ಕನ್ನಡದ ಪದರಚನೆಯಲ್ಲಿ ಅಗಿರುವ ಪಲ್ಲಟಗಳನ್ನು ನಾವೀಗ ಅಭ್ಯಾಸ ಮಾಡಬೇಕು. ಪದರಚನೆಯ ಕೆಲವು ನಿಯಮಗಳು ಈಗ ಬದಲಾಗಿವೆ. ವಿಭಕ್ತಿ ಪ್ರತ್ಯಯಗಳನ್ನು ನಾಮಪದಗಳಿಗೆ ಹತ್ತಿಸುವಾಗ ಇದ್ದ ನಿಯಮಗಳು ಕೆಲವು ಬದಲಾಗುತ್ತವೆ. ಚತುರ್ಥಿ ವಿಭಕ್ತಿ ಪ್ರತ್ಯಯಗಳಲ್ಲಿ ಒಂದಾದ ಗೆ ಪ್ರತ್ಯಯವೂ ಸಾಮಾನ್ಯವಾಗಿ ಈಗ ನಮಗೆ ಪರಿಚಿತವಿರುವ ನಿಯಮದಂತೆ ಎಕಾರ ಮತ್ತು ಇಕಾರ(ಪೂರ್ವಸ್ವರಗಳು)ಗಳಿಂದ ಕೊನೆಯಾಗುವ ಪದಗಳಿಗೆ ಮಾತ್ರ ಸೇರುತ್ತವೆ. ಆದರೆ ಈಗ ಈ ಪ್ರತ್ಯಯವನ್ನು ಬೇರೆ ಎರಡು ಸಂದರ್ಭಗಳಲ್ಲಿ ಬಳಸುತ್ತಿದ್ದೇವೆ. ಒಂದು: ವ್ಯಂಜನಾಂತ ಪದಗಳಿಗೆ ಚತುರ್ಥಿ ವಿಭಕ್ತಿ ಪ್ರತ್ಯಯವಾಗಿ ಈ ಗೆ ಪ್ರತ್ಯಯ ಸೇರುತ್ತದೆ. ಕನ್ನಡದ ಯಾವುದೇ ದಿನಪತ್ರಿಕೆಯನ್ನು ತೆರೆದು ನೋಡಿದರೂ ಪ್ರತಿ ದಿನವೂ ನೂರಾರೂ ಇಂತಹ ಪ್ರಯೋಗಗಳು ನಮಗೆ ದೊರಕುತ್ತವೆ. ಉದಾಹರಣೆಗೆ ಲಂಡನ್‌ಗೆ, ಇರಾಕ್‌ಗೆ, ಜಪಾನ್‌ಗೆ, ಬ್ಯಾಟ್‌ಗೆ, ಬಾಲ್‌ಗೆ ಹೀಗೆ ಹಲವಾರು. ಇಲ್ಲಿ ಈ ಹಿಂದೆ ಇದ್ದ ಇನ್ನೊಂದು ನಿಯಮ ಬಳಕೆಯಿಂದ ಜಾರಿ ಹೋಗಿರುವುದು ಗಮನಿಸಬೇಕಾದ ವಿಷಯ. ಸಾಮಾನ್ಯವಾಗಿ ವ್ಯಂಜನಾಂತ ಪದಗಳನ್ನು ಕನ್ನಡಕ್ಕೆ ಎರವಲು ಪಡೆದಾಗ ಆ ಪದಗಳನ್ನು ಸ್ವರಾಂತ ಮಾಡಿಕೊಂಡು ಅನಂತರ ಅಗತ್ಯ ಬಿದ್ದರೆ ಚತುರ್ಥಿ ವಿಭಕ್ತಿ ಪ್ರತ್ಯಯ ಹತ್ತಿಸಬೇಕಿತ್ತು. ಸ್ವರಾಂತ ಮಾಡಬೇಕೆಂದರೆ ಉಕಾರ ಸೇರ್ಪಡೆಯಾಗುತ್ತಿತ್ತು. ಈ ಉಕಾರ ಸೇರುವಾಗ ಕೊನೆಯ ವ್ಯಂಜನದ ಹಿಂದಿನ ಸ್ವರ ಕನ್ನಡಿಗರ ಉಚ್ಚಾರಣೆಯಲ್ಲಿ ಹ್ರಸ್ವವಾಗಿದ್ದರೆ ಆಗ ಆ ವ್ಯಂಜನವು ದ್ವಿತ್ವಗೊಂಡು ಅನಂತರ ಉಕಾರ ಸೇರುತ್ತದೆ. ಉದಾಹರಣೆಗೆ- ಬಸ್-ಬಸ್ಸು, ಪೆನ್-ಪೆನ್ನು, ಕಿಟ್-ಕಿಟ್ಟು ಇತ್ಯಾದಿ. ಆದರೆ ಕಾರ್-ಕಾರು, ಬ್ಯಾಟ್-ಬ್ಯಾಟು ಆಗುತ್ತವೆ. ಹೀಗೆ ಉಕಾರ ಸೇರಿದ ಮೇಲೆ ಚತುರ್ಥಿವಿಭಕ್ತಿ ಪ್ರತ್ಯಯವನ್ನು ಸೇರಿಸಬೇಕಾಗಿ ಬಂದರೆ ಉಕಾರವನ್ನು ಲೋಪಗೊಳಿಸಿ ಅದಕ್ಕೆ ಇಗೆ ಪ್ರತ್ಯಯವನ್ನು ಸೇರಿಸುವುದುಂಟು. ಉದಾಹರಣೆಗೆ ಕಾಲು-ಕಾಲಿಗೆ, ಕೋಲು-ಕೋಲಿಗೆ, ಹಾಡು-ಹಾಡಿಗೆ ಇದ್ದಂತೆ ಬ್ಯಾಟು-ಬ್ಯಾಟಿಗೆ, ಗೇಟು-ಗೇಟಿಗೆ ಆಗುತ್ತಿತ್ತು. ನಾವು ಇಲ್ಲಿ ಗುರುತಿಸಿರುವಂತೆ ಕಳೆದ ಕೆಲವು ದಶಕಗಳಲ್ಲಿ ಆಗಿರುವ ಬದಲಾವಣೆ ಎಂದರೆ ಈ ಪ್ರಚಲಿತ ನಿಯಮ ಕಳೆದುಹೋಗಿ ಮೂಲ ವ್ಯಂಜನಾಂತ ರೂಪಕ್ಕೆ ನೇರವಾಗಿ ಗೆಕಾರವನ್ನು ಸೇರಿಸಲಾಗುತ್ತದೆ. ಉದಾಹರಣೆಗೆ ಗೇಟ್‌ಗೆ, ಬ್ಯಾಟ್‌ಗೆ ಇದು ಉಚ್ಚಾರಣೆ ಮತ್ತು ಬರಹ ಎರಡರಲ್ಲೂ ಕಾಣಿಸಿಕೊಳ್ಳತೊಡಗಿದೆ. ನಾವು ಧ್ವನಿ ಪಲ್ಲಟಗಳ ನೆಲೆಯಲ್ಲಿ ಗುರುತಿಸಿದ ನಿಯಮಗಳೇ ಇಲ್ಲೂ ಕೂಡ ಪ್ರವೃತ್ತವಾಗಿವೆ.

ಗೆ ಎಂಬ ಚತುರ್ಥಿ ವಿಭಕ್ತಿ ಪ್ರತ್ಯಯ ಸಾಮಾನ್ಯವಾಗಿ ಅಕಾರಾಂತ ಪದಗಳಿಗೆ ಸೇರುವುದಿಲ್ಲ. ಮರ, ಪುಸ್ತಕ, ಹಸ್ತ, ಮುಂತಾದ ಮಾನವೇತರ ನಾಮಪದಗಳಿಗೆ ಚತುರ್ಥಿ ಪ್ರತ್ಯಯವಾಗಿ ಕ್ಕೆ ಎಂಬ ಪ್ರತ್ಯಯ ಸೇರುತ್ತದೆ. ಮರಕ್ಕೆ, ತೋಟಕ್ಕೆ, ಪುಸ್ತಕಕ್ಕೆ, ಹಸ್ತಕ್ಕೆ ಎಂಬಂತೆ ಆದರೆ ಮಾನವ ನಾಮಪದಗಳು ಅಕಾರಾಂತವಾಗಿದ್ದಾಗ ಮೊದಲು ಲಿಂಗವಾಚಿ ಪ್ರತ್ಯಯವನ್ನು ಪಡೆದು ಅನಂತರ ಇಗೆ ಎಂಬ ಪ್ರತ್ಯಯವನ್ನು ಸೇರಿಸುತ್ತದೆ. ಉದಾಹರಣೆಗೆ ರಾಮ ಎಂಬ ಅಕಾರಾಂತ ಪದಕ್ಕೆ ಮೊದಲು ಪುಲ್ಲಿಂಗವಾಚಿ ಅನ್ ಪ್ರತ್ಯಯವನ್ನು ಸೇರಿಸಿ ಅನಂತರ ಇಗೆ ಕೂಡಿಸಿದರೆ ರಾಮನಿಗೆ ಎಂಬ ರೂಪ ಸಿಗುತ್ತದೆ. ಈ ನಿಯಮ ಕೂಡ ಬದಲಾಗುತ್ತಿದೆ. ವ್ಯಕ್ತಿವಾಚಿ ನಾಮಪದಗಳಲ್ಲಿ ಅಕಾರಾಂತ ಪದಗಳೆಂದರೆ ಅವುಗಳಿಗೆ ನೇರವಾಗಿ ಗೆ ಪ್ರತ್ಯಯ ಸೇರುತ್ತದೆ. ಉದಾಹರಣೆಗೆ ರಾಮಗೆ-ಸೀತಗೆ ಈ ಹೊಸ ನಿಯಮವು ಸಾರಸಗಟಾಗಿ ಎಲ್ಲಾ ಅಕಾರಾಂತ ನಾಮಪದಗಳಿಗೂ ಅನ್ವಯಿಸುವಂತಿದೆ. ಇದರಿಂದ ಕೆಲವು ಗೊಂದಲಗಳು ಉಂಟಾಗುವ ಸಾಧ್ಯತೆಗಳು ಇವೆ. ಅದರಲ್ಲೂ ಈ ಪ್ರತ್ಯಯ ಪಡೆಯುತ್ತಿರುವ ವ್ಯಕ್ತಿಗೆ ಸಾಮಾಜಿಕವಾಗಿ ಹೆಚ್ಚು ಗೌರವವಿದ್ದರೆ ಆಗ ಹೀಗೆ ಗೆ ಪ್ರತ್ಯಯ ಸೇರಿಸುವ ಮೊದಲು ಗೌರವಸೂಚಕವಾದ ಅವರು ಎಂಬ ಪದವನ್ನು ಸೇರಿಸಬೇಕೆ ಬೇಡವೆ ಎಂಬ ಜಿಜ್ಞಾಸೆ ಮೊದಲಾಗುತ್ತದೆ. ಉದಾಹರಣೆಗೆ ಸಿದ್ಧರಾಮಯ್ಯ ಎಂಬ ನಾಮಪದಕ್ಕೆ ಗೆ ಪ್ರತ್ಯಯವನ್ನು ಸೇರಿಸಿದ್ದಾಗ ಸಿದ್ಧರಾಮಯ್ಯ ನವರಿಗೆ ಎನ್ನಬೇಕೋ ಅಥವಾ ಸಿದ್ಧರಾಮಯ್ಯಗೆ ಎನ್ನಬೇಕೋ ಎಂಬ ಗೊಂದಲ ಉಂಟಾಗುತ್ತದೆ. ಕನ್ನಡ ಪತ್ರಿಕೆಗಳು ಈ ನೆಲೆಯಲ್ಲಿ ಇನ್ನೂ ಖಚಿತವಾದ ನಿಲುವನ್ನು ತಳೆದಿಲ್ಲವೆಂದು ತೋರುತ್ತದೆ. ಸಿದ್ಧರಾಮಯ್ಯಗೆ, ಯಡಿಯೂರಪ್ಪಗೆ ಎಂಬ ರೂಪ ಗಳನ್ನು ನಾವು ಪತ್ರಿಕೆಗಳಲ್ಲಿ ಕಂಡರೂ ದೇವೆಗೌಡಗೆ ಎಂಬ ರೂಪವನ್ನು ಗಮನಿಸಿಲ್ಲ. ಸಾಮಾನ್ಯವಾಗಿ ದೇವೇಗೌಡರಿಗೆ ಎಂಬ ರೂಪ ಬಳಕೆಯಲ್ಲಿದೆ. ಅಂದರೆ ಈ ಗೆ ಪ್ರತ್ಯಯ ಸೇರುವ ಹೊಸ ವಿಧಾನ ಕೇವಲ ಪದಾಂತ್ಯದ ಧ್ವನಿಯನ್ನು ಮಾತ್ರ ಅವಲಂಬಿಸಿಲ್ಲ ಎಂದಾಯಿತು.

ಕನ್ನಡದಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಇದೆಯೋ ಇಲ್ಲವೋ ಅಥವಾ ಈಗ ಅದರ ಬದಲು ಪೂರ್ಣವಾಗಿ ಸ್ವತಂತ್ರವಾಗಿರುವ ಪದಗಳನ್ನು ಬಳಸುತ್ತಿದ್ದೇವೆಯೋ ಎಂಬುದು ಚರ್ಚೆಯ ವಿಷಯ. ಆ ವಿಭಕ್ತಿಯ ಕೆಲಸ ಮಾಡಲು ಒಳಗೆ ಮತ್ತು ಅಲ್ಲಿ ಎಂಬ ಪದೋತ್ತರಿಗಳನ್ನು  ಬಳಸುತ್ತಿದ್ದೇವೆ. ಈ ಎರಡು ರೂಪಗಳು ಸ್ವತಂತ್ರವಾಗಿಯೂ ಬಳಕೆಯಾಗುತ್ತವೆ. ಆದ್ದರಿಂದ ಅವುಗಳನ್ನು ಪ್ರತ್ಯಯಗಳೆಂದು ಹೇಳುವುದು ಕಷ್ಟ. ಆದರೆ ನಮ್ಮ ಗಮನ ಸೆಳೆಯಬೇಕಾದ ಮತ್ತೊಂದು ಅಂಶವೆಂದರೆ ಈ ಪದೋತ್ತರಿಗಳ ಬದಲು ಮತ್ತೊಂದು ಪ್ರತ್ಯಯ ಈಗ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದು ಆಗ ಎನ್ನುವ ಪ್ರತ್ಯಯ. ಚಾರಿತ್ರಿಕವಾಗಿ ಆಗ ಎಂಬ ರೂಪ ಆಗಂ ಎಂಬ ಪದದಿಂದ ನಿಷ್ಪನ್ನವಾಗಿದೆ. ಆಗಂ ಎಂದರೆ ಒಳಗೆ ಎಂದರ್ಥ. ದ್ರಾವಿಡದ ಜ್ಞಾತಿ ಭಾಷೆಗಳಲ್ಲಿ ಕೆಲವು ಕಡೆ ಆಗಂ ಉಳಿದುಕೊಂಡಿದೆ. ಈ ರೂಪದಿಂದಲೇ ಬೆಳೆದುಬಂದ ಆಗ ರೂಪ ಪ್ರತ್ಯಯವಾಗಿ ತುಂಗಭದ್ರೆಯ ಉತ್ತರದ ಕರ್ನಾಟಕದಲ್ಲಿ ಬಹು ವ್ಯಾಪಕವಾಗಿ ಬಳಕೆಯಲ್ಲಿದೆ. ಮನಿಯಾಗ, ಊರಾಗ, ತಲಿಯಾಗ, ಹೊಲದಾಗ, ಮಾರ್ಕೆಟ್‌ನಾಗ, ಬಸ್‌ನಾಗ ಈ ರೂಪಗಳು ಈ ಉಪಭಾಷೆಗಳಲ್ಲಿ ಮಾತ್ರ ಇದ್ದವು. ಆದರೆ ಈಚೆಗೆ ಈ ಪ್ರತ್ಯಯ ತುಂಗಭದ್ರೆಯ ದಕ್ಷಿಣದ ಕಡೆ ಗೋಚರಿಸಲು ಪ್ರಾರಂಭಿಸಿದೆ. ಈ ಚಲನೆ ನಿಧಾನಗತಿಯಲ್ಲಿದೆ. ಹಾಡುಗಳಲ್ಲಿ ಅದು ಕಾಣತೊಡಗಿದೆ. ಮುಂದಿನ ದಶಕಗಳಲ್ಲಿ ಈ ಚಲನೆ ವ್ಯಾಪಕ ಗೊಂಡು ಈ ಪ್ರತ್ಯಯ ಕನ್ನಡದ ಸಪ್ತಮಿ ವಿಭಕ್ತಿ ಪ್ರತ್ಯಯವಾಗಿ ನೆಲೆಗೊಳ್ಳುವುದೇ ಎಂಬುದನ್ನು ಕಾಯ್ದುನೋಡಬೇಕು.

ಕನ್ನಡದ ಸಂಧಿಗಳನ್ನು ಲೋಪ, ಆಗಮ ಮತ್ತು ಆದೇಶ ಎಂದು ವಿಭಜಿಸುತ್ತೇವೆ. ಕನ್ನಡ ಪದಕ್ಕೆ ಕನ್ನಡ ಪದವೇ ಪರವಾದಾಗ ಈ ಸಂಧಿಗಳು ನಡೆಯುತ್ತವೆ. ಉತ್ತರ ಪದ ಸ್ವರದಿಂದ ಮೊದಲಾದರೆ ಲೋಪ ಇಲ್ಲವೆ ಆಗಮ ಸಂಧಿಗಳು ವ್ಯಂಜನ ಇದ್ದರೆ ಸಾಮಾನ್ಯವಾಗಿ ಆದೇಶ ಸಂಧಿಯು ನಡೆಯುವುದು. ಇದು ಅಷ್ಟು ಖಚಿತವಾದ ನಿಯಮವಾಗಿ ಉಳಿದಿಲ್ಲ(ಪೂರ್ವಪದದ ಕೊನೆಯ ಧ್ವನಿಯು ಯಾವುದು ಎನ್ನುವುದೂ ಕೂಡ ಮುಖ್ಯ). ಏಕೆಂದರೆ ಈಚಿನ ದಶಕಗಳಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಂಧಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೀಗಿದ್ದಾಗ ಯಾವ ಭಾಷೆಯ ಸಂಧಿ ನಿಯಮವನ್ನು ಅನುಸರಿಸಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಉದಾಹರಣೆಗೆ ಊಟೋಪಚಾರ ಎಂಬ ರಚನೆಯನ್ನೇ ನೋಡೋಣ. ಇಲ್ಲಿ ಊಟ ಪೂರ್ವಪದ. ಉತ್ತರಪದ  ಉಪಚಾರ ಸಂಸ್ಕೃತದ ಪದ. ಊಟೋಪಚಾರ ಪದದಲ್ಲಿ ಸಂಸ್ಕೃತದ ಗುಣಸಂಧಿಯ ನಿಯಮವನ್ನು ಪಾಲಿಸಲಾಗಿದೆ. ಅಕಾರಕ್ಕೆ ಉಕಾರ ಪರವಾದಾಗ ಓಕಾರ ಬರುವುದು ಈ ಸಂಧಿಯ ಒಂದು ಸಾಧ್ಯತೆ. ಅದೇ ಇಲ್ಲೂ ನಡೆದಿದೆ.

ಇಂತಹ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಸಂಸ್ಕೃತ ಸಂಧಿಯ ನಿಯಮಗಳನ್ನೇ ಪಾಲಿಸಲಾಗುತ್ತದೆ ಎಂದು ತಿಳಿಯಬೇಕೋ ಅಥವಾ ಬೇರೆ ಯಾವುದೋ ಒಂದು ಪದರಚನೆಯ ಮಾದರಿಯನ್ನು ಅನುಕರಿಸಿ ಎಂಬ ಹೊಸ ರೂಪಗಳನ್ನು ಸೃಷ್ಟಿಸುತ್ತಾರೆ ಎಂದು ತಿಳಿಯಬೇಕೋ ಈ ಪ್ರಶ್ನೆ ಎದುರಾಗುತ್ತದೆ. ಇಂತಹ ಪದರಚನೆಗಳು ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಬಳಕೆಯಾಗುವುದನ್ನು ಗಮನಿಸುತ್ತೇವೆ. ಅಲ್ಲಿ ಸಂದರ್ಭದ ತುರ್ತಿನಿಂದ ಹೊಸ ಪದಗಳು ರಚನೆಯಾಗಿ ಬಳಕೆಯಾಗುತ್ತವೆ. ಸಂಧಿ ನಿಯಮಗಳ ಅನ್ವಯವು ಅಲ್ಲಿನ ಮುಖ್ಯ ಕಾಳಜಿಯಾಗಿ ತೋರುವುದಿಲ್ಲ. ಹಾಗಾಗಿ ಅಂತಹುದೇ ರೂಪಗಳನ್ನು ಮಾದರಿಯಾಗಿ ಇರಿಸಿಕೊಂಡು ಅದರ ಹೋಲಿಕೆಯ ಮೇಲೆ ಹೊಸ ಪದಗಳನ್ನು ಪಡೆಯಲಾಗುತ್ತದೆ. ಇದು ಹೆಚ್ಚು ಸಾಧುವಾದ ವಿವರಣೆಎಂದು ತಿಳಿಯಬೇಕು.ಇಲ್ಲದಿದ್ದರೆ ಕನ್ನಡೋತ್ಸವ, ಹಸುರೋತ್ಸವ ಎಂಬ ರೂಪಗಳನ್ನು ಬಳಸುವುದು ಸಾಧ್ಯವಾಗುವುದಿಲ್ಲ.

ಇದೇ ಬಗೆಯಲ್ಲಿ ಇನ್ನೂ ಬೇರೆ ಬೇರೆ ಹೊಸ ಪದಗಳನ್ನು ರೂಪಿಸುವುದನ್ನು ನೋಡುತ್ತೇವೆ. ಅದರಲ್ಲೂ ನಿಷೇಧ ರೂಪಗಳನ್ನು ಅಥವಾ ವಿರುದ್ಧ ಪದಗಳನ್ನು ಪಡೆಯಲು ಸಂಸ್ಕೃತದ ಉಪಸರ್ಗ ಅಥವಾ ಪೂರ್ವ ಪ್ರತ್ಯಯವನ್ನು ಬಳಸಲಾಗುತ್ತದೆ. ಸಂಸ್ಕೃತದ ಅಂಥಾ ಎರಡು ಪ್ರತ್ಯಯಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಒಂದು ಅ/ಅನ್, ಇನ್ನೊಂದು ನಿಃ/ನಿರ್/ನಿಶ್/ನಿಷ್. ಇವೆರಡು ಬೇರೆ ಬೇರೆ ಕೆಲಸಗಳನ್ನು ಮಾಡುವ ಪ್ರತ್ಯಯಗಳು. ಗುಣವನ್ನು ಅಲ್ಲಗಳೆಯುವುದು ಅ ಪ್ರತ್ಯಯದ ಕೆಲಸ. ಆದರೆ ಗುಣ ಇಲ್ಲ ಎನ್ನುವುದನ್ನು ಹೇಳುವುದು ನಿರ್ ಪ್ರತ್ಯಯದ ಕೆಲಸ. ಉದಾಹರಣೆಗೆ ಅಚಲ ಮತ್ತು ನಿಶ್ಚಲ ಎಂಬ ಎರಡು ರೂಪಗಳನ್ನು ನೋಡೋಣ. ಚಲಿಸಬಹುದಾದುದ್ದು ಚಲ. ಚಲಿಸಲಾಗದ್ದು ಅಂದರೆ ಎಂದೆಂದೂ ಅಲುಗಾಡದೇ ಇರುವಂತದ್ದು ಅಚಲ. ಆದರೆ ಚಲಿಸುವ ಸಾಧ್ಯತೆ ಇದ್ದು ಈಗ ಚಲನೆ ಇಲ್ಲದೆ ಸುಮ್ಮನಿರುವುದು ನಿಶ್ಚಲ. ಆದರೆ ಕನ್ನಡದಲ್ಲಿ ಈ ಎರಡು ಪ್ರತ್ಯಯಗಳನ್ನು ಬೇರೆ ಬೇರೆಯಾಗಿ ಇರಿಸಿಕೊಳ್ಳುವ ಬದಲಿಗೆ ಇವೆರಡು ಪ್ರತ್ಯಯಗಳ ಕೆಲಸವನ್ನು ಒಂದೇ ಪ್ರತ್ಯಯದಿಂದ ನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಅಂದರೆ ಅ ಮತ್ತು ನಿರ್ಗಳನ್ನು ಅ ಪ್ರತ್ಯಯದ ವ್ಯಾಪ್ತಿಯಲ್ಲೇ ಇರಿಸಲಾಗಿದೆ. ಸಂಸ್ಕೃತದಿಂದ ಎರವಲು ಪಡೆಯದೆ ಕನ್ನಡದಲ್ಲೇ ಹೊಸದಾಗಿ ನಿಷೇದ ರೂಪಗಳನ್ನು ತಯಾರು ಮಾಡಿಕೊಳ್ಳಬೇಕಾಗಿ ಬಂದಾಗ ಅ ಪ್ರತ್ಯಯವನ್ನು ಮಾತ್ರ ಬಳಸುತ್ತಾರೆ. ಹೀಗೆ, ಈ ಪ್ರತ್ಯಯ ಸೇರಬೇಕಾದ ರೂಪ ಸಂಸ್ಕೃತದ್ದೇ ಆಗಿರಬೇಕು ಎಂಬ ನಿಯಮವನ್ನು ಇಟ್ಟುಕೊಂಡಿಲ್ಲ. ಕನ್ನಡದ ಪದಗಳಿರಲಿ, ಕೆಲವೊಮ್ಮೆ ಅನ್ಯ ಮೂಲದ ಪದಗಳಿಗೂ ಈ ಪ್ರತ್ಯಯವನ್ನು ಹತ್ತಿಸುವುದುಂಟು. ಉದಾಹರಣೆಗೆ ಹಿಂದಿಯಲ್ಲದ್ದು ಎಂದು ಹೇಳಬೇಕಾದಾಗ ಅಹಿಂದಿ ಎನ್ನುವುದು. ಹಾಗೆಯೇ ‘ಅದಲಿತ’ ಎಂಬ ಪದವನ್ನು ಬಳಸಲಾಗಿದೆ. ಇಂತಹ ರಚನೆಗಳನ್ನು ಗಮನಿಸಿದಾಗ ಪದರಚನೆಯ ನಿಯಮಗಳನ್ನು ಅರಿತು ಅದಕ್ಕನುಗುಣವಾಗಿ ಹೊಸ ಪದಗಳನ್ನು ರೂಪಿಸುತ್ತಿದ್ದಾರೆ ಎಂದು ತಿಳಿಯುವುದು ಕಷ್ಟ, ಬಹುಮಟ್ಟಿಗೆ ಪ್ರಚಲಿತವಿರುವ ಒಂದು ರೂಪವನ್ನು ಮಾದರಿಯಾಗಿಟ್ಟುಕೊಂಡು ಅದಕ್ಕೆ ಸಮಾನ ರಚನೆಯ ನೆಲೆಯಲ್ಲಿ ಮತ್ತೊಂದು ರೂಪವನ್ನು ಸೃಷ್ಟಿಸುವುದು ಒಂದು ಮುಖ್ಯ ಪ್ರವೃತ್ತಿಯಾಗಿದೆ. ಇತರ ವ್ಯಾಕರಣ ಮುಂತಾದ ಪ್ರತ್ಯಯಗಳನ್ನು ಬಳಸಿ ಹೀಗೆಯೇ ಹೊಸ ಪದಗಳನ್ನು ರಚಿಸುತ್ತಿರುವುದು ಮಾಧ್ಯಮಗಳಲ್ಲಿ ಢಾಳಾಗಿ ಕಂಡುಬರುವ ಪ್ರವೃತ್ತಿ.

ವಾಕ್ಯರಚನೆಯ ನೆಲೆ: ವಾಕ್ಯರಚನೆಯ ನೆಲೆಯಲ್ಲಿ ಹೊಸ ಪ್ರವೃತ್ತಿಗಳು ಕಂಡುಬರುತ್ತಿ ರುವ ಬಗೆಗೆ ನಡೆದಿರುವ ಅಧ್ಯಯನಗಳು ತೀರಾ ಕಡಿಮೆ. ಸಾಮಾನ್ಯವಾಗಿ ವಾಕ್ಯದ ಅಂತಸ್ಥ ನಿಯಮಗಳನ್ನು ಯಾರೂ ಬದಲಾಯಿಸಲಾರರು. ಆದರೆ ಆ ನಿಯಮಗಳನ್ನು ಬಳಸಿ ರಚಿಸಿದ ವಾಕ್ಯಗಳ ಹೊರ ರೂಪವನ್ನು ಅಗತ್ಯಕ್ಕನುಸಾರವಾಗಿ ಮಾರ್ಪಡಿಸಿಕೊಳ್ಳುವ ಸ್ವಾತಂತ್ರ್ಯ ಭಾಷಿಕರಿಗೆ ಇರುತ್ತದೆ. ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ಹೊಂದಿರುವ ಸಂಯೋಜಿತ ವಾಕ್ಯಗಳನ್ನು ಈಗ ಹೆಚ್ಚಿನ ಪ್ರಮಾಣದಲ್ಲಿ ಬರವಣಿಗೆಯಲ್ಲಿ ರಚಿಸಲಾಗುತ್ತಿದೆ. ಹೀಗೆ ಕ್ರಿಯಾಪದಗಳು ಹೆಚ್ಚು ಸಂಖ್ಯೆಯಲ್ಲಿ ಇರುವಾಗ ಸಾಮಾನ್ಯವಾಗಿ ಅವು ವಾಕ್ಯದಲ್ಲಿ ಬರುವ ಅನುಕ್ರಮವನ್ನು ನಿಯಂತ್ರಿಸುವ ನಿಯಮಗಳು ಕೆಲವು ಇರುತ್ತವೆ. ಸಾಮಾನ್ಯವಾಗಿ ಪೂರ್ಣ ಕ್ರಿಯಾಪದವು ವಾಕ್ಯದ ಪ್ರಧಾನ ಅಂಶವೆಂದು ನಾವು ತಿಳಿದರೂ ಸಂಯೋಜಿತ ವಾಕ್ಯಗಳಲ್ಲಿ ಗಮನ ಸೆಳೆಯಬೇಕಾದ ಅಂಶಗಳನ್ನು ವಾಕ್ಯದ ಮೊದಲಲ್ಲಿ ತಂದು ಅನಂತರ ಪ್ರಧಾನ ಕ್ರಿಯಾಪದವನ್ನು ಅದೆಷ್ಟೇ ಮುಖ್ಯವಾಗಿದ್ದರೂ ವಾಕ್ಯದ ಕೊನೆಗೆ ತರುವ ಪ್ರವೃತ್ತಿ ಈಚೆಗೆ ಹೆಚ್ಚಾಗುತ್ತಿದೆ. ನಿದರ್ಶನಕ್ಕಾಗಿ ಒಂದು ವಾಕ್ಯವನ್ನು ಗಮನಿಸಿ. ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಹತ್ಯೆಯ ಪ್ರಕರಣದ ನೆನಪು ಇನ್ನೂ ಹಸಿರಾಗಿರುವಾಗಲೇ ಮತ್ತೊಬ್ಬ ಕಾಲ್ ಸೆಂಟರ್ ಉದ್ಯೋಗಿಯನ್ನು ಕೊಲೆ ಮಾಡಲಾಗಿದೆ. ಈ ವಾಕ್ಯದಲ್ಲಿ ಈಚಿನ ಘಟನೆಯೊಂದನ್ನು ವರದಿ ಮಾಡಬೇಕಾಗಿದೆ. ಆದರೆ ಈ ಹಿಂದೆ ನಡೆದ ಘಟನೆಯೊಂದನ್ನು ವಾಕ್ಯದ ಮೊದಲಲ್ಲಿ ಉಲ್ಲೇಖಿಸಲಾಗಿದೆ. ಈ ವಾಕ್ಯದ ಉದ್ದೇಶ ಮತ್ತು ದೃಷ್ಟಿಕೋನಗಳ ಮಾತು ಪ್ರತ್ಯೇಕ ಚರ್ಚೆಯನ್ನು ಬಯಸುತ್ತದೆ. ನಮಗಿಲ್ಲಿ ಎರಡು ಕ್ರಿಯೆಗಳನ್ನು ವಾಕ್ಯ ರಚನೆಯಲ್ಲಿ ಜೋಡಿಸಿರುವ ಕ್ರಮ ಮುಖ್ಯ. ಈಚಿನ ಕನ್ನಡದಲ್ಲಿ ಈ ಬಗೆಯ ರಚನೆಗಳು ತುಂಬಾ ಹೆಚ್ಚಾಗುತ್ತಿವೆ.