ಐವತ್ತು ವರ್ಷಗಳ ಏಕೀಕರಣದ ಅವಧಿಯನ್ನು ನಾವು ಎರಡು ಘಟ್ಟಗಳಲ್ಲಿ ಗಮನಿಸಬೇಕು.೧೯೫೬ರಿಂದ ೮೧ರವರೆಗೆ ಮೊದಲ ಘಟ್ಟ. ಅನಂತರದ  ಅವಧಿ ಎರಡನೇ ಘಟ್ಟ. ಮೊದಲ ಘಟ್ಟದಲ್ಲಿ ಇಪ್ಪತ್ತೈದು ವರ್ಷಗಳು ಕಳೆದರೂ ಕನ್ನಡದ ಜನಮನವು ಆತಂಕದ ಗಳಿಗೆಗಳನ್ನು ಎದುರಿಸಿದ್ದು ಕಡಿಮೆ. ಏಕೀಕರಣದ ಸಂದರ್ಭದ ಉತ್ಸಾಹದಲ್ಲಿ ಮುಖ್ಯ ಸ್ಥಾಯಿಯಾಗಿ ಉಳಿಯಿತು. ಆಡಳಿತ, ಶಿಕ್ಷಣ, ಸಮೂಹ ಮಾಧ್ಯಮ, ಮುಂತಾದ ಕ್ಷೇತ್ರಗಳಲ್ಲಿ ಭಾಷೆಯ ಬಳಕೆಗೆ ಅವಕಾಶಗಳು ಕಲ್ಪಿತವಾದವು. ಆದರೆ ಕನ್ನಡವನ್ನು ಜನರ ಭಾಷೆಯನ್ನಾಗಿ ಸ್ಥಾಪಿಸುವ ವ್ಯವಸ್ಥಿತ ಯೋಜನೆಗಳು ಸರ್ಕಾರದ ಕಡೆಯಿಂದ ಕಂಡುಬರಲಿಲ್ಲ. ೧೯೭೫ರವರೆಗೂ ಸರ್ಕಾರದ  ವರ್ಗಸ್ವರೂಪದಿಂದಾಗಿ ಅದು ಜನಪರ ನೆಲೆಗಳನ್ನು ಹೊಂದಿರಲಿಲ್ಲ. ಅಂತಹ ಒತ್ತಾಯಗಳು ಮೂಡಿರಲಿಲ್ಲ. ಎರಡನೆಯ ಹಂತದಲ್ಲಿ ಕನ್ನಡ ಆತಂಕದ ಘಳಿಗೆಗಳನ್ನು ಎದುರಿಸುತ್ತಿರುವುದು ಮತ್ತು ಅದನ್ನು ನಿವಾರಿಸಲು ಪ್ರಯತ್ನಗಳನ್ನು ಮಾಡುವುದು ಇವೆರಡೂ ಜೊತೆಜೊತೆಯಾಗಿಯೇ ಮುಂದುವರೆದಿವೆ. ಸರ್ಕಾರ ಕನ್ನಡ ಮತ್ತು ಸಂಸ್ಕೃತಿಗಾಗಿಒಂದು ಪ್ರತ್ಯೇಕ ಸಚಿವ ಶಾಖೆಯನ್ನು ಸೃಷ್ಟಿಸಿದೆ. ವಿಶ್ವಕನ್ನಡ ಸಮ್ಮೇಳನ ನಡೆಸಿತು. ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಸ್ಥಾಪಿಸಿತು. ಇವೆಲ್ಲ ಕ್ರಮಗಳ ಜೊತೆಗೂಡಿ ಶಿಕ್ಷಣ, ಆಡಳಿತ ಮತ್ತು ಸಮೂಹ ಮಾಧ್ಯಮಗಳ ವಲಯದಲ್ಲಿ ಕನ್ನಡದ ಸ್ಥಾನಮಾನಗಳ ಬಗೆಗೆ ಆತಂಕಗಳು ಮಾತ್ರ ಹೆಚ್ಚುತ್ತಲೇ ಹೋಗಿವೆ. ಈ ಆತಂಕಗಳು ಕೇವಲ ಭಾಷೆಗೆ ಸಂಬಂಧಿಸಿದ ಪ್ರಶ್ನೆಯಲ್ಲ. ಜನಸಮುದಾಯದ ಜೀವನದ ಬಿಕ್ಕಟ್ಟುಗಳು ಹಲವು ರೀತಿಗಳಲ್ಲಿ ಪ್ರಕಟಗೊಳ್ಳುತ್ತವೆ. ಭಾಷೆಯ ಬಗೆಗೆ ವ್ಯಕ್ತವಾದ ಆತಂಕಗಳು ಇದೇ ನೆಲೆಯವು.

ಕನ್ನಡ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ತನ್ನ ಬಳಕೆಯ ವಲಯಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಬಳಸುವವರ ಸಂಖ್ಯೆಯೂ ಹೆಚ್ಚಿದೆ. ಆದರೆ ಸೂಕ್ಷ್ಮ ವಿಶ್ಲೇಷಣೆಗೆ ಗುರಿಪಡಿಸಿದರೆ ಕೆಲವು ವಿಪರ್ಯಾಸಗಳು ಎದುರಾಗುತ್ತವೆ. ಬಳಕೆಯ ವಲಯದಲ್ಲಿ ಅನೌಪಚಾರಿಕ ನೆಲೆಗಳು ವಿಸ್ತಾರಗೊಂಡಂತೆ ಅಲ್ಲೆಲ್ಲ ಕನ್ನಡಕ್ಕೆ ಅವಕಾಶಗಳು ಸೃಷ್ಟಿಯಾಗಿವೆ. ಜನರು ತಮ್ಮ ಸಾಂಪ್ರದಾಯಿಕ ವೃತ್ತಿಗಳನ್ನು ಬಿಟ್ಟುಕೊಟ್ಟು ಹೊಸ ಹೊಸ ಜೀವನಾವಕಾಶಗಳಿಗೆ ತಂತಮ್ಮ ಊರುಗಳನ್ನು ಬಿಟ್ಟು ಬೇರೆ ನಗರ ಪ್ರದೇಶಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಪಾರಂಪರಿಕ ಜೀವನಕ್ರಮದಲ್ಲಿ ಆಗಿರುವ ಪಲ್ಲಟಗಳಿಂದ ಹಲವು ಸಾಂಸ್ಕೃತಿಕ ಬದಲಾವಣೆಗಳು ನಡೆದಿವೆ. ಒಂದು ಸರಳ ಉದಾಹರಣೆಯನ್ನು ಗಮನಿಸೋಣ: ಕುಟುಂಬ ರಚನೆಯಲ್ಲಿ ಈಗ ಬದಲಾವಣೆಗಳು ನಡೆದು ಹೋಗಿವೆ. ಮೂರು ತಲೆಮಾರುಗಳು ಒಟ್ಟಾಗಿ ಜೀವಿಸುವ ಪ್ರಸಂಗಗಳು ಇಲ್ಲವಾಗುತ್ತಿವೆ. ಅಣು ಕುಟುಂಬಗಳು ಸಾಮಾನ್ಯ ವ್ಯವಸ್ಥೆಯಾಗಿ ನೆಲೆಗೊಂಡಿವೆ. ವೃತ್ತಿ ಜೀವನದಿಂದಾಗಿ ಕೌಟುಂಬಿಕ ಸಮಯವೆಂಬುದು ಕನಿಷ್ಟ ಪ್ರಮಾಣಕ್ಕೆ ಇಳಿದಿದೆ. ಇಲ್ಲಿಯೂ ಆ ಸಮಯವನ್ನು ನಮ್ಮ ಮನೆಯೊಳಗೆ ನುಗ್ಗಿದ ಟೆಲಿವಿಜನ್ ಆಕ್ರಮಿಸಿದೆ. ಇದರಿಂದ ಭಾಷಿಕವಾಗಿ ಆಗುವ ಬದಲಾವಣೆ ಗಮನಾರ್ಹ. ಮಾತನ್ನು ಬಳಸುವ ಸಮಯ ಮತ್ತು ಸಂದರ್ಭಗಳು ಕಡಿಮೆಯಾಗಿ, ಮಾತನ್ನು ಕೇಳಿಸಿಕೊಳ್ಳುವ ಸಮಯ ಹೆಚ್ಚಾಗುತ್ತಿದೆ. ಟೆಲಿವಿಜನ್‌ನಲ್ಲಿ ಕನ್ನಡ ದಿನದ ಇಪ್ಪತ್ನಾಲ್ಕು ಗಂಟೆಯೂ ಬಳಕೆಯಾಗುತ್ತಿದೆ ಎಂದರೆ ವಾಸ್ತವವಾಗಿ ನಮ್ಮನ್ನು ಕೇಳುವವರನ್ನಾಗಿ ಅದು ಪರಿವರ್ತಿಸುತ್ತದೆ. ಮಾತಾಡುವ ಮಾತಿನ ಹಲವು ನಿರೂಪಣೆಗಳಲ್ಲಿ ಭಾಗಿಯಾಗುವ ಸಂದರ್ಭಗಳು ಕಡಿಮೆಯಾಗುತ್ತಿವೆ. ಇದರ ದೂರಗಾಮಿ ಪರಿಣಾಮಗಳು ಏನು ಎನ್ನುವುದು ನಮಗಿನ್ನೂ ತಿಳಿದಿಲ್ಲ.

ಅನೌಪಚಾರಿಕ ವಲಯಗಳಲ್ಲಿ ಕನ್ನಡ ಹೀಗೆ ಕೇಳುವ ಭಾಷೆಯಾಗಿ ಕನಿಷ್ಟ ಸಂವಹನದ ಅಗತ್ಯಗಳನ್ನು ಪೂರೈಸುವ ಭಾಷೆಯಾಗಿ ಪಾತ್ರ ವಹಿಸತೊಡಗಿದೆ. ಜನರು ಸಂಪರ್ಕಕ್ಕಾಗಿ ಕಂಡುಕೊಂಡ, ಪಡೆದುಕೊಂಡ ಹೊಸ ಹೊಸ ತಂತ್ರಜ್ಞಾನ ಸಾಮಗ್ರಿ, ಹೀಗೆ ಕನ್ನಡದ ಅಪರಿಮಿತ ಬಳಕೆಗೆ ಅವಕಾಶ ಕಲ್ಪಿಸಿದೆ. ಮಹಾನಗರಗಳಲ್ಲಿ ಎಲ್ಲೆಲ್ಲಿ ಹತ್ತು ಹದಿನೈದು ವರ್ಷಗಳ ಹಿಂದೆ ಕನ್ನಡ ಕೇಳುತ್ತಿರಲಿಲ್ಲವೋ ಅಲ್ಲಿ ಈಗ ಧಾರಾಳವಾಗಿ ಕನ್ನಡ ಕೇಳುತ್ತದೆ. ಉಪಭೋಗಿ ಸಂಸ್ಕೃತಿಯು ತನ್ನ ತೆಕ್ಕೆಗೆ ಕನ್ನಡ ಮಾತಾಡುವವರನ್ನು ಎಳೆದುಕೊಳ್ಳಲು ಅಗತ್ಯವಾದ ಹೊಂದಾಣಿಕೆಗಳನ್ನು ಮಾಡಿಕೊಂಡಿದೆ. ಇದೆಲ್ಲವನ್ನು ಗಮನಿಸಿದಾಗ ಕನ್ನಡ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತಿದೆ ಎಂದು ನಂಬಬೇಕಾಗುತ್ತದೆ.

