ಸಾಮಾನ್ಯವಾಗಿ ಭಾಷಾಯೋಜನೆಗಳನ್ನು ಮೂರು ನೆಲೆಗಳಲ್ಲಿ ಭಾಷಾ ಅಧ್ಯಯನಕಾರರು ನಿರೂಪಿಸುತ್ತಾರೆ. ೧. ಸ್ಥಾನಮಾನ ನಿರ್ಧಾರ ೨. ಪರಿಕರಗಳ ನಿರ್ಮಾಣ ಮತ್ತು ೩.ಕಲಿಕೆಯ ವಿಧಾನಗಳ ನಿರೂಪಣೆ. ಇವುಗಳಲ್ಲಿ ಮೂರನೆಯದನ್ನು ಪ್ರತ್ಯೇಕವಾಗಿ ಪರಿಗಣಿಸುವ ಅಗತ್ಯವಿಲ್ಲವೆಂದು ಕೆಲವರು ವಾದಿಸುವುದುಂಟು. ಆದರೆ ಕನ್ನಡದಂತಹ ಭಾಷೆಗಳ ಸಂದರ್ಭದಲ್ಲಿ ಈ ನೆಲೆಯ ಪರಿಶೀಲನೆ  ಅಗತ್ಯವೆಂದು ತೋರಿದ್ದರಿಂದ ಮೂರನೇ ಅಂಶವನ್ನು ಇಲ್ಲಿ ಚರ್ಚೆಗೆ ಗುರಿಪಡಿಸಲಾಗುವುದು.

. ಸ್ಥಾನಮಾನ ನಿರ್ಧಾರ: ಭಾಷೆಗೆ ಸಮಾಜದ ಸಂರಚನೆಯಲ್ಲಿ ಯಾವ ಸ್ಥಾನಮಾನ ಇರಬೇಕು ಎನ್ನುವುದು ಈ ನೆಲೆಯ ಮುಖ್ಯ ನಿರ್ಧಾರ ಮತ್ತು ಈ ಸ್ಥಾನಮಾನವನ್ನು ಭಾಷೆಗೆ ಸಾಧಿಸಿಕೊಡಲು ಯಾವ ಕಾರ್ಯಕ್ರಮವನ್ನು ರೂಪಿಸಬೇಕು ಎಂಬುದು ಕೂಡ ಭಾಷಾಯೋಜನೆಯ ಈಹಂತದಲ್ಲಿ ನಿರೂಪಿತ ವಾಗುತ್ತದೆ.

ಒಂದು ಆಡಳಿತ ವಲಯದಲ್ಲಿ ಇರುವ ಜನರೆಲ್ಲ ಒಂದೇ ಭಾಷೆಯನ್ನು ಆಡುತ್ತಿದ್ದರೆ ಆಗ ಸ್ಥಾನಮಾನದ ನಿರ್ಧಾರದ ಸಮಸ್ಯೆ ಮುಖ್ಯವಾಗುವುದಿಲ್ಲ. ಇಂತಹ ಸಮುದಾಯಗಳು ಕೂಡ ಇನ್ನೊಂದು ಸಮುದಾಯದೊಡನೆ ವ್ಯವಹರಿಸಬೇಕಾಗಿ ಬರುತ್ತದೆ. ಆ ಇನ್ನೊಂದು ಭಾಷೆ ಬೇರೆ ಆಡಳಿತ ಪ್ರದೇಶಕ್ಕೆ ಸೇರಿದ್ದರೆ, ಆಗಈಎರಡು ಭಾಷೆಗಳ ನಡುವೆ ಸ್ಥಾನಮಾನದ ಸಮಸ್ಯೆ ಮುಂಚೂಣಿಗೆ ಬರುತ್ತದೆ. ಇನ್ನು, ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಳಸುವ ಜನರು ಒಂದು ಆಡಳಿತ ವಲಯದಲ್ಲಿ ಇದ್ದಾಗಲಂತೂ ಈ ಸ್ಥಾನಮಾನದ ನಿರ್ಧಾರ ಅತ್ಯಗತ್ಯ. ಈ ನಿರ್ಧಾರ ಕೇವಲ ಭಾಷಿಕ ಆಯ್ಕೆಯಲ್ಲ. ಅದನ್ನು ನಿರ್ಣಯಿಸುವ ಒತ್ತಡಗಳು ಬೇರೆ ಕಡೆ ಇರುತ್ತವೆ. ಉದಾಹರಣೆಗೆ ಕನ್ನಡ ಮತ್ತು ತೆಲುಗು ಈ ಭಾಷೆಗಳ ಸ್ಥಾನ ಕರ್ನಾಟಕದಲ್ಲಿ ಏನು ಎಂಬ ಪ್ರಶ್ನೆ, ಕನ್ನಡ ಮತ್ತು ಇಂಗ್ಲಿಶ್ ಇವುಗಳ ಸಂಬಂಧ ಏನು ಎಂಬುದಕ್ಕಿಂತ ಬೇರೆ ಉತ್ತರವನ್ನು ಬಯಸುತ್ತದೆ. ಇದಕ್ಕೆ ಆಯಾ ಭಾಷೆಗಳಿಗೆ ಮತ್ತು ಭಾಷಾ ಸಮುದಾಯಗಳಿಗೆ ಇರುವ ಹಿನ್ನೆಲೆಗಳು ಮುಖ್ಯವಾಗಿವೆ.

ಸ್ಥಾನಮಾನದ ನಿರ್ಧಾರ ಮಾಡುವಾಗ ಅದು ಏಕಘಟಕೀಯ ನೆಲೆಯಲ್ಲಿ ಇರಬೇಕೆಂದು ಹೇಳುವುದು ಯಾವಾಗಲೂ ಸಾಧ್ಯವಾಗದು. ಉದಾಹರಣೆಗೆ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬಂತಹ ಮಾತು ಒಂದು ಹೇಳಿಕೆಯಾಗಿ ತೋರುವುದೇ ಹೊರತು ವಾಸ್ತವವಾಗಿ ಒಂದು ನಿರ್ಧರಿತ ಕಾರ್ಯಕ್ರಮವಾಗಲಾರದು. ಹಾಗೆ ಆಗಿಲ್ಲ ಎಂಬುದಕ್ಕೆ ಹತ್ತಾರು ನಿದರ್ಶನಗಳನ್ನು ಕೊಡಬಹುದು. ಅಂದರೆ ಒಂದು ಭಾಷೆಯ ಸ್ಥಾನಮಾನದ ನಿರ್ಧಾರ ಆ ಭಾಷೆಯನ್ನು ಯಾವ ಯಾವ ವಲಯದಲ್ಲಿ ಯಾವ ಯಾವ ಬಗೆಯಲ್ಲಿ ಬಳಸುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಹೀಗಾಗಿ ಬೇರೆ ಬೇರೆ ಬಳಕೆಯ ವಲಯಗಳಿಗೆ ಅನುಗುಣವಾಗಿ ಬೇರೆ ಬೇರೆ ಸ್ಥಾನಮಾನದ ಯೋಜನೆಗಳು ರೂಪಿಸಬೇಕಾಗುತ್ತದೆ. ಇದು ಒಂದು ವಾಸ್ತವ ನೆಲೆಯ ಸಂಗತಿ. ಇದರಲ್ಲಿ ತಾತ್ವಿಕ ಗೊಂದಲಗಳು ಇವೆ ಎಂದು ಭಾಸವಾದರೂ ಪರಿಸ್ಥಿತಿಯ ವಿನ್ಯಾಸಗಳು ಹೀಗೆ ಬೇರೆ ಬೇರೆ ನಿರ್ಣಯಗಳನ್ನು ಮಾಡಲು ಒತ್ತಾಯಿಸುತ್ತವೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಸರಕಾರವು ಕನ್ನಡದ ಸ್ಥಾನಮಾನವನ್ನು ಆಡಳಿತ, ಶಿಕ್ಷಣ, ವಾಣಿಜ್ಯ ಸಂವಹನ ಮಾಧ್ಯಮಗಳು ಹೀಗೆ ಬೇರೆ ಬೇರೆ ವಲಯಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸ್ಥಾನಮಾನ ನಿರ್ದೇಶನವನ್ನು ಮಾಡಿದೆ. ಅದಕ್ಕನುಗುಣ ವಾದ ಕಾರ್ಯಕ್ರಮವನ್ನು ಕೂಡ ರೂಪಿಸಿಕೊಂಡಿದೆ.

