ಈ ಹಿಂದೆಯೇ ಹೇಳಿದಂತೆ ೧೯೬೩ರ ಅಕ್ಟೋಬರ್ ೧೦ರಂದು ಕರ್ನಾಟಕ ರಾಜ್ಯಭಾಷಾ ಅಧಿನಿಯಮವನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಯಿತು. ಅಂದರೆ ಏಕೀಕರಣದ ಅನಂತರ ಸರಿಸುಮಾರು ಏಳು ವರ್ಷಗಳ ಅನಂತರ ಈ ಅಧಿನಿಯಮ ಜಾರಿಗೆ ಬಂತು.  ಈ ಅಧಿನಿಯಮವನ್ನು ಕೊಂಚ ವಿವರವಾಗಿ ಪರಿಶೀಲಿಸುವ ಅಗತ್ಯವಿದೆ.

ಈ ಅಧಿನಿಯಮದ ಪ್ರಕಾರ ಸರ್ಕಾರಿ ಉದ್ದೇಶಗಳಿಗಾಗಿ ಬಳಸಬೇಕಾದ ಭಾಷೆ ಕನ್ನಡವೆಂದೂ ರಾಜ್ಯ ವಿಧಾನಮಂಡಲದ ವ್ಯವಹಾರದ ನಿರ್ವಹಣೆಗೆ ಬಳಸಬೇಕಾದ ಭಾಷೆ ಇಂಗ್ಲಿಶ್ ಎಂದೂ ಉಪಬಂಧಿಸಲಾಗಿದೆ. ಸರ್ಕಾರಿ ಉದ್ದೇಶ ಗಳು ಎಂದರೇನು ಮತ್ತು ಏಕೆ ಇಂಗ್ಲಿಶನ್ನು ಮಾತ್ರ ವಿಧಾನ ಮಂಡಲದ ವ್ಯವಹಾರಕ್ಕಾಗಿ ಬಳಸಬೇಕು ಎಂಬ ಬಗೆಗೆ ವಿವರಣೆಯೂ ನಮಗೆ ಲಭ್ಯವಾಗುವುದಿಲ್ಲ. ಮುಂದು ವರೆದು ಈ ಅಧಿನಿಯಮವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿನಿಯಮವನ್ನು ಕನ್ನಡದಲ್ಲಿ ಭಾಷಾಂತರಿಸಿ ಪ್ರಕಟಿಸಲು ಅವಕಾಶ ಕಲ್ಪಿಸುತ್ತದೆ. ಮತ್ತು ಹೀಗೆ ಪ್ರಕಟಗೊಂಡ ಕನ್ನಡ ಅನುವಾದದ ಪಾಠವನ್ನು ಅಧಿಕೃತವೆಂದು ಸೂಚಿಸುತ್ತದೆ. ಈ ಕನ್ನಡ ಅನುವಾದದ ಪಾಠ ಅಧಿಕೃತಗೊಳಿಸುವ ಮಾತು ಎರಡು ನೆಲೆಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಬಹುದು. ೧.ಇಂಗ್ಲಿಶ್ ಮತ್ತು ಕನ್ನಡ ಪಾಠಗಳಲ್ಲಿ ಅರ್ಥ ವಿವರಣೆಗೆ ಸಂಬಂಧಿಸಿದಂತೆ ಯಾವುದಾದರೂ ಗೊಂದಲಗಳು ಉಂಟಾದರೆ ಆಗ ಕನ್ನಡ ಪಾಠವನ್ನು ಅಧಿಕೃತ ಎಂದು ಭಾವಿಸುವುದು. ೨.ರಾಜ್ಯಪಾಲರ ಅನುಮತಿಯನ್ನು ಪಡೆದು ರಾಜ್ಯಪತ್ರದಲ್ಲಿ ಪ್ರಕಟಗೊಂಡ ಈ ಕನ್ನಡ ಅನುವಾದವು ಮಾತ್ರ ಅಧಿಕೃತವೇ ಹೊರತು ಹೀಗೆ ಅನುಮತಿ ಪಡೆಯದ ಇನ್ಯಾವುದೇ ಅನುವಾದವು ಬೇರೆ ಯಾವುದೇ ಕಾರಣದಿಂದ ಸಿದ್ಧಗೊಂಡಿದ್ದರೂ  ಅದು ಅಧಿಕೃತವಲ್ಲ ಎಂದು ತಿಳಿಯುವುದು. ಈ ಎರಡು ವ್ಯಾಖ್ಯೆಗಳಲ್ಲಿ ಎರಡನೆಯದು ಮಾತ್ರ ಸರಿಯೆಂದು ತೋರುತ್ತದೆ. ಎಂದರೆ ಮೂಲ ಇಂಗ್ಲಿಶಿನ ಪಾಠಕ್ಕೆ ಕನ್ನಡದಲ್ಲೇ ಹಲವು ಉದ್ದೇಶಿತ ಇಲ್ಲವೇ ಪ್ರಾಸಂಗಿಕ ಅನುವಾದಗಳಿದ್ದರೆ ಅವುಗಳಲ್ಲಿ ಯಾವುದನ್ನು ಅಧಿಕೃತ ಎಂದು ಪರಿಗಣಿಸಬೇಕು ಎಂಬ ಬಗೆಗೆ ಈ ಅಧಿನಿಯಮವು ಸ್ಪಷ್ಟನೆಯನ್ನು ನೀಡುತ್ತದೆ. ನಾವು ಸಾಧ್ಯವೆಂದು ತಿಳಿದ ಮೊದಲನೇ ವ್ಯಾಖ್ಯೆಯ ಚರ್ಚೆ ಬಹುಮಟ್ಟಿಗೆ ವಿಧಾನಮಂಡಲಗಳಲ್ಲಿ ಮತ್ತು ಉಚ್ಚ ಹಾಗೂ ಉನ್ನತ ನ್ಯಾಯಾಲಯಗಳಲ್ಲಿ ಮಾತ್ರ ಬರುವ ಪ್ರಶ್ನೆ. ಅಲ್ಲೆಲ್ಲಾ ಇಂಗ್ಲಿಶ್ ಮಾತ್ರ ಅಧಿಕೃತ ವ್ಯವಹಾರದ ಭಾಷೆಯೆಂದು ಈಗಾಗಲೇ ಸಿದ್ಧವಾಗಿರುವುದರಿಂದ ಅಲ್ಲಿ ಅಧಿನಿಯಮಗಳ ಕನ್ನಡ ಅನುವಾದ ಪಾಠದ ಬಳಕೆಯಾಗಲೀ ಅದರ ಅಧಿಕೃತತೆಯಾಗಲೀ ಒಂದು ಪ್ರಶ್ನೆಯಾಗಿ ಬರುವುದು ಸಾಧ್ಯವಿಲ್ಲ. ಎಂದರೆ ಈ ಅಧಿನಿಯಮವು ಕನ್ನಡ ಭಾಷೆಗೆ ಅವಕಾಶ ಕಲ್ಪಿಸುತ್ತಲೂ ತನ್ನ ಅಧಿಕಾರ ವ್ಯಾಪ್ತಿಯ ಕನ್ನಡವನ್ನು ಮಾತ್ರ ಅಧಿಕೃತವೆಂದು ಹೇಳುವ ಪ್ರಯತ್ನ ಮಾಡಿದೆ.

ಈ ಅಧಿನಿಯಮಕ್ಕೆ ೧೯೮೨ರಲ್ಲಿ ಎರಡು ತಿದ್ದುಪಡಿಗಳನ್ನು ಮಾಡಲಾಗಿದೆ. ೧೯೬೩ರಿಂದ ೧೯೮೨ರವರೆಗೆ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ವಿಧಾನಮಂಡಲದಲ್ಲಿ ಕನ್ನಡವನ್ನು ಬಳಸಬೇಕೆ, ಬಳಸಿದರೆ ಅದಕ್ಕೆ ಮನ್ನಣೆ ನೀಡಬೇಕೆ ಎಂಬ ಪ್ರಶ್ನೆ ಮೇಲಿಂದ ಮೇಲೆ ಉದ್ಭವಿಸುತ್ತಲೇ ಬಂದಿದೆ. ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣ ಸಂದರ್ಭದಲ್ಲಿ, ರಾಜ್ಯದ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಇಂಗ್ಲಿಶ್ ಭಾಷೆಯಲ್ಲಿ ಮಂಡನೆಗಳು ನಡೆಯುತ್ತಿದ್ದುದನ್ನು ವಿರೋಧಿಸಿ ವಿಧಾನಮಂಡಲದಲ್ಲಿ ಸದಸ್ಯರು ಪ್ರತಿಭಟಿಸುತ್ತಲೇ ಇದ್ದರು. ಆದರೂ ಬದಲಾವಣೆಯಾಗಲು ಇಷ್ಟು ದೀರ್ಘಾವಧಿ ಬೇಕಾಯಿತು. ೧೯೮೨ರ ತಿದ್ದುಪಡಿ ಯಲ್ಲೂ ಮುಖ್ಯವಾಗಿ ಮಾಡಿರುವ ಬದಲಾವಣೆ ಹೀಗಿದೆ: ರಾಜ್ಯ ವಿಧಾನ ಮಂಡಲದ ವ್ಯವಹಾರದ ನಿರ್ವಹಣೆಗಾಗಿ ಕನ್ನಡ ಮತ್ತು ಹಿಂದಿಯ ಜೊತೆಗೆ ಇಂಗ್ಲಿಶ್ ಭಾಷೆಯ ಉಪಯೋಗವನ್ನು ಮುಂದುವರೆಸಬಹುದು. ಈ ಹಿಂದಿನ ಅಧಿನಿಯಮದಲ್ಲಿ ಇಂಗ್ಲಿಶ್ ಭಾಷೆಯನ್ನು ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಈ ತಿದ್ದುಪಡಿಯು ಕನ್ನಡ ಮತ್ತು ಹಿಂದಿಗಳ ಜೊತೆಗೆ ಇಂಗ್ಲಿಶ್ ಭಾಷೆಯನ್ನು ಬಳಸಲು ಅವಕಾಶ ಕಲ್ಪಿಸುತ್ತದೆ. ವಿಚಿತ್ರವೆಂದರೆ ಅಲ್ಲಿಯವರೆಗೂ ಇಂಗ್ಲಿಶ್ ಮಾತ್ರ ಅಧಿಕೃತವಾಗಿ ಬಳಕೆಯಾಗುತ್ತಿತ್ತು. ಆದರೆ ಕನ್ನಡ ಮತ್ತು ಹಿಂದಿಗಳು ಈಗಾಗಲೇ ಬಳಕೆಯಾಗುತ್ತಿವೆ ಎಂಬಂತೆಯೂ ಈಗ ಮತ್ತೆಯೂ ಇಂಗ್ಲಿಶನ್ನು ಬಳಸುತ್ತ್ತ ಹೋಗಲು ಅವಕಾಶ ಕಲ್ಪಿಸುವಂತೆ ತಿದ್ದುಪಡಿಯು ಸೂಚಿಸುತ್ತದೆ.

ರಾಜ್ಯ ಸರ್ಕಾರಗಳ ಭಾಷಾನೀತಿಯಲ್ಲಿ ಪ್ರಾಂತೀಯ ಭಾಷೆಗಳನ್ನು ನಿರಾಕರಿಸುವ ಧೋರಣೆ ಇರುವುದಿಲ್ಲ. ಆದರೆ ಅದಕ್ಕೆ ತಕ್ಕ ಅವಕಾಶಗಳನ್ನು ಮಾತ್ರ ಕಲ್ಪಿಸುತ್ತಿರುವುದಿಲ್ಲ. ಅಮೂರ್ತ ಅಧಿಕಾರಗಳನ್ನು ಕಲ್ಪಿಸಿಕೊಟ್ಟರೂ ಪ್ರಾಯೋಗಿಕ ನೆಲೆಯಲ್ಲಿ ಸ್ಪಷ್ಟ ಅವಕಾಶಗಳನ್ನು ನಿರ್ಮಿಸುವುದಿಲ್ಲ. ಈ ಮಾತಿಗೆ ಮೇಲಿನ ತಿದ್ದುಪಡಿ ನಿದರ್ಶನವಾಗಿವೆ. ಕನ್ನಡವನ್ನು ಬಳಸಬಾರದು ಎಂದು ಹೇಳುವುದಿಲ್ಲ ವಾದರೂ ಸದ್ದಿಲ್ಲದೇ ಇಂಗ್ಲಿಶಿನ ಬಳಕೆಯನ್ನು ಮುಂದುವರೆಸುತ್ತ್ತ ಹೋಗುವ ಮೂಲಕ ಕನ್ನಡಕ್ಕಿರುವ ಅವಕಾಶವನ್ನು ಪರೋಕ್ಷವಾಗಿ ನಿರಾಕರಿಸುವ ಪ್ರಯತ್ನ ಇದಾಗಿದೆ.

೧೯೮೨ರಲ್ಲಿ ಇದೇ ಅಧಿನಿಯಮಕ್ಕೆ ಮತ್ತೊಂದು ತಿದ್ದುಪಡಿಯನ್ನು ತರಲಾಗಿದೆ. ಆ ತಿದ್ದುಪಡಿಯ ಕನ್ನಡ ರೂಪ ಹೀಗಿದೆ. ಕನ್ನಡ ಭಾಷೆಯನ್ನು ಅ.ಮಂಡಿಸಬೇಕಾದ ಯಾವುದೇ ವಿಧೇಯಕದಲ್ಲಿ ಅಥವಾ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಅನುಮೋದಿಸಲಾದ ಯಾವುದೇ ಅಧಿನಿಯಮದಲ್ಲಿ ಅಥವಾ ಆ.ಕರ್ನಾಟಕ ರಾಜ್ಯದ ರಾಜ್ಯಪಾಲರಿಂದ ಪ್ರಖ್ಯಾಪಿಸಲಾದ ಯಾವುದೇ ಅಧ್ಯಾದೇಶದಲ್ಲಿ ಅಥವಾ ಇ.ಸಂವಿಧಾನದ ಮೇರೆಗೆ ಅಥವಾ ಸಂಸತ್ತು ಅಥವಾ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಮಾಡಲಾದ ಯಾವುದೇ ಕಾನೂನಿನ ಮೇರೆಗೆ ರಾಜ್ಯಸರ್ಕಾರದಿಂದ ಹೊರಡಿಸಲಾದ ಯಾವುದೇ ಆದೇಶ, ನಿಯಮ, ವಿನಿಯಮ ಅಥವಾ ಉಪವಿಧಿಯಲ್ಲಿ ಸಹ ಬಳಸಬಹುದು. ಇಷ್ಟು ದೀರ್ಘವಾದ ಉಲ್ಲೇಖ ನೀಡಲು ಕಾರಣಗಳಿವೆ. ೧.ಈ ಆಡಳಿತ ಕನ್ನಡದಲ್ಲಿ ಬಳಕೆಯಾಗುವ ಕನ್ನಡದ ರೂಪವನ್ನು ಪರಿಚಯಿಸುವುದು. ೨.ಇಷ್ಟು ವಿವರವಾದ ತಿದ್ದುಪಡಿಯಲ್ಲಿ ಕನ್ನಡಕ್ಕೆ ಏನು ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳುವುದು. ಈ ತಿದ್ದುಪಡಿಯು ಎಲ್ಲಿ ಕನ್ನಡವನ್ನು ಬಳಸಬಹುದು ಎಂದು ಸೂಚಿಸುತ್ತದೆ. ಆ ಸಂಬಂಧದ ವಿವರಗಳನ್ನು ನೀಡುತ್ತದೆ. ಅಧಿನಿಯಮದ ಮೂಲಪಾಠದಲ್ಲೇ ಸರ್ಕಾರದ ಆಡಳಿತದಲ್ಲಿ ಕನ್ನಡವನ್ನು ಬಳಸಲು ಮತ್ತು ಅಧಿನಿಯಮಗಳನ್ನು ಕನ್ನಡದಲ್ಲಿ ಭಾಷಾಂತರಿಸಿ ಜಾರಿಗೆ ಕೊಡಲು ಅವಕಾಶ ಕಲ್ಪಿಸಲಾಗಿತ್ತು. ಈ ತಿದ್ದುಪಡಿಯೂ ಆಡಳಿತದ ಉದ್ದೇಶಕ್ಕಾಗಿ ಒದಗಿಸುವ ಸರ್ಕಾರದ ತೀರ್ಮಾನಗಳನ್ನು ಕನ್ನಡದಲ್ಲಿ ಸಿದ್ಧಪಡಿಸಲು ಅವಕಾಶ ಕಲ್ಪಿಸುತ್ತದೆ. ಮೊದಲು ಇಂಗ್ಲಿಶಿನಲ್ಲಿ ಸಿದ್ಧಪಡಿಸಿ ಅನಂತರ ಕನ್ನಡದಲ್ಲಿ ಅನುವಾದಿಸುವ ಮತ್ತು ಆ ಅನುವಾದವನ್ನು ಅಧಿಕೃತಗೊಳಿಸುವ ಪರಿಪಾಟವಿತ್ತು. ಈಗ ಮೂಲಪಾಠವನ್ನೇ ಕನ್ನಡದಲ್ಲಿ ಸಿದ್ಧಪಡಿಸುವ ಅವಕಾಶ ಕಲ್ಪಿಸಲಾಗಿದೆ. ಆದರೆ ತಿದ್ದುಪಡಿಯು ಕನ್ನಡವನ್ನು ಸಹ ಬಳಸಬಹುದು ಎಂದು ಹೇಳುತ್ತದೆಯೇ ಹೊರತು ಕನ್ನಡವನ್ನೇ ಬಳಸಬೇಕು ಎಂದು ಹೇಳುವುದಿಲ್ಲ. ಎಂದರೇನಾಯಿತು? ಮೂಲಪಾಠಗಳನ್ನು ಕನ್ನಡದಲ್ಲಿಯೂ ಸಿದ್ಧಪಡಿಸಬಹುದು ಅಥವಾ ಇಂಗ್ಲಿಶ್‌ನಲ್ಲಿಯೂ ಸಿದ್ಧಪಡಿಸಿ ಅನಂತರ ಅದನ್ನು ಕನ್ನಡಕ್ಕೆ ಅನುವಾದಿಸಬಹುದು ಎಂಬ ಎರಡು ಸಾಧ್ಯತೆಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದು ಕನ್ನಡ ಬಳಕೆಯ ಅನಿವಾರ್ಯತೆಯನ್ನು ನಿರೂಪಿಸು ವುದಿಲ್ಲ. ಇಂಗ್ಲಿಶನ್ನು ಮೂಲಪಾಠ ರಚನೆಗೆ ಬಳಸುವ ಅವಕಾಶವಿರುವುದರಿಂದ ಅದು ಬಳಕೆಯಾಗುತ್ತಲೇ ಹೋಗುತ್ತದೆ. ಕನ್ನಡವನ್ನು ಸಹ ಬಳಸಬಹುದು. ಈ ತಿದ್ದುಪಡಿ ಕನ್ನಡಕ್ಕೆ ಅವಕಾಶ ಕಲ್ಪಿಸುತ್ತದೆ ಆದರೂ ಕನ್ನಡವನ್ನೇ ಬಳಸಬೇಕೆಂಬ ಒತ್ತಾಯವನ್ನು ಮಾಡುವುದಿಲ್ಲ. ಈ ಹಿಂದೆ ಹೇಳಿದಂತೆ ಅಧಿಕಾರ ಅಮೂರ್ತ ವಾಗಿದ್ದಾಗ ಪ್ರಾಯೋಗಿಕ ಅವಕಾಶ ನಿರಾಕರಣೆಯಾಗುವುದಕ್ಕೆ ಇದು ಇನ್ನೊಂದು ನಿದರ್ಶನ.