ಆದರೆ ವಾಸ್ತವವಾಗಿ ಹೀಗೆ ಮಾತಿನ ವಲಯದ ವಿಸ್ತರಣೆಯಲ್ಲಿ ಕನ್ನಡ ಮಿಂಚಿ ಮಾಯವಾಗುತ್ತದೆ. ಅದರ ಅಧಿಕೃತ ನೆಲೆಗೊಳ್ಳುವಿಕೆ ಇಂತಹ ವಲಯ ಗಳಿಂದ ಸಾಧ್ಯವಾಗುವುದಿಲ್ಲ. ಎಷ್ಟೋ ಭಾಷೆಗಳ ಚರಿತ್ರೆಯನ್ನು ಗಮನಿಸಿದರೆ ಆ ಭಾಷೆಗಳು ಕಿವಿಯ ಭಾಷೆಗಳಾಗಿ ಯಾವ ಆತಂಕವೂ ಇಲ್ಲದೇ ಉಳಿದುಕೊಂಡಿರು ವುದನ್ನು ನೋಡುತ್ತೇವೆ. ಆದರೆ ಭಾಷೆ ಕಣ್ಣಿನ ನೆಲೆಯಲ್ಲಿ ಉಳಿದುಕೊಳ್ಳಬೇಕು. ಕಣ್ಣಿನ ನೆಲೆಯಲ್ಲಿ ಬರಹ ನೋಡುತ್ತದೆ. ಕನ್ನಡ ಈ ಅಪಾಯವನ್ನು ಎದುರಿಸುತ್ತಿರು ವಂತೆ ತೋರುತ್ತದೆ. ಕನ್ನಡವನ್ನು ಔಪಚಾರಿಕವಾಗಿ ಕಲಿತ ಜನಸಮುದಾಯದ ಪ್ರಮಾಣವನ್ನು ಶೇಕಡಾ ೭೦ರ ಆಸುಪಾಸಿನಲ್ಲಿ ಇರಿಸಲಾಗುತ್ತದೆ. ಎರಡು ಸಾವಿರದ ಹನ್ನೆರಡರ ಹೊತ್ತಿಗೆ ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಗುರಿ ಇರಿಸಿಕೊಳ್ಳಲಾಗಿದೆ. ಈ ಶೇಕಡಾ ೭೦ ಪ್ರಮಾಣದ ಜನರು ಕನ್ನಡವನ್ನು ಕಣ್ಣಿನ ನೆಲೆಯಲ್ಲಿ ಮುಖಾಮುಖಿಯಾಗುವುದು ಕಡಿಮೆಯೇ. ಹೆಚ್ಚೆಂದರೆ ಅದನ್ನು ದಿನದ ಕನಿಷ್ಟ ವೇಳೆಯಲ್ಲಿ ಓದುತ್ತಿರಬಹುದು. ಅದು ಪತ್ರಿಕೆಯಲ್ಲಿ ತುಂಡುತುಂಡಾಗಿ. ಅದನ್ನು ಬಿಟ್ಟರೆ ಕಣ್ಣಿನ ನೆಲೆಯ ಕನ್ನಡ ಅವರ ಅನುಭವದ ಭಾಗವಾಗುತ್ತಿಲ್ಲ. ಬರೆಯುವ ಮಾತು ಬಂದರಂತೂ ಪರಿಸ್ಥಿತಿ ಇನ್ನಷ್ಟು ಇಕ್ಕಟ್ಟಿನಲ್ಲಿ ಇರುವುದು ಗೊತ್ತಾಗುತ್ತದೆ. ಏಕೆಂದರೆ ಹಾಗೆ ಬರೆಯಬೇಕಾದ ಒತ್ತಡಗಳು ಈಗ ಕಡಿಮೆಯಾಗುತ್ತಿವೆ. ಪರ‍್ಯಾಯಗಳು ಲಭಿಸುತ್ತಿವೆ.

ಯಾವುದೇ ಪರಂಪರೆಯ ಭಾಷೆಗೂ ಇಂತಹ ಪರಿಸ್ಥಿತಿಯಿಂದ ಬಿಡುಗಡೆ ಇಲ್ಲ ಎಂದೇ ಹೇಳಬೇಕು. ಓದಬಲ್ಲವರೆಲ್ಲ ಬರೆಯುತ್ತಾರೆ ಎನ್ನುವುದನ್ನು ನಂಬು ವಂತಿಲ್ಲ. ಆದರೆ ಬರವಣಿಗೆಗೆ ಕನ್ನಡ ಅಗತ್ಯ ಎನ್ನುವ ಪ್ರಸಂಗಗಳು ಕಡಿಮೆಯಾಗುತ್ತಿವೆ. ಓದುವವರು ಕೂಡ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡದಿಂದ ದೂರವಾಗುತ್ತಿದ್ದಾರೆ. ಕಲಿತ ಜನರು ಪರಿಸರದಲ್ಲಿ ದ್ವಿಭಾಷಿಕರಾಗಿರುವ ಪ್ರಸಂಗ ಹೆಚ್ಚಿದೆ. ಔಪಚಾರಿಕವಾಗಿ ಇಂಗ್ಲಿಶ್ ಕಲಿತವರು ಕೂಡ ಎಷ್ಟೊ ವೇಳೆ ಓದಲು ಇಂಗ್ಲಿಶ್ ಮತ್ತು ಕನ್ನಡ ಎಂಬ ಆಯ್ಕೆಯನ್ನೇ ಮಾಡಿಕೊಳ್ಳುತ್ತಾರೆ. ಪತ್ರಿಕೆಗಳ ಓದಿನ ಸ್ವರೂಪವನ್ನು ಗಮನಿಸಿದರೆ ಇಂಗ್ಲಿಶ್ ಪತ್ರಿಕೆಗಳು ಅವು ರಾಜ್ಯಮಟ್ಟದ್ದಿರಲಿ ಅಥವಾ ರಾಷ್ಟ್ರಮಟ್ಟದ್ದಿರಲಿ ಅವುಗಳ ಓದುಗರು ಕನ್ನಡವನ್ನು ಓದಬಲ್ಲವರೇ. ಅಂದರೆ ಕನ್ನಡದಲ್ಲಿ ಇಂಗ್ಲಿಶ್ ತನ್ನ ಪಾಲನ್ನು ಪಡೆದುಕೊಳ್ಳುತ್ತಿದೆ. ಯುವಜನಾಂಗದಲ್ಲಿ ಈ ಪರಿಸ್ಥಿತಿಯು ಇನ್ನೂ ಭಿನ್ನ ನೆಲೆಯಲ್ಲಿ ಇರುವಂತೆ ತೋರುತ್ತದೆ. ಆ ತಲೆಮಾರು ಭಾಷೆಯ ಕಣ್ಣಿನ ನೆಲೆಗಳನ್ನು ತನ್ನ ಅನುಭವದ ವಲಯದಿಂದ ಆದಷ್ಟು ದೂರವಿರಿಸುತ್ತಿದೆ. ಒಂದು ವೇಳೆ ಹಾಗೆ ಓದುವ ಪ್ರಸಂಗ ಬಂದರೂ ಮಾಹಿತಿಗಾಗಿ ನೋಡುತ್ತಾರೆಯೇ ಹೊರತು ವಿವರದಲ್ಲಿ ಓದುವುದಿಲ್ಲ. ಅಂತರ್ಜಾಲದ ವಿವಿಧ ಜಾಲತಾಣಗಳನ್ನು ಅತಿ ವೇಗವಾಗಿ ಸಂಪರ್ಕ ಮಾಡುವ ಯುವಕರು ಭಾಷೆಯನ್ನು ಕಣ್ಣಿನ ನೆಲೆಯಲ್ಲಿ ಎದುರಿಸಿದರೂ ಅದು ವೇಗವಾಗಿ ಬದಲಾಗುತ್ತ್ತ ಹೋಗುವುದರಿಂದ ಕೆಲವು ಸೆಕೆಂಡುಗಳಲ್ಲಿ ಬೇಕಾದ್ದನ್ನು ನೋಡಿ ಬಿಡುತ್ತಾರೆ. ಓದುವ ಇಚ್ಛೆ ಮತ್ತು ವ್ಯವಧಾನಗಳು ಇಲ್ಲವಾಗಿವೆ.

