ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿಕ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತದೆ.

ಕನ್ನಡ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಅದರ ಧಾರ್ಮಿಕ, ಸಾಂಸ್ಕೃತಿಕ ಮತ್ತು ಜೀವನ ಮೌಲ್ಯಗಳನ್ನು ಎತ್ತಿ ಹಿಡಿದವರು ಮುಖ್ಯವಾಗಿ ಜೈನ ಕವಿಗಳು. ನಮ್ಮ ಸಾಹಿತ್ಯದ ಆರಂಭ ಕಾಲವನ್ನು ಜೈನಯುಗವೆಂದೇ ಕರೆಯುವಷ್ಟರ ಮಟ್ಟಿಗೆ ಸೃಜನಶೀಲ ಪ್ರತಿಭೆಯ ಕವಿಗಳು, ಕಥನಕಾರರು, ಶಾಸ್ತ್ರಗ್ರಂಥ ರಚನೆಕಾರರು, ವ್ಯಾಖ್ಯಾನಕಾರರು ಅಧಿಕ ಪ್ರಮಾಣದಲ್ಲಿ ಕೃತಿಗಳನ್ನು ರಚಿಸಿ ನಮ್ಮ ಸಾಹಿತ್ಯಕ್ಕೆ ಎತ್ತರ ಮತ್ತು ವ್ಯಾಪ್ತಿಗಳನ್ನು ತಂದು ಕೊಟ್ಟಿದ್ದಾರೆ. ಈ ಕಥನಾತ್ಮಕ ಮತ್ತು ವ್ಯಾಖ್ಯಾನಾತ್ಮಕ ಕೃತಿಗಳ ನಡುವೆಯೇ ತೀರ್ಥಂಕರರನ್ನು, ಜೈನ ಗುರುಗಳನ್ನು ಮತ್ತು ಧಾರ್ಮಿಕ ಮೌಲ್ಯಗಳನ್ನು ಬಿಡಿ ಬಿಡಿಯ ಕವಿತೆಗಳಾಗಿ ಕಟ್ಟಿ ಜನಮನದಲ್ಲಿ ಪ್ರಸಾರ ಮಡುವ ಕಾಯಕವನ್ನೂ ಅವರು ಕೈಗೊಂಡಿದ್ದರು. ವಚನಕಾರರಿಗಿಂತ ಕೀರ್ತನಕಾರಿಗಿಂತ ಪೂರ್ವದಲ್ಲಿಯೇ ಜನಸಾಮಾನ್ಯರಲ್ಲಿ ಧರ್ಮ ಮತ್ತು ಜೀವನ ಮೌಲ್ಯ ಪ್ರಸಾರಕ್ಕಾಗಿ ಹಾಡುಗಳನ್ನು ಕಟ್ಟಿ ಹಾಡುತ್ತ ಧರ್ಮ ಜಾಗೃತಿಯನ್ನು ಉಂಟುಮಾಡಲು ಈ ಕವಿಗಳು ಶ್ರಮಿಸದರೆಂಬುದು ಬಹುಮುಖ್ಯವಾದ ಸಂಗತಿಯಾಗಿದೆ. ಕ್ಲಿಷ್ಟವಾದ ಮತ್ತು ಪಾಂಡಿತ್ಯಜನ್ಯವಾದ ಕೃತಿಗಳು ತಮ್ಮ ಆಂತರ್ಯದಲ್ಲಿ ಧಾರ್ಮಿಕ ಮೌಲ್ಯಗಳನ್ನು ಧಾರಣ ಮಾಡಿಕೊಂಡಿದ್ದರೂ ಅವು ಜನಸಾಮಾನ್ಯರ ಗಂಟಲು ಮತ್ತು ಮನಸ್ಸುಗಳೊಳಗೆ ಇಳಿಯಲಾರವು ಎಂಬ ಜನಪ್ರಜ್ಞೆ ಈ ಕವಿಗಳಿಗೆ ಆಗಲೇ ಮೂಡಿದ್ದು, ಸ್ವಾಗತಾರ್ಹವಾದ ಸಂಗತಿಯಾಗಿದೆ. ಜೈನ ಧರ್ಮೀಯರಲ್ಲಿ ಮತ್ತು ಋಜುಜೀವನ ಮಾರ್ಗಿಗಳಲ್ಲಿ ದೈವಪರವಾದ ಹಾಗೂ ಉತ್ಕೃಷ್ಟ ಜೀವನಪರವಾದ ಆಲೋಚನೆಗಳನ್ನು ಪ್ರಸಾರ ಮಾಡಲೆಂದೇ ಮೂಡಿದ ಈ ಹಾಡುಗಳು ನಮ್ಮ ಜನಪ್ರಿಯ ವಚನ ಮತ್ತು ಕೀರ್ತನೆಗಳಿಗೆ ಪೂರ್ವಭಾವಿಯಾಗಿ ಆವಿರ್ಭವಿಸಿದ್ದವೆಂಬುದು ಐತಿಹಾಸಿಕ ಸಂಗತಿಯಾಗಿದೆ.

