ಭಾಷೆಯೊಂದಕ್ಕೆ ಪದಕೋಶ ಅಗತ್ಯ. ಈ ಪದಕೋಶವು ನಿರಂತರವಾಗಿ ಬದಲಾಗುತ್ತಿರುತ್ತದೆ. ಸೇರ್ಪಡೆ ಬೇರ್ಪಡೆಗಳು ನಡೆಯುತ್ತಲೇ ಇರುತ್ತವೆ. ಭಾಷಿಕರು ಎಳವೆಯಲ್ಲೇ ಭಾಷೆಯ ನಿಯಮ ವ್ಯವಸ್ಥೆಯನ್ನು ಪೂರ್ಣವಾಗಿ ಸ್ಥಾಪಿಸಿಕೊಂಡರೂ ಪದಕೋಶವನ್ನು ಮಾತ್ರ ನಿರಂತರವಾಗಿ ಕಲಿಯುತ್ತಲೇ ಇರಬೇಕಾಗುತ್ತದೆ. ವ್ಯಕ್ತಿಯ ನೆನಪಿನಲ್ಲಿರುವ ಈ ಪದಕೋಶ ಮೆದುಳಿನಲ್ಲಿ ಹೇಗೆ ವ್ಯವಸ್ಥಿತವಾಗುತ್ತದೆ ಎಂಬುದು ಕುತೂಹಲದ ವಿಷಯ. ಬೇಕೆಂದ ಪದ ಬೇಕಾದಾಗ ನಮಗೆ ನೆನಪಿಗೆ ಬರುವುದು ಹೇಗೆ; ನಾವು ಕೇಳಿದ ಪದವೊಂದನ್ನು ನಮ್ಮ ನೆನಪಿನಲ್ಲಿರುವ ಪದಕೋಶದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಗುರುತಿಸಿ ಅರ್ಥ ಮಾಡಿಕೊಳ್ಳುವುದು ಹೇಗೆ ಸಾಧ್ಯ; ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲವರು ಬೇರೆ ಬೇರೆ ಭಾಷೆಯ ಪದಕೋಶಗಳನ್ನು ಬೇರೆ ಬೇರೆಯಾಗಿಯೇ ಇರಿಸಿಕೊಳ್ಳುತ್ತಾರೆಯೇ; ಅಥವಾ ಆ ಪದಕೋಶಗಳ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಎಂಬ ಈ ಎಲ್ಲ ಪ್ರಶ್ನೆಗಳು ಗಹನವಾಗಿವೆ. ಕನ್ನಡ ಭಾಷಿಕರ ಪದಕೋಶವೊಂದು ವಾಸ್ತವವಾಗಿ ಎಲ್ಲೂ ಇಲ್ಲ. ಅಥವಾ ಎಲ್ಲರಲ್ಲೂ ಇದೆ. ನಾವು ಭೌತಿಕವಾಗಿ ನಿಘಂಟಿನ ರೂಪದಲ್ಲಿ ಸಿದ್ಧಮಾಡುವ ಪದಕೋಶ ಒಂದು ರಚನೆ. ಅದಕ್ಕೆ ವಾಸ್ತವತೆಯ ಬೆಂಬಲವಿಲ್ಲ. ಅದನ್ನು ಇಡಿಯಾಗಿ ಬಲ್ಲ ಕನ್ನಡಿಗರನ್ನು ನಾವು ಕಾಣುವುದು ಸಾಧ್ಯವಿಲ್ಲ. ಅಲ್ಲದೇ ಕನ್ನಡಿಗರಲ್ಲಿ ಇರುವ ಎಲ್ಲ ಪದಗಳನ್ನು ಹೀಗೆ ಹೊರತೆಗೆದು ಗುರುತಿಸಿ ಪಟ್ಟಿ ಮಾಡುವುದು ಸಾಧ್ಯವಿಲ್ಲ. ಆದರೂ ಅಭ್ಯಾಸದ ಕಾರಣಕ್ಕೆ ಕನ್ನಡ ಪದಕೋಶದಲ್ಲಿ ಕನ್ನಡ ಭಾಷೆಯ ಪದಗಳು ಸೇರಿರುತ್ತವೆ. ಅವಲ್ಲದೆ ಅನ್ಯಮೂಲದ ಪದಗಳು ಅಲ್ಲಿರುತ್ತವೆ. ಕನ್ನಡಿಗರ ಬಳಕೆಗೆ ದೊರಕುತ್ತವೆ. ಆದ್ದರಿಂದ ಕನ್ನಡಿಗರ ಪದಕೋಶ ಎಂಬ ತೆರೆದ ಅರ್ಥದಲ್ಲಿ ನಾವು ವ್ಯವಹರಿಸುವುದು ಸೂಕ್ತ.

ಇಂತಹ ಪದಕೋಶದಲ್ಲಿ ಇರುವ ಪದಗಳನ್ನು ಹಲವು ರೀತಿಗಳಲ್ಲಿ ವರ್ಗೀಕರಿಸುತ್ತಾರೆ. ಈ ಪದಗಳು ಬಳಕೆಯಾದಾಗ ಪಡೆದುಕೊಳ್ಳುವ ವ್ಯಾಕರಣಾತ್ಮಕ ನೆಲೆಗಳನ್ನು ಆಧರಿಸಿ ವರ್ಗೀಕರಿಸಿಬಹುದು. ಆಗ ನಾಮಪದ, ಕ್ರಿಯಾಪದ, ಗುಣವಾಚಕ ಮುಂತಾದ ಗುಂಪುಗಳು ಸಿಗುತ್ತವೆ. ಹೀಗಲ್ಲದೆ ಈಗ ಬಳಸುತ್ತಿರುವ ಪದಗಳು, ಹಿಂದೆ ಯಾವಾಗಲೋ ಕನ್ನಡದಲ್ಲಿ ಬಳಕೆಯಾಗುತ್ತಿದ್ದ ಪದಗಳು ಎಂದು ವಿಭಜಿಸಬಹುದು. ಸಾಮಾನ್ಯವಾಗಿ ಈ ಎರಡು ರೀತಿಯ ಗುಂಪಿನ ಪದಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ. ಭಾಷೆ ಮತ್ತು ಸಾಹಿತ್ಯಗಳನ್ನು ಓದುವವರು ಈ ಸಾಧ್ಯತೆಯ ಪದಕೋಶವನ್ನು ಹೊಂದಿರುತ್ತಾರೆ. ಇದಲ್ಲದೆ ಕನ್ನಡದ ಪದಗಳು ಮತ್ತು ಕನ್ನಡಕ್ಕೆ ಅನ್ಯಭಾಷೆಗಳಿಂದ ವಲಸೆ ಬಂದ ಪದಗಳು ಎಂದು ಗುಂಪು ಮಾಡಬಹುದು. ಇಂತಹ ವಿಭಜನೆಯನ್ನು ಹಿಂದಿನಿಂದಲೂ ಮಾಡಿಕೊಳ್ಳುತ್ತ ಬರಲಾಗಿದೆ. ವ್ಯಾಕರಣಕಾರ ಕೇಶಿರಾಜನೇ ದೇಶ್ಯ ಮತ್ತು ಅನ್ಯದೇಶ್ಯ ಎಂಬ ಗುಂಪುಗಳನ್ನು ಸೂಚಿಸುತ್ತಾನೆ.

ಕನ್ನಡಿಗರ ಪದಕೋಶ ಕಳೆದ ಐವತ್ತು ವರ್ಷಗಳಲ್ಲಿ ಏನೆಲ್ಲ ಪರಿವರ್ತನೆಗಳನ್ನು ಪಡೆದುಕೊಂಡಿದೆ ಎಂಬುದನ್ನು ಅಧ್ಯಯನ ಮಾಡುವುದು ಈ ಅಧ್ಯಾಯದ ಉದ್ದೇಶವಾಗಿದೆ. ಪದಕೋಶದ ಪದಗಳಿಗೆ ಆಡುರೂಪ ಮತ್ತು ಬರಹರೂಪ ಎಂಬ ಎರಡು ನೆಲೆಗಳಿರುತ್ತವೆ. ಹೆಚ್ಚು ಪದಗಳಿಗೆ ಇವೆರಡು ಬೇರೆ ಬೇರೆ ಅಲ್ಲ ಅನ್ನಿಸಿದರೂ ಈ ವ್ಯತ್ಯಾಸವುಳ್ಳ ಪದಗಳ ಸಂಖ್ಯೆ ಸಾಕಷ್ಟಿದೆ. ಬರಹ ರೂಪದ ಪರಿಚಯವಿರದ ಕನ್ನಡಿಗರಲ್ಲಿ ಆಡುರೂಪಗಳು ಮಾತ್ರ ಇರುತ್ತವೆ. ಬರಹ ತಿಳಿದ ಕನ್ನಡಿಗರು ಈ ಎರಡು ರೂಪಗಳನ್ನು ಸೂಕ್ತ ರೀತಿಯಲ್ಲಿ ಬಳಸುತ್ತಾರೆ ಅಥವಾ ಬಳಸಬೇಕೆಂಬ ನಿಯಮವಿದೆ. ಇದಲ್ಲದೆ ಕೆಲವು ಪದಗಳು ಆಡುರೂಪದಲ್ಲಿ ಮಾತ್ರ ಇದ್ದು ಅವುಗಳಿಗೆ ಬರಹರೂಪದ ಮಾನ್ಯತೆ ಇರುವುದಿಲ್ಲ ಮತ್ತು ಕೆಲವೊಮ್ಮೆ ಅಂತಹ ರೂಪಗಳನ್ನು ಬರೆಯಲು ಸಮ್ಮತಿ ಇರುವುದಿಲ್ಲ. ಹೀಗಾಗಿ ಪದಕೋಶವೊಂದು ಸಂಕೀರ್ಣ ರಚನೆಯಾಗಿದೆ. ಅದು ಸ್ಥಿರವಾಗಿ ಇರುತ್ತದೆ ಎಂಬುದಕ್ಕಿಂತ ಬಳಕೆಯಲ್ಲಿ ಅದರ ಚಲನಶೀಲತೆ ಹೆಚ್ಚು ಸಂಕೀರ್ಣತೆಯ ನೆಲೆಗಳಿಗೆ ಸಾಗುತ್ತದೆ ಎಂಬುದನ್ನು ಗಮನಿಸಬೇಕು.

ಕನ್ನಡ ಆಡುಮಾತಿನ ಧ್ವನಿರಚನೆಯಲ್ಲಿ ಮಹಾಪ್ರಾಣಗಳಿಗೆ ಅವಕಾಶವಿಲ್ಲ ಎಂದರೆ ಕನ್ನಡಿಗರು ಮಹಾಪ್ರಾಣಗಳನ್ನು ಉಚ್ಚರಿಸಲಾರರು ಎಂದಲ್ಲ. ಆದರೆ ಹಾಗೆ ಉಚ್ಚರಿಸುವ ಅಗತ್ಯ ಒಂದೊಂದು ಪ್ರದೇಶಕ್ಕೂ ಬದಲಾಗುತ್ತ ಹೋಗುತ್ತದೆ. ಆದ್ದರಿಂದ ಪದಕೋಶದ ಆಡುರೂಪದಲ್ಲಿ ಮಹಾಪ್ರಾಣಗಳ ಪ್ರಸಾರವಿನ್ಯಾಸ ಮತ್ತು ಪದಗಳ ಬರಹರೂಪದಲ್ಲಿ ಕಾಣಬರುವ ಮಹಾಪ್ರಾಣಗಳ ಪ್ರಸಾರವಿನ್ಯಾಸ ಒಂದೇ ರೀತಿಯಲ್ಲಿ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಉಚ್ಚಾರಣೆಯಲ್ಲಿ ಮಹಾಪ್ರಾಣಗಳು ಇಲ್ಲದಿದ್ದರೂ ಬರಹದಲ್ಲಿ ನಿಗದಿತ ಮಹಾಪ್ರಾಣಗಳು ಕಾಣಿಸಿಕೊಳ್ಳಬೇಕೆಂಬ ನಿಯಮವಿದೆ. ಮತ್ತೆ ಕೆಲವು ಪ್ರದೇಶ ಮತ್ತು ಸಮುದಾಯಗಳಲ್ಲಿ ಉಚ್ಚಾರಣೆಯಲ್ಲಿ ಕಾಣಸಿಗುವ ಮಹಾಪ್ರಾಣವುಳ್ಳ ಪದಗಳನ್ನು ಬರೆಯುವಾಗ ಹಾಗೆ ಮಹಾಪ್ರಾಣ ಸಹಿತ ಬರೆಯದೆ ಅಲ್ಪಪ್ರಾಣ ಬಳಸಿ ಬರೆಯಬೇಕೆಂಬ ನಿಯಮವಿದೆ. ಅಕ್ಷರಸ್ಥ ಕನ್ನಡಿಗರು ಈ ವಿರುದ್ಧ ತುಯ್ತದಲ್ಲಿ ಸಿಲುಕಿದ್ದಾರೆ. ಪ್ರಮಾಣ ಭಾಷೆಯೂ ಲಿಖಿತ ರೂಪಕ್ಕೆ ನಿಗದಿಪಡಿಸಿದ ಮಾದರಿಯನ್ನು ಯಥಾವತ್ತಾಗಿ ಪಾಲಿಸಲು ಸೂಚಿಸಲಾಗುತ್ತದೆ. ಆದರೆ ಜನರ ದಿನಬಳಕೆಯ ಮಾತು ಬರಹಗಳಲ್ಲಿ ಈ ಮಾದರಿಯ ಯಥಾನುಕರಣೆ ಆಗುತ್ತಿಲ್ಲ. ಈ ಐದು ದಶಕಗಳಲ್ಲಿ, ಭಾಷಾ ಕಲಿಕೆಯ ಅತಿ ತೀವ್ರವಾದ ಬಿಕ್ಕಟ್ಟು ಈ ವಲಯದಲ್ಲಿ ಕಂಡುಬಂದಿದೆ.

ಈ ಸಮಸ್ಯೆಯನ್ನು ಇನ್ನಷ್ಟು ವಿವರವಾಗಿ ಪರಿಶೀಲಿಸೋಣ. ಬಹು ಹಿಂದಿ ನಿಂದಲೂ ಒಪ್ಪಿತವಾದ ನಿಲುವು ಏನೆಂದರೆ ಮಹಾಪ್ರಾಣಯುಕ್ತ ಪದಗಳು ಕನ್ನಡ ಪದಕೋಶಕ್ಕೆ ಸಂಸ್ಕೃತ ಅಥವಾ ಅನ್ಯಮೂಲಗಳಿಂದ ಬಂದು ಸೇರಿವೆ ಎಂಬುದು. ಇವುಗಳಲ್ಲಿ ಎಷ್ಟೋ ಪದಗಳು ಬರಹ ರೂಪದಲ್ಲಿ ಮತ್ತು ಸೀಮಿತ ಸಂಕಥನಗಳಲ್ಲಿ ಮಾತ್ರ ಕಾಣಸಿಗುವಂತವು. ಜನರ ಆಡುಮಾತಿನಲ್ಲಿ ಅವು ಜಾಗ ಪಡೆದಿರುವ ಪ್ರಸಂಗ ಕಡಿಮೆ. ಹಾಗೆ ಒಳಗೆ ಸೇರಿಕೊಂಡರೂ ತದ್ಭವ ರೂಪಗಳಲ್ಲಿ ಉಳಿದುಕೊಂಡಿವೆ. ಅಲ್ಲಿ ಮಹಾಪ್ರಾಣಕ್ಕೆ ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣದ ವ್ಯಾಪಕತೆ ಹೆಚ್ಚುತ್ತ್ತ ಬಂದಂತೆ ಆಡುಮಾತಿನ ರೂಪಗಳನ್ನು ಬರಹದಲ್ಲಿ ಬಳಸದೆ, ಬರಹದಲ್ಲಿ ಈಗಾಗಲೇ ಸ್ಥಿರಗೊಂಡ ರೂಪಗಳನ್ನು ಕಲಿತು ಬಳಸಬೇಕೆಂಬ ಒತ್ತಡ ಹೆಚ್ಚುತ್ತಿದೆ. ಇದರಿಂದಾಗಿ ಕನ್ನಡ ಬರವಣಿಗೆಯಲ್ಲಿ ಮೊದಲ ತಲೆಮಾರಿನ ವಿದ್ಯಾವಂತರು ಇಕ್ಕಟ್ಟುಗಳನ್ನು ಅನುಭವಿಸುತ್ತಿದ್ದಾರೆ. ಅವರ ಬರಹಗಳಲ್ಲಿ ನಿಗದಿತ ನಿಯಮಗಳ ಪಾಲನೆ ಆಗಿಲ್ಲವೆಂಬುದು ಒಂದು ಮೌಲ್ಯಾತ್ಮಕಕೊರತೆ ಎಂಬುದಾಗಿ ತೀರ್ಮಾನಿಸ ಲಾಗಿದೆ. ಕನ್ನಡ ಚೆನ್ನಾಗಿ ಮಾತಾಡಬಲ್ಲವರು ಸರಿಯಾಗಿ ಬರೆಯಲಾರರು ಎಂದು ಶಿಕ್ಷಣತಜ್ಞರು, ಸಾಮಾಜಿಕ ಚಿಂತಕರು ಮೇಲಿಂದ ಮೇಲೆ ಹೇಳುತ್ತಿರುವುದುಂಟು.