ಕನ್ನಡದ ಮಟ್ಟಿಗೆ ಆತಂಕಕಾರಿಯಾಗಿ ಕಾಣುವ ಈ ಸನ್ನಿವೇಶಕ್ಕೆ ಪ್ರತಿಯಾಗಿ ಮತ್ತೊಂದು ಬೆಳವಣಿಗೆಯನ್ನು ಕೆಲವರು ಗುರುತಿಸುತ್ತಾರೆ. ಅವರ ಪ್ರಕಾರ ಬರಹದ ಭಾಷೆಯನ್ನು ಯುವ ಜನಾಂಗ ಮೊದಲಿಗಿಂತ ಈಗ ಹೆಚ್ಚಾಗಿ ಬಳಸುತ್ತಿದೆ. ಇದಕ್ಕೆ ಅವರು ಕೆಲವು ನಿದರ್ಶನಗಳನ್ನು ನೀಡುತ್ತಾರೆ. ಜಾಲತಾಣಗಳಲ್ಲಿ ಕಂಡು ಬರುವ ಎರಡು ಹೊಸ ಪ್ರವೃತ್ತಿಗಳನ್ನು ಈಚೆಗೆ ಅಭ್ಯಾಸ ಮಾಡಲಾಗುತ್ತಿದೆ. ಅವುಗಳಲ್ಲಿ ಒಂದು: ಸಿಟಿಜನ್ ಜರ್ನಲಿಜಂ. ಎರಡು: ಬ್ಲಾಗರ್ ಆಗುವುದು. ಸಿಟಿಜನ್ ಜರ್ನಲಿಜಂ ಎಂದರೆ ಮಾಧ್ಯಮಗಳಿಗೆ ತ್ವರಿತ ಗತಿಯಲ್ಲಿ ಘಟನೆ ನಡೆದ ಸ್ಥಳದಿಂದಲೇ ಮಾಹಿತಿಯನ್ನು ರವಾನಿಸುವುದು. ಸಮೂಹ ಮಾಧ್ಯಮಗಳು ಸುದ್ದಿ ಪ್ರಸಾರಕ್ಕೆ ತೆರೆದಿಟ್ಟ ಸಮಯ ಮತ್ತು ಅವಕಾಶಗಳು ಎಷ್ಟು ಹೆಚ್ಚಿವೆ ಎಂದರೆ ಅದರೊಳಗೆ ಪ್ರತಿ ಕ್ಷಣವೂ ಹೊಸ ಮಾಹಿತಿಯನ್ನು, ಸುದ್ದಿಯನ್ನು ತುಂಬುವುದು ಅಸಾಧ್ಯವಾಗಿದೆ. ಸುದ್ದಿ ವಾಹಿನಿಗಳು ತಮ್ಮ ಮಾನವ ಸಂಪನ್ಮೂಲದಿಂದ ಇದನ್ನು ನಿರ್ವಹಿಸಲಾರವು. ಜನರನ್ನು ಹೀಗೆ ಸಿಟಿಜನ್ ಜರ್ನಲಿಸ್ಟ್ ಎಂದು ಪರಿವರ್ತಿಸಿ ಅವರಿಂದ ಮಾಹಿತಿ ಯನ್ನು ಪಡೆದು ತಮ್ಮ ಕೊರತೆಯನ್ನು ತುಂಬಿಕೊಳ್ಳುತ್ತಿವೆ. ಇದು ಯುವ ಜನರಿಗೆ ಭಾಷೆಯನ್ನು ಬಳಸಲು ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಕನ್ನಡದ ಮಟ್ಟಿಗೆ ಇದಿನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆದಿಲ್ಲ. ಆದರೂ ಈಚಿನ ಕೆಲವು ವರ್ಷಗಳಲ್ಲಿ ಪತ್ರಿಕೆಗಳ ತೆರಪನ್ನು ಹೀಗೆ ಜನರ ಬರವಣಿಗೆ ಮೂಲಕ ತುಂಬಿಕೊಳ್ಳುವ, ಜನರಿಗೆ ತಾವು ಭಾಗಿಯಾದ ಅನುಭವವನ್ನು ತಂದುಕೊಡುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದ ಕೆಲವು ಪತ್ರಿಕೆಗಳು ನಿರ್ದಿಷ್ಟ ವಿಷಯವನ್ನು ಚರ್ಚೆಗೆ ತೆರೆದು ಜನರ ಅಭಿಪ್ರಾಯಗಳನ್ನು ಕೋರಿ ಅವರು ಬರೆದ ಅಭಿಪ್ರಾಯಗಳನ್ನು ಪ್ರಕಟಿಸುವ ಮೂಲಕ ಒಂದು ಹೊಸ ಪದ್ಧತಿಯನ್ನು ಬೆಳೆಸಿದೆ. ಇಲ್ಲೆಲ್ಲ ಯಾವ ಉದ್ದೇಶದಿಂದ ಪತ್ರಿಕೆಗಳು ಹೀಗೆ ಮಾಡುತ್ತಿವೆ ಎಂಬುದು ಬೇರೆ ಮಾತು. ಆದರೆ ಹೊಸ ತಲೆಮಾರಿನ ಜನರು ಬರೆಯಲು ಅವಕಾಶವನ್ನು ಕಲ್ಪಿಸಿದಂತಾಗಿದೆ. ಅವರ ಬರವಣಿಗೆಗೆ ಗೊತ್ತಾದ ಜೀವಿತಾವಧಿ ಇರುತ್ತದೆ. ಹಾಗಿದ್ದರೂ ಅಸಂಖ್ಯ ಜನರು ಈ ಬಗೆಯ ಬರವಣಿಗೆಗೆ ಓಲುವೆ ತೋರಿಸುತ್ತಾರೆ ಎನ್ನುವುದು ಗಮನಿಸ ಬೇಕಾದ ವಿಷಯವಾಗಿದೆ. ಸಿಟಿಜನ್ ಜರ್ನಲಿಜಂನ ಉಗಮ ವಿಕಾಸಗಳನ್ನು ನಾವು ಚರ್ಚಿಸಬೇಕಿಲ್ಲ. ಭಾಷೆಯ ದೃಷ್ಟಿಯಿಂದ ಅಗತ್ಯವಾದ ಸಂಗತಿಗಳನ್ನು ಮಾತ್ರ ಚರ್ಚಿಸಿದರೆ ಸಾಕು. ನಾವು ಗಮನಿಸಿದ ಇನ್ನೊಂದು ಹೊಸ ಪ್ರಸಂಗವೆಂದರೆ ಬ್ಲಾಗರ್ ಆಗುವುದು ಈಗ ಜಾಲತಾಣಗಳಲ್ಲಿ ನೂರಾರು ಬ್ಲಾಗ್ ತಾಣಗಳಿವೆ. ಇಲ್ಲಿ ಹೆಸರು ನಮೂದಿಸಿಕೊಂಡ ಕೋಟ್ಯಂತರ ಜನರು ತಮಗೆ ಬೇಕಾದ ವಿಷಯವನ್ನು ಕುರಿತು ತಮಗೆ ತೋಚಿದ್ದನ್ನು ಬರೆಯುತ್ತಾರೆ. ಹೀಗೆ ಬರೆದುದ್ದನ್ನು ಯಾರಾದರೂ ಓದಿ ಏನಾದರೂ ಪ್ರತಿಕ್ರಿಯೆಯನ್ನು ಸೂಚಿಸಬಹುದು. ಇದು ನಿರಂತರ ಪ್ರಕ್ರಿಯೆ. ಈ ಬ್ಲಾಗ್ ತಾಣದಲ್ಲಿ ಏನನ್ನಾದರೂ ಬರೆಯಬೇಕಾಗುತ್ತದೆ. ಅದು ಏನೆಂಬುದು ಆಯಾ ವ್ಯಕ್ತಿಗೆ ಸಂಬಂಧಿಸಿದ ವಿಷಯ. ಆ ವಿಷಯಗಳನ್ನು ಕುರಿತು ಏನಾದರೂ ಬರೆಯುತ್ತಿರಬಹುದು. ಹೀಗೆ ಬರೆದುದನ್ನು ಇನ್ನೊಬ್ಬರು ನೋಡುವಂತೆ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ನಮಗಿಲ್ಲಿ ಈ ತಂತ್ರಜ್ಞಾನದ ಪರಿಣಾಮಗಳು ಮುಖ್ಯವಲ್ಲ. ಆದರೆ ಯುವ ಜನಾಂಗದವರು ಬರೆಯಲು ತೊಡಗಿದ್ದಾರೆ ಎನ್ನುವುದಷ್ಟೇ ಮುಖ್ಯ.

ಈ ಅವಕಾಶದಲ್ಲೂ ಕನ್ನಡ ಮರೆಯಾಗುವ ಸಂಭವವೇ ಹೆಚ್ಚು. ನಾವೀಗ ವಿವರಿಸಿದ ಬ್ಲಾಗ್ ತಾಣಗಳಲ್ಲಿ ಬರುವ ಕೋಟ್ಯಂತರ ಬರವಣಿಗೆಗಳು ಇಂಗ್ಲಿಶ್‌ನಲ್ಲಿರು ತ್ತವೆ. ಇದು ಅವರ ಶಿಕ್ಷಣ ಕ್ರಮ ಮತ್ತು ಸಾಮಾಜಿಕ ಹಿನ್ನೆಲೆಗಳಿಂದ ಉಂಟಾದ ಪರಿಣಾಮ. ಕನ್ನಡ ಇಲ್ಲಿ ಕಾಣಿಸಿಕೊಳ್ಳುವುದು ಅಕಸ್ಮಾತಾಗಿಯೇ ಹೊರತು ಒಂದು ನಿಯಮವಾಗಿ ಅಲ್ಲ. ಮುಂಬರುವ ದಶಕಗಳಲ್ಲಿ ಪರಸ್ಪರ ಮುಖಾಮುಖಿಯಾಗುವ ಬರಹಗಳಲ್ಲಿ ಅಲ್ಲವಾದರೂ ಯುವಜನಾಂಗದ ತಳಮಳಗಳನ್ನು ಹೊರಹಾಕಲು ಈ ಬಗೆಯ ಆಪ್ತ ಮತ್ತು ಅನ್ಯರಿಗೆ ಗೋಚರವಾಗದ ಬರಹಗಳು ಮೂಡಲೂ ಬಹುದು. ಈ ಬದಲಾದ ಪರಿಸ್ಥಿತಿ ಬಂದಾಗ ಏನು ಪರಿಣಾಮ ಆಗುತ್ತದೆ ಎಂಬುದನ್ನು ನಾವು ಕಾಯ್ದು ನೋಡಬೇಕಾಗಿದೆ.

ಹೊಸ ತಲೆಮಾರು ಇದಕ್ಕಾಗಿ ತಾನು ರೂಪಿಸಿಕೊಳ್ಳುವ ಕನ್ನಡ ನಾವು ಶಾಲಾ ಕಾಲೇಜುಗಳಲ್ಲಿ ಯಾವುದನ್ನು ಪ್ರಮಾಣಬದ್ಧಗೊಳಿಸಿದ್ದೇವೆಯೋ ಆ ಕನ್ನಡಕ್ಕಿಂತ ಬೇರೆಯೇ ಅಗಿ ಬಿಡಬಹುದು. ಹಾಗಾಗುತ್ತಿರುವ ಸೂಚನೆಗಳು ಈಗ ಲಭಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ತಂತ್ರಜ್ಞಾನ ನಿರೀಕ್ಷಿಸುವ ವೇಗ. ನಾವೀಗ ವಿವರಿಸಿದ ಬ್ಲಾಗರ್ ಪಾತ್ರವನ್ನೇ ನೋಡಿ. ಅಲ್ಲಿ ನಿರ್ದಿಷ್ಟ ಸಮಯದಲ್ಲಿ ಬರೆದು ಅದನ್ನು ಜಾಲತಾಣಕ್ಕೆ ಸೇರಿಸಬೇಕು. ಮಾತನಾಡುವ ಸಮಯಕ್ಕೆ ಅನುಗುಣವಾಗಿ ದರ ವಸೂಲು ಮಾಡುವ ತಂತ್ರಜ್ಞಾನ ಜನರ ಭಾಷಾ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ. ಅಂತರ್ಜಾಲದಲ್ಲೇ ಜಾಲಹರಟೆ ಮಾಡುವವರು; ಮೊಬೈಲ್‌ನಲ್ಲಿ ಸಂದೇಶಗಳನ್ನು ಕಳಿಸುವವರು; ತಮ್ಮ ಭಾಷಾ ಬಳಕೆಯ ಸ್ವರೂಪವನ್ನು ಬದಲಿಸಿ ಕೊಳ್ಳುವುದು ಅಗತ್ಯವಾಗಿಬಿಡುತ್ತದೆ. ಇಲ್ಲಿ ಸರಿತಪ್ಪುಗಳ ಪ್ರಶ್ನೆ ಮುಖ್ಯವಾಗು ವುದಿಲ್ಲ. ಸಮಯ ಮತ್ತು ಸಂಪನ್ಮೂಲಗಳ ನಿರ್ವಹಣೆ ಮುಖ್ಯವಾಗಿ ಬಿಡುತ್ತದೆ. ಆದ್ದರಿಂದ ಇಂತಹ ಕಡೆ ಭಾಷೆ ಹೆಚ್ಚು ಪ್ರಮಾಣದಲ್ಲಿ ಮುಂದೆ ಬಳಕೆಯಾಗುವ ಸಾಧ್ಯತೆ ಇದ್ದರೂ ಹಾಗೆ ಬಳಕೆಯಾಗುವ ಭಾಷೆ ಮಾತ್ರ ಸಂಪೂರ್ಣವಾಗಿ ಭಿನ್ನವಾಗುತ್ತದೆ. ಭಾಷೆಯ ನಿಗದಿತ ಸ್ವರೂಪವನ್ನು ಕಾಯ್ದುಕೊಳ್ಳಲು ಕಟಿಬದ್ಧರಾಗಿ ಕುಳಿತವರಿಗೆ ಈ ಬಗೆಯ ತ್ವರಿತಗತಿಯ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು ಕಷ್ಟ. ಆದರೆ ಅನಿವಾರ್ಯ.