ಇಂತಹ ಸರಳವೂ ಜನಪ್ರಿಯ ಮಾದರಿಯ ಹಾಗೂ ಸಾಂಸ್ಕೃತಿಕ ಆಶಯಗಳನ್ನು ಗರ್ಭೀಕರಸಿಕೊಂಡಿರುವ ಈ ಹಾಡುಗಳನ್ನು ನಮ್ಮ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ವಿದ್ವಾಂಸರು ಬಹು ಶ್ರಮದಿಂದ ಹೆಕ್ಕಿ ಆರಿಸಿ ಇಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಪ್ರಸಿದ್ಧ ಕವಿ ರತ್ನಾಕರ ರಚಿಸಿದ ಹಾಡುಗಳಲ್ಲದೆ, ತೀರ್ಥಂಕರ ಹಾಡುಗಳು, ಯಕ್ಷಿಣಿಯರ ಹಾಡುಗಳು, ಜೋಗುಳ ಹಾಡುಗಳು, ಶೋಭಾನೆಯ ಹಾಡುಗಳು ಮತ್ತು ಯಾವ ನಿಶ್ಚಿತ ವರ್ಗಕ್ಕೂ ಸೇರದ ಸಂಕೀರ್ಣ ಹಾಡುಗಳು ಈ ಕೃತಿಯಲ್ಲಿ ಸೇರ್ಪಡೆಯಾಗಿವೆ. ನಮ್ಮ ಹರಿದಾಸ ಕೀರ್ತನೆಗಳ ಬಂಧ, ಚೌಕಟ್ಟು ಗೇಯತೆಗಳನ್ನು ಒಳಗೊಂಡು ಹಾಡಲು ಅನುಗುಣವಾಗಿರುವ ಈ ಹಾಡುಗಳ ಕನ್ನಡ ಸಾಹಿತ್ಯಕ್ಕೆ ಹೊಸ ಸೇರ್ಪಡೆಯಾಗಿವೆ. ಶರಣ ಸಂಪ್ರದಾಯದಲ್ಲಿ ರಚಿತವಾದ ಇಂತಹುದೇ ಹಾಡುಗಳನ್ನು ಪ್ರೊ.ಎಲ್‌.ಬಸವರಾಜು ಅವರು ‘ಶಿವದಾಸ ಗೀತಾಂಜಲಿ’ ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವು ಕೀರ್ತನ ಪರಂಪರೆಯ ಸಾಹಿತ್ಯದ ಸಾತತ್ಯವನ್ನು ಸಶಕ್ತವಾಗಿ ಬಿಂಬಿಸುತ್ತವೆ.

ಇಂತಹ ಹಾಡುಗಳನ್ನು ಸಂಗ್ರಹಿಸಿ ಸಂಪಾದಿಸಿ ಅವುಗಳ ವಿಶಿಷ್ಟ ಗುಣಲಕ್ಷಣಗಳನ್ನು ವಿವರಿಸುವ ಪ್ರಸ್ತಾವನೆಯೊಡನೆ ಕೊಟ್ಟಿರುವ ಸಂಪಾದಕರಾದ ಡಾ. ಎಫ್‌.ಟಿ. ಹಳ್ಳಿಕೇರಿ ಮತ್ತು ಡಾ.ಕೆ. ರವೀಂದ್ರನಾಥ ಅವರನ್ನು ನಾನು ಅಭಿನಂದಿಸುತ್ತೇನೆ. ಧಾರ್ಮಿಕ ಪ್ರಜ್ಞೆಯುಳ್ಳವರಿಗೆ ಮತ್ತು ವಿಶೇಷವಾಗಿ ಜೈನ ಧರ್ಮೀಯರಿಗೆ ಈ ಹಾಡುಗಳು ಹೆಚ್ಚು ಇಷ್ಟವಾಗುತ್ತವೆ ಎಂದು ನಂಬಿದ್ದೇನೆ.                           

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು