮತ್ತು ನವ್ಯ ಎನ್ನುವ ಪರಂಪರೆಗಳು ಬೇರೆ ಬೇರೆ ಕಾಲಘಟ್ಟದಲ್ಲಿ ಉದಯಿಸಿದವು ಎಂದು ತಿಳಿಯುವುದು ಅಷ್ಟು ಸರಿಯಲ್ಲ. ಈ ಪ್ರಶ್ನೆ ಬದಿಗಿರಿಸಿದರೂ ೧೯೫೬ರ ಹೊತ್ತಿಗೆ ಕನ್ನಡ ಸಾಹಿತ್ಯದಲ್ಲಿ ವಾಸ್ತವತಾವಾದದ ಪ್ರಾಬಲ್ಯ ಹಲವು ರೀತಿಗಳಲ್ಲಿ ನೆಲೆಯೂರಿತ್ತು. ಕಾದಂಬರಿಗಳಲ್ಲಿ ಮತ್ತು ಕಾವ್ಯದಲ್ಲಿ ಬೇರೆ ಬೇರೆ ಪ್ರಯೋಗಗಳಿಗೆ ಕಾರಣವಾಗಿತ್ತು. ಅ.ನ.ಕೃ, ನಿರಂಜನ, ತ.ರಾ.ಸು, ಚದುರಂಗ, ನಾಡಿಗೇರ್ ಮುಂತಾದವರು ಪ್ರಗತಿಶೀಲ ಚಿಂತನೆಗಳನ್ನು ಮತ್ತು ಯುದ್ಧೋತ್ತರ ಜಗತ್ತಿನ ಭ್ರಮನಿರಸನಗಳನ್ನು ಕನ್ನಡ ಸಂದರ್ಭದಲ್ಲಿ ಹೊಂದಿಸುತ್ತಿದ್ದರು.

ನಗರೀಕರಣದ ವಿನ್ಯಾಸಗಳು ಜೀವನಕ್ರಮದ ಮೇಲೆ ಬರುವ ಪರಿಣಾಮಗಳನ್ನು ಇವರೆಲ್ಲ ಬೇರೆ ಬೇರೆ ರೀತಿಯಲ್ಲಿ ಶೋಧಿಸುತ್ತಿದ್ದರು. ಅಡಿಗರು ಮತ್ತು ರಾಮಚಂದ್ರಶರ್ಮ ತಮ್ಮ ಕಾವ್ಯದಲ್ಲಿ ಸಾಮಾಜಿಕ ವ್ಯಕ್ತಿಗಿಂತ ಭಿನ್ನವಾದ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದರು. ಈ ವಿವರಗಳು ಏಕೀಕರಣದ ಸಂದರ್ಭದ ಕನಸು ನನಸಾದ ಭಾವದೊಡನೆ ಹೇಗೆ ಹೊಂದಿಕೊಂಡವು ಎನ್ನುವುದು ಕುತೂಹಲದ ವಿಷಯ. ಕನ್ನಡ ಸಂಸ್ಕೃತಿಯ ಎಳೆಗಳನ್ನು ಹುಡುಕಲು ತಮ್ಮದೇ ಆದ ರೀತಿಯಲ್ಲಿ ಯತ್ನಿಸುತ್ತಿದ್ದ ಅ.ನ.ಕೃ. ಅಂತಹವರಿಗೆ ಏಕೀಕರಣ ಒಂದು ಅರ್ಥಪೂರ್ಣ ಘಟನೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಉಳಿದವರು ಈ ಸಂದರ್ಭವನ್ನು ತಮ್ಮ ಎಂದಿನ ಸಾಹಿತ್ಯಕ ಗ್ರಹಿಕೆಯಲ್ಲಿ ಮಂಡಿಸಿದಂತೆ ತೋರುತ್ತದೆ. ಆದರೂ ಕುವೆಂಪು ಕಲ್ಪಿಸುವ ಕಾಲ ದೇಶಾತೀತ ಕರ್ನಾಟಕ ಮತ್ತು ಕರ್ನಾಟಕವೆಂಬ ಪದದ ಮಾಂತ್ರಿಕತೆ ಆಗಲಿ ಬೇಂದ್ರೆಯವರು ಅದೇ ಸಂದರ್ಭದಲ್ಲಿ ಎತ್ತಿದ ಇನ್ನೊಂದು ಪ್ರಶ್ನೆಯಾಗಲಿ ಮುಖ್ಯವಾಗುತ್ತದೆ. ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ನಾಡಗೀತೆಯನ್ನು ಏಕೀಕರಣ ಸಂದರ್ಭದಲ್ಲಿ ಉದಯ ವಾಯಿತು ಎಂದು ಬದಲಾಯಿಸಲು ಕೆಲವರು ಸಲಹೆ ಮಾಡುತ್ತಾರೆ. ಇವರ ಉತ್ಸಾಹದ ಮಾತುಗಳಿಗೆ ಪ್ರತಿಕ್ರಿಯಿಸದೆ ಬೇಂದ್ರೆಯವರು ಉದಯವಾಗಲಿ ಎಂದು ಇರುವುದೇ ಸರಿ ಎನ್ನುತ್ತಾರೆ. ಬೇಂದ್ರೆಯವರ ಗ್ರಹಿಕೆಯಂತೆ ಯಾವುದೂ ಆಗಿ ಬಿಡುವುದಿಲ್ಲ. ಅದು ಸದಾ ಆಗುತ್ತಿರಬೇಕು. ಆಗಬೇಕೆಂಬ ಹಂಬಲ ಸದಾ ಇರಬೇಕು. ಆದ್ದರಿಂದ ಕರ್ನಾಟಕ ಉದಯವಾಯಿತು ಎಂದು ವಾಕ್ಯಕ್ಕೆ ಪೂರ್ಣವಿರಾಮ ಹಾಕಬೇಕು ಎಂಬುದನ್ನು ಅವರು ನಿರಾಕರಿಸುತ್ತಾರೆ. ಉದಯವಾಗಲಿ ಎಂಬ ಕೋರಿಕೆಯು ಇರಬೇಕೆನ್ನುತ್ತಾರೆ. ಹಿರಿಯ ತಲೆಮಾರಿನ ಈ ಇಬ್ಬರು ಬರಹಗಾರರ ಪ್ರತಿಕ್ರಿಯೆಗಳು ಕುತೂಹಲಕಾರಿಯಾಗಿವೆ. ಕರ್ನಾಟಕ ರಾಜ್ಯ ನಿರ್ಮಾಣದ ಹಿಂದೆ ಇರುವುದು ಒಂದು ರಾಜಕೀಯ ನಿರ್ಧಾರವೇ ಹೊರತು ಅದೊಂದು ಸಾಂಸ್ಕೃತಿಕ ಆವಿಷ್ಕಾರವಲ್ಲ ಎನ್ನುವ ಒಳನೋಟ ಅವರಲ್ಲಿ ಇದ್ದಂತಿದೆ. ಐವತ್ತು ವರ್ಷಗಳು ಕಳೆದ ಮೇಲೆ ಈ ಪ್ರತಿಕ್ರಿಯೆಗಳು ಈಗ ಮತ್ತಷ್ಟು ಅರ್ಥಪೂರ್ಣವಾಗಿ ಕಾಣುತ್ತಿವೆ.

ಕಳೆದ ಐವತ್ತು ವರ್ಷದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರ ಅಗಾಧ ಪ್ರಮಾಣದ ಬದಲಾವಣೆಗಳನ್ನು ಕಂಡಿದೆ. ಕೃತಿ ರಚನೆಯ ಹೆಚ್ಚಳ, ಕೃತಿಕಾರರ ಹೆಚ್ಚಳ ಮುಂತಾದ ಪರಿಮಾಣದ ನೆಲೆಯ ಮಾತುಗಳು ಅಷ್ಟು ಮುಖ್ಯವಲ್ಲ. ಹಾಗೆಯೇ ಗುಣಾತ್ಮಕವಾದ ಮೌಲ್ಯ ನಿರ್ಣಯದ ನೆಲೆಯ ಮಾತುಗಳು ಅಷ್ಟು ಮುಖ್ಯವಲ್ಲ. ಕೊನೆಯ ಪಕ್ಷ ಈ ಚರ್ಚೆಯ ಸಂದರ್ಭದಲ್ಲಿ ಅವುಗಳನ್ನು ನಾವು ಪರಿಗಣಿಸ ಬೇಕಾಗಿಲ್ಲ. ಆದರೆ ಈ ಐವತ್ತು ವರ್ಷದಲ್ಲಿ ತಾತ್ವಿಕ ನೆಲೆಯಲ್ಲಿ ಆಗಿರುವ ಬದಲಾವಣೆಗಳು ಸಾಮಾಜಿಕ ಪರಿವರ್ತನೆಗಳಿಗೂ ಮತ್ತು ಭಾಷೆಯ ಸ್ಥಿತಿಗತಿಗಳಿಗೂ ಸಂಬಂಧವೊಂದು ರೂಪುಗೊಂಡಿದೆ. ಅದನ್ನು ಮುಂಚೂಣಿಗೆ ತಂದು ಚರ್ಚಿಸುವುದು ಅಗತ್ಯವಾಗಿದೆ.

ಇಪ್ಪತ್ತನೆಯ ಶತಮಾನದ ಸುಮಾರಿಗೆ ಕನ್ನಡದಲ್ಲಿ ಸಾಹಿತ್ಯವೆಂಬ ಪರಿಕಲ್ಪನೆಯನ್ನು ಒಂದು ಸ್ವಯಂಪೂರ್ಣ ಘಟನೆ ಎಂಬಂತೆ ಚರ್ಚಿಸುವ ಪ್ರವೃತ್ತಿ ಬಲಗೊಂಡಿತ್ತು. ಇದಕ್ಕೆ ರಾಜಕೀಯವಾಗಿ ಆಗಿದ್ದ ಬದಲಾವಣೆಗಳು ಮತ್ತು ಯುರೋಪಿಯನ್ ಸಾಹಿತ್ಯದ ಪ್ರಭಾವಗಳು ಕಾರಣವಾಗಿದ್ದವು. ಅನಂತರದ ಅರ್ಧ ಶತಮಾನ ಸಾಹಿತ್ಯ ಕೃತಿಗಳು ಮತ್ತು ಕೃತಿಕಾರರ ನಡುವೆ ಒಂದು ಜೈವಿಕ ಸಂಬಂಧವನ್ನು ರೂಪಿಸಿದ್ದವು. ಈ ಸಂದರ್ಭದಲ್ಲಿ ಓದುಗ ಜಗತ್ತು, ಆ ಕೃತಿ, ಕೃತಿಕಾರ ಸಂಬಂಧ ವನ್ನು ಹೊರಗಿನಿಂದ ಪರಿಭಾವಿಸುವ ಮತ್ತು ಅವರಿಂದ ಉಪಕೃತರಾಗುವ ನೆಲೆಯಲ್ಲಿ ಇದ್ದರು. ಆದರೆ ಕಳೆದ ಐವತ್ತು ವರ್ಷದಲ್ಲಿ ನಿಧಾನವಾಗಿ ಸಾಹಿತ್ಯ ಕೃತಿಗಳ ಈ ಮಾಂತ್ರಿಕತೆಯ ವ್ಯಾಖ್ಯೆ ತಪ್ಪಿದೆ. ಅಂದರೆ ಸಾಹಿತ್ಯ ಕೃತಿಗಳನ್ನು ಕೇವಲ ಭಾಷಿಕ ನಿರೂಪಣೆಗಳು ಎಂದು ಪರಿಗಣಿಸಬೇಕೇ ಹೊರತು ಅದರಾಚೆಗೆ ಏನೇ ಇದ್ದರೂ ಅವೆಲ್ಲವೂ ಗೌಣ. ಅವುಗಳ ಪ್ರಭಾವ ಮುಖ್ಯವಾದುದಲ್ಲ. ಆದ್ದರಿಂದ ಸಾಹಿತ್ಯ ಕೃತಿಗಳನ್ನು ಭಾಷೆಯ ಹಲವು ನಿರೂಪಣೆಗಳೊಡನೆ ಇರಿಸಿನೋಡುವುದು ಅಗತ್ಯವೆನಿಸತೊಡಗಿತ್ತು.

ಇಪ್ಪತ್ತೊಂದನೇ ಶತಮಾನದ ಆರಂಭದ ಹೊತ್ತಿಗೆ ಸಾಹಿತ್ಯ ಕೃತಿಗಳು ಕೇವಲ ಭಾಷಿಕ ನಿರೂಪಣೆಗಳು; ಅವುಗಳನ್ನು ಇತರ ಸಂಕಥನಗಳ ರೀತಿಯಲ್ಲೇ ಪರಿಶೀಲಿಸಬೇಕು; ಅವುಗಳಿಗೆ ನಾವು ಕಲ್ಪಿಸುವ ಕಾಲದೇಶಾತೀತವಾದ ಆಯಾಮಗಳು, ಆಯಾ ಹೊತ್ತಿನ ಸಾಂಸ್ಕೃತಿಕ ಸಂದರ್ಭಗಳ ಆರೋಪಣೆಯೇ ಹೊರತು ಆ ಕೃತಿಗಳಲ್ಲೇ ಅಂತಸ್ಥವಾಗಿರುವ ಗುಣಲಕ್ಷಣವಲ್ಲ. ಈ ತಾತ್ವಿಕತೆ ಸಾಹಿತ್ಯ ಕೃತಿಗಳಿಗೆ ಒದಗಿದ್ದು ಈವರೆಗಿನ ನಮ್ಮ ಎಷ್ಟೋ ಚರ್ಚೆಗಳನ್ನು ನಿರರ್ಥಕಗೊಳಿಸಿತ್ತು. ಏಕೆಂದರೆ ಒಂದು ಭಾಷಿಕ ನಿರೂಪಣೆಗೆ ಅಗತ್ಯವಾದ ಎಲ್ಲ ಪರಿಕಲ್ಪನಾತ್ಮಕ ನೆಲೆಗಳು ಸಾಂಸ್ಕೃತಿಕವಾಗಿ ದತ್ತವಾಗುತ್ತವೆ೦i ಹೊರತು ಕೃತಿಕಾರನ ಅನನ್ಯತೆ ಎಂಬುದು ಒಂದು ಮುಖ್ಯ ಸಂಗತಿಯಲ್ಲ. ಈ ಗ್ರಹಿಕೆಯಿಂದ ಸಾಹಿತ್ಯಕವಾಗಿ ಏನು ಪರಿಣಾಮವಾಯಿತು ಅದು ನಮಗಿಲ್ಲಿ ಮುಖ್ಯವಲ್ಲ. ಆದರೆ ಭಾಷೆಯಲ್ಲಿ ಒಂದು ಕಾಲಘಟ್ಟದಲ್ಲಿ ತಳೆಯುವ ಲಿಖಿತ ನಿರೂಪಣೆಗಳ ವ್ಯಾಖ್ಯೆ ಮಾತ್ರ ಬದಲಾಗತೊಡಗಿತ್ತು. ಈ ವ್ಯಾಖ್ಯಾನ ಪಲ್ಲಟ ಸಾಹಿತ್ಯ ಕೃತಿಗಳೆಂದು ನಾವು ತಿಳಿದಿದ್ದ ಬರವಣಿಗೆಗಳನ್ನು ನೋಡುವ ವಿಧಾನದಲ್ಲಿ ಬದಲಾವಣೆಗಳನ್ನು ಉಂಟುಮಾಡಿತು.

ಏಳನೆಯ ದಶಕದಲ್ಲಿ ಕರ್ನಾಟಕದಲ್ಲಿ ನಡೆದ ಕೆಲವು ಸಾಮಾಜಿಕ ಪರಿವರ್ತನೆಗಳ ಪರಿಣಾಮವಾಗಿ ಆವರೆಗೆ ಸಮಾಜ ಒಪ್ಪಿದ ಸಾಂಸ್ಕೃತಿಕ ನಾಯಕತ್ವದ ಕಲ್ಪನೆ ಬದಲಾಯಿತು. ನಾಯಕರು ಒಂದು ಕಾಲದ ಸಮಾಜದ ಅಪೇಕ್ಷೆಗಳನ್ನು, ಬಯಕೆಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಕರ್ನಾಟಕವು ತನ್ನ ಸಾಮಾಜಿಕ ರಚನೆಯಲ್ಲಿ ಮುಚ್ಚಿಹೋಗಿದ್ದ ಬಿರುಕುಗಳನ್ನು ಹೊರತೆಗೆದು ತೋರತೊಡಗಿತ್ತು. ಹಿಂದುಳಿದ ವರ್ಗಗಳ ಮತ್ತು ದಲಿತ ಸಮುದಾಯದ ಅಸ್ಮಿತೆಯ ಪ್ರಶ್ನೆಗಳು ಮುಂದೆ ಬಂದವು. ಇವೆಲ್ಲವು ಮೇಲೆ ಹೇಳಿದಂತಹನಾಯಕರನ್ನು ನಿರಾಕರಿಸುತ್ತವೆ ತಮ್ಮ ನಾಯಕತ್ವವನ್ನು ತಾವೇ ಕಟ್ಟಿಕೊಳ್ಳಲು ಬಯಸುತ್ತವೆ. ದಲಿತ ಬಂಡಾಯ ಚಳುವಳಿಗಳ ಸಂದರ್ಭ ದಲ್ಲಿ ಕನ್ನಡದಲ್ಲಿ ಬರೆಯುವವರ ಸಾಹಿತ್ಯಸೃಷ್ಟಿ ಮಾಡುವವರ ಸಂಖ್ಯೆ ಹೆಚ್ಚಾಯಿ ತೆಂದು ಎಲ್ಲರೂ ಗುರುತಿಸುತ್ತಾರೆ ಈ ಬದಲಾವಣೆಯನ್ನು ಧನಾತ್ಮಕವಾಗಿ ನೋಡುವವರು ತಲೆಮಾರುಗಳಿಂದ ಧ್ವನಿ ಕಳೆದುಕೊಂಡವರು ಈಗ ಮಾತಾಡುತ್ತಿದ್ದಾರೆ ಎಂದು ವಿವರಿಸುತ್ತಾರೆ. ಋಣಾತ್ಮಕವಾಗಿ ನೋಡುವವರು, ಓದುವವರಿಗಿಂತ ಬರೆಯುವವರೇ ಹೆಚ್ಚಾದರು. ಇದರಿಂದ ಬರೆದುದನ್ನು ಓದುವವರು ಯಾರು ಎಂದು ಗೇಲಿ ಮಾಡಿದರು. ಎರಡು ಪ್ರತಿಕ್ರಿಯೆಗಳೂ ಭಾಷಿಕ ನೆಲೆಯಲ್ಲೇ ಇವೆ. ಕೇಳಿಸಿಕೊಳ್ಳುವವರು ಮಾತನಾಡಲು ಬಯಸುವುದು, ತೊಡಗುವುದು ಇವೆಲ್ಲವೂ ಸಾಧ್ಯವಾಗುವುದು, ನಾಯಕರನ್ನು ಅಥವಾ ತಮ್ಮ ಪ್ರತಿನಿಧಿಯಾಗಿ ಮಾತನಾಡುವವರನ್ನು ನಿರಾಕರಿಸಿದಾಗ ಮಾತ್ರ. ಕನ್ನಡ ಸಾಹಿತ್ಯವಲಯ ದಲ್ಲಿ ಈಗ ಗ್ರಹಿಕೆಯ ಭಾಷಾ ಕೌಶಲಗಳಿಗಿಂತ ಬಳಕೆಯ ಭಾಷಾ ಕೌಶಲಗಳು ಮುಖ್ಯವಾದವು.

ಇದರೊಡನೆ ಹೆಣೆದುಕೊಂಡ ಇನ್ನೊಂದು ಸಂಗತಿ ಇದೆ. ಸಾಹಿತ್ಯ ಸೃಷ್ಟಿಯಲ್ಲಿ ಹಿಂದಿನ ತಾತ್ವಿಕತೆ ಕೃತಿಕಾರರಿಗೆ ಒಂದು ಆರೋಪಿತ ದನಿಯನ್ನು ನೀಡುತ್ತಿದ್ದವು. ಅಂದರೆ ಕೃತಿಕಾರರು ತಮ್ಮ ಕಾಣ್ಕೆಯಿಂದ ನುಡಿಯುತ್ತಿದ್ದಾರೆ ಇಲ್ಲವೇ ಅತೀತವಾದ ಸಾಮರ್ಥ್ಯವೊಂದು ಅವರ ಮೂಲಕ ಮಾತನಾಡುತ್ತಿದೆ ಎಂದು ತಿಳಿಯಲಾಗಿತ್ತು. ಆದರೆ ಈಗ ಬರೆಯುವವರು ಆರೋಪಿತ ದನಿಯನ್ನು ಬಿಟ್ಟುಕೊಡಬೇಕಾಗಿ ಬಂತು. ಅಂದರೆ ಬರವಣಿಗೆ ಬರೆಯುವವರ ವ್ಯಕ್ತಿತ್ವದ ಒಂದು ಸಹಜ ಹೊರ ಚಾಚು ಆಗಿಬಿಟ್ಟಿದೆ. ಮೊದಲಿನಂತೆ ಅದೀಗ ಕಾಣ್ಕೆಯ ನೆಲೆಯನ್ನು ಒಪ್ಪುವಂತಿಲ್ಲ. ಅಥವಾ ತನ್ನ ಮೂಲಕ ತಾನೇ ನೇರವಾಗಿ ಹೊಣೆಗಾರರಾಗಿರದ ದನಿಯೊಂದು ಹೊರಬರುತ್ತಿದೆ ಎಂದೂ ತಿಳಿಯುವಂತಿಲ್ಲ. ಭಾಷೆಯ ದೃಷ್ಟಿಯಿಂದ ಈ ಬದಲಾವಣೆ ಬಹಳ ಮುಖ್ಯವಾದುದು. ವಚನಕಾರರನ್ನು ಈ ಅವಧಿಯಲ್ಲಿ ಕನ್ನಡದ ಬಹುಪ್ರಮುಖ ಬರಹಗಾರರೆಂದು ಪರಿಗಣಿಸಿದ್ದಕ್ಕೂ ಈಗ ನಡೆಯುತ್ತಿರುವುದಕ್ಕೂ ನೇರ ಸಂಬಂಧವಿದೆ. ಆನು ಒಲಿದಂತೆ ಹಾಡುವೆ ಎನ್ನುವ ಬಸವಣ್ಣನ ಮಾತು ಬರಹಗಾರರಿಗೆ ನೀಡಿದ ಬಿಡುಗಡೆಯೂ ಹೌದು; ವಿಧಿಸಿದ ಬಂಧನವೂ ಹೌದು. ಏಳನೇ ದಶಕದ ಅನಂತರದಲ್ಲಿ ಸಾಹಿತ್ಯಸೃಷ್ಟಿಗೆ ಒದಗಿದ ಈ ಅವಸ್ಥಾಂತರ ಕನ್ನಡ ಸಾಹಿತ್ಯ ವಲಯದಲ್ಲಿ ಮಾತ್ರವಲ್ಲ, ಭಾಷೆಯ ನೆಲೆಯಲ್ಲೂ ಬಿಂಬಿತವಾಗತೊಡಗಿದೆ.

ಈ ಅಧ್ಯಯನದಲ್ಲಿ ಬೇರೊಂದು ಕಡೆ ಗುರುತಿಸಿರುವಂತೆ ಕನ್ನಡದ ಏಕ ಘನಾಕೃತಿಯ ಪರಿಕಲ್ಪನೆಯನ್ನು ನಿರಾಕರಿಸಿ ಪ್ರಭೇದಗಳ ಅಸ್ಮಿತೆಯನ್ನು ನೆಲೆಗೊಳಿ ಸಲು ಯತ್ನಿಸಲಾಯಿತು. ಇದು ಸಾಹಿತ್ಯ ವಲಯದಲ್ಲೂ ಒಂದು ಮುಖ್ಯ ಪಾತ್ರ ವಹಿಸಿದೆ. ಏಕೀಕರಣದ ಮೊದಲ ಎರಡು ದಶಕಗಳಲ್ಲಿ ಭಾಷಾ ಪ್ರಭೇದಗಳನ್ನು ಹಿಂದಕ್ಕೆ ಸರಿಸಿ ಅವುಗಳ ಸ್ವತಂತ್ರ ಬಳಕೆಗೆ ಕಟ್ಟುಪಾಡುಗಳನ್ನು ವಿಧಿಸಿ ಶಿಷ್ಟ ರೂಪವನ್ನು ಎತ್ತಿಹಿಡಿಯುವ ಪ್ರಕ್ರಿಯೆ ನಡೆಯಿತಷ್ಟೇ. ಈ ಅವಧಿಯಲ್ಲಿ ಕಳೆದುಹೋಗಿದ್ದ ಭಾಷಾ ಪ್ರಭೇದಗಳನ್ನು ಸಾಹಿತ್ಯ ಕೃತಿಗಳಲ್ಲಿ ಮರುಗಳಿಸುವ, ಮರುಸ್ಥಾಪಿಸುವ ಯತ್ನಗಳು ಮೊದಲಾದವು. ಹೊಸ ತಲೆಮಾರಿನ ಕೆಳವರ್ಗದ ಬರಹಗಾರರಲ್ಲಿ ಸಾಂಸ್ಕೃತಿಕ ನೆನಪುಗಳನ್ನು ಮರುಗಳಿಸುವ ಪ್ರಯತ್ನಗಳು ನಡೆದುದಕ್ಕೂ ಭಾಷಿಕವಾಗಿ ನಡೆದ ಈ ಮರುಗಳಿಕೆಯ ಪ್ರಯತ್ನಕ್ಕೂ ನೇರವಾದ ಸಂಬಂಧವಿದೆ. ಹಾಗೆ ನೋಡಿದರೆ ಈ ಪ್ರಕ್ರಿಯೆ ಇನ್ನೂ ಹೆಚ್ಚಿನ ವ್ಯಾಪಕತೆಯನ್ನು ಪಡೆದುಕೊಂಡಿದೆ. ಎಂಟನೇ ದಶಕದ ಅನಂತರದಲ್ಲಿ ದಲಿತರ ಜೊತೆಯಲ್ಲಿ ಹೆಂಗಸರು ಮತ್ತು ಅಲ್ಪಸಂಖ್ಯಾತರು ಕೂಡ ಹೀಗೆ ಮರುಗಳಿಕೆಯ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದನ್ನು ನೋಡುತ್ತೇವೆ.

ಏಕೀಕರಣದ ಮೊದಲ ಎರಡು ದಶಕದಲ್ಲಿ ಇದ್ದ ಪರಿಸ್ಥಿತಿ ಬದಲಾದುದನ್ನು ಗಮನಿಸುವಾಗ ಅದು ಕನ್ನಡಕ್ಕೆ ಮಾತ್ರ ಸಂಬಂಧಿಸಿದ ಘಟನೆ ಎಂದು ತಿಳಿಯಬೇಕಾಗಿಲ್ಲ. ೧೯೭೫ರ ಸರಿ ಸುಮಾರಿನಲ್ಲಿ ಭಾರತವೂ ಸೇರಿದಂತೆ ಆಪ್ರೋ-ಏಸಿಯನ್ ದೇಶಗಳ ಹಲವಾರು ಭಾಷಾ ಸಂಸ್ಕೃತಿಗಳಲ್ಲಿ ಈ ಪ್ರಕ್ರಿಯೆ ನಡೆದುದನ್ನು ಗುರುತಿಸಲಾಗಿದೆ. ವಸಾಹತು ಆಡಳಿತದಿಂದ ಬಿಡುಗಡೆ ಪಡೆದ ತಕ್ಷಣವೇ ತಮಗೂ ಬಿಡುಗಡೆ ಸಿಕ್ಕಿತೆಂದು ತಿಳಿದ ಜನಸಮುದಾಯಗಳು  ಒಂದೆರಡು ದಶಕಗಳಲ್ಲಿ ನಿಜ ಪರಿಸ್ಥಿತಿಯನ್ನು ಅರಿತರು.  ಆದರ ಪರಿಣಾಮಗಳು ಹಲವು ಬಗೆಗಳಲ್ಲಿವೆ. ಕನ್ನಡದಲ್ಲಿ ಈ ಬದಲಾವಣೆಗಳು ನಡೆದದ್ದು ಮತ್ತು ಅದು ಜಾಗತಿಕ ಸಂವಾದಿತ್ವವನ್ನು ಪಡೆದದ್ದು ಗಮನಾರ್ಹ.

ಸಾಮಾಜಿಕ ರಚನೆಯ ಬಿರುಕುಗಳು ಕಾಣತೊಡಗಿದ್ದನ್ನು ಗಮನಿಸಿದ್ದೇವೆ. ಇದರ ಪರಿಣಾಮಗಳು ಇಪ್ಪತ್ತನೆಯ ಶತಮಾನದ ಮಾನವ ನಾಗರಿಕತೆಯ ಎರಡು ಮಹಾನ್ ಸಂಕೇತಗಳು ಮುಖಾಮುಖಿಯಾಗತೊಡಗಿದವು. ಹಿಟ್ಲರ್ ಮತ್ತು ಚಾಪ್ಲಿನ್ ಈ ಎರಡು ಸಂಕೇತಗಳು ಯುರೋಪಿನಲ್ಲಿ ಮುಖಾಮುಖಿಯಾದದ್ದನ್ನು ಗಮನಿಸಿದ್ದೇವೆ. ಚಾರಿತ್ರಿಕವಾಗಿ ಅದರ ಮಹತ್ವವನ್ನು ಈಗಾಗಲೇ ಗುರುತಿಸಲಾಗಿದೆ. ಭಾರತದ ಸಂದರ್ಭದಲ್ಲಿ ಅದರಲ್ಲೂ ಕನ್ನಡದ ಪರಿಸ್ಥಿತಿಯಲ್ಲಿ ಈ ಎರಡು ಸಂಕೇತಗಳು ಕಳೆದ ಮೂರು ದಶಕಗಳಲ್ಲಿ ಮುಖ್ಯವಾಗಿ ಸಾಹಿತ್ಯಕೃತಿಗಳಲ್ಲಿ ಮಂಡಿತವಾದ ನಾಯಕರ ಪರಿಕಲ್ಪನೆಯನ್ನು ಪ್ರಭಾವಿಸಿವೆ. ಉದಾತ್ತತೆಯು ಗೇಲಿಗೆ ಒಳಗಾಗುವುದು ಒಂದು ಮಾದರಿಯಾದರೆ ದೈನ್ಯವು ತನ್ನ ಸಂಕೋಚಗಳನ್ನು ಕಳೆದುಕೊಂಡು ಹೊರಬರಲು ಸಾಧ್ಯವಾಗುವುದು ಇನ್ನೊಂದು ಮಾದರಿ. ಈ ಎರಡೂ ಬಗೆಗಳು ಭಾಷೆಯ ನೆಲೆಯಲ್ಲಿ ಬೇರೆ ಸಾಧ್ಯತೆಗಳನ್ನು ರೂಪಿಸಿದವು. ಈ ಕಾಲದ ಸಾಹಿತ್ಯಕ ನಿರೂಪಣೆಗಳನ್ನು ಆದರ್ಶದ ಉದಾರತೆಯ ಮಂಡನೆಯ ನಿರಾಕರಣೆಗೆ ಬಳಸುವ ಭಾಷೆಗೂ ಅತಿದೀನ, ಅವಗಣಿತ, ಅವಕಾಶ ನಿರಾಕೃತ ಜೀವನದ ನೆಲೆಗಳು ಬೆಳಕಿಗೆ ಬರುವುದನ್ನು ಮಂಡಿಸುವಾಗ ಬಳಸುವ ಭಾಷೆಗೂ ಅಗಾಧ  ವ್ಯತ್ಯಾಸಗಳಿವೆ. ಕನ್ನಡ ಸಾಹಿತ್ಯದ ಕಳೆದ ಎರಡು ದಶಕಗಳ ಸಾಧನೆ ಗಳನ್ನು ಕುರಿತು ಚರ್ಚಿಸುವವರು ಬೇರೆ ಬೇರೆ ಏನೇ ಹೇಳಿದರೂ ಭಾಷೆಯ ನೆಲೆಯಲ್ಲಿ ಸಂಭವಿಸಿದ ಈ ಪರಿವರ್ತನೆಗಳನ್ನು ಕಡೆಗಣಿಸುವುದು ಮಾತ್ರ ಸಾಧ್ಯವಿಲ್ಲ.

ಎಂಟನೆಯ ದಶಕದಿಂದ ಈಚೆಗೆ ಸಾಹಿತ್ಯ ಕೃತಿಗಳು ಬಳಸುವ ಭಾಷೆಯ  ಸ್ವರೂಪದಲ್ಲಿ ಒಂದು ಮುಖ್ಯ ಬದಲಾವಣೆಯನ್ನು ಗಮನಿಸುತ್ತೇವೆ. ಅದರಲ್ಲೂ ಕಾದಂಬರಿ ಮತ್ತು ಕತೆಗಳಲ್ಲಿ ಈ ಬದಲಾವಣೆ ಹೆಚ್ಚಾಗಿ ಕಂಡುಬರುತ್ತದೆ. ಕಾದಂಬರಿಯ ನಿರೂಪಣೆ ಮತ್ತು ಪಾತ್ರಗಳ ಸಂಭಾಷಣೆ ಈ ಎರಡು ಕಡೆಗಳಲ್ಲಿ ಮೊದಲು ಕ್ರಮವಾಗಿ ಪ್ರಮಾಣಭಾಷೆ ಮತ್ತು ಉಪಭಾಷೆಗಳನ್ನು ಅಥವಾ ಆಡುಮಾತಿನ ಒಂದು ಬಗೆಯನ್ನು ಬಳಸುತ್ತಿದ್ದರು. ಆದರೆ ಈಗ ಎರಡು ಕಡೆಗಳಲ್ಲಿ ಕೆಲವು ಕೃತಿಕಾರರು ಉಪಭಾಷೆಯನ್ನೇ ಬಳಸಲು ತೊಡಗಿದ್ದಾರೆ. ಇದಕ್ಕೆ ಸಾಹಿತ್ಯಕ ಕಾರಣಗಳು ಏನೇ ಇರಲಿ. ಕನ್ನಡ ಭಾಷಾ ಜಗತ್ತಿನಲ್ಲಿ ನಡೆಯುತ್ತಿದ್ದ ಪರಿವರ್ತನೆಗಳು ಸಾಹಿತ್ಯ ಕೃತಿಯಲ್ಲೂ ಕಾಣತೊಡಗಿವೆ ಎಂದಷ್ಟೇ ನಾವಿಲ್ಲಿ ಗ್ರಹಿಸಬೇಕಾಗಿದೆ. ಉಪಭಾಷೆಗಳ ನಿರಾಕರಣೆ ಒಂದು ಮುಖ್ಯ ಭಾಷಾನೀತಿಯ ನೆಲೆಯಾಗಿದ್ದನ್ನು ಎಂಟನೆಯ ದಶಕದಿಂದೀಚೆಗೆ ಪ್ರಶ್ನಿಸುವ ಪ್ರವೃತ್ತಿ ಬೆಳೆಯಿತು. ಅದರಿಂದಾಗಿ ಈ ಉಪಭಾಷೆಗಳನ್ನು ಗುರುತುಗಳನ್ನಾಗಿ ಉಳಿಸಿಕೊಳ್ಳುವ ಅಪೇಕ್ಷೆಯು ಕಾಣತೊಡಗಿತ್ತು. ಇದರ ಪರಿಣಾಮ ದಿಂದಾಗಿ ಸಾಹಿತ್ಯ ಕೃತಿಗಳಲ್ಲೂ ಎಲ್ಲ ಶೈಲಿ ನೆಲೆಗಳಲ್ಲೂ ಉಪಭಾಷೆಯನ್ನು ಬಳಸಲು ಇದ್ದ ಹಿಂಜರಿಕೆಗಳು ಈಗ ಮಾಯವಾದವು. ಈ ಬಗೆಯ ಪ್ರಯತ್ನಗಳನ್ನು ಸಹಜವಾಗಿಯೇ ಸ್ಥಿತ ಸಾಹಿತ್ಯಕ ಚಿಂತನೆಗಳು ನಿರಾಕರಿಸಿವೆ ಅಥವಾ ಗೇಲಿ ಮಾಡಿವೆ. ಸಂವಹನಕ್ಕೆ ಅಡ್ಡಿಯಾಗುತ್ತದೆಂಬುದು ಅವರ ತಗಾದೆ. ಒಂದು ಉಪಭಾಷೆಯ ನಿರೂಪಣೆ ಅದೇ ಭಾಷೆಯ ಇತರ ಭಾಷಿಕರಿಗೆ ಸಂವಹನ ಆಗುವುದಿಲ್ಲ ಎಂಬ ಪರಿಸ್ಥಿತಿಯೇ ಒಂದು ವಿಪರ್ಯಾಸ. ಇದು ವಾಸ್ತವ ಅಲ್ಲದಿರಬಹುದು. ಆದರೆ ಉಪಭಾಷೆಗಳ ಬಗೆಗೆ ಇರುವ ಅಸಹನೆಯಿಂದ ಇಂತಹ ಶಂಕೆ ವ್ಯಕ್ತವಾಗುತ್ತದೆ. ಮತ್ತೆ ಕೆಲವರು ಈ ಉಪಭಾಷಾ ಬಳಕೆಯ ಮಾದರಿಯನ್ನು ಕೇವಲ ವಾಸ್ತವತಾವಾದದ ನೆಲೆಯಲ್ಲಿ ಗ್ರಹಿಸಿದರು. ಇದು ತಪ್ಪು ಗ್ರಹಿಕೆ. ಏಕೆಂದರೆ ಸಾಹಿತ್ಯ ಕೃತಿಗಳಲ್ಲಿ ವಾಸ್ತವತೆ ಎಂಬುದು ಹೀಗೆ ಪಾತ್ರಗಳ ನಿಜಭಾಷೆ ಮತ್ತು ನಿರೂಪಕರ ನಿಜಭಾಷೆಗಳಿಗೆ ಸೀಮಿತವಾಗುವುದಿಲ್ಲ. ಹಾಗಿದ್ದಾಗ ಕಾರಂತರ ಎಷ್ಟೋ ಕಾದಂಬರಿಗಳ ಪಾತ್ರಗಳು ಕನ್ನಡವನ್ನು ಮಾತನಾಡುವಂತಿಲ್ಲ. ತುಳುವಿನಲ್ಲಿ ಮಾತ್ರ ಮಾತಾಡಬೇಕಾಗುತ್ತದೆ. ಈ ಪ್ರಶ್ನೆ ಮುಖ್ಯವಲ್ಲ. ವಾಸ್ತವತಾವಾದದ ನೆಲೆಯಲ್ಲಿ ಭಾಷೆಯ ಬಳಕೆಯನ್ನು ನಿಗದಿಪಡಿಸಲು ಹೊರಟ ಎಷ್ಟೋ ಕೃತಿಕಾರರು ಕನ್ನಡದ ಸಾಮಾಜಿಕ ಉಪಭಾಷೆಗಳ ನಡುವೆ ಇರುವ ಅಧಿಕಾರ ಸಂಬಂಧವನ್ನು ಸರಿಯಾಗಿ ಗ್ರಹಿಸಿದಂತೆ ತೋರುವುದಿಲ್ಲ. ಚದುರಂಗರ ವೈಶಾಖ ಕಾದಂಬರಿಯ ಭಾಷೆ ಇದಕ್ಕೊಂದು ನಿದರ್ಶನ. ಅಲ್ಲಿಯ ವಿವಿಧ ಸಾಮಾಜಿಕ ವರ್ಗದ ಪಾತ್ರಗಳು ಒಂದೇ ಮಾದರಿಯ ಆಡುಮಾತನ್ನು ಬಳಸುತ್ತವೆ. ಉರ್ದು ಭಾಷಿಕ ಮುಸಲ್ಮಾನರೊಬ್ಬರ ಭಾಷೆ ಮಾತ್ರ ಇದಕ್ಕೊಂದು ವಿನಾಯಿತಿ. ನಿರೂಪಕರು ನಿರೂಪಣೆಯಲ್ಲಿ ಬಳಸುವ ಭಾಷೆಯಲ್ಲಿ ಇರುವ ಮುಖ್ಯ ತೊಂದರೆ ಎಂದರೆ ಅಲ್ಲಿ ಆಡುಮಾತಿನ ಕಲ್ಪನೆಯ ವ್ಯತ್ಯಸ್ಥವಾಗಿರುವುದು. ಈ ರೀತಿ ವಾಸ್ತವತಾವಾದದ ನೆಲೆಯಿಂದ ಭಾಷಾ ಬಳಕೆಯಲ್ಲಿ ಪರಿವರ್ತನೆಗಳು ನಡೆದಿವೆ ಎಂದು ಗ್ರಹಿಸಿದ್ದು ಒಂದು ತುದಿಯಾದರೆ ಏಕೆ ಈ ಪರಿವರ್ತನೆ ನಡೆಯಿತು ಎನ್ನುವುದನ್ನು ಅರ್ಥಮಾಡಿಕೊಳ್ಳಲಾಗದೆ ಹೋದುದು ಇನ್ನೊಂದು ತುದಿ.

ಭಾಷೆ ಮತ್ತು ಸಾಹಿತ್ಯ ಕೃತಿಗಳ ಸಂಬಂಧ ಇನ್ನೂ ಒಂದು ಮುಖ್ಯ ಆಯಾಮವನ್ನು ಪಡೆದುಕೊಂಡಿದೆ. ಭಾಷಾ ಸಂಸ್ಕೃತಿಯ ಸಾಧನೆಗಳನ್ನಾಗಿ ಕಲಾಕೃತಿಗಳನ್ನು ಗುರುತಿಸಿಕೊಳ್ಳುವುದು ಒಂದು ಪದ್ಧತಿ. ಸಾಮಾನ್ಯವಾಗಿ ಸಾಂಸ್ಕೃತಿಕ ಚರಿತ್ರೆಯನ್ನು ರಚಿಸುವವರು ಕಲೆ, ಸಂಗೀತ, ಸಾಹಿತ್ಯ ವಾಸ್ತುಶಿಲ್ಪ ಮುಂತಾದ ವಲಯಗಳ ಸಾಧನೆಗಳನ್ನು ವಿಶ್ಲೇಷಿಸಲು ತೊಡಗುತ್ತಾರೆ. ಇದೊಂದು ಸಿದ್ಧ ಮಾದರಿ. ಇಲ್ಲಿ ಒಂದು ಕಾಲದ ಸಂಸ್ಕೃತಿಯ ವ್ಯಾಖ್ಯೆಯಲ್ಲಿ ಸಾಹಿತ್ಯ ಕೃತಿಗಳ ಸ್ಥಾನವೇನು ಎಂಬುದು ಮುಖ್ಯ ಪ್ರಶ್ನೆ. ಸರಳವಾದ ಉತ್ತರವೆಂದರೆ ಭಾಷಾ ಸಂಸ್ಕೃತಿಯು ತನ್ನ ಆವಿಷ್ಕಾರಗಳನ್ನು ಭೌತಿಕ ಜಗತ್ತಿನಲ್ಲಿ ಸಂಸ್ಥಾಪಿಸಲು ಮತ್ತು ಶೋಧಿಸಲು ಸಾಹಿತ್ಯ ಕೃತಿಗಳನ್ನು ಬಳಸುತ್ತವೆ. ಈ ಬಗೆಯ ಬಳಕೆಗೆ ಎರಡು ವಿಧಾನಗಳಿವೆ. ಒಂದು: ಸಾಹಿತ್ಯ ಕೃತಿಗಳಿಗೂ ಸಂಸ್ಕೃತಿಗೂ ಇರುವ ಅಥವಾ ಇರಬೇಕಾದ ಸಂಬಂಧದ ನೆಲೆ. ಇನ್ನೊಂದು: ಸಾಹಿತ್ಯ ಕೃತಿಗಳನ್ನು ಒಂದು ಸಂಸ್ಕೃತಿಯ ಚಲನಶೀಲತೆಯ ದಾಖಲೆಗಳೆಂದು ತಿಳಿದು ಅವುಗಳನ್ನು ಗುರುತುಗಳನ್ನಾಗಿ ಪರಿವರ್ತಿಸುವುದು. ಮೊದಲನೆಯ ವಿಧಾನದಲ್ಲಿ ಎರಡು ಬೇರೆ ಬೇರೆ ಸಾಧ್ಯತೆಗಳಿವೆ. ಸಂಸ್ಕೃತಿಯ ನೆಲೆಗಳನ್ನು ಅರಿತುಕೊಳ್ಳಲು ಸಾಹಿತ್ಯ ಕೃತಿಗಳನ್ನು ಬಳಸುವುದು ಅಥವಾ ಸಾಹಿತ್ಯ ಕೃತಿಗಳಲ್ಲಿ ಸಂಸ್ಕೃತಿಯ ನೆಲೆಗಳು ಯಾವ ಪ್ರಭಾವವನ್ನು ಬೀರಿವೆ ಎನ್ನುವುದನ್ನು ತಿಳಿಯಲು ಯತ್ನಿಸುವುದು. ಇವೆರಡು ತಾತ್ವಿಕವಾಗಿ ಒಂದಕ್ಕೊಂದು ಪೂರಕ ಮಾದರಿಗಳು ಆಗಿರಬಹುದು. ಭಾಷೆಗೆ ಸಂಬಂಧಿಸಿದಂತೆ ಈ ಮಾದರಿಗಳ ಉಪಯುಕ್ತತೆ ಇಲ್ಲಿ ಮುಖ್ಯವಾಗುತ್ತದೆ. ಸಂಸ್ಕೃತಿಯನ್ನು ಅರಿತುಕೊಳ್ಳಲು ಸಾಹಿತ್ಯ ಕೃತಿಗಳನ್ನು ಶೋಧಕಗಳನ್ನಾಗಿ ಬಳಸುವ ವಿಧಾನದಲ್ಲಿ ಭಾಷೆಯ ಪರಿವರ್ತನಾಶೀಲತೆಯನ್ನು, ಅದು ಸಾಮಾಜಿಕವಾಗಿ ಪಡೆಯುವ ಹೊಸ ಹೊಸ ಸಂಬಂಧಗಳನ್ನು ಗ್ರಹಿಸುವುದು ಸಾಧ್ಯ. ಆದರೆ ಈ ಬಗೆಯ ಅಧ್ಯಯನಗಳು ಕೆಲವೊಮ್ಮೆ ಅತಿ ಸರಳೀಕರಣದ ಹಾದಿಯನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ ಒಂದು ಸಾಹಿತ್ಯ ಕೃತಿಯಲ್ಲಿ ಕಾಣಿಸುವ ಭಾಷಾ ಪ್ರಯೋಗಗಳನ್ನು ಹೆಕ್ಕಿ ತೆಗೆದು ಅವು ಆಯಾ ಸಂಸ್ಕೃತಿಯ ಸ್ವರೂಪವನ್ನು ತಿಳಿಸುತ್ತವೆ ಎಂದು ಹೇಳಹೊರಡುವುದು ಸರಿಯಾದ ವಿಧಾನವಲ್ಲ. ಏಕೆಂದರೆ ಸಾಹಿತ್ಯ ಕೃತಿಯ ವಸ್ತು, ಸಾಹಿತಿ ಮತ್ತು ಓದುಗ ಮೂರೂ ಬಿಂದುಗಳೂ ಬೇರೆ ಬೇರೆ ಕಾಲದೇಶಗಳಲ್ಲಿರುತ್ತವೆ. ಹಾಗಿರುವಾಗ ಕೃತಿಯ ಭಾಷೆಯು ಯಾವ ಕಾಲದ ಭಾಷಾ ಪ್ರಭೇದವನ್ನು ಸೂಚಿಸುತ್ತದೆ? ಇದು ಸಮಸ್ಯೆಯೇ ಸರಿ.

ಇನ್ನು ಸಾಹಿತ್ಯ ಕೃತಿಗಳ ಮೇಲೆ ಸಂಸ್ಕೃತಿ ಬೀರುವ ಪರಿಣಾಮಗಳನ್ನು ಅಧ್ಯಯನ ಮಾಡುವ ವಿಧಾನದಲ್ಲಿ ಭಾಷೆ ಒಂದು ಪರಿಕರವಾಗಿ ಉಳಿಯುವುದಿಲ್ಲ. ಬದಲಾಗಿ ಸಾಂಸ್ಕೃತಿಕ ಚಲನಶೀಲತೆಯ ಅಂಶಗಳನ್ನು, ಅದರ ಗತಿತರ್ಕವನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುತ್ತದೆ. ಆದ್ದರಿಂದ ಈ ವಿಧಾನದಲ್ಲಿ ಭಾಷೆಯ ಸ್ವರೂಪದ ಬಗೆಗೆ ನಮಗೆ ಹೆಚ್ಚಿನ ತಿಳುವಳಿಕೆ ಸಿಗುವುದು ಸಾಧ್ಯ.

ಸಾಹಿತ್ಯ ಕೃತಿಗಳನ್ನು ಸಂಸ್ಕೃತಿಯ ಸೂಚಕಗಳೆಂದು ಪರಿಗಣಿಸುವ ಇನ್ನೊಂದು ಬಗೆಯಲ್ಲಿ ಇರುವ ಸಮಸ್ಯೆಗಳೇನು? ಈ ವಿಧಾನದಿಂದ ಕೃತಿ ಮತ್ತು ಕೃತಿಕಾರರು ವಿಘಟನೆಗೆ ಒಳಗಾಗುತ್ತಾರೆ.  ಕೃತಿ ಹಿಂದೆ ಸರಿದು ಕೃತಿಕಾರರು ಮುಂಚೂಣಿಗೆ ಬರುತ್ತಾರೆ. ಕ್ರಿಯೆ ಮತ್ತು ಕರ್ತೃಗಳಲ್ಲಿ ಗೆರೆ ಕೊರೆದಂತೆ ಭೇದವನ್ನು ಉಂಟುಮಾಡಿ ಕರ್ತೃವಿನ ಪಾತ್ರವನ್ನು ಹಿರಿದು ಮಾಡುವ ವಿಧಾನ ಇಲ್ಲಿ ಮುಖ್ಯವಾಗುತ್ತದೆ. ಇದನ್ನು ಕರ್ತೃ ನಿರ್ಮಾಣ ವಿಧಾನ ಎಂದು ಗುರುತಿಸಬಹುದು. ಇದೊಂದು ಸಂಸ್ಕೃತಿಯ ಅಸಾಹಿತ್ಯಕ ನೆಲೆಗಳಲ್ಲಿ ಒಂದಾಗಿದೆ. ಭಾಷಿಕರು ತಮ್ಮ ಭಾಷೆಯ ಸ್ಥಾನಮಾನದ ಬಗೆಗೆ ಯೋಚಿಸಲು ತೊಡಗಿದ್ದಾಗ ಅವರು ಕೆಲವು ಚಹರೆಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಆ ಚಹರೆಗಳನ್ನು ಪ್ರತಿನಿಧಿಗಳನ್ನಾಗಿ ಪರಿಗ್ರಹಿಸಿ ಸಾಂಸ್ಕೃತಿಕ ಹೆಮ್ಮೆಯನ್ನು ಮೆರೆಯಲಾಗುತ್ತದೆ. ಅಲ್ಲದೇ ಭಾಷಿಕ ಔನ್ನತ್ಯವನ್ನು ಸ್ಥಾಪಿಸಲು ಯತ್ನಿಸಲಾಗುತ್ತದೆ. ಉದಾಹರಣೆಗೆ ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂಬುದನ್ನು ಒಂದು ಹೆಮ್ಮೆಯನ್ನಾಗಿ ನಾವು ಮಾಡಿಕೊಂಡಿದ್ದೇವೆ. ಆದರೆ ಹೀಗೆ ಹೆಮ್ಮೆ ಪಡುವಾಗ ನಮ್ಮ ಗಮನ ಸಂಪೂರ್ಣವಾಗಿ ಕೃತಿಕಾರರ ಮೇಲೆ ಇರುತ್ತದೆಯೇ ಹೊರತು ಕೃತಿಯ ಹೊರಗಿನ ಇಲ್ಲವೆ ಒಳಗಿನ ವಿವರಗಳಲ್ಲಿ ಈ ಸಾಧ್ಯತೆಗಳನ್ನು ಯಾರೂ ಹುಡುಕುವುದಿಲ್ಲ.

ದಿನನಿತ್ಯ ಇಂಥಾ ಹತ್ತಾರು ಪ್ರಸಂಗಗಳನ್ನು ನಾವು ಗಮನಿಸುತ್ತೇವೆ. ಸಾಹಿತ್ಯ ಸಂಸ್ಕೃತಿಯು ಕೃತಿಕಾರರನ್ನು ಕೃತಿಯಿಂದ ಬೇರ್ಪಡಿಸಿದ ಕೂಡಲೇ ಆ ಕೃತಿಕಾರರು ಸಾಮಾಜಿಕ ಮನ್ನಣೆಯನ್ನು ಪಡೆದು ಬಿಡುತ್ತಾರೆ. ಸಮಾಜವು ಅವರನ್ನು ಆ ನಾಯಕ ಸ್ಥಾನದಿಂದ ಪಲ್ಲಟಗೊಳಿಸಲು ಯೋಚಿಸುವುದಿಲ್ಲ. ಅದಕ್ಕಾಗಿ ಆ ನಾಯಕರ ಕೃತಿಗಳನ್ನು ಕೇವಲ ಸೂಚಕಗಳನ್ನಾಗಿ ಮಾಡಿಬಿಡುತ್ತಾರೆ. ಭಾಷೆಯ ಔನ್ನತ್ಯಕ್ಕೂ ಈ ಸಾಹಿತ್ಯಕ ಗ್ರಹಿಕೆಗಳಿಗೂ ಅರ್ಥಾತ್ ಸಂಬಂಧವಿಲ್ಲ.  ಪ್ರಶಸ್ತಿಗಳಿಗೆ ಹೆಸರಿಡುವುದು; ರಸ್ತೆ ಬೀದಿಗಳಿಗೆ ಹೆಸರಿಡುವುದು; ಊರ ಬಡಾವಣೆಗಳಿಗೆ ಹೆಸರಿಡುವುದು ಇಂಥಾ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಏಕೆಂದರೆ ಸಮಾಜಕ್ಕೆ ಕರ್ತೃ ಮುಖ್ಯವೇ ಹೊರತು ಕೃತಿ ಮುಖ್ಯವಾಗುವುದಿಲ್ಲ.

ಹೀಗೆ ಭಾಷೆಯ ಔನ್ನತ್ಯಕ್ಕೂ ಸಾಹಿತ್ಯಸಿದ್ಧಿಗೂ ಸಂಬಂಧ ಕಲ್ಪಿಸುವ ಕೆಲಸಗಳು ಹಲವಾರಿವೆ. ಇವೆಲ್ಲವೂ ಪ್ರಜಾಪ್ರಭುತ್ವದಲ್ಲಿ ಅನಿವಾರ್ಯವೆಂಬ ವಾದವನ್ನು ಮಂಡಿಸಲಾಗುತ್ತದೆ. ಕೃತಿಯಿಂದ ಕೃತಿಕಾರರಿಗೆ ಅವಧಾರಣೆ ಬದಲಾದುದಕ್ಕೆ ಪಂಪ ಪ್ರಶಸ್ತಿ ಒಂದು ನಿದರ್ಶನ. ಪ್ರಶಸ್ತಿಯು ಪಂಪನ ಹೆಸರಲ್ಲಿದೆ. ಆತನಿಗೆ ಗೌರವ ಸೂಚಿಸಲು ಹೀಗೆ ಹೆಸರಿಡಲಾಗಿದೆ ಸರಿ. ಆದರೆ ಈ ಭರಾಟೆಯಲ್ಲಿ ಅವನ ಸಾಹಿತ್ಯ ಕೃತಿಗಳು ಎಲ್ಲಿ ಹೋದವು? ಪಂಪ ಪ್ರಶಸ್ತಿಯನ್ನು ಸ್ಥಾಪಿಸಿದಾಗ ಅದನ್ನು ಕೃತಿಯೊಂದಕ್ಕೆ ನೀಡಬೇಕು ಎನ್ನುವ ಶರತ್ತು ಇತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಮಾನದಂಡ ಬದಲಾಗಿ ಸಾಹಿತ್ಯ ಕೃತಿಯ ಬದಲು ಕೃತಿಕಾರರನ್ನು ಹೆಸರಿಸುವ ಪರಿಪಾಟ ಬೆಳೆಯಿತು. ಈಗ ಔಪಚಾರಿಕವಾಗಿಯೂ ಕೃತಿಗಳ ಉಲ್ಲೇಖ ಬರುವುದಿಲ್ಲ

ಸಾಹಿತ್ಯ ಪೋಷಣೆಯ ಚಟುವಟಿಕೆಗಳನ್ನು ಮಾಡುವ ಮೂಲಕ ಭಾಷಾಭಿವೃದ್ಧಿ ಯನ್ನು ಮಾಡಿದಂತಾಗುತ್ತದೆ ಎನ್ನುವುದು ಸರ್ಕಾರದ ನಿಲುವು. ಸರ್ಕಾರದ ಈ ಬಗೆಯ ಚಟುವಟಿಕೆಗಳ ಇಲಾಖೆಯ ಹೆಸರೇ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ. ಏಕೀಕರಣದ ಮೊದಲೇ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಸಂಸ್ಕೃತಿ ನಿರ್ದೇಶನಾಲಯ ಸ್ಥಾಪಿಸಿದರು. ಅವರ ಮೂಲಕ ಕನ್ನಡದ ಉತ್ತಮ ಕೃತಿಗಳನ್ನು ಪ್ರಕಟಿಸುವ ಕೆಲಸ ಆರಂಭಿಸಿದರು. ಕುಮಾರ ವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ ಪ್ರಕಟಣೆ ಮೊದಲುಗೊಂಡು ಇಂತಹ ಚಟುವಟಿಕೆಗಳನ್ನು ಹಮ್ಮಿಕೊಂಡು ಮುಂದುವರೆದರು. ಮತ್ತೆ ಎಂಟನೇ ದಶಕದಿಂದ ಹೀಗೆ ಸಾಹಿತ್ಯ ಕೃತಿಗಳನ್ನು ಬೃಹತ್ ಪ್ರಮಾಣದಲ್ಲಿ ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಯೋಜನೆಗಳನ್ನು ಸರ್ಕಾರ ನಡೆಸುತ್ತಲೇ ಇದೆ. ವಿಶ್ವಕನ್ನಡ ಸಮ್ಮೇಳನದ ಸಂದರ್ಭದ ಪುಸ್ತಕಗಳು, ಪುರಂದರದಾಸರು, ಅನಂತರ ಕನಕದಾಸರ ಕೃತಿಗಳು, ವಚನ ಸಾಹಿತ್ಯ ಸಂಪುಟ, ದಾಸ ಸಾಹಿತ್ಯ ಸಂಪುಟ, ಡಿವಿಜಿ ಕೃತಿ ಶ್ರೇಣಿ ಹೀಗೆ ಹಲವು ಹತ್ತು ಯೋಜನೆಗಳು ಜಾರಿಯಾಗಿವೆ. ಇವೆಲ್ಲವೂ ಭಾಷೆಯ ಅಭಿವೃದ್ಧಿಂii ಹೆಸರಿನಲ್ಲಿ ನಡೆದಿರುವ ಚಟುವಟಿಕೆಗಳು. ಈ ಚಟುವಟಿಕೆಗಳಲ್ಲಿ ತೊಡಗಿರುವ ಸರಕಾರ ಕೃತಿಗಳನ್ನು ಮುಚ್ಚಿದ ಕಪಾಟುಗಳ ಒಳಗೆ ಸೇರಿಸುತ್ತಿದೆ. ಇದು ಒರಟಾದ ಮಾತಾದರೂ ಒಂದು ನಿದರ್ಶನದ ಮೂಲಕ ಈ ಅಂಶವನ್ನು ಗಮನಿಸೋಣ. ವಚನಸಾಹಿತ್ಯದ ಸಕಲ ವಚನಗಳ ಪ್ರಕಟಣೆಯಲ್ಲಿ ಹದಿನಾರು ಸಂಪುಟಗಳು ಹೊರಬಂದವು. ಸರಿಸುಮಾರು ಐದುಸಾವಿರ ಪುಟಗಳ ಪುಸ್ತಕಗಳು. ಅಂತಹ ಹತ್ತು ಸಾವಿರ ಪ್ರತಿಗಳನ್ನು ಎರಡು ಬಾರಿ ಮುದ್ರಿಸಲಾಗಿದೆ. ಸುಮಾರು ಹತ್ತು ವರ್ಷದ ಅವಧಿಯಲ್ಲಿ ಪ್ರಕಟಗೊಂಡ ಈ ಇಪ್ಪತ್ತು ಸಾವಿರ ಪುಸ್ತಕಗಳು ಕರ್ನಾಟಕದ ವಿವಿಧ ಮನೆ, ಗ್ರಂಥಾಲಯಗಳಲ್ಲಿ ಸೇರಿಕೊಂಡಿವೆ. ಮೇಲುನೋಟಕ್ಕೆ ಅದ್ಭುತವಾದ ಸಾಧನೆ. ಆದರೆ ಈ ಸಂಪುಟಗಳ ಪ್ರಕ್ರಿಯಾತ್ಮಕ ನೆಲೆ ಏನು? ಸಂಸ್ಕೃತಿಯ ಯಾವ ನೆಲೆಗೆ ಈ ವಚನಗಳಿಂದ ನೆರವಾಗಿದೆ ಎಂಬ ಪ್ರಶ್ನೆ ಹಾಗೇ ಉಳಿಯುತ್ತಿದೆ. ಎಂದರೆ ಈ ಇಪ್ಪತ್ತು ಸಾವಿರ ಪುಸ್ತಕಗಳಲ್ಲಿ ಎಷ್ಟೋ ಪಾಲು ಓದದೆ ಉಳಿದ ಗ್ರಂಥಗಳಾಗಿವೆ. ಈ ಹತಾಶೆಯ ಮಾತಿಗೆ ಕಾರಣವಿದೆ. ಭಾಷೆಯ ಅಭಿವೃದ್ಧಿಗಾಗಿ ಈ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಕೊಡುವ ಮೂಲಕ ಸರ್ಕಾರವು ತನ್ನ ಸಾಧನೆಗಳನ್ನು ಪೂರೈಸಿದ ತೃಪ್ತಿ ಪಡಬಹುದೇ ಹೊರತು ಸಾಂಸ್ಕೃತಿಕವಾಗಿ ಪರಿಣಾಮ ಮಾತ್ರ ಶೂನ್ಯ.

ಭಾಷೆಯ ಅಭಿಮಾನದ ಗುರುತಾಗಿ ಸಾಹಿತ್ಯ ಕೃತಿಗಳನ್ನು ಪರಿಗಣಿಸುವ ಈ ಪ್ರವೃತ್ತಿ ಕೇವಲ ಈ ವಲಯಕ್ಕೆ ಮಾತ್ರ ಸೀಮಿತವಾದುದಲ್ಲ. ಸಂಸ್ಕೃತಿಯ ಈ ಹೊತ್ತಿನ ನೆಲೆಗಳನ್ನು ಅದು ಬಿಂಬಿಸುತ್ತದೆ. ರೂಪ ಮತ್ತು ಆಶಯ ಈ ದ್ವ್ವಂದ್ವಮಾನಗಳಲ್ಲಿ ರೂಪವು ಮುಂಚೂಣಿಗೆ ಬಂದು ಆಶಯವು ಹಿಂದಕ್ಕೆ ಸರಿಯುವ ಅಥವಾ ನಾಶವಾಗಿ ಹೋಗುವ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಇದು ದೃಗ್ಗೋಚರವಾದ ಮೂರ್ತಿಗಳ ಅಥವಾ ವಸ್ತುಗಳ ನೆಲೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಆಶಯ ಹಿಂದೆ ಸರಿದು ರೂಪ ಪ್ರಧಾನವಾಗುವ ವಿಘಟಿತ ಸ್ಥಿತಿಯಲ್ಲಿ ಭಾಷೆ ಆಚರಣೆಯಾಗಿ ಬಿಡುತ್ತದೆ. ಇನ್ನೂ ಖಚಿತ ಪಡಿಸಬೇಕೆಂದರೆ ಭಾಷೆ ಆಚರಣೆಯಾಗುವ ಸಂದರ್ಭಕ್ಕೆ ಇದು ಒಂದು ಪ್ರತೀಕವಾಗುತ್ತದೆ. ಭಾಷೆ ಆಚರಣೆಯಾಗುವುದು ಎಂದರೇನು? ಇದನ್ನು ಧನಾತ್ಮಕವಾಗಿ ನೋಡಬೇಕೋ ಅಥವಾ ಋಣಾತ್ಮಕವಾಗಿ ನೋಡಬೇಕೋ? ಧನಾತ್ಮಕವಾಗಿ ನೋಡುವುದಾದರೆ ಭಾಷೆಗೆ ಮಾಂತ್ರಿಕತೆ ದೊರಕಿದಂತೆ. ಶಬ್ದ ಪ್ರಧಾನವಾದ ಮಂತ್ರಗಳ ಹಾಗೆ. ಆದರೆ ಋಣಾತ್ಮಕವಾಗಿ ಪರಿಗಣಿಸಿದರೆ ಭಾಷೆ ಕೇವಲ ಅರ್ಥ ನಿರಪೇಕ್ಷ, ಶಬ್ದಜಾಲವಾಗಿ ಬದಲಾಗಿ ಬಿಡುತ್ತಿದೆ.

ಪ್ರಮಾಣಭಾಷೆಯ ಚರ್ಚೆಯ ಸಂದರ್ಭದಲ್ಲಿ ಈ ಮಾತನ್ನು ಗಮನಿಸಿದ್ದೆವು. ಭಾಷೆಯು ಅರ್ಥಹೀನ ಆಗುವುದು ಮತ್ತು ಅರ್ಥನಿರಪೇಕ್ಷವಾಗುವುದು ಬೇರೆಬೇರೆ. ಅರ್ಥಹೀನತೆ ಗಮನಕ್ಕೆ ಬರುವಂತದ್ದು. ಅದನ್ನು ಗುರುತಿಸಿ ನಿರಾಕರಿಸುವುದು ಸುಲಭ. ಆದರೆ ಅರ್ಥನಿರಪೇಕ್ಷ ಸ್ಥಿತಿ ಹೆಚ್ಚು ಸೂಕ್ಷ್ಮವಾದುದು. ಅದನ್ನು ಬಳಸುವವರು ಮತ್ತು ಕೇಳುವವರು ಹೀಗೆ ಎಲ್ಲರೂ ಅದರ ಇರುವಿಕೆಯ ಬಗೆಗೆ ಜಾಗೃತರಾಗಿರುವುದಿಲ್ಲ. ನಮ್ಮ ದಿನನಿತ್ಯದ ಸಾರ್ವಜನಿಕ ವಲಯದ ಭಾಷಿಕ ವ್ಯವಹಾರವನ್ನು ಗಮನಿಸಿದರೆ ಈ ರೂಪ ಆಶಯಗಳ ವಿಘಟನೆಯ ಸ್ಥಿತಿ ಕಣ್ಣಿಗೆ ರಾಚುತ್ತದೆ. ಯಾವುದೇ ಒಂದು ಪ್ರಸಂಗವನ್ನು ನಮ್ಮ ಪತ್ರಿಕೆಗಳು ವರದಿ ಮಾಡುವ ಕ್ರಮವನ್ನು ಗಮನಿಸಿ. ಓದುಗರಿಗೆ ಪ್ರತಿಕ್ರಿಯೆ ನೀಡುವ ವ್ಯಕ್ತಿಯ ಚಹರೆಗಳು, ದೃಷ್ಟಿಕೋನಗಳು ಗೊತ್ತಿದ್ದರೆ ಆ ಪ್ರತಿಕ್ರಿಯೆಯ ತಿರುಳು ಏನು ಎಂಬುದನ್ನು ಕಣ್ಣು ಮುಚ್ಚಿಯಾದರೂ ಹೇಳಿ ಬಿಡಬಹುದು. ದಿನವೂ ನಾವು ಓದುವ ಖಂಡಿಸಿದರು, ವಿರೋಧಿಸಿದರು, ನಿರಾಕರಿಸಿದರು ಮುಂತಾದ ಪದ ಪ್ರಯೋಗಗಳು ಏನನ್ನು ಹೇಳುತ್ತವೆ? ಅವುಗಳ ಅರ್ಥ ಓದುಗರಿಗಾಗಲೀ ಬರೆದು ಮುದ್ರಿಸಿದವರಿಗಾಗಲಿ ಮುಖ್ಯವಾಗುವುದಿಲ್ಲ. ಯಾರು ಪ್ರತಿಕ್ರಿಯೆ ನೀಡುತ್ತಾರೋ ಅವರ ಸಾಮಾಜಿಕ ಗುರುತುಗಳ ದೃಢೀಕರಣ ಮಾತ್ರ ಇದರಿಂದ ಸ್ಥಾಪಿತವಾಗುತ್ತದೆ.

ಕಳೆದ ಐವತ್ತು ವರ್ಷದಲ್ಲಿ ಭಾಷೆಯ ಅಭಿವೃದ್ಧಿಗೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಎರಡು ನೆಲೆಗಳಲ್ಲಿ ನೋಡಿದ್ದೇವೆ. ಒಂದು ಸಾಹಿತ್ಯ ಕೃತಿಗಳ ಒಳಗಿನಿಂದ ನೋಡುವ ಯತ್ನ. ಇನ್ನೊಂದು ಸಾಹಿತ್ಯ ಕೃತಿಗಳನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿ ಇರಿಸಿ ನೋಡುವ ಯತ್ನ. ಎರಡನೆಯ ಚಟುವಟಿಕೆ ಅಗಾಧ ಪ್ರಮಾಣದ ಸಂಪನ್ಮೂಲವನ್ನು ಮಾನವ ಶ್ರಮವನ್ನು ಬಳಸಿಕೊಂಡಿದೆ. ಜನರ ಕಲ್ಪನೆಯ ಲೋಕವನ್ನು ಭದ್ರಪಡಿಸಲು ಶ್ರಮಿಸಿದೆ. ಉಳಿದ ವಲಯಗಳಿಗೆ ಹೋಲಿಸಿದರೆ ಸಾಹಿತ್ಯ ವಲಯದಲ್ಲಿ ಕರ್ತೃವಿಗೆ ಮಹತ್ವ ಪ್ರಧಾನವಾಗುವುದು ಸುಲಭ. ವಿಜ್ಞಾನಿಯೊಬ್ಬರು ವಿಜ್ಞಾನಿಯಾಗಿಯೇ ಉಳಿಯಬೇಕಾದರೆ ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಬೇಕು. ಈ ಶರತ್ತು ಸಾಹಿತಿಗೆ ಅನ್ವಯವಾಗುವುದಿಲ್ಲ. ಕನ್ನಡ ಸಂಸ್ಕೃತಿ ಒಪ್ಪಿಕೊಂಡ ಈ ಮಾದರಿ ಒಟ್ಟು ಸಾಂಸ್ಕೃತಿಕ ಮೌಲ್ಯಗಳ ನೆಲೆಯಲ್ಲಿ ಅಷ್ಟೇನೂ ಹಿತಕರವಾಗಿ ಕಾಣುತ್ತಿಲ್ಲ.