೦೦೦-೨೦೦೧ರ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಯುಕ್ತ ಯೋಜನೆಯಡಿಯಲ್ಲಿ ‘ಕನ್ನಡ ಜೈನ ಹಾಡುಗಳು’ ಕೃತಿಯನ್ನು ಸಂಪಾದನೆಗೆ ಕೈಗೆತ್ತಿಕೊಳ್ಳಲಾಗಿದೆ. ಯೋಗಾಯೋಗವೆಂಬಂತೆ ಈ ವರ್ಷ ಭಗವಾನ ಮಹಾವೀರನ ೨೬೦೦ನೆಯ ಜನ್ಮಕಲ್ಯಾಣೋತ್ಸವ ಸಂದರ್ಭ ಒಂದು ಕಡೆಯಾದರೆ, ಕನ್ನಡ ವಿಶ್ವವಿದ್ಯಾಲಯಕ್ಕೆ ಈಗ ದಶಮಾನೋತ್ಸವದ ಸಂಭ್ರಮ. ಇಂಥ ಒಂದು ಸುಸಂದರ್ಭದಲ್ಲಿ ಈ ಸಂಪುಟ ಪ್ರಕಟವಾಗುತ್ತಿರುವುದು ನಮಗೆ ಅತೀವ ಸಂತೋಷವನ್ನುಂಟು ಮಾಡಿದೆ. ಈ ಸಂತೋಷಕ್ಕೆ ಕಾರಣರಾದವರು ಹಲವರು. ಇಂಥದೊಂದು ಉಪೇಕ್ಷಿತ ಸಾಹಿತ್ಯದ ಬಗೆಗೆ ನಮ್ಮ ಗಮನವನ್ನು ಸೆಳೆದು ನಾಂದಿ ಹಾಡಿದವರು ಅಂದಿನ ಕುಲಪತಿಗಳಾಗಿದ್ದ ಡಾ.ಎಂ.ಎಂ.ಕಲಬುರ್ಗಿಯವರು. ಇಂದಿನ ಕುಲಪತಿಗಳಾದ ಡಾ. ಎಚ್‌.ಜೆ. ಲಕ್ಕಪ್ಪಗೌಡ ಅವರು ಈ ಯೋಜನೆಯು ಪುಸ್ತಕ ರೂಪದಲ್ಲಿ ಬರುವಂತೆ ಆಗು ಮಾಡಿದ್ದಾರೆ. ಇವರೀರ್ವರಿಗೂ ನಮ್ಮ ಅನಂತ ವಂದನೆಗಳು. ಹಾಗೆಯೇ ಅಂದಿನ ಕುಲಸಚಿವರಾಗಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಇಂದಿನ ಕುಲಸಚಿವರಾದ ಡಾ. ಕೆ.ವಿ. ನಾರಾಯಣ ಹಾಗೂ ಅಧ್ಯಯನನಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ ಸಹಕರಿಸಿದ್ದಾರೆ. ವಿಭಾಗದ ಮುಖ್ಯಸ್ಥರಾದ ಪ್ರೊ. ಎ.ವಿ. ನಾವಡ ಅವರು ವಿಶೇಷ ಮುತುವರ್ಜಿ ವಹಿಸಿ ಪ್ರೋತ್ಸಾಹಿಸಿದ್ದಾರೆ. ಇವರೆಲ್ಲರಿಗೆ ನಮ್ಮ ವಂದನೆಗಳು.

