ಕನ್ನಡ ಸಾಹಿತ್ಯದಲ್ಲಿ ಹಾಡುಹಬ್ಬ ಪರಂಪರೆಗೆ ಸುದೀರ್ಘ ಇತಿಹಾಸವಿದೆ. ಇದು ಅನೇಕ ವಸ್ತು ವೈವಿಧ್ಯತೆಗಳನ್ನು ರೂಢಿಸಿಕೊಂಡು ಬೆಳೆದುಬಂದಿದೆ. ಲಯ, ಗೇಯತೆ, ರಾಗ-ತಾಳಗಳ ಬದ್ಧತೆಯಿಂದ ವೀರಶೈವರಲ್ಲಿ ಸ್ವರವಚನೆಗಳೆಂಬ ಹೆಸರಿನಿಂದಲೂ, ವೈದಿಕರಲ್ಲಿ ಕೀರ್ತನೆ-ಸುಳಾದಿ-ಉಗಾಭೋಗಗಳೆಂಬ ಹೆಸರಿನಿಂದಲೂ ಹಾಡುಗಳು ರಚನೆಗೊಂಡಿವೆ. ಹಾಗೆಯೇ ಜೈನಸಾಹಿತ್ಯದಲ್ಲಿಯೂ ಇಂತಹ ಹಾಡುಗಳು ಸೃಷ್ಟಿಯಾಗಿವೆ. ಆ ಹಾಡುಗಳ ಸಂಗ್ರಹರೂಪದ ಪುಸ್ತಕ “ಕನ್ನಡ ಜೈನ ಹಾಡುಗಳು”.

ಗೊಂದಲಹಾಡು, ಕಣಿ, ಕೋಲಾಟ, ಚಂದಮಾಮದ ಪದಗಳ ಮೂಲಕ ಆಧ್ಯಾತ್ಮ ಹಾಗೂ ತಾತ್ವಿಕ ವಿಷಯಗಳನ್ನು ಶ್ರೀಸಾಮಾನ್ಯರಿಗೆ ಅರ್ಥವಾಗುವಂತೆ ಪ್ರತಿಪಾದಿಸುವ ಹಾಡುಗಳು ಸ್ತುತಿ, ಶೋಬಾನ, ಜೋ ಜೋ ಪದ, ಮಂಗಳಾರತಿ ಹಾಡುಗಳೆಂಬ ಹೆಸರಿನಿಂದಲೂ ಪಚಲಿತಗೊಂಡಿವೆ. ಇದರಿಂದ ಜನಪದ ಸಾಹಿತ್ಯ ಪ್ರಕಾರಗಳು ಶಿಷ್ಟ ಸಾಹಿತ್ಯ ವೇದಿಕೆಯನ್ನೇರಿದಂತಾಯಿತು. ಈ ಹಾಡುಗಳ ನಿರ್ಮಾತೃಗಳು ಭಕ್ತಿ-ಭಜನೆ (ಆರಾಧನೆ) ಗಳನ್ನು ಮೈಗೂಡಿಸಿಕೊಂಡ ಬ್ರಹ್ಮಚಾರಿಗಳು, ಜಿನಯೋಗಿಗಳು, ಸಂಸಾರಿಗಳು. ಹೀಗಾಗಿ ಇಂತಹ ಹಾಡುಗಳಲ್ಲಿ ಆಧ್ಯಾತ್ಮಿಕ, ಯೋಗಿಕ ಹಾಗೂ ಕೌಟುಂಬಿಕ ವಿಚಾರಗಳು ಮುಪ್ಪುರಿಗೊಂಡವು. ಜೊತೆಗೆ ಸ್ಥಳೀಯ ಸ್ಥಳಪುರಾಣ ಮಹಾತ್ಮೆ, ಚರಿತ್ರೆ, ಚೈತ್ಯಾಲಯ, ಬಸದಿ, ಗುರುಪರಂಪರೆ ಮುಂತಾದ ಐತಿಹಾಸಿಕ ಸಂಗತಿಗಳನ್ನು ಈ ಹಾಡುಗಳು ಬಿಚ್ಚಿತೋರಿಸುವುದರಿಂದ ಇವುಗಳಿಗೆ ಸಾಹಿತ್ಯಿಕ ಹಾಗೂ ಚಾರಿತ್ರಿಕ ಮಹತ್ವ ಪ್ರಾಪ್ತವಾಗುತ್ತವೆ.

ಇಲ್ಲಿಯ ಹಾಡುಗಳನ್ನು ನಾಡಿನ ಶ್ರವಣಬೆಳಗೊಳ, ಧರ್ಮಸ್ಥಳ, ಮೂಡಬಿದರೆ, ಹೊಂಬುಜ ಮಠಗಳ ಹಾಗೂ ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳ ಹಸ್ತಪ್ರತಿ ಭಂಡಾರಗಳಿಂದ ಮತ್ತು ಇದುವರೆಗು ಅಲ್ಲೊಂದು ಇಲ್ಲೊಂದು ಹಾಡುಗಳನ್ನು ಪ್ರಕಟಿಸಿದ ಗ್ರಂಥಗಳಿಂದ ಆಯ್ದುಕೊಳ್ಳಲಾಗಿದೆ. ಆಧ್ಯಯನದ ಅನುಕೂಲಕ್ಕಾಗಿ ಹಾಡುಗಳನ್ನು ವರ್ಗೀಕರಿಸಕೊಂಡು ಸಂಪಾದನೆಯು ಶಾಸ್ತ್ರೀಯ ಚೌಕಟ್ಟಿನಲ್ಲಿ ರೂಪುಗೊಂಡಿದೆ. ಈ ಮೊದಲು ಪ್ರಕಟಗೊಂಡ ರತ್ನಾಕರವರ್ಣಿಯ ಹಾಡುಗಳನ್ನು ಬಿಟ್ಟರೆ ಉಳಿದಂತೆ ಎಲ್ಲ ಹಾಡುಗಳು ಮೂಲತಃ ಆಶು ರಚನೆಗಳಂತೆ ತೋರುತ್ತವೆ. ಮೊದಮೊದಲು ಮೌಖಿಕ ಪರಂಪರೆಯಲ್ಲಿ ಜನಿಸಿ ಲಿಖಿತ ಪರಂಪರೆಯಲ್ಲಿ ಬದುಕಿ ಬಂದಿರುವ ಇವುಗಳಲ್ಲಿ ವಚನಕಾರರ ಸ್ವರವಚನಗಳು, ಹರಿದಾಸರ ಕೀರ್ತನೆಗಳ ಛಾಪು ಗೋಚರಿಸುತ್ತದೆ. ಅನುಭವ ಹಾಗೂ ಅಭಿವ್ಯಕ್ತಿ ವಿಧಾನಗಳಲ್ಲಿ ಜೈನ ಹಾಡುಗಳ ಸ್ವಂತಿಕೆಯಿದೆ, ಅನನ್ಯತೆಯಿದೆ. ಮೇಲಾಗಿ ಧಾರ್ಮಿಕ ತತ್ತ್ವ ಸಿದ್ಧಾಂತಗಳ ಪ್ರತಿಪಾದನೆಯಿದೆ. ಕೆಲವು ಹಾಡುಗಳಂತೂ ಸಾಮಾಜಿಕ ಬದುಕಿಗೆ, ಡಾಂಭಿಕ ಜೀವನಕ್ಕೆ ಕನ್ನಡಿ ಹಿಡಿದಂತಿವೆ. ಉಪೇಕ್ಷಿತ ಸಾಹಿತ್ಯ ಮಾಲೆಗೆ ಸೇರುವ ಇಲ್ಲಿಯ ಹಾಡುಗಳನ್ನು ಶಾಸ್ತ್ರೀಯವಾಗಿ ಸಂಗ್ರಹಿಸಿ-ಸಂಸ್ಕರಿಸಿ ಕೊಟ್ಟ ವಿಭಾಗದ ಸಹೋದ್ಯೋಗಿಗಳಾದ ಡಾ. ಎಫ್‌.ಟಿ. ಹಳ್ಳಿಕೇರಿ ಹಾಗೂ ಡಾ. ಕೆ. ರವೀಂದ್ರನಾಥ ಅವರನ್ನು ಅಭಿನಂದಿಸುತ್ತ, ಕನ್ನಡ ಜೈನ ಹಾಡುಗಳ ಸಮಗ್ರ ಅಧ್ಯಯನಕ್ಕೆ ಈ ಸಂಪುಟ ನೆರವಾಗುತ್ತದೆಂದು ಭಾವಿಸುತ್ತೇನೆ.

ಪ್ರೊ. .ವಿ. ನಾವಡ
ಮುಖ್ಯಸ್ಥರು