ತಂತ್ರಜ್ಞಾನದ ಅವಕಾಶಗಳ ಮಾತು ಬಂದಾಗ ಅದಕ್ಕೆ ತಕ್ಕಂತೆ ಕನ್ನಡವನ್ನು ಒಗ್ಗಿಸಲು ಸಲಹೆಗಳನ್ನು ನೀಡಲಾಗುತ್ತಿದೆ. ಹೀಗೆ ಒಗ್ಗಿಸುವುದು ಎಂದರೇನು? ಆ ಮಾತನ್ನು ಒಗ್ಗಿಸಬೇಕೆ ಅಥವಾ ಬರಹವನ್ನು ಒಗ್ಗಿಸಬೇಕೆ? ಎರಡು ನೆಲೆಗಳಲ್ಲೂ ಬದಲಾವಣೆಗಳು ಅನಿವಾರ್ಯವೇ? ಈ ಎಲ್ಲ ಪ್ರಶ್ನೆಗಳು ಮುಖ್ಯವಾಗುತ್ತವೆ. ತಂತ್ರಜ್ಞಾನ ಭಾಷೆಯನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆಯೇ ಹೊರತು ಭಾಷೆಯ ಬೆಳವಣಿಗೆಗೆ, ಅದರ ಸಾಧ್ಯತೆಗಳ ವಿಸ್ತರಣೆಗೆ ಅದರ ನೆರವು ಕಡಿಮೆ.

ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸುವ ಪ್ರಯತ್ನಗಳು ವ್ಯಕ್ತಿಗತ ನೆಲೆಯಲ್ಲಿ ಮತ್ತು ಸಾಂಸ್ಥಿಕ ನೆಲೆಯಲ್ಲಿ ನಡೆಯುತ್ತಲೇ ಇವೆ. ಆಯಾ ಸಂದರ್ಭದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವ್ಯಕ್ತಿಗಳು ನಡೆಸಿದ ಪ್ರಯತ್ನಗಳು ಕೆಲವೊಮ್ಮೆ ಪ್ರಮಾಣೀಕರಣಗೊಳ್ಳದೆ ವ್ಯಾಪಕ ಬಳಕೆಯನ್ನು ಪಡೆಯದೇ ಹೋಗಬಹುದು. ಇನ್ನೂ ಕೆಲವೊಮ್ಮೆ ಒಂದೇ ಸಮಸ್ಯೆಗೆ ಹಲವಾರು ಬೇರೆ ಬೇರೆ ಪರಿಹಾರಗಳನ್ನು ಕಂಡುಕೊಂಡಿರಬಹುದು. ಇದರಿಂದ ಅವುಗಳಲ್ಲಿ ಯಾವುದನ್ನು ಪ್ರಮಾಣೀಕರಿಸಿ ವ್ಯಾಪಕ ಬಳಕೆಗೆ ಸಿದ್ಧಮಾಡಬೇಕು ಎನ್ನುವುದು ಒಂದು ಸಮಸ್ಯೆಯಾಗುತ್ತದೆ. ಇದೂ ಅಲ್ಲದೇ ವ್ಯಕ್ತಿಗತ ಪ್ರಯತ್ನಗಳಲ್ಲಿ ಪುನರಾವರ್ತನೆ ಸಾಧ್ಯತೆ ಹೆಚ್ಚು. ಅದರಿಂದ ಸಮಯ, ಶ್ರಮ, ಮತ್ತು ಸಂಪನ್ಮೂಲಗಳ ಅಪವ್ಯಯ ಸಾಧ್ಯತೆ ಇದೆ. ಇದೆಲ್ಲವನ್ನು ನಿವಾರಿಸಲು ಸಾಂಸ್ಥಿಕ ನೆಲೆಯ ಪ್ರಯತ್ನಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಜೊತೆಗೆ ವ್ಯಕ್ತಿಗತ ನೆಲೆಯ ಪ್ರಯತ್ನಗಳನ್ನು ಪ್ರಮಾಣೀಕರಿಸುವ ಅಧಿಕೃತ ವೇದಿಕೆಯೊಂದನ್ನು ಜಾರಿಗೆ ಕೊಡಬೇಕಾಗುತ್ತದೆ. ಇದರಿಂದ ಉಪಯುಕ್ತ ಕಾರ್ಯವಾಹಿಗಳನ್ನು ಗೊತ್ತು ಮಾಡಿಕೊಳ್ಳುವುದು ಸುಲಭವಾಗುತ್ತದೆ.

ಕನ್ನಡದ ಬಳಕೆಯನ್ನು ಹೆಚ್ಚಿಸಲು ಕಂಪ್ಯೂಟರ್‌ಗಳಲ್ಲಿ ಅದರ ಅಳವಡಿಕೆ ಸಾಧ್ಯವಾಗಬೇಕೆಂಬ ಪ್ರಯತ್ನ ಮೊದಲಾಗಿ ಎರಡು ದಶಕಗಳು ಕಳೆದವು. ಮೊದಲ ಪ್ರಯತ್ನಗಳು ಬದಲಾದ ತಂತ್ರಜ್ಞಾನದಿಂದಾಗಿ ನಿರರ್ಥಕವಾಗಿವೆ. ಆದರೂ ಒಂದು ಪ್ರಯತ್ನವನ್ನು ಕುರಿತಂತೆ ಚರ್ಚೆಯನ್ನು ಬೆಳಸಬಹುದು. ಜಾಗತಿಕವಾಗಿ ಲಭ್ಯವಿರುವ ಕಂಪ್ಯೂಟರ್ ಕೀಲಿಮಣೆಗಳಲ್ಲಿ ಬೇರೆ ಬೇರೆ ಬಗೆಗಳು ಇವೆಯಾದರೂ ಭಾರತದಲ್ಲಿ ಬಹುಮಟ್ಟಿಗೆ ಕ್ವಾರ್ಟಿ ಕೀಲಿಮಣೆ ಪ್ರಚಲಿತವಾಗಿದೆ.

ಈ ಕೀಲಿಮಣೆಯ ಕೀಲಿಗಳನ್ನು ಬಳಸಿ ಕನ್ನಡ ಬರವಣಿಗೆಯನ್ನು ಮಾಡಲು ಯತ್ನಗಳು ಆರಂಭವಾದವು. ಇದಕ್ಕಾಗಿ ಬಳಸಿದ ತಂತ್ರಜ್ಞಾನದ ಚರ್ಚೆ ನಮಗೆ ಇಲ್ಲಿ ಬೇಕಿಲ್ಲ. ಆದರೆ ಒಂದು ಕೀಲಿಯನ್ನು ಒತ್ತಿದಾಗ ತೆರೆಯ ಮೇಲೆ ಕನ್ನಡ ಅಕ್ಷರ ಮೂಡುವಂತೆ ಮಾಡುವ ಕಾರ್ಯವಾಹಿಗಳು ಸಿದ್ಧವಾದವು. ಇವುಗಳಲ್ಲಿ ಭಿನ್ನತೆ ಇತ್ತು. ಯಾವ ಕೀಲಿಗೆ ಯಾವ ಅಕ್ಷರ ಎಂಬ ಹೊಂದಾಣಿಕೆಯಲ್ಲಿ ವ್ಯತ್ಯಾಸಗಳಿದ್ದವು. ಮುಖ್ಯ ಕೊರತೆ ಎಂದರೆ ಈ ಕಾರ್ಯವಾಹಿಗಳನ್ನು ರೂಪಿಸಿದವರು ತಂತ್ರಜ್ಞರು. ಅವರಿಗೆ ಕನ್ನಡ ಭಾಷೆಯ ಅಕ್ಷರ ರಚನೆ ಮತ್ತು ಕಾಗುಣಿತ ಗೊತ್ತಿತ್ತು. ಆದರೆ ಧ್ವನಿಗಳು ಆವರ್ತನಗೊಳ್ಳುವ ಪ್ರಮಾಣ ತಿಳಿದಿರಲಿಲ್ಲ. ಇದರಿಂದಾಗಿ ಹೆಚ್ಚು ಚಲನಶೀಲವಾದ ಹೆಗ್ಗಳಿಕೆಗೆ ಹೆಚ್ಚು ಬಳಕೆಯಾಗುವ ಧ್ವನಿಯ ಕೀಲಿ ಸಿಗುವಂತೆ ಮಾಡಲಿಲ್ಲ. ಒಂದು ಕಾರ್ಯವಾಹಿಯಂತೂ ಬಲಗೈ ಬೆರಳುಗಳಿಗೆ ಸ್ವರಗಳನ್ನು ಎಡಗೈ ಬೆರಳುಗಳಿಗೆ ವ್ಯಂಜನಗಳನ್ನು ಹೊಂದಿಸಿತ್ತು. ಇಂತಹ ಅಪ್ರಾಯೋಗಿಕವಾದ ಮಾದರಿಗಳು ಕನ್ನಡ ಬಳಕೆಗೆ ನೆರವಾಗುವ ಬದಲು ಅಡ್ಡಿಯಾಗುತ್ತಿದ್ದವು.

ಇಂಗ್ಲಿಶ್ ಕೀಲಿಗಳಿಂದ ಇಂಗ್ಲಿಶ್ ಅಕ್ಷರಗಳನ್ನೇ ತೆರೆಯ ಮೇಲೆ ಮೂಡಿಸಿ ಅನಂತರ ಅದನ್ನು ಲಿಪ್ಯಂತರಿಸುವ ಹೊಸ ಕಾರ್ಯವಾಹಿ ‘ಬರಹ’ ಕಳೆದ ಒಂದು ದಶಕದಲ್ಲಿ ಬಳಕೆಯಲ್ಲಿದೆ. ಇದೊಂದು ವಿಭಿನ್ನ ನೆಲೆಯ ಪ್ರಯತ್ನ. ಮೇಲುನೋಟಕ್ಕೆ ಮಧ್ಯವರ್ತಿ ಅಕ್ಷರಗಳನ್ನಾಗಿ ಇಂಗ್ಲಿಶ್ ಅಥವಾ ರೋಮನ್ ಅಕ್ಷರಗಳನ್ನು ಬಳಸುವುದು ವಿಚಿತ್ರವಾಗಿ ಮತ್ತು ಅನಗತ್ಯವಾಗಿ ತೋರುತ್ತದೆ. ಆದರೆ ಸೌಲಭ್ಯದ ದೃಷ್ಟಿಯಿಂದ ಇದರ ಪ್ರಯೋಜನ ಹೆಚ್ಚು. ಅಂತರಗಣಕ ರವಾನೆಗಳಿಗೆ ಇದು ಅನುಕೂಲಕರ. ಲಿಪ್ಯಂತರ ಕಾರ್ಯವಾಹಿ ಇಲ್ಲದೆಯೂ ಕನ್ನಡ ಭಾಷೆಯ ಪಠ್ಯಗಳನ್ನು ಜಾಗತಿಕವಾಗಿ ಪ್ರಚುರಪಡಿಸುವುದು ಇದರಿಂದ ಸಾಧ್ಯವಾಗುತ್ತದೆ.

ಹೀಗೆ ಸಮಸ್ಯೆಗೆ ಹಲವು ಬಗೆಯ ಉತ್ತರಗಳು ಸಾಧ್ಯವಿರುವಾಗ ಆಯ್ಕೆಯ ಅವಕಾಶ ಎದುರಾಗುತ್ತದೆ. ಈ ಸಾಧ್ಯತೆಗಳ ವ್ಯತ್ಯಾಸವನ್ನು ಮೌಲ್ಯಮಾಪನ ಮಾಡ ಬೇಕಾಗುತ್ತಿದೆ. ಆಗ ಕೊರತೆಗಳನ್ನು ತುಂಬಿಕೊಳ್ಳಲು ಅಗತ್ಯವಾದ ಪರಿಷ್ಕರಣೆ ಮಾಡಬಹುದು. ಕನ್ನಡದ ಪಠ್ಯವನ್ನು ಅದು ಪದಪಟ್ಟಿಯಾಗಿದ್ದರೆ ಅಕಾರಾದಿಯಾಗಿ ಜೋಡಿಸುವ ಸಮಸ್ಯೆ ಇದೆ ಎಂದುಕೊಳ್ಳೋಣ. ಆಗ ತಂತ್ರಜ್ಞರು ಅದಕ್ಕೆ ಪರಿಹಾರವನ್ನು ಹುಡುಕಬಲ್ಲರು. ಆದರೆ ಅಕಾರಾದಿಯ ಮಾದರಿಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಕನ್ನಡದಲ್ಲೇ ಕನಿಷ್ಟ ಎರಡು ಬಗೆಯ ಅಕಾರಾದಿಗಳಿವೆ. ಒಂದು ಉಚ್ಚಾರಣೆಯನ್ನು ಅವಲಂಬಿಸಿದರೆ ಇನ್ನೊಂದು ಬರಹದ ಕಣ್ಣಿನ ರೂಪವನ್ನು ಅವಲಂಬಿಸುತ್ತದೆ. ಇದಲ್ಲದೇ ಸೌಲಭ್ಯದ ದೃಷ್ಟಿಯಿಂದ ಇಂಗ್ಲಿಶ್ ವರ್ಣಮಾಲೆಯ ಅಕಾರಾದಿಯನ್ನೇ ಅನುಸರಿಸುವ ಮತ್ತೊಂದು ಪದ್ಧತಿಯೂ ಇದೆ. ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಪಟ್ಟಿಯಲ್ಲಿ ಇಂತದ್ದೇ ಕ್ರಮವನ್ನು ಅನುಸರಿಸುತ್ತಾರೆ. ಈಚೆಗೆ ಕನ್ನಡದಲ್ಲಿರುವ ದೂರವಾಣಿ ಕೈಪಿಡಿಗಳು ಇದೆ ಮಾದರಿಯನ್ನು ಅನುಸರಿಸಿದೆ. ಇವೆಲ್ಲವೂ ಗೊಂದಲಗಳನ್ನು ಉಂಟು ಮಾಡುತ್ತವೆ. ತಾಂತ್ರಿಕವಾದ ಹೊಂದಾಣಿಕೆಯ ಸಮಸ್ಯೆಯು ಉಂಟಾಗುತ್ತದೆ. ಹೀಗಿರುವಾಗ ಅಧಿಕೃತವಾದ ಮಾದರಿಯನ್ನು ಆಯ್ದು ಅದಕ್ಕೆ ಮನ್ನಣೆಯನ್ನು ನೀಡುವುದು ಅಗತ್ಯ. ಇಂತಹ ಪ್ರಯತ್ನಗಳು ಕನ್ನಡದಲ್ಲಿ ಬೇಗ ಬೇಗ ನಡೆಯಬೇಕಾಗಿದೆ. ಈಗಿನ ಗೊಂದಲ ಮತ್ತಷ್ಟು ಹೆಚ್ಚಲು ಅವಕಾಶ ನೀಡಬಾರದು.

ಪರಿಕರಗಳ ನಿರ್ಮಾಣ

ಭಾಷೆಯನ್ನು ಹಲವು ವಲಯಗಳಲ್ಲಿ ಬಳಸುವವರಿಗೆ ಅನುಕೂಲವಾಗುವ, ನೆರವಾಗುವ ಸಮಸ್ಯೆಗಳಿಗೆ ಪರಿಹಾರ ನೀಡುವ ಪರಿಕರಗಳು ತ್ವರಿತವಾಗಿ ಸಿದ್ಧವಾಗ ಬೇಕು. ಈ ಪರಿಕರಗಳನ್ನು ಸಿದ್ಧಪಡಿಸುವಾಗ ಉಪಯುಕ್ತತೆಗೆ ಪ್ರಥಮ ಆದ್ಯತೆ ನೀಡಬೇಕು. ಹೀಗಲ್ಲದೆ ಪಾರಂಪರಿಕ ರೀತಿಯಲ್ಲಿ ಪರಿಕರಗಳನ್ನು ನೀಡುವ ಮಾದರಿಗಳನ್ನು ಮಾತ್ರ ಅನುಸರಿಸುತ್ತ ಹೋಗಬಾರದು. ಉದಾಹರಣೆಗೆ ನಿಘಂಟು ಗಳು. ಕನ್ನಡಕ್ಕೆ ಪದಗಳ ಅರ್ಥದ ಜೊತೆ ಬಳಕೆಯನ್ನೂ ನೀಡುವ ನಿಘಂಟುಗಳು ಅಗತ್ಯ. ಆದರೆ ಬಳಕೆಯ ವಲಯದ ಪದಗಳನ್ನು ಈ ಕೋಶಗಳು ಹೊಂದಿಲ್ಲದಿದ್ದರೆ ಅವುಗಳ ಉಪಯುಕ್ತತೆ ಕಡಿಮೆ. ಈಗ ಸಿದ್ಧಗೊಂಡಿರುವ ಹಲವು ನಿಘಂಟುಗಳು ಈ ಸಮಸ್ಯೆಯನ್ನು ಹೊಂದಿವೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲು ಪ್ರಕಟಿಸಿದ ಜನಬಳಕೆಯ ಅಗತ್ಯಕ್ಕಾಗಿ ಸಿದ್ಧಗೊಂಡ ಕನ್ನಡ ರತ್ನಕೋಶವನ್ನು ಉದಾಹರಣೆ ಯನ್ನಾಗಿ ನೋಡಬಹುದು. ವಿದ್ವತ್ತಿನ ಎಲ್ಲ ಅಂಶಗಳನ್ನು ಯಥಾನುಕ್ರಮದಲ್ಲಿ ಅಳವಡಿಸಿಕೊಂಡ ಈ ಕೋಶದ ಮುಖ್ಯ ನಮೂದುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಲು ಇಂದಿನ ಕನ್ನಡದಲ್ಲಿ ಬಳಕೆಯಾಗದ, ಕಾಣಸಿಗದ ಪದಗಳಿಂದ ತುಂಬಿವೆ. ಹಳೆಗನ್ನಡ, ನಡುಗನ್ನಡ ಪಠ್ಯಗಳನ್ನು ಓದುವವರಿಗೆ ಅನುಕೂಲಕರ ವಾಗಿದ್ದರೂ ನಮ್ಮ ಪರಿಸರದ ಕನ್ನಡದ ಸಾವಿರಾರು ಪದಗಳು, ಪದರಚನೆಗಳು ಈ ಕೋಶದಲ್ಲಿಲ್ಲ. ಇಂಥಾ ಕೋಶಗಳು ಸೀಮಿತ ಪ್ರಯೋಜನ ಹೊಂದಿವೆ.

ಇದಲ್ಲದೆ ಪರಿಕರಗಳು ಸಿದ್ಧಗೊಂಡು ಲಭಿಸುವ ವಿಧಾನದಲ್ಲೂ ಬದಲಾವಣೆ ಗಳಾಗಬೇಕಾಗಿದೆ. ಜಾಗತಿಕ ನೆಲೆಯಲ್ಲಿ ಈಗ ನಿಘಂಟುಗಳನ್ನು ಅಂತರ್ಜಾಲ ದಲ್ಲಿ ಇರಿಸಿ ಒದಗಿಸುವ  ಪ್ರಯತ್ನಗಳು ನಡೆದಿವೆ. ಎಮಿನೋ ಮತ್ತು ಬರೋ ಸಂಪಾದಿಸಿದ ದ್ರಾವಿಡ ಭಾಷೆಗಳ ಜ್ಞಾತಿ ಪದಕೋಶ ಎರಡು ಜಾಲತಾಣಗಳಲ್ಲಿ ಲಭಿಸುತ್ತದೆ. ಇದಲ್ಲದೇ ನೂರಾರು ನಿಘಂಟು ತಾಣಗಳು ಕಾರ್ಯವಾಹಿಗಳು ಬಳಕೆಯಲ್ಲಿವೆ. ದೃಷ್ಟಿಶ್ರವ್ಯ ಮಾದರಿಯಲ್ಲಿ ಸಿದ್ಧಗೊಂಡ ಅಡಕತಟ್ಟೆಗಳಲ್ಲಿ ನಿಘಂಟುಗಳು ಲಭ್ಯವಿವೆ. ಅಂದರೆ ಹೊಸ ತಂತ್ರಜ್ಞಾನದ ನೆರವಿನಿಂದ ಬಳಕೆಗೆ ಅನುಕೂಲಕರವಾದ ಹೊಸ ಮಾದರಿಗಳು ಸಾಧ್ಯವಾಗುತ್ತಿವೆ. ಕನ್ನಡದಲ್ಲೂ ಇಂತಹ ಪ್ರಯತ್ನಗಳು ನಡೆದಿವೆ. ಇವುಗಳನ್ನು ಅಧಿಕೃತಗೊಳಿಸಬೇಕಾದ ಮತ್ತು ವ್ಯಾಪಕ ಬಳಕೆಗೆ ಸಾಧ್ಯವಾಗು ವಂತೆ ಪರಿಷ್ಕರಿಸಬೇಕಾದ ಅಗತ್ಯವಿದೆ.

