೪೧. ನೀನೆನೀನೆನೀನೆ
ನೀನೆ ನೀನೆ ನೀನೆ ಚಿನ್ಮಯ ರೂಪ
ನಾನಾ ಸಂಕಲ್ಪವೆನ್ನೆ ಮೆಚ್ಚೆನೋ ಭಯ ಲೋಪ || ಪಲ್ಲವಿ
ಶಶಿರವಿಗಧಿಕ ಕೋಟಿ ಕಾಂತಿ ನಿನ
ಗೆಸೆವ ಚೆಲ್ವಿಕೆಯ ಸುಪಂತಿ
ಹೆಸರುಗೊಂಡರ ಕರ್ಮಶಾಂತಿ ಪೂ
ಜಿಸುವಗಿನ್ನೆತ್ತಳ ಭ್ರಾಂತಿ || ೧
ತ್ರಿಜಗಕೆ ಸೂತ್ರಧಾರ ಪಾಪ
ರಜಕೆ ನೀನೆ ಮೃತಾವತಾರ
ಭಜಕರ ಸುಖದಾತರ ನಿನ್ನ
ನಿಜರೂಪ ಪುತ್ರಾಂಗರಹರಾ || ೨
ಕ್ಷೇಮಕ್ಕೆ ನೀ ಜನ್ಮಭೂಮಿ ನಿನ್ನ
ಕಾಮಿಸಿದವರಿಗೆ ಕಾಮಿ
ಶ್ರೀಮಂದ್ರ ಜಿನಸ್ವಾಮಿಯೆಂಬ
ನಾಮದಿ ನಾ ಪರಿಣಾಮಿ || ೩
೪೨. ಮುಕ್ತಿಬೇಕಾದರೆ
ರಾಗ : ಕೇತಾಳಗೌಳ
ಮುಕ್ತಿ ಬೇಕಾದರೆ ಪ್ರೀತಿ ಕೋಪವ ಸರ್ವ
ಶಕ್ತಿಯೊಳಗೆ ಬಿಸುಡು ಸಿದ್ಧ
ಭಕ್ತಿಯೊಂದನೆ ಹಿಡಿ ಮತ್ತೆ ಸರ್ವ ವಿ
ರಕ್ತನಾಗಮಲಾತ್ಮನೇ || ಪಲ್ಲವಿ
ಒಮ್ಮೆ ಬಾಲಕರು ಬಾನಿನಲ್ಲಿದ್ದ ಚಂದ್ರನ ತಮ್ಮ
ಸಮ್ಮುಖಕೆ ಕಂಡು ಇದು ನಮ್ಮೂರ ಚಂದ್ರ
ತಮ್ಮೂರ ಚಂದ್ರಮನೆಂದು ಸಂಬಂಧ ಮಾಡುವಂತೆ
ನಾವೊಂದು ಹೊದ್ದರ ಪರಮ ನಿನ್ನನುಪಯ್ಯ
ಸಂಬಂಧದಲಿ ನರರು ಈತ ನಮ್ಮಾತ
ತಮ್ಮಾತನೆಂಬೆರಸಲಿ ನಿನ್ನ ನೆಮ್ಮಿಸಿ ಸುಮ್ಮನಿರು || ೧
ಮಕ್ಕಳು ಬಿಸಿಲಲ್ಲಿ ನೊಂದು ಕುಂಬದಾ ನೀರೊ
ಳರ್ಕ್ಕನ ರೂಪು ಕಂಡು ಆಹಾ
ಸಿಕ್ಕದ ಹಾಗೆಯೆಂದು ಬೈದು ಹೊಯ್ದಡೆಯಲ್ಲ
ನೆಕ್ಕಾಡುವಂದದಲಿ ಬಕ್ಕ ಬಯಲ ಸ್ವರೂಪ ನಿನಗೆ ಕಡು
ಸೊಕ್ಕಿದವರು ಮುನಿದುದು ಹೊತ್ತ
ಡೊಕ್ಕೆಯ ಬೈವರು ಹಾಯಿವರದಕೆ ನಿನ್ನ ದಿಕ್ಕಿಂದ ಸಡಿಲದಿರು || ೨
ಬಾರದ ಯೋನಿ ಮೆದ್ದದ ಭೂಮಿ ಕೊಳದಾ
ಹಾರವಿಲ್ಲೆಂಬದಿನೆಯ ಮಾಡು ಶ್ರೀ ಮಂ
ದರೇಶನ ಸಾರುವೆ ಬೇಗದಲಿ || ೩
೪೩. ಎಲ್ಲರೂಭಾವಿಸಿನೋಡಿರೋ
ಎಲ್ಲರೂ ಭಾವಿಸಿ ನೋಡಿರೋ ಸಂಸಾರ ಸುಖ
ವೆಲ್ಲವೂ ಬಲು ಭ್ರಾಂತಿ ಕಾಣಿರೋ ನಂಬಿರೋ || ಪಲ್ಲವಿ
ಬಾಲಕಗೆ ಹಣ್ಗಕೊಟ್ಟು ನಗಿಸಿ ಮೆಲ್ಲ
ವೇಳೆಯಲಿ ಹರಿದುಕೊಂಡು ಬಾಲಕನ
ಗೋಳಿಡಿಸಿವಂದ ಕಾಣಿರೋ ಈ ಸುಖ
ನಾಳೆ ಕಾಲನಿಂದ ದುಃಖ ಕಾಣಿರೋ || ೧
ಇಂದ್ರ ಜಾಲದಲ್ಲಿ ತೋರಿದ ಮಾಮರದೊಳಾ
ಇಂದ್ರಿಯರ್ಥಿಯೊಬ್ಬ ಹಣ್ಣನು ಮೆದ್ದಂತೆ
ಇಂದ್ರನಿಷ್ಟ ಭೋಗವು ಹಾಗೆ ಸೊಬಗು ತಾನೆ
ಇಂದ್ರಚಾಪದಂತೆ ಕಾಣಿರೋ || ೨
ಮುಕ್ತಿಯೊಂದೆ ಸುಖಕಾಣಿರೋ
ಮುತ್ತೆಲ್ಲಿಯೂ ಸುಖದರ್ಥಿಯೆಂಬುದಿಲ್ಲ ಕಾಣಿರೋ
ಮುಕ್ತಿಬೇಕು ತಪಸುಬೇಕು ಅಲ್ಲದೆ ಪೂಜೆ
ಭಕ್ತಿ ಬೇಕು ಶ್ರೀಮಂದರಸ್ವಾಮಿಯಲ್ಲಿ || ೩
೪೪. ಮನದಂತೆಮಂಗಲ
ಮನದಂತೆ ಮಂಗಲ ನೆನೆದಂತೆ ಕಾರ್ಯವೆಂದು
ಮನುಜರಾಡುವ ಗಾದೆ ಭವ್ಯಗಾತ್ಮ ಬೋಧೆ || ಪಲ್ಲವಿ
ಕೋಪ ಗರ್ವ ಲೋಭ ಮಾಯಾ ಮೋಹ ಹೊದ್ದಿದಾ ಮನ
ಪಾಪವನೆ ತಡೆವುದಾ ಮನವೆ ತಾ ತಿಳಿದು
ಸ್ತ್ರೀ ಪುರಾಣ ದಾನ ಪೂಜೆ ಜಪದರ್ಥಿಯ
ಲಿ ಪುಣ್ಯರೂಪಹುದು ಮನದಂತೆ ಮಂಗಲಾರ್ಥವಿದು || ೧
ಕರ್ಮಬದ್ಧನೆಂದು ತಾನು ತನ್ನ ನಡೆ ಕಂಡಡೆ
ಕರ್ಮಬದ್ಧನಾಗಿ ನೋವನು ನಿಶ್ಚಯದಲಿ
ನಿರ್ಮಲ ಸ್ವರೂಪನೆಂದು ನೆನೆದು ಕಂಡಡೆ ತಾನು
ನಿರ್ಮಲನಹನು ನೆನೆದಂತೆ ಕಾರ್ಯದರ್ಥ || ೨
ಜನವೆಂಬೆರಡರಿಂದೇನ ಮಾಡಿದರು
ಮನಸಿಜನ ಪರಿಣಾಮಯೊಂದೆ ಮುಖ್ಯ