೧೯೮೨ರ ಈ ತಿದ್ದುಪಡಿಯ ನಂತರ ರಾಜ್ಯದ ಆಡಳಿತ ಭಾಷಾ ಅಧಿನಿಯಮಕ್ಕೆ ಯಾವುದೇ ಬದಲಾವಣೆಗಳು ಆಗಿಲ್ಲ. ಎಂದರೆ ಕನ್ನಡವನ್ನು ವಿಧಾನಮಂಡಲದ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಯತ್ನಗಳು ನಡೆದಿಲ್ಲ. ಇಂಗ್ಲಿಶಿನ ಸಹಭಾಷೆಯಾಗಿ ಮಾತ್ರ ಕನ್ನಡಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪರಿಸ್ಥಿತಿ ಇನ್ನೊಂದು ದಿಕ್ಕಿನತ್ತ ನಾವು ಯೋಚಿಸುವಂತೆ ಮಾಡುತ್ತದೆ. ಕರ್ನಾಟಕ ರಾಜ್ಯ ನಿರ್ಮಾಣಗೊಂಡ ಸಂದರ್ಭದಲ್ಲಿ ವಿಧಾನಮಂಡಲಕ್ಕೆ ಸದಸ್ಯರಾಗಿ ಬಂದವರು, ಆವರೆಗೆ ಬೇರೆ ಬೇರೆ ಆಡಳಿತ ಪ್ರದೇಶಗಳ ವಿಧಾನಮಂಡಲಗಳಲ್ಲಿ ಆಡಳಿತ ಮಂಡಳಿಗಳಲ್ಲಿ ಸದಸ್ಯರಾಗಿದ್ದವರು. ೧೯೫೭-೧೯೬೨ ಮತ್ತು ೧೯೬೭ರ ಚುನಾವಣೆಗಳ ನಂತರದಲ್ಲಿ ಈ ವಿಧಾನ ಮಂಡಲಕ್ಕೆ ಕರ್ನಾಟಕ ರಾಜ್ಯದ ಜನ ಸಮುದಾಯದ ಸದಸ್ಯರು ಸೇರಿಕೊಂಡರು. ಈ ತಲೆಮಾರಿನ ಸದಸ್ಯರಲ್ಲಿ ಕನ್ನಡದ ಜೊತೆಗೆ ಇತರ ಭಾರತೀಯ ಭಾಷೆಗಳನ್ನು ಬಲ್ಲವರು ಮತ್ತು ಇಂಗ್ಲಿಶ್‌ನಲ್ಲಿ ವ್ಯವಹರಿಸಲು ಶಕ್ತರಾದ ಸದಸ್ಯರು ಇರುವುದು ಸಾಮಾನ್ಯವಾಗಿತ್ತು. ಇದಕ್ಕೆ ಆ ಹೊತ್ತಿನ ಸಾಮಾಜಿಕ ರಚನೆಯೂ ಮುಖ್ಯ ಕಾರಣ ವಾಗಿದೆ. ಈ ಸದಸ್ಯರು ಶೈಕ್ಷಣಿಕವಾಗಿ ಮಾತ್ರವಲ್ಲದೇ ಸಾಮಾಜಿಕವಾಗಿಯೂ ಮೇಲುಜಾತಿ ಮತ್ತು ವರ್ಗಗಳಿಗೆ ಸೇರಿದವರಾಗಿದ್ದರು. ಇದರಿಂದಾಗಿ ಇವರ ರಾಜಕೀಯ ಹಿತಾಸಕ್ತಿಗಳು ಯಾವಾಗಲೂ ಜನಪರ ಆಗಿರಲೇಬೇಕೆಂಬ ಒತ್ತಾಯ ವಿರಲಿಲ್ಲ. ಸಮಾಜದ ಕೆಳಮಧ್ಯಮ ಜಾತಿ ಮತ್ತು ವರ್ಗಗಳಿಂದ ಸದಸ್ಯರು ಆಯ್ಕೆ ಯಾಗುವ ಸಾಧ್ಯತೆಗಳು ಹೆಚ್ಚಾದದ್ದು ಈಗಾಗಲೇ ಖಚಿತವಾಗಿರುವಂತೆ ಹಾವನೂರ ಆಯೋಗದ ವರದಿಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದ ನಂತರವೇ. ಏಕೆ ೧೯೮೨ರಲ್ಲಿ ರಾಜ್ಯಭಾಷಾ ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕಾಯಿತು ಎಂಬುದಕ್ಕೆ ಇಲ್ಲಿ ಕಾರಣಗಳಿವೆ. ಸಾಮಾಜಿಕವಾಗಿ ಹೊಸ ಸ್ವರೂಪದ ಸದಸ್ಯರು ಇದ್ದ ವಿಧಾನ ಮಂಡಲವು ಸಹಜವಾಗಿಯೇ ಕನ್ನಡದಲ್ಲಿ ಆಡಳಿತ ವ್ಯವಹಾರವನ್ನು ನಡೆಸಬೇಕೆಂದು ಒತ್ತಾಯಿಸಿದೆ.

ಈ ಹಿಂದೆಯೂ ಸದಸ್ಯರು ವಿಧಾನಮಂಡಲದಲ್ಲಿ ಕನ್ನಡದಲ್ಲಿ ವ್ಯವಹರಿಸು ತ್ತಿರಲಿಲ್ಲವೆಂದಲ್ಲ. ಆದರೆ ಅಧಿಕೃತ ವ್ಯವಹಾರದ ದಾಖಲೆಗಳು ಇಂಗ್ಲಿಶಿನಲ್ಲಿದ್ದರೆ ಅದಕ್ಕೆ ಸದಸ್ಯರ ಆಕ್ಷೇಪಗಳು ಇರುತ್ತಿದ್ದುದು ಕಡಿಮೆ. ಲೋಹಿಯಾವಾದದ ಹಿನ್ನೆಲೆಯಿಂದ ಬಂದ ಸಮಾಜವಾದಿ ತಾತ್ವಿಕತೆಯ ಸದಸ್ಯರು ಮಾತ್ರ ಅಧಿಕೃತ ಲಿಖಿತ ದಾಖಲೆಗಳು ಕನ್ನಡದಲ್ಲಿ ಇರಬೇಕೆಂದು ಒತ್ತಾಯಿಸುತ್ತಿದ್ದರು. ಉಳಿದಂತೆ ಎಲ್ಲ ಸದಸ್ಯರಿಗೂ ಕನ್ನಡ ಇಲ್ಲವೇ ಇಂಗ್ಲಿಶಿನ ಮಾತಿನ ರೂಪಗಳು ಒಪ್ಪಿತವಾದರೂ ಬರಹರೂಪ ಮಾತ್ರ ಇಂಗ್ಲಿಶಿನಲ್ಲೇ ಇರಬೇಕಿತ್ತು. ಈ ಅಂಶವನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಏಕೆಂದರೆ ವಿಧಾನಮಂಡಲದ ವ್ಯವಹಾರದ ಈ ಎರಡು ನೆಲೆಯ ನೀತಿ ಇನ್ನೂ ಕೂಡ ಬೇರೆ ಬೇರೆ ಪ್ರಮಾಣದಲ್ಲಿ ಮುಂದುವರೆದಿದೆ. ಮಾತಿನ ನೆಲೆಯಲ್ಲಿ ಅವಕಾಶ ಪಡೆಯುವ ಕನ್ನಡ ಬರಹದ ಅಧಿಕೃತ ನೆಲೆಗೆ ದಾಟುವಾಗ ಮಾತ್ರ ಈಗಲೂ ಇಂಗ್ಲಿಶಿನ ಸಾಹಚರ್ಯದಲ್ಲಿ ಇರಬೇಕಾಗುತ್ತದೆ.

