ಕರ್ನಾಟಕ ರಾಜ್ಯ ನಿರ್ಮಿತಿ ಆದ ಕಾಲಘಟ್ಟದಿಂದಲೂ ಒಂದು ವಾಸ್ತವ ನಮ್ಮೆದುರು ಇದ್ದೇ ಇತ್ತು. ಅದೆಂದರೆ ಈ ರಾಜ್ಯ ಕನ್ನಡಿಗರು ಬಹುಸಂಖ್ಯೆಯಲ್ಲಿ ಇರುವ ಭೂ ಪ್ರದೇಶ ಮಾತ್ರ. ಕನ್ನಡ ಭಾಷೆಯ ಜೊತೆಗೆ ಇತರ ಭಾಷೆಗಳನ್ನು ಆಡುವ ಹಲವು ಭಾಷಾ ಸಮುದಾಯಗಳು ಈ ರಾಜ್ಯದೊಳಗೆ ಇದ್ದವು. ಈ ಪರಿಸ್ಥಿತಿ ಈಗಲೂ ಮುಂದುವರೆದಿದೆ. ಆದರೆ ಕಳೆದ ಐವತ್ತು ವರ್ಷಗಳಲ್ಲಿ ಈ ಭಾಷಾ ಸಮುದಾಯಗಳ ಸ್ವರೂಪ, ಸಾಮಾಜಿಕ ಚಲನಶೀಲತೆ ಇವುಗಳು ಬದಲಾಗುತ್ತ ಬಂದಿವೆ. ಕನ್ನಡಿಗರ ಜೊತೆಗೆ ವಾಸಿಸುತ್ತಿರುವ ಹಲವು ಭಾಷಾ ಸಮುದಾಯಗಳ ಜನರು ಸಾವಿರಾರು ವರ್ಷಗಳಿಂದ ಈ ಪ್ರದೇಶದಲ್ಲಿ ಜೀವನ ನಡೆಸುತ್ತಿರುವವರೇ ಆಗಿದ್ದಾರೆ. ಇಲ್ಲಿನ ಜೀವನ ಕ್ರಮದೊಡನೆ ಅವರು ಜೈವಿಕವಾಗಿ ಬೆರೆತು ಹೋಗಿದ್ದಾರೆ. ಈ ಭಾಷಿಕರಲ್ಲಿ ಕೆಲವು ಸಮುದಾಯಗಳು ಅಖಿಲ ಭಾರತ ವ್ಯಾಪ್ತಿಯ ಸಮುದಾಯಗಳಾಗಿವೆ. ಮತ್ತೆ ಕೆಲವು ಗಡಿಯಾಚೆಗೆ ನಿರಂತರತೆಯನ್ನು ಹೊಂದಿರುವ ಸಮುದಾಯಗಳಾಗಿವೆ. ಮತ್ತೆ ಕೆಲವಕ್ಕೆ ಕರ್ನಾಟಕದ ಗಡಿಯಾಚೆಗೆ ಅಸ್ತಿತ್ವವೇ ಇಲ್ಲ. ೧೯೭೧ರ ಜನಗಣತಿಯ ಅಂದಾಜಿನಂತೆ ಕರ್ನಾಟಕದಲ್ಲಿ ೧೭೬ ಭಾಷೆಗಳನ್ನಾಡುವ ಜನರಿದ್ದಾರೆ. ಈ ಸಂಖ್ಯೆ ಅಷ್ಟೇನು ಖಚಿತವಾದುದಲ್ಲ. ಏಕೆಂದರೆ ಜನಗಣತಿಯ ಮಾನದಂಡಗಳಲ್ಲೇ ಭಾಷೆಗಳನ್ನು ಗುರುತಿಸಲು ತಕ್ಕ ಪರಿಕರಗಳು ಸಿದ್ಧವಾಗಿಲ್ಲ. ಅದು ಆ ಗಣತಿಯ ಆಸಕ್ತಿಯೂ ಆಗಿರಲಿಲ್ಲ. ಈ ೧೭೬ ಭಾಷೆಗಳನ್ನಾಡುವವರಲ್ಲಿ ಎಷ್ಟೋ ವಿದೇಶಿ ಭಾಷೆಗಳನ್ನಾಡುವವರು ಆ ಕಾಲದಲ್ಲಿ ಕರ್ನಾಟಕದ ತಾತ್ಕಾಲಿಕ ನಿವಾಸಿಗಳಾಗಿದ್ದವರು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡರೂ ಕರ್ನಾಟಕದ ಭಾಷಾ ಪರಿಸ್ಥಿತಿ ಸಾಕಷ್ಟು ಸಂಕೀರ್ಣವಾಗಿದೆ ಎಂದೇ ಹೇಳಬೇಕು. ಕನ್ನಡವನ್ನು ಮಾತನಾಡುವ ಜನರು ಇತರ ಭಾಷಿಕರೊಡನೆ ವ್ಯವಹರಿಸಲು ಆ ಭಾಷೆಗಳನ್ನು ಕಲಿಯುವುದಾಗಲೀ ಇತರ ಭಾಷಿಕರು ತಮ್ಮ ವ್ಯವಹಾರಕ್ಕಾಗಿ ಕನ್ನಡವನ್ನು ಕಲಿಯುವುದಾಗಲೀ ಅನೌಪಚಾರಿಕವಾಗಿ ಗಡಿ ಪ್ರದೇಶದಲ್ಲಿ ನಡೆಯುತ್ತಲೇ ಬಂದಿವೆ. ಆದರೆ ಕೆಲವೊಂದು ಸಂದರ್ಭದಲ್ಲಿ ಭಾಷಿಕರು ಪರಸ್ಪರ ಸಂಪರ್ಕದಲ್ಲಿದ್ದರೂ ಸಾಮಾಜಿಕವಾದ ಹಲವು ಕಾರಣಗಳಿಂದ ಇನ್ನೊಂದು ಭಾಷೆಯನ್ನು ಕಲಿಯಬೇಕಾದ ಪ್ರಸಂಗ ಒದಗುವುದಿಲ್ಲ. ಈ ಸಾಮಾಜಿಕ ಕಾರಣಗಳು ಹಲವು. ಉದಾಹರಣೆಗೆ ಸಾಮಾಜಿಕವಾಗಿ ಉನ್ನತ ಜಾತಿ ವರ್ಗಗಳಿಗೆ ಸೇರಿದವರು ಇನ್ನೊಂದು ಭಾಷೆಯನ್ನು ಕಲಿಯಬೇಕಾದ ಒತ್ತಾಯಗಳಿಗೆ ಒಳಗಾಗುವುದಿಲ್ಲ. ಕರಾವಳಿಯಲ್ಲಿ ತುಳು ಭಾಷಿಕರಿಗೆ ಕನ್ನಡ ಬರುವುದು ಎಷ್ಟು ಸಹಜವೋ ಅಷ್ಟು ಸಹಜವಾಗಿ ಎಲ್ಲ ಕನ್ನಡಿಗರು ತುಳು ಭಾಷೆಯನ್ನು ಕಲಿತಿರುವುದಿಲ್ಲ. ಹಾಗೆಯೇ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಉರ್ದು ಭಾಷಿಕರಾದ ಮಹಿಳೆಯರು ಸಾಮಾಜಿಕ ಸಂಪರ್ಕದ ಕೊರತೆಯಿಂದಾಗಿ ಕನ್ನಡ ಕಲಿಯದೇ ಉಳಿಯುತ್ತಾರೆ. ಆದರೆ ಅದೇ ಉರ್ದು ಭಾಷೆಯನ್ನಾಡುವ ಪುರುಷರು ಕನ್ನಡ ಕಲಿತಿರುತ್ತಾರೆ. ಈ ಸಂಕೀರ್ಣ ಪರಿಸ್ಥಿತಿಗೆ ಆರ್ಥಿಕ, ಧಾರ್ಮಿಕ ಆಯಾಮಗಳು ಸೇರಿಕೊಳ್ಳುತ್ತವೆ.

ಕರ್ನಾಟಕದಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡವನ್ನು ಕಲಿಯುವುದಿಲ್ಲ ಎಂಬ ಮಾತನ್ನು ಒಂದು ಆರೋಪವಾಗಿ ಮತ್ತೆಮತ್ತೆ ಕೇಳುತ್ತೇವೆ. ಬೆಂಗಳೂರಿನಂತಹ ಪ್ರದೇಶಗಳಲ್ಲಿ ಕಾಲದಿಂದ ಕಾಲಕ್ಕೆ ಇಂತಹ ಆರೋಪವನ್ನು ಮಾಡುತ್ತಲೇ ಬರಲಾಗಿದೆ. ವಾಸ್ತವವಾಗಿ ಒಂದು ಭಾಷೆಯನ್ನಾಡುವ ಜನರು ಇನ್ನೊಂದು ಭಾಷೆಯನ್ನು ಏಕೆ ಕಲಿಯುತ್ತಾರೆ ಅಥವಾ ಏಕೆ ಕಲಿಯುವುದಿಲ್ಲ ಎಂಬುದನ್ನು ನಾವು ಕೇವಲ ವ್ಯಕ್ತಿಗತ ಆಯ್ಕೆಗಳ ನೆಲೆಯಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಸಾಮಾಜಿಕ ಭಾಷಾಶಾಸ್ತ್ರದ ಅಧ್ಯಯನಗಳು ಈ ಬಗೆಗೆ ಸಾಕಷ್ಟು ಒಳನೋಟಗಳನ್ನು ನೀಡಿವೆ. ಭಾಷೆಯನ್ನು ಕಲಿಯುವವರು ಹಾಗೆ ಕಲಿಯಬೇಕಾದ ಸಂದರ್ಭದಲ್ಲಿ ಇದ್ದರೆ ಅವರು ಕಲಿಯುವುದು ಒಂದು ಸಹಜ ಪ್ರಕ್ರಿಯೆಯಾಗುತ್ತದೆ. ಒಂದು ನಿರ್ದಿಷ್ಟ ಸಂದರ್ಭವನ್ನು ಗಮನಿಸೋಣ. ಕಟ್ಟಡ ಕೆಲಸಗಾರರ ಗುಂಪು ಒಂದಿದೆ ಎಂದುಕೊಳ್ಳಿ. ಈ ಗುಂಪನ್ನು ಅದರ ನಾಯಕ ವ್ಯಕ್ತಿ ಯಾವುದೋ ದೂರದ ಭಾಷಾ ಪ್ರದೇಶದಿಂದ ಕರೆದು ತಂದಿರಬಹುದು. ಈ ಗುಂಪು ತನ್ನ ಕೆಲಸದ ಅವಧಿಯಲ್ಲಿ ಸಂಪೂರ್ಣವಾಗಿ ಆ ಪ್ರದೇಶದ ಭಾಷಾ ಸಮುದಾಯದಿಂದ ಬೇರ್ಪಟ್ಟಿರುತ್ತದೆ. ಅವರ ವ್ಯವಹಾರಗಳೆಲ್ಲ್ಲ ಗುಂಪಿನ ಒಳಗೆ ನಡೆಯುತ್ತಿರುತ್ತವೆ. ಇಲ್ಲಿನ ಕೆಲಸ ಮುಗಿದ ಮೇಲೆ ಇಡೀ ಗುಂಪಿನ ಮಂದಿ ಬೇರೊಂದೆಡೆಗೆ ಹೋಗುತ್ತಾರೆ. ಗುಂಪಿನಲ್ಲಿರುವ ಸದಸ್ಯರಲ್ಲಿ ಕೆಲವರು ತೊರೆದು ಹೋಗಬಹುದು. ಮತ್ತೆ ಕೆಲವರು ಅದೇ ಭಾಷೆಯನ್ನಾಡುವವರು ಬಂದು ಸೇರಬಹುದು. ಒಟ್ಟಾರೆ ಅವರು ಇನ್ನೊಂದು ಭಾಷೆಯೊಡನೆ ಸಂಪರ್ಕವನ್ನೇ ಹೊಂದುವುದಿಲ್ಲ. ಭಾಷೆ ಕಲಿಯುವ ಅಗತ್ಯ ಬೀಳುವುದಿಲ್ಲ. ಹಾಗಾಗಿ ಅವರು ಕನ್ನಡ ಕಲಿಯದೇ ಉಳಿಯಲು ಸಾಧ್ಯ. ಇದನ್ನು ನಾವು ಅವರ ಭಾಷಾ ದುರಭಿಮಾನ ಎಂದು ಬಣ್ಣಿಸಲು ಸಾಧ್ಯವಾಗುವುದಿಲ್ಲ ಅಥವಾ ತಮ್ಮ ಭಾಷೆಯಲ್ಲೇ  ವ್ಯವಹರಿಸು ವುದನ್ನು ಭಾಷಾಭಿಮಾನವೆಂದು ವಿವರಿಸುವುದು ಸರಿಯಲ್ಲ.

