. ಯಕ್ಷಿಣಿಯರ ಹಾಡುಗಳು

ಯಕ್ಷ-ಯಕ್ಷಿಯರು ಜೈನರಲ್ಲಿ ಮಾತ್ರ ಪ್ರಚಲಿತದಲ್ಲಿಲ್ಲ. ಬದಲಾಗಿ ಜೈನೇತರರಲ್ಲಿಯೂ ಇವರ ಕಲ್ಪನೆಗಳಿವೆ. ಆದರೆ ಜೈನರಲ್ಲಿ ಮಾತ್ರ ಇವರಿಗೆ ಸಿಂಹಾಪಾಲು. ಉಳಿದವರಲ್ಲಿ ಇವರ ಕುರಿತಾದ ಸಾಮಗ್ರಿ ತುಂಬಾ ವಿರಳವೆನ್ನಬಹುದು. ಇವರನ್ನು ಕುರಿತಾಗಿ ಕನ್ನಡದಲ್ಲಿ ಶಾಸನ(ಪಠ್ಯ), ಸಾಹಿತ್ಯ ಹಾಗೂ ಶಿಲ್ಪ (ಚಿತ್ರ)ಗಳೆಂಬ ಮೂರು ನೆಲೆಗಳಲ್ಲಿ ಅಧ್ಯಯನ ಮಾಡಬಹುದಾದಷ್ಟು ಹೇರಳ ಸಾಮಗ್ರಿ ಸಂಪತ್ತಿದೆ.

ಭಾರತೀಯ ಸಾಹಿತ್ಯ ಚರಿತ್ರೆಯಲ್ಲಿ ವೇದ-ಉಪನಿಷತ್ತು, ರಾಮಾಯಣ, ಪುರಾಣ, ಕಾವ್ಯಗಳಲ್ಲಿ ಇವರ ಉಲ್ಲೇಖ ಬರುತ್ತದೆ. ಅದೇನಿದ್ದರೂ ಜೈನ ಧರ್ಮದಲ್ಲಿ ತೀರ್ಥಂಕರರ ಮೂರ್ತಿಗಳಲ್ಲಿ ಯಕ್ಷ-ಯಕ್ಷಿಯರಿಗೆ ಉನ್ನತ ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ. “ಜಿನ ಪ್ರತಿಮೆಯು ಮುಕ್ಕೊಡೆ, ಅಶೋಕ ವೃಕ್ಷ, ಚಾಮರ, ಸಿಂಹಪೀಠ, ಪ್ರಭಾಮಂಡಲ, ದಿವ್ಯಧ್ವನಿ, ಪುಷ್ಪದೃಷ್ಟಿ ಮತ್ತು ದುಂದುಭಿಗಳೆಂಬೀ ಅಷ್ಟ ಮಹಾಪ್ರಾತಿಹಾರ್ಯಗಳುಳ್ಳುದೂ ಸ್ಥಿರ ಮತ್ತು ಚರಬಿಂಬಗಳ ಪಾದಪೀಠದ ಕೆಳಗೆ ಲಾಂಛನವುಳ್ಳದೂ ಬಲಭಾಗದಲ್ಲಿ ಯಕ್ಷ ಎಡಭಾಗದಲ್ಲಿ ಯಕ್ಷಿಯುಳ್ಳದೂ ಆಗಿರಬೇಕು” (ಜಯಸೇನನ ಪ್ರತಿಷ್ಠಾಪಾಠ) ಈ ಮೇಲಿನ ಹೇಳಿಕೆಯಿಂದ ತೀರ್ಥಂಕರ ಹಲವು ಸಂಕೇತಗಳಲ್ಲಿ ಇವರು ಪ್ರಮುಖರೆಂದು ತಿಳಿದು ಬರುತ್ತದೆ. ತೀರ್ಥಂಕರರಿಗೆ ಇರುವಂತೆ ವಾಹನ-ಮೈಬಣ್ಣಗಳನ್ನು ಯಕ್ಷ-ಯಕ್ಷಿಯರಿಗೆ ಆರೋಪಿಸಲಾಗಿದೆ. ಇದಕ್ಕೂ ಮುಂದು ಹೋಗಿ ಲಲಿತಾಸನದಲ್ಲಿ ಕುಳಿತ, ಅವರವರ ವಾಹನ ಆಯುಧಗಳಿಂದ ಕೂಡಿದ ಪ್ರತ್ಯೇಕ ಶಿಲ್ಪಗಳೇ ರೂಪಗೊಂಡವು. ಜೈನರಲ್ಲಿ ಪ್ರಚಲಿತವಿರುವ ಶ್ವೇತಾಂಬರ ದಿಗಂಬರಗಳೆಂಬ ಎರಡು ಸಂಪ್ರದಾಯಗಳ ವ್ಯತ್ಯಾಸ ಯಕ್ಷಿಯರ ವಿವರಣೆಯಿಂದ ಕಂಡುಬರುತ್ತದೆಂಬುದನ್ನು ತಿಳಿದಾಗಲಂತೂ ಇವರ ಮಹತ್ವವೆಷ್ಟೆಂಬುದು ಮನವರಿಕೆಯಾಗುತ್ತದೆ.

ಇಪ್ಪತ್ನಾಲ್ಕು ತೀರ್ಥಂಕರರಿಗೆ ಪ್ರತ್ಯೇಕವಾಗಿ ಬಲಭಾಗದಲ್ಲಿ ಯಕ್ಷ-ಎಡಭಾಗದಲ್ಲಿ ಯಕ್ಷಿಯರಿರುತ್ತಾರೆ. ಇವರನ್ನು ತೀರ್ಥಂಕರರ ರಕ್ಷಕರೆಂದು ಹೇಳಲಾಗುತ್ತಿದೆ. ಕನ್ನಡದ ಬಹುತೇಕ ಜೈನ ಪುರಾಣಗಳಲ್ಲಿ ಇವರನ್ನು ಕುರಿತು ಪ್ರತ್ಯೇಕ ಪ್ರಾರ್ಥನೆ ಇಲ್ಲವೆ ಸ್ತೋತ್ರ ಪದ್ಯಗಳಿವೆ. ಉದಾ: ರನ್ನನ ಅಜಿತ ಪುರಾಣದಲ್ಲಿ ಇವರ ಸ್ತುತಿ ಹೀಗೆ ಬರುತ್ತದೆ.

ಜಿನವೃಂದಾರಕರಿರ್ಪ
ತ್ತು
ನಾಲ್ವರಾ ತೀರ್ಥನಾಥ ಸಮುದಾಯದಶಾ ||
ಸನ ದೇವಿಯರ್ಕಳಿರ್ಪ
ತ್ತು ನಾಲ್ವರೀಗೆಮಗೆ ಯಕ್ಷರಕ್ಷಯ ಸುಖಮಂ ||

ಹಾಗೆಯೇ ಜೈನಪುರಾಣಗಳಲ್ಲಿ ಇವರ ಕುರಿತು ಕಥೆಗಳು ಪ್ರಚಲಿತದಲ್ಲಿವೆ. ನಾಡಿನಾದ್ಯಂತ ದೇವಾಲಯ, ಬಸದಿ, ಜಿನಾಲಯಗಳಲ್ಲಿ ಸುಂದರ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಇಂದಿಗೂ ವ್ಯಕ್ತಿಗಳಿಗೆ ಇವರ ಹೆಸರನ್ನಿಟ್ಟುಕೊಳ್ಳುವುದು ರೂಢಿಯಲ್ಲಿದೆ. ಚಕ್ರೇಶ್ವರ, ರೋಹಿಣಿ, ಪ್ರಜ್ಞಪ್ತಿ, ವಜ್ರಶೃಂಖಲಾ, ಪುರುಷದತ್ತಾ, ಮನೋವೇಗೆ, ಕಾಳಿ, ಜ್ವಾಲಾಮಾಲಿನಿ, ಮಹಾಕಾಳಿ, ಮಾನವಿ, ಗೌರಿ, ಗಾಂಧಾರಿ, ವೈರೋಟಿ, ಅನಂತಮತಿ, ಮಾನಸಿ, ಮಳಾಹಾ ಮಾನಸಿ, ಜಯವಿಜಯಾ, ಅಪರಾಜಿತಾ, ಬಹುರೂಪಿಣಿ, ಚಾಮುಂಡಿ, ಕೂಸ್ಮಾಂಡಿ, ಪದ್ಮಾವತಿ ಹಾಗೂ ಸಿದ್ಧಾಯಿನಿ ಇವರು ೨೪ ಜನ ಯಕ್ಷಿಣಿಯರು ಹಾಗೆಯೇ ಗೋಮುಖ, ಮಹಾಯಕ್ಷ, ಶ್ರೀಮುಖ, ಯಕ್ಷೇಶ್ವರ, ತುಂಬರು, ಪುಷ್ಪ, ಮಾತಂಗ, ಶಾಮ, ಅಜಿತ, ಬ್ರಹ್ಮ, ಈಶ್ವರ, ಕುಮಾರ, ಷಣ್ಮುಖ, ಪಾತಾಳ, ಕಿನ್ನರ, ಗರುಡ, ಗಂಧರ್ವ, ಖೇಂದ್ರ, ಕುಬೇರ, ವರುಣ, ಭೃಕುಟಿ, ಗೋಮೇದ, ಧರಣ ಹಾಗೂ ಮಾತಂಗ ಇವರು ೨೪ ಜನ ಯಕ್ಷರು. ತೀರ್ಥಂಕರ ಹಾಡುಗಳಲ್ಲಿಯೂ ಪ್ರಾಸಂಗಿಕವಾಗಿ ಇವರ ಸ್ತೋತ್ರವನ್ನು ಮಾಡಿರುವುದಾದರೂ, ಇವರನ್ನೇ ಕುರಿತು ಪರಿಪೂರ್ಣವಾದ ಹಾಡುಗಳೂ ಸಹ ರಚನೆಗೊಂಡಿವೆ. ವಿಶೇಷವೆಂದರೆ ಪಾರ್ಶ್ವನಾಥನ ಯಕ್ಷಿ ಪದ್ಮಾವತಿಯ ಹಾಡುಗಳು ಹೆಚ್ಚು ದೊರೆತಿವೆ. ಉಳಿದಂತೆ ಕೊಷ್ಮಾಂಡಿನಿದೇವಿ ಜ್ವಾಲಾಮಾಲಿನಿಯರ ಕುರಿತು ಹಾಡುಗಳಿವೆ. ಪ್ರಸ್ತುತ ಸಂಗ್ರಹದಲ್ಲಿ ಯಕ್ಷಿಣಿಯರ ಹಾಡುಗಳೆಂಬ ಶೀರ್ಷಿಕೆಯಲ್ಲಿ ಇವುಗಳನ್ನು ಒಂದೆಡೆ ಸೇರಿಸಿಕೊಡಲಾಗಿದೆ. ಯಕ್ಷರ ಕುರಿತಂತೆ ಹಾಡುಗಳು ರಚನೆಗೊಂಡಿರುವುದು ಇಲ್ಲವೆನ್ನುವಷ್ಟು ಕಡಿಮೆ.

ಯಕ್ಷಿಯರ ಸೌಂದರ್ಯವನ್ನು ಬಣ್ಣಿಸುವ ಹಾಡುಗಳು ಅವರ ನೋಟ-ಮಾಟ, ವಯ್ಯಾರಗಳನ್ನು ಹಾಗೂ ಧರಿಸಿದ ಆಭರಣಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಲೆಗಾರಿಕೆ ಈ ಹಾಡುಗಳಲ್ಲಿ ಕಂಡು ಬರುತ್ತದೆ. “ಸಿಂಗಾಡಿಯಂದದ” –ಎಂಬ ಹಾಡಿನಲ್ಲಿ ವರ್ಣಿಸಲಾದ ಪದ್ಮಾಂಬೆಯ ಚಿತ್ರಣ ಹೀಗಿದೆ.

ಸಿಂಗಾಡಿಯಂದದ ಪುರ್ಬ್ಬಿನ
ಕಂಗಳ
ಕುಡಿನೋಟದ ಚೆಲುವಿನ
ಭೃಂಗಕುಂತಳದ ಫಣಿವೇಣಿ ಪದ್ಮಾಂಬ
ಸಿಂಗಾರದ ಹೂವ ಮುಡಿಬಾರೇ ||

ರಾಜೀವ ನೇತ್ರದ ತಿಲಕದ
ತೇಜಮುತ್ತಿನ ಮೂಗುತಿ ಹೊಳೆಯಲು
ರಾಜಿಪನಾಸಿಕದ ವಿಮಲಾಂಗಿ ಪದ್ಮಾಂಬ
ಜಾಜಿಯ ಹೂವ ಮುಡಿಬಾರೇ ||

ಕೆಂಬಲಿನ ಕಡು ಸೊಬಗಿಯ ಸಾ
ರಂಬದ ತೊಳ್ದುಜಯ ಚೆಲುವಿಕೆ
ಕಂಬು ಕಂದರದ ಸುಖಪಾಣಿ
ದ್ಮಾಂಬ ಹೋಗೇದಗೆ ಹೂವ ಮುಡಿಬಾರೇ ||

ಹೀಗೆ ಸಲೆಜಾಣೆ, ಮಂದಗಜಗಮನೆ, ಸುಖದೇವಿ ಮುಂತಾದ ವಿಶೇಷಣಗಳಿಂದ ಸಂಪಿಗೆ, ಮಲ್ಲಿಗೆ, ಪಂಕಜ, ಸುರಗಿ ಮುಂತಾದ ಹೂ ಮುಡಿಯಲು ಕರೆಯುವ ಭಾವನಾತ್ಮಕವಾದ ಸಂವೇದನೆ ಇಲ್ಲಿದೆ.

ಪದ್ಮಾವತಿಯನ್ನು ಹಸೆಗೆ ಕರೆಯುವ ಸಾಂಪ್ರದಾಯಿಕ ಹಾಡು “ಗಜದೇವನ ಪಾದ” ಗಜದೇವನ ಪಾದಕ್ಕೆ ನಮಿಸಿ ಅಜನರಸಿಯಾದ ಶಾರದೆಯನ್ನು ಸ್ಮರಿಸಿ ಭುಜಭೂಪಣನನ್ನು ಸಲಹೆಂದು ಬೇಡಿಕೊಂಡು ಪುಂಡಾರಿಕಾಂಬಿಕೆಯರು ತಂಡತಂಡವಾಗಿ ಬಂದು ನಾಚುತ ನಗುತ, ಚಂದ್ರಮಂಡಲದಂತೆ ಹೊಳೆಯುತ್ತ ಪದ್ಮಾವತಿಯನ್ನು ಹಸೆಗೆ ಕರೆತರುವ ನಾರಿಯರ ವರ್ಣನೆಯಿದೆ. ಇವನ್ನು ಕವಿ ಬಡನಡುವಿನ ಭಾವಕಿಯರಿ, ಮಲಯಜಗಂಧಿಯರು, ನಳಿತೋಳಿನ ನವ ಮೋಹಿನಿಯರು, ಕಲಶ ಕುಚದ ಕೋಮಲೆಯರು, ಪದ್ಮಾಂಬೆಯನ್ನು ಹಸೆಗೆ ಕರೆತರುವ ಭಂಗಿ ಶಬ್ದಚಿತ್ರಗಳಲ್ಲಿ ಸೊಗಸಾಗಿ ಮೂಡಿಬಂದಿದೆ. ಅವಳಲ್ಲಿರುವ ಸಂಪತ್ತಿನ ಪ್ರಮಾಣವನ್ನು ಹೀಗೆ ದಾಖಲಿಸುತ್ತಾರೆ.

ದಿನಕೆ ನೂರೆಂಟು ಬಂಡಿ ಕಂಬಿನ ಚಿನ್ನ
ಅನುಮಾಡಿ
ಕೊಡು ಜಿನದತ್ತ ಕೊಡು ಸಂಪನ್ನ
ಕನಕಾದ್ರಿ ಕೊಳವೆ ಅಂಡಿಗೆ ತುಂಬಿ ಹೊನ್ನ
ಎನುತ ಓಕುಳಿಯಾಡಿದರಂತೆ ಮುನ್ನ ||

ಪದ್ಮಾವತಿಯ ಪಟ್ಟಣವಿರುವುದು ಪಾತಾಳದಲ್ಲಿ, ಅವಳಿಗೆ ಧೂತಿಯರು, ನೂರೆಂಟು ಜನ, ಭೂ ಮಂಡಲವನ್ನಿತ್ತ ಫಣಿರಾಜನ ಸಂಬಂಧವಿರುವುದು. ಬದುಕಿನಲ್ಲಿ ಸೋತ ಮನ ಪೂಜಿಸಿದರೆ ಸಾಕು ಭಾಗ್ಯ ಕೈವಶವಾಗುತ್ತದೆ. ಇವಳ ಸತ್ಯಕ್ಕೆ ಚಂದ್ರಾರ್ಕಗಳೇ ಸಾಕ್ಷಿಗಳು. ಹೊಂಬುಜಪುರದ ಪದ್ಮಿನಿದೇವಿಯು ಬಟ್ಟ ಮುಖದ ಬಾಲೆ, ಹಣೆಯಲ್ಲಿ ಕಸ್ತೂರಿಯ ಲೀಲೆ, ವಿಸ್ತಾರದ ಎದೆಯ ಮೇಲೆ ಪದಕದಿಂದ ಅಂದವಾಗಿರುವ ನೀರು “ಮನಕೆ ತುಂಬು ಮತಿಯ ನಂಬೆನಮ್ಮ ಹಂಬಲ ಬಿಡೆ ಸಲಹೆ ಪೊಂಬುಚ್ಚಪುರ ಪದ್ಮಿನಿ” ಎಂದು ಆರಾಧಿಸುತ್ತಾರೆ. ಹೀಗೆ ತಾಯೇ ಪಾಲಿಸು ಮತಿಯ, ರಕ್ಷಿಸೆನ್ನನು ಪುಣ್ಯ, ಪಾಲಿಸೊ ಪದ್ಮಾಂಬ ಎಂಬ ಹಾಡುಗಳು ಅವಳ ಗುಣತಿಶಯಗಳಿಗೆ ಮೀಸಲಾಗಿದೆ. ‘ಪರಾಕು’ ಹೇಳುವ ಹೊಡೊಂದು ೧೧ ನುಡಿಗಳಲ್ಲಿ ಪೂರ್ಣಗೊಂಡಿದ್ದು,

ಅಂಬಾ ಪರಾಕು ದೇವಿಪರಾಕು
ಅಂಬಾ ಪರಾಕು ಪದ್ಮಾಂಬ ಪರಾಕು ||

ಎಂದು ಪ್ರಾರಂಭವಾಗುವ ಪದ್ಯದಲ್ಲಿ ನಾಗಲೋಕಕೆ ಕರ್ತೆ, ಪಾಪಹರನ ಭಕ್ತೆ, ಕುಕ್ಕುಷ್ಠ ವಾಹನೆ, ಕಮಲನಯನೆ, ಪರಮದಯಾನಿಧಿ, ಸಮ್ಯತ್ವಕದಿ ಧೀರೆಯಾದ ಪದ್ಮಾವತಿ ಬೆಳ್ಗೊಳ ಪುರವಾಸೆಯಾಗಿರುವ ನೀನು ಈ ಬಾಲಕನನ್ನು ಕಾಯೇ ಜಗದಾಂಬೆ ಎಂಬ ಅನನ್ಯತೆ ಇಲ್ಲಿದೆ. ಹಾಗೆಯೇ ಶ್ರುತದೇವಿ ಕುರಿತು ಎಚ್ಚರಿಕೆ ಶ್ರುತದೇವಿ ಎಂಬ ಹಾಡು, ಜ್ವಾಲಿನಿ ಕುರಿತು ‘‘ಚಂದ್ರನುತ ಚಂದ್ರ” “ದೇವಿಯ ನೋಡುವೆ” ಎಂಬ ಹಾಡುಗಳು ಭಕ್ತರನ್ನು ಕಾಯಬೇಕೆಂಬ ಹಂಬಲದಿಂದ ತುಡಿಯುತ್ತಿವೆ.

. ಜೋಗುಳ ಹಾಡುಗಳು

‘ತೊಟ್ಟಿಲದೊಳಗೊಂದು ತೊಳೆದ ಮುತ್ತನ್ನು ಕಾಣಬಲ್ಲೆವೆಂಬ’ ‘ಕೂಸು ಇದ್ದ ಮನೆಗೆ ಬೀಸಣಿಕೆ ಏಕೆಂಬ ಭಾವದಿಂದ ಮಕ್ಕಳ ಮಮತೆಗೆ ಹಾತೊರೆಯುವ ಜನಪದಿಯರ ಜೋಗುಳ ಹಾಡುಗಳಿಗೆ ತನ್ನದೇ ಆದ ಪರಂಪರೆಯಿದೆ.

ಮುರುಕ ತೊಟ್ಟಿಲಿಗೊಂದು ಹರಕುಚಾಪಿಯ ಹಾಸಿ
ಅರಚು ಪಾಪನ ಮಲಗೀಸಿ  | ಅವರಕ್ಕ
ಕಲಕೇತ ಹಾಡಿ ಹಿಗ್ಗ್ಯಾಳ ||

ಲಾಲೀಯ ಹಾಡಿದರ ಲಾಲೀಸಿ ಕೇಳ್ಯಾನ
ತಾಯಿ ಹಂಬಲ ಮರೆತಾನ | ಕಂದಯ್ಯ
ತೋಳ ಬೇಡ್ಯಾನ ತಲೆಗಿಂಬ ||

ಇಲ್ಲಿ ಹಾಲಿನ ಹಂಬಲಕ್ಕಿಂತ ಲಾಲಿಯ (ಜೋಗುಳದ) ಬೆಂಬಲ ಮಕ್ಕಳಿಗೆ ಹಸಿವು-ನಿದ್ರೆಯನ್ನು ಹಿಂಗಿಸುವುದು. ಹೀಗೆ ಜೋಗುಳ ಹಾಡುಗಳು ತಮ್ಮದೇ ಆದ ಮಹತ್ವವನ್ನು ಕಾಯ್ದುಕೊಂಡು ಬಂದಿದ್ದು, ಶಿಷ್ಯ ಸಂಪ್ರದಾಯದ ಕವಿಗಳು ಈ ಮಾಧ್ಯಮವನ್ನು ತಮ್ಮ ಕಾವ್ಯ ಸಂವಹನಕ್ಕೆ ಬಳಸಿಕೊಂಡಿರುವುದನ್ನು ಕಾಣಬಹುದಾಗಿದೆ. ಆದಯ್ಯನ ಉಯ್ಯಲಪದ ೨೩ ಪದ್ಯಗಳಿಂದ ಕೂಡಿದ ಹಾಗೆಯೇ ಅಕ್ಕಮಹಾದೇವಿಯ ತೂಗಿದೆನು ನಿಜದುಯ್ಯಾಲೆ ೭ ನುಡಿಗಳ ಸ್ವರವಚನಗಳು ಜೋಕಾಲಿ ಜೀಕುವ ಧಾಟಿಯಲ್ಲಿ ರಚನೆಗೊಂಡಥವುಗಳು. ಭಕ್ತಿ-ಶಕ್ತಿ-ಜ್ಞಾನ-ವೈರಾಗ್ಯವನ್ನು ಪ್ರತಿಪಾದಿಸುವುದಕ್ಕಾಗಿ; ಮುಕ್ತಿಗಧಿಕವಾದ ಆರಾಧ್ಯ ದೈವವನ್ನು ಕೊಂಡಾಡುವುದಕ್ಕಾಗಿ ಮಾಡಿಕೊಂಡ ಸುಂದರ ರೂಪಕಗಳ ಪದಗುಚ್ಚಗಳು ಈ ಜೊಗುಳ ಹಾಡುಗಳು. ಇಂತಹ ಹಾಡುಗಳು ಜೈನರಲ್ಲಿಯೂ ಪ್ರಚಲಿತದಲ್ಲಿವೆ. ಇವುಗಳನ್ನು ಜನಪದ ಸಾಹಿತ್ಯವೆಂದು ಕರೆಯುವುದಕ್ಕಿಂತ ಜನಪದ ಹಾಡಿನ ಪ್ರಕಾರವೊಂದನ್ನು ಬಳಸಿಕೊಂಡು ರಚನೆಯಾದ ಶಿಷ್ಟ ಪದ್ಯ ಮಾದರಿಗಳೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪ್ರಕಾರ ಯಾವುದೇ ಇರಲಿ ಇಲ್ಲಿಯ ಆಶಯ ತೀರ್ಥಂಕರ ಗುಣಗಾನ, ತನ್ನ ಧರ್ಮ-ಧರ್ಮಕ್ಷೇತ್ರ ಪ್ರಚಾರ-ಪರಿಚಯ ಮುಖ್ಯ. ಆ ಹಿನ್ನೆಲೆಯಲ್ಲಿ ಇಲ್ಲಿಯ ಜೈನ ಜೋಗುಳ ಹಾಡುಗಳು ರಚನೆಗೊಂಡಿವೆ.

ಅಷ್ಟಕಂಬದ ಮಂಟಪವಲಂಕರಿಸಿ
ಪಟ್ಟಿಪೀತಾಂಬರಗಳನು ಶೃಂಗರಿಸಿ
ಬಟ್ಟಮುತ್ತಿನ ಜಲ್ಲಿಗಳ ತಂದಿರಿಸಿ
ತೊಟ್ಟಿಲ ಕಟ್ಟಿದರಾಗ ಸಂಭ್ರಮದಿ ಜೋ ಜೋ ||

ಎಂದು ತೊಟ್ಟಿಲ ಕಟ್ಟುವಾಗಿನಿಂದ ಪ್ರಾರಂಭವಾದ ಇಲ್ಲಿಯ ಹಾಡುಗಳಲ್ಲಿ ಜೈನ ತತ್ವ-ಸಿದ್ಧಾಂತಗಳ ಜೊತೆಗೆ ಜೋಗುಳ ಹಾಡುವ ನಾರಿಯರ ಗುಣಾತಿಶಯವನ್ನು ಕೊಟ್ಟಿಕೊಡುವಲ್ಲಿ ಸಫಲತೆ ಹೊಂದಿವೆ.

ಮುಡಿದ ಮಲ್ಲಿಗೆ ಸರ ಎಡಬಲಕೋಲೆಯು
ಕಡಗ ಕಂಕಣ ಬಳೆಗಳು ದಿನಿಗಯ್ಯೆ
ಬೆಡಗಿಂದ ಢವಳ ಶೋಭಾನವ ಪಾಡುತ್ತ
ಕಡುಜಾಣೆಯರೆಲ್ಲ ತೂಗಿ ಹಾಡಿದರು ಜೋ ಜೋ ||

ಜನನಿಯ ಗರ್ಭಾಬ್ದಿ ಚಂದ್ರಾಮ ಜೋ ಜೋ
ದಿನಕರ ಕೋಟಿಯಂತೆಸೆವನೆ ಜೋ ಜೋ
ಘನಗುಣಾನ್ವಿತ ಜಿನದತ್ತ ಜೋಯೆಂದು
ವನಜಗಂಧಿಯರೆಲ್ಲ ತೂಗಿ ನಲಿದರು ಜೋ ಜೋ ||

ಹಾಗೆಯೇ ಪುರಪರಮೇಶ್ವರನನ್ನು ಕುರಿತ ಹಾಡಿನಲ್ಲಿ ಮನುಭೂಮಿ ಪತಿ ವಂಶನಾದ ಈತನಿಗೆ ಯಾರು ಸಾಟಿಯಿಲ್ಲ. ಯಾಕೆಂದರೆ ಈತ ಬೇರೆಯಾರೂ ಅಲ್ಲ

ಆದಿ ಚಕ್ರೇಶನ ಒಡಹುಟ್ಟಿದನುಜ
ಮೇದಿನಿಯೊಳು ವಿತರನ ಕಲ್ಪಭೂಜ
ಆದಿತ್ಯಮಂಡಲ ಸುರಚಿರ ತೇಜ
ಶ್ರೀದಿವಿಜಾತನ ಚರಣ ಸರೋಜ ||

ಆಗಿರುವಂಥವನು. ಆಳುವುದ್ಯಾತಕೆ ಕಂದಾ ಎಂಬ ಹಾಡು ಕಂದನ ಅಳುವಿಗೆ ಕಾರಣ ಕೇಳುವ ತಾಯಿಯ ಸಂಭಾಷಣೆಯಿಂದ ಕೂಡಿದೆ.

ಆಳುವುದ್ಯಾತಕೆ ಕಂದಾ ಅತ್ತರಂಜಿಸು ಗುಮ್ಮಾ
ಏಳಯ್ಯ ಕಾರುಣ್ಯ ನೆಲಸಿದೆ ನಿನ್ನೊಳಗೆ
ವಜ್ರದ ಪಡಿಗಳು ಸೋಂಕಿದ ಕಿರಿವೆರ
ಳುಳುಕಿತೆ ನಿನಗಲರಡಿಯ ಕಂದಯ್ಯ ||

ಎಂದು ಕೇಳುವ ತಾಯಿ ಗರಳದ ಮಡುವಿನಲ್ಲಿ ಧುಮುಕಿದ ಕಾರಣವಾಗಿ ಕಾಲು ನೊಂದೀತೆ? ಹೂವ್ವಿನ ಮಳೆಯನ್ನು ಇಳೆಗೆ ತರಲು ಹೋದಾಗ ನಿನ್ನ ದೇಹ ಬಳಲೀತೆ? ಭೂವರರ ಸೋಲಿಸುವಾಗ ನಿನ್ನ ಕರ ನೊಂದೀತೆ? ಮೂರು ಕಂಡವ ಸುತ್ತಿದ ಕಾರಣ ನಿನ್ನ ಪಾದಗಳು ಬಳಲಿದವೆ? ಎಂದು ಪ್ರಶ್ನಿಸುತ್ತಾ ಹೋಗುವಲ್ಲಿ ಆತನ ಗುಣಾತಿಶಯವಾದ ಪರಾಕ್ರಮವನ್ನು ಪರಿಚಯ ಮಾಡಿಕೊಡಲಾಗಿದೆ. ಇದೇ ರೀತಿ ಜೋ ಜೋ ಸುಪಾರಿಶ್ವ, ಜೋ ಜೋ ಶ್ರೀ ಆದಿಜಿನೇಶಾ ಎಂಬ ಪದ್ಯಗಳು ತೀರ್ಥಂಕರರ ಹುಟ್ಟು ಬೆಳವಣಿಗೆ ಸಾಧನೆ ಜೊತೆಗೆ ಧಾರ್ಮಿಕ ಕ್ರಿಯೆಗಳಾದ ಪಂಚಕಲ್ಯಾಣಗಳ ವಿವರಣೆಯನ್ನು ವಿಶ್ಲೇಷಿಸುತ್ತವೆ.

. ಶೋಭಾನದ ಹಾಡುಗಳು

ಶೋಭಾನ ಇಲ್ಲವೆ ಸೋಭನೆವೆಂದರೆ ಮಂಗಳಕರವಾದದ್ದು, ಕಾಂತಿಯುಳ್ಳದ್ದು, ಹೊಳಪುಳ್ಳದ್ದು ಎಂಬಿತ್ಯಾದಿ ಅರ್ಥಗಳಿವೆ. ಮದುವೆಯಲ್ಲಿ ಮಾಡುವ ಹಲವು ಶಾಸ್ತಗಳಿಗೆ ತಕ್ಕಂತೆ ಹಾಡುವ ಈ ಪದಗಳಿಗೆ ಜನಪದದಲ್ಲಿ ವಿಶಿಷ್ಟ ಸ್ಥಾನವಿದೆ. ಹೆಂಗಸರಿಗೆ ಮೀಸಲಾಗಿರುವ ಈ ಹಾಡುಗಳು ಮುಮ್ಮೇಳ-ಹಿಮ್ಮೇಳಗಳಿಂದ ಪರಿಪೂರ್ಣಗೊಳ್ಳುತ್ತವೆಯಾದರೂ ಪ್ರದೇಶದಿಂದ ಪ್ರದೇಶಕ್ಕೆ ಇವುಗಳ ಧಾಟಿಯಲ್ಲಿ ಭಿನ್ನತೆಯಿದೆ. ಜೈನ ಹಾಡುಗಳು ಶೋಭಾನದ ಪ್ರಕಾರಗಳಲ್ಲಿ ರಚನೆಗೊಂಡಿದ್ದು

ಪರಮೇಶನುದರಾಬ್ದಿ ಚಂದ್ರ
ನೆರೆಚಕ್ರಿ ಭರತ ರಾಜೇಂದ್ರ
ನರಸುರ ನಾಗಲೋಕವ ಸಾಧಿಸಿದ
ಧರೆಗಾದಿ ಕುವರನ ಢವಳ ಶೋಭಾನವ
ನೂರೆವೆ ಲಾಲಿಪುದು ರಸಿಕರು

ಎಂದು ಕೋರುವ ಕವಿ ವೃಷಭನಾಥನ ವಿವಾಹ ಮಹೋತ್ಸವವನ್ನು ಬಣ್ಣಿಸುತ್ತಾನೆ. ಪಚ್ಚೆಯ ಪಾದಪೀಠಗಳು, ಸ್ವಚ್ಛಪ್ರವಾಳ ಕಂಭಗಳು, ಮಣಿಬೋದಿಗೆಗಳು, ವೈಢೂರ್ಯದ ತೊಲೆಗಳು, ಮಾಣಿಕ್ಯಮಣಿ ಪುತ್ಥಳಿಗಳು, ಕನ್ನಡಿಗಳು, ಹೂಮಾಲೆಗಳಿಂದ ಕಟ್ಟಾಣಿ ಮಂಟಪ ಅಲಂಕೃತಗೊಂಡಿದೆ. ಇಲ್ಲಿಯ ಶುಭ ಸಂದರ್ಭಕ್ಕೆ ನವಯೌವನೆಯರು, ವಿದ್ಯಾಧರ ದಂಪತಿಗಳು, ಆದ್ಯರು, ಉಪಾಧ್ಯಾಯರು, ಕಿನ್ನರರು, ಗಂಧರ್ವರು, ಗರುಡ ಯಕ್ಷೇಂದ್ರರು, ಸಮಸ್ತರು ಆಗಮಿಸಿದ್ದಾರೆ.

ಹರಳೋಲೆ ಹಸ್ತ ಕಡಗವ
ಬೆರಲ ಮುದ್ರಿಕೆ ಹಾರ ಮೆರೆವ
ಚರಣನೋಪುರ ಚಿತ್ರಾಂಬರ ನುಡಿಸಿ
ವರ ಮೋಹನಕರ ಕಂಚುಕಿ ತೊಡಿಸಿ
ಉರಗಿಣಿಯರು ಷಟ್ಖಂಡದರಸುಗಳ
ಪರಿಪಾಲಿಪನರಸಿಯ ಕರೆತನ್ನಿ ||

ಹಸೆಗೆ ಕರೆತರುವ ನಾರಿಯರು ವಧುವನ್ನು ಹಲವು ಬಗೆಯಲ್ಲಿ ಕೊಂಡಾಡುತ್ತಾರೆ. ಕರೆತರುವ ಪ್ರಸಂಗ ಸಂಗೀತ-ನಾಟ್ಯ-ನೃತ್ಯಗಳಿಂದ ಝೇಂಕರಿಸುತ್ತಲಿತ್ತು. ಅದನ್ನು ಹೊಗಳಲು ಕವಿ ಅಸಮರ್ಥನಾಗಿದ್ದಾನೆ.

ಆವುಜ ಚೆಂಗು ಮೃದಂಗ
ತೀವಿದ ಸ್ವರ ಉಪ್ಪಾಂಗ
ಭಾಮೆಯರಾಳಪವು ತಾಳದಂಡಿಗೆ
ಭೂವಳೆಯದ ಬಹು ವಾದ್ಯ ಘೋಷಣೆಗೆ
ದೇವಗಣಿಕೆಯರು ನರ್ತನ ಮಾಡುವ
ಭಾವವನೆಂತು ಪೊಗಳುವೆ ||

ಅಲ್ಲದೆ ನಟಿಸುವ ಭಂಗಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ ಇಲ್ಲಿನ ಹಾಡಿನ ನುಡಿ.

ತತ್ತತೇಂಗಿಣಧಿಮಿಕೆನುತ
ವೃತ್ತ ಕುಚೆಯರಾಳಾಪಿಸುತ
ತತ್ತಿತ್ತೈತೆದಿಂತರಿಕ್ಕಣ
ಧಿತ್ತಾಂ ಧಿಗಿಧಿಗಿ ಝಣಾಂತರಿಕ್ಕಿಣ
ಧಿತ್ತಿತ್ತೋಂಗೆನುತ ನಟಿಸುತ ||

ವಧುವರರಿಗೆ ಅರಿಷಿಣ ಎಣ್ಣೆಯನ್ನು ಎರೆದು

ಕಸ್ತೂರಿ ತಿಲಕವನಿಟ್ಟು
ವಿಸ್ತಾರ ಮುತ್ತಿನ ಬಟ್ಟು
ಶಿಸ್ತಾಗಲು ಫಲಪುಂಜವಕೊಟ್ಟ
ಮಸ್ತಕಕಡಿಯಿಂದ ಸೇಸೆಯನಿಟ್ಟು
ವಸ್ತುವಾಹನ ಸಾಮ್ರಾಜ್ಯ ಸುಪುತ್ರರಾ
ರಸ್ತೆಂದು ಹರಸಿ ಮುದದಿಂದಾ ||

ಆಶೀರ್ವದಿಸಿದರು. ಶ್ರೀ ಸುರಪತಿ ನರಪತಿ ಎಂಬ ಶೋಭಾನದಲ್ಲಿ ಭರತೇಶನನ್ನು ಹಸೆಗೆ ಕರೆಯುವ ಪ್ರಸ್ತಾವನೆಯಿದ್ದು ೨೬ ನುಡಿಗಳ ಸುದೀರ್ಘವಾದ ಹಾಡಾಗಿದೆ. ಈ ಹಾಡಿನ ವಿಶೇಷವೆಂದರೆ:

ಆಯುಧ ಶಾಲೆಯೊಳಗೆ ಸುದರ್ಶನ ಚಕ್ರ
ಆಯುತದೊಳು ಜನಿಸಿ ಸಕಲ ಸುರದಿ
ಕಾಯರೆಲ್ಲರು ಸ್ತುತಿಸಿ ವ್ಯಂತರ ದೇವ
ರೊಯ್ಯಾರದೊಳು ಭಜಿಸಿ ಮಂಗಲವೆರಸಿ
ದಾಯದಲಿ ಪದಿನಾಲ್ಕು ರತ್ನನಿಕಾಯ
………………………………………
……………………………………….
ರಾಯನುಮ್ಮಳವೇರಿ ಮನದೊಳು ಪ್ರೇಮದಿಂದಿಗ್ವಿ
ಜಯಸಾಧಿಪ ರಾಯನ ಹಸೆಗೆ ಕರದಾರು ||

ಎಂಬ ಭರತೇಶನಿಗೆ ಆಯುಧಾಗಾರದಲ್ಲಿ ಚಕ್ರರತ್ನ ಉದಯಿಸಿದ್ದು, ಯುದ್ಧಕ್ಕೆ ಹೊರಟಿದ್ದು, ಷಟ್ಖಂಡಗಳನ್ನು ಗೆದ್ದು ದಿಗ್ವಿಜಯ ಸಾಧಿಸಿದ ಮಹಾಕಾವ್ಯಗಳಲ್ಲಿ ಉಲ್ಲೇಖಿತ ಪ್ರಸಂಗಗಳನ್ನು ಹಾಡಿನಲ್ಲಿ ಸೆರೆಹಿಡಿದಿರುವುದು ಸಂಗ್ರಹ ಯೋಗ್ಯವಾಗಿದೆ. ಕೊನೆಯಲ್ಲಿ

ಧರೆಯುಳ್ಳತನಕಮೀ ಶೋಭಾ
ಸ್ಥಿರವಾಗಿರಲಿ ಸಕಲಜನರು ನಿರುತಪಾಡಿ
ಪರಮ ಸಂಭ್ರಮವೇರಲು
ಬಾರಲು ಮನ ಹರುಷದೊಳೆಲಾಡಲು ಆನಂದ
ದೋರಲು ಧರೆಯ ಚಕ್ರ ನರೇಂದ್ರನಂದದಿ
ಸ್ಥಿರ ಸುಖದೊಳೊಲಾಡಿ
ಹರುಷದೊಳಿರದೆ ಮುಕ್ತಿಕಾಂತೆಗೆ ತಾ
ನಿರತನಾಗುವರೆಂದು ಪೇಳಿದ
ಭರತಕಲ್ಯಾಣ ಢವಳಾರ

ಎಂಬುದಾಗಿ ಕವಿ ‘ಭರತ ಕಲ್ಯಾಣ ಢವಳಾರವೆಂದು’ ಹೆಸರಿಸುತ್ತಾನೆ. ಹೀಗೆಯೇ ಕರೆತಾರೆ

ಸರಸ್ವತಿ ಪ್ರಾಣವೆಂಬ ಹಾಡಿನಲ್ಲಿ ಶ್ರೀ ಬ್ರಹ್ಮರಾಯನನ್ನು ಬಲಗೊಂಬೆ ಶ್ರೀ ಪದ್ಮಾವತಿಯೆಂಬ ಹಾಡಿನಲ್ಲಿ ಪದ್ಮಾಂಬೆಯನ್ನು ಹಸೆಗೆ ಕರೆತರುವ ವರ್ಣನೆಯಿದೆ.

. ಮಂಗಳಾರತಿಯ ಹಾಡುಗಳು

ನಾಂದಿಗಳು ಮಂಗಳ ಕಾರ್ಯಗಳ ಅರಂಭದಲ್ಲಿ ನೆರೆವೇರಿಸುವ ಮೊದಲ ದೇವತಾಪೂಜೆ. ಹಾಡಿನ ಮೂಲಕ ನೆನೆಯುವ ದೇವತಾಸ್ತೋತ್ರಗಳಾದರೆ ಮಂಗಳಕಾರ್ಯಗಳ ಮುಕ್ತಾಯದಲ್ಲಿ ದೀಪಾರಾಧನೆ ಮಾಡಿ ಪದಕಟ್ಟಿ ನೆನೆಯುವ ಸ್ತೋತ್ರಗಳು ಮಂಗಳಾರತಿ ಪದಗಳೆನಿಸುತ್ತವೆ. ಜೈನ ಹಾಡುಗಳಲ್ಲಿ ತಮ್ಮ ಇಷ್ಟ ದಯವಗಳ ಮೇಲೆ ಮಂಗಳಾರತಿ ರಚಿಸಿ ಸ್ತುತಿಸಿದುದನ್ನು ಕಾಣಬಹುದು.

ಚಾರುಸಿರಿಗೆ ತವರೂರಾದ ಬೆಳ್ಗೊಳ
ಧಾರುಣಿಧರದ ಮಧ್ಯದಿ ನೆಲಸಿ
ಚಾರುಕೀರ್ತಿ ಮುನಿ ಪಂಡಿತಾರ್ಯರಿಗುಪ
ಕಾರಿಯಾದ ಬ್ರಹ್ಮದೇವರಿಗೆ ||

ಆರತಿ ಬೆಳಗೀರೆಂದು ಹೇಳುವಲ್ಲಿ ಬೆಳ್ಗೊಳವು ಜಾರುಸಿರಿಗೆ ತವರೂರು, ಅಲ್ಲಿಯ ಚಾರುಕೀರ್ತಿ ಪಂಡಿತಾರ್ಯರಿಗುಪಕಾರಿಯಾದ ಬ್ರಹ್ಮದೇವ ಹೀಗೆ ಸ್ಥಳೀಯ ಸಂಸ್ಕೃತಿಯನ್ನು ಇಲ್ಲಿಯ ಹಾಡುಗಳು ಕಟ್ಟಿಕೊಡುತ್ತವೆ.

ಹಾಗೆಯೇ ಬೆಳಗಪ್ಪ ಜಾವದಲಿ ಹಾಡಿನಲ್ಲಿ
ಆದಿಶಾಸ್ತ್ರವ ಬಲ್ಲವ ಆಚಾರ್ಯರೈದು ಜನ
ಓದಿಸುವ ಮಕ್ಕಳೀರಾರು ಜನ
ಬೋಧಿಸುವ ಪಂಡಿತರು ನಾಲ್ಕಾರು ಜನ ಸಹಿತ
ಪಾದ ಮಾರ್ಗದಿ ಬರುವ ನಮ್ಮ ಮನೆಗೆ ||

ಎಂಬುದಾಗಿ ಅಂದಿನ ಶಿಕ್ಷಕ, ಶಿಷ್ಯ, ಪಂಡಿತರುಗಳ ಪರಿಸರವನ್ನು ವಿವರಿಸಲಾಗಿದೆ. ಪುರಪರಮೇಶ್ವರ ಸುರನುತ’ನೆಂಬ ಹಾಡು ೨೫ ದ್ವಿಪದಿಗಳಲ್ಲಿ ೨೪ ತೀರ್ಥಂಕರರ ವರ್ಣನೆಯನ್ನು ಮಾಡಿದೆ. ಲಲಿತಾಂಗಿ, ಜಗದಾಂಬದೇವಿ, ಗೊಮ್ಮಟ, ಚಂದ್ರನಾಥ, ಶಾರದಾದೇವಿ, ಕೊಷ್ಮಾಂಡಿನಿ, ಪಾರ್ಶ್ವನಾಥ, ವೃಷಭನಾಥನಿಗೆ ಮೀಸಲಾದ ಹಾಡುಗಳಿದ್ದು ಬಹುತೇತ ಹಾಡುಗಳ ಕೊನೆಯಲ್ಲಿ ಆಯಾ ಆರಾಧ್ಯ ದೈವಗಳು ನೆಲೆಸಿರುವ ಸ್ಥಳ ಮಹಾತ್ಮೆಗಳ ನಿರೂಪವಿದೆ.

ಕ್ಷಿತಿಯೊಳತ್ಯಧಿಕ ಬೆಳ್ಗೊಳದೊಳಗಿರುತಿಹ
ಅತಿಶಯದೊಳು ಚಂದ್ರಗಿರಿಯೊಳಪ್ಪವಗೆ
ಯತಿ ಪಂಡಿತಾರ್ಯರ ಕರುಣದಿ ರಕ್ಷಿಪ
ಅತಿಶಯ ಮೂತಿ ಪಾರೀಶ್ವ ದೇವನಿಗೆ ||

ಹೀಗೆಯೇ ಬೆಳ್ಗೊಳದ ಕತ್ತಲೆ ಬಸದಿಯಲ್ಲಿ ನೆಲೆಸಿರುವ ಕೋಷ್ಮಾಂಡಿನೀ ದೇವಿಗೆ, “ವೇಣುಪುರದ ಭ್ಯಜನರ್ಗೆ ಯತಿಕುಲ ರನ್ನ ರನ್ನ ಪಂಡಿತಾಚಾರ್ಯ ರತಿ ಸೌಖ್ಯದಿಂದ ರಕ್ಷಿಪ ಚಂದ್ರನಾಥಗೆ” ಬೆಳ್ಗೊಳಗಿರಿಯ ವರಮುಕ್ತಿ ಮೇಲೆ ಗೊಮ್ಮಟ ಜಿನಪತಿಗೆ ಎಂದು ಮುಂತಾಗಿ ಗಮನಿಸಬಹುದಾಗಿದೆ.

. ಸಂಕೀರ್ಣ ಹಾಡುಗಳು

ತೀರ್ಥಂಕರ, ಯಕ್ಷಿಯರ, ಸ್ತುತಿಪರವಾದ ಹಾಡುಗಳಲ್ಲದೆ ತೀರ್ಥಯಾತ್ರೆ, ಬದುಕಿನ ಸಿದ್ಧಾಂತಗಳ ನೀತಿ-ಅನೀತಿಗಳಂತಹ ಮುಂತಾದ ಹಾಡುಗಳೆಲ್ಲ ಇಲ್ಲಿ ಸಂಗ್ರಹಿತವಾಗಿರುವುದರಿಂದ ಅವುಗಳನ್ನು ಸಂಕೀರ್ಣ ಹಾಡುಗಳೆಂಬ ಶೀರ್ಷಿಕೆಯಡಿಯಲ್ಲಿ ಸಂಕಲಿಸಲಾಗಿದೆ.

ಇಬ್ಬರಂತೆಯರೊಳು ಒಬ್ಬಳುಳಿದಳು
ತ್ತೊಬ್ಬಳ ಕರೆಕರೆದಾರೆ ನಾ
ನಿರ್ಬುದ್ದಿಯಿಂದೈವರು ಮೈದುನರುಂಟು
ವಿಬುಧಿಯಿಲ್ಲೆನ್ನ ಬಾಳುವೆಗೆ

ಎಂಬ ಬೆಡಗಿನ ಹಾಡಿನಲ್ಲಿ ಪಂಚೇಂದ್ರಿಯಗಳ ವಿಷಯ ವಾಸನೆಯಿಂದ ಆತ್ಮದ ಉನ್ನತಿ ಒಳಿತಿಲ್ಲದ ಸ್ಥಿತಿಯನ್ನು ವಿವರಿಸುತ್ತ ಕೊನೆಯ ಚರಣದಲ್ಲಿ

ಅರ್ಹನಲ್ಲದೆ ಪರದೈವಕೆರಗೆನು
ಕೊರಟಗೆರೆಯ ಬ್ರಹ್ಮಸ್ವಾಮಿಯನು
ಸ್ಥಿರದಿಂದ ಬಲ್ಲಿದರೈವರ ಒಡಗೊಂಡು
ಬರುತಲವರು ತವರೂರಿಗೆ ||

ಎಂದು ನಂಬಿದ ದಯವವನ್ನೆ ತನ್ನ ಕಷ್ಟಪರಿಹಾರಕ್ಕೆ ಗಟ್ಟಿಯಾಗಿ ಹಿಡಿವೆನೆಂಬ ದೃಢ ಸಂಕಲ್ಪವನ್ನು ಮಾಡಿಕೊಳ್ಳುತ್ತಾನೆ. ಜೀವನ ಬಾಧಿಸುವ ಪಾಪಾಸ್ತ್ರಗಳನ್ನು ತೊಲಗಿಸಲು

ಧ್ಯಾನವೆಡೆ ಬಿಟ್ಟು ಧರ್ಮಶುಕ್ತಗಳೆಂಬ
ಧ್ಯಾನವ ಮನದ ಕೊನೆಯೊಳಿರಿಸಿ
ಜಾನಂತ್ರಿ ಕೊಲ್ಲಿಪಾಕ ಪುರದಿ
ಜಿನೇಶನ ಜೀವ ನನ್ನಂತರಂಗದೊಳಿಟ್ಟು ||

ಪೂಜಿಸುವ ಪರಿಯನ್ನು ಸಾರುತ್ತಾನೆ. ಹಾಗೆಯೇ “ಜ್ಞಾನಿಹೊರಗೊಂದ ಚಿಂತಿಸದಿರು”, “ನಾನಿರಬಂದೆನೇ ಎರವಿನ ಮನೆಯಲ್ಲಿ ಬಹುಚಿಂತೆ ನಮಗೇಕೆ”, “ಕಷ್ಟ ಸಂಸಾರದೊಲಗೆ ನಾ ತೊಳಲುವೆ” ಎಂಬಂತಹ ಹೇಳಿಕೆಗಳು ಸಾಧಕನ ಸಾಧನೆಯ ಮಾರ್ಗದ ಪ್ರಾರಂಭದ ಸ್ಥಿತಿಗಳಾಗಿವೆ. ಇದರಿಂದ ಪಾರು ಮಾಡಲು

ಪೊರೆಯೈ ಶ್ರೀಜಿನರಾಜ ಪೊರೆಯೈ
ಭುವಿಯೊಳು ನಾ ಜನಿಸಿ ಭವಸಾಗರದಿ ಮುಳುಗಿ
ಅವಿವೇಕಿಯಾದೆನ್ನ ಜವದಿಂದ ನೀ ಬಂದು ||

ಎಂಬ ಆತ್ಮನಾದದಲ್ಲಿ ಮೊರೆಯಿಡುತ್ತಾನೆ. ಆಗಲೂ ದೈವದರ್ಶನವಾಗದಾದಾಗ “ಕೃಪೆಯಿಲ್ಲವೇಕೋ ಎನ್ನ ಮೇಲೆ ದೇವದೇವನೇ ಅಪರಾಧಗಳನ್ನು ಕ್ಷಮಿಸಿ ಕಾಯೋ ಪಾರ್ಶ್ವನಾಥನೇ! ಗತಿಯು ನೀನೆ, ಹಿತರ ಕಾಣೆ ಪಿತನು ನೀನೆಂದು” ಅವನ ಚರಣಗಳನ್ನು ಸ್ತುತಿಸುತ್ತಾನೆ. ಅವನನ್ನು ಹುಡುಕಿಕೊಂಡು ಹೋಗುತ್ತಾನೆ.

ಎಷ್ಟು ದೂರ ಬೆಳಗುಳ ಬಂದೆ ಇಷ್ಟರಲ್ಲೇ ಕಾಣತ್ತ ಬಂದೆ
ಮುಟ್ಟಿಜಿನರ ಪಾದವ ಕಂಡೆ ಪಾಪವೆಲ್ಲವ ಪರಿಹರಿಸೆಂದೆ ||

ಎಂದು ಬೇಡುತ್ತ ಪುಣ್ಯಕ್ಷೇತ್ರಗಳ ದರ್ಶನ ಮಾಡುವುದು. ಅಲ್ಲಿಯ ದೈವದ ಅತಿಶಯ ಗುಣಗಳನ್ನು ಕೊಂಡಾಡುವುದು ಇಲ್ಲಿನ ಬಹುತೇಕ ಹಾಡುಗಳ ಆಶಯವಾಗಿದೆ.

ಜೈನ ಹಾಡುಗಳ ಪ್ರಕಟಣೆಯ ಇತಿಹಾಸ

ಕನ್ನಡ ಜೈನ ಹಾಡುಗಳ ಪ್ರಕಟಣೆಗೆ ಸುಮಾರು ೯೦ ವರ್ಷಗಳ ಇತಿಹಾಸವಿದೆ. ಜೈನ ಸಾಹಿತ್ಯದಲ್ಲಿ ಅಪಾರವಾಗಿ ಸೇವೆ ಸಲ್ಲಿಸಿದ ಎರ್ತೂರ ಶಾಂತಿರಾಜಶಾಸ್ತ್ರಿಯವರು ೧೯೧೩ರಲ್ಲಿ ಜಿನಭಜನಸಾರ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಬಹುಶಃ ನಮಗೆ ಲಭ್ಯವಾದ ಮಾಹಿತಿ ಪ್ರಕಾರ ಜೈನ ಹಾಡುಗಳ ಮೊದಲ ಸಂಗ್ರಹ ಇದಾಗಿದೆ. ಇದರಲ್ಲಿ ಚತುರ್ವಿಶಂತಿ ತೀರ್ಥಂಕರರ ಸ್ತೋತ್ರ, ರಾಗ-ತಾಳಗಳ ಮೂಲಕ ರಚನೆಗೊಂಡ ಹಾಡುಗಳನ್ನು ಸಂಗ್ರಹಿಸಲಾಗಿದೆ. ಈ ಗ್ರಂಥ ಸುಮಾರು ಆರು ಬಾರಿ ಮರುಮುದ್ರಣಗೊಂಡಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರ ನಂತರ ೧೯೪೮ರಲ್ಲಿ ಬಂದ ಮೂಡಬಿದಿರೆಯ ಶ್ರೀ ವಿ. ಲೋಕನಾಥ ಶಾಸ್ತ್ರಿಗಳು ಸಂಪಾದಿಸಿದ ಜಿನಭಜನ ಸಂಗ್ರಹ. ಇದು ಸಹಿತ ಮೂರು ಬಾರಿ ಮರು ಮುದ್ರಣಗೊಂಡಿದ್ದರೂ ಮೊದಲ ಪ್ರಕಟಣೆ ಯಾವಾಗ ಆಗಿದೆ ಎಂಬುದು ತಿಳಿದು ಬರುವುದಿಲ್ಲ. ಇದು ಜಿನ ನಾಮಸ್ಮರಣೆಗೆ ಸಹಾಯಕವಾಗುವ ಗ್ರಂಥ. ಇದರಲ್ಲಿ “ಗ್ರಹಸ್ತನಿಗೆ ಪ್ರತಿನಿತ್ಯವೂ ಮಾಡುವುದಕ್ಕೆ ಅನುಕೂಲವಾದ ದೇವ ಅಭಿಷೇಕ, ಸಂಕ್ಷಿಪ್ತ ಪೂಜಾವಿಧಿ, ಸಂಗೀತದಿಂದ ಮಾಡಲ್ಪಡುವ ಸಾಮೂಹಿಕ ಪೂಜೆಗೆ ಯೋಗ್ಯವಾದ ಸಂಸ್ಕೃತ, ಹಿಂದಿ ಕನ್ನಡ ಅಷ್ಟಕಗಳು, ನೂತನವಾಗಿ ರಚಿಸಲ್ಪಟ್ಟ ಕನ್ನಡ ದೇವರ ಕೀರ್ತನೆಗಳು, ಮದುವೆ ಮೊದಲಾದ ಶೋಭಾನ ಕಾರ್ಯಗಳಲ್ಲಿ ಹಾಡುವುದಕ್ಕೆ ಯೋಗ್ಯವಾದ ಶೋಭನಗಳು, ತೀರ್ಥಂಕರರ ಪಂಚಕಲ್ಯಾಣ ಶೋಭನಗಳು, ದೇವರ ಉತ್ಸವ, ಶ್ರುತಪೂಜೆ ಮೊದಲಾದ ಕಾಲಗಳಲ್ಲಿ ಜಿನಭಜನೆಗನುಕೂಲವಾದ ಅಷ್ಟಾವಧಾನ ಪದಗಳು, ಸಮವಸರಣ ಮುಂತಾದವುಗಳ ಗುಣಕೀರ್ತಿನಾ ರೂಪವಾದ ಚೂರ್ಣಿಕ – ಗದ್ಯ ಮೊದಲಾದವುಗಳು ಸಂಗ್ರಹಿಸಲ್ಪಟ್ಟಿವೆ.”

೧೯೬೬ರಲ್ಲಿ ಭುವನಹಳ್ಳಿ ಡಿ. ಶ್ರೀಪತಿ ಜೋಯಿಸ್‌ ಅವರು ‘ರತ್ನಾಕರನ ಕೀರ್ತನೆಗಳು’ ಎಂಬ ಸಂಪಾದನೆಯನ್ನು ಹೊರತಂದಿದ್ದಾರೆ. ಇದರಲ್ಲಿ ಜೈನ ಹಾಡುಗಳ ಮೊದಲ ರಚನಾಕಾರನಾದ ರತ್ನಾಕರನ ೧೪೪ ಹಾಡುಗಳಿವೆ. “ಇಲ್ಲಿರುವ ಕೀರ್ತನೆಗಳು ಅಚ್ಚಗನ್ನಡದಲ್ಲಿವೆ. ಶೈಲಿ ಮನಮುಟ್ಟುವಂತಹದುದು, ಸಂಗೀತ ಸುಮಧುರವಾದದು. ಸುಸ್ವರದಲ್ಲಿ ಹಾಡಿ, ಮನತಣಿಸಲು ತುಂಬಾ ಅನುಕೂಲವಾಗಿದೆ. ವಿಚಾರಗಳು ಎಷ್ಟು ಉದಾತ್ತವಾಗಿಯೋ ಅಷ್ಟೆ ವ್ಯವಹಾರ್ಯವಾಗಿವೆ. ಬೋಧಿಸಿದ ತತ್ವಗಳು ಅಮರವಾದವು. ಇವೆಲ್ಲವುಗಳನ್ನು ಸ್ವಾದಿಸಲು ಓದುಗರಲ್ಲಿ ಹಾಡುವವರಲ್ಲಿ ಬೇಕಾದುದು ನಿಷ್ಠೆ” ಎಂದು ಮುನ್ನುಡಿಯಲ್ಲಿ ಶ್ರೀ ತು.ಕು.ತುಕೋಲ ಅವರು ಹೇಳಿರುವುದು ಸಮಂಜಸವಾಗಿದೆ. ಇಂಥ ಉಪಯುಕ್ತ ಗ್ರಂಥವಾದ ರತ್ನಾಕರನ ಕೀರ್ತನೆಗಳು ೧೯೯೫ರಲ್ಲಿ ಹೊಂಬುಜ ಶ್ರೀ ಜೈನ ಮಠದ ಶ್ರೀ ಸಿದ್ಧಾಂತಕೀರ್ತಿ ಗ್ರಂಥಮಾಲೆಯಿಂದ ಮರುಮುದ್ರಣಗೊಂಡಿದೆ.

ಜೈನ ಸಾಹಿತ್ಯ-ಸಂಸ್ಕೃತಿಯಲ್ಲಿ ವಿಶೇಷ ಅಧ್ಯಯನ ಮಾಡಿದ ಡಾ.ಹಂಪ ನಾಗರಾಜಯ್ಯನವರು ೧೯೭೯ರಲ್ಲಿ ರತ್ನಾಕರನ ಹಾಡುಗಳು ಎಂಬ ಜನಪ್ರಿಯ ಆವೃತ್ತಿಯನ್ನು ಹೊರತಂದಿದ್ದಾರೆ. ತುಮಕೂರು ಜಿಲ್ಲೆಯ ಬಿದರೆ ಗ್ರಾಮದ ಸಿದ್ಧನಂದಿ ಗ್ರಂಥ ಭಂಡಾರದಲ್ಲಿ ದೊರೆತ ಓಲೆಗರಿ ಹಸ್ತಪ್ರತಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ಭಂಡಾರದಲ್ಲಿರುವ ಹಸ್ತಪ್ರತಿಗಳನ್ನು ಬಳಸಿಕೊಂಡು ಇದನ್ನು ಸಂಪಾದಿಸಲಾಗಿದೆ. ಇದರಲ್ಲಿ ೨೩೮ ಹಾಡುಗಳಿವೆ. ಪ್ರಸ್ತಾವನೆಯಲ್ಲಿ ಡಾ. ಹಂಪನಾ ಅವರು ರತ್ನಾಕರ ಕವಿಯ ಜೀವನ, ಕೃತಿಗಳ ಬಗೆಗೆ ಸ್ಥೂಲವಾಗಿ ವಿವರಿಸಿ, ಹಾಡುಗಳ ಮಹತ್ವವನ್ನು ಗುರುತಿಸಿದ್ದಾರೆ.

ಇದಾದನಂತರ ೧೯೯೯ರಲ್ಲಿ ಮೂಡಬಿದ್ರೆಯ ಶ್ರೀ ಎಂ.ಧರ್ಮರಾಜ ಇಂದ್ರ ಅವರು ಶ್ರೀ ಪಂಚಕುಲದೇವತಾ ಪೂಜಾ ಸಂಗ್ರಹ ಎಂಬ ಸಂಕಲನವೊಂದನ್ನು ಪ್ರಕಟಿಸಿದ್ದಾರೆ. ಇದರಲ್ಲಿ ೨೨೧ ಹಾಡುಗಳಿದ್ದು, ಅವು ಸಂಸ್ಕೃತ, ಕನ್ನಡ ಭಾಷೆಯಲ್ಲಿವೆ. ಜೊತೆಗೆ ಆಧುನಿಕ ಜೈನ ಕವಿಗಳು ರಚಿಸಿದ ಹಾಡುಗಳು ಇಲ್ಲಿ ಸೇರಿವೆ. ಹೀಗಾಗಿ ಇದೊಂದು ಸಂಕೀರ್ಣ ಸಂಪುಟವಾಗಿ ಮಾರ್ಪಾಡಾಗಿದೆ. ಅಷ್ಟವಿಧಾರ್ಚನೆ, ಷೋಡಶೋಪಚಾರ ಪೂಜೆಗೆ ಸಂಬಂಧಿಸಿದ ಗೀತೆಗಳ ಸಂಗ್ರಹ ಇದಾಗಿದೆ.

ಮೇಲೆ ಸೂಚಿಸಿದ ಗ್ರಂಥಗಳಲ್ಲದೆ, ಇನ್ನೂ ಬಿಡಿಬಿಡಿಯಾಗಿ ಜೈನ ಹಾಡುಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ವಿದ್ವಾಂಸರು ಪ್ರಕಟಿಸುತ್ತಾ ಬಂದಿದ್ದಾರೆ. ಇವೆಲ್ಲವುಗಳನ್ನು ಬಳಸಿಕೊಂಡು ಪ್ರಸ್ತುತ ಸಂಪುಟವು ಸಿದ್ಧಗೊಂಡಿದೆ.

ಪರಿಷ್ಕರಣೆ

‘ಕನ್ನಡ ಜೈನ ಹಾಡುಗಳು’ ಸಂಪುಟವನ್ನು ಕರ್ನಾಟಕದ ವಿವಿಧ ಹಸ್ತಪ್ರತಿ ಭಂಡಾರಗಳ ನೆರವಿನಿಂದ ಪರಿಷ್ಕರಿಸಿ ಸಿದ್ದಪಡಿಸಲಾಗಿದೆ. ಜೊತೆಗೆ ಇಲ್ಲಿಯವರೆಗೂ ಪ್ರಕಟಗೊಂಡ ಜೈನ ಹಾಡುಗಳು ಸಂಗ್ರಹವನ್ನೊಳಗೊಂಡ ಪುಸ್ತಕಗಳನ್ನು, ಬಿಡಿ ಬಿಡಿ ರೂಪದಲ್ಲಿ ಪ್ರಕಟವಾದ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಇದು ಜನಪ್ರಿಯ ಆವೃತ್ತಿಯಾಗಿದ್ದರಿಂದ ಅರ್ಥಕ್ಕೆ ಚ್ಯುತಿ ಬರದ ಹಾಗೆ ಸರಿಕಂಡ ಪಾಠಾಂತರವನ್ನು ಕೊಡಲಾಗಿದೆ. ಕೈಬಿಡಲಾದ ಪಾಠವನ್ನು ಅಡಿಯಲ್ಲಿ ಕೊಡದೆ ಕೈಬಿಡಲಾಗಿದೆ. ಹಸ್ತಪ್ರತಿಗಳು ಲಭ್ಯವಿಲ್ಲದ ಹಾಡುಗಳನ್ನು ಈಗಾಗಲೇ ಪ್ರಕಟವಾದ ಮೂಲಗಳಿಂದಲೇ ಎತ್ತಿಕೊಂಡು ದೋಷಗಳನ್ನು ಸರಿಪಡಿಸಿ ಸ್ವೀಕರಿಸಲಾಗಿದೆ. ಗ್ರಂಥ ಭಾಗ ತ್ರುಟಿತವಾಗಿದ್ದಲ್ಲಿ x x x x x x x x ಈ ಚಿಹ್ನೆಯನ್ನು ಹಾಕಲಾಗಿದೆ. ಸಂಪಾದನೆಗೆ ಬಳಸಿಕೊಂಡ ಹಸ್ತಪ್ರತಿ ಹಾಗೂ ಪುಸ್ತಕಗಳ ವಿವರಗಳನ್ನು ಅನುಬಂಧದಲ್ಲಿ ಕೊಟ್ಟಿದ್ದೇವೆ.