೧೯೮೦ರ ಅನಂತರದಲ್ಲಿ ಕರ್ನಾಟಕ ವಿಧಾನಮಂಡಲದ ಸದಸ್ಯರ ಸಾಮಾಜಿಕ ರಚನೆಯಲ್ಲಿ ಆಗಿದ್ದ ವ್ಯತ್ಯಾಸಗಳು ಏಕೆ ಹೆಚ್ಚು ಕನ್ನಡ ಪರವಾದವು ಎಂಬುದು ಗಮನಿಸಬೇಕಾದ ವಿಷಯ. ಕನ್ನಡದಲ್ಲಿ ಮಾತನಾಡಲು ಸದಸ್ಯರಿಗೆ ಅವಕಾಶವಿದ್ದರೂ ಅವರಿಗೆ ದೊರೆಯುತ್ತಿದ್ದ ಲಿಖಿತ ದಾಖಲೆಗಳು ಇಂಗ್ಲಿಶಿನಲ್ಲಿರುತ್ತಿದ್ದವು. ಈ ದಾಖಲೆಗಳು ಕನ್ನಡದಲ್ಲಿ ದೊರಕಬೇಕೆಂದು ಸದಸ್ಯರು ಒತ್ತಾಯ ಮಾಡಿದ್ದು ಸಹಜವಾಗಿದೆ.

ಇದೇ ಆಸುಪಾಸಿನಲ್ಲಿ ಕರ್ನಾಟಕ ವಿಧಾನಮಂಡಲವು ಆಡಳಿತ ಭಾಷೆಯಾಗಿ ಕನ್ನಡದ ಅನುಷ್ಠಾನ ಹೇಗೆ ನಡೆದಿದೆ, ಅದಕ್ಕಿರುವ ಅಡ್ಡಿ ಆತಂಕಗಳೇನು ಎಂಬುದನ್ನು ಪರಿಶೀಲಿಸಲು ಒಂದು ಉನ್ನತ ಅಧಿಕಾರದ ಸಮಿತಿಯನ್ನು ರಚಿಸಿತ್ತು. ಇದನ್ನೇ ಕನ್ನಡ ಕಾವಲು ಸಮಿತಿ ಎಂದು ಕರೆದರು. ಅನಂತರ ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರವೆಂದು ಹೆಸರು ಪಡೆಯಿತು. ಈ ಸುಮಾರಿನಲ್ಲೇ ಈ ಸಮಿತಿಯನ್ನು ರಚಿಸಿದ್ದು ಕುತೂಹಲಕಾರಿಯಾಗಿದೆ. ಕರ್ನಾಟಕ ಸರ್ಕಾರದ ಭಾಷಾನೀತಿಯೂ ಕನ್ನಡ ಭಾಷೆಗೆ ಕಲ್ಪಿಸಿದ ಸ್ಥಾನಮಾನಗಳು ಸರಕಾರದ ನೆಲೆಯಿಂದ ಹುಟ್ಟಿಬಂದದ್ದು ಆಗಿರದೇ ಜನರ ಅಪೇಕ್ಷೆಗಳ ಒತ್ತಾಯದಿಂದ ರೂಪಗೊಂಡಿದ್ದು ಎಂಬುದನ್ನು ತಿಳಿಯಬೇಕಾಗುತ್ತದೆ.

ಇದೇ ಸುಮಾರಿನಲ್ಲಿ(೧೯೮೧) ಕರ್ನಾಟಕ ಏಕೀಕರಣದ ೨೫ ವರ್ಷಗಳ ಆಚರಣೆಯೂ ನಡೆದಿತ್ತು. ಈ ೨೫ ವರ್ಷಗಳಲ್ಲಿ ಕನ್ನಡ ಪರವಾಗಿ ಏನು ಸಾಧನೆಯಾಗಿದೆ ಎಂಬುದನ್ನು ಅವಲೋಕನ ಮಾಡುವ ಅವಕಾಶವು ಆ ಸಂದರ್ಭದಲ್ಲಿ ಒದಗಿತ್ತು. ಆದರೆ ಆಡಳಿತಾತ್ಮಕವಾಗಿ ಅಂತಹ ಯೋಜನೆಯನ್ನು ಸರಕಾರ ರೂಪಿಸಿದಂತೆ ತೋರುವುದಿಲ್ಲ. ಬದಲಿಗೆ, ಆ ಹೊತ್ತಿಗೆ ಬದಲಾಗುತ್ತಿದ್ದ. ಆಳುವ ವರ್ಗದ ಸಾಮಾಜಿಕ ಸಂರಚನೆಯೂ ಜನಭಾಷೆಯ ಪರವಾಗಿ ಕ್ರಿಯಾಶೀಲವಾಗಿದೆ. ಈ ಕ್ರಿಯಾಶೀಲತೆಯ ಪ್ರಭಾವ ಪರಿಣಾಮಗಳು ತಾತ್ಕಾಲಿಕವೇ ಅಥವಾ ನಿರಂತರವೇ ಎಂಬುದನ್ನು ವಿವರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ.

ಕನ್ನಡ, ವಿಧಾನಮಂಡಲದಲ್ಲಿ ಮಾತಿನ ರೂಪದಲ್ಲಿ ಮನ್ನಣೆ ಪಡೆದರೂ ಅದಕ್ಕೆ ಲಿಖಿತ ನೆಲೆಯ ಅಧಿಕೃತತೆ ದೊರೆಯದೆ ಹೋದುದಕ್ಕೆ ಹಲವು ಕಾರಣಗಳನ್ನು ನೀಡಲಾಗಿದೆ. ಅಂತಹ ಕಾರಣಗಳು ತಾಂತ್ರಿಕ ನೆಲೆಯಲ್ಲಿ ಇರುವಂತೆ ತೋರುತ್ತವೆ. ಮುಖ್ಯವಾಗಿ ಕನ್ನಡಪರ ಅಧಿಕಾರಿಗಳು ಇಲ್ಲವೆಂಬ ಕೊರತೆ; ಕನ್ನಡದಲ್ಲಿ ದಾಖಲೆಗಳನ್ನು ಸಿದ್ಧಪಡಿಸಲು ಅಗತ್ಯವಾದ ಬೆರಳಚ್ಚುಗಾರರು, ಶೀಘ್ರಲಿಪಿಗಾರರು ಇಲ್ಲವೆಂಬ ಪರಿಸ್ಥಿತಿ; ಬೆರಳಚ್ಚು ಯಂತ್ರಗಳು ಇಲ್ಲದಿರುವ ತಗಾದೆ; ದಾಖಲೆಗಳನ್ನು ಸಿದ್ಧಪಡಿಸಲು ಅಗತ್ಯವಾದ ನಮೂನೆಗಳು ಮಾದರಿಗಳು ಕನ್ನಡದಲ್ಲಿ ಲಭ್ಯವಿಲ್ಲ ಎಂಬ ನೆಪ ಇವೆಲ್ಲವೂ ಅಲ್ಲಲ್ಲಿ ಕೇಳಿ ಬಂದ ಸಂಗತಿಗಳು. ಇವೆಲ್ಲವನ್ನೂ ಸರಕಾರವು ಕೂಡ ಬೇರೆ ಬೇರೆ ಸಂದರ್ಭದಲ್ಲಿ ಒಪ್ಪಿಕೊಂಡು ಪರಿಹರಿಸಲು ಕ್ರಮ ಕೈಗೊಂಡಿದೆ. ಅಧಿಕಾರಿಗಳಿಗೆ ಕನ್ನಡ ಭಾಷೆ ಕಲಿಯಲು ತರಬೇತಿ ನೀಡುವುದು, ಇಂಗ್ಲಿಶ್ ಬೆರಳಚ್ಚುಗಾರರು, ಶೀಘ್ರ ಲಿಪಿಗಾರರು ಕನ್ನಡದಲ್ಲಿ ವಿಶೇಷ ನೈಪುಣ್ಯ ಪಡೆಯಲು ಅವಕಾಶ ಕಲ್ಪಿಸಿ ಅದಕ್ಕೆ ಅವರಿಗೆ ಆರ್ಥಿಕ ನೆರವು ನೀಡುವುದು, ಕನ್ನಡದಲ್ಲಿ ಆಡಳಿತ ನಡೆಸಲು ಅಗತ್ಯವಾದ ಸಾಮಗ್ರಿಗಳನ್ನು ಸಿದ್ಧಪಡಿಸುವುದು ಇತ್ಯಾದಿ ಕಾರ್ಯಕ್ರಮಗಳು ಅನೂಚಾನವಾಗಿ ನಡೆದು ಬಂದಿವೆ. ಸಮಸ್ಯೆ ಮತ್ತು ಪರಿಹಾರಗಳಿಗೆ ಇರುವ ಸಂಬಂಧವನ್ನು ಸರಿಯಾದ ಚೌಕಟ್ಟಿನಲ್ಲಿ ಪರಿಶೀಲಿಸಬೇಕಾಗು ತ್ತದೆ. ಕನ್ನಡದ ಅನುಷ್ಠಾನಕ್ಕೆ ಮೇಲೆ ಹೇಳಲಾದ ಕೊರತೆಗಳು ಎಷ್ಟು ಪರಿಣಾಮಕಾರಿ ಆಗಿದ್ದವು ಎಂಬುದನ್ನು ಆ ಹೊತ್ತಿಗೆ ಪರಿಶೀಲಿಸುವ ಯತ್ನಗಳು ನಡೆದಂತೆ ಕಾಣುತ್ತಿಲ್ಲ.

ಈ ಸಂದರ್ಭದಲ್ಲಿ ೧೯೬೩ರ ರಾಜ್ಯಭಾಷಾ ಅಧಿನಿಯಮ ಜಾರಿಗೆ ಬಂದ ಆಸುಪಾಸಿನಲ್ಲಿ ಸರಕಾರ ಒಂದು ಸುತ್ತೋಲೆಯನ್ನು ಹೊರಡಿಸಿದೆ. ತುಂಬಾ ಚಿಕ್ಕ ಸುತ್ತೋಲೆ; ಜೂನ್ ೧೨, ೧೯೬೩ರಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಳು ಹೊರಡಿಸಿರುವ ಸುತ್ತೋಲೆ ಇದು. ಈ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಜನರು ಅಹವಾಲನ್ನು ಯಾವ ಭಾಷೆಯಲ್ಲಿ ಬರೆದುಕೊಡಬೇಕು ಅಥವಾ ಯಾವ ಭಾಷೆಯಲ್ಲಿ ಬರೆದರೆ ಅವುಗಳನ್ನು ಸ್ವೀಕರಿಸಬೇಕು ಎಂಬ ಬಗೆಗೆ ನಿರ್ದೇಶನಗಳಿವೆ. ಅದರಂತೆ ಒಂದು ಪ್ರದೇಶದಲ್ಲಿ ಶೇಕಡಾ ಹದಿನೈದಕ್ಕಿಂತ ಹೆಚ್ಚು  ಸಂಖ್ಯೆಯ ಜನರು ಯಾವ ಭಾಷೆಯನ್ನು ಮಾತನಾಡುತ್ತಾರೋ ಆ ಭಾಷೆಯಲ್ಲಿ ತಮ್ಮ ಅಹವಾಲುಗಳನ್ನು ಪತ್ರಗಳನ್ನು ಸರಕಾರಕ್ಕೆ ನೀಡಬಹುದೆಂದೂ ಅದನ್ನು ಸರಕಾರದ ಕಛೇರಿಗಳು ನಿರಾಕರಿಸಬಾರದೆಂದೂ ಸೂಚಿಸಲಾಗಿದೆ.

ರಾಜ್ಯದ ಭಾಷಾ ಅಲ್ಪಸಂಖ್ಯಾತರ ಸಂವಿಧಾನದತ್ತ ಹಕ್ಕನ್ನು ಸಂರಕ್ಷಿಸಲು ಇಂತಹ ಸೂಚನೆಯೊಂದನ್ನು ನೀಡಿದ್ದರಲ್ಲಿ ಅಸಹಜವಾದುದು ಏನೂ ಇಲ್ಲ. ಆದರೆ ಈ ಸುತ್ತೋಲೆಯನ್ನು ಹೇಗೆ ಅನ್ವಯಿಸಬೇಕು ಎಂಬುದು ಒಂದು ಪ್ರಶ್ನೆಯಾಗುತ್ತದೆ. ಸ್ಥಳೀಯ ಜನಸಂಖ್ಯೆಯಲ್ಲಿ ಪ್ರತಿಶತ ಹದಿನೈದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆ ಯಾವುದು ಎಂಬುದನ್ನು ಹೇಗೆ ನಿರ್ಧರಿಸಬೇಕು; ಯಾವ ಭೌಗೋಳಿಕ ವ್ಯಾಪ್ತಿಯನ್ನು ಸ್ಥಳೀಯ ಎಂದು ತಿಳಿಯಬೇಕು; ಹೋಬಳಿ ಹಂತವೋ, ತಾಲೂಕು ಹಂತವೋ ಅಥವಾ ಜಿಲ್ಲಾ ಹಂತವೋ ಎಂಬುದು ಈ ಸುತ್ತೋಲೆಯಿಂದ ಗೊತ್ತಾಗುವುದಿಲ್ಲ. ಅಲ್ಲದೆ ರಾಜ್ಯದ ಜನರಲ್ಲಿ ಭಾಷಾವಾರು ಹಂಚಿಕೆ ಹೇಗಿದೆ; ಯಾವ ಯಾವ ಪ್ರದೇಶಗಳಲ್ಲಿ ಯಾವ ಯಾವ ಭಾಷಿಕರು ಯಾವ ಪ್ರಮಾಣದಲ್ಲಿ ನೆಲೆಸಿ ಹರಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಅಂತಹ ಮಾಹಿತಿಯನ್ನು ಪಡೆದುಕೊಳ್ಳಲು ಸರಕಾರ ಕೂಡ ಪ್ರಯತ್ನ ಮಾಡಿದಂತೆ ತೋರುತ್ತಿಲ್ಲ. ೧೯೬೧ರ ರಾಷ್ಟ್ರ ಜನಗಣತಿಯ ಆಧಾರದ ಮೇಲೆ ಇಂತಹ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲು ಕಾರಣಗಳಿಲ್ಲ. ರಾಜ್ಯದಲ್ಲಿ ಬೇರೆ ಬೇರೆ ಭಾಷಿಕರು ಯಾವ ರೀತಿಯಲ್ಲಿ ಹರಡಿಕೊಂಡಿದ್ದಾರೆ ಮತ್ತು ಯಾವ ಯಾವ ತಾಲೂಕುಗಳಲ್ಲಿ ಅವರ ಪ್ರಮಾಣ ಎಷ್ಟಿದೆ ಎಂಬುದನ್ನು ಖಚಿತವಾಗಿ ತಿಳಿದು ಈ ಸುತ್ತೋಲೆಯನ್ನು ಜಾರಿಗೆ ಕೊಡುವುದು ಸಾಧ್ಯವಾಗದು. ಏಕೆಂದರೆ ಆಗ ಕನ್ನಡವನ್ನು ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂಬ ನೀತಿಯನ್ನು ಜಾರಿಗೆ ನೀಡುವುದು ಕಷ್ಟವಾಗುತ್ತದೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಒಂದು ಅಂದಾಜಿನಂತೆ ೧೯೮೧ರ ಸುಮಾರಿನಲ್ಲಿ ಮೂರನೇ ಒಂದು ಭಾಗಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಕನ್ನಡದ ಜೊತೆಗೆ ಇತರ ಭಾಷೆಗಳನ್ನು ಬಳಸುವವರು ಹೆಚ್ಚಿನ ಪ್ರಮಾಣದಲ್ಲಿದ್ದರು. ರಾಜ್ಯದ ಸರಾಸರಿಯೇ ಶೇಕಡಾ ೬೬ ಕನ್ನಡಿಗರ ಜನ ಸಂಖ್ಯೆಯಾದರೆ ಉಳಿದವರು ಮೂರನೇ ಒಂದು ಭಾಗಕ್ಕೂ ಮಿಕ್ಕಿ ಇರುವುದು ಸ್ಪಷ್ಟವಾಗಿದೆ. ತಾಲ್ಲೂಕು ಹಂತದಲ್ಲಿ ಇಂತಹ ಸುತ್ತೋಲೆಯ ಪರಿಣಾಮ ಏನಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.

ಆದರೆ ಮೇಲೆ ಹೇಳಿದ ಸಮಸ್ಯೆಗಳು ಉದ್ಭವಿಸಲಿಲ್ಲ. ಏಕೆಂದರೆ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ ಹಲವು ಗುಂಪಿನ ಜನರಿಗೆ ತಾವಾಡುವ ಭಾಷೆಯ ಮೂಲಕ ಸರಕಾರದೊಡನೆ ವ್ಯವಹರಿಸುವುದು ಸಾಧ್ಯವಿಲ್ಲ. ಏಕೆಂದರೆ ಆ ಭಾಷೆಗಳಿಗೆ ಬರೆಯಲು ಅಧಿಕೃತ ಲಿಪಿಗಳೇ ಇಲ್ಲ. ತುಳು, ಕೊಡವ, ಕೊಂಕಣಿ, ಲಂಬಾಣಿ, ಮುಂತಾದವು ಇಂತಹ ಭಾಷೆಗಳು. ಲಿಪಿಬದ್ಧ ಭಾಷೆಯನ್ನಾಡುತ್ತಿದ್ದ ಭಾಷಾ ಅಲ್ಪಸಂಖ್ಯಾತರು ಇದ್ದಾರೆಯಾದರೂ ಅವರು ಕೂಡ ತಮ್ಮ ಭಾಷೆಯ ಮೂಲಕ ಅಹವಾಲನ್ನು ಸಲ್ಲಿಸಲು ಸಾಧ್ಯವಿರಲಿಲ್ಲ. ಉರ್ದು, ತಮಿಳು, ತೆಲುಗು, ಮುಂತಾದ ಭಾಷೆಗಳಾಡುವವರು ಈ ಗುಂಪಿನಲ್ಲಿ ಬರುತ್ತಾರೆ. ಇವರಿಗೆ ತಮ್ಮ ಭಾಷೆಯನ್ನು ಮಾತಿನಲ್ಲಿ ಬಳಸಲು ತಿಳಿದಿತ್ತೇ ಹೊರತು ಇವರು ಆ ಭಾಷೆಗಳಲ್ಲಿ ಅಹವಾಲುಗಳನ್ನು ಬರೆಯುವಂತಹ ಅಕ್ಷರಸ್ಥರಾಗಿರಲಿಲ್ಲ. ಹೀಗಾಗಿ ಭಾಷಾ ಅಲ್ಪಸಂಖ್ಯಾತರ ಹಿತ ಕಾಯಲು ೧೯೬೩ರಲ್ಲಿ ಹೊರಟ ಸುತ್ತೋಲೆ ಕನ್ನಡದ ಪರಿಸ್ಥಿತಿಗೆ ಹೆಚ್ಚಿನ ಆತಂಕಗಳನ್ನು ಉಂಟುಮಾಡಲಿಲ್ಲ. ಜೊತೆಗೆ ಭಾಷಾ ಅಲ್ಪಸಂಖ್ಯಾತರ ಹಿತ ಕಾಯುವಲ್ಲಿಯೂ ಸಫಲವಾಗಲಿಲ್ಲ.

ಈ ಪರಿಸ್ಥಿತಿಯ ಪರಿಶೀಲನೆ ಏಕೆ ಅಗತ್ಯವಾಯಿತು ಎಂದರೆ ಭಾರತದ ಇತರ ಪ್ರದೇಶಗಳಲ್ಲಿ ಹೀಗೆ ಅಲ್ಪಸಂಖ್ಯಾತರ ಭಾಷೆಯ ಸಂರಚನೆಯ ಕಾರ್ಯಯೋಜನೆ ಯಿಂದಾಗಿ ಆಯಾ ರಾಜ್ಯಗಳಲ್ಲಿ ಎರಡನೆಯ(ಅಥವಾ ಮೂರನೆಯ) ಅಧಿಕೃತ ಭಾಷೆಯಾಗಿ ಪ್ರಾಂತೀಯ ಭಾಷೆಯ ಜೊತೆಗೆ ಅಲ್ಪಸಂಖ್ಯಾತರ ಭಾಷೆಯನ್ನು ಬಳಸುವ ನಿರ್ಣಯವನ್ನು ಕೈಗೊಳ್ಳಬೇಕಾಗಿ ಬಂತು. ಕರ್ನಾಟಕದಲ್ಲೂ ಅಂತಹ ಒತ್ತಾಯಗಳು ಆಗಾಗ ಬಂದಿವೆ. ಆದರೆ ಅವು ಯಶಸ್ವಿಯಾಗಿಲ್ಲ. ಈ ವಿವರಣೆ ನೀಡುವಾಗ ಇದನ್ನು ಅಲ್ಪಸಂಖ್ಯಾತರ ಭಾಷೆಯ ಹಿತಾಸಕ್ತಿಗೆ ವಿರುದ್ಧವಾದ ವ್ಯಾಖ್ಯೆಯೆಂದು ತಿಳಿಯಬೇಕಾಗಿಲ್ಲ. ಕರ್ನಾಟಕದಲ್ಲಿ ಕನ್ನಡ ಮಾತಾಡುವ ಜನರಂತೆಯೇ ಇತರ ಭಾಷೆಗಳನ್ನಾಡುವ ಜನರು ಯಾವ ಇಕ್ಕಟ್ಟಿನಲ್ಲಿದ್ದಾರೆ ಎಂಬುದನ್ನು ಮಂಡಿಸಲು ಈ ವಿವರಣೆಯನ್ನು ನೀಡಿದೆ. ಮೇಲೆ ಹೇಳಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಭಾಷಿಕರು ತಮ್ಮ ಭಾಷೆಗೆ ಸಹ ಆಡಳಿತ ಭಾಷೆಯಾಗಿ ರಾಜ್ಯದಲ್ಲಿ ಮನ್ನಣೆ ನೀಡಬೇಕೆಂದು ಬೇಡಿಕೆ ಮಂಡಿಸಿ ಅನಂತರ ಅದನ್ನೊಂದು ಚಳುವಳಿಯನ್ನಾಗಿಯೂ ಪರಿವರ್ತಿಸಿದ್ದಾರೆ. ಇದರ ಪರಿಣಾಮ ವಾಗಿಯೇ ಭಾರತ ಒಕ್ಕೂಟದಲ್ಲಿ ಕೆಲವು ಹೊಸ ರಾಜ್ಯಗಳನ್ನು ಅಥವಾ ರಾಜ್ಯದಲ್ಲೇ ಪ್ರತ್ಯೇಕ ಆಡಳಿತವುಳ್ಳ ಪ್ರದೇಶಗಳನ್ನು ನಿರ್ಮಿಸಬೇಕಾಗಿ ಬಂದಿದೆ. ಮತ್ತೆ ಕೆಲವೆಡೆ ಮನ್ನಣೆ ಪಡೆದ ಭಾಷೆಗಳು ತಮ್ಮದೇ ರಾಜ್ಯವಿಲ್ಲದ ಪರಿಸ್ಥಿತಿಯಲ್ಲಿವೆ. ಕೆಲವು ಕಡೆ ಈ ಗೊಂದಲ ದಿನೇದಿನೇ ಹಲವು ಗೋಜಲುಗಳಿಗೆ ಕಾರಣವಾಗುತ್ತಿದೆ. ಈ ಬಗೆಯ ಚಲನಶೀಲತೆಗೆ ಕರ್ನಾಟಕ ಒಳಗಾಗಲಿಲ್ಲ.

ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತರುವ ಹೊಣೆ ಹೊತ್ತ ಸರಕಾರ ಈವರೆಗೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಿಲ್ಲವೆಂಬ ಮಾತನ್ನು ನಾವು ಮೇಲೆ ಮೇಲೆ ಆಗಾಗ ಕೇಳುತ್ತಿರುತ್ತೇವೆ. ಸರಕಾರ ನೂರಾರು ಆದೇಶಗಳನ್ನು ಈ ಉದ್ದೇಶಕ್ಕಾಗಿಯೇ ಹೊರಡಿಸಿದರೂ ಅದರ ಪರಿಣಾಮ ಏನೂ ಆಗಿಲ್ಲ; ಇದು ಸರಕಾರದಲ್ಲಿ ಇರುವ ಇಚ್ಛಾಶಕ್ತಿಯ ಕೊರತೆ ಎಂಬ ಟೀಕೆಯನ್ನು ಕೇಳುತ್ತೇವೆ. ಆದರೆ ಏಕೆ ಹೀಗೆ ಕನ್ನಡದ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ ಎಂಬುದನ್ನು ಸರಿಯಾದ ಚೌಕಟ್ಟಿನಲ್ಲಿ ವಿಶ್ಲೇಷಿಸಿ ತಿಳಿಯ ಬೇಕಾಗಿದೆ.

ಹಾಗೆ ನೋಡಿದರೆ ಕನ್ನಡದ ಬಳಕೆ ಆಡಳಿತದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಹೆಚ್ಚಾಗುತ್ತಿದೆ ಎಂಬುದನ್ನು ಸಮರ್ಥಿಸಲು ಸರಕಾರ ಪ್ರಯತ್ನಿಸಿದೆ. ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾಮಟ್ಟದಲ್ಲಿ, ವಿಭಾಗಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಶೇಕಡಾ ಎಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗುತ್ತಿದೆ ಎಂಬುದನ್ನು ವಿವರಿಸಲು ಶೇಕಡಾವಾರು ಅಂಕಿ ಅಂಶಗಳನ್ನು ಕೂಡ ಒದಗಿಸಲಾಗುತ್ತಿದೆ. ಆ ಪ್ರಕಾರ ಒಂದು ಪಿರಮಿಡ್‌ನ ಚಿತ್ರ ನಮಗೆ ಗೋಚರವಾಗುತ್ತದೆ. ಅದರಂತೆ ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆಡಳಿತದ ಮೇಲುಮೇಲಿನ ಹಂತಕ್ಕೆ ಹೋದಂತೆಯೇ ಕನ್ನಡ ಬಳಕೆಯ ಪ್ರಮಾಣವು ಕಡಿಮೆಯಾಗುತ್ತ್ತ ಹೋಗಿದೆ. ಅಂದರೆ ರಾಜ್ಯಮಟ್ಟದಲ್ಲಿ ಅದಿನ್ನೂ ವಿಸ್ತಾರವನ್ನು ಪಡೆದುಕೊಳ್ಳಬೇಕಾಗಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿ ಮತ್ತು ಅದನ್ನು ಜಾರಿಗೆ ಕೊಡುವುದಾಗಿ ಸರ್ಕಾರ ಹೇಳುತ್ತಲೇ ಇದೆ. ಆದರೆ ಯಶಸ್ಸು ದೊರಕಿಲ್ಲವೆಂಬುದೇ ಕನ್ನಡಪರವಾದ ಹಲವರ ಅಳಲು.

ಈ ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.  ಕಾರ್ಯ ಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತವೆ. ಅಥವ್ತಾ ಅನುಷ್ಠಾನದ ಹಂತದಲ್ಲಿ ಹಲವು ಎಡರುತೊಡರು ಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.

ಏಕೆ ಕನ್ನಡ ಆಡಳಿತ ಭಾಷೆಯಾಗಬೇಕು, ಹಾಗೆ ಆಗದಿದ್ದರೆ ಆಗುವ ತೊಂದರೆ ಗಳೇನು, ಕನ್ನಡ ಬಳಕೆಯಾಗದಿದ್ದಲ್ಲಿ ಅದರ ಪ್ರಯೋಜನಗಳು ಪೂರ್ವನಿರ್ಧಾರಿತ ಯಾರಿಗಾದರೂ ಇರುವುದು ಸಾಧ್ಯವೆ ಎಂಬ ಪ್ರಶ್ನೆಗಳು ಮುಖ್ಯ. ಜನರ ಭಾಷೆ, ಆಡಳಿತ ಭಾಷೆ  ಆಗಬೇಕು ಎಂಬ ಗ್ರಹಿತ ನೆಲೆಯಲ್ಲಿ ನಾವು ಮಾತನಾಡುತ್ತಿರು ತ್ತೇವೆ. ಆದರೆ ಆಡಳಿತ ಯಂತ್ರದಲ್ಲಿ ಜನಸಾಮಾನ್ಯರ ಪಾತ್ರವೇನು ಎಂಬ ಬಗೆಗೆ ಯೋಚಿಸುವುದಿಲ್ಲ. ಜನರು ಆಡಳಿತದಲ್ಲಿ ಭಾಗಿಯಾಗಬೇಕಾದರೆ ಅಥವಾ ಆಡಳಿತದ ನಿರ್ಧಾರಗಳಲ್ಲಿ ತಮ್ಮ ಪಾಲು ಇದೆ ಎಂದು ತಿಳಿಯಬೇಕಾದರೆ ಮುಖ್ಯವಾಗಿ ಎರಡು ಸಂಗತಿಗಳು ಅಗತ್ಯ. ಒಂದು: ಆಡಳಿತ ಯಂತ್ರದ ಉತ್ತರದಾಯಿತ್ವ; ಎರಡು: ಆಡಳಿತ ಯಂತ್ರದ ಪಾರದರ್ಶಕತೆ. ಕಳೆದ ಐವತ್ತು ವರ್ಷಗಳ ಚರಿತ್ರೆಯಲ್ಲಿ ಈ ಎರಡು ಸಂಗತಿಗಳು ದೃಢಗೊಳ್ಳುತ್ತಾ ಹೋಗುವ ಬದಲು ಸಡಿಲವಾಗುತ್ತ ಬಂದಿವೆ. ಈ ಕಾರಣದಿಂದ ಜನರು ಆಡಳಿತ ಯಂತ್ರದೊಡನೆ ಹೊಂದಿರುವ ಸಂಬಂಧ ಅತ್ಯಂತ ಕನಿಷ್ಠ ಪ್ರಮಾಣದ್ದಾಗಿದೆ. ಹಾಗೆ ಉಳಿದಿರುವ ಸಂಬಂಧದಲ್ಲೂ ಅವರ ಅಪೇಕ್ಷೆಗಳು, ದೃಷ್ಟಿಕೋನಗಳು ಮಾನ್ಯವಾಗುವುದಿಲ್ಲ. ಹೀಗಾಗಿ ಜನಭಾಷೆಯೂ ಆಡಳಿತದ ಭಾಷೆಯಾಗಿ ನೆಲೆಗೊಳ್ಳುವ ಅವಕಾಶಗಳು ಕಡಿಮೆಯಾಗುತ್ತಿದೆ.

ಈ ವಿವರಣೆಯನ್ನು ಮತ್ತಷ್ಟು ಪುಷ್ಟಿಗೊಳಿಸುವ ಅಗತ್ಯವಿದೆ. ಆಡಳಿತವು ಒಪ್ಪಿಕೊಂಡ ಕಲ್ಯಾಣರಾಜ್ಯದ ಕಲ್ಪನೆಯಲ್ಲಿ ಆಳುವವರು ಕೊಡುವವರಾಗಿದ್ದರೆ ಜನರು ಪಡೆಯುವವರಾಗಿರುತ್ತಾರೆ. ಈ ಅಸಮ ಸಂಬಂಧದಲ್ಲಿ ಕೊಡುವವರ ಕೈಮೇಲಾಗುತ್ತದೆ. ಅವರ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಭಾಷಾ ಅಧ್ಯಯನ ಕಾರರು ಇಂತಹ ಸಂದರ್ಭಗಳನ್ನು ಗಮನಿಸಿದ್ದಾರೆ. ಇಂತಲ್ಲಿ ಯಾವಾಗಲೂ ಮೇಲುಗೈ ಪಡೆದವರ ಭಾಷೆಯನ್ನೇ ಪಡೆಯುವವರು ಒಪ್ಪಿಕೊಳ್ಳಬೇಕಾಗುತ್ತದೆ ಅಥವಾ ಪಡೆಯುವವರಿಗಿಂತ ತಾವು ಭಿನ್ನ ಎಂದು ಸ್ಥಾಪಿಸಲು ಆಳುವವರು ಬೇರೆಯ ಭಾಷೆಯನ್ನೇ ಆಡುತ್ತಿರುತ್ತಾರೆ; ಬಳಸುತ್ತಿರುತ್ತಾರೆ. ಕೊಂಚ ಸಂಕೀರ್ಣವಾದ ಈ ಸಂಬಂಧದಲ್ಲಿ ಕನ್ನಡದ ಸ್ಥಿತಿ ಏನಾಗಿದೆ ಎನ್ನುವುದನ್ನು ಪರಿಶೀಲಿಸಬೇಕು. ಮೇಲುನೋಟಕ್ಕೆ ಜನಪ್ರತಿನಿಧಿಗಳು ಮತ್ತು ನೌಕರಶಾಹಿಯೂ ಜನ ಸಮುದಾಯ ದಿಂದಲೇ ರೂಪುಗೊಂಡು ಬಂದವರೆಂದು ಅನಿಸುತ್ತದೆ. ಆದರೆ ಅಧಿಕಾರದ ಚೌಕಟ್ಟಿನಲ್ಲಿ ಅವರು ಜನರ ಜೊತೆಗಿನ ಸಂಪರ್ಕದ ಬದಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜಾಲಸಂಪರ್ಕದಲ್ಲಿ ಸೇರುತ್ತಾರೆ. ಇದರಿಂದ ಅಸಮ ನೆಲೆಯ ಸಂಬಂಧ ಏರ್ಪಡುತ್ತದೆ. ತಾವು ಗುರುತಿಸಿಕೊಂಡ ಜಾಲದ ಅಧಿಕೃತ ಭಾಷೆಯನ್ನೇ ತಮ್ಮ ಭಾಷೆಯನ್ನಾಗಿ ಆಡಳಿತಗಾರರು ಬಳಸುತ್ತಾರೆ. ನಮ್ಮ ರಾಜಕೀಯ, ಆರ್ಥಿಕ ಪರಿಸ್ಥಿತಿಯ ಈ ವಿನ್ಯಾಸಗಳು ಕನ್ನಡಕ್ಕೆ ಈ ಹೊತ್ತಿಗೆ ಯಾವ ಸ್ಥಾನಮಾನಗಳು ದೊರಕಬೇಕಿತ್ತೋ ಅದು ಲಭ್ಯವಾಗದಂತೆ ಮಾಡಿವೆ.

ಈ ಹಿನ್ನೆಲೆಯಲ್ಲಿ ೧೯೮೦ರ ಅನಂತರದಲ್ಲಿ ಮಂಡಿತವಾದ ಒಂದು ಮುಖ್ಯದಾಖಲೆಯನ್ನು ಪರಿಶೀಲಿಸಬೇಕಾಗಿದೆ. ಇದು ಆಡಳಿತ ಭಾಷೆಯಾಗಿ ಕನ್ನಡ ಸ್ವಾತಂತ್ರ್ಯಪೂರ್ವದಲ್ಲೇ ಬಳಕೆಯಾಗುತ್ತಿತ್ತು, ಆಂಗ್ಲರೇ ತಮ್ಮ ಆಡಳಿತದಲ್ಲಿ ಕನ್ನಡವನ್ನು ಯಶಸ್ವಿಯಾಗಿ ಬಳಸುತ್ತಿದ್ದರು ಎಂಬುದನ್ನು ಮಂಡಿಸುವ ದಾಖಲೆ. ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಶ್ರೀ ಮಹಾದೇವ ಬಣಕಾರ ಅವರು ಆಂಗ್ಲರ ಆಡಳಿತ ಕಾಲದಲ್ಲಿ ಕನ್ನಡ ಹೇಗೆ ಬಳಕೆಯಾಗುತ್ತಿತ್ತು ಎಂಬುದನ್ನು ಒಂದು ಗ್ರಂಥ ಮುಖೇನ ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರದ ನೆರವಿನಿಂದ ಪ್ರಕಟಿಸಿರುವ ಈ ಕೃತಿಯನ್ನು ಉಲ್ಲೇಖಿಸಿ ಕನ್ನಡಪರ ಚಿಂತಕರು ಈ ಹಿಂದೆಯೇ ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆಯಾಗಿತ್ತೆಂದೂ ಈಗ ಆ ಸ್ಥಾನವನ್ನು ಕನ್ನಡ ಕಳೆದುಕೊಂಡಿದೆ ಎಂದು ವಾದಿಸುತ್ತಾರೆ. ಈ ದಾಖಲೆ ಮತ್ತು ಅದನ್ನು ಆಧರಿಸಿದ ವಾದಗಳನ್ನು ಪರಿಶೀಲಿಸುವುದು ಅಗತ್ಯ.

ಆಂಗ್ಲರು ಕರ್ನಾಟಕವನ್ನು ನೇರವಾಗಿ ಹಲವು ಕಡೆ, ಪರೋಕ್ಷವಾಗಿ ಕೆಲವು ಕಡೆ ಆಳುತ್ತಿದ್ದರು. ಅವರ ಅಧಿಕಾರ ವ್ಯಾಪ್ತಿಗೆ ಬಾರದಿದ್ದ ಪ್ರದೇಶಗಳು ಇದ್ದವು. ಅಂತ ಪ್ರದೇಶಗಳಲ್ಲಿ ಕನ್ನಡವಾಗಲೀ ಇಂಗ್ಲಿಶಾಗಲೀ ಮುಂಚೂಣಿಗೆ ಬರುತ್ತಿಲ್ಲ. ಉಳಿದ ಕಡೆಗಳಲ್ಲಿ ಜನರಿಗೆ ನೇರ ಸಂಬಂಧವಿರುವ ದಾಖಲೆಗಳನ್ನು ಕನ್ನಡದಲ್ಲಿ ಸಿದ್ಧಪಡಿಸಿರುವ ನಿದರ್ಶನಗಳನ್ನೇ ಶ್ರೀ ಬಣಕಾರ ಗ್ರಂಥ ಸಂಗ್ರಹಿಸಿದೆ. ಎಂದರೆ ಜನರು ತಮ್ಮ ಅಹವಾಲುಗಳನ್ನು ಮಂಡಿಸುವುದು, ಅದಕ್ಕೆ ಸರ್ಕಾರ ಪ್ರತಿಕ್ರಿಯಿಸುವುದು ಆಡಳಿತದ ಒಂದು ಕನಿಷ್ಠ ಭಾಗ. ಇದರಲ್ಲಿ ಜನರಿಗೆ ತಿಳಿಯಬೇಕಾದ ಆಡಳಿತದ ನಿರ್ಧಾರಗಳು ಸೇರುತ್ತವೆ. ಆಂಗ್ಲರು ಆಡಳಿತ ನಡೆಸುವಾಗ ಅನುಸರಿಸುತ್ತಿದ್ದ ವ್ಯವಸ್ಥೆಯಲ್ಲಿ ತಮ್ಮ ಮತ್ತು ಜನರ ನಡುವೆ ಮಧ್ಯವರ್ತಿಗಳಿಗೆ ತಮ್ಮ ಭಾಷೆಯನ್ನು ಕಲಿಯುವ ಅವಕಾಶವನ್ನು ಕಲ್ಪಿಸಿದರು. ಅವರ ಮೂಲಕ ಜನರಿಗೆ ಅಗತ್ಯವಾದ ಮಾಹಿತಿಯನ್ನು ರವಾನಿಸುತ್ತಿದ್ದರು. ಈ ಕಿರುವಲಯದಲ್ಲಿ ಕಂಡುಬರುವ ಕನ್ನಡದ ಬಳಕೆಯನ್ನು ಗಮನಿಸಿ ಇಡೀ ಆಡಳಿತದಲ್ಲೇ ಕನ್ನಡಕ್ಕೆ ಮಾನ್ಯತೆ ಇತ್ತು ಎಂದು ಬಿಂಬಿಸುವುದು ಸರಿಯಾದ ವ್ಯಾಖ್ಯಾನವಾಗಲಾರದು.

ಸರಕಾರ ತನ್ನ ಸಮುದಾಯ ಕಲ್ಯಾಣ ಕಾರ್ಯಕ್ರಮಗಳು ಜನಮುಖಿಯಾಗಬೇಕೆಂದು ಬಯಸುತ್ತದೆ. ಆದರೆ ಇದು ಕೊಡುವ, ನೀಡುವ ನೆಲೆಯಲ್ಲಿರುತ್ತದೆ. ಜನರು ಪಡೆಯುವವರಾಗುತ್ತಾರೆ. ಈ ಕಾರ್ಯಕ್ರಮಗಳ ಮಾಹಿತಿಗಳನ್ನು ಜನರಿಗೆ ತಿಳಿಸಲು ಸರಕಾರ ಯತ್ನಿಸಬೇಕು. ಆದರೆ ಅದು ಯಶಸ್ಸು ಪಡೆಯಲು ಜನ ಓದುಬರೆಹ ಬಲ್ಲವರಾಗಬೇಕು. ತಡವಾದ ಅಕ್ಷರ ಕಲಿಕೆಯ ಕಾರ್ಯಕ್ರಮಗಳನ್ನು ಸರಕಾರ ರೂಪಿಸಿದೆ. ಆದರೂ ಜನ ಮೌಖಿಕ ನೆಲೆಯ ಸಂಪರ್ಕವನ್ನು ಅವಲಂಬಿಸಿದಷ್ಟು ಲಿಖಿತ ನೆಲೆಯ ವ್ಯವಹಾರವನ್ನು ಅವಲಂಬಿಸುವುದಿಲ್ಲ. ಇದರಿಂದಾಗಿ ಕನ್ನಡವನ್ನು ಜನ ಸಂಪರ್ಕಕ್ಕಾಗಿ ಸರಕಾರ ಬಳಸಿದರೂ ಸದ್ಯದ ಪರಿಸ್ಥಿತಿಯಲ್ಲಿ ಅದರ ಉದ್ದೇಶ ಪೂರ್ಣವಾಗಿ ಯಶಸ್ಸು ಪಡೆಯಲಾರದು.

ಅಲ್ಲದೇ ಆ ಆಡಳಿತದ ಹಿಂದಿನ ತಾತ್ವಿಕತೆಯೇ ಇಂದಿನ ಪ್ರಜಾಪ್ರಭುತ್ವದ ತಾತ್ವಿಕತೆಗಿಂತ ಬೇರೆಯಾದುದು. ಇಲ್ಲಿ ಜನರು ತಮ್ಮ ದೈನಂದಿನ ಬದುಕಿನಲ್ಲಿ ಆಡಳಿತಕ್ಕೆ ಯಾವ ಸಂಪರ್ಕವನ್ನು ಇರಿಸಿಕೊಳ್ಳದೇ ಕೇವಲ ತೆರಿಗೆದಾರರಾಗಿ ಅಥವಾ ಸರಕಾರಕ್ಕೆ ಬೇಕಾದ ಸೇವಾವಲಯದಲ್ಲಿ ಸೇವೆಗಳನ್ನು ಸಲ್ಲಿಸುವರಾಗಿ ಇರುತ್ತಿದ್ದರು. ಆಡಳಿತದ ಸಾರ್ವಭೌಮತ್ವವೆಲ್ಲ್ಲ ಜನರ ಪ್ರಜ್ಞೆಯ  ಆಚೆಗಿನ ಮಾತಾಗಿತ್ತು. ಎಲ್ಲಾ ಸಾಮಂತಶಾಹಿ ವ್ಯವಸ್ಥೆಗಳಲ್ಲೂ ಕಂಡುಬರುವ ಈ ಸ್ಥಿತಿಯ ಇಲ್ಲಿಯೂ ಮುಂದುವರೆದಿತ್ತು. ಹೀಗಿರುವಾಗ ಆಗಿನ ಆಡಳಿತದಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ದೊರಕುವುದು ಖಂಡಿತ ಸಾಧ್ಯವಿರಲಿಲ್ಲ. ಜನರಿಗೆ ಅಗತ್ಯ ವಾದ ಮಾಹಿತಿಗಳನ್ನು ಮಾತು ಇಲ್ಲವೇ ಬರಹಗಳ ಮೂಲಕ ಒದಗಿಸುವ ಸರ್ಕಾರ ಯಾವಾಗಲೂ ಜನರ ಭಾಷೆಯನ್ನೇ ಬಳಸಿಕೊಳ್ಳುತ್ತಿರುತ್ತದೆ. ಇಂತಹ ಬಳಕೆಗಳನ್ನು ನಾವು ಎಲ್ಲ್ಲ ಕಾಲದಲ್ಲೂ ಕಾಣುತ್ತೇವೆ. ನಮ್ಮ ಪ್ರಾಚೀನ ಶಾಸನಗಳು ಕನ್ನಡದಲ್ಲಿ ಇರುವುದಕ್ಕೆ ಇದೇ ಕಾರಣ. ಜನರೊಡನೆ ಅಧಿಕಾರವುಳ್ಳವರು ಮಾತಾಡುವಾಗ ಬಳಸುವ ಭಾಷೆಗೂ ಜನರು ಅಧಿಕಾರವುಳ್ಳವರೊಡನೆ ಮಾತಾಡುವಾಗ ಬಳಸುವ ಭಾಷೆಗೂ ಅಧಿಕಾರವುಳ್ಳವರು ತಮ್ಮತಮ್ಮಲ್ಲೇ ವ್ಯವಹರಿಸುವಾಗ ಬಳಸುವ ಭಾಷೆಗೂ ಅಗಾಧ ವ್ಯತ್ಯಾಸವಿರುತ್ತದೆ. ಈ ಸಂಕೀರ್ಣತೆಯಲ್ಲಿ ನಾವು ಕನ್ನಡದ ಸ್ಥಾನಮಾನಗಳ ಸ್ವರೂಪವನ್ನು ಗ್ರಹಿಸಬೇಕಾಗುತ್ತದೆ.