ಪರಿಕರಗಳ ನೆಲೆಯ ಭಾಷಾಯೋಜನೆ ಎಂದರೇನು ಎಂಬುದನ್ನು ತಿಳಿಯುವುದು ಅಗತ್ಯ. ಒಂದು ಭಾಷೆಯನ್ನು ವಿವಿಧ ಉದ್ದೇಶಗಳಿಗೆ ಮತ್ತು ವಿವಿಧ ವಲಯಗಳಲ್ಲಿ ಬಳಸುವುದು ಅಗತ್ಯವಾದಾಗ ಇಂತಹ ಬಳಕೆಗಳಿಗೆ ಅನುಕೂಲಕರವಾದ ಭಾಷಾ ಪರಿಕರಗಳನ್ನು ಸಿದ್ಧಪಡಿಸುವುದು ಈ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಕೆಲವು ಪ್ರಾಸಂಗಿಕ ನಿದರ್ಶನಗಳನ್ನು ಇಲ್ಲಿ ನೀಡುವುದು ಅಗತ್ಯ. ಲಿಪಿ ಇಲ್ಲದ ಭಾಷೆಗೆ ಒಂದು ಲಿಪಿಯನ್ನು ರೂಪಿಸುವುದು, ಈಗಾಗಲೇ ಲಿಪಿ ವ್ಯವಸ್ಥೆ ಇದ್ದರೆ ಅದನ್ನು ಹೊಸ ಅಗತ್ಯಗಳಿಗೆ ಅನುಗುಣವಾಗಿ ಸಜ್ಜುಗೊಳಿಸುವುದು ಇಂತಹ ಯೋಜನೆಗಳು ಲಿಪಿ ಇರುವ ಮತ್ತು ಬಹು ದೀರ್ಘ ಕಾಲದ ಬರವಣಿಗೆಯ ಚರಿತ್ರೆ ಇರುವ ಕನ್ನಡದಂತಹ ಭಾಷೆಗೆ ಇಂತಹ ಯೋಜನೆಗಳು. ಏಕೆ ಬೇಕು ಎಂಬ ಪ್ರಶ್ನೆ ಸಾಧ್ಯ. ಆದರೆ ಕನ್ನಡದ ಲಿಪಿ ವ್ಯವಸ್ಥೆಯಲ್ಲಿ ಕಳೆದ ಹದಿನಾರನೇ ಶತಮಾನದಲ್ಲಿ ಎಷ್ಟು ಬದಲಾವಣೆ ಆಗಿದೆ ಎಂಬುದನ್ನು ಲಿಪಿ ವಿಕಾಸವನ್ನು ಅಭ್ಯಾಸ ಮಾಡಿದವರು ಬಲ್ಲರು. ಯಾವ ಭಿತ್ತಿಯ ಮೇಲೆ ಮತ್ತು ಯಾವ ಉಪಕರಣ ಬಳಸಿ ಬರೆಯುತ್ತೇವೆ ಎಂಬುದನ್ನು ಅವಲಂಬಿಸಿ ಲಿಪಿ ವ್ಯವಸ್ಥೆಯಲ್ಲಿ ಬದಲಾವಣೆಗಳು ಆಗುತ್ತಲೇ ಬಂದಿವೆ. ಬರೆಯುವ ಭಿತ್ತಿಗಳು ಕಲ್ಲು, ಮಣ್ಣಿನ ಹಲಗೆ, ಲೋಹದ ತಗಡು ಇವುಗಳಿಂದ ತಾಳೆಯ ಎಲೆಗೆ ಬದಲಾದಾಗ ಅಲ್ಲಿಂದ ವಿವಿಧ ಬಗೆಯ ಕಾಗದಗಳ ಮೇಲೆ ಬರೆಯಬೇಕಾಗಿ ಬಂದಾಗ ಕನ್ನಡ ಲಿಪಿಯಲ್ಲಿ ಬದಲಾವಣೆಗಳು ಆಗುತ್ತ ಬಂದಿವೆ. ಹೀಗೆಯೇ ಭಿತ್ತಿಗಳಂತೆಯೇ ಬರವಣಿಗೆಗೆ ಬಳಸುತ್ತಿದ್ದ ಸಾಮಗ್ರಿಗಳು ಬೇರೆಯಾಗಿವೆ. ತೀರ ಇತ್ತೀಚಿನವರೆಗೂ ಲಿಪಿ ಮೂಡಿಸಲು ಒಂದಿಲ್ಲೊಂದು ಬಗೆಯಲ್ಲಿ ಕೈಬೆರಳುಗಳನ್ನು ಬಳಸುತ್ತ ಬಂದಿದ್ದೇವೆ. ಕಳೆದ ಐವತ್ತು ವರ್ಷಗಳಲ್ಲಿ ಮೂರು ಮುಖ್ಯ ಪಲ್ಲಟಗಳು ನಡೆದಿವೆ. ೧.ಬೆರಳಚ್ಚು ಯಂತ್ರ ೨.ಎಲೆಕ್ಟ್ರಾನಿಕ್ ಬೆರಳಚ್ಚು ಯಂತ್ರ ಮತ್ತು ೩.ಗಣಕ ಯಂತ್ರ. ಈ ಬದಲಾವಣೆಗಳಿಂದಾಗಿ ಕನ್ನಡ ಲಿಪಿ ವ್ಯವಸ್ಥೆಯಲ್ಲಿ ಹಲವು ಪರಿವರ್ತನೆಗಳು ಅಗತ್ಯವಾಗಿವೆ. ಈ ಮಾತು ಇಲ್ಲಿ ಹೇಳಿದರ ಉದ್ದೇಶವಿಷ್ಟೇ. ಬರವಣಿಗೆಗೆ ದೀರ್ಘ ಚರಿತ್ರೆ ಇದೆ ಎಂದ ಮಾತ್ರಕ್ಕೆ ಕನ್ನಡಕ್ಕೆ ಲಿಪಿನೆಲೆಯ ಭಾಷಾಯೋಜನೆಯ ಅಗತ್ಯವಿಲ್ಲ ಎಂದು ವಾದಿಸಲು ಬರುವುದಿಲ್ಲ ಎಂಬುದನ್ನು ಖಚಿತಪಡಿಸಬೇಕಾಗಿದೆ.

ಇದಲ್ಲದೆ ಭಾಷೆಯ ಬಳಕೆಗೆ ಇನ್ನೂ ಹತ್ತಾರು ಪರಿಕರಗಳು ಅಗತ್ಯವಾಗುತ್ತವೆ. ಹಿಂದೆ ಭಾಷೆಯನ್ನು ಸೀಮಿತ ವಲಯಗಳಲ್ಲಿ ಮತ್ತು ಸೀಮಿತ ಉದ್ದೇಶಗಳಿಗಾಗಿ ಬಳಸುತ್ತಿದ್ದಾಗ ಎದುರಾಗದ ಸಮಸ್ಯೆಗಳು ಈಗ ಮತ್ತೆ ಮತ್ತೆ ಎದುರು ನಿಲ್ಲುತ್ತವೆ. ಅಲ್ಲದೇ ಹಿಂದೊಮ್ಮೆ ಇಂತಹ ಸಮಸ್ಯೆಗಳು ಬಂದಾಗ ಅವುಗಳ ಸ್ವರೂಪ ಮತ್ತು ಪ್ರಮಾಣಗಳನ್ನು ಗಮನಿಸಿ ಪರಿಹಾರ ನೀಡಲು ಭಾಷಿಕ ಸಮುದಾಯಗಳಲ್ಲಿ ತಿಳಿದವರು ಇರುತ್ತಿದ್ದರು. ಈ ಸಂಬಂಧದ ತಿಳುವಳಿಕೆ ಅವರಲ್ಲಿ ಇರುತ್ತಿತ್ತು. ಅವರನ್ನು ಆಶ್ರಯಿಸಿ ಪರಿಹಾರಗಳನ್ನು ಪಡೆಯಬಹುದಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂದರೆ ತಿಳಿದವರು ಇಲ್ಲವಾಗಿದ್ದಾರೆ ಎಂದಲ್ಲ. ಪ್ರಜಾ ಪ್ರಭುತ್ವದ ಮೂಲತತ್ವಗಳಲ್ಲಿ, ತಿಳುವಳಿಕೆ ಹೀಗೆ  ಯಾರೋ ಕೆಲವರ ಸ್ವತ್ತಾಗುವುದು ಸಮರ್ಥನೀಯವಾದ ವಿಷಯವಲ್ಲ ಮಾಹಿತಿ ಮತ್ತು ಅರಿವು ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಸಿಗುವಂತೆ ವ್ಯವಸ್ಥೆ ರೂಪಗೊಳ್ಳಬೇಕಾದುದು ಅಗತ್ಯ. ಈ ದೃಷ್ಟಿಯಿಂದ ಭಾಷೆಯ ಬಳಕೆಯ ವಿಷಯಗಳು ಹೆಚ್ಚಾದಂತೆ, ಬಳಕೆಯ ಉದ್ದೇಶಗಳು ಹೆಚ್ಚಾದಂತೆ ಉಂಟಾಗುವ ಸಮಸ್ಯೆಗಳನ್ನು ಹಾಗೆ ಬಳಸುವವರೇ ಪರಿಹರಿಸಿಕೊಳ್ಳಲು ಅನುಕೂಲವಾಗುವ ಸನ್ನಿವೇಶ ನಿರ್ಮಾಣವಾಗಬೇಕು. ಉದಾಹರಣೆಗೆ ನಾವು ಓದುತ್ತಿರುವ ಯಾವುದೋ ಭಾಷಿಕ ದಾಖಲೆಯಲ್ಲಿ ನಮಗೆ ಅರ್ಥ ಗೊತ್ತಿಲ್ಲದ ಪದವೊಂದಿದೆ ಎಂದುಕೊಳ್ಳಿ. ಆ ಪದದ ಅರ್ಥವನ್ನು ನಾವು ತಿಳಿಯುವುದು ಹೇಗೆ? ಕೆಲವೊಮ್ಮೆ ಆ ಪದ ಬಳಕೆಯಾದ ಸಂದರ್ಭವನ್ನು ಗಮನಿಸಿ ಅರ್ಥವನ್ನು ಹೇಗೋ ಊಹಿಸಿ ಸಮಸ್ಯೆಯಿಂದ ಪಾರಾಗಿ ಬಿಡಬಹುದು. ಆದರೆ ಇದು ಸರಿಯಾದ ಪರಿಹಾರವಲ್ಲ. ತಿಳಿಯದ ಪದಗಳಿಗೆ ಅರ್ಥವನ್ನು ಕಂಡುಕೊಳ್ಳಲು ನೆರವಾಗುವ ಸರಿಯಾದ ಪರಿಕರಗಳು ಭಾಷೆಯ ಬಳಕೆದಾರರಿಗೆ ಸುಲಭವಾಗಿ ಸಿಗುವಂತಿರಬೇಕು. ಅಂತಹ ಪರಿಕರಗಳೇ ಅರ್ಥಕೋಶಗಳು. ಬೇರೆ ಬೇರೆ ಉದ್ದೇಶಗಳಿಗೆ ಅನುಕೂಲವಾಗುವ ಬೇರೆ ಬೇರೆ ಅರ್ಥಕೋಶಗಳು ಸಿದ್ಧವಾಗುವುದು ಇದೇ ಉದ್ದೇಶಕ್ಕೆ.

ಹೀಗೆಯೇ ಭಾಷೆಯ ರಚನೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವ್ಯಾಕರಣಗಳು ಅಗತ್ಯವಾಗುತ್ತವೆ. ವಿವಿಧ ಸಂದರ್ಭಗಳಿಗೆ ಅನುಗುಣವಾಗಿ ಭಾಷೆ ಯನ್ನು ನಿರೂಪಿಸಬೇಕಾಗಿ ಬಂದಾಗ ಆಯಾ ಸಂದರ್ಭದ ಅಗತ್ಯಗಳನ್ನು ತಿಳಿಸಿಕೊಡುವ ಮತ್ತು ಮಾದರಿಗಳ ಮೂಲಕ ದಾರಿ ತೋರಿಸುವ ಕೈಪಿಡಿಗಳು ಕೂಡಾ ಈ ಪರಿಕರಗಳ ವ್ಯಾಪ್ತಿಯಲ್ಲೇ ಬರುತ್ತವೆ.

ಮೂರನೆಯದಾಗಿ ಕಲಿಕೆ ಬಳಕೆಯ ನೆಲೆ. ಈ ಮೊದಲೇ ಹೇಳಿದಂತೆ ಈ ನೆಲೆಯ ಭಾಷಾಯೋಜನೆಯನ್ನು ಅಗತ್ಯವೆಂದು ಕೆಲವರು ಒಪ್ಪುವುದಿಲ್ಲ. ಆದರೆ ಮೊದಲ ಯೋಜನೆಯಲ್ಲಿ ಆದ ಸ್ಥಾನಮಾನದ ನಿರ್ಣಯ ಮಾತ್ರ ಕೆಲವೊಮ್ಮೆ ಸಾಲುವುದಿಲ್ಲ. ಏಕೆಂದರೆ ಒಂದಕ್ಕಿಂತ ಹೆಚ್ಚು ಭಾಷೆಯನ್ನು ಆಡುವ ಸಮುದಾಯಗಳು ಹೆಚ್ಚಾಗುತ್ತಿರುವ ಸಂದರ್ಭಗಳು. ಇದರಿಂದಾಗಿ ಯಾವ ಯಾವ ಭಾಷೆಗಳನ್ನು ಕಲಿಯಬೇಕು ಹಾಗೆ ಕಲಿಯಲು ಅನುಕೂಲವಾದ ದಾರಿಗಳು ಯಾವುವು ಎಂಬು ದನ್ನು ತಿಳಿಸುವ ಯೋಜನೆಗಳು ಅಗತ್ಯ. ಅಲ್ಲದೇ ಹಲವು ಭಾಷೆಗಳಲ್ಲಿ ಯಾವ ಭಾಷೆಯನ್ನು ಎಲ್ಲಿ ಹೇಗೆ ಬಳಸಬೇಕು ಎಂಬುದನ್ನು ತೋರಿಸಿಕೊಡುವ ಅಗತ್ಯವಿದೆ.

ಕನ್ನಡದಂತಹ ಭಾಷೆಗೆ ಈ ನೆಲೆಯ ಯೋಜನೆಗಳು ಅಗತ್ಯವೆಂದು ಈ ಹಿಂದೆ ಹೇಳಿದೆ. ಕನ್ನಡಕ್ಕೆ ಎಲ್ಲ್ಲ ವಲಯಗಳಲ್ಲೂ ಮನ್ನಣೆ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದರೆ ಸಾಲದು. ಅದನ್ನು ಎಲ್ಲ್ಲ ವಲಯದಲ್ಲೂ ಬೆಳೆಸಲು ಅನುಕೂಲವಾದ ಸಾಧ್ಯತೆಗಳನ್ನು ಸೃಷ್ಟಿಸಬೇಕಾಗುತ್ತದೆ. ಆಗ ಮಾತ್ರ ಕನ್ನಡದ ಬಳಕೆ ನಿರ್ದಿಷ್ಟ ಗುರಿಯತ್ತ ಸಾಗುವುದು ಸಾಧ್ಯವಾಗುತ್ತದೆ.

