ಚಳುವಳಿ, ಹೋರಾಟ ಮುಂತಾದ ಪದಗಳು ಯಾವ ಅರ್ಥವನ್ನೇ ಸೂಚಿಸಲಿ ಅವು ಸಾಮಾಜಿಕವಾಗಿ ಅಸ್ತಿತ್ವ ಪಡೆದುಕೊಳ್ಳಲು ಕಾರಣವಾಗುವ ಸಂದರ್ಭಗಳನ್ನು ಗಮನಿಸಿದರೆ ಒಂದು ನಿರ್ದಿಷ್ಟ ಸಾಮಾಜಿಕ ಚಹರೆಗೆ ಆಘಾತಕಾರಿಯಾದ ಸನ್ನಿವೇಶಗಳು ಮೂಡಿದ್ದು, ಅದರ ನಿವಾರಣೆಗೆ, ಅದರ ಪರಿಹಾರಕ್ಕೆ ಈ ಚಳುವಳಿಗಳು ಕಾರ್ಯಪ್ರವೃತವಾಗಿರುತ್ತವೆ. ಏಕೀಕರಣದ ಅನಂತರದಲ್ಲಿ ನಡೆವ ಕನ್ನಡ ಪರ ಚಳುವಳಿಗಳನ್ನು ಮತ್ತು ಅವುಗಳ ತಾತ್ವಿಕ ಚೌಕಟ್ಟನ್ನು ವಿಶ್ಲೇಷಿಸುವುದು ಈ ಅಧ್ಯಾಯದ ಗುರಿ.

ಹಾಗೆ ನೋಡಿದರೆ ಕೆಲವರು ಗ್ರಹಿಸುವಂತೆ ಏಕೀಕರಣವೆಂಬುದೇ ನಿಡುಗಾಲದ ಚಳುವಳಿಯ ಫಲಿತಾಂಶ. ಆದರೆ ನಾವೀಗಾಗಲೇ ಗಮನಿಸಿರುವಂತೆ ರಾಜ್ಯ ಪುನರ್ವಿಂಗಡನೆಯಿಂದಾದ ಏಕೀಕರಣ ಅಥವಾ ಕರ್ನಾಟಕ ರಾಜ್ಯ ನಿರ್ಮಾಣ, ಏಕೀಕರಣದ ಪರವಾಗಿದ್ದ ಚಳುವಳಿಯ ಫಲಿತ ಎನ್ನುವುದಕ್ಕಿಂತ ಅದೊಂದು ರಾಜಕೀಯ ನಿರ್ಧಾರದ ಪರಿಣಾಮ ಆಗಿದೆ. ಅದರರ್ಥ ಈ ಚಳುವಳಿಯ ಪಾತ್ರವೇನೂ ಇಲ್ಲವೆಂದಲ್ಲ. ಆಡಳಿತ ವರ್ಗ ತನ್ನ ಅಪೇಕ್ಷಿತ ನಿರ್ಧಾರಗಳನ್ನು ನಿರ್ಣಯಗಳನ್ನು ಜಾರಿಗೆ ಕೊಡುವಾಗ ತನ್ನ ಸಮರ್ಥನೆಗಾಗಿ ಇಂತಹ ಚಳುವಳಿಗಳನ್ನು ಬಳಸಿಕೊಳ್ಳುತ್ತದೆ. ಕಳೆದ ಐವತ್ತು ವರ್ಷಗಳಲ್ಲಿ ಇಂತಹ ಪ್ರಸಂಗಗಳನ್ನು ನಾವು ಗಮನಿಸಬಹುದು. ೧೯೫೬ಕ್ಕೆ ಮೊದಲೇ ಮದ್ರಾಸ್ ಪ್ರಾಂತ್ಯದಿಂದ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಚಳುವಳಿಯೊಂದು ನಡೆಯುತ್ತಿತ್ತು. ಆಗಿನ ದಾಖಲೆಗಳನ್ನು ಪರಿಶೀಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲೇ ಈ ಭೂಭಾಗವನ್ನು ಆಂಧ್ರಪ್ರದೇಶಕ್ಕೆ (ಆಗಿನ್ನೂ ಅದು ನಿರ್ಮಾಣವಾಗದಿದ್ದರೂ) ಸೇರಿಸಬೇಕು ಎಂದು ಒತ್ತಾಯ ಮಾಡುವ ಚಳುವಳಿಯೂ ನಡೆಯುತ್ತಿತ್ತು. ಈ ಎರಡು ಒತ್ತಾಯಗಳಲ್ಲಿ ಸೀಡೆಡ್ ಜಿಲ್ಲೆಗಳಲ್ಲಿ ಒಂದಾಗಿದ್ದ ಬಳ್ಳಾರಿಯನ್ನು ಕರ್ನಾಟಕಕ್ಕೆ ಅಂದರೆ ಅಂದಿನ ಹಳೆಯ ಮೈಸೂರಿಗೆ ಸೇರಿಸಿ ಅನಂತಪುರ ಕರ್ನೂಲುಗಳನ್ನು ಹೈದ್ರಾಬಾದ್ ಪ್ರಾಂತ್ಯದಲ್ಲಿ ಸೇರಿಸಲಾಯಿತು. ಈ ನಿರ್ಣಯದಿಂದ ಕರ್ನಾಟಕಕ್ಕೆ ನ್ಯಾಯ ದೊರಕಿಲ್ಲ ಎಂಬ ಮಾತು ಈಗ ತೀವ್ರತೆಯನ್ನು ಕಳೆದುಕೊಂಡಿದ್ದರೂ ಒಂದು ಹಂತದಲ್ಲಿ ಕನ್ನಡಪರ ಚಳುವಳಿಗಳ ಕಾರ್ಯಸೂಚಿಯಲ್ಲಿ ಆಂಧ್ರಕ್ಕೆ ಸೇರಿದ ಕನ್ನಡ ಪ್ರದೇಶಗಳು ಮರಳಿ ಕರ್ನಾಟಕ್ಕೆ ಸೇರಬೇಕೆಂಬ ಕೂಗು ಸೇರಿತ್ತು. ಈ ವಿವರಣೆ ಇಲ್ಲಿ ಅಗತ್ಯ. ಏಕೆಂದರೆ ಕನ್ನಡ ಪರ ಚಳುವಳಿ ಎಂದರೆ ಅದು ಭೌಗೋಳಿಕ ನೆಲೆಯಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಚಳುವಳಿಯಾಗಿಯೇ ಮೊದಲು ಮೈದಳೆದದ್ದು ಇದರಿಂದ ಗೊತ್ತಾಗುತ್ತಿದೆ.

ಕನ್ನಡವೆಂಬುದು ದೇಶ, ಜನ ಮತ್ತು ಭಾಷೆ ಹೀಗೆ ಮೂರು ಸಂಗತಿಗಳನ್ನು ಪ್ರತಿನಿಧಿಸುತ್ತದೆ. ದೇಶವಾಚಿಯಾಗಿದ್ದಾಗ ಕರ್ನಾಟಕವನ್ನು, ಜನವಾಚಿಯಾದಾಗ ಕನ್ನಡಿಗರನ್ನು, ಭಾಷಾವಾಚಿಯಾದ್ದಾಗ ಕನ್ನಡವನ್ನು ಸೂಚಿಸುತ್ತದೆ. ಕನ್ನಡಪರ ಚಳುವಳಿಗಳು ಈ ಮೂರರಲ್ಲಿ ಯಾವುದೇ ಒಂದನ್ನು ತಮ್ಮ ಮುಖ್ಯ ಗುರಿ ಎಂದು ಹೇಳುತ್ತಿದ್ದರೂ ಉಳಿದೆರಡು ಒಂದಲ್ಲೊಂದು ರೀತಿಯಲ್ಲಿ ಸಂಬಂಧವನ್ನು ಪಡೆದುಕೊಂಡೇ ಬಿಟ್ಟಿರುತ್ತವೆ. ಈ ಚಳುವಳಿಗಳನ್ನು ವಿಶ್ಲೇಷಿಸುವಾಗ ಈ ಬೆರೆಯುವಿಕೆಯನ್ನು ಗಮನಿಸುವುದು ಅಗತ್ಯ.

೧೯೫೬ರ ಏಕೀಕರಣ ಘಟನೆ ಕನ್ನಡಿಗರನ್ನು ತಮ್ಮ ಬಹುಕಾಲದ ಆಸೆ ಪೂರೈಸಿತೆಂಬ ಉದ್ದೇಶ ಈಡೇರಿದ ಸಂತೃಪ್ತ ಭಾವನೆಯಲ್ಲಿ ಉಳಿಸಲಿಲ್ಲ. ಅಲ್ಲಿಂದ ಮೊದಲಾಗಿ ಈ ಐವತ್ತು ವರ್ಷಗಳಲ್ಲಿ ಒಂದಿಲ್ಲೊಂದು ಬಗೆಯ ಕನ್ನಡ ಪರ ಹೋರಾಟಗಳು ರಾಜ್ಯವ್ಯಾಪ್ತಿಯಾಗಿ ಇಲ್ಲವೇ ಪ್ರದೇಶ ವ್ಯಾಪ್ತಿಯಾಗಿ ನಡೆಯುತ್ತಲೇ ಬಂದಿವೆ. ಈ ಎಲ್ಲ ಚಳುವಳಿಗಳ ಪ್ರತ್ಯೇಕ ಸಮೀಕ್ಷೆ ಇಲ್ಲಿನ ಗುರಿಯಲ್ಲ. ಅವುಗಳ ತಾತ್ವಿಕತೆ, ಕಾರ್ಯವಿಧಾನ ಮತ್ತು ಸಮಾಜೋಭಾಷಿಕ ಆಯಾಮಗಳನ್ನು ಮಾತ್ರ ಇಲ್ಲಿ ಗಮನಿಸಲಾಗುತ್ತದೆ. ಐವತ್ತಾರರ ಸುಮಾರಿನಲ್ಲೇ ಕನ್ನಡ ಚಳುವಳಿ ಎಂಬ ಹೋರಾಟರಂಗ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿತ್ತು. ಪ್ರಗತಿಶೀಲ ಸಾಹಿತ್ಯ ವಲಯದಲ್ಲಿ ಕ್ರಿಯಾಶೀಲರಾಗಿರುವ ಹಲವು ಬರಹಗಾರರು, ಸಾಮಾಜಿಕ ಕಾರ್ಯ ಕರ್ತರು ಈ ಚಳುವಳಿಯಲ್ಲಿ ಭಾಗಿಗಳಾಗಿದ್ದರು. ಕನ್ನಡಕ್ಕೆ ಅನ್ಯಾಯವಾಗದಂತೆ ಹೋರಾಡುವುದು ಈ ಚಳುವಳಿಯ ಮುಖ್ಯಗುರಿ. ಅವರ ಹೋರಾಟದ ಕೆಲವು ನೆಲೆಗಳನ್ನು ನೋಡೋಣ. ಈ ಚಳುವಳಿಯ ನೇತಾರರಲ್ಲಿ ಒಬ್ಬರಾಗಿದ್ದ ಖ್ಯಾತ ಕನ್ನಡ ಕಾದಂಬರಿಕಾರ ಅನಕೃ ಅವರು ಬೆಂಗಳೂರಿನ ಕೋಟೆ ಮೈದಾನದ ಶ್ರೀರಾಮೋತ್ಸವದ ಸಂಗೀತ ಕಛೇರಿಗಳಲ್ಲಿ ತಮ್ಮ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಎರಡು ಮುಖ್ಯ ಬೇಡಿಕೆಗಳುಅಲ್ಲಿಇದ್ದಂತೆ ತೋರುತ್ತವೆ. ಒಂದು: ಹೀಗೆ ಕರ್ನಾಟಕದ ರಾಜ್ಯಧಾನಿಯಲ್ಲಿ ಸನ್ಮಾನಿತರಾಗಿ ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶ ಕನ್ನಡ ಸಂಗೀತಗಾರರಿಗೆ ಸಿಗಬೇಕು. ಎರಡು: ಅನ್ಯ ಭಾಷೆಯ ಸಂಗೀತಗಾರರು ತಮ್ಮ ಕಛೇರಿಗಳಲ್ಲಿ ಕನ್ನಡ ಕೃತಿಗಳನ್ನು ಪ್ರಸ್ತುತ ಪಡಿಸಬೇಕು ಎಂಬುದು. ಈ ಬೇಡಿಕೆಗಳನ್ನು ಇಟ್ಟುಕೊಂಡು ಎಷ್ಟೋ ಕಛೇರಿಗಳಲ್ಲಿ ಘೋಷಣೆ ಮಾಡಿ ಕಪ್ಪು ಬಾವುಟ ಪ್ರದರ್ಶಿಸಿ ಅಡ್ಡಿ ಉಂಟುಮಾಡಿದ್ದಿದೆ. ಈ ಬೇಡಿಕೆಗಳ ಸ್ವರೂಪವನ್ನು ಗಮನಿಸೋಣ. ಕನ್ನಡ ಸಂಗೀತಗಾರರಿಗೆ ಅವಕಾಶ ಕಲ್ಪಿಸಬೇಕೆಂಬುದು ಕನ್ನಡದ ಪರ ಎಂಬುದಕ್ಕಿಂತ ಕನ್ನಡಿಗರ ಪರ ಎಂದು ತಿಳಿಯಬೇಕಾಗುತ್ತದೆ. ಏಕೆಂದರೆ ಹೀಗೆ ಯಾರ ಪರವಾಗಿ ಈ ಘೋಷಣೆಗಳು ಇದ್ದವೋ ಆ ಸಂಗೀತಗಾರರು ಕೂಡ ತಮ್ಮ ಕಛೇರಿಗಳಲ್ಲಿ ಕನ್ನಡೇತರ ಕೃತಿಗಳನ್ನೇ ಪ್ರಧಾನವಾಗಿ ಪ್ರಸ್ತುತಿ ಪಡಿಸು ತ್ತಿದ್ದರು. ಇದು ಭಾಷೆಯ ಪ್ರಶ್ನೆಯಾಗಿರದೆ ಆವರೆಗೆ ಬೆಳೆದು ಬಂದಿದ್ದ ಸಂಗೀತ ಪರಂಪರೆಯ ಸ್ವರೂಪವನ್ನು ಸೂಚಿಸುತ್ತದೆ. ಹಾಗೆ ನೋಡಿದರೆ ಎರಡನೆಯ ಬೇಡಿಕೆಯು ಈ ಸಂಗೀತ ಪರಂಪರೆಯನ್ನು ಪುನಾರಚಿಸಲು ಒತ್ತಾಯ ಮಾಡು ವಂತಿದೆ. ಕರ್ನಾಟಕ ಸಂಗೀತದ ಪ್ರವರ್ತಕರೆಂದು ಪುರಂದರದಾಸರನ್ನು ಗುರುತಿಸುವು ದರಿಂದ ಕನ್ನಡ ಕೇಂದ್ರಿತವಾದ ಒಂದು ಸಂಗೀತ ಪರಂಪರೆಯನ್ನು ರೂಪಿಸಬೇಕೆಂಬ ಉದ್ದೇಶ ಅಲ್ಲಿದೆ. ಇದು ಕನ್ನಡಿಗರ ಕಳೆದುಹೋದ ಪರಂಪರೆಯೊಂದನ್ನು ಉತ್ಖನನ ಮಾಡುವ ಅಥವಾ ಮರಳಿಕೊಡುವ ಬಯಕೆಯನ್ನು ಹೊಂದಿದೆ. ಹಾಗೆ ನೋಡಿದರೆ ಏಕೀಕರಣ ಚಳುವಳಿಯ ಒಂದು ಮುಂಚಾಚಾಗಿ ಈ ಹೋರಾಟ ಕಾಣುತ್ತದೆ. ಅನಕೃ ಅವರು ಈ ಹಿಂದೆಯೂ ಇಂತಹ ಪ್ರಯತ್ನಗಳನ್ನು ಹೋರಾಟದ ನೆಲೆಯಿಲ್ಲ ದೆಯೂ ಮಾಡಿದ್ದರು. ಆ ಹೊತ್ತಿಗೆ ಬಹುಖ್ಯಾತರಾಗಿದ್ದ ಉತ್ತರಾದಿ ಸಂಗೀತದ ಮಹಾನ್ ಗಾಯಕರಾಗಿದ್ದ ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಭೀಮ್‌ಸೇನ್ ಜೋಶಿ ಮುಂತಾದವರನ್ನು ಅವರ ಸಂಗೀತ ಪ್ರಸ್ತುತಿಯಲ್ಲಿ ಕನ್ನಡದ ವಚನ ಕೀರ್ತನೆಗಳನ್ನು ಸೇರಿಸಿಕೊಳ್ಳಲು ಪ್ರೇರೇಪಿಸಿ ಯಶಸ್ವಿಯಾಗಿದ್ದರು. ಆದ್ದರಿಂದ ಈ ಚಳುವಳಿಯ ಉದ್ದೇಶಕ್ಕೆ ಕನ್ನಡ ನಾಡಿನ ಸಂಗೀತ ಕಲಾವಿದರ ಅವಕಾಶ ವಿಸ್ತರಣೆಯ ಉದ್ದೇಶವಿದೆ ಎಂದು ತೋರಿದರೂ ವಿಶಾಲಾರ್ಥದಲ್ಲಿ ಕನ್ನಡ ಕೇಂದ್ರಿತ ಸಂಗೀತ ಪರಂಪರೆಯೊಂದನ್ನು ರೂಪಿಸುವುದು ಮುಖ್ಯಗುರಿಯಾಗಿತ್ತು ಎಂದು ಗ್ರಹಿಸಬೇಕು. ಹೀಗೆ ಮಾಡುವ ಮೂಲಕ ಕನ್ನಡ ಭಾಷೆಯ ಸಂವೇದನೆಯ ಬಹುಳತೆಯನ್ನು ಮಂಡಿಸಲು ಸಾಧ್ಯವಾಗುವುದೆಂದು ಅನಕೃ ತಿಳಿದಂತೆ ತೋರುತ್ತದೆ.

ಅರವತ್ತರ ಸುಮಾರಿನ ಈ ಕನ್ನಡಪರ ಚಳುವಳಿಗಳು ಒಂದು ಕಡೆ ಕನ್ನಡಿಗರ ಅವಕಾಶಗಳನ್ನು ವಿಸ್ತರಿಸಬೇಕೆಂಬ, ಕಾಯ್ದುಕೊಳ್ಳಬೇಕೆಂಬ ಅಪೇಕ್ಷೆಯನ್ನುಹೊಂದಿ ದ್ದವು. ಇನ್ನೊಂದೆಡೆ ಕನ್ನಡಪ್ರಜ್ಞೆಯನ್ನು ಜಾಗ್ರತಗೊಳಿಸುವ ಉದ್ದೇಶವನ್ನು ಹೊಂದಿದ್ದವು. ಕನ್ನಡಪ್ರಜ್ಞೆಯ ಬಗೆಗೆ ಜಾಗೃತಿ ಮೂಡಿಸಲು ಏಕೀಕರಣದ ಸಂದರ್ಭದಲ್ಲಿ ಅನುಸರಿಸಿದ ಚಾರಿತ್ರಿಕ ಮರುಗಳಿಕೆಯ ವಿಧಾನವನ್ನೇ ಈಗಲೂ ಮುಂದುವರೆಸಲಾಯಿತು. ಅಂದರೆ ಕರ್ನಾಟಕ ಪರಂಪರೆಯ ಸಾಧನೆಗಳನ್ನು ಗುರುತಿಸಿ ಅವುಗಳ ಬಗೆಗೆ ಅಭಿಮಾನವನ್ನು ಮೂಡಿಸುವ ಮೂಲಕ ಕನ್ನಡ ಪ್ರಜ್ಞೆಯನ್ನು ನೆಲೆಗೊಳಿಸಬಹುದು ಎಂಬ ನಂಬಿಕೆ ಇಲ್ಲಿದೆ. ವಾಸ್ತವವಾಗಿ ಕಳೆದ ಐವತ್ತು ವರ್ಷದಲ್ಲಿ ಈ ನಂಬಿಕೆ ಸಂಪೂರ್ಣವಾಗಿ ಕಳೆದುಹೋಗಿಲ್ಲವಾದರೂ ತನ್ನ ಮೊನಚನ್ನು ಕಡಿಮೆ ಮಾಡಿಕೊಂಡಿದೆ. ಏಕೆಂದರೆ ಕನ್ನಡ ಪರಂಪರೆಯನ್ನು ಉತ್ಖನನ ಮಾಡಿದಾಗ ಅಥವಾ ಪುನಾರಚಿಸಿದಾಗ ಅದರಲ್ಲಿ ಸಮಕಾಲೀನ ಜೀವನ ಕ್ರಮದ ಅಸಮಾನತೆಯ ನೆಲೆಗಳಿಗೆ ಕಾರಣವಾದ ಸಂಗತಿಗಳು ಕೂಡಾ ಕಂಡು ಬಂದಿವೆ. ಹೀಗಿರುವಾಗ ಚಾರಿತ್ರಿಕ ಮರುಗಳಿಕೆಯನ್ನು ಸಾರಾಸಗಟಾಗಿ ಒಪ್ಪಿಕೊಳ್ಳು ವುದು ಸಾಧ್ಯವಾಗುತ್ತಿಲ್ಲ. ಎಂಟನೇ ದಶಕದ ನಂತರದ ಬಂಡಾಯ, ದಲಿತ ಮತ್ತು ಸ್ತ್ರೀವಾದಿ ಚಿಂತನೆಗಳು ಈ ಪ್ರಶ್ನೆಯನ್ನು ಮುಂಚೂಣಿಗೆ ತಂದಿವೆ. ಆದರೂ ಕನ್ನಡ ಚಳುವಳಿಯು ತನ್ನ ವಿವಿಧ ರೂಪಗಳಲ್ಲಿ ಕರ್ನಾಟಕ ಪರಂಪರೆಯ ಉಜ್ವಲ ಲಕ್ಷಣಗಳನ್ನು ವೈಭವೀಕರಿಸುವ ಪ್ರವೃತ್ತಿಯನ್ನು ಮುಂದುವರೆಸಿದೆ. ಆಳುವ ವರ್ಗದ ತಾತ್ವಿಕತೆಯೂ ಇದೇ ಆಗಿರುವುದರಿಂದ ಈಗ ಇಂತಹ ಚಳುವಳಿಗಳು ವ್ಯವಸ್ಥೆಯ ವಿರೋಧಿಗಳಾಗುವ ಬದಲು ಸಹಯಾತ್ರಿಕರಾಗಿಬಿಟ್ಟಿವೆ. ಕರ್ನಾಟಕ ರಾಜ್ಯಸಂಬಂಧದ ಯಾವುದೇ ಉತ್ಸವಗಳನ್ನು ಗಮನಿಸಿದರೆ ಈ ಸಹಯೋಗದ ನೆಲೆಗಳು ಸ್ಪಷ್ಟವಾಗಿ ಗೋಚರಿಸುತ್ತದೆ.

ಆರನೇ ದಶಕದ ಮತ್ತೊಂದು ಕನ್ನಡ ಚಳುವಳಿ ಎಂದರೆ ಹಿಂದಿ ವಿರೋಧಿ ನಿಲುವನ್ನು ಪ್ರತಿಪಾದಿಸುವ ಚಳುವಳಿ. ಈ ಹಿಂದೆಯೇ ಗುರುತಿಸಿದಂತೆ ೧೯೫೬ರ ವೇಳೆಗೆ ಇಂಗ್ಲಿಶ್ ಆಡಳಿತದ ವಲಯದಿಂದ ಹಿಂದೆ ಸರಿಯಬೇಕೆಂಬ ರಾಜ್ಯಾಂಗದ ನಮೂದನ್ನು ದಕ್ಷಿಣ ರಾಜ್ಯಗಳಲ್ಲಿ ವಿರೋಧಿಸಲಾಯಿತು. ಈ ಚಳುವಳಿಯ ತೀವ್ರತೆ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯಲ್ಲಿ ಕಾಣಿಸಿಕೊಂಡಿತು. ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳು ಈ ಚಳುವಳಿಯ ಮುಂಚೂಣಿಯಲ್ಲಿದ್ದರು. ಹಿಂದಿ ವಿರೋಧವು ಕೆಲವರಿಗೆ ಭಾರತ ಒಕ್ಕೂಟದ ಬಂಧವನ್ನು ಒಡೆಯುವ ಹುನ್ನಾರವಾಗಿ ಕಂಡಿತ್ತು. ಆದರೆ ಈ ಚಳುವಳಿಯ ಒಳಗೆ ಅಂತರ್ಗತವಾಗಿದ್ದ ವೈರುಧ್ಯ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿಂದಿಯನ್ನು ವಿರೋಧಿಸುವಾಗ ಯಾವುದರ ಪರವಾಗಿ ಇರಬೇಕು ಎಂಬ ಪ್ರಶ್ನೆ ಮುಖ್ಯ. ಹಿಂದಿಯ ಬದಲು ಕನ್ನಡ ಎನ್ನುವುದಕ್ಕಿಂತ ಹಿಂದಿಯ ಬದಲು ಇಂಗ್ಲಿಶ್ ಎಂಬುದು ಮುಖ್ಯವಾಗಿದೆ. ಹಾಗೆ ನೋಡಿದರೆ ಇದು ಕನ್ನಡಿಗರು ಇಂಗ್ಲಿಶ್ ವಿಸ್ತರಣೆಯ ಪರವಾಗಿ ಮಾಡಿದ ಚಳುವಳಿಯೆಂದು ತೋರುತ್ತದೆ.

ಹಿಂದಿಯನ್ನು ಶಿಕ್ಷಣ ಮತ್ತು ಆಡಳಿತ ವಲಯಗಳಲ್ಲಿ ಇಂಗ್ಲಿಶ್‌ನ ಬದಲಿಗೆ ಬೆಳೆಸುವುದು ಕರ್ನಾಟಕದಂತಹ ರಾಜ್ಯಗಳಿಗೆ ಅಪೇಕ್ಷಣಿಯವಾಗಿ ತೋರಲಿಲ್ಲ. ಹಾಗಾಗಿ ಹಿಂದಿಯ ಹೇರಿಕೆಯನ್ನು ವಿರೋಧಿಸಿದರು. ಆದರೆ ಶಿಕ್ಷಣದಲ್ಲಾಗಲೀ ಆಡಳಿತದಲ್ಲಾಗಲೀ ಕನ್ನಡವನ್ನು ಸಾರ್ವಭೌಮ ಭಾಷೆಯನ್ನಾಗಿ ಉಳಿಸಿಕೊಳ್ಳುವ ಯತ್ನಗಳು ನಡೆಯಲಿಲ್ಲ. ೧೯೬೫ಕ್ಕಿಂತ ಹಿಂದೆ ಇದ್ದ ಪರಿಸ್ಥಿತಿಯೇ ಮುಂದುವರಿಯ ಬೇಕೆಂಬ ಒತ್ತಾಯಕ್ಕೆ ಪ್ರಾಶಸ್ತ್ಯ ಸಿಕ್ಕಿತ್ತು. ಕನ್ನಡಕ್ಕಿದ್ದ ಅವಕಾಶ ಇದರಿಂದ ತಪ್ಪಿಹೋಯಿತು.

ಈ ಸುಮಾರಿನಲ್ಲಿ ರಾಷ್ಟ್ರ ಮತ್ತು ರಾಜಕಾರಣಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆಗಳು ಮೂಡತೊಡಗಿದ್ದವು. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ಇಲ್ಲದ ಆಡಳಿತಗಳು ಜಾರಿಗೆ ಬಂದಿದ್ದವು. ಕರ್ನಾಟಕದಲ್ಲಿ ಇಷ್ಟು ತೀವ್ರವಾದ ಬದಲಾವಣೆಗಳು ಆಗಿರಲಿಲ್ಲ. ಆದರೆ ಈ ರಾಜ್ಯದ ಬೌದ್ಧಿಕ ಚಿಂತನೆಗಳನ್ನು ನಿರ್ದೇಶಿಸುತ್ತಿದ್ದ ತಾತ್ವಿಕತೆ ಸಮಾಜವಾದವಾಗಿತ್ತು. ಅದರಲ್ಲೂ ಲೋಹಿಯಾ ಪ್ರಣೀತ ಮಾದರಿಯ ಸಾರ್ವಜನಿಕವಾದ ಸಿದ್ಧಾಂತಗಳು ಬಹು ಚರ್ಚಿತವಾಗುತ್ತಿದ್ದವು. ಲೋಹಿಯಾ ತಮ್ಮ ಪ್ರಖ್ಯಾತ ವ್ಯಾಖ್ಯೆಯೊಂದರಲ್ಲಿ ಭಾರತದ ಸಮಾಜದಲ್ಲಿ ಅಸಮಾನತೆ ಉಂಟಾಗಲು ಮತ್ತು ಮುಂದುವರೆಯಲು ಕಾರಣವಾದ ಮೂರು ಸಂಗತಿಗಳ ಪಟ್ಟಿ ಮಾಡುತ್ತ ಅವು ಜಾತಿ, ಸಂಪತ್ತು ಮತ್ತು ಇಂಗ್ಲಿಶ್ ಎಂದು ಹೇಳಿದ್ದರು. ಆದ್ದರಿಂದ ಅಸಮಾನತೆಗೆ ಕಾರಣವಾಗುವ ಇಂಗ್ಲಿಶ್ ಭಾಷೆಯ ಪರವಾಗಿ ಇರುವುದು ಸಮಾಜವಾದಿಗಳಿಗೆ ತಾರ್ಕಿಕವಾಗಿ ಸಾಧ್ಯವಿರಲಿಲ್ಲ. ಆದರೆ ಹಿಂದಿ ಭಾಷೆಯನ್ನು, ಈ ಅಸಮಾನತೆಯನ್ನು ಪ್ರೇರೇಪಿಸುವ ತ್ರಿವಳಿಗಳ ಜೊತೆ ಎಲ್ಲಿ ಇರಿಸಬೇಕು ಎಂಬುದು ಅಸ್ಪಷ್ಟವಾಗಿತ್ತು. ಹೀಗಾಗಿ ಅವರು ಕನ್ನಡ ಮತ್ತು ಇಂಗ್ಲಿಶ್ ಇವುಗಳ ಸಂಬಂಧವನ್ನು ಪರಸ್ಪರ ವಿರೋಧಿ ನೆಲೆಯಲ್ಲಿ ಪರಿಗಣಿಸುವ ಬದಲು ಪೂರಕ ನೆಲೆಯಲ್ಲೇ ಮಂಡಿಸಿದರು. ಆಗ ಹಿಂದಿಯ ಪ್ರಶ್ನೆ ಮುಂಚೂಣಿಗೆ ಬರಲಿಲ್ಲ. ಆ ಸರಿಸುಮಾರಿನಲ್ಲಿ ಯು.ಆರ್.ಅನಂತಮೂರ್ತಿಯವರು ಇಂಗ್ಲಿಶ್ ಬ್ರಾಹ್ಮಣ ಕನ್ನಡ ಶೂದ್ರ ಎನ್ನುವ ಲೇಖನವನ್ನು ಬರೆದು ತಮ್ಮ ವಿಚಾರಗಳನ್ನು ಮಂಡಿಸಿದರು. ಆ ಸುಮಾರಿಗೆ ಅವರು ಇಂಗ್ಲೆಂಡ್‌ನಲ್ಲಿ ಅಧ್ಯಯನ ಮಾಡುತ್ತಿದ್ದರು. ಡಿ.ಎಚ್.ಲಾರೆನ್ಸ್, ಸಂವೇದನೆಯ ವಿಘಟನೆಗೆ ಕಲ್ಪಿಸಿಕೊಂಡ ದೇಹ ಮತ್ತು ಮನಸ್ಸುಗಳ ನೆಲೆಯನ್ನು ಇಂಗ್ಲಿಶ್ ಮತ್ತು ಕನ್ನಡಗಳ ಸಂಬಂಧಕ್ಕೆ ಅನಂತಮೂರ್ತಿಯವರು ಪರಿವರ್ತಿಸಿಕೊಂಡರು. ಇಂಗ್ಲಿಶ್ ವಿಚಾರಗಳ ಬೌದ್ಧಿಕತೆಯ, ಅಮೂರ್ತತೆಯ ನೆಲೆಯಲ್ಲಿರುವ ಭಾಷೆಯಾದರೆ ಕನ್ನಡ ಭಾವನೆಗಳ, ಸ್ವಾನುಭವದ ಮೂರ್ತತೆಯ ನೆಲೆಯ ಭಾಷೆಯೆಂದು ತೋರಿತು. ಬ್ರಾಹ್ಮಣ ಮತ್ತು ಶೂದ್ರ ಎಂಬ ಪದಗಳು ಜಾತಿವಾಚಿ ಆಗುವ ಬದಲು ಲೋಕಗ್ರಹಿಕೆಯ ಎರಡು ಮಾದರಿಗಳೆಂದು ಮಂಡಿಸಿ ದರು. ಈಗ ಈ ಎರಡು ನೆಲೆಗಳ ನಡುವೆ ಶತ್ರುತ್ವಕ್ಕಿಂತ ಒಂದು ಇನ್ನೊಂದನ್ನು ಬಿಟ್ಟಿರಲಾರದ ಪೂರಕತೆಯ ನೆಲೆ ಮುಖ್ಯವಾಯಿತು. ಹಿಂದಿ ವಿರೋಧ ಹಿಂದಕ್ಕೆ ಸರಿದು ಕನ್ನಡಪ್ರಜ್ಞೆಯಲ್ಲಿ ಇಂಗ್ಲಿಶಿನ ಅನಿವಾರ್ಯತೆಯನ್ನು ಬೇರೊಂದು ರೀತಿಯಿಂದ ನೆಟ್ಟ ಪರಿಯಿದು. ಈಗ ಇಂಗ್ಲಿಶ್ ಕನ್ನಡಕ್ಕಿಂತ ಬೇರೆ; ಅದರೆ ಕನ್ನಡ ವಿರೋಧಿಯಲ್ಲ. ಲೋಹಿಯಾ ಮಂಡಿಸಿದ ತ್ರಿವಳಿ ಕಲ್ಪನೆಯಲ್ಲಿ ಇಂಗ್ಲಿಶ್‌ಗೆ ಇದ್ದ ನಿರ್ಣಾಯಕ ಸ್ಥಾನವನ್ನು ನಿರಾಕರಿಸದೆಯೂ ಕನ್ನಡ ಬುದ್ಧಿ ಜೀವಿಗಳ ವರ್ಗ ಮರುವ್ಯಾಖ್ಯಾನಿಸಿ ಬಿಟ್ಟಿದೆ.