ಈ ಸಂಪುಟವನ್ನು ಸಿದ್ಧಪಡಿಸುವಲ್ಲಿ ಹಲವಾರು ಸಂಸ್ಥೆಯ ನೆರವನ್ನು ಪಡೆಯಲಾಗಿದೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರನ್ನು ಭೇಟಿಯಾಗಿ ಯೋಜನೆಯ ಸ್ವರೂಪವನ್ನು ತಿಳಿಸಿದಾಗ ತುಂಬ ಸಂತೋಷಗೊಂಡು ತಮ್ಮಲ್ಲಿದ್ದ ಹಸ್ತಪ್ರತಿ ಭಂಡಾರವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ. ಅಲ್ಲಿಯ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ಎನ್. ಸುರೇಶಕುಮಾರ, ಹಸ್ತಪ್ರತಿ ಭಂಡಾರರ ಮುಖ್ಯಸ್ಥರಾದ ಶ್ರೀ ಬಿ.ಎಸ್‌.ಸಣ್ಣಯ್ಯನವರ ಶ್ರವಣಬೆಳಗೊಳಕ್ಕೆ ಹೋದಾಗಲೆಲ್ಲ ನಮಗೆ ಎಲ್ಲ ರೀತಿಯ ನೆರವನ್ನು ನೀಡಿ ಸಹಕರಿಸಿದ್ದಾರೆ. ಸಂಪಾದನ ವಿಭಾಗದ ಶ್ರೀ ಕೆ.ಆರ್. ಶೇಷಗಿರಿಯವರು ಸಹ ನಮ್ಮ ಕಾರ್ಯಕ್ಕೆ ಬೆನ್ನುತಟ್ಟಿ ಹುರಿದುಂಬಿಸಿದ್ದಾರೆ. ಇವರೆಲ್ಲರಿಗೆ ನಮ್ಮ ಕೃತಜ್ಞತೆಗಳು. ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಹಸ್ತಪ್ರತಿ ಭಂಡಾರವನ್ನು ಉಪಯೋಗಿಸಲು ಅನುಮತಿ ನೀಡಿದ್ದಾರೆ. ಪ್ರತಿಷ್ಠಾನದ ನಿರ್ದೇಶಕರಾದ ಪ್ರೊ. ಜಿ.ಎಂ.ಉಮಾಪತಿಶಾಸ್ತ್ರಿಗಳು ಜೈನ ಹಾಡುಗಳಿಗೆ ಸಂಬಂಧಿಸಿದ ಹಸ್ತಪ್ರತಿಗಳನ್ನು ನೀಡಿ ಸಹಕರಿಸಿದ್ದಾರೆ. ಇವರಿಗೆ ನಮ್ಮ ವಂದನೆಗಳು. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮೂಡಬಿದ್ರೆಯ ಶ್ರೀ ಜೈನಮಠ, ಹೊಂಬುಜದ ಶ್ರೀ ಜೈನಮಠಗಳಲ್ಲಿರುವ ಹಸ್ತಪ್ರತಿ ಭಂಡಾರಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿದ ಆಯಾ ಮುಖ್ಯಸ್ಥರುಗಳಿಗೆ ನಮ್ಮ ಕೃತಜ್ಞತೆಗಳು.

ಈ ಸಂಪುಟವು ಸಾಕಾರ ರೂಪ ಪಡೆಯುವಲ್ಲಿ ಹತ್ತು ಹಲವು ವಿದ್ವಾಂಸರ ನೆರವನ್ನು ಪಡೆದಿದ್ದೇವೆ. ವಿಶೇಷವಾಗಿ ಡಾ. ಹಂಪನಾಗರಾಜಯ್ಯನವರು ತಮ್ಮಲ್ಲಿದ ಜೈನ ಹಾಡುಗಳನ್ನು ನೀಡಿ, ಸೂಕ್ತ ಸಲಹೆಗಳನ್ನು ಕೊಟ್ಟಿದ್ದಾರೆ. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕರಾದ ಡಾ.ಶಾಂತಿನಾಥ ದಿಬ್ಬದ ಅವರು ಹಸ್ತಪ್ರತಿಯನ್ನು ಸಮಗ್ರವಾಗಿ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು. ಪುಸ್ತಕ ಪ್ರಕಟಣೆಯಲ್ಲಿ ವಿಶೇಷ ಆಸಕ್ತಿ ವಹಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಹಾಗೂ ಅಂದವಾದ ಮುಖಪುಟವನ್ನು ರಚಿಸಿದ ಕಲಾವಿದ ಕೆ.ಕೆ.ಮಕಾಳಿಯವರಿಗೆ, ಡಿ.ಟಿ.ಪಿ. ಸಂಯೋಜನೆ ಮಾಡಿದ ಸಂಧ್ಯಾ ಕಂಪ್ಯೂಟರ್ ಗ್ರಾಫಿಕ್ಸ್‌ನ ಶ್ರೀ ಸೋಮನಾಥರೆಡ್ಡಿ, ಅಂದವಾಗಿ ಮುದ್ರಿಸಿದ ತ್ವರಿತ ಮುದ್ರಣಾಲಯದ ಸಿಬ್ಬಂದಿಗಳಿಗೆ ನಮ್ಮ ನೆನಕೆಗಳು.

ನಮಗೆ ದೊರೆತ ಹಸ್ತಪ್ರತಿ ಮತ್ತು ಗ್ರಂಥಗಳಿಂದ ಪ್ರಸ್ತುತ ಸಂಪುಟವನ್ನು ರೂಪಿಸಲಾಗಿದೆ. ಇನ್ನೂ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕರ್ನಾಟಕದ ಒಳಗೆ ಮತ್ತು ಹೊರಗೆ ಕೈಕೊಂಡಾಗ ಹೆಚ್ಚಿನ ಹಾಡುಗಳು ಸಿಗುವ ಸಾಧ್ಯತೆಯಿದೆ. ಕನ್ನಡ ಸಾರಸ್ವತ ಲೋಕ ನಮ್ಮ ಈ ಕಾರ್ಯವನ್ನು ಮುಕ್ತವಾಗಿ ಸ್ವಾಗತಿಸುತ್ತಾರೆಂದು ನಂಬಿದ್ದೇವೆ.

ಡಾ. ಎಫ್.ಟಿ.ಹಳ್ಳಿಕೇರಿ
ಡಾ.ಕೆ.ರವೀಂದ್ರನಾಥ
ವಿದ್ಯಾರಣ್ಯ                
೨೬-೧೨-೨೦೦೧