ಕಳೆದ ಐವತ್ತು ವರ್ಷಗಳಲ್ಲಿ ಈ ಮೂರು ನೆಲೆಗಳಲ್ಲಿ ನಡೆದಿರುವ ಕರ್ನಾಟಕದ ಭಾಷಾಯೋಜನೆಗಳ ವಿವರವಾದ ಸಮೀಕ್ಷೆ ಅಗತ್ಯವಾಗಿದೆ. ಕರ್ನಾಟಕ ಸರ್ಕಾರವು ತನ್ನ ಭಾಷಾನೀತಿಯನ್ನು ಸರಳ ನೆಲೆಯಲ್ಲಿ ನಿರೂಪಿಸಿದೆ. ಆದರೂ ಅದರ ಕೆಲವು ಪರಿಣಾಮಗಳನ್ನು ಕಾಲದಿಂದ ಕಾಲಕ್ಕೆ ನಾವು ನೋಡುತ್ತ ಬಂದಿದ್ದೇವೆ. ಭಾರತದ ಸಂವಿಧಾನವು ರಾಷ್ಟ್ರದ ಅಧಿಕೃತ ಸಂಪರ್ಕಭಾಷೆಯಾಗಿ ಹಿಂದಿಯನ್ನು ಆಯ್ಕೆ ಮಾಡಿದೆ. ಆ ಹೊತ್ತಿನಲ್ಲಿ ಹೀಗೆ ಸಂಪರ್ಕಭಾಷೆಯಾಗಬೇಕಾದದ್ದು ಹಿಂದಿಯಲ್ಲ; ಹಿಂದೂಸ್ತಾನಿ. ಇದನ್ನು ದೇವನಾಗರಿಲಿಪಿಯಲ್ಲಿ ಬರೆಯಬಹುದಾಗಿದೆ ಎಂಬುದು ಗಾಂಧೀಜಿಯವರ ನಿಲುವಾಗಿತ್ತು. ಆದರೆ ಹಿಂದುಸ್ತಾನಿಗೆ ಆ ಸ್ಥಾನವನ್ನು ನೀಡಲು ಆ ಹೊತ್ತಿನ ಆಳುವ ವರ್ಗದ ಒಂದು ಗುಂಪು ಸಿದ್ಧವಿರಲಿಲ್ಲ. ಇವರು ಪ್ರಬಲರಾಗಿ ತಮ್ಮ ವಾದ ಮಂಡಿಸಿದರು. ಸಂವಿಧಾನ ರಚನೆಯ ಸಂದರ್ಭದಲ್ಲಿ ಈ ಗುಂಪಿನ ವಾದಕ್ಕೆ ಮನ್ನಣೆ ಸಿಕ್ಕು ದೇವನಾಗರಿ ಲಿಪಿಯಲ್ಲಿ ಬರೆಯುವ ಹಿಂದಿಗೆ ರಾಷ್ಟ್ರದ ಸಂಪರ್ಕ ಭಾಷೆಯಾಗುವ ಅವಕಾಶ ದೊರಕಿತ್ತು. ಇದರಿಂದ ಉಂಟಾದ ಪರಿಣಾಮಗಳ ಚರ್ಚೆಗೆ ಇಲ್ಲಿ ಅವಕಾಶವಿಲ್ಲ. ಜೊತೆಗೆ ಅಲ್ಲಿಯವರೆಗೆ ಆಡಳಿತ ಭಾಷೆಯಾಗಿದ್ದ ಇಂಗ್ಲಿಶನ್ನು ಕೂಡ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಪರಿಗಣಿಸಲಾಯಿತು. ರಾಷ್ಟ್ರದ ಮಟ್ಟದಲ್ಲಿ ಇದರ ಪರಿಣಾಮಗಳೇನೇ ಇರಲಿ ರಾಜ್ಯಮಟ್ಟದಲ್ಲಿ ಈ ನೀತಿಯ ಪರಿಣಾಮ ಏನಾಯಿತೆಂಬುದನ್ನು ಗಮನಿಸಬೇಕು.

ಸಂಪರ್ಕ ಭಾಷೆಯಾಗಿ ಅವಕಾಶ ಪಡೆದ ಇಂಗ್ಲಿಶ್ ರಾಜ್ಯಮಟ್ಟದಲ್ಲಿ ಎರಡನೆಯ ಆಡಳಿತ ಭಾಷೆಯಾಗಿಯೂ ಜಾಗ ಪಡೆದುಕೊಂಡಿತ್ತು. ರಾಜ್ಯಗಳ ನಡುವಣ ಮತ್ತು ರಾಜ್ಯ ಕೇಂದ್ರಗಳ ನಡುವಣ ವ್ಯವಹಾರಕ್ಕೆ ಇಂಗ್ಲಿಶ್ ಅಗತ್ಯವೆಂಬ ವಾದ ಮಂಡನೆಯಾಗಿ ಅದರ ಪರಿಣಾಮದಿಂದ ಇಂಗ್ಲಿಶ್‌ಗೆ ಸಂಪರ್ಕ ಭಾಷೆಯ ಅವಕಾಶ ಸಿಕ್ಕಿದ್ದೇನೋ ಸರಿ. ಆದರೆ ರಾಜ್ಯ ಮಟ್ಟದಲ್ಲಿ ಇಂಗ್ಲಿಶ್ ಆಡಳಿತ ಭಾಷೆ ಯಾಗಿಯೇ ಮುಂದುವರೆಯಿತು. ರಾಜ್ಯಗಳು ತಂತಮ್ಮ ಪ್ರಾಂತೀಯ ಭಾಷೆಗಳನ್ನು ತಂತಮ್ಮ ರಾಜ್ಯಗಳ ಆಡಳಿತ ಭಾಷೆಯಾಗಿ ಬಳಸಬಹುದು ಎಂಬ ಅವಕಾಶ ರಾಜ್ಯಾಂಗದಲ್ಲಿದೆ. ಹೀಗಿದ್ದರೂ ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಬಳಸುವ ಅವಕಾಶ ನೀಡುವ ಕಾನೂನು ಜಾರಿಗೆ ಬರಲು ಏಳು ವರ್ಷ ಹಿಡಿಯಿತು. ೧೯೬೩ರಲ್ಲಿ ಈ ಅವಕಾಶ ನೀಡುವ ಮಸೂದೆಯನ್ನು ಕರ್ನಾಟಕ ವಿಧಾನ ಮಂಡಲ ಅಂಗೀಕರಿಸಿತು. ಇದರಿಂದ ಇಂಗ್ಲಿಶ್‌ನ ಬದಲು ಕನ್ನಡ ಎಂದಾಗಲಿಲ್ಲ. ಬದಲಿಗೆ ಇಂಗ್ಲಿಶ್‌ನ ಜೊತೆಯಲ್ಲಿ ಕನ್ನಡ ಎಂಬ ಪರಿಸ್ಥಿತಿ ನಿರ್ಮಾಣವಾಯಿತು.