ಅನಂತಮೂರ್ತಿಯವರ ಈ ತರ್ಕ ಮಂಡನೆಯಾಗುವ ಸ್ವಲ್ಪ ಮೊದಲು, ೧೯೬೪ರಲ್ಲಿ, ಅಮೆರಿಕಾದ ಪ್ರೊ. ವಿಲಿಯಂ ಬ್ರೈಟ್ ಮೈಸೂರು ಕನ್ನಡದ ಜಾತಿ ಪ್ರಭೇದಗಳನ್ನು ಕುರಿತ ಒಂದು ಅಧ್ಯಯನ ಪ್ರಬಂಧವನ್ನು ಮಂಡಿಸಿದರು. ಆ ಲೇಖನ ಕನ್ನಡಕ್ಕೂ ಅನುವಾದಗೊಂಡು ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಲೇಖನದಲ್ಲಿ ಕನ್ನಡ ಬಳಕೆಯು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ವರ್ಗಗಳಲ್ಲಿ ಯಾವ ಬಗೆಯ ವ್ಯತ್ಯಾಸಗಳನ್ನು ಹೊಂದಿದೆ ಎಂಬ ಅಂಶವನ್ನು ಗುರುತಿಸಲು ಉದ್ದೇಶಿತವಾಗಿತ್ತು. ಈ ಪತ್ರಿಕೆಯ ವಿವರಗಳ ಪರಿಶೀಲನೆಗೆ ಮೊದಲು ಇಂತಹ ವೈಚಾರಿಕ ಆಕೃತಿಯೊಂದು ತಲೆದೋರಿದ ಕ್ರಮವನ್ನು ಅರಿಯುವುದು ಮುಖ್ಯ. ಈ ವೈಚಾರಿಕ ನೆಲೆಯನ್ನು ಸಮಕಾಲೀನ ರಾಜಕೀಯ ಗ್ರಹಿಕೆಯಿಂದ ಪಡೆದಿದ್ದರೋ ಮಾನವಶಾಸ್ತ್ರಜ್ಞರ ಮತ್ತು ಸಮಾಜಶಾಸ್ತ್ರಜ್ಞರ ಚಿಂತನೆಗಳಿಂದ ಗ್ರಹಿಸಿದರೋ ಸ್ಪಷ್ಟವಾಗಿ ಹೇಳಲಾಗದು. ಆದರೆ ತಮಿಳುನಾಡಿನ ಸಾಮಾಜಿಕ ಚಿಂತನೆಗಳಿಂದ ಈ ಸಂಪ್ರಬಂಧಕ್ಕೆ ಬೇಕಾದ ವೈಚಾರಿಕ ಮಾದರಿಯನ್ನು ಪಡೆದುಕೊಂಡಿರುವ ಸಾಧ್ಯತೆಗಳಿವೆ. ಏಕೆಂದರೆ ಇದೇ ಬಗೆಯ ಅಧ್ಯಯನವನ್ನು ಅಲ್ಲಿನ ಭಾಷಾ ಪರಿಸ್ಥಿತಿಯ ಬಗೆಗೂ ಮಂಡಿಸಲಾಗಿದೆ. ಈ ಅಧ್ಯಯನ ಪ್ರಬಂಧದಲ್ಲಿ ಬ್ರಾಹ್ಮಣೇತರ ಎಂದು ವರ್ಗೀಕರಿಸುವಾಗ ಇಡೀ ಕನ್ನಡ ಸಮಾಜವನ್ನು ಎರಡು ಧ್ರುವಗಳನ್ನಾಗಿ ನೋಡಲಾಗಿದೆ. ಇದರಿಂದ ಈ ಸಮಾಜ ರಚನೆಯ ಎಷ್ಟೋ ಸೂಕ್ಷ್ಮಗಳು ಕೈಗೆ ಸಿಗುವಂತಾಗಿಲ್ಲ. ಆದ್ದರಿಂದ ಅಲ್ಲಿನ ಅಂತಿಮ ನಿರ್ಣಯಗಳು ಮತ್ತೆ ಪರಿಶೀಲನೆಗೆ ಒಳಗಾಗುವ ಅಗತ್ಯವಿದೆ. ಆ ಚರ್ಚೆ ಬೇರೊಂದೆಡೆಗೆ ಇದೆ. ಇಲ್ಲಿ ಮುಖ್ಯವಾದ ಸಂಗತಿ ಇಷ್ಟೇ: ಕನ್ನಡಪ್ರಜ್ಞೆಯನ್ನು ಎರಡು ಪರಸ್ಪರ ಪೂರಕ ನೆಲೆಗಳಲ್ಲಿ ವಿಭಜಿಸಿರುವುದು. ಈ ಎರಡೂ ನೆಲೆಗಳು ಅಪರಿಪೂರ್ಣ ಮತ್ತು ಒಂದು ಇನ್ನೊಂದರ ಅಸ್ತಿತ್ವವನ್ನು ಅಪೇಕ್ಷಿಸುವಂತಿವೆ. ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಈ ಎರಡು ಜಗತ್ತುಗಳಿಗೆ ಕ್ರಮವಾಗಿ ಬುದ್ಧಿ ಮತ್ತು ಭಾವಗಳ ಸಮೀಕರಣ ಮಾಡುವ ಮೂಲಕ ಒಂದು ವೈಚಾರಿಕ ಆಕೃತಿಯನ್ನು ನೆಲೆಗೊಳಿಸಲಾಯಿತು. ಹಿಂದಿ ವಿರೋಧಿ ಚಳುವಳಿಯು ರಾಜಕೀಯ ನೆಲೆಯಲ್ಲಿ ಏನೇ ಅಂತ್ಯ ಕಂಡಿರಲಿ, ಆದರೆ ಕನ್ನಡಪ್ರಜ್ಞೆಯನ್ನು ಹೀಗೆ ವ್ಯಾಖ್ಯಾನಿಸಲು ಆ ಸಂದರ್ಭ ಅನುವು ಮಾಡಿಕೊಟ್ಟಂತೆ ತೋರುತ್ತದೆ. ಈ ಪೂರಕ ನೆಲೆಯ ವಿಘಟನೆ ಮುಂದೆ ಕನ್ನಡ ಸಾಹಿತ್ಯದ ಪ್ರಮುಖ ಚಿಂತನಾಂಶವಾಗಿ ಪರಿಣಮಿಸಿತು.

ಅನಂತರದಲ್ಲಿ ನಡೆದ ಮತ್ತೊಂದು ಚಳುವಳಿ ಎಂದರೆ ಈಗಾಗಲೇ ಮಾಧ್ಯಮಗಳು ಹೆಸರಿಸಿರುವಂತೆ ಖ್ಯಾತವಾದ ಬೂಸಾ ಪ್ರಕರಣ. ಎಲ್ಲ ವಿವರಗಳಿಗೂ ಹೋಗದೆ ಸ್ಥೂಲವಾಗಿ ಆ ಪ್ರಕರಣದ ನೆಲೆಗಳನ್ನು ಮೊದಲು ಗಮನಿಸಬಹುದು. ಶ್ರೀ ದೇವರಾಜು ಅರಸು ಅವರ ಸಂಪುಟದಲ್ಲಿ ಸದಸ್ಯರಾಗಿದ್ದ ಶ್ರೀ ಬಸವಲಿಂಗಪ್ಪನವರು ಕನ್ನಡ ಸಾಹಿತ್ಯವೆಲ್ಲ ನಿರರ್ಥಕ ಅಂಶಗಳಿಂದ ಕೂಡಿದ ಬೂಸಾ ಎಂದು ಹೇಳಿದರೆಂಬ ವರದಿಯನ್ನು ಆಧರಿಸಿ ವ್ಯಾಪಕವಾದ ಪ್ರತಿಭಟನೆಯೊಂದು ನಡೆಯಿತು. ಇಲ್ಲಿ ಮುಂಚೂಣಿಗೆ ಬಂದ ವಾಗ್ವಾದಗಳು ಹೀಗಿವೆ. ಕನ್ನಡ ಭಾಷೆಯಲ್ಲಿ ರಚಿತವಾದ ಸಾಹಿತ್ಯವನ್ನು ಬೂಸಾ ಎಂದು ಹೆಸರಿಸುವ ಮೂಲಕ ನಮ್ಮ ಇಡೀ ಚರಿತ್ರೆಯನ್ನು ನಿರುಪಯುಕ್ತಗೊಳಿಸಲಾಗಿದೆ; ಹಾಗಾಗಿ ಇದು ಕನ್ನಡಪ್ರಜ್ಞೆಗೆ ಆದ ಆಘಾತ ಎಂದು ತಿಳಿಯಲಾಯಿತು. ಈ ಚಳುವಳಿಯ ಸಂದರ್ಭದಲ್ಲಿ ನಡೆದ ವಾಗ್ವಾದಗಳಲ್ಲಿ ಹಲವು ನೆಲೆಗಳಿವೆ. ಒಂದು: ಸಚಿವರು ಹೇಳಿದಂತೆ ಕನ್ನಡ ಸಾಹಿತ್ಯ ಬೂಸಾ ಅಲ್ಲ; ಅದರಲ್ಲಿ ಅತ್ಯುನ್ನತ ಮೌಲ್ಯಗಳ ಪ್ರತಿಪಾದನೆ ಇದೆ ಎನ್ನುವುದು. ಎರಡು: ಎಲ್ಲ  ಸಾಹಿತ್ಯದಲ್ಲಿ ಇರುವಂತೆ ಇಲ್ಲಿಯೂ ನಿರರ್ಥಕವಾದುದು ಇರಬಹುದು; ಹಾಗಾಗಿ ಸಚಿವರ ಹೇಳಿಕೆ ಆಂಶಿಕ ಸಂಗತಿಗಳನ್ನೇ ಸಾಮಾನ್ಯೀಕರಿಸುತ್ತಿದೆ ಎನ್ನುವುದು. ಮೂರು: ಕನ್ನಡ ಸಾಹಿತ್ಯ ಬೂಸಾ ಎಂದು ಹೇಳುವ ಮೂಲಕ ಪರಂಪರೆಯನ್ನು ಕುರಿತ ಮರುಚಿಂತನೆಗೆ ಅವಕಾಶ ಸಿಕ್ಕಿದೆ; ಇದನ್ನು ಹೊಸ ವೈಚಾರಿಕ ಜಾಗ್ರತಿಗೆ ಬಳಸಿಕೊಳ್ಳಬೇಕು ಎನ್ನುವುದು. ನಾಲ್ಕು: ಕೊಂಚ ಕುಹಕದಲ್ಲಿ ವಾದ ಮಾಡುತ್ತ್ತ, ಬೂಸಾ ಕೂಡ ಪ್ರಾಣಿಗಳಿಗೆ ಪುಷ್ಟಿದಾಯಕವಾದ್ದರಿಂದ ಸಚಿವರ ಮಾತನ್ನು ಸರಿಯಾದ ಪರಿಪ್ರೇಕ್ಷ್ಯದಲ್ಲಿ ತೆಗೆದುಕೊಳ್ಳಬೇಕು ಎಂಬುದು.

ಈ ಚಳುವಳಿಯ ರಾಜಕೀಯ ಪರಿಣಾಮಗಳು ದೂರಗಾಮಿಯಾಗಿದ್ದವು. ಆದರೆ  ಅದರ ಭಾಷಿಕ ನೆಲೆಯ ಪರಿಣಾಮಗಳು ಕೂಡ ಅಷ್ಟೇ ಮುಖ್ಯವಾಗಿವೆ. ಬಸವಲಿಂಗಪ್ಪನವರು ಈ ಹೇಳಿಕೆಯನ್ನು ನೀಡುವ ಸಂದರ್ಭದಲ್ಲಿ ಅತ್ಯಂತ ಕ್ರಾಂತಿಕಾರಕವಾದ ಹೆಜ್ಜೆಯೊಂದನ್ನು ಇರಿಸಿದ್ದರು. ಅದರಂತೆ ಕರ್ನಾಟಕದಲ್ಲಿ ಆವರೆಗೆ ಜಾರಿಯಲ್ಲಿದ್ದ ಅಮಾನವೀಯ ನೆಲೆಯ, ತಲೆಯ ಮೇಲೆ ಮಲಹೊರುವ ಪದ್ಧತಿಯನ್ನು ಕಾನೂನುಬದ್ಧವಾಗಿ ನಿಷೇಧಿಸಿಲಾಗಿತ್ತು. ಇದೊಂದು ಸಾಮಾಜಿಕ ನೆಲೆಯ ಕಾರ್ಯಕ್ರಮವೆಂದು ವ್ಯಾಖ್ಯಾನಿಸಬಹುದಾದರೂ ಇದಕ್ಕೆ ವೈಚಾರಿಕ ನೆಲೆಯ ಹೊರಚಾಚುಗಳು ಇವೆ. ದಲಿತರಿಗೆ ಈವರೆಗೆ ಸಮಾಜ ಹೊರಿಸಿದ ಹೊಣೆಯೊಂದರಿಂದ ಬಿಡುಗಡೆ ಮಾಡುವ ಮೂಲಕ ಅವರು ಅದೇ ಸಮಾಜದ ವೈಚಾರಿಕ ಪರಂಪರೆಗಳ ಹೊರೆಯನ್ನು ಹೊರಬೇಕಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸಿದಂತಾಯಿತು.

ಹಾಗೆ ನೋಡಿದರೆ ಈ ರಾಜಕೀಯ ನಿರ್ಧಾರ, ಮೊದಲು ಹೇಳಿದ ರೀತಿಯ ಚಾರಿತ್ರಿಕ ಮರುಗಳಿಕೆಯ ಯತ್ನಗಳಿಗೆ ಒಳಗಿನಿಂದಲೇ ಬಿದ್ದ ಮೊದಲ ಭಾರಿ ಪೆಟ್ಟು. ಈ ಒಳಗಿನ ಬಂಡಾಯ ಮುಂದಿನ ದಶಕಗಳಲ್ಲಿ ಬಲವಾಗಿ ಬೆಳೆದುದನ್ನು ನೋಡುತ್ತೇವೆ. ಈ ಚಳುವಳಿಯಲ್ಲಿ ಮುಖ್ಯವಾಗಿ ಕನ್ನಡ ಸಾಹಿತ್ಯ ಮತ್ತು ಅದರ ಮೌಲ್ಯವನ್ನು ಕುರಿತ ಮಾತುಗಳು ಮುಖ್ಯವೆಂದು ತೋರಿದರೂ ಅಂತಸ್ಥ ನೆಲೆಯಲ್ಲಿ ಕನ್ನಡಪ್ರಜ್ಞೆಯ ಒಳಸುಳಿಗಳನ್ನು ಶೋಧಿಸುವ ಪ್ರಯತ್ನಗಳು ಮೊದಲಾದವು. ಅದಲ್ಲದೇ ಇದೇ ಸುಮಾರಿನಲ್ಲಿ ಮತ್ತೆ ಅನಂತಮೂರ್ತಿಯವರೇ ಬರೆದ ಇನ್ನೊಂದು ಲೇಖನವನ್ನು ಇಲ್ಲಿ ಉಲ್ಲೇಖಿಸಬೇಕು. ಆ ಲೇಖನದಲ್ಲಿ ಅವರು ಮಲಹೊರುವ ಪದ್ಧತಿಯನ್ನು ಬಹಿಷ್ಕರಿಸುವ ಜೊತೆಗೆ ಊರುಗಳಲ್ಲಿ ಒಳಚರಂಡಿಯ ಮತ್ತು ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಯನ್ನು ನಿರ್ಮಿಸಬೇಕೆಂದು ಹೇಳಿದ್ದರು. ಅಂದರೆ ದಲಿತರಿಗೆ ಈವರೆಗಿನ ದತ್ತ ಪರಂಪರೆಯನ್ನು ನಿರಾಕರಿಸಲು ಹೇಳುವಾಗಲೇ ಅದರಿಂದ ಉಂಟಾಗುವ ಶೂನ್ಯ ಸ್ಥಿತಿಯನ್ನು ತುಂಬಲು ಅವರು ಶಿಕ್ಷಿತರಾಗಬೇಕು ಎಂಬ ಆಶಯ ಆ ಲೇಖನದಲ್ಲಿತ್ತು. ಅಕ್ಷರಜ್ಞಾನ ಮಾತ್ರ ಅವರನ್ನು ಮುಖ್ಯ ಪ್ರವಾಹಕ್ಕೆ ತರಬಲ್ಲದು ಎಂಬ ಈ ಸದಾಶಯ ಕೂಡ ಚಾರಿತ್ರಿಕವಾಗಿ ಹಲವು ಆಯಾಮಗಳನ್ನು ಪಡದುಕೊಂಡಿದೆ.

ದಲಿತರು ಕೂಡ ಕನ್ನಡ ಭಾಷಾ ಪರಂಪರೆಯನ್ನು ಹೊಂದಿದವರೇ ಆಗಿದ್ದರೂ ಅವರನ್ನು ಅದೇ ಭಾಷೆಯ ಮತ್ತೊಂದು ಪ್ರಭೇದದ ಕೌಶಲಗಳಿಗೆ ಔಪಚಾರಿಕ ಶಿಕ್ಷಣದ ಮೂಲಕ ಸನ್ನದ್ಧಗೊಳಿಸಿ ಆಧುನೀಕರಿಸಬೇಕೆಂಬ ಚಿಂತನೆ ಕರ್ನಾಟಕದಲ್ಲಿ ಆ ಹೊತ್ತಿಗಾಗಲೇ ನೆಲೆಗೊಂಡಿತ್ತು. ಬೇರೆ ಬೇರೆ ರೀತಿಯಲ್ಲಿ ಜಾರಿಯಲ್ಲೂ ಇತ್ತು. ಹಳೆಯ ಮೈಸೂರಿನ ರಾಜರು ತೆರೆದ ಪಂಚಮರ ಶಾಲೆಗಳು, ಮುಂಬಯಿ ಪ್ರಾಂತ್ಯದ ಕನ್ನಡ ಪ್ರದೇಶಗಳಲ್ಲಿ ಅಲ್ಲಿನ ಸಾಮಾಜಿಕ ಸುಧಾರಣಾ ಚಳುವಳಿಗಳ ಪರಿಣಾಮವಾಗಿ ತೆರೆದ ಶಾಲೆಗಳು ದಲಿತರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದವು. ಆದರೆ ಈಗ ಅಕ್ಷರಜ್ಞಾನದ ಅಗತ್ಯವನ್ನು ಮಂಡಿಸಿದ್ದು ಬೇರೆಯ ಕಾರಣದಿಂದ. ಮೊದಲು ಗಾಂಧಿವಾದದ ನೆರಳಲ್ಲಿ ಮುಖ್ಯ ಪ್ರವಾಹವನ್ನು ಸೇರಿಕೊಳ್ಳಲು ಅನುಕೂಲವಾಗುವಂತೆ ದಲಿತರು ಶಿಕ್ಷಿತರಾಗಬೇಕು ಎಂಬ ನೆಲೆ ಮುಖ್ಯವಾಗಿತ್ತು. ಆದರೆ ಈಗ ಹೀಗೆ ಶಿಕ್ಷಿತರಾಗುವ ಮೂಲಕ ಮುಖ್ಯ ಪ್ರವಾಹದ ಪರಿಕಲ್ಪನೆಯನ್ನೇ ಬುಡಮೇಲು ಮಾಡಬೇಕು ಎಂಬ ಉದ್ದೇಶ ಮುಖ್ಯವಾಯಿತು. ಈ ಕಾರಣದಿಂದ ಕನ್ನಡ ನಾಡಿನ ಕಳೆದ ಐವತ್ತು ವರ್ಷಗಳ ಚರಿತ್ರೆಯಲ್ಲಿ ಕನ್ನಡ ಭಾಷೆಯ ಅಕ್ಷರಜ್ಞಾನಕ್ಕೆ ಮತ್ತೊಮ್ಮೆ ಹೊಸ ಸಾಮಾಜಿಕ ಜವಾಬ್ದಾರಿಯನ್ನು, ಈ ಮೇಲೆ ಹೇಳಿದ ಚಳುವಳಿಯ ಪರಿಣಾಮವಾಗಿ ಕಲ್ಪಿಸಲಾಯಿತು.

ಇದೇ ಚಳುವಳಿಯ ಪರಿಣಾಮವಾಗಿ ಉದಯಿಸಿದ ಅಖಿಲ ಕರ್ನಾಟಕ ಬರಹಗಾರ ಕಲಾವಿದರ ಒಕ್ಕೂಟ ತನ್ನ ಅಧಿವೇಶನವನ್ನು ಮೈಸೂರಿನಲ್ಲಿ ನಡೆಸಿತ್ತು. ಬೂಸಾ ಚಳುವಳಿಯ ನೆರಳಿನಲ್ಲಿ ಹುಟ್ಟಿಕೊಂಡ ವಾಗ್ವಾದವೊಂದು ತಮಿಳುನಾಡಿನ ಪೆರಿಯಾರ್ ಚಳುವಳಿಯ ಮಾದರಿಯಲ್ಲಿ ಬ್ರಾಹ್ಮಣ, ಬ್ರಾಹ್ಮಣೇತರ ಎಂಬ ವಿಭಜನೆಯನ್ನು ಬಲಗೊಳಿಸಲು ಯತ್ನಿಸುತ್ತಿತ್ತು. ಕರ್ನಾಟಕದ ಸಮಾಜವಾದಿಗಳು ಈ ತರ್ಕವನ್ನು ಬಗೆಬಗೆಯಲ್ಲಿ ಮಂಡಿಸುತ್ತ ಸಮರ್ಥಿಸುತ್ತಿದ್ದರು. ಈ ಒಕ್ಕೂಟದ ಮಹಾ ಅಧಿವೇಶನವನ್ನು ಉದ್ಘಾಟಿಸಿ ಕುವೆಂಪು ಮಾಡಿದ ಬಹು ಖ್ಯಾತ ಉಪನ್ಯಾಸ ಈ ಪ್ರಶ್ನೆಯನ್ನು ಮತ್ತೆ ಮುಂಚೂಣಿಗೆ ತಂದಿತ್ತು. ಕುವೆಂಪು ಈ ಉಪನ್ಯಾಸದಲ್ಲಿ ಪುರೋಹಿತಷಾಹಿಯನ್ನು ತುಂಬ ಕಟುವಾಗಿ ಟೀಕಿಸಿದರು. ವಾಸ್ತವವಾಗಿ ಕನ್ನಡ ಭಾಷೆಯ ಸಂದರ್ಭದಲ್ಲಿ ಸಂಸ್ಕೃತ ಭಾಷೆ ಈ ಪುರೋಹಿತಶಾಹಿ ನೆಲೆಯನ್ನು ಪ್ರತಿನಿಧಿಸುತ್ತಿತ್ತು. ಕುವೆಂಪು ಆ ಉಪನ್ಯಾಸದಲ್ಲಿ ಮತ್ತು ಅನಂತರ ನಡೆದ ವಿವಾದದಲ್ಲಿ ಸ್ಪಷ್ಟ ಮಾತುಗಳಿಂದ ಪುರೋಹಿತಶಾಹಿ ಮತ್ತು ಬ್ರಾಹ್ಮಣ ಎಂಬ ಸಮೀಕರಣವನ್ನು ನಿರಾಕರಿಸಿದರು. ಪುರೋಹಿತಶಾಹಿ ಅವರ ಪ್ರಕಾರ ಒಂದು ಅಮೂರ್ತ ಪರಿಕಲ್ಪನೆ. ಸಾಂಸ್ಕೃತಿಕ ಯಾಜಮಾನ್ಯವನ್ನು ಮೆರೆಯುವ ಪರಿಕಲ್ಪನೆ. ಆದರೂ ಅವರ ವಿಚಾರಗಳನ್ನು ಇತರರು ದುಂಡುಸುತ್ತಿ, ಪುರೋಹಿತಶಾಹಿ ಎಂದರೆ ಬ್ರಾಹ್ಮಣ ಎಂದು ಹೇಳಿದ್ದುಂಟು. ಕುವೆಂಪು ಮಂಡಿಸಿದ ವಿಚಾರ ಮತ್ತೊಂದು ನೆಲೆಯಲ್ಲಿ ಬಹು ಸಂಕೀರ್ಣವಾಗಿತ್ತು. ಅವರು ಅನುಪಯುಕ್ತವಾದುದನ್ನು ನಿರಾಕರಿಸುವಾಗ ಅದನ್ನು ಹೊಂದಿಸಿಕೊಳ್ಳುವ ಯತ್ನವನ್ನು ಮಾಡಬೇಕೇ ಹೊರತು ತ್ಯಜಿಸುವ ದಾರಿ ಹಿಡಿಯಬಾರದು ಎಂದರು. ಈ ಚಿಂತನೆಯನ್ನು ಸೂತ್ರರೂಪದಲ್ಲಿ ಹೇಳುವು ದಾದರೆ ಕುವೆಂಪು ಚಾರಿತ್ರಿಕ ಮರುಗಳಿಕೆಯ ಬದಲಾಗಿ ಚಾರಿತ್ರಿಕ ಮರುವ್ಯಾಖ್ಯೆಯ ಮೂಲಕ ಮರುಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಮಾದರಿಯನ್ನು ಮುಂದಿಟ್ಟರು ಎನ್ನಬೇಕು.

ಕುವೆಂಪು ಒಂದು ನಿದರ್ಶನವನ್ನು ಕೊಡುವ ಮೂಲಕ ತಮ್ಮ ವಿಚಾರವನ್ನು ಮಂಡಿಸುತ್ತಾರೆ. ಹಳೆಗಾಲದ ಬೆಲೆಬಾಳುವ ಚಿನ್ನದ ಆಭರಣಗಳನ್ನು ಈಗ, ಇಂದಿನ ಬಳಕೆಗೆ ಯೋಗ್ಯವಿಲ್ಲವೆಂದು ಎಸೆಯಬಾರದು. ಅವುಗಳಲ್ಲಿರುವ ಚಿನ್ನ ಅಮೂಲ್ಯ ವಾದದ್ದು. ಆ ಚಿನ್ನವನ್ನು ಬಳಸಿ ಇಂದಿನ ಮಾದರಿಯ ಆಭರಣಗಳನ್ನು ಸಿದ್ಧಪಡಿಸಿ ಧರಿಸಬೇಕು. ಈ ಚಿತ್ರ ಕುವೆಂಪು ಅವರ ವೈಚಾರಿಕ ಆಕೃತಿಯ ದ್ವಂದ್ವವನ್ನು ಬಿಂಬಿಸುತ್ತದೆ. ಪರಂಪರೆಯನ್ನು ಮರುರೂಪಿಸಬೇಕು ಎಂದಾಗ ತಿರುಳಿನಲ್ಲಿ ಬದಲಾವಣೆ ಮಾಡಬೇಕೋ? ಅಥವಾ ರೂಪದಲ್ಲಿ ಪರಿವರ್ತನೆ ಬೇಕೋ? ಕುವೆಂಪು ಸ್ಪಷ್ಟವಾಗಿ ರೂಪ ಪರಿವರ್ತನೆಯನ್ನು ಪ್ರತಿಪಾದಿಸುತ್ತಿದ್ದಾರೆ. ಪರಂಪರೆಯ ಅಂತಃಸತ್ವ ಎಂದಿನಂತೆ ವಿಚ್ಛೇದನಗೊಳ್ಳದೆ ಮುಂದುವರೆಯಬೇಕು ಎಂಬುದು ಅವರ ನಿಲುವು. ಕನ್ನಡ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಈ ನಿಲುವು ಯಾವ ಮಾದರಿಯನ್ನು ಮುಂದಿಡುತ್ತದೆ? ಈ ಉಪನ್ಯಾಸವನ್ನು ನೀಡುವ ಸಂದರ್ಭದಲ್ಲಿ ಕರ್ನಾಟಕ ಎದುರಿಸುತ್ತಿದ್ದ ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಗಮನಿಸಬೇಕು. ಸಮಾಜದ ತೋರಿಕೆಯ ಏಕತ್ವದಲ್ಲಿ ಹುದುಗಿದ್ದ ಬಿರುಕುಗಳನ್ನು  ಈ ಬಿಕ್ಕಟ್ಟುಗಳು ತೋರಿಸಲು ಮೊದಲು ಮಾಡಿದ್ದವು. ದಲಿತರೇ ಮೊದಲಾಗಿ ಶೋಷಣೆಯ ನೆಲೆಯಲ್ಲಿ ಸಿಲುಕಿದವರು ತಮ್ಮ ಮೇಲೆ ಹೇರಲಾಗಿದ್ದ ಪರಂಪರೆಯ ಹೊರೆಯನ್ನು ಕಿತ್ತೆಸೆಯದೇ ತಮಗೆ ಬಿಡುಗಡೆಯಿಲ್ಲ ಎಂಬ ಅರಿವನ್ನು ಪಡೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಕುವೆಂಪು ಪ್ರತಿಪಾದಿಸಿದ ಈ ವಿಧಾನ ಪರಂಪರೆಯೊಡನೆ ಸಂಬಂಧಗಳನ್ನು ಹೊಸ ಬಗೆಯಲ್ಲಿ ಕಟ್ಟಿಕೊಳ್ಳಬೇಕೆಂದು ಸೂಚಿಸುತ್ತದೆ. ಮುಂದಿನ ಎರಡೂವರೆ ದಶಕಗಳಲ್ಲಿ ಕನ್ನಡ ಭಾಷಾ ಸಂಸ್ಕೃತಿಯ ಬಹುಮುಖ್ಯ ವಾಗ್ವಾದಗಳು ಈ ಘಟ್ಟದಲ್ಲಿ ಮೂಡತೊಡಗಿದ್ದವು.

ಬರಹಗಾರರ ಕಲಾವಿದರ ಒಕ್ಕೂಟ ಕರ್ನಾಟಕದಲ್ಲಿ ಬಂಡಾಯ ಮತ್ತು ದಲಿತ ಚಳುವಳಿಗಳಿಗೆ ದಾರಿ ಮಾಡಿಕೊಟ್ಟಿತ್ತು. ಇವೆರಡು ಚಳುವಳಿಗಳು ಕನ್ನಡ ಭಾಷೆಯ ಬಗೆಗೆ ತಳೆದ ನಿಲುವುಗಳು ಪರಿಶೀಲನೆಗೆ ತಕ್ಕುವಾಗಿವೆ. ಸಾಹಿತ್ಯ ಸಂಬಂಧಿ ಚರ್ಚೆಯಲ್ಲಿ ಈ ಅಂಶವನ್ನು ಪರಿಶೀಲಿಸಲಾಗುತ್ತದೆ. ಮುಖ್ಯವಾಗಿ ಇಲ್ಲಿ ಕನ್ನಡದ ಸಮಕಾಲೀನ ಪ್ರಭೇದಗಳಿಗೆ ಮನ್ನಣೆ ದೊರಕಲು ಸಾಧ್ಯವಾಯಿತು. ಕನ್ನಡ ಪರಂಪರೆಯಲ್ಲಿ ಮರೆಯಾಗಿದ್ದ ಅಂಶಗಳು ಮುಂಚೂಣಿಗೆ ಬಂದವು. ಹೊಸ ಪ್ರಶ್ನೆಗಳು ಮಂಡಿತವಾದವು. ಹೊಸ ವಿನ್ಯಾಸಗಳಲ್ಲಿ ಭಾಷಾ ಸಂಸ್ಕೃತಿಯ ವ್ಯಾಖ್ಯೆಗಳು ಮೊದಲಾದವು.

೧೯೮೨ರಲ್ಲಿ ತೀರಾ ಸಣ್ಣ ಪ್ರಮಾಣದಲ್ಲಿ ಒಂದು ಚಳುವಳಿ ಮೊದಲಾಯಿತು. ಕನ್ನಡ ಉಳಿಸಿ ಕನ್ನಡ ಬಳಸಿ ಕನ್ನಡ ಬೆಳೆಸಿ ಎಂಬ ಘೋಷಣೆ ಕಾರ್ಯಕ್ರಮ ಗಳೊಡನೆ ಚಳುವಳಿ ತಲೆ ಎತ್ತಿತು. ಸಾರ್ವಜನಿಕ ವಲಯಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗಿದ್ದು ಮಾತ್ರವಲ್ಲದೆ ಕನ್ನಡ ಬಳಕೆ ಅವಮಾನಕಾರಕ ಎಂಬ ಪರಿಸ್ಥಿತಿ ಮೂಡಿದೆ ಎನ್ನುವುದು ಈ ಚಳುವಳಿಯ ಹೇಳಿಕೆ. ಮುಖ್ಯವಾಗಿ ರಾಜಧಾನಿಯನ್ನು ಕೇಂದ್ರದಲ್ಲಿ ಇರಿಸಿಕೊಂಡ ಚಳುವಳಿ ಇದು. ಇಲ್ಲಿ ಇಂಗ್ಲಿಶ್, ಜನರ ವ್ಯವಹಾರದ ಭಾಷೆಯಾಗಿ ಬೆಳೆದು ಕನ್ನಡ ಅವಗಣನೆಗೆ ಒಳಗಾಗುತ್ತಿದೆ ಎಂಬ ಆತಂಕ ಮೂಡಿದವು. ಸಾಹಿತಿಗಳು, ಕಲಾವಿದರು ಈ ಚಳುವಳಿಯನ್ನು ರೂಪಿಸಿದರು. ಅದೇ ವೇಳೆಗೆ ಕರ್ನಾಟಕ ಸರ್ಕಾರವು ವಿ.ಕೃ.ಗೋಕಾಕ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಪ್ರೌಢ ಶಿಕ್ಷಣದ ಹಂತದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡುವುದು ಹೇಗೆ ಎಂಬ ಬಗೆಗೆ ಸಲಹೆ ನೀಡಲು ಈ ಸಮಿತಿ ರಚನೆಯಾಗಿತ್ತು. ಸಮಿತಿಯು ನೀಡಿದ ವರದಿಯಲ್ಲಿ ಕನ್ನಡ ಕಡ್ಡಾಯ ಪ್ರಥಮ ಭಾಷೆಯಾಗಬೇಕೆಂದೂ ಉಳಿದೆರಡು ಭಾಷೆಗಳು ವಿದ್ಯಾರ್ಥಿಯ ಅಥವಾ ಪಾಲಕರ ಅಥವಾ ಶಾಲೆಯ ಅಗತ್ಯಗಳಿಗೆ ಅನುಗುಣವಾಗಿ ಇರಬಹುದೆಂದು ಶಿಫಾರಸ್ಸು ಮಾಡಿತ್ತು. ಇವು ಸ್ಥೂಲ ವಿವರಗಳು. ಈ ವರದಿಯನ್ನು ಜಾರಿಗೆ ನೀಡಬೇಕೆಂದು ಒತ್ತಾಯಿಸಿ ದೊಡ್ಡ ಪ್ರಮಾಣದ ಚಳುವಳಿಯೊಂದು ಮೊದಲಾಯಿತು. ಸಾಹಿತಿ, ಕಲಾವಿದರ ಬಳಗದ ಕಾರ್ಯಸೂಚಿ ಯಲ್ಲಿ ಅದು ಸೇರಿಕೊಂಡಿತ್ತು. ಗೋಕಾಕ್ ಚಳುವಳಿ ಎಂದು ಮಾಧ್ಯಮಗಳು ಹೆಸರಿಸಿದ ಈ ಚಳುವಳಿ ರಾಜ್ಯವ್ಯಾಪಿ ನೆಲೆಯನ್ನು ಹೊಂದಿತ್ತು. ಕೊನೆಯ ಪಕ್ಷ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರಾತಿನಿಧಿಕವಾಗಿಯಾದರೂ ಈ ಚಳುವಳಿಯನ್ನು ಪ್ರೋತ್ಸಾಹಿಸುವ ಘಟನೆಗಳು ನಡೆದವು. ಚಳುವಳಿ ಕಾನೂನು ಪಾಲನೆಯ ಸಮಸ್ಯೆಯನ್ನು ಉಂಟುಮಾಡಿತ್ತು. ಗೋಲಿಬಾರ್, ಲಾಠಿಚಾರ್ಜ್ ಸಾವುನೋವು ಎಲ್ಲ ಸಂಭವಿಸಿದವು. ಇದು ಚಳುವಳಿಯ ಮೇಲ್ಮೈಯಾದರೆ ಅದರ ಒಳಗಿದ್ದ ತರ್ಕಗಳನ್ನು ಮತ್ತು ಅದು ಹುಟ್ಟಿಸಿದ ವಾಗ್ವಾದಗಳನ್ನು ನಾವಿಲ್ಲಿ ಪರಿಶೀಲಿಸಬಹುದು.

ಗೋಕಾಕ್ ವರದಿ ಶಿಕ್ಷಣದಲ್ಲಿ ಕನ್ನಡಕ್ಕೆ ಅಚಲವಾದ ಸ್ಥಾನವನ್ನು ಕಲ್ಪಿಸಲು ಉದ್ದೇಶಿಸಿತ್ತು. ರಾಜ್ಯ ಸರ್ಕಾರದ ಭಾಷಾನೀತಿಯ ದೃಷ್ಟಿಯಿಂದ ಇದು ಯೋಗ್ಯ ನಿಲುವೇ ಸರಿ. ಆದರೆ ಎಂಟನೆಯ ತರಗತಿಯ ಅನಂತರ ವಿದ್ಯಾರ್ಥಿಗಳು ಕನ್ನಡದ ಬದಲು ಸಂಸ್ಕೃತವನ್ನು ಪ್ರಥಮಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದರು. ಇದರಿಂದ ಕನ್ನಡಕ್ಕೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂದು ಪರಿಗಣಿಸಿದ್ದು ಸರಿ. ಆದರೆ ಸಂಸ್ಕೃತವನ್ನು ಮೊದಲ ಭಾಷೆಯ ಸ್ಥಾನದಿಂದ ತೆಗೆದು ಹಾಕಿದಾಗ ಅದರ ಜಾಗದಲ್ಲಿ ಅಂದರೆ ಪ್ರಥಮಭಾಷೆಯಾಗಿ ಈಗ ಜನ ಬಳಸುತ್ತಿರುವ ಭಾರತದ ಯಾವುದೇ ಒಂದು ಭಾಷೆ ಇರಬಹುದೆಂಬ ಪರ್ಯಾಯ ಚಿಂತನೆಯೊಂದು ಮೂಡತೊಡಗಿತ್ತು. ಈಗ ಭಾಷಾ ಪ್ರಶ್ನೆಯೊಂದು ಸಮಾಜದ ಒಳಗಿದ್ದ ವೈರುಧ್ಯಗಳನ್ನು ಹೊರಹಾಕತೊಡಗಿತ್ತು. ಸಂಸ್ಕೃತದ ಸ್ಥಾನ ಪಲ್ಲಟವಾಗಿ ಆ ಜಾಗದಲ್ಲಿ ಕನ್ನಡದ ಜೊತೆಗೆ ಉರ್ದು, ತಮಿಳು, ತೆಲುಗು, ಮರಾಠಿಗಳು ಉಳಿಯುವುದು ಹಲವಾರು ಮಠಾಧಿಪತಿಗಳಿಗೆ ಸಹ್ಯವಾಗದ ವಿಷಯವಾಯಿತು. ಅವರಲ್ಲಿ ಹಲವರು ನೇರವಾಗಿ, ಮತ್ತೆ ಕೆಲವರು ಪರೋಕ್ಷವಾಗಿ, ಈ ಚಳುವಳಿಯನ್ನು ಬೆಂಬಲಿಸಿದರು. ಅಂತಿಮವಾಗಿ ಕನ್ನಡ ಪರವಾದ ಚಳುವಳಿ ಸಂಸ್ಕೃತ ಮತ್ತು ಉರ್ದುಗಳ ನಡುವಣ ಮುಖಾಮುಖಿಯಾಗಿ ರೂಪುಗೊಂಡಿತ್ತು. ಗೋಕಾಕ್ ವರದಿಯನ್ನು ಸರ್ಕಾರ ಪರೀಕ್ಷಿಸಿ ಜಾರಿಗೆ ಕೊಟ್ಟದ್ದು, ಅನಂತರದ ನ್ಯಾಯಾಲಯ ಹೋರಾಟಗಳು, ರಾಜ್ಯ ಸರ್ಕಾರದ ಭಾಷಾನೀತಿಯ ಪಲ್ಲಟಗಳು ಇವೆಲ್ಲ ಆ ಮುಂದಿನ ಇಪ್ಪತ್ತೈದು ವರ್ಷಗಳ ಇತಿಹಾಸ. ಆದರೆ ಗೋಕಾಕ್ ಚಳುವಳಿಯು ರಾಜ್ಯವ್ಯಾಪಿಯಾಗಿ ಕನ್ನಡಪರ ಹೋರಾಡಲು ಸಿದ್ಧವಿದ್ದ ಜನರ ಸಮುದಾಯ ವೊಂದನ್ನು ಬೆಳಕಿಗೆ ತಂದಿತ್ತು. ಈ ಸಮುದಾಯ ತನ್ನ ಸಾಮಾಜಿಕ ರಚನೆಯಲ್ಲಿ ಅಂತಿಮವಾಗಿ ಪಾರಂಪರಿಕ ಮೌಲ್ಯಗಳ ಸಮರ್ಥನೆಗೆ ಸಿದ್ಧವಿತ್ತು. ಜೊತೆಗೆ ಸಾಮಾಜಿಕ ಅಸಹನೆಯನ್ನು ಯಾವ ಮುಜುಗರವೂ ಇಲ್ಲದೆ ವ್ಯಕ್ತಪಡಿಸಲು ಸಿದ್ಧವಿತ್ತು. ಸಂಸ್ಕೃತವನ್ನು ಸಮರ್ಥಿಸುವ ಉರ್ದುವನ್ನು ವಿರೋಧಿಸುವ ನೆಲೆಗೆ ಈ ಚಳುವಳಿಯ ಹಂತ ಬಂದು ನಿಂತಿತ್ತು.

ಈ ಚಳುವಳಿ ಇನ್ನೊಂದು ದೃಷ್ಟಿಯಿಂದ ಗಮನಾರ್ಹ. ರಾಜ್ಯವ್ಯಾಪಿಯಾದ ಈ ಹೋರಾಟದಲ್ಲಿ ಚಳುವಳಿಯ ಗುರಿಗಳನ್ನು ಸಮರ್ಥಿಸುವವರು ಕನ್ನಡ ಪರವೆಂದೂ, ಉಳಿದವರು ಕನ್ನಡ ವಿರೋಧಿಗಳೆಂದೂ ವಿಭಜನೆಗೊಂಡರು. ಸಮರ್ಥನೆಗಾಗಲೀ ವಿರೋಧಕ್ಕಾಗಲೀ ಸಾಮಾಜಿಕ ಕಾರಣಗಳಿರುವಂತೆ ವೈಯಕ್ತಿಕ ಕಾರಣಗಳೂ ಇರುತ್ತವೆ. ಅದೇನೇ ಇರಲಿ. ಈ ಹೊತ್ತಿನಲ್ಲಿ ಕನ್ನಡ ಭಾಷಾ ಸಮುದಾಯದ ಒಳಗೆ ತಲೆ ಎತ್ತಿದ ಅಸಹನೆ ಆರೋಗ್ಯಕರವಲ್ಲವೆಂದು ವಾದಿಸುವವರು ಇದ್ದರು. ಈ ವಾದ ಅನುಸರಿಸಿದ ತರ್ಕ ಕೆಲವರಿಗೆ ಅಸಹನೀಯವೆನಿಸಿತ್ತು. ಕೊಂಚ ವಿಶ್ಲೇಷಿಸಿ ನೋಡಿದರೆ ಬಂಡಾಯ ದಲಿತ ಚಳುವಳಿಗಳೂ ಕನ್ನಡ ಸಮಾಜವನ್ನು ಕೆಲವೇ ವರ್ಷಗಳ ಹಿಂದೆ ಸಮಾನಾಂತರವಾಗಿ ವಿಭಜಿಸಿದ್ದವು. ಇದರಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ತಮ್ಮ ಶೋಷಣೆಯ ಅಸ್ತ್ರಗಳು ಮೊಂಡಾಗ ಬಹುದು ಎಂಬ ಭಯ ಮೂಡಿದ್ದು ಸಹಜವಾಗಿದೆ. ಆದ್ದರಿಂದ ಈ ಸಮಾನಾಂತರ ವಿಭಜನೆಯ ಪರಿಣಾಮವನ್ನು ಕಡಿಮೆಮಾಡಲು ಲಂಬಾಂತರ ವಿಭಜನೆಯ ಪ್ರಯತ್ನವೊಂದನ್ನು ಮಾಡುವುದು ಅವರಿಗೆ ಅಗತ್ಯವೆನಿಸಿತ್ತು. ಗೋಕಾಕ್ ಚಳುವಳಿ ಅಂತಹ ಒಂದು ಪ್ರಯತ್ನಕ್ಕೆ ಅನುವು ಮಾಡಿಕೊಟ್ಟಿತ್ತು. ಕನ್ನಡದ ಮರೆಯಲ್ಲಿ ಸಮಾಜದ ಎಲ್ಲ ಸ್ತರಗಳ ಜನರನ್ನು ಒಂದು ನೆಲೆಗೆ ತಂದು ಪರವಿರೋಧದ ನೆಲೆಗಳನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಈ ವ್ಯಾಖ್ಯೆಗೆ ಸಮರ್ಥನೆಯಾಗಿ ಈ ಚಳುವಳಿಯ ಹಿಂದಿದ್ದ ಸಾಂಪ್ರದಾಯಕ ಶಕ್ತಿಗಳ ಒತ್ತಾಸೆಯ ಅಂಶವನ್ನು ಕೂಡ ಗಮನಿಸಬೇಕು.

ಗೋಕಾಕ್ ಚಳುವಳಿಯ ಅನಂತರದಲ್ಲಿ ಕನ್ನಡಪರವಾದ ಯಾವುದೇ ಪ್ರಮುಖ ಚಳುವಳಿಯೂ ನಡೆಯಲಿಲ್ಲ. ಆದರೆ ಆಗಾಗ ನಡೆದ ಇತರ ವಿಷಯಗಳನ್ನು ಕುರಿತ ಚಳುವಳಿಗಳು ಕೂಡ ಮುಖ್ಯವಾಗಿವೆ. ಅಂತಹ ಒಂದೆರಡು ನಿದರ್ಶನಗಳನ್ನು ಮುಂದೆ ಗಮನಿಸಲಾಗಿದೆ. ಕಾವೇರಿ ನದಿ ನೀರಿನ ಹಂಚಿಕೆಯ ಪ್ರಶ್ನೆ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಮಾಧ್ಯಮಗಳು ವಿವರಿಸಿದ ಕೂಡಲೇ, ಕರ್ನಾಟಕದ ದಕ್ಷಿಣ ಭಾಗದಲ್ಲಿ ಚಳುವಳಿಯೊಂದು ಆರಂಭವಾಯಿತು. ಈ ವಿವಾದದ ಕಾರಣ, ಪರಿಹಾರ ಇತ್ಯಾದಿಗಳು ಹಿಂದೆ ಸರಿದು ಚಳುವಳಿಕಾರರು ತಮಿಳು ಮಾತಾಡುವ ಜನರನ್ನು ತಮ್ಮ ಆಕ್ರಮಣಕ್ಕೆ ಗುರಿ ಮಾಡಿಕೊಂಡರು. ತಮಿಳರನ್ನು ತಮಿಳುನಾಡಿನ ವಲಸೆಗಾರರೆಂದು ಕನ್ನಡದ ನೆರಳನ್ನು ಪಡೆಯುತ್ತಿರುವ ಜನರೆಂದು ಪರಿಗಣಿಸಿ ಅವರನ್ನು ಹಿಂಸಿಸುವ ಮೂಲಕ ತಮಿಳುನಾಡಿಗೆ ಬುದ್ಧಿ ಕಲಿಸುವ ಕಾರ್ಯಕ್ರಮ ಇದಾಗಿತ್ತು. ಜನಪ್ರಿಯ ಚಳುವಳಿಗಳ ಇಂತಹ ತರ್ಕಗಳು ಸ್ಪಷ್ಟವಾಗಿವೆ. ಸಾಮಾಜಿಕ ಅಸಹನೆಗಳು ಹೊರಬರಲು ಒಂದು ಪ್ರಚೋದಕ ಅಗತ್ಯ. ಅದು ದೊರಕಿದ ಕೂಡಲೇ ಈ ಅಸಹನೆ ಭುಗಿಲೇಳುತ್ತದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಮೀಕರಣವನ್ನೇ ಅನ್ಯಭಾಷಿಕರಿಗೂ ವಿಸ್ತರಿಸಲಾಗುತ್ತದೆ.

ಬೆಂಗಳೂರು ದೂರದರ್ಶನವು ತನ್ನ ದಿನದ ಕಾರ್ಯಕ್ರಮಗಳಲ್ಲಿ ಕೆಲವು ನಿಮಿಷಗಳ ಕಾಲ ಉರ್ದು ಭಾಷೆಯ ವಾರ್ತಾಪ್ರಸಾರವನ್ನು ಮಾಡುವ ನಿರ್ಧಾರವನ್ನು ಪ್ರಕಟಿಸಿದ ಕೂಡಲೇ ಚಳುವಳಿ ಮೊದಲಾಯಿತು. ಈ ಚಳುವಳಿಯು ಉರ್ದು ಭಾಷೆಗೆ ದೊರೆತ ಅವಕಾಶವನ್ನು ವಿರೋಧಿಸುವ ಭರದಲ್ಲಿ ಆ ಭಾಷೆಯನ್ನಾಡುವ ಮುಸ್ಲಿಮರನ್ನು ಗುರಿ ಮಾಡಿಕೊಂಡಿತ್ತು. ಕರ್ನಾಟಕ ಕೆಲವು ಭಾಗಗಳಲ್ಲಿ ಸಾಕಷ್ಟು ಹಿಂಸಾಪ್ರಸಂಗಗಳು ನಡೆದವು. ಉರ್ದು ವಾರ್ತಾಪ್ರಸಾರಕ್ಕೆ ಅಗತ್ಯವಾದ ತರ್ಕ ದೂರದರ್ಶನದ ಬಳಿ ಇತ್ತು. ಅಲ್ಲದೆ ಕರ್ನಾಟಕದ ಬೇರೆ ಬೇರೆ ಭಾಷೆಗಳ ಕಾರ್ಯಕ್ರಮಗಳನ್ನು ಅದು ಪ್ರಸಾರ ಮಾಡುತ್ತಿತ್ತು. ಆದರೆ ಈ ಸಂಗತಿ ಮುಖ್ಯ ವಾಗಲಿಲ್ಲ. ಉರ್ದು ಭಾಷೆಯ ವಾರ್ತಾಪ್ರಸಾರ ಆ ಭಾಷೆಗೆ ಅಂದರೆ ಆ ಮೂಲಕ ಆ ಭಾಷೆಯನ್ನಾಡುವ ಜನರಿಗೆ ನೀಡಿದ ವಿಶೇಷ ಸವಲತ್ತು ಎಂದು ಪರಿಗಣಿಸಿ ಅದಕ್ಕೆ ಅನುಗುಣವಾದ ವಿರೋಧದ ನೆಲೆಯನ್ನು ರೂಪಿಸಿದರು. ದೂರದರ್ಶನ ತನ್ನ ನಿಲುವನ್ನು ಬಿಟ್ಟುಕೊಟ್ಟಿತು. ಹೀಗೆ ಉಲ್ಲೇಖಿಸಿದ ಎರಡು ಘಟನೆಗಳು ಕರ್ನಾಟಕದಲ್ಲಿ ಬೇರು ಬಿಟ್ಟಿದ್ದ ಭಾಷಿಕ ಅಸಹನೆಯನ್ನು ತೋರಿಸುತ್ತವೆ. ಒಂದು ಭಾಷೆಯ ಪರವಾಗಿ ಇರುವುದೆಂದರೆ ಇನ್ನೊಂದು ಭಾಷೆ ಅಥವಾ ಅದನ್ನಾಡುವವರ ಬಗೆಗೆ ಇರುವ ವಿರೋಧವೆಂಬ ತರ್ಕ ಈಗ ಪ್ರಚಲಿತವಾಯಿತು.

ಇಂತಹದೇ ಇನ್ನೊಂದು ಚಳುವಳಿಯ ಉಲ್ಲೇಖ ಇಲ್ಲಿ ಅಗತ್ಯ. ಇದು ಏಕೀಕರಣ ಆರಂಭದ ಘಟ್ಟದಲ್ಲೇ ಮೊದಲಾಯಿತಾದರೂ ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮೈದೋರುತ್ತಲೇ ಬಂದಿದೆ. ಚಲನಚಿತ್ರಗಳಲ್ಲಿ ಡಬ್ಬಿಂಗ್ ವಿರೋಧವನ್ನು ಮಾಡುವ ಚಳುವಳಿ ಇದು. ದಕ್ಷಿಣ ಭಾರತದಲ್ಲಿ ಮೊದಲು ಚಲನಚಿತ್ರ ಚಟುವಟಿಕೆಗಳು ನೆಲೆಸಿದ್ದು ಅಂದಿನ ಮದ್ರಾಸಿನಲ್ಲಿ. ಮೈಸೂರು ಮುಂತಾದ ಕಡೆಗಳಲ್ಲಿ ನಡೆದ ಪ್ರಯತ್ನಗಳು ಹೆಚ್ಚು ವ್ಯಾಪಕವಾಗಿರಲಿಲ್ಲ. ಮದ್ರಾಸಿನಲ್ಲಿ ತಯಾರಿಸುತ್ತಿದ್ದ ಚಿತ್ರಗಳನ್ನು ತಂತ್ರಜ್ಞಾನದ ಸೌಲಭ್ಯವನ್ನು ಬಳಸಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಡಬ್ ಮಾಡುವ ಪ್ರವೃತ್ತಿ ಆಗ ಆರಂಭವಾಯಿತು. ಆದರೆ ಕನ್ನಡ ಚಿತ್ರರಂಗದಲ್ಲಿ ಇದಕ್ಕೆ ಬಲವಾದ ವಿರೋಧ ಉಂಟಾಯಿತು. ಅಂತಹ ಚಿತ್ರಗಳನ್ನು ಬಹಿಷ್ಕರಿಸುವ ಘಟನೆಗಳು ನಡೆದವು. ಹೀಗೆ ಡಬ್ ಮಾಡುವುದರಿಂದ ಕನ್ನಡ ಚಲನಚಿತ್ರಗಳು ಬೆಂಬಲವಿಲ್ಲದೆ ಸೊರಗುತ್ತವೆ ಎಂದೂ ಹಾಗಾಗಿ ಚಲನಚಿತ್ರ ರಂಗದಲ್ಲಿ ತೊಡಗಿಕೊಂಡಿರುವ ಕಲಾವಿದರೂ ತಂತ್ರಜ್ಞರೂ ನಿರಾಶ್ರಿತರಾಗುತ್ತಾರೆ ಎಂಬ ಕಾರಣವನ್ನು ಮುಂದೊಡ್ಡಲಾಯಿತು. ಈ ಪ್ರಯತ್ನದಿಂದ ಡಬ್ಬಿಂಗ್ ಚಿತ್ರಗಳು ಕನ್ನಡದಲ್ಲಿ ಬರಲಿಲ್ಲ. ಇಂತಹದೇ ಇನ್ನೊಂದು ಪ್ರಸಂಗ ಬಂದದ್ದು ಎಂಟನೆಯ ದಶಕದ ಕೊನೆಗೆ. ದೂರದರ್ಶನವು ಆಗ ಜನಪ್ರಿಯವಾಗಿದ್ದ ಧಾರಾವಾಹಿಯೊಂದನ್ನು ಹಿಂದಿ ಭಾಷೆಯಿಂದ ಭಾರತೀಯ ಭಾಷೆಗಳಿಗೆ ಡಬ್ ಮಾಡಲು ಯತ್ನಿಸಿತು. ಈಗಲೂ ಅದಕ್ಕೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ಉಂಟಾಯಿತು. ಆ ಧಾರಾವಾಹಿ ಕನ್ನಡಕ್ಕೆ ಬರಲಿಲ್ಲ. ಈ ವಿರೋಧದ ಹಿಂದಿನ ತರ್ಕ ಅಸ್ಪಷ್ಟವಾಗಿದೆ. ಏಕೆಂದರೆ ಚಲನಚಿತ್ರದ ತಂತ್ರಜ್ಞಾನವೇ ದೃಶ್ಯ ಮತ್ತು ಧ್ವನಿಗಳನ್ನು ವಿಘಟಿಸಿಬಿಟ್ಟಿದೆ. ಕನ್ನಡದ ಚಿತ್ರವೆಂದು ನಾವು ಗುರುತಿಸುವ ಕೃತಿಯಲ್ಲೂ ದೃಶ್ಯಗಳ ನಟನಟಿಯರ ಧ್ವನಿಗಳು ಮತ್ತು ನಾವು ಕೇಳಿಸಿಕೊಳ್ಳುವ ಧ್ವನಿಗಳೂ ಒಂದೇ ಆಗಿರಬೇಕಾಗಿಲ್ಲ. ಬಹುಪಾಲು ಸಂದರ್ಭದಲ್ಲಿ ಬೇರೆ ಯಾರೋ ನೀಡಿದ ಧ್ವನಿಗಳನ್ನು ನಾವು ಕೇಳುತ್ತೇವೆ. ಅಲ್ಲದೇ ದಿನದಿನದ ನೂರಾರು ಜಾಹೀರಾತುಗಳು ಕೂಡ ಹೀಗೆಯೇ ಡಬ್ ಆಗಿಯೇ ಬರುತ್ತವೆ. ಕನ್ನಡ ಚಿತ್ರರಂಗ ತಂತ್ರಜ್ಞಾನದ ಸೌಲಭ್ಯವನ್ನು ಬಳಸಿಕೊಳ್ಳುತ್ತಲೂ ಒಂದು ನಿಟ್ಟಿನಲ್ಲಿ ಅನ್ಯಭಾಷೆಯ ಚಿತ್ರವೊಂದನ್ನು ಕನ್ನಡಕ್ಕೆ ಭಾಷಾಂತರಿಸಲು ಅವಕಾಶ ಮಾಡಿಕೊಟ್ಟಿಲ್ಲ. ಇಲ್ಲಿ ಮೇಲ್ನೋಟಕ್ಕೆ ಭಾಷೆಯ ಪ್ರಶ್ನೆ ಮುಂಚೂಣಿಯಲ್ಲಿದೆ. ಭಾಷೆಯ ಪರವಾಗಿ ವಾದ ಮಾಡುವವರು ವಾಸ್ತವವಾಗಿ ಡಬ್ಬಿಂಗನ್ನು ಸಮರ್ಥಿಸಬೇಕು. ಏಕೆಂದರೆ ಅನ್ಯಭಾಷೆಯ ಚಲನಚಿತ್ರ ಒಂದನ್ನು ಕನ್ನಡಿಗರು ಈಗ ಆ ಅನ್ಯಭಾಷೆಯಲ್ಲಿಯೇ ನೋಡುತ್ತಿದ್ದಾರೆ. ಅಲ್ಲಿಯ ಮಾತುಗಳನ್ನು ಕನ್ನಡದಲ್ಲಿ ಕೇಳಿಸಿಕೊಳ್ಳುವ ಅವಕಾಶ ಅವರಿಗಿಲ್ಲ. ಡಬ್ಬಿಂಗ್ ನಡೆದರೆ ಅವರು ಬಹುಮಟ್ಟಿಗೆ ಚಲನಚಿತ್ರಗಳನ್ನು ಕನ್ನಡದ ಮೂಲಕವೇ ನೋಡುವ ಅವಕಾಶ ಪಡೆಯುತ್ತಾರೆ. ಇಂತಹ ಅವಕಾಶ ಸಿಗದಂತೆ ಮಾಡಿರುವ ಈ ಚಳುವಳಿ ಹೇಗೆ ಕನ್ನಡ ಪರ? ಹಾಗೆ ನೋಡಿದರೆ ಕನ್ನಡಿಗರಿಗೆ ಭಾರತದ ಇತರ ಭಾಷೆಗಳ ಗ್ರಹಿಕೆಯ ಕೌಶಲಗಳು ಹೆಚ್ಚಾಗುತ್ತಿರುವುದಕ್ಕೆ ಆಯಾ ಭಾಷೆಯ ಚಲನಚಿತ್ರಗಳನ್ನು ಆಯಾ ಭಾಷೆಯ ಮೂಲಕವೇ ನೋಡುವ ಒತ್ತಾಯ ಇರುವುದೇ ಕಾರಣ. ಇದು ಸ್ವಾಗತಾರ್ಹ ಬೆಳವಣಿಗೆಯೋ ಅಥವಾ ಕನ್ನಡಿಗರಿಗೆ ಅನಿವಾರ್ಯವಾದ ಹೊರೆಯೋ ಎಂಬುದನ್ನು ನಾವಿನ್ನೂ ವಿವರವಾಗಿ ಚರ್ಚಿಸಬೇಕಾಗಿದೆ. ಅಲ್ಲದೆ ಡಬ್ಬಿಂಗ್ ವಿರೋಧಿಸುವ ಕನ್ನಡ ಚಲನಚಿತ್ರರಂಗ ಕನ್ನಡಿಗರ ಅವಕಾಶ ಲೋಪಗಳ ಕಾರಣ ಮುಂದೂಡಿರುವುದು ಕೂಡ ಅಸ್ಪಷ್ಟವಾಗಿದೆ. ಅದನ್ನೆಲ್ಲ ಇಲ್ಲಿ ಚರ್ಚಿಸಲು ಅವಕಾಶವಿಲ್ಲ. ಒಟ್ಟಾರೆ ಇಂತಹ ಚಳುವಳಿಗಳು ಅಳವಡಿಸಿಕೊಳ್ಳುವ ತರ್ಕಗಳು ಎಷ್ಟೋ ವೇಳೆ ವಿರೋಧಾಭಾಸದಿಂದ ಕೂಡಿರುತ್ತವೆ. ತಾವು ವಿರೋಧಿಸುವ ಸಂಗತಿಗಳನ್ನು ತಾವೇ ಆಚರಿಸುತ್ತಿರುವ ವೈರುಧ್ಯಗಳು ಗೋಚರವಾಗುವುದೇ ಇಲ್ಲ.

ಕನ್ನಡ ಚಳುವಳಿಗಳು ಹೀಗೆ ಬಹುಮುಖಿಯಾಗಿ ನಡೆದಂತೆ ಕಂಡರೂ ಎಲ್ಲ್ಲ ಕಡೆಯಲ್ಲೂ ಆತಂಕದ ಕಾರಣವೊಂದೇ ಮುಖ್ಯವಾಗಿದೆ. ಕನ್ನಡಕ್ಕೆ, ಕನ್ನಡಿಗರಿಗೆ ಹೊಸ ಅವಕಾಶಗಳು ರೂಪಗೊಳ್ಳಬೇಕು ಎಂಬ ಬೇಡಿಕೆಗಿಂತ, ಇರುವ ಅವಕಾಶ ಗಳಿಂದ ಅವರು ವಂಚಿತರಾಗುತ್ತಿದ್ದಾರೆ ಎಂಬ ಕಾಳಜಿಯೇ ಮುಖ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಸಮರ್ಥನೆಯ ನೆಪದಲ್ಲಿ ಸಾಮಾಜಿಕ ವಿನ್ಯಾಸದ ವೈರುಧ್ಯಗಳನ್ನು ಮುಂಚೂಣಿಗೆ ತರಲಾಗುತ್ತಿದೆ. ಕಳೆದ ಇಪ್ಪತೈದು ವರ್ಷಗಳಲ್ಲಿ ಈ ಅಸಹನೆಯ ನೆಲೆ ಬಹಳ ತೀವ್ರವಾಗುತ್ತಿದೆ. ಹೀಗಾಗಲು ಇರುವ ಕಾರಣಗಳನ್ನು ಪ್ರತ್ಯೇಕ ಅಧ್ಯಾಯದಲ್ಲಿ ಚರ್ಚಿಸಲಾಗುತ್ತದೆ.