ಇದಕ್ಕೆ ವಿರುದ್ಧವಾದ ಮತ್ತೊಂದು ಪ್ರಸಂಗವಿದೆ. ಕರ್ನಾಟಕದ ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಕೆಲವು ಸಮುದಾಯದ ಕನ್ನಡಿಗರು ತಮ್ಮ ಆಡುಮಾತಿನಲ್ಲಿ ಮಹಾಪ್ರಾಣಗಳನ್ನು ಬಳಸುತ್ತಾರೆ. ಅವರು ಯಾವ ಪದಗಳಲ್ಲಿ ಮಹಾಪ್ರಾಣಗಳನ್ನು ಉಚ್ಚರಿಸುತ್ತಾರೋ ಅವುಗಳ ಲಿಖಿತ ರೂಪದಲ್ಲಿ ಅಲ್ಪಪ್ರಾಣಗಳನ್ನು ಮಾತ್ರ ನಿರೀಕ್ಷಿಸಲಾಗು ತ್ತದೆ. ಜನರ ಉಚ್ಚಾರಣೆಯಲ್ಲಿ ಮಹಾಪ್ರಾಣಗಳು ಸೇರಿಕೊಳ್ಳಲು ಅನ್ಯಭಾಷಾ ಪ್ರಭಾವ ಕಾರಣ. ಅದರಲ್ಲೂ ಮರಾಠಿಯ ಪ್ರಭಾವ ಈ ಪ್ರದೇಶಗಳಲ್ಲಿ ಇರುವುದನ್ನು ಗುರುತಿಸಬಹುದು. ಜನರ ಉಚ್ಚಾರಣೆಯ ರೂಪಗಳು ಇಲ್ಲಿಯೂ ನಿರಾಕರಣೆಗೊಳ್ಳುತ್ತವೆ. ಅಂದರೆ ಮಹಾಪ್ರಾಣಗಳು ಉಚ್ಚಾರಣೆಯಲ್ಲಾಗಲೀ ಬರಹದಲ್ಲಾಗಲೀ ಎಲ್ಲಿ ಇರಬೇಕು ಮತ್ತು ಎಲ್ಲಿ ಇರಕೂಡದು ಎಂಬ ನಿರ್ಧಾರ, ಬರಹದ ಭಾಷೆಯಿಂದ ಆಗುತ್ತಿದೆಯೇ ಹೊರತು ಜನರ ಸಹಜ ಬಳಕೆಯ ಮಾತಿನಿಂದಲ್ಲ. ಈ ಸಂಘರ್ಷ ತೀವ್ರಗೊಳ್ಳುತ್ತಿದೆ.

ಈ ಪರಿಸ್ಥಿತಿಯನ್ನು ಮತ್ತಷ್ಟು ಗೋಜಲು ಮಾಡುವ ಸಂಗತಿ ಮತ್ತೊಂದಿದೆ. ಅದೆಂದರೆ ಕನ್ನಡಕ್ಕೆ ಅನ್ಯಭಾಷೆಗಳಿಂದ ಹೊಸದಾಗಿ ಬಂದು ಸೇರುವ ಪದಗಳನ್ನು ಕನ್ನಡ ಲಿಪಿಯಲ್ಲಿ ಮೊದಲ ಬಾರಿಗೆ ಬರೆಯಲು ತೊಡಗಿದ್ದಾಗ ಉಂಟಾಗುವ ಸಮಸ್ಯೆ ಇದು. ಅದರಲ್ಲೂ ಪರ್ಶಿಯನ್-ಅರಾಬಿಕ್ ಮತ್ತು ಇಂಗ್ಲಿಶ್ ಪದಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಜಟಿಲವಾಗುವುದು. ಈ ಎರಡು ಭಾಷೆಗಳಲ್ಲಿ ಮಹಾಪ್ರಾಣಗಳೆಂಬ ಧ್ವನಿಗಳಿಲ್ಲ. ಅದರಲ್ಲೂ ಸ್ಪರ್ಶ ಧ್ವನಿಗಳ ಮಹಾಪ್ರಾಣತ್ವ ಲಕ್ಷಣ ಈ ಭಾಷೆಗಳಿಗೆ ದೂರ. ಆದರೆ ಆ ಭಾಷೆಯ ಕೆಲವು ಪದಗಳಲ್ಲಿ ಇರುವ ಘರ್ಷ ಧ್ವನಿಗಳನ್ನು ಕನ್ನಡ ಬರವಣಿಗೆಯಲ್ಲಿ ಮಹಾಪ್ರಾಣಗಳನ್ನಾಗಿ ಬರೆಯಲಾಗುತ್ತಿದೆ. ಹಾಗೆ ಬರೆಯಲು ಯಾವುದೇ ತಾರ್ಕಿಕ ಕಾರಣಗಳಿಲ್ಲ. ಆ ಪದಗಳನ್ನು ಕನ್ನಡಿಗರು ತಮ್ಮ ಆಡುಮಾತಿನಲ್ಲಿ ಉಚ್ಚರಿಸುವಾಗ ಹೀಗೆ ಮಹಾಪ್ರಾಣಗಳನ್ನು ಆಹ್ವಾನಿಸಿ ಕೊಳ್ಳುತ್ತಾರೋ ಅಥವಾ ತಮ್ಮದೇ ಆದ ರೀತಿಯಲ್ಲಿ ಧ್ವನಿ ಹೊಂದಾಣಿಕೆಯನ್ನು ಮಾಡಿಕೊಳ್ಳುತ್ತಾರೋ ಎಂಬುದನ್ನು ನಾವಿನ್ನೂ ವಿವರವಾಗಿ ಅಧ್ಯಯನ ಮಾಡಿಲ್ಲ. ಆದರೆ ಇದಕ್ಕೆ ಕೆಲವು ಪೂರ್ವ ನಿದರ್ಶನಗಳನ್ನು ನಾವು ಪರಿಗಣಿಸಬಹುದು. ಮರಾಠಿಯ ಮೂಲಕ ಬಂದ ನೂರಾರೂ ಪರ್ಸೋ-ಅರಾಬಿಕ್ ಪದಗಳನ್ನು ಕನ್ನಡ ಬರವಣಿಗೆ ಅಳವಡಿಸಿಕೊಂಡಿದೆ. ಹಾಗೆ ಅಳವಡಿಸಿಕೊಳ್ಳುವಾಗ ಮೂಲದ ಘರ್ಷ ಧ್ವನಿಗಳನ್ನು ಮಹಾಪ್ರಾಣಗಳನ್ನಾಗಿ ಬರೆದಿರುವ ಉದಾಹರಣೆಗಳು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಕುಮಾರವ್ಯಾಸನೇ ಮೊದಲಾಗಿ ಅನಂತರದ ಎಷ್ಟೋ ಕವಿಕೃತಿಗಳಲ್ಲಿ ಇದಕ್ಕೆ ನಿದರ್ಶನಗಳಿವೆ. ಈ ಹೊಂದಾಣಿಕೆಯ ಮಾದರಿಗೆ ಪ್ರಾಕೃತ ಭಾಷೆಗಳ ಪ್ರಭಾವವು ಕಾರಣವಾಗಿರಬಹುದು. ಎಷ್ಟೋ ಕಡೆಗಳಲ್ಲಿ ಪ್ರಾಕೃತ ರೂಪಗಳು ಹೀಗೆ ಮಹಾಪ್ರಾಣ ರೂಪಗಳನ್ನು ಹೊಂದಿರುತ್ತವೆ. ಕನ್ನಡ ಕವಿಗಳು ಈ ಎಲ್ಲಾ ಪ್ರಭಾವಗಳಿಗೆ ಒಳಗಾಗಿ ತಮ್ಮ ಬರವಣಿಗೆಯ ರೂಪಗಳನ್ನು ನಿರ್ಧರಿಸಿಕೊಂಡಿರ ಬಹುದು.

ಇಂಗ್ಲಿಶ್ ಮೂಲದ ಪದಗಳನ್ನು ಪ್ರತಿದಿನವೂ ನಾವು ಇಂಗ್ಲಿಶಿನಲ್ಲೇ ಓದುತ್ತೇವೆ ಇಲವೇ ಕೇಳುತ್ತೇವೆ. ಅವುಗಳ ಉಚ್ಚಾರಣೆಯೂ ನಮ್ಮ ಭಾಷೆಯ ಉಚ್ಚಾರಣೆಗೆ ಹೊಂದಿಸಿಕೊಳ್ಳುತ್ತೇವೆ. ಹಾಗೆಯೇ ಬರವಣಿಗೆಯಲ್ಲೂ ಇಂತಹದೇ ಹೊಂದಾಣಿಕೆ ರೂಪಗೊಂಡಿದೆ. ಮಹಾಪ್ರಾಣಗಳು ಹೀಗಾಗಿ ಕನ್ನಡ ಮಾತಿನ ಮತ್ತು ಬರಹದ ರೂಪಗಳಲ್ಲಿ ಅಳವಡಿಕೆಯ ಮತ್ತು ಹೊಂದಾಣಿಕೆಯ ನೆಲೆಯಲ್ಲಿ ಈಗ ಪ್ರವೃತ್ತವಾಗಿವೆ. ಹೀಗಿರುವಾಗ ಅವುಗಳ ಉಚ್ಚಾರಣೆ ಮತ್ತು ಬರಹ ರೂಪಗಳ ಬಗೆಗೆ ಒಂದು ಮೌಲ್ಯಾತ್ಮಕ ನೆಲೆಯ ನಿರ್ಣಯ ಎಷ್ಟು ಸಾಧುವಾಗಿದೆ ಎಂಬ ಪ್ರಶ್ನೆ ಈಗ ಮುಂಚೂಣಿಗೆ ಬಂದಿದೆ.

ಕನ್ನಡಿಗರ ಪದಕೋಶ ಎಲ್ಲ್ಲ ಭಾಷಿಕರ ಪದಕೋಶದಂತೆ ಚಲನಶೀಲ. ಇದರಲ್ಲಿ ನಮ್ಮ ಮಾತಿನಲ್ಲಿ ಬಳಸುವ ಪದಗಳ ಸಂಖ್ಯೆಗಿಂತ ಕೇಳಿ ಅರಿತುಕೊಳ್ಳುವ ಪದಗಳ ಸಂಖ್ಯೆ ಹೆಚ್ಚಿರುತ್ತದೆ. ಈ ಮಾತು ಬರವಣಿಗೆ ಮತ್ತು ಓದಿಗೂ ಹೊಂದಿಕೊಳ್ಳುತ್ತದೆ. ಎಂದರೆ ನಾವು ನಮ್ಮ ಮಾತಿನಲ್ಲಿ ಬಳಸುವ ಪದಗಳ ಸಂಖ್ಯೆ ಕಡಿಮೆ. ಆದರೆ ಅದಕ್ಕಿಂತ ಹೆಚ್ಚು ಸಂಖ್ಯೆಯ ಪದಗಳನ್ನು ಕೇಳಿ ಅರಿತುಕೊಳ್ಳಬಲ್ಲೆವು. ಈ ವ್ಯತ್ಯಾಸ ಉಪಯುಕ್ತವಾದುದು. ನಾವು ಅಭ್ಯಾಸಕ್ಕಾಗಿ ಮಾತಿನ ಪದಕೋಶದ ಪದಗಳನ್ನು ಬಳಕೆಯ ಪದಗಳೆಂದು ಮತ್ತು ಕೇಳಿ ಅರಿತುಕೊಳ್ಳುವ ಪದಗಳನ್ನು ಗ್ರಹಿಕೆಯ ಪದಗಳು ಎಂದು ಸೂಚಿಸಿಕೊಳ್ಳೋಣ. ಕನ್ನಡಿಗರ ಬಳಕೆಯ ಪದಕೋಶ ವೃದ್ಧಿಯಾಗುವ ವೇಗಕ್ಕಿಂತ ಗ್ರಹಿಕೆಯ ಪದಕೋಶ ಹೆಚ್ಚಿನ ವೇಗದಲ್ಲಿ ವೃದ್ಧಿಯಾಗುತ್ತಿರುತ್ತದೆ. ಬೇರೆ ಬೇರೆ ವಲಯಗಳಲ್ಲಿ ನಾವು ಹೊಸದಾಗಿ ಮಾತನಾಡುವುದಕ್ಕಿಂತ, ಹೊಸ ವಲಯಗಳ ಮಾತುಗಳನ್ನು ಕೇಳಿಸಿಕೊಳ್ಳಬೇಕಾದ ಪ್ರಸಂಗಗಳು ಹೆಚ್ಚಿರುವುದೇ ಇದಕ್ಕೆ ಕಾರಣ. ಹೀಗೆ ಕೇಳುವ ಪದಗಳು ನಮ್ಮ ಗ್ರಹಿಕೆಯ ಪದಕೋಶದಲ್ಲಿ ನೆಲೆ ನಿಲ್ಲುತ್ತವೆ. ಆ ಪದಗಳನ್ನು ನಾವು ಮಾತಿನಲ್ಲಿ ಬಳಸದೇ ಇರಬಹುದು. ಈ ಮಾತು, ಬರಹ ರೂಪಕ್ಕೂ ಅನ್ವಯಿಸುತ್ತದೆ.

ಹಾಗೆ ನೋಡಿದರೆ ಬರೆಯುವ ಕನ್ನಡದ ವ್ಯಾಪ್ತಿ ಆಡುಕನ್ನಡದ ವ್ಯಾಪ್ತಿಗಿಂತ ಕಡಿಮೆ. ಕನ್ನಡಿಗರಲ್ಲಿ ಬರೆಯಲು ಕಲಿತವರು ಕೂಡ ಬರೆಯುವ ಅಥವಾ ಬರೆಯಬೇಕಾಗಿ ಬರುವ ಪ್ರಸಂಗ ಕಡಿಮೆ. ಆದರೆ ಅವರು ಓದುತ್ತಿರುತ್ತಾರೆ. ಇಲ್ಲವೇ ಕೇಳಿಸಿಕೊಳ್ಳುತ್ತಿರುತ್ತಾರೆ. ಇದರಿಂದಾಗಿ ಅವರ ಗ್ರಹಿಕೆಯ ಪದಕೋಶ ವೃದ್ಧಿಯಾಗುತ್ತಲೇ ಇರುತ್ತದೆ. ಹಾಗೆ ಬಂದು ಸೇರಿದ ಎಷ್ಟೋ ಪದಗಳನ್ನು ಮಾತಿನಲ್ಲಾಗಲೀ ಬರಹದಲ್ಲಾಗಲೀ ಕನ್ನಡಿಗರು ಎಂದೂ ಬಳಸದೇ ಇರಬಹುದು. ಹೀಗೆ ಗ್ರಹಿಕೆಯ ಪದಕೋಶಕ್ಕೆ ಬಂದು ಸೇರಿದ ಪದಗಳೆಲ್ಲವೂ ಅಲ್ಲೇ ನೆಲೆ ನಿಲ್ಲುತ್ತವೆಂದು ತಿಳಿಯಬೇಕಾಗಿಲ್ಲ. ಹೀಗೆ ಬಂದು ಸೇರಿದ ಎಷ್ಟೋ ಪದಗಳು ಬಲುಬೇಗನೇ ಮಾಸಿಹೋಗಬಹುದು. ಮತ್ತೆ ಕೆಲವು ದೀರ್ಘಕಾಲ ನೆಲೆ ನಿಲ್ಲಲೂಬಹುದು. ಸುಮ್ಮನೆ ನಿದರ್ಶನಕ್ಕಾಗಿ ಹೇಳುವುದಾದರೆ ಕಳೆದ ಶತಮಾನದ ಎಂಟನೇ ದಶಕದಲ್ಲಿ ಗ್ರಹಿಕೆಯ ಪದಕೋಶಕ್ಕೆ ಬಂದು ಸೇರಿರಬಹುದಾದ ಗ್ಲಾಸ್‌ನಟ್ ಮತ್ತು ಪೆರಿಸ್ಟ್ರೋಯಿಕಾ ಎಂಬ ಪದಗಳು ಈಗ ಇಲ್ಲವಾಗಿವೆ. ಹಾಗೆಯೇ ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಎಂಬಂತ ಪದಗಳು ಇಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರ ಗ್ರಹಿಕೆಯ ಪದಕೋಶದಲ್ಲಿ ಇರಲೇ ಇಲ್ಲ.

ಈ ಬಳಕೆಯ ಪದಕೋಶದ ಬಗೆಗೆ ನಾವು ಖಾತ್ರಿಯಾಗಿ ಮಾತಾಡಬಹುದಾದರೂ ಗ್ರಹಿಕೆಯ ಪದಕೋಶದ ಬಗೆಗೆ ಖಚಿತವಾಗಿ ಏನನ್ನು ಹೇಳಲಾಗದು. ಅದಕ್ಕೆ ಬದಲಾಗುತ್ತಿರುವ ಸಮಾಜವೇ ಕಾರಣ. ಕನ್ನಡಿಗರೊಬ್ಬರು ಯಾವ ಅನುಭವ ವಲಯದಲ್ಲಿ ಇದ್ದಾರೆ ಎಂಬುದನ್ನವಲಂಬಿಸಿ ಅವರ ಗ್ರಹಿಕೆಯ ಪದಕೋಶ ರೂಪಗೊಳ್ಳುತ್ತಿರುತ್ತದೆ. ವೈದ್ಯ, ವಕೀಲ, ಇಂಜಿನಿಯರ್, ಪ್ರಾಧ್ಯಾಪಕ ಹೀಗೆ ಹಲವು ವೃತ್ತಿಗಳಲ್ಲಿ ಇರುವವರು ಬೇರೆ ಬೇರೆ ರೀತಿಯ ಪದಕೋಶಗಳನ್ನು ಪಡೆದುಕೊಳ್ಳುತ್ತಲೇ ಇರುತ್ತಾರೆ. ಅವರ ಗ್ರಹಿಕೆಯ ಪದಕೋಶಗಳು ಒಂದಕ್ಕಿಂತ ಒಂದು ಸಂಪೂರ್ಣವಾಗಿ ಬೇರೆಯೇ ಆಗಿರುತ್ತವೆ. ಅವುಗಳ ನಡುವೆ ಸಂವಾದ ಅಸಾಧ್ಯವೇ ಆಗುತ್ತದೆ. ಕನ್ನಡದಂತಹ ಭಾಷೆಯನ್ನು ಮಾತಾಡುವವರ ಸಂದರ್ಭದಲ್ಲಿ ಈ ಗ್ರಹಿಕೆಯ ಪದಕೋಶವು ಬೆಳೆಯುವುದು ಕನ್ನಡ ಪದಗಳಿಂದಲ್ಲ. ಬೇರೆ ಭಾಷೆಯ ಪದಗಳಿಂದ ಅದು ಬೆಳೆಯುತ್ತಿದೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಕನ್ನಡಿಗರ ಪದಕೋಶದ ಅತ್ಯಂತ ಕ್ರಿಯಾಶೀಲವಲಯ ಈ ನೆಲೆಯಲ್ಲಿ ರೂಪಗೊಳ್ಳುತ್ತದೆ. ಹೀಗೆ ಪರ್ಯಾಯ ಪದಗಳನ್ನು ಏಕೆ ಸೃಷ್ಟಿಸಬೇಕು ಮತ್ತು ಹೇಗೆ ಸೃಷ್ಟಿಸಬೇಕು ಎಂಬ ಎರಡು ಪ್ರಶ್ನೆಗಳು ಮುಂಚೂಣಿಗೆ ಬಂದು ನಿಲ್ಲುತ್ತವೆ.

ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ಪದಕೋಶದಲ್ಲಿ ಆಗಿರುವ ಆಗುತ್ತಿರುವ ಪರಿವರ್ತನೆಗಳನ್ನು ಕುರಿತಂತೆ ಹಲವು ವಾಗ್ವಾದಗಳು ನಡೆದಿವೆ. ಅವು ತೀವ್ರವಾದ ಅತಿರೇಕಗಳನ್ನು ಕೆಲವೊಮ್ಮೆ ಮುಟ್ಟಿರುವುದುಂಟು. ಅದರ ಕೆಲವು ಮಾದರಿಗಳನ್ನು ನಾವೀಗ ಗಮನಿಸಬಹುದು. ಹೊಸ ಪದವೊಂದು ನಮ್ಮ ಗ್ರಹಿಕೆಯ ಪದಕೋಶಕ್ಕೆ ಬಂದು ಸೇರಿತೆನ್ನೋಣ. ಅದನ್ನು ನಾವು ನಮ್ಮ ಬಳಕೆಯ ಕೋಶಕ್ಕೆ ತಂದುಕೊಂಡು ನಾವು ಬಳಸಬೇಕಾದ ಪ್ರಸಂಗ ಬಂದರೆ ಅದನ್ನು ಇರುವಂತೆಯೇ ಬದಲಾವಣೆ ಇಲ್ಲದೇ ಬಳಸುವುದೇ ಸರಿಯಾದ ಸರಳವಾದ ಮತ್ತು ಸುಲಭವಾದ ದಾರಿ ಎಂಬುದು ಒಂದು ವಾದ. ಇನ್ನೊಂದು ಕಡೆ ಹಾಗೆ ಮಾಡದೆ ಆ ಪದಗಳಿಗೆ ಸರಿಯಾದ ಪರ್ಯಾಯ ರೂಪಗಳನ್ನು ರಚಿಸಿಕೊಂಡು ಬಳಸಬೇಕು ಎಂಬುದು ಇನ್ನೊಂದು ವಾದ. ಪರ್ಯಾಯ ರೂಪಗಳನ್ನು ರೂಪಿಸಿಕೊಳ್ಳುವುದೇ ಆದರೆ ಹೊಸ ರಚನೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದು ಇನ್ನೊಂದು ಪ್ರಶೆ. ಮೊದಲನೆಯ ಪರಿಹಾರವನ್ನು ಎಲ್ಲರೂ ಒಪ್ಪುತ್ತಿಲ್ಲ. ಕನ್ನಡ ಧ್ವನಿರಚನೆಯ ಅಗತ್ಯಗಳನ್ನು ಪೂರೈಸಿಕೊಂಡು ಹೊಸ ಪದಗಳನ್ನು ಸಾಧ್ಯವಿದ್ದಷ್ಟು ಅವು ಇರುವಂತೆಯೇ ಬಳಸಿಕೊಳ್ಳಬೇಕೆಂದು ಸೂಚಿಸಿದವರಲ್ಲಿ ಕುವೆಂಪು ಆದ್ಯರಾಗುತ್ತಾರೆ. ಆ ಹೊತ್ತಿಗೆ ಮೈಸೂರು ಪ್ರದೇಶದಲ್ಲಿ ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಮಾಡುತ್ತಿದ್ದ ವಿದ್ವಾಂಸರ ಬರವಣಿಗೆಯನ್ನು ಗಮನಿಸಿ ಈ ಸಲಹೆಯನ್ನು ಅವರು ಮುಂದಿಟ್ಟರು. ಪ್ರಾಯೋಗಿಕ ನೆಲೆಯಲ್ಲಿ ಸೂಕ್ತವಾಗಿದ್ದ ಈ ಸಲಹೆ ಎಲ್ಲರ ಸಮರ್ಥನೆಯನ್ನು ಪಡೆದುಕೊಳ್ಳಲಿಲ್ಲ. ಒಪ್ಪಿಗೆ ನೀಡದಿರಲು ಕೆಲವರು ಮುಂದೊಡ್ಡಿದ ಕಾರಣಗಳು ಕೆಲವಿವೆ. ಅವರ ಪ್ರಕಾರ ಪರ್ಯಾಯ ಪದವನ್ನು ರೂಪಿಸುವುದು ನಮ್ಮ ಹಕ್ಕು. ಕನ್ನಡ ಭಾಷೆಯ ಸೃಜನಶೀಲತೆ ಯನ್ನು ಕಾಯ್ದುಕೊಳ್ಳಲು ಹೊಸ ರಚನೆಗಳನ್ನು ಮಾಡಲೇಬೇಕು ಎಂಬುದು ಅವರ ನಿಲುವು. ಇದಕ್ಕಾಗಿ ಜನಸಾಮಾನ್ಯರ ವಿವೇಕವನ್ನು ಬಳಸಿಕೊಳ್ಳಬೇಕೆಂದು ಅಲ್ಲದೇ ಅವರ ಆಡುಮಾತಿನಲ್ಲಿರುವ ಪದರಚನೆಯ ಸಾಧ್ಯತೆಗಳನ್ನು ಯೋಗ್ಯರೀತಿಯಲ್ಲಿ ದುಡಿಸಿಕೊಳ್ಳಬೇಕೆಂದು ಇವರು ಸಲಹೆ ನೀಡುತ್ತಾರೆ. ಹೊಸಪದ ನಿರ್ಮಾಣಕ್ಕೆ ಸೂಚಿಸಿದ ಈ ದಾರಿ ಕಠಿಣವಾದುದು. ಅಸಾಧ್ಯವಲ್ಲದಿದ್ದರೂ ಹಲವು ಅಡೆತಡೆಗಳಿಂದ ಕೂಡಿತ್ತು. ಏಕೆಂದರೆ ಕನ್ನಡದ ಸಹಜ ರಚನೆಗಳನ್ನಾಗಿ ಪರಿವರ್ತಿಸಲು ಪೂರ್ವಭಾವಿ ಯಾದ ಅಧ್ಯಯನಗಳು ಅಗತ್ಯ ಮತ್ತು ಸಾಕಷ್ಟು ಸಮಯ ಅದಕ್ಕಾಗಿ ವಿನಿಯೋಗ ವಾಗಬೇಕಿತ್ತು. ಜನರ ದಿನದ ಭಾಷೆಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಪರ್ಯಾಯ ಪದಗಳನ್ನು ನಿದರ್ಶನವಾಗಿ ನೀಡಿ ಅಷ್ಟರಿಂದಲೇ ಉತ್ಸಾಹಿತರಾಗುವುದು ಸಾಧ್ಯವಿರಲಿಲ್ಲ. ಪೂರ್ವಭಾವಿ ಅಧ್ಯಯನ ವಾಸ್ತವವಾಗಿ ಕನ್ನಡ ಭಾಷಾ ಅಧ್ಯಯನಕಾರರ ಜವಾಬ್ದಾರಿ. ಅಲ್ಲದೆ ಹೊಸಪದ ನಿರ್ಮಾಣಕ್ಕೆ ಈ ದಾರಿ ಹಿಡಿಯಲು ಕಾಲಾವಕಾಶವಿರಲಿಲ್ಲ. ಹೀಗಾಗಿ ನಡುವಣ ದಾರಿಯೊಂದನ್ನು ಆಯ್ಕೆ ಮಾಡಿಕೊಂಡಂತೆ ತೋರುತ್ತದೆ.

ಈಗಾಗಲೇ ಹೇಳಿದಂತೆ ಹೊಸ ಪದಗಳನ್ನು ರೂಪಿಸಲು ಕನ್ನಡವು ಆಯ್ಕೆ ಮಾಡಿಕೊಂಡ ಕೆಲವು ಪ್ರಧಾನ ವಿಧಾನಗಳು ಈ ಕೆಳಕಂಡಂತಿವೆ. ಒಂದು: ಮೂಲ ಪದವನ್ನು ಯಥಾವತ್ತಾಗಿ ಅಥವಾ ಕೆಲವು ಧ್ವನಿವ್ಯತ್ಯಾಸಗಳೊಡನೆ ಕನ್ನಡದಲ್ಲಿ ಬಳಸುವುದು. ಎರಡು: ಮೂಲಪದಕ್ಕೆ ಬದಲಾಗಿ ಕನ್ನಡದ ಹೊಸ ಪದವೊಂದನ್ನು ರೂಪಿಸುವುದು. ಇದರಲ್ಲಿ ಕನ್ನಡದ ಪದಗಳನ್ನು ಮಾತ್ರವಲ್ಲದೇ ಸಂಸ್ಕೃತದ ಪದಗಳನ್ನು ಕೂಡ ಬಳಸಲಾಗುತ್ತದೆ. ಮೂರು: ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದರಚನೆಯೊಂದನ್ನು ಇರುವ ಅರ್ಥದಲ್ಲಿ ಅಥವಾ ಹೊಸ ಅರ್ಥದಲ್ಲಿ ಬಳಸುವುದು. ಮೇಲೆ ಚರ್ಚಿಸಿದ ಗ್ರಹಿಕೆಯ ಪದಕೋಶದಲ್ಲಿ ಮೊದಲೆರಡು ಬಗೆಯ ಪದಗಳು ಅಧಿಕ ಪ್ರಮಾಣದಲ್ಲಿವೆ. ಮಾತಿನ ಇಲ್ಲವೇ ಬರಹದ ಪದಕೋಶದಲ್ಲಿ ಈ ಹೊಸ ಪದಗಳ ಸ್ವರೂಪ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಈ ಹೊಸ ಪದನಿರ್ಮಾಣದ ಪ್ರಕ್ರಿಯೆ ಹಲವು ನೆಲೆಗಳಲ್ಲಿ ನಡೆಯುತ್ತಿರುತ್ತವೆ. ಸಮೂಹ ಮಾಧ್ಯಮಗಳಲ್ಲಿ ತತ್ಕಾಲೀನ ಆಸಕ್ತಿಯಿಂದ ಕೂಡಲೇ ಒಂದು ಹೊಸ ಪದದ ಅಗತ್ಯ ಕಂಡುಬಂದಾಗ ಹೆಚ್ಚು ತಾರ್ಕಿಕ ಕಾರಣಗಳನ್ನು ಮುಂದೊಡ್ಡದೆ ಒಂದು ಹೊಸಪದವನ್ನು ಬಳಸಿಬಿಡುವು ದುಂಟು. ಹೀಗೆ ಬಳಸಿದ ಪದವು ಸೂಕ್ತವೋ ಅಲ್ಲವೋ ಎಂಬುದು ಎಷ್ಟೋ ವೇಳೆ ಪರಿಶೀಲನೆಗೆ ಒಳಗಾಗದೆ ಇರುವುದುಂಟು. ಇಂತಹ ಪದಗಳಲ್ಲಿ ಎಲ್ಲವೂ ಕನ್ನಡದ ಪದಕೋಶದ ಭಾಗವಾಗಿ ಉಳಿಯದೇ ಹೋಗಬಹುದು. ಆ ಹೊತ್ತಿನ ಅಗತ್ಯಗಳನ್ನು ಪೂರೈಸಿ ಬಳಕೆಯಿಂದ ಮಾಯವಾಗುವ ಸಾಧ್ಯತೆ ಹೆಚ್ಚು. ಮತ್ತೆ ಕೆಲವೊಮ್ಮೆ ಉಳಿದುಕೊಂಡ ಪದಗಳು ತಮ್ಮ ಬಳಕೆಯ ಅರ್ಥವನ್ನು ಬದಲಾಯಿಸಿಕೊಳ್ಳುತ್ತ ಹೋಗುವ ಸಾಧ್ಯತೆ ಇರುತ್ತದೆ.

ಕನ್ನಡದಲ್ಲಿ ದೇಶ್ಯ ಎಂದು ನಾವು ಗುರುತಿಸುವ ಎಲ್ಲ ಪದಗಳು ನಮ್ಮ ದಿನಬಳಕೆಯ ಪದಗಳಾಗಿ ಕಾಣಿಸಿಕೊಳ್ಳುವುದಿಲ್ಲ. ಆ ಪದಗಳಲ್ಲಿ ಕೆಲವು ಪದ ವರ್ಗದ ಪದಗಳು ಮಾತ್ರ ನಮಗೆ ದಿನವೂ ಉಪಯೋಗಕ್ಕೆ ಬರುತ್ತವೆ. ಉದಾಹರಣೆಗೆ ನಾಮಪದ-ಕ್ರಿಯಾಪದ ಮತ್ತು ಗುಣಪದಗಳಲ್ಲಿ ಕ್ರಿಯಾಪದ ವರ್ಗ ಹೆಚ್ಚು ಮುಚ್ಚಿದ ಪದವರ್ಗ. ನಾಮಪದ ವರ್ಗವಂತೂ ಸಂಪೂರ್ಣವಾಗಿ ತೆರೆದ ಪದವರ್ಗವಾಗಿದ್ದು, ಅದಕ್ಕೆ ದಿನವೂ ಹೊಸ ಹೊಸ ಪದಗಳು ಬಂದು ಸೇರುತ್ತಿರುತ್ತವೆ.  ದೇಶ್ಯ ಪದಗಳಲ್ಲಿ ಪದಗಳ ರೂಪ, ಅರ್ಥ ಮತ್ತು ಬಳಕೆಯ ನಿಯಮಗಳು ನಾವು ತಿಳಿದ ಹಾಗೆ ನಿಶ್ಚಿತವಾಗಿ ಇರುವುದಿಲ್ಲ. ಎಂದರೆ ಅವುಗಳನ್ನು ನಾವು ಬಳಸುವಾಗ ಅನುಕೂಲಕ್ಕೆ ತಕ್ಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಅದರಲ್ಲೂ ಅರ್ಥದ ನೆಲೆಯಲ್ಲಿ ಮತ್ತು ಬಳಕೆಯ ನೆಲೆಯಲ್ಲಿ ಈ ಬದಲಾವಣೆಗಳು ನಡೆಯುತ್ತಿರುತ್ತವೆ. ದೇಶ್ಯಪದಗಳಲ್ಲಿ ನಾಮಪದಗಳು ತಮ್ಮ ಮೂಲ ಅರ್ಥಗಳನ್ನು ಬಿಟ್ಟುಕೊಟ್ಟು ಬೇರೊಂದು ಅರ್ಥದಲ್ಲಿ ಬಳಕೆಯಾಗುವ ಸಾಧ್ಯತೆಗಳು ಇರುತ್ತವೆ. ಈ ಬದಲಾವಣೆಗೆ ಮುಖ್ಯ ಕಾರಣ ನಮ್ಮ ಜೀವನಕ್ರಮದಲ್ಲಿ ಆಗುತ್ತಿರುವ ಬದಲಾವಣೆಗಳು. ಇದಕ್ಕೆ ಕೆಲವು ನಿದರ್ಶನಗಳನ್ನು ನಾವು ನೋಡಬಹುದು. ವೃತ್ತಿ ಸಂಬಂಧಿಯಾದ ಪದಗಳು ಆಯಾ ವೃತ್ತಿಯ ನೆಲೆಯಲ್ಲಿ ವಾಚ್ಯಾರ್ಥವನ್ನು ಪಡೆದಿರುತ್ತವೆ. ಸಾಮಾಜಿಕ ಬದಲಾವಣೆಗಳಿಂದಾಗಿ ಆ ವೃತ್ತಿಯು ಪರಿವರ್ತನೆಗೆ ಒಳಗಾಗುತ್ತದೆ. ಆಗ ಅದರಲ್ಲಿ ಬಳಕೆಯಾಗುವ ಎಷ್ಟೋ ಪದಗಳು ಆ ವೃತ್ತಿಯಲ್ಲಿ ಪರಿವರ್ತನೆಗೆ ಒಳಗಾಗುತ್ತದೆ. ಆಗ ಅದರಲ್ಲಿ ಬಳಕೆಯಾಗುವ ಎಷ್ಟೋ ಪದಗಳು ಆ ವೃತ್ತಿಯ ಚೌಕಟ್ಟಿನಿಂದ ಹೊರಬಂದು ಸಾಮಾನ್ಯ ಪದಕೋಶಕ್ಕೆ ಬಂದು ಸೇರುತ್ತವೆ. ಕೃಷಿಗೆ ಸಂಬಂಧ ಪಟ್ಟ ಹತ್ತಾರು ಪದಗಳನ್ನು ಗಮನಿಸಿ. ಬೆಳೆ, ಕಳೆ, ಉಳು, ಹರಗು, ಹಸನು, ಸುಗ್ಗಿ, ತೂರು, ಕಣ, ಕೊಯ್ಲು, ಫಸಲು ಇವೇ ಮುಂತಾದ ಪದಗಳು ಆ ವೃತ್ತಿಯ ಪರಿಸರದಲ್ಲಿ ಹೊಂದಿರುವ ಅರ್ಥಗಳು ಒಂದು ಕಡೆ ಇದೆ. ಇವೇ ಪದಗಳನ್ನು ಆ ವೃತ್ತಿಯ ಆಚೆಗೆ ಸಾಮಾನ್ಯ ಬಳಕೆಯಲ್ಲಿ ಪ್ರಯೋಗಿಸಿದಾಗ ಮೂಲ ವಾಚ್ಯಾರ್ಥದ ಬದಲು ಲಕ್ಷಣಾರ್ಥಗಳು ಲಭಿಸಿಬಿಡುತ್ತವೆ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡದ ಪದಕೋಶ ಈ ಬಗೆಯ ಪರಿವರ್ತನೆಗೆ ಅಗಾಧ ಪ್ರಮಾಣದಲ್ಲಿ ಒಳಗಾಗಿರುವುದನ್ನು ಗಮನಿಸಬಹುದು.

ಈ ಮೇಲೆ ಹೇಳಿದ ಬದಲಾವಣೆಗಳ ಹಿಂದೆ ಕೆಲವು ಸಾಮಾಜಿಕ ಪರಿವರ್ತನೆಗಳು ಕೆಲಸ ಮಾಡುತ್ತಿರುತ್ತವೆ ಎಂದು ಹೇಳಲಾಯಿತು. ಈ ಸಾಮಾಜಿಕ ವ್ಯತ್ಯಾಸಗಳು ಕೇವಲ ಬಾಹ್ಯ ನೆಲೆಯ ವ್ಯತ್ಯಾಸವನ್ನು ಸೂಚಿಸುತ್ತವೆ. ಅಂದರೆ ಒಂದು ವೃತ್ತಿಗೂ, ಸಮಾಜಕ್ಕೂ ಇರುವ ಸಂಬಂಧ ಸಂಕೀರ್ಣ ನೆಲೆಯಲ್ಲಿ ಇರುತ್ತದೆ. ಆ ವೃತ್ತಿಯ ಬಗೆಗಿನ ದೃಷ್ಟಿಕೋನ ಸಾಮಾಜಿಕ ನೆಲೆಯಲ್ಲಿ ಬದಲಾಗುತ್ತ್ತ ಹೋದಂತೆ ಭಾಷೆಯ ಪದಕೋಶವು ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ನಗರೀಕರಣದ ಪ್ರಭಾವದಿಂದ ಕೃಷಿಯ ಬಗೆಗೆ ಸಾಮಾಜಿಕವಾಗಿ ಇದ್ದ ಸಂಬಂಧದ ನೆಲೆಗಳು ಬದಲಾಗಿವೆ. ಕೃಷಿ ಈಗ ಸಮುದಾಯಕ್ಕೆ ಸದಾ ಅಗತ್ಯವಾದರೂ ಅದು ನಮ್ಮ ದಿನದಿನದ ವ್ಯವಹಾರದ ಭಾಗವಾಗಿರುವುದಿಲ್ಲ. ಆದರೆ ಕೃಷಿಯ ಪದಗಳು ಮಾತ್ರ ಕನ್ನಡ ಪದಕೋಶದಲ್ಲಿ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ಆರಂಭಿಸುತ್ತವೆ. ಇದನ್ನು ಪದಕೋಶದ ಒಳಚಲನೆ ಎಂದು ಗುರುತಿಸಬಹುದು. ಕನ್ನಡದಲ್ಲಿ ಇಂತಹ ಒಳಚಲನೆಯ ಪರಿಣಾಮ ಆಗಾಧ ಪ್ರಮಾಣದಲ್ಲಿ ನಡೆಯುತ್ತಿದೆ. ಇದನ್ನು ಗುರುತಿಸಿ ದಾಖಲಿಸುವುದು ಈಗ ಅಗತ್ಯವಾಗುತ್ತಿದೆ.

ದೇಶ್ಯಪದಗಳಲ್ಲಿ ಮತ್ತೂ ಒಂದು ಬಗೆಯ ವ್ಯತ್ಯಾಸಗಳು ನಡೆಯುತ್ತವೆ. ಪದಗಳು ಉಳಿದು ಪದಾರ್ಥಗಳು ಮಾಯವಾಗುವ ಪ್ರಕ್ರಿಯೆ ಸಾಮಾಜಿಕ ನೆಲೆಯಲ್ಲಿ ನಡೆಯುತ್ತಿರುತ್ತದೆ. ವಸ್ತು ಜಗತ್ತಿನ ಪಲ್ಲಟಗಳು ಈ ಪದ ಪದಾರ್ಥಗಳ ವಿಘಟನೆಗೆ ಕಾರಣವಾಗುತ್ತವೆ. ಈ ವಿಘಟನೆಯ ಪರಿಣಾಮಗಳು ಪದಕೋಶದಲ್ಲಿ ಕಾಣಿಸಿಕೊಳ್ಳುವ ಕ್ರಮ ಹಲವು. ಒಂದು: ಪದ ಮತ್ತು ಪದಾರ್ಥಗಳೆರಡೂ ಬಳಕೆಯಿಂದ ದೂರ ಸರಿಯುವುದು. ಎರಡು: ಹೊಸ ಸಾಧ್ಯತೆಗಳೊಡನೆ ಪದದ ಬಳಕೆಯನ್ನು ಉಳಿಸಿ ಕೊಳ್ಳುವುದು. ಮೂರು: ಪದಾರ್ಥದ ಗೈರುಹಾಜರಿಯಲ್ಲಿ ಉಂಟಾದ ಶೂನ್ಯವನ್ನು ತುಂಬಲು ಬಂದ ಹೊಸ ಪದಾರ್ಥವನ್ನು ಸೂಚಿಸಲು ಇನ್ನೊಂದು ಹೊಸ ಪದವನ್ನು ಸೃಷ್ಟಿಸಿಕೊಳ್ಳುವುದು. ನಾಲ್ಕು: ಹಳೆಯ ಪದವನ್ನು ಬೇರೆಯ ಪರಿಸರದಲ್ಲಿ ಲಕ್ಷಣಾರ್ಥದೊಡನೆ ಬಳಸಲು ಮೊದಲು ಮಾಡುವುದು. ಈ ಎಲ್ಲ ಪ್ರಕ್ರಿಯೆಗಳು ಕನ್ನಡ ಪದಕೋಶ ವಲಯದಲ್ಲಿ ಅಗಾಧ ಪ್ರಮಾಣದಲ್ಲಿ ನಡೆಯುತ್ತಿವೆ. ಈ ಗತಿಶೀಲತೆಯನ್ನು ನಾವು ಇನ್ನೂ ಪೂರ್ಣವಾಗಿ ಅಭ್ಯಾಸ ಮಾಡುವುದು ಸಾಧ್ಯವಾಗಿಲ್ಲ. ಒಂದೆರಡು ನಿದರ್ಶನಗಳ ಮೂಲಕ ಈ ಸಂಕೀರ್ಣ ಪ್ರಕ್ರಿಯೆಯನ್ನು ಅರಿಯಲೆತ್ನಿಸಬಹುದು.

ಅಕ್ಕಿಯನ್ನು ಬೇಯಿಸಿ ಮಾಡಿದ ಪದಾರ್ಥ ಅನ್ನ. ಈ ಪದ ಕನ್ನಡಕ್ಕೆ ಸಂಸ್ಕೃತದಿಂದ ಬಂದಿದೆ. ಬಹು ಹಿಂದೆಯೇ ಈ ಅರ್ಥವನ್ನು ನೀಡುವ ಕೂಳು ಪದ ಬಳಕೆಯಿಂದ ಮಾಯವಾಯಿತು. ಅನ್ನ ಅದರ ಜಾಗದಲ್ಲಿ ಉಳಿಯಿತು. ಕೂಳು ಪದಕ್ಕೆ ತಾನು ಸೂಚಿಸುತ್ತಿದ್ದ ನಿರ್ದಿಷ್ಟ ಅರ್ಥದ ಬದಲಿಗೆ ಬೇರೆಯ ಅರ್ಥಗಳು ಬಂದು ಸೇರಿದವು. ಅದು ಸೀಮಿತ ಅರ್ಥ ನೆಲೆಗೆ ಬಂದು ನಿಂತದ್ದು ಉಂಟು. ಶವದ ಮೆರವಣಿಗೆಯಲ್ಲಿ ಒಯ್ಯುವ ಅನ್ನವನ್ನು ಸೂಚಿಸಲು ಬಳಸುವ ತಲೆಗೂಳು ಎಂಬ ಪದವನ್ನು ಗಮನಿಸಿ. ಇದಲ್ಲದೆ ಹೊಟ್ಟೆಪಾಡಿಗೆ ತಿನ್ನುವ ಯಾವ ವಸ್ತುವನ್ನಾದರೂ ಅಥವಾ ಹೊಟ್ಟೆಪಾಡಿಗೆ ಮಾಡುವ ದುಡಿಮೆಗೆ ಸಿಗುವ ಯಾವ ಫಲವನ್ನಾದರೂ ಕೂಳು ಎಂದು ತಿರಸ್ಕಾರ ರೂಪದಲ್ಲಿ ಬಳಸುವುದು ಕಾಣುತ್ತದೆ(ಉದಾಹರಣೆಗೆ ಕೂಳಿಗೂ ಗತಿ ಇಲ್ಲದವರು). ಇವೆಲ್ಲವೂ ಹಿಂದೆಯೇ ಆದ ಬದಲಾವಣೆಗಳು. ಈಚಿನ ದಶಕಗಳಲ್ಲಿ ಅನ್ನ ಪದದ ಬದಲಿಗೆ ಇಂಗ್ಲಿಶ್‌ನಿಂದ ಪಡೆದ ರೈಸ್ ಪದವನ್ನು ವ್ಯಾಪಕವಾಗಿ ಬಳಸಲು ತೊಡಗಿದ್ದೇವೆ(ಈ ರೈಸ್ ಎಂಬ ಪದವೇ ಇಂಗ್ಲಿಶಿಗೆ ಹೇಗೆ ಬಂದಿತು ಎಂಬ ಬಗ್ಗೆ ಬೇರೆಯೇ ಕತೆ ಇದೆ.). ಹೆಚ್ಚುಪಾಲುಮನೆಯ ಆಚೆಗಿನ ವಾತಾವರಣದಲ್ಲಿ ಉದಾಹರಣೆಗೆ ಹೋಟೆಲ್, ಹಾಸ್ಟೆಲ್, ಬಸ್, ರೈಲು ನಿಲ್ದಾಣ, ಸಾರ್ವಜನಿಕ ಸಮಾರಂಭಗಳು ಇಂತಹ ಕಡೆಗಳಲ್ಲಿ ರೈಸ್ ಪದ ಬಂದು ನಿಂತಿದೆ. ಅನ್ನ ತನ್ನ ಬಳಕೆಯ ವ್ಯಾಪ್ತಿಯನ್ನು ಕಡಿಮೆ ಮಾಡಿಕೊಂಡಿದೆ.

ಸಂಬಂಧಸೂಚಕ ಪದಗಳು ಸಂಬೋಧನಾ ರೂಪದ ಪದಗಳು ಕೂಡ ಇದೇ ಬಗೆಯ ವ್ಯತ್ಯಾಸಗಳಿಗೆ ಒಳಗಾಗಿವೆ ಅತ್ತೆ, ಮಾವ ಮುಂತಾದ ಪದಗಳ ಬದಲು ಆಂಟಿ, ಅಂಕಲ್‌ಗಳು ಬಂದಿವೆ. ಈ ಇಂಗ್ಲಿಶ್ ಎರಡು ಪದಗಳು ಕನ್ನಡದ ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ ದೊಡ್ಡಪ್ಪ ಪದಗಳ ಬಳಕೆಯನ್ನು ತಮ್ಮಲೇ ಸೇರಿಸಿಕೊಂಡಿವೆ. ಇಂತಹ ನಿದರ್ಶನಗಳು ಸರಳವಾಗಿ ಕಂಡರೂ ನಮ್ಮ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಸೂಚಕಗಳಾಗಿವೆ. ಭಾಷೆಯ ಪದಕೋಶ ತಾನೇ ಸಾಮಾಜಿಕ ಬದಲಾವಣೆಗೆ ಕಾರಣವಾಗದಿದ್ದರೂ ಆಗಿರುವ ಬದಲಾವಣೆಗಳು ಪದಕೋಶದಲ್ಲಿ ಸೂಚಿತವಾಗುತ್ತವೆ. ಆದ್ದರಿಂದ ಕನ್ನಡ ಸಮಾಜದಲ್ಲಿ ಆಗಿರುವ ವ್ಯತ್ಯಾಸಗಳನ್ನು ಈ ಪದಕೋಶ ಸೂಚಕಗಳ ಮೂಲಕ ಗ್ರಹಿಸುವುದು ಸಾಧ್ಯ. ದೇಶ್ಯ ಪದಗಳು ಬಳಕೆಯಿಂದ ತಪ್ಪಿ ಹೋಗುವ ಪ್ರಕ್ರಿಯೆ ಬಗೆಗೆ ಹಲವರು ಹಪಹಪಿಸುತ್ತಾರೆ. ಅವರ ಆತಂಕಕ್ಕೆ ಹಲವು ಕಾರಣಗಳಿವೆ. ಆದರೆ ಕೇವಲ ಆತಂಕ ವ್ಯಕ್ತಪಡಿಸುವುದರಿಂದ ಅಥವಾ ಅಂತಹ ಪದಗಳನ್ನು ಪ್ರಜ್ಞಾಪೂರ್ವಕವಾಗಿ ಎಚ್ಚರಿಕೆಯಿಂದ ಮರಳಿ ಬಳಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್