ಐವತ್ತು ವರ್ಷಗಳ ಅವಧಿ ಒಂದು ಭಾಷೆಯ ರಚನೆಯಲ್ಲಿ ಆಗಿರುವ ಪಲ್ಲಟಗಳನ್ನು ಅಧ್ಯಯನ ಮಾಡಲು ತುಂಬಾ ಕಡಿಮೆಯಾದದ್ದು. ಆದರೆ ಈ ಮೊದಲೇ ಹೇಳಿದಂತೆ ಕನ್ನಡ ಬಳಕೆಯ ಸ್ವರೂಪದಲ್ಲಿ ಆದ ಸ್ಫೋಟದಿಂದ ರಚನೆಯ ಪಲ್ಲಟಗಳು ತೀವ್ರಗೊಂಡಿವೆ. ಕೆಲವು ಪಲ್ಲಟಗಳು ಈಗಾಗಲೇ ಮುಗಿದಂತಿದ್ದು ನೆಲೆನಿಂತಿದ್ದರೆ ಮತ್ತೆ ಕೆಲವು ಬದಲಾವಣೆಯ  ಪ್ರಕ್ರಿಯೆಯಲ್ಲಿವೆ. ಇವನ್ನು ಗುರುತಿಸಿ ಚರ್ಚಿಸುವುದು ಈ ಅಧ್ಯಾಯದ ಉದ್ದೇಶ.

ಈ ಎಲ್ಲವನ್ನು ಉಚ್ಚಾರಣೆ ಮತ್ತು ಬರಹ ಎಂಬ ಎರಡು ನೆಲೆಗಳಲ್ಲಿ ಪರಿಗಣಿಸಲಾಗುತ್ತದೆ. ಬರವಣಿಗೆಗೆ ಸಂಬಂಧಿಸಿದ ಪ್ರಶ್ನೆಗಳು ಇನ್ನೊಂದು ಅಧ್ಯಾಯದಲ್ಲಿ ವಿವರವಾದ ಚರ್ಚೆಗೆ ಒಳಗಾಗಲಿವೆ. ಆದ್ದರಿಂದ ಇಲ್ಲಿ ಪ್ರಾಸಂಗಿಕವಾದ ಸೂಚನೆಗಳು ಮಾತ್ರ ಇರುತ್ತವೆ. ಮಾತಿನ ಉಚ್ಚಾರಣೆಯ ನೆಲೆಯಲ್ಲಿ ಆಗಿರುವ ಮತ್ತು ಆಗುತ್ತಿರುವ ಪಲ್ಲಟಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ.

ಈ ಪಲ್ಲಟಗಳು ಧ್ವನಿರಚನೆ, ಪದರಚನೆ, ವಾಕ್ಯರಚನೆ ಮತ್ತು ಅರ್ಥರಚನೆ ಎಂಬ ನಾಲ್ಕು ಹಂತಗಳಲ್ಲಿ ಇಲ್ಲಿ ವಿವರಣೆಗೆ ಒಳಗಾಗುತ್ತವೆ. ಧ್ವನಿ ರಚನೆಯಲ್ಲಿ ಧ್ವನಿಗಳು ಮತ್ತು ಧ್ವನಿನಿಯಮಗಳು ಎಂಬ ಎರಡು ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗುತ್ತದೆ. ಧ್ವನಿನಿಯಮಗಳಿಗೆ ಸಂಬಂಧಪಟ್ಟ ವಿವರಣೆಯಲ್ಲಿ ಧ್ವನಿ ಪ್ರಕ್ರಿಯೆಗಳು ಮತ್ತು ಧ್ವನಿತಂತ್ರಗಳನ್ನು ಸೇರಿಸಿ ವಿವರಿಸಲಾಗುತ್ತದೆ.

ಧ್ವನಿರಚನೆ: ಕನ್ನಡದಲ್ಲಿ ಇರುವ ಭಾಷಾ ಧ್ವನಿಗಳ ಸ್ವರೂಪದ ಬಗೆಗೆ ಸಾಕಷ್ಟು ವಿವರವಾದ ಅಧ್ಯಯನಗಳು ನಡೆದಿವೆ. ಕಳೆದ ಐವತ್ತು ವರ್ಷಗಳಲ್ಲಿ ಈ ಧ್ವನಿಗಳ ಸಮೂಹಕ್ಕೆ ಕೆಲವು ಹೊಸ ಧ್ವನಿಗಳು ಬಂದು ಸೇರಿವೆ. ಕನ್ನಡದಲ್ಲಿ ಇದ್ದ ಧ್ವನಿಗಳು ತಮ್ಮ ಚಹರೆಯನ್ನು ಅಷ್ಟಷ್ಟು ಬದಲಾವಣೆ ಮಾಡಿಕೊಂಡಿವೆ. ಮತ್ತೆ ಕೆಲವು ಧ್ವನಿಗಳು ಉಚ್ಚಾರಣೆಯಿಂದ ಮರೆಯಾಗುವ ಲಕ್ಷಣವನ್ನು ತೋರಿಸುತ್ತಿವೆ.

ಇಂಗ್ಲಿಶ್‌ನ ಪ್ರಭಾವದಿಂದಾಗಿ ಕನ್ನಡಕ್ಕೆ ಬಂದು ಸೇರಿದ ಪದಗಳು ಅನೇಕ. ಅಂತಹ ಪದಗಳನ್ನು ಕನ್ನಡ ಏಕಭಾಷಿಕರು ತಮ್ಮ ಉಚ್ಚಾರಣೆಗಳಿಗೆ ಹೊಂದಿಸಿ ಕೊಂಡು ಬಳಸುತ್ತಾರೆ. ಹೀಗಾದಾಗ ಕನ್ನಡದ ಮೂಲ ಧ್ವನಿಗಳಲ್ಲೇ ಆ ಪದಗಳು ಬಳಕೆಯಾಗತೊಡಗುತ್ತವೆ. ಆದರೆ ಕನ್ನಡ ಮತ್ತು ಇಂಗ್ಲಿಶ್‌ನಲ್ಲಿ ದ್ವಿಭಾಷಿಕರಾದವರು ಅಥವಾ ಇಂಗ್ಲಿಶ್ ಉಚ್ಚಾರಣೆಗಳನ್ನು ಕೇಳುವ ಸೌಕರ್ಯವನ್ನು ಪಡೆದವರು ತಮ್ಮ ಉಚ್ಚಾರಣೆಯನ್ನು ಕನ್ನಡ ಏಕಭಾಷಿಕರ ರೀತಿಯಲ್ಲಿ ಇರಿಸಿಕೊಳ್ಳುವುದಿಲ್ಲ. ಹಾಗಾಗಿ ಅವರ ಉಚ್ಚಾರಣೆಗಳಲ್ಲಿ ಕೆಲವು ಮಾರ್ಪಾಡುಗಳು ಆಗುತ್ತವೆ. ಅಂತಹ ಕೆಲವು ಬದಲಾವಣೆಗಳನ್ನು ನಾವು ಮುಂದೆ ಚರ್ಚಿಸಲಿದ್ದೇವೆ.

ಒಂದು: ಇಂಗ್ಲಿಶಿನ ಪದಗಳಲ್ಲಿ ಇರುವ ಒಂದು ಧ್ವನಿ ಓಷ್ಟ್ಯ-ದಂತ್ಯ- ಘರ್ಷ. ಇದನ್ನು ಕೆಳ ತುಟಿಯನ್ನು ಮೇಲಿನ ದಂತ ಸಾಲಿಗೆ ಮುಟ್ಟಿಸಿ ಉಚ್ಚರಿಸಲಾಗುತ್ತದೆ. ಫೀ, ಫಾದರ್, ಫಾರ್, ಮುಂತಾದ ಪದಗಳಲ್ಲಿ ಪದಾದಿಯ ಧ್ವನಿ ಇದೆ ಆಗಿದೆ. ಕನ್ನಡ-ಇಂಗ್ಲಿಶ್ ದ್ವಿಭಾಷಿಕರು ಈ ಧ್ವನಿಯನ್ನು ಬೇರೊಂದು ರೀತಿಯಲ್ಲಿ ಉಚ್ಚರಿಸುತ್ತಾರೆ ಓಷ್ಟದಂತ್ಯ ಫರ್ಷದ ಬದಲು ದ್ವಯೋಷ್ಟ್ಯ ಘರ್ಷವನ್ನಾಗಿ ಬದಲಾಯಿಸಿ ಕೊಂಡಿದ್ದಾರೆ. ಅಂದರೆ ಎರಡು ತುಟಿಗಳ ನಡುವೆ ಗಾಳಿಯನ್ನು ಹೆಚ್ಚು ಒತ್ತಡದಿಂದ ಹೊರತಳ್ಳುವ ಮೂಲಕ ಉಂಟಾಗುವ ಧ್ವನಿ ಇದು. ಅಂದರೆ ಉಚ್ಚಾರಣಾ ಅಂಗ ಉಚ್ಚಾರಣಾ ವಿಧಾನಗಳನ್ನು ಯಥಾವತ್ತಾಗಿ ಪಾಲಿಸಿದರೂ ಉಚ್ಚಾರಣಾ ಸ್ಥಾನವನ್ನು ಬದಲಾಯಿಸಿದ್ದಾರೆ. ಈ ದ್ವಯೋಷ್ಟ್ಯ ಘರ್ಷಧ್ವನಿ ಕನ್ನಡದಲ್ಲಿ ಇರಲಿಲ್ಲ. ಅಂದರೆ ಕನ್ನಡ ಭಾಷಿಕರು ತಮ್ಮ ಯಾವುದೇ ಪದದಲ್ಲೂ ಈ ಧ್ವನಿಯನ್ನು ಬಳಸುತ್ತಿಲ್ಲ. ಈ ಹೊಸ ಧ್ವನಿಯನ್ನು ಲಿಖಿತವಾಗಿ ಬರೆಯುವಾಗ ಕನ್ನಡದ ಮಹಾಪ್ರಾಣ ಫ ಅದರ ಕೆಳಗೆ ಎರಡು ಚುಕ್ಕಿಗಳನ್ನಿಟ್ಟು ಬರೆಯುವ ಪದ್ಧತಿ ಜಾರಿಯಲ್ಲಿದೆ. ಗಣಕಕ್ಕೆ ಸಿದ್ಧಗೊಂಡಿರುವ ಕನ್ನಡ ಕಾರ್ಯವಾಹಿಗಳು ಈ ಲಿಪಿಚಿಹ್ನೆಯನ್ನು ಈಗ ಅಳವಡಿಸಿ ಕೊಂಡಿವೆ. ಕನ್ನಡದ ಏಕಭಾಷಿಕರು ಈ ಧ್ವನಿಯನ್ನು ಕೇವಲ ಮಹಾಪ್ರಾಣವಾಗಿ ಮತ್ತೆ ಕೆಲವೊಮ್ಮೆ ಅಲ್ಪಪ್ರಾಣವಾಗಿ ಉಚ್ಚರಿಸುವುದನ್ನು ಕೇಳಬಹುದು. ಇಂಗ್ಲಿಶಿನ ಕಾಫಿ ಪದ ಕನ್ನಡಿಗರ ಬಾಯಿಯಲ್ಲಿ ಉಚ್ಚಾರಣೆಯಾಗುವ ಹಲವು ವಿಧಗಳು ಇಲ್ಲಿ ಉಲ್ಲೇಖಾರ್ಹ, ಒಟ್ಟಾರೆ ಕನ್ನಡ ಧ್ವನಿ ಸಮುದಾಯಕ್ಕೆ ನಾವು ಒಂದು ಹೊಸಧ್ವನಿಯನ್ನು ನಾವೀಗ ಸೇರಿಸಿದ್ದೇವೆ. ಅದರ ಲಿಖಿತ ರೂಪವನ್ನು ನಿರ್ವಹಿಸುತ್ತಿದ್ದೇವೆ.