ಪಾಪ ಪುಣ್ಯಕು ಮೋಕ್ಷ ಚರಿತಕೂ
ಶ್ರೀಮಂದರಸ್ವಾಮಿಯ ಮತದಲಿ || ೩
೪೫. ಮೂರುರತ್ನವೆನಾನಿಂದು
ಮೂರು ರತ್ನವೆ ನಾನಿಂದು
ಮೂರು ದೇಹವ ಬೇರ್ಪಡಿಸಿ
ಮೂರು ಯೋಗವ ಬಲಿದಾತ್ಮನ ನೋಡದೆ
ಸೂರೆಯ ಮುಕ್ತಿ ತನತನಗೆ || ಪಲ್ಲವಿ
ಶ್ರಾವಕನಾಗಲಿ ಯತಿಯಾಗಲಿ ಆತ್ಮ
ಭಾವನೆಯುಳ್ಳವನೆ ಧನ್ಯನು
ಭಾವಶುದ್ಧನೆ ಮುಕ್ತ ದ್ರವ್ಯ ತಾಪಸನಾಗಿ
ದಾವತಿ ಬಿಟ್ಟರೇನಾಯಿತು || ೧
ನಿಶ್ಚಯದಲಿ ಸಂವರೆ ನಿರ್ಜರೆ ಮೋಕ್ಷ
ನಿಶ್ಚಲವಾಗಿಯಾತ್ಮನೊಳಿಹವು
ಆಶ್ಚರ್ಯವಿದಾ ಸಂಸ ಭವ್ಯಗೆ ಸಿಹಿ
ಕುಶ್ಚಿತ ಭವ್ಯಗೆ ಹಾ ಕಹಿ || ೨
ಬಂದರೆ ಧ್ಯಾನಿಸಬೇಕು ಬಾರದಿರೆ ತಂತಾ
ನೆಂದಿದ ನಂಬಬೇಕು
ನಿಂದಿಸಿದರೆ ಭವಪಾಶ ಹಿಂಗದು ಶ್ರೀ
ಮಂದರಸ್ವಾಮಿಯ ಮತವಿದು || ೩
೪೬. ಆತ್ಮನಕಲೆಯೆಂಬುದದು
ಆತ್ಮನ ಕಲೆಯೆಂಬುದದು ವಿಕ
ಳಾತ್ಮರಿಗಾರಿಗೂ ತಿಳಿಯದು
ಆತ್ಮವಿಮುಖರಿಗೆ ತೋರದು ನಿಲ್ಲದು
ಆತ್ಮರಾಮರ ಸೊಮ್ಮದು || ಪಲ್ಲವಿ
ಬಯಲಾಗಿಹುದು ರೂಪಾಗಿಹುದುಂಟೆಲ್ಲ
ಸ್ವಯದಲಿ ಶುದ್ಧವದೊಮ್ಮೆ ಬದ್ಧಾ
ಅಯುತಂ ನಿಯುತಂ ನ್ನೆರತೆ ಕೀರ್ತಿಯೆಂಬ
ನಯ ಭೇದವನೊಳಕೊಂಡಿಹುದು || ೧
ಹುಟ್ಟುವುದಳಿವುದು ಕೆಡವುದು ಪೊರೆವುದು
ತೊಟ್ಟನೇಕಾಂತ ಮತಿಗಳಿಗೆ
ಹುಟ್ಟುಗುರುಡರೆಂಟು ಮಂದಿಯೊಂದಾನೆಯ
ಮುಟ್ಟಿ ನಿಚ್ಚೈಸಿದ ಹಾಗಿಹುದು || ೨
ಕೋಮಲ ಶಾದ್ವಾದವ ಬಿಟ್ಟು ಕುಡಿದರೆ
ಸೀಮೆಗೆತ್ತರ ತತ್ತರನಹುದು
ಶ್ರೀಮಂದರಸ್ವಾಮಿಯ ಶಾದ್ವಾದ
ಸೀಮೆಗೆ ತಾ ನೆರವಾಗಿಹುದು || ೩
೪೭. ಜಲಗಾರನಜಲಗಾರನ
ಜಲಗಾರನ ಜಲಗಾರನ ಜಾಣತನವ ನೋಡಾ
ಸುಲಭದಿ ಚಿನ್ನವ ತೆಗೆದ ನೋಡಾ || ಪಲ್ಲವಿ
ಡೋಣಿ ಗುದ್ದಲಿ ಹಾರೆ ಮಕ್ಕರಿಯಿಂದ
ಕ್ಷೋಣಿಯ ಮಣ್ಣ ಶೋಧಿಸಿ ಮತ್ತೆ
ಡೋಣಿ ಮುಂತಾದವ ಮಣ್ಣನು ಬಿಟ್ಟು
ಜಾಣ ಚಿನ್ನವನೊಂದನೆ ಪಿಡಿದಾ || ೧
ಪುಸ್ತಕ ಕಂಠ ಸಂಘಜ ನೋಟ ನುಡಿಯಿಂದ
ವಸ್ತುಗಳಾರನು ಶೋಧಿಸಿ
ಪುಸ್ತಕ ಮೊದಲಾದ ಚಿಂತೆಯ ಬಿಟ್ಟಾತ್ಮ
ವಸ್ತುವೊಂದನು ಪಿಡಿದನು ಜಾಣ || ೨
ಹಲವು ಶಾಸ್ತ್ರವನೋದಿ ಹಲವು ಚಿಂತಿಸಿದಾತ್ಮ
ಕಲೆಯನೊಂದನೆ ಧ್ಯಾನಿಸೆಂಬುದು
ಚೆಲುವ ಶ್ರೀಮಂದರಸ್ವಾಮಿ ಶಾಸನ ಈ
ಜಲಗಾರನದಕೆ ತಾ ದೃಷ್ಟಾಂತ || ೩
೪೮. ಎಂತು ಮರೆವೆ ಎಂತು
ಎಂತು ಮರೆವೆ ಎಂತು ಮರೆವೆ ನಿಜ
ಶಾಂತ ಸದಾನಂದ ಪರಮಾತ್ಮನ || ಪಲ್ಲವಿ
ಮೂರು ರನ್ನಮೂರ್ತಿಯ ನೋಡಿದೆ
ಮೂರು ಲೋಕದೊಳಗತಿ ದುರ್ಬಲ ನಾ
ಮೂರು ಜನ್ಮದಾ ಮುಕ್ತಗಲ್ಲದೆ ನಿಜ
ದೋರದು ಮಹಾತ್ಮದ ಪರಂಜ್ಯೋತಿಯಾ || ೧
ಅಂತರಂಗದ ಕೋಣೆಯೊಳಗೆ ನೋಡಿ
ಚಿಂತಿಸಿದಾಗಲೆ ನಿಜದೋರುವನಾ
ಕಾಂತಿಮಯನ ಚಿನುಮಯನ ಬೇಡ
ಲಂತಿಂತೆನ್ನ ಬಾರದ ಸುಖನೀವನಾ || ೨
ಅನುಭವಕಗಮ್ಯವಾದನ
ತನುಮಯ ಕಾಯ ವಚನಕೆ ಸಿಲುಕದನಾ
ತನುಮಾತ್ರನ ವಿಶ್ವರೂಪನ ಚೆಲ್ವ
ನನುಪಮ ರೂಪನ ಶ್ರೀಮಂದರೇಶನ || ೩
೪೯. ಬಂದರೆಮನೆಹೋದರೆ
ಬಂದರೆ ಮನೆ ಹೋದರೆ ತನ್ನ ಹೊಲನಾಗಿ ಬಾಳುವಾತಗೆ ಆವ
ದಂದುಗವಿಲ್ಲೆಂಬಗಾದೆ ಬಲ್ಲವಗಾತ್ಮ ಸಿದ್ಧಿಕಂಡಾ || ಪಲ್ಲವಿ
ತನುವೆಂಬುದಿ ಮನೆ ಜೀವ ನೀನೊಬ್ಬ ಸತ್ಪುರುಷ ಕಂಡಾ! ಕೆಟ್ಟ
ಮನದಿಂದಲತ್ತಿತ್ತ ಹರಿದರೆ ಶಂಕಿಸಬಹುದು ಕಂಡಾ
x x x x x x x x x x x x x x x x
ಜನವೆಲ್ಲ ಜಪಗೆ ತುತ್ತಾದರವರಿಗಂಜಬೇಡ ಕಂಡಾ || ೧
ಹೋಗಬೇಕಾದರೆ ಹೊಲನೊಂದೆರಡು ನಿನಗುಂಟು ಕಂಡಾ
ಆಗಸದೊಳಗೊಂದು ಜಗದ ತುದಿಯಲೊಂದಿಹುದು ಕಂಡಾ
ಆ ಗಗನದೊಳಪರಾಜಿತೇಶ್ವರನೆಂದು ಭಜಿಸಿ ಕಂಡಾ! ಮೇಲೆ
ಭಾಗೆಯೊಳಗೆ ಶುದ್ಧ ಚಿನ್ಮಯ ರೂಪನೆಂದಿಹನು ಕಂಡಾ || ೨
ಸೀಮ್ಗೆಯೆರಡು ಮನೆಯಲ್ಲದಿನ್ನೊಂದು ಬೇಡ ಕಂಡಾ! ನಿನ್ನ
ಸೀಮೆಯ ಬಿಟ್ಟನ್ಯ ಸೀಮೆಗೆ ಹೋದರೆ ನೋವು ಕಂಡಾ
ಶ್ರೀಮಂದರಸ್ವಾಮಿಯ ನೀನಿದರಿಂದ ಕಾಣು ಕಂಡಾ! ಲೋಕ
ಸ್ವಾಮಿಯ ಸಮುದ್ರಾದಿ ಪರಮೇಶನಾಜ್ಞೆಯೊಳಾಡು ಕಂಡಾ || ೩
೫೦. ಹೋದರೆಹೋಗು
ಹೋದರೆ ಹೋಗು ಹೋಗದಿದ್ದರೆ ಇರು ನನಗದರಿಂದ ನಷ್ಟವಿಲ್ಲ
ಖೇದ ಹುಟ್ಟಿದ ಬಳಿಕ ಬೆರಸುವನೇ ತನುವೇ || ಪಲ್ಲವಿ
ಜಡೆ ಸುಡಿಸಿರ್ದಡೆ ದಂಡೆ ಹೊತ್ತು ತೊಳತೊಳದು
ಪಿಡಿದಿರ್ದರು ಕಡೆಗೆನಳಿಯದುಳಿಯ
ಕೆಡರೊಡನಾಡಿದೊಬ್ಬ ಕೆಡುವನು ಕೆಟ್ಟೆನೆಂಬ
ನುಡಿಯಹನೆ ಸಾಕು ತನುವೇ || ೧
ಏನು ಗುಣಕೊಲಿವೆನುಸುರುಸುರು ತಾಯಿತಂದೆಗಳ
ಹೀನ ದುಃಖದೊಳುಬ್ಬಿ ಬೆಳೆದರೆ ಸುಕುಳವೇ
ಭಾನು ಬಿಂಬಕೆ ಕವಿದ ಕಳಾಹೀನಯೆಂತೆನ್ನ
ಜ್ಞಾನ ಗುಣಗಗಳಾಡೈಸಿ ಮದವೆದ್ದೆಯೆಲ್ಲಾ || ೨
ಎಂದಿದ್ದರೂ ಎರವಲ್ಲದೆ ನೀನಾರು ನಾನಾರು
ಬಂದು ಹೋದ ಒಡಲೆಷ್ಟು ನಿನ್ನಂತೆ ತನುವೇ
ಇಂದುತನಕ ಮೋಹಮೂರ್ಛೆಯೊಳಿರ್ದೆ ಸಕಲ ಶ್ರೀ
ಮಂದರಸ್ವಾಮಿಯ ಕೃಪೆಯ ನಾನಿಂದು ಕಂಡೆ || ೩
Leave A Comment