ಭಾರತ ಸಂವಿಧಾನದ ಭಾಷಾನೀತಿಯಲ್ಲಿ ಇಂಗ್ಲಿಶ್‌ಗೆ ಸಂಪರ್ಕ ಭಾಷೆಯಾಗಿ ಅವಕಾಶ ನೀಡಿದ್ದು ಸಂವಿಧಾನ ಅಂಗೀಕೃತವಾದ ವೇಳೆಯಿಂದ ಮುಂದಿನ ೧೫ವರ್ಷಗಳಿಗೆ ಮಾತ್ರ. ಅಂದರೆ ೧೯೬೫ರ ಜನೆವರಿ ೨೬ರ ನಂತರ ಇಂಗ್ಲಿಶನ್ನು ಸಂಪರ್ಕ ಭಾಷೆ೦iiಗಿ ಬಳಸುವ ಅವಕಾಶ ಇಲ್ಲವೆಂದೇ ಸ್ಪಷ್ಟಪಡಿಸಲಾಗಿತ್ತು. ಆದರೆ ಈ ಹೊತ್ತಿಗೆ ಎಲ್ಲ ರಾಜ್ಯಗಳು ಹಿಂದಿಯನ್ನು ಸಂಪರ್ಕಭಾಷೆಯಾಗಿ ಬಳಸಲು ಸಿದ್ಧಗೊಳ್ಳಬೇಕಿತ್ತು. ಜೊತೆಗೆ ತಮ್ಮ ಪ್ರಾಂತೀಯ ಆಡಳಿತವನ್ನು ಪ್ರಾಂತೀಯ ಭಾಷೆಗಳಲ್ಲಿ ನಡೆಸಲು ಸನ್ನದ್ಧಗೊಳ್ಳಬೇಕಿತ್ತು. ೧೯೬೫ರಲ್ಲಿ ಆಗಬೇಕಾಗಿದ್ದ ಪರಿವರ್ತನೆ ಆಗಲಿಲ್ಲ. ಸಂವಿಧಾನಕ್ಕೆ ಮತ್ತೊಂದು ತಿದ್ದುಪಡಿಯನ್ನು ತಂದು ಇಂಗ್ಲಿಶನ್ನು ಸಂಪರ್ಕ ಭಾಷೆಯನ್ನಾಗಿ ಮತ್ತೆ ಮುಂದುವರೆಸುವ ಅವಕಾಶವನ್ನು ಕಲ್ಪಿಸಲಾಯಿತು. ಈ ತಿದ್ದುಪಡಿಯಲ್ಲಿ ಬಹು ಎಚ್ಚರಿಕೆಯಿಂದ ಕಾಲಮಿತಿಯ ಶರತ್ತನ್ನು ವಿಧಿಸಿರಲಿಲ್ಲ. ಮೊದಲ ೧೫ ವರ್ಷಗಳಲ್ಲಿ ಆಗದೆ ಹೋದದ್ದು ಮುಂದಿನ ೪೦ ವರ್ಷಗಳಲ್ಲಾದರೂ ಆಗುವುದು ಹೇಗೆ ಸಾಧ್ಯ? ಇಂಗ್ಲಿಶ್ ತನ್ನ ಸ್ಥಾನದಲ್ಲಿ ಭದ್ರವಾಗಿ ಉಳಿದಿದೆ.

ಕರ್ನಾಟಕದಂತಹ ರಾಜ್ಯಗಳು ೧೯೬೫ರಲ್ಲಿ ಹಿಂದಿಯ ಜೊತೆಗೆ ಇಂಗ್ಲಿಶನ್ನು ಸಂಪರ್ಕ ಭಾಷೆಯನ್ನಾಗಿ ಮುಂದುವರಿಸುವ ಚಳುವಳಿಯ ಪರವಾಗಿ ಇದ್ದುದಕ್ಕೆ ಎರಡು ಕಾರಣಗಳಿವೆ. ೧.ಹಿಂದಿ ಒತ್ತಾಯದಿಂದ ಹೇರಲಾದ ಭಾಷೆಯೆಂಬ, ಜನರಲ್ಲಿ ಪ್ರಚಲಿತವಿದ್ದ ಭಾವನೆಗಳ ಪರವಾಗಿ ನಿಂತದ್ದು. ಹೀಗೆ ಹಿಂದಿಯನ್ನು ಜನರ ಮೇಲೆ ಹೇರುವುದರಿಂದ ದೇಶ ಒಡೆದು ಛಿದ್ರವಾಗುತ್ತದೆ ಎಂಬ ನಿಲುವನ್ನು ರಾಜ್ಯ ಸರ್ಕಾರವು ಸದ್ದಿಲ್ಲದೆ ಸಮರ್ಥಿಸಿದಂತಿದೆ. ೨.ಈ ಕಾರಣ ಇದಕ್ಕಿಂತ ಮುಖ್ಯವಾದದ್ದು. ಅದೆಂದರೆ ಏಕೀಕರಣವಾದ ಒಂಬತ್ತು ವರ್ಷಗಳ ನಂತರವೂ ಕನ್ನಡವನ್ನು ಇಂಗ್ಲಿಶಿನ ಸ್ಥಾನದಲ್ಲಿ ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಲು ರಾಜ್ಯ ಸರ್ಕಾರ ಸನ್ನದ್ಧಗೊಂಡಿರಲಿಲ್ಲ. ಇದಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಿರಲಿಲ್ಲ. ತನ್ನ ಈ ಇಬ್ಬಂದಿ ಸ್ಥಿತಿಯಿಂದ ಹೊರಬರಲು ಪ್ರಾಂತೀಯ ಸರಕಾರಗಳಿಗೆ ಇದ್ದ ದಾರಿ ಎಂದರೆ ಹಿಂದಿಯನ್ನು ವಿರೋಧಿಸುವ ನೆಪದಲ್ಲಿ ಇಂಗ್ಲಿಶನ್ನು ಸಮರ್ಥಿಸುವುದು. ಸಂಪರ್ಕ ಭಾಷೆಯಾಗಿ ಇಂಗ್ಲಿಶ್ ಮುಂದುವರೆಯಿ ತೆಂದರೆ ಬಳಸುಮಾರ್ಗದಿಂದ ರಾಜ್ಯಮಟ್ಟದಲ್ಲಿ ಆಡಳಿತ ಭಾಷೆಯಾಗಿ ಇಂಗ್ಲಿಶನ್ನೇ ಉಳಿಸಿಕೊಳ್ಳುವ ಅವಕಾಶ ಸಿಗುತ್ತದೆ. ಈ ಸಂಧಿಕಾಲದಲ್ಲಿ ಕನ್ನಡದ ನೀತಿ ಹಿಂದೆ ಸರಿದು ಆ ಸಂದರ್ಭದ ಆಡಳಿತಾತ್ಮಕ ಬಿಕ್ಕಟ್ಟಿನಿಂದಾಗಿ ಪಾರಾಗಲೂ ಸರಕಾರಗಳು ನಿರ್ಧರಿಸಿದ್ದವು. ಹೀಗಾಗಿ ಆಡಳಿತ ಭಾಷೆಯಾಗಿ ಕನ್ನಡ ಮಾನ್ಯವಾದರೂ ಅದು ಇಂಗ್ಲಿಶಿನೊಡನೆ ಸೆಣಸುವ ಸಂದರ್ಭ ಮಾತ್ರ ಹಾಗೆಯೇ ಮುಂದುವರೆದಿತ್ತು. ಇನ್ನೂ ಪರಿಸ್ಥಿತಿ ಹಾಗೆಯೇ ಉಳಿದಿದೆ.

ಭಾಷಾನೀತಿಯ ಇನ್ನೊಂದು ನೆಲೆ ಎಂದರೆ ಸಮಾಜೀಕರಣದ ಸಾಧನವಾದ ಶಿಕ್ಷಣಕ್ಷೇತ್ರದಲ್ಲಿ ಕಲಿಕೆಯ ಭಾಷೆಯಾಗಿ ಯಾವುದನ್ನು ಬಳಸಬೇಕು ಎಂಬ ಬಗೆಗೆ ನಿರ್ಧಾರ ಮಾಡುವುದು. ಏಕೀಕರಣಕ್ಕೂ ಹಿಂದೆಯೇ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಸಾರ್ವತ್ರಿಕ ಶಿಕ್ಷಣ ಜಾರಿಯಲ್ಲಿತ್ತು. ಇದರ ಸ್ವರೂಪ ಮತ್ತು ಪ್ರಮಾಣ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಇದ್ದವು. ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿನ ಪ್ರದೇಶಗಳನ್ನು ಬಿಟ್ಟರೆ ಉಳಿದ ಕಡೆ ಸಾರ್ವತ್ರಿಕ ಶಿಕ್ಷಣದ ಕಲಿಕೆಯ ಭಾಷೆಯಾಗಿ ಕನ್ನಡಕ್ಕೆ ಮನ್ನಣೆ ತೋರುತ್ತಿತ್ತು. ಸರಿಸುಮಾರು ೭-೮ ದಶಕದವರೆಗೆ ಹೀಗೆ ಕನ್ನಡವನ್ನು ಕಲಿಕೆಯ ಮಾಧ್ಯಮವನ್ನಾಗಿ ಬಳಸಿದ ಪರಿಣಾಮವಾಗಿ ಏಕೀಕರಣದ ಹೊತ್ತಿನಲ್ಲಿ ಆಡಳಿತ ಭಾಷೆಯ ಸಂಬಂಧದಲ್ಲಿ ಇದ್ದ ಸಮಸ್ಯೆಗಳು ಇಲ್ಲಿ ಇರಲಿಲ್ಲ. ಹೆಚ್ಚೆಂದರೆ ಈಗಾಗಲೇ ಬಳಕೆಯಲ್ಲಿದ್ದ ಈ ನೀತಿಯನ್ನು ಅಧಿಕೃತಗೊಳಿಸುವುದು ಮತ್ತು ವ್ಯಾಪಕಗೊಳಿಸುವುದು ಮಾತ್ರ ಸರ್ಕಾರದ ಗುರಿ ಆಗಬೇಕಿತ್ತು. ಇದನ್ನು ಸರ್ಕಾರ ನಿರಾಕರಿಸಲಿಲ್ಲ. ಕನ್ನಡವನ್ನು ಸಾರ್ವತ್ರಿಕ ಶಿಕ್ಷಣದ ಕಲಿಕೆಯ ಮಾಧ್ಯಮವನ್ನಾಗಿ ಒಪ್ಪಿಕೊಳ್ಳುವ ನೀತಿಯನ್ನು ಸರ್ಕಾರ ಮುಂದುವರೆಸಿತ್ತು.

ಆದರೆ ಮುಂದಿನ ದಿನಗಳು ಅಷ್ಟು ಸರಳವಾಗಲಿಲ್ಲ. ಅದಕ್ಕೆ ಶೈಕ್ಷಣಿಕವಲ್ಲದ ಹಲವು ಕಾರಣಗಳಿವೆ. ಮೊದಲನೆಯದಾಗಿ ಕಲಿಕೆಯ ವ್ಯಾಪ್ತಿಗೆ ಬಂದವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತ್ತ ಹೋಯಿತು. ಕಡ್ಡಾಯ ಶಿಕ್ಷಣದ ಹೊಣೆ ಹೊತ್ತ ಸರ್ಕಾರ ತನ್ನ ಸಂಪನ್ಮೂಲಗಳನ್ನು ಬಳಸಿ ನಾಡಿನ ಎಲ್ಲ್ಲ ಕಡೆಯೂ ಪ್ರತಿ ಮಗುವಿಗೂ ಹತ್ತು ವರ್ಷಗಳ ಶಿಕ್ಷಣವನ್ನು ನೀಡುವುದು ಅಗತ್ಯವಾಗಿತ್ತು. ಆದರೆ ರಾಜ್ಯ ಸರ್ಕಾರದ ಇತರ ಯೋಜನಾ ಪ್ರಕ್ರಿಯೆಗಳು ಈ ಗುರಿಯನ್ನು ಮುಂಚೂಣಿಯಲ್ಲಿ ಇರಿಸಿಕೊಳ್ಳಲಿಲ್ಲ. ಸರಕಾರ ತಾನು ಮಾಡಬೇಕಾದ ಕೆಲಸವನ್ನು ಪೂರೈಸಲು ಖಾಸಗಿ ವಲಯಕ್ಕೆ ಅವಕಾಶ ನೀಡಿತು. ಶಿಕ್ಷಣ ಪ್ರಸಾರವೂ ತಮ್ಮ ಹಲವು ಗುರಿಗಳಲ್ಲಿ ಒಂದೆಂದು ತಿಳಿದಿದ್ದ ಕೆಲವು ಸಾಮಾಜಿಕ ಸಂಸ್ಥೆಗಳು ಈ ಮೊದಲು ಸಾರ್ವತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದವು. ಕ್ರೈಸ್ತ ಮಿಶನರಿಗಳು, ವೀರಶೈವ ಮಠಗಳು, ದೇಶೀಯ ಆಡಳಿತ ಸ್ಥಾಪನೆಯ ಗುರಿ ಹೊಂದಿದ ಸೇವಾ ಸಂಸ್ಥೆಗಳು ಹೀಗೆ ತೊಡಗಿಕೊಂಡು ತಂತಮ್ಮ ಶಾಲೆಗಳಲ್ಲಿ ಸಾರ್ವತ್ರಿಕ ಶಿಕ್ಷಣವನ್ನು ನೀಡುತ್ತಿದ್ದವು. ಇವುಗಳಲ್ಲಿ ಶ್ರೀಮಂತ ವರ್ಗದ ವಿದ್ಯಾರ್ಥಿಗಳಿಗಾಗಿಯೇ ಮೀಸಲಾಗಿದ್ದ ಕೆಲವು ಬೆರಳೆಣಿಕೆಯ ಶಾಲೆಗಳನ್ನು ಬಿಟ್ಟರೆ ಉಳಿದ ಕಡೆ ಸರ್ಕಾರದ ನೀತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಕೆಲಸವೇ ನಡೆಯುತ್ತಿತ್ತು. ಹಾಗಾಗಿಕನ್ನಡದ ಕಲಿಕೆ ಬಳಕೆಗಳಿಗೆ ಆಘಾತಕಾರಿಯಾದ ಸಂದರ್ಭಗಳು ಇರಲಿಲ್ಲ. ಆದರೆ ಏಕೀಕರಣದ ಅನಂತರದ ಎರಡು ದಶಕಗಳು ಕಳೆಯುವ ಹೊತ್ತಿಗೆ ಖಾಸಗಿಯವರು ಅಧಿಕ ಪ್ರಮಾಣದಲ್ಲಿ ಈ ವಲಯವನ್ನು ಪ್ರವೇಶಿಸಿದರು. ಮೇಲುನೋಟಕ್ಕೆ ಶಿಕ್ಷಣ ಪ್ರಸಾರ ಇವರ ಉದ್ದೇಶವೆಂದು ತೋರಿದರೂ ಸರ್ಕಾರ ತನ್ನ ಹೊಣೆ ನಿರ್ವಹಿಸದೆ ಇದ್ದುದರಿಂದ ಉಂಟಾದ ನಿರ್ವಾತ ಪ್ರದೇಶವನ್ನು ತುಂಬಲೆಂದು ಇವರು ಬಂದಂತೆ ತೋರುತ್ತದೆ. ಹೀಗೆ ಪ್ರವೇಶಿಸಿ ಖಾಸಗಿ ಶಾಲೆಗಳು ಕನ್ನಡವನ್ನು ಕಲಿಕೆಯ ಭಾಷೆಯನ್ನಾಗಿ ಬಳಸಬೇಕು ಎಂಬ ನೀತಿಯನ್ನು ಇರುವಂತೆಯೇ ಪಾಲಿಸಲಿಲ್ಲ. ಇದು ದೂರಗಾಮಿಯಾದ ಹಲವು ಪರಿಣಾಮ ವನ್ನು ಉಂಟುಮಾಡಿತ್ತು. ಹೀಗೆ ಖಾಸಗಿ ಶಾಲೆಗಳು ಇಂಗ್ಲಿಶ್ ಮಾಧ್ಯಮದ ಪರವಾಗಿ ನಿಂತುದಕ್ಕೆ ಹಲವು ಕಾರಣಗಳನ್ನು ಗುರುತಿಸಲಾಗಿದೆ.

೧.ಇಂಗ್ಲಿಶ್‌ಗೆ ಇದ್ದ ಹೆಚ್ಚಿನ ಮಾನ್ಯತೆಯಿಂದಾಗಿ ಆ ಭಾಷೆಯ ಮೂಲಕ ಕಲಿಯಲು ಅಪೇಕ್ಷೆ ಹೆಚ್ಚಿದೆ. ೨. ವೃತ್ತಿ ಅವಕಾಶಗಳಿಗಾಗಿ ಹೆಚ್ಚು ಚಲನಶೀಲರಾಗಿ ಜನರು ರಾಜ್ಯದ ಹೊರಗೆ ಹೋಗಬೇಕಾಗಿ ಬಂದುದರಿಂದಾಗಿ ಅವರು ಕನ್ನಡ ಮಾಧ್ಯಮದ ಮೂಲಕ ಕಲಿತರೆ ಅವಕಾಶಗಳಿಂದ ವಂಚಿತರಾಗುತ್ತಾರೆ. ೩. ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಶ್ ಮೂಲಕ ಕಲಿಸಲು ಅಪೇಕ್ಷೆಪಡುತ್ತಾರೆ. ೪.ಸರಕಾರಿ ಶಾಲೆಗಳಿಗಿಂತ ತಾವು ಭಿನ್ನ ಎಂದು ತೋರಿಸುವ ಮೂಲಕ ಮಕ್ಕಳನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಖಾಸಗಿಯವರೂ ಹೀಗೆ ಇಂಗ್ಲಿಶ್ ಮಾಧ್ಯಮವನ್ನು ಆಯ್ದುಕೊಂಡರು.