ಎರಡು: ಇದೇ ಮಾದರಿಯಲ್ಲಿ ಇಂಗ್ಲಿಶ್‌ನ ದಂತ್ಯ ಘೋಷ ಘರ್ಷ ಧ್ವನಿಯೊಂದನ್ನು ಕನ್ನಡಿಗರು ಉಚ್ಚರಿಸತೊಡಗಿದ್ದಾರೆ. ಈ ಧ್ವನಿ ಕನ್ನಡದ ಸ ಕಾರಕ್ಕೆ ಸಮಾನ ಸ್ಥಾನೀಯವಾಗಿದೆ. ಸ ಅಘೋಷವಾದರೆ ಇದು ಘೋಷ ಧ್ವನಿ ಇಂಗ್ಲಿಶಿನ ಜೂ, ಬಿಜಿ, ಬಿಜಿನೆಸ್ ಮುಂತಾದ ಪದಗಳಲ್ಲಿ ಈ ಧ್ವನಿ. ಉಚ್ಚಾರಣೆ ಯಾಗುವುದು. ಕನ್ನಡಿಗರು, ಅದರಲ್ಲೂ ಇಂಗ್ಲಿಶ್ ಕಲಿತ ಕನ್ನಡಿಗರು ಈ ಧ್ವನಿಯನ್ನು ಹೆಚ್ಚು ಬದಲಾವಣೆಯಿಲ್ಲದೆ ಅಳವಡಿಸಿಕೊಂಡಿದ್ದಾರೆ. ಅದಕ್ಕೊಂದು ಲಿಪಿಚಿಹ್ನೆಯನ್ನು ರೂಪಿಸಿದ್ದಾರೆ. ಕನ್ನಡದ ಜ ಕಾರದ ತಳದಲ್ಲಿ ಎರಡು ಚುಕ್ಕಿಗಳನ್ನಿಡುವುದು ಈ ಹೊಸಚಿಹ್ನೆಯ ಲಕ್ಷಣ. ಇದು ಕೂಡ ಕನ್ನಡ ಗಣಕ ಕಾರ್ಯವಾಹಿಗಳಲ್ಲಿ ಬಳಕೆಯಾಗತೊಡಗಿದೆ.

ಮೂರು: ಇಂಗ್ಲಿಶಿನ ಎರಡು ಧ್ವನಿಗಳನ್ನು ಕನ್ನಡಿಗರು ಮಹಾಪ್ರಾಣಗಳನ್ನಾಗಿ ಪರಿವರ್ತನೆ ಮಾಡಿ ಕೊಂಡಿದ್ದಾರೆ. ಥಿನ್, ಥಿಂಕ್ ಮುಂತಾದ ಪದಗಳ ಆದಿವ್ಯಂಜನ ಇಂಗ್ಲಿಶಿನವರ ಉಚ್ಚಾರಣೆಯಲ್ಲಿ ಒಂದು ಅಘೋಷ ಘರ್ಷಧ್ವನಿ. ಅವನ್ನು ಕನ್ನಡಿಗರು ತಾವು ಉಚ್ಚರಿಸುತ್ತಿರುವ ಅಥವಾ ತಮ್ಮ ಭಾಷಾಧ್ವನಿಗಳಲ್ಲಿ ಒಂದಾಗಿರುವ ದಂತ್ಯ ಅಘೋಷ ಮಹಾಪ್ರಾಣದೊಡನೆ ಸಮೀಕರಿಸಿದ್ದಾರೆ. ಬರೆಯುವಾಗಲೂ ಮಹಾ ಪ್ರಾಣಯುಕ್ತವಾಗಿಯೇ ಬರೆಯುತ್ತಾರೆ. ದೆನ್, ದಟ್, ದಿಸ್ ಮುಂತಾದ ಪದಗಳಲ್ಲಿ ರುವ ಆದಿವ್ಯಂಜನವು ಮೇಲೆ ಹೇಳಿದ ಇಂಗ್ಲಿಷ್ ಧ್ವನಿಯ ಘೋಷರೂಪ. ಈ ವ್ಯಂಜನಗಳನ್ನು ಕನ್ನಡಿಗರು ಸ್ಪರ್ಶಧ್ವನಿಗಳನ್ನಾಗಿ ಬದಲಿಸಿದ್ದಾರೆ. ಅಂದರೆ ಕನ್ನಡದ ದಕಾರವನ್ನಾಗಿ ಉಚ್ಚರಿಸುತ್ತಾರೆ. ಇದಕ್ಕೆ ಪ್ರತ್ಯೇಕ ಲಿಪಿ ಬೇರೆ ಅಗತ್ಯ ಕಂಡು ಬಂದಿಲ್ಲ.

ನಾಲ್ಕು: ಕನ್ನಡಕ್ಕೆ ಎರವಲು ಬಂದ ಪದಗಳಲ್ಲಿ ಪರ್ಶಿಯನ್  ಮತ್ತು ಅರಾಬಿಕ್ ಮೂಲದ ಪದಗಳು ಹಲವಾರಿವೆ. ಬಹು ಹಿಂದಿನಿಂದಲೂ ಇಂತಹ ಪದಗಳು ಕನ್ನಡಕ್ಕೆ ಬಂದು ಸೇರಿವೆ. ಕಳೆದ ಐವತ್ತು ವರ್ಷದಲ್ಲಿ ಅಂತಹ ಪದಗಳ ಸಂಖ್ಯೆ ಹೆಚ್ಚೇನೂ ಆಗಿಲ್ಲ. ಆದರೂ ಆ ಪದಗಳ ಉಚ್ಚಾರಣೆ ಮತ್ತು ಬರಹರೂಪದಲ್ಲಿ ಕನ್ನಡ ಮಾಡಿಕೊಂಡಿರುವ ಹೊಂದಾಣಿಕೆಯೊಂದು ಗಮನಾರ್ಹ. ಕನ್ನಡದ ಕಂಠ್ಯ ಧ್ವನಿಗಿಂತ ಭಿನ್ನವಾದ ಕಾಕಲ್ಯ ಘರ್ಷಧ್ವನಿಯೊಂದು ಆ ಭಾಷೆಗಳಲ್ಲಿ ಇದೆ. ಈ ಧ್ವನಿಯನ್ನುಳ್ಳ ಪದಗಳನ್ನು ಕನ್ನಡ ಪಡೆದುಕೊಂಡಾಗ ಆ ಧ್ವನಿಯ ಬದಲು ಕಂಠ್ಯ ಸ್ಪರ್ಶ ಮಹಾಪ್ರಾಣ ಧ್ವನಿಯಾದ ಖ ಅನ್ನು ಉಚ್ಚರಿಸುವುದನ್ನು ಗಮನಿಸುತ್ತೇವೆ. ಅದೇ ಲಿಪಿ ಚಿಹ್ನೆಯು ಬರಹದಲ್ಲೂ ಬಳಕೆಯಾಗುತ್ತಿದೆ.

ಇಂಗ್ಲಿಶ್, ಪರ್ಶಿಯನ್ ಮತ್ತು ಅರಾಬಿಕ್ ಮೂಲದಿಂದ ಬಂದ ಪದಗಳಲ್ಲಿ ತಾಲವ್ಯ ಅಥವಾ ವರ್ತ್ಸ ಘರ್ಷಧ್ವನಿಗಳು ಇದ್ದರೆ ಅವುಗಳ ಉಚ್ಚಾರಣೆಯಲ್ಲಿ ತಾಲವ್ಯ ಘರ್ಷಧ್ವನಿಯನ್ನೆ ಕನ್ನಡ ಉಳಿಸಿಕೊಂಡರೂ ಬರಹರೂಪದಲ್ಲಿ ಮಾತ್ರ ಶ್ ಇಲ್ಲವೇ ಷ್ ಈ ಚಿಹ್ನೆಗಳಲ್ಲಿ ಯಾವುದನ್ನು ಬಳಸಬೇಕು ಎಂಬ ಬಗೆಗೆ ಗೊಂದಲವಿದೆ. ಎರಡು ರೂಪಗಳನ್ನು ಮುಕ್ತ ಪ್ರಸಾರದಲ್ಲಿ ಬಳಸುತ್ತಿರುವುದನ್ನು ಗಮನಿಸಬಹುದು. ಶರಬತ್ತು, ಶರತ್ತು, ಶರಾರತ್ತು, ಶೇಕ್ಸ್‌ಪಿಯರ್, ಶೇಕ್ ಮುಂತಾದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಆದಿವ್ಯಂಜನವನ್ನು ಯಾವ ಚಿಹ್ನೆಯಿಂದ ಪ್ರತಿನಿಧಿಸಬೇಕು ಎಂಬ ಬಗೆಗೆ ಗೊಂದಲಗಳಿವೆ.

ಐದು: ಇಂಗ್ಲಿಶ್‌ನಲ್ಲಿ ಪಡೆದುಕೊಂಡ ಪದಗಳಲ್ಲಿ ದ್ವಯೋಷ್ಟ್ಯ ಘೋಷ ಘರ್ಷಧ್ವನಿಯೊಂದು ಬಳಕೆಯಾಗುತ್ತದೆ. ಇದು ಕನ್ನಡದ ವಕಾರಕ್ಕೆ ಸಮವೆಂದು ಕೆಲವರು ತಿಳಿಯುತ್ತಾರೆ. ಮತ್ತು ಅದೇ ಚಿಹ್ನೆಯಿಂದ ಪ್ರತಿನಿಧಿಸುತ್ತಾರೆ. ಆದರೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅದರಲ್ಲೂ ಮರಾಠಿ ಪ್ರಾಧಾನ್ಯ ಇರುವ ಪ್ರದೇಶಗಳಲ್ಲಿ ಇಂಗ್ಲಿಶಿನ ಎರಡು ಬಗೆಯ ವಕಾರಗಳನ್ನು ಕನ್ನಡದಲ್ಲಿ ಬೇರೆ ಬೇರೆ ಚಿಹ್ನೆಗಳಿಂದ ಗುರುತಿಸುವುದು ಬಳಕೆಯಾಗಿದೆ. ಓಷ್ಟ್ಯಧ್ವನಿಯನ್ನು ವಕಾರಕ್ಕೆ ಹಕಾರದ ಒತ್ತಕ್ಷರವನ್ನು ಒದಗಿಸಿ ಬರೆಯುತ್ತಾರೆ. ಕಂಠ್ಯ ವಕಾರವನ್ನು ವಕಾರದಿಂದ ಪ್ರತಿನಿಧಿಸುತ್ತಾರೆ. ಇದು ಬರಹದಲ್ಲಿ ಮಾತ್ರವಲ್ಲದೆ ಅವರ ಉಚ್ಚಾರಣೆಯಲ್ಲೂ ಕೂಡ ವ್ಯತ್ಯಾಸ ಕಾಣುತ್ತದೆ.

