ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ದೊರಕುವ ಅಧ್ಯಯನ ರಜೆಯ ಸೌಭ್ಯವನ್ನು ನಾನು ಅಕ್ಟೋಬರ್ ೨೦೦೫ ರಿಂದ ಆಗಸ್ಟ್ ೨೦೦೬ರವರೆಗೆ ಬಳಸಿಕೊಂಡೆ. ಈ ಅವಧಿಯಲ್ಲಿ ಸಿದ್ಧಗೊಂಡ ಬರವಣಿಗೆ ಇದು. ಈ ಯೋಜನಾ ವರದಿಯನ್ನು ಅಕ್ಟೋಬರ್ ೨೦೦೬ರಲ್ಲಿ ನಾನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದೆ. ಈ ಮಾತು ಹೇಳುವುದು ಅಗತ್ಯವಾಗಿದೆ. ಏಕೆಂದರೆ ಕನ್ನಡ ಭಾಷೆಗೆ ಸಂಬಂಧಿಸಿದ ಎಷ್ಟೋ ಸಂಗತಿಗಳು ಆ ಮುಂದಿನ ದಿನಗಳಲ್ಲಿ ಜರುಗಿವೆ. ೧೯೯೪ರಿಂದ ಈಚೆಗೆ, ಕನ್ನಡ ಮಧ್ಯಮದಲ್ಲಿ ಪಾಠ ಮಾಡಬೇಕೆಂಬ ಶರತ್ತನ್ನು ಒಪ್ಪಿ ಮನ್ನಣೆ ಪಡೆದು ಕಾರ್ಯಾರಂಭ ಮಾಡಿದ್ದ ಹಲವಾರು ಶಾಲೆಗಳು ಇಂಗ್ಲಿಶ್ ಮಾಧ್ಯಮದಲ್ಲಿ ಪಾಠಮಾಡುತ್ತಿರುವುದನ್ನು ಗೊತ್ತು ಮಾಡಿಕೊಂಡ ಸರಕಾರ ಅವುಗಳ ಮನ್ನಣೆಯನ್ನು ಹಿಂತೆಗೆದುಕೊಳ್ಳುವ ಆದೇಶ ಹೊರಡಿಸಿದ್ದು; ಅನಂತರ ಆ ಶಾಲೆಗಳಿಗೆ ದಂಡ ವಿಧಿಸಿ ಕನ್ನಡ ಮಾಧ್ಯಮವನ್ನು ಅಳವಡಿಸಿಕೊಳ್ಳಲು ಅವಕಾಶವನ್ನು ನೀಡುವ ತಿದ್ದುಪಡಿ ಆದೇಶವನ್ನು ನೀಡಿದ್ದು; ಎರಡನೆಯ ವಿಶ್ವಕನ್ನಡ ಸಮ್ಮೇಳನವನ್ನು ನಡೆಸಲು ಸರಕಾರ ನಿರ್ಣಯಿಸಿದ್ದು; ಕನ್ನಡ ವಿಶ್ವವಿದ್ಯಾಲಯ ಕುವೆಂಪು ಕನ್ನಡ ಸಾಪ್ಟವೇರ್‌ನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು ಇಂತಹುದೇ ಹಲವು ಸಂಗತಿಗಳು  ಅನಂತರದಲ್ಲಿ ನಡೆದಿವೆ. ಕನ್ನಡದ ಬಗೆಗೆ ಒಂದಿಲ್ಲೊಂದು ಸಂಗತಿ ದಿನದಿನವೂ ನಡೆಯುತ್ತಲೇ ಇರುತ್ತದೆ. ಹೀಗಾಗಿ, ಈ ಬರಹ ಈ ಹೊತ್ತಿನ ಎಲ್ಲ ಸಂಗತಿಗಳನ್ನೂ ಒಳಗೊಂಡಿಲ್ಲವೆಂದು ಅನ್ನಿಸುವುದು ಸಹಜ.

ಇಲ್ಲಿನ ಬರವಣಿಗೆಯ ಕ್ರಮದ ಬಗೆಗೆ ಒಂದು ಮಾತು. ಇದು ವಿವರಣೆಗಿಂತ ವಿಶ್ಲೇಷಣೆಗೆ ಒತ್ತು ಕೊಟ್ಟ ಬರವಣಿಗೆ. ಆದ್ದರಿಂದ ಮಹಿತಿಯನ್ನು ಅದರ ಆಕರಗಳನ್ನು ಒದಗಿಸುವ ಕಡೆಗೆ ಹೆಚ್ಚು ಒತ್ತನ್ನು ನೀಡಿಲ್ಲ. ಕೆಲವು ಕನ್ನಡ ಸಂಬಂಧಿ ಸಂಗತಿಗಳು ಈ ಬರವಣಿಗೆಯನ್ನು ಓದುತ್ತಿರುವವರಿಗೆ ತಿಳಿದಿರುತ್ತದೆ ಎನ್ನುವ ನಂಬಿಕೆಯಿಂದ ಬರವಣಿಗೆ ಸಾಗುತ್ತದೆ. ಸದ್ಯ ಇರುವ ವಾಗ್ವಾದಗಳನ್ನು ಮುಂದುವರೆಸುವ ಆಸಕ್ತಿ  ಈ ಬರಹಕ್ಕಿದೆ. ಕೆಲವು ಸಂಗತಿಗಳು ಎರಡು ಮೂರು ಕಡೆ ಮತ್ತೆ ಮತ್ತೆ ನಿರೂಪಿತವಾಗಿವೆ. ಇದು ಗೊತ್ತಿಲ್ಲದೆ ಆಗಿರುವುದಲ್ಲ. ಆಯಾ ಸಂದರ್ಭಕ್ಕೆ ಆ ಸಂಗತಿಗಳ ನಿರೂಪಣ ಬೇಕು ಎನ್ನಿಸಿದ್ದರಿಂದ ಅವುಗಳನ್ನು ಅಲ್ಲಿ ನಿರೂಪಿಸಲಾಗಿದೆ.

ಕನ್ನಡ ಜಗತ್ತಿನ ಕಳೆದ ಐವತ್ತು ವರ್ಷಗಳ ಕಥನಕ್ಕೆ ಹಲವು ಸಾಧ್ಯತೆಗಳಿವೆ. ಅವುಗಳಲ್ಲಿ ಒಂದು ಮಾದರಿಯನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ. ಮೊದಲ ಓದಿಗೇ ಈ ಬರವಣಿಗೆ ಕನ್ನಡಪರ ಇವೇ ಕನ್ನಡ ವಿರೋಧಿ ಎಂಬ ತುದಿಯ ಆಯ್ಕೆಗಳನ್ನು ಮಾಡಿಕೊಂಡಿವೆಂಬುದು ತಿಳಿಯುವಂತಿದೆ. ಇದು ಉತ್ಸಾಹದ ಇಲ್ಲವೇ ನಿರಾಸೆಯ ದನಿಯ ಬರವಣಿಗೆಯಲ್ಲ. ಭಾಷೆಯನ್ನು ಕುರಿತು ನಾವು ಆಡುವ ಮಾತುಗಳಲ್ಲಿ ಈಚೆಗೆ ಸಹಜವಾಗಿ ಸುಳಿಯುತ್ತಿರುವ ಈ ನಿರ್ಣಯದ ದನಿಗಳು ಇಲ್ಲಿ ಇಲ್ಲ. ಇದು ಈ ಬರವಣಿಗೆಯ ಆಯ್ಕೆಯೇ ಆಗಿದೆ. ಸುಲಭ ನಿರ್ಣಯ ಇಲ್ಲವೇ ಉತ್ತರಗಳನ್ನು ಬಯಸುವುದು ಇಂದಿನ ದಿನದ ತುರ್ತು. ಆದರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ನೆಲಯಲ್ಲಿ ಹೀಗೆ ನಿರ್ಣಯಗಳಿಗಾಗಿ ಹಪಹಪಿಸುವುದು ಅಪಾಯಕಾರಿ ದಾರಿ ಎನ್ನುವುದು ಈ ಬರಹದ ಹಿಂದಿನ ನಿಲುವಾಗಿದೆ.

ಕನ್ನಡಕ್ಕೆ ಅಪಾಯ ಬಂದಿದೆ ಎಂದು ತಿಳಿಯಲು ಅಗಾಧವಾದ ಅಧ್ಯಯನವೇನೂ ಬೇಕಾಗಿಲ್ಲ. ಅದು ದಿನದಿನದ ಸಂಗತಿಗಳಿಂದಲೇ ಕಣ್ಣಿಗೆ ರಾಚುವಂತಿದೆ. ಆದರೆ ಹೀಗಾಗಲು ಕಾರಣಗಳು ಎಲ್ಲಿವೆ ಎಂದು ತಿಳಿದುಕೊಳ್ಳುವುದು ಮಾತ್ರ ಸರಳವಲ್ಲ. ಹೀಗೆ ತಿಳಿದ ಮೇಲೆ ಪರಿಹಾರಗಳನ್ನು ಹುಡುಕುವುದು ಇನ್ನೂ ಕಷ್ಟದ್ದು.  ಜನತೆಗೆ, ಭಾಷಿಕರಿಗೆ ಉತ್ತರದಾಯಿಂದ ಆಡಳಿತ ವ್ಯವಸ್ಥೆ ಇಲ್ಲದಿರುವುದು ಒಂದು ಕೊರತೆಯೆಂದರೆ ದೂರಗಾಮಿ ಪರಿಣಾಮಗಳನ್ನು ತಿಳಿಯದೇ ಪರಿಹಾರಗಳನ್ನು ಜಾರಿಗೆ ಕೊಡಲು ಒತ್ತಾಯಿಸುವುದು ಇನ್ನೊಂದು ಕೊರತೆ. ಅಲ್ಲದೆ ಭಾಷೆಗೆ ಸಂಬಂಧಿಸಿದ ಯಾವ ಸಂಗತಿಯೂ ಈಗ ಭಾಷೆಗೆ ಮಾತ್ರ ಸಂಬಂಧಿಸಿದ್ದಾಗಿ ಉಳಿದಿಲ್ಲ. ಸಮಾಜದ ವಿವಿಧ ವಲಯದ ಹತ್ತಾರು ಒತ್ತಡಗಳು ಭಾಷೆಯ ಸ್ಥಿತಿಗತಿಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಇಂತಹ ಹೊತ್ತಿನಲ್ಲಿ ಈ ಬರಹ ರೂಪುಗೊಂಡಿದೆ.

ಅಧ್ಯಯನ ರಜೆ ನೀಡಿದ ಕನ್ನಡ ವಿಶ್ವವಿದ್ಯಾಲಯಕ್ಕೆ, ಮಾನ್ಯ ಕುಲಪತಿಯವರಾದ ಪ್ರೊ.ಬಿ.ಎ.ವಿವೇಕ ರೈ ಅವರಿಗೆ, ಮಾನ್ಯ ಕುಲಸಚಿವರಾದ ಶ್ರೀ ವಿ.ಶಂಕರ್ ಅವರಿಗೆ ನನ್ನ ವಂದನೆಗಳು ಸಲ್ಲುತ್ತವೆ. ಪ್ರೊ.ರೈ ಅವರು ಈ ಬರಹವನ್ನು ಕರಡಿನಲ್ಲಿ ಓದಿ ಚರ್ಚಿಸಿ ಉಪಕರಿಸಿದ್ದಾರೆ ಮತ್ತು ಪ್ರಕಟಣೆಗೆ ಅನುಮತಿ ನೀಡಿದ್ದಾರೆ. ಬರಹ ರೂಪುಗೊಳ್ಳುತ್ತಿದ್ದ ಸಂದಭದಲ್ಲಿ ಚರ್ಚೆಯಲ್ಲಿ ನೆರವಿಗೆ ಬಂದ ನನ್ನ ಅಧ್ಯಯನ ವಿಭಾಗದ ಒಡನಾಡಿಗಳಿಗೆ ವಂದನೆಗಳನ್ನು ಹೇಳುವುದು ಅಗತ್ಯ. ಇದು ಹೇಳಿ ಬರೆಸಿದ ಬರಹ. ನಾನು ಹೇಳುತ್ತಿರುವಂತೆ ಬರೆದುಕೊಂಡ ಸುಕನ್ಯಾ ಹಾವನೂರು ಅವರಿಗೆ, ಬೆರಳಚ್ಚು ಮಾಡಿದ ಭರತ್‌ಗೆ ಮತ್ತು ಪುಟವಿನ್ಯಾಸ ಮಾಡಿದ ಶ್ರೀಮತಿ ರಶ್ಮಿ ಅವರಿಗೆ ನನ್ನ ನೆನಕೆಗಳು ಸಲ್ಲುತ್ತವೆ. ಪ್ರಕಟಿಸುತ್ತಿರುವ ಪ್ರಸಾರಾಂಗದ ಗೆಳೆಯರಿಗೂ ನಮಸ್ಕಾರಗಳು.

ಕೆ.ವಿ.ನಾರಾಯಣ