ಕರ್ನಾಟಕ ವಿವಿಧ ಗಡಿಭಾಗಗಳಲ್ಲಿ ಹಲವಾರು ಶತಮಾನಗಳಿಂದ ಅನ್ಯ ಭಾಷಿಕರು ಕನ್ನಡ ಜನಸಮುದಾಯದೊಡನೆ ಬದುಕುತ್ತಿದ್ದಾರೆ. ಕೇವಲ ವ್ಯಾವಹಾರಿಕ ವಾಗಿ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಹೀಗೆ ಭಾಷಾ ಸಮುದಾಯಗಳು ಒಂದಕ್ಕೊಂದು ತೆರೆದುಕೊಂಡು ಜೀವಿಸುತ್ತಿವೆ. ಹೀಗಲ್ಲದೇ ಕೆಲವು ಭಾಷಾ ಸಮುದಾಯಗಳು ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಶತಮಾನಗಳಿಂದ ಬದುಕುತ್ತಿದ್ದರೂ ಅವು ಮುಚ್ಚಿದ ಸಮುದಾಯಗಳಾಗಿವೆ. ಅಂದರೆ ಅವರು ವ್ಯವಹಾರಕ್ಕಾಗಿ ಜೀವನ ನಿರ್ವಹಣೆಗಾಗಿ ಕನ್ನಡ ಭಾಷಿಕರನ್ನು ಅವಲಂಬಿಸಿದರೂ ಕನ್ನಡ ಭಾಷಿಕರು ಈ ಸಮುದಾಯಗಳೊಡನೆ ಯಾಜಮಾನ್ಯದ ನೆಲೆಯಲ್ಲೇ ಇರುತ್ತಾರೆ. ಉದಾಹರಣೆಗೆ ತೆಲುಗು ಮಾತಾಡುವ ಮ್ಯಾಸಬೇಡರು ಹಲವಾರು ಕಡೆಗಳಲ್ಲಿ ಹೀಗೆ ಕನ್ನಡ ಭಾಷಿಕರ ನಡುವೆ ಮುಚ್ಚಿದ ಸಮುದಾಯಗಳಾಗಿ ಜೀವಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಲ್ಲಿನ ಸಮುದಾಯಗಳು ಕನ್ನಡವನ್ನು ಕಲಿಯುವ ಅವಕಾಶಗಳು ಉಂಟಾದರೂ ಕನ್ನಡಿಗರಿಗೆ ಆ ಸಮುದಾಯಗಳ ಭಾಷೆಯನ್ನು ಕಲಿಯುವ ಒತ್ತಾಯಗಳು ಬರುವುದಿಲ್ಲ. ಎರಡು ಭಾಷಿಕ ಸಮುದಾಯಗಳು ಪರಸ್ಪರ ತೆರೆದುಕೊಂಡಿದ್ದಾಗ ಮಾತ್ರ ಎರಡೂ ಕಡೆಗಳಲ್ಲಿ ದ್ವಿಭಾಷಿಕತೆ ಒಂದು ಸಾಮಾಜಿಕ ಅಂಶವಾಗಿ ಕಂಡುಬರುತ್ತದೆ. ಹೀಗಲ್ಲದೇ ಹಲವಾರು ಅಲೆಮಾರಿ ಸಮುದಾಯಗಳು ನಾಡಿನಲ್ಲಿ ಇವೆ. ಇವರು ಕಳೆದ ಐವತ್ತು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಅಲ್ಲಲ್ಲಿ ನೆಲೆಸುವಂತಾಗಿದ್ದರೂ ಇಂದಿಗೂ ಅಲೆಮಾರಿಯಾಗಿಯೇ ಉಳಿದಿರುವ ಸಮುದಾಯಗಳು ಸಾಕಷ್ಟಿವೆ. ಇಂತಹವರು ತಮ್ಮ ಜೀವನ ನಿರ್ವಹಣೆಗಾಗಿ ಅಗತ್ಯವಿದ್ದಷ್ಟು ಕನ್ನಡವನ್ನು ಕಲಿಯುತ್ತಾರೆ. ಉಳಿದಂತೆ ತಮ್ಮ ಸಮುದಾಯದ ಭಾಷೆಯನ್ನು ಬಳಸಿಕೊಳ್ಳುತ್ತಾರೆ. ಇವರ ಭಾಷೆಗಳನ್ನು ಕನ್ನಡಿಗರು ಕಲಿಯಬೇಕಾದ ಪ್ರಸಂಗಗಳು ಬರುವುದಿಲ್ಲ. ಇದಲ್ಲದೇ ಆದಿವಾಸಿಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪೌರ ಸಮಾಜದೊಡನೆ ಕನಿಷ್ಟ ಸಂಪರ್ಕವನ್ನು ಹೊಂದುವ ಇವರಿಗೆ ಕನ್ನಡ ಭಾಷೆಯ ಅಗತ್ಯ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ. ಈಚಿನ ದಶಕಗಳಲ್ಲಿ ಈ ಆದಿವಾಸಿಗಳನ್ನು ಸಮಾಜದ ಮುಖ್ಯಧಾರೆಗೆ ಕರೆತರುವ ಯೋಜನೆಗಳು ಜಾರಿಗೆ ಬಂದಿವೆ. ಹೀಗಾಗಿ ಇವರ ಎಳೆಯ ತಲೆಮಾರಿನ ಮಕ್ಕಳು ಕನ್ನಡವನ್ನು ಔಪಚಾರಿಕವಾಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇಂತಹ ಜನಸಮುದಾಯಗಳು ನಿಧಾನವಾಗಿ ತಮ್ಮ ಚಹರೆಗಳನ್ನು ಕನ್ನಡ ಭಾಷಾ ಸಮುದಾಯಕ್ಕೆ ಹೊಂದಿಸಿಕೊಂಡರೂ ಆಶ್ಚರ್ಯವಿಲ್ಲ.

ಕೆಲವು ವಿಸ್ತೃತ ಭಾಷಾ ಸಮುದಾಯಗಳ ಬಗೆಗೆ ನಾವು ಪ್ರತ್ಯೇಕವಾಗಿಯೇ ಚರ್ಚಿಸಬೇಕು. ತುಳು ಮಾತಾಡುವ ಜನಸಮುದಾಯ ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿದ್ದಾರೆ. ಈ ಭಾಷಿಕರು ಜೀವನ ನಿರ್ವಹಣೆಗಾಗಿ ಕರ್ನಾಟಕದ ಹೊರಗೂ ಇದ್ದಾರೆ. ಆದರೆ ಅವರ ಸಾಂಸ್ಕೃತಿಕ ನೆಲೆ ಮಾತ್ರ ಕರಾವಳಿಯ ಪ್ರದೇಶವೇ ಆಗಿದೆ. ಇವರು ತಲೆಮಾರುಗಳಿಂದ ಕನ್ನಡದಲ್ಲಿ ವ್ಯವಹರಿಸಬಲ್ಲವರು. ನಾವು ಹಿಂದೆಯೇ ಗುರುತಿಸಿದಂತೆ ತುಳುವನ್ನು ಕಲಿಯಲೇಬೇಕಾದ ಒತ್ತಾಯ ಕನ್ನಡ ಸಮುದಾಯಕ್ಕಿಲ್ಲ. ಹಾಗೆ ಕಲಿತರೂ ಗ್ರಹಿಕೆಯ ಸಾಮರ್ಥ್ಯವನ್ನು ಮಾತ್ರ ಪಡೆದುಕೊಳ್ಳುವುದುಂಟು. ಇಂತಹದೇ ಇನ್ನೊಂದು ಸಮುದಾಯ ಕೊಡವ ಭಾಷಿಕರದು. ಈ ಭಾಷೆಯನ್ನಾಡುವ ಜನರನ್ನು ಸಾಮಾನ್ಯವಾಗಿ ಕೊಡವರು ಎಂದು ಕರೆಯಲಾಗಿದೆಯಾದರೂ ಆ ಸಮಾಜ ಮಾತ್ರ ಕೊಡವರನ್ನು ಒಳಗೊಂಡಂತೆ ವಿಸ್ತೃತವಾಗಿದೆ. ಕನ್ನಡ, ತುಳು, ಮಲಯಾಳಂ, ಮತ್ತು ಕೊಡವ ಭಾಷೆಗಳು ಒಂದು ಚಿಕ್ಕ ಭೂಪ್ರದೇಶದಲ್ಲಿ ಒಟ್ಟಾಗಿ ವ್ಯವಹಾರದಲ್ಲಿ ಇರುವುದರಿಂದ ಅದೊಂದು ಬಹು ಭಾಷಿಕ ಪ್ರದೇಶವಾಗಿದೆ. ಆ ವಿನ್ಯಾಸದಲ್ಲಿ ಕನ್ನಡಕ್ಕೊಂದು ಸಂಕೀರ್ಣ ಸ್ಥಾನವಿದೆ. ಅಲ್ಲಿ ಕನ್ನಡಿಗರು ಏಕಭಾಷಿಕರಾಗಿ ಉಳಿಯುವ ಸಂದರ್ಭಗಳು ಕಡಿಮೆ. ಇತರ ಭಾಷೆಗಳ ವ್ಯಾವಹಾರಿಕ ಸಾಮರ್ಥ್ಯವನ್ನು ಪಡೆದುಕೊಳ್ಳುವುದು, ಅಲ್ಲಿ ಅಗತ್ಯವಾಗಿದೆ.

ಕೊಂಕಣಿ ಮಾತಾಡುವ ಜನರು ಕರ್ನಾಟಕದ ಕರಾವಳಿಯ ಜಿಲ್ಲೆಗಳಲ್ಲಿ ಹರಡಿಕೊಂಡಿದ್ದಾರೆ. ಇದೊಂದು ಸಂಕೀರ್ಣ ಸಮಾಜ. ಹಲವು ವೃತ್ತಿಗಳ, ಧರ್ಮಗಳ ಜನರು ಈ ಸಮುದಾಯಕ್ಕೆ ಸೇರುತ್ತಾರೆ. ತಮ್ಮ ದೈನಂದಿನ ಬದುಕಿ ಗಾಗಿ ಕನ್ನಡವನ್ನು ಕಲಿಯುತ್ತಾರೆ. ಇದೇ ಮಾತು ಇವರೊಡನೆ ಬದುಕುತ್ತಿರುವ ಕನ್ನಡಿಗರಿಗೂ ಅನ್ವಯಿಸುತ್ತದೆ. ಕೊಂಕಣಿ ಭಾಷಿಕರೊಡನೆ ವ್ಯವಹಾರವುಳ್ಳ ಜನರು ಕೊಂಕಣಿ ಭಾಷೆಯನ್ನು ಕಲಿಯುತ್ತಾರೆ. ಈ ಸಂಕೀರ್ಣ ಕೊಂಕಣಿ ಭಾಷಿಕ ಸಮುದಾಯದಲ್ಲಿ ಕೊಂಕಣಿಯ ಹಲವು ಪ್ರಭೇದಗಳು ಸೃಷ್ಟಿಯಾಗಿವೆ. ಸಂದರ್ಭಾನುಸಾರ ಕನ್ನಡಿಗರು ಆ ಪ್ರಭೇದಗಳಲ್ಲಿ ತಮಗೆ ಅಗತ್ಯವಾದುದನ್ನು ಕಲಿಯುತ್ತಾರೆ.

ಉರ್ದು ಭಾಷಿಕರು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಇದ್ದಾರೆ. ಎಲ್ಲ ಕಡೆಯೂ ಬಹಳ ತೆಳುವಾಗಿ ಹರಡಿಕೊಂಡಿರುವುದು ಕಾಣಬರುತ್ತದೆ. ಈ ಭಾಷಿಕರು ಕನ್ನಡ ಭಾಷಿಕರೊಡನೆ ಬೆರೆಯುವ ರೀತಿಯಲ್ಲಿ ಒಂದು ಬಗೆಯ ಸ್ವ-ಅನ್ಯದ ನೆಲೆ ಕಾಣಿಸಿಕೊಳ್ಳುತ್ತದೆ. ಇಸ್ಲಾಂ ಧರ್ಮ ಮತ್ತು ಉರ್ದು ಭಾಷೆಯನ್ನು ಸಮೀಕರಿಸುವ ಪ್ರಯತ್ನ ಎದ್ದುಕಾಣುತ್ತದೆ. ಆದರೆ ಉರ್ದು ಮಾತನಾಡಲಾರದ ಮತ್ತು ಅದರ ಅಗತ್ಯವಿಲ್ಲದ ಮುಸ್ಲಿಂ ಸಮುದಾಯಗಳು ಕರ್ನಾಟಕದಲ್ಲಿವೆ. ಧಾರ್ಮಿಕ ಕಾರಣಗಳಿಗಾಗಿ ಈ ಭಾಷಿಕರು ಪರ್ಶಿಯನ್ ಮತ್ತು ಅರಾಬಿಕ್ ಭಾಷೆಯನ್ನು ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ. ಈ ಉರ್ದು ಭಾಷಿಕರ ಕನ್ನಡ ಕಲಿಕೆ ಉಳಿದ ಭಾಷಾ ಸಮುದಾಯಗಳಿಗೆ ಹೋಲಿಸಿ ನೋಡಿದರೆ ಬಹಳ ಸಂಕೀರ್ಣವಾಗಿದೆ. ಈ ಭಾಷಿಕರು ವ್ಯಾವಹಾರಿಕವಾಗಿ ಕನ್ನಡವನ್ನು ಕಲಿಯುತ್ತಾರೆ. ಈ ಮಾತು ಕನ್ನಡಿಗರಿಗೂ ಅನ್ವಯಿಸುತ್ತದೆ. ಆದರೆ ಸಮುದಾಯದ ಜೀವನ ಕ್ರಮದಲ್ಲಿ ಒಂದು ರೀತಿಯಲ್ಲಿ ಸಮಾಜ ದೂರವಾಗಿ ಉಳಿದಿರುವ ಈ ಮುಸ್ಲಿಂ ಸಮುದಾಯ ಈಗ ಕನ್ನಡವನ್ನು ಮೊದಲಿನಷ್ಟು ಅಗತ್ಯವುಳ್ಳ ಭಾಷೆ ಎಂದು ತಿಳಿದಿಲ್ಲ. ಇದಕ್ಕೆ ಸಂಕೀರ್ಣವಾದ ಕಾರಣಗಳಿವೆ. ಸಾಮಾಜಿಕ ಬೇರ್ಪಡುವಿಕೆ ಒಂದು ಕಾರಣ. ರಾಜಕೀಯ ಒತ್ತಡಗಳು ಬೇರೊಂದು ನೆಲೆಯಲ್ಲಿ ಪ್ರವೃತ್ತವಾಗಿವೆ. ಮುಸ್ಲಿಂ ಸಮುದಾಯದಲ್ಲಿ ಕೆಲವು ವಿಶೇಷ ಪ್ರಸಂಗಗಳನ್ನು ಹೊರತು ಪಡಿಸಿದರೆ ಕನ್ನಡದೊಡನೆ ಸಂಪೂರ್ಣ ಸಂಪರ್ಕ ಕಡಿದುಕೊಂಡವರು ಉಂಟು. ಹೆಂಗಸರು ಇದಕ್ಕೆ ನಿದರ್ಶನಗಳಾಗುತ್ತಾರೆ. ಕೆಲವು ಬಗೆಯ ವೃತ್ತಿಗಳಲ್ಲಿ ಇವರ ಪ್ರವೇಶ ಅಸಾಧ್ಯವಾದುದರಿಂದ ಕನ್ನಡವನ್ನು ಅನೌಪಚಾರಿಕವಾಗಿ ಕಲಿಯುವ ಅವಕಾಶವು ಕಡಿಮೆ. ನಮ್ಮ ಶಿಕ್ಷಣ ಪದ್ಧತಿಯೂ ಇದನ್ನು ಪೋಷಿಸುವಂತೆ ಉರ್ದು ಭಾಷಿಕರಿಗೆ ಅವರ ಆಯ್ಕೆಯ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಅವಕಾಶ ಲಭಿಸಿದೆ. ಉರ್ದು ಭಾಷೆಯ ಶಾಲೆಗಳು ಕರ್ನಾಟಕದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಈ ನಾಲ್ಕು ಭಾಷೆಗಳ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರ ಭಾಷಾ ಅಕಾಡೆಮಿ ಗಳನ್ನು ಸ್ಥಾಪಿಸಿದೆ. ಆ ಅಕಾಡೆಮಿಗಳ ಕಾರ್ಯವ್ಯಾಪ್ತಿಯನ್ನು ಚರ್ಚಿಸುವುದು ನಮ್ಮ ಆಸಕ್ತಿಯಲ್ಲ. ಆದರೆ ಅವುಗಳನ್ನು ಸ್ಥಾಪಿಸಬೇಕಾದ ಅಗತ್ಯ ಕಂಡು ಬಂದದ್ದು ಗಮನಾರ್ಹ ವಿಷಯ. ಕಳೆದ ಐವತ್ತು ವರ್ಷಗಳಲ್ಲಿ ಈ ನಾಲ್ಕು ಭಾಷೆಗಳ ಜನರ ಭಾಷಿಕ ಅವಕಾಶಗಳನ್ನು ಕಾಯ್ದುಕೊಳ್ಳಲು ಮತ್ತು ವೃದ್ಧಿಗೊಳಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಸಮುದಾಯಗಳಲ್ಲೂ ರಾಜ್ಯಾಂಗವು ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಸಂರಕ್ಷಣೆ ಕಲಂಗಳ ಅರಿವಿದೆ. ಅದಕ್ಕಾಗಿ ಅವರು ತಂತಮ್ಮ ಹಕ್ಕುಗಳನ್ನು ಸ್ಥಾಪಿಸಲು ಹೋರಾಡುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಚೌಕಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಲ್ಲಿ ಉನ್ನತ ಶಿಕ್ಷಣದ ಕೆಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಕೆಲವು ರಾಜ್ಯಾಂಗಿಕ ಬಿಕ್ಕಟ್ಟುಗಳು ಇದರಿಂದ ಉಂಟಾಗಿವೆ. ಭಾಷಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವ ಈ ಹುನ್ನಾರದಲ್ಲಿ ಭಾಷೆ ಮತ್ತು ಭಾಷಿಕರನ್ನು ಪೂರ್ಣವಾಗಿ ಸಮೀಕರಿಸಲಾಗಿದೆ. ಇದರಿಂದ ಭಾಷೆಗಳಿಗೆ ಆಗಿರುವ ಪ್ರಯೋಜನ ಅಷ್ಟರಲ್ಲೇ ಇದೆ.

ತುಳು ಭಾಷೆಯನ್ನು ರಾಜ್ಯಾಂಗದ ಎಂಟನೆಯ ಅನುಚ್ಛೇದದ ಭಾಷೆಯನ್ನಾಗಿ ಪರಿಗಣಿಸಬೇಕೆಂದು ಹೋರಾಟ ನಡೆದಿದೆ. ಕೊಂಕಣಿಯನ್ನು ಗೋವಾದ ರಾಜ್ಯ ಭಾಷೆಯನ್ನಾಗಿ ಪರಿಗಣಿಸಿ ಅದಕ್ಕೆ ರಾಜ್ಯಾಂಗದಲ್ಲಿ ಮನ್ನಣೆ ನೀಡುವಾಗ ಅದಕ್ಕೆ ಲಿಪಿಯ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ. ಹಾಗೆ ನೋಡಿದರೆ ಭಾರತದಲ್ಲಿ ಈ ಕೊಂಕಣಿ ಭಾಷೆಯನ್ನು ಬೇರೆ ಬೇರೆ ಕಡೆ ಏಳು ಬೇರೆ ಬೇರೆ ಲಿಪಿಗಳಲ್ಲಿ ಬರೆಯಲಾಗುತ್ತಿದೆ. ದೇವನಾಗರಿ ಮತ್ತು ಕನ್ನಡ ಲಿಪಿಗಳನ್ನು ಕರ್ನಾಟಕದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡ ಲಿಪಿಯ ಬಳಕೆ ಮಾಡುವ ಬಗೆಗೆ ಬಹುಮತದ ಒಪ್ಪಿಗೆ ಇದ್ದರೂ ವ್ಯಾಪಕ ವಿರೋಧಗಳೂ ಇವೆ. ಅಖಿಲ ಭಾರತ ಮಟ್ಟದಲ್ಲಿ ಕೊಂಕಣಿಗೆ ದೇವನಾಗರಿ ಲಿಪಿಯನ್ನು ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕೊಂಕಣಿ ಭಾಷೆಯನ್ನು ಆಯ್ದುಕೊಳ್ಳುವವರು ದೇವನಾಗರಿ ಲಿಪಿಯಲ್ಲಿ ಬರೆಯಬೇಕೆಂಬ ನಿಯಮವಿದೆ. ಈ ಕಾರಣದಿಂದ  ಕೆಲವರು ಕರ್ನಾಟಕದಲ್ಲಿ ಕೊಂಕಣಿಯನ್ನು ದೇವನಾಗರಿ ಲಿಪಿಯಲ್ಲೇ ಕಲಿಸಬೇಕೆಂಬ ವಾದ ಮಂಡಿಸುತ್ತಿದ್ದಾರೆ. ಆದರೆ ಕರ್ನಾಟಕದ ಕೊಂಕಣಿ ಅಕಾಡೆಮಿ ಕನ್ನಡ ಲಿಪಿಯ ಪರವಾಗಿಯೇ ಇದೆ. ಕರ್ನಾಟಕದ ಶಾಲೆಗಳಲ್ಲಿ ಕೊಂಕಣಿಯನ್ನು ಒಂದು ಭಾಷೆಯನ್ನಾಗಿ ಕಲಿಸುವ ಪ್ರಸ್ತಾವ ಈಗ ಚರ್ಚೆಯಲ್ಲಿದೆ. ಒಮ್ಮೆ ಅದು ಜಾರಿಗೆ ಬಂದರೆ ಆ ಶಿಕ್ಷಣವನ್ನು ನೀಡಲು ಅನುಕೂಲವಾಗುವಂತೆ ಪಠ್ಯಪುಸ್ತಕಗಳನ್ನು ಕನ್ನಡ ಲಿಪಿಯಲ್ಲಿ ಸಿದ್ಧಪಡಿಸ ಲಾಗಿದೆ. ಇದೊಂದು ಪ್ರಮುಖವಾದ ನಿರ್ಧಾರವೆಂದು ತೋರುತ್ತದೆ. ಕನ್ನಡ ಲಿಪಿಯನ್ನು ಹೀಗೆ ಮತ್ತೊಂದು ಆಧುನಿಕ ಭಾರತೀಯ ಭಾಷೆಯನ್ನು ಬರೆಯಲು ಬಳಸಲಾಗುತ್ತಿರುವುದು ಗಣನೀಯ ಅಂಶ.

ತುಳು ಭಾಷೆಯನ್ನು ತುಳು ಲಿಪಿಯಲ್ಲೇ ಬರೆಯಬೇಕೆಂಬ ಅಪೇಕ್ಷೆ ಈಚೆಗೆ ಮೂಡಿದೆ. ತುಳುವಿನ ಲಿಪಿಯನ್ನು ಗುರುತಿಸಿದ್ದೇ ಒಂದೆರಡು ದಶಕಗಳಿಂದೀಚೆಗೆ. ಆದರೆ ಈಗಾಗಲೇ ಕನ್ನಡ ಲಿಪಿಯನ್ನು ಬಳಸಿ ತುಳು ಬರೆಯುವುದು ರೂಢಿಯಾಗಿದೆ. ಹಲವು ಸಾಹಿತ್ಯ ಕೃತಿಗಳ ಜೊತೆಗೆ ತುಳು ನಿಘಂಟು ಕೂಡ ಕನ್ನಡ ಲಿಪಿಯನ್ನೇ ಬಳಸಿಕೊಂಡಿವೆ. ತುಳು ಭಾಷೆಯನ್ನು ಈಗ ಒಂದು ಆಧುನಿಕ ಭಾರತೀಯ ಭಾಷೆಯನ್ನಾಗಿ ನೆಲೆಗೊಳಿಸಬೇಕೆಂಬ ಯತ್ನ ಮುಂದುವರೆದಿದೆ. ಹಾಗಾದಾಗಲೂ ಕನ್ನಡ ಲಿಪಿ ಅಲ್ಲಿ ಬಳಕೆಯಾಗುವುದು ಅನಿವಾರ್ಯವಾಗಬಹುದು.

ಕೊಡವ ಭಾಷಿಕರ ಒಂದು ಸಮುದಾಯ ಕೊಡಗು ಪ್ರದೇಶಕ್ಕೆ ಸ್ವಾಯತ್ತತೆಯನ್ನು ಕೋರುತ್ತಿದೆ. ಅದನ್ನೊಂದು ಜಾನಾಂಗಿಕ ಹೋರಾಟವನ್ನಾಗಿ ಪರಿವರ್ತಿಸಲು ರಾಷ್ಟ್ರೀಯ ವೇದಿಕೆಗಳನ್ನು ಬಳಸಲಾಗುತ್ತಿದೆ. ಆದರೆ ಈ ಹೋರಾಟದಲ್ಲಿ ಕೊಡವ ಕನ್ನಡಗಳ ಸಂಬಂಧ ಮುಂಚೂಣಿಗೆ ಬಂದದ್ದೇ ತೋರುತ್ತಿಲ್ಲ. ಈ ಭಾಷೆಯಲ್ಲಿ ಬರವಣಿಗೆ ಕಡಿಮೆ. ಇರುವ ಬರವಣಿಗೆಯು ಕನ್ನಡ ಲಿಪಿಯಲ್ಲಿ ಇದೆ. ಅಲ್ಲಿನ ಮೌಖಿಕ ಸಾಹಿತ್ಯವನ್ನು ಕನ್ನಡ ಲಿಪಿಯಲ್ಲೇ ದಾಖಲಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ ಕೊಡವ ಭಾಷೆಯ ಪತ್ರಿಕೆಗಳು ಕನ್ನಡ ಲಿಪಿಯನ್ನೇ ಬಳಸುತ್ತಿದ್ದವು.

ಈ ನಾಲ್ಕು ಭಾಷೆಗಳನ್ನು ವಿಶೇಷ ಚೌಕಟ್ಟಿನಲ್ಲಿ ಪರಿಶೀಲಿಸಿದ್ದೇವೆ. ಕನ್ನಡ ನಾಡಿನಲ್ಲಿ ಇವುಗಳ ಅಸ್ತಿತ್ವದ ಬಗೆಗೆ ಇರುವ ಚಿಂತನೆಗಳನ್ನು ಗಮನಿಸಿದ್ದೇವೆ. ಆದರೆ ಕನ್ನಡ ಭಾಷಾ ಸಮುದಾಯ ಬೇರೆ ಬೇರೆ ರೀತಿಯ ಸಂಬಂಧಗಳನ್ನು ಈ ಸಮುದಾಯಗಳೊಡನೆ ರೂಪಿಸಿಕೊಂಡಿದೆ. ಅವುಗಳಲ್ಲಿ ತಲೆ ಎತ್ತುತ್ತಿರುವ ಅಸ್ಮಿತೆಯ ಹೋರಾಟವನ್ನು ಕನ್ನಡ ವಿರೋಧಿ ನೆಲೆಯಲ್ಲಿ ಪರಿಭಾವಿಸುವ ಚಿಂತನೆಗಳು ಕಾಣತೊಡಗಿವೆ. ಇದು ಭಾಷಾವಾರು ಪ್ರಾಂತ ರಚನೆಯಲ್ಲೇ ಬೀಜರೂಪವಾಗಿ ಅಡಗಿದ್ದ ವಿರೋಧಾಭಾಸ. ಚಾರಿತ್ರಿಕ ವಿನ್ಯಾಸಗಳಿಂದಾಗಿ ಈ ವೈರುಧ್ಯಗಳು ಈಗ ಹೊಸ ಆಕಾರದಲ್ಲಿ ತಲೆ ಎತ್ತುತ್ತಿವೆ. ಮುಂದಿನ ದಿನಮಾನಗಳಲ್ಲಿ ಇವು ಯಾವ ಸ್ವರೂಪವನ್ನು ಪಡೆಯುತ್ತವೆಂದು ಹೇಳುವುದು ಸುಲಭವಲ್ಲ. ಕನ್ನಡ ನಾಡಿನಲ್ಲಿ ಈ ಅಸ್ಮಿತೆಯ ನೆಲೆಗಳನ್ನು ಕನ್ನಡ ಭಾಷಾವಿರೋಧಿ ಎಂದು ಪರಿಗಣಿಸಲು ಕಾರಣಗಳಿಲ್ಲ. ಕರ್ನಾಟಕ ರಾಜ್ಯ ಸರಕಾರ ಕನ್ನಡವನ್ನು ಪೋಷಿಸುವಾಗಲೇ, ರಾಜ್ಯದ ಒಂದು ಬಹುಸಂಖ್ಯಾತರ ಭಾಷೆಯನ್ನು, ಸಾಂವಿಧಾನಿಕ ಕಟ್ಟುಪಾಡುಗಳನ್ನು ಅನುಸರಿಸಿ  ಪೋಷಿಸಬೇಕಾಗುತ್ತದೆ. ಕನ್ನಡಕ್ಕೆ ಅವುಗಳೊಡನೆ ಯಾಜಮಾನ್ಯದ ಸಂಬಂಧವನ್ನು ಕಲ್ಪಿಸುವುದು ಸೂಕ್ತವಾಗದು. ಅನೌಪಚಾರಿಕವಾಗಿ ಈ ನಾಲ್ಕು ಸಮುದಾಯಗಳು ಕನ್ನಡದ ಪ್ರಮುಖ ದ್ವಿಭಾಷಾ ಸಮುದಾಯಗಳಾಗಿವೆ. ಇವುಗಳಲ್ಲಿ ಮೂರು ಬೇರೆ ಬೇರೆ ಕಾರಣಗಳಿಂದಾಗಿ ಕನ್ನಡ ಲಿಪಿಯನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡಿವೆ. ಅವರು ಈಗಾಗಲೇ ದ್ವಿಭಾಷಿಕರು. ತಮ್ಮ ಭಾಷೆಯ ಕಲಿಕೆಯ ನೆಪದಲ್ಲಿ ಕನ್ನಡ ಲಿಪಿಯನ್ನು ಕಲಿತರೆ ಪರೋಕ್ಷವಾಗಿ ಅವರು ಕನ್ನಡ ಸಾಕ್ಷರರೇ ಆದಂತಾಯಿತು. ತಾವು ಬಲ್ಲ, ಕನ್ನಡದ ಬರಹ ರೂಪದ ಗ್ರಹಿಕೆಯ ಸಾಮರ್ಥ್ಯ ಅವರಿಗೆ ಕನಿಷ್ಟ ಪ್ರಯತ್ನದಲ್ಲಿ ಲಭ್ಯವಾಗಿ ಬಿಡುತ್ತದೆ. ಇದಂತೂ ಕನ್ನಡದ ಮಟ್ಟಿಗೆ ಒಂದುಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಉರ್ದು ಭಾಷೆಯದು ವಿಶಿಷ್ಟ ಸಮಸ್ಯೆ. ಬಹು ಹಿಂದೆಯೇ ಗಾಂಧೀಜಿಯವರು ಹಿಂದೂಸ್ತಾನಿ ಎಂದು ಕಲ್ಪಿಸಿಕೊಂಡ ಭಾಷೆಯೊಂದನ್ನು ಭಾರತದ ರಾಷ್ಟ್ರಭಾಷೆ ಎಂದು ಒಪ್ಪಿದ್ದರೆ ಸಮಸ್ಯೆಗಳು ಇಷ್ಟು ತೀವ್ರವಾಗಿರುತ್ತಿರಲಿಲ್ಲ. ಈಗಲೂ ಉರ್ದುವನ್ನು ದೇವನಾಗರಿ ಲಿಪಿಯಲ್ಲಿ ಬರೆಯುವುದು, ಓದುವುದು ಸಾಧ್ಯ. ಹಾಗಿದ್ದಾಗ ದೇವನಾಗರಿ ಲಿಪಿಯ ಯಥಾವತ್ತಾದ ಧ್ವನಿ ಅನುಕರಣೆ ಇರುವ ಕನ್ನಡ ಲಿಪಿ ಉರ್ದು ಭಾಷೆಯ ಬರವಣಿಗೆಗೆ ಅನುಕೂಲ ಆಗಬಹುದು. ಈಗಲೂ ಅಲ್ಪಸ್ವಲ್ಪ ಬರವಣಿಗೆಗಳು ಕನ್ನಡ ಲಿಪಿಯಲ್ಲಿ ಓದಲು ಸಿಗುತ್ತವೆ. ಒಂದು ವೇಳೆ ಕರ್ನಾಟಕದಲ್ಲಿ ಉರ್ದು ಭಾಷೆಯನ್ನು ಕಲಿಸುವ ಅವಕಾಶವನ್ನು ಉಳಿಸಿ ಬಳಸುವ ಲಿಪಿ ಕನ್ನಡವಾದರೆ ಅದರ ದೂರಗಾಮಿ ಪರಿಣಾಮಗಳೇನು ಎಂಬುದನ್ನು ಯೋಚಿಸಬೇಕಾಗಿದೆ. ಈಗಿರುವ ಸ್ವ-ಅನ್ಯ ಚೌಕಟ್ಟಿನಿಂದ ಈ ಎರಡು ಭಾಷೆಗಳನ್ನಾಡುವ ಸಮುದಾಯಗಳು ಹೊರಬರಲು ಸಾಧ್ಯ. ಈ ಪ್ರಸ್ತಾವ ಮುಂದಿಡುವುದು ಸುಲಭವಾದರೂ ಜಾರಿಗೆ ಕೊಡುವುದು ಕಷ್ಟ. ಹಲವಾರು ಭಾವನಾತ್ಮಕ ಸಂಘರ್ಷಗಳಿಗೆ ಇದು ಕಾರಣವಾಗುತ್ತದೆ. ಆದರೂ ಹಂತಹಂತವಾಗಿ ಈ ಪ್ರಸ್ತಾವವನ್ನು ಜಾರಿಗೆ ಕೊಡುವುದು ಸಾಧ್ಯವೇ ಎಂದು ಪರ್ಯಾಲೋಚಿಸಬೇಕಾಗಿದೆ.

ಭಾಷೆಗೂ ಲಿಪಿಗೂ ಇರುವ ಸಂಬಂಧ ಆಕಸ್ಮಿಕವಾದದ್ದು. ಅದನ್ನು ಸಂಸ್ಕೃತಿಯ ಸಾಂಸ್ಥಿಕ ವಲಯಗಳು ಭಾವನಾತ್ಮಕ ನೆಲೆಗೆ ಒಯ್ದು ಕೂರಿಸಿವೆ. ಆದರೂ ಹಲವು ಶತಮಾನಗಳ ಮಾನವ ಜನಾಂಗದ ಚರಿತ್ರೆಯಲ್ಲಿ ಹೀಗೆ ಭಾಷೆಗಳು ಹಲವು ಲಿಪಿಗಳಲ್ಲಿ ಬರವಣಿಗೆಯ ರೂಪವನ್ನು ಕಾಣುತ್ತಿರುವ ನಿದರ್ಶಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನ ಈಗ ತನ್ನ ಪ್ರವೇಶದಿಂದ ಹೊಸ ಸಾಧ್ಯತೆಯೊಂದನ್ನು ನಮಗೆ ನೀಡಿದೆ. ಒಂದು ಲಿಪಿಯ ಬರವಣಿಗೆಯನ್ನು ಇನ್ನೊಂದು ಲಿಪಿಯಲ್ಲಿ ಪಡೆದುಕೊಳ್ಳುವುದು ಅಂದರೆ ಲಿಪ್ಯಂತರಗೊಳಿಸುವುದು ಈಗ ಕ್ಷಣಮಾತ್ರದ ಕೆಲಸವಾಗಿದೆ. ಮೇಲುನೋಟಕ್ಕೆ ಇದು ತಂತ್ರಜ್ಞಾನದ ಒಂದು ಚಿಕ್ಕ ಸಾಧನೆ ಎನ್ನಿಸುತ್ತದೆ. ಆದರೆ ಪರಿಣಾಮಗಳು ದೂರಗಾಮಿಯಾಗಿವೆ. ಎರಡು ಕಾರಣಗಳನ್ನು ನಾವು ಪ್ರಸ್ತಾಪಿಸಬಹುದು. ಒಂದು: ನಾವು ಬಲ್ಲ ಒಂದು ಲಿಪಿಯ ಮೂಲಕ ನಾವು ಬಲ್ಲ ಒಂದಕ್ಕಿಂತ ಹೆಚ್ಚು ಭಾಷೆಗಳ ಪಠ್ಯಗಳನ್ನು ಓದಬಹುದು. ಅದಕ್ಕಾಗಿ ಪ್ರತ್ಯೇಕವಾಗಿ ಲಿಪಿಯನ್ನು ಶ್ರಮವಹಿಸಿ ಕಲಿಯಬೇಕಾಗಿಲ್ಲ. ಎರಡು: ಭಾಷೆಗೂ, ಲಿಪಿಗೂ ನಾವು ಕಲ್ಪಿಸಿರುವ ಪಾವಿತ್ರ್ಯದ ಸಂಬಂಧ ನಮ್ಮೆಲ್ಲರ ಅನುಕೂಲಕ್ಕಾಗಿಯೇ ಮುರಿದು ಬೀಳುತ್ತದೆ. ಇದರ ಎಲ್ಲ್ಲ ಪರಿಣಾಮಗಳನ್ನು ನಾವು ಬೇರೊಂದೆಡೆ ಚರ್ಚಿಸಲಿದ್ದೇವೆ. ಆದರೆ ಕರ್ನಾಟಕದ ಬಹುಭಾಷಾ ಸಂದರ್ಭದ ನಿರ್ವಹಣೆಗೆ ಕನ್ನಡ ಲಿಪಿಯ ಬಳಕೆ ಒಂದು ಉಪಯುಕ್ತ ಮಧ್ಯಮ ಮಾರ್ಗವನ್ನು ರೂಪಿಸಬಲ್ಲುದೇ ಎನ್ನುವುದನ್ನು ಚರ್ಚಿಸುವ ಕಾಲ ಈಗ ಬಂದಿದೆ.

ಕರ್ನಾಟಕದಲ್ಲಿ ಪರಸ್ಪರ ದ್ವಿಭಾಷಿಕರಾಗುವ ಇತರ ಸಮುದಾಯಗಳ ಸಂದರ್ಭ ವನ್ನು ನಾವು ಈಗ ಪರಿಗಣಿಸಬೇಕು. ಅಂತಹ ಮೂರು ಸಮುದಾಯಗಳೆಂದರೆ, ಕನ್ನಡ-ತೆಲುಗು, ಕನ್ನಡ-ಮರಾಠಿ ಮತ್ತು ಕನ್ನಡ-ಮಲಯಾಳಂ, ಈ ಮೂರು ಭಾಷೆಗಳನ್ನು ಆಡುವ ರಾಜ್ಯಗಳೊಡನೆ ಕರ್ನಾಟಕ ತನ್ನ ಗಡಿಗೆರೆಗಳನ್ನು ಹಂಚಿಕೊಂಡಿದೆ. ಈ ಗೆರೆಯ ಆಚೀಚೆಗೆ ಈ ಭಾಷಿಕ ಸಮುದಾಯಗಳು ನಿರಂತರವಾಗಿವೆ. ಮತ್ತೊಂದು ರಾಜ್ಯದೊಡನೆ ಕರ್ನಾಟಕ ತನ್ನ ಗಡಿಗೆರೆಯನ್ನು ಹಂಚಿಕೊಂಡಿದೆ. ಅದು ತಮಿಳುನಾಡು. ಕನ್ನಡ-ತಮಿಳು ಭಾಷಿಕರ ದ್ವಿಭಾಷಿಕತೆ ಬಹು ಪ್ರಾಚೀನವಾದದ್ದು. ಆದರೂ ಪೂರ್ವಘಟ್ಟಗಳ ಕಾರಣದಿಂದಾಗಿ ತಮಿಳು ಭಾಷಿಕ ಸಮುದಾಯದೊಡನೆ ಕರ್ನಾಟಕದ ನಿರಂತರತೆ ಕನಿಷ್ಟ ಪ್ರಮಾಣದಲ್ಲಿದೆ. ಇದರಿಂದ ಒಂದೆರಡು ಚಿಕ್ಕ ಪ್ರದೇಶಗಳನ್ನು ಹೊರತುಪಡಿಸಿದರೆ ಕನ್ನಡ ತಮಿಳು ನಿರಂತರತೆ ಕೊಂಚ ಕಡಿಮೆಯೇ. ಆದರೆ ತಮಿಳು ಮಾತಾಡುವ ಜನ ಸಮುದಾಯ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬೇರೆ ಬೇರೆ ಕಾಲಮಾನಗಳಲ್ಲಿ ಬಂದು ನೆಲೆಸಿದ್ದಾರೆ. ಈ ವಲಸೆಗಳಲ್ಲಿ ಇಲ್ಲೇ ಬಂದು ಬಹುಕಾಲದಿಂದ ವಾಸಿಸುವವರು ಇರುವಂತೆ ಋತುಮಾನಕ್ಕೆ ಅನುಗುಣವಾಗಿ ತೀರಾ ವಲಸೆ ಹೋಗುವವರು ಇದ್ದಾರೆ.

ಈ ನಾಲ್ಕು ದ್ರಾವಿಡ ಭಾಷೆಗಳ ಜನಸಮುದಾಯ ಕನ್ನಡದೊಡನೆ ದ್ವಿಭಾಷಿಕ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದಾರೆ. ಇವುಗಳಲ್ಲಿ ಕನ್ನಡ-ಮಲಯಾಳಂ ಮತ್ತು ಕನ್ನಡ-ತಮಿಳು ದ್ವಿಭಾಷಿಕ ನೆಲೆಗಳಿಗಿಂತ ಕನ್ನಡ-ತೆಲುಗು ಬಹು ವ್ಯಾಪಕವಾದ ನೆಲೆಯನ್ನು ಹೊಂದಿವೆ. ಕೋಲಾರದಿಂದ ಬೀದರ್‌ವರೆಗೆ ಏಳು ಜಿಲ್ಲೆಗಳನ್ನು ಈ ದ್ವಿಭಾಷಾ ಸಮುದಾಯ ವ್ಯಾಪಿಸಿದೆ. ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಇಂದಿನ ಆಂಧ್ರದ ರಾಯಲಸೀಮಾ ಪ್ರದೇಶ ಕರ್ನಾಟಕದ ಒಂದು ವಿಸ್ತರಣೆಯೇ ಆಗಿತ್ತು. ಸುಮಾರು ನಾಲ್ಕು ನೂರು ವರ್ಷಗಳ ದ್ವಿಭಾಷಿಕ ವಾತಾವರಣ ಈ ಪ್ರದೇಶದಲ್ಲಿ ಇದೆ. ರಾಯಚೂರಿನಿಂದ ಬೀದರ್‌ವರೆಗಿನ ತೆಲುಗು-ಕನ್ನಡ ದ್ವಿಭಾಷಿಕ ಸಮುದಾಯ ಬಹುಶಃ ಇನ್ನೂ ಪ್ರಾಚೀನವಾದದ್ದು. ಆಂಧ್ರದ ಕರೀಂನಗರದ ಪ್ರದೇಶವೇ ಕನ್ನಡದ ಆದಿಕವಿ ಪಂಪ ಇದ್ದ ವೇಮುಲವಾಡ ಆಗಿತ್ತು. ಹೀಗಾಗಿ ಸುಮಾರು ಒಂದು ಸಾವಿರ ವರ್ಷದ ಸಂಪರ್ಕ ಇಲ್ಲಿರುವಂತೆ ತೊರುತ್ತದೆ. ಏನೇ ಇರಲಿ; ಕಳೆದ ಐದು ದಶಕದಲ್ಲಿ ಈ ದ್ವಿಭಾಷಿಕ ಸಮುದಾಯ ಕನ್ನಡ ಜೊತೆಗಿನ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ಬೆಳೆಸಿಕೊಂಡಿದೆ. ಔಪಚಾರಿಕವಾಗಿ ಕನ್ನಡ ಅಧಿಕೃತ ಭಾಷೆ ಆಗಿರುವುದರಿಂದ ಸಾರ್ವಜನಿಕ ವಲಯಗಳಲ್ಲಿ ಕನ್ನಡದ ಬಳಕೆ ಸಹಜವಾಗಿಯೇ ಹೆಚ್ಚಾಗಿದೆ. ಅನೌಪಚಾರಿಕವಾಗಿ ಮತ್ತು ಮೌಖಿಕ ನೆಲೆಯಲ್ಲಿ ಎರಡು ಭಾಷೆಗಳು ಸಮಪ್ರಮಾಣದಲ್ಲಿ ಬಳಕೆಯಲ್ಲಿರುವಂತೆ ಅಧ್ಯಯನಗಳು ತೋರಿಸುತ್ತಿವೆ. ಏಕೀಕರಣದ ಮುನ್ನ ತೆಲುಗು ಭಾಷೆಯನ್ನು ಕಲಿಸಲು ಅವಕಾಶ ನೀಡುತ್ತಿದ್ದ ಶಾಲೆಗಳು ಈಗಲೂ ಬಳ್ಳಾರಿ ಜಿಲ್ಲೆಯಲ್ಲಿವೆ. ಇಲ್ಲಿನ ಒಂದು ಅಧ್ಯಯನವು ತೋರಿಸಿರುವಂತೆ ಈ ಶಾಲೆಯ ವಿದ್ಯಾರ್ಥಿ ಸಮುದಾಯ ಬಹುಮಟ್ಟಿಗೆ ಹೆಣ್ಣು ಮಕ್ಕಳಿಂದ ಕೂಡಿದೆ. ಅಂದರೆ ತೆಲುಗು ಭಾಷಿಕರು ಗಂಡು ಮಕ್ಕಳಿಗೆ ತಮ್ಮ ಮೊದಲ ಆಯ್ಕೆಯನ್ನಾಗಿ ಈಗ ಕನ್ನಡದ ಬದಲು ಇಂಗ್ಲಿಶನ್ನು ಗುರುತಿಸಿದಂತೆ ತೋರುತ್ತದೆ. ಉನ್ನತ ಶಿಕ್ಷಣದ ಅವಕಾಶಗಳಿಗಾಗಿ ಅವರು ಕನ್ನಡವನ್ನು ಕಲಿಕೆಯ ಹಂತದಲ್ಲಿ ಬಳಸಿಕೊಂಡು ದಾಟಲು ಯತ್ನಿಸುತ್ತಿದ್ದಾರೆ. ಆದರೆ ಸಾಮಾನ್ಯ ಶಿಕ್ಷಣದ ನೆಲೆಯಲ್ಲಿ ನಿಂತು ಹೋಗುವ ಹೆಣ್ಣು ಮಕ್ಕಳ ಮಟ್ಟಿಗೆ ತೆಲುಗು-ಕನ್ನಡ ದ್ವಿಭಾಷಿಕತೆಯನ್ನೇ ಖಚಿತಪಡಿಸಿದಂತಿದೆ. ತೆಲುಗು ದ್ವಿಭಾಷಿಕರು ಈಗಲೂ ಕನ್ನಡ ಭಾಷೆಯನ್ನು ಯಜಮಾನ ಭಾಷೆಯೆಂದು ಭಾವಿಸುತ್ತಿಲ್ಲ. ಈ ಸಮುದಾಯಗಳ ನಡುವಣ ಸಾಮಾಜಿಕ ಸಂಬಂಧಗಳು ಸಮಪಾತಳಿಯಲ್ಲಿ ಇರುವುದು ಇದಕ್ಕೆ ಮುಖ್ಯ ಕಾರಣ ಆದರೂ ಬಳ್ಳಾರಿ ಜಿಲ್ಲೆಯ ಅಧ್ಯಯನಗಳೇ ತೋರಿಸುವಂತೆ ಭೂಮಾಲೀಕ ವರ್ಗ ಮತ್ತು ಪರಿಶಿಷ್ಟವರ್ಗದ ಜನರು ತೆಲುಗು ಮಾತೃ ಭಾಷೆಯವರು. ಇಷ್ಟೇ ಪ್ರಭಾವಶಾಲಿಯಾದ ಲಿಂಗಾಯತರು ಕನ್ನಡ ಮಾತೃ ಭಾಷೆಯರವರಾಗಿರು ವುದನ್ನು ತೋರಿಸುತ್ತದೆ. ಈ ಪರಿಸ್ಥಿತಿ ರಾಯಚೂರು, ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಗಳಲ್ಲೂ ಮುಂದುವರೆದಿದೆ. ಸಾಮಾಜಿಕ ಸಂಬಂಧಗಳು ಮತ್ತು ಆರ್ಥಿಕ ಸಂಬಂಧಗಳು ಸಮನೆಲೆಯಲ್ಲಿ ಇರುವ ಕಡೆಗಳಲ್ಲಿ ಈ ದ್ವಿಭಾಷಿಕತೆ ಅಷ್ಟೇನೂ ಇಕ್ಕಟ್ಟಿನ ಪ್ರಸಂಗಗಳನ್ನು ಸೃಷ್ಟಿಸಿಲ್ಲ. ಆದರೆ ಕನ್ನಡದ ಅಧಿಕೃತತೆ ಮತ್ತು ಅದನ್ನು ಮೊದಲ ಭಾಷೆಯಾಗಿ ಹೊಂದಿರುವ ಸಾಮಾಜಿಕ ವರ್ಗಪ್ರತಿಷ್ಠೆ ಇವೆರಡು ನಿಧಾನವಾಗಿ ಕೆಲವು ಹೊಸ ನೆಲೆಯ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಇವು ಅಲ್ಲಲ್ಲಿ ಸಾಮಾಜಿಕ ಸಂಘರ್ಷಗಳಿಗೆ ದಾರಿ ಮಾಡಿವೆ. ಇಲ್ಲಿ ಇನ್ನೊಂದು ವಿಶಿಷ್ಟ ಸಂದರ್ಭ ಇರುವಂತೆ ಕಂಡುಬರುತ್ತಿದೆ. ಈ ಸಾಮಾಜಿಕ ವರ್ಗಗಳಲ್ಲಿ ಕೆಲವರು ಮುಖ್ಯವಾಗಿ ಕನ್ನಡ ಮೊದಲ ಭಾಷೆಯಾಗಿ ಇರುವ ಜಾತಿಗಳವರು, ವೈವಾಹಿಕ ಸಂಬಂಧಗಳಿಗಾಗಿ ತೆಲುಗು ಮೊದಲ ಭಾಷೆ ಆಗಿರುವ ಆಂಧ್ರದ ಕುಟುಂಬಗಳನ್ನು ಆಶ್ರಯಿಸುತ್ತಾರೆ. ಇದರಿಂದ ಇಲ್ಲಿ ಮದುವೆಯಾಗಿ ಬಂದ ಹೆಂಗಸರು ತಾವು ಇದುವರೆಗೂ ಕಲಿಯದಿದ್ದ ಕನ್ನಡವನ್ನು ಕಲಿಯಬೇಕಾದ ಪ್ರಸಂಗ ಎದುರಾಗುತ್ತಿದೆ. ಅವರು ಸದ್ಯದ ಮಾಹಿತಿಗಳನ್ವಯ ದ್ವಿಭಾಷಿಕರಾಗಿ ಉಳಿಯುವ ಸಂದರ್ಭಗಳು ಕಡಿಮೆ. ಏಕೆಂದರೆ ಅವರ ವ್ಯಾವಹಾರಿಕ ಸಂಪರ್ಕಗಳು ಕನ್ನಡ ಬಳಕೆಯನ್ನು ಮಾತ್ರ ಬಯಸುತ್ತವೆ. ಹೀಗಾಗಿ ಅವರು ತಮ್ಮ ತೆಲುಗು ಕೌಶಲಗಳನ್ನು ತವರು ಮನೆಗೆ ಮಾತ್ರ ಮೀಸಲಾಗಿ ಇರಿಸಿಕೊಳ್ಳಬೇಕಾಗುತ್ತದೆ. ದ್ವಿಭಾಷಿಕ ಸಮುದಾಯಗಳಲ್ಲಿ ಇಂತಹ ಸನ್ನಿವೇಶಗಳು ಅಪರೂಪವೇನಲ್ಲ. ಹಾಗೆ ನೋಡಿದರೆ ಕನ್ನಡ-ಮರಾಠಿ ಸಂಬಂಧದಲ್ಲಿ ಇಂತದ್ದೇ ಪರಿಸ್ಥಿತಿ ಲಿಂಗಾಯತ ಮತ್ತು ಜೈನ ಕುಟುಂಬಗಳಲ್ಲಿ ಇದ್ದಂತೆ ತೋರುತ್ತದೆ. ಅಲ್ಲಿರುವ, ಮರಾಠಿ ಮೊದಲ ಭಾಷೆಯಾಗಿರುವ ಹೆಣ್ಣುಮಕ್ಕಳು ಕನ್ನಡವನ್ನು, ವಯಸ್ಕರಾದ ಮೇಲೆ ಅಂದರೆ ಮದುವೆಯ ಅನಂತರ ಕಲಿತು ತಮ್ಮ ಮರಾಠಿ ಕೌಶಲಗಳನ್ನು ಮಿತಗೊಳಿಸಿಕೊಳ್ಳುತ್ತಾರೆ. ಇದರಿಂದ ಈ ದ್ವಿಭಾಷಿಕತೆ ಮನೆಯ ಹೊರಗೆ ಕಾಣಿಸುವ ಪ್ರಮಾಣದಲ್ಲಿ ಮನೆಯ ಒಳಗೆ ಕಾಣಿಸುವುದಿಲ್ಲ. ಈ ದ್ವಿಭಾಷಿಕತೆಯೇ ಸಾರ್ವಜನಿಕ ವಲಯದ ವ್ಯಾಪ್ತಿಯಲ್ಲಿ ಮಾತ್ರ ಇರುವಂತಹದ್ದು.

ತೆಲುಗು-ಕನ್ನಡ ದ್ವಿಭಾಷಿಕತೆ, ಹೈದ್ರಾಬಾದ್-ಕರ್ನಾಟಕ ಎಂದು ಗುರುತಿಸಲಾದ ಜಿಲ್ಲೆಗಳಲ್ಲಿ ಉರ್ದು ಭಾಷೆಯೊಡನೆ ತ್ರಿಕೋನ ಸಂಬಂಧವನ್ನು ರೂಪಿಸಿಕೊಂಡಿದೆ. ಏಕೀಕರಣದ ಅನಂತರ ಭಾಷಿಕವಾಗಿ ಅತ್ಯಂತ ತೀವ್ರತರದ ಪಲ್ಲಟಗಳನ್ನು ಕಾಣಬೇಕಾಗಿದ್ದ ಪ್ರದೇಶ ಇದಾಗಬೇಕಿತ್ತು. ಏಕೆಂದರೆ ಇಲ್ಲಿ ಕನ್ನಡ ಅಧಿಕೃತ ಭಾಷೆಯಾಗಿ ಇರಲಿಲ್ಲ. ಶೈಕ್ಷಣಿಕ ವಿಷಯವಾಗಿ ಇಲ್ಲವೇ ಮಾಧ್ಯಮವಾಗಿ ಕೂಡ ಕನ್ನಡಕ್ಕೆ ಅವಕಾಶಗಳಿರಲಿಲ್ಲ. ಏಕೀಕರಣದ ನಂತರ ಕನ್ನಡ ಈ ನಿರ್ವಾತ ಪ್ರದೇಶವನ್ನು ಸಹಜವೇಗದಿಂದ ಆಕ್ರಮಿಸಿದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು. ಆದರೆ ಈ ಪ್ರದೇಶದ ಅಭಿವೃದ್ಧಿಯ ವೇಗವೇ ತೀರಾ ನಿಧಾನಗತಿಯಲ್ಲಿ ಇದ್ದುದರಿಂದ ಈ ಅವಧಿಯಲ್ಲೂ ಕನ್ನಡ ತನ್ನ ವ್ಯಾಪಕ ಪ್ರಭಾವವನ್ನು ಬೀರುವುದು ಸಾಧ್ಯವಾಗಿಲ್ಲ. ಏಕೀಕರಣ ಪೂರ್ವದಲ್ಲಿ ಇಲ್ಲಿ ಕನ್ನಡವನ್ನು ನೆಲೆಗೊಳಿಸುವ ಹೊಣೆಯನ್ನು ತಮ್ಮ ಜವಾಬ್ದಾರಿ ಎಂದು ತಿಳಿದವರು ವೀರಶೈವರು. ಅವರಷ್ಟೇ ಸಾಮಾಜಿಕವಾಗಿ ಪ್ರಭಾವಶಾಲಿಗಳಾಗಿದ್ದ ಬ್ರಾಹ್ಮಣರು ಮುಖ್ಯವಾಗಿ ಮರಾಠಿಯನ್ನು ತಮ್ಮ ಮೊದಲ ಭಾಷೆಯನ್ನಾಗಿ ಹೊಂದಿದ್ದರು. ಈ ಸಾಮಾಜಿಕ ವಿನ್ಯಾಸದಲ್ಲಿ ಉರ್ದು ತನ್ನ ಸ್ಥಾನವನ್ನು ಅಧಿಕೃತತೆ ಹಂತದಿಂದ ಕಡಿಮೆ ಮಾಡಿಕೊಳ್ಳುತ್ತ ನಡೆಯಿತಾದರೂ ಒಟ್ಟು ಪ್ರಗತಿಯಲ್ಲಿ ಕನ್ನಡ ನಿರೀಕ್ಷಿಸಿದ್ದ ಮಟ್ಟವನ್ನು ಮುಟ್ಟಲು ಸಾಧ್ಯವಾಗಿಲ್ಲ. ಆದರೆ ನಾವು ಮೇಲೆ ಚರ್ಚಿಸಿದ ತೆಲುಗು-ಕನ್ನಡ ಸಾರ್ವಜನಿಕ ದ್ವಿಭಾಷಿಕತೆ ಇಲ್ಲಿ ಕೆಳಸ್ತರಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ತೆಲುಗು ಮೊದಲ ಭಾಷೆಯಾಗಿ ಇರುವ ಇಲ್ಲಿನ ಭಾಷಿಕ ಸಮುದಾಯಗಳು ಸಾಮಾಜಿಕವಾಗಿ ದುರ್ಬಲವಾಗಿವೆ. ಅಲ್ಲಿ ಚಾರಿತ್ರಿಕ ಒತ್ತಡವು ಕೂಡ ತೆಲುಗಿಗೆ ಒತ್ತಾಸೆಯಾಗಿ ಇರಲಿಲ್ಲ. ಆದ್ದರಿಂದ ಬರಲಿರುವ ದಶಕಗಳಲ್ಲಿ ಈ ಪ್ರದೇಶದ ತೆಲುಗು ದ್ವಿಭಾಷಿಕತೆ ಸಾಮುದಾಯಿಕ ನೆಲೆಯಿಂದ ವ್ಯಕ್ತಿಗತ ನೆಲೆಗೆ ದಾಟಿದರೆ ಅಚ್ಚರಿ ಏನಿಲ್ಲ.

ಈ ತೆಲುಗು-ಕನ್ನಡ ದ್ವಿಭಾಷಿಕತೆ ಪ್ರದೇಶದಲ್ಲಿ ಕನ್ನಡ ಮಾತಾಡುವವರು ಕೀಳರಿಮೆಯ ಸ್ಥಿತಿಗೆ ಬರಲಿಲ್ಲ. ಆದರೆ ಕನ್ನಡ ಮರಾಠಿ ದ್ವಿಭಾಷಿಕತೆಯ ಪ್ರದೇಶಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿನ ಸಾಮಾಜಿಕ ವಿನ್ಯಾಸದಿಂದಾಗಿಯೇ ಕನ್ನಡ ಅಧೀನ ಭಾಷೆಯಾಗಿತ್ತು. ಮರಾಠಿ ಭಾಷೆಯ ಉಗಮ ವಿಕಾಸದಲ್ಲಿ ಕನ್ನಡದ ಕೊಡುಗೆ ಇದೆ. ಎಷ್ಟೋ ಆಚರಣೆಗಳು, ಪುರಾಣಗಳು ಕರ್ನಾಟಕದಿಂದ ಮರಾಠಿ ಪ್ರದೇಶಕ್ಕೆ ಹೋದಂತೆ ತೋರುತ್ತದೆ. ವಿಠಲ ಸಂಪ್ರದಾಯ, ಮೈಲಾರ ಸಂಪ್ರದಾಯ ಮತ್ತು ಎಲ್ಲಮ್ಮ ಸಂಪ್ರದಾಯ ಈ ಮೂರನ್ನು ನಿದರ್ಶನವಾಗಿ ಹೇಳಬಹುದು. ಆದರೆ ಹಲವಾರು ಚಾರಿತ್ರಿಕ ಕಾರಣಗಳಿಂದಾಗಿ ಕನ್ನಡ ಮಾತಾಡುವ ಜನರು ಮರಾಠಿಯ ಅಧಿಕೃತತೆಯ ಒತ್ತಡಕ್ಕೆ ಸಿಲುಕಿ ಅಧೀನರಾದಂತೆ ತೋರುತ್ತದೆ. ಕನ್ನಡ ಮಾತಾಡುವ ಪ್ರದೇಶಗಳ ಒಕ್ಕೂಟಕ್ಕೆ ತೀವ್ರವಾದ ಬಯಕೆ, ಒತ್ತಡಗಳು ಈ ದ್ವಿಭಾಷಿಕ ಪ್ರದೇಶ ದಿಂದಲೇ ಹುಟ್ಟಿಬಂದದ್ದು ಆಕಸ್ಮಿಕವಲ್ಲ.

ಕಳೆದ ಐದು ದಶಕಗಳಲ್ಲಿ ಕನ್ನಡ ತನ್ನ ಅಧಿಕೃತತೆಯನ್ನು ಸ್ಥಾಪಿಸಲು ಯತ್ನಿಸಿದೆ. ದ್ವಿಭಾಷಿಕತೆಯಲ್ಲಿ ಸಮಾನಸ್ಕಂದತೆಯನ್ನು ರೂಢಿಸಲು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಯಶಸ್ಸು ಸಾಕಷ್ಟು ದೊರೆತಂತೆ ತೋರುತ್ತದೆ. ಮರಾಠಿ ಮೊದಲ ಭಾಷೆಯಾಗುಳ್ಳ ಜನವರ್ಗದ ಸಾಮಾಜಿಕ ಆರ್ಥಿಕ ವರ್ಚಸ್ಸನ್ನು ಮೀರಲು ಪ್ರಯತ್ನಗಳು ನಡೆದಿವೆ. ಅಲ್ಲಿನ ಔದ್ಯೋಗಿಕ ಮತ್ತು ಕೃಷಿ ಸಂಬಂಧದ ಹೊಸ ವಿನ್ಯಾಸಗಳು ಕನ್ನಡ ಮೊದಲ ಭಾಷೆಯಾಗುಳ್ಳ ಜನರನ್ನು ನಿರ್ಣಯಾತ್ಮಕ ನೆಲೆಗೆ ತಂದು ನಿಲ್ಲಿಸಿವೆ. ಇದೆಲ್ಲವೂ ಇನ್ನೂ ರೂಪುಗೊಳ್ಳುತ್ತಿರುವ ವಿನ್ಯಾಸಗಳು. ಇವು ಎಲ್ಲ ಪ್ರದೇಶಗಳಲ್ಲೂ ಏಕಪ್ರಕಾರವಾಗಿ ನೆಲೆಗೊಂಡಿಲ್ಲ. ಆದರೂ ಕನ್ನಡ-ಮರಾಠಿ ದ್ವಿಭಾಷಿಕತೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಬಹುಮಟ್ಟಿಗೆ ಸ್ಥಿರನೆಲೆಯಲ್ಲಿ ಇದೆ. ಮುಖ್ಯವಾಗಿ ಮರಾಠಿಗೆ ಮತ್ತು ಕನ್ನಡಕ್ಕೆ ಈಗ ಶತ್ರುತ್ವದ ಸಂಬಂಧ ಇಲ್ಲವಾಗಿದೆ. ಆದ್ದರಿಂದ ಎರಡು ಭಾಷೆಗಳ ಆಡುಗರು ತಂತಮ್ಮ ಅಗತ್ಯಗಳಿಗೆ ಅನುಗುಣವಾಗಿ ವ್ಯವಹರಿಸುತ್ತಿದ್ದಾರೆ. ಕನ್ನಡಿಗರಿಗೆ ಈಗ ಮೊದಲಿನಂತೆ ಮರಾಠಿ ದ್ವಿಭಾಷಿಕರಾಗುವ ಒತ್ತಾಯ ಇಲ್ಲ. ಒಂದು ವೇಳೆ ಅದು ಇದ್ದರೂ ಗ್ರಹಿಕೆಯ ಕೌಶಲಗಳಿಗೆ ಸೀಮಿತವಾಗುತ್ತದೆ.

ಕನ್ನಡ ಈ ದ್ವಿಭಾಷಿಕ ಸನ್ನಿವೇಶಗಳಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬಂದಿದೆ. ಆದರೆ ಈಗಾಗಲೇ ಬೇರೊಂದೆಡೆ ಗುರುತಿಸಿದಂತೆ ಈ ದ್ವಿಭಾಷಿಕ ಸಮುದಾಯಗಳು ತಂತಮ್ಮ ಸಾಮಾಜಿಕ ಉನ್ನತಿಗಾಗಿ ರಾಜ್ಯಾಂಗದ ಸವಲತ್ತುಗಳ ಹಿನ್ನೆಲೆಯಲ್ಲಿ ಕನ್ನಡವನ್ನು ಔಪಚಾರಿಕ ನೆಲೆಯಲ್ಲಿ ಬಳಸಿ ದಾಟುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಅಂದರೆ ಕನ್ನಡ ಮಾತಾಡಲು ಅರ್ಥಮಾಡಿಕೊಳ್ಳಲು ಸಿದ್ಧ ವಿದ್ದರೂ ಓದಿ ಬರೆಯುವ ಕೌಶಲಗಳನ್ನು ಪಡೆದುಕೊಳ್ಳುವ ಅಗತ್ಯ ಕಂಡು ಬರುತ್ತಿಲ್ಲ. ಅವರು ಇಂಗ್ಲಿಶ್ ಭಾಷೆಯ ಕಡೆಗೆ ಓಲುವೆಯನ್ನು ತೋರಿಸುತ್ತಿದ್ದಾರೆ. ಇದು ಬಹುಮಟ್ಟಿಗೆ ಕನ್ನಡಿಗರ ಆಯ್ಕೆಯ ವಿನ್ಯಾಸವೂ ಆಗಿದೆ. ಹಾಗಾಗಿ ಈ ಮಟ್ಟಿಗೆ ಅನ್ಯಭಾಷಿಕರನ್ನು ಟೀಕಿಸಲು ಅವಕಾಶಗಳಿಲ್ಲ. ಕನ್ನಡ ಅನೌಪಚಾರಿಕವಾಗಿ ಬಳಕೆಯಲ್ಲಿರುವ ವಲಯಗಳಲ್ಲಿ ಎಲ್ಲ್ಲ ಭಾಷಿಕರು ಭಾಗಿಯಾಗಲು ಸಿದ್ಧರಿದ್ದರೂ ಔಪಚಾರಿಕ ವಲಯಗಳಿಂದ ಕನ್ನಡ ಹೊರಬಿದ್ದು ಅಲ್ಲಿ ಇಂಗ್ಲಿಶ್ ಭಾಷೆ ಮನ್ನಣೆ ಪಡೆಯುತ್ತಿದೆ. ಈ ಪರಿಸ್ಥಿತಿಯನ್ನು ನಾವು ಕನ್ನಡದ ಆತಂಕಗಳನ್ನು ಕುರಿತ ಅಧ್ಯಾಯದಲ್ಲಿ ಮತ್ತಷ್ಟು ಚರ್ಚಿಸಲಿದ್ದೇವೆ.

ಐವತ್ತು ವರ್ಷಗಳಲ್ಲಿ ಕನ್ನಡ ಮೊದಲ ಭಾಷಿಕರು ಇಂಗ್ಲಿಶ್ ಕಡೆಗೆ ತೋರುತ್ತಿರುವ ಓಲುವೆಗೆ ಚಾರಿತ್ರಿಕವಾಗಿ ಸಮರ್ಥನೆ ಇರಬಹುದು. ಆದರೆ ಇದು ಇನ್ನೂ ಯಾವ ಬಗೆಯ ಭಾಷಾ ಸನ್ನಿವೇಶಕ್ಕೆ ಅವಕಾಶ ಕಲ್ಪಿಸಿದೆ ಎಂಬುದನ್ನು ಗಮನಿಸಬೇಕು. ಕನ್ನಡ ಪ್ರಥಮ ಭಾಷಿಕರು ಮೌಖಿಕ ನೆಲೆಯಲ್ಲಿ ಮತ್ತು ಗ್ರಹಿಕೆಯ ನೆಲೆಯಲ್ಲಿ ಹಲವು ಹತ್ತು ಭಾಷೆಗಳಿಗೆ ತೆರೆದುಕೊಂಡವರು. ಆದರೆ ಲಿಖಿತ ಅಧಿಕೃತ ನೆಲೆಗೆ ಇಂಗ್ಲಿಶ್ ಮಾತ್ರ ಸಾಕು ಎನ್ನುವುದು ಈ ಚಿಂತನೆಯ ನೆಲೆಯಾಗಿದೆ. ಒಂದು ಪ್ರಸಂಗವನ್ನು ಈ ಮೇಲಿನ ಮಾತಿಗೆ ಪೂರಕವಾಗಿ ಪರಿಶೀಲಿಸಬಹುದು. ಕನ್ನಡ ಪತ್ರಿಕೆಗಳು ತಮ್ಮ ಸುದ್ದಿಮೂಲಕ್ಕಾಗಿ ಇಂಗ್ಲಿಶನ್ನು ಆಶ್ರಯಿಸುವುದು ಎಷ್ಟು ಬಲವಾಗಿದೆ ಎಂದರೆ ಭಾರತದ ಬೇರೆ ಯಾವ ಭಾಷೆಯ ಪತ್ರಿಕೆಯನ್ನು ಕನ್ನಡ ಪತ್ರಿಕಾಲಯಗಳಲ್ಲಿ ನೋಡಲು ಸಾಧ್ಯವಿಲ್ಲ. ಈ ಪತ್ರಿಕೆಗಳು ಆಗಾಗ ಬೇರೆ ಬೇರೆ ಪತ್ರಿಕೆಗಳಿಂದ ಉದ್ಧರಿಸಿ ಅಭಿಪ್ರಾಯಗಳನ್ನು ಒದಗಿಸುತ್ತವೆ. ಆದರೆ ಯಾವ ಪತ್ರಿಕೆಯೂ ಕನ್ನಡ ಇಂಗ್ಲಿಶ್ ಅಲ್ಲದೇ ದೇಶಿಯ ಪತ್ರಿಕೆಗಳನ್ನು ಆಕರವಾಗಿ ಎಂದೂ ಬಳಸಿಲ್ಲ. ಇಂಗ್ಲಿಶ್ ಪತ್ರಿಕೆಗಳು ಅಖಿಲ ಭಾರತ ಮಟ್ಟದ ಪತ್ರಿಕೆಗಳೆಂದು  ಪರಿಗಣಿತವಾಗಿ ಅವುಗಳಿಂದ ಆಯ್ದ ಅಭಿಪ್ರಾಯಗಳನ್ನಷ್ಟೇ ಕನ್ನಡ ಪತ್ರಿಕೆಗಳಲ್ಲಿ ಒದಗಿಸಲಾಗುತ್ತಿದೆ. ಅಂದರೆ ಕನ್ನಡ ಮನಸ್ಸು ದೇಶಿಯ ಭಾಷೆಗಳೊಡನೆ ಇನ್ನೂ ಮಿಳಿತವಾಗಿಲ್ಲ. ಏಕೀಕರಣಪೂರ್ವದಲ್ಲಿ ಒಂದಕ್ಕಿಂತ ಹೆಚ್ಚು ದೇಶೀಯ ಭಾಷೆಗಳನ್ನು ಬಲ್ಲವರ ಸಂಖ್ಯೆ ಹೆಚ್ಚಿತ್ತು. ಆ ಕಾಲದಲ್ಲಿ ಟ್ಯಾಗೋರರ, ಬಂಕಿಮ ಚಂದ್ರರ, ಶರತ್ ಬಾಬುಗಳ ಕೃತಿಗಳು ನೇರವಾಗಿ ಬಂಗಾಲಿಯಿಂದ ಕನ್ನಡಕ್ಕೆ ಅನುವಾದವಾಗುತ್ತಿದ್ದವು. ಇದು ಒಂದು ಚಿಕ್ಕ ನಿದರ್ಶನ. ಈಗ ನಮಗೆ ಎಲ್ಲವೂ ಅಂದರೆ ಪಕ್ಕದ ರಾಜ್ಯದಲ್ಲಿ ನಡೆಯುವ ಘಟನೆಯೂ ಇಂಗ್ಲಿಶ್ ಕಾಪಿಯ ಮೂಲಕ ತಲುಪಬೇಕು. ಹಾಗಾಗಿ ಕನ್ನಡ ಇತರ ಭಾಷೆಗಳೊಡನೆ ಸಮಾನತೆಯ ಸಂಬಂಧವನ್ನು ಕಾಯ್ದುಕೊಳ್ಳುವ ಭರದಲ್ಲಿ ಆಯ್ದುಕೊಂಡ ದಾರಿಯನ್ನು ಕುರಿತು ಈಗ ಮರಳಿ ಪರ್ಯಾಲೋಚಿಸ ಬೇಕಾಗಿದೆ.

ಆದರೆ ಭಾಷೆಗಳ ನಡುವಣ ಗಡಿಗೆರೆಗಳು ಕಾಲ್ಪನಿಕವೆಂದು ಗಮನಿಸಿದ್ದೇವೆ. ಕಳೆದ ಹಲವು ದಶಕಗಳಿಂದ ಕನ್ನಡಕ್ಕೆ ಲಭ್ಯವಾಗುತ್ತಿರುವ ಅನ್ಯಭಾಷೆಯ ಅನುಭವಗಳ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಚಲನಚಿತ್ರಗಳು ಒಳ್ಳೆಯ ನಿದರ್ಶನಗಳು. ಹಿಂದಿ, ತಮಿಳು, ತೆಲುಗು ಚಲನಚಿತ್ರಗಳು ಕನ್ನಡಿಗರಿಗೆ ನೋಡಸಿಗುತ್ತಿವೆ. ಇವುಗಳ ಪ್ರೇಕ್ಷಕರು ಕೇವಲ ಆಯಾಭಾಷಿಕರಷ್ಟೇ ಅಲ್ಲ. ಈ ಹೊತ್ತಿನ ಟಿ.ವಿ.ವಾಹಿನಿಗಳ ಬಗೆಗೆ ನಡೆದ ಸಮೀಕ್ಷೆಯೊಂದರಂತೆ ಈ ಅನ್ಯಭಾಷೆಯ ಚಲನಚಿತ್ರಗಳನ್ನು ಟಿ.ವಿ. ಕಾರ್ಯಕ್ರಮಗಳನ್ನು ನೋಡುವವರಲ್ಲಿ ಕನ್ನಡ ಪ್ರಥಮ ಭಾಷಿಕರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಎಂಟನೇ ದಶಕದಿಂದ ಈಚೆಗೆ ಕಳೆದ ಟೆಲಿವಿಜನ್ ಜಾಲದ ಪರಿಣಾಮವಾಗಿ ಕನ್ನಡಿಗರ ಹಿಂದಿ ಭಾಷೆಯ ಗ್ರಹಿಕೆಯ ಕೌಶಲಗಳು ಮೊದಲಿಗಿಂತ ಹೆಚ್ಚಾಗಿವೆ. ಈ ಮಾತನ್ನು ತಮಿಳು ಮತ್ತು ತೆಲುಗು ಭಾಷೆಗಳಿಗೂ ವಿಸ್ತರಿಸಿಸಬಹುದು. ಇಲ್ಲಿ ಕೇವಲ ಮನೋರಂಜನೆಯ ನೆಲೆ ಮಾತ್ರ ಕೆಲಸ ಮಾಡುತ್ತಿಲ್ಲ.

ಈ ಎರಡು ಪ್ರವೃತ್ತಿಗಳನ್ನು ನಾವು ಒಟ್ಟಿಗೆ ಇರಿಸಿ ವಿಶ್ಲೇಷಿಸಬೇಕಾಗಿದೆ. ಮೊದಲನೆಯದು ಔಪಚಾರಿಕ ನೆಲೆಯಲ್ಲಿ ಭಾರತೀಯ ಭಾಷೆಗಳನ್ನೆಲ್ಲ್ಲ ನಿರಾಕರಿಸಿ ಕೇವಲ ಇಂಗ್ಲಿಶ್‌ಗೆ ಮನ್ನಣೆಯನ್ನು ನೀಡಿರುವುದು. ಎರಡನೆಯದು ಇದಕ್ಕೆ ತನ್ನ ವಿರುದ್ಧವೆಂಬಂತೆ ಅನೌಪಚಾರಿಕ ನೆಲೆಯಲ್ಲಿ ಅನ್ಯ ಭಾರತೀಯ ಭಾಷೆಗಳ ಗ್ರಹಿಕೆಯ ಕೌಶಲಗಳನ್ನು ವಿಸ್ತರಿಸಿಕೊಳ್ಳುತ್ತಿರುವುದು. ಇದು ತೋರಿಕೆಯ ವೈರುಧ್ಯ ಇರಬಹುದೇ ಅಥವಾ ಔಪಚಾರಿಕ ಮತ್ತು ಅನೌಪಚಾರಿಕಗಳನ್ನು ನಾವು ವಿಭಜಿಸಿ ಕೊಳ್ಳುವ ಕ್ರಮದಲ್ಲೇ ಈ ತಾರತಮ್ಯಕ್ಕೆ ಅವಕಾಶ ಇದೆಯೇ ಯೋಚಿಸಬೇಕಾಗಿದೆ.

ಭಾಷಾವಾರು ಪ್ರಾಂತ ವಿಭಜನೆ ಆದ ಮೇಲೆ ಭಾರತೀಯ ಭಾಷೆಗಳ ನಡುವೆ ಕೊಡುಕೊಳೆಗಳು ಅಧಿಕ ಪ್ರಮಾಣದಲ್ಲಿ ನಡೆಯಬೇಕು ಎಂಬ ಅಪೇಕ್ಷೆ ಮೂಡಿದ್ದು ಸಹಜ. ಜನರು ತಮ್ಮ ಸಾಮಾಜಿಕ, ಆರ್ಥಿಕ ಮತ್ತು ವೈಯಕ್ತಿಕ ಕಾರಣಗಳಿಂದಾಗಿ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕ ಬೆಳೆಸಿದ್ದಾರೆಯೇ ಹೊರತು ಸಾರ್ವಜನಿಕ ವಲಯಗಳಲ್ಲಿ ಇಂತಹ ಸಂಪರ್ಕಗಳು ಇಲ್ಲವೆನ್ನುವಷ್ಟು ಕಡಿಮೆ. ಆಡಳಿತದಲ್ಲಿ, ನ್ಯಾಯಾಂಗದಲ್ಲಿ, ಮಾಧ್ಯಮಗಳಲ್ಲಿ ಮತ್ತು ವಾಣಿಜ್ಯ ವ್ಯವಹಾರಗಳಲ್ಲಿ ಭಾರತೀಯ ಭಾಷೆಗಳು ಸಮೀಪವಾಗುತ್ತಿಲ್ಲ. ಕರ್ನಾಟಕದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಹಲವು ಸಾಮಾಜಿಕ ಕಾರಣಗಳಿಂದ ಭಾಷಾ ಸಮುದಾಯಗಳು ಕರ್ನಾಟಕದೊಳಗೆ ನೆಲೆನಿಂತ ಪ್ರಸಂಗಗಳನ್ನು ಹೊರತುಪಡಿಸಿದರೆ ಉಳಿದಂತೆ ತಾತ್ಕಾಲಿಕವಾಗಿ ಕರ್ನಾಟಕಕ್ಕೆ ಬಂದು ಹೋಗುವ ಅನ್ಯಭಾಷಿಕರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಇವರ ಕರ್ನಾಟಕ ಭೇಟಿಯ ಉದ್ದೇಶ ಹಲವಾರು. ಕೆಲವರು ಜೀವನ ನಿರ್ವಹಣೆಗಾಗಿ ಮತ್ತೆ ಕೆಲವರು ವ್ಯವಹಾರಕ್ಕಾಗಿ, ಉಳಿದವರು ಪ್ರವಾಸಕ್ಕಾಗಿ ಕರ್ನಾಟಕಕ್ಕೆ ಬರುತ್ತಾರೆ. ಇವರು ತಮ್ಮ ನೆಲೆನಿಂತ ಅವಧಿಯಲ್ಲಿ ತಂತಮ್ಮ ಭಾಷೆಯಲ್ಲಿ ಇಲ್ಲವೇ ಇಂಗ್ಲಿಶ್ ಅಥವಾ ಹಿಂದಿಯಲ್ಲಿ ತಮ್ಮ ಸಂಪರ್ಕವನ್ನು ಸಾಧಿಸುತ್ತಾರೆ. ಈ ಪರಿಸ್ಥಿತಿಯನ್ನು ಕನ್ನಡಿಗರ ದುರ್ಬಲತೆಯೆಂದು ಇದಕ್ಕೆ ಅವರ ಅತೀ ಸೌಜನ್ಯವೇ ಕಾರಣವೆಂದು ವ್ಯಾಖ್ಯಾನಿಸುವರಿದ್ದಾರೆ. ಆದರೆ ಭೇಟಿ ಮಾಡಿದ ಜನರಾಗಲೀ ಅವರೊಡನೆ ವ್ಯವಹರಿಸುವ ಜನರಾಗಲೀ ಭಾಷೆಯನ್ನು ಒಂದು ಸಮಸ್ಯೆಯನ್ನಾಗಿ ಪರಿಗಣಿಸಿಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ಇತರ ಭಾಷೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಕಳೆದ ಐವತ್ತು ವರ್ಷದ ಒಂದು ಅಸಹಜ ಬೆಳವಣಿಗೆ ಎಂದು ತಿಳಿಯಬೇಕಾಗಿದೆ. ಇದರಿಂದಾಗಿ ಆ ಭಾಷೆಯನ್ನಾಡುವ ಸಮುದಾಯಗಳು ಕರ್ನಾಟಕದ ಸಂಸ್ಕೃತಿ ಮಾನಸದಿಂದ ದೂರವೇ ಉಳಿದಿದ್ದಾರೆ. ಹೀಗೆ ದೂರ ಉಳಿದಿರುವುದು ಪರೋಕ್ಷವಾಗಿ ಕನ್ನಡ ಭಾಷಿಕರ ಪ್ರತ್ಯೇಕತೆಯನ್ನು ದೃಢೀಕರಿಸುತ್ತಿದೆ. ಅಂದರೆ ಇವರು ತಮ್ಮ ದೇಶವಾಸಿಗಳೊಡನೆ ವ್ಯವಹರಿಸಲು ಎಷ್ಟೋ ವೇಳೆ ತಮ್ಮಿಬ್ಬರದೂ ಅಲ್ಲದ ಮೂರನೆಯ ಭಾಷೆಯೊಂದನ್ನು ಅವಲಂಬಿಸಬೇಕಾಗಿದೆ. ಇದು ಕೇವಲ ವ್ಯವಹಾರದ ಸಮಸ್ಯೆಯಷ್ಟೇ ಅಲ್ಲ. ಸಾಂಸ್ಕೃತಿಕವಾಗಿಯೂ ಕನ್ನಡ ಒಂದು ದ್ವೀಪವಾಗುವುದು ಅನಿವಾರ್ಯವಾಗಿದೆ. ಈ ಸಮಸ್ಯೆ ಕನ್ನಡಕ್ಕೇ ವಿಶಿಷ್ಟವಾದುದಲ್ಲ, ಆದರೆ ಅದರ ಪರಿಣಾಮ ಮಾತ್ರ ಇಲ್ಲಿ ಕಣ್ಣಿಗೆ ರಾಚುವಂತಿದೆ.