ಆರು: ಕನ್ನಡ ದ್ರಾವಿಡ ಭಾಷೆಗಳಲ್ಲಿ  ಒಂದು. ದ್ರಾವಿಡ ಭಾಷೆಗಳಿಗೆ ಮೂರ್ಧನ್ಯ ಧ್ವನಿಗಳು ವಿಶೇಷ ಲಕ್ಷಣವನ್ನು ಒದಗಿಸಿವೆ. ಭಾರತದ ಬೇರೆ ಯಾವ ಭಾಷಾ ವರ್ಗದಲ್ಲೂ ಈ ಧ್ವನಿಗಳಿರಲಿಲ್ಲ. ಮೂರ್ಧನ್ಯಧ್ವನಿಗಳನ್ನು ಉಚ್ಚರಿಸುವಾಗ ನಾಲಿಗೆಯನ್ನು ಹಿಂದಕ್ಕೆ ಬಾಗಿಸಿ ಅದನ್ನು ಅವರ ತುದಿಯನ್ನು ಉಚ್ಚಾರಾಣಾಂಗವಾಗಿ ಮಾಡಿಕೊಂಡು ಮಧ್ಯತಾಲುವನ್ನು ಉಚ್ಚಾರಣಾಸ್ಥಾನವನ್ನು ಮಾಡಿ ಉತ್ಪಾದಿಸುತ್ತೇವೆ. ಆದರೆ ಈಚಿನ ದಿವಸಗಳಲ್ಲಿ ಇಂಗ್ಲಿಶ್ ಭಾಷೆಯನ್ನು ಕಲಿತ ಕನ್ನಡಿಗರು ಕನ್ನಡದ ಈ ಮೂರ್ಧನ್ಯಧ್ವನಿಗಳನ್ನು ವರ್ತ್ಸ್ಯಧ್ವನಿಗಳನ್ನಾಗಿ ಬದಲಾಯಿಸಕೊಂಡಿದ್ದಾರೆ. ಇದನ್ನು ಅವರಾಡುವ ಮಾತಿನಲ್ಲಿ ಕೇಳಿಸಿಕೊಳ್ಳಲು ಸಾಧ್ಯ. ಬರವಣಿಗೆಯಲ್ಲಿ ಟ ವರ್ಗದ ಚಿಹ್ನೆಗಳೇ ಎಂದಿನಂತೆ ಮುಂದುವರೆದಿವೆ. ಇಂಗ್ಲಿಶ್ ಭಾಷೆಯ ವರ್ತ್ಸ್ಯ ಧ್ವನಿಗಳ ಪ್ರಭಾವ ಇಲ್ಲಿ ಎದ್ದು ಕಾಣುತ್ತದೆ. ಈ ಬಗೆಯ ಬದಲಾದ ಉಚ್ಚಾರಣೆ ಉಚ್ಚರಿಸುವವರ ಸಾಮಾಜಿಕ ಅಂತಸ್ತನ್ನು ಹಿರಿಮೆಯನ್ನು ಸೂಚಿಸುವುದೆಂಬ ಅಖಿಲಿತ ನಂಬಿಕೆ ಬಳಕೆಯಲ್ಲಿದೆ. ಈ ಉಚ್ಚಾರಣಾ ಬದಲಾವಣೆ ಇನ್ನೊಂದು ಕಡೆಯಿಂದ ಕನ್ನಡದ ಬರವಣಿಗೆಯಲ್ಲಿರುವ ಎರಡು ಅಘೋಷ, ಘರ್ಷಗಳಾದ ಶ ಮತ್ತು ಷಗಳ ನಡುವೆ ಉಚ್ಚಾರಣೆಯಲ್ಲಿ ವ್ಯತ್ಯಾಸ ಇಲ್ಲದಂತೆ ಮಾಡಿದೆ. ಬಹುಪಾಲು ಶಿಕ್ಷಿತ ಕನ್ನಡಿಗರು ಈ ಎರಡು ಲಿಪಿಗಳನ್ನು ಬರವಣಿಗೆಯಲ್ಲಿ ಬೇರೆಬೇರೆಯಾಗಿ ಇರಿಸಿಕೊಂಡರೂ ಉಚ್ಚಾರಣೆಯಲ್ಲಿ ಯಾವ ವ್ಯತ್ಯಾಸವನ್ನು ಮಾಡುತ್ತಿಲ್ಲ.

ಏಳು: ಕನ್ನಡ ಮಾತಿನಲ್ಲಿ ಆಗುತ್ತಿರುವ ಒಂದು ಬದಲಾವಣೆಯ ಸಾಧ್ಯತೆಯ ಬಗೆಗೆ ಭಾಷಾಶಾಸ್ತ್ರಜ್ಞರು ಗಮನ ಸೆಳೆದಿದ್ದಾರೆ. ಅದೆಂದರೆ ಎರಡು ಸ್ವರಗಳ ನಡುವೆ ಬರುವ ಘೋಷ ಮಹಾಪ್ರಾಣ ಸ್ಪರ್ಶಗಳು ಘರ್ಷತ್ವವನ್ನು ಪಡೆದುಕೊಳ್ಳುತ್ತವೆ ಎಂಬುದು. ಇದು ಕನ್ನಡದಲ್ಲಿ ಕೆಲವು ಪ್ರಸಂಗಗಳಲ್ಲಿ ಬಹು ಹಿಂದಿನಿಂದಲೂ ಬಳಕೆಯಿಲ್ಲದಂತೆ ತೋರುತ್ತದೆ. ಸಂಧಿ ಕಾರ್ಯ ನಡೆಯುವಾಗ ಉತ್ತರ ಪದದ ಆದಿಯಲ್ಲಿ ಪ, ಬ, ಮ ವರ್ಗದ ಧ್ವನಿಗಳಿದ್ದರೆ ಅವು ವಕಾರವಾಗಿ ಬದಲಾಗುತ್ತಿದ್ದವು. ಉತ್ತರ ಪದದ ಆದಿಯ ಪ, ಬ, ಮ ಧ್ವನಿಗಳು ಸಂಧಿಯಾದ ಪದದಲ್ಲಿ ವ ಕಾರವಾಗಿಯೇ ಕಾಣಿಸಿಕೊಳ್ಳುತ್ತವೆ. ಮೊದಲಿದ್ದ ಧ್ವನಿಗಳು ಸ್ಪರ್ಶಗಳಾದರೆ ಫಲಿತ ಧ್ವನಿಯು ಘರ್ಷವಾಗಿದೆ. ಇದು ನಡುಗನ್ನಡದ ವೇಳೆಗಾಗಲೇ ಕಂಡುಬಂದಿದ್ದ ಬದಲಾವಣೆ. ಈಗ ಅಂತಹುದೆ ಪರಿವರ್ತನೆ ದಂತ್ಯ ಧ್ವನಿಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಅದರಲ್ಲೂ ಎರಡು ಸ್ವರಗಳ ನಡುವೆ ಬರುವ ದಕಾರ ಮತ್ತು ಸ್ವರ ಮತ್ತು ವ್ಯಂಜನಗಳ ನಡುವೆ ಬರುವ ದಕಾರ ತನ್ನ ಮೂಲ ಸ್ಪರ್ಶ ಗುಣವನ್ನು ಕಳೆದುಕೊಂಡು ಘರ್ಷತ್ವವನ್ನು ಪಡೆದುಕೊಳ್ಳುತ್ತಿದೆ. ಕನ್ನಡದಲ್ಲಿ ಘೋಷ ಘರ್ಷ ವ್ಯಂಜನವೊಂದು ಇಲ್ಲ. ಆದ್ದರಿಂದ ಬರವಣಿಗೆಯಲ್ಲಿ ಈ ಧ್ವನಿಯನ್ನು ಮಹಾ ಪ್ರಾಣ ಬೇರೆಯೆಂದು ಗುರುತಿಸುತ್ತಿದ್ದಾರೆ. ಇದು ಮೇಲುನೋಟಕ್ಕೆ ಬರವಣಿಗೆಯ ದೋಷವೆಂಬಂತೆ ತೋರುತ್ತದೆ. ಉದಾಹರಣೆಗೆ ವಿದ್ಯಾರ್ಥಿ ಪದವನ್ನು ವಿಧ್ಯಾರ್ಥಿ ಎಂಬ ಬರೆಯುವುದು. ಉದಾರ ಪದವನ್ನು ಉಧಾರ ಎಂದು ಬರೆಯುವುದು. ಆದರೆ ಇದು ಬರವಣಿಗೆಯ ದೋಷವಾಗಿರುವುದಕ್ಕಿಂತ ಹೆಚ್ಚಾಗಿ ಕನ್ನಡಿಗರ ಉಚ್ಚಾರಣೆಯಲ್ಲಿ ಆಗುತ್ತಿರುವ ಒಂದು ಪರಿವರ್ತನೆಯನ್ನು ಸೂಚಿಸುವಂತಿದೆ.

ಇಂತದೇ ಇನ್ನೊಂದು ಬದಲಾವಣೆ ಸ್ವರಗಳ ನಡುವೆ ಬರುವ ಪಕಾರದಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಪಕಾರ ಪದದಲ್ಲಿ ಮೊದಲು ಸ್ವರದ ನಂತರ ಬರುತ್ತಿದ್ದರೆ ಆ ಧ್ವನಿಯ ಅಘೋಷ ಘರ್ಷ ಧ್ವನಿಯಾಗಿ ಉಚ್ಚಾರಣೆಯಾಗುವ ಸಂದರ್ಭ ಕಂಡುಬರುತ್ತವೆ. ‘ಅಪಘಾತ’ ‘ವಿಪತ್ತು’, ‘ವಿಫಲ’ ಮುಂತಾದ ಪದಗಳಲ್ಲಿ ಪಕಾರವನ್ನು ಕನ್ನಡಿಗರು ಉಚ್ಚರಿಸುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಿದರೆ ಈ ಸ್ಪರ್ಶವು ಘರ್ಷಧ್ವನಿಯಾಗುತ್ತಿರುವ ಪರಿಸ್ಥಿತಿಯನ್ನು ಗ್ರಹಿಸುವುದು ಸಾಧ್ಯ

ಎಂಟು: ಮತ್ತೊಂದು ಧ್ವನಿಯ ಉಚ್ಚಾರಣೆ ಮತ್ತು ಚಿಹ್ನೆಯ ಬಗೆಗೆ ಈಚೆಗೆ ಒಂದು ವಾಗ್ವಾದವೇ ನಡೆಯಿತು. ಇದು ಋಕಾರದ ಚಿಹ್ನೆಯ ಬಗೆಗೆ ನಡೆದ ಚರ್ಚೆಯಾಗಿದೆ. ಕನ್ನಡ ಲಿಪಿ ವ್ಯವಸ್ಥೆಯು ವಾಸ್ತವವಾಗಿ ಕನ್ನಡ ಧ್ವನಿವ್ಯವಸ್ಥೆಯನ್ನು ಪ್ರತಿನಿಧಿಸುವ ಬದಲು ಸಂಸ್ಕೃತದ ಎಲ್ಲ್ಲ ಪ್ರಮಾಣಿತ ಧ್ವನಿಗಳನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದೆ. ಕಳೆದ ಶತಮಾನದಲ್ಲಿ ಶಾಲಾ ಶಿಕ್ಷಣದ ಭಾಗವಾಗಿ ಸ್ವರಗಳನ್ನು ಕಲಿಸುವಾಗ ಋಕಾರ ಮತ್ತು ಅದರ ದೀರ್ಘರೂಪ, ಉಪಧ್ಮಾನೀಯ ಗಳು, ಅನುಸ್ವಾರ ಮತ್ತು ವಿಸರ್ಗಗಳನ್ನು ಕಲಿಸಿಕೊಡುತ್ತಿದ್ದರು. ಆದರೆ ಕಾಲ ಕಳೆದಂತೆ ಕನ್ನಡಿಗರ ಉಚ್ಚಾರಣೆಯಲ್ಲಿ ಈ ಸ್ವರಗಳಿಗೆ ಅರ್ಥವಿಲ್ಲವೆಂಬುದು ಗಮನಕ್ಕೆ ಬಂದಿದೆ. ಇದರಿಂದಾಗಿ ಶಾಲಾ ಪಠ್ಯಗಳಿಂದ ಉಪಧ್ಮಾನೀಯಗಳನ್ನು ಮೊದಲು ಕೈ ಬಿಟ್ಟರು. ಹೀಗೆಯೇ ಋಕಾರವನ್ನು ಚಿಹ್ನೆ ಮತ್ತು ಉಚ್ಚಾರಣೆಗಳ ನೆಲೆಯಲ್ಲಿ ಬಿಟ್ಟು ಬಿಡಬೇಕೆಂದು ಚರ್ಚೆ ಮೊದಲಾಯಿತು.

ವಾಸ್ತವವಾಗಿ ಋಕಾರವು ರಕಾರವನ್ನು ಪ್ರತಿನಿಧಿಸುತ್ತದೆ. ಅವರ್ಗೀಯ ವ್ಯಂಜನವಾದ ರಕಾರವು ಕೆಲವು ಪರಿಸರಗಳಲ್ಲಿ ಅಕ್ಷರ ಕೇಂದ್ರವಾಗುವ ಸಾಧ್ಯತೆಗಳಿವೆ. ಅಕ್ಷರ ಕೇಂದ್ರಗಳು ಸಾಮಾನ್ಯವಾಗಿ ಸ್ವರಗಳು. ಈ ಅಕ್ಷರ ಕೇಂದ್ರಗಳಾಗಿ ಬಂದಾಗ ಅವುಗಳು ವ್ಯಂಜನಗಳಾಗಿದ್ದರೂ ಅವುಗಳಿಗೆ ಸ್ವರತ್ವ ಒದಗುತ್ತದೆ. ಹೀಗಾಗಿ ರ ವ್ಯಂಜನದ ಬದಲು ಅದರ ಸ್ವರರೂಪವಾಗಿ ಅಥವಾ ಅಕ್ಷರ ಕೇಂದ್ರವಾಗಿ ಋಕಾರವನ್ನು ಸಂಸ್ಕೃತದಲ್ಲಿ ಬಳಸುವ ಪದ್ಧತಿ ಇದೆ. ಇದು ಸರ್ವಥಾ ಕನ್ನಡಕ್ಕೆ ಅನ್ವಯಿಸುವ ವಿಚಾರವಲ್ಲ. ಏಕೆಂದರೆ ಕನ್ನಡದಲ್ಲಿ ಎಲ್ಲಿಯೂ ವ್ಯಂಜನವು ಅಕ್ಷರ ಕೇಂದ್ರವಾಗಲಾರದು. ರಕಾರವನ್ನು ಹೇಗೆ ಬರೆದರೂ ಅದರ ವ್ಯಂಜನ ಗುಣವನ್ನು ಮಾತ್ರ ಕಾಯ್ದುಕೊಳ್ಳುತ್ತದೆ. ಈ ಅಂಶ ಸಂಪ್ರದಾಯವಾದಿಗಳಿಗೆ ಒಪ್ಪಿಗೆಯಾಗಲಿಲ್ಲ. ಶಾಲಾ ಪಠ್ಯಗಳಿಂದ ಋಕಾರ ಚಿಹ್ನೆಯನ್ನು ಕೈಬಿಡುವ ಪ್ರಸ್ತಾವ ಅವರನ್ನು ಕೆರಳಿಸಿತು. ಎಂದಿನಂತೆ ಸರ್ಕಾರದ, ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವ ಎಂದಿನ ಆಲೋಚನೆಯ ಫಲವಾಗಿ ಋಕಾರ ಅದಿರುವ ಜಾಗದಲ್ಲಿ ಉಳಿದುಕೊಂಡಿದೆ.

ಒಂಬತ್ತು: ಕನ್ನಡದ ಧ್ವನಿರಚನೆಯಲ್ಲಿ ಆಗಿರುವ ಮತ್ತೆ ಕೆಲವು ಬದಲಾವಣೆಗಳು ಸಾರ್ವತ್ರಿಕವಾಗಿ ಕಾಣದಿದ್ದರೂ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳಲ್ಲಿ ಕ್ರಿಯಾಶೀಲವಾಗಿವೆ. ಇವು ಶೈಕ್ಷಣಿಕ ಮತ್ತು ಆಡಳಿತ ನೆಲೆಯಲ್ಲಿ ಸದ್ಯ ಪ್ರಭಾವ ಶಾಲಿಯಾಗಿಲ್ಲ. ಆದರೆ ಸಾಮಾಜಿಕ ಪರಿವರ್ತನೆಗಳು ಇಂಥಾ ಸಮತೋಲನವನ್ನು ಬದಲಾಯಿಸಬಹುದು. ಆಗ ಬೇರೆ ಬೇರೆ ಸೀಮಿತ ವಲಯಗಳಲ್ಲಿ ಕಾಣುತ್ತಿರುವ ಧ್ವನಿರಚನೆಯ ಪಲ್ಲಟಗಳು ಹೆಚ್ಚು ವ್ಯಾಪಕವಾದ ಬಳಕೆಯನ್ನು ಪಡೆಯುವ ಸಾಧ್ಯತೆ ಇದೆ. ಅಂತಹ ಎರಡು ಬದಲಾವಣೆಗಳನ್ನು ಇಲ್ಲಿ ಚರ್ಚಿಸಲಾಗುವುದು. ಒಂದು: ಮಹಾಪ್ರಾಣಗಳ ಉಚ್ಚಾರ, ಎರಡು: ಹಕಾರದ ಉಚ್ಚಾರ. ಮಹಾಪ್ರಾಣಗಳು ಕನ್ನಡದ ಮೂಲಧ್ವನಿಗಳಲ್ಲ ಎಂಬ ವಾದ ಹಳೆಯದು. ಆದರೆ ಬರಹ ಕನ್ನಡದಲ್ಲಿ ಅವುಗಳ ನಿಯತ ಬಳಕೆ ಮತ್ತು ನಿಯಮಬದ್ಧ ಬಳಕೆ ಎದ್ದು ಕಾಣುವ ಲಕ್ಷಣವಾಗಿದೆ. ಉಚ್ಚಾರಣೆಯಲ್ಲಿ ಮಹಾಪ್ರಾಣ ಮತ್ತು ಅದರ ಅಲ್ಪಪ್ರಾಣಗಳ ನಡುವೆ ವ್ಯತ್ಯಾಸ ಮಾಡದವರು ತಮ್ಮ ಬರಹದಲ್ಲಿ ಈ ವ್ಯತ್ಯಾಸವನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಹಾಗೆ ವ್ಯತ್ಯಾಸವನ್ನು ಕಾಯ್ದುಕೊಳ್ಳದೆ ಹೋದರೆ ಅದನ್ನು ಬರವಣಿಗೆಯ ದೋಷ ಎಂದು ಪರಿಗಣಿಸಲಾಗುತ್ತಿದೆ. ಆದರೆ ಕನ್ನಡದ ಬರವಣಿಗೆಯಲ್ಲಿ ಭಾಗವಹಿಸುವವರ ಸ್ವರೂಪ ಸಾಮಾಜಿಕ ನೆಲೆಯಲ್ಲಿ ಬದಲಾಗುತ್ತಾ ಹೋದಂತೆ ತಮ್ಮ ಉಚ್ಚಾರಣೆಯ ರೀತಿಯನ್ನೇ ಬರಹದಲ್ಲೂ ಉಳಿಸಿಕೊಳ್ಳುವವರು ಹೆಚ್ಚಾಗುತ್ತಿದ್ದಾರೆ. ಅಂದರೆ ಬರವಣಿಗೆಯಲ್ಲೂ ಮಹಾಪ್ರಾಣಗಳ ಬದಲು ಅಲ್ಪಪ್ರಾಣಗಳನ್ನು ಬಳಸಲು ತೊಡಗಿ ದ್ದಾರೆ. ಈ ವಿಕಲ್ಪಕ್ಕೆ ಮನ್ನಣೆ ಇನ್ನೂ ದೊರಕಿಲ್ಲ. ಆದರೂ ಭಾಷಾಶಾಸ್ತ್ರಜ್ಞರು ಈ ಬಗೆಗೆ ಸಾಕಷ್ಟು ಜಾಗ್ರತರಾಗಿದ್ದಾರೆ. ಮಹಾಪ್ರಾಣಗಳನ್ನು ಅಲ್ಪಪ್ರಾಣಗಳನ್ನಾಗಿ ಉಚ್ಚರಿಸುವುದರಿಂದ ತೊಂದರೆ ಇಲ್ಲವಾದರೆ ಅವುಗಳನ್ನು ಬರವಣಿಗೆಯಲ್ಲೂ ಅಲ್ಪಪ್ರಾಣವಾಗಿಯೇ ಬರೆದರೆ ತಪ್ಪೇನು ಎಂಬ ಪ್ರಶ್ನೆ ಮುಂಚೂಣಿಗೆ ಬರುತ್ತಿವೆ. ಈಗಾಗಲೇ ಹೇಳಿದಂತೆ ಮಹಾಪ್ರಾಣಗಳಿರುವ ಪದಗಳು ಕನ್ನಡಕ್ಕೆ ಸಂಸ್ಕೃತದಿಂದ ಬಂದಿವೆ. ಅಂತಹ ಪದಗಳನ್ನು ಬರೆಯುವಾಗ ಅಲ್ಪಪ್ರಾಣ ಯುಕ್ತವಾಗಿ ಬರೆದರೆ ಅರ್ಥ ವ್ಯತ್ಯಾಸವಾಗುತ್ತದೆ ಎಂಬುದು ಸಂಪ್ರದಾಯವಾದಿಗಳ ಕೊರಗು. ಹೀಗೆ ಮಹಾಪ್ರಾಣಗಳ ಬದಲು ಅಲ್ಪಪ್ರಾಣ ಬರೆದರೆ ಅರ್ಥದ ನೆಲೆಯಲ್ಲಿ ಗೊಂದಲ ಉಂಟಾಗಬಹುದಾದ ಪದಗಳ ಸಂಖ್ಯೆ(ಕನ್ನಡ ಬರಹದಲ್ಲಿ ಬಳಕೆಯಾಗುವಂತಹವು) ಸುಮಾರು ೨೧ನ್ನು ದಾಟುವುದಿಲ್ಲ ಎಂಬುದನ್ನು ಲೆಕ್ಕಹಾಕಿ ತೋರಿಸಲಾಗಿದೆ. ಉದಾಹರಣೆ ರಥ/ರತ. ಅಲ್ಲದೆ ಯಾವುದೇ ಧ್ವನಿ ವ್ಯತ್ಯಾಸ ಲಿಖಿತರೂಪದಲ್ಲಿ ಪ್ರತಿನಿಧಿತವಾಗುವಾಗ ಇಂತಹ ಗೊಂದಲಗಳು ಅಸಹಜವಲ್ಲ. ಅರ್ಥವ್ಯತ್ಯಾಸವುಳ್ಳ ಪದಗಳು ಒಂದೇ ರೀತಿಯ ಬರವಣಿಗೆಯ ರೂಪವನ್ನು ಪಡೆದುಕೊಂಡು ಬಿಡುತ್ತದೆ. ೧೦-೧೨ನೇ ಶತಮಾನದಲ್ಲಿ ರಳ ಕುಳವಾಗಿ ಬದಲಾದಾಗ ಶಕಟ ರೇಫೆಯು ರಕಾರವಾಗಿ ಬದಲಾದಾಗ ಬರವಣಿಗೆಯ ರೂಪದಲ್ಲಿ ಇಂತಹ ಗೊಂದಲಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಿವೆ. ಆದರೆ ಅದರಿಂದ ಕನ್ನಡಕ್ಕೆ ಕುತ್ತೇನೂ ಬಂದಿಲ್ಲ. ಮಹಾಪ್ರಾಣಗಳ ವಿಷಯದಲ್ಲೂ ಈ ಮಾತು ನಿಜ. ಕನ್ನಡದಲ್ಲಿ ನಡೆಯುತ್ತಿರುವ ಒಂದು ಮುಸುಕಿನ ಸಂಘರ್ಷ ಮುಂದಿನ ದಶಕಗಳಲ್ಲಿ ನಿರ್ದಿಷ್ಟ ಆಕಾರವನ್ನು ಪಡೆಯಬಹುದು. ಮಹಾಪ್ರಾಣಗಳು ಕನ್ನಡದ ಉಚ್ಚಾರಣೆಯಿಂದ ಕಳೆದುಹೋದಂತೆ ಬರವಣಿಗೆಯಿಂದಲೂ ಮಾಯವಾಗಬಹುದು.