ಈ ಎಲ್ಲ್ಲ ಕಾರಣಗಳು ಪೂರ್ಣ ಸತ್ಯವೂ ಅಲ್ಲ. ಹಾಗೆಂದು ಇವುಗಳನ್ನು ಹುಸಿಯೆಂದು ನಿರಾಕರಿಸುವಂತೆಯೂ ಇಲ್ಲ. ಖಾಸಗಿ ವಲಯದ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆಯ ಮಾಧ್ಯಮವಾಗಿ ಮನ್ನಣೆ ಪಡೆಯಲು ಇರುವ ಅನ್ಯಕಾರಣಗಳನ್ನು ನಾವು ಪರಿಶೀಲಿಸಬೇಕಾಗಿದೆ. ಕರ್ನಾಟಕ ಸರಕಾರದ ಶಿಕ್ಷಣ ಭಾಷಾನೀತಿಯನ್ನು ಬೇರೊಂದು ಅಧ್ಯಯನದಲ್ಲಿ ಗಮನಿಸಲಾಗುತ್ತದೆ. ಆದರೆ ೧೯೫೬ರ ಪರಿಸ್ಥಿತಿ ಅನಂತರದ ಬೆಳವಣಿಗೆಗಳು ಹೇಗೆ ಇಂಗ್ಲಿಶ್ ಮಾಧ್ಯಮದ ಪರವಾಗಿವೆ ಎಂಬುದನ್ನು ಇಲ್ಲಿ ಸ್ಥೂಲವಾಗಿ ಪ್ರಸ್ತಾಪಿಸಲಾಗುತ್ತದೆ. ಏಕೀಕರಣದ ಸಂದರ್ಭದಲ್ಲಿ ನಿಜಾಮ ಆಡಳಿತದ ಪ್ರದೇಶಗಳನ್ನು ಹೊರತುಪಡಿಸಿದರೆ ಬಹುಮಟ್ಟಿಗೆ ಕನ್ನಡ ಮಾಧ್ಯಮವೇ ಸಾರ್ವತ್ರಿಕ ಶಿಕ್ಷಣದಲ್ಲಿ ಅಧಿಕೃತವಾಗಿ ಮತ್ತು ಆಚರಣೆಯಲ್ಲಿ ಜಾರಿಯಲ್ಲಿತ್ತು. ಆದರೆ ಇದೇ ಮಾತನ್ನು ಉನ್ನತ ಶಿಕ್ಷಣ ಮತ್ತು ತಾಂತ್ರಿಕ, ವೈದ್ಯಕೀಯ ಶಿಕ್ಷಣಗಳಿಗೆ ಅನ್ವಯಿಸಲು ಬರುವುದಿಲ್ಲ. ಅಲ್ಲಿ ಇಂಗ್ಲಿಶ್ ಮಾಧ್ಯಮವೇ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರದ ಕಾರ್ಯಕ್ರಮ ಒಂದರ ಅನ್ವಯ ರಾಜ್ಯದ ಆಗಿನ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಹಂತದಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಅಳವಡಿಸಲು ಆರಂಭಿಸಲಾಯಿತು. ಇದಕ್ಕಾಗಿ ವಿಶೇಷ ಅನುದಾನ ಪಡೆದ ವಿಶ್ವವಿದ್ಯಾಲಯಗಳು, ಕನ್ನಡ ಭಾಷೆಯಲ್ಲಿ ವಿಜ್ಞಾನ ಮತ್ತು ಮಾನವಿಕ ವಿಷಯಗಳಲ್ಲಿ ಹೊಸ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸುವುದು ಮತ್ತು ಇಂಗ್ಲಿಶ್‌ನಿಂದ ಅನುವಾದಿಸುವ ಯೋಜನೆಯನ್ನು ಕೈಗೆತ್ತಿಕೊಂಡವು. ಆದರೆ ಈ ಯೋಜನೆ ವ್ಯಾಪಕ ಯಶಸ್ಸನ್ನು ಪಡೆಯಲಿಲ್ಲ. ಈ ಕನ್ನಡ ಮಾಧ್ಯಮ ಅಳವಡಿಕೆ ಪದವಿ ಪೂರ್ವ ಮತ್ತು ಪದವಿ ತರಗತಿಗಳಲ್ಲಿ ಜಾರಿಗೆ ಬಂದಂತೆ ಸ್ನಾತಕೋತ್ತರ ವೈದ್ಯಕೀಯ, ತಾಂತ್ರಿಕ ಮುಂತಾದ ಪದವಿಗಳಲ್ಲಿ ಮತ್ತು ವೃತ್ತಿ ತರಬೇತಿ ನೀಡುತ್ತಿದ್ದ ತರಗತಿಗಳಲ್ಲಿ ಜಾರಿಗೆ ಬರಲಿಲ್ಲ. ಅಂದರೆ ಕನ್ನಡ ಭಾಷೆಯೂ ಸಾಮಾನ್ಯ ಶಿಕ್ಷಣದ ಅವಧಿಯ ಆಚೆಗೆ ಶಿಕ್ಷಣ ಮಾಧ್ಯಮವಾಗಿ ಮನ್ನಣೆ ಪಡೆಯಲಿಲ್ಲ.

ಈ ಹಂತದ ಶಿಕ್ಷಣ ಮಾತ್ರ ಹೊಸ ಬಗೆಯ ವೃತ್ತಿಗಳಿಗೆ ಅವಕಾಶವನ್ನು ಕಲ್ಪಿಸುತ್ತಿತ್ತು. ಅಂದರೆ ಸಾರ್ವತ್ರಿಕ ಶಿಕ್ಷಣ ಪಡೆದವರು ಉನ್ನತ ಶಿಕ್ಷಣ ಪಡೆಯುವ ಮೂಲಕ ತಮ್ಮ ಜೀವನ ನಿರ್ವಹಣೆಗೆ ಹೊಸ ವೃತ್ತಿಗಳನ್ನು ಪಡೆಯುವ ಅವಕಾಶಗಳಿದ್ದವು. ಇದು ಸಹಜವಾಗಿಯೇ ಇಂಗ್ಲಿಶ್ ಮಾಧ್ಯಮದ ಕಡೆಗೆ ಒಲವನ್ನು ರೂಪಿಸಿತ್ತು. ಪ್ರಾಥಮಿಕ ಹಂತದಲ್ಲೇ ಉನ್ನತ ಶಿಕ್ಷಣ ಪಡೆಯಲು ಬೇಕಾದ ಅರ್ಹತೆಗಳನ್ನು ಗಳಿಸಿಕೊಳ್ಳುವತ್ತ ಸಾಮಾಜಿಕ ಒಲವು ಮೂಡಿತು. ಕೆಳಹಂತದ ಶಿಕ್ಷಣಕ್ಷೇತ್ರದ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳು ಹೀಗೆ ಉನ್ನತ ಶಿಕ್ಷಣವಲಯಕ್ಕೆ ದಾಟಲು ಅರ್ಹರಾಗಿದ್ದಾರೆ ಎಂಬುದನ್ನು ತೋರಿಸಿಕೊಡಬೇಕಾಗಿತ್ತು.