ಕನ್ನಡವನ್ನು ಕಲಿಯುವ ಬಗೆಗಳು ಈಗ ಬದಲಾಗುತ್ತಿವೆ. ಅನೌಪಚಾರಿಕವಾಗಿ ಕನ್ನಡ ಸಮುದಾಯದ ಭಾಗವಾಗಿದ್ದು ಕನ್ನಡವನ್ನು ಕಲಿಯುತ್ತಿರುವವರ ಜೊತೆಗೆ ಔಪಚಾರಿಕವಾಗಿ ಕನ್ನಡವನ್ನು ಕಲಿಯಲು ತೊಡಗಿರುವವರ ಪ್ರಮಾಣ ಹೆಚ್ಚುತ್ತಿದೆ. ಹೀಗೆ ಕಲಿಸಲು ಅನುಕೂಲವಾದ ಮಾದರಿಗಳನ್ನು ಹೊಸ ತಂತ್ರಜ್ಞಾನದ ಚೌಕಟ್ಟಿನಲ್ಲಿ ರೂಪಿಸಬೇಕಾಗಿದೆ. ಕಲಿಯುವವರ ಅಗತ್ಯಗಳನ್ನು ಮತ್ತು ಪೂರ್ವ ಸಿದ್ಧತೆಗಳನ್ನು ಅವಲಂಬಿಸಿ ಈ ಕಲಿಕೆಯ ಸಾಮಗ್ರಿ ರೂಪಗೊಳ್ಳಬೇಕು. ಕಲಿಯುವವರು ಅನ್ಯಭಾಷಿಕರಾಗಿದ್ದರೆ ಅವರ ಮೊದಲ ಭಾಷೆಯ ರಚನೆಯೊಡನೆ ಕನ್ನಡವು ಹೊಂದಿರುವ ವೈಸಾದೃಶ್ಯಗಳನ್ನು ಗಮನದಲ್ಲಿ ಇರಿಸಿಕೊಂಡ ಸಾಮಗ್ರಿ ಬೇಕಾಗುತ್ತವೆ. ಈ ವೈಸಾದೃಶ್ಯ ಗಳನ್ನು ಗುರುತಿಸುವ ಅಧ್ಯಯನಗಳು ನಡೆಯಬೇಕು. ಕಲಿಕೆಯ ಸಾಮಗ್ರಿಯು ಕನ್ನಡ ಮಾತನ್ನು ಕಲಿಸಲು ಉದ್ದೇಶಿತವೋ ಅಥವಾ ಮಾತು ಮತ್ತು ಬರಹ ಎರಡನ್ನು ಕಲಿಸುತ್ತದೆಯೋ ಎಂಬುದನ್ನು ಗಮನಿಸಿ ಅದಕ್ಕೆ ಸ್ವಕಲಿಕೆಯ ಸಾಧ್ಯತೆಗಳು ಮತ್ತು ದೂರ ಕಲಿಕೆಯ ಅವಕಾಶಗಳು ಈಗ ಹೆಚ್ಚಾಗುತ್ತಿವೆ. ಈ ಸಾಧ್ಯತೆಯನ್ನು  ಬಳಸಿಕೊಳ್ಳಲು ತಕ್ಕ ಪಾಠಸಾಮಗ್ರಿಗಳು ಬೇಕಾಗಿವೆ.

ಕನ್ನಡವನ್ನು ಈ ಹಿಂದೆ ಬೇರೊಂದು ಅಧ್ಯಾಯದಲ್ಲಿ ಗುರುತಿಸಿದಂತೆ ಬರೆಯು ವುದು ಎಂದರೆ ಹಳೆಯ ರೀತಿ ಕೈಬೆರಳುಗಳಲ್ಲಿ ಲೆಕ್ಕಣಿಕೆಯನ್ನು ಹಿಡಿದು ಅಕ್ಷರಗಳನ್ನು ಮೂಡಿಸುವುದು ಎಂಬ ವ್ಯಾಖ್ಯೆ ತೀವ್ರವಾಗಿ ಬದಲಾಗುತ್ತಿದೆ. ಹೆಚ್ಚು ಪ್ರಮಾಣದ ಮತ್ತು ಸಾರ್ವಜನಿಕ ಬಳಕೆಗೆ ಅಗತ್ಯವಾದ ಕನ್ನಡ ಬರವಣಿಗೆ ಈಗ ಸಿದ್ಧವಾಗುತ್ತಿರು ವುದು ಕಂಪ್ಯೂಟರ್‌ಗಳಲ್ಲಿ. ಆದ್ದರಿಂದ ಈ ಹೊಸ ಬಗೆಯ ಬರವಣಿಗೆಗಳಲ್ಲಿ ತೊಡಗುವವರಿಗೆ ನೆರವಾಗುವ ಸಾಮಗ್ರಿಗಳು ಹಲವಾರಿವೆ. ಅವುಗಳನ್ನು ತ್ವರಿತಗತಿ ಯಲ್ಲಿ ಸಿದ್ಧಪಡಿಸಬೇಕು. ಅಂತಹ ಕೆಲವನ್ನು ಮುಂದೆ ಪಟ್ಟಿ ಮಾಡಲಾಗುವುದು. ಒಂದು: ಪದಪರೀಕ್ಷಕ(ಸ್ಪೆಲ್ ಚೆಕ್) ಎರಡು: ವ್ಯಾಕರಣ  ಪರೀಕ್ಷಕ. ಮೂರು: ಸಮಾನಾರ್ಥ ಪದಕೋಶ. ನಾಲ್ಕು: ಅಕಾರಾದಿ ಸಿದ್ಧತೆ. ಐದು: ಗುರುತು ಮಾಡುವಿಕೆ(ಟ್ಯಾಗಿಂಗ್). ಆರು: ಅಕ್ಷರಗ್ರಾಹಕ(ಒ.ಸಿ.ಆರ್) ಏಳು: ಉತ್ತಮ ಪಠ್ಯ ಅಕ್ಷರವಿನ್ಯಾಸ. ಎಂಟು: ಧ್ವನಿಯನ್ನು ಬರವಣಿಗೆಗೆ ಪರಿವರ್ತಿಸುವುದು. ಒಂಬತ್ತು: ಬರವಣಿಗೆಯನ್ನು ಧ್ವನಿಗಳನ್ನಾಗಿ ಪರಿವರ್ತಿಸುವುದು.

.ಪದ ಪರೀಕ್ಷಕ: ಕಂಪ್ಯೂಟರ್‌ನಲ್ಲಿ ಮೂಡಿಸಿದ ಪಠ್ಯದಲ್ಲಿ ಕಾಗುಣಿತ ದೋಷಗಳಿದ್ದರೆ ಅವುಗಳನ್ನು ತೋರಿಸುವ ಮತ್ತು ತಿದ್ದುಪಡಿಗಳನ್ನು ಸೂಚಿಸುವ ಕಾರ್ಯವಾಹಿ ಅತ್ಯಗತ್ಯ. ಇದರಿಂದ ಪಠ್ಯವನ್ನು ತ್ವರಿತಗತಿಯಲ್ಲಿ ದೋಷಗಳಿಂದ ಮುಕ್ತವಾಗಿಸಬಹುದು. ಕರಡು ತಿದ್ದುವಿಕೆ ಎಂಬ ಮಧ್ಯವರ್ತಿ ಹಂತವನ್ನು ಕೈಬಿಡಬಹುದು. ಕನ್ನಡದಲ್ಲಿ ಇಂಥಾ ಪದ ಪರೀಕ್ಷಕಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಅವು ಪರಿಪೂರ್ಣವಾಗಿಲ್ಲ. ತಾಂತ್ರಿಕ ಕೊರತೆ ಒಂದೆಡೆಯಾದರೆ ಸಾಮಗ್ರಿ ಕೊರತೆ ಇನ್ನೊಂದೆಡೆ. ಕನ್ನಡ ಭಾಷೆಯ ರಚನೆಯನ್ನು ಅಭ್ಯಾಸ ಮಾಡಿ ಅದಕ್ಕನುಗುಣ ವಾದ ಸಾಮಗ್ರಿಯನ್ನು ಇಲ್ಲಿ ಅಳವಡಿಸಬೇಕು. ಇಂತಹ ಪದ ಪರೀಕ್ಷಕಗಳು ಇಂದಿನ ದಿನಮಾನದ ನೂರೆಂಟು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು.

.ವ್ಯಾಕರಣಪರೀಕ್ಷಕ: ಬರವಣಿಗೆಯಲ್ಲಿ ಸಂಭವಿಸುವ ಕೆಲವು ಸಾಮಾನ್ಯ ದೋಷ ಗಳನ್ನು ಗುರುತು ಮಾಡುವ ಕಾರ್ಯವಾಹಿ ಇದು. ತಿದ್ದುಪಡಿಗಳನ್ನು ಸೂಚಿಸದಿದ್ದರೂ ಬರವಣಿಗೆಯಲ್ಲಿ ತಪ್ಪಾಗಿದೆ ಎಂಬುದನ್ನು ಗುರುತಿಸಿ ಕೊಟ್ಟರೆ ಅದರಿಂದ ತಿದ್ದುಪಡಿ ಸುಲಭವಾಗುತ್ತದೆ. ಇದು ಎಂದೂ ಪರಿಪೂರ್ಣ ಕಾರ್ಯವಾಹಿ ಆಗಲಾರದು. ಆದರೂ ನಿರ್ದಿಷ್ಟ ಗುರಿಗಳನ್ನು ಮತ್ತು ತಪ್ಪುಗಳ ಸಾಮಾನ್ಯ ಆವರ್ತನವನ್ನು ಅಭ್ಯಾಸ ಮಾಡಿದರೆ ಆಗ ಒಂದು ಉಪಯುಕ್ತ ಕಾರ್ಯವಾಹಿ ಸಾಧ್ಯವಾಗುತ್ತದೆ. ಉದಾಹರಣೆಗೆ ಕನ್ನಡದ ವಾಕ್ಯ ರಚನೆಯಲ್ಲಿ ಕರ್ತೃಪದ ಅಥವಾ ನಿಯೋಗಿಗೂ ಕ್ರಿಯಾಪದದ ಅಖ್ಯಾತಗಳಿಗೂ ಹೊಂದಾಣಿಕೆ ಅಗತ್ಯವೆಂಬ ನಿಯಮವಿದೆ. ಸಾಮಾನ್ಯ ಬರವಣಿಗೆಗಳಲ್ಲಿ, ಅದರಲ್ಲೂ ವಾಕ್ಯಗಳು ದೀರ್ಘವಾದಾಗ ಈ ಹೊಂದಾಣಿಕೆಯ ನಿಯಮದಲ್ಲಿ ವ್ಯತ್ಯಯ ಆಗುವುದುಂಟು. ವ್ಯಾಕರಣ ಪರೀಕ್ಷಕ ಈ ನಿಯಮ ಉಲ್ಲಂಘನೆಯಾದಾಗ ಸೂಚನೆ ನೀಡಿದರೆ ಆಗ ತಿದ್ದುಪಡಿ ಸಾಧ್ಯವಾಗುತ್ತದೆ. ಬರೆಯುವವರ ಅನವಧಾನ ಮತ್ತು ಆಲೋಚನೆಯ ವೇಗದಿಂದ ಸಂಭವಿಸುವ ಹತ್ತಾರು ತಪ್ಪುಗಳು ಪಠ್ಯದಲ್ಲಿ ಉಳಿಯದಂತೆ ನೋಡಿಕೊಳ್ಳಬಹುದು.

. ಸಮಾನಾರ್ಥಕ ಪದಕೋಶ: ದೀರ್ಘ ಬರವಣಿಗೆ ಮಾಡುವಾಗ ಒಂದೇ ಪದ ಹಲವು ಬಾರಿ ಬಳಕೆಯಾಗುವುದುಂಟು ಆಗ ಬರವಣಿಗೆಗೆ ಏಕತಾನತೆ ಬಂದೊದಗು ತ್ತದೆ. ಅಲ್ಲದೇ ಕೆಲವು ಪದಗಳನ್ನು ಕೆಲವು ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗದೇ ಅದಕ್ಕೆ ಪರ್ಯಾಯವಾದ ರೂಪಗಳನ್ನು ಬಳಸಬೇಕಾಗುತ್ತದೆ. ಇಂತಹ ಕಡೆ ಸಮಾನಾರ್ಥಕ ಪದಕೋಶ ನೆರವಿಗೆ ಬರುತ್ತದೆ. ಶೈಲಿಯ ವೈವಿಧ್ಯ ಕಾಯ್ದು ಕೊಳ್ಳುವುದು; ಒಂದೇ ಅರ್ಥವುಳ್ಳ ಬೇರೆ ಬೇರೆ ಪದಗಳನ್ನು ಬಳಸಬೇಕಾದ ಅಗತ್ಯವನ್ನು ಇದರಿಂದ ಪೂರೈಸಬಹುದು. ಕನ್ನಡ ಸಮಾನಾರ್ಥಕ ಪದಕೋಶ ಸಿದ್ಧತೆ ನಡೆದಿದೆಯಾದರೂ ಅದನ್ನು ಕಂಪ್ಯೂಟರ್ ಬಳಕೆಗೆ ಅನುವು ಮಾಡಿ ಕೊಡುವಂತೆ ರೂಪಿಸುವ ಪ್ರಯತ್ನಗಳು ನಡೆದಿಲ್ಲ.

. ಅಕಾರಾದಿ ಸಿದ್ಧತೆ: ಈ ಕುರಿತು ಹಿಂದೆಯೇ ಚರ್ಚಿಸಲಾಗಿದೆ. ಅಕಾರಾದಿ ಪದಪಟ್ಟಿಯನ್ನು ಬಳಸುವ ಅಗತ್ಯ ಈಗ ಹಿಂದಿಗಿಂತ ಹೆಚ್ಚಾಗಿದೆ. ಪುಸ್ತಕಗಳ ಕೊನೆಯ ಪದಕೋಶಗಳು, ಪದಸೂಚಿಗಳು, ಗ್ರಂಥಸೂಚಿಗಳು ಇದನ್ನು ಬಯಸುತ್ತವೆ. ಅಲ್ಲದೇ ದತ್ತ ಕಣಜವನ್ನು ಶೋಧಿಸುವ ಸರ್ಚ್‌ಇಂಜಿನ್‌ಗಳು ಅಕಾರಾದಿ ಸೂಚಕ ಗಳನ್ನು ಬಹುವಾಗಿ ಅವಲಂಬಿಸುತ್ತವೆ. ಅಲ್ಲದೇ ಸರ್ಕಾರದ ಹಂತದಲ್ಲಿ ಹೆಸರುಗಳು ಪಟ್ಟಿಗಳು ವಿವಿಧ ಉದ್ದೇಶಗಳಿಗಾಗಿ ಅಗತ್ಯವಾಗುತ್ತವೆ. ಮತದಾರರ ಪಟ್ಟಿ, ಟೆಲಿಪೋನ್ ಕೈಪಿಡಿಗಳು ಪಡಿತರ ಚೀಟಿಗಳು ತೆರಿಗೆ ಪಾವತಿಸುವವರ ಪಟ್ಟಿ ಹೀಗೆ ನೂರಾರೂ ದತ್ತಕಣಜಗಳು ಸಿದ್ಧವಾಗುತ್ತಿವೆ. ಇಂತಹ ಕಡೆ ಅಕಾರಾದಿ ಪಟ್ಟಿ ನೀಡುವ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ.

. ಅಕ್ಷರ ಗ್ರಾಹಕ(ಒ.ಸಿ.ಆರ್): ಬರೆದ ಮುದ್ರಿಸಿದ ಮಾಹಿತಿಯನ್ನು ಗಣಕಕ್ಕೆ ನೇರವಾಗಿ ಕೂಡಿಸುವ ಸ್ಕ್ಯಾನಿಂಗ್ ತಂತ್ರ ಒಂದಿದೆ. ಆದರೆ ಹೀಗೆ ಮೂಡುವುದು ಅಸಾಧ್ಯವಲ್ಲದಿದ್ದರೂ ಕಷ್ಟ. ಏಕೆಂದರೆ ಅದೊಂದು ಪಠ್ಯವಲ್ಲ. ಕೇವಲ ಚಿತ್ರ. ಅಕ್ಷರ ಗ್ರಾಹಕಗಳು ಕೈಬರಹದ ಇಲ್ಲವೇ ಮುದ್ರಿಸಿದ ಬರವಣಿಗೆಯನ್ನು ಓದಿ ಪಠ್ಯಗಳನ್ನಾಗಿ ಪರಿವರ್ತಿಸಿ ಗಣಕದ ನೆನಪಿನಲ್ಲಿ ಸಂಗ್ರಹಿಸಬಲ್ಲವು. ಈ ತಂತ್ರಜ್ಞಾನ ಕನ್ನಡಕ್ಕೆ ಪ್ರಮಾಣೀಕೃತ ರೂಪದಲ್ಲಿ ಇನ್ನೂ ಲಭ್ಯವಿಲ್ಲ. ಇಂತಹ ಸೌಲಭ್ಯ ಒದಗಿದಾಗ ಹಳೆಯ ಹಸ್ತಪ್ರತಿಗಳನ್ನು, ಮುದ್ರಿತ ಸಾಮಗ್ರಿಯನ್ನು ಪರಿವರ್ತನಶೀಲ ಪಠ್ಯಗಳನ್ನಾಗಿ ಕಂಪ್ಯೂಟರ್‌ನಲ್ಲಿ ಇರಿಸುವುದು ಸಾಧ್ಯ. ಇಂದಿನ ಕೈಬರಹದ ಬರವಣಿಗೆಯನ್ನು ಕೂಡಾ ನೇರವಾಗಿ ಕಂಪ್ಯೂಟರ್‌ನ ಪಠ್ಯವನ್ನಾಗಿ ಪರಿವರ್ತಿಸಬಹುದು.

.ಉತ್ತಮ ಅಕ್ಷರವಿನ್ಯಾಸ: ಕಂಪ್ಯೂಟರ್‌ನ ಬರವಣಿಗೆಗೆ ನೀಡುವ ತಲೆಬರಹದ ಅಕ್ಷರ ವಿನ್ಯಾಸಗಳು ಕನ್ನಡದಲ್ಲಿ ಸಾಕಷ್ಟಿವೆ. ಆದರೆ ಪಠ್ಯದ ಉದ್ದಕ್ಕೂ ಬಳಸುವ ಅಕ್ಷರ ವಿನ್ಯಾಸಗಳಲ್ಲಿ ಹೆಚ್ಚು ಆಯ್ಕೆಗಳು ಇಲ್ಲ. ಇರುವ ಆಯ್ಕೆಗಳಲ್ಲಿ ಓದು ಮತ್ತು ನೋಟಗಳಿಗೆ ಅನುಕೂಲಕರವಾದ ಅಕ್ಷರ ವಿನ್ಯಾಸ ಕಡಿಮೆ. ಅಕ್ಷರಗಳ ಗೆರೆಗಳ ಗಾತ್ರ, ಅಗಲ ಮತ್ತು ಎತ್ತರ, ಒತ್ತಕ್ಷರಗಳ ಸ್ವರೂಪ, ಅವುಗಳು ಮೂಲಾಕ್ಷರದೊಡನೆ ಕಾಣಿಸಿಕೊಳ್ಳುವ ಬಗೆ, ಅಕ್ಷರಗಳ ನಡುವೆ ಅಂತರ ಇಂತಹ ಹತ್ತಾರು ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡ ಅಕ್ಷರವಿನ್ಯಾಸಗಳು ಕನ್ನಡಕ್ಕೆ ಅತ್ಯಗತ್ಯವಾಗಿವೆ.

.ಗುರುತು ಮಾಡುವಿಕೆ(ಟ್ಯಾಗಿಂಗ್): ದೀರ್ಘ ಪಠ್ಯಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿದ ಮೇಲೆ ಅಲ್ಲಿನ ಕೆಲವು ಅಗತ್ಯ ಪದಗಳನ್ನು ಆಯ್ದು ಪದಪಟ್ಟಿ ತಯಾರಿಸುವ ಅಗತ್ಯ ಉಂಟಾಗುತ್ತದೆ. ಪದ ಸೂಚಿಗಾಗಿ, ಪದಾರ್ಥ ವಿವರಣೆಗಾಗಿ, ಗ್ರಂಥಸೂಚಿಗಾಗಿ ಪಠ್ಯದ  ಕೆಲವು ಪದಗಳನ್ನು ಗುರುತು ಮಾಡುವುದು ಸಾಧ್ಯವಾಗ ಬೇಕು. ಆಗ ತಂತಾನೇ ಬೇಕಾದ ಪದಪಟ್ಟಿಗಳು ಲಭಿಸುತ್ತದೆ. ಕನ್ನಡದಲ್ಲಿ ಇದಕ್ಕೆ ನೆರವಾಗುವ ಕಾರ್ಯವಾಹಿಗಳು ಇನ್ನೂ ಲಭ್ಯವಿಲ್ಲ. ಪುಸ್ತಕ ಪ್ರಕಟಣೆಯಲ್ಲಿ ವೃತ್ತಿಪರತೆ ಬರಬೇಕಾದರೆ ಮತ್ತು ಪಠ್ಯಾಧಾರಿತ ಸೌಲಭ್ಯವಿರುವ ಈ ಕಾರ್ಯವಾಹಿ ಗಳು ಆದಷ್ಟು ಬೇಗ ದೊರಕುವಂತಾಗಬೇಕು.

. ಧ್ವನಿಯನ್ನು ಬರವಣಿಗೆಗೆ ಪರಿವರ್ತಿಸುವುದು:ಮಾತಿನ ಮಾದರಿಗಳನ್ನು ಅನುಸರಿಸಿ ಮಾತಾಡಿದ ಪಠ್ಯವನ್ನು ಬರಹದ ಪಠ್ಯವಾಗಿ ಪರಿವರ್ತಿಸುವ ಕಾರ್ಯವಾಹಿಗಳು ಅಗತ್ಯವಾಗುತ್ತವೆ. ಇದರಿಂದ ಸಮಯ ಮತ್ತು ಶ್ರಮದ ಉಳಿತಾಯ ಸಾಧ್ಯ. ಇದೊಂದು ಪರಿಪೂರ್ಣವಾದ ಕಾರ್ಯವಾಹಿ ಆಗಲಾರದು. ಆದರೂ ಒಮ್ಮೆ ಲಭಿಸಿದ ಲಿಖಿತರೂಪವನ್ನು ತಿದ್ದುಪಡಿಗಳೊಡನೆ ಬಳಸುವುದು ಸುಲಭವಾಗುತ್ತದೆ.

. ಬರಹವನ್ನು ಮಾತಾಗಿ ಪರಿವರ್ತಿಸುವುದು: ಎಷ್ಟೋ ಪಠ್ಯಗಳನ್ನು ಕಣ್ಣಿಂದ ಓದುತ್ತಿರುವಂತೆ ಅದನ್ನು ಓದಿದ ಧ್ವನಿಯನ್ನು ಕೇಳಿಸಿಕೊಳ್ಳುವ ಸೌಲಭ್ಯ ಅಗತ್ಯವಾಗುತ್ತಿದೆ. ಬರಹವನ್ನು ಮಾತಾಗಿ ಪರಿವರ್ತಿಸುವುದರಿಂದ ನಮ್ಮ ಓದಿನ ಕ್ರಮವೇ ಬದಲಾಗಿ ಹೋಗುತ್ತದೆ. ಇವೆಲ್ಲವೂ ನಾಳಿನ ಸಾಧ್ಯತೆಗಳು. ಕನ್ನಡ ಇಂತಹ ಹೊಸ ತಂತ್ರಜ್ಞಾನದ ಅವಕಾಶಗಳನ್ನು ಬೇಗ ಬೇಗ ತನಗೆ ಒದಗುವಂತೆ ಮಾಡಿಕೊಳ್ಳಬೇಕು. ಇದರಿಂದ ಭಾಷೆಯ ಆಧುನೀಕರಣ ಎಂಬ ಪ್ರಕ್ರಿಯೆ ನಿಜವಾದ ಅರ್ಥದಲ್ಲಿ ಪೂರ್ಣವಾಗುತ್ತದೆ.

ಇದಲ್ಲದೇ ಆಧುನಿಕ ಜಗತ್ತಿನ ಇನ್ನೊಂದು ಬಹುಮುಖ್ಯ ಅಗತ್ಯವೆಂದರೆ ಭಾಷಾಂತರದ ಕಾರ್ಯವಾಹಿಗಳು ಒಂದು ಭಾಷೆಯ ಪಠ್ಯವನ್ನು ಇನ್ನೊಂದು ಭಾಷೆಗೆ ಯಂತ್ರಗಳ ನೆರವಿನಿಂದ ಅನುವಾದಿಸುವುದು ತೀರಾ ಕಠಿಣವಾದ ಕೆಲಸ. ಆದರೆ ಒಂದು ಹಂತದವರೆಗೆ ಅಸಾಧ್ಯವಾದ ಕೆಲಸವೆಂದೇನೂ ತಿಳಿಯಬೇಕಾಗಿಲ್ಲ. ಕನ್ನಡ ತಾನು ದಿನನಿತ್ಯ ವ್ಯವಹರಿಸುವ ವಲಯಗಳಲ್ಲಿ ಎದುರಿಸುವ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯವಾಹಿಗಳು ಅಗತ್ಯವಾಗಿವೆ. ಇದರಿಂದ ಸಂವಹನದ ಕೊರತೆಗಳು ಕಡಿಮೆಯಾಗುತ್ತಿವೆ. ಭಾಷೆ ಗೋಡೆಯಾಗುವ ಬದಲು ಸಂಪರ್ಕದ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಇಂದಿನ ಅಗತ್ಯಗಳು ಸ್ಥಿರ ಮತ್ತು ಚಿರ ಭಾಷಾಂತರಗಳ ಜೊತೆಗೆ ತತ್‌ಕ್ಷಣವೇ ನಡೆಯುವ ದುಭಾಷಿತನದ ಭಾಷಾಂತರಗಳನ್ನು ಬಯಸುತ್ತವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಂವಾದಗಳು, ಗೋಷ್ಠಿಗಳು ನಡೆಯುವಾಗ ಹೀಗೆ ಹೇಳಿದ ಮಾತು ಕೂಡಲೇ ಹಲವು ಭಾಷೆಗಳಿಗೆ ಅನುವಾದವಾಗಬೇಕಾದ ಅಗತ್ಯ ಉಂಟಾಗುತ್ತದೆ. ಈ ಬಗೆಯ ಭಾಷಾಂತರ ವ್ಯಾವಹಾರಿಕ ನೆಲೆಯಲ್ಲಿ ತೀರಾ ಅಗತ್ಯವೆನಿಸುವ ಪ್ರಸಂಗಗಳು ಸಂದರ್ಭಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ನೆರವಾಗುವಂತೆ ಕನ್ನಡ ಭಾಷೆಯನ್ನು ಸನ್ನದ್ಧಗೊಳಿಸಬೇಕಾಗಿದೆ.

ಈ ಹಿಂದೆಯೇ ಗಮನಿಸಿದಂತೆ ಏಕಭಾಷಿಕರ ಕಾಲ ಮುಗಿಯಿತು. ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಳಸುವುದು ಅಗತ್ಯವಷ್ಟೇ ಅಲ್ಲ ಅನಿವಾರ್ಯವು ಆಗುತ್ತಿದೆ. ಆಯ್ಕೆಯಿಂದ ಏಕಭಾಷಿಕರಾಗುವ ಹಠ ಮಾಡಬಹುದು. ಸಹಜ ಪ್ರಕ್ರಿಯೆಯಲ್ಲಿ ನಾಗರಿಕ ಲೋಕ ಬಹುಭಾಷಿಕರನ್ನು ಸಮರ್ಥಿಸುತ್ತಿದೆ. ಹೀಗೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯಲು ಅಗತ್ಯವಾದ ಪಠ್ಯಗಳನ್ನು ಸಿದ್ಧಪಡಿಸುವ ಮಾತನ್ನು ಈ ಹಿಂದೆಯೇ ಹೇಳಲಾಗಿದೆ. ಆದರೆ ದ್ವಿಭಾಷಿಕರು ದೈನಂದಿನ ವ್ಯವಹಾರದಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ನೀಡುವ ನೆಲೆಗಳು ಸಿದ್ಧಗೊಳ್ಳಬೇಕು. ಕನಿಷ್ಟ ಪ್ರಮಾಣದ ಸಂವಹನ ಕೊರತೆಯ ಸಂದರ್ಭವನ್ನು ಸೃಷ್ಟಿಸುವುದು ಅಗತ್ಯವಾಗಿದೆ. ಇದಲ್ಲದೇ ಪೌರಸಮಾಜವು ಚಲನಶೀಲವಾದುದು. ನೆಲೆಗೊಳ್ಳದಿದ್ದರೂ ವ್ಯವಹಾರಕ್ಕಾಗಿ ಲಕ್ಷಗಟ್ಟಲೆ ಜನ ಒಂದು ಭಾಷಾ ಪ್ರದೇಶದಿಂದ ಇನ್ನೊಂದು ಭಾಷಾ ಪ್ರದೇಶಕ್ಕೆ ಗೊತ್ತಾದ ಅವಧಿಗೆ ವಲಸೆ ಹೋಗುತ್ತಿದ್ದಾರೆ. ದುಡಿಮೆ, ವ್ಯವಹಾರ, ವ್ಯಾಪಾರ, ಪ್ರವಾಸ, ವಿದ್ಯಾರ್ಜನೆ, ಸಾಮಾಜಿಕ ಸಂಪರ್ಕ ಹೀಗೆ ಹಲವು ಹತ್ತು ಕಾರಣಗಳಿಂದ ಕ್ಲುಪ್ತಕಾಲದ ದ್ವಿಭಾಷಿಕ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ಇಂತಹ ಕಡೆಗಳಲ್ಲಿ ಅಗತ್ಯವಾದ ಭಾಷಾ ಸಂವಹನ ತಡೆ ಇಲ್ಲದೇ ನಡೆಯದಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಇಂದಿನ ದಿನಗಳಲ್ಲಿ ಜನ ಹೇಗೋ ಇಂತಹ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಅವರಿಗೆ ನೆರವಾಗುವ ಪರಿಕರಗಳನ್ನು ಸಿದ್ಧಪಡಿಸಿ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಾಗಿದೆ.

ಕನ್ನಡ ಆತಂಕಗಳನ್ನು ಎದುರಿಸುತ್ತಿಲ್ಲ ಎಂದು ಹಠ ಮಾಡುವುದು ತಪ್ಪಾಗುತ್ತದೆ. ಮುಳುಗೇ ಹೋಯ್ತು ಎಂಬ ನಿರಾಶೆಯಾಗಲೀ ಮತ್ತು ಕನ್ನಡಕ್ಕೆ ಏನೂ ಆಗದು ಎಂಬ ಭರವಸೆಯಾಗಲೀ ಎರಡು ಅತಿರೇಕಗಳು. ವಾಸ್ತವದ ನೆಲೆಯಲ್ಲಿ ಪರಿವರ್ತನೆಗಳ ಸ್ವರೂಪವನ್ನು ಗ್ರಹಿಸಬೇಕಾಗಿದೆ. ಕೇವಲ ಅಭಿಮಾನ ಮತ್ತು ಪೈಪೋಟಿಯ ಮನೋಭಾವ ಮಾತ್ರ ಸಾಲುವುದಿಲ್ಲ. ಹೊಸ ತಂತ್ರಜ್ಞಾನದ ನೆರವಿನಿಂದ  ಹೊಸ ಅಗತ್ಯಗಳಿಗೆ ಅನುಗುಣವಾಗಿ ಬಳಕೆಯ ವಲಯಗಳನ್ನು ನಿರ್ವಹಿಸಲು ಕನ್ನಡ ಶಕ್ತವಾಗುವಂತೆ ಮಾಡುವುದೇ ಸರಿಯಾದ ದಾರಿ. ಇದರಲ್ಲಿ ಹಿಂಜರಿಕೆ ಮತ್ತು ಕಾಯ್ದು ನೋಡುವ ಪ್ರವೃತ್ತಿ ಹೊಂದುವುದಿಲ್ಲ. ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಿದರೆ ಮಾತ್ರ ಇಪ್ಪತ್ತೊಂದನೆಯ ಶತಮಾನ ದಲ್ಲಿ ಕನ್ನಡ ತನ್ನ ನಿಜ ಪಾತ್ರವನ್ನು ನಿರ್ವಹಿಸಬಲ್ಲುದು. ಮೂರನೆಯ ಸಹಸ್ರಮಾನಕ್ಕೂ ದಾಟಿ ಬಂದ ಜಗತ್ತಿನ ಕೆಲವೇ ಭಾಷೆಗಳಲ್ಲಿ ಒಂದಾಗಿರುವ ಕನ್ನಡಕ್ಕೆ ಇಂದು, ನಿನ್ನೆಗಳಿರುವಂತೆ ನಾಳೆಗಳೂ ಇರುತ್ತವೆ.