ಹಕಾರದ ಕತೆಯೂ ಹೀಗೆ ಇದೆ. ಹಕಾರವನ್ನು ಪದಾದಿಯಲ್ಲಿ ಉಚ್ಚರಿಸುವುದಿಲ್ಲ ಎಂಬುದು ಹಲವರ ಕನ್ನಡ ಉಚ್ಚಾರಣೆಯ ಬಗೆಗೆ ಸುಶಿಕ್ಷಿತರ ಟೀಕೆ. ಇದು ಅಶಿಕ್ಷಿತ ಕನ್ನಡಿಗರನ್ನು ಗೇಲಿ ಮಾಡಲು ಬಳಸುವ ಒಂದು ಸಿದ್ಧ ಮಾದರಿಯೂ ಆಗಿದೆ. ಆದರೆ ಇದು ನಾವು ತಿಳಿದಂತೆ ಇಲ್ಲ. ಪದಾದಿಯ ಹಕಾರವನ್ನು ಕೆಲವರು ಉಚ್ಚರಿಸುತ್ತಿಲ್ಲವೋ ಅಥವಾ ಅವರು ಉಚ್ಚರಿಸುತ್ತಿರುವ ಧ್ವನಿಯನ್ನು ನಾವು ಕೇಳಿಸಿ ಕೊಳ್ಳುತ್ತಿಲ್ಲವೋ ತಿಳಿಯದು. ಏಕೆಂದರೆ ಹಕಾರ ಲೋಪವನ್ನು ಗೇಲಿ ಮಾಡುವವರು ಹಕಾರ ಬಿಟ್ಟು ಉಚ್ಚರಿಸಿದಾಗ ಅದು ಕೇಳುವ ರೀತಿಗೂ ನಿಜ ಜೀವನದಲ್ಲೂ ಹಕಾರ ಪರಿಗಣಿಸಿದೆ ಉಚ್ಚರಿಸುವವರ ಉಚ್ಚಾರಣೆಗೂ ವ್ಯತ್ಯಾಸಗಳಿವೆ. ಅಂದರೆ ಅವರು ಹಕಾರ ಲೋಪಮಾಡುತ್ತಾರೆಂದು ನಾವು ತಿಳಿದವರೇ ಅವರು ತಮ್ಮ ಉಚ್ಚಾರಣೆಯಲ್ಲಿ ಹಕಾರದ ಬದಲು ಬೇರೊಂದು ಧ್ವನಿಯನ್ನು ಬಳಸುತ್ತಿರ ಬಹುದು. ನಮಗೆ ಅಪರಿಚಿತವಾದ ಆ ಧ್ವನಿಯನ್ನು ನಾವು ಕೇಳಿಸಿಕೊಳ್ಳದೆಯೂ ಇರಬಹುದು. ಇದು ಕೇವಲ ಊಹೆಯಲ್ಲ. ಕನ್ನಡದ ಹಲವು ಉಪಭಾಷೆಗಳನ್ನು ನಿಕಟವಾಗಿ ಗಮನಿಸಿದರೆ ಅಲ್ಲಿ ಈ ಹಕಾರದ ಉಚ್ಚಾರಣಾ ಸ್ವರೂಪ ಹೆಚ್ಚು ಸಂಕೀರ್ಣವಾಗಿರುವುದು ಗೊತ್ತಾಗುತ್ತದೆ.

ಇಂಗ್ಲಿಶ್ ಭಾಷೆಯನ್ನು ಶಾಲಾಶಿಕ್ಷಣದಲ್ಲಿ ಕಡ್ಡಾಯವಾಗಿ ಕಲಿಯುತ್ತಿರುವುದರಿಂದ ಮತ್ತು ಆಡಳಿತದಲ್ಲಿ ಇಂಗ್ಲಿಶ್ ಒಂದು ಸಹಭಾಷೆಯಾಗಿ ಬಳಕೆಯಾಗುತ್ತಿರುವುದರಿಂದ ಮತ್ತೊಂದು ಬಗೆಯ ಧ್ವನಿ ವ್ಯತ್ಯಾಸವು ಕನ್ನಡದಲ್ಲಿ ನೆಲೆಯೂರತೊಡಗಿದೆ. ಅದನ್ನೀಗ ಗಮನಿಸಬಹುದು. ಕನ್ನಡದ ಣಕಾರ ಮತ್ತು ಳಕಾರಗಳು ಇಂಗ್ಲಿಶ್ ಭಾಷೆಯಲ್ಲಿ ಸಂವಾದಿ ಉಚ್ಚಾರಣೆಯನ್ನಾಗಲೀ ಲಿಪಿ ಚಿಹ್ನೆಯನ್ನಾಗಲೀ ಪಡೆದಿಲ್ಲ. ಆದರೆ ಈ ಧ್ವನಿಗಳುಳ್ಳ ಎಷ್ಟೋ ಕನ್ನಡ ಪದಗಳನ್ನು ಅದರಲ್ಲೂ ಮುಖ್ಯವಾಗಿ ನಾಮಪದಗಳನ್ನು ಇಂಗ್ಲಿಶ್ ಭಾಷೆಯಲ್ಲಿ ಅಂದರೆ ರೋಮನ್ ಲಿಪಿಯಲ್ಲಿ ಬರೆಯಬೇಕಾಗಿ ಬರುತ್ತದೆ. ಹೀಗೆ ಬರೆದಾಗ ಕನ್ನಡದ ಣಕಾರಕ್ಕೆ ಬದಲಾಗಿ ಇಂಗ್ಲಿಶ್‌ನ ಎನ್ ಚಿಹ್ನೆಯನ್ನು ಕನ್ನಡದ ಳಕಾರಕ್ಕೆ ಬದಲಾಗಿ ಎಲ್ ಚಿಹ್ನೆಯನ್ನು  ಬಳಸುವುದು ಬಳಕೆಯಾಗಿದೆ. ಹೀಗೆ ಬರೆದ ಇಂಗ್ಲಿಶ್ ರೂಪದ ಕನ್ನಡ ಪದಗಳನ್ನು ಕನ್ನಡಿಗರು ಅದರಲ್ಲೂ ಶಿಕ್ಷಿತ ಕನ್ನಡಿಗರು ಉಚ್ಚರಿಸುವಾಗ ಮೂಲ ಕನ್ನಡದ ಉಚ್ಚಾರವನ್ನು ಬಿಟ್ಟುಕೊಡುತ್ತಿರು ವುದು ಕಂಡುಬರುತ್ತಿದೆ. ಅದರ ಬದಲು ರೋಮನ್ ಲಿಪಿಯ ಉಚ್ಚಾರವನ್ನೇ ಬಳಸುವುದು ವಾಡಿಕೆಯಾಗತೊಡಗಿದೆ. ವ್ಯಕ್ತಿನಾಮಗಳಲ್ಲಿ ಇದು ವ್ಯಾಪಕವಾಗಿ ಕಂಡುಬರುತ್ತಿರುವ ಪ್ರವೃತ್ತಿ. ಹಾಗೆಯೇ ಸ್ಥಳನಾಮಗಳನ್ನು ರೋಮನ್ ಲಿಪಿಯಲ್ಲಿ ಬರೆದಾಗ ಅದನ್ನು ಮರಳಿ ಕನ್ನಡಿಗರು ಹೇಳುವಾಗ ಕನ್ನಡದ ಣ ಮತ್ತು ಳಗಳಿಗೆ ಬದಲು ನ ಮತ್ತು ಲಗಳನ್ನು  ಹೇಳುತ್ತಿದ್ದಾರೆ. ಕೆಲವು ನಿದರ್ಶನಗಳನ್ನು ನೋಡಬಹುದು. ನಾರಾಯಣ ಎಂಬುದು ಶಿಕ್ಷಿತರ ಉಚ್ಚಾರಣೆಯಲ್ಲಿ ನಾರಾಯನ್, ಹರಿಣಿ ಎನ್ನುವುದು ಹರಿನಿ ಎಂದಾಗುತ್ತದೆ. ಹಾಗೆಯೇ ಹಳಿಯಾಳ ಎನ್ನುವ ಊರ ಹೆಸರು ಹಲಿಯಾಲ್ ಎಂದು ಬದಲಾಗುತ್ತಿದೆ. ಹೀಗೆ ಉಚ್ಚಾರಣೆ ಬದಲಾಗು ವುದು ಶಿಕ್ಷಿತರ ಆಧುನಿಕತೆಯ ಲಕ್ಷಣ ಆಗಿರುವುದರಿಂದ ಈ ಹೊಸ ಉಚ್ಚಾರಣೆಗಳು ಪ್ರಮಾಣರೂಪಗಳಾಗುವ ಸಂಭವವಿದೆ.

ಈ ಬದಲಾವಣೆಯನ್ನು ವಿವರಿಸುವಾಗ ಕನ್ನಡದ ಣಕಾರ ಮತ್ತು ಳಕಾರಗಳು ಪೂರ್ಣವಾಗಿ ಕನ್ನಡಿಗರ ಉಚ್ಚಾರಣೆಯಿಂದ ಮಾಯವಾಗುತ್ತಿವೆ ಎಂದು ಹೇಳುವ ಉದ್ದೇಶವಿಲ್ಲ. ಆದರೆ ಅವುಳನ್ನು ಉಚ್ಚರಿಸಬೇಕಾದ ಕೆಲವು ಕಡೆಗಳಲ್ಲಿ ಅವುಗಳ ಬದಲಿಗೆ ನ ಮತ್ತು ಲಗಳನ್ನು ಬಳಸಲಾಗುತ್ತಿದೆ ಎಂದು ಹೇಳುವುದು ಇಲ್ಲಿನ ಉದ್ದೇಶ. ಹಾಗೆ ನೋಡಿದರೆ ಇಂಗ್ಲಿಶ್‌ನ ಎಷ್ಟೋ ಪದಗಳನ್ನು ಕನ್ನಡಿಗರು ಉಚ್ಚರಿಸುವಾಗ ಅಲ್ಲಿನ ನಕಾರಕ್ಕೆ ಣಕಾರವನ್ನು ಆದೇಶಿಸುವುದುಂಟು. ಅದರಲ್ಲೂ ಎನ್ ನಂತರ ಟಿ ಅಥವಾ ಡಿ ಬರುವ ಪದಗಳನ್ನು ಉಚ್ಚರಿಸುವಾಗ ನ ಕಾರದ ಬದಲು ಣ ಆದೇಶಿಸುತ್ತಾರೆ. ಇದು ಕನ್ನಡದ ಸಹಜ ಉಚ್ಚಾರಣಾ ನಿಯಮವೇ ಆಗಿದೆ. ಉದಾಹರಣೆಗೆ ಕೌಂಟ್, ಅಂಡ್, ಬೆಂಡ್, ಟೆಂಟ್ ಮುಂತಾದ ಪದಗಳನ್ನು ಕನ್ನಡಿಗರು ಉಚ್ಚರಿಸುವುದನ್ನು ಗಮನಿಸಬಹುದು. ಆದರೆ ಲ ಕಾರದ ಬದಲು ಳಕಾರವನ್ನು ಆದೇಶಿಸಿ ಉಚ್ಚರಿಸುವ ಪ್ರಸಂಗಗಳು ವಿನಾಯಿತಿಗಳೇ ಹೊರತು ನಿಯಮಗಳಲ್ಲ. ಉದಾಹರಣೆಗೆ ಟೋಳ್ಡ್. ಇದರಿಂದ ಕನ್ನಡ ಧ್ವನಿ ರಚನೆಯಲ್ಲಿ ಇರುವ ಣಕಾರ ಮತ್ತು ಳಕಾರಗಳು ತಮ್ಮ ಪ್ರಸಾರ ವ್ಯಾಪ್ತಿಯಲ್ಲಿ ಬದಲಾವಣೆ ಕಂಡಿವೆ ಎಂದು ವಿವರಿಸುವುದು ಹೆಚ್ಚು ಸೂಕ್ತವೆಂದು ತೋರುತ್ತದೆ.

ಸಾಮಾನ್ಯ ತಿಳುವಳಿಕೆಯಂತೆ ಕನ್ನಡ ಪದಗಳು ಸ್ವರಾಂತ ರಚನೆಯನ್ನು ಹೊಂದಿವೆ. ಇದನ್ನು ಸಮರ್ಥಿಸಲು ಕನ್ನಡ ಭಾಷೆಯ ಚರಿತ್ರೆಯನ್ನು ಉಲ್ಲೇಖಿಸಲಾಗುತ್ತದೆ. ಆದರೆ ಈ ಸ್ವರಾಂತ ಸ್ವರೂಪ ಒಂದು ವಿಶಿಷ್ಟ ಬದಲಾವಣೆಗೆ ಒಳಗಾಗುತ್ತದೆ. ಅನ್ಯಭಾಷೆಯಿಂದ ಕನ್ನಡಕ್ಕೆ ಪಡೆದುಕೊಂಡ ವ್ಯಂಜನಾಂತ ಪದಗಳನ್ನು ಕನ್ನಡ ಸ್ವರಾಂತ ಮಾಡಿಕೊಂಡಿದೆ. ಹೀಗೆ ಸ್ವರವನ್ನು ಪದಗಳ ಕೊನೆಗೆ ಸೇರಿಸುವಾಗ ಅನುಸರಿಸುವ ನಿಯಮವನ್ನು ಕೂಡ ಈಗಾಗಲೇ ಗುರುತಿಸಲಾಗಿದೆ. ಆದರೆ ಹೀಗೆ ಸ್ವರಾಂತ ಮಾಡಿದ ರೂಪಗಳು ಸ್ವತಂತ್ರ ಪದಗಳಾಗಿ ಮಾತ್ರ ಬಳಕೆಯಾಗುತ್ತವೆ. ಉಳಿದಂತೆ ಬೇರೆ ಬೇರೆ ಪ್ರತ್ಯಯಗಳು ಸೇರಿದಾಗ ಅವು ವ್ಯಂಜನಾಂತವಾಗಿಯೇ ನಿಲ್ಲುತ್ತವೆ. ಅಂದರೆ ಅವುಗಳಿಗೆ ಸೇರಿದ ಸ್ವರ ಪ್ರಕೃತಿಯ ಭಾಗವಾಗಿರುವುದಿಲ್ಲ. ಅಂತಸ್ಥ ರೂಪಗಳು ವ್ಯಂಜನಾಂತವಾಗಿಯೇ ಇರುತ್ತವೆ. ಈ ಪ್ರಕ್ರಿಯೆ ಕಳೆದ ಕೆಲವು ದಶಕಗಳಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಇದರಿಂದ ನಿಜವಾಗಿಯೂ ಸ್ವರಾಂತವಾಗುವ ಪದಗಳನ್ನು ಕೂಡ ಎಷ್ಟೋ ಕಡೆಗಳಲ್ಲಿ ವ್ಯಂಜನಾಂತವಾಗಿಯೇ ಬಳಸುವುದು ಕಾಣುತ್ತಿದೆ. ಅದರಲ್ಲೂ ವ್ಯಕ್ತಿ ನಾಮ ಮತ್ತು ಸ್ಥಳನಾಮಗಳಲ್ಲಿ ಇದು ಹೆಚ್ಚಾಗಿ ಕಂಡುಬರುವ ಪ್ರವೃತ್ತಿ. ಅಕಾರಾಂತವಾಗುವ ವ್ಯಕ್ತಿನಾಮಗಳು ಬಹುಮಟ್ಟಿಗೆ ತಮ್ಮ ಕೊನೆಯ ಸ್ವರಗಳನ್ನು ಕಳೆದುಕೊಂಡು ವ್ಯಂಜನಾಂತವಾಗಿ ನಿಲ್ಲುತ್ತವೆ. ಸಾಮಾನ್ಯವಾಗಿ ಇಕಾರಾಂತ ನಾಮಪದಗಳು ಮತ್ತು ಸಜಾತೀಯ ದ್ವಿತ್ವವನ್ನು ಕೊನೆಯ ವ್ಯಂಜನವನ್ನಾಗಿ ಪಡೆದಿರುವ ನಾಮಪದಗಳು ವ್ಯಂಜನಾಂತವಾಗುವುದಿಲ್ಲ. ಆದರೆ ಸ್ಥಳನಾಮಗಳಲ್ಲಿ ಈ ಕಟ್ಟುಪಾಡನ್ನು ಮೀರಲು ಬೇರೆಬೇರೆ ತಂತ್ರಗಳನ್ನು ಅವಲಂಬಿಸಲಾಗುತ್ತಿದೆ. ಕೆಲವು ನಿದರ್ಶನಗಳನ್ನು ನೋಡೋಣ. ಅಕಾರಾಂತ ನಾಮಪದಗಳು ವ್ಯಂಜನಾಂತವಾಗುವುದಕ್ಕೆ ರಾಮ/ರಾಮ್, ನಾಯಕ/ನಾಯಕ್, ಮನೋಜ/ಮನೋಜ್ ಉಕಾರಾಂತ ನಾಮಪದಗಳಿಗೆ ಅಸಂಖ್ಯ ನಿದರ್ಶನಗಳಿವೆ. ಆದರೆ ಮಣಿ, ಮಾಲಿನಿ, ಹರಿಣಿ ಮುಂತಾದ ಇಕಾರಾಂತ ನಾಮಪದಗಳು ತಮ್ಮ ಅಂತ್ಯಸ್ವರಗಳನ್ನು ಕಳೆದುಕೊಳ್ಳುವುದಿಲ್ಲ. ಅಕಾರಾಂತವಾದರೂ ವ್ಯಂಜನಾಂತವಾಗದ ನಾಮಪದ ಪದಗಳಿಗೆ ನಿದರ್ಶನಗಳು ರಾಮಯ್ಯ, ಚಂದ್ರಪ್ಪ, ಅಪ್ಪಯ್ಯ, ರಾಮಕ್ಕ, ಇಂತವು ಆದರೆ ಸ್ಥಳನಾಮಗಳಲ್ಲಿ ಪಟ್ಟಣ ಎಂದು ಕೊನೆಯಾಗುವ ಊರ ಹೆಸರುಗಳು ಹಿಂದಿನ ವ್ಯಂಜನದ ದ್ವಿತ್ವವನ್ನು ಕಳೆದು ಪಟ್ಟನ್/ಪಟನ್ ಎಂದು ಬದಲಾಗಿಬಿಡುತ್ತವೆ.

ಈ ಬದಲಾವಣೆಯನ್ನು ನಾವು ಮಾತಿನ ರೂಪಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಲಿಖಿತ ರೂಪಗಳು ಸ್ವರಾಂತವಾಗಿದ್ದರೂ ಅವುಗಳನ್ನು ಉಚ್ಚರಿಸುವಾಗ ವ್ಯಂಜನಾಂತ ಮಾಡಿ ಹೇಳುವ ಪ್ರವೃತ್ತಿ ಹೆಚ್ಚಾಗಿದೆ. ಉದಾಹರಣೆಗೆ ಮನಮೋಹನ್ ಸಿಂಗ್ ಎಂದು ಬರೆದರೂ ಹೇಳುವುದು ಮಾತ್ರ ಮನ್‌ಮೋಹನ್ ಸಿಂಗ್ ಎಂದೇ. ಈ ವ್ಯಂಜನಾಂತಗೊಳಿಸುವ ಪ್ರಕ್ರಿಯೆಯ ಹಿಂದೆ ಭಾಷಿಕವಾದ ಒತ್ತಡಗಳಿರುವಂತೆ ಸಾಮಾಜಿಕವಾದ ನಿರೀಕ್ಷೆಗಳು ಕೆಲಸ ಮಾಡುತ್ತಿವೆ. ಈ ಹಿಂದೆ ಹೇಳಿದಂತೆ ವ್ಯಕ್ತಿಯು ಆಧುನಿಕಗೊಂಡ ಗುರುತಾಗಿ ಇಂತಹ ಉಚ್ಚಾರಣಾ ವ್ಯತ್ಯಾಸಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿ ಬಿಟ್ಟಿದೆ. ಕನ್ನಡದಲ್ಲಿ ವ್ಯಾಪಕವಾಗಿ ಆವರಿಸುತ್ತಿರುವ ಈ ಧ್ವನಿತಂತ್ರದ ಸ್ವರೂಪವನ್ನು ಅದರ ಸಾಮಾಜಿಕ ಆಯಾಮಗಳನ್ನು ಅಭ್ಯಾಸ ಮಾಡಬೇಕಾಗಿದೆ.

ಈ ವ್ಯಂಜನಾಂತಗೊಳಿಸುವ ಪ್ರಕ್ರಿಯೆ ಭಾಷಿಕವಾದ ಒತ್ತಡದಿಂದಲೂ ಬಳಕೆಗೆ ಬಂದಿದೆ ಎಂದೆವು. ಅಂತಸ್ಥ ರೂಪಗಳು ವ್ಯಂಜನಾಂತವಾಗಿರುವುದು ಒಂದು ಮುಖ್ಯ ಕಾರಣ. ಎರಡನೆಯದಾಗಿ ಕನ್ನಡ ಭಾಷೆಯ ಉಚ್ಚಾರಣಾ ಲಯದ ಕೆಲವು ಶರತ್ತುಗಳು ಈ ಬಗೆಯ ಪರಿವರ್ತನೆಯನ್ನು ಬಯಸುತ್ತವೆ. ಈ ಲಯದ ನಿರೀಕ್ಷೆಗಳನ್ನು ಸ್ಥೂಲವಾಗಿ ಹೀಗೆ ವಿವರಿಸಬಹುದು. ವ್ಯಕ್ತಿಯ ಹೆಸರಿನಲ್ಲಿ ನಾಲ್ಕಕ್ಕಿಂತ ಹೆಚ್ಚು ಸ್ವರಗಳನ್ನು ಉಚ್ಚಾರಣೆಯಲ್ಲಿ ಉಳಿಸಿಕೊಳ್ಳುವುದಿಲ್ಲ. ಅದಕ್ಕಿಂತ ಕಡಿಮೆ ಆಗುವುದೇ ಹೆಚ್ಚು. ನಾಲ್ಕು ಸ್ವರಗಳಿದ್ದರೆ, ಅವುಗಳನ್ನು ಎರಡೆರಡು ಸ್ವರಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇದೇ ನಿಯಮ ಸ್ಥಳನಾಮ ಮತ್ತು ಬೀದಿಯ ಹೆಸರುಗಳು ಇವೆಲ್ಲಕ್ಕೂ ಅನ್ವಯವಾಗುತ್ತದೆ. ಕನ್ನಡದ ಉಚ್ಚಾರಣೆಯ ಈ ಲಯಗಾರಿಕೆ, ವಿನಾಯಿತಿಗಳು ಇಲ್ಲ ಎನ್ನುವಷ್ಟು ಬಲವಾಗಿ ಜಾರಿಗೊಳ್ಳುತ್ತಿದೆ.

ಈ ಉಚ್ಚಾರಣೆಯ ಲಯವನ್ನು ಗುರುತಿಸಲು ಕೆಲವು ನಿದರ್ಶನಗಳನ್ನು ನೋಡಬಹುದು. ವ್ಯಕ್ತಿಯ ಹೆಸರುಗಳಲ್ಲಿ ಒಂದೇ ಪದವಿದ್ದರೆ ಸಾಮಾನ್ಯವಾಗಿ ಅದನ್ನು ವ್ಯಂಜನಾಂತ ಮಾಡುವ ಪ್ರವೃತ್ತಿ ಇದೆ. ಹೀಗೆ ವ್ಯಂಜನಾಂತ ಮಾಡದಿದ್ದಲ್ಲೂ ನಿರ್ಬಂಧ ವಿಧಿಸುವ ಪರಿಸರಗಳೆಂದರೆ ಒಂದು: ಇಕಾರಾಂತ ಪದಗಳು, ಎರಡು: ಅಂತ್ಯ ವ್ಯಂಜನವು ಸಜಾತೀಯ ಅಥವಾ ವಿಜಾತೀಯ ದ್ವಿತ್ವದಿಂದ ಕೂಡಿರುವುದು. ಉಳಿದಂತೆ ಹೆಸರುಗಳಲ್ಲಿ ಎರಡು ಭಾಗಗಳಿದ್ದರೆ ಅವುಗಳನ್ನು ಸಮಾನ ಉಚ್ಚಾರಣಾ ಘಟಕಗಳನ್ನಾಗಿ ವಿಂಗಡಿಸಲಾಗುವುದು. ಈ ಎರಡು ಘಟಕಗಳಲ್ಲಿ ಸಾಮಾನ್ಯವಾಗಿ ಎರಡು ಸ್ವರಗಳು (ಅಂದರೆ ಅಕ್ಷರಗಳು) ಇರುವಂತೆ ನೋಡಿಕೊಳ್ಳಲಾಗುತ್ತದೆ. ಎರಡಕ್ಕಿಂತ ಹೆಚ್ಚು ಸ್ವರಗಳು ಒಂದು ಘಟಕದಲ್ಲಿ ಬಂದರೆ ಅಲ್ಲಿ ಹೆಸರನ್ನೇ ಹ್ರಸ್ವಗೊಳಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.

ಇದೇ ನಿಯಮ ಬಹುಮಟ್ಟಿಗೆ ಊರ ಹೆಸರು ಮತ್ತು ಬೀದಿಯ ಮತ್ತು ಬಡಾವಣೆಯ ಹೆಸರುಗಳಿಗೂ ಅನ್ವಯಿಸುತ್ತದೆ. ಕನ್ನಡ ಮಾತಿನ ಈ ಲಯಗಾರಿಕೆ ಕಳೆದ ಕೆಲವು ದಶಕಗಳ ಆವಿಷ್ಕಾರವೆಂದು ತೋರುತ್ತದೆ. ಹೆಸರುಗಳನ್ನು ಈ ಲಯಕ್ಕನುಗುಣವಾಗಿ ಪರಿವರ್ತಿಸುವ ಪ್ರವೃತ್ತಿ ಹೀಗಾಗಿ ಈಚಿನ ವರ್ಷಗಳಲ್ಲಿ ಗಾಢವಾಗಿದೆ. ಈ ಪ್ರವೃತ್ತಿಯನ್ನು ಪರಿಗಣಿಸದೆ ಇಟ್ಟ ಹೆಸರುಗಳೆಲ್ಲ ತಮ್ಮ ಮೂಲ ರೂಪವನ್ನು ಕಳೆದುಕೊಂಡು ಚಿಕ್ಕ ರೂಪಗಳಲ್ಲಿ ಉಳಿದುಕೊಳ್ಳುತ್ತವೆ. ಈ ಲಯದ ಬಳಕೆ ಒಂದು ಅಲಿಖಿತ ನಿಯಮ. ಇದನ್ನು ಯಾರೂ ನಿರ್ದೇಶನದ ಮೂಲಕ ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಹೇರಿಲ್ಲ.

ಕನ್ನಡದ ಪದಗಳ ಅಂತಸ್ಥ ರೂಪ ಹೀಗೆ ವ್ಯಂಜನಾಂತವಾಗುತ್ತಿರುವ ಪ್ರಕ್ರಿಯೆ ಒಂದು ಮೂಲಭೂತ ಭಾಷಿಕ ಬದಲಾವಣೆಗೆ ಕಾರಣವಾಗಿದೆ. ಹಳೆಗನ್ನಡದ ಅಕ್ಷರರಚನೆ ನಡುಗನ್ನಡದಲ್ಲಿ ಬದಲಾಗುತ್ತದೆ. ಬಹುಮಟ್ಟಿಗೆ ನಡುಗನ್ನಡದ ಅಕ್ಷರಗಳು ವಿವೃತ ಮಾದರಿಯವು. ತೀರ ಹೆಚ್ಚೆಂದರೆ ಪದಾದಿಯಲ್ಲಿ ಒಂದು ಸಂವೃತ ಅಕ್ಷರ ಬರುತ್ತಿರುವುದು. ಆ ಸಂವೃತ ಅಕ್ಷರದಲ್ಲೂ ಕೇಂದ್ರದ ಅನಂತರ ಬರುವ ವ್ಯಂಜನ ಯಾವುದಾಗಬೇಕು ಎಂಬ ಬಗೆಗೆ ನಿಯಮಗಳಿವೆ. ಆದ್ದರಿಂದಲೇ ನಡುಗನ್ನಡದಲ್ಲಿ ರಕುತ, ಭಕುತಿ, ಮುಕುತಿ, ಸೂರಿಂii ಮುಂತಾದ ಪದರೂಪಗಳು ಅಗಾಧ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಹೊಸಗನ್ನಡದಲ್ಲಿ ಈ ರೂಪಗಳು ಗ್ರಹಿಕೆಯ ನೆಲೆಯಲ್ಲಿ ಮಾತ್ರ ಉಳಿದು ಬಳಕೆಯ ನೆಲೆಯಲ್ಲಿ ಮೂಲರೂಪಗಳನ್ನೇ ನಾವು ಆಶ್ರಯಿಸುತ್ತಿದ್ದೇವೆ. ಅಂದರೆ ಸಂವೃತಾಕ್ಷರಗಳಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಒಪ್ಪಿಕೊಳ್ಳುತ್ತಿದ್ದೇವೆ. ಕನ್ನಡದ ಆಡುಮಾತಿನ ರೂಪಗಳು ಮತ್ತು ಬರಹದ ರೂಪಗಳು ಬೇರೆ ಬೇರೆಯ ರೀತಿಯಲ್ಲಿ ಇದ್ದರೂ ಎರಡೂ ಕಡೆ ವಿವೃತಾಕ್ಷರದ ರಚನೆಗಳೇ ಬೇಕೆಂಬ ಒತ್ತಾಯವಿಲ್ಲ. ಇದು ಕನ್ನಡದಲ್ಲಿ ಆಗಿರುವ ಧ್ವನಿತಂತ್ರ ನೆಲೆಯ ಬಹುಪ್ರಮುಖ ಬದಲಾವಣೆ. ಈ ಹಿಂದೆ ಹೇಳಿದ ವ್ಯಂಜನಾಂತಗೊಳಿಸುವ ಪ್ರವೃತ್ತಿಯಲ್ಲೂ ಈ ಅಕ್ಷರ ರಚನೆಯ ಬದಲಾವಣೆಯೇ ಕೆಲಸ ಮಾಡುತ್ತಿದೆ.