ಶಿಕ್ಷಣ ಕ್ಷೇತ್ರವೇ ಆಯ್ಕೆ ಮತ್ತು ನಿರಾಕರಣೆಗಳ ನೆಲೆಯಲ್ಲಿ ಕೆಲಸ ಮಾಡುತ್ತದೆ. ಸಾರ್ವತ್ರಿಕ ಶಿಕ್ಷಣಕ್ಕಾಗಿ ಬರುವ ಎಲ್ಲ್ಲ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡರೂ ಅವರಲ್ಲಿ ಬಹುಪಾಲನ್ನು ನಿರಾಕರಿಸಿ ಕೆಲವರನ್ನು ಮಾತ್ರ ಉನ್ನತ ಶಿಕ್ಷಣಕ್ಕೆ ಸಿದ್ಧಪಡಿಸುವ ವ್ಯವಸ್ಥೆ ಇಲ್ಲಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಇಂಗ್ಲಿಶ್ ಮಾಧ್ಯಮವು ಇಂತಹ ಆಯ್ಕೆಯ ಮತ್ತು ಅವಕಾಶ ನಿರಾಕರಣೆಯ ಕಾರ್ಯಕ್ರಮ ಜಾರಿಗೆ ಬರಲು ನೆರವಾಯಿತು ಎಂದರೆ ಇದು ಕೇವಲ ಶೈಕ್ಷಣಿಕ ನೆಲೆಯ ಆಯ್ಕೆಯಾಗದೆ ಸಾಮಾಜಿಕ ಚಲನಶೀಲತೆಯ ನಿರ್ಧಾರದಂತೆ ತೋರುತ್ತದೆ.

ಉನ್ನತ ಶಿಕ್ಷಣದಲ್ಲಿ ಮತ್ತು ವೃತ್ತಿ ತರಬೇತಿ ಶಿಕ್ಷಣದಲ್ಲಿ ಕನ್ನಡವನ್ನು ಕಲಿಕೆಯ ಮಾಧ್ಯಮವನ್ನಾಗಿ ನಿಗದಿಪಡಿಸಲು ಕರ್ನಾಟಕ ಸರ್ಕಾರ ತಾನೇ ಒಂದು ಯೋಜನೆ ಯನ್ನು ರೂಪಿಸಲಿಲ್ಲ. ಅದಕ್ಕಾಗಿ ಸಾಮಾಜಿಕ ಒತ್ತಾಯಗಳು ಆಗಾಗ ಇದ್ದರೂ ಅವುಗಳನ್ನು ಹತ್ತಿಕ್ಕಿ ಬೇರೆ ಬೇರೆ ಕಾರಣಗಳನ್ನು ಮುಂದೂಡಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ತನ್ನ ಭಾಷಾನೀತಿಯ ಚೌಕಟ್ಟಿನಲ್ಲಿ ಕನ್ನಡವನ್ನು ಇಂಗ್ಲಿಶಿನ ಸಹಭಾಷೆಯನ್ನಾಗಿ ಇರಿಸುವ ಪ್ರಯತ್ನವನ್ನಷ್ಟೇ ಅದು ಮಾಡಿತ್ತು.

ಸರ್ಕಾರದ ಭಾಷಾನೀತಿಯು ಆಡಳಿತ ಮತ್ತು ಶಿಕ್ಷಣ ಕ್ಷೇತ್ರಗಳಲ್ಲದೆ ನ್ಯಾಯಾಂಗ ಕ್ಷೇತ್ರದಲ್ಲೂ ಪ್ರವೃತ್ತವಾಗುವ ಅವಕಾಶವಿದೆ. ಆದರೆ ನ್ಯಾಯಾಂಗವು ಸಂವಿಧಾನದ ಪ್ರಕಾರ ಪೂರ್ಣವಾಗಿ ರಾಜ್ಯ ವ್ಯಾಪ್ತಿಯ ವಿಷಯವಲ್ಲ. ಅದಕ್ಕೆ ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯೂ ಇದೆ. ಅಂದರೆ ನ್ಯಾಯಾಂಗದಲ್ಲಿ ಯಾವ ಭಾಷೆಯನ್ನು ಬಳಸಬೇಕು ಎಂಬುದನ್ನು ನಿರ್ಧರಿಸುವ ಹೊಣೆ ಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ಸೇರುವುದಿಲ್ಲ. ಕೇಂದ್ರ ಸರ್ಕಾರ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟುಗಳಲ್ಲಿ ಇಂಗ್ಲಿಶನ್ನು ಮಾತ್ರ ಅಧಿಕೃತ ಭಾಷೆಯನ್ನಾಗಿ ಇರಿಸಿದೆ. ವ್ಯವಹಾರ, ವಾದ ಮಂಡಣೆ ಮತ್ತು ತೀರ್ಪುಗಳು ಇಂಗ್ಲಿಶಿನಲ್ಲಿ ಮಾತ್ರ ಇರಲು ಸಾಧ್ಯ. ಇದಕ್ಕೆ ಸಮರ್ಥನೆಗಳನ್ನು ನೀಡಲಾಗಿದೆ. ಅದೆಲ್ಲವನ್ನು ನಾವಿಲ್ಲಿ ಚರ್ಚಿಸುವ ಅಗತ್ಯವಿಲ್ಲ. ಆದರೆ ಕೆಳಹಂತದ ಕೋರ್ಟುಗಳಲ್ಲಿ ಪ್ರಾಂತೀಯ ಭಾಷೆಗಳು ಬಳಕೆಯಾಗಲು ಅವಕಾಶಗಳಿವೆ. ವ್ಯವಹಾರದಲ್ಲಿ ಮಾತ್ರವಲ್ಲದೇ ವಾದಮಂಡನೆ ಮತ್ತು ತೀರ್ಪು ಗಳಲ್ಲಿಯೂ ಕನ್ನಡವನ್ನು ಬಳಸಲು ಅವಕಾಶಗಳಿವೆ.

ಇದಲ್ಲದೆ ನ್ಯಾಯಾಂಗದ ಸಂಬಂಧದಲ್ಲಿ ರಾಜ್ಯ ಸರ್ಕಾರ ತಳೆದಿರುವ ಮತ್ತೊಂದು ಕನ್ನಡಪರ ನಿಲುವೆಂದರೆ ಎಲ್ಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾನೂನುಗಳನ್ನು, ನಿರ್ಣಯಗಳನ್ನು ಅಧಿಕೃತವಾಗಿ ಕನ್ನಡದಲ್ಲಿ ಲಭ್ಯವಾಗುವಂತೆ ಮಾಡುವುದು. ಸಂವಿಧಾನದ ಕನ್ನಡ ಅನುವಾದದ ಜೊತೆಗೆ ಶಿಕ್ಷಾಸಂಹಿತೆಯನ್ನು ಕೂಡ ಅನುವಾದಿಸಿ ಅಧಿಕೃತಗೊಳಿಸಿದೆ.

ಈ ಮೂರು ವಲಯಗಳಲ್ಲದೆ ಭಾಷಾನೀತಿಯು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಜಾರಿಗೆ ಬರುವ ವಲಯವೆಂದರೆ ಸಮೂಹ ಮಾಧ್ಯಮಗಳು. ಇವುಗಳಿಗೆ ಕನ್ನಡ ಅಧಿಕೃತ ಭಾಷೆಯಾಗಿರುವುದು ಸಾಮಾಜಿಕ ಸಂದರ್ಭದ ಪರಿಣಾಮವೇ ಹೊರತು ಸರ್ಕಾರದ ಭಾಷಾನೀತಿಯ ಪರಿಣಾಮವಲ್ಲ. ಇಲ್ಲಿ ಹೆಚ್ಚೆಂದರೆ ಸರ್ಕಾರ ಸಮೂಹ ಮಾಧ್ಯಮಗಳ ಕನ್ನಡಪರ ನಿಲುವಿಗೆ, ಕಾರ್ಯಕ್ರಮಕ್ಕೆ ಒತ್ತಾಸೆಯಾಗುವಂತೆ ತನ್ನ ನಿರ್ಣಯಗಳನ್ನು ಮಾಡಬಹುದು; ಹೇಗೆ ಇಂತಹ ನಿರ್ಣಯಗಳು ಸರ್ಕಾರದ ಮೂಲಕ ನಿರೂಪಿತವಾಗಿವೆ ಮತ್ತು ಅವುಗಳ ಪರಿಣಾಮ ಏನಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತದೆ.