ನುಡಿದುದನಾರೊಳಂ ನುಡಿದು ತಪ್ಪಿದೊಡಂ ಜಿನಶಾಸನಕ್ಕೊಡಂ
ಬಡದೊಡಮನ್ಯನಾರಿಗೆರೆದಟ್ಟಿದೊಡಂ ಮಧುಮಾಂಸ ಸೇವೆಗೆ
ಯ್ದೊಡಮಕುಲೀನರಪ್ಪವರ ಕೊಳ್ಕೊಡೆಯಾದದೊಡಮರ್ಥಿಗರ್ಥಮಂ
ಕುಡುದೊಡಮಾಹವಾಂಗಣದೊಳೋಡಿದೊಡಂ ಕಿಡುನುಂಕುಲವ್ರತಂ

“ಕೊಟ್ಟ ಮಾತನ್ನು ಮರೆಯದಿರು, ಮದ್ಯ-ಮಾಂಸ ಸೇವಿಸದಿರು, ಹೆರವರ ಹೆಣ್ಣಿಗೆ ಮನ ಸೋಲದಿರು, ಕೀಳುತನಕ್ಕೆ ಇಳಿಯಬೇಡ, ದೀನ ರಕ್ಷಕನಾಗು, ಕಾಳಗದಲ್ಲಿ ಕಾಲ್ದೆಗೆಯದಿರು, ಜೈನಧರ್ಮವನ್ನು ಬಿಡಬೇಡ ಇದಕ್ಕೆ ತಪ್ಪಿದರೆ ನಿನ್ನ ಕುಲವು ಹಾಳಾಗುವುದು ನಿಶ್ಚಿತ” ಎಂಬ ಶಾಸನೋಕ್ತವಾದ (ಎ.ಕ. VII. ಎಸ್‌.ಕೆ.ಜೆ. ೨೧) ಮಾತು ಆಚಾರ್ಯ ಸಿಂಹ ನಂದಿಯು ಗಂಗವಂಶದ ಸ್ಥಾಪಕನಾದ ಮಾಧವನಿಗೆ ಉಪದೇಶಿಸಿದ್ದಾಗಿದೆ. ಸ್ವತಃ ತಪೋಬಲದಿಂದ ಜ್ಞಾನವರಣೇಯ ಮೊದಲಾದ ಎಂಟು ಕರ್ಮಗಳನ್ನು ಗೆದ್ದ ಇಂತಹ ಆಚಾರ್ಯ ಪುರುಷರನ್ನೇ ಜಿನರೆಂದು; ಇವರಿಂದ ಬೋಧಿಸಲ್ಪಟ್ಟ ಧರ್ಮ ಜೈನಧರ್ಮವೆಂದು ಕರೆಯುತ್ತಾರೆ.

ಪ್ರಥಮ ತೀರ್ಥಂಕರ ವೃಷಭನಿಂದ ಆರಂಭಗೊಂಡ ಜೈನ ಧರ್ಮ ತರುವಾಯದ ಇಪ್ಪತ್ಮೂರು ಜನ ತೀರ್ಥಂಕರರಿಂದ ಪ್ರಚುರಗೊಂಡು ಭಾರತದ ಪ್ರಮುಖ ಧರ್ಮಗಳಲ್ಲಿ ಒಂದಾಗಿದೆ. ಇದರ ಉಗಮದ ಕಾಲವನ್ನು ಕ್ರಿ.ಶ. ೫೦೦೦ ವರ್ಷಗಳಿಗಿಂತ ಮೊದಲಿನದೆಂಬುದಾಗಿ ವಿದ್ವಾಂಸರು ಗುರುತಿಸುತ್ತಾರೆ. ಕೊನೆಯ ತೀರ್ಥಂಕರನಾದ ಮಹಾವೀರನ ತರುವಾಯ ಅಂದರೆ ಸಂಪ್ರತಿ ಚಂದ್ರಗುಪ್ತನೆಂಬ ಅರಸನ ಕಾಲಾವಧಿಯಲ್ಲಿ (ಕ್ರಿ.ಶ.ಪೂ. ೩೭೩-೨೯೮) ಈ ಧರ್ಮ ಮೊದಲಿನ ದಿಗಂಬರ ಸಂಪ್ರದಾಯದ ಜೊತೆಗೆ ಶ್ವೇತಾಂಬರವೆಂಬ ಮತ್ತೊಂದು ಸಂಪ್ರದಾಯವನ್ನು ರೂಢಿಸಿಕೊಂಡ ಬಗ್ಗೆ ಅನೇಕ ದಾಖಲೆಗಳಿವೆ. ಉತ್ತರ ಪ್ರದೇಶದಲ್ಲಿ ಆಗ ಸಂಭವಿಸಿದ ಭೀಕರ ಬರಗಾಲ ಇದಕ್ಕೆ ಕಾರಣವೆಂದು ವಡ್ಡಾರಾಧನೆಯಿಂದ ತಿಳಿದು ಬರುತ್ತದೆ. ಬರಗಾಲದ ಪ್ರಸಂಗದಲ್ಲಿ ಭದ್ರಬಾಹು ಮುನಿಯು ಶಿಷ್ಯ ಚಂದ್ರಗುಪ್ತ ಮೌರ್ಯ ಹಾಗೂ ಸಂಘದೊಡನೆ ಆಚರಣೆಗೆ ಚ್ಯುತಿ ಬರಬಾರದೆಂಬ ಭಾವನೆಯಿಂದ “ಕಳ್ವಪ್ಪು” ಎಂದು ಕರೆಸಿಕೊಂಡಿದ್ದ ಈಗಿನ ಶ್ರವಣಬೆಳ್ಗೊಳಕ್ಕೆ ಬಂದು ಅಲ್ಲಿಯ ಚಂದ್ರಗಿರಿ ಬೆಟ್ಟದಲ್ಲಿ ಸಲ್ಲೇಖನ ವ್ರತದಿಂದ ಸಮಾಧಿ ಹೊಂದಿದರೆಂದು ಶ್ರವಣಬೆಳ್ಗೊಳದ ಒಂದು ಶಾಸನ ತಿಳಿಸುತ್ತದೆ. ದಕ್ಷಿಣಕ್ಕೆ ಬದಲಾಗಿ ಅತ್ತ ಸಿಂಧೂ ದೇಶಕ್ಕೆ ವಲಸೆ ಹೋದ ರಾಮಿಲಾಚಾರ್ಯ, ಸ್ಥೂಲಾಚಾರ್ಯ ಮತ್ತು ಸ್ಥೂಲಭದ್ರಾಚಾರ್ಯ ಮುನಿಗಳ ಗುಂಪು ತೊಂದರೆ ಗೀಡಾಯಿತು. ಹಗಲಿನ ಬದಲು ರಾತ್ರಿ ಭಿಕ್ಷಕ್ಕೆ ಹೋದ ಒಬ್ಬ ಮುನಿಯನ್ನು ಕಂಡ ಓರ್ವ ಸ್ತ್ರೀಗೆ ಗರ್ಭಪಾತವಾಗುತ್ತದೆ. ಇದನ್ನು ತಿಳಿದ ಅಲ್ಲಿಯ ರಾಜ ಮೈಮೇಲೆ ತುಂಡು ಬಟ್ಟೆ ಧರಿಸುವಂತೆ ಆ ಮುನಿಗಳಿಗೆ ಆದೇಶಿಸಿದ. ಅಂದಿನಿಂದ ಅವರಿಗೆ ಅರ್ಧಗಪ್ಪಡದವರು ಎಂಬ ಹೆಸರು ರೂಢಿಗೆ ಬಂತು. ಮುಂದೆ ವಲಭೆಯ ದೊರೆ ಮೈಮೇಲೆ ಶ್ವೇತಬಣ್ಣದ ಪೂರ್ವವಸ್ತ್ರ ಧರಿಸುವಂತೆ ಆಜ್ಞಾಪಿಸಿದನು. ಅಂದಿನಿಂದ ಉತ್ತರದ ಆ ಮುನಿಗಳು ಶ್ವೇತಾಂಬರರು ಎಂದು ಕರೆಸಿಕೊಂಡರು. ಶ್ವೇತಾಂಬರರು ಕರ್ನಾಟಕದಲ್ಲೂ ಇದ್ದರೆಂಬುದಕ್ಕೆ ಮೃಗೇಶವರ್ಮನೆಂಬ ಕದಂಬದೊರೆ ಇವರ ಸಂಘದ ಉಪಭೋಗಕ್ಕೆ ದತ್ತಿ ಬಿಟ್ಟಿರುವುದನ್ನು ಕದಂಬರ ೫ನೇ ಶತಮಾನದ ತಾಮ್ರ ಶಾಸನಗಳಿಂದ ತಿಳಿದು ಬರುತ್ತದೆ. ಅಲ್ಲದೆ ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಕೆಲವು ಜನಕವಿಗಳು ಸಾಹಿತ್ಯ ಸೃಷ್ಟಿ ಮಾಡಿರುವ ಬಗ್ಗೆ ಗೊತ್ತಾಗುತ್ತದೆ. ಹೀಗೆ ಎರಡು ಸಂಪ್ರದಾಯಗಳು ಬೆಳೆದು ಬಂದಿದ್ದರೂ ಸಾಹಿತ್ಯ ಕೃಷಿಯ ಆಶಯ ದಿಗಂಬರ ಸಂಪ್ರದಾಯ ಆಚರಣೆ ಸಂಸ್ಕೃತಿಯ ಅಭಿವ್ಯಕ್ತಿಗೆ ಹೆಚ್ಚು ಮೀಸಲಾದಂತೆ ತೋರುತ್ತದೆ. ಮಹಾಕಾವ್ಯಗಳಿಂದ ಹಿಡಿದು ಚಿಕ್ಕ ಹಾಡುಗಳು ಈ ಪಂಥದ ಆಚರಣೆಯ ಫಲಿತಗಳನ್ನು ಕಟ್ಟಿಕೊಡುತ್ತವೆ. ಹೀಗಾಗಿ ದಿಗಂಬರ-ಶ್ವೇತಾಂಬರ ಸಂಪ್ರದಾಯಗಳಲ್ಲಿ ಕೆಲವು ತಾತ್ವಿಕವಾದ ವ್ಯತ್ಯಾಸಗಳು ಕಂಡುಬಂದರೂ ಅವರೀರ್ವರ ನಂಬಿಕೆಯ ಸೂತ್ರ ಒಂದೇ ಆಗಿದೆಯೆಂಬುದು ಇದರಿಂದ ಮನವರಿಕೆಯಾಗುತ್ತದೆ.

ಕನ್ನಡ ಸಾಹಿತ್ಯದ ವಿಷಯವಾಗಿ ಅದರ ಆರಂಭ ಜೈನರಿಂದಲೇ ಗಂಗ, ರಾಷ್ಟ್ರಕೂಟ, ಚಾಲುಕ್ಯ, ಕಲಚೂರಿ, ಸೌದತ್ತಿಯ ರಟ್ಟರು, ವಿಜಯನಗರ ಅರಸರು, ಸಾಮಂತರಾದ ಸೇನವಾರರು, ಸಾಳುವರು, ಚೆಂಗಾಳ್ವರು, ಕೊಂಗಾಳ್ವರು, ಸಾಂತರ ಇತ್ಯಾದಿ ರಾಜಾಶ್ರಯದಲ್ಲಿ ಜೈನ ಕವಿಗಳ ಸಾಹಿತ್ಯಕ ಕೃಷಿ ನಡೆದು ಕನ್ನಡ ಸಾಹಿತ್ಯ ಮೌಲಿಕವಾದ ಕೃತಿಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು; ಹೀಗಾಗಿ ಈ ಪರಿಸರದ ಸಾಹಿತ್ಯ ಪಂಡಿತಪ್ರಿಯ ಸಾಹಿತ್ಯವೆಂತಲೂ, ಚಂಪೂ ಪ್ರಕಾರವನ್ನು ಹೆಚ್ಚು ದುಡಿಸಿಕೊಂಡಿದ್ದರಿಂದ ಚಂಪೂಯುಗವೆಂತಲೂ ಕರೆಸಿಕೊಂಡಿತು. ಕನ್ನಡ ಜೈನ ಸಾಹಿತ್ಯ ಅದರಲ್ಲೂ “ಆಗಮಿಕ ಕಾವ್ಯಗಳ ವಸ್ತು” ಕ್ಷಣಕೆ ಕರ್ಮವ ಸುಟ್ಟು ಜಿನನಾದ ಭೂಭುಜಾಗ್ರಣಿಗಳ ಕಥೆಗಳಾಗಿವೆ. ಅಂದರೆ ಆತ್ಮನಲ್ಲಿ ಸೌಮ್ಯಭಾವವನ್ನು ಬೆಳೆಸುವುದೇ ಆಗಿದೆ. ಯಾಕೆಂದರೆ ಯಾವುದು ರಾಗ, ದ್ವೇಷ, ಮೋಹ, ಮಾತ್ಸರ್ಯ, ದೀನತೆ ಮೊದಲಾದ ವಿಕೃತಿಗಳನ್ನು ಉತ್ಪಾದಿಸುವುದೋ ಅದು ಹೀನ ಸಾಹಿತ್ಯವೆಂದು ಭಾವಿಸಿದವರು. ಅಂತೆಯೇ ಕವಿ ನಾಗಚಂದ್ರ ತನ್ನ ರಾಮಚಂದ್ರಪುರಾಣದ ಸಂಧಿ ೧ ಪದ್ಯ ೨೪ರಲ್ಲಿ

ರಾಗದ್ವೇಷ ನಿಬಂಧಮಪ್ಪ ಕೃತಿಯಂ ನಿರ್ಭಂಧದಿಂ ಬಂಧಮಿಂ
ಬಾಗರ್ಥ ಪೊಸತಾಗೆ ಪೇೞ್ದಿಖಿಲಮ ರಾಗವಿಲಂ ಮಾಳ್ಪದಿ
ದ್ಯಾಗರ್ವಗ್ರಹ ಪೀಡಿತರ್ ಸ್ವಪರ ಬಾಧಾಹೇತುವಂ ದುಸ್ತರೋ
ದ್ಯೋಗ ಕ್ಲೇಶಿತರಾಗಿ ಭಿತ್ತಿ ಬೆಳೆವಂತಕ್ಕುಂ ವಿಷ್ಯೋದ್ಯಾನಮಂ

ರಾಗದ್ವೇಷದಿಂದ ಕೂಡಿದ ಕೃತಿಯನ್ನು ಎಷ್ಟೇ ಸುಂದರವಾಗಿ ಬರೆದರೂ ಅದು ವಿಷೋದ್ಯಾನವನ್ನು ಬೆಳೆಸಿದಂತಹ ಅನಾರೋಗ್ಯಕರ ಉಪಕ್ರಮವೆಂದಿದ್ದಾನೆ. ಹೀಗಾಗಿ “ಎನಗೆ ರಸವೊಂದೇ ಶಾಂತಮೇ ಜಿನೇಂದ್ರ” ನೆಂದು ಕನ್ನಡ ಸಾಹಿತ್ಯಕ್ಕೆ ಶಮಸ್ಥಾಯಿಯಾದ ಶಾಂತರಸವನ್ನು ನೀಡಿದವರು. ಅಸಹಾಯಕರ ಬಗ್ಗೆ ಅನುಕಂಪ ತೋರಿ “ಸಂಕಲ್ಪ ಹಿಂಸೆಯ” ಸಾಧಕ ಬಾಧಕಗಳನ್ನು ಕಾವ್ಯಗಳ ಮೂಲಕ ಕಟ್ಟಿಕೊಟ್ಟವರು. ಹೀಗೆಂದಾಕ್ಷಣ ಜೈನ ಕವಿಗಳು ಧಾರ್ಮಿಕ ಕೃತಿಗಳಲ್ಲದೆ ಬೇರೆ ಕೃತಿ ರಚನೆಗೆ ಕೈ ಹಾಕಿಲ್ಲವೆಂದರ್ಥವಲ್ಲ. ಕಾವ್ಯಾವಲೋಕನ, ಛಂಧೋ ಬುಧಿ, ಶಬ್ದಮಣಿದರ್ಪಣ, ಶಬ್ದಸ್ಮೃತಿ ಮುಂತಾದ ಛಂದಸ್ಸು-ವ್ಯಾಕರಣಗ್ರಂಥಗಳು, ರನ್ನಕಂದ, ವಸ್ತುಕೋಶಗಳಂತಹ ನಿಘಂಟುಗಳು, ಗಜಶಾಸ್ತ್ರ, ಜಾತಕ ತಿಲಕ, ಲೋಕೋಪಕಾರ, ಮದನತಿಲಕಗಳಂತಹ ಜ್ಯೋತಿಷ್ಯ, ವೈದ್ಯ, ಗಣಿತ, ಕಾಮಶಾಸ್ತ್ರಗಳಂತಹ ನಿತ್ಯಜೀವನೋಪಯೋಗಿ ಕೃತಿಗಳ ರಚನೆಗೆ ಇವರೇ ಆದ್ಯರು. ಹೀಗೆ ಪ್ರಾರಂಭದ ಹಂತದಲ್ಲಿ ಪಾಂಡಿತ್ಯ ಮತ್ತು ಶಾಸ್ತ್ರ ಸಮ್ಮತವಾದ ಕೃತಿಗಳನ್ನು ನೀಡಿದ ಕಾರಣ ‘ಮಾರ್ಗಿ’ ಮಾರ್ಗವನ್ನು ತುಳಿದರು. ಮುಂದೆ ನಡುಗನ್ನಡ ಸಂದರ್ಭದಲ್ಲಿ ಮಾರ್ಗಿಧೋರಣೆಯಿಂದ ಹೊರಬಂದು ‘ದೇಶಿ’ ಮಾರ್ಗವನ್ನನುಸರಿಸಿದರು. ಈ ಪರಿಣಾಮವಾಗಿ ರತ್ನಾಕರವರ್ಣಿಯ ಭರತೇಶ ವೈಭವ, ಪಾಯಣ್ಣವ್ರತಿಯ (೧೫೫೦) ಸಮ್ಯಕ್ತ್ವ ಕೌಮುದಿ, ಜಿನಸೇನದೇಶವ್ರತಿಯ (೧೬೦೦) ವರ್ಧಮಾನಪುರಾಣ, ಬ್ರಹ್ಮಕವಿಯ (೧೬೦೦) ವಜ್ರಕುಮಾರಚರಿತೆ, ಪಂಚ ಬಾಣನ (೧೬೧೪) ಬಾಹುಬಲಿ ಚರಿತೆ, ಪಾಯಣ್ಣಮುನಿ (೧೬೦೬)ಯ ಸನತ್ಕುಮಾರ ಚರಿತ್ರೆಗಳು ಸಾಂಗತ್ಯ ಪ್ರಕಾರದಂತಹ ರಾಗ-ತಾಳ ಬದ್ಧವಾದ ಹಾಡುಗಳನ್ನು ಬರೆದಿದ್ದಾರೆ. ಮಹಾಕಾವ್ಯಗಳ ಕಥಾವಸ್ತುವನ್ನೇ ತಮ್ಮೊಡಲಲ್ಲಿರಿಸಿಕೊಂಡು ಕುಳಿತಿರುವ ಇದಕ್ಕಿಂತ ಹೆಚ್ಚಾಗಿ ಸ್ಥಳೀಯ ಸ್ಥಳಪುರಾಣ ಮಹಾತ್ಮೆಗಳನ್ನು ಉಸುರುವ ಈ ಹಾಡುಗಳ ಶೋಧ-ಸಂಗ್ರಹ-ಸಂಪಾದನೆ ಹಾಗೂ ವಿಶ್ಲೇಷಣೆಗಳು ವೀರಶೈವ ಹಾಗೂ ಹರಿದಾಸರ ಸ್ವರವಚನ-ಕೀರ್ತನೆಗಳಂತೆ ವ್ಯಾಪಕವಾಗಿ ನಡೆದಿರುವುದಿಲ್ಲ. ಹೀಗಾಗಿ ನಾಡಿನ ಪ್ರಮುಖ ಜೈನ ಮಠಗಳ, ವಿಶ್ವವಿದ್ಯಾಲಯಗಳ ಹಸ್ತಪ್ರತಿ ಭಂಡಾರಗಳಲ್ಲಿನ ಹಾಡುಗಳ ಸಂಗ್ರಹದ ಪುಸ್ತಕರೂಪ ಈ “ಕನ್ನಡ ಜೈನ ಹಾಡುಗಳು”.

ಜೈನ ಹಾಡುಗಳ ಲಕ್ಷಣ

ಅನುಭಾವ ಗೀತೆ, ಹಾಡು, ಕೈವಲ್ಯಪದ, ಭಜನೆ ಹಾಡುಗಳೆಂದು ಕರೆಸಿಕೊಂಡಿರುವ ವೀರಶೈವ ಸ್ವರವಚನ, ದಾಸರ ಕೀರ್ತನೆಗಳ ಪರಂಪರೆಗೆ ಜೈನ ಹಾಡುಗಳು ಸೇರುತ್ತವೆ. ಇವುಗಳು ಲಕ್ಷಣ ಹೀಗಿದೆ.

೧.  ಪಲ್ಲವಿ, ಅನುಪಲ್ಲವಿ, ನಾಲ್ನುಡಿಗಳು ಚರಣಬಂಧಗಳಿಂದ ಕೂಡಿವೆ.

೨.  ಆರಂಭದಲ್ಲಿ ಕೆಲವು ಹಾಡುಗಳಲ್ಲಿ ರಾಗ-ತಾಳಗಳ ನಿರ್ದೇಶನವಿರುತ್ತದೆ.

೩.  ಹಾಡುಗಳು ಷಟ್ಟದಿ, ಕಂದ, ಚೌಪದಿ, ತ್ರಿಪದಿ, ದ್ವಿಪದಿಗಳಿಂದ ರಚನೆಯಾಗಿದ್ದು; ಗಾದೆ, ನುಡಿಗಟ್ಟುಗಳಂತಹ ಸಾಲುಗಳಿಂದ ಮನೋಹರವಾಗಿವೆ.

೪.  ಅಂಶಗಣ ಇಲ್ಲವೇ ಮಾತ್ರಾಗಣ ಸಂಯೋಜನೆ ಇಲ್ಲವೆ ಇವೆರಡರ ಮಿಶ್ರ ಛಂದೋ ಪದ್ಯಗಳಾಗಿವೆ. ಆದಿ-ಅಂತ್ಯ ಪ್ರಾಸಗಳ ಸೊಬಗಿನಿಂದ ಕೂಡಿದ ಇವುಗಳಿಗೆ ಕೊನೆಯಲ್ಲಿ ಆರಾಧ್ಯ ದೈವದ ಇಲ್ಲವೇ ರಚನಾಕಾರರ ಅಂಕಿತ (ಮುದ್ರಿಕೆ) ಬರುತ್ತದೆ. ಆದರೆ ಬಳಕೆಗೊಂಡ ಅಂಕಿತಗಳಲ್ಲಿ ನಿರ್ದಿಷ್ಟತೆ ಇಲ್ಲವೆನಿಸುತ್ತದೆ. ಉದಾ: ರತ್ನಾಕರ ಬರೆದನೆನ್ನಲಾದ ಹಾಡುಗಳು ಅಪರಾಜಿತೇಶ, ಹಂಸನಾಥ, ನಿರಂಜನ ಸಿದ್ಧ, ಶ್ರೀಮಂದರಸ್ವಾಮಿ, ಚಿದಂಬರ ಪುರುಷ ಮುಂತಾದ ಬೇರೆ ಬೇರೆ ಅಂಕಿತಗಳಿಂದ ಬಳಕೆಗೊಂಡಿರುವುದನ್ನು ನೋಡಬಹುದು.

೫.  ಗೀತ ಮಾಧ್ಯಮವಾದ ಕಾರಣ ಇವು ಹಾಡುಹಬ್ಬಗಳು.

೬.  ಬೆಡಗು, ಸಾಂಕೇತಿಕೆ, ರೂಪಕ, ಉಪಮೆಗಳಿಂದ ಕೂಡಿದವುಗಳಾಗಿವೆ.

೭.  ವಸ್ತುವಿನ ದೃಷ್ಟಿಯಿಂದ ಜಿನತತ್ತ್ವ –ಸಿದ್ಧಾಂತಗಳ ಪ್ರತಿಪಾದನೆ ಇಲ್ಲಿಯ ಮುಖ್ಯ ಅಶಯ.

೮.  ತೀರ್ಥವಂದನೆ, ತೀರ್ಥಂಕರ ಸ್ತುತಿಗಳಂತಹ ಸುದೀರ್ಘವಾದ ಹಾಡುಗಳು ರಚನೆಗೊಂಡಿವೆ.

ಜೈನ ಹಾಡುಗಳ ವಸ್ತುವಿಷಯ

ಜೈನ ಧಾರ್ಮಿಕ ಆಚಾರ-ವಿಚಾರಗಳಲ್ಲದೆ, ಆ ಧರ್ಮದಲ್ಲಿ ಆಗಿಹೋದ ಮಹಾಪುರುಷರ ಜೀವನ ಸಾಧನೆಗಳ ಸ್ತುತಿ ಇಲ್ಲಿಯ ವಸ್ತು. ವಚನ ಕೀರ್ತನೆಗಳಂತೆ ಇಲ್ಲಿ ಸಾಮಾಜಿಕ ಅಭಿವ್ಯಕ್ತಿಯ ತೀವ್ರ ಸಂವೇದನೆ ಇಲ್ಲಿಲ್ಲವಾದರೂ ಲೋಕಜ್ಞಾನವನ್ನೊಳಗೊಂಡ ಅನುಭಾವದ ಮಾತುಗಳಿಂದ ಧಾರ್ಮಿಕತೆಯ ಕಡೆಗೆ ನಮ್ಮ ಒಲವನ್ನು ಕೇಂದ್ರಿಕರಿಸುವುದು ಪ್ರಸ್ತುತ ಹಾಡುಗಳ ಆಶಯವಾಗಿದೆ. ಅಂದರೆ ಜಿನಪತಿಗಂ, ಜಿನಮುನಿಗಂ, ಜಿನಾಗಮಕ್ಕಂ, ಪ್ರಸ್ತುತ ಹಾಡುಗಳ ಆಶಯವಾಗಿದೆ. ಅಂದರೆ ಜಿನಪತಿಗಂ, ಜಿನಮುನಿಗಂ, ಜಿನಾಗಮಕ್ಕಂ, ಜಿನಾಧಿಪತಿಗೆ ಭವನಕ್ಕಂ, ಜಿನಗುಣಸಂಪತ್ತಿಗಂ ಮೀಸಲಾದ ಇಲ್ಲಿಯ ಹಾಡುಗಳಲ್ಲಿ ಜಿನಭಕ್ತಿಯ ನಿಷ್ಠೆ-ಅವಧಾನಗಳು ಸ್ಥಾನ ಗಳಿಸಿವೆ. ಜನ್ಮಾಂತರಗಳ ಪ್ರಸ್ತಾಪ, ಲೌಕಿಕ ಬದುಕಿನ ದುಃಖಮಯ ಸನ್ನಿವೇಶಗಳು, ಇದರಿಂದ ಪಾರಾಗಲು ಹಂಸನಾಥನ, ಧ್ಯಾನ್ಯ ದಾನ-ಪೂಜೆ ಜಪತಪಗಳ ಪರಿಕರಗಳನ್ನೊಳಗೊಂಡ ಇಲ್ಲಿಯ ಹಾಡುಗಳನ್ನು ಸಂಗ್ರಹ ಹಾಗೂ ಅಧ್ಯಯನ ದೃಷ್ಟಿಯಿಂದ ೧. ರತ್ನಾಕರನ ಹಾಡುಗಳು, ೨. ತೀರ್ಥಂಕರರ ಹಾಡುಗಳು, ೨. ಯಕ್ಷಿಣಿಯರ ಹಾಡುಗಳು, ೪. ಜೋಗುಳ ಹಾಡುಗಳು, ೫. ಶೋಭಾನದ ಹಾಡುಗಳು, ೬. ಮಂಗಳಾರತಿಯ ಹಾಡುಗಳು ಹಾಗೂ ೭. ಸಂಕೀರ್ಣ ಹಾಡುಗಳೆಂದು ವರ್ಗೀಕರಿಸಿಕೊಳ್ಳಲಾಗಿದೆ.

. ರತ್ನಾಕರನ ಹಾಡುಗಳು

ಶತಕ ಬರೆದು ಕೈ ಪಳಗಿಸಿಕೋಂಡ ರತ್ನಾಕರ ಅಣ್ಣನ ಪದಗಳೆಂಬ ಹೆಸರಿನಲ್ಲಿ ಆತ್ಮ ಮೋಕ್ಷ ವಿಚಾರಗಳನ್ನೊಳಗೊಂಡ ಹಾಡುಗಳನ್ನು ಬರೆದಿದ್ದಾನೆ. ಇಲ್ಲಿ ನೀತಿ-ತತ್ತ್ವಗಳೇ ಸ್ಥಾಯಿಭಾವ. ಹೇಳುವ ರೀತಿ ಶತಕಗಳಿಗಿಂತ ತೀರಾ ಸಾಮಾನ್ಯ. ‘ಬಿಡುಬಿಡು ತನುವೆ’ ಎಂಬ ತನು ವಿಮೋಚನಾಭವ; ಆತ್ಮಧ್ಯಾನ ಮುನಿಗಳಿಗುಂಟು ಗೃಹವಂತರಿಗುಂಟು, ಹಾಗೆಯೇ ಬಲುಶಾಸ್ತ್ರ ಬಡಶಾಸ್ತ್ರಗಳಿಗುಂಟು ಭವ್ಯತಿಲಕರಿಗುಂಟು ಎಂದು ನಿರ್ಭೀಡೆಯಿಂದ ಹೇಳುವ ರತ್ನಾಕರ ಡಾಂಭಿಕರ ನಡೆ-ನುಡಿಗಳನ್ನು ವಿಮರ್ಶೆ ಮಾಡುತ್ತಾನೆ. ಹಿಂದುಳಿದೆನೋ ನಾನು; ಮುಂದಾದರೆಮ್ಮವರು ಮೋಕ್ಷಪುರಕೆ ಎಂಬ ಮೋಕ್ಷ ಸಾಧನೆಯ ತುಡಿತವಿದೆ. ಈ ಮೋಕ್ಷವನ್ನು ಕೈವಶ ಮಾಡಿಕೊಳ್ಳಬೇಕಾದರೆ ಸಾಧನೆಯ ದಾರಿ ಮುಖ್ಯ. ಆ ಕಾರಣವಾಗಿ “ಆಯುಷ್ಯದಂತ್ಯದೊಳು ಮುಪ್ಪು ತಬ್ಬುತ ನೋಯಿಸುತ ಕರ್ಮವ ಗೆಲ್ಲುಮಲ್ಲ”ನೆಂದು ಕರೆಕೊಡುತ್ತಾನೆ. ಯಾಕೆಂದರೆ ಲೌಕಿಕ ಸುಖಕ್ಕೆ ಮಾರುಹೋದ ನಾವುಗಳು “ನೆರೆ ಕಬ್ಬಿನೊಳಗಿರ್ದ ರಸವ ಕಾಣದೆ ಹೊರಗಿನ ಸೋಗೆಯ (ರವದಿ)ನ್ನು ಮಾತ್ರ ತಿನ್ನುವ ಕುರಿಗಳಂತಾಗಿದ್ದೇವೆ; ಇದು ಸರಿಯಲ್ಲ, ಕಬ್ಬಿನ ರಸವ ತಿನ್ನುವ ಆನೆಯಂತೆ ವಿಷಯದಾಸೆಯಿಂದ ಮಿಮುಖರಾಗಿ ಬ್ರಹ್ಮಾನಂದ ರಸವ ಸವಿಯಬೇಕೆಂದು ಕವಿಯ ಆಶಯವಾಗಿದೆ.

ರತ್ನಾಕರವರ್ಣಿ ಯೋಗಭೋಗಗಳ ಸಮನ್ವಯ ಕವಿ. ಹೀಗಾಗಿ ಯೋಗವೇ ಭೋಗವಯ್ಯ ತಿಳಿದರೆ; ತಿಳಿಯದಿರೆ ತನ್ನ ಯೋಗವೇ ರೋಗವಯ್ಯ ಎಂದಿದ್ದಾನೆ. ಸಂಸಾರ ಸುಖದಿಂದ ಸಾಕಾಗಿ ಹೋಗಿರುವ ಜೀವಿಯು ಸಂಜೀವನದಮೃತವನ್ನು, ಹಾಲ ಸಮುದ್ರವನ್ನು ಹಾಗೂ ಪರುಷಪರ್ವತವನ್ನು ಕಂಡ ಮೇಲೆ ಗಂಜಿ, ಪಶುಜಾಲ ಸಿರಿ ಬೇಕೆಂದು ಹಲಬುವುದೆಷ್ಟು ಉಚಿತವಾದದ್ದು. ಹಾಗೆಯೇ ಪರಮಾತ್ಮ ಭಾವನೆಯನ್ನು ಕಂಡ ಮೇಲೆ ಗುರುಚಿ ದಂಬರನಾಸೆಯೇ ಎಂದು ಪ್ರಶ್ನಿಸುವ ಔಚಿತ್ಯವನ್ನು ಇಲ್ಲಿ ಗಮನಿಸಬೇಕು. ಅಂದರೆ ಆತ್ಮ ಸ್ವರೂಪವನ್ನು ಪಡೆಯಲೆತ್ನಿಸುವ ವ್ಯಕ್ತಿ ವಾಸ್ತವದ ವಿಷಯ ಪರಿವೆಗಳನ್ನು ಲಕ್ಷ್ಯದಲ್ಲಿರಿಸಿಕೊಳ್ಳಬೇಕು. ಅವುಗಳಲ್ಲಿ ಸಿರಿಯೂ ಒಂದು. “ಮಣ್ಣಿನ ಬೆನಕಗೆ ಮಜ್ಜನವೆ ಮರಣವೆಂಬಂತಹ” ಕ್ಷಣಿಕ ಸುಖದ ಸ್ವರೂಪ ಇದರದ್ದು. ದೇಹ, ಆತ್ಮ, ಮನಸ್ಸು, ಮೋಕ್ಷ ಮುಂತಾದ ವಿಷಯಗಳ ಬಗ್ಗೆ ಸಾಕಷ್ಟು ಮಾತಾಡಿದ್ದಾನೆ. ಕರ್ಮದಾಟವೇ ಸಂಸಾರವೆಂಬ ಭಾವನೆ ಹೊಂದಿದ್ದಾನೆ. ಇದರ ಫಲವಾಗಿ ಆಳುದ್ದ ದೇಹ ಗೇಣುದ್ದವಾಗುತ್ತದೆಂದು ಟೀಕಿಸಿದ್ದಾನೆ. ದೇಹದ ಅವಸ್ಥೆಗಳಾದ ಹುಟ್ಟು, ಯೌವ್ವನ, ಮುಪ್ಪು, ಸಾವುಗಳನ್ನು ಕುರಿತು ಅನೇಕ ಪದ್ಯಗಳಲ್ಲಿ ಎಚ್ಚರಿಸಿದ್ದಾನೆ. ಇವುಗಳಿಂದ ತಪ್ಪಿಸಿಕೊಳ್ಳುವ ಪರಿಯನ್ನು ಸೂಚಿಸಿದ್ದಾನೆ. ಲೌಕಿಕ ಜೀವನದಲ್ಲಿ ತೊಳಲುವ ವ್ಯಕ್ತಿಯನ್ನು ಕೋಣ ಮನುಜನೆಂದು ಕರೆದು ಧ್ಯಾನ, ವ್ರತ ಇತ್ಯಾದಿ ಧರ್ಮಗಳ ಮೂಲಕ ಆತ್ಮನ ಕಾಣಬೇಕೆಂದು ವೈರಾಗ್ಯದ ತುತ್ತತುದಿಯನ್ನು ಮೆಟ್ಟಿ ತಿಳಿಸುತ್ತಾನೆ. ಮುಂದುವರಿದು ಯಾವುದು ಹಿತಕರ ಯಾವುದು ಅಹಿತಕರವಾದದ್ದು ಎಂಬುದನ್ನು ಗಾದೆ ಮಾತಿನಂತೆ ಹೇಳಿ ಮನವರಿಕೆ ಮಾಡಿಕೊಳ್ಳುತ್ತಾನೆ.

ಹಂಸನರಿದು ಭಾವಿಸುವುದೇ ಸಂಸಾರ
ಹಂಸನರಿಯದ ಸುಖವೇ ದುಃಸ್ಸಾರ ||

ಆತ್ಮನನರಿದು ಭೋಗಿಪ ಭೋಗ ಸಂಭೋಗ
ಆತ್ಮನನರಿಯದ ಭೋಗದುಬ್ಬೇಗ
ಆತ್ಮನನರಿದು ಕೂಡುವ ಯೋಗ ಸಂಯೋಗ
ಆತ್ಮನನರಿಯದ ಯೋಗ ಕುಂಯೋಗ ||

ಆಧ್ಯಾತ್ಮ ಮುಟ್ಟಿ ಹಾಡುವ ಗೀತ ಸಂಗೀತ
ಆಧ್ಯಾತ್ಮ ಮುಟ್ಟಿ ಹಾಡದ ಗೀತ ದುರ್ಗೀತ
ತನ್ನ ಬಲವನ ಜೀವನವೇ ಸಂಜೀವನ
ತನ್ನನರಿಯದಿರ್ದಡದು ದುರ್ಜೀವನವು ||

ಕೊಲೆ-ಹುಸಿ-ಕಳವು ಕುರಿತಂತೆ ತನ್ನದೇ ಆದ ರೀತಿಯಲ್ಲಿ ರತ್ನಾಕರ ವ್ಯಾಖ್ಯಾನಿಸಿಕೊಮಡು ಹೋಗಿದ್ದಾನೆ. ಕೊಲೆ ಆಂತಕನ ಸಂಕೋಲೆ! ಅದು ಬಹುಘೋರ ನರಕ ನೆಲೆ ಹುಸಿ (ಸುಳ್ಳು) ತನ್ನನ್ನೇ ಮುರಿದು ನುಂಗುವ ಮೃತ್ಯುದೇವಿಯ ಖಡ್ಗದಂತೆ, ವಿಮಲಕೀರ್ತಿ ಕಾಂತೆಯ ಮುಖಕೆ ತೊಡೆದ ಮಸಿಯಂತೆ, ಹಾಗೆಯೇ ಕಳವು ತನ್ನೆದೆಯಲ್ಲಿ ಹೊಕ್ಕ ಕಳವಳವು; ಲೋಕದಳಿವು; ಸಂಸಾರ ಘೋರಾಂಬುರಾಶಿಯ ಸೆಳೆವು. ಪರದಾರರೊಳು ಸ್ನೇಹ ಪರಮ ಪಾಪದ ಗೇಹ, ಪರನಾರಿಯರ ಸಂಗದಿಂದ ಪರಮಾಯುಷ್ಯಕೆ ಭಂಗಬರುತ್ತದೆ. ಇಂತಹ ಅತಿಕಾಂಕ್ಷೆ ಯಾರಿಗಿರುತ್ತದೆಯೋ ಆತನಿಗೆ ಅತಿಕ್ಲೇಶ, ಅತಿದುಃಖ ಎಲ್ಲವೂ ಅತಿಯಾಗುತ್ತವೆ. ಅದಕ್ಕೆ ಬದಲಾಗಿ ಹಂಸನ ಭಜನೆಯಿಂದ ಸದ್ಗತಿಪಡೆದು ಮುಕ್ತಿಯ ಮಾರ್ಗ ಹಿಡಿಯಲು ಆತ್ಮಕ್ಕೆ ಆದೇಶಿಸುತ್ತಾನೆ. ಬದುಕಿನ ಪಾಪ-ಪುಣ್ಯಗಳೆಂಬ ಕರ್ಮಗಳೇ ಆತ್ಮನ ಬೀಳು-ಏಳುಗಳಿಗೆ ಕಾರಣವೆಂಬುದು ಜೈನರ ಸಿದ್ಧಾಂತವಾಗಿದೆ. ಚಾರಿತ್ರ ಹಾಗೂ ಆಚಾರಗಳು ಜಿನಧರ್ಮದ ಅಂಗಗಳು. ಗುರಿ ಶುದ್ಧವಿದ್ಧರಷ್ಟೆ ಅದನ್ನು ಸಾಧಿಸುವ ಮಾರ್ಗ ಶುದ್ಧವಿರಬೇಕು. ಮಾನವ ಸುಖಸಂಪಾದನೆಗೆ ತೊಡಗುತ್ತಾನೆ. ಸುಖವೆಂದರೇನು?ಅದರ ಅಸ್ತಿತ್ವ ಎಲ್ಲಿ? ಅದರ ಸ್ವರೂಪವೇನು? –ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿ ಮೊದಲು ಉತ್ತರ ಕಂಡುಕೊಳ್ಳಬೇಕಾಗಿದೆ. ಭೌತಿಕ ದೃಷ್ಟಿಯಲ್ಲಿ ದುಃಖದ ನಂತರ ಸುಖದ ಸರತಿ, ಸಂಸಾರ ಅತಿ ದುಃಖದಿಂದ ಕೂಡಿರುವುದರಿಂದ ಅಲ್ಲಿ ಬರುವ ಅಲ್ಪಸುಖಕ್ಕೆ ಬೆಲೆ. ಆದರೆ ಆತ್ಮನ ಸ್ವಭಾವವಾದ ಸುಖ ಶಾಶ್ವತವಾದದ್ದು. ಇದು ಬಾಹ್ಯವಸ್ತುಗಳಿಂದ ಕೈಗೂಡುವುದಿಲ್ಲ. ಯಾವ ಸತ್ಯಮಾರ್ಗವನ್ನವಲಂಬಿಸುವವೋ  ಅದರಲ್ಲಿ ಸಂಶಯ ಪಡದಿರುವ ನಿಃಶಂಕಭಾವ, ಲೌಕಿಕ ಸುಖದಿಚ್ಛೆಯನ್ನು ಮಾಡದಿರುವ ನಿಃಕಾಂಕ್ಷಿತ ಭಾವ, ರೋಗಿಯನ್ನು, ಕುರೂಪಿಯನ್ನು, ದುಃಖಿಯನ್ನು ಕಂಡು ಹೇಸದೆ ಅವನ ಸಹಾಯಕ್ಕೆ ಮುಂದಾಗುವ ನಿರ್ವಿಚಿಕಿತ್ಸಾಗುಣ, ಸತ್ಯದ ಆಚರಣೆಗೆ ಸಹಿಸದ ಅಮೂಢದೃಷ್ಟಿ; ಅಜ್ಞಾನಿ-ಅಸಮರ್ಥರಿಂದ ಸನ್ಮಾರ್ಗದ ನಿಂದೆಯಾಗುತ್ತಿದ್ದರೆ ಖಂಡಿಸಿ ನಿಲ್ಲುವ ಉಪಗೂಹನ ಭಾವ, ಯೋಗ್ಯ ದಾರಿಯಲ್ಲಿ ಕರೆದೊಯ್ಯುವ ಸ್ಥಿತೀಕರಣ, ಸುತ್ತಲಿನವರನ್ನು ಪ್ರೀತಿ-ಸ್ನೇಹದಿಂದ ಕಾಣುವ ವಾತ್ಸಲ್ಯಭಾವ, ಅಹಿಂಸಾಮಯ ಧರ್ಮ ಪ್ರಚಾರದ ಪ್ರಭಾವನಾಗಳೆಂಬ ಸಮ್ಯಗ್ ದರ್ಶನದ ಎಂಟು ಅಂಗಗಳನ್ನು ಅಳವಡಿಸಿಕೊಳ್ಳಬೇಕೆಂದು ಜೈನ ತತ್ತ್ವಶಾಸ್ತ್ರ ಹಾಗೂ ಧರ್ಮದ ತಿರುಳಾಗಿದೆ. ಹಾಗೆಯೇ ಚಾರಿತ್ರ್ಯವೆನ್ನುವುದು ಜೈನ ಧರ್ಮದ ಪ್ರಾಣ. ಇಲ್ಲಿ ಚಾರಿತ್ರ್ಯವೆಂದರೆ ಆಚಾರಗಳು ಎಂದರ್ಥ. ಇದಕ್ಕೆ ಆಧಾರವಾಗಿ ಪಂಚಮಹಾವ್ರತಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಾಹ್ಮಣ ಹಾಗೂ ಅಪರಿಗ್ರಹಗಳು ಮುಖ್ಯವೆನಿಸುತ್ತವೆ. ಇವುಗಳು ವ್ಯಕ್ತಿವಿಕಸನಕ್ಕೆ ಮಾತ್ರ ಪೂರಕವಾಗಿಲ್ಲ. ಇಡೀ ವಿಶ್ವಕಲ್ಯಾಣಕ್ಕೆ ಪ್ರೇರಕವಾಗಿವೆಂಬುದನ್ನು ರತ್ನಾಕರ ಸರಳವಾದ ಹಾಡುಗಳ ಮೂಲಕ ಸಾಮಾನ್ಯರಿಗೆ ಸಂದೇಶ ಮಾಡಿದ್ದಾನೆ.

. ತಿರ್ಥಂಕರನ ಹಾಡುಗಳು

ಜೈನರಲ್ಲಿ ದೇವರ (ಈಶ್ವರ) ಕಲ್ಪನೆಯಿಲ್ಲವಾದರೂ ಆತ್ಮಕ್ಕೆ ಪ್ರಾಶಸ್ತ್ಯವಿದೆ. ಆತ್ಮವನ್ನು ಗೆದ್ದ ತೀರ್ಥಂಕರಾದಿ ಮುಕ್ತಜೀವರ ಪೂಜೆ ಇವರಲ್ಲಿ ನಡೆಯುತ್ತದೆ. ಅವರಲ್ಲಿ ಅರ್ಹಂತರು, ಸಿದ್ಧರು, ಉಪಾಧ್ಯಾಯರು, ಆಚಾರ್ಯರು, ಸಾಧುಗಳನ್ನೊಳಗೊಂಡು ಪಂಚಪರಮೇಷ್ಠಿಗಳೆಂದು ಕರೆಯುವ ವಾಡಿಕೆ. ತೀರ್ಥಂಕರರನ್ನು ಸಂಸಾರ ನಿಸ್ತರಣೋಪಾಯವನ್ನು ಮಾಡುವ ತೀರ್ಥಂಕರನೆಂದೂ; ರಾಗದ್ವೇಷ ಇಲ್ಲವೆ ಕರ್ಮರೂಪ ಶತ್ರುಗಳನ್ನು ಜಯಿಸಿದ ಜಿನನೆಂದೂ, ಪರಮಸ್ಥಾನದಲ್ಲಿರುವ ಪರಮೇಷ್ಠಿಯೆಂದೂ, ರಾಗವಿಲ್ಲದಿರುವ ವೀತರಾಗನೆಂಬ ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತದೆ.

ನಾಲ್ಕು ರೀತಿಯ ಘಾತಿಕರ್ಮಗಳನ್ನು ನಾಶಮಾಡಿಕೊಂಡು, ಅನಂತಜ್ಞಾನ-ದರ್ಶನ-ಸುಖ-ವೀರ್ಯಗಳುಳ್ಳವರೂ, ಶುಭ್ರದೇಹಿಗಳೂ, ಪರಿಶುದ್ಧರೂ ಆದ ತೀರ್ಥಂಕರರು ನಿಶ್ಚಯಾನುಸಾರವಾಗಿ ಅಶರೀರಿಗಳಾದರೂ ವ್ಯವಹಾರಾನುಸಾರವಾಗಿ ಸಪ್ತಧಾತು ರಹಿತ ಅತ್ಯುಜ್ವಲ ಪವಿತ್ರದೇಹವುಲ್ಲವರೆಂಬ ಭಾವನೆ ಜೈನಧರ್ಮದ ಸಿದ್ಧಾಂತ. ಈ ತೀರ್ಥಂಕರರು ಕ್ಷುಧೆ, ತೃಷೆ, ಭಯ, ದ್ವೇಷ, ರಾಗ, ಮೋಹ, ಚಿಂತೆ, ಜರೆ, ರೋಗ, ಮೃತ್ಯು, ಖೇದ, ಸ್ವೇದ, ಮದ, ಆರತಿ, ವಿಸ್ಮಯ, ಜನ್ಮ, ನಿದ್ರೆ, ವಿಷಾದಗಳೆಂಬ ಹದಿನೆಂಟು ರೀತಿಯ ದೋಷಗಳಿಂದ ಮುಕ್ತರಾದವರು. ಭೂಮಿಯ ಪಾಪವನ್ನು ಹಗುರುಮಾಡಲಿಕ್ಕೆ; ತಾಮಸ ಹೃದಯವನ್ನು ಬೆಳಗುವುದಕ್ಕೆ, ಕಲ್ಪಕಲ್ಪಗಳಲ್ಲಿ ತೀರ್ಥಂಕರರು ಉದಯಿಸಿದ್ದಾರೆಂಬ ಭಾವನೆಯಿದೆ. ತೀರ್ಥಂಕರರಾಗುವ ಜೀವರಿಗೆ ಮಾತೃಗರ್ಭದಲ್ಲಿ ಗರ್ಭಾವತರಣ, ಜನಿಸಿದಾಗ ಜನ್ಮಾಭಿಷೇಕ, ನಿಷ್ಕ್ರಮಣ ಕಾಲದಲ್ಲಿ ಪರಿನಿಷ್ಕ್ರಮಣ, ಕೇವಲ ಜ್ಞಾನವಾದಾಗ ಕೇವಲ ಜ್ಞಾನ ಕಲ್ಯಾಣ, ಪರಿನಿರ್ವಾಣ ಕಾಲದಲ್ಲಿ ಪರಿನಿರ್ವಾಣ ಕಾಲದಲ್ಲಿ ಪರಿನಿರ್ವಾಣ ಕಲ್ಯಾಣವೆಂಬ ಪಂಚಮಹಾಕಲ್ಯಾಣಗಳೆಂಬ ಮಹೋತ್ಸವಗಳು ನೆರವೇರುತ್ತವೆ.

ತೀರ್ಥಂಕರರಿಗೆ ಅಪಾಯಗಮಾತಿಶಯ, ಜ್ಞಾನಾತಿಶಯ, ಪೂಜಾತಿಶಯ, ವಚನಾತಿಶಯಗಳೆಂಬ ಚತುಷ್ಪಾತಿಶಯಗಳಲ್ಲದೇ; ಬೇರೆಯೇ ಆದ ೩೪ ಅತಿಶಯಗಳಿರುವವು. ಅವುಗಳೆಂದರೆ, “೧. ದೇಹದಲ್ಲಿ ಯಾವಾಗಲೂ ಜೀವರಿಲ್ಲ, ೨. ಯಾವ ಹೊಲಸೂ ಇಲ್ಲ, ೩. ಶರೀರದ ರಕ್ತ-ಮಾಂಸಗಳು ಶುಭ್ರವಾಗಿ, ವಿಶುದ್ಧವಾಗಿ ಇರುವವು, ೪. ಅವರ ಆಕೃತಿಯು ಉತ್ತಮ (ಸಮಚತುರಸ್ರ ಸಂಸ್ಥಾನ), ೫. ಅವರ ಶರೀರದ ಸ್ನಾಯುವೇಷ್ಟನ, ಎಲುಬು ಕೀಲುಗಳು ವಜ್ರಮಯ, ೬. ಅವರ ಶರೀರವು ಅತಿಶಯ ಸುಂದರ, ೭. ಅವರ ದೇಹವು ದಿವ್ಯಸುಗಂಧವನ್ನು ಬೀರುವುದು, ೮. ಅವರ ದೇಹವು ೧೦೮ ಸುಲಕ್ಣ (ಲಾಂಛನ)ಗಳುಳ್ಳದು, ೯. ಅವರ ಶರೀರವು ಅಪರಿಮಿತ ವೀರ್ಯವುಳ್ಳದ್ದು, ೧೦. ಅವರ ಭಾಷಣವು ಹಿತವೂ ಮಿತವೂ, ಪ್ರಿಯವೂ ಆಗಿರುವುದು. (ಇವು ೧೦ ಜನ್ಮ ಸಿದ್ಧವಾದ ಅತಿಶಯಗಳು.) ಕೇವಲ ಜ್ಞಾನ ಉಂಟಾದ ತರುವಾಯ ಬರುವ ಅತಿಶಯಗಳು ಹತ್ತು. ಅವುಗಳೆಂದರೆ, ೧. ಅವರು ಇರುವ ಪ್ರದೇಶದ ಸುತ್ತಲೂ ೧೦೦ ಯೋಜನೆಗಳವರೆಗೆ ಸುಭಿಕ್ಷವಿರುವುದು. ೨. ಅವರು ಭೂಮಿಯನ್ನು ಸೋಂಕದೆ ಆಕಾಶದಲ್ಲಿ ಸಂಚರಿಸುವರು, ೩. ಅವರಿರುವಲ್ಲಿ ಯಾವ ಪ್ರಾಣಿಯ ವಧೆಯೂ ಆಗುವುದಿಲ್ಲ. ೪. ಅವರು ಭೋಜನ ಮಾಡುವುದಿಲ್ಲ, ೫. ಅವರು ಸಂಚರಿಸುವಲ್ಲಿ ಅತಿವೃಷ್ಟ್ಯಾದಿ ಅತಿಬಾಧೆಗಳಿಲ್ಲ, ೬. ಅವರನ್ನು ನೋಡುವವರಿಗೆಲ್ಲ ಅವರು ತಮ್ಮ ಸಮ್ಮುಖದಲ್ಲಿದ್ದಂತೆ ತೋರುವುದು, ೭. ಎಲ್ಲಾ ವಿದ್ಯೆಗಳ ಒಡೆತನವು ಅವರಿಗುಂಟು, ೮. ಅವರ ನೆರಳು ಬೀಳುವುದಿಲ್ಲ, ೯. ಅವರು ಕಣ್ಣುರೆಪ್ಪೆಗಳನ್ನು ಬಿಡಯುವುದಿಲ್ಲ, ೧೦. ಅವರ ದೇಹದ ಕೂದಲು ಉಗುರುಗಳು ಬೆಳೆಯುವುದಿಲ್ಲ. (ಇನ್ನು ೧೪ ಅತಿಶಯಗಳು ದೇವತೆಗಳಿಂದ ಮಾಡಲ್ಪಡುವವು) ಅವುಗಳೆಂದರೆ: ೧. ಅರ್ಹಂತರಿಗೆ ಅರ್ಧ ಮಾಗಧೀ ಭಾಷೆಯುಂಟಾಗುವುದು, ೨. ಸಮಸ್ತ ಜೀವರಲ್ಲಿ ಪರಸ್ಪರ ಮೈತ್ರಿಯುಂಟಾಗುವುದು, ೩. ದಿಕ್ಕುಗಳು ನಿರ್ಮಲವಾಗುವುದು, ೪. ಆಕಾಶವು ನಿರ್ಮಲವಾಗುವುದು, ೫. ಎಲ್ಲ ಋತುಗಳ ಹೂ-ಹಣ್ಣು ಕಾಯಿಗಳೂ, ಕಾಳುಗಳೂ ಬೆಳೆಯುವವು, ೬. ಒಂದು ಗಾವುದವರೆಗಿನ ನೆಲವು ಕನ್ನಡಿಯಂತೆ ನಿರ್ಮಲವಾಗುವುದು, ೭. ಅರ್ಹಂತರು ನಡೆಯುವಾಗ ಅವರ ಪಾದಗಳ ಕೆಳಗೆ ಸುವರ್ಣ ಕಮಲಗಳುಂಟಾಗುವವು, ೮. ಆಕಾಶದಲ್ಲಿ ಜಯಜಯಧ್ವನಿಯುಂಟಾಗುವುದು, ೯. ಮಂದವೂ, ಸುಗಂಧವೂ ಆದ ಗಾಳಿ ಬೀಸುವುದು, ೧೦. ಸುವಾಸನೆಯ ನೀರಿನ ಮಳೆಯಾಗುವುದು, ೧೧. ಪವನಕುಮಾರ ದೇವತೆಗಳು ನೆಲವನ್ನು ಗೂಡಿಸಿ ನಿರ್ಮಲ ಮಾಡುವರು, ೧೨. ಎಲ್ಲ ಜೀವಿಗಳಿಗೆ ಆನಂದವಾಗುವುದು, ೧೩. ಅವರ ಇದಿರಿನಲ್ಲಿ ಧರ್ಮಚಕ್ರವು ತಿರುಗುವುದು, ೧೪. ಛತ್ರ ಚಾಮರ ಘಂಟಿ ಮೊದಲಾದ ಎಂಟು ಮಂಗಲ ವಸ್ತುಗಳು ಯಾವಾಗಲೂ ಹತ್ತಿರ ಇರುವವು.” (ಜೈನಧರ್ಮ ಪರಿಭಾಷೆ: ಮ.ಪ್ರ.ಪೂಜಾರ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ೧೯೭೬, ಪುಟ ೧೦೮-೧೦೯). ಇವುಗಳ ಜೊತೆಗೆ ತೀರ್ಥಂಕರರಿಗೆ ಅಷ್ಟಮಹಾ ಪ್ರಾತಿಹಾರ್ಯಗಳಿವೆ. ಇವು ಇವರ ಗುಣಗಳೆನಿಸಿವೆ. ಇದರಿಂದಾಗಿ ಮತಿ-ಶ್ರುತ-ಅವಧಿಗಳೆಂಬ ತ್ರಿಕಾಲಜ್ಞಾನಿಗಳೆಂಬ ಹೆಗ್ಗಳಿಕೆ ಇವರಿಗೆ ಪ್ರಾಪ್ತವಾಗಿದೆ. ಕ್ಲೇಶಗಳನ್ನು ತೊಡೆದುಹಾಕಿದ ಕೇವಲ ಜ್ಞಾನಿಗಳು. ತೀರ್ಥಂಕರರು ತಮ್ಮ ಮುಕ್ತಿ ಸಾಧನೆಯ ಜೊತೆಗೆ ಸಂಸಾರಿ ಜೀವರಿಗೆ ಪರಿನಿರ್ವಾಣ ಮಾರ್ಗವನ್ನು ತೋರುತ್ತಾರೆ.ಇವರನ್ನು ಕುರಿತಾಗಿ ಜೈನ ಪುರಾಣಾದಿಗಳು ಸೃಷ್ಟಿಯಾದಂತೆ ಇವರ ಅತಿಶಯ ವರ್ಣನೆಗಳನ್ನು ಕಿರಿದರಲ್ಲಿ ಹಿರಿದರ್ಥ ತಿಳಿಸಿಕೊಡುವಂತೆ ಜೈನ ಹಾಡುಗಳು ಬಣ್ಣಿಸಿವೆ. ತೀರ್ಥಂಕರರು ಪುರಾತನದಲ್ಲಿ ೨೪ ಜನ, ವರ್ತಮಾನದಲ್ಲಿ ೨೪ ಜನ ಹಾಗೂ ಭವಿಷ್ಯತ್ಕಾಲದಲ್ಲಿ ೨೪ ಜನ ಆಗಿ ಹೋಗಿದ್ದಾರೆ. ಪ್ರಸ್ತುತ ಹಾಡುಗಳು ಹೆಚ್ಚಾಗಿ ೨೪ ಜನ ವರ್ತಮಾನ ಕಾಲದ ತೀರ್ಥಂಕರರನ್ನು ಕುರಿತು ರಚನೆಗೊಂಡಿವೆ.

ಕಾವ್ಯಾರಂಭದ ಮಂಗಳಾಚರಣ ಪದ್ಯಗಳು, ನಾಂದ್ಯಗಳಲ್ಲಿ ಸಂಕಲನಗೊಂಡಿರುವ ಪ್ರಾರ್ಥನ ಇಲ್ಲವೇ ಸ್ತೋತ್ರ ಪದ್ಯಗಳಲ್ಲದೆ ಇಡೀ ಕಾವ್ಯವೇ ಪ್ರಾರ್ಥನೆಯಾಗಿರುವ ಹಲವು ನಿದರ್ಶನಗಳಿವೆ. ಹರಿಹರ ಕವಿ ಪ್ರಾರ್ಥನೆಗಾಗಿಯೇ ಇಡಿಯಾಗಿ ರಗಳೆಯನ್ನು ಬರೆದಿದ್ದಾನೆ. ವೀರಶೈವ ಸಾಹತ್ಯದಲ್ಲಂತೂ ಈ ಪ್ರಕಾರ ವಿಪುಲವಾಗಿ ಬೆಳೆದಿದೆ. ಪ್ರಾರಂಭದಲ್ಲಿ ದೈವೀ ಕೃಪೆಗಾಗಿ ಸ್ತೋತ್ರಗಳು ಮೀಸಲಾಗಿದ್ದವು. ಬರುಬರುತ್ತಾ ಇದರ ವಸ್ತು ವ್ಯಾಪ್ತಿಗೆ ಧರ್ಮ ಧರ್ಮಾಧಿಕಾರಿಗಳು, ಪುಣ್ಯಪುರುಷರು ಒಳಗಾಗಿದ್ದಾರೆ. ಹಾಗೆಯೇ ಜೈನ ಹಾಡುಗಳಲ್ಲಿಯ ತೀರ್ಥಂಕರ ಹಾಡುಗಳು ಈ ಸ್ತೋತ್ರ ಸಾಹಿತ್ಯ ಪರಂಪರೆಗೆ ಸೇರಿದವುಗಳಾಗಿದ್ದು ೨೪ ತೀರ್ಥಂಕರರ ಸಾಧನೆಯನ್ನು ವೈಭವೀಕರಿಸಿ ಪಠಣ ಮಾಡಿರುವುದು ಹಾಡುಗಳ ಒಟ್ಟು ಆಶಯವಾಗಿದೆ. ಕವಿಯ ಅಂತರಂಗದ ಸುಪ್ತಬಯಕೆಯ ಪ್ರತೀಕವಾಗಿರುವ ಇಲ್ಲಿಯ ಹಾಡುಗಳಲ್ಲಿ ಭಕ್ತಿ-ಶಾಂತರಸಗಳು ಮಡುಗಟ್ಟಿ ನಿಂತಿವೆ. “ಶ್ರೀಮದಮರಪತಿ ನರನೆಂಬ” ೨೪ ನುಡಿಗಳ ಸುದೀರ್ಘವಾದ ಹಾಡು ೨೪ ತೀರ್ಥಂಕರರನ್ನು ಬಣ್ಣಿಸುವ, ವಂದಿಸುವ, ಮೋಕ್ಷಪುರಕ್ಕೆ ದಾರಿ ತೋರಿಸೆಂದು ಬೇಡುವ ಪ್ರಾರ್ಥನ ಪದ್ಯವಾಗಿದೆ. ಕಾಮಿತಾರ್ಥವನು ಕೊಡುವ ವೃಷಭ, ಭಕ್ತಿಯ ಅತಿಶಯವಾದ ಅಜಿತ, ಸುಖದಿಂದ ತುಂಬಿರುವ ಶಂಭವಜಿನ, ಶುಭಲಕ್ಷಣ ಮೂರುತಿಯಾದ ಅಭಿನಂದನ, ಮಮತೆಯ ಪ್ರತೀಕವಾದ ಸುಮತಿ, ಪದ್ಮಾವ ಶಾಂತದವನಾದ ಪದ್ಮಪ್ರಭ, ಸುಖವಿತ್ತು ಸಲಹುವ ಸುಪಾರ್ಶ್ವನಾಥ, ಭವಬಂಧನವನ್ನು ಬಿಡಿಸುವ ಚಂದ್ರಪ್ರಭ, ಅಮೃತಾಂಗನೆಯೊಳು ನಿಂತ ಪುಷ್ಪದಂತ ಪಾತಕವನ್ನೆಲ್ಲ ಪರಿದೀಡಾಡಿದ ಶೀತಳಸ್ವಾಮಿ, ಕಾಮಿತಫಲವೀಯುವ ಶ್ರೇಯಾಂಸ; ಲೇಸನ್ನುಂಟು ಮಾಡುವ ವಾಸುಪೂಜ್ಯ, ಅಮರಗತಿ-ಮತಿಕೊಡುವ ವಿಮಲಜಿನ, ಮುಕ್ತಿಸಂಪದವನೀಯ್ಯುವ ಅನಂತಜಿನ, ಧರ್ಮವನ್ನು ಧರೆಯೊಳುದ್ದರಿಸಿದ ಧರ್ಮನಾಥ, ಅಗಣಿತ ಸುಖಗಳ ಗಣಿಯಾದ ಶಾಂತಿನಾಥ, ಭವನಾಶಕ್ಕೆ ಕಾರಣನಾದ ಕುಂಥುನಾಥ, ಜನರನ್ನು ಸಲಹುವ ಅರಜಿನ, ದೇವ ಮಲ್ಲಿನಾಥ, ಅನುಪಮಮತಿಗಣ ವೀತರಾಗರಾದ ಮುನಿಸುವ್ರತ, ಕೋಮಲಾಂಗನಾದ ನಮಿನಾಥ, ಮೋಕ್ಷ ಸಂಪದ ನೀಡುವ ನೇಮಿನಾಥ, ಸಿದ್ಧಪದವಿ ಕೊಡುವ ವರ್ಧಮಾನರನ್ನು ತಪಪ್ದೆ ನೆನೆವೆನು ಇಪ್ಪತ್ತು ನಾಲ್ವರ ಅಲ್ಪಮತಿಯೊಳು ನಾ ನಿಮ್ಮ ! ಎಂಬ ಉತ್ಕಟ ಭಾವ ಇಂತಹ ಹಾಡುಗಳಲ್ಲಿ ಕಂಡು ಬರುತ್ತವೆ. ಜೊತೆಗೆ ಇಪ್ಪತ್ನಾಲ್ಕು ತೀರ್ಥಂಕರ ಹೆಸರು-ವ್ಯಕ್ತಿತ್ವದ ಪರಿಚಯವಾಗುತ್ತದೆ. ಇದೇ ರೀತಿ ಸ್ತುತಿಸಲೆನಗಳವೆ, ಆದಿನಿನೇಶ್ವರ, ವೃಷಭ ಜಿನೇಶಗೆ, ಅಮರವಂದಿತನಾದ, ಎಂಬ ಪದ್ಯಗಳು ಕೂಡ ತೀರ್ಥಂಕರರ ಮಹಿಮೆಯನ್ನು ಸಾರುತ್ತವೆ.

ಕೆಲವು ಹಾಡುಗಳು ತೀರ್ಥಂಕರರ ಜನನ-ಯೌವ್ವನ-ನಿರ್ವಾಣ ಮುಂತಾದ ಜೀವನ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಜೀವನದುದ್ದಕ್ಕೂ ಜಿನರಿಗೆ ನಡೆಯುವ ಪಂಚ ಕಲ್ಯಾಣ ಮಹೋತ್ಸವಗಳ ವರ್ಣನೆಯನ್ನು ಸೊಗಸಾಗಿ ಪ್ರತಿಪಾದಿಸುತ್ತವೆ. ಉದಾ: ಜೋ ಜೋ ಜೋ ಎಂಬ ಹಾಡು ಆದಿಜಿನೇಶನಾದ ವೃಷಭವನ್ನು ಕುರಿತು ೨೦ ನುಡಿಗಳಲ್ಲಿ ಆತನ ಇತಿವೃತ್ತಿಯನ್ನೇ ಪಟ್ಟಿ ಮಾಡುತ್ತಾ ಹೋಗುತ್ತದೆ.

ಸರ್ವಾರ್ಥ ಸಿದ್ಧಿಯ ಬಿಟ್ಟು ನೀ ಬಂದು
ಮರುದೇವಿಯ
ಶುದ್ಧ
ದರದೊಳ್ನಿಂದು ಇಂದ್ರನರಿದು ವಿದತ್ತಪತಿ
ಕರೆದಂದು ಅನುಜ್ಞೆಯನಮಳೆ ಪೇಳ್ವರೆಂದು

ಎಂಬ ೨ನೇ ನುಡಿಯಿಂದ ಪ್ರಾರಂಭವಾಗುವ ಹಾಡು ಅಯೋಧ್ಯೆಯ ನಾಭಿರಾಜನ ಮನೆಯ ಸುತ್ತೆಲ್ಲಾ ರತ್ನದಾ ಮಳೆಗರೆಯಲು ಇಂದ್ರನು ವಿದತ್ತಪತಿಯನ್ನು ಕಳಿಸುವುದು, ಶಚಿದೇವಿ ಸಹಿತ ಇಂದ್ರನು ಪ್ರಸೂತಿ ಗೃಹವನ್ನು ಪ್ರವೇಶಮಾಡುವುದು, ಮಗುವಿಗೆ ಸ್ನಾನ ಮಾಡಿಸುವುದು, ಅಂಗವಸ್ತ್ರಗಳಿಂದ ಮೈಯನೊರೆಸುವುದು, ವಿಶ್ವಕರ್ಮರು ಚಿತ್ತಚಿತ್ತಾರದ ತೊಟ್ಟಿಲನ್ನು ಮಾಡಿಕೊಡುವುದು, ನಾರಿಯರೆಲ್ಲ ಕೂಡಿ ಜೋ ಜೋ ಜೋ ಪಾಡುವುದು, ಆ ನೆಪದಲ್ಲಿ ೨೪ ತೀರ್ಥಂಕರರ ಗುಣಗಳನ್ನು ಕೊಂಡಾಡುವುದು ಇಡೀ ಹಾಡಿನ ತುಂಬಾ ಓತೋಪ್ರೋತವಾಗಿ ಹರಿದು ಬಂದಿದೆ.

‘ಉದಯ ಕಾಲದೊಳೆದ್ದು’ ಎಂಬುದು ಉದಯರಾಗ. ಒಂದು ರೀತಿಯಲ್ಲಿ ಸುಪ್ರಭಾತದ ಹಾಡು ಇದಾಗಿದೆ. ಉದಯ ಕಾಲದೊಳೆದ್ದು ಮುದದಿ ಸ್ನಾನವ ಮಾಡಿ ಮೃದುವಚನದಿಂದ ಶ್ರೀಜಿನರ ನೆನೆಯೈ” ಎಂಬ ಪಲ್ಲವಿಯಿಂದ ಜಿನ ಸ್ತುತಿಪರವಾದ ಹಾಡೆಂಬುದು ತಿಳಿದು ಬರುತ್ತದೆ. ಇಲ್ಲಿ ಪೆನಗೊಂಡೆ, ರತ್ನಗಿರಿ, ನಾಮಗೊಂಡಲ, ರಾಂಪುರ, ಹಿರಿಯೂರು, ವೇಣುಪುರಿ, ಕುಚ್ಚಂಗಿ, ಬೇಳೂರು, ಕೂಡಲೂರು, ನಿಡಗಲ್ಲು, ಶಿರ, ನಿಟ್ಟೂರು, ಚನ್ನಗಿರಿ ಮುಂತಾದ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡ ಜಿನರಸ್ತುತಿ ಇದೆ. ಆಯಾ ಸ್ಥಳಗಳಿಗೆ ಹಾಡುಗಾರ ಅನ್ವರ್ಥಕ ವಿಶೇಷಣಗಳನ್ನು ನೀಡಿರುವುದು ಅರ್ಥವತ್ತಾಗಿದೆ. ಹೆಸರಾದ ಪೆನುಗೊಂಡೆಯ ಪಚ್ಚಪಾರೀಶ್ವರ, ನಾಮಸಾಸಿರದೊಡೆಯ ನಾಮಗೊಂಡಲ ಅನಂಜಜಿನ, ನಿಚ್ಛ ವೈಭವದೊಳೆಸೆವ ವೇಣುಪುರಿ, ಇಳೆಯೊಳಧಿಕವಾದ ಬೇಳೂರು ಮಿಮಲ ಜಿ, ಎಡೆಬಿಡದ ನಿಡಗಲ್ಲು ಪಾರೀಶ್ವ, ಜಗದೊಳತಿಶಯವಾದ ಶಿರ್ಯದ ಶಾಂತಿಜಿನ ಹೀಗೆ ಮುಂತಾಗಿ ಬಣ್ಣಿಸುವ ರೀತಿ ಹಾಗೂ ಕೊನೆಯಲ್ಲಿ ಛಪ್ಪನ್ನದೇಶದೊಳಗಿಪ್ಪ ಜಿನ ಗೇಹದೊಳು ಇಪ್ಪತ್ನಾಲ್ಕು ಜಿನಬಿಂಬಗಳಿಗೆ ಪುಷ್ಪಗಂಧಕ್ಷತೆಯ ಫಲಗಳಿಂದರ್ಚಿಸುವ ಹಂಬಲವಿದೆ. ವಸುಧೆಗಧಿಕವಾದ ದೇವ’ ಎಂಬ ಸ್ತುತಿ ಪದ್ಯ ೧೪ನೇ ತೀರ್ಥಂಕರನಾದ ಅನಂತನಾಥನನ್ನು ಕುರಿತಾದುದಾಗಿದೆ.

ವಸುಧೆನಧಿಕವಾದ ದೇವಕಾಣಮ್ಮ
ಕುಸುಮಬಾಣನ ಮರ್ಧಿಸಿದ ಕಾಣಮ್ಮ
ವಸುಧೆಯ ಭವ್ಯರ ಭಾಗ್ಯಕಾಣಮ್ಮ
ಶಶಿಮುಖಿಯರು ನೋಡುವ ಬನ್ನಿರಮ್ಮ ||

ಎಂದು ಗುಣಗಾನ ಮಾಡುವುದರಿಂದ ಪ್ರಾರಂಭವಾಗಿ ಸಮವಸರಣ ಮಂಟಪವನ್ನು ಪ್ರವೇಶಿಸುವ; ಮೂವತ್ನಲ್ಕು ಅತಿಶಯಗಳು, ಮೂವತ್ತು ಲಕ್ಷದಾಯುಷ್ಯ ಎಡಬಲಗಳಲ್ಲಿರುವ ಅನಂತಮತಿ-ಪಾತಾಳ ಯಕ್ಷೆ-ಯಕ್ಷರ ಉಲ್ಲೇಖವಿದ್ದು, ಕೊನೆಯಲ್ಲಿ

ಪಾರ್ಥಿವವೆಂಬ ಸಂವತ್ಸರವಮ್ಮ
ಕಾರ್ತೀಕ ಮಾಸದಷ್ಟಾನೀಕವಮ್ಮ
ಕರ್ತೃ ಅನಂತ ಜಿನೇಶಗಮ್ಮ
ಮುಕ್ತಿಸುಖವ ಶಾಂತಿ ಮುನಿಗೀವನಮ್ಮ ||

ಎನ್ನುವಲ್ಲಿ ಇವರ ನಿರ್ವಾಣ ಹೊಂದಿದ ಕಾಲಮಾನವನ್ನು ಸೂಚಿಸಲಾಗಿದೆ. ಹಾಗೆಯೇ ಆದಿಜಿನೇಶ್ವರ ನಮೋ ಎಂಬ ಮೂರು ನುಡಿಗಳ ೨೪ ತೀರ್ಥಂಕರರನ್ನು ಸ್ತುತಿಸಿರುವುದು ವಿಶೇಷವಾಗಿದೆ.

ಅಜಿತಶಂಭವ ಅಭಿನಂದನ ಸುಮತೀಶ
ತ್ರಿಜಗವಂದಿತ ಸುಪಾರೀಶ್ವರ ಚಂದ್ರಪ್ರಭ
ನಿಜಗುಣೆ ಪುಷ್ಪಶೀತಳರೇ ನಮೋ ||

ಶ್ರೇಯೋ ಜಿನವಾಸುಪೂಜ್ಯ ವಿಮಲ ಜಿನ
ಆಯತಮುಕ್ತಿ ಅನಂತನಮೋ
ಕಾಯಜ ಜಯಧರ್ಮ ಶಾಂತಿ ಜಿನನೇ
ಕುಂಥು ಕಾವುದೆನ್ನನು ಅರೆಸ್ವಾಮಿ ನಮೋ ||

ಮಲ್ಲಿಜಿನೇಶ್ವರ ಮುನಿಸುವ್ರತ ಮುಕ್ತಿ
ವಲ್ಲಭ ನಮಿನೇಮಿ ಪಾರೀಶ್ವನಮೋ
ಬಲ್ಲಿದ ವೀರ ಜಿನೇಂದ್ರ ಚೌವೀಶನಿ
ಮ್ಮೆಲ್ಗಡಿಗಳಿಗೆರಗುವೆನು ನಮೋ ||

ಹೀಗೆಯೇ ಅಮರವಂದಿತನಾದ, ದೇವಪಾಲಿಸು ಎನ್ನ, ತೋರಿಸೊ ದೇವಾ, ಪಾಲಿಸೆನ್ನ ಪರಮದೇವ, ಬಂದು ನೋಡಿರೆಲ್ಲ, ಪಾಲಿಸೆನ್ನ ಚಂದ್ರನಾಥ, ಜಿನನೆ ಬಾರೋ ಜಿನ ಚಂದ್ರನೆ ಬಾರೋ, ಭಜಿಸಿರೋ ಭವ್ಯರೆಲ್ಲ, ಕರುಣಿಸೆನ್ನನು ಶಾಂತಿನಾಥ ಮುಂತಾದ ಹಾಡುಗಳಲ್ಲಿ ತೀರ್ಥಂಕರರನ್ನು ಹಲವು ರೀತಿಯಿಂದ ಸ್ತುತಿ ಮಾಡಿ ಹಾಡಲಾಗಿದೆ. ನೇಮಿಜಿನೇಶ್ವರ ಸ್ವಾಮಿ ಎಂಬ ಹಾಡು ೨೭೩ ದ್ವಿಪದಿ ಛಂದಸ್ಸಿನಲ್ಲಿ ರಚನೆಗೊಂಡ ಸುದೀರ್ಘ ಹಾಡಾಗಿದೆ.

ನೇಮಿನಾಥನ ಪಂಚಕಲ್ಯಾಣವನು ಹೇಳ್ವೆ
ನೇಮದಿಮದ
ಶಮಭವಗಳು ಸಹಿತವಾಗಿ

ಎಂದು ಹೇಳಿರುವ ಕವಿ ಶಬರನು ಸತಿಯ ಸಮೇತ ಕಾಡಿಗೆ ಹೋಗಿದ್ದ ಸನ್ನಿವೇಶ, ಅಮಲಬುದ್ಧಿ ವಿಮಲ ಬುದ್ಧಿಗಳ ಯೋಗ ಸಾಧನೆ, ಅವರಿಂದ ಶಬರನಿಗೆ ಧರ್ಮಭೋದೆ ಮುಂತಾದ ಕಥಾನಕವೇ ಬಿಚ್ಚಿಕೊಂಡಿದೆ. ಹೀಗೆ ಇಲ್ಲಿಯ ಹಾಡುಗಳು ಭಕ್ತನ ಅಂತರಂಗದ ಭಕ್ತಿಯ ಆವೇಗವನ್ನು ತಿಳಿಸುವುದರ ಜೊತೆಗೆ ತೀರ್ಥಂಕರರ ಲಾಂಛನ, ತಂದೆ-ತಾಯಿ, ಜನ್ಮಸ್ಥಳ, ನಿರ್ವಾಣ ಸಮಯ, ಧರ್ಮಭೋದೆ, ಪಂಚಕಲ್ಯಾಣ ಪ್ರಸಂಗಗಳು, ಸಮವರಸರಣ ರಚನಾ ಪರಿಕಲ್ಪನೆಯನ್ನು ತೋರಿಸುವುದರ ಮೂಲಕ ಇಡೀ ಜೈನ ಧರ್ಮದ ಸಾಂಸ್ಕೃತಿಕ ಆಯಾಮಗಳನ್ನು ಅನಾವರಣಗೊಳಿಸಿವೆ.