೧೯೫೮ರಲ್ಲಿ ಈ ಹಿಂದೆ ಉಲ್ಲೇಖಿಸಿದಂತೆ ವಿಲಿಯಂ ಬ್ರೈಟ್ ಅವರು ಪೂನಾದ ಡೆಕನ್ ಕಾಲೇಜಿನಿಂದ ಕನ್ನಡದ ಆಡುಮಾತಿನ ಲಕ್ಷಣಗಳನ್ನು ನಿರೂಪಿಸುವ ಪುಸ್ತಿಕೆಯೊಂದನ್ನು ಪ್ರಕಟಿಸಿದರು. ಆಡುಮಾತಿನಲ್ಲಿ ಬರಹದ ರೂಪನ್ನು ಬದಲಾಯಿಸಿ ಕೊಳ್ಳುವ ಪ್ರವೃತ್ತಿ ಮತ್ತು ಅದರ ಹಿಂದಿರುವ ನಿಯಮಗಳ ಬಗೆಗೆ ಅಲ್ಲಿ ಚರ್ಚಿಸಿದ್ದಾರೆ. ಈಗಲೂ ಈ ವ್ಯತ್ಯಾಸಗಳು ಬೇರೆ ಬೇರೆ ಪ್ರಮಾಣದಲ್ಲಿ ಜಾರಿಯಲ್ಲಿದೆ. ಮುಖ್ಯವಾದ ಒಂದು ನಿಯಮವನ್ನು ನಾವಿಲ್ಲಿ ಪರಿಶೀಲಿಸೋಣ. ಪದದ ಎರಡನೆಯ ಸ್ವರವನ್ನು ಉಚ್ಚಾರಣೆಯಲ್ಲಿ ಬಿಟ್ಟುಬಿಡುವ ಪ್ರವೃತ್ತಿ ಇದೆ. ಆದರೆ ಪದದಲ್ಲಿ ಎರಡೇ ಸ್ವರಗಳಿದ್ದರೆ ಅಥವಾ ಮೂರನೇ ಸ್ವರವು ಪ್ರತ್ಯಯದ ಭಾಗವಾಗಿದ್ದರೆ ಅಥವಾ ಇನ್ನೊಂದು ಪದಕ್ಕೆ ಸೇರಿದ ಭಾಗವಾಗಿದ್ದರೆ ಅಲ್ಲಿ ಈ ಸ್ವರವನ್ನು ಬಿಟ್ಟುಬಿಡುವ ಸಾಧ್ಯತೆ ಇಲ್ಲ. ಉದಾಹರಣೆಗೆ ಬೆರಳು-ಬೆಳ್ಳು, ಬಳಪ-ಬಳ್ಪ, ಕರಡಿ ಕರ‍್ಡಿ ಈ ರೀತಿ ಆಗಬಹುದು. ಆದರೆ ಮನೆ, ತಲೆ ಇಂತ ಕಡೆಗಳಲ್ಲಿ ಎರಡನೆಯ ಸ್ವರ ಹಾಗೆ ಉಳಿಯುತ್ತದೆ. ಇದಲ್ಲದೆ ಈ ನಿಯಮಕ್ಕೆ ಇನ್ನೂ ಕೆಲವು ಶರತ್ತುಗಳಿವೆ. ಉದಾಹರಣೆಗೆ ಮೊದಲನೆಯ ಸ್ವರ ದೀರ್ಘವಾಗಿದ್ದರೆ ಆಗ ಈ ನಿಯಮದ ಬಳಕೆಗೆ ಬೇರೆಯೇ ಶರತ್ತುಗಳಿವೆ. ನಮಗಿಲ್ಲಿ ಮುಖ್ಯವಾದುದು ಏನೆಂದರೆ ಹೀಗೆ ಸ್ವರಲೋಪ ಮಾಡುವುದರಿಂದ ಕನ್ನಡದ ಪದಾದಿಯ ತೆರೆದ ಅಕ್ಷರ ಮುಚ್ಚಿದ ಅಕ್ಷರವಾಗಿ ಬದಲಾಗುತ್ತದೆ ಎಂಬುದು. ಈ ಬಗೆಯ ಹಲವು ನಿದರ್ಶನಗಳಿಂದ ಹೊಸಗನ್ನಡವು ಅಳವಡಿಸಿಕೊಂಡಿರುವ ಅಕ್ಷರರಚನೆಯೂ ನಡುಗನ್ನಡಕ್ಕಿಂತ ಬೇರೆ ಎನ್ನುವುದು ಗೊತ್ತಾಗುತ್ತದೆ. ಹೊಸಗನ್ನಡದ ಈ ಲಕ್ಷಣವು ಕಳೆದ ಐವತ್ತು ವರ್ಷಗಳಲ್ಲಿ ಬಲವಾಗಿ ಬೇರನ್ನು ಬಿಟ್ಟಿವೆ.

ಕನ್ನಡದ ಪ್ರಮಾಣ ಭಾಷೆಯೊಂದು ಬರಹದಲ್ಲಿ ಮತ್ತು ಮಾತಿನಲ್ಲಿ ಮಾಧ್ಯಮಗಳಲ್ಲಿ ಬಳಕೆಯಲ್ಲಿದೆ. ಇದರ ಉಚ್ಚಾರಣೆ ಮತ್ತು ಉತ್ಪಾದನೆಗಳೆರಡೂ ಕನ್ನಡ ಮಾತಾಡುವ ವರಿಗೆ ಒಂದು ಆಧುನಿಕತೆಯ ಗುರುತನ್ನು ನೀಡುತ್ತದೆ. ಆದರೆ ಕನ್ನಡದ ಹಲವು ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳಲ್ಲಿ ಪ್ರಮಾಣ ಭಾಷೆಯಲ್ಲಿ ಇಲ್ಲದ ಧ್ವನಿರಚನೆಯೂ ಕಂಡುಬರುತ್ತದೆ. ಸ್ವರ ಮತ್ತು ವ್ಯಂಜನಗಳೆರಡರಲ್ಲೂ ಈ ವ್ಯತ್ಯಾಸಗಳು ನೆಲೆಯೂರಿದೆ. ಪ್ರಮಾಣ ಭಾಷೆಯ ಲಿಖಿತ ಮತ್ತು ಬರಹ ನೆಲೆಯ ಧ್ವನಿರಚನೆಯ ಆಚೆಗೆ ಕನ್ನಡದ ಉಪಭಾಷೆಗಳ ಧ್ವನಿರಚನೆ ಕಳೆದ ಐವತ್ತು ವರ್ಷಗಳಲ್ಲಿ ಕನ್ನಡಿಗರ ಕಿವಿಯ ಮೇಲೆ ಬೀಳ ತೊಡಗಿದೆ. ಈ ಭಿನ್ನ ಧ್ವನಿಗಳು, ಧ್ವನಿಸಂಯೋಜನೆಗಳು, ಧ್ವನಿತಂತ್ರಗಳು ಎಲ್ಲ ಕನ್ನಡಿಗರ ಉಚ್ಚಾರಣೆಯ ಭಾಗವಾಗದಿದ್ದರೂ ಗ್ರಹಿಕೆಯ ಭಾಗವಾಗಿವೆ. ಅಂದರೆ ಆ ಧ್ವನಿಗಳನ್ನು ಕೇಳಿದಾಗ ಅವು ಭಿನ್ನ ಎಂದು ತೋರಿದ್ದರೂ ತಮ್ಮತಮ್ಮಲ್ಲಿ ನೆಲೆಗೊಂಡ ಧ್ವನಿವ್ಯವಸ್ಥೆಗೆ ಹೊಂದಿಸಿಕೊಳ್ಳುವ ಕೆಲಸವನ್ನು ಕನ್ನಡಿಗರು ಮಾಡುತ್ತಿದ್ದಾರೆ. ಇದು ಶಿಕ್ಷಿತರಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬಂದರೂ ಸಾಮಾಜಿಕ ಚಲನಶೀಲತೆಯುಳ್ಳ ಪ್ರತಿಯೊಬ್ಬರಲ್ಲೂ ಈ ಸಾಧ್ಯತೆ ಕಾಣತೊಡಗಿದೆ. ಉದಾಹರಣೆಗೆ ಕರ್ನಾಟಕದ ವಾಯುವ್ಯ ಭಾಗದ ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ತಾಲವ್ಯ ಅನುಘರ್ಷಧ್ವನಿ ಅದರ ಘೋಷ ಮತ್ತು ಅಘೋಷ ರೂಪದಲ್ಲಿ ಬಳಕೆಯಲ್ಲಿದೆ. ಸಾಮಾನ್ಯವಾಗಿ ತ ಮತ್ತು ಸಗಳ ಮಿಶ್ರಣದಂತೆ ಈ ಧ್ವನಿಯನ್ನು ಸಮಾನ ಸ್ಥಾನೀಯವಾದ ತಾಲವ್ಯ ಸ್ಪರ್ಶದ ದ್ವಿತ್ವವನ್ನಾಗಿ ಉಳಿದ ಭೂಪ್ರದೇಶದ ಜನರು ಕೇಳಿಸಿಕೊಳ್ಳುತ್ತಾರೆ.ಹಾಗೆಯೇ ಕರಾವಳಿಯ ದಕ್ಷಿಣ ಭಾಗದ  ಕನ್ನಡಿಗರ ಸ್ವರಗಳಲ್ಲಿ ಅವನತ ಮಧ್ಯ(ಪೂರ್ವ ಮತ್ತು ಪಶ್ಚ ಎರಡೂ ಕಡೆಗಳಲ್ಲಿ) ರೂಪಗಳು ಬಳಕೆಯಲ್ಲಿವೆ. ಇವುಗಳಲ್ಲಿ ಒಂದು ಪ್ರಮಾಣ ಕನ್ನಡದ ಏಕಾರಕ್ಕಿಂತ, ನಾಲಿಗೆ ಕೊಂಚ ಕೆಳಗೆ ಇರುವಾಗಉಚ್ಚಾರವಾಗುವ ಸ್ವರ. ಆ ಪ್ರದೇಶದ ಕನ್ನಡದಲ್ಲಿ ಇಂಗ್ಲಿಶಿನ ಆಯಿಲ್, ಆಕ್ಸೈಡ್ ಮುಂತಾದ ಪದಗಳನ್ನು ಕೇಳಿಸಿಕೊಂಡಾಗ ಈ ಧ್ವನಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಉಳಿದ ಭೂಪ್ರದೇಶದ ಕನ್ನಡಿಗರು ತಮಗೆ ಪರಿಚಿತವಿರುವ ಸ್ವರದೊಡನೆ ಅದನ್ನು ಸಮೀಕರಿಸಿಕೊಳ್ಳುತ್ತಾರೆ. ಈ ವಿವರಣೆಯ ಉದ್ದೇಶವಿಷ್ಟೆ. ಕನ್ನಡಿಗರು ಹಲವು ಉಪಭಾಷೆಗಳ ಧ್ವನಿರಚನೆಯನ್ನು ತಮ್ಮ ಕನ್ನಡ ಬಳಕೆಯಲ್ಲಿ ಅನುಸರಿಸ ದಿದ್ದರೂ ಕನ್ನಡ ಗ್ರಹಿಕೆಯಲ್ಲಿ ಆ ಧ್ವನಿಗಳು ನೆಲೆಯೂರಿವೆ ಎನ್ನುವುದನ್ನು ಗಮನಿಸುವುದು.

ಕನ್ನಡ ಮಾತಾಡುವವರು ಹೀಗೆ ಬೇರೆ ಉಪಭಾಷೆಗಳ ಧ್ವನಿರಚನೆಯ ವಿಕಲ್ಪಗಳನ್ನು ಬಳಸದಿದ್ದರೂ ಒಪ್ಪಿಕೊಂಡಿದ್ದಾರೆ ಎಂಬುದನ್ನು ಸಮರ್ಥಿಸುವುದು ಹೇಗೆ? ಇದಕ್ಕೆ ಪುರಾವೆಗಳೇನು? ಇದು ಬಳಸುಮಾರ್ಗದಿಂದ ಗೊತ್ತು ಮಾಡಬೇಕಾದ ಸಂಗತಿ. ತಮ್ಮದಲ್ಲದ ಉಪಭಾಷೆಯೊಂದನ್ನು ಆಡಲು ಮನಸ್ಸು ಮಾಡಿದಾಗ ಆ ಉಪಭಾಷೆಯ ವಿಲಕ್ಷಣ ಅಂಶಗಳನ್ನು ಈ ಬೇರೆ ಕನ್ನಡ ಮಾತಾಡುವವರು ಅನುಕರಿಸುತ್ತಾರೆ. ಇದು ನಗೆಯುಕ್ಕಿಸುವ ಸಂದರ್ಭಕ್ಕಾಗಿ ನಡೆಯುವ ಪ್ರಕ್ರಿಯೆಯೇ ಆದರೂ ಹೀಗೆ ಮಾಡುವವರಿಗೆ ಇನ್ನೊಂದು ಉಪಭಾಷೆಯ ಧ್ವನಿರಚನೆಯ ಪರಿಚಯವಿರುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕನ್ನಡದ ಉಪಭಾಷೆಗಳ ಮಟ್ಟಿಗೆ ಇದೊಂದು ಸ್ವಾಗತಾರ್ಹ ಬೆಳವಣಿಗೆ. ಪದರಚನೆಯ ಹಂತದಲ್ಲೂ ಈ ಅಂಶ ಮತ್ತೆ ಕಾಣಿಸಿಕೊಳ್ಳಲಿದೆ.